Wednesday, 16 April 2014

ನನ್ನ ಮೊದಲ ಕೃತಿ –ಅರಿವಿನಂಗಳದ ಸುತ್ತ



 ನನ್ನ 20 ಕೃತಿಗಳಲ್ಲಿ ಮೊದಲಿನದ್ದು ಅರಿವಿನಂಗಳದ ಸುತ್ತ ಎಂಬ ಶೈಕ್ಷಣಿಕ ಬರಹಗಳ ಸಂಕಲನ .ಇದು 2006 ರಲ್ಲಿ ಪ್ರಕಟವಾಗಿದೆ.ವಿಜಯ ಕರ್ನಾಟಕ ,ಹೊಸ ದಿಗಂತ ಸೇರಿದಂತೆ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಶಿಕ್ಷಣ ಸಂಬಂಧಿ ಲೇಖನಗಳಲ್ಲಿ ಹದಿನೈದನ್ನು ಆಯ್ದು ಒಟ್ಟು ಮಾಡಿ “ಅರಿವಿನಂಗಳದ ಸುತ್ತ”ಕೃತಿಯಲ್ಲಿ ಪ್ರಕಟಿಸಲಾಗಿದೆ.

ಬರೆಯುವ ಓದುವ ಅಭಿನಯಿಸುವ ಉತ್ಸಾಹ ನನಗೆ ಚಿಕ್ಕಂದಿನಿಂದಲೂ ಇತ್ತು ,ನನ್ನ ನೇರ ನಡೆ, ನುಡಿ ,ವೇಗ ,ಅತ್ಯುತ್ಸಾಹ ಅನೇಕರಿಗೆ  ಅಹಂಕಾರ ಎನಿಸಿದ್ದೂ ಇದೆ!

ಯಾಕೆ ಹೀಗೆ ಅಂತ ನನಗೆ ಗೊತ್ತಾಗುತ್ತಿರಲಿಲ್ಲ !ಇತ್ತೀಚಿಗೆ ಒಂದೊಂದೇ ಬದುಕಿನ ಸತ್ಯಗಳು ಅರಿವಾಗ ತೊಡಗಿವೆ !!ಬೇರೆಯವರ ಗೆಲುವನ್ನು ತಮ್ಮ ಸೋಲು ಎಂದು ಭಾವಿಸುವ ಅನೇಕ ಮಂದಿ ಇದ್ದಾರೆ.ಇಂಥವರಿಂದ ಮುಂದೆ ಸಾಗುವ ಉತ್ಸಾಹ ಇರುವ ನನ್ನಂಥವರಿಗೆ ಸಮಸ್ಯೆಗಳು ಎದುರಾಗುತ್ತವೆ .ಆದರೆ ಬರೆಯದೆ ಇರಲು ನನಗೆ ಸಾಧ್ಯವಾಗುತ್ತಿಲ್ಲ! .

ಸುತ್ತುಮುತ್ತಲಿನ ಆನೇಕ  ವಿಚಾರಗಳು ಮನಸ್ಸಿಗೆ ತೀರಾ ತಟ್ಟಿದಾಗ ನನಗೆ ಬರೆಯುವ ಹುರುಪು ಹುಟ್ಟುತ್ತದೆ .ನಾನು ವರ್ಷದಿಂದ ಸುಮಾರು 18 ವರ್ಷಗಳಿಂದ (1996 ನೇ ಇಸವಿಯಿಂದ ) ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ .

ಪ್ರಾಥಮಿಕ ಶಾಲೆಯಿಂದ ಆರಂಭಿಸಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜ್ ,ಪದವಿ ಕಾಲೇಜ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ .ಸ್ವಲ್ಪ ಸಮಯ ಪ್ರಾಂಶುಪಾಲೆಯಾಗಿಯೂ ಕಾರ್ಯ ನಿರ್ವಹಿಸಿದ್ದೇನೆ .
ಈ ಎಲ್ಲ ಸಂದರ್ಭಗಳಲ್ಲಿ ನಾನು ನೋಡಿದ ,ಮನಸಿಗೆ ತಾಗಿದ ವಿಚಾರಗಳನ್ನು ಪತ್ರಿಕೆಗಳಿಗೆ ಬರೆಯ ತೊಡಗಿದೆ.

