Friday, 26 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ



ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ


ಕಳೆದ ಒಂದು ವಾರದಿಂದ ಒಂದು ಮುಸ್ಲಿಂ ಸ್ವರೂಪದ ದೈವ ಇಬ್ಬರು ಮುಸ್ಲಿಂ ರೀತಿಯ ವೇಷ ಧರಿಸಿದ ಪಾತ್ರಿಗಳ ಜೊತೆ ಕೋಲಾಟವಾಡುವ ವೀಡಿಯೋ ಹರಿದಾಡುತ್ತಾ ಇತ್ತು.ಅನೇಕರು ಅದನ್ನು ಕಳಹಿಸಿ ಈ ದೈವ ಯಾವುದೆಂದು ಕೇಳಿದ್ದರು. ಆಲಿ ಭೂತ ,ಯೋಗ್ಯೆರ್ ನಂಬೆಡಿ ,ಮುಕ್ರಿ ಪೋಕ್ಕರ್,ಬಪ್ಪುರಿಯನ್  ಸೇರಿದಂತೆ ಅನೇಕ ಮುಸ್ಲಿಂ ತೆಯ್ಯಂ ಗಳಿಗೆ ಆರಾಧನೆ ಇರುವುದು ನನಗೆ ತಿಳಿದಿತ್ತಾದರೂ ಈ ತೆಯ್ಯಂ ಯಾರೆಂದು ಗುರುತಿಸಲು ಆಗಿರಲಿಲ್ಲ.ಕೆಲವರು ಅದನ್ನು ಆಲಿ ಭೂತ ಎಂದು ತಪ್ಪಾಗಿ ಗುರುತಿಸಿದ್ದು ತಿಳಿದು ಅದು ಆಲಿ ಭೂತವಲ್ಲ ಎಂದು ತಿಳಿಸಿದ್ದೆ.ಅದು ಮುಕ್ರಿ ಪೋಕ್ಕೆರ್ ದೈವ ಇರಬಹುದು ಎಂದು ಹೇಳಿದ್ದೆ.ವಾಟ್ಸಪ್ ಗ್ರೂಪೊಂದರಲ್ಲಿ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಳ್ಳೆ ದೈವ ಎಂದು ಗುರುತಿಸಿದ್ದರು‌.ಹಾಗಾಗಿ ನಾನು ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಕುಂಞಿರಾಮನ್ ಸೇರಿದಂತೆ ಅನೇಕ ಹಿರಿಯರನ್ನು ಸಂಪರ್ಕಿಸಿದೆ‌.ಅದರ ಮಾಹಿತಿ ನೀಡಿದ ಕುಂಞಿರಾಮನ್ ಅವರು ಕಲಂದನ್ ಮುಕ್ರಿ ಎಂಬ ಹೆಸರಿನ ಮುಸ್ಲಿಂ ಮೂಲದ ದೈವಕ್ಕೆ ಆರಾಧನೆ ಇರುವ ಬಗ್ಗೆ ತಿಳಿಸಿದರು.
ಮಾಪ್ಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಹುಡುಕುತ್ತಿರುವುದನ್ನು ತಿಳಿದ ಸ್ನೇಹಿತರಾದ ಶ್ಯಾಮ್ ಅವರು ಒಂದು ಮಲೆಯಾಳ ಬರಹವನ್ನು ಕಳಹಿಸಿ ಅದರಲ್ಲಿ ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಇದೆ ಎಂದು ಅವರ ಸ್ನೇಹಿತರು ಹೇಳಿದ್ದನ್ನು ತಿಳಿಸಿದರು.ನನಗೆ ಮಲೆಯಾಳ ಭಾಷೆ ಅರ್ಥವಾಗುವುದಾದರೂ ಓದಲು ತಿಳಿದಿಲ್ಲ. ಹಾಗಾಗಿ ನಾನು ಅದನ್ನು ಗೂಗಲ್ ಟ್ರಾನ್ಸಲೇಶನ್ ಮೂಲಜ ಇಂಗ್ಲಿಷ್ ಗೆ ಅನುವಾದಿತ ರೂಪ ಪಡೆದೆ.ಆಗ ಅದು ಕಲಂದನ್ ಮುಕ್ರಿ ತೆಯ್ಯಂ ಬಗೆಗಿನ  ಮಲೆಯಾಳ ವಿಕಿಪೀಡಿಯ ಮಾಹಿತಿ ಎಂದು ತಿಳಿಯಿತಾದರೂ ಗೂಗಲ್ ಅನುವಾದದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಪ್ಪುಗಳು ಇದ್ದ ಕಾರಣ ಕಥಾನಕ ಪೂರ್ತಿಯಾಗಿ ಅರ್ಥ ಆಗಲಿಲ್ಲ.
ಆಗ ಅದನ್ನು  ಮಲೆಯಾಳ ಬಲ್ಲ ಯುವ ಸಂಶೋಧಕರಾದ ಶಂಕರ್ ಕುಂಜತ್ತೂರಿಗೆ ಕಳಹಿಸಿ ಅನುವಾದ ಮಾಡಿ ಕೊಡಲು ಕೇಳಿದೆ.ಅವರು ಅದರ ಸಂಗ್ರಹ ಅನುವಾದ ಮಾಡಿ ನೀಡಿದರು.
ಈ ದೈವದ/ ತೆಯ್ಯಂ ನ ಸಂಕ್ಷಿಪ್ತ ಕಥಾನಕ ಹೀಗಿದೆ.
ಕಾಸರಗೋಡು ಜಿಲ್ಲೆಯ ಕಂಪಲ್ಲೂರು ಗ್ರಾಮದಲ್ಲಿ ಕಂಪಲ್ಲೂರು ಕೋಟ್ಟಯಿಲ್ ಎಂಬ ಪ್ರಾಚೀನ ತರವಾಡು ಮನೆ ಇದೆ.ಇದು ನಾಯರ್ ಸಮುದಾಯದವರ ತರವಾಡು ಆಗಿದ್ದು ಅವರಿಗೆ ಕೊಡಗಿನಿಂದ ಕಾಸರಗೋಡು ತನಕ ಹದಿನೈದು ಸಾವರ ಎಕರೆಗಳಷ್ಟು ಭೂಮಿ ಇತ್ತು.ಇಲ್ಲಿ ಬೆಳೆ ಬೆಳೆಯುತ್ತಾ ಇದ್ದರು.ಈ ತರವಾಡಿನ ರಕ್ಷಣೆಯನ್ನು ಕರಿಚಾಮುಂಡಿ ದೈವ ಮಾಡುತ್ತಾ ಇತ್ತು.
ಸೈನುದ್ದೀನ್ ಮತ್ತು ಅವರ ಕುಟುಂಬದ ಸದಸ್ಯರು ಈ  ಈ ಪ್ರದೇಶಕ್ಕೆ ಬರುತ್ತಾರೆ.ಆಗ ಈ ಕೋಟ್ಟಯಿಲ್ ತರವಾಡಿನ ನಾಯರ್‌ಗಳು ಅವರಿಗೆ ಸಹಾಯ ಮಾಡುತ್ತಾರೆ. ಅವರ ಧರ್ಮದ ಪಾಲನೆಗಾಗಿ ಒಂದು ಶೆಡ್ ಹಾಕಿ ಪ್ರಾರ್ಥನೆಗೆ ವ್ಯವಸ್ಥೆ ಮಾಡುತ್ತಾರೆ.
ಸೈನುದ್ದೀನ್ ಮತ್ತು ಅವರ ಕುಟುಂಬದವರು ಮತ್ಸ್ಯ ಬೇಟೆಗಾಗಿ ಮತ್ತು ವ್ಯಾಪಾರಕ್ಕಾಗಿ ಪುಲಿಂಗಾಟ್ ನದಿಯನ್ನು ಗೇಣಿಗೆ ಪಡೆಯುತ್ತಾರೆ.ಅವರಿಗೆ ಒಂದು ಮಸೀದಿಯನ್ನು ತರವಾಡಿನ ನಾಯರ್‌ಗಳು ಕಟ್ಟಿಸಿಕೊಡುತ್ತಾರೆ.
ಆ ಮಸೀದಿಯಲ್ಲಿ ಉರೂಸ್ ಗೆ ದಿನ ನಿಶ್ಚಯ ಮಾಡುವ ಮೊದಲೇ ಮಸೀದಿಯ ಮುಖ್ಯಸ್ಥರು ತರವಾಡು ಮನೆಗೆ ಬಂದು ದೈವದಲ್ಲಿ ಉರೂಸ್ ಹಬ್ಬದ ನೇತೃತ್ವ ( ಅಧ್ಯಕ್ಷತೆ)ವಹಿಸುವಂತೆ ಪ್ರಾರ್ಥನೆ ಮಾಡಿ ಅರಶಿನ ಗಂಧ ಪ್ರಸಾದ ಕೊಂಡೊಯ್ಯುತ್ತಾ ಇದ್ದರು.ಈಗಲೂ ಅಲ್ಲಿ ಈ ಪದ್ಧತಿ ಇದೆ.ಅವರು ತರವಾಡಿನ ರಕ್ಷಕ ದೈವ ಕರಿಚಾಮುಂಡಿ ದೈವಕ್ಕೆ ನಿಷ್ಠರಾಗಿ ಗೌರವ ತೋರುತ್ತಿದ್ದರು.ಹಾಗಾಗಿ ಅಲ್ಲಿನ ಮಸೀದಿಯ ಮುಖ್ಯಸ್ಥ ಕಲಂದನ್ ಮುಕ್ರಿಗೆ  ಕರಿ ಚಾಮುಂಡಿ ದೈವ   ಮರಣಾನಂತರ ದೈವತ್ವ ನೀಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.
ಕಲಂದನ್ ಮುಕ್ರಿ ದೈವವನ್ನು ಹಿಂದು ಪಾತ್ರಿಗಳು ಕಟ್ಟುತ್ತಾರೆ. ಒಂದು  ಬಿಳಿ‌ಲುಂಗಿಯ ಮೇಲೆ ,ಸೊಂಟಕ್ಕೆ ಕಟ್ಟಿದ ಕೆಂಪು ಶಾಲು ,ತಲೆಗೆ ಕೆಂಪು ಬಟ್ಟೆಯ ರುಮಾಲು ಹಾಗೂ ಬಿಳಿಯ ಗಡ್ಡದ  ಮಾನವ ಸಹಜವಾ ಅಲಂಕಾರ ,ವೇಷಭೂಷಣ ಈ ದೈವಕ್ಕೆ ಮಾಡುತ್ತಾರೆ.
ಮಾಹಿತಿ ಮೂಲ : ಮಲೆಯಾಳ ವಿಕಿಪೀಡಿಯ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶ್ಯಾಮ್, ಅನುವಾದ ಮಾಡಿದ ಶಂಕರ್ ಕುಂಜತ್ತೂರು,ಮಾಹಿತಿ ನೀಡಿದ ಕುಂಞಿರಾಮನ್ ಮಾಸ್ತರ್ ಅವರುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ
- ಡಾ.ಲಕ್ಷ್ಮೀ ಜಿ ಪ್ರಸಾದ

