Tuesday, 11 November 2014

ಚಕ್ ದೇ ಇಂಡಿಯಾ ತುಂಬಿದ ನವ ಚೈತನ್ಯ -ಡಾ.ಲಕ್ಷ್ಮೀ ಜಿ ಪ್ರಸಾದ


          
              ( ನನ್ನ ಪ್ರಕಟಿತ ಸಂಶೋಧನಾ ಪ್ರಬಂಧದ ಪರಿಚಯ ,ಹೊಸ ದಿಗಂತ )
 ಇಂದು ಟಿ .ವಿಯಲ್ಲಿ  ಮೇರಿಕೋಮ್ ಸಿನೆಮ ನೋಡಿದೆ .ನೋಡುತ್ತಿದ್ದಂತೆ ಚಕ್ ದೇ ಇಂಡಿಯಾ ಸಿನೆಮ ಮತ್ತು ಗೆಳತಿ ನಿರ್ಮಲಾರ
"ಎನ್ತೆಂತವರೋ ಪಿಎಚ್.ಡಿ ಮಾಡಿದ್ದಾರೆ ಲಕ್ಷ್ಮೀ ,ನಿನಗೆ   ಮಾಡೋಕಾಗಲ್ವ?.ಹೇಗೋ ಒಂದು ಮುಗಿಸಿ ಬಿಡು ".ಎಂಬ ಮಾತು ನೆನಪಿಗೆ ಬಂತು !ಒಳ್ಳೆಯ ಸಿನೆಮಾಗಳೂ ನಮ್ಮ ಬದುಕಿನಲ್ಲಿ ನವೋತ್ಸಾಹವನ್ನು ತುಂಬುತ್ತವೆ ಎಂದು ನನಗೆ ಅರಿವಾದದ್ದೇ ಅಂದು . 

5-6 ವರ್ಷಗಳ ಹಿಂದೆ ಹಿಂದೆ ಗೆಳತಿ ಕೇಳಿದ ಮಾತು ಇದು ನನ್ನಲ್ಲಿ ..ನಾನು 2005 ರಲ್ಲಿ ಬಿಎಂ ಶ್ರೀ ಪ್ರತಿಷ್ಠಾನ ದ ಸ್ನಾತಕೋತ್ತರ ಸಂಶೋಧನಾ ಅಧ್ಯಯನ ಕೇಂದ್ರದ ಮೂಲಕ ಹಂಪಿ ಕನ್ನಡ ಯೂನಿವರ್ಸಿಟಿ ಯಲ್ಲಿ ಪಿಎಚ್. ಡಿ ಅಧ್ಯಯನಕ್ಕೆ ನೋಂದಣಿ ಪಡೆದಿದ್ದೆ .

ನಾನು ಆಯ್ದುಕೊಂಡ ವಿಷಯ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ .ಆ ವಿಷಯ ಆಯ್ಕೆ ಮಾಡುವಾಗ ನಾನು ತುಂಬಾ ಕ್ಷೇತ್ರಕಾರ್ಯ ಮಾಡಬೇಕಾಗಿ ಬರುತ್ತದೆ ಎಂದು ತಿಳಿದಿತ್ತಾದರೂ ಭೂತಾರಾಧನೆ ಮತ್ತು ನಾಗಾರಾಧನೆ ಎರಡನ್ನೂ ಕ್ಷೇತ್ರ ಕಾರ್ಯ ಮಾಡಬೇಕಾಗುತ್ತದೆ  ಅದು ಎಷ್ಟು ಕಷ್ಟಕರ ಎಷ್ಟು ವಿಸ್ತಾರ ಎಂಬುದರ ಅರಿವಿರಲಿಲ್ಲ .ಏನೋ ಒಂದರಡು ಕಡೆ ಹೋಗಿ ಫೋಟೋ  ಹಿಡಿದು ಬಂದರೆ ಸಾಕು ಎಂದು ಕೊಂಡಿದ್ದೆ !ನೀರಿಗಿಳಿದ ಮೇಲೆ ತಾನೇ ಆಳ ಗೊತ್ತಾಗುವುದು ?ಇಳಿದ ಮೇಲೆ ಚಳಿಯೇನು ಬಿಸಿಯೇನು ಎಂದು ಮುಂದುವರಿಯುದು ಅನಿವಾರ್ಯವಾಗಿತ್ತು ,ಜೊತೆಗೆ ನನಗೆ ಈ ಬಗ್ಗೆ ತೀವ್ರ ಆಸಕ್ತಿ ಕೂಡ ಇತ್ತು .ಆದ್ದರಿಂದಲೋ ಏನೋ ನನಗೆ ಕ್ಷೇತ್ರಕಾರ್ಯ ,ಸಂಶೋಧನೆಗಳು ತೀರ ಅಸಾಧ್ಯ ಎನಿಸಿರಲಿಲ್ಲ .

ಆಗ ನಾನು ಇದ್ದದ್ದು ಬೆಂಗಳೂರಿನಲ್ಲಿ .ಬೆಂಗಳೂರಿನ ಪ್ರಸಿದ್ಧ ವಾದ ಒಂದು  ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ  ಕೆಲಸ ಮಾಡುತ್ತಿದ್ದೆ .
ಒಂದೆಡೆ ಕೆಲಸದ ಒತ್ತಡ ,ಮತ್ತೊಂದೆಡೆ ಮಗ ಶಾಲೆ ಓದಿನ ಜವಾಬ್ದಾರಿ ಇದರೊಂದಿಗೆ ಕ್ಷೇತ್ರ ಕಾರ್ಯ ಸಾಕಾಗಿ ಹೋಗಿತ್ತು.ನನ್ನ ಮಾರ್ಗ ದರ್ಶಕರು ಅಪಾರ ಪಾಂಡಿತ್ಯ ಉಳ್ಳವರು .ಅವರು ನನ್ನಿಂದ ಅತ್ಯಂತ ಉನ್ನತ ಮಟ್ಟದ ಸಂಶೋಧನೆಯನ್ನು ನಿರೀಕ್ಷಿಸುತ್ತಿದ್ದರು.

ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ನನ್ನ ಸಂಶೋಧನೆ ಕುರಿತು ವರಡಿ ಒಪ್ಪಿಸಬೇಕಾಗಿತ್ತು .ಆ ತನಕ ನಾನು ಮಾಡಿದ ಕ್ಷೇತ್ರ ಕಾರ್ಯ ಹಾಗೂ ಇತರ ಕೆಲಸಗಳನ್ನು ಚಾಚೂ ತಪ್ಪದೆ ವಿವರಿಸಿ ಅವರಿಗೆ ಮನದಟ್ಟು ಮಾಡ ಬೇಕಾಗಿತ್ತು .ಸಣ್ಣ ಲೋಪ ದೋಷ ಇದ್ದರೂ ವರದಿಗೆ ಸಹಿ ಮಾಡುತ್ತಿರಲಿಲ್ಲ.

ಜೊತೆಗೆ ನಮಗೆ ಸಾಕಷ್ಟು ಅಭಿಪ್ರಾಯ ವ್ಯತ್ಯಾಸ ಉಂಟಾಗುತ್ತಿತ್ತು ,ಮಾರ್ಗ ದರ್ಶಕರು ಹೇಳಿದರು ಎಂಬ ಕಾರಣಕ್ಕೆ ಆಧಾರವಿಲ್ಲದೆ ನನ್ನ ಸಂಶೋಧನೆ ಸರಿಯಿಲ್ಲ ಎಂದು ಒಪ್ಪಿಕೊಳ್ಳಲಾರದ ಸ್ವಾಭಿಮಾನ ನನ್ನದು .ಅನೇಕ ಹಿತೈಷಿಗಳು ಕೆಲವೊಮ್ಮೆ "ಅವರು ಹೇಳಿದಂತೆ ಬದಲಾಯಿಸಿ ಬಾರೆ ನಿನಗೇನಂತೆ?ಪಿಎಚ್.ಡಿ ಸಿಕ್ರೆ ಆಯ್ತಲ್ವ ಎಂದು 'ಎಂದು ಹೇಳಿದ್ದುಂಟು .ಆದರೆ ನಾನು ಹಾಗೆಲ್ಲ ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನ್ದವಳಲ್ಲ!
ನನಗೆ ಸರಿ ಎನಿಸಿದ್ದನ್ನು ಯಾರು ಏನು ಹೇಳಿದರೂ ಬದಲಾಯಿಸಿಕೊಳ್ಳಲಾರೆ!ಹಾಗಾಗಿ ನಮ್ಮಲ್ಲಿ ಸಾಕಷ್ಟು ಚರ್ಚೆ ಆಗುತ್ತಿತ್ತು.

ಹೀಗೆ ಒಂದು ದಿನ ಮಾರ್ಗ ದರ್ಶಕರ ಹತ್ತಿರ ಚರ್ಚೆ ಆಗಿತ್ತು .ಅವರು ಒಂದಷ್ಟು ಬದಲಾವಣೆಯನ್ನು ಹೇಳಿ ತಿದ್ದಿ ಬರೆದು ತಂದರೆ ಮಾತ್ರ ವರದಿಗೆ ಸಹಿ ಮಾಡುವೆ ಎಂದಿದ್ದರು .
ಅದೇ ಸಮಯದಲ್ಲಿ ನನಗೆ ಕ್ಷೇತ್ರ ಕಾರ್ಯಕ್ಕೆ ಚೌಕಾರಿಗೆ ಹೋಗಬೇಕಾಗಿತ್ತು ,ಅದು ಜನವರಿ ತಿಂಗಳು  .ಕಾಲೇಜ್ ನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಾ ಇತ್ತು .ಹಾಗಾಗಿ ರಜೆ ಕೊಡಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದರು.ನಾನಿದ್ದ ಕಾಲೇಜ್ ಅನುದಾನಿತ ಸಂಸ್ಥೆಯಾಗಿದ್ದು ನಾನು ಅಲ್ಲಿ ಅನುದಾನ ರಹಿತವಾಗಿ ಆಡಳಿತ ಮಂಡಳಿ ನೇಮಿಸಿದ್ದ ಕನ್ನಡ ಉಪನ್ಯಸಕಿಯಾಗಿದ್ದೆ.ನನ್ನಂತೆ ಅನೇಕರು ತಾತ್ಕಾಲಿಕ ನೆಲೆಯಲಿ ಪುಡಿಕಾಸಿಗೆ ದುಡಿಯುತ್ತಿದ್ದೆವು .ಇಲ್ಲಿ ಪರೀಕ್ಷೆ ಸೇರಿದಂತೆ ಎಲ್ಲ ಕಾರ್ಯಗಳಲ್ಲಿ ಕೈ ತುಂಬಾ ವೇತನ ಪಡೆಯುವ ಅನುದಾನಿತ ಉಪನ್ಯಾಸಕರಿಗೆ ತೀರಾ ಕಡಿಮೆ ಕೆಲಸ ಹಾಕಿ ನನ್ನಂತೆ ಇರುವ ಅನುದಾನಿತ ರಹಿತರಿಗೆ ಅತಿ ಹೆಚ್ಚಿನ ಕೆಲಸ ಹಂಚಲಾಗುತ್ತಿತ್ತು .ರಜೆ ಹಾಕಿದರೆ ನನ್ನ ಆ ದಿನದ ಕೆಲಸವನ್ನು ಮಾಡಲು ಯಾರೂ ಒಪ್ಪುವುದಿಲ್ಲ ಈ ಕಾರಣದಿಂದ ನನಗೆ ರಜೆ ಕೊಡಲು ಪ್ರಾಂಶುಪಾಲರು ನಿರಾಕರಿಸಿದ್ದರು .

ಒಂದೆಡೆ ಕ್ಷೇತ್ರಕಾರ್ಯಕ್ಕೆ ಹೋಗಲಾಗುವುದಿಲ್ಲ ಎಂಬ ಚಿಂತೆ ,ಇನ್ನೊಂದೆಡೆ ವರದಿಗೆ ಸಹಿ ಆಗಲಿಲ್ಲ ಎಂಬ ಚಿಂತೆ ,ಅತಿಯಾದ ಕೆಲಸದ ಒತ್ತಡ .ಎಲ್ಲದರಿಂದ ಬೇಸತ್ತು ಸಂಶೋಧನೆಯು ಬೇಡ ಪಿಎಚ್.ಡಿ ಪದವಿಯೂ ಬೇಡ ಎಂಬ ಹತಾಶೆಗೆ ಒಳಗಾಗಿದ್ದೆ.ಸಂಜೆ ಹೊತ್ತು ಮನೆಯ ತಾರಸಿ ಹಟ್ಟಿ ಕಾಲು ಸುಟ್ಟ ಬೆಕ್ಕಿನಂತೆ ಸುತ್ತುತ್ತಾ ಇದ್ದೆ  .ಅದಾಗಲೇ ಗೆಳತಿ ನಿರ್ಮಲಾರ ಫೋನ್ ಬಂತು .

ನಿರ್ಮಲಾ ಡಿ ಟಿ ಪಿ ವರ್ಕ್ ಮಾಡುತ್ತಾ ಇದ್ದರು .ನನ್ನ ಪ್ರಬಂಧದ ಡಿ ಟಿ ಪಿ ಕಾರ್ಯವನ್ನೂ ಅವರಿಗೆ ವಹಿಸಿದ್ದೆ .ವರದಿ ಡಿ ಟಿ ಪಿ ಮಾಡಲು ತಗೊಂಡು ಬರುತ್ತೇನೆ ಎಂದು ಹೇಳಿದ್ದೆ .ನನ್ನ ವರದಿ ಒಪ್ಪಿಗೆ ಆಗದ ಕಾರಣ ಹೋಗಿರಲಿಲ್ಲ .
ಯಾಕೆ ಬಂದಿಲ್ಲ ಎಂದು ಕೇಳಲು ಯಾವುದು ಬೇಡವಾಗಿದೆ ನಾನು ಪಿಎಚ್.ಡಿ ಅಧ್ಯಯನ ಮುಂದುವರಿಸುವುದಿಲ್ಲ ಎಂದು ಹೇಳಿದ್ದೆ .

ಆಗ ನಿರ್ಮಲಾ ಎನ್ತೆಂತವರೋ ಪಿಎಚ್.ಡಿ ಮಾಡಿದ್ದಾರೆ ಲಕ್ಷ್ಮೀ ,ನಿನಗೆ   ಮಾಡೋಕಾಗಲ್ವ?..ಏನೋ ಒಂದು ಮಾಡಿ ಮುಗಿಸಿಬಿಡಿ ಹೆಂಗೂ ಮುಕ್ಕಾಲಂಶ ಆಗಿದೆ ಇನ್ನು ಸ್ವಲ್ಪ ಮುಗಿಸಿ ಬಿಡಿ ಎಂದರು.
ನನ್ನಿಂದ ಅದನ್ನ ಸಂಪೂರ್ಣ ಮಾಡಲು ಆಗದು.ಎಂದು ಹೇಳಿ ಮಾತು ಮುಗಿಸಿದ್ದೆ .

ತಾರಸಿ ನನಗೆ ತುಂಬಾ ಪ್ರಿಯವಾದ ಜಾಗ ,ಆದರೂ ಆ ದಿನ ನನಗೆ ಅದು ಕೂಡ ಇಷ್ಟವಾಗಲಿಲ್ಲ .ಇಳಿದು ಕೆಳಗೆ ಬಂದು ಮನೆಯಲ್ಲಿ ಟಿವಿ ಹಾಕಿದೆ ,ಪಿಎಚ್.ಡಿ ಸಂಶೋಧನೆ ಸುರು ಮಾಡಿದಲ್ಲಿಂದ ನಾನು ಸಿನೆಮ ,ಕಥೆ ಕಾದಂಬರಿಗಳ ಓದನ್ನು ಬಿಟ್ಟು ಬಿಟ್ಟಿದ್ದೆ ,ಬರವಣಿಗೆಯನ್ನೂ ಬಿಟ್ಟು ಬಿಟ್ಟಿದ್ದೆ ,ತುಸು ಸಮಯ ಸಿಕ್ಕರೂ  ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದೆ,ಹಾಗಾಗಿ ಸಿನೆಮ ನೋಡದೆ ತುಂಬಾ ಸಮಯ ಆಗಿತ್ತು .ನಾನು ಈ ಸಂಶೋಧನೆ ಅಂತ ಎಲ್ಲವನ್ನೂ ಬಿಟ್ಟು ಬಿಟ್ಟೆ ಇನ್ನು ಹಾಗೆ ಮಾಡಲಾರೆ ಇಷ್ಟ ಬಂದಸಿನೆಮ ನೋಡುತ್ತಾ ,ಕುಶಿ ಕಂಡ ಕಥೆ ಕಾದಂಬರಿ ಓದುತ್ತ ಜೀವನವನ್ನು ಎಂಜಾಯ್ ಮಾಡಬೇಕು ಎಂದುಕೊಂಡೆ

ಟಿ ವಿಯಲ್ಲಿ ಚಕ್ ದೇ ಇಂಡಿಯಾ ಸಿನೆಮ ಆಗಷ್ಟೇ ಆರಂಭವಾಗಿತ್ತು .ನೋಡೋಣ ಎಂದು ಕುಳಿತುಕೊಂಡ

ಸಿನೆಮ ನೋಡುತ್ತಾ ನೋಡುತ್ತಾ ಅದರಲ್ಲಿ ತನ್ಮಯಳಾಗಿ ಬಿಟ್ಟೆ ..

ಸಿನೆಮ ಮುಗಿಯುತ್ತಲೇ ನಾನೊಬ್ಬ ಹೊಸ ಮನುಷ್ಯಳಾಗಿದ್ದೆ.ನವ ಉತ್ಸಾಹ ಚೈತನ್ಯ ತುಂಬಿತ್ತು ಮೈ ಮನದಲ್ಲಿ.
ನಾನು ಕೂಡಲೇ ನಿರ್ಧರಿಸಿದೆ ಏನೇ ಆದರೂ ಪಿಎಚ್.ಡಿ ಅಧ್ಯಯನವನ್ನು ಮುಗಿಸಲೇ ಬೇಕು ಎಂದು .ಚೌಕಾರಿಗೆ ಕ್ಷೇತ್ರ ಕಾರ್ಯಕ್ಕೆ ಹೋಗಲೂ ನಿರ್ಧರಿಸಿದೆ .ರಜೆ ಕೊಟ್ಟರೂ ಕೊಡದೆ ಇದ್ದರೂ ನಾನು ಹೋಗುವುದು ಖಂಡಿತ ಎಂದು ನಿರ್ಧಾರ ಮಾಡಿದೆ .
ಕೂಡಲೇ ಗೆಳತಿ ನಿರ್ಮಲಾರಿಗೆ ಫೋನ್ ಮಾಡಿದೆ ,ನಾಳೆ ಬೆಳಗ್ಗೆ ವರದಿ ಯನ್ನು ಡಿ ಟಿ ಪಿ ಮಾಡಲು ತರುತ್ತೇನೆ ಎಂದು ಫೋನ್ ಮಾಡಿದೆ!
 ನಾನು ನನ್ನ ನಿರ್ಧಾರವನ್ನು ಬದಲಾಯಿಸಿ ಅಧ್ಯಯನವನ್ನು ಮುದುವರಿಸಲು ನಿರ್ಧರಿಸಿದ್ದು ಅವರಿಗೂ ಸಂತಸವಾಯಿತು.
ಹೇಳಿದಂತೆ ಮರುದಿನ ಬೆಳಗ್ಗೆ ಹೋಗಿ ನನ್ನ ಮಾರ್ಗ ದರ್ಶಕರು ಸೂಚಿಸಿದ ಬದಲಾವಣೆ ಮಾಡಿಕೊಂಡು ವರದಿ ತಯಾರಿಸಿ ಮಾರ್ಗ ದರ್ಶಕರ ಮನೆಗೆ ಹೋಗಿ ಸಹಿ ಮಾಡಿಸಿ ತಂದು ಸಂಶೋಧನಾ ಕೇಂದ್ರಕ್ಕೆ ಸಲ್ಲಿಸಿದೆ.
ಇನ್ನು ಕ್ಷೇತ್ರಕಾರ್ಯಕ್ಕೆ ಹೋಗಲು ರಜೆ ಕೊಡದೆ ಇದ್ದರೆ ಕಾಲೇಜ್ ಅನ್ನೇ ಬಿಡುವುದು ,ಖಾಸಗಿ ಕಾಲೇಜ್ ಗಳು ಸಾವಿರ ಇವೆ ,

ಹೇಗೂ ಮೂರು ಸ್ನಾತಕೋತ್ತರ ಪದವಿಗಳು ಇವೆ ಎಲ್ಲಾದರೂ ಒಂದು ಕೆಲಸ ಸಿಕ್ಕಿಯೇ ಸಿಗುತ್ತೆ ಎಂದು ನಿರ್ಧರಿಸಿದೆ . ಕಾಲೇಜ್ ಗೆ ಹೋಗಿ ನನಗೆ ಕ್ಷೇತ್ರಕಾರ್ಯಕ್ಕೆ ಹೋಗಲಿಕ್ಕಿದೆ ಆದ್ದರಿಂದ ಮೂರು ದಿನ ಬರಲಾಗದು ಎಂದು ಖಡಾ ಖಂಡಿತವಾಗಿ ಹೇಳಿ ರಜೆ ಅರ್ಜಿ ನೀಡಿದೆ.ಅವರು ಏನೊಂದೂ ಹೇಳುವ ಮೊದಲೇ ಹೊರ ಬಂದೆ .
ಅಂದಿನ ಕೆಲಸ ಮುಗಿಸಿ ರಾತ್ರಿ ಬಸ್ ಹತ್ತಿ ಮಂಗಳೂರಿಗೆ ಬಂದೆ .ಅಲ್ಲಿಂದ ನೇರವಾಗಿ ಸೀತಂಗೋಳಿಯಲ್ಲಿರುವ ಗೆಳತಿ ಅನುಪಮ ಪ್ರಸಾದ ಮನೆಗೆ ಬಂದು ಅಲ್ಲಿಂದ ಚೌಕಾರಿಗೆ ಹೋದೆ .

