ಕೇಂಜ ಗರೋಡಿ:ಚಿತ್ರ ಕೃಪೆ :ತುಳುನಾಡಿನ ಗರೋಡಿಗಳು
ದೇವಸ್ಥಾನ ,ದೈವಸ್ಥಾನ ಗಳನ್ನ ಕಟ್ಟಿಸಿದವರು, ದೈವಗಳನ್ನು ನೆಲೆಗೊಳಿಸಲು ಕಾರಣರಾದವರು ,ದೈವಗಳ ಅನನ್ಯ ಭಕ್ತರು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನಾದ್ಯಂತ ಅಲ್ಲಲ್ಲಿ ಕಂಡು ಬರುವ ವಿಶಿಷ್ಟ ವಿಚಾರವಾಗಿದೆ .
ಹಿರಿಯಡಕದಲ್ಲಿ ವೀರ ಭದ್ರ ನನ್ನು ನೆಲೆ ಗೊಳಿಸಿದ ಅದ್ಕತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವತ್ವ ಪಡೆದು ಆರಾಧಿಸಲ್ಪದುತ್ತಿದ್ದಾನೆ .ಬದಿಯಡ್ಕ ಸಮೀಪದ ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಕಾರಿನ್ಜತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವವಾಗಿ ನೆಲೆ ಗೊಂಡಿದ್ದಾನೆ. ಮಣಿಕ್ಕರದಲ್ಲಿ ವಿಷ್ಣು ಮೂರ್ತಿಯ ದೇವಾಲಯ ಕಟ್ಟಿಸಿದ ಪಾಲ್ತಾಡು ಬೀಡಿನ ಅಚ್ಚು ಬಂಗೆತಿ ದೈವತ್ವವನ್ನು ಪಡೆದಿದ್ದಾಳೆ .
ಅಂತೆಯೇ ಉಡುಪಿ ತಾಲೂಕಿನ ಕುತ್ಯಾರು ಕೇಂಜದಲ್ಲಿ ಕೋಟಿ ಚೆನ್ನಯರ ಗರೋಡಿ ಸ್ಥಾಪನೆಗೆ ಕಾರಣ ಕರ್ತರಾದ ಮೈಂದ ಪೂಜಾರಿ ದೈವತ್ವ ಪಡೆದು ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ಆರಾಧನೆ ಹೊಂದುವ ವಿಚಾರ ಅಲ್ಲಿನ ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ.
ಕೋಟಿ ಚೆನ್ನಯರು ತಮ್ಮ ಕಾರಣಿಕ ತೋರುವುದಕ್ಕಾಗಿ ಕುತ್ಯಾರಿನ ಅರಸು ಕುಂದ ಹೆಗ್ಗಡೆಯನ್ನು ಹುಡುಕುತ್ತ ಬರುತ್ತಾರೆ .