Thursday, 28 November 2013

ಚರಿತ್ರೆಯ ಗರ್ಭ:ಬೆಳ್ಳಾರೆಯ ಇತಿಹಾಸ ತಿಳಿಯುವುದೇ? ನನ್ನ ಸಂಶೋಧನಾ ಲೇಖನ ಗುರುವಾರ (28 -11-2013): ಕನ್ನಡ ಪ್ರಭ ಪತ್ರಿಕೆ




http://archives.kannadaprabha.com/pdf/epaper.asp?pdfdate=11%2F28%2F2013

ಸುಳ್ಯ ತಾಲೂಕಿನಲ್ಲಿ ಬೆಳ್ಳಾರೆ ಎನ್ನುವ ಗ್ರಾಮವೊಂದಿದೆ. ಇದು ಐತಿಹಾಸಿಕ ಹಿನ್ನೆಲೆ ಇರುವ ಊರು. ಇಲ್ಲಿನ ಇತಿಹಾಸ ಸ್ಥಳೀಯರಿಗೆ ಅಷ್ಟಾಗಿ ತಿಳಿದಿಲ್ಲವಾದರೂ, ಬೆಳ್ಳಾರೆ ಹಿಂದೆ 21 ಗ್ರಾಮಗಳನ್ನು ಒಳಗೊಂಡಿದ್ದ ಮಾಗಣೆಯಾಗಿದ್ದ ಬಗ್ಗೆ ಇತಿಹಾಸಜ್ಞರು ತಿಳಿಸಿದ್ದಾರೆ. ಸಾಮಂತ ಬಲ್ಲಾಳ ಅರಸರು ಇದನ್ನು ಆಳುತ್ತಿದ್ದರು. ಆದರೆ ಇವರು ಯಾರ ಸಾಮಂತರಾಗಿದ್ದರು ಎಂಬ ಬಗ್ಗೆ 'ಇದಮಿತ್ಥಂ' ಎನ್ನುವ ಮಾಹಿತಿ ಎಲ್ಲಿಯೂ ಇಲ್ಲ.

ಬೆಳ್ಳಾರೆ ಎನ್ನುವ ಹೆಸರು ಕೇಳಿದರೆ ಇತಿಹಾಸ ತಜ್ಞರ ಕಿವಿ ನೆಟ್ಟಗಾಗುತ್ತದೆ. ಇಲ್ಲಿನ ಇತಿಹಾಸವೇ ಹಾಗಿದೆ. ಕೆದಕುತ್ತ ಹೋದಂತೆ ಎಲ್ಲವೂ ಗೋಚರವಾಗುತ್ತವೆ, ಆದರೂ ಒಂಚೂರು ನಿಗೂಢತೆ ಉಳಿದುಕೊಂಡು ಬಿಡುತ್ತದೆ.

ಅಷ್ಟಕ್ಕೂ ಎಲ್ಲಿದೆ ಈ ಊರು? ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನಲ್ಲಿದೆ ಬೆಳ್ಳಾರೆ. ಒಂದು ಕಾಲದಲ್ಲಿ ಇದು ರಾಜಾಡಳಿತಕ್ಕೆ ಒಳಪಟ್ಟಿದ್ದ ಊರು ಎನ್ನುವುದನ್ನು ಇಲ್ಲಿನ ಸ್ಮಾರಕಗಳೇ ಹೇಳುತ್ತವೆ. ಆದರೆ ಇಲ್ಲಿನ ಸಾಮಂತರು ಯಾರ ಸಾಮಂತರಾಗಿದ್ದರು ಎನ್ನುವ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ.

