Sunday, 12 November 2023

ಪಾಡ್ದನದ ಕಥೆಗಳು : ಬಾಲೆ ರಂಗಮೆ

 ಬಾಲೆ  ರಂಗಮೆ


ಮೇದಾರನ ತಂಗಿ ರಂಗಮೆ. ಕದ್ರಿ ಕೋಳ್ಯೂರು ದೇವಾಲಯಗಳಿಗೆ ಹರಿಕೆ ಸಲ್ಲಿಸಲು ರಂಗಮೆ ಹೋಗುವಾಗ ದಾರಿಯಲ್ಲಿ ಸಿಕ್ಕ ಬೈರರ ಕೇರಿಯ ಭೈರವರಸ ಆಕೆಯನ್ನು ಮೋಹಿಸಿ ಮದುವೆಯಾಗು ಎಂದು ಪೀಡಿಸುತ್ತಾನೆ. ಆಗ ಹರಿಕೆ ಕೊಟ್ಟು ಹಿಂದೆ ಬರುವಾಗ ನಾನು ಇದೇ ದಾರಿಯಲ್ಲಿ ಬರುತ್ತೇನೆ, ಮದುವೆಯಾಗುವುದಾದರೆ ನನ್ನ ಅಣ್ಣನಲ್ಲಿ ಬಂದು ಕೇಳು ಎಂದು ಹೇಳಿ ತಪ್ಪಿಸಿಕೊಳ್ಳುತ್ತಾಳೆ. ಮುಂದೆ ಭೇಟಿಯಾಗುವ ಕದ್ರಿಯ ಅರಸ ಹೇಳಿದಂತೆ ಹಿಂದೆ ಬರುವಾಗ ಬೇರೆ ದಾರಿಯಲ್ಲಿ ಬರುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 


ಅವಳು ಬರುವುದನ್ನು ಕಾದು ಕುಳಿತ ಭೈರವರಸ ಅವಳು ಬಾರದಿದ್ದಾಗ, ಅವಳ ಅಣ್ಣನನ್ನು ಬರ ಹೇಳಿ ‘ರಂಗಮೆಯನ್ನು ಮದುವೆ ಮಾಡಿಕೊಡು’ ಎಂದು ಹೇಳುತ್ತಾನೆ. ಮೇದಾರ ಅದಕ್ಕೆ “ಕೆಳಜಾತಿಯ ಭೈರವ ಕೇರಿಯ ಭೈರವರಸನಿಗೆ ಹೆಣ್ಣು ಕೊಡಲಾರೆ” ಎಂದುತ್ತರಿಸುತ್ತಾನೆ. ಆಗ ಮುಳ್ಳಿನ ಮಂಚಕ್ಕೆ ಕಟ್ಟಿ, ಉರಿ ಮೂಡೆ ಹಾಕಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ಹಿಂಸೆ ತಾಳಲಾರದೆ ತಂಗಿಯನ್ನು ಕೊಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ರಂಗಮೆ ಭೈರವರಸನ ಕೈಯಿಂದ ಪಾರಾಗಲು ಉಪಾಯವೊಂದನ್ನು ಹೂಡುತ್ತಾಳೆ. ಭೈರವರಸನ ದಿಬ್ಬಣ ಬಂದಾಗ ‘ತನಗೆ ತೀವ್ರ ಹೊಟ್ಟೆನೋವು ಮಾಳಿಗೆಯಿಂದ ಕೆಳಗೆ ಇಳಿದು ಬರಲಾರೆ ಆದ್ದರಿಂದ ದಂಡಿಗೆಯ ಕೊಂಬಿಗೆ ಧಾರೆ ಎರೆಯಿರಿ’ ಎಂದು ಹೇಳುತ್ತಾಳೆ. ಅಂತೆಯೇ ದಂಡಿಗೆಯ ಕೊಂಬಿಗೆ ಧಾರೆ ಎರೆದು ಮದುವೆಯ ಶಾಸ್ತ್ರ ಮುಗಿಸುತ್ತಾರೆ. ದಿಬ್ಬಣದೊಂದಿಗೆ ಹಿಂದಿರುಗುತ್ತಾರೆ. ಮರುದಿನವೇ ತಂಗಿಯನ್ನು ಕರೆದೊಯ್ಯುವಂತೆ ಮೇದಾರ ಭೈರವರಸನಿಗೆ ಓಲೆ ಕಳುಹಿಸುತ್ತಾನೆ. ಮಡದಿಯನ್ನು ಕರೆದೊಯ್ಯಲೆಂದು ಬಂದಾಗ ಅಲ್ಲೊಂದು ಕಾಷ್ಠ ಉರಿಯುತ್ತಾ ಇರುತ್ತದೆ. ‘ರಂಗಮೆ ಹೊಟ್ಟೆ ನೋವಿನಿಂದ ಸತ್ತಿದ್ದಾಳೆ’ ಎಂದು ಅಲ್ಲಿದ್ದ ಜನರು ಹೇಳುತ್ತಾರೆ. ಆಗ ರಂಗಮೆಯ ಮೇಲಿನ ವ್ಯಾಮೋಹದಿಂದ ಬುದ್ಧಿಶೂನ್ಯನಾದ ಭೈರವರಸ ಅದೇ ಚಿತೆಗೆ ಹಾರಿ ಸಾಯುತ್ತಾನೆ. ರಂಗಮೆ ಸತ್ತಿರುವುದಿಲ್ಲ. ಹೆಣ್ಣುನಾಯಿಯ ಶವವನ್ನಿಟ್ಟು ಕಾಷ್ಠ ಉರಿಸಿರುತ್ತಾರೆ. ಭೈರವರಸ ಸತ್ತ ನಂತರ ರಂಗಮೆ ಕದ್ರಿಯ ಅರಸನನ್ನು ಮದುವೆಯಾಗುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಹೆಣ್ಣು ಮಕ್ಕಳಿಗೆ, ಅವರ ಮನೆವರಿಗೆ ಇಷ್ಟವಿಲ್ಲದಿದ್ದರೂ ಕೂಡ ಬಲಿಷ್ಟರು, ಅರಸರುಗಳು ಬಲಾತ್ಕಾರವಾಗಿ ಕೊಂಡೊಯ್ದು ಮದುವೆಯಾಗುತ್ತಿದ್ದುದರ ಕುರಿತು ಈ ಪಾಡ್ದನವು ತಿಳಿಸುತ್ತದೆ. ಇಲ್ಲಿ ರಂಗಮೆಯ ಜಾಣ್ಮೆಯಿಂದಾಗಿ ಭೈರವರಸ ಸತ್ತು ಹೋಗುತ್ತಾನೆ. ರಂಗಮೆ ತಾನಿಷ್ಟ ಪಟ್ಟ ಕದ್ರಿಯ ಅರಸನನ್ನು ವಿವಾಹವಾಗುತ್ತಾಳೆ. 

ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಡಾ. ಕಮಲಾಕ್ಷ ಅವರು ಸಂಗ್ರಹಿಸಿದ್ದು, ಅದರಲ್ಲಿ ಕಥಾನಯಕಿಯನ್ನು ದೈಯಕ್ಕು ಎಂದು ಹೇಳಿದ್ದು, ಈಕೆ ಎಣ್ಮೂರು ಗುತ್ತಿನ ದಾರಾಮು ಪೊಣ್ಣೋವಿನ ಮಗಳೆಂದು ಹೇಳಲಾಗಿದೆ. ಬಂಟ್ವಾಳ ಪೇಟೆಗೆ ಹೋಗಿಬರುವಾಗ ಬೈಲೂರ ಬಂಗ ತೊಂದರೆ ಕೊಡುತ್ತಾನೆ. ದೈಯಕ್ಕುವನ್ನು ಮದುವೆ ಮಾಡಿ ಕೊಡು ಎಂದು ದಾರಾಮುವಿನಲ್ಲಿ ಕೇಳುತ್ತಾನೆ. ಆಗ ದಾರಾಮು “ಆಸ್ತಿಯಲ್ಲಿ ನೀನು ಮೇಲಿದ್ದರೂ ಜಾತಿಯಲ್ಲಿ ನೀನು ಕೀಳು ನೀನು ಭೈರ, ಆದ್ದರಿಂದ ಹೆಣ್ಣು ಕೊಡಲಾರೆ” ಎನ್ನುತ್ತಾಳೆ. ಆಗ ಆಕೆಯನ್ನು ನಾನಾ ವಿಧವಾಗಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ದೈಯಕ್ಕು ಅವನಿಗೆ ಯುದ್ಧಾಹ್ವಾನ ನೀಡುತ್ತಾಳೆ. ಸ್ವತಃ ಕತ್ತಿ ಹಿಡಿದು ಯುದ್ಧ ಮಾಡಿ ಆತನನ್ನು ಕೊಲ್ಲುತ್ತಾಳೆ ದೈಯಕ್ಕು.© ಡಾ.ಲಕ್ಷ್ಮೀ ಜಿ ಪ್ರಸಾದ್ ‌


ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಶ್ರೀ ರಾಮನಾಯ್ಕ ಸಂಗ್ರಹಿಸಿದ್ದಾರೆ. ಈ ಪಾಡ್ದನದಲ್ಲಿ ದೈಯಕ್ಕು ಮಗಳಿಗೆ ಮದುವೆಯಾಗೆಂದು ಕಾಡುವವನು ಚಿಪ್ಪೋಲಿ ಬಂಗ. ಅವಳ ಸೋದರ ಮಾವನನ್ನು ಕಟ್ಟಿ ಹಾಕಿ ಕೊಡಬಾರದ ಕಷ್ಟ ಕೊಡುತ್ತಾನೆ. ಮಾವನ ಕಷ್ಟ ನೋಡಲಾರದೆ ಮದುವೆಗೆ ಒಪ್ಪಿಗೆಕೊಡುತ್ತಾಲೆ ದೈಯಕ್ಕು ಮಗಳು. ಮದುವೆಯ ಸಂದರ್ಭದಲ್ಲಿ ಧಾರೆ ಆಗುವ ಹೊತ್ತಿಗೆ ತಾನು ತಂದಿದ್ದ ಕತ್ತಿಯಿಂದ ಚಿಪ್ಪೋಲಿ ಬಂಗನ ಕೈಯನ್ನು ದೈಯಕ್ಕು ಮಗಳು ಕತ್ತರಿಸುತ್ತಾಳೆ.


ಈ ಮೂರು ಕೂಡ ಒಂದೇ ಆಶಯವನ್ನು ಹೊಂದಿದ್ದು ಒಂದೇ ಪಾಡ್ದನದ ಭಿನ್ನ ಭಿನ್ನ ಪಾಠಗಳಂತೆ ಕಾಣಿಸುತ್ತವೆ. ಮದುವೆಯಾಗೆಂದು ಕಾಡಿ ಬಲಾತ್ಕರಿಸಿದ ರಾಜನೊಬ್ಬನನ್ನು ಹೆಣ್ಣು ಮಗಳೊಬ್ಬಳು ಎದುರಿಸಿ ಉಪಾಯವಾಗಿ ಆತನನ್ನು ಕೊಂದ ಘಟನೆ ಎಲ್ಲೋ ನಡೆದಿದ್ದು, ಅದನ್ನು ಕೇಂದ್ರವಾಗಿಸಿ ಈ ಪಾಡ್ದನಗಳು ಕಟ್ಟಲ್ಪಟ್ಟಿವೆ. ಬೀರುಕಲ್ಕುಡನ ಕೈಕಾಲುಗಳನ್ನು ಕಡಿಸಿದ ಭೈರವರಸನ ಕ್ರೌರ್ಯ ತುಳುನಾಡಿನಲ್ಲಿ ಜನರಿಗೆ ತಿಳಿದಿರುವ ವಿಚಾರವೇ ಆಗಿದೆ. ಆದ್ದರಿಂದಲೇ ಏನೋ ಕಾಟ ಕೊಟ್ಟು ಸಾವಿಗೀಡಾದ ವ್ಯಕ್ತಿಯನ್ನು ಈ ಪಾಡ್ದಗಳಲ್ಲಿ ಭೈರವರಸ ಎಂದೇ ಹೇಳಲಾಗಿದೆ. ಬೀರು ಕಲ್ಕುಡನಿಗೆ ಕಾರ್ಕಳದ ಭೈರವರಸ ಮಾಡಿದ ಅನ್ಯಾಯವನ್ನು ತುಳುವ ಜನಪದರು ಎಂದಿಗೂ ಕ್ಷಮಿಸುವುದಿಲ್ಲ. ಆದ್ದರಿಂದಲೇ ಪಾಡ್ದನಗಾರರು ಪಾಡ್ದನಗಳಲ್ಲಿ ಕೆಟ್ಟ ವ್ಯಕ್ತಿಯೊಂದಿಗೆ ಭೈರವರಸವನ್ನು ಸಮೀಕರಿಸಿದ್ದಾರೆ ಎಂದು ಡಾ|| ಅಮೃತ ಸೋಮೇಶ್ವರ ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ಪಾಡ್ದನದಲ್ಲಿ ಭೈರವರಸ ಸ್ತ್ರೀ ಲೋಲುಪನಂತೆ, ಕ್ರೂರಿಯಂತೆ ಚಿತ್ರಿಸಲ್ಪಟ್ಟಿದ್ದಾನೆ. ಅವನನ್ನು ಉಪಾಯದಿಂದ ಸಾಯುವಂತೆ ಮಾಡುವ ರಂಗಮೆ ಮೆಚ್ಚುಗೆಗೆ ಪಾತ್ರವಾಗುತ್ತಾಳೆ.

