Sunday, 6 July 2014

ನನ್ನ ಮೊದಲ ಕಥೆ -ಕೈಜಾರಿದ ಹಕ್ಕಿ (3 ಜುಲೈ 1994 .ಹೊಸ ದಿಗಂತ )
                       
                         
         
 ಇಂದು ಬೆಳಗ್ಗೆ ಪ್ರಾಜೆಕ್ಟ್ ವರ್ಕ್  ಗಾಗಿ ನನ್ನ ಸಂದರ್ಶನ ಮಾಡಿದ ಪತ್ರಿಕೋದ್ಯಮ ವಿದ್ಯಾರ್ಥಿ ಒಬ್ಬರು ನಿಮ್ಮ ಮೊದಲ ಕೃತಿ ಯಾವಾಗ ಪ್ರಕಟವಾಯಿತು?ನಿಮಗೆ ಬರೆಯಲುಪ್ರೇರಣೆ ಯಾವುದು ? ಎಂದು ಕೇಳಿದರು .
ತಕ್ಷಣವೇ ನನ್ನ ಮೊದಲ ಕಥೆ ಪ್ರಕಟವಾದ ದಿನದ ವಿಚಾರ ನೆನಪಾಯಿತು .
ನನ್ನ ಮೊದಲ ಕಥೆ "ಕೈಜಾರಿದ ಹಕ್ಕಿ " ಇಪ್ಪತ್ತು ವರ್ಷ  ಹಿಂದೆ 3 ಜುಲೈ 1994ರಂದು  ಹೊಸ ದಿಗಂತದ  ಸಾಹಿತ್ಯ ಸಾಪ್ತಾಹಿಕದಲ್ಲಿ ಪ್ರಕಟಿತವಾಯಿತು .
ಇದರ ಹಿಂದೆಯೂ ನನ್ನ ಬದುಕಿನ ಒಂದು ಕಥೆಯೂ ಇದೆ
ನನ್ನ ಬದುಕಿನ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದ ದಿನಗಳು ಅವು .ಎರಡನೇ ವರ್ಷದ ಪದವಿ ಕೊನೆಯಲ್ಲಿ ಓದುತ್ತಿದ್ದಾಗ ನನ್ನ ವಿವಾಹ ಆಯಿತು ,
ವಿವಾಹ ಪೂರ್ವದಲ್ಲಿ ತಿಳಿಸಿದಂತೆ ನಾನು ವಿದ್ಯಾಭ್ಯಾಸ ಮುಂದುವರಿಸಿದ್ದು 1994 ಮಾರ್ಚ್ ಗೆ ನನ್ನ ಪದವಿ ಓದು ಮುಗಿದಿತ್ತು .
ಓದಿನ ಬಗ್ಗೆ ಅತ್ಯುತ್ಸಾಹ ಹೊಂದಿದ್ದ ನನಗೆ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು

ಇಪ್ಪತ್ತು ವರ್ಷದ ಹಿಂದೆ ಹಳ್ಳಿಯಲ್ಲಿ ವಿವಾಹಿತ ಮಹಿಳೆ ಓದುವುದೆಂದರೆ ಸಣ್ಣ ವಿಷಯ ಆಗಿರಲಿಲ್ಲ !ಎಲ್ಲರಿಂದ ವ್ಯಂಗ್ಯ ದ ಪ್ರಶ್ನೆಗಳು ,ಕುತೂಹಲ ಅವಹೇಳನದ ನೋಟಗಳು !ನಾನು ಮುಂದೆ ಎಂ ಎ ಓದುವ ಆಸೆಯನ್ನು ಹೇಳಿದ್ದೇ ತಡ !ಎಮ್ಮೆ (?!) ಮಾಡಿದವರು ಸಾವಿರ ಮಂದಿ ಕೆಲಸ ಇಲ್ಲದೆ ನಾಯಿಸಂತೆ ಅಲೆಯುತ್ತಿದ್ದಾರೆ ! ಸಂಸ್ಕೃತದಂಥ ಸತ್ತ (?!) ಭಾಷೆಯಲ್ಲಿ ಎಂ ಎ ಓದಿ ಏನು ಕಡಿದು ಹಾಕಲು ಇದೆ ಎಂಬ ತಿರಸ್ಕಾರದ ಮಾತುಗಳು