ಇಕ್ಕೇರಿ ಅರಸರು ಕಟ್ಟಿಸಿದ ಕೋಟೆ ಮತ್ತು ಅದರ ಸುತ್ತ ನಿರ್ಮಿಸಿದ್ದ ಕಂದಕಗಳ ಕುರುಹು ಬೆಳ್ಳಾರೆಯಲ್ಲಿ ಈಗಲೂ ಇವೆ. ಮಹಾಸತಿಕಲ್ಲು ಹಾಗೂ ಕಟ್ಟೆ ಇತ್ತೆಂದೂ, ಅದನ್ನು ಮಹಾಸತಿಕಟ್ಟೆ ಎಂದು ಕರೆಯಲಾಗುತ್ತಿದೆಂದೂ ಹೇಳಲಾಗುತ್ತದೆ. ಆದರೀಗ ಅಂತಹ ಯಾವುದೇ ಕುರುಹೂ ಇಲ್ಲ. ಆದರೆ, ಬೆಳ್ಳಾರೆ ಬೀಡಿನ ಪಟ್ಟದ ಚಾವಡಿಯಲ್ಲಿರುವ ಅಡ್ಯಂತಾಯ ಗುಡಿಯಲ್ಲಿ ಎರಡು ಮಾಸ್ತಿ ವಿಗ್ರಹಗಳು ಇವೆ. ಇದು ಕೂಡ ಕುತೂಹಲದ ಸಂಗತಿಯೇ.

ಬೀಡು ಮತ್ತು ಪಟ್ಟದ ಚಾವಡಿ

ಬೆಳ್ಳಾರೆಯನ್ನು ಜೈನ ಪಾಳೆಗಾರರು ಆಳಿದ್ದಕ್ಕೆ ಕುರುಹಾಗಿ ಬೆಳ್ಳಾರೆ ಕೋಟೆಯ ಹಿಂಭಾಗದಲ್ಲಿ ಬೀಡಿನ ಅವಶೇಷ ಈಗಲೂ ಇದೆ. ಬೀಡಿನ ಕಾವಲುಗಾರರದ್ದು ಎನ್ನಲಾಗಿರುವ ಮಣ್ಣಿನ ಗುಡಿಸಲನ್ನು ಈಗಲೂ ಕಾಣಬಹುದು. ಬಲ್ಲಾಳರ ಬೀಡಿನ ವಾಯವ್ಯ ಭಾಗದಲ್ಲಿ ಬೆಳ್ಳಾರೆಯ ಪ್ರಧಾನದೈವ ಅಡ್ಯಂತಾಯ ಭೂತದ ಚಾವಡಿ ಇದೆ. ಭೂತದ ನೇಮದ ಸಂದರ್ಭದಲ್ಲಿ ಇದು ಪಟ್ಟದ ಚಾವಡಿ ಎಂದು ಕರೆಸಿಕೊಂಡು ಭೂತದ ನುಡಿಯಾಗುತ್ತದೆ. ಇದರಿಂದಾಗಿ ಜೈನ ಪಾಳೆಗಾರರಾದ ಬಲ್ಲಾಳ ಅರಸರ ಪಟ್ಟಾಭಿಷೇಕ ಇಲ್ಲಿಯೇ ನಡೆಯುತ್ತಿದೆಂದು ತಿಳಿದು ಬರುತ್ತದೆ.

ಪಟ್ಟದ ಚಾವಡಿಯ ತೆಂಕು ಭಾಗದಲ್ಲಿ ಬೀಡಿನ ಅರಮನೆ, ಅದರ ಬಳಿಯೇ ಜೈನ ಬಸದಿ ಕೂಡ ಇತ್ತು. ಕೆಲವರ್ಷಗಳ ಹಿಂದಿನ ತನಕ ಈ ಬಸದಿಯ ಅವಶೇಷ ಕಾಣಿಸುತ್ತಿತ್ತು. ಈಗ ನೆಲಸಮವಾಗಿ ಕುರುಹುಗಳೂ ಅಳಿಸಿ ಹೋಗಿವೆ. ಸಮೀಪದಲ್ಲಿ ಆನೆಗಳನ್ನು ಕಟ್ಟಿ ಹಾಕುವ ಕಲ್ಲುಗಳಿದ್ದವು. ಈಗ ಅಂತಹ ಒಂದು ಕಲ್ಲು ಉಳಿದುಕೊಂಡಿದೆ. ಸರಕು ಸಾಗಣೆ ಎತ್ತಿನ ಬಂಡಿಗಳ ತಂಗುದಾಣವಾಗಿದ್ದ 'ಬಂಡಿ ಮಜಲು' ಎಂಬ ಬಯಲು ಪ್ರದೇಶ ಬೆಳ್ಳಾರೆ ಪೇಟೆಯಿಂದ ತುಸು ದೂರದಲ್ಲಿ ಈಗಲೂ ಇದೆ.