ಅಲ್ಲಿ ಎರಡು ದಿನ ಹಗಲು ರಾತ್ರಿ ರೆಕಾರ್ಡಿಂಗ್ ಮಾಡಿ ಮೂರನೆಯ ದಿನ ಕೊಡ್ಳಮೊಗರಿಗೆ ಬಂದು ರೆಕಾರ್ಡ್ ಮಾಡಿದೆ .ನಾಲ್ಕನೆಯ ದಿನ ಬೆಳಗ್ಗೆ ಬೆಂಗಳೂರಿಗೆ ಬಂದು ಫ್ರೆಶ್ ಆಗಿ ಕಾಲೇಜ್ ಗೆ ಹೋದೆ .
ಅಲ್ಲಿ ಕೆಲ್ಸಕ್ಕೆ ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂಬ ಸಂಶಯ ಇತ್ತು ಮನದೊಳಗೆ !

ಆದರೆ ಅಲ್ಲಿ ಏನೂ ಸಮಸ್ಯೆ ಆಗಲಿಲ್ಲ .ಎಂದಿನಂತೆ ಮತ್ತೆ ಕೆಲ್ಸಕ್ಕೆ ಹಾಜರಾಗಿ ಕರ್ತವ್ಯ ಮುದುವರಿಸಿದೆ.

2009 ರಲ್ಲಿ ಸಂಶೋಧನಾ ಪ್ರಬಂಧ ಸಿದ್ದ ಪಡಿಸಿ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್.ಡಿ ಪದವಿಯನ್ನೂ ಪಡೆದೆ .ನನ್ನ ಮಾರ್ಗ ದರ್ಶಕರು ಗುಣ ಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಕಾರಣ ನನ್ನ ಪ್ರಬಂಧ ನಿಜಕ್ಕೂ ಪ್ರೌಢ ಪ್ರಬಂಧವಾಯಿತು .ಅವರ ಬಿಗುವಾದ ನಿಲುವು ನನಗೆ ತಳ ಮಟ್ಟದ  ಅಧ್ಯಯನವನ್ನು ಮಾಡಲು ಕಲಿಸಿತು.ನನ್ನ ಮಾರ್ಗ ದರ್ಶಕಾರದ ಡಾ.ಎಸ್.ನಾಗರಾಜು ಅವರ  ಪ್ರೌಢಿಮೆ, ಅಗಾಧ ಪಾಂಡಿತ್ಯ ,ತಾಳ್ಮೆ ನಿಜಕ್ಕೂಅನುಕರಣ ಯೋಗ್ಯವಾದುದು
ಅಂದು ನೋಡಿದ ಚಕ್ ದೇ ಇಂಡಿಯಾ ಸಿನೆಮ ನನ್ನಲ್ಲಿ ತುಂಬಾ ಪ್ರಬಾವ ಬೀರಿತ್ತು ,ಅಂದಿನ ಹತಾಶೆ ಏನು ಮಾಡಲಾರೆ ಎನ್ನುವ ಅಧೈರ್ಯ ಎಲ್ಲವೂ ಕ್ಷಣದಲ್ಲಿ ಮಂಗ ಮಾಯವಾಗಿತ್ತು .ಇಂದಿಗೂ ನಾನು ಅಂದು ನನಗೆ ಒಮ್ಮಿಂದೊಮ್ಮೆಗೆ ಪ್ರೇರಣೆ ಉತ್ಸಾಹ ನವ ಚೈತನ್ಯ ನೀಡಿದ ಆ ಸಿನೆಮಾವನ್ನು ನೆನಪಿಸಿಕೊಳ್ಳುತ್ತೇನೆ .

Saturday, 8 November 2014

ಎಕ್ಕಲ ಕಟ್ಟೆಯ ಪೆರಿಯಾಂಡವರ್-ಒಂದು ಅವಲೋಕನ -ಡಾ.ಲಕ್ಷ್ಮೀ ಜಿ ಪ್ರಸಾದ








copy rights reserved
ಏಕೋ ಏನೋ ಸುಮಾರು ದಿನಗಳಿಂದ ಏನನ್ನೂ ಬರೆಯಲು ಒಳ್ಳೆಯ ಮೂಡ್ ಇಲ್ಲ ,ಜೊತೆಗೆ ವಿಪರೀತ ಕೆಲಸದ ಒತ್ತಡ.ಹಾಗಾಗಿ ಏನನ್ನೂ ಬರೆಯಲಾಗಿಲ್ಲ ,ಭೂತಗಳ ಅದ್ಬುತ ಜಗತ್ತು ಬ್ಲಾಗ್ ಗೆಯಾದರೂ ಒಂದೆರಡು ಲೇಖನ ಆದರೂ ಬರೆದಿದ್ದೇನೆ ,ನನ್ನ ಹವ್ಯಕ ಬ್ಲಾಗ್ ಗಿಳಿಬಾಗಿಲಿನ ಬಾಗಿಲು ತೆರೆದು ನೋಡದೇ ಎರಡು ಮೂರು ತಿಂಗಳು ಕಳೆದಿವೆ.

ಇಂದು ಆದರೂ ಪೆರಿಯಾಂಡವರ್ ಬಗ್ಗೆ ಬರೆಯದಿದ್ದರೆ ಮೌಖಿಕವಾಗಿ ನಾನು ಸಂಗ್ರಹಿಸಿದ ಮಾಹಿತಿಗಳೆಲ್ಲ ಮರೆತು ಹೋಗಬಹುದು ಎಂಬ ಭಯ ಇಂದು ಮತ್ತೆ ಬರೆಯಲು ಕುಳಿತು ಕೊಳ್ಳಲು ಪ್ರೇರೇಪಿಸಿತು .

ಕೆಲವು ವಿಷಯಗಳಲ್ಲಿ ನಾನು ಬಹಳ ಅದೃಷ್ಟವಂತೆ .ನಾನು ಹೋದಲ್ಲೆಲ್ಲ ಒಂದು ಈ ತನಕ ಬೇರೆಯವರು ಗಮನ ಹರಿಸದ ಹೊಸ ವಿಚಾರ ಅಧ್ಯಯನಕ್ಕಾಗಿ ನನಗೆ ಕಾದಿರುತ್ತದೆ.

ನಮ್ಮ ಕಾಲೇಜ್ ಗೆ ಹೋಗುವ ದಾರಿಯಲ್ಲಿ  ಕೆಂಗೇರಿ ಸಮೀಪ ಎಕ್ಕಲ ಕಟ್ಟೆ ಪುರಾತನ ಮುನೇಶ್ವರ ದೇವಾಲಯ ಎಂದು ಫಲಕ ಹಾಕಿದ್ದು ನೋಡಿದ್ದೆ.ಅಲ್ಲೇನೂ ದೇವಾಲಯ ಇದ್ದ ಹಾಗೆ ಕಾಣಲಿಲ್ಲ ,ಬದಲಿಗೆ ಏಳೆಂಟು ದೊಡ್ಡ ದೊಡ್ಡ ದಟ್ಟವಾದ ಆಲದ ಮರಗಳು ಸ್ವಲ್ಪ ದೂರದಲ್ಲಿ ತುಸು ಆಳ ಪ್ರದೇಶದಲ್ಲಿ ಕಾಣಿಸುತ್ತಿದ್ದವು .ಒಂದೆರಡು ಏನೋ ಕಟ್ಟೆ ಇದ್ದ ಹಾಗೆ ಕಾಣಿಸಿತ್ತು ,ಒಂದಿನ ಅಲ್ಲಿ ಹೋಗಿ ನೋಡಬೇಕು ಎಂದು ಕೊಂಡಿದ್ದೆ .ಹೆಚ್ಚಾಗಿ ಆಟೋ ರಿಕ್ಷಾದಲ್ಲಿ ಹೋಗಿ ಬರುವ ಕಾರಣ ಅಲ್ಲಿ ಹೋಗಲು ಆಗಿರಲಿಲ್ಲ .ಜೊತೆಗೆ ಮನದೊಳಗಿನ ಆತಂಕ ಅಧೈರ್ಯ ಕೂಡ ಕಾರಣವಾಗಿದೆ ಎಂಬುದು ಸತ್ಯವಾದ ವಿಚಾರ !

ಈ ಮೊದಲೆಲ್ಲ ಒಂದು ಸಣ್ಣ ವಿಚಾರ ಸಿಕ್ಕರೆ ಸಾಕು ಕೂಡಲೇ ಹಿಂದೆ ಮುಂದೆ ನೋಡದೆ ಕ್ಷೇತ್ರಕಾರ್ಯಕ್ಕೆ ಹೋಗಿ ಬಿಡುತ್ತಿದ್ದೆ ..ಯಾವಾಗ ಎರಡು ವರ್ಷದ ಹಿಂದೆ ಡೆಲ್ಲಿ ಹುಡುಗಿಯ ಮೇಲಿನ ಕ್ರೌರ್ಯದ ಸುದ್ದಿ ಓದಿದೆನೋ ಅಂದೇ ಎಂದು ಕೊಂಡಿದ್ದೆ ಇನ್ನು ಒಬ್ಬಳೇ ಎಲ್ಲಿಗೂ ಹೋಗುವ ಸಂಗತಿ ಆಗಲಿಕ್ಕಿಲ್ಲ ಎಂದು , ರಾತ್ರಿಯಲ್ಲಿ ನಡೆಯುವ ಭೂತಾರಾಧನೆ ಹಾಗೂ ಇನ್ನಿತರ ವಿಚಾರಗಳ ಬಗೆಗಿನ  ಕ್ಷೇತ್ರಕಾರ್ಯವನ್ನು ಪೂರ್ಣವಾಗಿ ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ . ನಂತರದ  ಸೌಜನ್ಯ .ರತ್ನ  ಮೊನ್ನೆ ಮೊನ್ನೆಯ ನಂದಿತಾ ನ ಪ್ರಕರಣಗಳು  ಹಗಲು ಕೂಡ ಒಬ್ಬಬ್ಬಳೆ ಓಡಾಡುವ  ಉತ್ಸಾಹ ಹಾಗೂ  ಧೈರ್ಯವನ್ನು  ಇನ್ನಷ್ಟು ಕಡಿಮೆ ಮಾಡಿವೆ .ಹಾಗಾಗಿಯೋ ಏನೋ !ಅಂತೂ  ಅಲ್ಲಿಗೆ ಹೋಗಲು ಆಗಿರಲಿಲ್ಲ .ನಾನೇ  ಚಿಕ್ಕ ವಯಸ್ಸಿನ ಕಾಲೇಜ್ ಗೆ ಹೋಗುವ ಹುಡುಗಿಯಲ್ಲ ಆದರೂ ನಾನೋರ್ವ ಸ್ತ್ರೀ ಅನ್ನುವುದನ್ನು ಮರೆಯಲಾರೆ ,6 ತಿಂಗಳ ಹಸುಳೆಯೆಂದು ಬಿಡದೆ lkg ukg ಕಂದಮ್ಮಗಳನ್ನು ಶಾಲಾ ಕಾಲೇಜ್ ಹುಡುಗಿಯರನ್ನು 85 ವರ್ಷದ ಅಜ್ಜಿಯರನ್ನೂ ಬಿಡದೆ ಕಾಡುವ ಕಾಮುಕರ ಬಗೆ ಎಲ್ಲ ಮಹಿಳೆಯರೂ ಜಾಗರೂಕತೆ ವಹಿಸಲೇ ಬೇಕಾದ ಅನಿವಾರ್ಯತೆ ಬಂದಿದೆ .
ಹಿಂದೊಂದು ಕಾಲವಿತ್ತು 30-35 ವರ್ಷ ಕಳೆದರೆ ನಾವು ಸ್ತ್ರೀಯರು ಇನ್ನು ಸೇಫ್ ಎಂದು ಭಾವಿಸುತ್ತ ಇದ್ದೆವು .ಆದರೆ ಈಗ ಹಾಗಲ್ಲ .85 ವರ್ಷದಅಜ್ಜಿ  ಕೂಡ ಎಚ್ಚರಿಕೆ ವಹಿಸಬೇಕಾದ ಕಾಲ ಬಂದಿದೆ 
ಇರಲಿ

ಮೊನ್ನೆ 3 ನೇ ತಾರೀಕು ಸಂಜೆ ನಾನು ಮತ್ತು ಸ್ನೇಹಿತೆ ಕಲಾವತಿ  ಮಾತನಾಡುತ್ತಾ ನಡೆದು ಕೊಂಡು ಬಂದೆವು .ಆಗ ದಾರಿ ಬದಿಯಲ್ಲಿ  ಇರುವ ಈ ಫಲಕ ಗಮನ ಸೆಳೆಯಿತು .ಅಲ್ಲಿ ಏನಿದೆ ಎಂದು ನೋಡಿಯೇ ಬಿಡುವ ಎಂದು ನಾವು ಮೆಟ್ಟಿಲು ಇಳಿದುಕೊಂಡು ಅಲ್ಲಿಗೆ ಹೋದೆವು .
ಮೊದಲಿಗೆ ಗಮನ ಸೆಳೆದದ್ದು ವಿಸ್ತಾರವಾಗಿ ಬೆಳೆದ ಆಲದ ಮರಗಳು .ಒಂದು ಅಡಿಗೆ ಹತ್ತು ಸಾವಿರ ಬೆಲೆ ಬಾಳುವ ಆ ಪರಿಸರದಲ್ಲಿ ಇಷ್ಟು ದೊಡ್ಡ ಜಾಗ ಗಿಡ ಮರಗಳಿಂದ ಕೂಡಿದ್ದು ಕಂಡು ಅಲ್ಲಿ ಮಾರ ಕಡಿಯಬಾರದು ಎಂಬ ನಂಬಿಕೆ ಇರಬಹುದು ಎಂದೆನಿಸಿತು ನನಗೆ .
ಹೌದು ನನ್ನ ಊಹೆ ಸರಿಯಾಗಿತ್ತು.ಅಲ್ಲಿ ಐದು ಎಕರೆ 28 ಗುಂಟೆ ಭೂಮಿ ಅಲ್ಲಿನ ದೇವರಿಗೆ ಮೀಸಲಾಗಿದೆ .ಅಲ್ಲಿಯ ದೇವರನ್ನು ಮುನೇಶ್ವರ ಎಂದು ಸ್ಥಳೀಯವಾಗಿ ಕರೆದಿದ್ದರೂ  ಮುನೆಶ್ವರನಲ್ಲ .ಪೆರಿಯಾಂಡವರ್ ಅಲ್ಲಿನ ಆರಾಧ್ಯ ದೈವ ಎಂದು ನಂತರ ತಿಳಿಯಿತು .ಇಲ್ಲಿನ ಪೆರಿಯಾಂಡವರ್ ದೇವರ ವಿಗ್ರಹ  ಅಂಗಾತವಾಗಿ ಮಲಗಿದ ಭಂಗಿಯಲ್ಲಿದೆ ಸುಂದರವಾದ ವೀರ ಭಾವವನ್ನು ಸೂಚಿಸುವ.ಮಣ್ಣಿನ ವಿಗ್ರಹ ಇದು .ಒಂದು ಆಲದ ಮರದ ಕಟ್ಟೆಯಲ್ಲಿ ಅಂಗಾತ ಮಲಗಿ ವಿಶ್ರಾಂತಿ ತೆಗೆದು ಕೊಳ್ಳುವ ರೀತಿಯಲ್ಲಿದೆ .
ಅಲ್ಲಿಯ ಅರ್ಚಕ ಆನು ವಂಶಿಕ ಮೊಕ್ತೇಸರರಾದ ಯೋಗಾನಂದ ಅವರು ಅಲ್ಲಿನ ಸ್ದೇವಾಲಯದ ಬಗ್ಗೆ ಮಾಹಿತಿ ನೀಡಿದರು .
ಇಲ್ಲಿ ಮಲಗಿರುವ ವಿಗ್ರಹ ಪೆರಿಯಾಂಡವರ್ ದೇವರದ್ದು .ಈತ ಶಿವನ ಒಂದು ರೂಪ .ಈತನ ವಾಹನ ಕುದುರೆ .
 ಯೋಗಾನಂದ ಅವರ ವಂಶದವರು ಆರು  ತಲೆಮಾರುಗಳ ಹಿಂದೆ ಪಾಳೆಗಾರಾಗಿದ್ದರು.ಅವರು ಹೊನ್ನಿ ಗೌಂಡರ್ ಕ್ಷತ್ರಿಯ ಕುಲಕ್ಕೆ ಸೇರಿದವರು .

ಒಂದು ದಿನ ಬೇಟೆಯಾಡುತ್ತಾ ಎಕ್ಕಲ ಕಟ್ಟೆ ಸಮೀಪದ ಮೇಗಲ ಕೆರೆ ಬಳಿಗೆ ಬರುತ್ತಾರೆ.ಅಲ್ಲಿ ಶಿವನು ಮುಳ್ಳು ಹಂದಿ ರೂಪ ಧರಿಸಿ ನೀರು ಕುಡಿಯಲು ಬರುತ್ತಾನೆ .ಆಗ ಬೇಟೆಗೆ ಬಂದ ಪಾಳೆಗಾರ ಅದು ಶಿವನೆಂದು ತಿಳಿಯದೆ ಅದನ್ನು ಬೇಟೆಯಾಡುತ್ತಾನೆ .
ಆಗ ಅವನ ಕಣ್ಣು ಹೋಗುತ್ತದೆ .ನಂತರ ಅವರಿಗೆ ಮುಳ್ಳು ಹಂದಿ ರೂಪದಲ್ಲಿ ಬಂದಿದ್ದ /ಪೆರಿಯಾಂಡವರ್ /ಶಿವನ ಮೇಲೆ ಬಾಣ ಬಿಟ್ಟ ಕಾರಣ ಕಣ್ಣು ಹೋಯಿತು ಎಂದು .ನಂತರ ಪ್ರಾಯಶ್ಚಿತ್ತವಾಗಿ ಪೆರಿಯಂಡವರ್ ಅನ್ನು ಅಲ್ಲಿ ಆರಾಧಿಸಲು ಪ್ರಾರಂಭಿಸಿದರು .ನಂತರ ಅವರಿಗೆ ದೃಷ್ಟಿ ಮರುಕಳಿಸುತ್ತದೆ .

ಅಲ್ಲಿನ ಪೆರಿಯಾಂಡವರ್ ಗೆ ಗುಡಿ ಕಟ್ಟಿ ಆರಾಧಿಸುವ ಪದ್ಧತಿ ಇಲ್ಲ .ಆಲದ ಮರದ ಬುಡದಲ್ಲಿ ಆರಾಧನೆ ಮಾಡುತ್ತಾರೆ .
ಅಲ್ಲಿಗೆ ಸಮೀಪದ ಇನ್ನೊಂದು ಆಲದ ಮರದ ಕೆಳಭಾಗದಲ್ಲಿ ಸ್ಥಳೀಯ ದೇವತೆ ಕಾಟೇರಮ್ಮನ ಆರಾಧನೆ ಇದೆ .ಕಾಟೇರಮ್ಮ ನ ವಿಗ್ರಹ ಕೂಡ ಮಣ್ಣಿನದ್ದು,ಮತ್ತು ಪೆರಿಯಾಂಡವರ್ ಅಂತೆ ಅಂಗಾತ ಮಲಗಿದ ಭಂಗಿಯ ವಿಗ್ರಹವಾಗಿದೆ .