ಆಧಾರ : ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ - ಡಾ..ಲಕ್ಷ್ಮೀ ಜಿ ಪ್ರಸಾದ್ 


ಬಾಲೆ ರಂಗಮೆ


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನೇಯೇ


ಬರ್ಪಾನೆಂದದ ಬೀಡಿನಲ್ಲಿ ಇದ್ದಾರೆ ಮಕ್ಕಳು


ಒಂದು ತಾಯಿಗೆ ಇಬ್ಬರು ಮಕ್ಕಳು


ಅಣ್ಣನೇ ಮೇದಾರ ತಂಗಿಯು ರಂಗಮೆ 


 ರಂಗಮೆ ಬಾಲೆ ರಂಗಮೆ


ತಾಯಿಯ ಹಾಲು ಕುಡಿಯುವ ಕಾಲಕ್ಕೆ


ತಾಯಿಗೆ ಅಳಿವು ಉಂಟಾಯಿತು 


 ತಂದೆಯ ಅನ್ನವನ್ನು ತಿನ್ನುವ ಕಾಲದಲ್ಲಿ


ತಂದೆಗೆ ಕೂಡ ಅಳಿವು ಉಂಟಾಯಿತು


ಯಾರಮ್ಮ ರಂಗಮೆ ಬಾಲೆ ರಂಗಮೆ 


 ಇಲ್ಲಿಗೆ ಬಾ ಮಗಳೆ ಎಂದರು


ಯಾರಮ್ಮ ತಂಗಿ ಬ  ಯಾರಮ್ಮ ತಂಗಿ ಬಾಲೆ ರಂಗಮೆ


ಹೊರಗಿನ ಒಳಗಿನ ಕೆಲಸ ಬೊಗಸೆ ಕಲಿಯಬೇಕು


ಚಿಕ್ಕವಳು ಹೋಗಿದ್ದಿ ಮಗಳೆ ರಂಗಮೆ


ನೀನಾದರೂ ದೊಡ್ಡವಳಾಗಿದ್ದಿ ಎಂದರು ಅವರು


ಯಾರಯ್ಯ ಅಣ್ಣನವರೇ ಕೇಳಿದಿರ 


 ನಿಮ್ಮ ಪ್ರೀತಿಯ ಮೋಹದ ತಂಗಿ


ರಂಗಮೆ ನಾನು ಎಂದು ಹೇಳಿದಳು ಆ


ನನಗೆ ಏನು ತಿಳಿಯುವುದಿಲ್ಲ ಎಂದು ಕೇಳಿದಾಗ


ಆಡವಾಡುವುದು ಅಲ್ಲ ಮಗಳೆ ರಂಗಮೆ ನೀನಾದರೂ


ಚಿಕ್ಕವಳು ಹೋಗಿ ದೊಡ್ಡವಳು ಆಗಿರುವೆ


ಬೆಳಿಗ್ಗೆ ಎದ್ದು ಒಲೆಯ ಬೂದಿ ಗೋರುವ


ಮಗಳು ಆಗಿರುವೆ ಎಂದು ಹೇಳಿದರು


ಯಾರು ಮಗಳೆ ರಂಗಮೆ ರಂಗಮೆ ಕೇಳಿದೆಯಾ


ಒಳಗಿನ ಹೊರಗಿನ ಕೆಲಸ ಬೊಗಸೆ ಕಲಿತು


ಒಳ್ಳೆಯ ಅರಸು ಬಲ್ಲಾಳರನ್ನು ಒಲಿಸಿ


ಮದುವೆ ಮಾಡಿಕೊಡಬೇಕೆಂಬ ಆಸೆಯನ್ನು


ಹೊಂದಿದ್ದೇನೆ ಎಂದು ಹೇಳಿದರು ಮೇದಾರ


ಯಾರಯ್ಯ ಅಣ್ಣನವರೆ ಅಣ್ಣನವರೆ ನನಗಾದರೂ


ಹೋಗಬೇಕು ಕದಿರೆಯ ಬೀಡಿಗೆ 


 ಮದುವೆ ಆಗುವ ಮೊದಲು


ನನಗೊಂದು ಅವಕಾಶ ಕೊಡಿರೆಂದು


ಹೇಳಿದಳು ಬಾಲೆ ರಂಗಮೆ ಹೇಳಿದಳು


ಕದಿರೆಯ ಬೀಡಿಗೆ ಹೋಗಬೇಕು ನನಗೆ


ಕದಿರೆಯ ಕೆರೆಯ ಸ್ನಾನ ಮಾಡಬೇಕೆಂದು ಹೇಳಿದಳು


ಅದರಿಂದಲೂ ಆ ಕಡೆ ಹೋಗಬೇಕು ನನಗೆ


ಎಲ್ಲೆಲ್ಲಿ ದೇವಸ್ಥಾನವೋ ಕೋಳ್ಯೂರಿಗೆ ಹೋಗಬೇಕು


ಮುಕಾಂಬೆ ದೇವಿಗೆ ಹೂವಿನ ಪೂಜೆ ಮಾಡಿ


ನಾನು ಹಿಂದೆ ಬರುವೆ ಎಂದು ಹೇಳಿದಳು ರಂಗಮೆ


ಬಾಲೆ ರಂಗಮೆ ಹೇಳಿದಳು 


 ಸುತ್ತ ಶುದ್ಧವಾದಳು ಮಗಳು


ಬಿಸಿನೀರು ತಣ್ಣೀರಿನಲ್ಲಿ ಸ್ನಾನ ಮಾಡಿದಳು


ಬೆಳ್ಳಿಯಲ್ಲಿ ಬಿಳಿ ಆದಳು ರಂಗಮೆ


ಬಂಗಾರದಲ್ಲಿ ಸಿಂಗಾರ ಆದಳು 


 ದಂಡಿಗೆಯಲ್ಲಿ ಕುಳ್ಳಿರಿಸಿ ಬಿಟ್ಟರು ಅಣ್ಣ


ತಂಗಿಯನ್ನು ಕುಳ್ಳಿರಿಸುವಾಗ


ಡೆನ್ನ ಡೆನ್ನ ಡೆನ್ನಾನಾ ಬಾಲೆ ಮೇದಾರ ಹೇಳಿದಳು


ಯಾರಯ್ಯ ಬೋವಿಗಳೆ ಯಾರಯ್ಯ ಬೋವಿಗಳೆ


ಇಲ್ಲಿ ಹೊತ್ತ ದಂಡಿಗೆಯನ್ನು ಕದ್ರಿಯಲ್ಲಿ ಇಳಿಸಬೇಕು


ಕದ್ರಿಯಲ್ಲಿ ಹೊತ್ತ ದಂಡಿಗೆ ಕೋಳ್ಯೂರಿಗೆ ಹೋಗಬೇಕು


ಅಲ್ಲಲ್ಲಿ ಮಾತ್ರ ಇಳುಗಬೇಕೆಂದು ಹೇಳಿದರು


ಅಷ್ಟು ಮಾತು ಕೇಳಿದಳು ಮಗಳು


ಆದೀತು ಅಣ್ಣನವರೆ ಚಂದದಲ್ಲಿ ಹೋಗಿ


ಬರುತ್ತೇವೆಂದು ಹೇಳಿ ಹೊರಡುವಳು ರಂಗಮೆ


ಒಂದೊಂದು ಗುಂಡಿ ಒಂದೊಂದು ಬೈಲು


ದಾಟಿಕೊಂಡು ಹೋಗುವಾಗ 


 ಕುದುರೆ ಮೇಲೆ ಕುಳಿತುಕೊಂಡು


ಭೈರರ ಅರಸ ನೋಡುವಾಗ 


 ಯಾರು ನೀವು? ಕಂಬಳದ ಕಟ್ಟಹುಣಿ


ಯಾಕೆ ಹೋಗುವುದೆಂದು ಕೇಳುವಾಗ


ಪೂರ್ವದಿಂದ ಸೂರ್ಯದೇವರು ಉದಿಸಿ ಬಂದ


ಆಕಾಸದಿಂದ ಬಿದ್ದ ದೇವಿಯೆ?