ಅಜ್ಜಿ ಭೂತ © ಡಾ.ಲಕ್ಷ್ಮೀ ಜಿ ಪ್ರಸಾದ

*ಅಜ್ಜಿ ಬೂತ*🙏

*(ಮಾಯೊದ ಬೊಲ್ಪು💫*)👏

ಸುಳ್ಯ ತಾಲೂಕುದ ಮಡಪ್ಪಾಡಿ, ಕಂದ್ರಪ್ಪಾಡಿ, ವಾಲ್ತಾಜೆ ಇಂಚಿತ್ತಿನ ಪ್ರದೇಸೊಡು ಬಾರೀ ಕಾರನಿಕೊಡು ಮೆರೆಪಿನ ದೈವೋ ಸುಬ್ಬಜ್ಜಿ ಭೂತ. ಸುಬ್ಬಜ್ಜಿ, ಸಬ್ಬಜ್ಜಿ, ಸಬ್ಬಕ್ಕ ಇಂಚಿತ್ತಿನ ಬೇತೆ ಬೇತೆ ಪುದರ್‌ಡ್ ಅಜ್ಜಿ ಭೂತೊದ ಆರಾಧನೆ ಮಲ್ಪುವೆರ್.

ಅಜ್ಜಿ ಬೂತೊದ ಕೋಲ ಆಕರ್ಷಕ. ಯಕ್ಷಗಾನದ ಸ್ತ್ರೀ ವೇಷೊಗುಲಾ ಉಂದೆಕ್ಕ್ ಲಾ ಸಾಮ್ಯತೆ ಉಂಡು. ಅಜ್ಜಿ ಬೂತೊದ ಕೋಲೊಡು ಕೋಪ ರೌದ್ರತೆ ಆರ್ಭಟ ಇಜ್ಜಿ. ಮೋಕೆ, ಪ್ರಶಾಂತ ಅಭಿನಯ ಲಕ್ಕ್‌ದ್ ತೋಜುಂಡು. ಈ ದೈವೊದ ಪಾಡ್ದನ ತುಳುಟ್ಟು ಉಂಡು. ಆಂಡ ನುಡಿಗಟ್ಟ್ ಕನ್ನಡ. ಬಹುಷ: ಅಜ್ಜಿ ಬೂತೊದ ಮೂಲ ಪೊಣ್ಣು ಕನ್ನಡತಿ ಆದುಪ್ಪೊಡು.
ಅಜ್ಜಿ ಬೂತೊಲಾ ಉಲ್ಲಾಕುಳು ದೈವೊಲಾ ಒಟ್ಟುಗು ಗಟ್ಟ ಜತ್ತ್‌ದ್ ಬನ್ನಗ ಕೂಜಿಲೆನ್ ಲೆತೊಂದು ದೆಂಜಿ ಪತ್ತ್ಯೆರೆ ಬರ್ಪಲ್ ಪನ್ಪಿನ ನಂಬಿಕೆ ಉಂಡು. ಬಳ್ಪದ ತ್ರಿಶೂಲಿನಿ ದೇವಸ್ಥಾನೊಗು ಸಮ್ಮಂದಪಟ್ಟ್‌ನ ಐತಿಹ್ಯೊಡು ಅಜ್ಜಿ ಬೂತೊದ ಬಗ್ಗೆ ಪನೀತ್ ಮಾಹಿತಿ ಉಂಡು. ಉಲ್ಲಾಕುಳು ದೈವೊ ಬನ್ನಗ ಬಳ್ಪ ದೇವಸ್ಥಾನೊಡು ಒಂಜಿ ಪೊಣ್ಣ ರೂಪೊದ ಬೊಣ್ಚಿ ತೋಜುಂಡು. ಆ ಶಕ್ತಿದ ಒಟ್ಟುಗು ಉಲ್ಲಾಕುಳು ಕುದುರೆಡ್ ಕುಲ್ಲುದು ಪೋನಗ ಜನ ತೆಲಿಪುವೆರ್. ಅಪಗ ನಾಚಿಕೆ ಆದ್ ಒಂಜಿ ಗುಹೆಕ್ ನೂರಿಯೆರ್. ಆ ಪೊಣ್ಣ ಶಕ್ತಿಯೇ ಬೊಕ್ಕ ಅಜ್ಜಿ ಬೂತೊ ಪಂಡ್‌ದ್ ಪುದರಾಪುಂಡು.ಸುಳ್ಯದ ಕಾಯರ್ತೋಡಿ ಜಾಲಾಟೊಡು ಸಬ್ಬಕ್ಕ ಎಡ್ತೆರ್/ಸಬ್ಬಡ್ತೆರ್ ಪನ್ಪಿನ ಒಂಜಿ ದೈವೊಗು ಆರಾಧನೆ ಉಂಡು. ಮೂಲತಃ ಅಂಗಯಿ ಗೌಡೆರೆ ಮಗಲ್ ಸಬ್ಬಕ್ಕ ದೇಂಗೋಡಿ ತರವಾಡ್ ಇ್ಲ್ಗ್ ಮದಿಮೆ ಆದ್ ಬರ್ಪಲ್. ಒಂಜಿ ದಿನ ಇಲ್ಲದ ಪೊಂಜೊವೆಲೆನ ಒಟ್ಟುಗು ತಪ್ಪು ಕನಯೆರೆ ಪೂಮಲೆ ಕಾಡ್‌ಗ್ ಪೋಪಲ್. ತಪ್ಪು ಪಿರೆದ್ ತರೆಟ್ ತುಂಬೊಂದು ಬನ್ನಗ ಸಬ್ಬಕ್ಕ ಅಕೇರಿಗ್ ಒರ್ತಿಯೆ ಒರಿಪಲ್. ಅಪಗ ಏರೋ ಬತ್ತ್‌ದ್ ಆಲೆನ ತರೆಕ್ ತಪ್ಪುದ ಕಟ್ಟ ತುಂಬಾವೆರ್. ಗುಡ್ಡೆದ ಮಿತ್ತ್ ಬಲಾಂದ್ ಲೆಪ್ಪುವೆರ್. ಆ ಪೊರ್ತುಡು ಸಬ್ಬಕ್ಕ ಮಾಯ ಆದ್ ಉಳ್ಳಾಕುಲೆನ ಬಲತ್ತ ಭಾಗೊಡು ಉಂತುವಲ್ ಪನ್ಪಿನ ಕತೆ ಉಂಡು.

