Wednesday, 30 July 2014

ಬಾಕುಡರ ಕುಲ ದೈವ ಸರ್ಪಾರಾಧನೆ -ಡಾ.ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ 31 ಜುಲೈ 2014 )ಬಾಕುಡರು ನಾಗಾರಾಧಕರು.ನಾಗ ಇವರಿಗೆ ಕುಲ ದೈವ.ಕಾಸರಗೋಡು ಜಿಲ್ಲೆಯ ಇಚಲಂಗೋಡಿನಿಂದ ಆರಂಭಿಸಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯ ವರೆಗೆ ಇವರ ಹದಿನೆಂಟು ಸ್ಥಾನಗಳಿವೆ.ಈ ಹದಿನೆಂಟು ತಾಣಗಳಲ್ಲಿ ಅವರು ತಮ್ಮ ಕುಲ ದೈವ ನಾಗನನ್ನು ಆರಾಧಿಸುತ್ತಾರೆ.ಕೊಡೆಂಚಿರ್ ನಲ್ಲಿ ನಾಗ ಉದ್ಭವಿಸಿದ್ದಾನೆ .ಹಾಗಾಗಿ ಕೊಡೆಂಚಿರ್ ಅನ್ನು ಮೊದಲ ಸ್ಥಾನ ಎಂದು ಪರಿಗಣಿಸುತ್ತಾರೆ. ಅಡ್ಕ ಕೊನೆಯ ಸ್ಥಾನ.
ನಾಗಾರಾಧನಾ ಪದ್ಧತಿಗಳು :
ತುಳುನಾಡಿನಲ್ಲಿ ಭೂತಾರಾಧನೆ, ನಾಗಾರಾಧನೆ ,ಯಕ್ಷಾರಾಧನೆಗಳು ಪ್ರಾಚೀನ ಕಾಲದಿಂದಲೂ ನಡೆಯುತ್ತಾ ಬಂದಿರುವ ಆರಾಧನಾ ಪ್ರಕಾರಗಳಾಗಿವೆ. ಇಲ್ಲಿ ಬಹು ವಿಧ ನಾಗಾರಾಧನೆ ಪದ್ದತಿಗಳು ಪ್ರಚಲಿತವಾಗಿದೆ. ಇಲ್ಲಿ ನಾಗನನ್ನು ಸರ್ಪಸಂಸ್ಕಾರ, ನಾಗ ಪ್ರತಿಷ್ಠಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ ಆರಾಧನೆ, ಬ್ರಹ್ಮಚಾರಿ ಆರಾಧನೆ ಮೊದಲಾಗಿ ವೈದಿಕ ರೂಪದಿಂದ ಆರಾಧಿಸುತ್ತಾರೆ. ಅಂತೆಯೇ ನಾಗಮಂಡಲ, ಡಕ್ಕೆ ಬಲಿ, ಆಶೇಷ ಬಲಿ, ನಾಗದರ್ಶನ, ತಂಬಿಲ, ಹಾಲಿಟ್ಟು ಸೇವೆ ಮೊದಲಾದವುಗಳು ತಾಂತ್ರಿಕ ಮೂಲ ನಾಗರಾಧನಾ ಪದ್ದತಿಗಳಾಗಿವೆ. ತನು ಎರೆಯುವುದು, ಕಂಚಿಲು ಸೇವೆ, ಕಾಡ್ಯನಾಟ, ಪಾಣರಾಟ, ಬೆರ್ಮರೆ ಸೇವೆ, ಮಡೆಸ್ನಾನ, ಬೆರ್ಮರೆ ಕೋಲ, ಮೂರಿಲು  ಆರಾಧನೆ, ಸರ್ಪಕೋಲ/ ನಾಗಕೋಲಗಳು ಜನಪದ ಮೂಲ ಆರಾಧನಾ ಪದ್ದತಿಗಳಾಗಿವೆ
ಭೂತಾರಾಧನೆಯಲ್ಲಿ ದೈವಗಳಿಗೆ ಕೋಲ ಕೊಟ್ಟು ಆರಾಧಿಸುತ್ತಾರೆ.ಪಾಣರಾಟದಲ್ಲಿ ಕೂಡಾ ಸ್ವಾಮಿ ಸೇರಿದಂತೆ ಅನೇಕ ದೈವಗಳಿಗೆ ಕೋಲ ನೀಡಿ ಆರಾಧಿಸುವ ಸಂಪ್ರದಾಯವಿದೆ .ಆದರೆ ನೇರವಾಗಿ ನಾಗನನ್ನೇ ಉದ್ದೇಶಿಸಿ ತುಳುನಾಡಿನ ದೈವದ ನೆಲೆಯಲ್ಲಿ ಕೋಲ ಕೊಟ್ಟು ಆರಾಧಿಸುವ ಸಂಪ್ರದಾಯ ಬಾಕುಡ ಬುಡಕಟ್ಟಿನಲ್ಲಿ ಬೆಳೆದು ಬಂದಿದೆ . ಇದನ್ನು ಸರ್ಪ ಕೋಲ ,ನಾಗನಲಿಕೆ, ಬೆರ್ಮರ್ ನಲಿಕೆ ಎಂದು ಕರೆಯುತ್ತಾರೆ.
 ಪ್ರಾಚೀನ ಕಾಲದಲ್ಲಿ ಸರ್ಪವನ್ನು ಮಾತ್ರ ಆರಾಧಿಸುತ್ತಿದ್ದ ಕ್ರಮೇಣ ಕೋಮರಾಯ ,ಕೋಮಾರು ಚಾಮುಂಡಿ ,ಪಿಲಿಚಾಮುಂಡಿ ,ಧೂಮಾವತಿ ,ಬಬ್ಬರ್ಯ ,ಕಿನ್ನಿಮಾಣಿ, ಗುಳಿಗ ಮೊದಲಾದ ತುಳುವರ ದೈವಗಳನ್ನು ಆರಾಧಿಸತೊಡಗಿದರುಎಂದು ಹಿರಿಯ ತುಳು ಜನಪದ ಸಂಶೋಧಕರಾದ ಡಾ.ವೆಂಕಟರಾಜ ಪುಣಿಂಚಿತ್ತಾಯರು ಅಭಿಪ್ರಾಯ ಪಟ್ಟಿದ್ದಾರೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಬಾಕುಡರ ಸರ್ಪ ಕೋಲ :
ನಾಗ ಕೋಲ/ಸರ್ಪ ಕೋಲದದ ದಿನ ಮನೆ ಮಂದಿ ಎಲ್ಲರೂ ಹಸಿ ಮಡಲಿನಲ್ಲಿ /ತೆಂಗಿನ ಹಸಿ ಒಲಿಯಲ್ಲಿ ಮಲಗುವ  ಸಂಪ್ರದಾಯವಿದೆ. ಇದು  ಈ ನಾಗಾರಧನಾ ಪದ್ಧತಿಯ ಪ್ರಾಚೀನತೆಯನ್ನು ಸೂಚಿಸುತ್ತದೆ. ಬಾಕುಡರು ಹಸಿ ಮಡಲಿನಲ್ಲಿ/ತೆಂಗಿನ ಹಸಿ ಒಲಿಯಲ್ಲಿ ಮಲಗುತ್ತಿದ್ದ ಕಾಲದಲ್ಲಿಯೇ ಸರ್ಪಾರಾಧನೆ ಮಾಡುತ್ತಿದ್ದರು ಎಂದು ನಾವಿಲ್ಲಿ ತಿಳಿಯಬಹುದು.
