ನೈದಾಲ ಪಾಂಡಿಯಾದ ಬೆಳ್ಳಾರೆಯ ರಾಜಕುಮಾರ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ |
ಡಾ. ಲಕ್ಷ್ಮೀ ಜಿ. ಪ್ರಸಾದ |
ಬುಧವಾರ, 31 ಜುಲೈ 2013 (06:47 IST)
|
ತುಳುನಾಡಿನ ಭೂತ ಪದಕ್ಕೆ ಕನ್ನಡದ
ಭೂತ ಅಥವಾ ದೆವ್ವ ಎಂಬ ಅರ್ಥವಿಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಣ ಶಿಷ್ಟ ರಕ್ಷಕ
ಶಕ್ತಿಗಳು. ಇವು ತುಳುವರ ಆರಾಧ್ಯ ದೈವಗಳು.ಸಂಸ್ಕೃತದ ಪೂತಂ ಎಂದರೆ ಪವಿತ್ರವಾದದ್ದು ಎಂಬ
ಪದವೇ ಕಾಲಾಂತರದಲ್ಲಿ ಬೂತೊ ಎಂದಾಗಿ ಸಂಸ್ಕೃತೀಕರಣಗೊಂಡು ಭೂತ ಎಂದಾಗಿರುವ ಸಾಧ್ಯತೆ
ಇದೆ. ತುಳುನಾಡಿನ ಭೂತಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು ಹೊಂದಿದ್ದು ಅಸಹಜ
ಮರಣವನ್ನಪ್ಪಿದ ಸಾಂಸ್ಕೃತಿಕ ವೀರರೇ ಆಗಿದ್ದಾರೆ. "ಈ ಹಿಂದೆ ಇದ್ದವರು" ಎಂಬರ್ಥದಲ್ಲಿ
ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ.ಅನೇಕ ಅರಸರು ,ವೀರರು ಅನ್ಯಾಯವನ್ನು ,ಜಾತಿ
ತಾರತಮ್ಯವನ್ನು ಪ್ರಶ್ನಿಸಿದ ಅನೇಕ ಸಾಂಸ್ಕೃತಿಕ ವೀರರು ದೈವತ್ವವನ್ನು ಪಡೆದು ಭೂತಗಳಾಗಿ
ಆರಾಧನೆ ಪಡೆಯುತ್ತಿದ್ದಾರೆ. ಇತಿಹಾಸ, ರಾಜಕೀಯ, ಸಂಸ್ಕೃತಿ, ಸಾಮಾಜಿಕ, ಜಾನಪದ
ಸೇರಿದಂತೆ ಎಲ್ಲ ವಿಚಾರಗಳು ಕೂಡ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವದೊಂದಿಗೆ ತಳುಕು
ಹಾಕಿಕೊಂಡಿದೆ.ಭೂತಾರಾಧನೆಯಲ್ಲಿ ಈ ಎಲ್ಲ ಅಂಶಗಳು ಅಡಕವಾಗಿವೆ .ಆದರೆ ಈ ಬಗ್ಗೆ ಹೊರ
ಜಗತ್ತಿಗೆ ಇನ್ನೂ ಸರಿಯಾಗಿ ತಿಳಿದಿಲ್ಲ . ಎರಡು ವರ್ಷದ ಮೊದಲು ನಾನು ಬೆಳ್ಳಾರೆ -ಒಂದು
ಐತಿಹಾಸಿಕ ಸಾಂಸ್ಕೃತಿಕ ಅಧ್ಯಯನ ಎಂಬ ಪ್ರಬಂಧವನ್ನು ಇತಿಹಾಸ ಅಕಾಡೆಮಿಯ ವಾರ್ಷಿಕ
ಸಮಾವೇಶದ ದೊಡ್ಡ ಸಭೆಯಲ್ಲಿ ಮಂಡಿಸಿದ್ದೆ .ಬೆಳ್ಳಾರೆಯ ರಾಜಕುಮಾರನೊಬ್ಬ ದೈವವಾಗಿ
ಆರಾಧಿಸಲ್ಪಡುವ ವಿಚಾರ ಹೇಳುತ್ತಲೇ ಸಭೆಯಲ್ಲಿದ್ದ ವಿದ್ವಾಂಸರೊಬ್ಬರು ಎದ್ದು ನಿಂತು
"ಯಾವನೋ ಸತ್ತು ದೆವ್ವ ಆಗುತ್ತಾನೆ ಆ ಕಟ್ಟು ಕಥೇನ ಇಲ್ಲೇನು(ಇತಿಹಾಸ ಅಕಾಡೆಮಿಯಲ್ಲಿ )
ಹೇಳ್ತೀರಿ" ಎಂದು ಆಕ್ಷೇಪಿಸಿದರು .ಸಂಪ್ರಬಂಧ ಮಂಡನೆಯ ನಂತರ ಚರ್ಚೆ ಇರುವುದು ಸಾಮಾನ್ಯ
.ಆದರೆ ಇಲ್ಲಿ ನಾನು ಆರಂಭಿಸುವಾಗಲೇ ಆಕ್ಷೇಪ ಬಂತು !ಮೌಖಿಕ ಇತಿಹಾಸಕ್ಕೆ ಮನ್ನಣೆ
ಇದೆ.ಮೌಖಿಕ ಇತಿಹಾಸ ಕೂಡ ಇತಿಹಾಸದ ಒಂದು ಭಾಗ . ಆದರೆ ಅಲ್ಲಿದ್ದ ಯಾರೂ ಕೂಡಾ (ಅಲ್ಲಿ
ಕೆಲವರು ತುಳುವ ವಿದ್ವಾಂಸರು ಇದ್ದರು !) ಈ ಬಗ್ಗೆ ಉಸಿರೆತ್ತಲಿಲ್ಲ. ನನಗೆ ಸಾಕಷ್ಟು
ಪರಿಚಿತರಿದ್ದ ಕೆಲವರು ಅಲ್ಲಿಂದ ಕೂಡಲೇ ಪರಾರಿಯಾಗಿದ್ದರು !ಸುಮ್ಮನೆ ದೊಡ್ಡ
ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳುವುದೇಕೆ?! "ತುಳುವರ ಭೂತಗಳನ್ನು ದೆವ್ವ ಎಂದರೇನು?
