Saturday 27 December 2014

ಗಂಡನ ಚಿತೆಯೊಂದಿಗೆ ಬೆಂದು ಹೋದವ ರೆಷ್ಟೋ ?ಡಾ.ಲಕ್ಷ್ಮೀ ಜಿ ಪ್ರಸಾದ


paper.kannadaprabha.in/PUBLICATIONS\KANNADAPRABHABANGALORE\KAN/2014/12/27/ArticleHtmls/27122014006008.shtml?Mode=1


ಅಮ್ಮಾ!ಉರಿ ನೋವು ..!ನೀರು ನೀರು ..!ಎಂದು ಬೊಬ್ಬಿರಿಯುತ್ತಾ ಬೆಂಕಿಯ ಕಿಡಿಯನ್ನು ಉಗುಳುತ್ತಿರುವ ಸ್ತ್ರೀ ರೂಪಿ ಬೆಂಕಿಯ ರಾಶಿಯೊಂದು ಓಡಿ  ಬರುತ್ತಿದೆ !ಕೈಕಾಲು ಬೆಂದು ಮಾಂಸದ ಮುದ್ದೆಗಳು ಉದುರುತ್ತಿವೆ !ನೀರು ನೀರು ಎಂದು ಅಂಗಲಾಚುತ್ತಿದ್ದಾಳೆ!ಭಯಾನಕ ದೃಶ್ಯ !ನೋಡಲು ಅಸಾಧ್ಯ ! ಕೂಡಿದ ನೋಡಿದ ಮಂದಿ ಅವಳ ನೋವು ನೋಡಲಾಗದೆ ಕಣ್ಣು ಮುಚ್ಚಿಕೊಂದಿದ್ದಾರೆ !ಚೀತ್ಕಾರ ಕೇಳಲಾಗದೆ ಕಿವಿಗೆ ಕೈ ಹಿಡಿದಿದ್ದಾರೆ !ಆದರೆ ಯಾರೂ ಅವಳಿಗೆ ನೀರುಕೊಡಲು ಮುಂದಾಗುವುದಿಲ್ಲ !ಅವಳ ಹಿಂದಿನಿಂದ ದೊಡ್ಡ ದೊಡ್ಡ ಹಸಿ ಮರದ ಹಾಗೂ ಕಬ್ಬಿಣದ ಬಡಿಗೆಗಳನ್ನು ಹಿಡಿದ ರಾಕ್ಷಸರಂತೆ ಇರುವ ಜನರು ಅವಳನ್ನು ಹಿಡಿಯಲು ಓಡಿ ಬರುತ್ತಿದ್ದಾರೆ..!ನಾನು ನೀರು ಕೊಡಲೆಂದು ನೀರು ತುಂಬಿದ ಕೊಡವನ್ನು ಅವಳ ಮುಂದೆ ಹಿಡಿದಿದ್ದೇನೆ ಅಷ್ಟರಲ್ಲಿ ಅವಳನ್ನು ಕಟ್ಟಿದ ಕಬ್ಬಿಣದ ಸರಪಳಿಯಿಂದ ಕೆಂಡ ತುಂಡೊಂದು ನನ್ನ ಕಣ್ಣಿನ ಒಳಗೆ ಬೀಳುತ್ತದೆ ..!ಅಮ್ಮಾ..!ಉರಿ ..
ಅಬ್ಬ ಇಷ್ಟೆಲ್ಲಾ ಕಂಡದ್ದು ಕನಸಿನಲ್ಲಿ !ನಿಜ ಅಲ್ಲ!ಅಬ್ಬಾ!
ಎಚ್ಚರಾಗುವಾಗ ಕೈಕಾಲು ನಡುಗುತ್ತಿತ್ತು !
ಇದೊಂದು ಕನಸು ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ !ಈ ಕನಸು ಬೀಳಲು ಒಂದು ಬಲವಾದ ಕಾರಣವೂ ಇದೆ !
ಮೊನ್ನೆ ಶನಿವಾರ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ದಹ್ವಾದೇವಿ ಎಂಬ ಮಹಿಳೆ ಗಂಡನ ಚಿತೆಗೆ ಹಾರಿ ಸತಿ ಹೋದ ವಿಚಾರವನ್ನು ನಿನ್ನೆ ಮಾಧ್ಯಮಗಳ ಮೂಲಕ ಓದಿ ತಿಳಿದಿದ್ದೆ .ತಟ್ಟನೆ ಸತಿ ಪದ್ಧತಿಯ ಕ್ರೌರ್ಯ, ಆ ಹೆಣ್ಣು ಮಗಳು ಅನುಭವಿಸಿರಬೇಕಾದ ಉರಿ ನೋವು ನೆನಪಾಗಿತ್ತು.
ಬೆಳ್ಳಾರೆಗೆ ಹೋಗುವ ತನಕ ಸತಿ ಪದ್ದತಿಯ ದಾರುಣತೆಯ ಅರಿವು ನನಗಿರಲಿಲ್ಲ . ಐದು-ಐದೂವರೆ  ವರ್ಷಗಳ ಮೊದಲು ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಲೆಂದು ಬೆಳ್ಳಾರೆಗೆ ಬಂದಾಗ ನಾನು ಮೊದಲು ಗಮನಿಸಿದ್ದೇ ಬೆಳ್ಳಾರೆ ಮೇಗಿನ ಪೇಟೆಯಲ್ಲಿ ಹಾಕಿರುವ ಮಾಸ್ತಿ ಕಟ್ಟೆ ಎಂಬ ನಾಮ ಫಲಕ .
ಹಾಗಾಗಿ ಮೊದಲ ದಿನವೇ ಕಲ್ಯಾಣ ಸ್ವಾಮಿ ವಶಪಡಿಸಿಕೊಂಡ ಕೋಟೆ ಹಾಗೂ ಮಾಸ್ತಿ ಕಟ್ಟೆ ಬಗ್ಗೆ ವಿಚಾರಿಸಿದ್ದೆ !
ಇಂದಿನ ಶಿಕ್ಷಣದಲ್ಲಿ ಆನ್ವಯಿಕತೆಯ ಕೊರತೆಯೋ ,ತಿಳುವಳಿಕೆಯ ಕೊರತೆಯೋ ಏನೋ ಅಲ್ಲಿ ಈ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಅನ್ನುವುದು ವಾಸ್ತವ !ಅನಂತರ ಸಾಕಷ್ಟು ಶೋಧನೆ ಮಾಡಿ ಅಲ್ಲಿನ ಬೀಡಿನಲ್ಲಿ ಆನೆಕಟ್ಟುವ ಕಲ್ಲು, ಎರಡು ಮಾಸ್ತಿ ವಿಗ್ರಹಗಳು ಹಾಗೂ ಇತರ ಅವಶೇಷಗಳು  ಇತ್ಯಾದಿಗಳು  .ಆ ಬಗ್ಗೆ ಒಂದಷ್ಟು ಮಾಹಿತಿಗಳೂ ಲಭ್ಯವಾದವು.
ಬೆಳ್ಳಾರೆ ಮಹಾ ಸತಿ ಕಟ್ಟೆ ಬಗ್ಗೆ ನಾನು ವಿಚಾರಿಸಿದಾಗ ಕೆಲವು ವದಂತಿ /ನಂಬಿಕೆಗಳ ಕುರಿತು ಮಾಹಿತಿ ಸಿಕ್ಕಿತು , ಹಿಂದೆ ಸ್ತ್ರೀಯೊಬ್ಬಳು ಕೊಂಡ ಹಾರಿ /ಗಂಡನ ಚಿತೆಯೊಂದಿಗೆ ಉರಿದು ಸತಿ ಹೋಗಿರುವುದರ ಸ್ಮಾರಕವಾಗಿ ನಿರ್ಮಿಸಿರುವ ಒಂದು ಕಲ್ಲಿನ ಕಟ್ಟೆಗೆ ಮಹಾ ಸತಿ ಕಟ್ಟೆ ಎಂದು ಕರೆಯುತ್ತಾರೆ .
ಸಂಕೋಲೆ ಎಳೆಯುವ ಸದ್ದು
ಬೆಳ್ಳಾರೆಯ ಮಾಸ್ತಿ ಕಟ್ಟೆ ಬಗ್ಗೆ ಈ ರೀತಿಯ  ಮಹಾ ಸತಿ ಹೋದ ಕಥಾನಕ ಯಾರಿಗೂ ಅಲ್ಲಿ ಯಾರಿಗೂ ತಿಳಿದಿರಲಿಲ್ಲ !ಆದರೆ ಅಮವಾಸ್ಯೆಯಂದು  ರಾತ್ರಿ ಬೆಳ್ಳಾರೆ ಮೇಗಿನ ಪೇಟೆಯಲ್ಲಿರುವ ಮಾಸ್ತಿ ಕಟ್ಟೆ ಕಡೆಯಿಂದ ಬೆಳ್ಳಾರೆ ಕೆಳಗಿನ ಪೇಟೆವರೆಗೆ ಕಬ್ಬಿಣದ ಸರಪಳಿ ಎಳೆದುಕೊಂಡು ಬಂದ ಸದ್ದು ಕೇಳಿಸುತ್ತದೆ ಎಂದು ಅನೇಕರು ಹೇಳಿದರು !ನಾನು ಬೆಳ್ಳಾರೆಯಲ್ಲಿದ್ದ ನಾಲ್ಕು ವರ್ಷಗಳಲ್ಲಿ ಒಂದು ದಿನವೂ ಅಂಥ ಸದ್ದು ನನಗೆ ಕೇಳಲಿಲ್ಲ .ಆದರೆ “ಅವರೆಲ್ಲ ಕೇಳುತ್ತದೆ ಎನ್ನುವ ಆ ಸದ್ದು ಏನು ಇರಬಹುದು  ?”ಎಂದು ಮಹಾ ಸತಿ ಕುರಿತಾದ ಅಧ್ಯಯನದಿಂದ ತಿಳಿದು ಬಂತು .
ಮಹಾ ಸತಿಗೂ ಸಂಕೋಲೆ ಎಳೆಯುವ ಸದ್ದಿಗೂ ಏನು ಸಂಬಂಧ ?!ಆರಂಭದಲ್ಲಿ ನನಗೂ ತಿಳಿಯಲಿಲ್ಲ .ಮಹಾ ಸತಿ ಪದ್ದತಿ ಯನ್ನು ಹೇಗೆ ಆಚರಿಸುತ್ತಾರೆ? ಎಂದು ತಿಳಿದಾಗ ಇಲ್ಲಿ ಸಂಕೋಲೆ ಎಳೆಯುವ ಸದ್ದು ಏಕೆ ಕೇಳಿಸುತ್ತಿದೆ?ನನಗೆ  ಎಂದು ಅರಿವಾಯಿತು
 ದಾರುಣ ದೃಶ್ಯದ ನೆನಪು
ಸತಿ ಹೋಗುವದು ಒಂದು ಭಯಾನಕ  ದಾರುಣ ಘಟನೆ.ಅದೊಂದು  ಕ್ರೌರ್ಯದ ಪರಮಾವಧಿ !ಅಂಥ ಒಂದು  ದಾರುಣ ದೃಶ್ಯವನ್ನು ನೋಡಿದವರಿಗೆ ಮತ್ತೆ ಮತ್ತೆ ನೆನಪಾಗಿ ಆ ಸದ್ದು ಕೇಳಿದಂತೆ ಅನಿಸಿ ಬೆಚ್ಚಿ ಬೀಳುತ್ತಿರಬಹುದು !ನಂತರ ಅಂಥಹ ಒಂದು ನಂಬಿಕೆ ಬೆಳೆದಿರ ಬಹುದು !
 ಮಹಾ ಸತಿಯಾಗುವವರು ಎಲ್ಲರೂ ಸ್ವ ಇಚ್ಚೆಯಿಂದ ಚಿತೆಗೆ ಹಾರಿ ಸಾಯುತ್ತಿರಲಿಲ್ಲ !ಅವರನ್ನು ಬಲವಂತವಾಗಿ ಗಂಡನ ಮೃತ ದೇಹಕ್ಕೆ ಸಂಕೋಲೆಯಲ್ಲಿ ಬಂಧಿಸಿ ಚಿತೆಯಲ್ಲಿ ಉರಿಸಲಾಗುತ್ತಿತ್ತು !
ಒಂದೊಮ್ಮೆ ಸ್ವ ಇಚ್ಚೆಯಿಂದ ಸತಿಯಾಗುವ ನಿರ್ಧಾರಕ್ಕೆ ಬಂದಿದ್ದರೂ ಚಿತೆಯ ಬೆಂಕಿ  ದೇಹಕ್ಕೆ ಬಿದ್ದಾಗ, ಉರಿ ತಡೆಯಲಾರದೆ ಚಿತೆಯಿಂದ ಎದ್ದು ಓಡಿ ಬರುತ್ತಿದ್ದರು! ಆಗ ಸುತ್ತ ಮುತ್ತ ದೊಡ್ಡ ಬಡಿಗೆಯನ್ನು  ಹಿಡಿದು ನಿಂತ ಜನ ಅವಳು ಎದ್ದು ಬರದಂತೆ ಅವಳನ್ನು ಬಡಿಗೆಯಿಂದ ಒಳ ತಳ್ಳುತ್ತಿದ್ದರು !
