ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯಂತಾಗುವ ಕನಸು ನನಸಾಗದಿದ್ದರೂ ಡಾ.ಲಕ್ಷ್ಮೀ ಪೋದ್ದಾರ್ ಆದೆ .
ಆತ್ಮ ಕಥೆ ಬರೆಯದೆ ತುಂಬಾ ದಿನ ಆಯಿತು.ಈವತ್ಯಾಕೋ ನಾನು ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ ಮೆರೆದದ್ದು ನೆನಪಾಗಿ ಬರೆಯೋಣ ಎನಿಸಿತು
ನಾನು ಒಂದನೇ ತರಗತಿಯನ್ನು ಮೀಯಪದವಿನ ವಿದ್ಯಾವರ್ಧಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆ..ಆಗ ನಮ್ಮ ಹಿರಿ ಮನೆ ವಾರಣಾಸಿಯಲ್ಲಿ ಆಸ್ತಿ ಪಾಲಾಗಿ ಹಿರಿಯರಿಂದ ಬಂದ ಮೂಲ ಮನೆ ದೊಡ್ಡ ಚಿಕ್ಕಪ್ಪ ಕೇಶವ ಭಟ್ಟರ ಪಾಲಿಗೆ ಬಂದಿತ್ತು.
ಹಿರಿ ಮಗನಾದ ನನ್ನ ತಂದೆಯವರಿಗೆ ಆಗ ಸುಮಾರು ನಲುವತ್ತನಾಲ್ಕು ವರ್ಷ..ಅಜ್ಜ ತೀರಿ ಹೋಗುವಾಗ ತಂದೆಯವರಿಗೆ ಹದಿನೈದು ವರ್ಷ.ಹತ್ತನೆಯ ತರಗತಿಯಲ್ಲಿ ಓದುತ್ತಿದ್ದರು.ಆಗ ಮೆಟ್ರಿ್ಕ್ ಎಂದರೆ ಹನ್ನೊಂದನೆಯ ತರಗತಿ ಪಾಸಾಗಬೇಕಿತ್ತು ಮೆಟ್ರಿಕ ಪಾಸಾದವರಿಗೆ ಒಳ್ಳೆಯ ಉದ್ಯೋಗ ಸಿಗುತ್ತಾ ಇತ್ತು
ನನ್ನ ತಂದೆಯವರು ಕಲಿಕೆಯಲ್ಲಿ ತುಂಬಾ ಜಾಣರಿದ್ದರಂತೆ.ಈ ವಿಚಾರ ನಮಗೆ ತಂದೆಯವರು ತೀರಿ ಹೋದ ಮೇಲೆ ಅವರ ಸಹಪಾಠಿ ಕಿಟ್ಟಣ್ಣ ರೈ ಅವರ ಮೂಲಕ ತಿಳಿದದ್ದು.ತಂದೆಯವರು ತೀರಿ ಹೋದ ಸುದ್ದಿ ಕೇಳಿ ಬಾಲ್ಯದ ಗೆಳೆಯನ ಮನೆ ಹುಡುಕಿಕೊಂಡು ಬಂದು ತಂದೆಯವರ ಭಾವ ಚಿತ್ರಕ್ಕೆ ಹೂ ಹಾಕಿ ನಮಿಸಿ ತಮ್ಮಪ್ರೀತಿಯನ್ನು ತೋರಿದ್ದರು.ಆಗ ಮಾತನಾಡುತ್ತಾ ನನ್ನ ತಂದೆಯವರು ಅರ್ಧ ಮಾರ್ಕ್ ಕಡಿಮೆ ಬಂದರೆ ಅಳುತ್ತಿದ್ದ ವಿಚಾರವನ್ನವರು ತಿಳಿಸಿ ತಂದೆಯವರು ತರಗತಿಯಲ್ಲಿ ಸದಾ ಪ್ರಥಮ ಸ್ಥಾನವನ್ನು ಗಳಿಸಿಕೊಳ್ಳುತ್ತಿದ್ದ ವಿಚಾರವನ್ನು ಹೇಳಿದ್ದರು.
ಅಜ್ಜ ಕೃಷ್ಣ ಭಟ್ಟರು ತೀರಿ ಹೋಗುವಾಗ ಮೆಟ್ರಿಕ‌್ ಪಾಸಾಗಲು ಒಂದು ವರ್ಷ ತಂದೆಯವರು ಓದಬೇಕಾಗಿತ್ತು.ತಂದೆಯವರಿಗೆ ಓದಲು ತುಂಬಾ ಆಸೆ ಇತ್ತು.ಆದರೆ ಮನೆಯಲ್ಲಿ ಸಣ್ಣ ವಯಸ್ಸಿನ ತಮ್ಮ ತಂಗಿಯರ ಜವಾಬ್ದಾರಿ ಇತ್ತುಅಜ್ಜ ತೀರಿ ಹೋಗುವಾಗ ಸಣ್ಣ ಚಿಕ್ಕಪ್ಪ ಸದಾಶಿವ ಭಟ್ಟರಿಗೆ ಮೂರು ವರ್ಷವಂತೆ.ಅವರ ಅಣ್ಣ ಕಾಶಿ ಚಿಕ್ಕಪ್ಪ ( ರಾಮಕೃಷ್ಣಭಟ್ಟರು ) ಒಂದೆರಡು ವರ್ಷ ದೊಡ್ಡವರಿದ್ದಿರಬಹುದು.ಇವರಿಗಿಂತ ಒಂದೆರಡುವರ್ಷ ಸೋದರತ್ತೆ ಪಾರ್ವತಿ ದೊಡ್ಡವರಿದ್ದಿರಬಹುದು.ಅವರಿಗಿಂತ ದೊಡ್ಡವರು ನನ್ನ ದೊಡ್ಡ ದೊಡ್ಡಪ್ಪ ಕೇಶವ ಭಟ್ಟರು ಇವರಿಗಾಗ ಹತ್ತು ಹನ್ನೆರಡು ವರುಷ ಇವರಿಗಿಂತ ಹಿರಿಯರಾದ ಇಬ್ಬರು ಅಕ್ಕಂದಿರಿದ್ದರು.ನಡುವೆ ಓರ್ವ ಇನ್ನೊಂದು ತಂಗಿಯೂ ಇದ್ದು ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದು ಅವರನ್ನು ನಾನು ಬಹುಶಃ ನೋಡಿಲ್ಲ ಎಂದೆನಿಸ್ತದೆ.ಅಥವಾ ನೋಡಿದ್ದರೂ ನೋಡಿದ್ದರೂ ನೆನಪಿರದಷ್ಟು ಸಣ್ಣ ವಯಸ್ಸು ನನಗಿದ್ದಿರಬಹುದು
ಈ ಅತ್ತೆಯ ಹೆಸರೂ ನನಗೆ ಗೊತ್ತಿಲ್ಲ.ಪಂಜಕ್ಕೆ ಮದುವೆ ಮಾಡಿಕೊಟ್ಟಕಾರಣ ಪಂಜದ ಅತ್ತೆ ಎನ್ನುತ್ತಿದ್ದೆವು.ಕಂರ್ಬಿ ಎಂದೂ ಹೇಳುತ್ತಿದ್ದೆವು.ಕಂರ್ಬಿಯ ಮಾವ ಅತ್ತೆ ತೀರಿ ಹೋದ ಮೇಲೆ ಮತ್ತೆ ಮದುವೆಯಾಗಿದ್ದು ಅವರಿಗೆ ಮಕ್ಕಳಿದ್ದರು.ಅವರಲ್ಲಿ ಯಾರನ್ನೋ ಕಂರ್ಬಿ ಬಾವ ಎಂದು ಕರೆಯುತ್ತಿದ್ದ ನೆನಪು.