ತುಳುನಾಡಿನಲ್ಲಿ ಪಂಜುರ್ಲಿ,ಧೂಮಾವತಿ ,ಉಲ್ಲಾಕುಳು ಮೊದಲಾದ ದೈವಗಳಿಗೆ ಕೋಲ ಕೊಟ್ಟು ಆರಾಧಿಸುವಂತೆ ಬಾಕುಡರು ಸರ್ಪಗಳನ್ನು ಕೋಲ ಕೊಟ್ಟು ಆರಾಧಿಸುತ್ತಾರೆ .ಇದನ್ನು ಸರ್ಪ ಕೋಲ ,ನಾಗ ನಲಿಕೆ ಬೆರ್ಮೆರ್ ನಲಿಕೆ ಎಂದು ಕರೆಯುತ್ತಾರೆ.ಇದೊಂದು ಧಾರ್ಮಿಕ ಆರಾಧನಾ ರಂಗ ಕಲೆ  ಕೂಡ ಆಗಿದೆ.
ಸರ್ಪ ಕೋಲದಲ್ಲಿ  ಐದು  ಶಕ್ತಿಗಳಿಗೆ ಆರಾಧಾನೆ ಮಾಡುತ್ತಾರೆ.
1 ಎಲ್ಯಕ್ಕೇರ್ (ಸಣ್ಣ ಉಳ್ಳಾಲ್ತಿ/ಸಣ್ಣಕ್ಕ  ): :
2 ನೇಲ್ಯಕ್ಕೇರ್(ದೊಡ್ಡ ಉಳ್ಳಾಲ್ತಿ /ದೊಡ್ಡಕ್ಕ ):
3 ಎಲ್ಯಣ್ಣೆರ್( ಬಿಳಿಯ ಸಂಕಪಾಲ/ಚಿಕ್ಕಣ್ಣ ).
4 ನೇಲ್ಯಣ್ಣೆರ್(ಕರಿಯ ಸಂಕಪಾಲ /ದೊಡ್ಡಣ್ಣ )
ಎಲ್ಯಕ್ಕೇರ್ (ಸಣ್ಣ ಉಳ್ಳಾಲ್ತಿ/ಸಣ್ಣಕ್ಕ  ) ಮತ್ತು  ನೇಲ್ಯಕ್ಕೇರ್(ದೊಡ್ಡ ಉಳ್ಳಾಲ್ತಿ /ದೊಡ್ಡಕ್ಕ ) ರನ್ನು ನಾಗ ಯಕ್ಷಿಯರು ಎಂದು ಡಾ.ವೆಂಕಟರಾಜ ಪುಣಿಂಚಿತ್ತಾಯರು ಹೇಳಿದ್ದಾರೆ .
ಎಲ್ಯಣ್ಣೆರ್( ಬಿಳಿಯ ಸಂಕಪಾಲ/ಚಿಕ್ಕಣ್ಣ )ಮತ್ತು  ನೇಲ್ಯಣ್ಣೆರ್(ಕರಿಯ ಸಂಕಪಾಲ /ದೊಡ್ಡಣ್ಣ ) ನಾಗ ಸ್ವರೂಪಿಳಾಗಿದ್ದು ಇವರಿಗೆ  30-40 ಅಡಿ ಎತ್ತರದ ನಾಗಮುಡಿಯನ್ನು ಹಿಡಿಯುತ್ತಾರೆ.ತ್ರಿಶಂಕು ಆಕಾರವನ್ನು ಹೊಂದಿರುವ ಇದು ತುಂಬಾ ಭಾರವಾಗಿದ್ದು ಇದನ್ನು ಸಾವಿರ ಅಡಿಕೆಯ ಹಾಳೆಗಳನ್ನು ಉಪಯೋಗಿಸಿ ತಯಾರಿಸುತ್ತಾರೆ .ಈ ಮುಡಿಯಲ್ಲಿ ನೂರಾರು ನಾಗನ ಹೆಡೆಗಳನ್ನು ಚಿತ್ರಿಸುತ್ತಾರೆ.ಇದು ತುಂಬಾ ಭಾರ ಮತ್ತು ಎತ್ತರ ಇರುವುದರಿಂದ ಇದನ್ನು ಪಾತ್ರಿಯು ಕಟ್ಟಿಕೊಳ್ಳುವುದಿಲ್ಲ ,ಬದಲಿಗೆ ಅದನ್ನು ಆಕಡೆ ಈ ಕಡೆ ಯಿಂದ ಜನರು ಹಿಡಿದುಕೊಳ್ಳುತ್ತಾರೆ. ಬಿಳಿಯ ಸಂಕಪಾಲನೆಂಬ ನಾಗರಾಜನನ್ನೇ ಎಲ್ಯಣ್ಣೇರ್ ಎಂದು ಕರೆದು ಭೂತದ ನೆಲೆಯಲ್ಲಿ ಆರಾಧಿಸುತ್ತಾರೆ.
 ನೆಲ್ಯಕ್ಕೇರ್ ನಾಗರಾಜರ ತಾಯಿ ,ಎಲ್ಯಕ್ಕೇರ್ ನಾಗರಾಜರ ಸನ್ನಿಧಿಗೆ ಸೇರಿ ದೈವತ್ವ ಪಡೆದ ಪಳ್ಳಿ ತೋಕುರು ಬಾಕುಡೆತಿ .ಈ ನಾಲ್ಕು ಸರ್ಪ ರೂಪಿ ದೈವಗಳಿಗೆ ಕೋಲ ಕೊಡುತ್ತಾರೆ.ಈ ಆಚರಣೆಯಲ್ಲಿ ನಾಲ್ಕು ಮಂದಿ ಕಾರ್ನಪ್ಪಾಡರು (ಮುಖ್ಯಸ್ಥರು ) ಪಾತ್ರವಹಿಸುತ್ತಾರೆ.ಇವರನ್ನು ನಾಲಜ್ಜಿ ಕಾರ್ನೆರ್ ಎಂದು ಕರೆಯುತ್ತಾರೆ.
ಸರ್ಪ ಭೂತಗಳಿಗೆ ನಲಿಕೆ ಜನಾಂಗದವರು  ಅಥವಾ ಕೋಪಾಳರು  ಭೂತ  ಕಟ್ಟುತ್ತಾರೆ.