ನಾನು ಓದಬೇಕಾದರೆ ಮನೆಯವರನ್ನು ಎದುರು ಹಾಕಿಕೊಂಡು ನಾನು ಮತ್ತು ಪ್ರಸಾದ್ ಹೊರನಡೆಯಬೇಕಾದ ಅನಿವಾರ್ಯತೆ !.ನಯ ವಿನಯದಿಂದ ಹಿರಿಯರನ್ನು ಒಪ್ಪಿಸುವ ಪ್ರಯತ್ನ ಯಾವುದೂ ಸಫಲವಾಗಿರಲಿಲ್ಲ .
ಇಂಥ ಒತ್ತಡದ ಸಮಯದಲ್ಲಿ ನನಗೆ ಕಥೆ ಬರೆಯಲು ಪ್ರೇರಣೆ ಗೆಳತಿ ಅನುಪಮ ಉಜಿರೆ ( ಅನುಪಮ ಪ್ರಸಾದ ) ಅವರಿಂದ /

ಸ್ವಭಾವತಃ ಭಾವುಕ ಜೀವಿಯಾಗಿದ್ದ ನನಗೆ ಕಥೆ ಬರೆಯುವುದು ತೀರ ಕಷ್ಟ ಎನಿಸಿರಲಿಲ್ಲ ,ಕಥೆಯೊಂದನ್ನು ಬರೆದು ಹೊಸದಿಗಂತ ಪತ್ರಿಕೆಗೆ ಕಳುಹಿಸಿದ್ದೆ .

ಆ ದಿನ ಪ್ರಸಾದ್ ಕೈಯಲ್ಲಿ ಹೊಸದಿಗಂತ ಪತ್ರಿಕೆ ಹಿಡಿದು ಕೊಂಡು ಬಂದರು .ನಿನ್ನ ಕಥೆ ಪ್ರಕಟವಾಗಿದೆ ಎಂದಾಗ ನನಗೆ ನಂಬಲೇ ಅಸಾಧ್ಯವಾಗಿತ್ತು '
ಕಣ್ಣಲ್ಲಿ ನೀರು ಉಕ್ಕಿ ಬಂತು !ನೀರು ತುಂಬಿ ಅಕ್ಷರ ಕಾಣದೆ ಇದ್ದರೂ ಹೇಗೋ ಮತ್ತೆ ಮತ್ತೆ ಓದಿದೆ ,

"ನನ್ನ ಕಥೆಯೂ ಪ್ರಕಟವಾಗುತ್ತದೆ ,ನನಗೂ ನನ್ನದೇ ಆದ ಅಸ್ತಿತ್ವ ಇದೆ "ಎಂದು ಮನವರಿಕೆಯಾಯಿತು !


ಹತಾಶೆಯ ಕೂಪದಲ್ಲಿ ಬಿದ್ದಿದ್ದ ನನಗೆ ಭರವಸೆಯ ಕೋಲ್ಮಿಂಚು !,ಇದ್ದಕ್ಕಿದ್ದ ಹಾಗೆ ಎಲ್ಲರನ್ನೂ ಎದುರಿಸಿ ಬದುಕ ಬಲ್ಲೆ ಎನ್ನುವ ಧೈರ್ಯ  ಎಲ್ಲಿಲ್ಲದ ಆತ್ಮ ವಿಶ್ವಾಸ ಮೂಡಿತು .
ನಾನು ನಿರ್ಧಾರಾತ್ಮಕವಾಗಿ "ನಾನು ಮುಂದೆ ಎಂ ಎ ಗೆ ಸೇರುತ್ತೇನೆ ,ನನಗೆ ಓದಲೇ ಬೇಕು" ಎಂದು ಹೇಳಿದೆ .

