Monday 13 November 2023

ಪಾಡ್ದನದ ಕಥೆಗಳು : ಚಾಮುಂಡಿ ದೈವದ ಹುಟ್ಟಿನ ಕಥೆ - ಡಾ.ಲಕ್ಷ್ಮೀ ಜಿ‌ ಪ್ರಸಾದ್

 ಚಾಮುಂಡಿ ಪಾಡ್ದನ


 


ಚಾಮುಂಡಿ ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ, ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ? ಎಂಬ ಬಗ್ಗೆ ಇದಮಿತ್ಥಂ ಎಂಬ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯವಾದ ವಿಚಾರವಾಗಿದೆ. ಚಾಮುಂಡಿ ದೈವದ ಆರಾಧನೆಯ ಸಂದರ್ಭದಲ್ಲಿ ಅದರ ಪ್ರಸರಣ ಕಾರಣಿಕರ ಕುರಿತಾದ ಪಾಡ್ದನವನ್ನು ಹೇಳುತ್ತಾರೆ. ಚಾಮುಂಡಿ ಭೂತದ ಹುಟ್ಟಿನ ಕುರಿತಾಗಿ ಏನನ್ನೂ ಹೇಳುವುದಿಲ್ಲ. ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.


ಚಾಮುಂಡಿ ದೈವದ ಹುಟ್ಟಿನ ಕುರಿತಾದ ಒಂದು ಪಾಡ್ದನದ ಭಾಗವನ್ನು ಪಾಡ್ದನಗಾರ್ತಿ ಶ್ರೀಮತಿ ಶಾರದಾ ಜಿ.ಬಂಗೇರ ಅವರಿಂದ ನಾನು ಸಂಗ್ರಹಿಸಿದ್ದು ಅದರ ಪ್ರಕಾರ ಚಾಮುಂಡಿ ಭೂತ ಮೂಲತಃ ಚಾಮುಂಡಿ ಎಂಬ ಹೆಸರಿನ ಹುಡುಗಿ. ಈ ಪಾಡ್ದನದಲ್ಲಿ ಎಡದಲ್ಲಿ ಎಡಮಲೆ, ಬಲದಲ್ಲಿ ಬಲಮಲೆ, ನಡುವಿನಲ್ಲಿ ನಡುಮಲೆ ಇದೆ. ಇದರಲ್ಲಿ ಭೀಮರಾಯ ಭಟ್ಟರ ಸಂಪಿಗಾನ ತೋಟವಿದೆ. ಒಂದು ದಿನ ಭೀಮರಾಯ ಭಟ್ಟರು ಸ್ನಾನಕ್ಕೆಂದುಸಂಪಿಗಾನ ತೋಟದ ನಡುವಿನಲ್ಲಿರುವ ತಾವರೆಯ ಕೊಳಕ್ಕೆ ಬರುತ್ತಾರೆ. ಅಲ್ಲಿಒಂದು ಬಿಳಿಯ ತಾವರೆ ಹೂ ಭೀಮರಾಯ ಭಟ್ಟರ ಮಡಿಲಿಗೆ ಬಂದು ಬೀಳುತ್ತದೆ. ತಮ್ಮ ಉತ್ತರೀಯದಲ್ಲಿ ಆ ಬಿಳಿಯ ತಾವರೆ ಹೂವನ್ನು ಕಟ್ಟಿಕೊಂಡು ಬಂದ ಭೀಮುರಾಯ ಭಟ್ಟರು ದೇವರ ಕೋಣೆಗೆ ತಂದುದೇವರಿಗೆ ಅರ್ಪಿಸುತ್ತಾರೆ. ಆಗ ಆ ಬಿಳಿಯ ತಾವರೆ ಹೂ ಒಂದು ಹೆಣ್ಣು ಮಗುವಾಗುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಭೀಮುರಾಯ ಭಟ್ಟರಿಗೆ ಬಹಳ ಸಂತೋಷ ವಾಗುತ್ತದೆ. ಆ ಮಗುವಿಗೆ `ಚಾಮುಂಡಿ’ ಎಂದು ಹೆಸರಿಟ್ಟು ಸಾಕುತ್ತಾರೆ. ಮುಂದೆ `ಚಾಮುಂಡಿ’ ಎಂಬ ಹೆಸರುಳ್ಳ ಮಗುವೇ ದೈವತ್ವವನ್ನು ಪಡೆದು ಚಾಮುಂಡಿ ಭೂತವಾಗಿ ಆರಾಧನೆ ಹೊಂದುತ್ತಾಳೆ. ಆದರೆ ಅವಳು ಹೇಗೆ ದೈವತ್ವವನ್ನು ಪಡೆದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಬೀಮುರಾಯ ಭಟ್ಟರ ಮಗಳು ಚಾಮುಂಡಿ ಗೆ ದಾಯಾದಿಯಾಗಿರುವ ಗಣಪತಿ ಭಟ್ಟ ಎಂಬಾತ ದ್ರೋಹ ಎಸಗುತ್ತಾನೆ.ಆಗ ಕತ್ತಲೆಕಾನದ ಗುಳಿಗ ಆತನನ್ನು ಸಂಹರಿಸುತ್ತದೆ.ನಂತರ ಚಾಮುಂಡಿಯ ಸೇರಿಗೆಗೆ ಸಂದು ಗಣಪತಿ ಭಟ್ಟ ಜತ್ತಿಂಗ/ ಜಟ್ಡಿಗ ದೈವವಾಗಿ ಆರಾಧನೆ ಪಡೆಯುತ್ತಾನೆ.ಚಾಮುಂಡಿ ದೈವದ ಜೊತೆಗೆ ಜತ್ತಿಂಗ ಮತ್ತು ಕತ್ತಲೆ ಕಾನದ ಗುಳಿಗನಿಗೂ ಆರಾಧನೆ ಇರುತ್ತದೆ 


ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ 


ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಜಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ `ಚಾಮುಂಡಿ’ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿವೆ.© ಡಾ.ಲಕ್ಷ್ಮೀ ಜಿ ಪ್ರಸಾದ್

No comments:

Post a Comment