ಅಜ್ಜಿ ಬೂತೊದ ಒಟ್ಟುಗು ರಡ್ಡ್ ಕೂಜಿಲ್ ದೈವೊಲೆಗ್ ಆರಾಧನೆ ನಡಪುಂಡು. ಕೂಜಿಲೆನ ಕೋಲ ಆನಗ ಅಲ್ಪ ಕೋಟೆ ಕಟ್ಟುವೆರ್. ಕೋಟೆ ಕಡಿದ್ ಪೋಂಡ ಅಕುಲು ಪಿರ ಬರ್ಪುಜೆರ್ ಪನ್ಪಿನ ನಂಬಿಕೆ ಉಂಡು. ಅಕುಲು ತೋಟೊಗು ಪೋದು ಬಜ್ಜೈ, ಬೊಂಡ ಕನಪಿನ ಕ್ರಮ ಉಂಡು. ಅಕುಲೆನ್ ಗಂಡ ಗಣಕುಲುಂದ್ ಲೆಪ್ಪುವೆರ್. ಉಂದೆನ್ ಮಾತಾ ತೂನಗ ಮೂಲತಃ ಕೂಜಿಲ್ ಲೂಟಿ ಮಲ್ಪೆರೆ ಬತ್ತಿನ ಅರಸುಲೆನ ಸೈನಿಕೆರ್ ಪಂಡ್‌ದ್ ತೆರಿದ್ ಬರ್ಪುಂಡ್. ಸಾರತ್ತೊಂಜಿ ಬೂತೊಲೆಡ್ ಒಂಜಿ ಆದುಪ್ಪುನ 'ಡೆಂಜಿ ಪುಕ್ಕೆ' ಪನ್ಪಿನ ದೈವೊಲ ಕೂಜಿಲ್ ದೈವೊಲೇ ಆದುಪ್ಪು. ದಾಯೆಗ್ ಪಂಡ ಗಂಡ ಗಣಕುಲೆಗ್ ಡೆಂಜಿ ಬೊಕ್ಕ ಕುಡುತ್ತ ಕೊದ್ದೆಲ್ ಮಲ್ತ್‌ದ್ ಬಳಸುನ ಸಂಪ್ರದಾಯ ಕೆಲವು ಕಡೆಟ್ ಉಂಡು. ಅಜ್ಜಿ ಬೂತ ಕೂಜಿಲೆನ ಒಟ್ಟುಗು ಡೆಂಜಿ ಪತ್ತ್ಯೆರೆ ಬರ್ಪುನ ಬಗ್ಗೆ ಪಾಡ್ದನೊಡು ಮಾಹಿತಿ ಉಂಡು.ಅದ್ಯಯನೊದ ಬೊಲ್ಪುಡು
ಅಜ್ಜಿ ದೈವೊದ ಬಗ್ಗೆ ಅಧ್ಯಯನ ನಡಪೊಡು. ಪೂಮಲೆ ಕಾಡ್‌ಡ್ ಸಬ್ಬಕ್ಕನ್ ಮಿತ್ತ್ ಬಲ ಪಂಡ್‌ದ್ ಪಂಡಿನೆ ಏರ್? ಪೊಸ ಮದಿಮಾಲ್ ಸಬ್ಬಕ್ಕನ್ ಇಲ್ಲದಕುಲು ಕಾಡ್‌ಡ್ ಬುಡ್ಡು ಬತ್ತಿನೆ ದಾಯೆಗ್? ಏರೋ ಕಾಡ್‌ಡ್ ಸಬ್ಬಕ್ಕಗ್ ಉಪದ್ರ ಕೊರಿಯೆರಾ? ಅಪಗ ದುರಂತ ಆದ್ ಸಬ್ಬಕ್ಕನೇ ಸುಬ್ಬಜ್ಜಿ ಅಜ್ಜಿ ಬೂತ ಆದ್ ದೈವತ್ವ ಪಡೆಯೆರಾ? ಅತ್ತ್‌ಂಡ ಆ ಊರುದ ಅರಸು ಅತ್ತ್‌ಂಡ ಏರೋ ಬಲಾಡ್ಯೆರ್ ಸಬ್ಬಕ್ಕನ್ ಒಯ್ತಂದು ಪೋಯೆರಾ? ಏರೋ ಮಲ್ತಿನೆನ್, ಉಲ್ಲಾಕುಲು ದೈವೊದ ಮಿತ್ತ್ ಪಾಡ್ದ್ ದೈವೊನೇ ಮಾಯ ಮಲ್ತ್‌ನೆ ಪಂಡೆರಾ? ಈ ಸಮಗ್ರ ವಿಚಾರೊಲೆನ್ ಅಧ್ಯಯನ ಮಲ್ಪೊಡಾಯಿನ ಅಗತ್ಯ ಉಂಡು.

*©ಡಾ*. *ಲಕ್ಚ್ಮೀ ಜಿ. ಪ್ರಸಾದ, ಉಪನ್ಯಾಸೆಕೆರ್*,

ನಾನು ಲಕ್ಷ್ಮೀ ಪೋದ್ದಾರ್ ಆದ ಕಥೆ

ನಾನು ಲಕ್ಷ್ಮೀ ಪೋದ್ದಾರ್ ಆದ ಕತೆ...
ಲಕ್ಷ್ಮೀ ಪೊದ್ದಾರ್ c/o ಲಕ್ಷ್ಮಿ ಪ್ರಸಾದ್ © ಜಿ ಎನ್ ಮೋಹನ್
Posted by Avadhi

ಡಾ ಕೆ ಎನ್ ಗಣೇಶಯ್ಯ ಅವರು ನಿಮಗೆ ಗೊತ್ತು.. ಅವರ ಬರವಣಿಗೆಯ ಶೈಲಿಯೂ ಗೊತ್ತು

ಕನ್ನಡಕ್ಕೆ ಹೊಸದೇ ಆದ ಬರವಣಿಗೆಯ ತಂತ್ರ ಪರಿಚಯಿಸಿದ ಹೆಮ್ಮೆ ಅವರದ್ದು

ನಾಗೇಶ್ ಹೆಗಡೆ ಅವರ ಶಹಭಾಷ್ ಗಿರಿಯಿಂದಾಗಿ ಹೊಸದೇ ಶೈಲಿಯೊಂದನ್ನು ರೂಢಿಸಿಕೊಂಡ ಗಣೇಶಯ್ಯ ಅವರು ಹೇಗೆ ಬರೆಯುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಇತ್ತೀಚಿಗೆ ಹೊರಬಂದ ‘ಬಳ್ಳಿಕಾಳ ಬಳ್ಳಿ’ ಕೃತಿಯಲ್ಲಿ ತುಳು ಸಂಸ್ಕೃತಿಯ ಸಂಶೋಧಕಿ ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಪಾತ್ರ ಬದಲಾಗಿರುವ ರೀತಿ ನೋಡಿ.