ನನ್ನ ಆ ಸೋದರತ್ತೆ ಬಹಳ ಜಾಣೆಯಂತೆ.ನನ್ನನ್ನು ಬಂಧು ಬಳಗದವರು ಅವರಿಗೆ ಹೋಲಿಸುತ್ತಿದ್ದರು.ಅವರ ಬಗ್ಗೆ ಎರಡು ವಿಚಾರ ಅಮ್ಮ ಹೇಳಿದ್ದು ನನಗೆ ನೆನಪಿದೆ.
ಒಬ್ಬರು ಆಗಾಗ ಊಟಕ್ಕೆ ಮನೆಗೆ ಬರ್ತಿದ್ದರಂತೆ.ಬಂದಾಗ ಮಜ್ಜಿಗೆ ನೀರು ಕೊಡುವ ಪದ್ದತಿ ನಮ್ಮಲ್ಲಿ.ಪ್ರತಿ ಬಾರಿ ಎಷ್ಟೇ ಉಪ್ಪು ಹಾಕಿ ಹದ ಮಾಡಿ ಕೊಡುತ್ತಿದ್ದರೂ ಸ್ವಲ್ಪ ಉಪ್ಪು ಕಡಿಮೆ ಎಂದು ಕೊರತೆ ಹೇಳುತ್ತಿದ್ದರಂತೆ.
ಹೀಗೆ ಒಂದು ಬಾರಿ ಬಂದಾಗ ನನ್ನ ಅತ್ತೆ ಒಂದು ಲೋಟ ಮಜ್ಜಿಗೆಗೆ ಒಂದು ಕೋಟ ಉಪ್ಪು ಹಾಕಿ ಎಷ್ಟು ಕರಗುತ್ತದೋಅಷ್ಟು ಕರಗಿಸಿ ಅರಿವೆಯಲ್ಲಿ ಸೋಸಿ ತಗೊಂಡು ಹೋಗಿ ಕೊಟ್ಟರಂತೆ.ಆ ಉಪ್ಪಿನ ಸಿಂಗಿಯನ್ನು ಕಣ್ಣು ಮುಚ್ಚಿ ಕುಡಿದ ಪುಣ್ಯಾತ್ಮಕಮಕ್ ಕಿಮ್ ಎನ್ನಲಿಲ್ಲವಂತೆ.ಅದೇ ಕೊನೆ ಅಂತೆ ಉಪ್ಪು ಕಡಿಮೆ ಎಂದು ಕೊರತೆ ಹೇಳಿದ್ದು.ಅತ್ತೆಗೆ ಮಕ್ಕಳಾಟಿಗೆ ಮದುವೆಯಾಗುವ ಮೊದಲಿನ ಕಥೆ ಇದು.ಹೆಚ್ಚಂದರೆ ಹತ್ತು ಹನ್ನೊಂದು ವರ್ಷದ ಎಳೆಯ ಹುಡುಗು ಬುದ್ಧಿ.ಇದು ಗೊತ್ತಾದಾಗ ಅಜ್ಜಿ ಕೈಯಿಂದ ಬೈಗಳು ಸಿಕ್ಕರೂ ಎಲ್ಲರಿಗೂ ಇದು ನಗು ತರಿಸಿದ ವಿಚಾರ ಆಗಿತ್ತಂತೆ.
ಅದೇ ರೀತಿ ಯಾರದೋ ಹತ್ತಿರದ ಸಂಬಂಧಿಕರ ಮದುವೆಯ ಸಮಯದಲ್ಲಿ ಸೀರೆ ತೆಗೆಯುವ ಮಾತು ಬಂದಾಗ ಕುಟುಂಬದಲ್ಲಿ ಪ್ರಭಾವಿಗಳಾಗಿದ್ದ ಸಂಬಂಧಿಯೊಬ್ಬರು ಅಜ್ಜನ ಮೊದಲ ಹೆಂಡತಿಯಲ್ಲಿ ಹುಟ್ಟಿದ ಮಗಳಿಗೆ ಸೀರೆ ತೆಗೆಯುವ "ತಾಯಿ ಇಲ್ಲದ ಮಗು ಅವಳು" ಎಂದರಂತೆ.ಆಗ ನನ್ನ ಈ ಸೋದರತ್ರೆ 'ಹೌದೌದು..ನಾನು ಮದುವೆ ದಿನ ನನ್ನ ತಾಯಿಯನ್ನೇ ಸೀರೆಯಂತೆ ಉಡುವುದು ಎಂದರಂತೆ'..ಮುಂದೆ ಇವರಿಗೂ ಸೀರೆ ತೆಗೆದರೋ ಇಲ್ಲವೋ ಏನಾಯಿತು ನನಗೆ ಗೊತ್ತಿಲ್ಲ.ಅಂತೂ ಇದೂ ಎಲ್ಲರಲ್ಲಿ ನಗುಹುಟ್ಟಿಸಿದ ವಿಚಾರವಾಗಿತ್ತು .
ಒಟ್ಟಿನಲ್ಲಿ ಬಡತನದ ಜೊತೆಗೆ ತಂದೆಯನ್ನೂ ಕಳೆದುಕೊಂಡ ಮಕ್ಕಳದು ಬಹಳ ಶೋಚನೀಯ ಪರಿಸ್ಥಿತಿ ಇದ್ದಿರಬಹುದು ಎಂದು ಎನಿಸ್ತದೆ.ಮನೆ ಮಕ್ಕಳಿಗೆ ಸೀರೆ ತೆಗೆಯುವ ಬಗ್ಗೆ ನಿರ್ಧಾರ ತಗೊಳ್ಳುವವರು ಇನ್ಯಾರೋ..ತಂದೆ ಇದ್ದರೆ ಹೀಗಾಗಲುಂಟೇ?
ನನಗೆ ಮದುವೆಯಾಗಿ ಮಗ ಹುಟ್ಟಿ ಅವನ ಉಪನಯನವನ್ನೂ ಪುರೋಹಿತರಾಗಿ ನನ್ನ ತಂದೆಯವರೃ ಮುಂದಾಳತ್ವ ವಹಿಸಿ ಮಾಡಿದ್ದರು.ಅವರ ಜವಾಬ್ದಾರಿ ಎಲ್ಲವನ್ನೂ ಕಳೆದುಕೊಂಡ ನಂತರ ಒಂದಿನ ಸುಖವಾಗಿ ಜೀವ ತ್ಯಜಿಸಿ ಇಹ ಲೋಕ ಬಿಟ್ಟು ಪರಲೋಕಕ್ಕೆ ತೆರಳಿದ್ದರು.ಆದರೂ ನಮಗೆ ತಂದೆಯ ಸಾವು ಬಹಳ ದುಃಖ ಉಂಟು ಮಾಡಿತ್ತು.ಹಾಗಿರುವಾಗ ಅಕಾಲದಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿಯನ್ನು ಊಹಿಸುವುದೂ ಕೂಡ ಕಷ್ಟ.