ಕೃಷ್ಣ ಸರ್ಪ ಕೋಲ :

ಸರ್ಪ ಕೋಲದ ಕೊನೆಯ ಹಂತ ಕೃಷ್ಣ ಸರ್ಪ ಕೋಲ .ಗದ್ದೆಯಲ್ಲಿರುವ ಹುಲ್ಲು ಕಡ್ಡಿಗಳನ್ನು ತೆಗದು ಸ್ವಚ್ಛ ಮಾಡಿ ಕೃಷ್ಣ ಸರ್ಪಕ್ಕೆ ಹೋಗಲು ದಾರಿ ಮಾಡಿ ಕೊಡುತ್ತಾರೆ.ಗದ್ದೆಯ ನಡುವೆ ಆಳೆತ್ತರದ ಹಸಿ ಮಾವು ಮತ್ತು ಹಲಸಿನ ಗೆಲ್ಲುಗಳನ್ನು ಹುಗಿದು ಕೃತಕ ಮರ ನಿರ್ಮಿಸುತ್ತಾರೆ.ಇದನ್ನು ಕುಕ್ಕಂಬಿಲ ಎಂದು ಕರೆಯುತ್ತಾರೆ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಕರಿಯ ಸಂಕಪಾಲನನ್ನು ಅಣ್ಣ ನಾಗರಾಜನೆಯ ಭಾವಿಸಿದ್ದು, ಆತನನ್ನು ಕೃಷ್ಣಸರ್ಪದ ರೂಪದಲ್ಲಿ ಬಾಕುಡ ಜನಾಂಗದವರು ಆರಾಧಿಸುತ್ತಾರೆ. ಇಲ್ಲಿ ಭೂತ ಮಾಧ್ಯಮರು ಮೂರು ಹೆಡೆಯ ನಾಗನನ್ನು ದ್ಯೋತಿಸುವ ಅಡಿಕೆ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಹಾವಿನಂತೆ ತೆವಳುತ್ತಾ ಕುಕ್ಕಂಬಿಲಕ್ಕೆ ಬರುತ್ತಾರೆ. ಇಲ್ಲಿ ಒಬ್ಬರು ಭೂತಮಾಧ್ಯಮರು ಬ್ರಾಹ್ಮಣ ಮಂತ್ರವಾದಿಯ ಪಾತ್ರವನ್ನು ನಿರ್ವಹಿಸುತ್ತಾನೆ. ಕೃಷ್ಣಸರ್ಪ ಪಾತ್ರಧಾರಿಯ ಮೇಲೆ ಅಕ್ಕಿ ಕಾಳನ್ನು ಎರಚಿ ಕೃಷ್ಣಸರ್ಪ ಸಿಡಿದೇಳುವಂತೆ, ಬುಸುಗುಟ್ಟುವಂತೆ ಮಾಡುತ್ತಾನೆ.. ಕೊನೆಯಲ್ಲಿ ಕೃಷ್ಣಸರ್ಪ ಸೋತು ಶರಣಾಗುವ ಅಭಿನಯ ಇರುತ್ತದೆ.
 
 ಮಂತ್ರವಾದಿಯೊಬ್ಬ ಸರ್ಪವನ್ನು ಸ್ವಾದೀನ ಪಡಿಸಿಕೊಂಡು ನಿರ್ದಿಷ್ಟ ಸ್ಥಾನಕ್ಕೆ ಕರೆದೊಯ್ಯುವ ಈ ಪರಿಕಲ್ಪನೆ ಅತ್ಯಂತ ಅದ್ಭುತವೂ ರಮ್ಯವೂ ಆಗಿದೆ .ಇದನ್ನು ಮರಿಕ್ಕಳಗಾವುನೆ ಎಂದು ಕರೆಯುತ್ತಾರೆ. ಇದು ಕೃಷ್ಣಸರ್ಪದ ಕೋಲವಾಗಿದೆ.ಇದು ಬಹಳ ಆಕರ್ಷಕವಾಗಿದೆ .ಅತ್ಯಂತ ರೋಮಾಂಚನಕಾರಿ ಕೂಡಾ !copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

 
ಕುಂಡಂಗೇರ್:
ಈ ನಡುವೆ ಕುಂಡಂಗೇರ್ ಎಂಬ ಯಕ್ಷಗಾನದ ಕೋಡಂಗಿಗಳಂತೆ ಇರುವ ಎರಡು ಹಾಸ್ಯಪಾತ್ರಗಳ ಸಂಭಾಷಣೆ ,ಅಭಿನಯ  ಅಭಿವ್ಯಕ್ತಿ ಇರುತ್ತದೆ .ಇದೊಂದು ಅಪರೂಪದ ಜಾನಪದ ಅಭಿವ್ಯಕ್ತಿ ಕೂಡಾ.ನಲಿಕೆಯ ಹೆಂಗಸರು ಇದನ್ನು ನಿರ್ದೇಶಿಸುತ್ತಾರೆ.
ಇವರ ಮುಖ್ಯಸ್ಥೆ ಹಾಡುತ್ತಾಳೆ ಮತ್ತು ಯಕ್ಷಗಾನದ ಭಾಗವತರಂತೆ ಪಾತ್ರಗಳೊಡನೆ ಸಂಭಾಷಣೆ ನಡೆಸುತ್ತಾಳೆ.ಹಾಸ್ಯದ ಅತಿರೇಕದಲ್ಲಿ ಕೆಲಸ ಮುಂದೆ ಸಾಗದಿದ್ದರೆ ಆಕೆ ಹಾಡನ್ನು ಮುಂದುವರಿಸಿ ಸಹಕರಿಸುತ್ತಾಳೆ.
ನಾಗ ಕೋಲದ ದಿನ ಮನೆ ಮಂದಿ ಎಲ್ಲರೂ ಹಸಿ ಮಡಲಿನಲ್ಲಿ /ತೆಂಗಿನ ಹಸಿ ಒಲಿಯಲ್ಲಿ ಮಲಗುವುದು ಈ ಕೋಲದ ಪ್ರಾಚೀನತೆಯನ್ನು ಸೂಚಿಸುತ್ತದೆ.ಬಾಕುಡರು ಹಸಿ ಮಡಲಿನಲ್ಲಿ ಮಲಗುತ್ತಿದ್ದ ಕಾಲದಲ್ಲಿಯೇ ಸರ್ಪಾರಾಧನೆ ನಡೆಸುತ್ತಿದ್ದರು ಎಂದು ನಾವಿಲ್ಲಿ ತಿಳಿಯಬಹುದು .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ನಾಗ ಪಾಡ್ದನದ ಕಥೆ :
ಪುಂಚೊಡು ಒಂಜಿ ಪೊಣ್ಣು ಬಾಲೆ :
ನಾಗ ಕೋಲದ  ಸಂದರ್ಭದಲ್ಲಿ ಇಬ್ಬರು ನಾಗರಾಜರಾದ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರ  ಹುಟ್ಟು ಮತ್ತು ಬಾಕುಡರಲ್ಲಿ ಸರ್ಪ ಆರಾಧನೆ ಬೆಳೆದು ಬಂದ ಕಥೆಯನ್ನು  ಪಾಡ್ದನದಲ್ಲಿ ಹೇಳುತ್ತಾರೆ
ಕೊಡೆಂಚಿರ್ ಎಂಬ ಪ್ರದೇಶ ಕುಂಬಳೆ -ಮಂಜೇಶ್ವರ ಸಮೀಪ ಇದೆ .ಇಲ್ಲಿ ಬಾಕುಡ  ಸಮುದಾಯದವರು ಇದ್ದಾರೆ . ಹಿಂದೆ ಬೈಲ ಬಾಕುಡ  ಮತ್ತು ಬಾಕುಡೆತಿ ಗದ್ದೆ ಬದಿಯಲ್ಲಿ ಹೋಗುತ್ತಿರುವಾಗ ಒಂದು ಹುತ್ತದಿಂದ ಮಗು ಅಳುವ ಸದ್ದನ್ನು ಕೇಳುತ್ತಾರೆ .ಆ ಅಳುವಿನ ಧ್ವನಿಯನು ಹಿಂಬಾಲಿಸಿಕೊಂಡು ಹೋಗುವಾಗ ಒಂದು ಹೆಣ್ಣು ಮಗು ಅಳುವುದು ಕಾಣಿಸುತ್ತದೆ .