ಡಾ ಲಕ್ಷ್ಮಿ ಜಿ ಪ್ರಸಾದ್ ಹೇಳುತ್ತಾರೆ-

ನಾನೆಂದೂ ಕಾದಂಬರಿ ಬರೆದಿಲ್ಲ

ಆದರೆ ಖ್ಯಾತ ಸಾಹಿತಿ ಕಾದಂಬರಿಗಾರ ಕೃಷಿ ವಿಜ್ಞಾನಿ ಡಾ.ಗಣೇಶಯ್ಯ ಅವರ ಪತ್ತೆದಾರಿ ಶೈಲಿಯ ಐತಿಹಾಸಿಕ ಕಾದಂಬರಿ “ಬಳ್ಳಿ ಕಾಳ ಬಳ್ಳಿ”ಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಬಂದಿದ್ದೇನೆ

ಇಲ್ಲಿ ನನ್ನ ಪಾತ್ರ ಲಕ್ಷ್ಮೀ ಪೊದ್ದಾರ್ ಎಂಬ ತುಳು ಜಾನಪದ ಸಂಶೋಧಕಿಯದು

ನಾನು ಎಂದಾದರು ಒಂದು ದಿನ ಒಂದು ಕತೆ ಕಾದಂಬರಿಯ ಪಾತ್ರವಾಗಬಹುದು ಕನಸಲ್ಲಿ ಕೂಡ ಊಹಿಸಿರಲಿಲ್ಲ .

ನಾನು ಗಣೇಶಯ್ಯ ಅವರನ್ನು ಭೇಟಿಯಾಗಿದ್ದಾಗ ನನ್ನ ಪಾತ್ರ ಅವರ ಕಾದಂಬರಿಯಲ್ಲಿ ಬರುತ್ತೆ ಎಂದಾಗ ಒಂದೆಡೆ ತುಳುವಿನಿಂದ ಕನ್ನಡಕ್ಕೆ ಒಂದು ಪದ್ಯವನ್ನು ಅನುವಾದ ಮಾಡಿಕೊಡುವ ಚಿಕ್ಕ ಪಾತ್ರ ಇರಬಹುದು ಎಂದುಕೊಂಡಿದ್ದೆ

ಆದರೆ ಇಲ್ಲಿ ಲಕ್ಷ್ಮೀ ಪೋದ್ದಾರ್ ಗೆ ಪ್ರಮುಖ ಪಾತ್ರವಿದೆ

ನಾನು ಭೂತಾರಾಧನೆ ಬಗ್ಗೆ ಹೇಳುವ ವಿಚಾರಗಳನ್ನು ಲಕ್ಷ್ಮಿ ಪೋದ್ದಾರ್ ಮೂಲಕ ಕವಿ ಜನತೆಯ ಎದುರು ಇಟ್ಟಿದ್ದಾರೆ ಭೂತಾರಾಧನೆಯಲ್ಲಿ ಅಡಕವಾಗಿರುವ ಐತಿಹಾಸಿಕ ವಿಚಾರಗಳು ಕೂಡ ಕಾದಂಬರಿಗೆ ಆಕರವಾಗಬಲ್ಲವು ಎಂಬುದನ್ನು ಅವರು ತೋರಿಸಿಕೊಟ್ಟಿದಾರೆ.

ಅದಕ್ಕಾಗಿ ಗಣೇಶಯ್ಯ ಅವರಿಗೆ ಧನ್ಯವಾದಗಳು

ಈ ಹಿಂದೆ ಡಾ .ಅಮೃತ ಸೋಮೇಶ್ವರ ಅವರು ತುಳುವರ ಪಾಡ್ದನ ಹಾಗೂ ಭೂತಾರಾಧನೆ ಕುರಿತು ತಿಳಿಸಲು ನಾಟಕ ಕಾದಂಬರಿ ಕಥೆಗಳನ್ನು ರಚಿಸಿ ಜನರ ಮುಂದಿಡಬೇಕು ಎಂದು ಹೇಳಿದ್ದರು.

ಈಜೋ ಮಂಜೊಟ್ಟಿ ಗೋಣ ಪಾಡ್ದನ ಹಾಗೂ ಉರವ, ಎರಡು ಬಂಟ ದೈವಗಳ ಕಥಾನಕವನ್ನು ಆಧರಿಸಿ ನಾನು ಒಂದು ಸಣ್ಣ ನಾಟಕ ಬರೆದಿದ್ದು ನಮ್ಮ ವಿದ್ಯಾರ್ಥಿಗಳ ಮೂಲಕ ಪ್ರದರ್ಶನ ಮಾಡುವ ಯತ್ನ ಮಾಡಿದ್ದೆ

ಆದರೆ ಇವೆಲ್ಲ ತುಳು ಸಂಸ್ಕೃತಿ ಯ ಅರಿವಿರುವವರಿಗೆ‌ ಮಾತ್ರ ಸ್ಪಷ್ಟವಾಗಿ ಅರ್ಥವಾಗಲು ಸಾಧ್ಯ ಯಾಕೆಂದರೆ ಅಲ್ಲಿ‌ ತುಳುವಿನ ಭೂತ‌ಪದಕ್ಕೆ‌ಇರುವ ಅರ್ಥ ಆರಾಧನಾ ಸ್ವರೂಪದ ಬಗ್ಗೆ ಹೇಳಿಲ್ಲ ಬಹುಶಃ ‌ಮೊದಲ ಬಾರಿಗೆ ತುಳುನಾಡಿನ ಭೂತಾರಾಧನೆ ಬಗ್ಗೆ ಕನ್ನಡ ‌ಕಾದಂಬರಿಯಲ್ಲಿ ಈ ರೀತಿಯ ಮಾಹಿತಿಯನ್ನು ನೀಡಿದವರು ಡಾ. ಗಣೇಶಯ್ಯ ಅವರೇ ಇರಬೇಕು

ಈ ಕಾದಂಬರಿಯಲ್ಲಿ ಚೌಂಡಿ ಮತ್ತು ಜಟ್ಟಿಗ/ ಜತ್ತಿಂಗ ದೈವಗಳ ಕಥಾನದಲ್ಲಿ ಚೆನ್ನ ಭೈರಾದೇವಿಯ ಇತಿಹಾಸದ ಎಳೆಯನ್ನು ಕಂಡುಕೊಂಡದ್ದು ಅವರ ತೀವ್ರ ವಿಚಕ್ಷಣಾ ಗುಣಕ್ಕೆ ಸಾಕ್ಷಿಯಾಗಿದೆ

ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾಗಿ ಸಾಕಷ್ಟು ಇತಿಹಾಸದ ಮಾಹಿತಿ ಇದೆ. ನಿಧಿ ಶೋಧದ ಕಥಾನಕ ಬಿಟ್ಟರೆ ಉಳಿದೆಲ್ಲವೂ ಅದರಲ್ಲಿ ಇರುವುದು ನಡೆದು ಹೋದ ಸತ್ಯ ಘಟನೆಗಳು
http://avadhimag.com/2017/01/04/%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b3%80-%e0%b2%aa%e0%b3%8a%e0%b2%a6%e0%b3%8d%e0%b2%a6%e0%b2%be%e0%b2%b0%e0%b3%8d-co-%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae/

**** ಬಳ್ಳಿಕಾಳ ಬೆಳ್ಳಿ *****

ಚರಿತ್ರಕಾರರೂ, ಚರಿತ್ರೆಯೂ ಮರೆತ ಗೇರುಸೊಪ್ಪೆಯ " ಕಾಳುಮೆಣಸಿನ ರಾಣಿ " ಚೆನ್ನಭೈರಾದೇವಿಯ ಚರಿತೆ.

 ಸತ್ಯ ಸಂಗತಿಗಳ ಜೊತೆ ಡಾ ll ಕೆ. ಎನ್ ಗಣೇಶಯ್ಯನವರ ಅದ್ಭುತ ಕಲ್ಪನಾಲಹರಿಯಲ್ಲಿ ಮೂಡಿಬಂದ ಅತ್ಯುತ್ತಮ ಕಾದಂಬರಿ

ಇತ್ತೀಚಿನ ದಿನಗಳಲ್ಲಿ ನಾನು ಓದಿದಂತಹ ಒಂದು ಅತ್ಯುತ್ತಮ ಸಂಶೋಧನಾತ್ಮಕ ಕೃತಿ.......ಪ್ರಾರಂಭದಿಂದ ಹಿಡಿದು ಕೊನೆಯ ತನಕವೂ ಕುತೂಹಲ ಕೆರಳಿಸುತ್ತಾ, ಜೊತೆಗೆ ಅತ್ಯುಪಯುಕ್ತ ಮಾಹಿತಿಗಳನ್ನುಕೂಡಾ ನೀಡುತ್ತಾ ಸಾಗಿದ ಕಾದಂಬರಿಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದೆ.