ಪಿಶಾಚಿ ಎಂದರೇನು? ನಮಗೂ ಅದಕ್ಕೂ ಸಂಬಂಧ ಇಲ್ಲ" ಎಂಬಂತೆ ಅನೇಕರು ಜಾಣ ಮೌನಕ್ಕೆ
ಮೊರೆಹೊಗಿದ್ದರು !ಕೊನೆಗೆ ನಾನು ಅಂತು ಇಂತೂ ಹೇಗೋ ಅನೇಕ ಗೊಂದಲಗಳ ನಡುವೆಯೇ ನನ್ನ
ಮಾತನ್ನು ಮುಗಿಸಿ ವೇದಿಕೆಯಿಂದ ಕೆಳಗೆ ಇಳಿದೆ !ನಂತರ ಆ ವಿದ್ವಾಂಸರ ಬಳಿಗೆ ಹೋಗಿ ಮೌಖಿಕ
ಇತಿಹಾಸ ಕೂಡ ಇತಿಹಾಸದ ಭಾಗ ಎನ್ನುವುದಕ್ಕೆ ಹಲವು ಆಧಾರಗಳನ್ನು ಕೊಟ್ಟು ಚರ್ಚಿಸಿದೆ.
ತುಳುವರ ಭೂತವನ್ನು ದೆವ್ವ ಎಂದು ಹೇಳಿರುವುದಕ್ಕೆ ನನ್ನ ವಿರೋಧವನ್ನು ಅಭಿವ್ಯಕ್ತಿಸಿದೆ
!ಕೊನೆಗೆ ಅವರು ಅವರ ತಪ್ಪನ್ನು ಒಪ್ಪಿಕೊಂಡರು. ನನ್ನ ಈ ಸಂಪ್ರಬಂಧದ ಕುರಿತು ಖ್ಯಾತ
ಇತಿಹಾಸಜ್ಞ ಡಾ||ಎಂ. ಜಿ. ನಾಗರಾಜ್ ಅವರು "ಇದು ಬೆಳ್ಳಾರೆಯ ಇತಿಹಾಸಕ್ಕೆ ಪೂರಕವಾದ
ವಿಚಾರ ,ಅಲ್ಲದೆ ಇದು ಕೊಡಗಿನ ಪಾಂಡೀರ ರಾಜ ವಂಶಕ್ಕೆ ಸಂಬಂಧಿಸಿದೆ ಇದು ಬಹಳ ಉತ್ತಮ
ಪ್ರಬಂಧ "ಎಂದು ಅಭಿಪ್ರಾಯ ನೀಡಿದ್ದಾರೆ. ಡಾ.ಪಿ. ಎನ್. ನರಸಿಂಹ ಮೂರ್ತಿ ಯವರು ಕೂಡ ಇದೇ
ಅಭಿಪ್ರಾಯವನ್ನು ನೀಡಿದ್ದಾರೆ .
ಅದು ಏನೇ ಇರಲಿ! ಬೆಳ್ಳಾರೆಯ ಕೊನೆಯ ರಾಜಕುಮಾರ
ನೈದಾಲ ಪಾಂಡಿ ಭೂತವಾಗಿ ಆರಾಧಿಸಲ್ಪಡು ತ್ತಿದ್ದಾನೆ . ಅಂತೆಯೇ ದುರಂತ ಮತ್ತು
ದೈವತ್ವವನ್ನು ಪಡೆದ ಬೆಳ್ಳಾರೆಯ ರಾಜಕುಮಾರ ನೈದಾಲ ಪಾಂಡಿಯ ಕುರಿತಾದ ಐತಿಹ್ಯ ಮತ್ತು
ಆರಾಧನೆಯಲ್ಲಿ ಇತಿಹಾಸದ ತುಣುಕುಗಳು ಅಡಗಿವೆ. ೨೦೧೧ ಮಾರ್ಚ್ ೧೪ ನನ್ನ ಪಾಲಿಗೆ
ಮರೆಯಲಾಗದ ದಿನ .ಅಂದು ಸುಮನಕ್ಕೊಂದಿಗೆ ಅರೆಕಲ್ಲಿಗೆ ಹೋಗಿ ನೈದಾಲಪಾಂಡಿ ಭೂತದ
ರೆಕಾರ್ಡಿಂಗ್ ಗೆ ಅನುಮತಿ ಪಡೆದದ್ದು ಅದೇರಾತ್ರಿ ೧೨-೧೨.೩೦ ಗೆ ನಡೆದ ನೈದಾಲ ಪಾಂಡಿ
ನೇಮ ರೆಕಾರ್ಡ್ ಮಾಡಿದ್ದುದನ್ನು ನೆನೆದರೆ ಈಗ ಕೂಡ ಮೈ ಜುಮ್ಮೆನ್ನುತ್ತದೆ !
ಬೆಳ್ಳಾರೆ
ಯಿಂದ ಸುಮಾರು ೧೫-೨೦ ಮೈಲು ದೂರದಲ್ಲಿ ಸಂಪಾಜೆಯಿಂದ ೬-೭ ಮೈಲು ಅರೆಕಲ್ಲು ಎಂಬ
ಪ್ರದೇಶದಲ್ಲಿ ಕೊಡಗಿನ ಪಾಂಡೀರ ರಾಜವಂಶದವರ ಆರಾಧನಾ ತಾಣವಿದೆ .ಪೂಮಲೆ ಕಾಡಿನಲ್ಲಿ
ಸಮುದ್ರ ಮಟ್ಟಕ್ಕಿಂತ ೧೦೦೦ ಅಡಿ ಎತ್ತರದಲ್ಲಿ ಅರೆಕಲ್ಲು ಕ್ಷೇತ್ರವಿದೆ.ಇಲ್ಲಿ ನೈದಾಲ
ಪಾಂಡಿ ಭೂತಕ್ಕೆ ಏಳು ವರ್ಷಗಳಿಗೊಮ್ಮೆ ಆರಾಧನೆ ನಡೆಯುತ್ತದೆ . ಇಲ್ಲಿ ಅನೇಕ ವಿಧಿ
ನಿಷೇಧಗಳಿವೆ ಇಲ್ಲಿ ಒಂದು ಶಿವಾಲಯ ಇರುವುದಾದರೂ ಇದರೊಂದಿಗೆ ಇನ್ನೊಂದು ಪ್ರಧಾನವಾದ
ಅಯ್ಯಪ್ಪನ ದೇವಾಲಯ ಇದೆಯಾದ್ದರಿಂದ ಇಲ್ಲಿ ಸ್ತ್ರೀಯರಿಗೆ ಪ್ರವೇಶ ಇಲ್ಲ . ಫೋಟೋ
ತೆಗೆಯಲು ಅನುಮತಿ ಇಲ್ಲ. ಸುಮಾರು ೧ ಮೈಲು ಮೊದಲು ಒಂದು ತೋಡು ಇದೆ. ಅಲ್ಲಿಂದ ಮತ್ತೆ
ಬರಿಗಾಲಿನಲ್ಲಿ ನಡೆದು ಕೊಂಡು ಹೋಗಬೇಕು ಇತ್ಯಾದಿ ಅನೇಕ ಕಟ್ಟು ಪಾಡುಗಳು ಇದ್ದ ಬಗ್ಗೆ ತಿಳಿದು ಬಂದಿತ್ತು.
