ಇಂದು ಸ್ವಾತಂತ್ರೋತ್ಸವ ನಿಮಿತ್ತ ಚಂದ್ರ ಲೇ ಔಟ್ ನ ವಿಶ್ವ ಚೇತನ ಪ್ರೌಢ ಶಾಲೆಯ ಎಂಟನೇ ತರಗತಿಯ ಮಕ್ಕಳು ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ರಚಿಸಿ ಅಭಿನಯಿಸಿ ಬಹುಮಾನ ಗಿಟ್ಟಿಸಿಕೊಂಡ ಸುಬ್ಬಿ ಇಂಗ್ಲಿಷು ಕಲ್ತದು ನಾಟಕವನ್ನು ಅಭಿನಯಿಸಿದರು .ಎಳೆಯ ಮಕ್ಕಳಾದರೂ ಪ್ರೌಢ ಅಭಿನಯ ನೀಡಿದ್ದು ನೋಡಿ ತುಂಬಾ ಕುಶಿ ಆಯಿತು
ನನ್ನ ಬಾಲ್ಯದ ನೆನಪು ನನ್ನ ಕಣ್ಣಿಗೆ ಕಟ್ಟಿ ಬಂತು .ನಾನು ಈ ನಾಟಕವನ್ನು ರಚಿಸಿ ಅಭಿನಯಿಸಿದಾಗ ಈ ಮಕ್ಕಳ ವಯಸ್ಸು ನನಗೆ ಆಗ ..
ನಾವು ಹೇಗೆ ಅಭಿನಯಿಸಿದ್ದೆವು ಹೇಳುವುದು ನನಗೆ ಈಗಲೂ ನೆನಪಿದೆ .
ಸುಬ್ಬಿ ಪಾತ್ರವನ್ನು ನನ್ನ ಸ್ನೇಹಿತೆ ಶೋಭಾ ಮಾಡಲು ತಯಾರಾಗಿದ್ದಳು ನಾನು ಸುಬ್ಬನ ಪಾತ್ರ ವಹಿಸಿದ್ದೆ ಇನ್ನೊಬ್ಬ ಸ್ನೇಹಿತೆ ಹೇಮಾವತಿ ಸ್ನೇಹಿತನ ಪಾತ್ರವಹಿಸಲು ಸಿದ್ಧವಾಗಿದ್ದಳು.
ನಾಟಕ ಸ್ಪರ್ಧೆಗೆ ಎರಡು ದಿವಸ ಇರುವಾಗ ಸುಬ್ಬಿ ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಗೆಳತಿ ಶೋಭಾಳಿಗೆ ಜ್ವರ ಬಂದು ಮೈಯಲ್ಲಿ ಬಿತ್ತು.ಆಗ ಏನು ಮಾಡುವುದು ಎಂದು ದಿಗಿಲಾಯಿತು .
ಅದೃಷ್ಟವಶಾತ್ ನಾಟಕ ಅಭ್ಯಾಸ ಮಾಡುವಾಗ ಕೇಳಿ ಕೇಳಿ ಹೇಮಾವತಿಗೆ ಸುಬ್ಬಿ ಪಾತ್ರದ ಎಲ್ಲ ಸಂಭಾಷಣೆ ಬಾಯಿ ಪಾಠ ಆಗಿತ್ತು .ಹಾಗಾಗಿ ಹೇಮಾವತಿ ಗೆ ಸುಬ್ಬಿ ಪಾತ್ರ ಕೊಟ್ಟು ತ್ರಿವೇಣಿ ಮತ್ತು ಇನ್ನೊಬ್ಬಳನ್ನು (ಹೆಸರು ಮರೆತು ಹೋಗಿದೆ ) ಸ್ನೇಹಿತರ ಪಾತ್ರಕ್ಕೆ ತಯಾರು ಮಾಡಿದೆ.
ಇಲ್ಲೆಲ್ಲಾ ಅಭಿನಯ ತರಬೇತಿಯನ್ನು ನಾವು ಶಿಕ್ಷಕರ ಸಹಾಯವಿಲ್ಲದೆ ನಾವು ನಾವೇ ಮಾಡಿಕೊಂಡಿದ್ದೆವು
ಇಬ್ಬರು ಸ್ನೇಹಿತರು ಮನೆಗೆ ಬಂದಾಗ ಕುಳಿತುಕೊಳ್ಳಲು ಅಲ್ಲಿ ಒಂದೇ ಕುರ್ಚಿ ಇತ್ತು .ಸುಬ್ಬಿಯ ಗಂಡನ ಪಾತ್ರ ವಹಿಸಿದ್ದ ನಾನು ಆ ಸ್ನೇಹಿತರನ್ನು welcome my friends welcome please be seated ಎಂದಾಗ ಅವರಿಬ್ಬರೂ ಒಂದೇ ಕುರ್ಚಿಯಲ್ಲಿ ಕುಳಿತರು .ಸಭೆ ಇಡೀ ಗೊಳ್ಳನೆ ನಕ್ಕಾಗ ಇವರಿಗೆ ಏಳಲು ಆಗುತ್ತಾ ಇಲ್ಲ .ಇಬ್ಬರು ಕುಳಿತಾಗ ಕುರ್ಚಿ ಅಷ್ಟು ಬಿಗಿಯಾಗಿತ್ತು .ಅಲ್ಲಿಂದ ಅವರು ನಗಾಡುತ್ತಿದ್ದರು ಬೇರೆ !
ನನಗೆ ಏನು ಮಾಡುವುದು ಅಂತ ಆ ಕ್ಷಣಕ್ಕೆ ಗೊತ್ತಾಗಲಿಲ್ಲ ನಾಟಕ ಹಾಳಾದ ಸಿಟ್ಟು,ಏನೂ ಮಾಡಲಾಗದ ಅಸಹಾಯಕತೆ ,ದುಃಖ ಜೊತೆಗೆ ಅವರ ಪರಿಸ್ಥಿತಿ ನೋಡಿ ಅದರೆಡೆಯಲ್ಲಿಯೂ ನಗು !
.ಆದರೂ ಕುರ್ಚಿಯನ್ನು ಹಿಂದಿನಿಂದ ಹಿಡಿದು ಇಬ್ಬರ ಬೆನ್ನಿಗೂ ಕುಟ್ಟಿ ಎಬ್ಬಿಸಿದೆ !
ಅಂತೂ ಇಂತೂ ನಾಟಕ ಮುಂದುವರಿದು ಪ್ರಥಮ ಬಹುಮಾನ ಸ್ವೀಕರಿಸುವಾಗ ನಮ್ಮಗಳ ಸಂತಸ ಮೇರೆ ಮೀರಿತ್ತು !
ಬಹುಮಾನ ವಿತರಿಸಿ ಶುಭ ನುಡಿದ ಹಿಂದಿ ಶಿಕ್ಷಕರಾದ ವಿಶ್ವೇಶ್ವರ ಭಟ್ ಅವರು ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ ಎಂದಾಗ ನನಗೆ ಸ್ವರ್ಗಕ್ಕೆ ಮೂರು ಗೇಣು ಮಾತ್ರ ಇತ್ತು !
ವಿಶ್ವ ಚೇತನ ಶಾಲೆಯ ಮಕ್ಕಳು ಅಭಿನಯಿಸಿದ ಸುಬ್ಬಿ ಇಂಗ್ಲೀಷು ಕಲ್ತದು ನಾಟಕದ ದೃಶ್ಯಗಳು
No comments:
Post a Comment