ಕಾಟೇರಮ್ಮ ನ ಹೆಸರು ಹೇಳಬಾರದು ಎಂಬನಂಬಿಕೆ ಇದೆ ಆದ್ದರಿಂದ ಕಾಟೇರಮ್ಮ ನನ್ನು ಕಾವೇರಮ್ಮ ಎಂದು ಕರೆಯುತ್ತಾರೆ .ಈ ದೇವತೆ ಪೆರಿಯಾಂಡ ವರ್ ಸಹೋದರಿ ಎಂಬ ನಂಬಿಕೆ ಇದೆ .
ಕಾಟೇರಮ್ಮ ಅಲ್ಲದ ಅಂಗಾಳಮ್ಮ /ಅಂಗಾಳಪರಮೇಶ್ವರಿ .ಕೆಂಪಮ್ಮಮೊದಲಾದ14 ಸ್ತ್ರೀ ದೆವತೆಗಳಿಗೆ ಅಲ್ಲಿಆರಾಧ ನೆ ಇದೆ
ಕರ್ನಾಟಕದಲ್ಲಿ ಪೆರಿಯಾಂಡವರ್ ದೇವಾಲಯ ಇಲ್ಲಿ ಮಾತ್ರ ಇದೆಯಂತೆ .
ಚೆನ್ನೈ ಸಮೀಪದ ತಿರುವನೈಲ್ ನಲ್ಲಿ ಸುಮಾರು 300 ವರ್ಷ ಪ್ರಾಚೀನ ಪೆರಿಯಾಂಡವರ್ ದೇವಾಲಯವಿದೆ
.ಪಾರ್ವತಿ ದೇವಿಯ ಶಾಪಕ್ಕೆ ಒಳಗಾಗಿ ಶಿವ ಮಾನ ರೂಪ ತಾಳುತ್ತಾನೆ.ಎಲ್ಲಿಯೂ ನೆಲೆ ಇಲ್ಲದೆ ಹುಚ್ಚು ಹಿಡಿದಂತೆ ಆಗಿ ಗುತ್ತು ಗುರಿ ಇಲ್ಲದೆ ತಿರುಗಾಡುತ್ತಾ ತಿರುವನೈಲ್ ಗೆ ಬರುತ್ತಾನೆ .ಅಲ್ಲಿ ನೆಲೆ ನಿಲ್ಲುತ್ತಾನೆ .ಅಲ್ಲಿ ಮುಂದೆ ಅವನಿಗೆ ದೇವಾಲಯ ಕಟ್ಟಿಸಿದರು ಎಂಬ ಸ್ಥಳ ಪುರಾಣ /ಐತಿಹ್ಯ ಅಲ್ಲಿ ಪ್ರಚಲಿತವಿದೆ .
ವಾಸ್ತವದಲ್ಲಿ ಈತನೊಬ್ಬ ವೀರಪುರುಷನಿರಬಹುದು ಎಂದೆನಿಸುತ್ತದೆ .ಮಲಗಿದ ಭಂಗಿಯ ಕುರಿತು ಆತನ ಕಣ್ಣಿನ ಉರಿಯನ್ನು ಆಕಾಶಕ್ಕೆ ಹೊರತಾಗಿ ಯಾರಿಗೂ ತಾಳಿಕೊಳ್ಳಲು ಸಾಧ್ಯವಿಲ್ಲ .ಆದ್ದರಿಂದ ಅಂಗಾತ ಮಲಗಿಸಿದ ವಿಗ್ರಹ ಇದೆ ಎಂದು ಹೇಳಿರುವುದಾದರೂ ಅಲೆಯಾರೋ ಒಬ್ಬಾತ ಅಲೆದಾಡುತ್ತಾ ಬಂದು ಸುಸ್ತಾಗಿ  ಮಲಗಿರುವ ಸಾಧ್ಯತೆ ಇದೆ .
ಪೆರಿಯಾಂಡವರ್ ಅನ್ನು ಶಿವ ಎಂದು ಭಾವಿಸುತ್ತಾರೆ ಆದರೆ ಈತನಿಗೆ ಶಿವನಂತೆ ನಂದಿ ವಾಹನವಲ್ಲ ,ಈತನಿಗೆ ಕುದುರೆ ವಾಹನವಾಗಿದೆ .ಹಾಗಾಗಿ ಈತ ಜನಪದ ದೇವತೆಯಾಗಿದ್ದು ಮೂಲತ ಓರ್ವ ವೀರ /ಸಾಂಸ್ಕೃತಿಕ ನಾಯಕನಾಗಿದ್ದು ಕಾಲಾಂತರದಲ್ಲಿ ದೈವ್ವಕ್ಕೆರಿ ಆರಧಿಸಲ್ಪಟ್ಟಿರುವ ಸಾಧ್ಯತೆ ಇದೆ .
ಇನ್ನು ಕೆನ್ಗೆರಿಯಲ್ಲಿನ ಪೆರಿಯಾಂಡವರ್ ಆರಾಧನೆಯ ಆರಂಭವಾದ ಹಿನ್ನೆಲೆಯಲ್ಲಿ ಬೇಟೆಯಾಡುತ್ತ ಬಂದ ಪಾಳೆಗಾರರ ಪ್ರಸ್ತಾಪವಿದೆ .ಆತನ ವಂಶಜ ಯೋಗಾನಂದ ಅವರು ಹೇಳುವಂತೆ ಇದು ಆರು ತಲೆಮಾರುಗಾ ಹಿಂದೆ ನಡೆದ ಘಟನೆ .ಆದ್ದರಿಂದ ಇದು ಸುಮಾರು 250 -300 ವರ್ಷಗಳ ಹಿಂದೆ ನಡೆದ ಘಟನೆ .ಈ ಕಾಲಾವಧಿಯಲ್ಲಿ ಅಲ್ಲಿ ಯಾರು ಪಾಳೆಗಾರಾಗಿದ್ದರು ?ಅವರು ತಮಿಳು ಮೂಲದವರೇ ?ಎಂದು ತಿಳಿಯಬೇಕಾಗಿದೆ .ತಮಿಳು ನಾಡಿನ ಪೆರಿಯಾಂಡವರ್ ಅನ್ನು ಇಲ್ಲಿ ಆರಾಧಿಸ ಬೇಕಾಗಿದ್ದರೆ ಅವರು ತಮಿಳು ಮೂಲದ ಪಾಳೆಗಾರ ಆಗಿರುವ ಸಾಧ್ಯತೆ ಇದೆ .
 ಪೆರಿಯಾಂಡವರ್ ಗೂ ತುಳುವರ ಅಧಿ ದೈವ ಬೆರ್ಮೆರ್ ಗೂ ಸಾಕಷ್ಟು ಸಾಮ್ಯತೆಗಳಿವೆ .
ನಾಗ ಮಂಡಳದಲಿ ಬರೆಯುವ ಬ್ರಹ್ಮ ಯಕ್ಷನ ಮುಖ ಮತ್ತು ಪೆರಿಯಾಂಡವರ್ ನ ಮುಖ ಭಾವ ಒಂದೇ ರೀತಿ ಇದೆ .ಬೆರ್ಮೆರ್ ಅಂತೆ ಪೆರಿಯಾಂಡವರ್ ಗೂ ಕುದುರೆ ವಾಹನ .ಇರ್ವರಿಗೂ ಬಿಲ್ಲು ಬಾಣಗಳು ಆಯುಧ ವಾಗಿದೆ .
ಬೆರ್ಮೆರ್ ಓರ್ವ ಯಕ್ಷ ಎಂಬ ಅಭಿಪ್ರಾಯವೂ ಇದೆ ,ತುಳುನಾಡಿನ ಮೂಲ ನಿವಾಸಿಗಳನ್ನು ಯಕ್ಷರು ಆಗಿರಬಹುದು ಎಂಬ ಅಭಿಪ್ರಾಯವೂ ಇದೆ ,ಬೆರ್ಮೆರ್ ಅನ್ನು ನಾಗ ಮಂಡಲದಲ್ಲಿ ಯಕ್ಷ ಬ್ರಹ್ಮ ಎಂದು  ರೇಖಿಸಿ ಆಹ್ವಾನಿಸಿ  ಆರಾಧಿಸುತ್ತಾರೆ ,ಕೆಂಗೇರಿಯ ಎಕ್ಕಲ ಕಟ್ಟೆ ಎಂಬ ಪದ ಯಕ್ಷರ ಕಟ್ಟೆಯ ಪರಿವರ್ತಿತ ರೂಪ ಆಗಿರುವ ಸಾಧ್ಯತೆ ಇದೆ ಬೆರ್ಮೆರ್ ಗೆ ಹಿರಿಯ ಎಂಬ ಅರ್ಥವಿದೆ .ಪೆರಿಯ ಎಂದರೆ ಹಿರಿಯ ಎಂಬರ್ಥದಲ್ಲಿ ಬೆರ್ಮೆರ್ ಪದ ನಿಷ್ಪನ್ನವಾಗಿದೆ ,ಬೆರ್ಮೆರ್ ಅನ್ನು ಬ್ರಹ್ಮ ಲಿಂಗೇಶ್ವರನೆಂದು ಶಿವನೊಂದಿಗೆ ಸಮನ್ವಯ ಗೊಳಿಸಲಾಗಿದೆ ,ಅಂತೆಯೇ ಪೆರಿಯಾಂಡವರ್ ಅನ್ನು ಕೂಡ ಶಿವನೊಂದಿಗೆ ತಾದಾತ್ಮ್ಯ ಗೊಳಿಸಿದೆ ಈ ಬಗ್ಗೆ ಇದಮಿತ್ತಂ ಎಂದು ಹೇಳಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ
ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ


Monday, 27 October 2014

ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಗಳ ಬಾಳು ಹಸನಾದೀತೇ ?(ಕನ್ನಡ ಪ್ರಭ 28 ಅಕ್ಟೋಬರ್ 2014 )-ಡಾ.ಲಕ್ಷ್ಮೀ ಜಿ ಪ್ರಸಾದ