ತುಳು :
ಪುಂಚೊಡುದು ಒಂಜಿ ಪೊಣ್ಣು ಬಾಲೆ ಬುಳುತ್ತೊಂದು ಬರ್ಪುಂಡು
ಬಾಲೆನು ಅಕುಳು ಕಂಡೆನಿ ಬುಡೆದಿ ಕೊಣಂದು ಬತ್ತೆರ್
ಆ ಬಾಲೆಗ್ ಅಕುಳು ಪುದರ್ ಒಲೆತ್ತೆರ್ ದೈಯಾರೆಂದು
ಕನ್ನಡ ಅನುವಾದ :
ಹುತ್ತದಿಂದ ಒಂದು ಹೆಣ್ಣು ಮಗು ಅಳುತ್ತಾ ಬರುತ್ತದೆ
ಮಗುವನ್ನು ಅವರು ಗಂಡ ಹೆಂಡತಿ (ಮನೆಗೆ )ಕರೆ ತಂದರು
ಆ ಮಗುವಿಗೆ ಅವರು ದೈಯಾರ್ ಎಂದು ಹೆಸರು ಕರೆದರು copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಆ ಬಾಕುಡ  ದಂಪತಿಗಳಿಗೆ ಮಕ್ಕಳಿರಲಿಲ್ಲ ,ದೇವರು ದಯಪಾಲಿಸಿದ ಮಗು ಎಂದು ಅದನ್ನು ಕರೆ ತಂದು ದೈಯಾರ್ ಎಂದು ಹೆಸರಿತ್ತು ಮುದ್ದಿನಿಂದ ಸಾಕಿದರು .ಆ ಮಗು ಚಿಕ್ಕದು ಹೋಗಿ ದೊಡ್ದವಳಾಗುತ್ತಾಳೆ.ಅವಳು ಯುವತಿ ಆದಾಗ ಅವಳು ನಾನು ನೆತ್ತರಿನಲ್ಲಿ ಹುಟ್ಟಲಿಲ್ಲ .ನನಗೆ ಜನ್ಮ ಕೊಟ್ಟ ತಂದೆ ತಾಯಿಗಳಿಲ್ಲ.ಮರ ಹುಟ್ಟಿ ಮರ ಸಾಯುವ ಕಾಲ ಬಂದರೂ ನನ್ನ ಹೊಟ್ಟೆ ಯಲ್ಲಿ ಸಂತಾನವಾಗಲಿಲ್ಲ ಎಂದು ದುಃಖಿಸುತ್ತಾಳೆ . ನಂತರ ಅವಳು ಅಲೌಕಿಕ ಗರ್ಭವನ್ನು ಧರಿಸುತ್ತ್ತಾಳೆ .
ಅವಳು ಎಪ್ಪತ್ತೇಳು ಸಾವಿರ ಹೆಡೆಯ  ಕರಿಯ ಸಂಕಪಾಲ ಬಿಳಿಯ ಸಂಕಪಾಲ ಎಂಬ ಇಬ್ಬರು  ನಾಗರಾಜರಿಗೆ ಜನ್ಮ ನೀಡಿ ಮರಣವನ್ನಪ್ಪುತ್ತಾಳೆ .
ಬಾಕುಡರಿಗೆ ತುಳು ಮಣ್ಣಿನ ಒಡೆತನ :
ಇದೇ ಸಂದರ್ಭದಲ್ಲಿ ಹೇಳುವ ಇನ್ನೊಂದು ಪಾದ್ದನದಲ್ಲಿ ಬಾಕುಡ ಸಮುದಾಯಕ್ಕೆ ಭೂಮಿಯ ಒಡೆತನ ಸಿಕ್ಕಿದ ಕಥಾನಕವಿದೆ
ಆದಿಯಲ್ಲಿಯೇ ಬೈಲಬಾಕುಡರಿಗೆ ನಾಗಬೆರ್ಮರ್ಕುಲದೈವ, ಆದಿಕಾಲದಲ್ಲಿ ಭೂಮಿಯ ಒಡೆಯರಾದ ಬಾಕುಡರು ಭೂಮಿಯ ಮಣ್ಣು ಹಿಡಿದು ಪ್ರಮಾಣ ಮಾಡಿ ಸರ್ವನಾಶಕ್ಕೆ ಕಾರಣರಾಗುತ್ತಾರೆ. ಹಿಂದಿನ ಕಾಲದಲ್ಲಿ ಹಿರಿಯರ ಕಾಲದಲ್ಲಿ ರೇಣುಕಾದೇವಿಯ ಮಗ ತಾಯಿಯ ತಲೆ ಕಡಿದ ಪಾಪವಿಮೋಚನೆಗಾಗಿ ಸಮುದ್ರವನ್ನು ಭೂಮಿ ಮಾಡಿ ಭೂಮಿದಾನ ಕೊಡುತ್ತಾನೆ. ಹೀಗೆ ಆದಿಯಲ್ಲಿ ಬೈಲಬಾಕುಡರಿಗೆ ಭೂದಾನ ಸಿಕ್ಕ ಭೂಮಿ. ಭೂದಾನ ಸಿಕ್ಕಾಗ ಬಾಕುಡರು ತುಂಡು ಅರಸರಾಗಿದ್ದರು.ಇವರು ಬ್ರಾಹ್ಮಣರಿಗೆ ತುಂಬಾ ತೊಂದರೆ ಕೊಟ್ಟಾಗ ಅವರು ಯಜ್ಞ ಮಾಡಿ ನಾಗರನ್ನು ನಾಶ ಮಾಡಲು ಯತ್ನಿಸಿದರು.ಆಗ ನಾಗರು ಪ್ರತ್ಯಕ್ಷವಾಗಿ ಉಗ್ರ ರೂಪ ತೋರಲು,ನಾಗರಿಗೆ ಶರಣಾಗಿ ತಪ್ಪನ್ನು ಮನ್ನಿಸಿ ಕ್ಷಮೆ ನೀಡುವಂತೆ  ಅವರನ್ನು ಪ್ರಾರ್ಥಿಸಿದಾಗ ಶಾಂತರಾಗಿ ಸಾವಿರದೊಂದು ಗರುಡಾವತಾರ ಆಗುವವರೆಗೆ ಕೋಲ, ತಂಬಿಲ ಕೊಡಬೇಕು, ಬೈಲಬಾಕುಡರ ಕುಲದೈವವನ್ನು ನೆನೆದರೆ ನೆನೆದಲ್ಲಿ ನಾಗಬೆರ್ಮರು ಅವರಿಗೆ ಒಲಿಯುತ್ತಾರೆಎಂದು ಹೇಳಿ ನಾಗಬೆರ್ಮೆರ್ ಕಲ್ಲಿನಲ್ಲಿ ಉದ್ಭವವಾಗುತ್ತಾರೆ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ನಾಗ ಸೇರಿಗೆಗೆ ಸಂದ ಪಳ್ಳಿ ತೋಕುರು ಬಾಕುಡೆತಿ :
 ನಾರ್ಯದ  ನೇಲ್ಯ ಸಂಕರಮೆ ಮತ್ತು ಎಲ್ಯ ಸಂಕರಮೆ ಎಂಬವರ ತಂಗಿ ಪಳ್ಳಿ ತೋಕುರು ಬಾಕುಡೆತಿಗೆ ಕರಿಯ ಸಂಕಪಾಲ ಕಾಣಿಸಿಕೊಂಡು ಹೆದರಬೇಡ ನನ್ನನ್ನು ನಂಬು, ಕೋಲ ನಡೆಸಿ ನನ್ನ ಆರಾಧನೆ ಮಾಡುಎನ್ನುತ್ತಾನೆ. ಹಾಗೆಯೇ ಆಕೆ ಕೊಡೆಂಚಿರ್‍ ನಲ್ಲಿ ಸ್ಥಾನ ಕಟ್ಟಿಸಿ ಕಾಳಿಂಗಸರ್ಪವನ್ನು ಆರಾಧಿಸುತ್ತಾಳೆ. ಅಂದಿನಿಂದ ಬಾಕುಡರಲ್ಲಿ ಸರ್ಪಾರಾಧನೆ ಬೆಳೆದು ಬಂತು.
