Tuesday, 29 November 2016

ತುಳು ನಾಡಿನ ಕಂಬಳ -ಪ್ರಾಚೀನತೆ ಮತ್ತು ಐತಿಹ್ಯಗಳು(c)ಡಾ.ಲಕ್ಷ್ಮೀ ಜಿ ಪ್ರಸಾದ   
                             Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ                           ಚಿತ್ರ ಕೃಪೆ -ಶ್ರೀ ಮಧುಸೂದನ ಶೆಟ್ಟಿ

ತುಳುನಾಡಿನ ಜನಪದ ಆಚರಣೆಗಳಲ್ಲಿ ಕಂಬಳ ವಿಶಿಷ್ಟವಾದುದು. ತುಳುನಾಡು ಅಂದ ತಕ್ಷಣ ಎಲ್ಲರಿಗೆ   ನೆನಪಾಗುವುದು ಕಂಬಳದ  ವಿಚಾರ. ಸಾಮಾನ್ಯವಾಗಿ ಕೆಸರುಗದ್ದೆಯಲ್ಲಿ ಕೋಣಗಳ ಓಟದ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ. ಆದರೆ ಇದು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ.ಇದರಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗಳು ಸೇರಿಕೊಂಡಿವೆ.ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ .ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಷ್ಠೆಯ ವಿಚಾರ ಕೂಡ  .ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ ,ಅವುಗಳನ್ನು ಸಾಕಲು ಸಾಕಷ್ಟು ಆರ್ಥಿಕ ಬಲ ಕೂಡ ಬೇಕು .ನಾನು ಚಿಕ್ಕಂದಿನಲ್ಲೇ ಕಂಬಳವನ್ನು ನೋಡಿದ್ದೆ .ಅದೊಂದು ಬಹಳ ಆಕರ್ಷಕವಾದ ಕೋಣಗಳ ಓಟ .ಕೋಣಗಳನ್ನು ಚೆನ್ನಾಗಿ ಅಲಂಕರಿಸಿ  ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ  ಕರೆ ತರುತ್ತಾರೆ .ಚೆನ್ನಾಗಿ ಎಳೆದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ  Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ.ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ ಕೋಣಗಳು ಓದಿಕೊಂಡು ಬರುವಾಗ ಜನರ ಬೊಬ್ಬೆ  ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು .ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ  ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು!ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ಅನುಭವನ್ನು ಕೊಡುತ್ತದೆ . ವಂಡಾರು ಕಂಬಳ ,ಪುತ್ತೂರು ದೇವರ ಕಂಬಳ ,ಕದ್ರಿ ಕಂಬಳ ,ಕೊಕ್ಕಡದ ಕಂಬಳ ಮೊದಲಾದ ಕಂಬಳಗಳ ಉಲ್ಲೇಖ ಅನೇಕ ತುಳು ಜಾನಪದ ಹಾಡುಗಳಲ್ಲಿ ದೊರೆಯುತ್ತದೆ ಅನೇಕ ಶಾಸನಗಳಲ್ಲೂ ಕಂಬಳದ ಉಲ್ಲೇಖಗಳಿವೆ  .ತುಳು ನಾಡಿನಲ್ಲಿ ಕಂಬಳದ ಆಚರಣೆ ಸುಮಾರು ೮೦೦-೯೦೦  ವರ್ಷಗಳ ಹಿಂದಿನಿಂದಲೇ ನಡೆದುಕೊಂಡು  ಬಂದಿದೆ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
.1. ಕಂಬಳದ ಪ್ರಾಚೀನತೆ
. ತುಳುನಾಡಿನ ಕಂಬಳ ಹಾಗೂ ಕಂಬಳ ಗದ್ದೆಗಳ ಬಗ್ಗೆ ಅನೇಕ ಶಾಸನಗಳಲ್ಲಿ ಉಲ್ಲೇಖಗಳು ಸಿಗುತ್ತವೆ. 
ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಶಾಸನದಲ್ಲಿ ಕಂಬಳದ ಉಲ್ಲೇಖವಿದೆ. ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದುಎಂದು ಇದರಲ್ಲಿ ಉಲ್ಲೇಖವಿದೆ.1 ಇದರ ಕಾಲ ಕ್ರಿ.ಶ.1200 (ಶಕ ವರ್ಷ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ.ಹನ್ನೆರಡನೆಯ ಶತಮಾನದಲ್ಲಿಯೇ ಸುಗ್ಗಿಯ ಕಾಲದಲ್ಲಿ ಕಂಬಳ ನಡೆಯುತ್ತಿದ್ದದನ್ನು ಶಾಸನದ ಹೇಳಿಕೆ ಸಮರ್ಥಿಸುತ್ತದೆ. ಇದರಿಂದ ಕಂಬಳ ಕನಿಷ್ಠ ಎಂಟುನೂರು ವರ್ಷಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆಎಂದು ಉಲ್ಲೇಖವಿದೆ.2 ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ ದೇವರು ಸಾವಂತನ ಕಂಬಳ ಗದ್ದೆಯ ಮೇಲೆಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ.3 ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ ಹೊತ್ತಾಗಿ ಮಾಡಿದ ಕಂಬಳ ಗದ್ದೆಎಂದಿದೆ.4 ಕ್ರಿ.ಶ.1437ರ ಉಡುಪಿ ಶಾಸನವು ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರುಎಂದಿದೆ.5 ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ ಅವರಿಗೆ ಒಬ್ಬ ಬಾಳು ಕಂಬಳ ಗದ್ದೆಎಂದು ಉಲ್ಲೇಖವಿದೆ.6 ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿಎಂದು ಉಲ್ಲೇಖಿಸಿದೆ.7 ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ ನನ್ನ ಕಂಬಲ ಗದ್ದೆಯಿಂದ ನಡೆಸಬಹುದುಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ.87.2. ಕಂಬಳ ಪದದ ನಿಷ್ಪತ್ತಿ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಕಂಪ ಎಂಬುದಕ್ಕೆ ಕೆಸರು ಎಂಬರ್ಥವಿದೆ. ಆದ್ದರಿಂದ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳುತ್ತಾರೆ.9 ಕಳ ಎಂಬುದಕ್ಕೆ ಸ್ಪರ್ಧೆಯ ವೇದಿಕೆ, ಕಣ ಎಂಬರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದು ಅಮೃತ ಸೋಮೇಶ್ವರ ಹಾಗು ಬಿ.ಎ. ವಿವೇಕ ರೈ ಹೇಳಿದ್ದಾರೆ. ಕಂಬಳ ಗದ್ದೆಯಲ್ಲಿ ಕೊನೆಗೆ ಪೂಕರೆಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂದು ಚಿತ್ತರಂಜನ ಶೆಟ್ಟಿಯವರು ಹೇಳಿದ್ದಾರೆ.
ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಳ>ಡಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಉದಾ: ಇಡಾ>ಇಳಾ, ಮಾಡ>ಮಾಳ ತುಳುಕನ್ನಡದಲ್ಲಿ, ಉದಾ: ಕುಂಬಳ>ಕುಂಬುಡ, ಕೆಂಪು ಕುಂಬಳ>ಕೆಂಬುಡೆ. ಅದೇ ರೀತಿ ಎರಡನೇ ಪದದ ಮೊದಲ ಅಕ್ಷರ ಲುಪ್ತವಾಗುವುದು ಕೂಡ ಸಾಮಾನ್ಯ. ಉದಾ: ಗೆಜ್ಜೆ+ಕತ್ತಿ>ಗೆಜ್ಜೆತ್ತಿ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಷ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.
.3. ಕಂಬಳದ ಮಹತ್ವ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ತುಳುನಾಡಿನಲ್ಲಿ ಕಂಬಳ ಎನ್ನುವುದು ಘನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ಕಂಬಳಎಂದರೆ ಕೋಣಗಳ ಓಟದ ಸ್ಪರ್ಧೆಎಂದು ಜನರು ಭಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ ಕೇವಲ ಕೋಣಗಳ ಓಟದ ಸ್ಪರ್ಧೆ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂಧಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ.
