Friday, 6 March 2020

ಸಾವಿರದೊಂದು ಗುರಿಯೆಡೆಗೆ: ತುಳು ನಾಡ ದೈವಗಳು: 471- ನಾಡು ಬೈದ್ಯ - ಡಾ.ಲಕ್ಷ್ಮೀ ಜಿ ಪ್ರಸಾದ

ದೇವಾಲಯವನ್ನು ಕಟ್ಟಿಸಿದವರು, ಪ್ರಧಾನ ದೈವಗಳ ಆರಾಧನೆಯನ್ನು ಆರಂಭ ಮಾಡಿದವರಲ್ಲಿ ಅನೇಕರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ವಿಚಾರ ತುಳು ನಾಡಿನಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.ಬದಿಯಡ್ಕ ಸೂರಂಬೈಲು ಸಮೀಪದ ಕಾರಿಂಜೇಶ್ವರ ದೇವಸ್ಥಾನ ಕಟ್ಟಿಸಿದ ಬ್ರಾಹ್ಮಣ ಅಲ್ಲಿ ಕಾರಿಂಜೆತ್ತಾಯ ದೈವವಾಗಿ ಆರಾಧನೆ ಪಡೆಯುತ್ತಾನೆ‌
ಹಿರಿಯಡ್ಕದಲ್ಲಿ ವೀರ ಭದ್ರನನ್ನು ಪ್ರತಿಷ್ಠಾಪನೆ ಮಾಡಿದ ಅಡ್ಕತ್ತಸಯ ಎಂಬ ಬ್ರಾಹ್ಮಣ ಅಡ್ಕತ್ತಾಯ ದೈವ ಆಗಿದ್ದಾನೆ‌
ಸುಜೀರ್ ನಲ್ಲಿ ವೈದ್ಯ ನಾಥ ದೈವ ಆರಾಧನೆ ಆರಂಭಿಸಿದ ಜಾನು ಬೈದ್ಯ ಪ್ರಧಾನ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾನೆ
ಹಾಗೆಯೇ ಕೊಡಮಂದಾಯ ದೈವವನ್ನು ತಂದು ಆರಾಧನೆ ಮಾಡಿದ ನಾಡು ಬೈದ್ಯ ಎಂಬವರು ಕೂಡ ದೈವತ್ವ ಪಡೆದು ಆರಾಧನೆ ಪಡೆಯುವ ಬಗ್ಗೆ ಯೋಗೇಶ ಅಂಚನ್ ಅವರು ಮಾಹಿತಿ ನೀಡಿದ್ದಾರೆ‌
ಬಂಟ್ವಾಳ ತಾಲೂಕಿನ ಕಾರೆಬೆಟ್ಡು ಜೈನರ ಗುತ್ತಿನ ಮನೆಯಲ್ಲಿ
ಈ ದೈವದ ಮರದ ಮೂರ್ತಿ ಇದೆ.ಇಲ್ಲಿ ಕೊಡಮಂದಾಯ ಮತ್ತು ಪಂಜುರ್ಲಿ ಬೂತಗಳಿಗೆ ಆರಾಧನೆ ಇದೆ.ಇವರ ಜೊತೆಯಲ್ಲಿ ನಾಡು ಬೈದ್ಯನಿಗೆ ಕೂಡ ಸಾಂಕೇತಿಕವಾಗಿ ಆರಾಧನೆ ನಡೆಯುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಯೋಗೇಶ್ ಅಂಚನ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಗಳು

Saturday, 29 February 2020

ಸಾವಿರದೊಂದು ಗುರಿಯೆಡೆಗೆ ತುಳು ನಾಡ ದೈವಗಳು : 470 ಕೋಳೆಯಾರ ಮಾಮ - ಡಾ.ಲಕ್ಷ್ಮೀ ಜಿ ಪ್ರಸಾದ್



ಕೋಳೆ/ಳಿಯಾರ ಮಾಮ

ಕೋಳೆ/ಳಿಯಾರ ಮಾಮ
 ಒಂದು ಅಪರೂಪದ ದೈವ,ತುಳು ನಾಡಿನ ಹೆಚ್ಚಿನ ದೈವಗಳು ಈ ಹಿಂದೆ ಮಾನವರಾಗಿದ್ದವರೇ ಆಗಿದ್ದಾರೆ.ಯಾವುದಾದರೂ ಕಾರಣಕ್ಕೆ  ದುರಂತವನ್ನಪ್ಪಿ ದೈವತ್ವ ಪಡೆದವರು ಅನೇಕರು ಇದ್ದಾರೆ.ತುಳು ನಾಡಿನಲ್ಲಿ ಯಾರಿಗೆ ಯಾಕೆ ಹೇಗೆ ದೈವತ್ವ ಸಿಗುತ್ತದೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ‌.ಆದರೂ ಅನೇಕರು  ಪ್ರಧಾನ ದೈವಗಳ ಅನುಗ್ರಹ ಅಥವಾ ಆಗ್ರಹಕ್ಕೆ ತುತ್ತಾಗಿ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ. ಅಕ್ಕಚ್ಚು,ಆಲಿ ಭೂತ,ದೆವರ ಪೂಜಾರಿ ಪಂಜುರ್ಲಿ ,ಬ್ರಾಣ ಭೂತ ಮೊದಲಾದವರು ಹೀಗೆ ದೈವತ್ವವನ್ನು ಪಡೆದವರು‌.
ಇಲ್ಲಿ ದೈವತ್ವ ಪಡೆದವರೆಲ್ಲ ತುಳುನಾಡಿನವರೇ ಎಂಬಂತಿಲ್ಲ. ಕನ್ನಡ ಬೀರ,ಕನ್ನಡ ಭೂತ, ಬೈಸು ನಾಯಕ,ಬಚ್ಚ ನಾಯಕ ಮೊದಲಾದವರು ಘಟ್ಟದ ಮೇಲಿನಿಂದ ಇಳಿದು ಬಂದು ತುಳುನಾಡಿನಲ್ಲಿ ಕಾರಣಾಂತರಗಳಿಂದ ದೈವತ್ವ ಪಡೆದವರಾಗಿದ್ದಾರೆ.ಇದಕ್ಕೆ ದೇಶ ರಾಜ್ಯಗಳ ಗಡಿ ಕೂಡ ಇಲ್ಲ.ಅರಬ್ ದೇಶದಿಂದ ಬಂದ ಖರ್ಜೂರ ವ್ಯಾಪಾರಿ ಮಂಗಳೂರು ಉರ್ವ ಚಿಲಿಂಬಿಯಲ್ಲಿ ಅರಬ್ಬಿ ಭೂತವಾಗಿದ್ದಾನೆ.ಬಸ್ರೂರಿನಲ್ಲಿ ಐದು ಚೀನೀ ಭೂತಗಳಿವೆ.
ಅಂತೆಯೇ ಸಾಸ್ತಾನ ಕೋಡಿತಲೆ ಗ್ರಾಮದಲ್ಲಿ ಕೋಳೆ/ಳಿಯಾರ ಎಂಬ ದೈವ ಇದೆ.ಇಲ್ಲಿ ಹಾಯ್ಗುಳಿ‌ಪ್ರಧಾನ ದೈವ.ಪ್ರಧಾನ ದೈವ ಹಾಯ್ಗುಳಿಯ ಸೇರಿಗೆ ದೈವವಾಗಿ ಕೋಳೆಯಾರ/ ಕೋಳೆಯಾರ ಮಾಮ ಎಂಬ ದೈವಕ್ಕೆ ಆರಾಧನೆ ಇದೆ.ಇಲ್ಲಿನ ಅರ್ಚಕರಾದ ಕೊರಗ ಪೂಜಾರಿಯವರು ಈ ಬಗ್ಗೆ ಮಾಹಿತಿ ನೀಡಿದ್ದು ಶ್ರೀ ಚಂದ್ರ ಶೇಖರ ನಾವಡ ಇದನ್ನು ರೆಕಾರ್ಡ್ ಮಾಡಿ ಯು ಟ್ಯೂಬ್ ನಲ್ಲಿ ಹಾಕಿದ್ದಾರೆ.