ನನ್ನ ಮೊದಲ ಪ್ರಕಟಿತ ಲೇಖನ “ನಿಮಗೆಂಥ ಶಿಕ್ಷಕರು ಬೇಕು ?” ಇದು 05 ಸೆಪ್ಟೆಂಬರ್ 2001 ರಂದು ಶಿಕ್ಷಕ ದಿನಾಚರಣೆಯಂದು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಲೇಖನ ಬರೆಯಲು ,ಪತ್ರಿಕೆಗಳಿಗೆ ಕಳುಹಿಸಲು ಪ್ರೋತ್ಸಾಹ ನೀಡಿದವರು ನಾನು ಆಗ ಕೆಲಸ ಮಾಡುತ್ತಿದ್ದ ಚಿನ್ಮಯ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ ಸಾಂತ್ರಾಯ ಹಾಗೂ ಹಿರಿಯ ಸಹೋದ್ಯೋಗಿಗಳಾಗಿದ್ದ ಶ್ರೀಮತಿ ಅರುಣಾ ,ಶ್ರೀಮತಿ ಶೈಲಜಾ ,ಶ್ರೀಮತಿ ಲೇನೆಟ್ ಮೊದಲಾದವರು.
ನಾವೆಲ್ಲಾ ಒಂದೇ ದೋಣಿಯ ಪಯಣಿಗರಾಗಿದ್ದೆವು!ತಲೆಗೆಳೆದರೆ ಕಾಲಿಗೆ ಬರುವುದಿಲ್ಲ ,ಕಾಲಿಗೆಳೆದರೆ ತಲೆಗೆ ಬರುವುದಿಲ್ಲ ಎಂಬ ಪರಿಸ್ಥಿತಿ ಎಲ್ಲರದ್ದು !ಆದರೆ ನಾವಿಲ್ಲಿ ಅತ್ಯಂತ ಸಂತಸದಿಂದ ಇದ್ದೆವು ಹೇಳುದು ಕೂಡಾ ನನಗೆ ಸ್ಮರಣೀಯ ವಿಚಾರ

ಇದೊಂದು ಅನೇಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಅವರು ನೀಡಿದ ಉತ್ತರಗಳನ್ನು ಪ್ರಸಕ್ತ ಸಂದರ್ಭದ ಎದುರು ಇಟ್ಟುಕೊಂಡು ವಿವೇಚಿಸಿದ ಲೇಖನ .ಅನೇಕ ವಿದ್ಯಾರ್ಥಿಗಳು “ನಮಗೆ ನಗು ನಗುತ್ತ ಹಸನ್ಮುಖಿಗಳಾಗಿರುವ ಶಿಕ್ಷಕರು ಬೇಕು ಎಂದು ಹೇಳಿದ್ದರು .
ಶಿಕ್ಷಕರಿಂದ ತಾಳ್ಮೆ ,ನಗುಮುಖ ,ಸ್ನೇಹ ,ಪ್ರೀತಿ ,ನಿಸ್ಪಕ್ಷಪಾತ ದೃಷ್ಟಿ ಗಳೇ ಮೊದಲಾದ ಗುಣಗಳನ್ನು ವಿದ್ಯಾರ್ಥಿಗಳು ನಿ ರೀಕ್ಷಿಸುತ್ತಾರೆ.