೨೦೧೧
ಮಾರ್ಚ್ ೧೪ ರಂದು ಅಲ್ಲಿ ನೇಮ ನಡೆಯುವ ಬಗ್ಗೆ ೪ ದಿವಸ ಮೊದಲು ನನಗೆ ತಿಳಿದು ಬಂತು.
ನನ್ನ ಸಹೋದ್ಯೋಗಿ ಗೆಳತಿ ಸತ್ಯವತಿ ಅವರ ಗಂಡ ಆ ಪ್ರದೇಶ ಸಮೀಪದಲ್ಲಿ
ಶಿಕ್ಷಕರರಾಗಿದ್ದರು. ಅವರಲ್ಲಿ ಅಲ್ಲಿಗೆ ಹೋಗುವ ದಾರಿ ಹಾಗೂ ಅಲ್ಲಿ ಯಾರಾದರು ಸ್ಥಳೀಯರ
ಫೋನ್ ನಂಬರ್ ಸಂಪಾದಿಸಿ ಕೊಡುವಂತೆ ವಿನಂತಿಸಿದೆ .ಅವರು ಸ್ಥಳೀಯರಾದ ಶಿಕ್ಷಕಿಯೊಬ್ಬರ
ಫೋನ್ ನಂಬರ್ ಕೊಟ್ಟರು. "ಆ ಪ್ರದೇಶಕ್ಕೆ ಹೋಗಬೇಡಿ ಅಲ್ಲಿ ನಿಮ್ಮನ್ನ ಬಡಿದು ಸಾಯಿಸಿ
ಬಿಟ್ಟಾರು !"ಎಂದು ಎಚ್ಚರಿಕೆಯನ್ನು ಕೊಟ್ಟರು . ಆ ಸ್ಥಳೀಯ ಶಿಕ್ಷಕಿಗೆ ನನ್ನನ್ನು ಅ
ಪ್ರದೇಶಕ್ಕೆ ಕರೆದೊಯ್ಯಲು ಧೈರ್ಯ ಸಾಲಲಿಲ್ಲ' ಅವರು ಸ್ಥಳಿಯರಾದ ಶ್ರೀಧರ ಭಟ್ ಅವರ
ನಂಬರ್ ಕೊಟ್ಟು ಸಂಪರ್ಕಿಸಲು ತಿಳಿಸಿದರು.ಇಷ್ಟಾಗುವಾಗ ಎರಡು ದಿವಸ ಕಳೆದು ಒಂದು ದಿವಸ
ಮಾತ್ರ ಉಳಿದಿತ್ತು. ಕೂಡಲೇ ಶ್ರೀಧರ ಭಟ್ ಅವರನ್ನು ಸಂಪರ್ಕಿಸಿ ನನಗೆ ಅಲ್ಲಿಗೆ ಬರಲು
ಅನುಮತಿ ಕೊಡಿಸುವಂತೆ ವಿನಂತಿಸಿದೆ .ಅರೆಕಲ್ಲಿನಲ್ಲಿ ಆರಾಧನೆ ನಡೆಸುವವರು ದೂರದ ಗಾಳಿ
ಬೀಡಿನ ಪಾಂಡೀರ ರಾಜ ವಂಶದವರು. ಆ ದೇವಾಲಯದ ಜೀರ್ಣೋದ್ದಾರಮಾಡಲು ಉದ್ದೇಶಿಸಿದ್ದು
ಅದಕ್ಕೆ ಸ್ಥಳೀಯರಾದ ಶ್ರೀಧರ ಭಟ್ ಅವರು ಮುಖ್ಯಸ್ಥರಾಗಿದ್ದರು. ಆದ್ರೆ ಅವರು ಕೂಡ
"ಅನುಮತಿ ಕೊಡಿಸುವುದು ಕಷ್ಟ .ರೆಕಾರ್ಡ್ ಮಾಡ್ಲಿಕ್ಕಂತು ಸಾಧ್ಯವೇ ಇಲ್ಲ ಈ ಹಿಂದೆ
ತುಂಬಾ ಜನ ಹಿರಿಯ ಸಂಶೋಧಕರು ಯತ್ನಿಸಿದ್ದಾರೆ, ಅವರಿಗೆ ಅನುಮತಿ ಸಿಗಲಿಲ್ಲ. ನೀವು ಬಂದು
ಪ್ರಯೋಜನ ಇಲ್ಲ" ಎಂದು ತಿಳಿಸಿದರು.
ಏನೇ ಆದರು ಅಲ್ಲಿ ತನಕ ಹೋಗಿ ನೋಡೋಣ ಎಂದು
೧೩ ನೆ ತಾರೀಕಿನಂದು ಮಗನೊಂದಿಗೆ ಸಂಪಾಜೆಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಜೀಪಿನಲ್ಲಿ
ಶ್ರೀಧರ ಭಟ್ ಮನೆಗೆ ಹೋದೆ.ಅಲ್ಲಿಗೆ ಮುಟ್ಟುವಾಗ ಮಧ್ಯಾಹ್ನ ೨ ಗಂಟೆ .ನಾವು ಹೋದ ತಕ್ಷಣ
ಸುಮನಕ್ಕ (ಶ್ರೀಧರ ಭಟ್ಟರ ಮಡದಿ ) ಬಾಯಾರಿಕೆಗೆ ಕೊಟ್ಟು ಊಟಕ್ಕೆ ತಟ್ಟೆ ಇಟ್ಟರು .