ಕಂಬಳ ಒಂದು ವಿಶಿಷ್ಟ ಜನಪದ ಆಚರಣೆ. ತುಳುನಾಡಿನಲ್ಲಿ ತುಂಬ ಮಹತ್ವವನ್ನು ಪಡೆದ ಆಚರಣೆಯಾಗಿದೆ. ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆಎಂದು ಹೇಳಿದ್ದಾರೆ.10
4. ಮೌಖಿಕ ಪರಂಪರೆ ಹಾಗೂ ಐತಿಹ್ಯಗಳು
ಅನೇಕ ತುಳು ಪಾಡ್ದನಗಳಲ್ಲಿ ಕೂಡ ಕಂಬಳದ ಉಲ್ಲೇಖಗಳಿವೆ. ಕಂಬಳಕ್ಕೆ ಸಂಬಂಧಿಸಿದಂತೆ ಈಜೋ ಮಂಜೊಟ್ಟಿಗೋಣವೆಂಬ ಪಾಡ್ದನ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಉಲ್ಲೇಖವಿದೆ. ಧೂಮಾವತಿ ದೈವದ ಪಾಡ್ದನದಲ್ಲಿ ಗಿಡಾವು ಗೋಣ ಕಂಜಿಲುಎಂದು ಕಂಬಳದಲ್ಲಿ ಓಡಿಸುವ ಕೋಣಗಳ ಬಗ್ಗೆ ವಿವರಣೆ ಇದೆ. ಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಷ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ. ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳಕೋಣಗಳೊಂದಿಗೆ ಏಕಾಂಗಿಯಾಗಿ ಹೋರಾಡಿ, ಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ರಕ್ಷಿಸಿದನೆಂಬ ಕಥೆ ಪ್ರಚಲಿತವಿದೆ. ಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ವಕ್ರಗೊಳಿಸಿದರೆಂಬ ಸ್ಥಳೀಯ ಐತಿಹ್ಯವಿದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಪೂಕರೆ ಕಂಬದ ವಿಚಾರದಲ್ಲಿ ಯುದ್ಧವಾಗುತ್ತಿದ್ದಿರುವಂತೆ ತೋರುತ್ತದೆ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಒಂದನ್ನು ಸುಂದರ ಕೇನಾಜೆಯವರು ಸಂಗ್ರಹಿಸಿದ್ದಾರೆ.
        ಉರಲ್ (ತುಳು)
ನಮೊನ ಉಲ್ಲಾಯ ದಂಡ್‍ಗು ಪೋತೆರ್
ದಂಡ್‍ಡ್ದ್ ಬನ್ನಗ ಗಿಂಡೆದ ನೀರು
ಕುಡ್ಪುಡು ಕಾಯಿ
ಬಟ್ಟಲ್ಡ್ ಪೇರು
ಕೊರೈಡ್ ಸುಣ್ಣೋ
ಬಂಡಿಡ್ ಪೂಕರೆ
ಕೊಂಡೊದು ಬರ್ವೆರೆ ಉಲ್ಲಾಯೆ
ಆಯೆರ್‍ಗ್ ಪೋನಗ ಆಜಿಕಟ್ಟು ಬಡು
ಈಯೆರೆಗ್ ಬನ್ನಗ ಮೂಜಿಕಟ್ಟು ಬಡು
ಕಂಪಕಂಡೊಡು ಗುಂಪು ಬಲಿಪಡ
ಪೊಯ್ಯಕಂಡೊಡು ಪೊಯ್ಯ ಬಲಿಪಡ
ಮೆಲ್ಲಪೋ ಮೆಲ್ಲ ಬಲ
                       ಓ ... ಓ ... ಓ...