ಕೋಳೆಯರ ಎಂಬುದು ಮಹಾರಾಷ್ಟ್ರದ ಒಂದು ಮೀನುಗಾರರ ಸಮುದಾಯ.ಇವರನ್ನು ಕೋಳಿಯವರ ಕೋಳೆಯರರು ಎಂದು ಕರೆಯುತ್ತಾರೆ. ಇವರು ಆರ್ಥಿಕವಾಗಿ ಸಾಕಷ್ಟು ಸದೃಢರಾದವರು‌.
ಮಹಾರಾಷ್ಟ್ರ ದಿಂದ  ಕೋಳೆಯರ ಸಮುದಾಯದ ಓರ್ವ ಮಾಂತ್ರಿಕ ಶಕ್ತಿ ಇರುವ ವ್ಯಕ್ತಿ  ಕುಂದಾಪುರ ಕೋಡಿ ತಲೆ ಸಮೀಪದ ಹಂಗಾರಕಟ್ಡೆಯ ಬಂದರಿಗೆ ಬರುತ್ತಾನೆ.ಅವನು ಕೋಡಿತಲೆಯ ಹಾಯ್ಗುಳಿ ದೈವದ ಬಗ್ಗೆ ಕೇಳಿರುತ್ತಾನೆ..ಇಂತಹ ದೈವ ತಮ್ಮ ಊರಿನಲ್ಲಿ ಇದ್ದರೆ ಒಳ್ಳೆಯದೆಂದು ಭಾವಿಸಿ ತನ್ನ ಮಂತ್ರ ಶಕ್ತಿಯಿಂದ ಹಾಯ್ಗುಳಿಯನ್ನು ಕರೆದೊಯ್ಯಬೇಕೆಂದು ಯೋಚಿಸುತ್ತಾನೆ.
.ಇತ್ತ ಹಾಯ್ಗುಳಿ ದೈವವು ಇಂತಹ ಮಾಂತ್ರಿಕ ಶಕ್ತಿ ಇರುವ ಬಂಟ ತನಗಿದ್ದರೆ ಇನ್ನೂ ಒಳ್ಳೆಯದೆಂದು ಆತನನ್ನು ಇಲ್ಲಿಗೆ ಕರೆತರಲು ಯೋಚಿಸುತ್ತದೆ‌.
ಕೋಳೆಯಾರ ಸಮುದಾಯದ ವ್ಯಕ್ತಿ  ಬಂದರಿನಿಂದ ಅಳಿವೆ ಮೂಲಕ ಒಳಗೆ ಬರಲು ದೋಣಿಗೆ ಹಾಯಿ ಕಟ್ಟುತ್ತಾನೆ.ಆಗ ಅಯ ತಪ್ಪಿ ಕೆಳಗೆ ಹಡಗಿಗೆ ಬೀಳುತ್ತಾನೆ.ಅವನ ತಲೆ ತುಂಡಾಗಿ ರುಂಡ ಮುಂಡ ಬೇರೆಯಾಗಿ ಬೀಳುತ್ತಾನೆ. ಆಗ ಅವನನ್ನು ಕರೆತಂದು ಹಾಯ್ಗುಳಿ ದೈವವು ತನ್ನ ಬಂಟನಾಗಿ ಕೋಡಿ ತಲೆ ಗ್ರಾಮದಲ್ಲಿ ತನ್ನ ಜೊತೆಯಲ್ಲಿ ನೆಲೆ ಗೊಳಿಸುತ್ತದೆ.
ಆತ ಮಹಾರಾಷ್ಟ್ರ ದ  ಕೋಳೆಯಾರ ಸಮುದಾಯದ ವ್ಯಕ್ತಿ ಆದ ಕಾರಣ ಆತನನ್ನು ಅದೇ ಹೆಸರಿನಲ್ಲಿ ಆರಾಧನೆ ಮಾಡುತ್ತಾರೆ.
ಆತ ಕೈಯಲ್ಲಿ ಒಂದು ಕೋಳಿಯನ್ನು ಹಿಡಿದಿರುತ್ತಾನೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಯು ಟ್ಯೂಬ್ ನಲ್ಲಿ ಹಾಕಿದ ಚಂದ್ರಶೇಖರ ನಾವಡ ಮಾಹಿತಿ ನೀಡಿದ ಕೊರಗ  ಪೂಜಾರಿ ಮತ್ತು ಯು ಟ್ಯೂಬ್ ಲಿಂಕ್ ನೀಡಿ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ  ಪ್ರಸನ್ನ ಪಿ ಪೂಜಾರಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು
ಯು ಟ್ಯೂಬ್ ನಲ್ಲಿ ನೋಡಿರಿ
https://youtu.be/CVwJ7mgMeFQ