ಬೆಂಕಿ ಹಿಡಿದು ಸಾಯುವುದು  ಎಂದರೆ ಅದು ಅತ್ಯಂತ ದಾರುಣ !ಮೇಲ್ಮೈ ಎಲ್ಲ ಸುಟ್ಟ ನಂತರ ಒಳಭಾಗ ಸುಟ್ಟು ಮರಣ ಸಂಭವಿಸಲು ತುಂಬಾ ಹೊತ್ತು ಬೇಕು !ಅಷ್ಟು ಸಮಯದ ಅವಳ ನೋವು ಉರಿ ಚೀರಾಟ ಹೇಗಿರಬಹುದು !ಅಬ್ಬಾ ! ನೆನೆಸಿದರೆ ದಿಗಿಲಾಗುತ್ತದೆ !
ಇಂಥಹ ಸಂದರ್ಭಗಳಲ್ಲಿ ಉರಿ ನೋವು ತಡೆಯಲಾರದಾಗ ಎಷ್ಟೇ ಒಳ ನೂಕುವವರಿದ್ದರೂ ,ಎಷ್ಟೇ ಗಟ್ಟಿಯಾಗಿ ಸಂಕೋಲೆಯಿಂದ ಬಂಧಿಸಿದ್ದರೂ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿ ಬರುವ ಸಾಧ್ಯತೆಗಳು ಇರುತ್ತವೆ !ಬೆಂಕಿಯ ಕೆಂಡ ಉಗುಳುವ ಸಂಕೋಲೆಯನ್ನೊಳಗೊಂಡಿರುವ ಅವಳನ್ನು ಬೆಂಕಿ ತಗಲುವ ಭಯಕ್ಕೆ ಹಿಡಿಯಲು ಅಸಾಧ್ಯವಾಗಿರುವ ಸಾಧ್ಯತೆಗಳಿವೆ !
ಬಹುಶ ಬೆಳ್ಳಾರೆಯಲ್ಲಿ ಮಹಾ ಸತಿಯಾದ  ಆ ಹೆಣ್ಣು  ಮಗಳು ಉರಿ ತಾಳಲಾಗದಾಗ ಚಿತೆಯಿಂದ ಹೇಗೋ ಸಂಕೋಲೆ ಸಮೇತ ತಪ್ಪಿಸಿಕೊಂಡು ಓಡಿ ಬಂದಿರಬೇಕು
ಅಂದು ನಡೆದ ಮಹಾ ಸತಿಯನ್ನು ನೋಡಿದ ಮಂದಿಯ ಹೃದಯದಲ್ಲಿ ಅವಳು ಬೆಂಕಿಯುಗುಳಿಕೊಂಡು,ಸಂಕೋಲೆ ಸಮೇತ ಓಡಿ ಬಂದ ದೃಶ್ಯ ಅಚ್ಚೊತ್ತಾಗಿ ಕುಳಿತಿದ್ದು ಅವರಿಗೆ ಮತ್ತೆ ಮತ್ತೆ ಆ ದೃಶ್ಯ ಕಣ್ಣಿಗೆ ಕಂಡಂತೆ ಆಗಿರ ಬಹುದು!! .
ಅದುವೇ ಮುಂದೆ ಬೆಳ್ಳಾರೆಯಲ್ಲಿ ಅಮವಾಸ್ಯೆಯಂದು ಬೆಳ್ಳಾರೆ ಮೇಗಿನ ಪೇಟೆಯ ಬಳಿಯಿರುವ  ಮಾಸ್ತಿ ಕಟ್ಟೆಯಿಂದ ಕೆಳಗಿನ ಪೇಟೆ ತನಕ ರಾತ್ರಿ ಸಂಕೋಲೆ ಎಳೆದು ಕೊಂಡು ಹೋಗುವ  ಸದ್ದು ಕೇಳುತ್ತದೆ ಎಂಬ ನಂಬಿಕೆ ಹರಡಲು ಕಾರಣವಾಗಿರಬಹುದು.
ಬೆಳ್ಳಾರೆ ಮಾಸ್ತಿ ಕಟ್ಟೆಯ ಸಮೀಪದಲ್ಲಿ ತಡಗಜೆ ಎಂಬ ಪ್ರದೇಶವಿದ್ದು ಅಲ್ಲಿ ಯಾರೋ ಅಡಗಿ ಕುಳಿತುಕೊಂಡಿದ್ದ ಬಗ್ಗೆ ಐತಿಹ್ಯವಿದೆ ,ತಡಗಜೆ ಎಂದರೆ ಅಡಗಿ ಕುಳಿತ ಜಾಗ ಎಂದರ್ಥ.ಬಹುಶ ಈ ದುರ್ದೈವಿ ಹೆಣ್ಣು ಮಗಳೇ ಸತಿ ಹೋಗಲು ಹೆದರಿ ಅಡಗಿ ಕುಳಿತ ಜಾಗ ಇದು ಇರಬಹುದು.
ಈ ಬಗ್ಗೆ ತಿಳಿದ ನನ್ನ ಮನದಲ್ಲಿ  “ಆ ಹೆಣ್ಣು ಮಗಳು ಸಾವಿಗೆ ಮೊದಲು ಅವಳು ಅನುಭವಿಸಿದ  ನೋವು ,ಉರಿ ,ನೀರಿಗಾಗಿ ಅಂಗಲಾಚಿದ್ದು ,ಸಂಕೋಲೆಯಿಂದಹಾರುತ್ತಿರುವ ಬೆಂಕಿಯ ಕಿಡಿ ,ಬೆಂಕಿ ಹತ್ತಿ ಅವಳೇ ಒಂದು ಬೆಂಕಿಯ ರಾಶಿಯಾಗಿದ್ದಿರಬಹುದಾದ ಬಗ್ಗೆ ಒಂದು ಭಯಾನಕ ದಾರುಣ ಸ್ಥಿತಿಯ ಚಿತ್ರಣ ಮೂಡಿತ್ತು !!
ಅದರ ಫಲವೇ ನನಗೆ ಮತ್ತೆ ಮತ್ತೆ ಈ ಕನಸು ಕಾಡುತ್ತಿರುತ್ತದೆ .ಕಂಡ ಕನಸೇ ಇಷ್ಟು ದಾರುಣವಾದರೆ ನಿಜ ಸಂಗತಿ ಇನ್ನೆಷ್ಟು ದಾರುಣವಿದ್ದಿರಲಾರದು!ಅಲ್ಲವೇ ?
ಮಹಾ ಸತಿಗಳ ಬಗ್ಗೆ ಅತಿ ರಂಜಕವಾದ ಮೈನವಿರೇಳಿಸುವ ಕಥಾನಕಗಳು  ಪ್ರಚಲಿತವಿವೆ .,ಆದರೆ ವಾಸ್ತವ ಹಾಗಿಲ್ಲ .ಅದೊಂದು ಅಮಾನುಷ ದಾರುಣ ವಿಚಾರ .ಜೀವಂತ ಹೆಣ್ಣು ಮಗಳೊಬ್ಬಳು ಬೆಂಕಿಯಲ್ಲಿ ಬೆಂದು ಹೋಗುವುದು ಎಂದರೆ ಊಹಿಸಲು ಅಸಾಧ್ಯವಾಗುತ್ತದೆ .ಅಡಿಗೆ ಮಾಡುವಾಗ ಒಗ್ಗರಣೆಯ ಸಾಸಿವೆ ಕಾಳೊಂದುದು ಸಿಡಿದರೆ ಎಷ್ಟು ಉರಿಯಾಗುತ್ತದೆ !ಅದುವೇ ಅಸಹನೀಯ ಎನಿಸುತ್ತದೆ ಹಾಗಿರುವಾಗ ಮೈ ಕೈ ಕಣ್ಣು ಗಳು ಬೆಂದು ಮುದ್ದೆಯಾಗುವ ಪರಿ ಹೇಗಿರಬಹುದು ?ಹೊರಗಿನಿಂದ ಬೆಂದು ಒಳ ಭಾಗಕ್ಕೆ ಬೆಂಕಿ ತಲುಪಿದ ನಂತರ ಸಾವು ಬರುತ್ತದೆ .ಇದಕ್ಕೆ ಏನಿಲ್ಲವೆಂದರೂ ಅರ್ಧ ಘಂಟೆ ಬೇಕು !ಅಷ್ಟರ ತನಕ ಉರಿಯನ್ನು ಆ ಹೆಣ್ಣು ಮಗಳು ಹೇಗೆ ಸಹಿಸಬೇಕು ? ಅತ್ತು ಬೊಬ್ಬೆ ಹೊಡೆದು ಉರಿಯಿಂದ ತಪ್ಪಿಸಿಕೊಳ್ಳಲು ಎಷ್ಟು  ಹೆಣಗಾಡಿರ ಬಹುದು?!ಉಹಿಸಲೂ ಅಸಾಧ್ಯ!
ಹೆಣ್ಣನ್ನು ಮೊದಲಿನಿಂದಲೂ ಭೋಗದ ವಸ್ತುವಿನಂತೆ ಕಾಣುವ ಪ್ರವೃತ್ತಿ ಬೆಳೆದು ಬಂದಿತ್ತು .ಆದ್ದರಿಂದಲೇ ಗೆದ್ದ ಅರಸನ ಕಡೆಯವರು ಧನ ಕನಕಗಳನ್ನು ಹೊತ್ತೊಯ್ಯುವಾಗ.ಯುದ್ಧಗಳಲ್ಲಿ ಮಡಿದ ಅರಸ ಅಥವಾ ಸೈನಿಕರ ಪತ್ನಿಯರನ್ನು ಬಲತ್ಕಾರವಾಗಿ ಎತ್ತಿ ಕೊಂಡು ಹೋಗುತ್ತಿದ್ದರು .ಇದರಿಂದ ಪಾರಾಗುವ ಸಲುವಾಗಿ ಸ್ವ ಇಚ್ಚೆಯಿಂದ ಸತಿ ಪದ್ಧತಿ ಆರಂಭವಾಯಿತು .ನಂತರದ ದಿನಗಳಲ್ಲಿ ಅದು ಪದ್ಧತಿಯಾಗಿ ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಎಲ್ಲೆಡೆಗೆ ವ್ಯಾಪಿಸಿತು .
ಜೌಹರ್
.ಅಲ್ಲಾವುದ್ದೀನ್ ಖಿಲ್ಜಿ ಯ ಕೈಯಿಂದ ಪಾರಾಗುವ ಸಲುವಾಗಿ ರಾಣಿ ಪದ್ಮಿನಿ ಹಾಗೂ ನೂರಾರು ರಾಣಿ ವಾಸದ ಸಾವಿರಾರು ಸ್ತ್ರೀಯರು ದೊಡ್ಡ ಬೆಂಕಿಯ ರಾಶಿ ಮಾಡಿ ಅದಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡ ಬಗ್ಗೆ ಇತಿಹಾಸವು ಹೇಳುತ್ತದೆ.ಅದನ್ನು ಜೌಹರ್ (ಜೀವ ಹರ )ಎಂದು ಕರೆದಿದ್ದಾರೆ.ಇದರ ನಂತರವೂ ಕೆಲವು ಭಾರಿ ಈ ರೀತಿ ಸಾಮೂಹಿಕವಾಗಿ ನೂರಾರು ಸ್ತ್ರೀಯರು ಆತ್ಮಾಹುತಿ ಮಾಡಿಕೊಂಡಿದ್ದಾರೆ .
ಮಹಾಸತಿ ವಿಗ್ರಹಗಳು ಮತ್ತು ಉಲ್ಲೇಖಗಳು
“ಗಂಡನನ್ನು ಕಳೆದುಕೊಂಡ ಸ್ತ್ರೀಯರು ಸತಿ ಹೋಗುವ ಪದ್ಧತಿ ದೇಶದಲ್ಲಿ ಮೊದಲಿಗೆ ರಜ ಪೂತರಲ್ಲಿ ಆರಂಭವಾಗಿದ್ದು ನಂತರ ದೇಶದ ಎಲ್ಲೆಡೆ ಹರಡಿತು “ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ . ನೇಪಾಳದಲ್ಲಿಯೂ ಇದು ಪ್ರಚಲಿತವಿತ್ತು .ಮಹಾಸತಿ ಹೆಸರಿನಲ್ಲಿ ಕರ್ನಾಟಕದಲ್ಲಿಯೂ  ಅನೇಕ ಸ್ತ್ರೀಯರು ಸುಟ್ಟು ಕರಕಲಾದ ಬಗ್ಗೆ ಅಲ್ಲಲ್ಲಿ ಸಿಗುವ ಮಹಾ ಸತಿ ಕಟ್ಟೆಗಳು,ಸತಿ ವಿಗ್ರಹಗಳು ಸಾರಿ ಹೇಳುತ್ತವೆ.ಬೆಂಕಿಯ ಜ್ವಾಲೆಯ ನಡುವಿನ ಮಾಸ್ತಿ  ,ಒಂದು ಕೈ ಎತ್ತಿದ ಮಾಸ್ತಿ  ,ಕೈಯಲ್ಲಿ ನಿಂಬೆ ಹಣ್ಣು ಅಥವಾ ಮಾದಳದ ಹಣ್ಣು ಹಿಡಿದಿರುವ ಮಾಸ್ತಿ . ಒಂದು ಎತ್ತಿದ ಕೈ ಮಾತ್ರ ಇರುವ ಮಾಸ್ತಿ ವಿಗ್ರಹ, ಗುಂಡುಕಲ್ಲಿನ ಆಕಾರದ ಮಾಸ್ತಿ ವಿಗ್ರಹಗಳು ಗಳು ನಾಡಿನಾದ್ಯಂತ ಅಲ್ಲಲ್ಲಿ ಸಿಕ್ಕಿವೆ . ದೇಕಬ್ಬೆಯ ಶಾಸನದಲ್ಲಿ ಸತಿ ಹೋದ ದೇಕಬ್ಬೆಯ ಸಾಹಸ, ಪತಿ ಭಕ್ತಿ ಬಗ್ಗೆ ವಿಸ್ತೃತ ವರ್ಣನೆಯಿದೆ .ಆದರೆ ಎಲ್ಲೂ ಅವಳು ಚಿತೆಯೇರಿದಾಗ ಅನುಭವಿಸಿದ ಉರಿ ಯಾತನೆಯ ವರ್ಣನೆಯಿಲ್ಲ!