ಹೌದು ವಿದ್ಯಾರ್ಥಿಗಳು ಹಾಗೆ ಬಯಸುವುದರಲ್ಲಿ ತಪ್ಪಿಲ್ಲ ,ಶಿಕ್ಷಕ ಹಾಗೆ ಇರಬೇಕಾದ್ದು ಕೂಡಾ .
ಒಳ್ಳೆಯ ಮತ್ತು ಕೆಟ್ಟ ಶಿಕ್ಷಕರ ಗುಣಾವಗುಣಗಳನ್ನು ಚರ್ಚಿಸುತ್ತಾ “ಸರಿಯಾಗಿ ವೇತನ ಸೌಲಭ್ಯಗಳು ಇಲ್ಲದೆ ಇದ್ದಾಗ ಅತ್ಯಧಿಕ ಕೆಲಸದ ಒತ್ತಡ ಹಾಕಿದಾಗ ಇಂಥ ಒಳ್ಳೆಯ ಗುಣಗಳು ಶಿಕ್ಷಕರಲ್ಲಿ ಇರಲು ಸಾಧ್ಯವೇ’ ಎಂಬ ಪ್ರಶ್ನೆಯನ್ನು ಈ ಲೇಖನದಲ್ಲಿ ಎತ್ತಿದೆ.ಈ ಪ್ರಶ್ನೆಗೆ ಅಂದು ಮಾತ್ರವಲ್ಲ ಇಂದಿಗೂ ಉತ್ತರ ಸಿಕ್ಕಿಲ್ಲ

ಇಲ್ಲಿ ನಾನು ಹೇಳ ಹೊರಟಿದ್ದು ಆನುದಾನ ರಹಿತ ಶಾಲೆಯ ಶಿಕ್ಷಕರ ಬಗ್ಗೆ .ಅನುದಾನ ರಹಿತ ಶಾಲೆಗಳು ಲಕ್ಷಗಟ್ಟಲೆ ಡೊನೇಷನ್ ಶುಲ್ಕ ವನ್ನು ವಿದ್ಯಾರ್ಥಿಗಳ ಹೆತ್ತವರಿಂದ ಪಡೆಯುತ್ತವೆ.ಆದರೆ ಶಿಕ್ಷಕರಿಗೆ ಮಾತ್ರ ಒಳ್ಳೆಯ ವೇತನ ಹಾಗೂ ಇತರ ಸೌಲಭ್ಯಗಳನ್ನು ಕೊಡುವುದಿಲ್ಲ .ಅನುದಾನ ರಹಿತ ಶಿಕ್ಷಣ ಸಂಸ್ಥೆ ತೆರೆಯುವ ಮುನ ಅನುಮತಿ ಪಡೆಯುವಾಗ 

ಸರಕಾರೀ ನಿಯಮದಂತೆ ಶಿಕ್ಷಕರಿಗೆ ಎಲ್ಲ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಟ್ಟಿರುತ್ತವೆ.ಆದರೆ ಅದು ಕಾರ್ಯ ರೂಪಕ್ಕೆ ಬರುವುದೇ ಇಲ್ಲ ! ಈ ಬಗ್ಗೆ ಅನುಮತಿ ಕೊಟ್ಟ ಸರಕಾರ ಯೋಚಿಸುವುದಿಲ್ಲ .ಶಿಕ್ಷಕರಿಗೆ ಪ್ರಶ್ನಿಸಲು ಧೈರ್ಯ ಇರುವುದಿಲ್ಲ !ಉಸಿರೆತ್ತಿದರೆ ಕೆಲಸದಿಂದ ತೆಗೆದು ಹಾಕಿದರೂ ಹಾಕಬಹುದು!ಹೇಳಲಾಗುವುದಿಲ್ಲ!
ಇನ್ನು  ಡೊನೇಷನ್ ಕೊಡುವ ಹೆತ್ತವರು ಇದು ನಮ್ಮ ಸಮಸ್ಯೆ ಅಲ್ಲ ಎಂಬಂತೆ ಸುಮ್ಮನಿರುತ್ತಾರೆ.ಇದರಿಂದಾಗಿ ಇಂದು ಶಿಕ್ಷಕರಾಗಲು ಪ್ರತಿಭಾವಂತರು ಮುಂದೆ ಬರುತ್ತಿಲ್ಲ .ಸರಕಾರೀ ಕೆಲಸ ಸಿಕ್ಕರೆ ಆಯಿತು !ಸಿಗದಿದ್ದರೆ ಇವರು ಜೀವನ ಇಡೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಜೀತದಾಳುಗಳಂತೆ ದುಡಿಯಬೇಕಾಗುತ್ತದೆ !ಪ್ರತಿಭಾವಂತರು ಶಿಕ್ಷಣ ಕ್ಷೇತ್ರಕ್ಕೆ ಬಾರದೆ ಇದ್ದಾಗ ಶಿಕ್ಷಣದ ಗುಣ ಮತ್ತ ತೀವ್ರವಾಗಿ ಕುಸಿಯುತ್ತದೆ.ಇದರಿಂದಾಗಿ ಪೋರ್ಶನ್ ಕವರ್ ಮಾಡುವ ಶಿಕ್ಷಕರು ಎಲ್ಲೆಡೆ ಸೃಷ್ಟಿಯಾಗುತ್ತಿದ್ದಾರೆ.