Friday, 21 February 2020

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 469 ದೇವರ ಪೂಜಾರಿ ಪಂಜುರ್ಲಿ

ತುಳುವರ ಭೂತಾರಾಧನೆ ಕೇವಲ ತುಳುನಾಡಿಗೆ ಸೀಮಿತವಲ್ಲ.ಚಿಕ್ಕಮಗಳೂರಿನ ಹಳ್ಳಿ ಬೈಲು ಕೊಪ್ಪ ಸಮೀಪ ಸುಮಾರು ಇನ್ನೂರು ವರ್ಷದ ಹಿಂದಿನ ಸಾನದ ಮನೆ ಇದೆ‌.ಭೂತಸ್ಥಾನದ ಮನೆ ಎಂಬುದೇ ಸಾನದ ಮನೆ ಎಂದಾಗಿರುತ್ತದೆ‌‌.ಈ ಮನೆಯ ಯುವಕರಾದ ರೂಪೇಶ್ ಪೂಜಾರಿಯವರು ಇಲ್ಲಿ ಆರಾಧನೆ ಆಗುವ ಒಂದು ಅಪರೂಪದ ದೈವದ ಬಗ್ಗೆ ತಿಳಿಸಿದ್ದಾರೆ.
ಇಲ್ಲಿ ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನ ಒಂದು ದೈವಕ್ಕೆ ಆರಾಧನೆ ಇದೆ.ಈ ದೈವ ಪಂಜುರ್ಲಿ ದೈವವಲ್ಲ.ಪಂಜುರ್ಲಿ ದೈವದ ಸೇರಿಗೆಗೆ ಸಂದ ಬ್ರಾಹ್ಮಣ.
ಆ ಸಾನದ ಮನೆಯ ಪಂಜುರ್ಲಿ ದೈವವನ್ನು ಓರ್ವ ಬ್ರಾಹ್ಮಣ ಅರ್ಚಕರು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ‌.ಕಾಲಾಂತರದಲ್ಲಿ ಅವರು ಮರಣವನ್ನಪ್ಪಿದ ನಂತರ ದೈವತ್ವ ಪಡೆದು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾರೆ.
ಅವರು ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾರೆ.
ಈ ದೈವಕ್ಕೆ ಸಸ್ಯಾಹಾರವನ್ನು ಎಡೆ ಇಡುತ್ತಾರೆ‌.ಇದು ಈ ದೈವದ ಬ್ರಾಹ್ಮಣ ಮೂಲವನ್ನು ಸೂಚಿಸುತ್ತದೆ.
ಮಾಹಿತಿ ನೀಡಿದ ರೂಪೇಶ್ ಅವರಿಗೆ ಕೃತಜ್ಞತೆಗಳು.

Thursday, 13 February 2020

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು - 464-465 ಕಲಿಚ್ಚಿ ಮತ್ತು ಕಲ್ಲನ್ ತೆಯ್ಯಂ

ಇದು ನಾಚಿಕೆ ತೆಯ್ಯಂ ಅಲ್ಲ..ಸುಳ್ಯ ಸುದ್ದಿ ಯಲ್ಲಿ  ತಪ್ಪಾಗಿ ಹಾಕಿದ್ದಾರೆ.