ನನ್ನ ಸ್ನೇಹಿತೆಯೊಬ್ಬಳ ತಂದೆ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ಅವರು ಹೇಳ್ತಿದ್ದರು.ನಾವು ನೆಂಟರ ಮನೆಗೆ ಹೋದರೆ ಹೊಟ್ಟೆ ತುಂಬಾ ಊಟ ಮಾಡ್ತಿರಲಿಲ್ಲ.ಯಾಕೆಂದರೆ ತಂದೆ ಇಲ್ಲದ ಮಕ್ಕಳು ರಾವು ಕಟ್ಟಿ ತಿಂತಾರೆ ಎಂದು ಜನ ಆಡಿಕೊಳ್ಳಬಾರದಲ್ವ ಲಕ್ಷ್ಮೀ? ಎಂದಿದ್ದರು.
ನನ್ನ ತಂದೆಯವರಿಗೆ ಕೂಡ ಅವರ ತಂದೆ ಎಂದರೆ ನನ್ನ ಅಜ್ಜ ಅಕಾಲದಲ್ಲಿ ತೀರಿ ಹೋದದ್ದು ಬಹು ದೊಡ್ಡ ನಷ್ಟ ಉಂಟು ಮಾಡಿತ್ತು.ಮೆಟ್ರಿಕ್ ಓದುವಕನಸಿಗೆ ತಣ್ಣೀರು ಪಟ್ಟಿ ಹಾಕಬೇಕಾಯಿತು.ಕುಟುಂಬದ ಹಿರಿಯರು ಆಣತಿಯಂತೆ ಮಂತ್ರ ಕಲಿಯಲು ಕುಂಭ ಕೋಣಂ ಗೆ ಹೋಗಬೇಕಾಯಿತು
ಅಲ್ಲಿ ಕೆಲ ವರ್ಷ ಮಂತ್ರ ಕಲಿತು ಬಂದು ಹೊಟ್ಟೆಪಾಡಿಗಾಗಿ ಕುಲ ವೃತ್ತಿ ಪೌರೋಹಿತ್ಯ ಮಾಡಬೇಕಾಯಿತು.
ಹಗಲು ರಾತ್ರಿ ಪೌರೋಹಿತ್ಯ ಮಾಡುತ್ತಲೇ ಅಕ್ಕ ತಂಗಿಯರನ್ನೆಲ್ಲ ಮದುವೆ ಮಾಡಿ ಸಂಸಾರಸ್ಥರನ್ನಾಗಿಸಿದರು.ದೊಡ್ಡ ಚಿಕ್ಕಪ್ಪ ಮತ್ತು ಕಾಶಿ ಚಿಕ್ಕಪ್ಪ ಇಬ್ಬರನ್ನೂ ಮಂತ್ರ ಕಲಿಯಲು ಹಾಕಿದ್ದೇಕೆ ಎಂದು ನನಗೆ ಗೊತ್ತಿಲ್ಲ.ದೊಡ್ಡ ಚಿಕ್ಕಪ್ಪನಿಗೆ ಶಾಲೆಯ ವಿದ್ಯೆ ಅಷ್ಟಾಗಿ ಹಿಡಿಸಿರಲಿಲ್ಲವಂತೆ ಹಾಗಾಗಿ ಮಂತ್ರ ಕಲಿಯಲು ಹಾಕಿದರು.ಸಣ್ಣ ಚಿಕ್ಕಪ್ಪ ( ನಂತರ ಕಾಶಿಯಲ್ಲಿ ಓದಿ ಪ್ರೊಫೆಸರರಾದ ಕಾರಣ ಇವರನ್ನು ಕಾಶಿ ಅಪ್ಪಚ್ಚಿ ಎಂದು ಕರೆಯುತ್ತೇವೆ) ತಮ್ಮಣ್ಣ / ರಾಮ ಕೃಷ್ಣ ಭಟ್ಟರಿಗೆ ಶಾಲೆಗೆ ಹೊಗಿ ಕಲಿಯಲು ಆಸಕ್ತಿ ಇತ್ತಂತೆ.ಆದರೂ ಇವರನ್ನೇಕೆ ಮಂತ್ರ ಕಲಿಯಲು ಹಾಕಿದರು? ಇಲ್ಲಿ ಬಹುಶಃ ನನ್ನ ತಂದೆ ದುಡಿಯುವ ವ್ಯಕ್ತಿ ಮಾತ್ರ ಆಗಿದ್ದರು.ಬಹಳ ಸಜ್ಜನರಾದ ನನ್ನ ತಂದೆಯವರಿಗೆ ಕುಟುಂಬದ ಹಿರಿಯರ ಮಾತನ್ನು ಮೀರುವ ಧೈರ್ಯ ಇದ್ದಿರಲಾರದು.ನನ್ನ ಅಜ್ಜಿ ಗಟ್ಟಿಗಿತ್ತಿಯೇ...ಅವರೂ ಯಾಕೆ ಸಣ್ಣ ಮಗನ ಪರವಾಗಿ ಧ್ವನಿ ಎತ್ತಲಿಲ್ಲ? ಬಹುಶಃ ಆಗಿನ ಪರಿಸ್ಥಿತಿ ಹಾಗೆಯೇ ಇತ್ತು ಕಾಣಬೇಕು.ಆದರೆ ನಮ್ಮಲ್ಲಿ ಅಜ್ಜಿಯ ಮಾತೇ ಅಂತಿಮವಾಗಿತ್ತುಆದರೂ ಯಾಕೆ ಅಜ್ಜಿ ಮಗನ ಪರ ಮಾತಾಡಲಿಲ್ಲ.?
ನನ್ನ ತಂದೆಯವರಿಗೆ ಈ ತಮ್ಮನಲ್ಲಿ ಬಹಳ ಪ್ರೀತಿ.ತಮ್ಮಣ್ಣ ಎಂದವರನ್ನು ಕರೆಯುತ್ತಿದ್ದರು.ತಮ್ಮಣ್ಣ ಎಂದರೆ ಆಸರಿಗೆ ಬೇಡ ಎಂಬಷ್ಟು ಪ್ರೀತಿ ಅಭಿಮಾನ ನನ್ನ ತಂದೆಯವರಿಗೆ ಇತ್ತು.ನನ್ನ ಅಣ್ಣ ಅಕ್ಕನಿಗೂ ಈ ಚಿಕ್ಕಪ್ಪ ಎಂದರೆ ಬಹಳ ಪ್ರೀತಿ.