“ಆತನಿನ್ನೂ ತನ್ನ ಪಿಎಚ್.ಡಿ ಸಂಶೋಧನಾ ಅಧ್ಯಯನವನ್ನು ಮುಗಿಸುತ್ತಾ ಇದ್ದಾನೆ.ಅವನಿಗೆ ವಿಶ್ವ ವಿದ್ಯಾಲಯವೊಂದರಿಂದ ತಮ್ಮಲ್ಲಿ ಪೋಸ್ಟ್ ಡಾಕ್ಟೊರಲ್ ಅಧ್ಯಯನ ಮಾಡುವಂತೆ ಆಹ್ವಾನ ಬರುತ್ತದೆ.ಈತನಿನ್ನೂ ಸಂಶೋಧನಾ ಅಧ್ಯಯನ ಮುಂದುವರಿಸುವುದೇ ಅಥವಾ ಉದ್ಯೋಗ ಹಿಡಿಯುವುದೇ ಎಂದು ಆಲೋಚಿಸುತ್ತಾ ಇರುತ್ತಾನೆ.ಅಷ್ಟರಲ್ಲಿ ಅದೇ ವಿಶ್ವ ವಿದ್ಯಾಲಯದಿಂದ “ನೀವೊಮ್ಮೆ ನಮ್ಮ ವಿಶ್ವ ವಿದ್ಯಾಲಯಕ್ಕೆ ಬಂದು ನಮ್ಮಲ್ಲಿನ  ಪ್ರಯೋಗಾಲಯವನ್ನುಹಾಗೂ ಇತರ ಸೌಲಭ್ಯಗಳನ್ನು ಪರಿಶೀಲಿಸಿ ನೋಡಿ ,ನಿಮಗೆ ಇಷ್ಟವಾದರೆ ನಮ್ಮಲ್ಲಿ ಪೋಸ್ಟ್ ಡಾಕ್ಟೊರಲ್ ಅಧ್ಯಯನ ಮಾಡಿ ಎಂಬ ಒಕ್ಕಣಿಕೆ ಯುಳ್ಳ ಮತ್ತೊಂದು ಆಹ್ವಾನ ಪತ್ರ ಬರುತ್ತದೆ...”
ಎಂತ ಇದು? ಆಶ್ಚರ್ಯವಾಯಿತೇ?! ನಾನು ಕನಸು ಕಾಣುತ್ತಾ ಏನೇನೋ ಕನವರಿಸುತ್ತಿಲ್ಲ , ಇದು ಸತ್ಯ.ಆದರೆ ನಮ್ಮ ದೇಶದಲ್ಲಿ ಅಲ್ಲ !
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ  ತಾಲೂಕಿನ ಕುಗ್ರಾಮ ಮಾಣಿಲದಲ್ಲಿ  ಹುಟ್ಟಿ ಬೆಳೆದು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಮುಂದೆ ಬಯೋ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಉನ್ನತ ಶಿಕ್ಷಣಕ್ಕಾಗಿ ಯು.ಎಸ್ .ಎ ಗೆ ತೆರಳಿ ಎಂ.ಎಸ್ ಮಾಡಿ ಪ್ರಸ್ತುತ ಟೆಕ್ಸಾಸ್ ಯೂನಿವರ್ಸಿಟಿಯ ರಿಸರ್ಚ್ ಸೆಂಟರ್ ನಲ್ಲಿ  ಪಿಎಚ್.ಡಿ ಸಂಶೋಧನಾ ಅಧ್ಯಯನದ  ಅಂತಿಮ ಹಂತದಲ್ಲಿರುವ ಭಾರತೀಯ ಯುವಕ ರಾಜೇಶ ರುಪಾಯಿಮೂಲೆ ಇವರಿಗೆ ವಿಶ್ವ ಪ್ರಸಿದ್ಧ ಹಾರ್ವರ್ಡ್ ಯೂನಿವರ್ಸಿಟಿಯಿಂದ ಇಂಥಹ ಒಂದು ಆಹ್ವಾನ ಬಂದಿದೆ.ಅಲ್ಲಿ ಅರ್ಹತೆಯೇ ಮಾನದಂಡ.ಅರ್ಹರನ್ನು ಗುರುತಿಸಿ ತಮ್ಮಲ್ಲಿ ಸಂಶೋಧನೆ ಮಾಡುವಂತೆ ವಿಶ್ವ ವಿದ್ಯಾಲಯ ಸ್ಕಾಲರ್ ಶಿಪ್ ನೀಡಿ   ಆಹ್ವಾನಿಸುತ್ತದೆ. ಮುಂದೊಂದು ದಿನ ಈತ ನೋಬಲ್ ನಂಥಹ ಉನ್ನತ ಸಂಶೋಧನಾ ಪ್ರಶಸ್ತಿಗಳನ್ನು ಪಡೆಯಲೂ ಬಹುದು .
 ರಾಜೇಶ ರುಪಾಯಿಮೂಲೆ
ವಿದೇಶಕ್ಕೆ ಹೋಗಿ ಕಲಿತು  ಅಲ್ಲಿಯೇ ಉದ್ಯೋಗಕ್ಕೆ ಸೇರಿ ಅನೇಕ ಮಹತ್ವದ ಸಾಧನೆಗಳನ್ನು ಮಾಡುವ ,ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುವ ಅನೇಕ ಭಾರತೀಯರ ಸುದ್ದಿಯನ್ನು ನಾವು ಆಗಾಗ ಕೇಳುತ್ತೇವೆ.ಆದರೆ ನಮ್ಮಲ್ಲೇ ಕಲಿತು ಇಂಥಹ ಸಾಧನೆಗಳನ್ನು ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ?ಈ ಬಗ್ಗೆ ಉತ್ತರ  ಬೇಕಿದ್ದರೆ “ನಮ್ಮಲ್ಲಿನ ವಿಶ್ವ ವಿದ್ಯಾಲಯಗಳು ಹೇಗಿವೆ” ಎಂಬುದನ್ನು  ನೋಡಬೇಕಾಗಿದೆ.
ನಮ್ಮ ವಿಶ್ವ ವಿದ್ಯಾಲಯಗಳು ಹೇಗಿವೆ?
ಇತ್ತೀಚಿಗೆ ಬೆಂಗಳೂರು ಯೂನಿವರ್ಸಿಟಿ ಪಿಎಚ್.ಡಿ ಅಧ್ಯಯನ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು .ನನ್ನ ಬುದ್ಧಿವಂತ ಹಳೆ ವಿದ್ಯಾರ್ಥಿನಿ ಒಬ್ಬಳಿಗೆ ಪಿಎಚ್.ಡಿ ಮಾಡುವ ಹಂಬಲ ಇತ್ತು .ಹಾಗೆ ಅವಳಲ್ಲಿ ಅರ್ಜಿ ಸಲ್ಲಿಸಿದೆಯ? ಎಂದು ವಿಚಾರಿಸಿದೆ .ಇಲ್ಲವೆಂದು ತಲೆ ಆಡಿಸಿದಳು ,ಯಾಕೆ ?ಎಂದು ಕೇಳಿದೆ.ಏನೂ ಹೇಳದೆ ತಲೆ ತಗ್ಗಿಸಿದಳು.ನನಗೆ ಅರ್ಥವಾಯಿತು.
ನಮ್ಮ ದೇಶದ ಯೂನಿವರ್ಸಿಟಿಗಳಲ್ಲಿ ಅಧ್ಯಯನ ಮಾಡುವುದು ಸುಲಭದ ವಿಚಾರವಲ್ಲ .ಬಡವರ ಪಾಲಿಗೆ  ಅದು ಮೃಗ ಮರೀಚಿಕೆಯೇ ಸರಿ. ನಮ್ಮ ವಿಶ್ವ ವಿದ್ಯಾಲಯಗಳಲ್ಲಿ .ಡಾಕ್ಟರೇಟ್ ಅಧ್ಯಯನ ಮಾಡಲು ಇಚ್ಚಿಸಿದರೆ ಆರಂಭದಲ್ಲಿಯೇ ಅರ್ಜಿ ಶುಲ್ಕ ಮತ್ತು ಪರೀಕ್ಷಾ ಶುಲ್ಕ ಎರಡು ಎರಡೂವರೆ ಸಾವಿರ ರು ಗಳಷ್ಟು ದುಡ್ಡು ಕಟ್ಟಬೇಕು.ಎಲ್ಲ ವಿಷಯಗಳಲ್ಲಿ ಸೇರಿ  ಒಂದು ಸಾವಿರದಷ್ಟು ವಿದ್ಯಾರ್ಥಿಗಳಿಗೆ ಗೆ ಅಧ್ಯಯನಕ್ಕೆ ಅವಕಾಶವಿದ್ದರೆ ಅರ್ಜಿ ಸಲ್ಲಿಸುವವರು ಸಾವಿರಾರು ಮಂದಿ ಇರುತ್ತಾರೆ.ಕನಿಷ್ಠ ಹತ್ತು ಸಾವಿರ ಮಂದಿ ಅರ್ಜಿ ಸಲ್ಲಿಸಿದರೂ ಸಂಗ್ರಹವಾಗುವ ದುಡ್ಡು  ಎರಡು ಮೂರು ಕೋಟಿ.ಆಯ್ಕೆಯಾದ ಒಂದು ಸಾವಿರ ವಿದ್ಯಾರ್ಥಿಗಳಿಂದ ನೋಂದಣಿ ಶುಲ್ಕ ,ಟ್ಯೂಶನ್ ಶುಲ್ಕ,ಪ್ರಯೋಗಾಲಯ ಶುಲ್ಕ ,ವಾರ್ಷಿಕ ನಿರ್ವಹಣಾ ಶುಲ್ಕ ಇತ್ಯಾದಿಯಾಗಿ ಪ್ರತಿ ವರ್ಷ ಸಂಗ್ರಹವಾಗುವ ದುಡ್ಡು ಎರಡೂವರೆ ಮೂರು ಕೋಟಿ ರು.
ಅದೆಷ್ಟೋ ಬಡ ಪ್ರತಿಭಾವಂತರಿಗೆ ಡಾಕ್ಟರೇಟ್ ಓದುವ ಮನಸಿದ್ದರೂ ಅರ್ಜಿ ಸಲ್ಲಿಸುವಾಗಲೇ ಕಟ್ಟ ಬೇಕಾಗಿರುವ ದುಬಾರಿ ಶುಲ್ಕ ನೋಡಿಯೇ ಗಾಬರಿಯಾಗಿ ಅಸಾಧ್ಯವೆನಿಸಿ ಕೈ ಚೆಲ್ಲಿರುತ್ತಾರೆ.ಒಂದು ವೇಳೆ ಆಯ್ಕೆಯಾದರೂ ನೋಂದಣಿ ಶುಲ್ಕ ,ಟ್ಯೂಶನ್ ಶುಲ್ಕ ಮತ್ತೊಂದು ಮೊದಲೊಂದು ಹೇಳಿ ಕಡಿಮೆ ಎಂದರೆ ಇಪ್ಪತ್ತು ಮೂವತ್ತು ಸಾವಿರ ತುಂಬ ಬೇಕು.ವಿದ್ಯಾರ್ಥಿ ಸಹಾಯ ಧನ ಸಿಕ್ಕದವರಿಗೆ ಮಾತ್ರವಲ್ಲ ಸಿಕ್ಕವರಿಗೆ ಕೂಡ ಇದು ತುಂಬಾ ಭಾರವೆನಿಸುತ್ತದೆ.ಸಹಾಯಧನ ಸಿಕ್ಕದೆ ಇರುವ ಬಡ ಅಭ್ಯರ್ಥಿಗಳಿಗಂತೂ ಇದನ್ನು ಭರಿಸುವುದು ಅಸಾಧ್ಯವೇ ಸರಿ.
ವಿದ್ಯಾರ್ಥಿಗಳ ಕಲಿಕೆಗೆ ಬ್ಯಾಂಕ್ ಗಳು ಸಾಲ ಕೊಡುತ್ತವೆ.ಆದರೆ ಭದ್ರತೆಗೆ ಏನೂ ಇಡಲು ಇಲ್ಲದವರಿಗೆ ಅಲ್ಲೂ ಸಾಲ ಸಿಕ್ಕುವುದಿಲ್ಲ.ನಾಲ್ಕು ಲಕ್ಷ ತನಕದ ಸಾಲಕ್ಕೆ ಯಾವುದೇ ಭದ್ರತೆ ಕೇಳಬಾರದು ಎಂಬ ನಿಯಮವೇನೂ ಇದೆ.ಆದರೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತಿದೆ?ನೋಡಿದವವರಿಲ್ಲ. ಅನುಭವಿಸಿದವರಿಗೆ ಮಾತ್ರ ಇದರ ಕಷ್ಟ  ಗೊತ್ತಾಗುತ್ತದೆ.
ಮೇಲೆ ಉಲ್ಲೇಖಿಸಿದ ಯುವಕ ರಾಜೇಶ್ ಗೆ ವಿದೇಶಕ್ಕೆ ಉನ್ನತ ಅಧ್ಯಯನಕ್ಕೆ ಅವಕಾಶ ಸಿಕ್ಕಾಗ ಆರಂಭದಲ್ಲಿ ದಾಖಲೆಗಳನ್ನು ಪರಿಶೀಲಿಸಿ ,ಭದ್ರತೆ ಎಲ್ಲ ಕೇಳಿ “ಸಾಲ ಕೊಡುತ್ತೇವೆ” ಎಂದು ಒಪ್ಪಿದ ಬ್ಯಾಂಕ್ ಕೊನೆಯ ಕ್ಷಣದಲ್ಲಿ ಸರಿಯಾದ ಕಾರಣವಿಲ್ಲದೇ ಇದ್ದಾಗಲೂ ಯಾವುದೋ ಒಂದು ಕುಂಟು ನೆಪ ಹೇಳಿ ಸಾಲ ಕೊಡಲು ನಿರಾಕರಿಸಿತ್ತು . ಮತ್ತೆ ಅವರ ಬಂಧು ಬಳಗದವರೆಲ್ಲ ಸೇರಿ ಒಮ್ಮೆಗೆ ಹೇಗೋ ದುಡ್ಡು ಹೊಂದಿಸಿ ಕೊಟ್ಟರು ,ಮುಂದೆ ಆತನಿಗೆ ವಿದ್ಯಾರ್ಥಿ ಸಹಾಯ ಧನ ಸಿಕ್ಕ ಕಾರಣ ಸಮಸ್ಯೆಯಾಗಲಿಲ್ಲ.ಆದರೆ ಎಲ್ಲರ ವಿಚಾರವೂ  ಹೀಗೆ ಸುಗಮವಾಗಲು ಸಾಧ್ಯವಿಲ್ಲ.
ಅದಿರಲಿ,ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಇಷ್ಟು ಕೋಟಿಗಟ್ಟಲೆ ದುಡ್ಡು ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ಯೂನಿವರ್ಸಿಟಿಗಳಿಗೆ  ಯುಜಿಸಿ ಹಾಗೂ ಸರಕಾರದಿಂದಲೂ ಸಹಾಯ ಧನ ಸಿಗುತ್ತದೆ.ಹಾಗಿದ್ದರೂ ಯಾಕೆ ನಮ್ಮ ದೇಶದ ಒಂದೇ ಒಂದು ಯೂನಿವರ್ಸಿಟಿ ಕೂಡಾ ವಿಶ್ವದ ಶ್ರೇಷ್ಠ ಇನ್ನೂರೈವತ್ತು ಯೂನಿವರ್ಸಿಟಿಗಳಲ್ಲಿ ಒಂದೇ ಒಂದು ಸ್ಥಾನ ಪಡೆದಿಲ್ಲ?ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗೇನೂ ಕೊರತೆಯಿಲ್ಲ.ಆದರೆ ಬಡ ಪ್ರತಿಭಾವಂತರಿಗೆ ಯೂನಿವರ್ಸಿಟಿ ಪ್ರವೇಶವೇ ಮೃಗ ಮರೀಚಿಕೆಯಾಗಿದೆ.ಪ್ರವೇಶ ಪಡೆದವರಿಗೂ ಗುಣಮಟ್ಟದ ಮಾರ್ಗ ದರ್ಶನ ,ತರಬೇತಿಗಳು ಸಿಗುತ್ತಿಲ್ಲ.,ಗ್ರಂಥಾಲಯ ಸೌಲಭ್ಯ,ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳು ಕೂಡ ಸರಿಯಾಗಿ ಸಿಗುತ್ತಿಲ್ಲ.ವಿದ್ಯಾರ್ಥಿಗಳು ಕೊಡುವ ದುಡ್ಡು ,ಸಿಗುವ ಸಹಾಯ ಧನ ಎಲ್ಲ ಎಲ್ಲಿ ಹೋಗುತ್ತವೆ?ಉಚಿತವಾಗಿ ಅಥವಾ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಸಿಗುತ್ತಿದ್ದರೆ ಅದೆಷ್ಟೋ ಬಡ ಪ್ರತಿಭಾವಂತರಿಗೆ ಕಲಿಯಲು ಸಾಧ್ಯವಾಗುತ್ತಿತ್ತು .
ಇಷ್ಟೆಲ್ಲಾ ದುಡ್ಡು ಕಟ್ಟಿ ಸೇರಿದ ಅನೇಕ ವಿದ್ಯಾರ್ಥಿಗಳ ಪರಿಸ್ಥಿತಿ ಬಹಳ ಶೋಚನೀಯವಾಗಿರುತ್ತದೆ ವಿದ್ಯಾರ್ಥಿಗಳನ್ನು ದುಡ್ಡಿಗಾಗಿ ಶೋಷಣೆ ಮಾಡುವ ಮಾರ್ಗ ದರ್ಶಕರೂ ಇದ್ದಾರೆ.ಸುಮ್ಮಗೇ ದರ್ಪ ತೋರಿ ಶೋಷಿಸುವವರೂ ಇದ್ದಾರೆ.ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಒಳಗಾದವರೂ ಇದ್ದಾರೆ.ಒಂದೆಡೆ ವರ್ಷ ಗಟ್ಟಲೆ  ಪ್ರಾಮಾಣಿಕವಾಗಿ ಅಧ್ಯಯನ ಮಾಡಿ ಪ್ರಬಂಧ ಸಿದ್ಧ ಪಡಿಸಿದವರಿಗೆ ಯಾವಾವುದೋ ಕುಂಟು ನೆಪಗಳನ್ನು ಹೇಳಿ ಸಲ್ಲಿಸಲು ಅನುಮತಿ ನೀಡದೆ ಇರುವ ಅನೇಕ ಪ್ರಕರಣಗಳಿವೆ.ಒಂದೊಮ್ಮೆ ಪ್ರಬಂಧ ಸಲ್ಲಿಸಿದರೂ ಸಕಾಲದಲ್ಲಿ ಮೌಲ್ಯ ಮಾಪನ ಮಾಡಿಸಿ ,ಮೌಖಿಕ ಪರೀಕ್ಷೆ ಏರ್ಪಡಿಸಿ ಪದವಿ ನೀಡದೆ ಇರುವ ಅನೇಕ ಪ್ರಕರಣಗಳೂ ಇವೆ. ಮಹಾ ಪ್ರಬಂಧ ಸಲ್ಲಿಸಿ ಎರಡು ಮೂರು ವರ್ಷ ಕಳೆದರೂ ಪಿಎಚ್.ಡಿ ಪದವಿ ಸಿಗದವರು ಇರುವಂತೆಯೇ ಪಿಎಚ್.ಡಿ ಅಧ್ಯಯನಕ್ಕೆ ಪ್ರವೇಶ ಪಡೆದ ಏಳೆಂಟು ತಿಂಗಳುಗಳಲ್ಲಿಯೇ  ಪಿಎಚ್.ಡಿ ಪದವಿ ಪಡೆದವರೂ ಇದ್ದಾರೆ! .ಕೆಲ ವರ್ಷಗಳ ಹಿಂದೆ ತುಮಕೂರು ಯೂನಿವರ್ಸಿಟಿ ಯಲ್ಲಿ ಕಾನೂನು ಬಾಹಿರವಾಗಿ ಏಳೆಂಟು ತಿಂಗಳುಗಳಲ್ಲಿಯೇ ಪಿಎಚ್.ಡಿ ಪದವಿ ನೀಡಿದ ಬಗ್ಗೆ ಸುದ್ದಿಯಾಗಿತ್ತು.
ಇಂಥ ಅವ್ಯವಸ್ಥೆಗಳು ಪಿಎಚ್.ಡಿ ಗೆ ಮಾತ್ರ ಸೀಮಿತವಲ್ಲ.ಸ್ನಾತಕ .ಸ್ನಾತಕೋತ್ತರ,ವೈದ್ಯಕೀಯ ,ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣಗಳನ್ನು ಕೂಡ ಬಿಟ್ಟಿಲ್ಲ.ಒಂದೆರಡು ತಿಂಗಳ ಹಿಂದೆ ಮೈಸೂರು ಯೂನಿವರ್ಸಿಟಿಯ ಬಿ.ಎಡ್ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟವಾಯಿತು. ಅಲ್ಲಿನ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಕೇಳಿದರೆ ಎಂಥವರ ಎದೆ ಕೂಡಾ ದಸಕ್ ಎನ್ನಲೇ ಬೇಕು! ಅನೇಕ ವಿದ್ಯಾರ್ಥಿಗಳಿಗೆ 100% ಅಂಕಗಳು ಬಂದಿವೆ ಎಂದರೆ ಎಲ್ಲ ಪತ್ರಿಕೆಗಳಲ್ಲಿಯೂ ಅಂತರ್ ಮೌಲ್ಯ ಮಾಪನ ಹಾಗೂ  ಲಿಖಿತ ಪರೀಕ್ಷೆಯಲ್ಲಿ  ಪೂರ್ಣ ಅಂಕಗಳು /ನೂರಕ್ಕೆ ನೂರಷ್ಟು ಅಂಕಗಳು ಲಭಿಸಿವೆ!!ಪ್ರಾಜೆಕ್ಟ್ ವರ್ಕ್ .ಅಣು ಬೋಧನೆ ,ಪ್ರಬಂಧ ಮಂಡನೆ ,ಆಂತರಿಕ ಲಿಖಿತ  ಪರೀಕ್ಷೆ ,ಹಾಗೂ ಅಂತಿಮ ಲಿಖಿತ ಪರೀಕ್ಷೆ ಎಲ್ಲದರಲ್ಲಿಯೂ ನೂರಕ್ಕೆ ನೂರು ಅಂಕಗಳನ್ನು  ಗಳಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಎಲ್ಲೆಡೆ ಪೂರ್ಣ ಅಂಕಗಳನ್ನು ಗಳಿಸುವುದು ಅಸಾಧ್ಯವಾದ ವಿಚಾರ.ಬೇರೆ ಯೂನಿವರ್ಸಿಟಿಗಳಲ್ಲಿ 94-95 % ಗರಿಷ್ಠ ಅಂಕಗಳು ಬಂದಿವೆ .ಹಾಗಿರುವಾಗ  ಒಂದು ಯೂನಿವರ್ಸಿಟಿಯ ವ್ಯಾಪ್ತಿಯ ಬಿ.ಎಡ್  ಕಾಲೇಜ್ ಗಳಲ್ಲಿ ಮಾತ್ರ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಥಹ 100 % ಅಂಕ ಗಳಿಕೆಯ ಅಸಾಧರಣ ಸಾಧನೆ ಮಾಡಿದ್ದಾರೆ ಎಂದರೆ ಅಲ್ಲಿನ ವ್ಯವಸ್ಥೆ ಬಗ್ಗೆಯೇ ಸಂಶಯವಾಗುತ್ತದೆ !.