ಇದು ಕಲಿಚ್ಚಿ ಎಂಬ ತೆಯ್ಯಂ, ಕಾಲನ್ ಮತ್ತು ಕಾಲಿಚ್ಚಿ ಅವಳಿಗಳು,ಯಾವುದೋ ಕಾರಣದಿಂದ ಅವರಿಗೆ ಪರಸ್ಪರ ಪ್ರೇಮ ಉಂಟಾಗುತ್ತದೆ .ವಿವಾಹವಾಗಿ ಒಂದು ಮಗು ಕೂಡ ಹುಟ್ಡುತ್ತದೆ.ವಿಧಿ ನಿಷೇಧಗಳು ಆದಿ ಮಾನವನ ಶಾಸನಗಳಾಗಿದ್ದವು.ಸಹೋದರ ವಿವಾಹ ಅಗಮ್ಯ ಗಮನ .ಬಹುಶಃ ಇದನ್ನು ಮೀರಿದ ಕಾರಣ ಅವರ ಮಗುವನ್ನು ಗುಳಿಗ ಸುಟ್ಟು ತಿನ್ನುತ್ತಾನೆ‌.ನಂತರ ಕಾಲನ್ ಮತ್ತು ಕಾಲಿಚ್ಚಿ ಗುಳಿಗನ ಸೇರಿಗೆಗೆ ಸಂದು ದೈವತ್ವ ಪಡೆಯುತ್ತಾರೆ.ಅವರ ಗತ ಜೀವನದ ಪ್ರೇಮ,ಒನಪು ವಯ್ಯಾರಗಳ ಅಭಿವ್ಯಕ್ತಿ ಇಲ್ಲಿದೆ  .ಇವಿಷ್ಟು ಸಂಕ್ಷಿಪ್ತ ಮಾಹಿತಿ.ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶಂಕರ್ ಕುಂಜತ್ತೂರು,ಶ್ರೀಧರ ಪಣ್ಣಿಕ್ಕರ್,ಕುಂಞಿರಾಮನ್ ಇವರುಗಳಿಗೆ ಧನ್ಯವಾದಗಳು- ಡಾ.ಲಕ್ಷ್ಮೀ ಜಿ ಪ್ರಸಾದ

https://youtu.be/o0iGNfR45N8

Tuesday, 3 December 2019

ಸಾವಿರದೊಂದು ಗುರಿಯೆಡೆಗೆ ತುಳು ನಾಡ ದೈವಗಳು: 463 ಶ್ರೀ ದೇವಿ ಜುಮಾದಿ

ಶ್ರೀದೇವಿ ಜುಮಾದಿ ಜುಮಾದಿ ದೈವವಲ್ಲ‌.ಶ್ರೀದೇವಿ ಎಂಬ ಹೆಸರಿನ ಹೆಣ್ಣುಮಗಳೊಬ್ಬಳು ದೈವತ್ವ ಪಡೆದು ಶ್ರೀದೇವಿ ಜುಮಾದಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾಳೆ.
ಕುಂದಾಪುರದ ಬೀಜಾಡಿ ಸಮೀಪದ ಐಗಳ ಮನೆಯಲ್ಲಿ ಶ್ರೀದೇವಿ ಜುಮಾದಿ ದೈವಕ್ಕೆ ಆರಾಧನೆ ಇದೆ.