ಮುಂದೊಂದು ದಿನ ಪಳ್ಳಿ ತೋಕುರು ಬಾಕುಡೆದಿ ಚಾಪೆ ಹೆಣೆಯುತ್ತಿದ್ದಾಗ, ಅದಕ್ಕೆ ಸರ್ಪದ ಹೆಡೆಯಾಕಾರ ಬರತೊಡಗುತ್ತದೆ. ಎಷ್ಟೆಷ್ಟು ಸರಿಯಾಗಿ ಹೆಣೆದರೂ ಹೆಡೆಯ ಆಕಾರನ್ನು ಹೋಗಲಾಡಿಸಲು ಆಗುವುದಿಲ್ಲ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ ಆಕೆಗೆ ದುಃಖವಾಯಿತು. ಮಾರಲು ಹೋದರೆ ನಾಗನ ಹೆಡೆ ಆಕಾರವಿರುವ ಚಾಪೆಯನ್ನು ಯಾರು ಕೊಂಡುಕೊಳ್ಳುವುದಿಲ್ಲ. ಕೊನೆಗೆ ಅವಳು ಉರ್ಮಿ ಹೊಳೆಗೆ ಬರುತ್ತಾಳೆ. ದೇವರೇ ನನ್ನನ್ನು ಮಾಯಕ ಮಾಡಿಎಂದು ಪ್ರಾರ್ಥಿಸುತ್ತಾಳೆ. ದೇವರು ಆಕೆಯನ್ನು ಮಾಯಕ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತಾನೆ.ಪಳ್ಳಿ ತೋಕುರು ಬಾಕುಡೆತಿ ಮುಂದೆ ಎಲ್ಯಕ್ಕೇರ್ ಎಂದು ಆರಾಧಿಸಲ್ಪಡುತ್ತಾಳೆ.
ಡಾ.ಲಕ್ಷ್ಮೀ ಜಿ ಪ್ರಸಾದ ,ಸಂಶೋಧಕರು
ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ಳಾರೆ
ಸುಳ್ಯ ದ.ಕ ಜಿಲ್ಲೆ
(ಲೇಖಕಿಯ ಕಿರು ಪರಿಚಯ :ಲಕ್ಷ್ಮೀ ಜಿ ಪ್ರಸಾದ ಅವರು ಎಂ .ಎ (ಸಂಸ್ಕೃತ )ಎಂ.ಎ(ಕನ್ನಡ ),ಎಂ.ಎ(ಹಿಂದಿ ) ಪದವಿಗಳನ್ನಿ ಗಳಿಸಿದ್ದು ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನಾ maha ಪ್ರಬಂಧವನ್ನು ಸಲ್ಲಿಸಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿರುತ್ತಾರೆ.ಪ್ರಸ್ತುತ ಎರಡನೆಯ ಡಾಕ್ಟರೇಟ್ ಪದವಿಗಾಗಿ ತುಳು ಸಂಸ್ಕೃತಿ ಕುರಿತು ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಸಂಶೋಧನಾ maha ಪ್ರಬಂಧವನ್ನು ಸಲ್ಲಿಸಿದ್ದು ಇವರು ತುಳುನಾಡಿನ ಅಪೂರ್ವ ಭೂತಗಳು ,ತುಂಡು ಭೂತಗಳು,ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಮೊದಲಾದ 20 ಕೃತಿಗಳು ಪ್ರಕಟವಾಗಿವೆ )Tuesday, 29 July 2014

ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೇ?- ಡಾ.ಲಕ್ಷ್ಮೀ ಜಿ ಪ್ರಸಾದ 30 ಜುಲೈ ಕನ್ನಡ ಪ್ರಭ ಪುಟ -7 | - Kannadaprabha.com:
ಲೈಂಗಿಕ ಶಿಕ್ಷಣ-ಚಿಂತನ ಮಂಥನ
"ಕಣ್ಣಾ ಮುಚ್ಚೆ ಕಾಡೆ ಗೂಡೆ, ಉದ್ದಿನ ಮೂಟೆ ಉರುಳೇ ಹೋಯ್ತು, ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮಯ ಹಕ್ಕಿ ರಕ್ಷಿಸಿಕೊಳ್ಳಿ"
ಓಡಿಸಿಕೊಂಡು ಬರುವಾತ ಒಬ್ಬ, ಓಡಿ ತಪ್ಪಿಸಿಕೊಳ್ಳುವವರು ಹಲವರು. ಸಿಕ್ಕಿಹಾಕಿಕೊಳ್ಳುವಾತ ನಂತರ ಓಡಿಸಿ ಹಿಡಿಯುವಾತನಾಗುವ ಈ ಮಕ್ಕಳ ಜನಪದ ಆಟದಲ್ಲಿ ಹುಡುಗ ಹುಡುಗಿಯರ ಮಧ್ಯೆ ಬೇಧವಿಲ್ಲ. ಆದರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜಾಣತನವನ್ನು ಇದು ಹೇಳಿಕೊಡುತ್ತದೆ.
ಇಂದಿನ ದಿನಗಳಲ್ಲಿ ಸಾಕಷ್ಟು ಚರ್ಚಿತವಾಗುತ್ತಿರುವ ಲೈಂಗಿಕ ಶಿಕ್ಷಣ ಜನಪದರಲ್ಲಿ ಇತ್ತೇ? ಇದ್ದರೆ ಯಾವ ಮಾದರಿಯದು? ಅದನ್ನು ಇಂದಿನ ಆಧುನಿಕ ಜಗತ್ತಿನಲ್ಲಿ ಅಳವಡಿಸಲು ಸಾಧ್ಯವೇ, ಅತ್ಯಾಚಾರದಂತಹ ವಿಕೃತಿಗಳಿಗೆ ಕೂಡಾ ಜನಪದ ಸಾಹಿತ್ಯದಲ್ಲಿ ಪರಿಹಾರವಿದೆಯೇ ಎಂದು ಯೋಚಿಸಿದಾಗ ಮೊದಲಿಗೆ ನೆನಪಿಗೆ ಬರುವುದು ಛತ್ತೀಸ್‌ಗಢದ ಬಸ್ತರ್ ಜಿಲ್ಲೆಯಲ್ಲಿ ಪ್ರಚಲಿತವಿರುವ "ಘೋಟುಲ್‌" ಎಂಬ ಒಂದು ಅನೌಪಚಾರಿಕ ಜನಪದ ಶಿಕ್ಷಣ ವ್ಯವಸ್ಥೆ.
ಘೋಟುಲ್ ಎಂಬುದು ಬಸ್ತರ್‌ನಲ್ಲಿ ಪ್ರಚಲಿತವಿರುವ ಹಲ್ಬಿ ಭಾಷೆಯ ಪದವಾಗಿದ್ದು, ಇದರ ಶಬ್ದಶಃ ಅರ್ಥ ಎಲ್ಲೆಡೆ ಎಂದು. ಬಹುಶಃ ಎಲ್ಲೆಡೆ ಇರಲೇಬೇಕಾದ್ದು ಎಂಬರ್ಥದಲ್ಲಿ ಘೋಟುಲ್ ಶಬ್ದ ಬಳಕೆಗೆ ಬಂದಿರುವ ಸಾಧ್ಯತೆ ಇದೆ.
