Thursday, 26 November 2015

ಸಾವಿರದೊಂದು ಗುರಿಯೆಡೆಗೆ :261 ತುಳುನಾಡ ದೈವಗಳು -ಕೋಟೆರಾಯ (c)ಡಾ.ಲಕ್ಷ್ಮೀ ಜಿ ಪ್ರಸಾದ





                            ಕೋಟೆರಾಯ ಮೂಲಸ್ಥಾನ: ಚಿತ್ರ ಕೃಪೆ :ವಿಜಯಕರ್ನಾಟಕ

ಕುಂದಾಪುರ ಸುತ್ತ ಮುತ್ತ ಕೋಟೆರಾಯ ಎಂಬ ದೈವಕ್ಕೆ ಆರಾಧನೆ ಇದೆ.ಮಡಾಮಕ್ಕಿ ವೀರಭದ್ರ ದೇವಸ್ಥಾನದ ಪ್ರಧಾನ ದೈವ ಈತ .ಅಲ್ಲಿ ನಿಧಿಯನ್ನು ಕಾಯುವ ಕಾರ್ಯ ಈತನದು.
ಪ್ರಚಲಿತ ಐತಿಹ್ಯದಂತೆ 1200 ವರ್ಷಗಳ ಹಿಂದೆ ಈ ಪರಿಸರವನ್ನು ಕೋಟೆರಾಯ ಎಂಬ ಅರಸ ಆಳುತ್ತಿದ್ದ ,ಶತ್ರುಗಳ ಹುನ್ನಾರಕ್ಕೆ ಸಿಕ್ಕಿದ ಈತ ದುರಂತವನ್ನಪ್ಪಿ ರುದ್ರನ ಅನುಗ್ರಹದಿಂದ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.
 ಉಡುಪಿ ಕುಂದಾಪುರ ಕಡೆ ಕೋಟೆರಾಯ  ದೈವಸ್ಥಾನಗಳು ಇವೆ .ಇಲ್ಲಿ ಈತನಿಗೆ ನೇಮ ಕೊಟ್ಟು ಆರಾಧಿಸುತ್ತಾರೆ .
ಅರಸಮ್ಮನ ಕಾನು ಸಮೀಪದ ಬೆಟ್ಟದಲ್ಲಿ ಕೋಟೆರಾಯನ ಮೂಲ ಸ್ಥಳ ಪತ್ತೆಯಾಗಿದೆ ಅಲ್ಲಿ ಈತ ಲಿಂಗ ರೂಪಿಯಾಗಿ ನೆಲೆ ನಿಂತಿದ್ದಾನೆ.
.ಕೋಟೆರಾಯನಿಗೆ  ಡಕ್ಕೆ ಬಲಿಯಲ್ಲಿ  ಆರಾಧನೆ ಇದೆ .ಕೋಟೆರಾಯನ ಕುರಿತಾಗಿ ಡಕ್ಕೆ ಬಲಿಯಲ್ಲಿ ವೈದ್ಯರು ಹೇಳುವ ಹಾಡುಗಳಲ್ಲಿ ಈ ರೀತಿಯ ಕಥಾನಕವಿದೆ.
ಕಲಿಯುಗದ ಆರಂಭದಲ್ಲಿ ಕೋಟೆತುರ ಎಂಬ ಸ್ಥಳದಲ್ಲಿ ಬ್ರಹ್ಮರಾಯನೆಂಬಾತ ಧರ್ಮದಿಂದ ರಾಜ್ಯವಾಳುತಲಿದ್ದನು. ಬ್ರಹ್ಮರಾಯ-ಚಂದ್ರಮುಖಿ ದಂಪತಿಗಳಿಗೆ ಪುತ್ರ ಸಂತಾನವಿರುವುದಿಲ್ಲ. ಈ ಬಗ್ಗೆ ಚಂದ್ರಮುಖಿ ದುಃಖಿಸಲು ಬ್ರಹ್ಮರಾಯ ತಪಸ್ಸನ್ನಾಚರಿಸಿ ಶ್ರೀಹರಿಯನ್ನು ಮೆಚ್ಚಿಸಿ ವರ ಪಡೆಯಲು ನಿರ್ಧರಿಸುತ್ತಾನೆ. ಅನಂತರ ರಾಜ್ಯ ಉಸ್ತುವಾರಿಯನ್ನು