ನಮ್ಮ ಊರ ಕಡೆ ಹಳ್ಳಿಗಳಲ್ಲಿ ಈಗ ಕೂಡ ೩-೪ ಜನ ಉಣುವಷ್ಟು ಅಡಿಗೆ ಹೆಚ್ಚಿಗೆ ಮಾಡಿರ್ತಾರೆ
. ಮಧ್ಯಾಹ್ನ ಯಾರು ಅತಿಥಿಗಳು ಬಾರದೆ ಇದ್ದರೆ ರಾತ್ರಿ ಅದನ್ನು ಸರಿದೂಗಿಸುತ್ತಾರೆ
ಹಾಗೂ ಉಳಿದರೆ ನಾಯಿ ದನಕರುಗಳಿಗೆ ಮರು ದಿನ ಕೊಡುತ್ತಾರೆ.ಸುಮನಕ್ಕ ನನಗಿಂತ ೩-೪ ವರ್ಷ
ಹಿರಿಯ ಮಹಿಳೆ.ಹೆಸರಿನಷ್ಟೇ ಒಳ್ಳೆಯ ಮನಸ್ಸು ಅವರದು. ಊಟ ಮಾಡುತ್ತಾ ನಾನು ಬಂದ
ಕಾರಣವನ್ನು, ಅಪರೂಪದ ಭೂತಗಳನ್ನು ದಾಖಲಿಸಿ ಅಧ್ಯಯನ ಮಾಡುವ ನನ್ನ ಆಸಕ್ತಿಯನ್ನು
ತಿಳಿಸಿದೆ."ಹಾಗಾದರೆ ನಾವು ಈಗ ಹೋಗಿ ಅವರಲ್ಲಿ ಮಾತನಾಡಿ ಪ್ರಯತ್ನಿಸುವ" ಅಂತ ಸುಮನಕ್ಕ
ಹೇಳಿದ್ರು.
ಮಧ್ಯಾಹ್ನ ಸುಮಾರು ೩-೩.೩೦ ಗೆ ಅವರ ಜೀಪಿನಲ್ಲಿ ನನ್ನನ್ನು ತೋಡಿನ
ತನಕ ಕರೆತಂದು "ಇನ್ನು ಸ್ವಲ್ಪ ದೂರ ಇದೆ ಅಲ್ಲಿಗೆ ಬರಿಗಾಲಿನಲ್ಲಿ ಹೋಗಬೇಕು .ನಾವು
ಚಪ್ಪಲಿ ಇಲ್ಲಿಯೇ ಇಡುವ" ಅಂತ ಹೇಳಿ ಅಲ್ಲೇ ಬಿಟ್ಟು ಮುಂದೆ ನಡೆದರು.ಕಾಡಿನ ದಾರಿ ನೆಲ
ಬಿಸಿಯಾಗಿ ಕಾಲು ಸುಡುತ್ತಿತ್ತು ಚಪ್ಪಲಿ ಹಾಕಿ ನಡೆದು ಅಭ್ಯಾಸವಾದ ನಂಗೆ ಬರಿಗಾಲಿನಲ್ಲಿ
ನಡೆಯುವುದು ಬಹಳ ಕಷ್ಟವಾಗಿತ್ತು. ಅಂತು ಸುಮನಕ್ಕ ನಮ್ಮನ್ನು ಅರೆಕಲ್ಲು ದೇವಾಲಯದ ಸಮೀಪ
ಕರಕೊಂಡು ಗಾಳಿಬೀಡಿನಿಂದ ಬಂದಿದ್ದ ಮುಖ್ಯಸ್ಥರಿಗೆ ನನ್ನನ್ನು ಪರಿಚಯಿಸಿ ನನಗೆ
ರೆಕಾರ್ಡಿಂಗ್ ಗೆ ಅನುವು ಮಾಡಿ ಕೊಡುವಂತೆ ವಿನಂತಿಸಿದರು. ಆಗ ಅವರು "ಈಗ ದೈವ ದರ್ಶನ
ಇದೆ ಆಗ ದೈವ ನುಡಿಯಲ್ಲಿ ಅನುಮತಿ ಸಿಕ್ಕರೆ ಮಾಡಬಹುದು" ಎಂದರು .ಸ್ವಲ್ಪ ಹೊತ್ತಿನಲ್ಲಿ
ಪಾತ್ರಿಗೆ ದರ್ಶನ ಬಂದಾಗ ಈ ಬಗ್ಗೆ ಅವರು ಪಾತ್ರಿಯಲ್ಲಿ ಕೇಳಿದರು.ಆಗ "ದೂರದ ಊರಿನಿಂದ
ಹೆಣ್ಣು ಮಗಳು ಒಳ್ಳೆ ಉದ್ದೇಶದಿಂದ ಬಂದಿದ್ದಾರೆ .ತಂದೆ ತಾಯಿಯರಿಗೆ ಮಕ್ಕಳಲ್ಲಿ ಹೆಣ್ಣು
ಗಂಡು ಭೇದ ಇಲ್ಲ .ಆ ನನ್ನ ಮಗಳನ್ನು ನನ್ನ ಸನ್ನಿಧಿಗೆ ಬರಮಾಡಿ ಕೊಳ್ಳಿ "ಎಂದು ದೈವ
ನುಡಿಯಾಗಿ ನಾವು ಒಳ ಪ್ರವೇಶಿಸಿದೆವು.
ಮತ್ತೆ ಪುನಃ ರೆಕಾರ್ಡ್ ಮಾಡಬಹುದೇ
ಎಂಬುದನ್ನು ತಿಳಿಯಲು ದೇವರ ಎದುರಿಗಿನ ಹೂವನ್ನು ಚಿಕ್ಕ ಮಗುವಿನ ಕೈಯಲ್ಲಿ ಎತ್ತಿಸಿದಾಗ ಆ
ಮಗು ದೇವರಬಲ ಭಾಗದಲ್ಲಿದ್ದ ಮಲ್ಲಿಗೆ ಮಾಲೆಯನ್ನು ಎತ್ತಿಕೊಂಡು ಬಂದು ನಮ್ಮ ಕೈಗೆ
ನೀಡಿತು.!! ಅಲ್ಲಿಗೆ ದೇವರ ಒಲವು ನಮಗೆ ಸಿಕ್ಕಿ ಇದ್ದ ಅಡ್ಡಿ ಆತಂಕಗಳೆಲ್ಲ
ದೂರವಾಯಿತು.ಇಷ್ಟೆಲ್ಲಾ ಆಗುವಾಗ ರಾತ್ರಿಯಾಗಿತ್ತು .ಸುಮನಕ್ಕನೊಂದಿಗೆ ಅವರ ಮನೆಗೆ ಬಂದು
ರಾತ್ರಿ ಅಲ್ಲೇ ಉಳಿದು ಕೊಂಡೆ.