ದಾರಿಯಲ್ಲಿ ಮುಲ್ಕಿ ಸೀಮೆಯ ಮದ್ಯ ಬೀಡಿಗೆ ತಲುಪಿದಾಗ ಅಲ್ಲಿ ಕಾಂತ ಬಾರೆ ಬೂದಾ ಬಾರೆ ತಡೆಯುತ್ತಾರೆ ಅಲ್ಲಿ ಅವರಿಗೆ ಯುದ್ಧವಾದಾಗ ಬಪ್ಪನಾಡು ದೇವಿ ದುರ್ಗೆ ಪ್ರತ್ಯಕ್ಷಳಾಗಿ ರಾಜಿ ಮಾಡಿಸಿ ಮುಲ್ಕಿ ಒಂಬತ್ತು ಗ್ರಾಮ ಕಾಂತಾ ಬಾರೆ ಬುದಾ ಬಾರೆಯರಿಗೆ ಉಳಿದ ತುಳುನಾಡಿನಲ್ಲಿ ಕೋಟಿ ಚೆನ್ನಯರಿಗೆ ಸ್ಥಾನ ಎಂದು ಸಮಾಧಾನ ಹೇಳಿ ಕಳುಹಿಸುತ್ತಾಳೆ.ಅಲ್ಲಿಂದ ಅವರು ಎಲ್ಲೂರು ದೇವರ ದರ್ಶನಕ್ಕೆ ಬಂದಾಗ ಅಲ್ಲಿ ಕೋಟೆದ ಬಬ್ಬು ದೈವ ಯುದ್ಧಕ್ಕೆ ಬರುತ್ತದೆ ಕೊನೆಗೆ ಆಟ ಸೋತು ಕೋಟಿ ಚೆನ್ನಯರಿಗೆ ಶರಣಾಗುತ್ತಾನೆ.ದೇವರನ್ನು ಭೇಟಿ ಮಾಡಲು ಬಿಡುತ್ತದೆ ದೇವರು ಅವರಿಗೆ ಕುತ್ಯಾರು ಕುಂದ ಹೆಗ್ಗಡೆಯಲ್ಲಿಗೆ ಹೋಗಲು ತಿಳಿಸುತ್ತಾನೆ .ಆಗ ಅವರು ಹೆಗ್ಗಡೆಯಲ್ಲಿಗೆ ಬಂದು ತಮಗೆ ಸ್ಥಾನ ಕಟ್ಟಿಸಬೇಕು ಎಂದು ಹೇಳುತ್ತಾರೆ.ಆಗ ಆತ "ಇಂಥ ಸಾವಿರಾರು ದೈವಗಳು ಬಂದು ಜಾಗ ಕೇಳುತ್ತಾರೆ ಎಲ್ಲರಿಗೂ ಜಗ ಕೊಡಲು ಸಾಧ್ಯವಿಲ್ಲ ,ನಿಮ್ಮ ಕರಣಿಕ ತೋರಿಸಿ: ಎನ್ನುತ್ತಾನೆ.
ಆಗ ಕೋಟಿ ಚೆನ್ನಯರು ಅಲ್ಲಿನ ದೈವ ನಿಷ್ಠ ನಾದ ಮೈಂದ ಪೂಜಾರಿ ಮೇಲೆ ದೃಷ್ಟಿ ಬೀರುತ್ತಾರೆ .ಅವನು ತಾಳೆ ಮರದ ತುದಿಯಲ್ಲಿ ಇದ್ದಾಗ ಅವನಷ್ಟು ಎತ್ತರಕ್ಕೆ ಬೆಳೆದು ಅವನ ಕಿವಿಯಲ್ಲಿ ತಾವು ಬಂದ ಕಾರ್ಯವನ್ನು ತಿಳಿಸಿ ಅರಸರಿಗೆ ಹೇಳಲು ಸೂಚಿತ್ತಾರೆ .
ಅವನು ಅರಸನಲ್ಲಿ ಹೇಳಲು ಭಯ ಪಟ್ಟು ಹಿಂಜರಿದಾಗ ನಿನಗೇನಾದರೂ ಆದರೆ ನಮ್ಮಿಬ್ಬರಲ್ಲಿ ಒಬ್ಬನಾಗಿ ಸೇರಿಸಿಕೊಳ್ಳುತ್ತೇವೆ"ಎಂಬ ಭರವಸೆ ನೀಡುತ್ತಾರೆ.ಮತ್ತೆ ಪುನಃ ಅವನ ಕನಸಿನಲ್ಲಿ ಬಂದು ಹೇಳುತ್ತಾರೆ.
ಹಾಗೆ ಅದನ್ನು ಮೈಂದ ಪೂಜಾರಿ ಅರಸನಲ್ಲಿ ಹೇಳಿದಾಗ ಅರಸು "ಇದನ್ನು ನೀನು ಸತ್ಯ ಪ್ರಮಾಣ ಮಾಡಿ ಹೇಳಬೇಕು ,ಏಳು ರಾತ್ರಿ ಎಂಟು ಹಗಲು ಕುದಿಯುತ್ತಿರುವ ಎಣ್ಣೆಯ ಬಾಣಲೆಯಲ್ಲಿ ಮಿಂದು ಏಳಬೇಕು" ಎಂದು ಹೇಳುತ್ತಾರೆ.