ಕ್ರಿ ಶ.510ರಲ್ಲಿ ಗೋಪ ರಾಜನೆಂಬ ಸೇನಾಪತಿಯು ಹೂಣರ ವಿರುದ್ಧ ಹೋರಾಡಿ ಸತ್ತಾಗ ಆತನ ಮಡದಿ ಆತನ ದೇಹದಿಂದಿಗೆ ಚಿತೆಯೇರಿ ಸಹಗಮನ ಮಾಡಿದ ಬಗ್ಗೆ ಒಂದು ವೀರಗಲ್ಲು ಶಾಸನದಲ್ಲಿ ದಾಖಲೆ ಇದೆ .ಕರ್ನಾಟಕದಲ್ಲಿ ಕದಂಬ ರಾಜ ರವಿವರ್ಮನ ಮಡದಿ ಸತಿ ಹೋದ ಬಗ್ಗೆ ಸಂಸ್ಕೃತ ಶಾಸನದಲ್ಲಿ ಉಲ್ಲೇಖವಿದೆ.
ಇದಕ್ಕೂ 4೦೦ ವರ್ಷಗಳ ಹಿಂದೆಯೇ ಮಹಾ ಸತಿ ಪದ್ದತಿ ಬಳಕೆಯಲ್ಲಿದ್ದ ಬಗ್ಗೆ ಆಧಾರಗಳು ಸಿಗುತ್ತವೆ  . ಈ ಒಂದೂವರೆ ಎರಡು ಸಾವಿರ ವರ್ಷಗಳಲ್ಲಿ ಗಂಡನ ಚಿತೆಯೊಂದಿಗೆ ಬೆಂದು ಹೋದ ಮಹಿಳೆಯರೆಷ್ಟೋ ?ಲೆಕ್ಕವಿಟ್ಟವರಾರು ? ನೂರೆಂಬತ್ತೈದು ವರ್ಷಗಳ ಹಿಂದೆ ಸತಿ ಪದ್ದತಿಗೆ ನಿಷೇಧ ಜಾರಿಯಾದ ಕಾಲದಲ್ಲಿ ವರ್ಷಕ್ಕೆ 500-600 ಸತಿ ಪ್ರಕರಣಗಳು ದಾಖಲಾಗುತ್ತಿದ್ದವು .ದಾಖಲಾಗದವುಗಳು ಇದಕ್ಕಿಂತ ನಾಲ್ಕು ಐದು ಪಟ್ಟು ಹೆಚ್ಚು  ಇದ್ದಿರಬಹುದು .
ಸತಿ ಹೋಗುವುದಕ್ಕೆ ಬೇರೆ ಬೇರೆ ವಿಧಗಳು ಇದ್ದವು.ಗಂಗಾ ಕಣಿವೆಯಲ್ಲಿ ಮೊದಲೇ ಉರಿಯುವ ಚಿತೆಗೆ ಹಾರುತ್ತಿದ್ದರು ಅಥವಾ ಅಲ್ಲಿಗೆ ದೂಡಿ ಹಾಕುತ್ತಿದ್ದರು .ದಕ್ಷಿಣ ಭಾರತದ ಕೆಲವೆಡೆ ಹುಲ್ಲಿನ ಗೂಡಲ್ಲಿ ಅವಳನ್ನು  ಕೂರಿಸಿ ಕೈಯಲ್ಲಿ ಒಂದು ಹಣತೆಯನ್ನು ಕೊಡುತ್ತಿದ್ದರು .ಹುಲ್ಲಿಗೆ ಬೆಂಕಿ ಹಿಡಿಸಿಕೊಂಡು ಅವಳು ಸಜೀವ ದಹನವಾಗುತ್ತಿದ್ದಳು .ನೇಪಾಳದಲ್ಲಿ ಶವದ ಜೊತೆ ಅವಳನ್ನು ಕೂಡಿಸಿ ಉರಿಯುವ ವಸ್ತುಗಳನ್ನು ಅವಳ ತಲೆಯ ಬಳಿ ಇಟ್ಟು ಬೆಂಕಿ ಕೊಡುತ್ತಿದ್ದರು.ನಂತರ ಹಸಿ ಮರದ ಕಂಬದಿಂದ ಎರಡೂ ದೇಹಗಳನ್ನು ಸಂಬಂಧಿಕರು ಒಟ್ಟಿ ಹಿಡಿಯುತ್ತಿದ್ದರು .ಎಲ್ಲ ಕಡೆಯೂ ಅವಳು ಬೆಂಕಿಯ ಉರಿ ತಾಳಲಾರದೆ ಓಡಿ ಬರದಂತೆ ಅವಳನ್ನು ಹಸಿ ಮರದ ದಪ್ಪದ ಬಡಿಗೆಗಳಿಂದ ಸುತ್ತ ನಿಂತ ಜನರು ಒಳಗೆ ತಳ್ಳುತ್ತಿದ್ದರು .
ಸತಿ ಪದ್ದತಿ ನಿಷೇಧ 1829
ಅಂತೂ ಅದೃಷ್ಟವಶಾತ್ ರಾಜಾರಾಮ ಮೋಹನ ರಾಯರ ನಿರಂತರ ಹೋರಾಟದಿಂದ ಸತಿ ಸಹಗಮ ಪದ್ಧತಿಗೆ ನಿಷೇಧ ಬಂತು . ಇಂಥ ಕ್ರೌರ್ಯವನ್ನು ಕಾನೂನಿನ ಮೂಲಕ ಕೊನೆ ಗೊಳಿಸಲು ಹೋರಾಡಿದ ರಾಜಾರಾಮ ಮೋಹನ ರಾಯ್ ಅವರು ನಿಜಕ್ಕೂ ಪ್ರಾತಃ ಸ್ಮರಣೀಯರು .ಅವರ ಹೋರಾಟದ ಫಲವಾಗಿ  ನೂರ ಎಂಬತ್ತೈದು ವರ್ಷಗಳ ಹಿಂದೆ 1829 ರ ಡಿಸೆಂಬರ್ 4 ರಂದು ಬಂಗಾಳದಲ್ಲಿ ಮೊದಲಿಗೆ ಸತಿ ಪದ್ಧತಿ ನಿಷೇಧ ಜಾರಿಗೆ ಬಂತು. ವಿಲಿಯಂ ಬೆನ್ಟೆಕ್ ಈ ಸಮಯದಲ್ಲಿ ಬಂಗಾಳದ ದ ಬ್ರಿಟೀಷ್  ಗವರ್ನರ್ ಜನರಲ್ ಆಗಿದ್ದರು . 1830ರಲ್ಲಿ ಮದ್ರಾಸ್‌ ಹಾಗೂ ಬಾಂಬೆ ಪ್ರೆಸಿಡೆನ್ಸಿಗೂ ಈ ನಿಷೇಧ ವಿಸ್ತರಿಸಲಾಯಿತು.
.ಸತಿ ಪದ್ಧತಿ ನಿಷೇಧ ಕಾನೂನು ಜಾರಿಗೆ ಬಂದ ನಂತರವೂ  ಕಾನೂನಿನ ಕಣ್ಣು ತಪ್ಪಿಸಿ ಬಲವಂತವಾಗಿ,  ಪತಿಯನ್ನು ಕಳೆದು ಕೊಂಡ ಅನೇಕ ದುರ್ದೈವಿಗಳನ್ನು ಸತಿ ಹೆಸರಿನಲ್ಲಿ ಬೆಂಕಿಯಲ್ಲಿ ಸುಟ್ಟು ಕೊಂದಿದ್ದಾರೆ .
ರೂಪ್‌ ಕನ್ವರ್‌ ಪ್ರಕರಣ
1987ರ ಸೆಪ್ಟೆಂಬರ್‌ 4ರಂದು ರೂಪಾ ಕನ್ವರ್ ಎಂಬ 18 ವರ್ಷದ ರಜಪೂತ ಯುವತಿಯನ್ನು ರಾಜಸ್ತಾನದ ಸಿಕರ್‌ ಜಿಲ್ಲೆಯ ದೇವ್ರಾಲಾ ಗ್ರಾಮದಲ್ಲಿ ಬಲವಂತವಾಗಿ ಸುಟ್ಟು ಸತಿ ಮಾಡಲಾಯಿತು.
ಸತಿ ತಡೆ ಕಾಯ್ದೆ 1988
1988 ರಲ್ಲಿ ನಮ್ಮ ಸರ್ಕಾರ ಸತಿ ತಡೆ ಕಾಯ್ದೆ(Sati prevention Act 1988)ಯನ್ನು ಜಾರಿಗೆ ತಂದಿತು .ಇದಾದ ನಂತರವೂ ಕಾನೂನಿನ ಕಣ್ಣಿಗೆ ಕಾಣದಂತೆ ಅನೇಕ ಸತಿ ಪ್ರಕರಣಗಳು ನಡೆದಿವೆ.2002 ರಲ್ಲಿ ಪಾಟ್ನಾಕ್ಕೆ ಹೋಗಿದ್ದಾಗ ಅಲ್ಲೊಂದು ಸತಿ ದಹನ ನಡೆದ ಬಗ್ಗೆ ಬಿ.ಎಂ ರೋಹಿಣಿ (ತುಳುನಾಡಿನ ಮಾಸ್ತಿಗಲ್ಲು –ವೀರಗಲ್ಲುಗಳು ಕೃತಿಯ ಲೇಖಕಿ )ಅವರು ತಿಳಿಸಿದ್ದಾರೆ .2008 ರಲ್ಲಿಯೂ ಒಂದು ಪ್ರಕರಣ ಬೆಳಕಿಗೆ ಬಂದಿತ್ತು.ಇದೀಗ ಮೊನ್ನೆ 13 ಡಿಸೆಂಬರ್ 2014 ರ ಶನಿವಾರ ಬಿಹಾರದಲ್ಲಿ ಒಂದು ಪ್ರಕರಣ ವರದಿಯಾಗಿದೆ.
ಇನ್ನೂ ಕೂಡ ಸತಿ ಎಂಬ ಕ್ರೂರ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.ಸತಿಯ ವೈಭವೀಕರಣ ,ವಿಧವಾ ಸ್ತ್ರೀಯರನ್ನು ಅಪಶಕುನವೆಂದು ಕಾಣುವ ಸಮಾಜ ಸ್ವ ಇಚ್ಚೆಯಿಂದ ಸತಿ ಹೋಗಲು ಕಾರಣವಾದರೆ ,ಸಂಸ್ಕೃತಿ –ಸಂಪ್ರದಾಯ,ಮೂಢನಂಬಿಕೆಗಳು ಬಲವಂತದ ಸತಿ ದಹನಕ್ಕೆ ಕಾರಣವಾಗಿದೆ .ಒಂದೆಡೆ ಅತ್ಯಾಚಾರ ,ಲೈಂಗಿಕ ಕಿರುಕುಳ .ಲಿಂಗ ತಾರತಮ್ಯ ,ಇನ್ನೊಂದೆಡೆ ಆಸಿಡ್ ದಾಳಿ ಜೊತೆಗೆ ಸತಿ ಪದ್ಧತಿಯ ಉಳಿಕೆ ,185 ವರ್ಷಗಳ ಹಿಂದೆಯೇ ನಿಷೇಧ ಗೊಂಡ ಸತ್ ಎಂಬ ಅನಿಷ್ಟ ಪದ್ದತಿಯೇ ಇನ್ನೂ ಜೀವಂತವಾಗಿದೆ ಇನ್ನು ಉಳಿದ ವಿಚಾರಗಳ ಬಗ್ಗೆ ಹೇಳಲೇನಿದೆ ?! ಸತಿ ಹೋದ ಸ್ತ್ರೀಗೆ ಮುಕ್ತಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ,ಆದರೆ ಸ್ತ್ರೀಯರಿಗಂತೂ ಈ ಅನಿಷ್ಟಗಳಿಂದ ಇನ್ನೂ ಮುಕ್ತಿ ದೊರೆತಿಲ್ಲ. ಒಟ್ಟಿನಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೇ|ರಮಂತೇ ತತ್ರ ದೇವತಾಃ ||(ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತೋಷದಿಂದ ನೆಲೆಸುತ್ತಾರೆ )ಎಂದು ಸಾರುವ ನಮ್ಮ ಸಮಾಜದಲ್ಲಿ ಸ್ತ್ರೀಯರು  ನೆಮ್ಮದಿಯಿಂದ ಇಂದೂ ಇರಲು ಸಾಧ್ಯವಾಗಿಲ್ಲ.
ಈ ಅನಿಷ್ಟಗಳ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಉಂಟು ಮಾಡ ಬೇಕಾಗಿದೆ .
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜ್
ಬೆಳ್ಳಾರೆ .ಸುಳ್ಯ ,ದ .ಕ ಜಿಲ್ಲೆ