ಯಾರಪ್ಪ ಇನ್ನೊಂದು ದೇವಿಯಾ ದೈವವಾ?


ಯಾರಪ್ಪ ಕಾಣುವುದೆಂದು ಹೇಳಿದನು


ಇಷ್ಟೊಂದು ಚಂದದ ಹೆಣ್ಣನ್ನೇ ನೋಡಿಲ್ಲ


ಅವಳನ್ನಾದರೂ ನೋಡಬೇಕೆಂದು ಹೇಳಿದನು


ಓಡಿಕೊಂಡು ಹಾರಿಕೊಂಡು ಬರ್ಪಾನೆಂದ ಬೀಡಿನ


ಕಂಬಳ ಕಟ್ಟಹುಣಿ ದಾಟಿಕೊಂಡು ಇಳಿದು


ಹೋಗುವಾಗ ಒಂದು ಗುಡ್ಡೆ ಒಂದು


ಬಯಲು ದಾಟಿಕೊಂಡು ಹೋಗುವಾಗ ಸಿಕ್ಕುತ್ತದೆ


ಕದಿರೆಯ ಆನೆಯನ್ನು ಹತ್ತಿಕೊಂಡು ಹೋಗುವಾಗ


ಎದುರಿನಲ್ಲಿ ಬರುತ್ತಾನೆ ಬೈರವ ಅರಸು


ಕೈಯಲ್ಲಿ ಹಿಡಿದು ನಾನು ಕೂಡ ಬರುತ್ತೇನೆ


ದಂಡಿಗತೆಯ ಕೊಂಬಿಗೆ ಕೈಕೊಟ್ಟಾಗ


ಯಾರಯ್ಯ ಅರಸು ಭೈರವ ಅರಸು 


 ಎಲ್ಲಿಗೆ ಹೋಗುವ ದಂಡಿಗೆ ಎಂದು


ನಿನಗಾದರೂ ತಿಳಿದಿದೆಯಾ? ಎಂದು ಹೇಳಿದಳು


ನಾನು ಹೋಗುವ ದೇವಸ್ಥಾನಕ್ಕೆ ನೀನು ಬರಲಿಕ್ಕಿಲ್ಲ


ಹೋಗುವುದೊಂದು ದಾರಿಯಲ್ಲಿ ನಾನು ಹಿಂದೆ ಬರುವಾಗ


ಬಾ ಎಂದು ಹೇಳಿದಳು ಮದುಮಗಳು ರಂಗಮೆ


ಯಾರಮ್ಮ ರಂಗಮೆ ರಂಗಮೆ ಕೇಳಬೇಕು


ಜೀವ ಇದ್ದರೆ ನಿನ್ನೊಂದಿಗೆ ಇರಬೇಕು


ಸತ್ತರೂ ಕೂಡ ನಿನ್ನೊಂದಿಗೇ ಇರಬೇಕೆಂದು


ಆಸೆಯನ್ನು ಹೊಂದಿದ್ದೇನೆ ಎಂದನು


ಡೆನ್ನ ಡೆನ್ನ ಡೆನ್ನಾನಾ ಓಯೋಯೇ ಡೆನ್ನಾನಾ


ನಾನು ಈಗ ಹೋಗುವಾಗ ಹೋಗುತ್ತೇನೆ ಅರಸು


ಬರುವಾಗ ಬರುತ್ತೇನೆಂದು ಹೇಳಿದಳು


ಬಂದಾಗ ನಿನ್ನನ್ನು ಕರೆದುಕೊಂಡು ಹೋಗುವುದಿಲ್ಲ


ನನ್ನೊಂದು ಅಣ್ಣನಲ್ಲಿ ಕೇಳಿ ನೋಡು


ಪೊದು ಹಿಡಿಯುತ್ತಾನಾ? ಹೆಣ್ಣು ಕೊಡುತ್ತಾನಾ?


ಕೇಳು ಕರೆದು ಬಾ ಎಂದು ಹೇಳಿದಳು


ಅದು ಎಲ್ಲ ಬೇಡ ಒಟ್ಟಿಗೆ ಕುಳಿತು


ಹೇಳಿದ ಹರಕೆ ಸಂದಾಯ ಮಾಡೋಣವೆಂದು ಹೇಳುವನು


ಭೈರವ ಕೇರಿಯ ಭೈರವ ಅರಸುಗಳು


ಆ ಹೊತ್ತಿಗೆ ಹೇಳುತ್ತಾನೆ ಅರಸು


ಯಾರಮ್ಮ ರಂಗಮೆ ರಂಗಮೆ ನಿನ್ನನ್ನು


ಚಂದವನ್ನು ನೋಡಿದ್ದು ಸತ್ಯವಾದರೆ


ನನಗೆ ನೀನೇ ಬೇಕು ಎಂದು ಹೇಳಿದನು


ಭೈರರ ಕೇರಿಯ ಭೈರರಸು ಹೇಳುವಾಗ


ದೂರದಲ್ಲಿ ನಿಂತು ನೋಡುವರು ಅರಸುಗಳು


ಕದಿರೆಯ ಬೊಳ್ಳಿಲ್ಲ ಅರಸುಗಳು


ಯಾರಯ್ಯ ಆಳುಗಳೇ ಆಳುಗಳೇ ಕೇಳಿದಿರ


ಯಾರದೊಂದು ದಂಡಿಗೆ ಬರುವುದೆಂದು


ಕದಿರೆಯ ಅರಸುಗಳು ಕೇಳುವಾಗ


ಬರ್ಪಾನೆಂದ ಬೀಡಿನಿಂದ ಬಂದ ದಂಡಿಗೆ


ಕದಿರದ ಬೀಡಿಗೆ ಬರುತ್ತಾ ಇದೆ ಎಂದು ಹೇಳಿದಾಗ


ಅಲ್ಲಿಗೆ ಹೋಗಿ ಕದಿರೆಯಿಂದ 


 ಹೋದ ದಂಡಿಗೆ ಕೇಳಬೇಕು


ಕೋಳ್ಯೂರಿನ ದೇವಸ್ಥಾನಕ್ಕೆ ಹೋಗುತ್ತದೆ


ಕೋಳ್ಯೂರಿನ ಕುಂತ್ಯಮ್ಮ ದೇವಿಯ ಹರಿಕೆ ಸಲ್ಲಿಸಿ


ಬರಬೇಕೆಂದು ಹೋಗುವಾಗ 


 ಒಂದು ಗುಡ್ಡೆ ಒಂದು ಬೈಲನ್ನು


ದಾಟಿಕೊಂಡು ಇಳಿದುಕೊಂಡು ಹೋಗಿ ಮನೆಗೆ


ಹೋಗುವಾಗ ಹೋದ ದಂಡಿಗೆ ಬರುವಾಗ


ಬೇರೊಂದು ಹಾದಿಯಲ್ಲಿ ಹೋಗಿ ಎಂದು


ಹೋದ ದಾರಿಯಲ್ಲಿ ಬರುವುದು ಬೇಡ ಎಂದು


ಹೇಳಿದರು ಕದಿರೆಯ ಅರಸರು ಹೇಳಿದರು


ಕೋಳ್ಯೂರಿಗೆ ಹೋಗಿ ಎಂದು ಹೇಳಿದರು


ಕಳುಹಿಸಿದರು ಕದಿರೆಯ ಅರಸರು


ಕೋಳ್ಯೂರಿನ ದೇವಸ್ಥಾನದಲ್ಲಿ ಹೇಳಿದ ಹರಕೆಯನ್ನು


ಸಲ್ಲಿಸಿ ರಂಗಮೆ ಇಲ್ಲಿಯೇ ಬರುವಳೆಂದು


ಕಾದುಕೊಂಡು ಕುಳಿತುಕೊಳ್ಳುತ್ತಾನೆ ಭೈರವ ಅರಸ ಕುಳಿತಿದ್ದಾನೆ


ನಿನ್ನೆ ಹೋದ ದಂಡಿಗೆ ಇಂದಿನವರೆಗೆ ಬರಲಿಲ್ಲ


ಯಾಕಾಗಿ ಬರಲಿಲ್ಲವೆಂದು ಕಾದುಕುಳಿತಿದ್ದಾನೆ


ಭೈರರ ಕೇರಿಯ ಭೈರವ ಅರಸ


ದಂಡಿಗೆ ಮುಟ್ಟುತ್ತದೆ ಬರ್ಪಾನೆಂದ ಬೀಡಿಗೆ


ಯಾರಯ್ಯ ಅಣ್ಣನವರೆ ಅಣ್ಣನವರೆ ಕೇಳಿರಿ


ಭೈರವ ಕೇರಿಯಲ್ಲಿ ಹೋಗುವಾಗ ನನಗಾದರೂ


ಭೈರವ ಅರಸ ಕೀಟಲೆ ಮಾಡಿದ್ದಾನೆ


ದಂಡಿಗೆಯ ಕೊಂಬಿಗೆ ಕಯ ಹಾಕಿದ್ದಾನೆ


ಹಿಡಿಯಬೇಡ ಹಿಡಿಯಬೇಡ ಎಂದೆ ಅಣ್ಣನವರೆ


ನಾನು ಬರುತ್ತೇನೆಂದು ಹೇಳಿದೆ


ಹೋಗುವಾಗ ಬಿಡು ಬರುವಾಗ ಬರುತ್ತೇನೆ ಎಂದು ಹೇಳಿದೆ


ಹೋದಾಗ ಹೋದ ದಂಡಿಗೆ


ಹಿಂತಿರುಗುವಾಗ ಬೇರೆ ಒಂದು ದಾರಿಯಲ್ಲಿ ಬಂದಿತು


ಹೋಗುವಾಗ ಹಾಗೆ ಕುಳಿತುಕೊಂಡು ಬರುವಾಗ ಬನ್ನಿ ಎಂದು


ಭೈರವ ಅರಸು ಹೇಳಿದ್ದಾನೆ ಅಣ್ಣವರೇ 


 ಎಂದು ರಂಗಮೆ ಹೇಳಿದಳು


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನಾ


ಭೈರವ ಅರಸನ ಕೀಟಲೆಯನ್ನು ಪ್ರಶ್ನಿಸಲು


ನನಗೆ ಸಾಧ್ಯವಿಲ್ಲ ಶುದ್ಧ ಕಳ್ಳನಾತ 


 ಅವನ ಎದುರು ನಿಲ್ಲುವ ಸಾಮಥ್ರ್ಯ 


ನನಗಿಲ್ಲ ರಂಗಮೆ ಹೋಗಬೇಡ


ಹೋಗಬೇಡ ರಂಗಮೆ ಎಂದು ಹೇಳಿದೆ ನಾನು


ಹಠವನ್ನೇ ಹಿಡಿದು ಹೋದೆ ಎಂದು ಹೇಳಿದರು


ಯಾರು ಮಗಳೆ ರಂಗಮೆ ಬಂದ ಕಷ್ಟಕ್ಕೆ ನಾನು


ಒದಗಿ ಇರುವೆನೆಂದು ಹೇಳಿದರು ಅಣ್ಣನವರು


ಮೇದಾರ ಹಾಗೆ ಹೇಳಿದಾಗ 


 ಯಾರಯ್ಯ ಅಣ್ಣನವರೆ ಕೇಳಿರಿ


ಭೈರರ ಕೇರಿಯಿಂದ ಇಳಿದು ಹೋಗುವಾಗ


ಕದಿರೆಯ ಕಟ್ಟಹುಣೆಯಲ್ಲಿ ಹೋಗುವಾಗ ನೋಡಿದ್ದಾರೆ


ಕದಿರೆಯ ಅರಸುಗಳು ಹೇಳಿದರು


ಹೋದ ದಾರಿಯಲ್ಲಿ ಬರಬೇಡ ಮಗಳೆಂದು ಹೇಳಿದರು


ಕದಿರೆಯ ಅರಸುಗಳು ಹೇಳಿದರು


ಅವನು ಏನು ಮಾಡುತ್ತಾನೆ ಅವನನ್ನು ಏನು


ಮಾಡಬೇಕೆಂದು ನನಗೆ ಗೊತ್ತಿದೆ ಎಂದರು


ಅಷ್ಟು ಮಾತು ಕೇಳಿದರು ಅಣ್ಣ ಮೇದಾರರು


ಯಾರು ಮಗಳೆ ತಂಗಿ ಯಾರಮ್ಮ ಮಗಳೆ ರಂಗಮೆ


ನೀನು ಹಾಗೆ ಹೇಳಿದರೆ ಅವನು ಕೇಳುತ್ತಾನೆಯೇ?


ಓಲೆ ಬರೆದು ಕಳುಹಿಸಿ ಕೊಟ್ಟಿದ್ದಾನೆ ಭೈರವ


ಭೈರರ ಕೇರಿಗೆ ಹೇಗೆ ಹೋಗುವುದೆಂದು ಹೇಳುವಾಗ


ಅಣ್ಣ ಒಬ್ಬ ಮೇದಾರ ಹೇಳುವಾಗ


ಯಾರಯ್ಯ ಅಣ್ಣನವರೆ ಏನೊಂದು ಕಷ್ಟ ಕೊಟ್ಟರೂ


ನನ್ನನ್ನು ಪೊದು ಹಿಡಿದು ಕೊಡುವೆ ಎಂದು


ಹೇಳಬೇಡಿ ಅಣ್ಣನವರೇ ಎಂದು 


 ಹೇಳಿದಳು ಬಾಲೆ ರಂಗಮೆ ಹೇಳುವಾಗ


ಓಲೆ ಸಿಕ್ಕಿದ ತಕ್ಷಣ ಓಲೆ ಹಿಡಿದುಕೊಂಡು


ಭೈರರ ಕೇರಿಗೆ ಹೋಗುವಾಗ ಅಲ್ಲಿ 


 ಭೈರವ ಅರಸು ಒಂದು ಮುಳ್ಳಿನ


ಪಡಿಯನ್ನು ತೆಗೆಸಿದ್ದಾನೆ ತೆಂಗಿನ ಮರಕ್ಕೆ ಹತ್ತಿ


ಕುರುವಾಯಿ ತೆಗೆಸಿದ್ದಾನೆ ಹೆಣ್ಣು ಕೊಡುತ್ತೀಯಾ


ಪೊದು ಹಿಡಿಯುತ್ತೀಯಾ ಮೇದಾರ ಎಂದು ಕೇಳಿದಾಗ


ಹೆಣ್ಣು ಕೊಡಲು ಪೊದು ಹಿಡಿಯಲು 


 ನಾವು ಬಲ್ಲಾಳರು ನೀವು ಭೈರರು ಪೊದು ಹೇಗೆ ಹಿಡಿಯುವುದು? 