ಆತ ಸ್ನಾನ ಮಾಡಿ ಬಂದು ಕೋಟಿ ಚೆನ್ನಯರನ್ನು ನೆನೆದು ಅವರು ಕೊಟ್ಟ ಗಂಧ ವೀಳ್ಯ ಎಲೆಯನ್ನು ಕುದಿಯುವ ಎಣ್ಣೆಗೆ ಹಾಕಿ ಮೂರು ಬರಿ ಮುಳುಗಿ ಏಳುತ್ತಾನೆ .ಎದ್ದು ಒದ್ದೆ ಕೂದಲನ್ನು ಕೊಡವಿದಾಗ ಅದರ ಬಿಸಿಗೆ ಅರಸು ಹಾಗೂ ಮನೆ ಮಂದಿ ಹೆದರುತ್ತಾರೆ.
ಹೀಗೆ ಕೋಟಿ ಚೆನ್ನಯರ ಕಾರಣಿಕವನ್ನು ಕಣ್ಣಾರೆ ಕಂಡ ಅರಸು ಕುತ್ಯಾರು ಕೇಂಜ ಅವರಿಗೆ ಗರೋಡಿಯನ್ನು ಕಟ್ಟಿಸುತ್ತಾನೆ.
ಮೈಂದ ಪೂಜಾರಿಗೆ ನೂರಾರು ಎಕರೆ ಜಾಗವನ್ನು ಉಂಬಳಿ ಕೊಟ್ಟು ತನ್ನ ಆಸ್ಥಾನದಲ್ಲಿ ಗೌರವದ ಸ್ಥಾನ ಕೊಡುತ್ತಾನೆ.
ಮುಂದೆ ಎಲ್ಲೂರು ಸೀಮೆಯ ಆರು ಮಾಗಣೆಯ ಎಲ್ಲೂರು ಕುತ್ಯಾರು ಕೊಳಚ್ಚೂರು ,ಕಳತ್ತೂರು ಕಣಿಯೂರು,ನಂದಿಕೂರು ಭಿಲ್ಲವ ಪ್ರಮುಖನಾಗಿ ಗರೋಡಿ ನೇಮದಲ್ಲಿ ಮುಖ್ಯಸ್ಥನಾಗಿರುವ ಆತ ಮುಂದೆ ಮದುಮಗನಂತೆ ಜರಿ ಪೇಟ ,ಕಚ್ಚೆ ಧರಿಸಿ ಅಲಂಕಾರವಾಗಿ ಮುಕ್ಕಾಲಿಗೆಯಲ್ಲಿ ತೋಟ ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ನೆಲೆಯಾಗುತ್ತಾನೆ .
ಕೋಟಿ ಚೆನ್ನಯರ ಗರೋಡಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸತ್ಯ ಪ್ರಮಾಣದಂಥ ಅತಿಮಾನುಷ ಸಾಹಸ ಮೆರೆದ ಮೈಂದ ಪೂಜಾರಿ ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಸಹಜವಾದುದೇ ಆಗಿದೆ.ಕುತ್ಯಾರು ಕೇಂಜ ಗರೋಡಿಯಲ್ಲಿ ತೋಟ ಬಗ್ಗ ಪೂಜಾರಿಗೆ ದೈವಿಕ ನೆಲೆಯಲ್ಲಿ ಆರಾಧನೆ ಇದೆ .
ಮಾಹಿತಿ ಮೂಲ :http://www.kotichennaya.com/kenjagarodi
ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕುತ್ಯಾರು ಕೇಂಜ,ಉಡುಪಿ
No comments:
Post a Comment