ಕೆಲ ದಿನಗಳ ಹಿಂದೆ ಕರ್ನಾಟಕ ರಾಜ ಮುಕ್ತ ವಿಶ್ವ ವಿದ್ಯಾಲಯಗಳ ಅವ್ಯವಸ್ಥೆಯ ಬಗ್ಗೆ ಸುದ್ದಿ ಬಂದಿತ್ತು.ಒಬ್ಬರಿಗೆ ಒಂದು ಪತ್ರಿಕೆಯಲ್ಲಿ 34 ಅಂಕ ಬಂದಿದೆಯೆಂದು ಮರು ಮೌಲ್ಯ ಮಾಪನಕ್ಕೆ ಹಾಕಿದರೆ ಮರು ಮಾಪನದಲ್ಲಿ 4 ಅಂಕಗಳು ಬಂದುವಂತೆ.ಅದು ಯಾಕೆ ಹೀಗೆ ಎಂದು ಗಾಬರಿಯಾಗಿ ಕೇಳಿದರೆ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವುದು ಮಾತ್ರ ನಿಮ್ಮ ಜವಾಬ್ದಾರಿ .ಅಂಕ ಕೊಡುವುದು ಮೌಲ್ಯ ಮಾಪಕರು ಅದನ್ನು ಕೇಳುವಂತಿಲ್ಲ ಎಂಬ ಉಡಾಫೆಯ ಉತ್ತರವನ್ನು ಅಧಿಕಾರಿಗಳು ಕೊಟ್ಟರೆಂದು ಓದಿದೆ.ಈ ವಿಶ್ವ ವಿದ್ಯಾಲಯದಲ್ಲಿ ಮೌಲ್ಯ ಮಾಪನವೇ ಮಾಡದೆ ಸುಮ್ಮನೆ ಅಂಕಗಳನ್ನು ಕೊಡುತ್ತಾರೇನೋ ಎಂಬ ಸಂಶಯ ನನಗೂ ಇದೆ.ನಾನು ಇದೇ ಯೂನಿವರ್ಸಿಟಿ ಯಲ್ಲಿ ಕನ್ನಡ ಎಂ.ಎ ಮಾಡಿದ್ದು ನನಗೆ ಮೊದಲ ವರ್ಷ ಫಲಿತಾಂಶ ಬಂದಾಗ ಅಚ್ಚರಿ ಕಾಡಿತ್ತು.ನಾನು ಛಂದಸ್ಸು ಮತ್ತು ಭಾಷಾ ವಿಜ್ಞಾನ ಪತ್ರಿಕೆಯಲ್ಲಿ ಬಹಳ ಚೆನ್ನಾಗಿ ಉತ್ತರಿಸಿದ್ದೆ. ನಾನು 85 -88 ಅಂಕಗಳನ್ನು  ನಿರೀಕ್ಷಿಸಿದ್ದೆ.ಆದರೆ ನನಗೆ ಆ ಪತ್ರಿಕೆಯಲ್ಲಿ ಕೇವಲ 54 (46+9) ಅಂಕ ಬಂದಿತ್ತು .ಹಾಗಾಗಿ ನಾನು ನನ್ನ ಎಲ್ಲ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗೆ ಅರ್ಜಿ ಸಲ್ಲಿಸಿದೆ ಮತ್ತು ನಿ ರೀಕ್ಷಿಸಿದ್ದಕ್ಕಿಂತ ತೀರ ಕಡಿಮೆ ಅಂಕಗಳು ಬಂದಿದ್ದ ಎರಡು ಪತ್ರಿಕೆಗಳನ್ನು ಮರು ಮೌಲ್ಯ ಮಾಪನ ಮಾಡಲು ಕೋರಿ ಶುಲ್ಕ ತುಂಬಿ ಅರ್ಜಿ ಸಲ್ಲಿಸಿದ್ದೆ. ಅದೃಷ್ಟವಶಾತ್ ಮರು ಮೌಲ್ಯ ಮಾಪನದಲ್ಲಿ ನನಗೆ ಛಂದಸ್ಸು ಮತ್ತು ಭಾಷಾ ವಿಜ್ಞಾನದಲ್ಲಿ 30 ಅಂಕಗಳು ಹೆಚ್ಚು ಬಂದು 76+8 = 84 ಅಂಕಗಳು ಸಿಕ್ಕವು .ಇನ್ನೊಂದರಲ್ಲಿಯೂ  20 ಅಂಕಗಳು ಹೆಚ್ಚು ಲಭಿಸಿದ್ದು 52 ಇದ್ದಲ್ಲಿ 72 ಅಂಕಗಳು ಸಿಕ್ಕವು .
ನನ್ನ ಎಲ್ಲ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳು ಕೈಗೆ ಬಂದಾಗ ನನಗೆ ಆಘಾತವಾಗಿತ್ತು ! ಸ್ನಾತಕೋತ್ತರ ಪದವಿಗಳ ಉತ್ತರ ಪತ್ರಿಕೆಯನ್ನು ಇಬ್ಬರು ಮೌಲ್ಯ ಮಾಪನ ಮಾಡುವುದು ಎಲ್ಲೆಡೆ ಇರುವ ಕ್ರಮ.ಆದರೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಒಂದು ಮೌಲ್ಯ ಮಾಪನ ಮಾತ್ರ ಮಾಡುವ ಪದ್ಧತಿ ಇದೆ ಎಂದೆನಿಸುತ್ತದೆ.ಆ ಒಂದು ಮೌಲ್ಯ ಮಾಪನವನ್ನೂ ಸರಿಯಾಗಿ ಮಾಡದೆ ಸುಮ್ಮಗೆ ಒಮ್ಮೆ ತಿರುವಿ ಹಾಕಿ ಅಥವಾ ಒಳಭಾಗ ತೆರೆದು ನೋಡದೆಯೇ ಅಂಕಗಳನ್ನು ಅಂಕ ಪತ್ರಿಕೆಯಲ್ಲಿ ನಮೂದಿಸದೆಯೇ ನೇರವಾಗಿ ಅಂಕ ಕೊಡುತ್ತಾರೆ.ಎಂದು ನನ್ನ ಉತ್ತರ ಪತ್ರಿಕೆಗಳ ಪ್ರತಿಯನ್ನು ಗಮನಿಸಿದಾಗ ನನಗೆ ಅರಿವಾಯಿತು.ಎರಡು ಮೌಲ್ಯ ಮಾಪ ಇರುವ ಕಾರಣ ಸ್ನಾತಕೋತ್ತರ ಪದವಿಗಳಲ್ಲಿ ಉತ್ತರ ಪತ್ರಿಕೆಯಲ್ಲಿ ಒಳಭಾಗದಲ್ಲಿ ಅಂಕಗಳನ್ನು ನಮೂದಿಸುವುದಿಲ್ಲ.ಆದರೆ ಉತ್ತರ ಪತ್ರಿಕೆಯ ಎರಡನೆಯ ಅಥವಾ ಮೂರನೆಯ ಪುಟದಲ್ಲಿ ಎಲ್ಲ ಪ್ರಶ್ನೆ ಸಂಖ್ಯೆಗಳನ್ನು ಮುದ್ರಿಸಿರುತ್ತಾರೆ.ವಿದ್ಯಾರ್ಥಿ ಯಾವ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ ಅದಕ್ಕೆ ಎಷ್ಟು  ಅಂಕಗಳು ಬಂದಿವೆ ಎಂಬುದನ್ನು ಆಯಾಯ ಪ್ರಶ್ನೆ ಸಂಖ್ಯೆ ಕೆಳಭಾಗದಲ್ಲಿ ತುಂಬಲು ಜಾಗ ಇಡುತ್ತಾರೆ .ಕೊನೆಯಲ್ಲಿ ಒಟ್ಟು ಅಂಕಗಳನ್ನು ಬರೆಯಲು ಸ್ಥಳಾವಕಾಶ ಇರುತ್ತದೆ . ಅದರ ಕೆಳಭಾಗದಲ್ಲಿ ಮೌಲ್ಯ ಮಾಪಕರ ಸಹಿ ಮಾಡುವ ಜಾಗ ಇರುತ್ತದೆ .ಎಡ ಭಾಗದಲ್ಲಿ ಮೌಲ್ಯ ಮಾಪಕರ ಹೆಸರು ಬರೆಯಲು ಜಾಗ ವಿರುತ್ತದೆ.ಮೌಲ್ಯ ಮಾಪಕರು ಇವೆಲ್ಲವನ್ನೂ ತುಂಬಿ ಯಾವ ಪ್ರಶ್ನೆಗೆ ಎಷ್ಟು ಅಂಕಗಳು ಎಂಬುದನ್ನು ನಮೂದಿಸಿ ಟೋಟಲ್ ಹಾಕಿ ಸಹಿ ಮಾಡಬೇಕು.ಆದರೆ ನನ್ನ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳಲ್ಲಿ ಒಂದರಲ್ಲಿ ಮಾತ್ರ  ಉತ್ತರಿಸಿದ ಪ್ರಶ್ನೆಗಳ ಕೆಳಭಾಗದಲ್ಲಿ ಅಂಕಗಳನ್ನು ತುಂಬಿ ಒಟ್ಟು ಮೊತ್ತವನ್ನು ಹಾಕಿದ್ದು ಅದರಲ್ಲಿ  ಮೌಲ್ಯ ಮಾಪಕರ ಸಹಿ ಮತ್ತು ಹೆಸರು ಇದೆ.ಆ ಪತ್ರಿಕೆಯಲ್ಲಿ ನನಗೆ 68 ಅಂಕಗಳು ಬಂದಿದ್ದು ಅಂತರ್ ಮೌಲ್ಯ ಮಾಪನದ 8 ಅಂಕಗಳು ಸೇರಿಸಿ ಒಟ್ಟು 76 ಅಂಕಗಳು ಬಂದಿತ್ತು.ಇದು ನಾನು ಸುಮಾರಾಗಿ ನಿರೀಕ್ಷಿಸಿದ ಅಂಕವೇ ಆಗಿತ್ತು. ಉಳಿದ ಎಲ್ಲ ಪತ್ರಿಕೆಗಳಲ್ಲಿ  ಮೌಲ್ಯ ಮಾಪಕರ ಸಹಿ ಮಾತ್ರ ಇದೆ .ಉತ್ತರಿಸಿದ ಪ್ರಶ್ನೆ ಸಂಖ್ಯೆಗಳಿಗನುಗುಣವಾಗಿ ಅಂಕಗಳನ್ನು ನಮೂದಿಸುವುದು ಬಿಡಿ,ಒಟ್ಟು ಅಂಕಗಳು ಎಷ್ಟು ಎಂದು ಕೂಡ ಹಾಕಿಲ್ಲ !ಮೌಲ್ಯ ಮಾಪಕರ ಹೆಸರು ಕೂಡ ಇಲ್ಲ.ಸಹಿ ಮಾತ್ರ ಇದೆ. ಹಾಗಾಗಿ ನನಗನ್ನಿಸಿದ್ದು ಇಲ್ಲಿ ಮೌಲ್ಯ ಮಾಪನ ಮಾಡುವುದೇ ಇಲ್ಲವೋ ಏನೋ ಎಂದು. ಉತ್ತರ ಪತ್ರಿಕೆಯನ್ನೇ ಸರಿಯಾಗಿ ಮೌಲ್ಯ ಮಾಪನ ಮಾಡದೇ ಇರುವವರು ಇನ್ನು ಆಂತರಿಕ ನಿಬಂಧಗಳನ್ನು ಮೌಲ್ಯ ಮಾಪನ ಮಾಡುತ್ತಾರೆಯೇ ?ತಮಗೆ  ಮನಸಿಗೆ ಬಂದಷ್ಟು ಅಂಕಗಳನ್ನು ಕೊಡುತ್ತಾರೆ ಅಷ್ಟೇ !
ಈ ಮೊದಲು ಮರು ಮೌಲ್ಯ ಮಾಪನವನ್ನು ಸ್ವಲ್ಪ ಜಾಗರೂಕತೆಯಿಂದ ನೋಡಿ ಸರಿಯಾಗಿಯೇ ಮಾಡುತ್ತಿದ್ದರು.ಈಗ ಅದೂ ಇಲ್ಲವಾಗಿದೆ.ಲಕ್ಷಾಂತರ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ  ಓದುತ್ತಾರೆ.ಇವರ ಮೂಲಕ ಯೂನಿವರ್ಸಿಟಿ ಗೆ ಕೊಟ್ಯಂತರ ರು ದುಡ್ಡು ಬರುತ್ತದೆ.ಆದರೆ ಅದಕ್ಕೆ ತಕ್ಕನಾದ ವ್ಯವಸ್ಥೆ ಅಲ್ಲಿಲ್ಲ.ಇರುವುದರಲ್ಲಿಯೇ  ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಯತ್ನ ಮಾಡುವ  ಎಂಬ ಮನೋಭಾವವೂ ಅಲ್ಲಿಲ್ಲ.ಯಾವುದನ್ನೂ ಹೇಳುವವರು ಕೇಳುವವರು  ಯಾರೂ ಇಲ್ಲ.
 ಯಾಕೆ ಹೀಗೆ ?
ಅಂಗೈ ಹುಣ್ಣಿಗೆ ಕನ್ನಡಿ ಬೇಡ .ಮೊನ್ನೆಯಷ್ಟೇ ನೇಮಕಾತಿಯಲ್ಲಿನ ಭ್ರಷ್ಟಾಚಾರ ಸೇರಿದಂತೆ ಅನೇಕ ಆರೋಪಗಳಿಗೆ ಈಡಾಗಿರುವ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿಯ ಬಂಧನವಾಗಿದೆ.ಇತ್ತೀಚೆಗಿನ ನಾಲ್ಕೈದು ವರ್ಷಗಳಿಂದ ಶಿಕ್ಷಣದ ಮನೆಯಲ್ಲಿ ಭ್ರಷ್ಟಾಚಾರದ್ದೇ ಯಜಮಾನಿಕೆ ನಡೆಯುತ್ತಿದೆ .ಇತ್ತೀಚೆಗೆ ಮೈಸೂರು  ಯೂನಿವರ್ಸಿಟಿಯಲ್ಲಿ 2006 ರಲ್ಲಿ ನಡೆದ ಅಕ್ರಮ ನೇಮಕಾತಿಯನ್ನು ರದ್ದು ಪಡಿಸಿ ಸರಕಾರ ಆದೇಶ ಹೊರಡಿಸಿತ್ತು. ವಿಶ್ವ ವಿದ್ಯಾಲಯಗಳ ವೀಸಿಗಳಿಗೆ,ಪ್ರೊಫೆಸ್ಸರ್ ಗಳಿಗೆ ತಿಂಗಳಿಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ವೇತನ ಸಿಗುತ್ತದೆ.ಶಿಕ್ಷಣ ಕ್ಷೇತ್ರಕ್ಕೆ ಪ್ರತಿಭಾವಂತರು ಬರಬೇಕು ಕೊನೆಯ ಪಕ್ಷ ವಿಶ್ವ ವಿದ್ಯಾಲಯಗಳಾದರೂ ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂಬುದೇ ಇವರುಗಳಿಗೆ ಹೆಚ್ಚಿನ ವೇತನ ನೀಡಿರುವುದರ ಮೂಲ ಉದ್ದೇಶ . ಅಷ್ಟಿದ್ದರೂ ಇವರಿಗೆ ದುರಾಸೆಯೇಕೆ ?ಸ್ವಾಭಿಮಾನವನ್ನು,ವಿಶ್ವ ವಿದ್ಯಾಲಯದ ಗೌರವವನ್ನೂ ಅಡವಿಟ್ಟು  ಭ್ರಷ್ಟ ದುಡ್ಡಿಗೆ ಕೈಚಾಚುತ್ತಾರಲ್ಲ! ನಿಜಕ್ಕೂ ನೋವಾಗುತ್ತದೆ.ಒಂದು ಕಾಲದಲ್ಲಿ ನಮ್ಮ ದೇಶದ ತಕ್ಷ ಶಿಲಾ ,ನಲಂದಾ ವಿಶ್ವ ವಿದ್ಯಾಲಯಗಳು ಜಗತ್ತಿನಲ್ಲಿಯೇ ಅತ್ಯುನ್ನತ ಸ್ಥಾನಗಳನ್ನು ಪಡೆದಿದ್ದವು ಆದರೆ ಇಂದು   ನಮ್ಮ  ನೆಲದಲ್ಲಿ ಕುಲಪತಿಯೊಬ್ಬರು ಭ್ರಷ್ಟಾಚಾರ ಮಾಡಿ ಬಂಧನಕ್ಕೆ ಒಳಗಾಗಿದ್ದಾರೆ.ಇದು ವಿಶ್ವ ವಿದ್ಯಾಲಯಗಳ ಘನತೆಗೆ ನಿಜಕ್ಕೂ ಒಂದು ಕಪ್ಪು ಚುಕ್ಕಿ .ಆದರೆ ಕರ್ನಾಟಕ ವಿಶ್ವ ವಿದ್ಯಾಲಯ ಮಾತ್ರವಲ್ಲ ,ನಮ್ಮಲ್ಲಿನ ಹೆಚ್ಚಿನ ಯೂನಿವರ್ಸಿಟಿಗಳಲ್ಲಿ ಅವ್ಯವಹಾರ ,ಭ್ರಷ್ಟಾಚಾರ ನಡೆದಿರುವ ಬಗ್ಗೆ ಸುದ್ದಿ ಸದಾ ಕೇಳುತ್ತಲೇ ಇರುತ್ತೇವೆ .
ಕಳೆದ ನವೆಂಬರ್ ತಿಂಗಳಿನಲ್ಲಿ ಮಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಯುಜಿಸಿ ನಿಯಮಗಳ ಉಲ್ಲಂಘನೆ ಹಾಗೂ ವ್ಯಾಪಕ ಅವ್ಯವಹಾರ ನಡೆದ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ.ಅದಕ್ಕೂ ಹಿಂದೆ ಬೆಳಗಾವಿ ,ಗುಲ್ಬರ್ಗ ವಿಶ್ವ ವಿದ್ಯಾಲಯಗಳಲ್ಲಿ ಆದ ನೇಮಕಾತಿ ಹಾಗೂ ಇತರ ವಿಚಾರಗಳ ಬಗ್ಗೆ ಕೂಡ ಅಪಸ್ವರಗಳಿವೆ.ರಾಜೀವ ಗಾಂಧಿ ವಿಶ್ವ ವಿದ್ಯಾಲಯ ಸೇರಿದಂತೆ ಕರ್ನಾಟಕದ ಇಪ್ಪತ್ತು ವಿಶ್ವ ವಿದ್ಯಾಲಯಗಳ ಮೇಲೆ ಭ್ರಷ್ಟಾಚಾರ ಅವ್ಯವಹಾರಗಳ ಆರೋಪಗಳಿವೆ.
ಶಿಕ್ಷಣದ ಮನೆಯೇ ಭ್ರಷ್ಟವಾದರೆ ದೇಶದ ಮಕ್ಕಳಿಗೆ ಪ್ರಾಮಾಣಿಕತೆ,ಸಚ್ಚಾರಿತ್ರ್ಯದ ಪಾಠ ಹೇಳುವವರು ಯಾರು ?ಸ್ವಯಂ ಭ್ರಷ್ಟರಾದವರು  ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಸಾಧ್ಯವೇ ಇಲ್ಲ .
ಏನು ಪರಿಹಾರ ?
2006 ರಲ್ಲಿ ಮೈಸೂರು  ವಿಶ್ವ ವಿದ್ಯಾಲಯಗಳಲ್ಲಿ ಅಕ್ರಮ ನೇಮಕಾತಿ ನಡೆದ ಬಗ್ಗೆ ತನಿಖೆಯಾಗಿದ್ದು ಸರಕಾರ ನೇಮಕಾತಿ ರದ್ದು  ಪಡಿಸಿ ಆದೇಶ ಹೊರಡಿಸಿ ಒಂದು ದಿಟ್ಟ ಹೆಜ್ಜೆ ಇಟ್ಟಿದೆ .ಮೊನ್ನೆ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಚ್.ಬಿ ವಾಲೀಕಾರ ಅವರು  ಭ್ರಷ್ಟಾಚಾರದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಹೀಗೆ ಎಲ್ಲ ವಿಶ್ವ ವಿದ್ಯಾಯಗಳಲ್ಲಿನ ಅವ್ಯವಹಾರಗಳ ಬಗ್ಗೆಯೂ  ತನಿಖೆಯಾಗಿ ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆಯಾದರೆ ತುಸುವಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದು.ಭ್ರಷ್ಟಾಚಾರಿಗಳ ಭಂಡೆದೆ ತುಸುವಾದರೂ ಕಂಪಿಸೀತು.ನಮ್ಮ ವಿಶ್ವ ವಿದ್ಯಾಲಯಗಳು ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತವಾದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ .ಗುಣಮಟ್ಟದ ವೃದ್ಧಿಯ ಮೂಲಕ ನಮ್ಮ ವಿಶ್ವ ವಿದ್ಯಾಲಯಗಳೂ ಕೂಡ ಮುಂದೊಂದು ದಿನ  ಖಂಡಿತವಾಗಿಯೂ ಅಂದಿನ ನಲಂದಾ ತಕ್ಷ ಶಿಲೆಗಳಂತೆ  ಜಗತ್ತಿನಲ್ಲಿ  ಉಕೃಷ್ಟ ಸ್ಥಾನವನ್ನು ಮತ್ತೊಮ್ಮೆ ಗಳಿಸಬಹುದು. ಆದ್ದರಿಂದ ಶಿಕ್ಷಣದ ಮನೆ ಮೊದಲು ಸ್ವಚ್ಛವಾಗಲಿ.
ಡಾ.ಲಕ್ಷ್ಮೀ ಜಿ ಪ್ರಸಾದ
samagramahithi@gmail.com