ಮಂತ್ರಿಗಳಿಗೆ ವಹಿಸಿ ಘೋರಾರಣ್ಯದಲ್ಲಿ ಮಡದಿಯೊಂದಿಗೆ ನಿಷ್ಠೆಯಿಂದ ತಪವನ್ನಾಚರಿಸುತ್ತಾನೆ. ಅವನ ನಿಷ್ಠೆಗೆ ಒಲಿದ ಪಶುಪತಿ ಪುತ್ರಸಂತಾನದ ವರವನ್ನು ಕೊಡುತ್ತಾನೆ. ಅನಂತರ ಹತ್ತನೆ ತಿಂಗಳಿನಲ್ಲಿ ಬ್ರಹ್ಮರಾಯನ ಮಡದಿ ಚಂದ್ರಮುಖಿ ಗಂಡುಮಗುವಿಗೆ ಜನ್ಮ ಕೊಡುತ್ತಾಳೆ. ಆ ಮಗುವಿಗೆ ಕೋಟೆರಾಯ ಎಂದು ಹೆಸರಿಡುತ್ತಾರೆ. ಸರ್ವವಿದ್ಯೆಗಳಲ್ಲೂ ಪಾರಂಗತನಾಗುತ್ತಾನೆ ಕೋಟೆರಾಯ. ಬ್ರಹ್ಮರಾಯನಿಗೆ ಮುಪ್ಪು ಆವರಿಸಲು ಮಗ ಕೋಟೆರಾಯನಿಗೆ ಕೋಟೆತುರದ ಪಟ್ಟವನ್ನು ಕಟ್ಟುತ್ತಾನೆ. ಬ್ರಹ್ಮರಾಯನ ಮರಣಾನಂತರ ಕೋಟೆರಾಯ ದಿಗ್ವಿಜಯಕ್ಕೆ ಹೊರಡುತ್ತಾನೆ. ಅಗಣಿತ ಸೈನ್ಯವನ್ನು ಸೇರಿಸಿಕೊಂಡು, ಹಾರುಕುದ್ರೆ ಏರಿಕೊಂಡು ಕಾರ್ಕಳಕ್ಕೆ ತೆರಳಿ, ಊರ ಕೋಟೆಯ ಹೊಕ್ಕು ಮುರಿದು ಬೈರ್‍ಸೂಡನ ಕಪ್ಪವನ್ನು ಪಡೆಯುತ್ತಾನೆ. ಬಾರ್ಕೂರಿಗೆ ತೆರಳಲು ಇವನ ಸಾಹಸಕ್ಕೆ ಹೆದರಿ ಬದ್ದಪ್ ಕಪ್ಪಕಾಣಿಕೆ ಕೊಡುತ್ತಾನೆ. ಹೀಗೆ ಕದ್ರಿ, ಕಾಲ್ ತೋಡು, ಭಟ್ಕಳ, ಕೊಲ್ಲೂರು, ಮೊದಲಾದ ಪ್ರದೇಶಗಳನ್ನು ಗೆದ್ದು ಕಪ್ಪಕಾಣಿಕೆಗಳನ್ನು ಪಡೆದುಕೊಳ್ಳುತ್ತಾನೆ. ಅನಂತರ ಅರಮನೆಗೆ ಬಂದು ಭಯವಿಲ್ಲದ ರಾಜ್ಯವಾಳುತ್ತಿದ್ದನು. ಆಗ ಇಜಪುರ (ವಿಜಾಪುರ) ಸೀಮೆಯ ಪಾಚ್ಚವನು ಎಂಬ ರಾಜ ಕೋಟೆರಾಯನ ದಿಗ್ವಿಜಯದ ಸಾಹಸದ ವಾರ್ತೆ ಕೇಳಿ ಅವನನ್ನು ಸದೆಬಡಿಯಬೇಕೆಂದು ಯುದ್ಧಕ್ಕೆ ಬರುತ್ತಾನೆ. ದೂತರ ಮೂಲಕ ಕೋಟೆರಾಯನಿಗೆ ಕಪ್ಪ ಕಾಣಿಕೆ ಸಲ್ಲಿಸುವಂತೆ ಇಲ್ಲವೇ ಯುದ್ಧಕ್ಕೆ ಬರುವೆನೆಂದು ದೂತನಲ್ಲಿ ಹೇಳುತ್ತಾನೆ ಕೋಟೆರಾಯ. ಘೋರ ಯುದ್ಧ ನಡೆಯುತ್ತದೆ. ಕೋಟೆರಾಯನ ಪರಾಕ್ರಮದೆದುರು ನಿಲ್ಲಲು ಸಾಧ್ಯವಾಗದೆ ಪಾಶ್ಚವನು ಓಡಿ ಹೋಗುತ್ತಾನೆ. ಕೋಟೆರಾಯ ಪಾಶ್ಚವನ್ನು ಸೋಲಿಸಿದ ನಂತರ, ತನ್ನ ರಾಜ್ಯವನ್ನು ಧರ್ಮದಿಂದ ಆಳುತ್ತಾ ಇದ್ದ. ಆಗ ಕೋಟೆರಾಯನನ್ನು ಸೋಲಿಸುವುದಕ್ಕಾಗಿ ಅಡ್ಡದಾರಿಯನ್ನು ಹಿಡಿಯುವ ಪಾಶ್ಚವನು ಬೀಸ್ಹಗ್ಗ ಹೊೈನೇಣ ತೆಗೆದುಕೊಂಡು, ಮೋಸದಿಂದ ಕಟ್ಟಿ ಹಿಡಿಯುತ್ತಾನೆ. ಆಗ ಕೋಟೆರಾಯ ಪಾಶ್ಚವನ ವಶನಾಗಲಾರೆನೆಂದು ಮಾಯವಾಗುತ್ತಾನೆ. ಘೋರ ದೈವಿಕತೆಯನ್ನು ಪಡೆದು ರಣಜಟ್ಟಿಗನ ಜೊತೆಗೂಡಿಕೊಂಡು ದಂಡಿನೊಂದಿಗೆ ಮುತ್ತಿಗೆ ಹಾಕುತ್ತಿದ್ದನು. ಆನೆ ಕುದುರೆಗಳನ್ನು ಹೊಡೆಯುತ್ತಿದ್ದನು. ಸೇನೆಯನ್ನು ಆನೆ ಕುದುರೆಗಳನ್ನು ಮಾಯ ಮಾಡುತ್ತಿದ್ದನು. ಇಜಪುರಕ್ಕೆ ತೊಂದರೆ ಕೊಡುತ್ತಿದ್ದನು. ಪ್ರಶ್ನೆ ಇಟ್ಟು ನೋಡುವಾಗ ಇದು ಕೋಟೆರಾಯನ ತಂಟೆಯೆಂದು ಕಂಡು ಬರಲು ಹೊನ್ನಪೀಠ ತಂದು ಕೋಟೆರಾಯನನ್ನು ಸ್ಥಾಪಿಸಿ, ಕಪ್ಪಕಾಣಿಕೆಯಿಟ್ಟು ಪೂಜಿಸುತ್ತಾನೆ ಪಾಶ್ಚವ. ಕೋಟೆತುರದವರ ಪೂಜೆ ಭೋಗ ಸಾಲದೆಂದೂ ಉತ್ತರದಲ್ಲಿ ಅನೇಕ ಸ್ಥಳಮನೆ ಕಟ್ಟಿಸಿಕೊಳ್ಳುತ್ತಾನೆ ಕೋಟೆರಾಯ. ಈ ಕೋಟೆರಾಯ ಮಂಡ್ಲಭೋಗಕ್ಕೆ ಬಂದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಮಂಚಿ ಯಲ್ಲಿ ಕೋಟೆದಾರ್ ಎಂಬ ದೈವತಕ್ಕೆ ಆರಾಧನೆ ಇದೆ .
  ಕೋಟೆರಾಯನ ಕಥಾನಕದಲ್ಲಿ ಇತಿಹಾಸದ ಎಳೆಗಳು ಅಡಗಿವೆ.ಇಲ್ಲಿ ವಿಜಾಪುರದ ಪಾಶ್ಚವ ಅರಸನ ದಾಳಿಯ ಪ್ರಸ್ತಾಪವಿದೆ 
ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಿದೆ 
ಅಧಾರ ಗ್ರಂಥಗಳು 
1 ವೈದ್ಯರ ಹಾಡುಗಳು ಸಂ-ಎ ವಿ ನಾವಡ
2 ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ :ಡಾ.ಲಕ್ಷ್ಮೀ ಜಿ ಪ್ರಸಾದ




No comments:

Post a Comment