Wednesday 17 December 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -166:ಇಲ್ಲತ್ತಮ್ಮ ಕುಮಾರಿ -ಡಾ.ಲಕ್ಷ್ಮೀ ಜಿ ಪ್ರಸಾದ

                                
                                             ಚಿತ್ರ ಕೃಪೆ :ಕುಡುಪು ನರಸಿಂಹ ತಂತ್ರಿಗಳು
 ನನ್ನ ಸಾವಿರದ ಅರುವತ್ತೈದು ದೈವಗಳ ಪಟ್ಟಿ ಅಂತಿಮವಲ್ಲ ಎಂದು ನಾನು ಹೇಳಿದ್ದೆ .ಹೌದು! ಇನ್ನೂ ಎಷ್ಟೋ ದೈವಗಳ ಹೆಸರು ಕೂಡ ಸಿಕ್ಕದೆ ಇರುವ ಸಾಧ್ಯತೆ ಇದೆ .ಇಲ್ಲತ್ತಮ್ಮ ಕುಮಾರಿ ಈ  1065 ರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ .ಈ ದೈವದ ಬಗ್ಗೆ ನಿನ್ನೆಯಷ್ಟೇ ನನಗೆ ತಿಳಿಯಿತು .
ಮಹಾ ಸತಿ ಆಚರಣೆ ಹಾಗೂ ಮಾಸ್ತಿ ಸ್ತಿ ವಿಗ್ರಹಗಳ ಕುರಿತು ಹೆಚ್ಚ್ಚಿನ ಮಾಹಿತಿಗಾಗಿ ಡಾ.ಬಸವರಾಜ ಕಲ್ಗುಡಿ ಅವರ ಮಹಾ ಸತಿ ಆಚರಣೆ -ಒಂದು ಅಧ್ಯಯನ ,ಹಾಗೂ ಬಿಎಂ ರೋಹಿಣಿ ಹಾಗೂ ಶಶಿಲೇಖ ರಚಿಸಿದ ತುಳುನಾಡಿನ ಮಾಸ್ತಿ ಕಲ್ಲುಗಳು ವೀರಗಲ್ಲುಗಳು ಕೃತಿಗಳನ್ನು ತಿರುವಿ ಹಾಕುತ್ತಾ ಇದ್ದೆ .