ಈ ಸಣ್ಣ ಚಿಕ್ಕಪ್ಪನಿಗೆ ಸಣ್ಣಾಗಿರುವಾಗ ಕ್ರಾಣಿ ಎಂಬ ಆರೋಗ್ಯ ಸಮಸ್ಯೆ ಇತ್ತಂತೆ.ಮನೆ ಮಂದಿಯ ಭಯಕ್ಕೆ ಶಾಲೆಗೆ ಹೋದವರು ನಡುವೆ ಜ್ವರದಿಂದ ಎಚ್ಚರ ತಪ್ಪಿ ತೋಡಿನ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವರನ್ನು ಯಾರೋ ನೋಡಿ ಎತ್ತಿ ಮನೆಗೆ ತಂದು ಬಿಟ್ಟರಂತೆ..ಇವೆಲ್ಲ ನಾನು ಹಿರಿಯರು ಮಾತನಾಡುವಾಗ ಓಂಗಿಕೊಂಡು ಕೇಳಿಸಿಕೊಂಡ ವಿಚಾರಗಳು.ಹಿರಿಯರ ಮಾತಿಗೆ ಕಿವಿ ಕೊಟ್ಟರೆ ನಮಗೆ ಪೆಟ್ಟು ಬೈಗಳು ಸಿಗುತ್ತಿತ್ತು.ಆದರೂ ನಾವು ಮಕ್ಕಳು ಬಾಲ ಸಹಜ ಕುತೂಹಲದಿಂದ ಅಲ್ಲಿ ಇಲ್ಲಿ ಓಂಗಿ ಸ್ವಲ್ಪ ಸ್ವಲ್ಪ ಕೇಳಿಸಿಕೊಳ್ತಿದ್ದೆವು
ಮತ್ತೆ ಹಿಂದಿನ ಕಥೆಗೆ ಬರುವೆ.ನನ್ನ ತಂದೆಯವರು ಹದಿನಾರು ವರ್ಷಕ್ಕೆ ಅಜ್ಜನನ್ನು ಕಳೆದುಕೊಂಡು ಮಂತ್ರ ಕಲಿತು ದುಡಿಯಲು ಶುರು ಮಾಡಿದವರು ತನಗಾಗಿ ಒಂದು ಪೈಸೆಯನ್ನೂ ಎತ್ತಿಡಲಿಲ್ಲ.ಎಲ್ಲವನ್ನೂಕುಟುಂಬಕ್ಕೇ ಕೊಡುತ್ತಿದ್ದರು.
ಮನೆಯಲ್ಲಿ ನಾವು ಐದು ಜನ ಮಕ್ಕಳು ದೊಡ್ಡ ಚಿಕ್ಕಪ್ಪನ ಮಗಳು ನನ್ನ ವಯಸ್ಸಿನ ಸಂಧ್ಯಾ ಬೆಳೆಯಲಾರಂಭಿಸಿದಂತೆ
ಮನೆಯಲ್ಲಿ ಭಿನ್ನಾಭಿಪ್ರಾಯಗಳು ವ್ಯಾಜ್ಯ ಗಲಾಟೆ ಶುರು ಆಯಿತು.ಎಲ್ಲರ ಮನೆ ದೋಸೆಯೂ ತೂತೇ ಅಲ್ವೇ?
ಅಂತೂ ಇಂತೂ ತಂದೆಯವರಿಗೆ ನಲುವತ್ತನಾಲ್ಕು ವಯಸ್ಸಾದಾಗ ಆಸ್ತಿ ಪಾಲಾಯಿತು.
ನಾನು ಒಂದನೇ ತರಗತಿಗೆ ಸೇರಿದ ಸಮಯದಲ್ಲಿ ಹಿರಿಯ ಮನೆ ಪಾಲಾಯಿತು ,ತಂದೆಯವರಿಗೆ ಆಗ ನಲುವತ್ತನಾಲ್ಕು ವರ್ಷ ಪ್ರಾಯ .
ಸ್ವಲ್ಪ ತೋಟ ,ಸ್ವಲ್ಪ ಗದ್ದೆ ತಂದೆಯವರ ಪಾಲಿಗೆ ಬಂತು.ಮನೆ ಕಟ್ಟಲು ಪುಡಿಕಾಸು ಕೈಯಲ್ಲಿ ಇರಲಿಲ್ಲ..ಪೂರ್ತಿಯಾಗಿ ಸಾಲ ಮಾಡಿ ಮನೆ ಕಟ್ಟಬೇಕಾಯಿತು.ಆಗಿನ ಕಾಲಕ್ಕೆ ಬಡ್ಡಿಗೆ ಸಾಲ ಕೊಡುತ್ತಿದ್ದ ಸಾವ್ಕಾರರಾಗಿದ್ದ ಸೊಂದಿ ಗಣಪಣ್ಣ ಅವರ ಬಳಿ 19,000₹ ಸಾಲ ಪಡೆದರೆಂದು ಹಿರಿಯರು ಮಾತನಾಡುವಾಗ ಕೇಳಿದ ನೆನಪು ನನಗೆ .ಆಗಿನ ಕಾಲಕ್ಕೆ ದೊಡ್ಡ ಮೊತ್ತವೇ ಇರಬೇಕು ಅದು.
ತಾಯಿಯವರು ನನ್ನ ಸಣ್ಣ ತಮ್ಮ ಗಣೇಶನ ಬಸುರಿ.ಹೆರಿಗೆ ಮತ್ತು ಬಾಣಂತನಕ್ಕಾಗಿ ನನ್ನಮತ್ತುನ ತಮ್ಮ ಈಶ್ವರನ ಜೊತೆಗೆ ಅಮ್ಮ ಅಜ್ಜನ ಮನೆಗೆ ಬಂದಿದ್ದರು ಅಣ್ಣ ಮತ್ತು ಅಕ್ಕ ಶಾಲೆಗೆ ಕೊಡ್ಲೊ ಮೊಗರಿನ ಶಾಲೆಗೆ ಹೋಗುತ್ತಿದ್ದ ಕಾರಣ ಹೋಗುತ್ತಿದ್ದ ಕಾರಣ ನನ್ನ ದೊಡ್ಡಮ್ಮನ ಮನೆ ಕತ್ತೆರಿ ಮೂಲೆಯಿಂದ ಶಾಲೆಗೆ ಹೋಗುತ್ತಿದ್ದರು.
ಈ ಸಮಯದಲ್ಲಿಯೇ ಉಕ್ಕಿ ಹರಿಯುವ ತೋಡಿನ ನೀರಿಗೆ ಬಿದ್ದು ಬೆಳ್ಳಕ್ಕೆ ಹೋಗಿ ಪವಾಡ ಸದೃಶವಾಗ ಬದುಕುಳಿದದ್ದು ನಾನು
ಅಂತೂ ತಮ್ಮಪಾಲಿಗೆ ಬಂದಿದ್ದ ಅಂಗೈ ಅಗಲದ ಗುಡ್ಡವನ್ನು ಕಡಿದು ಮಣ್ಣಿನ ಮನೆ ಕಟ್ಟಿದರು.ಸಾರಣೆ ಇಲ್ಲದ ಮಣ್ಣಿನಮನೆಯಲ್ಲಿ ಎಲ್ಲೆಡೆ ನೀರು ಒಸರುತ್ತಿತ್ತು.ಆದರೂ ನಮಗೆ ಹೊಸ ಮನೆಗೆ ಬಂದ ಸಂಭ್ರಮ ,ಹೊಸ ಮನೆ ಒಕ್ಕಲಾಗುವಾಗ ಸಣ್ಣ ತಮ್ಮ ಗಣೇಶ ಎರಡು ತಿಂಗಳ ಮಗು.ನಾವು ಕೊಂಡಾಟದಿಂದ ಗಂಚ ಎಂದು ಕರೆಯುತ್ತಿದ್ದೆವು.