ಸುಮಾರು ನಲುವತ್ತು ನಲುವತ್ತೈದು ವರ್ಷದ ಹಿಂದೆ ನಡೆದ ಕಥಾನಕ ಇದು.
ಕುಂದಾಪುರ ಬೀಜಾಡಿ ಐಗಳ ಮನೆಯಲ್ಲಿ ಶ್ರೀದೇವಿ ಎಂಬ ಹುಡುಗಿ ಇದ್ದಳು.ಅವಳಿಗೆ ಯಾವುದೋ ಅನಾರೋಗ್ಯ ಬಾಧಿಸಿ ಅವಳು ಸಾವನ್ನಪ್ಪುತ್ತಾಳೆ.
ನಂತರ ಅವರ ಮನೆ ಮಂದಿಗೆ ಅನೇಕ ತೊಂದರೆಗಳು ಉಮಟಾಗುತ್ತವೆ‌.ಆಗ ಪ್ರಶ್ನೆ ಇಟ್ಟು ಕೇಳಿದಾಗ ಆ ಶ್ರೀದೇವಿ ಎಂಬ ಹೆಸರಿನ ಹುಡುಗಿ ದೈವವಾಗಿದ್ದಾಳೆ.ಅವಳಿಗೆ‌ಮರದ ಪಾಪೆಯನ್ನು ಮಾಡಿ ಆರಾಧನೆ ಮಾಡಬೇಕೆಂದು ಕಂಡುಬರುತ್ತದೆ.
ನಂತರ ಅವಳನ್ನು ದೈವದ ರೂಪದಲ್ಲಿ ಆರಾಧನೆ ಮಾಡುತ್ತಾರೆ.ಆ ದೈವವನ್ನು ಶ್ರೀದೇವಿ ಜುಮಾದಿ ಎಂದು ಕರೆಯುತ್ತಾರೆ.
ಮಾಹಿತಿ ನೀಡಿದ ಪ್ರದ್ಯುಮ್ನ ಅವರಿಗೆ ಕೃತಜ್ಞತೆಗಳು

Tuesday, 19 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 458-462 ಅಗ್ನಿ ಭೈರವನ್, ಆದಿ ಬೈರವನ್, ಭೈರವನ್, ಶಕ್ತಿ ಭೈರವನ್, ಐಓಗಿ ಭೈರವನ್