ತುಳುನಾಡಿನ ಮಸ್ತಿ ಕಲ್ಲು ವೀರಗಲ್ಲುಗಳ ಬಗ್ಗೆ ಓದುತ್ತಾ ಇದ್ದಾಗ ಇಲ್ಲತ್ತಮ್ಮ ಕುಮಾರಿ ಎಂಬ ಹೆಸರು ಗಮನ ಸೆಳೆಯಿತು .
ಕುಡುಪು ನರಸಿಂಹ ತಂತ್ರಿಗಳ ಮನೆ ದೈವ ಪಂಚ ಜುಮಾದಿಯ ದೈವಸ್ಥಾನದ ಗರ್ಭ ಗುಡಿಯಲ್ಲಿ ಒಂದು ಮರದ ಸ್ತ್ರೀ ಮೂರ್ತಿ ಯಿದೆ .ಇದು ಪಂಚ ಜುಮಾದಿ ದೈವದ ಸೇರಿಗೆ ದೈವವಾಗಿದೆ.ಈ ದೈವತಕ್ಕೆ ನಾನೂರು ವರ್ಷಗಳ ಹಿನ್ನೆಲೆ ಇದೆ.ನಾನೂರು ವರ್ಷಗಳಿಂದ ಇಲ್ಲತಮ್ಮ ಕುಮಾರಿ ನರಸಿಂಹ ತಂತ್ರಿಗಳ ಮನೆ ದೈವವಾಗಿ ಆಆರಾಧನೆ ಹೊಂದುವ  ದೈವವಿದು.
ತುಳುನಾಡಿನಲ್ಲಿ ದೈವತ್ವ ಪ್ರಾಪ್ತಿಗೆ ಇಂತಹದ್ದೇ ಎಂದು ಹೇಳುವ ನಿಯಮವಿಲ್ಲ .ಎಲ್ಲ ಜಾತಿ ವರ್ಗಗಳ ಮಂದಿ ಇಲ್ಲಿ ದೈವತ್ವ ಪಡೆದು ಆರಧಿಸಲ್ಪಡುತ್ತಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 
ಅನೇಕ ಬ್ರಾಹ್ಮಣ ಸ್ತ್ರೀಯರೂ ಇಲ್ಲಿ ಕಾರಣಾಂತರಗಳಿಂದ ಮಾಯಆಗಿ ದೈವತ್ವ ಪಡೆದು ಆರಧಿಸಲ್ಪಡುತ್ತಿದ್ದಾರೆ .ಊರ್ವ ಚಿಲಿಮ್ಬಿಯಲ್ಲಿ ಅರಬ್ಬೀ ಭೂತದೊಂದಿಗೆ ಆರಾಧನೆ ಹೊಂದುವ ಬ್ರಾಂದಿ ಭೂತ ,ಪೊಟ್ಟ ಭೂತದೊಂದಿಗೆ ಆರಾಧನೆ ಹೊಂದುವ ಬ್ರಾಂದಿ ಭೂತ ,ವಿಧವೆಯೊಬ್ಬಳು ಮಾಯವಾಗಿ ದೈವತ್ವ  ಪಡೆದ ಮುಂಡೆ ಬ್ರಾಂದಿ ಭೂತ ,ಓಪೆತ್ತಿ ಮದಿಮಾಲ್ ,ಕೆರೆ ಚಾಮುಂಡಿ ,ಮೊದಲಾದ ದೈವಗಳು ಮೂಲತ ಬ್ರಾಹ್ಮಣ ಮೂಲದ ಸ್ತ್ರೀಯರು .

ಕುಡುಪು ನರಸಿಂಹ ತಂತ್ರಿಗಳ ಮನೆ ದೈವವಾಗಿರುವ ಇಲ್ಲತ್ತಮ್ಮ ಅವರಕುಟುಂಬಕ್ಕೆಕ್ಕೆ ಸೇರಿದ ಬ್ರಾಹ್ಮಣ ಹುಡುಗಿ .ಆ ಬ್ರಾಹ್ಮಣ ಹುಡುಗಿ ನಾನೂರು ವರ್ಷಗಳ ಹಿಂದೆ ಯಾವುದೊ ಕಾರಣಕ್ಕೆ ಮಾಯವಾಗುತ್ತಾಳೆ .ಮಯವದವರು ದೈವತ್ವ ಹೊಂದಿ ಆರಾಧನೆ ಪಡೆಯುವುದು ತುಳು ಸಂಸ್ಕೃತಿಯಲ್ಲಿ ಅಸಹಜವೇನೂ ಅಲ್ಲ .ಅಂತೆಯೇ ಆ ಹುಡುಗಿ ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.
ಈ ದೈವದ ಮೂರ್ತಿಯ ಬಲ ಗೈಯಲ್ಲಿ ಅಮೃತ ಕಲಶ ,ಎಡ ಗೈಯಲ್ಲಿ ಔಷಧಿಯ ಬೇರೂ ಇದೆ ಎಂದು ಬಿಎಂ ರೋಹಿಣಿ ಅವರು ತಿಳಿಸಿದ್ದಾರೆ .
ಯಾರಿಗಾದರೂ ಹೆರಿಗೆಯಲ್ಲಿ ತೊಂದರೆಯಾದರೆ ,ಬಾಣಂತಿಗೆ ತೊಂದರೆಯಾದರೆ ಈ ದೈವಕ್ಕೆ ಹರಸಿಕೊಂಡರೆ  ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಅಲ್ಲಿದೆ © ಡಾ.ಲಕ್ಷ್ಮೀ ಜಿ ಪ್ರಸಾದ್ 
ಇಲ್ಲತ್ತ ಅಮ್ಮ ಎಂದರೆ ಮನೆಯ ಅಮ್ಮ .ಹಿರಿಯ ಸ್ತ್ರೀ ಎಂಬ ಅರ್ಥ ,ಇಲ್ಲತ್ತಮ್ಮ ಕುಮಾರಿ ಎಂದಿರುವುದರಿಂದ ಈಕೆ ಅವಿವಾಹಿತೆ ಎಂದು ತಿಳಿಯುತ್ತದೆ .ಮನೆಯ ದೇವತೆ ಎಂಬ ಅರ್ಥದಲ್ಲಿಯೂ ಇಲ್ಲತ್ತಮ್ಮ ಎಂಬ ಪದ ಬಳಕೆಗೆ ಬಂದಿರಬಹುದು
ಈ ಬಗ್ಗೆ ಕುಡುಪು ತಂತ್ರಿಗಳ ಕುಟುಂಬದ ಶ್ರೀಯುತ ಪುರುಷೋತ್ತಮ ತಂತ್ರಿಗಳು ಇಲ್ಲತಮ್ಮ ನಮ್ಮಕುಟುಂಬದ ಹಿರಿಯ ಮಹಿಳೆ ಅವಿವಾಹಿತೆ .ಇವರು ಹಳ್ಳಿ ಮದ್ದುಗಳನ್ನು ಕೊಡುವುದರಲ್ಲಿ ಪರಿಣತರಾಗಿದ್ದರು .ಯಾರು ಅತ್ಯಂತ ಉದಾರಿಗಳಾಗಿದ್ದುಎಲ್ಲರಿಗೂ ಉಚಿತವಾಗಿ  ಔಷಧ ವನ್ನು ಕೊಡುತ್ತಿದ್ದರು ಒಂದು ದಿನ ಇದ್ದಕ್ಕಿದ್ದ ಹಾಗೆ ಮಾಯ ವಾಗಿ ದೈವತ್ವ ಪಡೆದರು .ಇದು ಸುಮಾರು ನಾನ್ನೂರು ವರ್ಷಗಳ ಹಿಂದಿನ ಘಟನೆ ..ತಮ್ಮ ಮನೆ ದೈವ ಪಂಚ ಜುಮಾದಿ ಯೊಂದಿಗೆ ಇವರಿಗೂ ದೈವತ್ವದ ನೆಲಯಲ್ಲಿ ಆರಾಧನೆ ಇದೆ .ಇಲ್ಲತಮ್ಮನನ್ನು ಔಷಧಮ್ಮ ,ಅಜ್ಜಿ ಅಜ್ಜಮ್ಮ ಎಂದೂ ಕರೆದು ಆರಾಧಿಸುತ್ತಾರೆ"ಎಂಬ ಮಾಹಿತಿಯನ್ನು ನೀಡಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶ್ರೀಯುತ ವೆಂಕಟ ರಾಜ ಕಬೆಕ್ಕೋಡು ಅವರಿಗೆ ಕೃತಜ್ಞತೆಗಳು
.ಆಧಾರ :ತುಳುನಾಡಿನ ಮಾಸ್ತಿ ಕಲ್ಲುಗಳು ಮತ್ತು ವೀರಗಲ್ಲುಗಳು ಲೇಖಕರು :ಬಿಎಂ ರೋಹಿಣಿ ಮತ್ತು ಶಶಿಲೇಖಾ ಬಿ

Saturday 6 December 2014

ಬಿಗಿ ನಿಯಮಗಳಿರದೆ ಸಂಶೋಧನೆಗಿರದು ಮನ್ನಣೆ :ಡಾ.ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ 06 ಡಿಸೆಂಬರ್ 2014) 
ಅಧ್ಯಾಪನ ಮತ್ತು ಅಧ್ಯಯನ ಈ ಎರಡು ಕೂಡ ಶಿಕ್ಷಕರಿಗೆ  ಕಣ್ಣುಗಳು ಇದ್ದಂತೆ .ಇವು ಶಿಕ್ಷಕರಿಗೆ ಅತ್ಯಗತ್ಯವಾದ ವಿಚಾರಗಳು .ಆದರೆ ಎರಡನ್ನೂ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಶಿಕ್ಷಕರ ಸಂಖ್ಯೆ ಮಾತ್ರ ತೀರಾ ಕಡಿಮೆ ಇದೆ .ಇರುವ ಕೆಲವೇ ಮಂದಿಗಾದರೂ  ಬೆಂಬಲ ಇದೆಯೇ ಕೇಳಿದರೆ ಸೂಕ್ತ ಉತ್ತರ ನೀಡುವುದು ಕಷ್ಟಕರ .
ಪದವಿ ಕಾಲೇಜ್ ಹಾಗೂ ವಿಶ್ವ ವಿದ್ಯಾಲಯಗಳ ಉಪನ್ಯಾಸಕರಿಗೆ ಸಂಶೋಧನಾ ಕಮ್ಮಟಗಳಲ್ಲಿ ,ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಮತ್ತು ಪ್ರಬಂಧ ಮಂಡನೆ ಮಾಡಲು ಓ.ಓ.ಡಿ(O.O.D) ಸೌಲಭ್ಯವಿರುತ್ತದೆ .ಪ್ರಸ್ತುತ ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಿಗೆ ಈ ರೀತಿಯ ಯಾವುದೇ ರೀತಿಯ ಸೌಲಭ್ಯ ಲಭ್ಯವಿಲ್ಲ.