ಜನಪದ ಅಧ್ಯಯನ ಕ್ಷೇತ್ರದಲ್ಲಿ ಘೋಟುಲ್ ಒಂದು ವಿಶಿಷ್ಟ ಮಾದರಿ. ಇದೊಂದು ಬಸ್ತರ್ ಬುಡಕಟ್ಟು ಜನರ ಕಾಡಿನ ಯುವ ವಿಶ್ವ. ಪ್ರಸ್ತುತ ಛತ್ತೀಸ್‌ಗಢಕ್ಕೆ ಸೇರಿರುವ, ಮಧ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿನ ವಿಸ್ತಾರವಾದ ಒಂದು ಜಿಲ್ಲೆ ಬಸ್ತರ್. ಜಗದಲಪುರ ಅದರ ಆಡಳಿತ ಕೇಂದ್ರ. ಹಿಂದೆ ಇಲ್ಲಿ ಅರಸರ ಆಡಳಿತವಿತ್ತು. ಇಲ್ಲಿನ ನಾರಾಯಣಪುರ ತಹಸೀಲದಲ್ಲಿ ಹಳ್ಳಕೊಳ್ಳ, ಬೆಟ್ಟಗಳ ದುರ್ಗಮ ಪ್ರದೇಶವಾದ ಅಬುಜ್‌ಮಾಡ ಹರಡಿಕೊಂಡಿದ್ದು ಅಲ್ಲಿನ ಆದಿವಾಸಿಗಳು ಆಧುನಿಕತೆಯ ಸೋಂಕಿಗೆ ಒಳಗಾಗದೇ ತಮ್ಮ ಸಂಪ್ರದಾಯ, ಹಾಡು, ಹಸೆ, ಕಲೆ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿನ ಹಳ್ಳಿಗಳಲ್ಲಿ ಶೇ.72 ಬುಡ ಕಟ್ಟು ಆದಿವಾಸಿ ಜನರು ಬದುಕುತ್ತಿದ್ದಾರೆ.
ಘೋಟುಲ್ ಆದಿ ಮಾನವನ ಕಾಲದಿಂದಲೂ ಬೆಳೆದು ಬಂದ ಜೀವನ ಶಿಕ್ಷಣ ಸಂಸ್ಥೆ ಎಂದು ಮಾನವ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಸ್ತರಿಗೆ ಅಧ್ಯಯನ ಪ್ರವಾಸ ಮಾಡಿರುವ ಡಾ. ಕೃಷ್ಣಾನಂದ ಕಾಮತ್ ಅವರು "ಇದೊಂದು ಜೀವಂತ ವಿದ್ಯಾಲಯ, ಇಲ್ಲಿ ಪುಸ್ತಕದ ಪಾಂಡಿತ್ಯ, ಔಪಚಾರಿಕ ಶಿಕ್ಷಣಕ್ಕೆ ಬೆಲೆ ಇಲ್ಲ. ದಿನವೂ ಬಾಳಿ ಬದುಕುವ ವಿದ್ಯೆ ಹೇಳಿ ಕೊಡಲಾಗುತ್ತದೆ. ಈ ಸಂಸ್ಥೆ ನಾಗರಿಕ ಪ್ರಪಂಚಕ್ಕೊಂದು ವಿಸ್ಮಯವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುರಿಯಾ ಆದಿ ವಾಸಿಗಳು ಪ್ರತಿ ಹಳ್ಳಿಗೆ ಒಂದರಂತೆ ಒಂದು ಘೋಟುಲ್ ಸಿದ್ಧ ಪಡಿಸಿಕೊಂಡಿರುತ್ತಾರೆ. ಹಳ್ಳಿ ದೊಡ್ಡದಿದ್ದರೆ ಎರಡು ಮೂರು ಘೋಟುಲ್‌ಗಳೂ ಇರುತ್ತವೆ. ಇದು ಅವರ ಕಿರಿಯ ವಿಶ್ವ. ಹಳ್ಳಿಯ ಹೊರಭಾಗದಲ್ಲಿರುವ ಘೋಟುಲ್ ಒಂದು ಗುಡಿಸಲಿನಂತೆ ಅಥವಾ ದೊಡ್ಡ ಬೈಠಕ್ ಖಾನೆಯಂತೆ ಇರುತ್ತದೆ."ಚಳಿಗಾಲಕ್ಕಾಗಿ ಬೆಳಕು ಗಾಳಿಯಾಡದ ಒಂದು ಕಟ್ಟಡ ಹಾಗೂ ಬೇಸಿಗೆಗಾಗಿ ಕೇವಲ ಒಂದು ಮಾಡು ಇರುವ ಪಡಸಾಲೆಯೊಂದಿರುತ್ತದೆ" ಎಂದು ಡಾ.ಕೃಷ್ಣಾನಂದ ಕಾಮತರು ಹೇಳಿದ್ದಾರೆ.
ಗೋಡೆಗಳ ಮೇಲೆ ಆನೆ ನವಿಲು ಮೊದಲಾದ ಉಬ್ಬು ಚಿತ್ರಗಳು, ಜೊತೆಗೆ ಸುಗ್ಗಿ ಸಮಯದಲ್ಲಿ ಅಕ್ಕಿ ಹಿಟ್ಟಿನಿಂದ ರಚಿಸಿದ ರಂಗೋಲಿ ಮಾದರಿಯ ಚಿತ್ರಗಳು (ಧಪ್ಪಾ ) ಇರುತ್ತವೆ. ಇದ್ದಿಲಿನಿಂದ ರಚಿಸಿದ ಹೆಣ್ಣಿನ ಹಲವು ಬಗೆ ಚಿತ್ರಗಳು ಇರುತ್ತವೆ. ಸ್ತನ, ಜನನೇಂದ್ರಿಯಗಳ ಚಿತ್ರಗಳನ್ನು ಬೃಹದಾಕಾರದಲ್ಲಿ ಬಿಡಿಸಿರುತ್ತಾರೆ.
ಇದು ಹಳ್ಳಿಯ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಿರುತ್ತದೆ. ಘೋಟುಲ್‌ಗಳಿಗಾಗಿ ಹೊಲದಲ್ಲಿ ಬತ್ತ  ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾರೆ. ಇದರ ಜವಾಬ್ದಾರಿ ಘೋಟುಲ್ ಸದಸ್ಯರದ್ದು. ಇಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಮಕ್ಕಳು ಸದಸ್ಯರು. ವಿವಾಹಿತ ಪ್ರೌಢ ಗೃಹಸ್ಥರಿಗೆ ಇಲ್ಲಿ ಪ್ರವೇಶವಿಲ್ಲ!
ಮುರಿಯಾ ಬುಡಕಟ್ಟಿನ ಮಕ್ಕಳು, ಯುವಕ (ಚಿಲಕ್ ), ಯುವತಿ (ಮೋತಿಯಾರಿ )ಯರು ಘೋಟುಲ್ ಅನ್ನು ತುಂಬಾ ಇಷ್ಟಪಡುತ್ತಾರೆ. ವಾರಕ್ಕೊಮ್ಮೆ ಎರಡು ಬಾರಿ ಹದಿಹರೆಯದ ಕಿಶೋರ- ಕಿಶೋರಿಯರು, ಅವಿವಾಹಿತ ಯುವಕ-ಯುವತಿಯರು ಹಿರಿಯರ ಅನುಮತಿ ಪಡೆದು ಘೋಟುಲ್‌ನಲ್ಲಿ ಒಟ್ಟು ಸೇರುತ್ತಾರೆ.