ಹೆಣ್ಣು ಹೇಗೆ ಕೊಡುವುದು?


ಸಾಧ್ಯ ಇಲ್ಲವೆಂದು ಹೇಳಿದರು ಮೇದಾರರು


ಅಷ್ಟು ಮಾತು ಕೇಳಿದನೆ ಭೈರವ


ಯಾರಯ್ಯ ಮೇದಾರ ಯಾರಯ್ಯ ಮೇದಾರ


ಏಳು ಮಾಳಿಗೆಯ ಮೇಲೆ ಕುಳ್ಳಿರಿಸುವೆ ರಂಗಮೆಯನ್ನು


ಗಿಳಿ ಸಾಕಿದ ಹಾಗೆ ಸಾಕುವೆನು ರಂಗಮೆಯನ್ನು


ಕಣ್ಣಿನಿಂದ ಒಂದು ಹನಿ ನೀರು ಬೀಳದಂತೆ


ಸಾಕುವೆನೆಂದು ಹೇಳಿದನು ಭೈರವ ಅರಸ ಹೇಳಿದನು


ಹೆಣ್ಣು ಕೊಡುವೆಯ? ಪೊದು ಹಿಡಿಯುವೆಯ? ಮೇದಾರ


ಎಂದು ಹೇಳಿದಾಗ ಹೇಳುತ್ತಾರೆ


ಹೆಣ್ಣು ಕೊಡಲಾರ ಸಂಬಂಧ ಹಿಡಿಯಲಾರೆ


ಸಂಬಂಧ ಹಿಡಿಯಲು ನೀನಾದರೂ ಭೈರವ


ಕೇರಿಯ ಭೈರವ ನಾನಾದರೂ ಕೊಡಲಾರೆ


ಅವಳ ಹತ್ತಿರ ಒಂದು ಮಾತು ಕೇಳಬೇಕು ಎನ್ನುತ್ತಾನೆ


ಹೆಣ್ಣು ನೋಡಲು ಸಂಬಂಧ ಹಿಡಿಯಲು


ನನ್ನದೊಂದು ಬೀಡಿಗೆ ಬರಬೇಕೆಂದು ಹೇಳಿದಾಗ


ಹೇಳಿದ ಮಾತು ಇಂದಲ್ಲ ಈ ವಾರವಲ್ಲ


ಬರುವ ವಾರದಲ್ಲಿ ಮದುವೆಯ ದಿಬ್ಬಣ ತೆಗೆದುಕೊಂಡು


ಬರುವೆನೆಂದು ಭೈರವರ ಅರಸು ಹೇಳುವಾಗ


ಅಷ್ಟೆಲ್ಲ ಮೇಲೆ ಹೋಗಬೇಡ ಅರಸು 


 ನನ್ನ ತಂಗಿ ಒಪ್ಪಿದಳೆಂದಾದರೂ


ಜಾತಿಯಲ್ಲಿ ನೀನು ಕೆಳಗೆ ನಾವು ಮೇಲು


ಜಾತಿಗಿಂತ ಕೆಳಗೆ ಹೆಣ್ಣು ಕೊಟ್ಟು 


 ಭೈರರ ಕೇರಿಗೆ ಬಲ್ಲಾಳರ ಹೆಣ್ಣನ್ನು


ಕೊಡುವುದು ಹೇಗೆಂದು ಹೇಳಿದರು


ಡೆನ್ನಾನಾ ಡೆನ್ನಾನಾ ಡೆನ್ನಾನಾ ಮೇದಾರ


ಜಾತಿಗೆ ನೀತಿಗೆ ಹೊತ್ತಲ್ಲ ಮೇದಾರ


ಹೆಣ್ಣು ಕೊಡುತ್ತೇನೆ ಹೆಣ್ಣು ಕೊಡುತ್ತೇನೆಂದು ಹೇಳು ಎಂದು


ಬೇಕು ಬೇಕಾದಂತೆ ಶಿಕ್ಷೆ ಕೊಟ್ಟನು 


 ಮುಳ್ಳಿನ ಮಂಚದಲ್ಲಿ ಮಲಗಿಸಿ ಮೇಲಿಗೆ


ಉರಿಯ ಮೂಡೆ ಹಾಕಿ ಮೂರುಸತ್ತು ಬಳೆದು


ಹೆಣ್ಣು ಕೊಡು ಮೇದಾರ ಸಂಬಂಧ ಹಿಡಿ ಮೇದಾರ ಎಂದಾಗ


ಹೆಣ್ಣು ನಾನು ಕೊಡಲಾರೆ ಸಂಬಂಧ ಹಿಡಿಯಲಾರೆಂದು


ಅಣ್ಣ ಒಬ್ಬ ಮೇದಾರರು ಹೇಳಿದರು


ಕೊಡುವ ಕಷ್ಟವನ್ನು ತಡೆಯಲಾಗದೆ ಹೇಳದರು


ಅವಳ ಹತ್ತಿರ ಒಂದು ಮಾತು ಕೇಳಿ ಒಪ್ಪಿಗೆ


ಪಡೆದು ಬರುವೆನೆಂದು ಹೇಳಿದರು ಮೇದಾರರು


ಅಷ್ಟು ಹೊತ್ತಿಗೆ ಭಾರೀ ಸಂತೋಷ


ಮದುವೆಯೆ ಆಗಬೇಕು ರಂಗಮೆ ಹೆಣ್ಣನ್ನು


ಮೇದಾರನ ತಂಗಿ ನನಗೆ ಆಗಬೇಕೆಂದು


ಊರೂರು ಪ್ರಚಾರ ಮಾಡುವನು 


 ಊರು ಕೇರಿಗೆ ಡಂಗುರ ಸಾರಿ


ಮೇದಾರನ ತಂಗಿಯನ್ನು ಮದುವೆ ಆಗುವುದೆಂದು


ಹೇಳಿದನು ಭೈರರ ಕೇರಿಯ ಅರಸು 


 ಮನೆಗೆ ಬಂದು ಕತ್ತಲೆ ಮನೆಯಲ್ಲಿ


ಮುಖ ಕೆಳಗೆ ಹಾಕಿ ಮಲಗಿದ್ದಾರೆ ಮೇದಾರರು 


 ಅಣ್ಣ ಒಬ್ಬ ಮೇದಾರ


ಯಾರಯ್ಯ ಅಣ್ಣನವರೇ ಅಣ್ಣನವರೇ ಎಲ್ಲಿಗೆ ಹೋದಿರಿ


ಹುಡುಕಿಕೊಂಡು ಬರುವಾಗ ಕತ್ತಲೆ ಕೋಣೆಯಲ್ಲಿ


ಮುಖ ಕೆಳಗೆ ಹಾಕಿ ಮಲಗಿದ್ದಾರೆ ಮೇದಾರರು


ಅಣ್ಣ ಒಬ್ಬ ಮೇದಾರ 


 ಯಾರಯ್ಯ ಅಣ್ಣನವರೆ ನಿಮಗೆ ಬಂದ ಕಷ್ಟ


ನನಗೆ ಬಂದ ಕಷ್ಟ ಬೇರೆ ಅಲ್ಲ


ಹೆಣ್ಣು ಕೊಡುತ್ತೇನೆ ಸಂಬಂಧ ಹಿಡಿಯುವೆಂದು


ಮಾತು ಹೇಳಿರಿ ಅಣ್ಣನವರೇ 


 ಎಂದು ಕಳುಹಿಸುತ್ತಾಳೆ ತಂಗಿ ರಂಗಮೆ


ಓಲೆಯ ಒಕ್ಕಣೆ ಬರೆದು ಕಳುಹಿಸುವರು


ಹೆಣ್ಣು ಕೊಡುತ್ತೇನೆ ಪೊದು ಹಿಡಿಯುತ್ತೇನೆ


ಬರುವ ವಾರದಲ್ಲಿ ದಿಬ್ಬಣ ತೆಗೆದುಕೊಂಡು


ಬರಬೇಕು ಎಂದರು ಬರ್ಪಾನೆಂದ ಬೀಡಿನಲ್ಲಿಯೇ


ಮದುವೆ ಎಂದರು ಅಣ್ಣ ಮೇದಾರ 


 ಅಷ್ಟು ಹೊತ್ತಿಗೆ...