ನೈದಾಲಪಾಂಡಿ ಭೂತಾರಾಧನೆ

ಬೆಳ್ಳಾರೆ ಬೀಡಿನ ರಾಜರು ಯಾರಾಗಿದ್ದರೆಂಬ ಬಗ್ಗೆ ಮಾಹಿತಿ ಇಲ್ಲ. ಕಾರ್ಕಳದ ಬೈರರಸರಲ್ಲಿ ಕೊನೆಯವರಾದ ಪಾಂಡ್ಯರಾಯ ಬಲ್ಲಾಳನ ಅಧೀನದಲ್ಲಿ ಬೆಳ್ಳಾರೆಯ ಕೋಟೆ ಮತ್ತು ಬೀಡು ಇದ್ದ ಬಗ್ಗೆ ತುಸು ಮಾಹಿತಿ ಲಭ್ಯವಾಗಿದೆ. ಹೈದರಾಲಿಯ ಆಕ್ರಮಣದ ಅಥವಾ ಟಿಪ್ಪುವಿನ ದಾಳಿ ಸಂದರ್ಭದಲ್ಲಿ (ತುರುಕ ಪಡೆಗೆ ಎದುರಾಗಿ ಕಾದಾಡಲಾಗದೆ ) ಈತ ದುರಂತವನ್ನಪ್ಪಿರುವ ಬಗ್ಗೆ ಪಾಡ್ದನ ಒಂದರಲ್ಲಿ ಮಾಹಿತಿ ಇದ್ದ ಬಗ್ಗೆ ಅಧ್ಯಯನ ಕೃತಿಯಲ್ಲಿ ಇತಿಹಾಸಜ್ಞ ಡಾ. ಪಿ ಎನ್. ನರಸಿಂಹಮೂರ್ತಿ ಉಲ್ಲೇಖಿಸಿದ್ದಾರೆ.

ಬೆಳ್ಳಾರೆಯಿಂದ 25 ಕಿ.ಮೀ. ದೂರದ ಕಾಡಿನಲ್ಲಿರುವ ಅರೆಕಲ್ಲು ಎಂಬಲ್ಲಿ ಕೊಡಗಿನ ಗಾಳಿಬೀಡಿನ ಪಾಂಡೀರ ರಾಜವಂಶದವರು ಏಳು ವರ್ಷಗಳಿಗೆ ಒಮ್ಮೆ 'ನೈದಾಲ ಪಾಂಡಿ' ಎಂಬ ಭೂತಕ್ಕೆ ನೇಮ ನೀಡಿ ಆರಾಧನೆ ಸಲ್ಲಿಸುತ್ತಾರೆ. ಈ ಕೋಲದ ಸಂದರ್ಭದಲ್ಲಿ ಹಾಡುವ ಹಾಡಿನ ಪ್ರಕಾರ, ನೈದಾಲ ಪಾಂಡಿಯು ಬೆಳ್ಳಾರೆಯ ರಾಜಕುಮಾರ; ಗಾಳಿಬೀಡಿನಲ್ಲಿ ಈಗ ನೆಲೆಸಿರುವ ಪಾಂಡೀರ ರಾಜವಂಶದ ಮೂಲಪುರುಷ.