ಪ್ರೌಢ ಶಾಲಾ ಶಿಕ್ಷಕರಿಗೆ  ವಾರಕ್ಕೆ 26-27 ಅವಧಿಗಳನ್ನು ಸರಕಾರ ನಿಗಧಿ ಪಡಿಸಿದೆ.ಆದರೆ ಖಾಸಗಿ ಶಾಲೆಗಳಲ್ಲಿ ವಾರಕ್ಕೆ 36-38 ಅವಧಿ ಪಾಠ ಮಾಡಬೇಕಾಗುತ್ತದೆ !ಅನಂತರ ಮೌಲ್ಯ ಮಾಪನ ಸೇರಿದಂತೆ ಇತರ ಕಾರ್ಯಗಳನ್ನು ಮನೆಗೆ ತಂದು ಮಾಡಬೇಕಾಗುತ್ತದೆ.ಈ ರೀತಿಯ ಅತಿಯಾದ ದುಡಿತದಿಂದಾಗಿ ಶಿಕ್ಷಕರು ಧ್ವನಿ ಸಂಬಂಧಿತ ಹಾಗೂ ಇತ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ !
ಇಂಥ ವಿಚಾರಗಳನ್ನು ನಿಮಗೆಂಥ ಶಿಕ್ಷಕರು ಬೇಕು ?ಲೇಖನದಲ್ಲಿ ಚರ್ಚಿಸಲಾಗಿದೆ .

“ದಡವರಿಯದ ಅಲೆಗಳು “ ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದೆ ಸಾವಿನತ್ತ ಮುಖ ಮಾಡುತ್ತಿರುವ ಯಾವ ಜನಾಂಗದ ಬಗ್ಗೆ ,ಅವರಿಗೆ ದೊರೆಯಬೇಕಾದ ಸೂಕ್ತ ಸಾಂತ್ವನ ಮಾರ್ಗ ದರ್ಶನದ ಬಗ್ಗೆ ಚರ್ಚಿಸಿದ ಬರಹ .

ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಬಹು ಚರ್ಚಿತ ಬರಹ ,ಅಕ್ಕ ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ ,ತಮಿಳ್ ನಾಡು ,ಕೇರಳಗಳಲ್ಲಿ ಅವರವರ ರಾಜ್ಯ ಭಾಷೆಗಳಲ್ಲಿ ಪದವಿ ಪೂರ್ವ ಶಿಕ್ಷಣ ದೊರೆಯುತ್ತದೆ .ಇಲ್ಲಿ ವಿಜ್ಞಾನ ಶಿಕ್ಷಣ ಕೂಡಾ ಅವರ ಭಾಷೆಯಲ್ಲಿಯೇ ಇರುತ್ತದೆ.ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ವಿಜ್ಞಾನ ಶಿಕ್ಷಣ ಕನ್ನಡದಲ್ಲಿ ಸಿಗುತ್ತಿಲ್ಲ ಇದರಿಂದಾಗಿ ಗ್ರಾಮೀಣ ಕನ್ನಡ ಮಾಧ್ಯಮದ ಮಕ್ಕಳು ಉನ್ನತ ವಿಜ್ಞಾನ ಶಿಕ್ಷಣದಿಂದ  ವಂಚಿತರಾಗುವ ಬಗ್ಗೆ ಚರ್ಚಿಸಿದೆ .ಹತ್ತನೇ ತರಗತಿಯಲ್ಲಿ ವಿಜ್ಞಾದಲ್ಲಿ ಅತ್ಯುತ್ತಮ ಅಂಕ ಗಳಿಸುವ ಕನ್ನಡ ಮಾಧ್ಯಮದ ಅನೇಕ ಮಕ್ಕಳು ಪಿಯು ನಲ್ಲಿ ವಿಜ್ಞಾನದಲ್ಲಿ ಅನುತ್ತೀರ್ಣರಾಗುವುದು ಎಲ್ಲೆಡೆ ಕಾಣಿಸುತ್ತಿದೆ.ಇದಕ್ಕೆ ಇಂಗ್ಲಿಷ್ ಭಾಷೆಯ ತೊಡಕು ಕಾರಣವಾಗಿದೆ .ಈ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಈ ಲೇಖನದ ನಂತರ ಹಂಪಿ ವಿಶ್ವ ವಿದ್ಯಾಲಯವು ಕನ್ನಡ ಮಾಧ್ಯಮದಲ್ಲಿ ಪಿಯು ವಿಜ್ಞಾನದ ಪಾಠ ಪುಸ್ತಕವನ್ನು ಹೊರ ತಂದಿತಾದರೂ ಇದನ್ನು ಇಂಗ್ಲಿಷ್ ಭ್ರಮೆಯ ಖಾಸಗಿ ಕಾಲೇಜ್ ಗಳು ಬಿಡಿ !ಸರ್ಕಾರಿ ಕಾಲೇಜ್ ಗಳ ಅಧ್ಯಾಪಕರುಗಳಲ್ಲಿ  ನೋಡಿದವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ ಅಷ್ಟೇ !

ಇದರಲ್ಲಿನ ಒಂದು ಮಹತ್ವದ ಲೇಖನ “ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ “ ಇಂದಿಗೂ ಅತ್ಯಂತ ಪ್ರಸ್ತುತವಾಗಿಯೇ ಇದೆ.ಹೆಚ್ಚಿನ ಮೆಡಿಕಲ್ ಕಾಲೇಜ್ ಗಳು ಖಾಸಗಿ ಹಿಡಿತದಲ್ಲಿವೆ.ಇವು ಸರಕಾರಕ್ಕೆ ಕೊಡುವ ಸೀಟ್ಗಳು ತೀರ ಕಡಿಮೆ ,ಸಾಮಾನ್ಯ ವರ್ಗದ ಖಾಸಗಿ ಕಾಲೇಜ್ಗಳು 30 % ಅಲ್ಪ ಸಂಖ್ಯಾತರ ಕಾಲೇಜ್ 20% ಸೀಟ್ ಗಳನ್ನು ಸರಕಾರಕ್ಕೆ ಬಿಟ್ಟುಕೊಡಬೇಕು ಎನ್ನುವ ನಿಯma ಇದೆ .ಆದರೆ ಅದನ್ನೂ ಸರಿಯಾಗಿ ಕೊಡುತ್ತಿಲ್ಲ .ಯಾವುದಾದರೂ ಬೇಡಿಕೆ ಇಲ್ಲದ ಪಾರಾ ಮೆಡಿಕಲ್ ಸೀಟ್ ಅನ್ನು ಕೊಟ್ಟು ಕಣ್ಣೋರಸುವ ನಾಟಕ ಮಾಡುತ್ತಿವೆ .ಬಹಳ ಬೇಡಿಕೆಯ ಜೆನರಲ್ ಮೆಡಿಸಿನ್ ,ಒಪ್ತೊಮಾಲಜಿ ,ಹಾರ್ಟ್ ಸರ್ಜರಿ ಮೊದಲಾದ ಬೇಡಿಕೆ ಇರುವ ಮಹತ್ವದ ವಿಭಾಗಗಳಲ್ಲಿ ಪ್ರತಿಭಾವಂತರಿಗೆ ಅವಕಾಶವೇ ಸಿಗುವುದಿಲ್ಲ !