ಕನ್ನಡ ಅನುವಾದ
ನಮ್ಮ ಯಜಮಾನರು ದಂಡಿಗೆ ಹೋಗಿದ್ದಾರೆ
ದಂಡಿನಿಂದ ಬರುವಾಗ ಗಿಂಡೆಯಲ್ಲಿ ನೀರು
ಎಸರು ತಟ್ಟೆಯಲ್ಲಿ ಕಾಯಿ
ಬಟ್ಟಲಿನಲ್ಲಿ ಹಾಲು
ಮರಿಗೆಯಲ್ಲಿ ಸುಣ್ಣ
ಬಂಡಿಯಲ್ಲಿ ಪೂಕರೆ
ತೆಗೆದುಕೊಂಡು ಬರುತ್ತಾರೆ
ಆ ಕಡೆ ಹೋಗುವಾಗ ಆರು ಕಟ್ಟು ಬೆತ್ತ
ಈ ಕಡೆ ಬರುವಾಗ ಮೂರು ಕಟ್ಟು ಬೆತ್ತ
ಕೆಸರುಗದ್ದೆಯಲ್ಲಿ ಗುಂಪು ಓಡಬೇಡ
ಹೊಯ್ಗೆ ಗದ್ದೆಯಲ್ಲಿ ಹೊಯ್ಯೋ (?) ಓಡಬೇಡ
ಮೆಲ್ಲಗೆ ಹೋಗು ಮೆಲ್ಲಗೆ ಬಾ
ಓ .... ಓ .... ಓ ....
ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ಸಮರ್ಥಿಸುತ್ತದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಐತಿಹ್ಯವು ಅಗೋಳಿ ಮಂಜಣ್ಣಎಂಬ ಹೆಸರಿನಲ್ಲಿ ಪ್ರಚಲಿತವಿದೆ. ಪೇರೂರಿನಲ್ಲಿ ಪೂಕರೆ ಕಂಬ ಕಳೆದುಹೋದ ಮೇಲೆ ಪೂಕರೆ ಕಂಬ ಹಾಕುವ ಆಚರಣೆ ನಿಂತುಹೋಯಿತು ಎಂಬ ಐತಿಹ್ಯವಿದೆ. ಕೋಳ್ಯೂರು ಮತ್ತು ಕಳಿಯೂರು, ಕಾಸರಗೋಡು ಜಿಲ್ಲೆಯ ಅಕ್ಕಪಕ್ಕದ ಎರಡು ಗ್ರಾಮಗಳು. ಕಳಿಯೂರಿನಲ್ಲಿ ಪೂಕರೆ ಕಂಬಳವೂ, ಕೋಳ್ಯೂರಿನಲ್ಲಿ ಬಾಳೆ ಕಂಬಳವೂ ನಡೆಯುತ್ತಿತ್ತು. ಒಂದು ವರ್ಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ರೆಂಜೆಗುಂಡಿಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ. ಕಂಬಳಸಂಬಂಧಿ ಈಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾನಿ ಬಬ್ಬು ಹಾಗೂ ಕೋಣಗಳು ಮಾಯವಾದಕಥೆಯನ್ನು ಹೇಳುತ್ತವೆ. ಹೀಗೆ ಕೋಣಗಳು ಮಾಯವಾದ ಮರುದಿವಸ ನೋಡುವಾಗ ಕಳಿಯೂರಿನ ಪೂಕರೆ ಕಂಬ ಕೋಳ್ಯೂರು ಕಂಬಳಗದ್ದೆಯಲ್ಲಿ ಬಂದು ಬಿದ್ದಿತ್ತು. ಅಂದಿನಿಂದ ಕೋಳ್ಯೂರು ಕಂಬಳಗದ್ದೆಯಲ್ಲಿ ಬಾಳೆ ಹಾಗೂ ಪೂಕರೆ ಕಂಬ ಎರಡೂ ಹಾಕುವ ಪದ್ಧತಿ ಬಂತು ಎಂಬ ಐತಿಹ್ಯವಿದೆ. ಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬೈಲು ಕಂಬಳ ಗದ್ದೆಯಲ್ಲಿ ಜೊಳ್ಳು ಭತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಐತಿಹ್ಯವಿದೆ.  Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದವಂಡಾರು ಕಂಬಳದಲ್ಲಿ ಹಿಂದೆ ನರಬಲಿ ಕೊಡುವ ಪದ್ಧತಿ ಇತ್ತೆಂಬ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ: ಪೂಕರೆ ಕಂಬಳದ ಹಿಂದಿನ ದಿವಸವೇ ಊರವರು ನೆಂಟರಿಷ್ಟರು ಬಂದಿರುತ್ತಾರೆ. ರಾತ್ರಿ ಮಲಗಿದಾಗ ನೆಂಟರ ಹುಡುಗರಲ್ಲಿ ಇಬ್ಬರ ಕಾಲಿಗೆ ಬಳ್ಳಿ ಕಟ್ಟುತ್ತಿದ್ದರು. ಕಾಲಿಗೆ ಬಳ್ಳಿ ಕಟ್ಟಿರುವ ಹುಡುಗರಿಬ್ಬರನ್ನು ಎತ್ತಿ ತೆಗೆದುಕೊಂಡು ಹೋಗಿ ಕಂಬಳ ಗದ್ದೆಯ ಸಮೀಪದ ಬಾವಿಗೆ ಹಾಕುತ್ತಿದ್ದರು. ಒಂದು ವರ್ಷ ತನ್ನ ಕಾಲಿಗೆ ಕಟ್ಟಿದ್ದ ಬಳ್ಳಿಯನ್ನು ಬಿಚ್ಚಿ ಆ ಮನೆಯ ಯಜಮಾನನ ಮಗನ ಕಾಲಿಗೆ ಒಬ್ಬ ಹುಡುಗ ಕಟ್ಟುತ್ತಾನೆ. ರಾತ್ರಿಯಲ್ಲಿ ಇದು ತಿಳಿಯದ ಕೆಲಸದವರು ಬಳ್ಳಿ ಕಟ್ಟಿದ್ದ ಯಜಮಾನನ ಮಗನನ್ನೇ ಹೊತ್ತುಕೊಂಡು ಹೋಗಿ ಬಾವಿಗೆ ಹಾಕುತ್ತಾರೆ. ಮರುದಿವಸ ಬೆಳಗ್ಗೆ ಮನೆಯ ಯಜಮಾನನಿಗೆ ಈ ವಿಚಾರ ಗೊತ್ತಾಗುತ್ತದೆ. ಅಂದಿನಿಂದ ನರಬಲಿಯ ಬದಲು ಕೋಳಿಯನ್ನು ಬಲಿ ಕೊಡುತ್ತಿದ್ದರು ಎಂಬ ಐತಿಹ್ಯವಿದೆ. ಈಗ ಸಾಂಕೇತಿಕವಾಗಿ ಕುರ್ದಿನೀರನ್ನು ಗದ್ದೆಗೆ ಎರೆಯುತ್ತಾರೆ. ಆ ಬಾವಿಯ ಮೇಲೆ ಕಲ್ಲಿನ ಚಪ್ಪಡಿಯನ್ನು ಎಳೆದಿದ್ದಾರೆ. ಆ ಬಾವಿಯನ್ನೇ ಸಿರಿಗಳ ಬಾವಿಎಂದು ಕರೆಯುತ್ತಾರೆ. ಕಂಬಳಗಳಲ್ಲಿ ಅತಿದೊಡ್ಡ ಕಂಬಳ ಗದ್ದೆ ಇದಾಗಿದೆ. ಎರಡು ಮೂರು ದಶಕಗಳ ಹಿಂದೆ ಇಲ್ಲಿ ವಾರಗಟ್ಟಲೆ ಕೋಣಗಳ ಓಟದ ಸ್ಪರ್ಧೆ ನಡೆಯುತ್ತಿತ್ತು. ಹೆಚ್ಚಿನ ಎಲ್ಲಾ ಪೂಕರೆ ಕಂಬಳ ಗದ್ದೆಗೆ ಸಂಬಂಧಿಸಿದಂತೆ ಒಂದು ಸಮಾನ ಆಶಯವುಳ್ಳ ಐತಿಹ್ಯ ಪ್ರಚಲಿತವಿದೆ. ಕಂಬಳ ಕೋರಿಯ ಮೊದಲು ಈ ಗದ್ದೆಗಳಲ್ಲಿ ಕುರುಂಟು ಎಳೆಯುವುದಿಲ್ಲ. ರಾತ್ರಿ ಸಂಕಪಾಲನೆಂಬ ಸರ್ಪ ಬಂದು ಈ ಕೆಲಸ ಮಾಡುತ್ತದೆ ಎಂಬ ಐತಿಹ್ಯ ಹೆಚ್ಚಿನ ಗದ್ದೆಗಳಲ್ಲಿ ಪ್ರಚಲಿತವಿದೆ.
ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ

Sunday, 20 November 2016

ಭೂತಾರಾಧನೆಗೊಂದು ಸಮೃದ್ಧ ಬ್ಲಾಗ್ --ಭೂತಗಳ ಅದ್ಭುತ‌ ಜಗತ್ತು - ಪುನೀತ್ ಸಿದ್ಧ ಕಟ್ಟೆ

ಪುನೀತ್‌ ಎಂ.ಸಿದ್ದಕಟ್ಟೆ ತುಳುನಾಡಿನ ಸಂಸ್ಕೃತಿ ಮಾಹಿತಿ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ಮಾಹಿತಿ ಸಿಗುವುದು ಬಹು ಕಡಿಮೆ. ಈ ಕೊರತೆ ನೀಗಿಸಲು ಭೂತಾರಾಧನೆಯ ಅದ್ಭುತ ಜಗತ್ತಿನ ಬ್ಲಾಗ್‌ ತುಳು ಸಂಸ್ಕೃತಿಯಲ್ಲಿನ ಸಾಕಷ್ಟು ವಿಚಾರ ಅನಾವರಣಗೊಳಿಸಿದೆ. ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ 2 ಡಾಕ್ಟರೇಟ್‌ ಪಡೆದ ಡಾ.ಲಕ್ಷ್ಮೀ ಜಿ.ಪ್ರಸಾದ್‌ ಈ ಅತ್ಯಪರೂಪದ ಬ್ಲಾಗ್‌ನ ರೂವಾರಿ. ಹಲವು ವರ್ಷಗಳಿಂದ ತುಳು ನಾಡಿನ ಭೂತಗಳ ಇತಿಹಾಸ, ಹಿನ್ನೆಲೆ, ಆರಾಧನೆ ಸ್ವರೂಪ ಒಳಗೊಂಡ ವಿಚಾರ ನಿರಂತರ ಸಂಶೋಧನೆ ಮಾಡಿ, ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ವಿಚಾರಗಳ 590 ಬರಹÜ ಬ್ಲಾಗ್‌ನಲ್ಲಿವೆ. ಈ ಸಂಶೋಧನಾ ಬ್ಲಾಗ್‌ ಜನಪ್ರಿಯವಾಗಿದ್ದು, ತುಳುನಾಡಿನ ಜನತೆಗೆ ಮಾತ್ರ ಸೀಮಿತವಾಗಿಲ್ಲ. ದೇಶ-ವಿದೇಶಗಳ 1.70 ಲಕ್ಷ ಕ್ಕಿಂತ ಹೆಚ್ಚಿನ ಬ್ಲಾಗ್‌ ಓದುಗರನ್ನು ಹೊಂದಿದೆ!. ಇಂಗ್ಲಿಷ್‌ನಲ್ಲೂ ಮಾಹಿತಿ: ಭೂತಾರಾಧನೆಯ ಉಪಯುಕ್ತ ಮಾಹಿತಿಯೊಂದಿಗೆ ಸಂಬಂಧಿಸಿದ ಫೋಟೊ, ಜಾನಪದ, ಮಹಿಳೆಯರ ಬದುಕು, ನಾನಾ ಭಾಷೆಯ ಸಾಹಿತ್ಯಗಳ ಬರಹ ಬ್ಲಾಗ್‌ನಲ್ಲಿದೆ. ದೇಶ-ವಿದೇಶಗಳ ಅನೇಕ ಸಂಶೋಧಕರು, ಅಧ್ಯಯನಕಾರರು ಮಾಹಿತಿ ಪಡೆದಿದ್ದಾರೆ. ಅನೇಕ ಕನ್ನಡೇತರ ವಿದ್ವಾಂಸರ, ಜನರ ಕೋರಿಕೆಯಂತೆ ಇತ್ತೀಚೆಗೆ ತುಳುನಾಡಿನ ಭೂತಾರಾಧನೆ ಕುರಿತ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಕೂಡ ಆರಂಭಿಸಿದ್ದಾರೆ. ಡಾ.ಲಕ್ಷ್ಮಿ ಜಿ.