Monday, 20 October 2014

ಧನುಷ್ಕೋಟಿ ಅಜ್ಜಿಯ ನೆನಪು-ಡಾ.ಲಕ್ಷ್ಮೀ ಜಿ ಪ್ರಸಾದ


ನಿನ್ನೆ ರಶೀದ್ ವಿಟ್ಲ ಅವರು ಬರೆದ ಸರೋಜಮ್ಮನ ವೃತ್ತಾಂತ ಓದಿದಲ್ಲಿಂದ ನನಗೆ ಕಾಡಿದ್ದು ಧನುಷ್ಕೋಟಿ ಅಜ್ಜಿಯ ನೆನಪು .ಸುಮಾರು ಎರಡೂವರೆ ಮೂರು ವರ್ಷಗಳ ಹಿಂದಿನ ವಿಚಾರವಿದು .ನಾನು ನನ್ನ ಎರಡನೆಯ ಡಾಕ್ಟರೇಟ್ ಪದವಿಯ ಅಧ್ಯಯನಕ್ಕಾಗಿ ಆಗಾಗ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಹೋಗಿ ಬರುತ್ತಿದ್ದೆ .ಬೆಳಗ್ಗೆ ಏಳು ಗಂಟೆಯ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಹೋಗಿ ಸಂಜೆ ಚೆನ್ನೈ ಯಿಂದ ಕುಪ್ಪಂ ಗೆ ಐದೂವರೆ ಹೊತ್ತಿಗೆ ಬರುವ ಎಕ್ಸ್ಪ್ರೆಸ್ ಗಾಡಿ ಒಂದರಲ್ಲಿ ಹಿಂದೆ ಬರುತ್ತಿದ್ದೆ .
ಹೀಗೆ ಒಂದು ದಿನ ಹೋಗಿ ಹಿಂದೆ ಬರುವಾಗ (ಬಹುಶ ಅಕ್ಟೋಬರ್ 2011ರಲ್ಲಿ ) ಟ್ರೈನ್ ನಲ್ಲಿ ಓರ್ವ ವೃದ್ಧ ಮಹಿಳೆಯ ಪರಿಚಯ ಆಯಿತು .ಅವರ ಹೆಸರು ಧನುಷ್ಕೋಟಿ ಎಂದು .ಸುಮಾರು 80 ವರ್ಷ ವಯಸ್ಸು .ಮೈ ತುಂಬಾ ಚಿನ್ನದ ಒಡವೆಗಳನ್ನು ಧರಿಸಿದ್ದರು .ಹಾಗಾಗಿ ಸಾಕಷ್ಟು ಧನವಂತರೆ ಇರಬೇಕು.ನಾವು ಮಾಧ್ವ ಬ್ರಾಹ್ಮಣರೆಂದು ಹೇಳಿದ್ದರು. ತುಂಬಾ ಗೊಂದಲದಲ್ಲಿದ್ದ ಹಾಗೆ ಕಾಣುತ್ತಿದ್ದರು.ಒಂದು ಸಣ್ಣ ಡೈರಿ ಯಲ್ಲಿ ಬರೆದಿದ್ದ ವಿಳಾಸವನ್ನು ಓದಿ ಇದು ಎಲ್ಲಿ ಬರುತ್ತೆ ಎಂದು ಕೇಳಿದರು .ಅದು ತಮಿಳಿನಲ್ಲಿತ್ತು.ಹಾಗಾಗಿ ನಾನು ಅಲ್ಲಿ ಕೆಲವರಲ್ಲಿ ತಮಿಳು ಓದಲು ಬರುತ್ತಾ ಎಂದು ವಿಚಾರಿಸಿ ಓದಿ ಹೇಳಲು ತಿಳಿಸಿದೆ .ಅದು ಒಂದು ಗಿರಿನಗರದ ಒಂದು ಕಲ್ಯಾಣ ಮಂಟಪದ ವಿಳಾಸ ಆಗಿತ್ತು .ಅಲ್ಲಿ ಮರುದಿನ ಒಂದು ಮದುವೆ ಇದೆ ಹತ್ತಿರದ ನೆಂಟರದ್ದು,ಅಲ್ಲಿಗೆ ನಾನು ಹೊರಟಿದ್ದೇನೆ ಎಂದು ಅವರು ಹೇಳಿದರು
.ಟ್ರೈನ್ ಇಳಿದು ಅವರು ತಮ್ಮ ಮಗನ /ಮೊಮ್ಮಗನ ಮನೆಗೆ ಹೋಗಬೇಕಾಗಿತ್ತು . .ಅವರು ಚೆನ್ನೈ ಯಲ್ಲಿರುವ ಯಾವುದೊ ಒಂದುಮಠ/ ಅಶ್ರಮಲ್ಲಿರುವುದು (ಪೇಜಾವರ ಸ್ವಾಮೀಜಿಗಳು ನಡೆಸುವದು ಎಂದು ಹೇಳಿದ ನೆನಪು )ಎಂದು ಹೇಳಿ ಸ್ವಾಮಿಜಿಯವರ /ಆಶ್ರಮದ ಫೋನ್ ನಂಬರ್ ಇದೆ ಎಂದು ಹೇಳಿದರು .ಆ ನಂಬರ್ ಗೆ ಫೋನ್ ಮಾಡಿದರೆ ಯಾರೂ ಎತ್ತಲಿಲ್ಲ .ಈ ಅಜ್ಜಿಗೆ ತನ್ನ ಮೊಮ್ಮಗನ ನಂಬರ್ ಬರೆದುಕೊಂಡು ಎಲ್ಲಿ ಇಟ್ಟದ್ದು ಹೇಳಿ ನೆನಪಿರಲಿಲ್ಲ .ತಾನು ಈಗ ಮಗನ ಮನೆಗೆ ಹೋಗಬೇಕು.ಎಂದು ಹೇಳಿ ಒಂದು ಜಯನಗರದ ಯಾವುದೊ ಒಂದು ವಿಳಾಸವನ್ನು ಹೇಳಿದರು.ಅದು ಅವರ ಮಗನ/ಮೊಮ್ಮಗನ ಮನೆ ವಿಳಾಸವಾಗಿದ್ದು ಅವರಿಗೆ ಅದು ಸ್ಮರಣೆಯಲ್ಲಿತ್ತು..ಅವರ ಫೋನ್ ನಂಬರ್ ಅಜ್ಜಿ ಕೈಯಲ್ಲಿ ಇರಲಿಲ್ಲ .ಮಗ ಸೊಸೆ ಒಳ್ಳೆ ಕೆಲಸದಲ್ಲಿದ್ದಾರೆ.ಸೊಸೆ ಗೈನಕಾಲಜಿಸ್ಟ್ ಆಗಿದ್ದಾರೆ ಎಂದೂ ಅವರು ಹೇಳಿದರು.
ತನ್ನನ್ನು ಮಗನ ಮನೆಗೆ ತನಕ ಆಟೋದಲ್ಲಿ ಬಿಡುತ್ತೀರಾ ಎಂದು ನನ್ನಲ್ಲಿ ಕೇಳಿದರು .ರಾತ್ರಿ ಯಾಗಿತ್ತು . ಆದ್ದರಿಂದ ನಾನು ಜೊತೆಗೆ ಬರಲು ಸಾಧ್ಯವಿಲ್ಲ .ಅಟೋ ಹತ್ತಿಸಿ ಬಿಡುತ್ತೇನೆ ಎಂದು ಹೇಳಿದೆ . ಅದೇ ಟ್ರೈನ್ ನಲ್ಲಿ ಸಹೃದಯಿ (ಹೆಸರು ರಾಜೇಶ್ ಶೆಟ್ಟಿ ಎಂದು ನೆನಪು ) ಇದ್ದರು .ಟ್ರೈನ್ ಬೆಂಗಳೂರು ಹತ್ರ ಬರುತ್ತಾ ಇತ್ತು .ತಡ ಆಗಿ ಬಂದ ಕಾರಣ ಸಂಜೆ ಏಳೂವರೆಗೆ ತಲುಪಬೇಕಾದ ಟ್ರೈನ್ ಬೆಂಗಳೂರು ತಲುಪುವಾಗ ರಾತ್ರಿ ಒಂಬತ್ತು ಗಂಟೆ ಆಗಿತ್ತು .ಈ ರಾತ್ರಿಯಲ್ಲಿ ಸರಿಯಾಗಿ ವಿಳಾಸ ಗೊತ್ತಿಲ್ಲದ ,ಕಾಂಟಾಕ್ಟ್ ನಂಬರ್ ಇಲ್ಲದ ವೃದ್ಧ ಮಹಿಳೆಯನ್ನು ಹೀಗೆ ಆಟೋಹತ್ತಿಸಿ ಕಳುಹಿಸಿದರೆ ಅಪಾಯ ಹಾಗಾಗಿ ರೈಲ್ವೇಸ್ ಪೊಲೀಸರಿಗೆ ತಿಳಿಸುವ ಎಂದು ಅವರು (ರಾಜೇಶ್ ?) ತಿಳಿಸಿದರು .ನನಗೂ ಅದೇ ಸರಿ ಎನ್ನಿಸಿತು . ಹಾಗಾಗಿ ನಾವು ಮೆಜೆಸ್ಟಿಕ್ ಇಳಿದ ತಕ್ಷಣ ಅಜ್ಜಿಯನ್ನು ಅಲ್ಲಿನ ಪೊಲೀಸರ ಹತ್ತಿರ ಕರೆದುಕೊಂಡು ಹೋಗಿ ವಿಷಯ ತಿಳಿಸಿದೆವು
ಆಗ ಅವರು ಮೊದಲಿಗೆ ನಮ್ಮ ಗುರುತು ಪರಿಚಯ ಕೇಳಿದರು .ನಾವು ಯಾವುದೊ ಸಂಚು ಮಾಡುತ್ತಿಲ್ಲ ಎಂದು ಮನವರಿಕೆ ಆದಮೇಲೆ ನಮ್ಮ ಫೋನ್ ನಂಬರ್ ತಗೊಂಡು "ಸರಿ ನೀವು ಹೋಗಿ ಈ ಅಜ್ಜಿಯನ್ನು ಅವರ ಮಗನ ಮನೆ ತಲುಪಿಸುತ್ತೇವೆ ನಾವು" ಎಂದು ಭರವಸೆಯನ್ನು ಕೊಟ್ಟರು ಪ್ರಸಾದ್ ರೈಲ್ವೇಸ್ಟೇಷನ್ ಹೊರಗಡೆ ನನ್ನನ್ನು ಕಾಯುತಿದ್ದರು.ನಾವು ನಮ್ಮ ದಾರಿ ಹಿಡಿದು ರಾತ್ರಿ ಹನ್ನೊಂದು ಗಂಟೆ ಮನೆ ಸೇರಿದೆವು .
ಮುಂದೇನೂ ಆ ಅಜ್ಜಿಗೆ ತೊಂದರೆಯಾಗಿರಲಾರದು ಎಂದು ಭಾವಿಸಿದ್ದೇನೆ .ಆದರೆ ನನಗೆ ವೃದ್ಧರ ಸಮಸ್ಯೆ ,ಕಿರುಯರಿಗೆ ವೃದ್ಧರ ಕುರಿತು ಇರುವ ಅವಜ್ನೆಯ ಅರಿವಾದದ್ದು ಅಂದೇ .ಮಗ ಸೊಸೆ ಇಬ್ಬರೂ ಒಳ್ಳೆ ಕೆಲಸದಲ್ಲಿದ್ದರೂ ಆ ಅಜ್ಜಿ ಆಶ್ರಮದಲ್ಲಿ/ಮಠ ಯಾಕಿರಬೇಕಾಯಿತು ?ಮಠ/ಆಶ್ರಮದಿಂದ ಯಾವುದೇ ಜವಾಬ್ದಾರಿ ಇಲ್ಲದೆ ಅವರನ್ನು ಒಬ್ಬರೇ ಯಾಕೆ ಬೆಂಗಳೂರಿಗೆ ಕಳುಹಿಸಿದರು ?ಅವರನ್ನು ಕರೆದುಕೊಂಡು ಹೋಗಲು ಮನೆ ಮಂದಿ ಯಾಕೆ ಬರಲಿಲ್ಲ ?.ಆ ಅಜ್ಜಿ ಮೊಮ್ಮಗನ /ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗ ಆಶ್ರಮದಿಂದ ಹೇಳದೆ ತಪ್ಪಿಸಿಕೊಂಡು ಬಂದಿದ್ದರೇ?ಅಥವಾ ವೃದ್ಧ್ಹಾಪ್ಯದ ಮರೆವು ,ಭ್ರಮೆಗೆ ಒಳಗಾಗಿದ್ದರೆ?ಈ ಎಲ್ಲ ಪ್ರಶ್ನೆಗಳು ಉತ್ತರವಿಲ್ಲದೇ ಸದಾ ಕಾಡುತ್ತಿವೆ .
ಏನೇ ಆದರೂ ವೃದ್ಧಾಪ್ಯದ ಇಳಿಗಾಲದಲ್ಲಿ ತಮ್ಮ ಹೆತ್ತವರನ್ನು ಹೀಗೆ ಅನಾಥ .ಅಸಹಾಯಕ ಪರಿಸ್ಥಿತಿಗೆ ತಳ್ಳುವುದು ಅಕ್ಷಮ್ಯ ಅಪರಾಧ ಅಲ್ಲವೇ ?

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 131:ಹಳ್ಳದಿಂದ ಎದ್ದು ಬಂದ ಹಳ್ಳತ್ತಾಯ-ಡಾ.ಲಕ್ಷ್ಮೀ ಜಿ ಪ್ರಸಾದ


  

copy rights reserved
ಹಳ್ಳದಿಂದ ಎದ್ದು ಬಂದ ದೈವವೇ ಹಳ್ಳತ್ತಾಯ. ಹಳ್ಳತ್ತಾಯ ದೈವದ ಕಥೆಯು ಪುರಾಣ ಹಾಗೂ ಜಾನಪದ ಐತಿಹ್ಯಗಳಿಂದ ಕೂಡಿದೆ. ಇಲ್ಲಿ ಅರಸು ದೌರ್ಜನ್ಯದ ಚಿತ್ರಣವೂ ಇದೆ ಕಾಣಿಯೂರು ಸಮೀಪದ ಚಾರ್ವಾಕದ ಕಪಿಲೇಶ್ವರ  (ಕೀರ್ತೇಶ್ವರ?)ದೇವಾಲಯದಲ್ಲಿ ಹಳ್ಳತ್ತಾಯ ದೈವಕ್ಕೆ ನೇಮ ಇದೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
ಶಿವನು ಪಾರ್ವತಿಯೊಂದಿಗೆ ಕೈಲಾಸದಲ್ಲಿರುತ್ತಾನೆ. ಆಗ ಅವನ ಎಲ್ಲ ಗಣಗಳು, ಪರಿವಾರದವರು ಅವನನ್ನು ಸ್ತುತಿಸುತ್ತಿರುತ್ತಾರೆ. ವೀರಭದ್ರ ಕಾಲು ಚಾಚಿ ಕುಳಿತಿರುತ್ತಾನೆ. ಕುಂಡೋದರನೆಂಬ ಶಿವಗಣನೊಬ್ಬ ಶಿವನಿಗೆ ನಮಸ್ಕರಿಸಲೆಂದು ಹೋಗುವಾಗ ಕಾಲು ಚಾಚಿ ಕುಳಿತಿದ್ದ ವೀರಭದ್ರನನ್ನು ನೋಡದೆ ಆತನ ಕಾಲನ್ನು ತುಳಿಯುತ್ತಾನೆ. ಆಗ ಕೋಪಗೊಂಡ ವೀರಭದ್ರನು ಭೂಲೋಕದಲ್ಲಿ ನರನಾಗಿ ಹುಟ್ಟುಎಂದು ಶಾಪವನ್ನು ಕೊಡುತ್ತಾನೆ. ಆಗ ಶಿವಭಕ್ತನಾದ ಕುಂಡೋದರನು ಶಿವನನ್ನು ಪ್ರಾರ್ಥಿಸುತ್ತಾನೆ. ಆಗ ಶಿವನು ನೀನು ನರನಾಗಿ ಹುಟ್ಟಿ ಮುಂದೆ copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ ಭೂಲೋಕದಲ್ಲಿ ಜೈನರಿಂದ ಹಾಗೂ ಬ್ರಾಹ್ಮಣರಿಂದ ಆರಾಧಿಸಲ್ಪಡುವ ದೈವವಾಗುಎಂದು ವರವನ್ನು ಕೊಡುತ್ತಾನೆ.
ಅಂತೆಯೇ ಕುಂಡೋದರನು ಕಾಡಿನ ಮರದ ಬುಡವೊಂದರಲ್ಲಿ ಮಾನವ ಶಿಶುವಾಗಿ ಹುಟ್ಟುತ್ತಾನೆ. ಬೀರು ಬೈದ್ಯ ಮರದ ಬುಡದಲ್ಲಿ ಇರುವ ಶಿಶುವನ್ನು ನೋಡಿ ಸಂತಸಗೊಳ್ಳುತ್ತಾನೆ. ಸಂತಸದಿಂದ ಮನೆಗೆ ಕರೆತಂದು ಪ್ರೀತಿಯಿಂದ ಸಾಕುತ್ತಾನೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
ಆ ಮಗು ಸಾಹಸಿ, ಪರಾಕ್ರಮಿಯಾಗಿ ಬೆಳೆಯುತ್ತಾನೆ. ಆ ಕಾಲದಲ್ಲಿ ವೇಣೂರಿನಲ್ಲಿ ಭೈರವ ಅರಸರು ರಾಜ್ಯಾಡಳಿತ ನಡೆಸುತ್ತಿದ್ದರು. ಆಗ ಅವರ ರಾಜ್ಯದಲ್ಲಿ ಕಳ್ಳತನ, ದರೋಡೆ, ಮೋಸ, ಅನ್ಯಾಯ, ದಂಗೆಗಳು ನಡೆಯುತ್ತಿದ್ದವು. ಇವುಗಳ  ಉಪಟಳವನ್ನು ದೂರಮಾಡಿದವರಿಗೆ ಮಲ್ಲನೇಮ’, ‘ದೊಡ್ಡಗೌರವಕೊಡುತ್ತೇನೆ ಎಂದು ಡಂಗುರ ಸಾರಿಸುತ್ತಾರೆ.

 ಆಗ ಆ ವೀರ ಹುಡುಗ ವೇಣೂರಿಗೆ ಹೋಗಿ ಅಲ್ಲಿಯ ಕಪಟ, ದಂಗೆಗಳನ್ನು ಹತೋಟಿಗೆ ತರುತ್ತಾನೆ. ಆಗ ವೇಣೂರಿನ ಭೈರವರಸ ಅವನಿಗೆ ಸಲ್ಲಿಸಬೇಕಾದ ಗೌರವವನ್ನು ನೀದುವುದಿಲ್ಲ. ಬದಲಿಗೆ ಅವನನ್ನು ಬಿರುವಎಂದು ಅವಹೇಳನ ಮಾಡುತ್ತಾನೆ. ಆಗ ಅಂಥಹ ಕೃತಘ್ಞ ರಾಜನ ನೆಲದಲ್ಲಿ ಒಂದು ಕ್ಷಣಕೂಡ ನಿಲ್ಲಬಾರದೆಂದು ಅವನು ಅಲ್ಲಿಂದ ಹೊರಡುತ್ತಾನೆ. copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
ಆಗ ಭೈರವ ಅರಸ ಆತನನ್ನು ಸೈನಿಕರ ಮೂಲಕ ಹೆಡೆಮುರಿ ಕಟ್ಟಿಸಿ ಕೆರೆಯೊಂದರಲ್ಲಿ ಹಾಕಿ ಕಲ್ಲು ಮುಳ್ಳು ಹಾಕಿ ಮುಚ್ಚುತ್ತಾರೆ. ಅವನನ್ನು ಹುಡುಕಿಕೊಂಡು ಬಂದ ತಾಯಿ ಆತನನ್ನು ಕರೆದು ಹಾಲು ಎರೆದಾಗ  ಹಳ್ಳದಿಂದ ದೈವವಾಗಿ ಎದ್ದು ಬರುತ್ತಾನೆ. 
ಹಳ್ಳದಿಂದ ಎದ್ದು ಬಂದ ಆತನನ್ನು ಹಳ್ಳತ್ತಾಯ ಎಂದು ಕರೆದು ಪೂಜಿಸುತ್ತಾರೆ. ಹಳ್ಳತ್ತಾಯ ದೈವವು ಭೈರವ ಅರಸನಿಗೆ ನಾನಾವಿಧದ ಹಾನಿಯನ್ನುಂಟು ಮಾಡುತ್ತಾನೆ. ಆಗ ಇದು ಯಾರ ಉಪಟಳವೆಂದು ತಿಳಿಯಲು ಜೋಯಿಸರನ್ನು ಕರೆಸಿ ಬಲಿಮೆಯಲ್ಲಿ ನೋಡಿದಾಗ ಇದು ಹಳ್ಳತ್ತಾಯನ ಉಪಟಳವೆಂದು ಕಂಡುಬರುತ್ತದೆ. 
ಆಗ ವೇಣೂರಿನ ಅರಸ ಹಳ್ಳತ್ತಾಯ ದೈವಕ್ಕೆ ಬಲಿಭೋಗ ಕೊಟ್ಟು ಅದನ್ನು ಶಾಂತಗೊಳಿಸುತ್ತಾನೆ. ಜೈನರು, ಬ್ರಾಹ್ಮಣರು ಹಾಗೂ ತುಳುವರು ಹಳ್ಳತ್ತಾಯ ದೈವವನ್ನು ಆರಾಧಿಸುತ್ತಾರೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
 ನೆರಿಯದಲ್ಲಿ ಹಳ್ಳತ್ತಾಯಿ ಎಂಬ ದೈವದ ಆರಾಧನೆ ಇರುವ ಬಗ್ಗೆಶ್ರೀಯುತ ರಾಜಗೋಪಾಲ್ ಹೆಬ್ಬಾರ್ ನೆರಿಯ ಅವರು ತಿಳಿಸಿರುತ್ತಾರೆ.ಮಲರಾಯ >ಮಲರಾಯಿ ,ದುಗ್ಗಲಾಯ>ದುಗ್ಗಲಾಯಿ .ಮಂದ್ರಾಯ >ಮಂದ್ರಾಯಿ ಹೀಗೆಅನೇಕ ಪ್ರದೆಶದಳcopy rights reserved © ಡಾ.ಲಕ್ಷ್ಮೀ ಜಿ ಪ್ರಸಾದ ಲ್ಲಿ ಈ ದೈವಗಳ ಹೆಸರು ಹಾಗೂ ಸ್ತ್ರೀ /ಪುರುಷ ವಿನ್ಯಾಸಗಳಲ್ಲಿ ತುಸು ಪರಿವರ್ತನೆ ಗೊಂದಲಗಳು ಇವೆ .ಹಾಗೆಯೇ ಇಲ್ಲಿ ಕೂಡ ಹಳ್ಳತ್ತಾಯ ಮತ್ತು ಹಳ್ಳತ್ತಾಯಿ ದೈವಗಳು ಎರಡೂ ಒಂದೇ ಆಗಿರುವ ಸಾಧ್ಯೆತೆ ಇದೆ .
ಸೂಕ್ತ ಫೋಟೋವನ್ನು ಕಳುಹಿಸಿಕೊಟ್ಟ ಶ್ರೀಯುತ ರಾಜಗೋಪಾಲ್ ಹೆಬ್ಬಾರ ಅವರಿಗೆ ಕೃತಜ್ಞತೆಗಳು 
ಹಳ್ಳತ್ತಾಯ ದೈವದ ಬಗ್ಗೆ ಮಾಹಿತಿ ನೀಡಿದ ಶೀನ ಪರವ ಹಾಗೂ ಲೋಕೇಶ ಅವರಿಗೆ ಧನ್ಯವಾದಗಳು


Monday, 13 October 2014

ನೆಟ್ ಪರೀಕ್ಷೆಯಲ್ಲಿ ನಲ್ಲಿ ಫೈಲ್ ಎಂದು ತಿಳಿದಾಗ -ಡಾ.ಲಕ್ಷ್ಮೀ ಜಿ ಪ್ರಸಾದ

                                                                                       ಇವತ್ತು ಸ್ನೇಹಿತರೊಂದಿಗೆ ಹೀಗೆ ಮಾತನಾಡುವಾಗ  ಯುಜಿಸಿ ಡಿಗ್ರಿ ಕಾಲೇಜ್ ಹಾಗೂ ಯೂನಿವರ್ಸಿಟಿಗಳಲ್ಲಿ ಉಪನ್ಯಾಸಕರಾಗಲು ನಿಗಧಿ ಪಡಿಸಿದ ಕನಿಷ್ಠ ಅರ್ಹತೆಯಾಗಿರುವ ನೆಟ್ (National eligibility test for lectureship )ವಿಚಾರ ಬಂತು .ತಕ್ಷಣ ನನಗೆ ನನ್ನ ನೆಟ್ ಪರೀಕ್ಷೆಯ ಆತಂಕ ,ಫಲಿತಾಂಶದ ಭಯ  ,ಸೋಲನ್ನು ಸ್ವೀಕರಿಸಲಾಗದೆ ಇದ್ದಾಗ ಆಗುವ ತಲ್ಲಣಗಳು ನೆನಪಾದವು.
ನೆಟ್ ಪರೀಕ್ಷೆಯಲ್ಲಿ ಮೂರು ಪತ್ರಿಕೆಗಳು ಇರುತ್ತವೆ .ಮೊದಲ ಪತ್ರಿಕೆ M.A,M.COM,, M.SC ,M.SW..ಮಾಡಿದ ಎಲ್ಲರಿಗೂ ಸಾಮಾನ್ಯವಾಗಿರುವ ಕಡ್ಡಾಯ  ಪತ್ರಿಕೆ .ಇದರಲ್ಲಿ ಆರ್ಟ್ಸ್ ,ಸೈನ್ಸ್ ,ಕಂಪ್ಯೂಟರ್ ,ವ್ಯವಹಾರ ಜ್ಞಾನ,ತಿಳುವಳಿಕೆ ಗಳಿಗೆ ಸೇರಿದಂತೆ ಗಣಿತದ ವಿಜ್ಞಾನದ ,ಸಮಾಜದ ,ಸಾಮನ್ಯಜ್ಞಾನದ ಪ್ರಶ್ನೆಗಳಿರುತ್ತವೆ .ಹಾಗಾಗಿ ಇದು ಕೆಲವರಿಗೆ ತುಸು ಕಷ್ಟ ಎನಿಸುತ್ತದೆ .ವಾಸ್ತವದಲ್ಲಿ ಇದು ಅಷ್ಟೇನೂ ಕಷ್ಟಕರವಾಗಿಲ್ಲ .ಆದರೂ ಈ ಪತ್ರಿಕೆಗೆ ಪೂರ್ವ ತಯಾರಿ ಸಾಕಷ್ಟು ಬೇಕಾಗುತ್ತದೆ .