ಮನೆ ಏನೋ ಆಯಿತು ಮನೆಗಾಗಿ ಮಾಡಿದ ಸಾಲವನ್ನು ಹಿಂದೆ ಕೊಡಬೇಕಲ್ಲ..ಗಾಣದೆತ್ತಿನಂತೆ ಹಗಲು ರಾತ್ರಿ ತಂದೆ ತಾಯಿ ದುಡಿದು ಪೈಸೆಗೆ ಪೈಸೆ ಕೂಡಿಸಿ ತಾಯಿ ತನಗಾಗಿ ಒಂದು ಸೀರೆಯನ್ನಾಗಲೀತಂದೆಯವರು ತಮಗಾಗಿ ಅಂಗಿಯನ್ನಾಗಲೀ ತೆಗೆಯದೆ ತಮಗಾಗಿ ಏನೊಂದೂ ಖರ್ಚು ಮಾಡದೆ ಸಾಲ ಬೂಟಿದರು.
ನಮಗೂ ಲಂಗಕ್ಕೆ ಹೊರಗಿನಿಂದ ಬಟ್ಟೆ ತರುತ್ತಿರಲಿಲ್ಲ.ತಂದೆ ಪುರೋಹಿತರಾದ ಕಾರಣ ಮುಂಡು ಎಂಬ ಬಿಳಿ ಬಟ್ಟೆ ದಕ್ಷಿಣೆಯಾಗಿ ಸಿಗುತ್ತಿತ್ತು.ಆಗ ಬಣ್ಣದ ಪುಡಿಗಳು ಸಿಗುತ್ತಿದ್ದವು.ಈಗಲೂ ಸಿಗಬಹುದೋ ಏನೋ..ಹಸಿರು ನೀಲಿ ಕೆಂಪು ಕಾಪಿ ಪುಡಿ ರಂಗಿನ ಪುಡಿಯನ್ನು ತಂದು ಪ್ರತ್ಯ ಪ್ರತ್ಯೇಕವಾಗಿ ಪಾತ್ರೆಯ ನೀರಿಗೆ ಹಾಕಿ ಕುದಿಸಿ ಅದರಲ್ಲಿ ಬಿಳಿ ಮುಂಡನ್ನು ಮುಳುಗಿಸಿ ತೆಗೆದು ಒಣಗಿಸುತ್ತಿದ್ದರು.ಹೀಗೆ ತಯಾರಾದ ಮೂರುನಾಕು ಬಗೆಯ ಬಣ್ಣದ ಬಟ್ಟೆಯಲ್ಲಿಯಲ್ಲಿ ನನಗೆ ಅಕ್ಕನಿಗೆ ಲಂಗ ರವಿಕೆ ಅಣ್ಣ ತಮ್ಮಂದಿರಿಗೆ ಅಂಗಿ ಚಡ್ಡಿ ಹೊಲಿಸುತ್ತಿದ್ದರು.ಅಮ್ಮನ ಅಕ್ಕ ದೊಡ್ಡಮ್ಮನ ಮಕ್ಕಳಿಗೂ ಇದರದ್ದೇ ಬಟ್ಟೆ ಬರೆ.ಅವರ ಪರಿಸ್ಥಿತಿಯೂ ನಮಗಿಂತ ಭಿನ್ನವಾಗಿ ಏನೂ ಇರಲಿಲ್ಲ.
ಬಹುಶಃ ಅಕ್ಕ ಇದೇ ಲಂಗ ರವಿಕೆ ತೊಟ್ಟೇ ಬೆಳೆದಳು.ಅಂಗಡಿಯಿಂದ ತಂದ ಬಣ್ಣ ಬಣ್ಣದ ಹೂವು ಬಳ್ಳಿಗಳ ಚಿತ್ತಾರದ ಬಟ್ಟೆಯ ಲಂಗ ರವಿಕೆಯನ್ನು ಅವಳು ತೊಟ್ಟೇ ಇಲ್ಲ ಎಂದು ನೆನಪು.ನನಗೆ ನಾಲ್ಕನೆಯ ತರಗತಿಯಲ್ಲಿದ್ದಾಗ ಕೋಳ್ಯೂರಾಯನಕ್ಕೆ ಒಂದು ಬಣ್ಣ ಬಣ್ಣದ ಹೂವಿನ ಚಿತ್ತಾರದ ಬಟ್ಟೆ ತಂದು ಸ್ಕರ್ಟ್ ಹೊಲಿಸಿದ್ದು ನೆನಪಿದೆ
ನಂತರ ಐದನೆಯ ತರಗತಿಗೆ ಮತ್ತೆ ನಾನು ಅಜ್ಜನಮನೆ ಸೇರಿ ಮೀಯಪದವಿನ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದೆ
ಅಜ್ಜ ಒಂದೆರಡು ಹಸಿರು ಕೆಂಪು ಗುಲಾಬಿ ಬಣ್ಣ ಬಣ್ಣದ ಡಿಸೈನಿನ ಬಟ್ಟೆ ಯನ್ನು ದಿನಕರಣ್ಣನ ಅಂಗಡಿಯಿಂದ ತೆಗೆದು ಅಲ್ಲಿಯೇ ನನಗೆ ಹೊಲಿಸಿಕೊಟ್ಟಿದ್ದರು.
ಈ ಮೀಯಪದವಿನ ವಿದ್ಯಾವರ್ಧಕ ಶಾಲೆ ನನ್ನ ಬದುಕಿಗೆ ಬಣ್ಣವನ್ನು ತುಂಬುವ ಕೆಲಸ ಮಾಡಿತ್ತು.ಎಲ್ಲೋ ಒಂದು ಮೂಲೆಯಲ್ಲಿ ನನ್ನಷ್ಟಕ್ಕೆ ಇದ್ದ ಕಲಿಯುವುದರಲ್ಲಿಯೂ ಅಷ್ಟಕಷ್ಟೇ ಇದ್ದ ನನ್ನನ್ನು ಗುರುತಿಸಿ ಮುಂದೆ ತಂದವರು ಇಲ್ಲಿನ ಶಿಕ್ಷಕರು.ಈ ಶಾಲೆಯಲ್ಲಿ ಬಹಳ ಕ್ರಿಯಾಶೀಲ ಶಿಕ್ಷಕರಿದ್ದರು.ಮಕ್ಕಳನ್ನು ಬಾಲಕಲೋತ್ಸವಕ್ಕೆ ತಯಾರು ಮಾಡಿ ಬಹುಮಾನವನ್ನು ಬಾಚಿಕೊಂಡು ಬರುತ್ತಿದ್ದರುಅಂತೆಯೇ ಆಟೋಟ ಸ್ಪರ್ಧೆಗಳಲ್ಲೂ ಮುಂಚೂಣಿಯಲ್ಲಿತ್ತು.