ಮರುದಿವಸ
ಮತ್ತೆ ಸುಮನಕ್ಕ ಮತ್ತು ಶ್ರೀಧರಣ್ಣ ನನ್ನನ್ನು ಅರೆಕಲ್ಲಿಗೆ ಕರೆದುಕೊಂಡು ಬಂದರು.
ಅಲ್ಲಿ ಬೇಕಾದ ಎಲ್ಲ ಮಾಹಿತಿ ಸಂಗ್ರಹಿಸಿದೆ . ನೇಮದ ಸಂದರ್ಭದಲ್ಲಿ ನೈದಾಲ ಪಾಂಡಿಗೆ
ಸಂಬಂಧಿಸಿದ ಹಾಡನ್ನು ಹೇಳುತ್ತಾರೆ. ಇದು ಕೊಡವ ಭಾಷೆಯಲ್ಲಿದೆ. ಆ ಹಾಡಿನ ಸಾರಾಂಶವನ್ನು
ನನಗೆ ಕನ್ನಡದಲ್ಲಿ ತಿಳಿಸಿದ್ದಾರೆ.
ಬೆಳ್ಳಾರೆಯ ಪಾಂಡಿ ರಾಜ ಕುಮಾರ
ಅರೆಕಲ್ಲಿನಲ್ಲಿ ನೈದಾಲ ಪಾಂಡಿ ಎಂಬ ಭೂತವಾಗಿ ಆರಾಧಿಸಲ್ಪಡುತ್ತಿದ್ದಾನೆ!ಇಲ್ಲಿ
ಪೂಜಾಕಾರ್ಯಗಳನ್ನು ಗಳನ್ನು ಕೊಡಗಿನ ಗಾಳಿಬೀಡಿನ ಪಾಂಡೀರ ರಾಜ ವಂಶದವರು ಬಂದು
ನಡೆಸುತ್ತಾರೆ. ಇಲ್ಲಿ ಏಳು ವರ್ಷಗಳಿಗೊಮ್ಮೆ "ನೈದಾಲ ಪಾಂಡಿ" ಭೂತಕ್ಕೆ ನೇಮ ನೀಡಿ
ಆರಾಧನೆ ಸಲ್ಲಿಸುತ್ತಾರೆ. ಇದರಲ್ಲಿ ಮೊದಲನೆಯ ಪಾತ್ರಿಯಾಗಿ ಪೂಮಲೆ ಕುಡಿಯರು, ಎರಡನೆಯ
ಪಾತ್ರಿಗಳಾಗಿ ಪಾಂಡಿ ಮನೆಯವರು ಭಾಗವಹಿಸುತ್ತಾರೆ. ನೈದಾಲಪಾಂಡಿ ಭೂತವನ್ನು ಪೂಮಲೆ
ಕುಡಿಯ ಜನಾಂಗದ ಭೂತ ಪಾತ್ರಿಗಳಲ್ಲಿ ಹಿರಿಯರೊಬ್ಬರಿಗೆ ಹೇಳಿ ಕಟ್ಟಿಸುತ್ತಾರೆ.
ನೈದಾಲಪಾಂಡಿ ಭೂತ ಕಟ್ಟಿದವರು ತುಸುಕಾಲದಲ್ಲಿಯೇ ಮರಣವನ್ನಪ್ಪುತ್ತಾರೆ ಎಂಬ ನಂಬಿಕೆ
ಪ್ರಚಲಿತವಿರುವುದರಿಂದ ವಯಸ್ಸಾದ ವೃದ್ಧರೇ ನೈದಾಲ ಪಾಂಡಿ ಭೂತವನ್ನು ಕಟ್ಟುತ್ತಾರೆ.
ನೈದಾಲಪಾಂಡಿ
ಭೂತಕ್ಕೂ ಬೆಳ್ಳಾರೆಯ ಇತಿಹಾಸಕ್ಕೂ ಅವಿನಾಭಾವ ಸಂಬಂಧವಿದೆ. ಪಾಂಡಿ ಮನೆಯ ಹಿರಿಯರು ಈ
ಬಗ್ಗೆ ಮಾಹಿತಿ ನೀಡಿರುತ್ತಾರೆ. ಬೆಳ್ಳಾರೆಯನ್ನು ಓರ್ವ ತುಂಡರಸ ಆಳಿಕೊಂಡಿದ್ದನು. ಅವನು
ಪಾಂಡು ರೋಗಿಯಾಗಿದ್ದನು. ಅವನ ನಂತರ ಅವನ ಮಗ ಬೆಳ್ಳಾರೆಯನ್ನು
ಆಳಿಕೊಂಡಿದ್ದನು.ಇವನನ್ನು ಪಾಂಡಿ ಎಂದು ಕರೆಯುತ್ತಿದ್ದರು . ಈತನ ಮೂಲ ಹೆಸರು ಕಾಸರಗೋಡು
ಕಾಳಯ್ಯ. ಇವನನ್ನು ಶತ್ರುಗಳು ಆಕ್ರಮಿಸಿದಾಗ ಬೆಳ್ಳಾರೆಯಿಂದ ತಪ್ಪಿಸಿಕೊಂಡು ಹೋಗಿ,
ಪೂಮಲೆ ಕಾಡಿಗೆ ಹೋಗಿ ಪೂಮಲೆ ಕುಡಿಯರ ಮನೆಯೊಂದರಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿಗೆ
ಕೊಡಗರಸರ ತಂಗಿ ಬಂದಾಗ ಬೆಳ್ಳಾರೆಯ ರಾಜ ಕುಮಾರ ಮತ್ತು ಅವಳ ಪರಿಚಯವಾಗಿ ಅದು ಪ್ರೇಮಕ್ಕೆ
ತಿರುಗುತ್ತದೆ. ನಂತರ ಅವರು ಮದುವೆಯಾಗಿ ಕೊಡಗಿನಲ್ಲಿ ಇರುತ್ತಾರೆ. ಇದು ಬೆಳ್ಳಾರೆಯ
ರಾಜನ ಶತ್ರುಗಳಿಗೆ ತಿಳಿದು ಕೊಡಗಿಗೆ ಹೋಗಿ ಅವನ ಮೇಲೆ ಆಕ್ರಮಣ ಮಾಡುತ್ತಾರೆ. ಆಗ
ಶತ್ರುಗಳ ಎದುರಿನಿಂದಲೇ ತಪ್ಪಿಸಿಕೊಂಡು ಹೋಗಿ ಅರೆಕಲ್ಲಿಗೆ ಬಂದು ಶಿವನಲ್ಲಿ
ಐಕ್ಯನಾಗುತ್ತಾನೆ. ನಂತರ ದೈವತ್ವಕ್ಕೇರಿ ನೈದಾಲ ಪಾಂಡಿ ಎಂಬ ಹೆಸರಿನ ಭೂತವಾಗಿ ಆರಾಧನೆ
ಪಡೆಯುತ್ತಾನೆ.