ಉಳಿದ ಐಚ್ಚಿಕ ಪತ್ರಿಕೆಗಳು ಎರಡು ಇದ್ದು ಇದು ಅವರವರು ಪಡೆದ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದ ಪ್ರಶ್ನೆಗಳು ಇದರಲ್ಲಿರುತ್ತವೆ .
ನಾನು ನೆಟ್ ಪರೀಕ್ಷೆ ಬಹಳ ಕಷ್ಟ ಅದರಲ್ಲಿ ಪಾಸ್ ಮಾಡೋದೇ ಇಲ್ಲ ಇತ್ಯಾದಿ ವಿಚಾರಗಳನ್ನು ಏಳೆಂಟು ಬಾರಿನೆಟ್ ಕಟ್ಟಿಯೂ ಪಾಸ್ ಅಗಲಾಗದವರ ಅನುಭವಗಳನ್ನು ಕೇಳಿದ್ದೆ.
ನಾನು ಸಂಸ್ಕೃತ ಹಿಂದಿ ಎಂ ಎ ಪದವಿಗಳನ್ನು ಪಡೆದ ನಂತರ ಕನ್ನಡ ಎಂ ಎ ಓದಿದ್ದು .ಹಾಗಾಗಿ 2004 ರಲ್ಲಿ ನಾನು ಕನ್ನಡ ಸ್ನಾತಕೋತ್ತರ ಪದವೀಧರಳಾದೆ.ಮುಂದೆ ಕನ್ನಡ ಉಪನ್ಯಾಸಕಿಯಾಗಿಯೇ ಮುಂದುವರಿಯುದು ಎಂದು ನಿರ್ಧರಿಸಿ 2005ರ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ನೆಟ್ ಪರೀಕ್ಷೆಗೆ ಕಟ್ಟಿದೆ .ನೆಟ್ ಪರೀಕ್ಷೆಗೆ ಬೇಕಾದ ಮಾಹಿತಿಗಳು ,ಹಳೆಯ ಪ್ರಶ್ನೆ ಪತ್ರಿಕೆಗಳು ದ.ರಾಜಪ್ಪ ದಳವಾಯಿ ಅವರ ಸಾಹಿತ್ಯ ಕೋಶಹಾಗೂ ಪ್ರಥಮ ಪತ್ರಿಕೆಗೆ upkars ...(ಪೂರ್ತಿ ಹೆಸರು ಮರೆತು ಹೋಗಿದೆ ಈಗ ) ಪುಸ್ತಕದಲ್ಲಿದೆ ಎಂದು ಆತ್ಮೀಯರಾದ ಜಯಶೀಲ ಅವರು ತಿಳಿಸಿದ್ದರು .
ಹಾಗೆ ಆ ಎರಡು ಪುಸ್ತಕಗಳನ್ನು ಮನೆಗೆ ಖರೀದಿಸಿ ತಂದೆ .ಮೇಲಿಂದ ಮೇಲೆ ಓದಿದೆ ಕೂಡ .ಮೊದಲ ಪತ್ರಿಕೆಯಲ್ಲಿ ಮತ್ತೆ ಮತ್ತೆ ರಿಪೀಟ್ ಆಗುವ ಕೆಲ ಮಾದರಿಯ ಪ್ರಶ್ನೆಗಳನ್ನು ಬಿಡಿಸಲು ಅಭ್ಯಾಸ ಮಾಡಿಕೊಂಡೆ .
ಪರೀಕ್ಷೆಗೆ ಹೋಗಿ ಬರೆದೆ .ಪ್ರಶ್ನೆಗೆಅಲಿಗೆ ಉತ್ತರಿಸಿ ಹೊರಬಂದಾಗ ನನಗೆ ಪಾಸ್ ಆಗಬಹುದು ಎಂದೆನಿಸಿತು .ಹಾಗೆ ನನ್ನ ಪರಿಚಿತರಲ್ಲಿ ಅಲ್ಲಿ ಹೇಳಿದೆ .ಅಲ್ಲಿದ್ದವರಲ್ಲಿ ಅನೇಕರು ಏಳು ಎಂಟನೆ ಬಾರಿ ಪರೀಕ್ಷೆ ಬರೆದ ಅನುಭವವಿರುವವರು .ಆಗ ಅವರೆಲ್ಲ "ಇಲ್ಲ ಮೇಡಂ ನೆಟ್ ನಲ್ಲಿ 1 % ಮಾತ್ರ ಫಲಿತಾಂಶ ಕೊಡೋದು ,ಅವರು ಪಾಸ್ ಮಾಡಲ್ಲ ನಾವು ಇಷ್ಟು ಬಾರಿ ಬರೆದರೂ ಪಾಸ್ ಆಗಲು ಆಗುತ್ತಿಲ್ಲ ,ನೀವು ಮೊದಲ ಬಾರಿ ಬರೆದಿದ್ದೀರಿ ,ನಿಮಗೆ ಈಗ ಪಾಸ್ ಆಗಬಹುದು ಎಂದೆನಿಸುತ್ತದೆ ,ಫಲಿತಾಂಶ ಬಂದಾಗ ಗೊತ್ತಾಗುತ್ತದೆ" ಎಂದು ಹೇಳಿದರು.
 "ಅವೆರೆಲ್ಲ ಜಾಣರೇ,ಯಾರೂ ದಡ್ಡರಲ್ಲ ಹಾಗಾಗಿ ಅವರು ಹೇಳಿದ್ದು ನಿಜ ಇರಬಹುದು"ಎಂದು ಕೊಂಡೆ .ಮೂರು ನಾಲ್ಕು ತಿಂಗಳು ಕಳೆದವು ಫಲಿತಾಂಶ ಬರಲಿಲ್ಲ .ಆ ನಡುವೆ ಮತ್ತೆ ನೆಟ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದರು ,ಹಿಂದಿನ ಪರೀಕ್ಷೆಯ ಫಲಿತಾಂಶ ಇನ್ನೂ ಬಾರದೆ ಇದ್ದ ಕಾರಣ ಮತ್ತೆ ನೆಟ್ ಪರೀಕ್ಷೆಗೆ ಕಟ್ಟಿದೆ .
ಜೂನ್ ಕೊನೆಯ ವಾರದಲ್ಲಿ ಪರೀಕ್ಷಾ ದಿನಾಂಕ ನಿಗದಿಯಾಗಿತ್ತು .ದಿನ ನಿತ್ಯ ನೆಟ್ ಪರೀಕ್ಷೆ ಫಲಿತಾಂಶ ಬಂದಿದೆಯ ಎಂದು ಪ್ರಸಾದ್ ಅವರಲ್ಲಿ ಅಂತರ್ಜಾಲದಲ್ಲಿ ನೋಡಲು ಹೇಳುತ್ತಿದ್ದೆ .ದಿನಾಲೂ ಆಫೀಸ್ ಇಂದ ಅವರು ಮನೆಗೆ ಬಂದಾಗ ನನ್ನ ಮೊದಲ ಪ್ರಶ್ನೆ ರಿಸಲ್ಟ್ ಬಂತಾ ?ಅವರದು ಮಾಮೂಲಿ ಉತ್ತರ ಇಲ್ಲವೆಂದು !
ಒಂದು ದಿನ ಮನೆ ಸಂಜೆ ಸಮೀಪದಲ್ಲಿರುವ ಗೆಳತಿ ಮನೆಗೆ ಹೋಗಿದ್ದೆ .ಮಾತನಾಡುತ್ತಾ ಹೊತ್ತುಹೋದದ್ದು ತಿಳಿಯಲಿಲ್ಲ .ಸಂಜೆ 7 ಗಂಟೆಹೊತ್ತಿಗೆ ನಾನು ಮನೆಗೆ ಹೊರಡುವಷ್ಟರಲ್ಲಿ  ಪ್ರಸಾದ್ ಅಲ್ಲಿಗೆ ಬಂದರು .ಸ್ವೀಟ್ ಕೊಟ್ಟು ನಿನ್ನ ನೆಟ್ ರಿಸಲ್ಟ್ ಬಂದಿದೆ ನೀನು ಪಾಸ್ ಆಗಿದ್ದಿ,congrats ಎಂದರು .ನನಗೆ ನಂಬಲೇ ಆಗಲಿಲ್ಲ !ಅವರು ಫಲಿತಾಂಶದ ಪ್ರಿಂಟೆಡ್ copy ಯನ್ನು ನೀಡಿದರು.ಹೌದು ಅದರಲ್ಲಿ ನನ್ನ ರಿಜಿಸ್ಟರ್ ನಂಬರ್ ಇತ್ತು !
ಸ್ನೇಹಿತೆ ಮನೆಯವರಿಗೆಲ್ಲ ಸ್ವೀಟ್ ಕೊಟ್ಟು ಮನೆಗೆ ಹಿಂತಿರುಗಿದೆ .

ಇದಾಗಿ 6 ವರ್ಷಗಳ  ನಂತರ ನಾನು ಮತ್ತೆ ನೆಟ್ ಪರೀಕ್ಷೆ ಕಟ್ಟಬೇಕಾಯಿತು .ನನಗೆ ಕನ್ನಡ ಎಂ ಎ ಯಲ್ಲಿ 65 % ಅಂಕಗಳು ಮಾತ್ರವಿದ್ದವು .ಇಷ್ಟರತನಕ ಡಿಗ್ರಿ ಕಾಲೇಜ್ ಗಳಿಗೆ ಸಂದರ್ಶನದ ಮೂಲಕ ಉಪನ್ಯಾಸಕರ ಹುದ್ದೆಯನ್ನು ತುಂಬುತ್ತಿದ್ದರು .ಎಂ ಎ ಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ 1:4 ನಿಷ್ಪತ್ತಿಯಲ್ಲಿ (ಒಂದು ಹುದ್ದೆಗೆ ನಾಲ್ಕು ಜನರಂತೆ )ಸಂದರ್ಶನಕ್ಕೆ ಆಹ್ವಾನಿಸುತ್ತಿದ್ದರು .
ಯೂನಿವರ್ಸಿಟಿ ಯಿಂದ university ಗೆ ವಾರ್ಷಿಕ ಸ್ಕೀಮ್ ಮತ್ತು ಸೆಮಿಸ್ಟರ್ ಸ್ಕೀಮ್ ಗಳಿಗೆ ಮೌಲ್ಯ ಮಾಪನ ಹಾಗೂ ಅಂಕ ನೀಡಿಕೆಯಲ್ಲಿ ತುಂಬಾ ವ್ಯತ್ಯಾಸವಿರುತ್ತದೆ.ಹಾಗಾಗಿ ಕನ್ನಡ ಎಂ ಎ ಯಲ್ಲಿ 80 -85 % ಅಂಕಗಳನ್ನು ಗಳಿಸಿದವರು ಇರುತ್ತಾರೆ .ಆದ್ದರಿಂದ 75 % ಕ್ಕಿಂತ ಕೆಳಗೆ ಇದ್ದವರಿಗೆ ಸಂದರ್ಶನಕ್ಕೆ  2006 ಮತ್ತು 2008 ರ ನೇಮಕಾತಿಯಲ್ಲಿ ಆಹ್ವಾನ ಬರಲಿಲ್ಲ .
ನನಗೆ ಇದರಿಂದಾಗಿ ಡಿಗ್ರಿ ಕಾಲೇಜ್ ನಲ್ಲಿ ಕೆಲಸ ಸಿಗುವ ಅವಕಾಶ ತಪ್ಪಿ ಹೋಯಿತು .ಅಂಕಗಳಿಲ್ಲ ಎಂದು ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ .
ಹಾಗಾಗಿ ನಾನು ಮತ್ತೊಮ್ಮೆ ಕನ್ನಡ ಎಂ ಎ ಗೆ ksou ವಿನಲ್ಲಿ ಕಟ್ಟಿ ಅಂಕ ಗಳಿಕೆಗಾಗಿ ತೀವ್ರ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾದೆ .ಹಾಗಾಗಿ ನನಗೆ 78 % ಅಂಕಗಳೂ ನಾಲ್ಕನೇ ರಾಂಕ್ ಕೂಡ ಬಂತು .
ಈಗ ಒಂದು ಸಮಸ್ಯೆ ಎದುರಾಯಿತು .ನಾನು ನೆಟ್ ಎಕ್ಷಾಮ್ ಮತ್ತು ಪಿಎಚ್ ಡಿ ಯನ್ನು ಮೊದಲ ಕನ್ನಡ ಎಂ ಎ ಡಿಗ್ರಿ ಆಧಾರದಲ್ಲಿ ಪಡೆದದ್ದು ,ಹಾಗಿರುವಾಗ ಮುಂದೆ ಡಿಗ್ರಿ ಕಾಲೇಜ್ ಗೆ ಉಪನ್ಯಾಸಕರ ಹುದೆಗ್ ಅರ್ಜಿ ಆಹ್ವಾನಿಸಿದಾಗ ನನ್ನ ಎರಡನೇ ಕನ್ನಡ ಎಂ ಎ ಅಂಕಗಳನ್ನು ಪರಿಗಣಿಸುವುದು ಸಂಶಯ ಎಂದು ಅನೇಕ ಹಿತೈಷಿಗಳು ತಿಳಿಸಿದರು .

ಸರಿ ಹಾಗಾದರೆ ಎರಡನೇ ಕನ್ನಡ ಎಂ ಎ ಆಧಾರದಲ್ಲಿ ಇನ್ನೊಮ್ಮೆ ನೆಟ್ ಎಕ್ಷಾಮ್ ಪಾಸ್ ಮಾಡಿದರೆ ಆಯಿತು ಎಂದು ಕೊಂಡು ಮತ್ತೆ 2011 ರಲ್ಲಿ ನೆಟ್ ಎಕ್ಷಾಮ್ ಕಟ್ಟಿದೆ.ಈ ಭಾರಿ ವಿಪರೀತ ಆತ್ಮ ವಿಶ್ವಾಸ ಇತ್ತು .ಈ ಹಿಂದೆ ಒಂದೇ ಯತ್ನದಲ್ಲಿ ನೆಟ್ ಪಾಸ್ ಮಾಡಿದ್ದೇನೆ ಎಂಬ ಹುಂಬ ಧೈರ್ಯ ಬೇರೆ .ಹಾಗಾಗಿ ಈ ಹಿಂದಿನಂತೆ ಸರಿಯಾಗಿ ಅಭ್ಯಾಸ ಮಾಡಿರಲಿಲ್ಲ ,ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಕೂಡ  ತಿರುವಿ ಹಾಕಲಿಲ್ಲ !ಆದರೆ ಈ ಮೊದಲು ನಾನು ನೆಟ್ ನಲ್ಲಿ ಪಾಸ್ ಆದ   ಬಳಿಕ ಅನೇಕರಿಗೆ ಈ ಬಗ್ಗೆ ಹೇಗೆ ತಯಾರಾಗ ಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದೆ ,ಅನೇಕ ಪ್ರಶ್ನೆಪತ್ರಿಕೆಗಳ ಸಮಸ್ಯೆಗಳನ್ನುಬಿಡಿಸಲು ಸಹಾಯ ಮಾಡಿದ್ದೆ ,ಹಾಗಾಗಿ ಇದೆಲ್ಲ ತುಸು ನೆನಪಿತ್ತು !

ಪರೀಕ್ಷೆಯ ದಿನ ಬಂತು .ಹೋಗಿ ಬರೆದೆ .ಬರೆದು ಹೊರ ಬಂದು ಪ್ರಶ್ನೆ ಪತ್ರಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿದಾಗ  "ಈ ಹಿಂದೆ ನೆಟ್ ಪರೀಕ್ಷೆಗೆ ಬರೆದಷ್ಟು ಚೆನ್ನಾಗಿ ಉತ್ತರಿಸಿಲ್ಲ .ಆದರೂ ಪಾಸ್ ಆಗುವಷ್ಟು ಬರೆದಿದ್ದೇನೆ"ಎಂದು ಎನಿಸಿತು .
ಮತ್ತೆ ನಾಲ್ಕೈದು ತಿಂಗಳು ಕಳೆದವು .ಈ ಹೊತ್ತಿಗಾಗುವಾಗ ನಾನು ಮೊಬೈಲ್ ಗೆ ಇಂಟರ್ನೆಟ್ ಕನೆಕ್ಷನ್ ಪಡೆದಿದ್ದೆ .ಹಾಗಾಗಿ ಪ್ರಸಾದ್ ಅವರಲ್ಲಿ ಫಲಿತಾಂಶ ಬಂತಾ  ಎಂದು ಕೇಳುವ ಪ್ರಮೇಯ ಇರಲಿಲ್ಲ .ದಿನಾಲೂ ಬೆಳಗ್ಗೆ ಸಂಜೆ ನಾನು ನೋಡುತ್ತಾ ಇದ್ದೆ .ಮತ್ತೆ ಪುನಃ ನೆಟ್ ಪರೀಕ್ಷೆಗೆ ಕಟ್ಟುವ ಸಮಯ ಬಂದರೂ ಫಲಿತಾಂಶ ಬರಲಿಲ್ಲ ಹಾಗೆ ಮತ್ತೊಮ್ಮೆ ನೆಟ್ ಕಟ್ಟಿದೆ .ಅದರ ಪರೀಕ್ಷಾ ದಿನಾಂಕ ಹತ್ತಿರ ಬಂದರೂ ಫಲಿತಾಂಶ ಬಂದಿಲ್ಲ .
ಈ ನಡುವೆ ಸರ್ಕಾರಿ ಪದವಿ ಪೂರ್ವ  ಕಾಲೇಜ್ ಗಳಿಗೆ  ಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉಪನ್ಯಾಸಕರ ಹುದ್ದೆಗಳನ್ನು ತುಂಬಿದ್ದು ಅದರಲ್ಲಿ ನಾನು ಆಯ್ಕೆಯಾಗಿ ಬೆಳ್ಳಾರೆಯಲ್ಲಿ ಕೆಲಸ ಮಾಡುತ್ತಿದ್ದೆ .ನಾನು ನೆಟ್ ಪರೀಕ್ಷೆ ಕೇಂದ್ರ   ಬೆಂಗಳೂರು ಎಂದು ಆಯ್ಕೆ ಹಾಕಿದ್ದೆ .

ಹಾಗಾಗಿ ನನ್ನ ಹಾಲ್ ಟಿಕೆಟ್ನಲ್ಲಿ  ಬೆಂಗಳೂರಿನ ಮಹಾರಾಣಿ ಕಾಲೇಜ್ ನಲ್ಲಿ ಪರೀಕ್ಷೆಗೆ ಹಾಜರಾಗಲು ಸೂಚಿಸಿದ್ದರು .ಹಾಗೆ ನಾನು ಪರೀಕ್ಷೆಗೆ ಎರಡು ದಿನ ಮೊದಲೇ ಬೆಳ್ಲಾರೆಯಿಂದ ಬೆಂಗಳೂರಿಗೆ ರಾತ್ರಿ ರೈಲಿನಲ್ಲಿ ಹೊರಟೆ ,ಫಲಿತಾಂಶ ಬಾರದ ಕಳವಳ ,ಈ ಹಿಂದೆ ಪಾಸ್ ಆಗಿದ್ದೇನೆ ಎನ್ನುವ  ಆತ್ಮ ವಿಶ್ವಾಸ, ಎಲ್ಲ ಸೇರಿ ಏನೇನೂ ತಯಾರಿ ಮಾಡಿರಲಿಲ್ಲ ಈ ಬಾರಿ .