ಭೈರವನ್, ಅಗ್ನಿ ಭೈರವನ್,ಯೋಗಿ ಭೈರವನ್, ಶಕ್ತಿ ಭೈರವನ್ ಮತ್ತು ಆದಿ ಭೈರವನ್ ತೆಯ್ಯಂ ಗಳು
ಭೈರವನ್ ತೆಯ್ಯಂ ಹೆಸರು ಕೇಳಿದಾಗ ನಾನು ತುಳುವರು ಆರಾಧಿಸುವ ಕಾಳಭೈರವ ದೈವತವಿರಬಹುದೆಂದು ನಾನು ಭಾವಿಸಿದ್ದೆ‌.ಆದರೆ ಭೈರವನ್ ತೆಯ್ಯಂ ಮತ್ತು ಕಾಳ ಭೈರವ ಬೇರೆ ಬೇರೆ ದೈವಗಳು ‌.
ಬೈರವನ್ ಪಣನ್ಮಾರ್ ಸಮುದಾಯದವರ ಆರಾಧ್ಯ ದೈವತ‌.ಈ ದೈವಕ್ಕೆ ವಿಶಿಷ್ಠವಾದ ಹಿನ್ನೆಲೆ ಇದೆ‌.
ಚೆರುತಂಡನ್ ಮಠ/ ವಿಹಾರಕ್ಕೆ ಸಂಬಂಧಿಸಿದ ಮಹಿಳೆಗೆ ದೀರ್ಘಕಾಲ ಸಂತತಿಯಾಗಿರಲಿಲ್ಲ.ಅವಳು ಶಿವನ ಅನನ್ಯ ಭಕ್ತೆಯಾಗಿದ್ದು,ದಿನ ನಿತ್ಯ ಶಿವನನ್ನು ಧ್ಯಾನಿಸುತ್ತಿದ್ದಳು.ನಲುವತ್ತೊಂದು ದಿನಗಳ ಕಾಲ ಉಪವಾಸವಿದ್ದು ಅರ್ಚನೆ ಮಾಡುತ್ತಿದ್ದಳು.ಆ ಸಮಯದಲ್ಲಿ ಅವಳು ಒಂದು ಸಾವಿರ ಯೋಗಿಗಳಿಗೆ ಊಟ ಉಪಾಹಾರದ ವ್ಯವಸ್ಥೆ ಮಾಡುತ್ತಿದ್ದಳು.ಅವಳ ಭಕ್ತಿಗೆ ಒಲಿದ ಮಹೇಶ್ವರನು ಅನುಗ್ರಹ ಮಾಡುತ್ತಾನೆ‌.ಅವಳಿಗೆ ಓರ್ವ ಮಗ ಹುಟ್ಟುತ್ತಾನೆ‌‌ ಬಹಳ ಸುಸಂಸ್ಕೃತನೂ ಬುದ್ಧಿವಂತನೂ ಆದ ಆ ಮಗು ಚೀರಳನ್ ಏಳನೆಯ ವಯಸ್ಸಿಗೆ ವಿದ್ಯೆಯನ್ನು ಕಲಿತು ಮುಂದಿನ ಶಿಕ್ಷಣಕ್ಕೆ ಅಣಿಯಾಗುತ್ತಾನೆ‌.ಉನ್ನತ ಶಿಕ್ಷಣಕ್ಕೆ ಕಳುಹಿಸುವ ಮೊದಲು ಚೆರುತಂಡನ್ ಯೋಗಿಗಳನ್ನು ಆರಾಧಿಸಲು ನಿರ್ಧರಿಸಿ ಮಠಕ್ಕೆ ಯೋಗಿಗಳನ್ನು ಕರೆಯಲು ಹೋಗುತ್ತಾನೆ‌.ಅಲ್ಲಿ ನೋಡಬಾರದ್ದನ್ನು ನೋಡಿ ಅವರಿಗೆ ಶಪಿಸುತ್ತಾನೆ‌
ಆಗ ಯೋಗಿಗಳು ಚೀರಳನ್ ನ ರಕ್ತ ಮಾಂಸಗಳ ಭೋಜನವನ್ನು ಕೇಳುತ್ತಾರೆ ‌.ಬೇರೆ ದಾರಿ ಇಲ್ಲದೆ ಚೀರಳನ್ ನನ್ನು ಕೊಂದು ಅವನ ಮೂಳೆ ಮಾಂಸಗಳಿಂದ ಆಹಾರ ತಯಾರಿಸಿ ಚೆರುತಂಡನ್ ಯೋಗಿಗಳಿಗೆ ಬಡಿಸುತ್ತಾನೆ‌. ಆಗ ಚೀರಳನ್ ನ ಮೂಳೆಗಳು ಅವರ ಊಟದ ಎಲೆಯಲ್ಲಿ ಅಲುಗಾಡುತ್ತವೆ.ಅದನ್ನು ನೋಡಿ ಯೋಗಿಗಳಿಗೆ ಭಯವಾಗಿ ಅವನನ್ನು ನಿಯಂತ್ರಿಸುವ ಸಲುವಾಗಿ ಒಂದು ಹೋಮ ಮಾಡುತ್ತಾರೆ.ಆಗ ಚೀರಳನ್ ಭೈರವನ್ ದೈವವಾಗಿ ಹೋಮದ ಬೆಂಕಿಯಲ್ಲಿ ಕಾಣಿಸುತ್ತಾನೆ‌.ಅವನ ಜೊತೆಯಲ್ಲಿ ಅಗ್ನಿ ಭೈರವನ್, ಯೋಗಿ ಭೈರವನ್, ಆದಿ ಬೈರವನ್ ,ಶಕ್ತಿ ಭೈರವನ್ ತೆಯ್ಯಂ ಗಳು ಉದಿಸುತ್ತವೆ.ಆಗ ಇವರ ಶಕ್ತಿಯನ್ನು ಮನಗಂಡ ಯೋಗಿಗಳು ಇವರಿಗೆ ತೆಯ್ಯಂ ಕಟ್ಟಿಸಿ ಆರಾಧನೆ ಮಾಡುತ್ತಾರೆ. : ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ: Theyyam calendar

Monday, 18 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 456-457 ಅಂಗಕ್ಕಾರನ್ ಮತ್ತು ಮರುಟೋಳ ದೈವಗಳು