ಪ್ರಸಾದ್‌ ಸಂಶೋಧನೆಯಲ್ಲಿ ಕಂಡುಕೊಂಡ ಅಪರೂಪದ ವಿಚಾರಗಳನ್ನು ಜನಸಾಮಾನ್ಯರಿಗೂ ಭೂತಗಳ ಅದ್ಭುತ ಜಗತ್ತು ಬ್ಲಾಗ್‌ ಮೂಲಕ ತಿಳಿಸುವಂತೆ ಮಾಡುತ್ತಿದ್ದು, ಭೂತಾರಾಧನೆಯಲ್ಲಿ ಅಡಕವಾಗಿರುವ ಇತಿಹಾಸದ ಎಳೆಗಳನ್ನು ಪತ್ತೆ ಮಾಡಿದ್ದಾರೆ. ಈ ತನಕ ಗೊತ್ತಿರದ 400ಕ್ಕೂ ಹೆಚ್ಚಿನ ದೈವಗಳ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇಂತಹ ಹಲವಾರು ವಿಚಾರಗಳು ಬ್ಲಾಗ್‌ನಲ್ಲಿದೆ. ತುಳುನಾಡಿನ ಸಂಸ್ಕೃತಿ ಖಜಾನೆ: ಡಾ. ಲಕ್ಷ್ಮೀ ಜಿ.ಪ್ರಸಾದ್‌ ಮೂಲತಃ ಕಾಸರಗೋಡಿನ ಕೋಳ್ಯೂರಿನವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸರಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಇವರ ಸುಮಾರು 20ಕ್ಕೂ ಅಧಿಕ ಪ್ರಕಟಿತ ಪುಸ್ತಕಗಳು, 200ಕ್ಕೂ ಅಧಿಕ ಶೈಕ್ಷ ಣಿಕ,ವೈಚಾರಿಕ, ಸಂಶೋಧನ್ಮಾಕ ಬರಹಗಳು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಡಾ. ಲಕ್ಷ್ಮೀ ಜಿ.ಪ್ರಸಾದ್‌ ಕನ್ನಡ, ಸಂಸ್ಕೃತಿ ಮತ್ತು ಹಿಂದಿ ಎಂಎ ಪದವಿ ಪಡೆದಿದ್ದಾರೆ. ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ -ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನೆ ಮಹಾಪ್ರಬಂಧ ರಚಿಸಿ ಹಂಪಿ ಕನ್ನಡ ವಿವಿಯಲ್ಲಿ ಡಾಕ್ಟರೇಟ್‌ ಗಳಿಸಿದ್ದಾರೆ. ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ದ್ರಾವಿಡ ವಿವಿಯಿಂದ 2ನೇ ಡಾಕ್ಟರೇಟ್‌ ಗಳಿಸಿದ್ದಾರೆ. 150 ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ರಾಜ್ಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ಹಲವಾರು ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಬ್ಲಾಗ್‌ ಬರಹಗಳು ಕನ್ನಡ, ಇಂಗ್ಲಿಷ್‌ನಲ್ಲಿವೆ. 590 ಲೇಖನಗಳಿವೆ. ಕನ್ನಡ ಜನಪ್ರಿಯ ಬ್ಲಾಗ್‌ಗಳಲ್ಲಿ ಮುಂಚೂಣಿಯಲ್ಲಿದೆ. ಮಹಿಳೆಯರ ಬದುಕು, ಜಾನಪದ, ನಾನಾ ಭಾಷೆ ಸಾಹಿತ್ಯಗಳ ಬರಹಗಳೂ ಇದೆ. ಈ ಬ್ಲಾಗ್‌ ಮೂಲಕ ತುಳುನಾಡಿನ ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ಹಲವಾರು ವಿಚಾರ ಪಡೆಯಬಹುದು. ಬ್ಲಾಗ್‌ ಬರಹಗಳು ತನ್ನದೇ ಆದ ಓದುಗರನ್ನು ಹೊಂದಿದೆ. -ಡಾ. ಲಕ್ಷ್ಮೀ ಜಿ.ಪ್ರಸಾದ್‌