ಕೃಷಿ, ಬೇಟೆ, ಮೃದಂಗ, ಕೊಳಲು, ಸಾಂಪ್ರದಾಯಿಕ ಹಾಡು, ಕಥೆ ಮೊದಲಾದವುಗಳೊಂದಿಗೆ ಇವರಿಗೆ ಇಲ್ಲಿ ಲೈಂಗಿಕ ಶಿಕ್ಷಣವೂ ದೊರೆಯುತ್ತದೆ.
"ಸರಳತೆ, ಸಮಾನತೆ ಹಾಗೂ ಸ್ವಾತಂತ್ರ್ಯ" ಘೋಟುಲ್ ಜೀವನದ ಜೀವಾಳ. ಇಲ್ಲಿ ಗಂಡು ಹೆಣ್ಣು ಸಮಾನರು. ಇಂದಿನ ಆಧುನಿಕ ಶಿಕ್ಷಣದ ನಡುವೆಯೂ ಪರಿಹರಿಸಲಾಗದ ಯುವ ಜನರ ಸಮಸ್ಯೆಗಳನ್ನು ಬಸ್ತರ್‌ನ ಬುಡಕಟ್ಟು ಜನರಾದ ಮುರಿಯಾಗಳು ಶತಕಗಳ ಹಿಂದೆಯೇ ಸಹಜವಾಗಿಯೇ ಪರಿಹರಿಸಿಕೊಂಡಿದ್ದಾರೆ.
ಘೋಟುಲ್‌ನಲ್ಲಿ ಇವರೆಲ್ಲ ಗಂಡು ಹೆಣ್ಣು ಎಂಬ ಅಂತರವಿಲ್ಲದೆ ಉಂಡು ತಿಂದು ಮಲಗುತ್ತಾರೆ. ಯುವಕ ಯುವತಿಯರು ಜೊತೆಯಲ್ಲಿಯೇ ನದಿಯಲ್ಲಿ ನಗ್ನರಾಗಿ ಈಜಾಡುವಷ್ಟು ಸಮಾನತೆ, ಸಹಜತೆ ಅವರಲ್ಲಿದೆ.
ಘೋಟುಲ್‌ಗಳಲ್ಲಿ  ಹಿರಿಯ ಯುವತಿಯರು (ಮೋತಿಯಾರಿ) ಕಿರಿಯರಿಗೆ (ಚಿಲಕ್) ಲೈಂಗಿಕ ತಿಳಿವಳಿಕೆ ನೀಡುತ್ತಾರೆ. ಶರೀರವನ್ನು ನಿಸರ್ಗಕ್ಕೆ ಹೋಲಿಸಿ ಅಲ್ಲಿಯ ಎತ್ತರ ತಗ್ಗು, ಬೆಟ್ಟ ಕಣಿವೆಗಳಂತೆಯೇ ಶರೀರ. ಮಳೆ, ಗಾಳಿ, ಸಮುದ್ರದಲ್ಲಿ ಏರಿಳಿತ ಇರುವಂತೆಯೇ ಉತ್ತೇಜನ ಉಂಟಾದಾಗ ಮನುಷ್ಯನ ದೇಹ ಸ್ವಭಾವಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ವಸಂತ ಋತುವಿನಲ್ಲಿ ಪ್ರಕೃತಿಯಲ್ಲಿ ಹೂ ಹಣ್ಣು ಬೆಳೆಯುವಂತೆ ಪ್ರತಿ ಹುಡುಗ ಹುಡುಗಿಯರಲ್ಲೂ ವಸಂತ ಕಾಲ ಇರುತ್ತದೆ. ಇತ್ಯಾದಿಯಾಗಿ ದೇಹದ ಬಗ್ಗೆ ತಿಳಿವಳಿಕೆ ನೀಡುತ್ತಾರೆ. ಸ್ವಚ್ಛತೆಯ ಬಗ್ಗೆಯೂ ಪಾಠ ನಡೆಯುತ್ತದೆ.
ಘೋಟುಲ್‌ನಲ್ಲಿ ಪ್ರೇಮ ಕಾಮಗಳು ಹಸಿವೆ ನಿದ್ರೆಯಂತೆಯೇ ಸಹಜವಾದುದು! ಆದ್ದರಿಂದ ಅಲ್ಲಿ ಯಾವುದೇ ವಿಕೃತಿಗೆ ಎಡೆಯೇ ಇಲ್ಲ..
ಬಗ್ಗೆ ಡಾ.ಕೃಷ್ಣಾನಂದ ಕಾಮತರು "ಘೋಟುಲ್‌ನಲ್ಲಿ ರಾತ್ರಿ ಹೊತ್ತು ಹಿರಿಯ ಮೋತಿಯಾರಿ ಚಾಪೆಯ ಜೋಡಿಗಳನ್ನು ತಿಳಿಸುತ್ತಾಳೆ. ಪ್ರತಿ ದಿನ ಜತೆಗಾರರು ಬದಲಾಗುತ್ತಾರೆ. ಪ್ರತಿ ದಿನದ ಚಾಪೆ ಜೋಡಿಗಳನ್ನು  ಹೆಸರಿಸಿದ ನಂತರ ಸದಸ್ಯರೆಲ್ಲರೂ ಸ್ವತಂತ್ರರು. ಚಿಕ್ಕ ಮಕ್ಕಳ ವಿಷಯದಲ್ಲಿ ಇವರು ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ತಮಗೆ ಸರಿ ಕಂಡವರೊಡನೆ ಮಲಗುತ್ತಾರೆ. ಬಾಲ್ಯದಲ್ಲಿ ಅಣ್ಣ ತಂಗಿಯರಂತೆ ಒಟ್ಟಿಗೆ ಮುದುಡಿಕೊಂಡು ಮಲಗಿದರೆ ಸ್ವಲ್ಪ ಸಮಯದ ನಂತರ ಒಬ್ಬರ ಕಾವಿಗೆ ಇನ್ನೊಬ್ಬರು, ಒಬ್ಬರ ಹೃದಯ ಮಿಡಿತ ಕೇಳಿಸುವಂತೆ ಮಲಗುತ್ತಾರೆ. ಒಂದೇ ಕೋಣೆಯಲ್ಲಿ ಸಹೋದರ ಸಹೋದರಿಯರು ತಮ್ಮ ತಮ್ಮ ಪ್ರಿಯೆ ಪ್ರಿಯತಮರೊಡನೆ ವಿರಮಿಸುವ ಅವಕಾಶ ನೀಡುವ ಸಮಾಜ ವಿಶ್ವದಲ್ಲಿ ಇನ್ನೊಂದು ಇದೆಯೋ ಇಲ್ಲವೋ?" ಎನ್ನುತ್ತಾರೆ.
ಇಲ್ಲಿ ಲೈಂಗಿಕ ಕ್ರಿಯೆ ಗೌಪ್ಯ ಎಂದಾಗಲೀ, ಅಪರಾಧ ಎಂಬ ಭಾವಾಗಲೀ ಇಲ್ಲವೇ ಇಲ್ಲ. ಊಟ ತಿಂಡಿ ನಿದ್ರೆಯಂತೆಯೇ ಸಹಜವಾದುದು. ಇದರಿಂದಾಗಿ ಲೈಂಗಿಕ ತಿಳಿವಳಿಕೆ ಇಲ್ಲದೇ ಇರುವವರಿಗೆ, ಚಿಕ್ಕವರಿಗೆ ಲೈಂಗಿಕ ಶಿಕ್ಷಣ ಸಹಜವಾಗಿಯೇ ದೊರೆಯುತ್ತದೆ.