ಸಾಗರ, ಗೇರುಸೊಪ್ಪೆ,ಹೊನ್ನಾವರ, ಭಟ್ಕಳ, ಮುರುಡೇಶ್ವರ, ಗೇರುಸೊಪ್ಪೆಯ ನಗರಬಸದಿಕೇರಿಯ ಚತುರ್ಮುಖ ಬಸದಿ, ಅಳ್ಳಂಕಿಯ ಹೈಗುಂದ, ನೇತ್ರಾಣಿಗುಡ್ಡಗಳನ್ನು ಸುತ್ತಿ ಬಳಸಿಕೊಂಡು ಸಾಗುವ ಕಥೆ , ಗಣೇಶಯ್ಯನವರ ವಿಶಿಷ್ಟ ಶೈಲಿಯಲ್ಲಿ , ಅವರ ಹಿಂದಿನ ಕೃತಿಗಳಾದ " ಕನಕ ಮುಸುಕು" " ಕರಿಸಿರಿಯಾನ " ಕೃತಿಗಳಂತೇ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ,  ನಡುವೆ  ನಾವರಿಯದ ಸಂಶೋಧನಾತ್ಮಕ ವಿವರಗಳನ್ನು ನೀಡುತ್ತಾ, ಓದುಗರನ್ನು ಚಿಂತನೆಗೆ ಹಚ್ಚುತ್ತಾ ಸಾಗುತ್ತದೆ.
ಇದರ ಜೊತೆಗೆ " ಭೂತಗಳ ಅದ್ಭುತ ಜಗತ್ತಿನ" ತುಳುನಾಡ ಭೂತಗಳ ಬಗೆಗೆ ಸಂಶೋಧನೆ ನಡೆಸಿ ಖ್ಯಾತರಾದ ಡಾ.ಲಕ್ಷ್ಮಿ.ಜಿ ಪ್ರಸಾದ ( Lakshmi V ) ಅವರೂ ಕೂಡಾ ಕಥೆಯಲ್ಲಿ ಒಂದು ಪಾತ್ರವೇ ಆಗಿ ಓದುಗರಿಗೆ ಹಲವಾರು ವಿಷಯಗಳ ಬಗೆಗೆ ಪರಿಚಯಿಸುತ್ತಾ ಸಾಗುತ್ತಾರೆ. ಅವರ ಪಾತ್ರ ಚಿತ್ರಣವೂ ಕೂಡಾ ಕಥೆಯಲ್ಲಿ ಹಾಸುಹೊಕ್ಕಾಗಿ ಅದ್ಭುತವಾಗಿ ಮೂಡಿಬಂದಿದೆ.

ನಮ್ಮೂರಿನ ಬಗೆಗೆ ನಾವರಿಯದ ವಿವರಗಳ ವಿಶಿಷ್ಟ ಕೃತಿ... ಮನಸ್ಸಿಗೆ ಮುದ ನೀಡಿತು.

ಗಣೇಶಯ್ಯನವರ ಕೃತಿಗಳ ಬಗೆಗೆ ಹೇಳುವುದಕ್ಕಿಂತ ಅದನ್ನು ಓದಿಯೇ ಆಸ್ವಾದಿಸಬೇಕು.....

ಉತ್ತಮವಾದಂತಹ ಕೃತಿ......ಕೊಂಡು ಓದಿ.... !
- ಗಣೇಶ್ ಭಟ್
https://m.facebook.com/story.php?story_fbid=1356393794395471&id=100000745909480

Thursday, 25 January 2018

ಸಾವಿರದೊಂದು ಗುರಿಯೆಡೆಗೆ, ತುಳು ನಾಡ ದೈವಗಳು 421 ಮಾಪ್ಪಿಳ್ಳ ಚಾಮುಂಡಿ © ಡಾ.ಲಕ್ಷ್ಮೀ ಜಿ ಪ್ರಸಾದ



ಚಿತ್ರ ಕೃಪೆ: folkstudioin.blogspot. com

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 421 ಮಾಪ್ಪಿಳ್ಳ ಚಾಮುಂಡಿ © ಡಾ.ಲಕ್ಷ್ಮೀ ಜಿ ಪ್ರಸಾದ
ಮಾಪ್ಪಿಳ್ಳ ಚಾಮುಂಡಿ ಯನ್ನು ಕೋಲ್ತಾಯಿಲ್ ತರವಾಡು ಕುಟುಂಬದವರು ಕೋಲ ಕಟ್ಟಿಸಿ ಆರಾಧನೆ ಮಾಡುತ್ತಾರೆ.ಹೆಸರೇ ತಿಳಿಸುವಂತೆ ಈ ದೈವ ಮೂಲತಃ ಮುಸ್ಲಿ ಮಹಿಳೆ.
ದೈವಗಳು ಎದ್ದು ನಿಂತಾಗ ಗಮನಿಸದೆ ಗೌರವಿಸದೆ ಅವರಷ್ಟಕ್ಕೆ ಇದ್ದವರನ್ನು ದೈವಗಳು ಮಾಯಮಾಡಿ ತನ್ನ ಸೇರಿಗೆಗೆ ಸಲ್ಲಿಸುವ ವಿಚಾರ ತುಳು ನಾಡಿನ ಅನೇಕ ದೈವಗಳ ವೃತ್ತಾಂತಗಳಲ್ಲಿ ಇದೆ.ಭಾಗಮಂಡಲದಿಂದ ದೈವ ಬರುವಾಗ ದಾರಿಯಲ್ಲಿ ಬತ್ತ ಬಡಿಯುತ್ತಾ ಇದ್ದ ಮುಸ್ಲಿಂ ಮಹಿಳೆಯನ್ನು ತನ್ನ ಸೇರಿಗೆಗೆ ಸೇರಿಸಿಕೊಂಡ ಬಗ್ಗೆ ಮಾಪುಲ್ತಿ ಧೂಮಾವತಿ ದೈವದ ವೃತ್ತಾಂತದಿಂದ ತಿಳಿದು ಬರುತ್ತದೆ.ಅದೇ ರೀತಿಯಲ್ಲಿ ಉಳ್ಳಾಕುಲು ನೇಮವಾಗುವಾಗ ದಾರಿ ಬಿಡದ ತೊಟ್ಟಿಲು ಮಗುವನ್ನು ಕರೆದೊಯ್ಯುತ್ತಿದ್ದ ದಂಪತಿಗಳನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡ ಬಗ್ಗೆ ಮಾಪುಲೆ ಮಾಪುಲ್ತಿ ದೈವಗಳ ಬಗೆಗಿನ ಐತಿಹ್ಯದಿಂದ ತಿಳಿದುಬರುತ್ತದೆ.
ಅದೇ ರೀತಿಯ ಐತಿಹ್ಯ ಮಾಪ್ಪಿಳ್ಳ ಚಾಮುಂಡಿ ದೈವದ ಬಗ್ಗೆ ಪ್ರಚಲಿತವಿದೆ.
ಚಾಮುಂಡಿ ದೈವ ಎದ್ದು ನಿಂತು ಆವೇಶಕ್ಕೆ ಒಳಗಾಗಿದ್ದಾಗ ಓರ್ವ ಮುಸ್ಲಿಂ ಮಹಿಳೆ ಪ್ರಾರ್ಥನೆಗೆ ಕರೆ ಕೊಟ್ಟು ನಮಾಜ್ ಮಾಡುತ್ತಾಳೆ
ಆಗ ಅವಳ ಮೇಲೆ ದೃಷ್ಟಿ ಹಾಯಿಸಿದ ದೈವ ಅವಳನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸಂದಾಯ ಮಾಡಿಕೊಳ್ಳುತ್ತದೆ.ಅವಳು ಮುಂದೆ ದೈವತ್ವ  ಪಡೆದು ಮಾಪ್ಪಿಳ್ಳ ಚಾಮುಂಡಿ ಎಂಬ ಹೆಸರಿನಲ್ಲಿ ದೈವವಾಗಿ ಆರಾಧನೆ ಪಡೆಯುತ್ತಾಳೆ.ಈ ದೈವಕ್ಕೆ ಪ್ರತಿವರ್ಷ ತುಲಾಮಾಸದ ಹನ್ನೊಂದನೇ ದಿನ ರಾತ್ರಿ ಕೋಲ ನೀಡಿ ಆರಾಧಿಸುತ್ತಾರೆ
ಮಾಹಿತಿ ಮೂಲ-  ಹಿರಿಯರಾದ ಕುಂಞಿರಾಮನ್,ಎನ್ ಕೃಷ್ಣನ್  ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 419-420 ಮನದಲಾತ್ ಚಾಮುಂಡಿ ಮತ್ತು ಮುಕ್ರಿ ಪೋಕ್ಕೆರ್ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ

ಚಿತ್ರ ಕೃಪೆ: ಅಂತರ್ಜಾಲ
 ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 419-20 ಚಾಮುಂಡಿ ಮತ್ತು ಮುಕ್ರಿ ಪೋಕ್ಕೆರ್ ತೆಯ್ಯಂ © ಡಾ.ಲಕ್ಷ್ಮೀ ಜಿ ಪ್ರಸಾದ
ಕಾಸರಗೋಡು ಸಮೀಪದ ವೆಲ್ಲಿಕುಂಡ್ತ್ ನಲ್ಲಿ ಮಲ್ಲೊಮ್ ಕೊಲ್ಲೊತ್ ತರವಾಡು ಕುಟುಂಬದವರು ಮುಕ್ರಿ ಪೋಕ್ಕೆರ್ ತೆಯ್ಯಂ ಮತ್ತು ಚಾಮುಂಡಿ ದೈವವನ್ನು ಆರಾಧನೆ ಮಾಡುತ್ತಾರೆ.ಹೆಸರೇ ಸೂಚಿಸುವಂತೆ ಮುಕ್ರಿ ಪೋಕ್ಕೆರ್ ಮುಸ್ಲಿಂ ಮೂಲದ ದೈವತ.
ಸ್ಥಳೀಯ ಐತಿಹ್ಯದ ಪ್ರಕಾರ ಈತ ಒಂದು ನಾಯರ್ ಕುಟುಂಬದ ರಕ್ಷಕನಾಗಿರುವ ವ್ಯಕ್ತಿ. ಈತ ಓರ್ವ ಮಂತ್ರವಾದಿ ಕೂಡ.ಆತನಿಗೂ ಆ ನಾಯರ್ ಕುಟುಂಬದ ಓರ್ವ ಯುವತಿಗೂ ಪ್ರೇಮ ಉಂಟಾಗುತ್ತದೆ.ಇದನ್ನು ತಿಳಿದ ನಾಯರ್ ಕುಟುಂಬದ ಹಿರಿಯ ಈತನಿಗೆ ಗುಂಡಿಕ್ಕುತ್ತಾನೆ.ಆದರೂ ಆತ ಸಾಯುವುದಿಲ್ಲ.ನಂತರ ಆತನನ್ನು ಕತ್ತಿಯಿಂದ ಹೊಡೆಯುತ್ತಾರೆ.ಆಗಲೂ ಆತ ಸಾಯುವುದಿಲ್ಲ.ಆಗ ಆತನೇ ತನ್ನ ಕುತ್ತಿಗೆಯಲ್ಲಿರುವ ತಾಯಿತವನ್ನು ತೆಗೆಯಲು ಹೇಳುತ್ತಾನೆ.ಆ ತಸಯಿತದ ಕಾರಣದಿಂದ ಆತನಿಗೆ ಸಾವು ಬರುವುದಿಲ್ಲ. ಆತನನ್ನು ನೋವಿನಿಂದ ಪಾರು ಮಾಡುವ ಸಲುವಾಗಿ ಆತನ ಕುತ್ತಿಗೆಯಿಂದ ಮಾಂತ್ರಿಕ ಶಕ್ತಿ ಇರುವ ತಾಯಿತವನ್ನು ಬೇರ್ಪಡಿಸುತ್ತಾರೆ. ಆತ ಮರಣವನ್ನಪ್ಪಿ ನಂತರ ದೈವತ್ವವನ್ನು ಪಡೆಯುತ್ತಾನೆ.
ಆತನಿಗೆ ಗುಂಡಿಕ್ಕಿದ ನಾಯರ್ ಗೆ ಮತಿವಭ್ರಮಣೆಯಾಗುತ್ತದೆ.ಮನೆಯಲ್ಲಿ ನಾನಾವಿಧವಾದ ಉಪದ್ರಗಳು ಕಾಣಿಸಿಕೊಳ್ಳುತ್ತದೆ
ಆಗ ಅವರು ಜ್ಯೋತಿಷಿಗಳಲ್ಲಿ ಕೇಳಿದಾಗ ಆ ವ್ಯಕ್ತಿ ಮುಕ್ರಿ ಪೋಕ್ಕೆರ್ ದೈವವಾಗಿ ಉದಿಸಿರುವುದು ಕಂಡುಬರುತ್ತದೆ.ನಂತರ ಆತನಿಗೆ ಕೋಲ ಕೊಟ್ಟು ಆರಾಧನೆ ಮಾಡಿ ಸಂಪ್ರೀತಗೊಳಿಸುತ್ತಾರೆ.ಆತನನ್ನು ಪ್ರೀತಿಸಿದ ಯುವತಿಯನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ.ಆಕೆ ಕೂಡ ಮಾಯಕವಾಗಿ ಮುಕ್ರಿ ಪೋಕ್ಕೆರ್ ಜೊತೆಯಲ್ಲಿ ಸೇರಿಕೊಂಡು ದೈವವಾಗಿ ಆರಾಧನೆ ಪಡೆಯುತ್ತಾಳೆ.ಮುಕ್ರಿ ಪೋಕ್ಕೆರ್ ಜೊತೆಗೆ ಆರಾಧನೆ ಪಡೆಯುವ ಚಾಮುಂಡಿ ದೈವ ಈಕೆಯೇ ಎಂಬ ಅಭಿಪ್ರಾಯವಿದೆ.ಮಾಪ್ಪಿಳ್ಳೆ ತೆಯ್ಯಂ ಮತ್ತು ಮುಕ್ರಿ ಪೋಕ್ಕೆರ್ ದೈವ ಎರಡೂ ಒಂದೇ ಎಂಬ ಅಭಿಪ್ರಾಯವನ್ನು ಎನ್ ಕೃಷ್ಣನ್ ಮೊದಲಾದವರು ನೀಡಿದ್ದಾರೆ.
ಈ ದೈವ ಕೋಲದ ಸಂದರ್ಭದಲ್ಲಿ ಪ್ರಾರ್ಥನೆಗೆ ಕರೆ ಕೊಡುವ ( ಆಝಾನ್) ಸಂಪ್ರದಾಯವಿದೆ.ಈ ದೈವ ಬಿಳಿಯ ನಿಲುವಂಗಿ ಮತ್ತು ದಾರಿಯನ್ನು ತೊಟ್ಟು ಮಾನವ ಸಹಜ ಅಲಂಕಾರದಲ್ಲಿ ಇರುತ್ತದೆ.ತಲೆಗೆ ಮುಂಡಾಸು ಮತ್ತು ಮುಖದಲ್ಲಿ ಗಡ್ಡ ಇರುತ್ತದೆ.ಕಾಲಿಗೆ ಗಗ್ಗರ ಧಿರಿಸುತ್ತದೆ.
ಮಾಹಿತಿ ಮೂಲ-  ಹಿರಿಯರಾದ ಕುಂಞಿರಾಮನ್,ಎನ್ ಕೃಷ್ಣನ್  ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 418 ಅಗ್ನಿ ಕೊರತಿ © ಡಾ.ಲಕ್ಷ್ಮೀ ಜಿ ಪ್ರಸಾದ