ಈ ಶಾಲೆಯಲ್ಲಿ ನಾನು ತರಗತಿಯ ಒಳಗೆ ಇದ್ದದ್ದಕ್ಕಿಂತ ಹೆಚ್ಚು ಹೊರಗೆ ಗ್ರೌಂಡಿನಲ್ಲಿ ಇದ್ದದ್ದೇ ಹೆಚ್ಚು.
ಸದಾ ಡ್ಯಾನ್ಸ್ ನಾಟಕ ಸ್ಪೋರ್ಟ್ಸ್..ಇದರ ತರಬೇತಿ ಸ್ಪರ್ಧೆಗೆ ಹೋಗುದು ಬಹುಮಾನ ತರುದು..ಹೆಚ್ಚು ಪಾಯಿಂಟ್ಸ್ ಯಾರಿಗೆ ಮೀಯ ಪದವು ಶಾಲೆಗೆ ಹೆಚ್ಚು ಶೀಲ್ಡ್ ಯಾರಿಗೆ ಮೀಯಪದವು ಶಾಲೆಗೆ ಎಂದು ಊರಿಡೀ ಪ್ರಶಸ್ತಿ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆ ಮಾಡುತ್ತಿದ್ದುದರಪಥ ಸಂಚಲನದ ವೈಭವದ ಹೆಮ್ಮೆಯ ನೆನಪು ಈಗಲೂ ರೋಮಾಂಚನ ಉಂಟು ಮಾಡುತ್ತದೆ.
ಜೊತೆಗೆ ಡ್ಯಾನ್ಸ್ ನಾಟಕ ಪ್ರಾಕ್ಟೀಸ್ ಮುಗಿಸಿ ತರಗತಿಗೆ ಹೋದಾಗ ಶಂಕರ ಶೆಟ್ಟಿ ಮಾಸ್ಟ್ರು ಈಗ್ಯಾಕೆ ಬಂದದ್ದು? ಕ್ಲಾಸು ನೆನಪಾಯ್ತಾ? ಇನ್ನೇನೂ ತಿರುಗಲಿಕ್ಕೆ ಇಲ್ವ ಎಂದು ಬೈದಾಗ ನಾನು ಮತ್ತು ಮಾಲಿನಿ ಮುಖ ಮುಖ ನೋಡಿಕೊಂಡು ಬೆಪ್ಪಾಗಿ ನಿಂತದ್ದು ನನಗೆ ಈಗಲೂ ನೆನಪಿದೆ
ಶಾಲಾ ಕಾಲೇಜುಗಳಲ್ಲಿ ಇಂಥಹ ಒಂದು ಸಣ್ಣ ಕಾಗೆ ಜಗಳ ವಿವಾದ ಅಂದಿನಿಂದ ಇಂದಿನವರೆಗೂ ಇದೆ ಮುಂದೆಯೂ ಇರುತ್ತದೆ.
ಯಾವುದೇ ಶಾಲಾ ಕಾಲೇಜಿನಲ್ಲಿ ಒಬ್ಬಿಬ್ಬರು ನಾಟಕ ಡ್ಯಾನ್ಸ್ ಭಾಷಣ ಮೊದಲಸದ್ದರಲ್ಲಿ ನಿಷ್ಣಾತ ಉಪನ್ಯಾಸಕರಿರುತ್ತಾರೆ.ಇವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ತರಬೇತಿ ನೀಡಲು ತಮ್ಮ ಬಿಡುವಿನ ಸಮಯದಲ್ಲಿಕೆಲವುವಿದ್ಯಾರ್ಥಿಗಳನ್ನು ಕರೆಯುತ್ತಾರೆ.ಆಗ ಇತರರು ಕಳುಹಿಸದೆ ತಕರಾರು ಮಾಡುದು ಇರ್ತದೆ.ಶಾಲೆಯ ಸಮಯದ ನಂತರ ಮಾಡಿ ಎನ್ನುದು..ಶಾಲಾ ಸಮಯದ ನಂತರ ಈ ಮಕ್ಕಳು ನಿಲ್ಲಬೇಕಲ್ಲ..
ನಾವು ಸಣ್ಣಗಿದ್ದಾಗ ಈ ದೊಡ್ಡವರ ಸಂಗತಿ ನಮಗೆ ಗೊತ್ತಾಗದೆ ಪೆಚ್ಚಾಗುತ್ತಿದ್ದೆವು.ದೊಡ್ಡವರಾಗಿ ಶಿಕ್ಷಕರಾದಾಗ ಇವನ್ನೆಲ್ಲ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿತೆ ನಾನು.
ನಮ್ಮ ಮೀಯಪದವು ಶಾಲೆಯಲ್ಲಿ ಪ್ರತಿಯೊಂದು ಕೆಲಸವನ್ನು ಬಹಳ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಮಾಡುತ್ತಿದ್ದರು.ಅದರಲ್ಲಿ ಬಹಳ ನೆನಪಿಡುವಂತಹದ್ದು ಶಾಲೆಯ ಅಸೆಂಬ್ಲಿ.
ಅಸೆಂಬ್ಲಿಗೆ ಶಾಲಾನಾಯಕ/ಕಿ ನಡುವೆ ಧ್ವಜಸ್ಥಂಭದ ಬಳಿ ನಿಲ್ತಾರೆ
ಅವರ ಎಡಬದಿನಗೆ ನಾಲ್ಕು ಐದು ಸಾಲು ಹುಡುಗರು.ಬಲಬದಿಗೆ ನಾಲ್ಕು ಸಾಲು ಹುಡುಗಿಯರು
ಪ್ರತಿ ಸಾಲನ್ನು ಒಂದು ತಂಡವಾಗಿ ಪರಿಗಣಿಸುತ್ತಿದ್ದರು ಪ್ರತಿ ತಂಡಕ್ಕೆ ಓರ್ವ ಸ್ವಾಂತಂತ್ರ್ಯ ಹೋರಾಟಗಾರರ ಹೆಸರು ಇರುತ್ತಿತ್ತುಉದಾಹರಣೆಗೆ ಸುಭಾಷ್ ಚಂದ್ರ ಭೋಸ್ ಬಾಲಗಂಗಾಧರ ತಿಲಕ್ ,ಹುಡುಗಿಯರ ತಂಡಕ್ಕೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ,ಕಿತ್ತೂರ ರಾಣಿ ಚೆನ್ನಮ್ಮ,ಉಳ್ಳಾಲ ರಾಣಿ ಅಬ್ಬಕ್ಕ ಇತ್ಯಾದಿ.