“ನಿಮ್ಮನ್ನು ಅಪಾಯಿಂಟ್ ಮಾಡಿದ್ದು ಸಂಶೋಧನೆ ,ಪ್ರಬಂಧ ಮಂಡನೆ ಅಂಥ ಅಲ್ಲಿ ಇಲ್ಲಿ ತಿರುಗಾಡೋದಿಕ್ಕಲ್ಲ” ಎಂದು ಟೇಬಲ್ ಗೆ ಪೆನ್ನು ಕುಟ್ಟಿ ಹೇಳುವ ಈ ಮಾತನ್ನು ಸಂಶೋಧಕರು ತಮ್ಮ ಸಂಶೋಧನಾ ಚಟುವಟಿಕೆಗಳಿಗಾಗಿ ಅವರ  ಖಾತೆಯಲ್ಲಿ ಉಳಿದಿರುವ ರಜೆಯನ್ನು  (ಸಿ ಎಲ್) ನೀಡುವಂತೆ ಪ್ರಾಂಶುಪಾಲರಲ್ಲಿ/ಮೇಲಧಿಕಾರಿಗಳಲ್ಲಿ ಕೇಳುವಾಗ  ಕೇಳಬೇಕಾಗುತ್ತದೆ.!

ಪಿಎಚ್.ಡಿ ಅಧ್ಯಯನ ಮಾಡುವುದಕ್ಕಾಗಿ ಗುಣ ಮಟ್ಟ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಆಯ್ದ ಕೆಲವರಿಗೆ ಮೂರು ವರ್ಷಗಳ ರಜೆ ಸಿಗುತ್ತದೆ .ಇದು ಬಿಟ್ರೆ ಪದವಿ ಗಳಿಕೆಗೆ ಹೊರತಾದ ಸಂಶೋಧನೆಗಾಗಿ ಯಾರಿಗೂ ಹೆಚ್ಚಿನ ರಜೆಯ ಸೌಲಭ್ಯವಿರುವುದಿಲ್ಲ .ಇರುವ ಹದಿನೈದು ರಜೆ ( ಸಿ ಎಲ್) ಗಳಲ್ಲಿಯೇ ಎಲ್ಲ ಸಂಶೋಧನಾ ಕಾರ್ಯವನ್ನು ಹೊಂದಿಸಬೇಕಾಗುತ್ತದೆ .ಇತರರು ಮದುವೆ ,ಆರತಕ್ಷತೆ ,ಉಪನಯನ ಇನ್ನಿತರ ಕಾರ್ಯಗಳಿಗೆ ತಮ್ಮ ಹದಿನೈದು ರಜೆ (ಸಿಎಲ್) ಗಳನ್ನು ಬಳಸಿದರೆ ಸಂಶೋಧನೆಯಲ್ಲಿ ತೊಡಗಿ ಕೊಂಡಿರುವ ಉಪನ್ಯಾಸಕರು ಈ ರಜೆಗಳನ್ನು ಸಂಶೋಧನೆಗಾಗಿ ಬಳಸಿಕೊಳ್ಳುತ್ತಾರೆ .ಅಂಥಹ ಒಂದು ರಜೆಯನ್ನು ಕೇಳಿದಾಗಲೂ ಸಂಶೋಧಕ ಉಪನ್ಯಾಸಕರು  ನಾನಾ ರೀತಿಯ ಉತ್ತರಗಳನ್ನು ಕೇಳಬೇಕಾಗುತ್ತದೆ ಎಂಬುದು ವಾಸ್ತವ

ಆದರೂ ಖಾತೆಯಲ್ಲಿ ಉಳಿದಿರುವ ರಜೆಯನ್ನು ಕೊಡಬೇಕಾಗುತ್ತದೆ .ಆಗಲೂ ಚಂದ್ರಮತಿ ತನ್ನ ಒಡೆಯನಲ್ಲಿ ಕಾಡಿನಲ್ಲಿ ಹಾವು ಕಡಿದು ಮೃತ ಗೊಂಡ ಮಗನ ಸಂಸ್ಕಾರ ಮಾಡಿ ಬರಲು ಅನುಮತಿ ಕೇಳಿದಾಗ ಮನೆಯೊಡೆಯ  “.ಹರಿಯದಿರ್ದುದನೆಯ್ದೆ ಗೆಯ್ದು ಹೋಗು” ಉಳಿದ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿ ಹೋಗು “ಎಂದು ಹೇಳುವಂತೆ ಸಂಶೋಧನಾ ಕಾರ್ಯಕ್ಕಾಗಿ ಮೊದಲೇ ಎಚ್ಚರಿಕೆಯಿಂದ ಕಾಲೇಜ್ ನ ಎಲ್ಲ ಕೆಲಸಗಳನ್ನು ಮುಗಿಸಿ ರಜೆ ಕೇಳಿದಾಗಲೂ “ಎಲ್ಲ ಕೆಲಸವನ್ನು ಮುಗಿಸಿ ಮತ್ತೆ ಹೋಗಿ” ಎಂಬ ಎಚ್ಚರಿಕೆಯ  ಮಾತು ಕಾದಿರುತ್ತದೆ!

ಮದುವೆ ಆರತಕ್ಷತೆ ಮೊದಲಾದ ಇತರ ಕೆಲಸಗಳಿಗಾಗಿ ರಜೆ ಹಾಕುವ ಇತರ ಉಪನ್ಯಾಸಕರಿಗೆ ಈ ಎಚ್ಚರಿಕೆಯ ಮಾತುಗಳು ಇರುವುದಿಲ್ಲ ! ಅಷ್ಟರ ಮಟ್ಟಿಗೆ ಸಂಶೋಧನೆ ಎಂಬುದು ವ್ಯಂಗ್ಯದ ಹಗುರದ ವಸ್ತು ವಾಗಿದೆ ಎನ್ನುವುದು ವಾಸ್ತವಕ್ಕೆ ಹಿಡಿದ ಕೈಗನ್ನಡಿ .
ಹಾಗಂತ ಎಲ್ಲ ಪ್ರಾಂಶುಪಾಲರು/ಮೇಲಧಿಕಾರಿಗಳು ಹೀಗಿರುತ್ತಾರೆ ಎಂದರ್ಥವಲ್ಲ. ,ಪ್ರೋತ್ಸಾಹ ಕೊಟ್ಟು ಬೆಂಬಲಿಸುವ  ಕೆಲವು ಸಹೃದಯಿಗಳೂ ಇದ್ದಾರೆ. ಆದರೆ ಇಂಥವರ ಸಂಖ್ಯೆ ಕಡಿಮೆ ಇದೆ

ಕೆಲವು ವರ್ಷಗಳ ಮೊದಲು ನಾನು ಅನುದಾನಿತ ಪದವಿ ಕಾಲೇಜ್ ಒಂದರಲ್ಲಿ ಆಡಳಿತ ಮಂಡಳಿಯಿಂದ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡು ಕನ್ನಡ ಉಪನ್ಯಾಸಕಿಯಾಗಿ  ಕೆಲಸಮಾಡುತ್ತಿದ್ದೆ .ಆ ಸಮಯದಲ್ಲೇ ನಾನು ಪಿಎಚ್.ಡಿ ಪದವಿಗಾಗಿ ಸಂಶೋಧನಾ ಅಧ್ಯಯನ ನಡೆಸುತ್ತಿದ್ದೆ, ಜೊತೆಗೆ ಬರವಣಿಗೆಯ ಹವ್ಯಾಸವೂ ಇತ್ತು . ಕನ್ನಡ ವಿಭಾಗದಲ್ಲಿ  ಇನ್ನೊಬ್ಬ ಉಪನ್ಯಾಸಕರು ಕಾದಂಬರಿಗಳನ್ನು ಬರೆಯುವ ಹವ್ಯಾಸ ಹೊಂದಿದ್ದು ಅದಾಗಲೇ ಅವರ ಕೆಲವು ಕಾದಂಬರಿಗಳು ಪ್ರಕಟವಾಗಿದ್ದವು. ಅಲ್ಲಿನ ಪ್ರಾಂಶುಪಾಲರಿಂದ ನಮಗೆ ಪ್ರೋತ್ಸಾಹವಿತ್ತು .ಆದರೆ ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರು ಆಗಾಗ  “ಈ ಸಂಶೋಧಕರು, ಬರಹಗಾರರು ಇದ್ದಾರಲ್ಲ ,ಇವರುಗಳು ಭೂಮಿಗೆ ಭಾರ ,ಇವರುಗಳನ್ನು ಬಾಣಲೆಯಲ್ಲಿ ಹಾಕಿ ಹುರಿಯಬೇಕು ಇಲ್ಲವೇ ಬೆಣಚು ಕಲ್ಲು ಹಾಕಿ ಉಜ್ಜಬೇಕು ”ಎಂದು ನಮ್ಮೆದುರಿನಲ್ಲಿಯೇ ಸಂಶೋಧಕರನ್ನು ಬರಹಗಾರರನ್ನು ಆಡಿಕೊಳ್ಳುತ್ತಿದ್ದರು !
“ಸಂಶೋಧಕ ಪ್ರವೃತ್ತಿ ಇರುವ ಉಪನ್ಯಾಸಕರು ಏನೆಲ್ಲಾ ಕಿರುಕುಳ ಅವಹೇಳನವನ್ನು ಸಹಿಸಬೇಕಾಗುತ್ತದೆ” ಎಂದು ತಿಳಿಸಲು  ಇದೊಂದು ಉದಾಹರಣೆಯೇ ಸಾಕು.