ಆತನ ಹೆಸರು ಕಾಸರಗೋಡು ಕಾಳಯ್ಯ. ಬೆಳ್ಳಾರೆಯನ್ನು ಶತ್ರುಗಳು ಆಕ್ರಮಿಸಿದಾಗ ತಪ್ಪಿಸಿಕೊಂಡು ಪೂಮಲೆ ಕಾಡಿನಲ್ಲಿ ಮಲೆಕುಡಿಯರ ಆಶ್ರಯ ಪಡೆಯುತ್ತಾನೆ. ಅಲ್ಲಿಗೆ ವನವಿಹಾರಕ್ಕೆ ಬಂದ ಈತ ಕೊಡಗಿನ ಅರಸರ ತಂಗಿ ಪ್ರೇಮಾಂಕುರವಾಗುತ್ತದೆ. ಮದುವೆಯ ಸಂದರ್ಭದಲ್ಲಿ ಲಿಂಗಾಯತನಾಗಿ ಮತಾಂತರ ಹೊಂದುತ್ತಾನೆ. ಹೀಗೆ ಎರಡು ವಂಶಗಳನ್ನು ಬೆಸೆದಿದ್ದರಿಂದ 'ನೈದಾಲ ಪಾಂಡಿ' ಎನ್ನುವ ಹೆಸರು ಪಡೆದ. ಪುನಃ ಬೆಳ್ಳಾರೆಯನ್ನು ಶತ್ರುಗಳು ಆಕ್ರಮಿಸಿದಾಗ ಅರೆಕಲ್ಲಿಗೆ ಬಂದು ಶಿವನಲ್ಲಿ ಐಕ್ಯನಾದ. ಇದು ಪಾಡ್ದನದ ಕಥೆ. ಮೂಲತಃ ಕೊಡವನಾಗಿದ್ದ ಕೊಡಗು ಅರಸರ ತಂಗಿ ದೇವಮ್ಮಾಜಿ ಗಂಡ ಚೆನ್ನಬಸವ ಕೂಡ ಮದುವೆ ಸಮಯದಲ್ಲಿ ಲಿಂಗಾಯಿತನಾದದ್ದು ಎನ್ನುವ ಇನ್ನೊಂದು ಕಥೆಯೂ ಸಿಗುತ್ತದೆ. ಹೀಗಾಗಿ ಚೆನ್ನಬಸವನೇ ನೈದಾಲ ಪಾಂಡಿಯಾಗಿ ಆರಾಧನೆಗೊಳ್ಳುತ್ತಿರುವ ಸಾಧ್ಯತೆಯೂ ಇದೆ.

ಆದಾಗ್ಯೂ ಬೆಳ್ಳಾರೆಯ ಕೊನೆಯ ರಾಜಕುಮಾರ ಯಾರು? ಈತನನ್ನು ಆಕ್ರಮಿಸಿದ ಶತ್ರುಗಳು ಯಾರು? ಅದು ಯಾವ ಕಾಲ? ಬೆಳ್ಳಾರೆಯ ಬೀಡಿನ ರಾಜರು ಯಾರು? ಇವೆಲ್ಲ ಇಂದಿಗೂ ನಿಗೂಢ ಸಂಗತಿಗಳೇ ಮತ್ತು ಅಧ್ಯಯನಕ್ಕೆ ಯೋಗ್ಯ ವಿಷಯಗಳೇ.

ಬೆಳ್ಳಾರೆ ಸಮೀಪ ಕೋಟೆ ಮುಂಡುಗಾರು ಬಳಿ ಪಾಂಡಿ ಪಾಲು ಎಂಬ ಸ್ಥಳ ಇದೆ. ಪಂಜ ಸಮೀಪ ಪಾಂಡಿ ಗದ್ದೆ ಎಂಬ ಪ್ರದೇಶ ಇದೆ. ಅರೆಕಲ್ಲಿನ ಸಮೀಪ ಪಾಂಡಿ ಮನೆ ಎಂಬ ಪ್ರದೇಶ ಇದೆ. ಇಲ್ಲೆಲ್ಲ ಪಾಂಡಿ ಅನ್ನುವ ಹೆಸರು ಯಾಕೆ ಬಂದಿದೆ ಎಂದು ತಿಳಿದಿಲ್ಲ. ಬಹುಶಃ ಇದು ನೈದಾಲ ಪಾಂಡಿಗೆ ಸಂಬಂಧಿಸಿದ್ದಿರಬಹುದು. ಈ ಬಗ್ಗೆ ಸಮಗ್ರ ಅಧ್ಯಯನ ನಡೆದರೆ ಬೆಳ್ಳಾರೆಯ ಅಜ್ಞಾತ ಇತಿಹಾಸಕ್ಕೊಂದು ಭದ್ರ ಬುನಾದಿ ಸಿಗಬಹುದು.