ರೈಲಿನಲ್ಲಿ ರಾತ್ರಿ ನಿದ್ರಿಸುವ ಮೊದಲು ಫಲಿತಾಂಶ ಬಂದಿದೆಯೇ ಎಂದು ಮೊಬೈಲ್ ನಲ್ಲಿ ನೋಡಿದ್ದೇ ಬಂದಿರಲಿಲ್ಲ .
ಯಾವಾಗಲೂ ಅಲರಾಮ್ ಸದ್ದು ಆಗದೆ ಎಂದೂ ಎಚ್ಚರಗೊಳ್ಳದ ನನಗೆ ಮರುದಿನ ಬೆಳಗಿನ ಜಾವ ಬೇಗನೆ ಎಚ್ಚರಾಗಿತ್ತು .ಬಹುಶ ಪರೀಕ್ಷೆಯ ಆತಂಕವೇ ಇರಬೇಕು !
ಎಚ್ಚರಾದ ತಕ್ಷಣ ನೆಟ್ ಫಲಿತಾಂಶ ಬಂದಿದೆಯೇ ನೋಡಿದೆ .ಫಲಿತಾಂಶ ಬಂದಿತ್ತು .
ನೆಟ್ ಪರೀಕ್ಷೆ ಯ ಫಲಿತಾಂಶ ಮೊಬೈಲ್ ನಲ್ಲಿ ನೋಡಲು ತುಂಬಾ ಹೊತ್ತು ಬೇಕು .ಪಾಸ್ ಆದ ಸಾವಿರಾರು ಜನರ ರಿಜಿಸ್ಟರ್ ಸಂಖ್ಯೆ ಅನುಕ್ರಮವಾಗಿ ಇರುತ್ತದೆ ಒಂದೊಂದೇ ಪುಟವನ್ನು ಮಗುಚುತ್ತಾ ಮುಂದೆ ಸಾಗಬೇಕು .
ನನ್ನ ರಿಜಿಸ್ಟರ್ ನಂಬರ್  063210123    ಎಂದು ನಗೆ ನೆನಪಿತ್ತು ಆದರೆ  .ಈ ಸಂಖ್ಯೆ ಪಾಸ್ ಅದವರ ಪಟ್ಟಿಯಲ್ಲಿ ಇರಲಿಲ್ಲ ಎಂದರೆ ನಾನು ಫೈಲ್ ಆಗಿದ್ದೆ !!
ಎದೆ ದಸಕ್ ಎನ್ನಿಸಿತು !ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದ ನನ್ನನ್ನು ತಣ್ಣೀರ ಕೊಳಕ್ಕೆ ಅದ್ದಿದಂತಾಗಿತ್ತು.!ಯಾಕೋ ಫೈಲ್ ಅನ್ನು ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ .ಹುಚ್ಚಿಯಂತೆ ಮತ್ತೆ ಮತ್ತೆ ನನ್ನ ನಂಬರ್ ಇದೆಯಾ ಎಂದು ಹುಡುಕುತ್ತಾ ಇದ್ದೆ ಅಷ್ಟರಲ್ಲಿ ಟ್ರೈನ್ ಕೆಂಗೇರಿ ತಲುಪಿತು ,ಪಕ್ಕದ ಪ್ರಯಾಣಿಕರಲ್ಲಿ ರಾತ್ರಿ ನಾನು ಕೆಂಗೇರಿರಿಯಲ್ಲಿ ಇಳಿಯುವುದು ಎಂದು ಹೇಳಿದ್ದೆ .ಕೆಂಗೇರಿ ಬಂದದ್ದೂ ನನಗೆ ಗೊತ್ತಾಗಲಿಲ್ಲ ,ಅವರು ನೀವು ಇಳಿಯುದಿಲ್ವ ಎಂದು ನೆನಪಿಸಿದಾಗ ದಡಬಡಿಸ್ಕೊಂಡುಇಳಿದೆ .ಅಲ್ಲಿಂದ ಯಾವುದೋ ಟ್ರಾನ್ಸ್ ನಲ್ಲಿದ್ದವರ ರೀತಿ ಹೇಗೋ ತೇಲಾಡಿಕೊಂಡು ಬಂದು ಯಶವಂತಪುರ ಬಸ್ ಹತ್ತಿ ಕುಳಿತೆಆದಿನ ನನಗೆ ಮನೆಗೆ ಹೋಗಿ ನಂತರ pu dept ಗೂ ಹೋಗಲಿದ್ದ ಕಾರಣ  ಡೈಲಿ ಪಾಸ್ ತೆಗೆದುಕೊಂಡೆ .
ಮತ್ತೆ ಬಸ್ ನಲ್ಲಿ ಕುಳಿತು ಫಲಿತಾಂಶದಲ್ಲಿ ನನ್ನ ನಂಬರ್ ಇದೆಯಾ ಎಂದು ಮತ್ತೆ ಮತ್ತೆ ಹುಡುಕುತ್ತಾ ಇದ್ದೆ .ಯಾಕೋ ಏನೋ ನಾನು ಫೈಲ್ ಆಗಿದ್ದೇನೆ ಎಂಬುದನ್ನು ನನ್ನ ಮನಸು ಸ್ವೀಕರಿಸಲು ತಕರಾರು ಮಾಡುತ್ತಿತ್ತು !!ಒಂದೆಡೆ ಫೈಲ್ ಅದ ಚಿಂತೆ ,ಇನ್ನೊಂದೆಡೆಫೈಲ್ ಆದಚಿಂತೆ  ಕಾರಣ ಮರುದಿವಸ ನೆಟ್ ಎಕ್ಷಾಮ್ ಗೆ ಹಾಜರಾಗಬೇಕಲ್ಲ ಎಂಬ ಚಿಂತೆ ,ಈ ಬಾರಿ ಪಾಸ್ ಆಗುತ್ತೆ ನಡು ಏನು ಗ್ಯಾರಂಟೀ ಎಂಬ ಕಳವಳ !
ಈ ತೊಳಲಾಟದಲ್ಲಿ ನಾನು ಇಳಿಯಬೇಕಾಗಿದ್ದ ಉಲ್ಲಾಳು ಕ್ರಾಸ್ ಬಂದದ್ದೆ ಗೊತ್ತಿಲ್ಲ.!ಮೂರು ನಾಲ್ಕು   ಕಿಲೋಮೀಟರ್ ಮುಂದೆ  ಹೋಗಿ ದೀಪ ಕಾಂಪ್ಲೆಕ್ಸ್ ಹತ್ರ ಬಂದಾಗಲೇ ಬಂದಾಗಲೇ ನನಗೆ ನಾನು ಇಳಿಯಬೇಕಾದಲ್ಲಿ ಇಳಿಯದೆ ಮುಂದೆ ಬಂದು ಬಿಟ್ಟಿದೇನೆ ಎಂದು ತಿಳಿದದ್ದು !
ಕೂಡಲೇ ಗಡಬಡಿಸಿ ಇಳಿದೆ !ರಸ್ತೆ ದಾಟಿ ಬಸ್ ಹಿಡಿದು ಹಿಂದೆ ಬಂದೆ ಉಲ್ಲಾಳು ಕ್ರಾಸ್ ನಲ್ಲಿ ಇಳಿದೆ.ಆಗ ನನಗೆ ನಾನು ನನ್ನ ಬ್ಯಾಗ್ ಅನ್ನುಹಿಂದಿನ  ಬಸ್ ನಲ್ಲಿ ಬಿಟ್ಟಿದ್ದೇನೆ ಎಂದು ನೆನಪಾಯಿತು .ಇಷ್ಟು ಆದಮೇಲೆ ಪ್ರಸಾದ್ ಗೆ ಫೋನ್ ಮಾಡಿ ಹೇಳಿದೆ .ಅವರು ಕೂಡಲೇ ಮನೆಯಿಂದ ಹೊರತು ನಾನಿದ್ದಲ್ಲಿಗೆ ಬಂದರು .ಅಲ್ಲಿಂದ ಯಶವಂತ ಪುರ ಬಸ್ನಿಲ್ದಾಣಕ್ಕೆ ವೇಗವಾಗಿ ಹೋದೆವು .ಆದರೆ ನಾವು ಅಲ್ಲಿಗೆ ಹೋಗುವಷ್ಟರಲ್ಲಿ ನಾನು ಇದ್ದ ಬಸ್ ಅಲ್ಲಿಗೆ ಬಂದು ಹಿಂದೆ ತಿರುಗಿ ಹೋಗಿತ್ತು .ಅಲ್ಲಿ ನನ್ನ ಬ್ಯಾಗ್ ಬಸ್ ನಲ್ಲಿ ಬಾಕಿಯಾದ ಬಗ್ಗೆ ಮಾಹಿತಿ ನೀಡಿ ಸಿಕ್ಕರೆ ಹಿಂತಿರುಗಿಸಲು ಮನವಿ ಮಾಡಿದೆವು .ಅವರು ನನ್ನಲ್ಲಿದ್ದ ಡೈಲಿ ಪಾಸ್ ನಂಬರ್ ನೋಡಿ ಇದು ಶಾಂತಿ ನಗರ ಡಿಪೋ ವ್ಯಾಪ್ತಿಯ ಬಸ್ ಅಲ್ಲಿ ವಿಚಾರಿಸಿ ಎಂದು ಹೇಳಿದರು.ಅಲ್ಲಿಗೆ ಫೋನ್ ಮಾಡಿ ವಿಷಯ ತಿಳಿಸಿ ಬ್ಯಾಗ್ ಸಿಕ್ಕರೆ ತಿಳಿಸಲು ಹೇಳಿದೆವು .ಆಯಿತು ನಾವು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು .
ಅಲ್ಲಿಂದ ನಾವು ಮನೆಗೆ ಬಂದೆವು .

ಮನೆಗೆ ಬಂದು ಫ್ರೆಶ್ ಆಗಿ ಪ್ರಸಾದ್ ಮಾಡಿಕೊಟ್ಟ ಟೀ ಮತ್ತು ತಿಂಡಿ  ತಿನ್ನುತ್ತಾ (ನಾನು ಟೀ ತಿಂಡಿ ತಯಾರಿಸುವ ತಿನ್ನುವ ಮನಷ್ಟಿತಿಯಲ್ಲಿ ಇರಲಿಲ್ಲ )ಮತ್ತೊಮ್ಮೆ ಫಲಿತಾಂಶ ಹುಡುಕಿದೆ .ಆಗ ನನ್ನ ಗಮನಕ್ಕೆ ಒಂದು ವಿಚಾರ ಬಂತು .ಅಲ್ಲಿರುವ ಎಲ್ಲ ಸಂಖ್ಯೆಗಳು 8 ಡಿಜಿಟ್ಸ್ ಹೊಂದಿದ್ದವು ,ಆದರೆ ನನ್ನ ರಿಜಿಸ್ಟರ್ ನಂಬರ್ 9 ಡಿಜಿಟ್ಸ್ ಅನ್ನು ಹೊಂದಿತ್ತು .ಇಷ್ಟರ ತನಕ ನನ್ನ ನೆನಪಿನಲ್ಲಿದ್ದ ರಿಜಿಸ್ಟರ್ ನಂಬರ್ ಅನ್ನು ನಾನು ಹುಡುಕಿದ್ದೆ,ಈಗ ಯಾಕೋ ಸಂಶಯ ಆಗಿ ನನ್ನ ಹಾಲ್ ಟಿಕೆಟ್ ಹುಡುಕಿ ತೆಗೆದು ನೋಡಿದೆ !
ಹೌದು !ಇಲ್ಲಿ ಒಂದು ಅಂಕೆಯನ್ನುನಡುವೆ  ನಾನು ತಪ್ಪಾಗಿ ಹೆಚ್ಚು ಸೇರಿಸಿ ಹುಡುಕಾಡಿದ್ದೆ!06210123 ರ ಬದಲು 063210123 ಅನ್ನು ಹುಡುಕಾಡಿದ್ದೆ !
ಇಲ್ಲದೆ ಇರುವ ಸಂಖ್ಯೆಯನ್ನು ಫಲಿತಾಂಶದ ಪಟ್ಟಿ ತಾನೇ  ಹೇಗೆ ತೋರಿಸುತ್ತದೆ !  ಈಗ ನನ್ನ ಸರಿಯಾದ ಸಂಖ್ಯೆ ಹಾಕಿ ಹುಡುಕಿದೆ !
ಅಬ್ಬಾ!ದೇವರೇ ! ಆ ಕುಶಿಯನ್ನು ಏನು ಹೇಳಲಿ ,ನನ್ನ ಸಂಖ್ಯೆ ಅಲ್ಲಿತ್ತು ಅಂದರೆ ನಾನು ಪಾಸ್ ಆಗಿದ್ದೆ !



ನೆಟ್ ಎಕ್ಷಾಮ್ ಹಾಗೆಯೇ ಗುಮ್ಮ ಬಂತು ಗುಮ್ಮ ಎಂಬ ಹಾಗೆ ಏನೂ  ಭಯಾನಕವಾದದ್ದು ಇಲ್ಲವಾದರೂ ನಮ್ಮನ್ನು ಏನೋ ಭಯಂಕರ ಎನ್ನುವ ಹಾಗೆ ಹೆದರಿಸುತ್ತದೆ .ಏಳೆಂಟು ಬಾರಿ ಕಟ್ಟಿದರೂ ತುಂಬಾ ಜನರು  ಪಾಸ್ ಆಗಿಲ್ಲ ,ಅದರಲ್ಲಿ ಅರ್ಧ ಶೇಕಡಾ ,ಒಂದು ಶೇಕಡಾ ಮಾತ್ರ ಫಲಿತಾಂಶ ಕೊಡುತಾರೆ"ಇತ್ಯಾದಿ ಅತಿರಂಜಿತ ವಿಚಾರಗಳೇ ವಿದ್ಯಾರ್ಥಿಗಳನ್ನು  ಕಂಗಾಲು ಮಾಡುತ್ತದೆ .ಏಳೆಂಟು ಬಾರಿ ಕಟ್ಟಿದವರು ಒಮ್ಮೆ ಕೂಡ ತಯಾರಿ ಮಾಡಿ ಹೋಗಿರಲಿಕ್ಕಿಲ್ಲ ಎಂಬುದು ನಮಗೆ ತಲೆಗೆ ಹೋಗುವುದು ನಾವು ತಯಾರಿ ಮಾಡಿಕೊಂಡು ಹೋಗಿ ಬರೆದು ಯಶಸ್ಸನ್ನು ಗಳಿಸಿದಾಗಲೇ !

ಇರಲಿ ,ಮುಂದೆ ಸ್ವಲ್ಪ ಹೊತ್ತಿನಲ್ಲಿ ನಾನು ಬ್ಯಾಗ್ ಬಿಟ್ಟು ಇಳಿದಿದ್ದ ಬಸ್ ನ ನಿರ್ವಾಹಕ ಹರಿದಾಸ್ ಅವರಿಂದ ಫೋನ್ ಬಂತು ,ಆ ಬ್ಯಾಗ್ ನಲ್ಲಿ ನನ್ನ ಪ್ರಕಟಿತ ಪುಸ್ತಕವೊಂದು ಇತ್ತು ಅದರಲ್ಲಿ ನನ್ನ ಫೋನ್ ನಂಬರ್ ಇತ್ತು .ಅದನ್ನು ನೋಡಿ ಅವರು ಫೋನ್ ಮಾಡಿದ್ದರು .

ಅವರ ಮನೆ ಅಲ್ಲಿಯೇ ಉಳ್ಳಾಲ್ ಕ್ರಾಸ್ ಹತ್ರ ಇತ್ತು .ಅಲ್ಲಿಗೆ ಹೋಗಿ ಅವರಿಂದ ಬ್ಯಾಗ್ ತಂದೆವು ,ಬಹಳ ಪ್ರಾಮಾಣಿಕರಾಗಿದ್ದ ಅವರು ಬ್ಯಾಗ್ ಒಳಭಾಗದಲ್ಲಿ ಏನಿತ್ತು ಎನ್ನುವುದನ್ನು ಕೂಡ ತೆರೆದು ನೋಡಿರಲಿಲ್ಲ !ಹೊರಭಾಗದ ಜಿಪ್ ನಲ್ಲಿದ ಬುಕ್ ಅನ್ನು ನೋಡಿ ಫೋನ್ ಮಾಡಿದ್ದರು .ಇಂದಿನ ಕಾಲದಲ್ಲಿಯೂ ಒಳ್ಳೆಯತನ ಪ್ರಾಮಾಣಿಕತನ ಉಳಿದುಕೊಂಡಿದೆ ಎಂಬುದಕ್ಕೆ ಅವರು ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದರು .

ನಾವು ಅಂದುಕೊಂಡ ಹಾಗೆ ಬದುಕು ಇರುವುದಿಲ್ಲ .ನಾನು ಡಿಗ್ರಿ ಕಾಲೇಜ್ ಉಪನ್ಯಾಸಕ ಹುದ್ದೆಯ ಸಂದರ್ಶನಕ್ಕೆ ಬರುವಷ್ಟು ಅಂಕಗಳನ್ನು ಗಳಿಸುವ ಸಲುವಾಗಿಯೇ ಪುನಃಎಂ ಎ ಮಾಡಿದೆ ಅಂಕಗಳನ್ನೂಗಳಿಸಿದೆ ,ಅದಕ್ಕೆ ಅರ್ಹತೆಯಾಗಿ ನೆಟ್ ಎಕ್ಷಾಮ್ ಅನ್ನೂ ಮತ್ತೊಮ್ಮೆ ಪಾಸ್ ಮಾಡಿದೆ !

ಆದರೆ ಈಗ ಡಿಗ್ರಿ ಕಾಲೇಜ್ ಗೆ ಅರ್ಹತೆಯಾಗಿ ನೆಟ್ ಅಥವಾ ಪಿಎಚ್.ಡಿ ಯನ್ನು ಹಾಗೂ ಎಂ ಎ ಯಲ್ಲಿ ಕನಿಷ್ಠ 55 % ಅಂಕಗಳನ್ನು ನಿಗದಿ ಪಡಿಸಿ ಉನ್ನತ ಶಿಕ್ಷಣ ಇಲಾಖೆಯು ಡಿಗ್ರಿ ಕಾಲೇಜ್ ಗಳಿಗೆ ಸುಮಾರು 1200 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ತುಂಬುವ ಬಗ್ಗೆ ಸೂಚನೆ ನೀಡಿದೆ ,ಇನ್ನೊಂದು ವಾರದಲ್ಲಿ ಅರ್ಜಿ ಆಹ್ವಾನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಎಲ್ಲರೂ ನಾನು ಕೂಡ .ನೆಟ್ /ಸ್ಲೆಟ್,ಅಥವಾ ಪಿಎಚ್.ಡಿ ಹಾಗೂ ಎಂ ಎಯಲ್ಲಿ 55 % ಅಂಕ ಪಡೆದವರು ಅರ್ಜಿ ಸಲ್ಲಿಸಿ  ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು .ಇಲ್ಲಿ ಎಂ ಎಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸುವುದಿಲ್ಲ .ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಮೂಲಕ ಆಯ್ಕೆಯಾಗುತ್ತದೆ .
ನಾನೂ ಅರ್ಜಿ ಸಲ್ಲಿಸಿ ಪರೀಕ್ಷೆ ಎದುರಿಸಬೇಕಿನ್ದಿದ್ದೇನೆ ,ಮುಂದೇನಾಗುತ್ತದೆ ನೋಡಬೇಕು !
 "ನೆಟ್ ಎಕ್ಷಾಮ್ ನಲ್ಲಿ ಫೈಲ್ ಆದೆ ಎಂಬ ಭಾವನೆ ನನ್ನನ್ನು ಎಷ್ಟು ಅವಾಂತರಗಳಿಗೆ ತಳ್ಳಿ ಹಾಕಿತು" ಎಂಬುದನ್ನು ನೆನಪಿಸಿಕೊಂಡು ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥೈರ್ಯವನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದೇನೆ .  ಇತ್ತೀಚೆಗೆ ಮಂಗಳೂರು ಯೂನಿವರ್ಸಿಟಿಯಲ್ಲಿನ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯ ಸಂದರ್ಶನದಲ್ಲಿನ ಸೋಲನ್ನು ದಿಟ್ಟವಾಗಿ ಎದುರಿಸಿದ್ದೇನೆ.ಅನ್ಯಾಯದ ವಿರುದ್ಧ ಕೋರ್ಟ್ ಗೆ ಹೋಗಿದ್ದೇನೆ ಮುಂದೇನಾಗುತ್ತದೋ ಗೊತ್ತಿಲ್ಲ !ಕಾಲಾಯ ತಸ್ಮೈ ನಮಃ