ನೈದಾಲಪಾಂಡಿ ಭೂತಕ್ಕೆ ಅರಸು ದೈವಕ್ಕೆ ಕಟ್ಟುವಂತೆ ದೊಡ್ಡದಾದ
ಮೀಸೆ, ತಲೆಗೆ ಪಗಡಿ ರೂಪದ ಕಿರೀಟದಂತೆ ಇರುವ ಮುಡಿ ಕಟ್ಟುತ್ತಾರೆ . ಬೆಳ್ಳಾರೆಯ ತುಂಡರಸ
ಪಾಂಡುರೋಗಿಯಾಗಿದ್ದರಿಂದ ಅವನ ಮಗನನ್ನು 'ಪಾಂಡಿ' ಎಂದು ಕರೆಯುತ್ತಿದ್ದರು. ಈತ
ಪೂಮಲೆಯಲ್ಲಿ ಉಳಿದುಕೊಂಡ ಪ್ರದೇಶದ ಹೆಸರು ನೈದಾಲ್ ಎಂದು. ಎರಡು ವಂಶಗಳನ್ನು ನೆಯ್ದ
ಅಂದರೆ ಬೆಸೆದ ಕಾರಣ ಆತನನ್ನು ನೈದಾಲ ಪಾಂಡಿ ಎಂದು ಕರೆಯುತ್ತಾರೆ ಎಂಬ ಐತಿಹ್ಯವೂ ಇದೆ.
ನೈದಾಲಿನ ಪಾಂಡಿ ಎಂಬರ್ಥದಲ್ಲಿ ನೈದಾಲ ಪಾಂಡಿ ಎಂಬ ಹೆಸರು ಬಂದಿದೆ ಎಂದು ನೈದಾಲ ಪಾಂಡಿಯ
ವಂಶದ ಹಿರಿಯರು ಹೇಳುತ್ತಾರೆ. ನೈದಾಲ ಪಾಂಡಿ ಭೂತದ ನೇಮದ ಸಂದರ್ಭದಲ್ಲಿ ಒಂದು ಹಾಡನ್ನು
ಹಾಡುತ್ತಾರೆ. ಅದರಲ್ಲಿ ನೈದಾಲಪಾಂಡಿಯನ್ನು ಅಜ್ಜಯ್ಯ ಎಂದೂ, ಕಾಸರಗೋಡು ಕಾಳೆಯ್ಯ ಎಂದೂ
ಕರೆದಿದ್ದಾರೆ. ಗಾಳಿ ಬೀಡಿನಲ್ಲಿರುವ ನೈದಾಲಪಾಂಡಿಯ ವಂಶದ ಹಿರಿಯರು ನೈದಾಲಪಾಂಡಿಯ
ಮೊದಲ ಹೆಸರು ಕಾಳೆಯ್ಯ ಎಂದೂ, ಮದುವೆಯಾದ ಮೇಲೆ ಆತ ಲಿಂಗಾಯತ ಧರ್ಮಕ್ಕೆ ಮತಾಂತರ
ಮಾಡಿದನೆಂದೂ ಹೇಳಿದ್ದಾರೆ. ನೈದಾಲ ಪಾಂಡಿಯ ಕಥಾನಕ ಸುಮಾರು 130 ರಿಂದ 180 ವರ್ಷಗಳ
ಹಿಂದೆ ನಡೆದ ಘಟನೆಯಾಗಿದೆ .
ಈ
ಕಥಾನಕದಲ್ಲಿ ಬೆಳ್ಳಾರೆಯ ಇತಿಹಾಸವು ಸೇರಿಕೊಂಡಿದೆ.ಬೆಳ್ಳಾರೆಯಲ್ಲಿ ಬೀಡು ಇತ್ತು.
ಆದರೆ ಬೆಳ್ಳಾರೆಯ ಬೀಡಿನಲ್ಲಿ ಯಾರಿದ್ದರು? ಯಾರ ಸಾಮಂತರಾಗಿದ್ದರು ?ಬೆಳ್ಳಾರೆಯ ಕೋಟೆ
ಯಾರ ಅಧೀನದಲ್ಲಿತ್ತು ?ಬೆಳ್ಳಾರೆಯ ಕೋಟೆಯನ್ನು ಕೆಳದಿ ಅರಸರು ೧೬೦೧ ರಲ್ಲಿ
ಕಟ್ಟಿಸಿದರು. ಆದರೆ ಬೆಳ್ಳಾರೆ ಯಲ್ಲಿ ಯಾರಿಗೂ ಈ ಬಗ್ಗೆ ಮಾಹಿತಿ ತಿಳಿದಿಲ್ಲ .
ಬೆಳ್ಳಾರೆ ಯಲ್ಲಿ ಬೀಡಿನ ಅವಶೇಷಗಳು ಆನೆ ಕಟ್ಟುವ ಕಲ್ಲು ಮೊದಲಾದವು ಇವೆ ಆದರೆ
ಬೆಳ್ಳಾರೆ ಬೀಡಿನ ರಾಜರು ಯಾರಾಗಿದ್ದರೆಂಬ ಬಗ್ಗೆ ಮಾಹಿತಿ ಇಲ್ಲ .
ದೈವತ್ವಕ್ಕೇರಿದ
ಬೆಳ್ಳಾರೆಯ ಈ ತುಂಡರಸ ಯಾರು? ಈತನನ್ನು ಆಕ್ರಮಿಸಿದ ಶತ್ರುಗಳು ಯಾರು? ಯಾವ ಕಾಲ
ಇತ್ಯಾದಿ ವಿಷಯಗಳ ಬಗ್ಗೆ ವಿವರ ಸರಿಯಾಗಿ ಸಿಗುತ್ತಿಲ್ಲ. "ಹೈದರಾಲಿಯ ಸಹಾಯದಿಂದ
ಲಿಂಗಯ್ಯ(ಲಿಂಗರಾಜ?) ಕೊಡಗನ್ನು ಆಳುತ್ತಿದ್ದ ಹಾಲೇರಿ ವಂಶದ ದೇವಯ್ಯ(ದೇವಪ್ಪ?)ನನ್ನು
ಸೋಲಿಸಿದನು. ವೈರಿ ಸೇನೆಯೆದುರು ನಿಲ್ಲಲಾರದೆ ದೇವಯ್ಯನು ಓಡಿ ಹೋಗಿ ಕಾಡುಗಳಲ್ಲಿ
ತಲೆಮರೆಸಿಕೊಂಡನು" ಎಂದು ಕರ್ನಾಟಕ ಚರಿತ್ರೆ ಸಂಪುಟದಲ್ಲಿ ಹೇಳಿದೆ.