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನಾಯೇ


ಮದುವೆಯ ಸಿಂಗಾರ ಮಾಡಿದರು ರಂಗಮೆಗೆ


ಏಳು ಉಪ್ಪರಿಗೆಯ ಮೇಲೆ 


 ಒಂದು ಕೋಣೆಯಲ್ಲಿ ಸಿಂಗಾರ ಮಾಡಿ


ಕನ್ನಡಿಯ ಎದುರು ಕುಳ್ಳಿರಿಸುತ್ತಾರೆ 


 ಮಗಳನ್ನು ತಂಗಿ ಒಬ್ಬಳು ರಂಗಮೆ


ತಲೆ ಎತ್ತಿ ನೋಡುವಾಗ ಕಾಣುತ್ತದೆ


ಬರ್ಪಾನೆಂದ ಬೀಡಿನ ಕಂಬಳದ ಕಟ್ಟಹುಣಿಯಲ್ಲಿ


ಕೆಂಪು ಕೆಂಪು ಸೀಯಾಳ ದಿಬ್ಬಣ ಬರುತ್ತದೆ


ದಂಡಿಗೆಯಲ್ಲಿ ಬರುತ್ತಾನೆ ಭೈರರ ಕೇರಿಯ ಭೈರವರಸು


ಊಟ ಸಮ್ಮಾನ ಮಾಡಿದರು ಭೈರರು


ಮದುಮಗನ ಶೃಂಗಾರ ಮಾಡಿದರು ಭೈರರು


ಮದುಮಗಳನ್ನು ಕರೆದುಕೊಂಡು ಬಾ ಮೇದಾರ


ಎಂದು ಬೀಡಿನ ಕೆಲಸದ ಹೆಂಗಸರನ್ನು


ಮೇಲುಪ್ಪರಿಗೆಗೆ ಕಳುಹಿಸುವಾಗ ರಂಗಮೆ


ಹೊಟ್ಟೆನೋವು ಅಣ್ಣನವರೆ 


ನನ್ನ ಜೀವವೇ ಹೋಗುತ್ತದೆ ಅಣ್ಣನವರೆ


ಇದರಲ್ಲಿ ನಾನು ಬದುಕುವುದಿಲ್ಲ ಅಯ್ಯಯ್ಯೋ ಅಣ್ಣ


ಇದರಲ್ಲಿ ನಾನು ಬಾಳುವುದಿಲ್ಲ ಅಣ್ಣನವರೆ ಎಂದಳು


ತಂಗಿ ಮದುಮಗಳು ರಂಗಮೆ 


 ಅಷ್ಟು ಮಾತು ಕೇಳಿಕೊಂಡು ಮೇದಾರ


ಮೇಲುಪ್ಪರಿಗೆಯಿಂದ ಇಳಿದು ಬಮದು 


 ಬಾಲೆ ನನ್ನ ತಂಗಿ ಇವತ್ತಲ್ಲದಿದ್ದರೆ


ನಾಳೆಯಾದರೂ ಭೈರವರಸುವಿಗೆ ಹೆಂಡತಿ ಆಗುತ್ತಾಳೆ


ಅವಳಿಗೆ ಎದ್ದು ನಿಲ್ಲುವ ಶಕ್ತಿ ಇಲ್ಲ 


 ಎಂದು ಹೇಳುತ್ತಾರೆ ಅಣ್ಣ ಮೇದಾರ




ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನಾನಾ ಅಣ್ಣ ಮೇದಾರ


ಹೇಳಿದ ಮಾತು ಕೇಳಿದನು ಭೈರರು


ಬಾಗಿಲು ಹಾಕಿ ಹೋಗುವಾಗ ಹೇಳುತ್ತಾರೆ


ಇವತ್ತಲ್ಲ ನಾಳೆ ಎಂದರೆ ನಿಮಗಾಗುವುದಿಲ್ಲವಂತೆ


ದಂಡಿಗೆಯ ಕೊಂಬಿಗೆ ಧಾರೆ ಎರೆದು


ಬಂದ ದಿಬ್ಬಣ ಹೋಗಲಿ ಎಂದಳು 


 ತಂಗಿ ರಂಗಮೆ


ಅಣ್ಣ ಬಂದು ಹೇಳಿದ ಮಾತು 


ಕೇಳಿದನು ಭೈರರ ಕೇರಿಯ ಅರಸ


ಅಷ್ಟು ಭರವಸೆ ಇದ್ದರೆ ನನಗೆ 


ದಿಬ್ಬಣ ಹೋಗುವ ಮೊದಲು


ದಂಡಿಗೆಯ ಕೊಂಬಿಗೆ ಧಾರೆ ಎರೆದು 


 ಭೈರರ ಕೇರಿಗೆ ಹೊರಡುವಾಗ


ಹೆಣ್ಣನ್ನು ಕಳುಹಿಸುವ ದಿನದಂದು


ನಾವು ಬರುತ್ತೇವೆಂದು ಹೇಳಿದನು ಅರಸು


ಭೈರರ ಅರಸು ಹೇಳುವಾಗ 


 ನಿಮಗೆ ಮಾಣಿಯನ್ನು ನಾವು ಕಳುಹಿಸುತ್ತೇವೆ


ಭೈರರ ಅರಸುಗಳೆ ನಿಮಗೆ 


 ಈಗ ಹೋಗಿ ನಾಳೆಯೇ ಬನ್ನಿ ಎಂದು


ಅಣ್ಣ ಮೇದಾರ ಹೇಳಿದಾಗ 


 ಅಷ್ಟೊಂದು ಮಾತು ಕೇಳಿದನೆ ಭೈರವರಸ


ಊಟ ಔತಣ ಮಾಡಿ ಬಂದ 


 ದಿಬ್ಬಣವನ್ನು ತೆಗೆದುಕೊಂಡು ಹೋಗುತ್ತಾನೆ


ಆ ದಿನದ ಹೊತ್ತು ಹೋಗುತ್ತದೆ ಅರಸನಿಗೆ