ಅಂಗಕ್ಕಾರನ್ ಮತ್ತು ಮರುಟೋಳ( Marutola) ತೆಯ್ಯಂ.
ಕಾಸರಗೋಡಿನ ಸುತ್ತಲಿನ ಪ್ರದೇಶಗಳಲ್ಲಿ ಅಂಗಕ್ಕಾರನ್ ಮತ್ತು ಮರುಟೋಳ ಎಂಬ ಎರಡು ದೈವಗಳಿಗೆ ಆರಾಧನೆ ನಡೆಯುತ್ತದೆ.   ದ್ವಂದ್ವ ಯುದ್ಧ  ( ಕಳರಿ ಪಯಟ್ಟು) ಮಾಡಿದ ಇಬ್ಬರು ಶೂರರ ಕಥಾನಕ ಈ ದೈವಗಳ ಹಿನ್ನೆಲೆಯಲ್ಲಿ ಇದೆ‌.

ಅಂಗಕ್ಕಾರನ್ ಎಂಬುದು ಮಲೆಯಾಳ ಭಾಷೆಯ ಪದವಾಗಿದ್ದು ಇದಕ್ಕೆ ಅಂಗ ಸಾಧಕ,ಕುಸ್ತಿಪಟು,ವೀರ,ಹೋರಾಟಗಾರ  ಎಂಬರ್ಥ .
ಈ ಎರಡು ದೈವಗಳು ಕುಸ್ತಿಪಟುಗಳು, ವೀರರು ಆಗಿದ್ದರು‌.

ಅಂಗಕ್ಕಾರನ್ ತನ್ನ ಶತ್ರು ,ಪ್ರತಿಸ್ಪರ್ಧಿ ಯಾಗಿರುವ ಮರುಟೋಳನ( ಆತನ ಮೂಲ ಹೆಸರು ಕೇಳು) ಜೊತೆಯಲ್ಲಿ ದ್ವಂದ್ವ ಯುದ್ಧ  ಮಾಡಿ ಸೋಲಿಸುತ್ತಾನೆ.ಆಗ ಅವನ ಶತ್ರು ಮರುಟೋಳ ಓಡಿ ಹೋಗಿ ಕಣ್ಮರೆಯಾಗುತ್ತಾನೆ‌‌
ತುಸು ಸಮಯದ ನಂತರ ಅಂಗಕ್ಕಾರನ್ ನ ಕಣ್ಣಿಗೆ ಬೀಳುತ್ತಾನೆ ‌.ಆಗ ನಡೆದ ದ್ವಂದ್ವ ಯುದ್ಧದಲ್ಲಿ ಅಂಗಕ್ಕಾರನ್  ಮರುಟೋಳ ನನ್ನು ಕೊಲ್ಲುತ್ತಾನೆ.
ನಂತರ ಇವರಿಬ್ಬರೂ ದೈವತ್ವ ಪಡೆದು ತೆಯ್ಯಂ ಗಳಾಗಿ ಕೇರಳದ ಉತ್ತರ ಭಾಗವಾದ ಕಾಸರಗೋಡಿನ ಸುತ್ತುಮುತ್ತಲಿನ ಪ್ರದೇಶದಲ್ಲಿ ಆರಾಧನೆ ಪಡೆಯುತ್ತಾರೆ.
ಅಂಗಕ್ಕಾರನ್ ದೈವದ ಕೋಲ( ತೆಯ್ಯಂ ಕಟ್ಟ್) ಆಗುವಾಗ ಆತ ಮರುಟೋಳನನ್ನು ಸೋಲಿಸಿ ಕೊಂದದರ ಪ್ರತೀಕವಾಗಿ ಅಂಗಕ್ಕಾರನ್ ದೈವ ಮರುಟೋಳ ದೈವದ ಕತ್ತಿಯನ್ನು ಸೆಳೆದು ತೆಗೆದುಕೊಳ್ಳುತ್ತಾನೆ‌. - ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ Theyyam calendar