ನೈದಾಲ
ಪಾಂಡಿ ಗಾಳಿಬೀಡಿನಲ್ಲಿ ಈಗ ನೆಲೆಸಿರುವ ಪಾಂಡೀರ ರಾಜವಂಶದ ಮೂಲ ಪುರುಷ . ನೈದಾಲ ಪಾಂಡಿ
ಭೂತದ ವೇಷ ಭೂಷಣಗಳು ಅರಸು ದೈವವನ್ನು ಹೋಲುತ್ತವೆ . ತಲೆಯ ಪಗಡಿ ರಾಜರ ಕಿರೀಟವನ್ನು
ಹೋಲುತ್ತದೆ .ದೊಡ್ಡ ಮೀಸೆ ಯೊಂದಿಗಿನ ಅರಸನ ಗಾಂಭೀರ್ಯದ ಅಭಿವ್ಯಕ್ತಿ ಈತೆ
ರಾಜನಿರಬಹುದೆಂಬುದನ್ನು ಸೂಚಿಸುತ್ತವೆ. ಈ ದೈವದ ಪಾತ್ರಿ (ಪೂಜಾರಿ ) ಹಾಗೂ ಈ ಭೂತ
ಯುದ್ಧದ ಭೀಕರತೆ ಸದ್ದುಗದ್ದಲ ಸುಸ್ತು ಆಯಾಸ ಏದುಸಿರು ಗಳನ್ನೂ ಪ್ರದರ್ಶಿಸುತ್ತಾರೆ.
ನೇಮಕ್ಕೆ ಮೊದಲು ಒಂದು ಅಣಕು ಮಾತು ಕಥೆ, ವೀಳ್ಯ ನೀಡುವುದು ಮೊದಲಾದ ಆಚರಣೆಗಳು ಯುದ್ಧ
ತಂತ್ರವನ್ನು ಚರ್ಚಿಸುತ್ತಿದುದನ್ನು ಸಂಕೇತಿಸುತ್ತದೆ. ಈ ದೈವದ ಪಾತ್ರಿ (ಪೂಜಾರಿ)
ಕೊಡಗು ಯುದ್ಧ ವೀರರ(ಯೋಧರ) ವೇಷ ಭೂಷಣಗಳನ್ನು ಧರಿಸಿರುವುದು ಕೂಡಾ ನೈದಾಲ ಪಾಂಡಿ ಯುದ್ಧ
ವೀರನಾಗಿದ್ದುದನ್ನು ಸೂಚಿಸುತ್ತದೆ. ಗಾಳಿ ಬೀಡಿನಲ್ಲಿರುವ ಪಾಂಡೀರ ವಂಶದ ಹಿರಿಯರು
ತಿಳಿಸಿರುವ ಪ್ರಕಾರ ಇದು ಸುಮಾರು ೧೫೦-೧೮೦ ವರ್ಷಗಳ ಹಿಂದೆ ನಡೆದ ವಿಚಾರ ತುರುಕ ಪಡೆಯ
ದಾಳಿ (ಹೈದರಾಲಿ ಅಥವಾ ಟಿಪ್ಪು ) ಕಾಲವು ಇದರ ಆಸುಪಾಸಿನಲ್ಲಿಯೇ ಇದೆ.
ಕೊಡಗಿನ
ಚಿಕ್ಕ ವೀರ ರಾಜೇಂದ್ರನ ತಂಗಿ ದೇವಮ್ಮಾಜಿಯ ಗಂಡ ಚೆನ್ನ ಬಸವ ಕೂಡ ಮೂಲತಃ ಲಿಂಗಾಯತನಲ್ಲ
.ಮದುವೆಯ ಸಮಯದಲ್ಲಿ ಲಿಂಗಾಯತನಾಗಿ ಪರಿವರ್ತನೆ ಆದ ಬಗ್ಗೆ ಇತಿಹಾಸದಲ್ಲಿ ಮಾಹಿತಿ ಇದೆ .
ಚೆನ್ನ ಬಸವನ ಕಾಲ ಕೂಡ ಇದಕ್ಕೆ ಸರಿ ಸುಮಾರು ಹೊಂದಾಣಿಕೆ ಆಗುತ್ತದೆ . ಆದ್ದರಿಂದ
ಚೆನ್ನ ಬಸವನೇ ನೈದಾಲ ಪಾಂಡಿ ಎಂಬ ಹೆಸರಿನ ಭೂತವಾಗಿ ಆರಾಧನೆ ಹೊಂದಿರುವ ಸಾಧ್ಯತೆ ಇದೆ
ಕಾರ್ಕಳದ
ಬೈರರಸರಲ್ಲಿ ಕೊನೆಯವ ಪಾಂಡ್ಯ ರಾಯ ಬಲ್ಲಾಳ. ಕಾರ್ಕಳದ ಬಲ್ಲಾಳನ ಅಧೀನದಲ್ಲಿ
ಬೆಳ್ಳಾರೆಯ ಕೋಟೆ ಮತ್ತು ಬೀಡು ಇದ್ದ ಬಗ್ಗೆ ತುಸು ಮಾಹಿತಿ ಲಭ್ಯವಾಗಿದೆ. ಹೈದರಾಲಿಯ
ಆಕ್ರಮಣದ ಅಥವಾ ಟಿಪ್ಪುವಿನ ದಾಳಿ ಸಂದರ್ಭದಲ್ಲಿ(ತುರುಕ ಪಡೆಗೆ ಎದುರಾಗಿ ಕಾದಲಾಗದೆ )
ಕಾರ್ಕಳದ ಭೈರವರಸರ ಕೊನೆಯ ರಾಜಕುಮಾರ ಪಾಂಡ್ಯ ರಾಯ ಬಲ್ಲಾಳ ದುರಂತವನ್ನಪ್ಪಿರುವ ಬಗ್ಗೆ
ಪಾಡ್ದನ ಒಂದರಲ್ಲಿ ಮಾಹಿತಿ ಇದ್ದ ಬಗ್ಗೆ ‘ಕಾರ್ಕಳ -ಒಂದುಅಧ್ಯಯನ ' ಕೃತಿಯಲ್ಲಿ
ಪಿ.ಎನ್. ನರಸಿಂಹಮೂರ್ತಿಯವರು ಉಲ್ಲೇಖಿಸಿದ್ದಾರೆ .