ಇದು ತನಕ “ಸಂಶೋಧನೆ ಎಂಬುದು ಉಪನ್ಯಾಸಕರು ಮಾಡಲೇ ಬೇಕಾದ ಕಾರ್ಯ,
ಉಪನ್ಯಾಸಕರಿಗೆ ಸಂಶೋಧನೆ ಮಾಡುವ ಸಲುವಾಗಿಯೇ ವಾರಕ್ಕೆ ಹದಿನಾರು  ಗಂಟೆಗಳ ಬೋಧನಾ ಕಾರ್ಯ ಹಾಕಿರುತ್ತಾರೆ .ಇನ್ನು ಆರು ಗಂಟೆಗಳಷ್ಟು ಕಾಲ ಅವರು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳ ಬೇಕೆಂಬ”  ವಿಚಾರದ ಅರಿವೇ ಹೆಚ್ಚಿನ ಮಂದಿಗೆ ಇರಲಿಲ್ಲ.
ಇತ್ತೀಚೆಗೆ ಸಂಶೋಧನೆ ಮಾಡದೆ ಇರುವ ಉಪನ್ಯಾಸಕರು ವಾರಕ್ಕೆ ಇಪ್ಪತ್ತೆರಡು ಗಂಟೆ ಪಾಠ ಮಾಡ ಬೇಕೆಂಬ ಆದೇಶವನ್ನು ಸರ್ಕಾರ ಹೊರಡಿಸಿದಾಗಲೆ ಈ ವಿಚಾರ ಎಲ್ಲರಿಗೆ ಅರಿವಾದದದ್ದು.
.ಪ್ರಸ್ತುತ ಈ ಆದೇಶ ಪದವಿ ಕಾಲೇಜ್ ಗಳ ಉಪನ್ಯಾಸಕರಿಗೆ ಸಂಬಂಧಿಸಿದ್ದು  ಆಗಿದೆಯಾದರೂ ಸಂಶೋಧನೆ ಎನ್ನುವುದು ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಿಗೆ ಏನೂ ವರ್ಜ್ಯವಾದ ವಿಚಾರವಲ್ಲ, ಯಾಕೆಂದರೆ ಮೊದಲು ಪದವಿ ಪೂರ್ವ ಶಿಕ್ಷಣ ಮತ್ತು ಪದವಿ ಶಿಕ್ಷಣ ಒಟ್ಟಿಗೆ ಇತ್ತು .
 ಈ ಆದೇಶವನ್ನು ಸರ್ಕಾರ ಹಿಂದೆ ಪಡೆಯುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.ಇದು ಜಾರಿಗೆ ಬಂದಿದ್ದರೆ ನಿಜಕ್ಕೂ ಒಳ್ಳೆಯದಿತ್ತು ಎಂದೆನಿಸುತ್ತದೆ.ಒಂದಷ್ಟು ಉಪನ್ಯಾಸಕರು ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಇದು ಪ್ರೇರಣೆಯಾಗುತ್ತಿತ್ತು.ಮತ್ತು ಈಗಾಗಲೇ ಸಂಶೋಧನೆಯಲ್ಲಿ ತೊಡಗಿಕೊಂಡವರಿಗೆ ತುಸು ಮನ್ನಣೆ ದೊರೆಯುತ್ತಿತ್ತು.
ಅದು ಏನೇ ಇರಲಿ ,ಉಪನ್ಯಾಸಕರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳ ಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ಸರ್ಕಾರದ ಈ ಆದೇಶ ಸೂಚಿಸಿದೆ.
ಸಂಶೋಧನೆಯ ಅಗತ್ಯತೆಯ ಅರಿವಿಲ್ಲದಿರುವಿಕೆ ಹಾಗೂ ಸಂಶೋಧಕ ಉಪನ್ಯಾಸಕರಿಗೂ ಉಳಿದವರಿಗೂ ಯಾವುದೇ ಸೌಲಭ್ಯಗಳಲ್ಲಿ ವ್ಯತ್ಯಾಸ ಇಲ್ಲದೆ ಇರುವ ಕಾರಣದಿಂದಲೋ ಏನೋ ಸಂಶೋಧನೆ ಯಲ್ಲಿ ತೊಡಗಿಸಿಕೊಂಡ ಉಪನ್ಯಾಸಕರಿಗೆ ಈ ತನಕ ಯಾವುದೇ ವಿಶೇಷ ಬೆಂಬಲವಿರಲಿಲ್ಲ.
ಸಾಮಾನ್ಯವಾಗಿ ಸಂಶೋಧಕ ಉಪನ್ಯಾಸಕರ  ಬಗ್ಗೆ ಇತರರಿಗೆ ಒಲವಿರುವುದಿಲ್ಲ ,ತಾವು ಏನನ್ನು ಮಾಡದಿದ್ದರೂ ಬೇರೆಯವರು ಮಾಡ ಹೊರಟಾಗ ಕಾಲು ಎಳೆಯುವುದು ಸಾಮಾನ್ಯವಾದ ವಿಚಾರ .ಬೇರೆಯವರ ಸಾಧನೆ ಯಶಸ್ಸನ್ನು ತಮ್ಮ ಸೋಲು ಎಂದು ಭಾವಿಸುವ ಮಂದಿಯೂ ಇರುತ್ತಾರೆ .

 ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡೇ ತಮ್ಮ ಇತರ ಸಂಶೋಧನಾ ಚಟುವಟಿಕೆಗಳನ್ನು ಮಾಡುತ್ತಿದ್ದರೂ ಅವರು ಸುಮ್ಮನೆ ಅಲ್ಲಿ ಇಲ್ಲಿ ಸುತ್ತುತ್ತಾರೆ ಎಂಬ ಹಗುರು ಭಾವನೆ ಅನೇಕರಿಗೆ.ಸಿಲಬಸ್ ಮುಗಿಸುವ ಉಪನ್ಯಾಸಕರ ನಡುವೆ ಇವರ ಕಾರ್ಯಕ್ಕೆ ಯಾವುದೇ ಮನ್ನಣೆ ಇಲ್ಲ.
ಅವರು ಹೆಸರಿಗಾಗಿ ಮಾಡುತ್ತಾರೆ ಎಂಬ ಆಕ್ಷೇಪ ಬೇರೆ !ತಮ್ಮ ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಕುರಿತು ಒಲವು ಮೂಡಿಸುವ ಯತ್ನ ಮಾಡಿದರೆ ಅದಕ್ಕೂ” ಸುಮ್ಮನೆ ಕೊರೀತಾರೆ.ಎಲ್ಲ ಹೆಸರಿಗಾಗಿ ಮಾಡುತ್ತಾರೆ”ಎಂಬ ಹಗುರದ ಮಾತುಗಳು ಕೇಳಿ ಬರುತ್ತವೆ.
ಆದರೆ ಹೆಸರಿಗಾಗಿಯೇ ಇರಲಿ ಪದವಿ ಗಳಿಕೆಗಾಗಿಯೇ ಇರಲಿ ಅಥವಾ ಇನ್ನೇನಕ್ಕಾಗಿಯೇ ಇರಲಿ ಮಾಡಿದ ಸಂಶೋಧನೆಗೆ ಅದರದೇ ಆದ ಮಹತ್ವವಿದೆ .

ಸಂಶೋಧನೆ ಎನ್ನುವುದು ಅಷ್ಟು ಸುಲಭದ ವಿಚಾರವಲ್ಲ .


ಸಂಶೋಧನೆ ಎಂದರೆ ಶೋಧಿಸು ,ಶುದ್ಧ ಗೊಳಿಸು ಎಂದರ್ಥ.ಕಾಲಾಂತರದಲ್ಲಿ ಹೊಸತರ ಶೋಧನೆ ,ಅನ್ವೇಷಣೆ ಎಂಬ ವಿಶಾಲ ಅರ್ಥ ಪ್ರಾಪ್ತಿಯಾಗಿದೆ .ಅದೊಂದು ನಿರಂತರ  ಹುಡುಕಾಟ .ಅರ್ಥ ಏನೇ ಇರಲಿ ಸಂಶೋಧನೆ ಎಂಬುದು ಸುಲಭದ ಮಾತಲ್ಲ ಅನೇಕ ಸವಾಲುಗಳು ಸಂಶೋಧನೆ ಮಾಡುವವರಿಗೆ ಎದುರಾಗುತ್ತವೆ .ಸಂಶೋಧಕರಿಗೆ ಸೃಜನ ಶೀಲತೆ ಮತ್ತು ತೀಕ್ಷ್ನ ವಿಚಕ್ಷಣಾ ಗುಣ ,ಸತತ ಯತ್ನ ,ನಿರಂತರ ಅಧ್ಯಯನಶೀಲತೆ ,ಸೂಕ್ಷ್ಮತೆ,ವಿಚಾರ ಶೀಲತೆಗಳು ಇರಬೇಕಾಗುತ್ತವೆ.
“ನಾವು ಚಿಕ್ಕವರಿದ್ದಾಗ ಬೆಟ್ಟ ಗುಡ್ಡ ಹತ್ತಿ ಜೇನು ನೊಣಗಳನ್ನು ಹುಡುಕಾಡುತ್ತಾ ಅಲೆಯುತ್ತಿದ್ದೆವು .ಜೇನು ನೊಣಗಳ ಬೆನ್ಹತ್ತಿ ಜೇನು ಗೂಡು ಎಲ್ಲಿದೆ ಎಂದು ಪತ್ತೆ ಮಾಡಲು ಅವುಗಳ ಹಿಂದೆ ಮುಳ್ಳು ಕಂಟಿ ಯನ್ನು ಹಾರಿ ಎದ್ದು ಬಿದ್ದು ಓಡುತ್ತಿದ್ದೆವು,ಎಲ್ಲ ಸಂದರ್ಭಗಳಲ್ಲೂ ಜೇನು ಗೂಡು ಸಿಗುತ್ತೆ ಅಂತ ಹೇಳಲು ಆಗುವುದಿಲ್ಲ .ಕೆಲವೊಮ್ಮೆ ಸಿಗುತ್ತದೆ ಕೆಲವೊಮ್ಮೆ ಸಿಗುವುದಿಲ್ಲ .ಆದರೆ ಅದರ ಹುಡುಕಾಟವೇ ಒಂದು ಸಂಭ್ರಮ .ಸಂಶೋಧನೆ ಕೂಡ ಹಾಗೆಯೇ,ಅದು ಒಂದು ಹುಡುಕಾಟ ಅದರಲ್ಲಿಯೇ ಸಂಶೋಧಕನಿಗೆ ಸಂತಸವಿರುತ್ತದೆ ”ಎಂದು ಖ್ಯಾತ ಸಂಶೋಧಕರಾದ ಡಾ.ಚಿದಾನಂದ ಮೂರ್ತಿಗಳು ಹೇಳಿದ್ದಾರೆ.
“ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ ಜನಪದ ಅಂಶ  ( folk items)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು ಅಂತರವಿರುತ್ತದೆ.. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ಮನಸ್ಸಿದ್ದರೆ ಮಾರ್ಗಎನ್ನುವ ಹಾಗೆ ಇಂತಹ ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ.ಜಾತ್ರೆಯಂತಹ ಸಂದರ್ಭದಲ್ಲಿ ಪಲ್ಲಕಿಒಂದು ಜನಪದ ಅಂಶವಾದರೆ ಅಡ್ಡಪಲ್ಲಕಿಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಕೂಡ ಸಂಶೋಧಕರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.  
ಎಂದು ಖ್ಯಾತ ಜಾನಪದ ಸಂಶೋಧಕರಾದ ಡಾ.ವಾಮನ ನಂದಾವರ ಅವರು ಹೇಳುತ್ತಾರೆ.