ಬೆಳ್ಳಾರೆಯ ಇತಿಹಾಸ

ಬನವಾಸಿಯ ಕದಂಬ ಚಂದ್ರವರ್ಮ, ನಂತರ ಕ್ರಿ.ಶ.1600ರಲ್ಲಿ ಇಕ್ಕೇರಿ ನಾಯಕರ ವಂಶದ ಹಾಲೇರಿ ಕುಟುಂಬದ ವೀರರಾಜನು ಕೊಡಗನ್ನು ಆಳ್ವಿಕೆ ಮಾಡಿದ ಬಗ್ಗೆ ರಾಜೇಂದ್ರನಾಮೆಯಲ್ಲಿ ಉಲ್ಲೇಖವಿದೆ. ಆಗ ಬೆಳ್ಳಾರೆ ಕೊಡಗು ಆಡಳಿತಕ್ಕೆ ಸೇರಿತ್ತು. 1775ರಲ್ಲಿ ಅಮರ ಸುಳ್ಯ ಮತ್ತು ಬೆಳ್ಳಾರೆಗಳನ್ನು ಹೈದರಾಲಿ ವಶಪಡಿಸಿಕೊಂಡನು. 1791ರಲ್ಲಿ ದೊಡ್ಡ ವೀರರಾಜೇಂದ್ರನು ಮತ್ತೆ ತನ್ನ ವಶಕ್ಕೆ ಪಡೆದ್ದನಾದರೂ 1792ರಲ್ಲಿ ಟಿಪ್ಪುಸುಲ್ತಾನನ ಮನವಿಯಂತೆ ಬೆಳ್ಳಾರೆ ಮತ್ತು ಪಂಜ ಮಾಗಣೆಗಳನ್ನು ಟಿಪ್ಪು ಸುಲ್ತಾನನಿಗೆ ಬಿಟ್ಟುಕೊಟ್ಟ ಬಗ್ಗೆ ದಾಖಲೆ ಇದೆ. ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆಯ 37 ಗ್ರಾಮಗಳನ್ನು ದೊಡ್ಡ ವೀರರಾಜೇಂದ್ರನ ವಶಕ್ಕೆ ಬ್ರಿಟಿಷರು ನೀಡಿದ್ದರು. ಕೊಡಗಿನ ಕೊನೆಯ ಅರಸ ಚಿಕ್ಕವೀರರಾಜೇಂದ್ರನನ್ನು 1834ರಲ್ಲಿ ಬ್ರಿಟಿಷರು ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ, ಸುಳ್ಯ, ಪಂಜ ಸೀಮೆಯ 110 ಗ್ರಾಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು.

ಬಂಗ್ಲೆ ಗುಡ್ಡ

ಬ್ರಿಟಿಷರ ವಿರುದ್ದದ ಹೋರಾಟ ಬೆಳ್ಳಾರೆಯಲ್ಲೂ ಆರಂಭವಾಯಿತು. ಮೊದಲಿಗೆ ಬೆಳ್ಳಾರೆಯ ಕೋಟೆಯ ಒಳಗಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳಲಾಯಿತು. 'ಬಂಗ್ಲೆ ಗುಡ್ಡೆ' ಎಂದು ಕರೆಯಲಾಗುವ ಕೋಟೆಯ ಮೇಲೆ ಖಜಾನೆ ಕಟ್ಟಡ ಇತ್ತು. ಈಗ ಅದು ವಿಲೇಜ್ ಆಫೀಸ್ ಆಗಿ ಪರಿವರ್ತನೆಗೊಂಡಿದೆ.

(
ಲೇಖಕಿ ಸಂಶೋಧಕಿಯಾಗಿದ್ದು, ಅವರ ವಿಸ್ತ್ರತ ಸಂಶೋಧನಾ ಲೇಖನದ ಸಂಕ್ಷಿಪ್ತ ರೂಪ)

-
ಡಾ. ಲಕ್ಷ್ಮಿ ಜಿ. ಪ್ರಸಾದ್


No comments:

Post a Comment