ಸಾಮಾನ್ಯವಾಗಿ ಕಲಿಕೆಯಲ್ಲಿಮುಂದೆ ಇರುವವರು ಈ ತಂಡಗಳ ನಾಯಕರಾಗಿರುತ್ತಿದ್ದರು.ಅಸೆಂಬ್ಲಿಆಗುವಾಗ ಬಾಲ ಗಂಗಾಧರ ತಿಲಕ್ ಎಂದು ಒಂದು ಹೆಜ್ಜೆ ಮುಂದೆ ಹೋಗಿ ಅಟೆಂನ್ಷನ್ ಎಂದು ಹೇಳಿ ಸೆಲುಟ್ ಎಂದು ಸೆಲುಟ್ ಹೊಡೆದು ಸ್ಡ್ಟಾಂಡ್ ಇಟಗ ಈಸ್ ಎಂದು ಮತ್ತೆ ಸ್ವಸ್ಥಾನಕ್ಕೆ ತಂಡದ ನಾಯಕ ಬರುವ ಕ್ರಮ ಇತ್ತು
ಇದೊಂದು ತಂಡದ ನಾಯಕನಿಗೆ ಬಹಳ ಗೌರವ ಹೆಮ್ಮೆಯ ವಿಚಾರ ಆಗಿತ್ತು
ನಾನು ಹುಡುಗಿಯರ ಮೊದಲ ತಂಡದ ನಾಯಕಿ ಆಗಿದ್ದೆ.ಈ ತಂಡದ ಹೆಸರು ಝಾಂಸಿರಾಣಿ ಲಕ್ಷ್ಮೀ .
ಝಾಂಸಿರಾಣಿ ಲಕ್ಷ್ಮೀಬಾಯಯಿಯ ಕಥೆಯನ್ನು ನಾನು ಯಾರಿಂದ ಕೇಳಿದ್ದೆ ಎಂದು ನನಗೆ ನೆನಪಿಲ್ಕನನಗೆ ಚಂದಮಾಮ ಬಾಲಮಿತ್ರ ಓದುವ ಹವ್ಯಸ ಇತ್ತುಬಹುಶಃ ಅಜ್ಜ ಇವನ್ನು ನಮಗೆ ತಂದು ಕೊಡುತ್ತಿದ್ದರು.ಅಥವಾ ಕೋಳ್ಯೂರು ಗ್ರಂಥಾಲಯದಿಂದ ತಂದು ಓದುತ್ತಿದ್ದೆವು.ಅದರಲ್ಲಿ ಝಾಂಸಿರಾಣಿಯ ಕೆಚ್ಚೆದೆಯ ಸಾಹವನ್ನು ಓದಿ ತಿಳಿದಿದ್ದೆ.ಭಾರತವನ್ನು ಬ್ರಿಟಿಷರ ಕಪಿಮುಷ್ಠಿತಿಂದ ಬಿಡಿಸಿ ಸ್ವತಂತ್ರವಾಗಿಸಲು ಝಾಂಸಿರಾಣಿ ಎಲ್ಲ ವೀರರನ್ನು ಕಲೆಹಾಕಿ ಹುರಿದುಂಬಿಸಿದ್ದಳು.ದತ್ತು ಪುತ್ರನಿಗೆ ರಾಜ್ಯದ ಹಕ್ಕಲ್ಲ ಎಂಬ ಡಾಲ್ ಹೌಸಿಯ ನಿರ್ಬಂಧವನ್ನು ಮೀರಿ ಕೇವಲ ತನ್ನ ರಾಜ್ಯ ಝಾಂಸಿಯ ಉಳಿವಿಗಾಗಿ ಮಾತ್ರವಲ್ಲದೆ ಇಡೀ ದೇಶವನ್ನು ಸ್ವತಂತ್ರಗೊಳಿಸಬೇಕೆಂಮ ಕನಸನ್ನು ಬಿತ್ತಿದ ವೀರ ಮಹಿಳೆ ಅವಳು.ಎಂಟು ವರ್ಷದ ಮಗನನ್ನು ಬೆನ್ನಿಗೆ ಕಟ್ಟಿಕೊಂಡೇ ಕತ್ತಿ ಹಿರಿದು ಬ್ರಿಟಿಷರೊಡದೆ ಹೋರಾಡಿದ ಧೀರೆ ಅವಳು
ಇನ್ನೇನು ಬ್ರಿಟಿಷರ ಕೈ ಮೇಲಾಗುತ್ತದೆ ಎಂದರಿವಾದಾಗ ಶತ್ರುಗಳಿಗೆ ಶರಣಾಗಲಾರೆ ಎಂದು ಕಠಾರಿಯಿಂದ ತನ್ನ ಎದೆಗೆ ಇರಿದುಕೊಂಡು ತನ್ನ ಸ್ವತಂತ್ರ ನೆಲದಲ್ಲಿಯೇ ಪ್ರಾಣತ್ಯಾಗ ಮಾಡಿದ ಸಾಹಸಿ ಅವಳು
.ಈ ಕಥೆ ಚಿಕ್ಕಂದಿನಲ್ಲಿಯೇ ನನ್ನಮನಸಿಗೆ ಬಹಳಷ್ಟಿ ನಾಟಿತ್ತು.ನಾನೂ ಝಾನ್ಸಿರಾಣಿಯಂತೆ ಆಗಬೇಕು ಎಂದುಕೊಂಡಿದ್ದೆ.
ಐದನೆಯ ತರಗತಿಯಲ್ಲಿರುವಾಗಲೇ ಏಳನೆಯ ತರಗತಿಯ ಜಾಣ ವಿದ್ಯಾರ್ಥಿನಿಯರು ಈ ಝಾನ್ಸಿರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿಯರಾಗಿದ್ದುದನ್ನು ಗಮನಿಸಿದ್ದೆ.ಝಾನ್ಸಿ ರಾಣಿ ತಂಡದ ನಾಯಕಿಯಾಗಬೇಕಿದ್ದರೆ ತರಗತಿಯಲ್ಲಿ ಮೊದಲ ಸ್ಥಾನ ಗಳಿಸಬೇಕೆಂದು ನನಗೆ ಗೊತ್ತಾಗಿತ್ತು.
ಅಲ್ಲಿಂದ ನಾನು ಪ್ರಥಮ ಸ್ಥಾನ ಗಳಿಸುವುದಕ್ಕಾಗಿ ಓದಲು ಶುರು ಮಾಡಿದೆ.
ಏಳನೆಯ ತರಗತಿಗೆ ಬಂದಾಗ ಕಲಿಕರಯಲ್ಲಿ ಕೋಡಿಯಡ್ಕ ಮಾಸ್ಟ್ರ ಮಗಳು ಶೈಲಜಾ ನನಗೆ ಪ್ರತಿಸ್ಪರ್ಧಿಯಾಗಿದ್ದಳು.ನನಗಿಂತ ಒಂದೆರಡು ಅಂಕ ಅವಳಿಗೆ ಹೆಚ್ಚಿರುತ್ತಿತ್ತು.ಎಷ್ಟಾದರೂಮಾಸ್ಟ್ರ ಮಗಳಲ್ವಾ? ಮಾಸ್ಟ್ರಿಗೆ ಹೇಳಿ ಕೊಡಲು ಬರುತ್ತದೆ ಮಗಳನ್ನು ಪರೀಕ್ಷೆಗೆ ತಯಾರು ಮಾಡಿ ಕಳುಹಿಸ್ತಾರೆ.ಹೇಗೆ ಪ್ರಶ್ನೆಗಳುಬರುತ್ತವೆ ಹೇಗೆ ಉತ್ತರಿಸವೇಕೆಂಬ ತರಬೇತಿ ಕೊಟ್ಟಿರ್ತಾರೆ
ಮನೆಯಲ್ಲಿ ಹೇಳಿಕೊಡುವವರಿಲ್ಲದ ನಾನು ನಾನೇ ಓದಿ ತಯಾರಾಗಬೇಕಿತ್ತು.