ಸಂಶೋಧನೆ ಎಂದರೆ ಎಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ .ಆದ್ದರಿಂದ ಸಂಶೋಧನೆಯ ವಿಧಾನಗಳು ಕೂಡಾ ಭಿನ್ನವಾಗಿರುತ್ತದೆ. ವಿಷಯ ಹಾಗೂ ಉದ್ದೇಶಗಳನ್ನು ಆಧರಿಸಿ ಅನೇಕ ವಿಧಾನಗಳು ಇರುತ್ತವೆ.ವಿಷಯ ಆಥವಾ ವಸ್ತುವನ್ನು ಆಧರಿಸಿ ಐತಿಹಾಸಿಕ ವರ್ಣಾತ್ಮಕ ವಿಧಾನ,ಮತ್ತು ಪ್ರಾಯೋಗಿಕ ಎಂದೂ,ಉದ್ದೇಶವನ್ನು ಆಧರಿಸಿ ಮೂಲ ಭೂತ ,ಆನ್ವಯಿಕ ,ಮತ್ತು ಕ್ರಿಯಾ ಸಂಶೋಧನೆ ಎಂದು ಹಲವಾರು ಅನೇಕ ಸಂಶೋಧನಾ ವಿಧಾನಗಳಿವೆ.

ಯಾವುದೇ ವಿಧದ ಸಂಶೋಧನೆ ಆಗಿದ್ದರೂ ಅವುಗಳ ವಿಷಯ ಹಾಗೂ ಉದ್ದೇಶಗಳ ಸ್ವರೂಪಕ್ಕೆಅನುಗುಣವಾಗಿವಿಶ್ಲೇಷಣೆ,ಅವಲೋಕನ,ಅಧ್ಯಯನ,ಊಹೆ,ಕ್ಷೇತ್ರಕಾರ್ಯ,ಸಂದರ್ಶನ,ಪ್ರಯೋಗ,ಪ್ರಶ್ನಾವಳಿ ,ವ್ಯಕ್ತಿತ್ವ ಪರೀಕ್ಷೆ ಈಗಾಗಲೇ ನಡೆದ ಅಧ್ಯಯನ ಮತ್ತು ಅದರ ಫಲಿತಗಳ ಸಂಗ್ರಹ ,ಮಾಹಿತಿ ಸಂಗ್ರಹ ಮೊದಲಾದ ಅನೇಕ ತಂತ್ರಗಳನ್ನು ಬಳಸಿಕೊಂಡು ಸಂಶೋಧನಾ ಅಧ್ಯಯನ ಮಾಡಬೇಕಾಗುತ್ತದೆ. ಪ್ರತಿಯೊಂದು ಸಂಶೋಧನೆಯೂ ವಿಶಿಷ್ಟವಾಗಿದ್ದು ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರತ್ಯೇಕ ಗುಣಲಕ್ಷಣಗಳಿರುತ್ತವೆ.ಆದ್ದರಿಂದ ಎಲ್ಲ ಉಪಾಧಿಗಳ ಜೊತೆಗೆ ತನ್ನದೇ ಆದ ಒಂದು ತಂತ್ರವನ್ನು  ಅಳವಡಿಸಿಕೊಳ್ಳಬೇಕಾಗುತ್ತದೆ.ಹಾಗಾದಾಗ ಮಾತ್ರ ಅದು ಉತ್ತಮ ಸಂಶೋಧನೆ ಎನಿಸಿಕೊಳ್ಳುತ್ತದೆ.

ಸಂಶೋಧನೆ ಮಾಡುವಾಗ ನಮ್ಮಲ್ಲಿ ಪೂರ್ವ ನಿರ್ಧಾರಿತ ಮನಸ್ಸಿರಬಾರದು. "ಮೊದಲೇ ನಿರ್ಧಾರವನ್ನು ತಲೆಯಲ್ಲಿ ತುಂಬಿ ಅದಕ್ಕೆ ಆಧಾರಗಳನ್ನು ಹೊಂದಿಸುವುದೋ ಅರ್ಥೈಸುವುದೋ ವಿಮರ್ಶೆಯಲ್ಲ, ಅದು ಸಂಶೋಧನೆಯೂ ಅಲ್ಲ. ಸತ್ಯವನ್ನು ತಿಳಿಯಲು ಮೊದಲು ಮಠೀಯ ಆವೇಶಗಳಿಂದ ಹೊರಬಂದು ಚಿಂತಿಸುವುದು ತೀರ ಅವಶ್ಯ" ಎಂದು ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ .

ಸಂಶೋಧನೆಗೆ ನಿರಂತರ ಅಧ್ಯಯನ ಏಕಾಗ್ರತೆ ಅತ್ಯಗತ್ಯ.ನಾನಾ ಕ್ಷೇತ್ರಗಳಲ್ಲಿ ನಡೆದ ಸಂಶೋಧನೆಗಳ ತಿಳುವಳಿಕೆ ಸಂಶೋಧಕರಿಗೆ  ಇರಬೇಕಾಗುತ್ತದೆ.ಅದಕ್ಕಾಗಿ ಆತನ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳ ಅಧ್ಯಯನ ಮಾಡಬೇಕು . ಸಂಶೋಧನೆಗಳಿಗೆ ಸಂಬಂಧಿಸಿದ ಚರ್ಚೆ ,ವಿಶ್ಲೇಷಣೆ, ,ಶ್ರೇಷ್ಠ ಸಂಶೋಧಕರು ಅನುಸರಿಸುವ ಮಾರ್ಗ ,ಅವರ ವಿಶ್ಲೇಷಣಾ ವಿಧಾನ,ಮೊದಲಾದವುಗಳನ್ನು ಗಮನಿಸಿ ತನ್ನದೇ ಆದ ಮಾರ್ಗವನ್ನು ಗುರುತಿಸಿಕೊಳ್ಳಬೇಕು.

“ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು . ಜೊತೆಗೆ ಧೈರ್ಯವೂ ಬೇಕು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ” ಎಂದು ಖ್ಯಾತ ಜಾನಪದ ಸಂಶೋಧಕರಾದ ಡಾ.ವಾಮನ ನಂದಾವರ ಅವರು ಹೇಳುತ್ತಾರೆ.


ಆದ್ದರಿಂದಲೇ ಎಲ್ಲರಿಗೂ ಸಂಶೋಧನೆ ಮಾಡಲು ಸಾಧ್ಯವಾಗುವುದಿಲ್ಲ .ಅದಕ್ಕಾಗಿಯೇ ಉಪನ್ಯಾಸಕ ಹುದ್ದೆಗೆ ಆಯ್ಕೆ ಮಾಡುವಾಗಲೇ ಸಂಶೋಧನೆಯಲ್ಲಿ ಈಗಾಗಲೇ ತೊಡಗಿಸಿಕೊಂಡವರನ್ನು ಆಯ್ಕೆ ಮಾಡಿದರೆ ಉನ್ನತ ಮಟ್ಟದ ಸಂಶೋಧನಾ ಕಾರ್ಯಗಳು ನಡೆಯಲು ಸಾಧ್ಯ .
2006 ರಲ್ಲಿ ಪದವಿ ಕಾಲೇಜ್ ಗಳಿಗೆ ನಡೆದ ನೇಮಕಾತಿಯಲ್ಲಿ ಪಿಎಚ್.ಡಿ ಪಡೆದು ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿದ ಅಭ್ಯರ್ಥಿಗಳು ಇದ್ದಾಗಲೂ ಅವರನ್ನೆಲ್ಲ ಬಿಟ್ಟು ಕೇವಲ ಎಂ ಫಿಲ್ ಆದ ಅನೇಕರನ್ನು ಆಯ್ಕೆ ಮಾಡಲಾಗಿದೆ .ಯು  ಜಿ ಸಿ ಯು ಪದವಿ ಕಾಲೇಜ್ ಗಳ ನೇಮಕಾತಿಗೆ ಅರ್ಹತೆಯಾಗಿ ಎಂ ಫಿಲ್ ,ಪಿಎಚ್ ಡಿ ಅಥವ ನೆಟ್/ಸ್ಲೆಟ್ ಎಂದು ಕನಿಷ್ಠ ಅರ್ಹತೆಯನ್ನು ನಿಗದಿ ಪಡಿಸಿತ್ತು. ಆದರೆ ಆಯ್ಕೆ ಮಾಡುವಾಗ ಪಿಎಚ್.ಡಿ ಪದವಿ ಗಳಿಕೆಯ ನಂತರವೂ ನಿರಂತರವಾಗಿ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರಿಗೆ ಅವಕಾಶ ನೀಡಬಹುದಿತ್ತು.
ಇನ್ನು ಸದ್ಯದಲ್ಲಿಯೇ ನಡೆಸಲಾಗುತ್ತದೆ ಎಂದು ಹೇಳುವ ಪದವಿ ಕಾಲೇಜ್ ಉಪನ್ಯಾಸಕರ  ನೇಮಕಾತಿಯಲ್ಲಿಯೂ ಸಂಶೋಧನೆಗೆ ಯಾವುದೇ ಆದ್ಯತೆ ಇಲ್ಲ .ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತಿದೆ.ಆಯ್ಕೆಗೆ ಭ್ರಷ್ಟಾಚಾರಕ್ಕೆ ಎಡೆಯಿಲ್ಲದ ಇದೊಂದು ಎಲ್ಲರಿಗೂ ಸಮಾನ ಅವಕಾಶ ಕೊಡುವ ಪಾರದರ್ಶಕ ಪದ್ಧತಿಯಾಗಿದ್ದರೂ ಸಂಶೋಧನೆಗೆ ಇಲ್ಲಿ ಯಾವುದೇ ಆದ್ಯತೆ ಇಲ್ಲ ಎನ್ನುವುದು ಕೂಡ ಸತ್ಯ .
ಸಂಶೋಧನೆಯ ಗಂಧ ಗಾಳಿಯೇ ಇಲ್ಲದವರನ್ನು ಉಪನ್ಯಾಸಕರನ್ನಾಗಿ ತೆಗೆದು ಕೊಂಡು ಸಂಶೋಧನೆ ಮಾಡಿ ಎಂದರೆ ವಿರೋಧ ಬಾರದೆ ಇರುತ್ತದೆಯೇ ?(ಸಂಶೋಧನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಉಪನ್ಯಾಸಕರಿಗೆ ಈ ಮಾತುಗಳು  ಅನ್ವಯವಾಗುವುದಿಲ್ಲ ) ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವೇ ?ಇನ್ನು ಮುಂದಾದರು ಉಪನ್ಯಾಸಕರನ್ನು ಆಯ್ಕೆ ಮಾಡುವಾಗ ಸಂಶೋಧನೆಯಲ್ಲಿ ನಿರತರಾದವರಿಗೆ ಆದ್ಯತೆ ಕೊಟ್ರೆ ಉನ್ನತ ಮಟ್ಟದ ಸಂಶೋಧನೆ ನಡೆದು ಒಳ್ಳೆಯ ಫಲಿತಗಳು ಬಂದಾವು .

ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ,ಸುಳ್ಯ ತಾಲೂಕು ,ದ,ಕ ಜಿಲ್ಲೆ 
samgramahithi@gmail.com