ಎಲ್ಲ ಸೀಟ್ ಗಳು ಉಳ್ಳವರ ಪಾಲಾಗುತ್ತದೆ.ಮತ್ತು ಇದನ್ನು ಪಡೆಯುದಕ್ಕಾಗಿ ಕೋಟಿಗಟ್ಟಲೆ ದುಡ್ಡು ಕೊಡಬೇಕಾಗುತ್ತದೆ .ಕೋಟಿಗಟ್ಟಲೆ ಖರ್ಚು ಮಾಡಿದ ನಂತರ ಅದನ್ನು ಹಿಂದೆ ಪಡೆಯಲು ವೈದ್ಯರುಗಳು ಅಡ್ಡದಾರಿಯನ್ನು ಹಿಡಿಯುವುದು ಅನಿವಾರ್ಯವಾಗುತ್ತದೆ ಎಂಬಿತ್ಯಾದಿ ವಿಚಾರಗಳನ್ನಿಲ್ಲಿ ಚರ್ಚಿಸಿದೆ.

ಪರೀಕ್ಷೆಗಳು ಬರುತ್ತಿವೆ ,ಆರಂಭಿಕ ಹಂತದಲ್ಲಿ ಇಂಗ್ಲಿಷ್ ಶಿಕ್ಷಣ,ಶಿಕ್ಷಕ ಈಗ ಲಾಟರಿ ಮಾರಾಟಗಾರ ,ಮಕ್ಕಳ ಗಣತಿ ಶಿಕ್ಷಕರಿಗೆ ತಿಥಿ ಇತ್ಯಾದಿ ಹದಿನೈದು  ಸಕಾಲಿಕ ಬರಹಗಳು ಈ ಕೃತಿಯಲ್ಲಿವೆ.ಇದರಲ್ಲಿನ ಎಲ್ಲ ಶೈಕ್ಷಣಿಕ ಲೇಖನಗಳೂ ವಿಜಯ ಕರ್ನಾಟಕ ,ಹೊಸದಿಗಂತ ಮತ್ತು ಮಂಗಳ ಪತ್ರಿಕೆಗಳಲ್ಲಿ ಪ್ರಕಟವಾದವುಗಳೇ ಆಗಿವೆ .ಈ ಚಿಂತನೆಗಳು ಇಂದಿಗೂ ಪ್ರಸ್ತುತವೇ ಆಗಿವೆ ಕೂಡಾ 

ಮೊದಲ ಕೃತಿ ಪ್ರಕಟಣೆಯ ಸಂಭ್ರಮದ ಜೊತೆಗೆ ಪ್ರಕಟಣೆಯ ಒಳ ಹೊರಗಿನ ತುಸು ಪರಿಚಯ ಇಲ್ಲಿ ಆಯಿತು!ಪುಸ್ತಕ ಪ್ರಕಟಣೆ ಸೇರಿದಂತೆ ನಮ್ಮ ಯಾವುದೇ ಕಾರ್ಯಕ್ಕೂ ಎಲ್ಲಿಂದಲೂ ಬೆಂಬಲ ಸಿಗುವುದಿಲ್ಲ .ನಮ್ಮ ಅಸ್ತಿತ್ವಕ್ಕಾಗಿ ನಾವೇ ಹೋರಾಡ ಬೇಕು,"ನಮ್ಮ ತಲೆಗೆ ನಮ್ಮ ಕೈ  ಎನ್ನುವ ಜೀವನದ ಮೊದಲ ಪಾಠ ಕೂಡಾ ನನಗೆ ಜೊತೆಯಲ್ಲಿಯೇ ದೊರೆಯಿತು !.

No comments:

Post a Comment