ಅಥವಾ ಶೈಲಜಾ ನನಗಿಂತ ಜಾಣೆ ಇದ್ದಿರಬಹುದು ಒಟ್ಟಿನಲ್ಲಿ ಶೈಲಜಾಳಿಗೆ ನನಗಿಂತ ಒಂದೆರಡು ಅಂಕ ಹೆಚ್ಚು ಬರ್ತಿತ್ತು
ಹಾಗಾಗಿ ನನ್ನ ಕನಸಿನ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿ ಆಗುವುದು ಸುಲಭವಿರಲಿಲ್ಲ
ಆದರೆ ನನ್ನ ಅದೃಷ್ಟಕ್ಕೆ ಅವಳು ಶಾಲಾ ನಾಯಕ ಸ್ಥಾನದ ಚುನಾವಣೆಗೆ ನಿಂತು ಗೆದ್ದು ಶಾಲಾ ನಾಯಕಿಯಾಗಿ ಅಸೆಂಬ್ಲಿಯಾಗುವಾಗ ಧ್ವಜಸ್ಥಂಭದ ಬಳಿ ನಿಂತಳು
ನನಗೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿಯಾಗುವ ಅವಕಾಶ ಸಿಕ್ಕಿತ್ತು.ಅಂದು ಎದೆಯುಬ್ಬಿಸಿ ಝಾನ್ಸಿರಾಣಿ ಲಕ್ಷ್ಮೀ ಬಾಯಿಯ ಹೆಸರಿನಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದಾಗ ಉಂಟಾಗುತ್ತಿದ್ದ ರೋಮಾಂಚನ ಇಂದಿಗೂ ನೆನಪಾದಾಗ ಆಗುತ್ತದೆ ನನಗೆ
ಝಾನ್ಸಿ ರಾಣಿಯಂತೆ ವೀರ ಸೇನಾನಿಯಾಗಲು ನನಗೆ ಸಾಧ್ಯವಾಗಿಲ್ಲ.ಮಿಲಿಟರಿಗೆ ಸೇರುದು ಹೇಗೆಂದೇ ಗೊತ್ತಿಲ್ಲದ ಕಾಲದಲ್ಲಿ ನಾನು ಕಾಲೇಜು ಓದಿದ್ದೇ ದೊಡ್ಡ ಸಾಧನೆ.
ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ( ಹುಡುಗಿ ಏನು ಓದಿದರೇನು ಒಲೆಯ ಬೂದಿ ಗೋರುವುದು ತಪ್ಪದು)ಎಂಬ ಮಾತು ಪ್ರಚಲಿತವಿದ್ದ ಕಾಲದಲ್ಲಿ ಹುಟ್ಟಿ ಬೆಳೆದ ನಾನೀಗ ಉಪನ್ಯಾಸಕಿಯಾಗಿದ್ದೇನೆ ಕೆಲವು ಪುಸ್ತಕ ಲೇಖನ ಬರೆದು ಲೇಖಕಿ ಎಂದೆನಿಸಿಕೊಂಡಿದ್ದೇನೆ ಎಂಬುದೇ ಒಂದು ಸೋಜಿಗದ ವಿಚಾರ....ಇದು ನಿಜವೋ ಭ್ರಮೆಯೋಎಂದು ಚಿವುಟಿ ನೋಡಿಕೊಳ್ಳುವ ಹಾಗೆ ಆಗುತ್ತದೆ ಕೆಲವೊಮ್ಮೆ..ಆದರೆ ಈ ಹಂತ ಮುಟ್ಟಲುನಡೆದ ದಾರಿ ಹುಲ್ಲು ಹಾಸಿನದಾಗಿರಲಿಲ್ಲ..ಹಿಡಿಯಷ್ಟು ಪಡೆಯಲು ಮುಡಿಯಷ್ಟು ಕಳೆದುಕೊಂಡೆನೋ ಏನೋಎಂದು ಕೆಲವೊಮ್ಮೆ ಅನಿಸಿದ್ದಿದೆ..ಆದರೆ ಹಿಂದೆ ಮತ್ತೆ ನಡೆಯಲಾಗದು..ಮುಂದೆ ನಡೆಯುವುದೊಂದೇ ಇರುವ ದಾರಿ...ಅಂತಿಮ ಗುರಿ ಯಾವುದು ? ನನಗೂ ಗೊತ್ತಿಲ್ಲ..
ತೇ ನ ವಿನಾ ತೃಣಮಪಿ ನ ಚಲತಿ..
ಎಲ್ಲವೂ ಭಗವಂತನ ಆಣತಿಯಂತೆಯೇ ನಡೆಯುತ್ತದೆ.ಅವನ ಆಣತಿಯ ಹೊರತಾಗಿ ಹುಲು ಕಡ್ಡಿ ಕೂಡ ಅಲುಗಾಡುವುದಿಲ್ಲ..ಮತ್ತೆ ನಮ್ಮದೇನಿದೆ ಮಹಾ.
ನಾನು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಆಗದಿದ್ದರೂ ಡಾ.ಕೆ ಎನ್ ಗಣೇಶಯ್ಯರ ಪ್ರಸಿದ್ದ ಕಾದಂಬರಿ ಬಳ್ಳಿ ಕಾಳ ಬೆಳ್ಳಿಯ ಜೀವಂತ ಪ್ರಮುಖ ಪಾತ್ರ ಡಾ.ಲಕ್ಷ್ಮೀ ಪೋದ್ದಾರ್ ಆಗಿರುವೆ.ಇಲ್ಲೂ ನಾನು ತುಳು ಸಂಶೋಧಕಿಯಾಗಿಯೇ ಕಾಣಿಸಿಕೊಂಡಿರುವೆ.
ಈ ಕಾದಂಬರಿಯ ಬಿಡುಗಡೆಗೆ ಬಂದಿದ್ದ ಈಗಿನ ಬ್ರಿಟನ್ ಪ್ರಧಾನಿಯ ಅತ್ತೆ ಇನ್ಫೋಸಿಸ್ ನ ಸುಧಾ ಮೂರ್ತಿಯವರ ಜೊತೆ ಕುಳಿತಿದ್ದಾಗ ಒಂದು ಸೆಲ್ಫಿತಗೊಂಡಿದ್ದುಅದನ್ನಿಲ್ಲಿ ಹಾಕಿದ್ದೇನೆ..
ಡಾ.ಲಕ್ಷ್ಮೀ ಜಿ ಪ್ರಸಾದ್
ನಿಮ್ಮ ಹೋರಾಟದ ಬದುಕಿನಲ್ಲಿ ನೀವು ಝಾಂಸೀ ರಾಣಿಯೇ ಆಗಿರುವಿರಿ! ನಿಮ್ಮ ಸೆಲ್ಫೀ ಇಲ್ಲಿ ಬಂದಿಲ್ಲವಲ್ಲ?
ReplyDelete🙏
Delete