‌ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 418 : ಅಗ್ನಿ ಕೊರತಿ
‌ಒಂದೆರಡು ವರ್ಷಗಳ ಹಿಂದೆ ಅಗ್ನಿ ಕೊರತಿ ದೈವದ ಫೋಟೋ ಕಳಹಿಸಿ ಈ ದೈವದ ಮಾಹಿತಿ ಇದೆಯೇ ಎಂದು ಸ್ನೇಹಿತರಾದ ಸಿಂಚನಾ ಶ್ಯಾಮ್ ಕೇಳಿದ್ದರು.ಅಗ್ನಿ ಕೊರತಿ ಓರ್ವ ಬೆಂಕಿಯಲ್ಲಿ ಆತ್ಮಾಹುತಿ ಮಾಡಿಕೊಂಡ ಸ್ತ್ರೀ ಎಂಬ ಐತಿಹ್ಯ ಸಿಕ್ಕಿತ್ತಾದರೂ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ.ತಿಂಗಳ ಮೊದಲು ಈ ಬಗ್ಗೆ ಅಭಿಲಾಷ್ ಚೌಟ ಅವರು ಸರಿಯಾದ ಮಾಹಿತಿ ನೀಡಿದರು.
‌ಹೆಸರು ಒಂದೇ ಇದ್ದರೂ ದೈವ ಒಂದೇ ಇರಬೇಕಾಗಿಲ್ಲ .ಅಗ್ನಿ ಕೊರತಿ ಕೊರತಿ ದೈವವಲ್ಲ .ಸಸಿಹಿತ್ತಿಲಿನಲ್ಲಿ ಗುಳಿಗನ ಜೊತೆ ಸೇರಿರುವ ದೈವವಿದು.ಗುಳಿಗನ ಜೊತೆ ಸೇರಿದ ಕಾರಣ ಅಗ್ನಿ ಗುಳಿಗನೆಂದು ಕೂಡ ಕರೆಯುತ್ತಾರೆ.
‌ಈ ದೈವದ ಹಿನ್ನೆಲೆಯಲ್ಲಿ ವರ್ಗ ಸಂಘರ್ಷದ ಸೂಚನೆ ಇರುವ ಕಥಾನಕ ಇದೆ
‌ಪೂಲ ಪೊಂಜೋವು ಮತ್ತು  ಗಾಳಿಭದ್ರ ದೇವರಿಗೆ ಸತ್ಯಭಾರಿ ಎಂಬ ಹೆಸರಿನ ಮಗಳಾಗಿ ಹುಟ್ಟುತ್ತಾಳೆ.ಹುಡುಗಿ ಹೋಗಿ ದೊಡ್ಡವಳಾದ ಶುದ್ಧ ನೀರಿಗಾಗಿ ಕಾಂತೇಶ್ವರ ದೇವಾಲಯಕ್ಕೆ ಬರುತ್ತಾಳೆ.ಅಲ್ಲಿ ಇಬ್ಬರು ಬ್ರಾಹ್ಮಣ ಬ್ರಹ್ಮಚಾರಿಗಳು ಅವಳನ್ನು ಅಟ್ಟಿಸಿಕೊಂಡು ಹಿಂಬಾಲಿಸಿ ಕೊಂಡು ಬರುತ್ತಾರೆ.ಆಗ ಅವಳು ಬೆಂಕಿಗೆ ಪ್ರವೇಶ ಮಾಡಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ.ನಂತರ ದೈವವಾಗಿ ಎದ್ದು ನಿಂತು ಮುಳಿಹಿತ್ತಿಲಿಗೆ ಹೋಗಿ ಭಗವತಿ ಸಾನ್ನಿಧ್ಯದಲ್ಲಿ ಅಗ್ನಿ ಕೊರತಿ/ ಅಗ್ನಿ ಗುಳಿಗನಾಗಿ ಆರಾಧನೆ ಪಡೆಯುತ್ತಾಳೆ. ಅಲ್ಲಿಂದ ಭಗವತಿಯೊಡನೆ ಬೇರೆಡೆಗೆ ಪ್ರಸರಣಗೊಳ್ಳುತ್ತಾಳೆ.
‌ಕುಂದಣ್ಣ ಉರೊಲಿ  ಎಂಬವರು ಅಗ್ನಿ ಕೊರತಿಯ ಉಪಾಸನೆ ಮಾಡಿತ್ತಾರೆ.ನಂತರ ಒಂದು ಗುತ್ತಿನ ಮನೆಯವರು ಕಳ್ಳ ಕಾಕರಿಂದ ರಕ್ಷಣೆ ಪಡೆಯುವ ಸಲುವಾಗಿ ಅಗ್ನಿ ಕೊರತಿಯನ್ನು ಕೇಳಿ ಕರೆದುಕೊಂಡು ಹೋಗಿ ಆರಾಧನೆ ಮಾಡುತ್ತಾರೆ.

‌ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಹೇಳುವುದಾದರೆ ಕೊರತಿ ಎಂಬ ಹೆಸರು ಜಾತಿ ಸೂಚಕವಾಗಿದ್ದು ಆಕೆ ಮೂಲತಃ ಕೊರಗ ಸಮುದಾಯಕ್ಕೆ ಸೇರಿದವಳು ಎಂಬುದನ್ನು ಸೂಚಿಸುತ್ತದೆ.
‌ವಿಧಿ ನಿಷೇಧ ಗಳು ಆದಿ ಮಾನವನ ಅಲಿಖಿತ ಶಾಸನಗಳಾಗಿದ್ದವು.
‌ಅಂತೆಯೇ ಕೊರಗ ಸಮುದಾಯದ ಹೆಣ್ಣು ಮಗಳು ಒಬ್ಬಳು ಶುದ್ಧವಾಗಲು ದೇವಾಲಯಕ್ಕೆ ಬರುವುದನ್ನು ಒಪ್ಪುವುದಿಲ್ಲ .ಹಾಗಾಗಿ ಅವಳನ್ನು ಅಲ್ಲಿ ಅಟ್ಟಿಸಿಕೊಂಡು ಹೋದಾಗ ಅವಳು ಅಗ್ನಿ ಪ್ರವೇಶಿಸಿ ದುರಂತವನ್ನಪ್ಪಿರಬಹುದು.ದುರಂತ ಮತ್ತು ದೈವತ್ವ ಒಟ್ಟೊಟ್ಟಿಗೆ ಸಾಗುವಂತೆ ಅವಳು ದೈವತ್ವ ಪಡೆದು ಆರಾಧನೆ ಹೊಂದಿರಬಹುದು.© ಡಾ.ಲಕ್ಷ್ಮೀ ಜಿ ಪ್ರಸಾದ
‌ಅಗ್ನಿಕೊರತಿ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಪ್ರೇರಣೆ ನೀಡಿದ  ಸಿಂಚನಾ ಶ್ಯಾಮ್ ಮತ್ತು ಮಾಹಿತಿ ನೀಡಿದ ಅಭಿಲಾಷ್ ಚೌಟರಿಗೆ ಕೃತಜ್ಣತೆಗಳು
‌ಚಿತ್ರ ಕೃಪೆ: ಧರ್ಮ ದೈವ

Tuesday, 23 January 2018

ಸಾವಿರದೊಂದು ಗುರಿಯೆಡೆಗೆ 417 ಮಾಪ್ಪಿಳ್ಳೆ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ




ಚಿತ್ರ ಕೃಪೆ : ಅಂತರ್ಜಾಲದ

ಸಾವಿರದೊಂದು ಗುರಿಯೆಡೆಗೆ 417
ಮಾಪ್ಫಿಳ್ಳೆ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ
ಕಳೆದ ಒಂದು ವಾರದಿಂದ ವಾಟ್ಸಪ್ ಹಾಗೂ ಪೇಸ್ ಬುಕ್ ಗಳಲ್ಲಿ  ಒಂದು ದೈವ ಇಬ್ಬರು ಮುಸ್ಲಿಂ ವೇಷಭೂಷಣ ಧರಿಸಿದ ಪಾತ್ರಿಗಳ ಜೊತೆ ಕೋಲಾಟವನ್ನು ಹೋಲುವ ಆಟ ಆಡುವ ವೀಡಿಯೋ ಹರಿದಾಡುತ್ತಾ ಇತ್ತು.ಇದು ಯಾವ ದೈವ ಎಂದು ಕೆಲವರು ನನ್ನಲ್ಲಿ ಕೇಳಿದ್ದರು.ಅದು ಮುಸ್ಲಿಂ ಮೂಲದ ದೈವ ಎಂದು ಊಹಿಸಿದ್ದೆನಾದರೂ ಯಾವ ದೈವ ಎಂದು ತಿಳಿದಿರಲಿಲ್ಲ. ಕೆಲವರು ಅದನ್ನು ಆಲಿ ಚಾಮುಂಡಿ ಎಂದಿದ್ದು ಅದು ಆಲಿ ಚಾಮುಂಡಿ ಅಲ್ಲ ಮುಕ್ರಿ ಪೋಕ್ಕನ್ನಾರ್/ ಪೋಕ್ಕೆರ್ ದೈವ ಇರಬಹುದು ಎಂದು ಊಹಿಸಿ ಹೇಳಿದ್ದೆ .ವಾಟ್ಸಪ್ ಗ್ರೂಪೊಂದರಲ್ಲಿ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಹಾಗೂ ತುಳುವೆರೆಂಕುಲು ಸಂಘದ ಗತ  ಕಾರ್ಯದರ್ಶಿ ಗಳಾದ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಲ್ಳೆ ತೆಯ್ಯಂ ಎಂದು ಹೆಸರಿಸಿದ್ದರು.ಆ ನಿಟ್ಟಿನಲ್ಲಿ ನಾನು ಮಾಹಿತಿ ಸಂಗ್ರಹಕ್ಕೆ ಶುರು ಮಾಡಿದೆ .ಆಗ ಕುಂಞಿ ರಾಮನ್ ಅವರು ಕೆಲ ಮಾಹಿತಿ ನೀಡಿದರುಅಂತರ್ಜಾಲದಲ್ಲೂ ಸ್ವಲ್ಪ  ಮಾಹಿತಿ ದೊರೆಯಿತು

ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ,ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದ ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ.ಹೀಗೆ ಆಲಿ ಚಾಮುಂಡಿ ಕೂಡಾ ಮಂತ್ರ ದೇವತೆಯ   ಆಗ್ರಹಕ್ಕೆ ತುತ್ತಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು ಆರಾಧಿಸಲ್ಪಡುವ ಭೂತ    



ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ ಅಂತ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ


 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ   ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ  ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವರು      © copy rights reserved(c)Dr.Laxmi g Prasad

 .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ ಜಾತಿ ಧರ್ಮದ ಮಿತಿ ಇಲ್ಲ. ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ  ,ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು . ರಾಮ ಶೆಟ್ಟಿ ಎಂಬ ವೀರ ಶೈವ  ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ,ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.   © copy rights reserved(c)Dr.Laxmi g Prasad

 ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ,ಬ್ಯಾರ್ದಿ ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು,ಮಾಪುಳ್ತಿ  ಧೂಮಾವತಿ  ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ  ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .

   ©
ಮಾಪ್ಪಿಳ್ಳೆ ದೈವ ಕೂಡ ಜಾತ ಧರ್ಮ ಮತಗಳನ್ನು ಮೀರಿದ ಶಕ್ತಿ


ಹೆಸರೇ ಸೂಚಿಸುವಂತೆ ಮಾಪ್ಫಿಳ್ಳೆ ದೈವ ಮುಸ್ಲಿಂ ಮೂಲದ ದೈವತ.ಕಾಸರಗೋಡು ಸುತ್ತ ಮುತ್ತ ಈ ದೈವಕ್ಕೆ ಆರಾಧನೆ ಇದೆ. ಮಾವಿಲ‌ ಸಮುದಾಯದವರು ಈ ದೈವವನ್ನು ಕಟ್ಟುತ್ತಾರೆ.
ಈ ದೈವ ಮೂಲತಃ ಕೋಯಿ ಮೊಹಮ್ಮದ್ ಎಂಬ ಮುಸ್ಲಿಂ ಸಮುದಾಯದ ಪರಿಸರ ಪ್ರೇಮಿ.ಅಲ್ಲಿ ಒಮ್ಮೆ ಮಲೆ ಚಾಮುಂಡಿ ಕೋಲವನ್ನು ಏರ್ಪಡಿಸುವ ಸಲುವಾಗಿ‌ ಮರವನ್ನು ಕಡಿಯಲು ಸಿದ್ಧತೆ ಮಾಡುತ್ತಾರೆ. ಆಗ ಕೋಯಿ ಮೊಹಮ್ಮದ್ ಮರ ಕಡಿಯದಂತೆ ತಡೆಯುತ್ತಾನೆ.ಆಗ ಆತ ಮಲೆ ಚಾಮುಂಡಿ ದೈವದ ಕೋಪಕ್ಕೆ ಪಾತ್ರನಾಗುತ್ತಾನೆ.ಅದರ ಪರಿಣಾಮವಾಗಿ ಆತನ ಮೇಲೆ‌ ಮರ ಬಿದ್ದು ಆತ ಮರಣವನ್ನಪ್ಪುತ್ತಾನೆ.ದೈವಗಳ ಅನುಗ್ರಹಕ್ಕೆ ಪಾತ್ರ ರಾದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ಅಂತೆಯೇ ದೈವಗಳ ಆಗ್ರಹಕ್ಕೆ ತುತ್ತಾದವರು ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ವಿದ್ಯಮಾನ ತುಳುನಾಡಿನ ಹಲವೆಡೆ ಕಾಣಿಸುತ್ತದೆ.ಆಲಿ ಭೂತ, ಅರಬ್ಬಿ ಭೂತ, ಜತ್ತಿಂಗ ಮೊದಲಾದವರು ಪ್ರಧಾನ ದೈವಗಳ ಕೋಪಕ್ಕೆ ಈಡಾಗಿ ಮಾಯಕವಾಗಿ ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ.ಹಾಗೆಯೇ ಕೋಯಿ ಮೊಹಮ್ಮದ್ ಕೂಡ ಮಲೆ ಚಾಮುಂಡಿ ದೈವದ ಸೇರಿಗೆ ದೈವವಾಗಿ ಮಾಪ್ಪಿಳ್ಳೆ ದೈವ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ.
ಅಲೌಕಿನ ನೆಲೆಯನ್ನು ಬಿಟ್ಟು ವಾಸ್ತವಿಕವಾಗಿ ಆಲೋಚಿಸುವಾಗ ಈತನಿಗೆ ಮತ್ತು ಮರ ಕಡಿಯುವವರ ನಡುವೆ ಸಂಘರ್ಷ ಉಂಟಾಗಿ ದುರಂತ‌ಮರಣಕ್ಕೀಡಾಗಿರಬಹುದು.ಅದಕ್ಕೆ ದೈವದ ಕಾರಣಿಕ ಸೇರಿರಬಹುದು, ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ವಿಶಿಷ್ಟತೆ ಆಗಿದೆ.ಅಂತೆಯೇ ದುರಂತವನ್ನಪ್ಪಿದ ಕೋಯಿ ಮೊಹಮ್ಮದ್ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಆತ ಮುಸ್ಲಿಂ ಸಮುದಾಯದ ವ್ಯಕ್ತಿ ಆಗಿದ್ದಾನೆ‌ .ಕಾಸರಗೋಡು ಪರಿಸರದ‌‌ ಮುಸ್ಲಿಮರನ್ನು ಮಾಪ್ಪಿಳ್ಳೆ ಎಂದು ಕರೆಯುತ್ತಾರೆ. ಆದ್ದರಿಂದ ಕೋಯಿ ಮುಹಮ್ಮದ್ ಮಾಪ್ಪಿಳ್ಳೆ ಎಂಬ ಹೆಸರಿನ ದೈವ ಆಗಿ ಆರಾಧನೆ ಪಡೆಯುತ್ತಾನೆ.ಈ ದೈವ ಮುಸ್ಲಿಮರಂತೆ ವೇಷಭೂಷಣ ಧರಿಸಿದ ದೈವ ಪಾತ್ರಿಗಳ ಜೊತೆಗೆ ಮಾಪಿಳ್ಳೆ ಕಳಿ ಎಂಬ ವಿಶಿಷ್ಟ ನೃತ್ಯವನ್ನು ಮಾಡುತ್ತದೆ
ಈ ಮಾಪಿಳ್ಳೆ ದೈವ ಮತ್ತು ಮುಕ್ರಿ ಪೋಕ್ಕರ್ ದೈವ ಎರಡೂ ಒಂದೇ ಎಂಬ ಅಭಿಪ್ರಾಯ ಇದೆ.ಆದರೆ ವೇಷ ಭೂಷಣ, ಕಥಾನಕ ,ಆರಾಧನೆಯ ತಾಣ ಎಲ್ಲವನ್ನೂ ಗಮನಿಸಿದಾಗ ಇವೆರಡೂ ಬೇರೆ ಬೇರೆ ದೈವಗಳು ಎಂದು ತಿಳಿದು ಬರುತ್ತದೆ
© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ -  ಹಿರಿಯರಾದ ಕುಂಞಿರಾಮನ್ ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1