ಮರುದಿನ ಇನ್ನೊಂದು ದಿನದಲ್ಲಿ ಅರಸ


ಬೆಳಗಿನ ಜಾವದಲ್ಲಿ ಎದ್ದು ನೋಡುವಾಗ


ಓಲೆಯ ಮಾಣಿ ಬರುತ್ತಾನೆ 


 ನನ್ನ ತಂಗಿ ಇದ್ದಾಳೆ ರಂಗಮೆ


ಮದುಮಗಳು ಆಗಿದ್ದಾಳೆ ಮುಟ್ಟು ಆಗಿದ್ದಾಳೆ


ನೀವಾದರೂ ಬರಬೇಕೆಂದು ಹೇಳಿ ಒಂದು


ಓಲೆಯ ಒಕ್ಕಣೆ ನೋಡುವನೇ ಭೈರವರಸ


ಮುಡಿ ಮುಡಿ ಅವಲಕ್ಕಿ ಕೆಂದಾಳಿ ಸೀಯಾಳ


ಬನ್ನಂಗಾಯಿ ಕಡಿದುಕೊಂಡು ಬರುವಾಗ


ಬರ್ಪಾನೆಂದ ಬೀಡಿನಲ್ಲಿ ಬಾರಿ ದೊಡ್ಡ ಹೊಗೆ


ದೂರದಿಂದ ಬರುವಾಗ ಕಾಣುತ್ತದೆ


ಯಾರಯ್ಯ ಬೋವಿಗಳೆ ಯಾರಯ್ಯ ಆಳುಗಳೇ


ಬರ್ಪಾನೆಂದ ಬೀಡಿನಲ್ಲಿ ಏನು 


 ಕಷ್ಟವೆಂದು ಹೇಳಿದನೇ ಅರಸ ಭೈರವರಸ


ಮನೆಗೆ ಹತ್ತಿರ ಹತ್ತಿರ ಹೋಗುವಾಗ ಕಾಣಿಸುತ್ತದೆ


ಬೆಂಕಿಯಾದರು ಕೊಟ್ಟಿದ್ದಾರೆ ಅರಿಯು ಮುರಿಯ ಅತ್ತುಕೊಂಡು


ಸುತ್ತಮುತ್ತ ನಿಂತಿದ್ದಾರೆ ದೊಡ್ಡ ಒಂದು ಕಷ್ಟವಂತೆ


ಮದುವೆ ಆಗಬೇಕೆಂದು ಹೇಳಿದಳು ಮಗಳು


ಉರಿದು ಸುಟ್ಟು ಬೂದಿ ಆಗಿದ್ದಾಳೆ ಮಗಳು


ಹೊಟ್ಟೆನೋವು ಆಗಿ ಕೈ ಬಿಟ್ಟು ಕೈಲಾಸಕ್ಕೆ


ಹೋಗಿದ್ದಾಳೆಂದು ಕೆಲಸದವರು ಹೇಳುವಾಗ


ಮೂಟೆ ಮೂಟೆ ಅವಲಕ್ಕಿಯನ್ನು ಕಾಷ್ಠಕ್ಕೆ ಹಾಕಿ


ಕೆಂಪು ಕೆಂಪು ಸೀಯಾಳ ಆಚೀಚೆ ಬಿಸಾಡಿ


ಇದೊಂದು ಜನ್ಮದಲ್ಲಿ ಗಂಡ ಹೆಂಡತಿ


ಆಗದಿದ್ದರೆ ಪರವಾಗಿಲ್ಲ ಇನ್ನೊಂದು ಜನ್ಮದಲ್ಲಿ


ಗಂಡ ಹೆಂಡತಿ ಆಗಿ ಒಟ್ಟಿಗೆ ಇರುವ ಎಂದು


ಕಾಷ್ಠಕ್ಕೆ ಹಾರಿದನು ಭೈರವ ಅರಸ


ಡೆನ್ನಾ ಡೆನ್ನಾ ಡೆನ್ನಾನಾ ಓಯೋಯೇ ಡೆನ್ನಾನಾ ಡೆನ್ನಾನಾಯೇ


ಯಾರಯ್ಯ ಭೈರವರಸ ನನ್ನೊಟ್ಟಿಗೆ ಸಾಯಬೇಕೆಂದು ಇದ್ದೆ


ಹೆಣ್ಣು ನಾಯಿಯೊಟ್ಟಿಗೆ ಸತ್ತೆಯಲ್ಲ ಭೈರವ ಅರಸ ಎಂದು ಹೇಳಿ


ಯಾರಯ್ಯ ಅಣ್ಣನವರೆ ನನ್ನನ್ನು ಕದಿರೆಯ ಅರಸನಿಗೆ


ಮದುವೆ ಮಾಡಿಕೊಡಿ ಅಣ್ಣನವರೇ


ನನ್ನನ್ನು ಮದುವೆ ಆಗುತ್ತೇನೆಂದು ಹೇಳಿದ್ದಾರೆಂದು


ಹೇಳಿದಳವಳು ಮದುಮಗಳು ರಂಗಮೆ


ಓಲೆಯನ್ನೇ ಬರೆದು ಮಾಣಿಯನ್ನು ಕಳುಹಿಸಿದರು ಮೇದಾರರು


ದಂಡಿಗೆಯಲ್ಲಿಯೇ ದಿಬ್ಬಣ ತಂದು ಬಂದರು ಕದಿರೆಯ ಅರಸರು


ಭಾರೀ ಶೃಂಗಾರ ಮಾಡಿ ಮದುವೆಯನ್ನು ಮಾಡಿ


ತಂಗಿಯನ್ನು ಕೊಟ್ಟರು ಅಣ್ಣ ಮೇದಾರರು


ದಂಡಿಗೆಯನ್ನು ಸಿಂಗಾರ ಮಾಡಿ ಕದಿರೆಯ ಅರಸನೊಂದಿಗೆ


ಕಳುಹಿಸಿಕೊಟ್ಟರು ಅಣ್ಣ ಒಬ್ಬ ಮೇದಾರರು


ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ 


ಓಯೋಯೇ ಡೆನ್ನಾನಾ ಡೆನ್ನಾನಯೇ







No comments:

Post a Comment