ಕಾರ್ಕಳದ ಭೈರವರಸರ ಸಂತತಿಯ ಕೊನೆಯ ಪಾಂಡ್ಯ ರಾಯ ಬಲ್ಲಾಳ ಈ ನೈದಾಲ ಪಾಂಡಿಯೇ ಆಗಿರುವ ಸಾಧ್ಯತೆ ಕೂಡ ಇದೆ.
ಅಮರ,
ಸುಳ್ಯ ಕ್ರಾಂತಿಯ ಸಂದರ್ಭದಲ್ಲಿ ಪುಟ್ಟ ಬಸಪ್ಪ ಎಂಬಾತನನ್ನು ಪೂಮಲೆ ಕಾಡಿನಲ್ಲಿ ಕೆಲ
ಕಾಲ ಇರಿಸಿ ಆತನನ್ನು ಕಲ್ಯಾಣಸ್ವಾಮಿ ಎಂದು ಜನರನ್ನು ನಂಬಿಸಿ ಬೆಳ್ಳಾರೆಯ ಕೋಟೆಯಲ್ಲಿ
ಪಟ್ಟಾಭಿಷೇಕ ಮಾಡಿದ ಬಗ್ಗೆ ಮಾಹಿತಿ ಸಿಗುತ್ತದೆ. ಹೈದರಾಲಿಯ ಸಹಾಯ ಪಡೆದು ಆಕ್ರಮಿಸಿದ
ಲಿಂಗರಾಜನನ್ನು ಎದುರಿಸಲಾರದೆ ಕಾಡಿಗೆ ಓಡಿ ಹೋದ ದೇವಯ್ಯನಿಗೂ ಚೆನ್ನ ಬಸವನಿಗೂ
ಯಾವುದಾದರೂ ಸಂಬಂಧವಿದೆಯೇ? ಎಂಬ ಬಗ್ಗೆ ಏನೂ ತಿಳಿದು ಬರುವುದಿಲ್ಲ.
ಅದೇ ರೀತಿ
ಚಿಕ್ಕ ವೀರ ರಾಜನ ತಂಗಿ ದೇವಮ್ಮಾಜಿಯ ಗಂಡ ಚೆನ್ನ ಬಸವ ಕೊಡವನಾಗಿದ್ದು, ಮದುವೆ
ಸಂದರ್ಭದಲ್ಲಿ ಲಿಂಗಾಯತನಾದವನು. ಚೆನ್ನ ಬಸವನಂತೆ ನೈದಾಲಪಾಂಡಿ ಕೂಡ ಮೂಲತಃ
ಕೊಡವನಾಗಿದ್ದು,ಅನಂತರ ಲಿಂಗಾಯತನಾಗಿ ಪರಿವರ್ತಿತನಾಗಿದ್ದಾನೆ. ನೈದಾಲ ಪಾಂಡಿ ಕೂಡಾ
ಚೆನ್ನ ಬಸವನಂತೆ ಕೊಡಗರಸರ ಮನೆಗೆ ಸೇರಿದ ಹುಡುಗಿಯನ್ನು ಮದುವೆಯಾಗಿದ್ದಾನೆ. ಆದ್ದರಿಂದ
ಚೆನ್ನ ಬಸವನೇ ನೈದಾಲಪಾಂಡಿ ಎಂಬ ಹೆಸರಿನಲ್ಲಿ ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ.
ನೈದಾಲ
ಪಾಂಡಿ ಶಿವ ಸಾನ್ನಿಧ್ಯವನ್ನು ಪಡೆದ ಅರೆಕಲ್ಲು ಸಮೀಪ ಪಾಂಡಿ ಮನೆ ಎಂಬ ಜಾಗ ಇದೆ
.ಬೆಳ್ಳಾರೆಯ ಸಮೀಪ ಕೋಟೆ ಮುಂಡುಗಾರುವಿನ ಬಳಿ (೩-೪ ಕಿ ಮೀ ದೂರದಲ್ಲಿ )ಪಾಂಡಿ ಪಾಲು
ಎಂಬ ಸ್ಥಳವಿದೆ .ಪಂಜದ ಸಮೀಪ ಪಾಂಡಿ ಗದ್ದೆ ಎಂಬ ಜಾಗವಿದೆ .ಇಲ್ಲೆಲ್ಲಾ ಪಾಂಡಿ ಎಂಬ
ಹೆಸರು ಯಾಕೆ ಬಂದಿದೆ? ಎಂದು ಯಾರಿಗೂ ತಿಳಿದಿಲ್ಲ .ಬಹುಶ ಇವು ಪಾಂಡಿ ರಾಜನಿಗೆ
ಸಂಬಂಧಿಸಿದವುಗಳು ಇರಬಹುದು .ಅರೆಕಲ್ಲಿನಲ್ಲಿ ನೈದಾಲ ಪಾಂಡಿ ಉಳಕೊಂಡ ಮನೆ/ಜಾಗ ಪಾಂಡಿ
ಮನೆ ಎಂಬ ಹೆಸರನ್ನು ಪಡೆದಿರುವ ಸಾಧ್ಯತೆ ಇದೆ .ಬೆಳ್ಳಾರೆ ಬೀಡಿನಲ್ಲಿ
ಆನೆಕಟ್ಟುತ್ತಿದ್ದ ಕಲ್ಲು ಈಗ ಕೂಡ ಇದೆ. ಬೆಳ್ಳಾರೆ ಕೋಟೆಯ ಅವಶೇಷಗಳು ಇವೆ. ಈ ಬಗ್ಗೆ
ಸಮಗ್ರ ಅಧ್ಯಯನ ನಡೆದರೆ ಬೆಳ್ಳಾರೆಯ ಇತಿಹಾಸಕ್ಕೊಂದು ಬಲವಾದ ಅಡಿಪಾಯ ಸಿಗಬಹುದು.
(ಮುಂದಿನವಾರ -ತುಳುನಾಡಿನ ಭೂತಗಳಾದ ಕನ್ನಡಿಗರು ) |
|
|
No comments:
Post a Comment