ಮುಂದೆ ಓದಿದೆ ಕೂಡಾ

ನಾನು ಸಂಸ್ಕೃತ (ಎಂ ಎ )ಓದಿದೆ ಮೊದಲ ರಾಂಕ್ ತೆಗೆದೆ ಮುಂದೆ ಕನ್ನಡ (ಎಂ ಎ )ಹಾಗೂ ಹಿಂದಿ (ಎಂ ಎ) ಗಳನ್ನೂ ಖಾಸಗಿಯಾಗಿ ಓದಿದೆ.ಎಂಫಿಲ್ ,ಪಿಎಚ್ ಡಿ ಪದವಿಗಳನ್ನೂ ಗಳಿಸಿದೆ ,ಎರಡನೆಯ ಪಿಎಚ್ ಡಿ ಪದವಿಗಾಗಿ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಫಲಿತಾಂಶ ಎದುರು ನೋಡುತ್ತಿದ್ದೇನೆ !
ಸರ್ಕಾರಿ ಕಾಲೇಜಿನಲ್ಲಿ  ಉಪನ್ಯಾಸಕ ಹುದ್ದೆಯೂ ದೊರೆಯಿತು
ಅಂದು ಓದುವ ನಿರ್ಧಾರ ತೆಗೆದುಕೊಳ್ಳಲು ,ಹತಾಶೆಯ ಕೂಪದಲ್ಲಿ ಏನೊಂದೂ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥಳಾಗಿದ್ದ ನನಗೆ ನನ್ನ ಕಥೆಯ ಪ್ರಕಟಣೆಯ ಮೂಲಕ ಒಮ್ಮಿಂದೊಮ್ಮೆಗೆ ಉತ್ಸಾಹ ತುಂಬಿದ ,ಆತ್ಮ ವಿಶ್ವಾಸ ಚಿಗುರಲು ಕಾರಣವಾದ ಹೊಸ ದಿಗಂತ ಪತ್ರಿಕೆಗೆ ನಾನು ಯಾವತ್ತಿಗೂ  ಆಭಾರಿಯಾಗಿದ್ದೇನೆ

ಅಂದು ಮೊದಲ ಕತೆ  ಪ್ರಕಟವಾಯಿತು ಅನಂತರ ಕೂಡ ನನ್ನ 10 -12 ಕಥೆಗಳು ಪ್ರಕಟವಾದವು .ನನ್ನ ಮೊದಲ ವೈಚಾರಿಕ ಲೇಖನ ಕೂಡ ಹೊಸದಿಗಂತ ಪತ್ರಿಕೆಯಲ್ಲಿಯೇ ಪ್ರಕಟವಾಯಿತು .
ಮುಂದೆ ನೂರಕ್ಕೂ ಹೆಚ್ಚು ಲೇಖನಗಳು ಹೊಸದಿಗಂತ ,ವಿಜಯಕರ್ನಾಟಕ ,ಉದಯವಾಣಿ,ಪ್ರಜಾವಾಣಿ ,ಸುಳ್ಯ ಸುದ್ದಿ ಬಿಡುಗಡೆ ಗಳಲ್ಲಿ ಪ್ರಕಟವಾಯಿತು ,ಸಾಮಾಜಿಕ ಕಳಕಳಿ ಎಂಬ ಅಂಕಣ ವಿಜಯ ಕಿರಣದಲ್ಲಿ ಸುಮಾರು ಒಂದು ವರ್ಷಕಾಲ ಬಂತು ,ತುಳುಜನಪದ ಲೋಕ ಎಂಬ ಅಂಕಣ ಜ್ಞಾನ  ಪಯಸ್ವಿನಿಯಲ್ಲಿ ಪ್ರಕಟವಾಯಿತು
ಒಂದು ನಾಟಕ ಸಂಕಲನ ,ಒಂದು ಕಥಾ ಸಂಕಲನ ,ಒಂದು ಶೈಕ್ಷಣಿಕ ಲೇಖನಗಳ ಸಂಕಲನ ,ಹಾಗೂ ಹದಿನೇಳು ಕನ್ನಡ ತುಳು ಜನಪದ ಸಂಸ್ಕೃತಿ ಸಂಶೋಧನಾತ್ಮಕ  ಕೃತಿಗಳು ಪ್ರಕಟವಾದವು .

ಕಳೆದ ಎರಡು -ಮೂರುತಿಂಗಳಿನಿಂದ  ವಿಜಯಕರ್ನಾಟಕದ ತುಳುಚಾವಡಿ ಯಲ್ಲಿ ನನ್ನ ತುಳು ಸಂಶೋಧನಾತ್ಮಕ ಬರಹಗಳು ಪ್ರಕಟವಾಗುತ್ತಿವೆ ,ಇತ್ತೀಚೆಗೆ 6 ಲೇಖನಗಳು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದವು

ಆದರೆ ಇದೆಲ್ಲಕ್ಕೂ ಗಟ್ಟಿಯಾದ ಅಡಿಪಾಯಹಾಕಿಕೊಟ್ಟದ್ದು ಅಂದು ನನ್ನ ಕಥೆಯನ್ನು ಪ್ರಕಟಿಸಿದ  ಹೊಸ ದಿಗಂತ ಪತ್ರಿಕೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ

No comments:

Post a Comment