ಅಕ್ಕ ಪಕ್ಕದಲ್ಲಿ ಪ್ರೇಮ ಕಲಹ, ಪ್ರಣಯ ಕ್ರೀಡೆಗಳಲ್ಲಿ ನಿರತರಾಗಿರುವ ಹಿರಿಯ ಜೋಡಿಗಳನ್ನು ನೋಡಿ ಕಿರಿಯರು ಅದನ್ನು ಅನುಸರಿಸುತ್ತಾರೆ. ಇವರ ಪ್ರಣಯಾವಸ್ಥೆ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಮೋತಿಯಾರಿ (ಮುರಿಯಾ ಕನ್ಯೆ ) ಎಷ್ಟೇ ಚಿಕ್ಕವಳಿದ್ದರೂ ಈ ವಿಷಯದಲ್ಲಿ ಪ್ರಬುದ್ಧಳು. ಚಿಲಕರು ಹಾಗೂ ಮೋತಿಯಾರಿಗಳು ತಮಗೆ ಬಂದ ಅಡಚಣೆ, ಅಡ್ಡಿ ಆತಂಕ ಸಂಶಯಗಳನ್ನುತಮಗಿಂತ ಹಿರಿಯರಿಗೆ ಕೇಳಿ ಪರಿಹಾರ ಪಡೆಯುತ್ತಾರೆ. ಈ ಬಗ್ಗೆ ಯಾವುದೇ ಅಳುಕು ನಾಚಿಕೆ ಇರುವುದಿಲ್ಲ.
ಘೋಟುಲ್‌ನಲ್ಲಿ ಪ್ರೇಮ, ಪ್ರಣಯ ಯುವತಿಯ ಹಕ್ಕು, ಯುವಕನ ಕರ್ತವ್ಯ. ಅಂತೆಯೇ ಪ್ರಚೋದನೆಯಲ್ಲಿ ಆಕೆಯೇ ಮುಂದಾಗುತ್ತಾಳೆ. ರಾತ್ರಿಯ ಚಾಪೆಯ ಜೋಡಿಗಳಲ್ಲಿ ಪರಸ್ಪರ ಸಹಮತ, ಒಪ್ಪಿಗೆ ಇದ್ದರೆ ಮಾತ್ರ ಪ್ರಣಯ. ಬಲಾತ್ಕಾರದ ಪ್ರಶ್ನೆಯೇ ಇರುವುದಿಲ್ಲ. ಹಾಗೆಂದು ಯಾರೂ ಪಕ್ಷಪಾತ ಮಾಡುವಂತಿಲ್ಲ. ಹಾಗೆ ಮಾಡಿದರೆ ಅವರಿಗೆ ಶಿಕ್ಷೆ ಕೂಡ ಇರುತ್ತದೆ.
"ಚಿಲಕ ಮೋತಿಯಾರಿಗಳು ಪ್ರೇಮ ಬಂಧದಲ್ಲಿ ಸಿಲುಕದಂತೆ ಕಟ್ಟು ಪಾಡು ಇದ್ದರೂ ಆಗೊಮ್ಮೆ ಈಗೊಮ್ಮೆ ಇಂಥ ಪ್ರೇಮಿಗಳ ಉದಾಹರಣೆ ಸಿಗುತ್ತವೆ" ಎಂದು ಕೃಷ್ಣಾನಂದ ಕಾಮತರು ಹೇಳುತ್ತಾರೆ. ಈ ಬಗ್ಗೆ ಒಂದು ಹಾಡು ಹಾಗೂ ಕಥೆ ಅಲ್ಲಿ ಜನಪ್ರಿಯವಾಗಿದೆ:
"ಒಬ್ಬ ಬಡ ಚಿಲಕ (ಮುರಿಯಾ ಯುವಕ ) ಊರ ಕೊತ್ವಾಲನ ಮಗಳನ್ನು ಪ್ರೀತಿಸುತ್ತಾನೆ. ಆದರೆ ಕೊತ್ವಾಲ ಕೇಳಿದಷ್ಟು ವಧು ದಕ್ಷಿಣೆ ಕೊಡಲು ಸಾಧ್ಯವಾಗುವುದಿಲ್ಲ(ಮುರಿಯಾಗಳಲ್ಲಿ ವಧು ದಕ್ಷಿಣೆ ಪದ್ಧತಿ ಜಾರಿಯಲ್ಲಿದೆ ). ಅವರು ಊರು ಬಿಟ್ಟು ಓಡಿ ಹೋಗಿ ಕಾಡು ಮೇಡು ಅಲೆಯುತ್ತಾರೆ. ಕೊನೆಗೆ ಮೋತಿಯಾರಿ ಹುಲಿ ಬಾಯಿಗೆ ಸಿಕ್ಕು ಸಾಯುತ್ತಾಳೆ. ವಿರಹ ತಾಳಲಾಗದೆ ಚಿಲಕನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ."
ಆದರ್ಶ ಪ್ರೇಮಿಗಳ ಕಥೆ ಘೋಟುಲ್‌ನಲ್ಲಿ ಎಲ್ಲರಿಗೂ ಬಹಳ ಪ್ರಿಯವಾದುದಾಗಿದೆ. ಮೂಲತಃ ಈ ಹಾಡು ಹಲ್ಬಿ ಭಾಷೆಯಲ್ಲಿದ್ದು ಅದರ ಕನ್ನಡ ಅನುವಾದವನ್ನು ಕೃಷ್ಣಾನಂದ ಕಾಮತರು ಹೀಗೆ ಮಾಡಿದ್ದಾರೆ:
ದಿನವೆಲ್ಲ ಮೈಮುರಿದು ದುಡಿದಿಹೆನು ಪ್ರಿಯೇ, ಬಳಲಿ ಬೆಂಡಾಗಿ ಮರಳಿ ಬಂದಿಹೆನು/ ಮಿಂದುಂಡು ಒರಗಿರಲು ನಿನ್ನ ನೆನಪಾಗಿಹುದು, ಊರವರ ಕಣ್ಣು ತಪ್ಪಿಸಿ ಕಾಡ ಹಾದಿಯ ತುಳಿದು/ ಕೆರೆಯ ದಂಡೆಯಿಂದ ಪೊದೆಯ ಸಂಧಿಯಿಂದ, ಕತ್ತಲಲ್ಲಿ ಜಾರುತ್ತ ನುಸುಳುತ್ತ ನಿನಗಾಗಿ ಅಲೆದೆ/ ಕುಣಿಯಲಂಗಣವಿಲ್ಲ, ಕೊಳಲು-ಡೋಲುಗಳಿಲ್ಲ/  ಜೊತೆಯ ಹಾಡಿಲ್ಲ, ನೆರೆಕರೆಯವರು ಮಲಗಿಹರು/ ಒಟ್ಟಿಗೆ ಒರಗಿ ರಾತ್ರಿಯಾದರೂ ಕಳೆಯೋಣ/ ಮಂದ ಮಾರುತ, ಹೂಗಳರಳಿಹವು, ಭೂಮಾತೆಯಿಹಳು, ನೀಲ ಗಗನದಡಿ ಮೈ ಮರೆಯೋಣ ಬಾ."
ಇದೇ ರೀತಿ ತನ್ನ ಇನಿಯಳನ್ನು ನೋಡಲು ದುರ್ಗಮವಾದ ಕಾಡಿನಲ್ಲಿ ಬೆಟ್ಟ ಹತ್ತಿ ಇಳಿದು ಬರುವ ಪ್ರಿಯಕರನ ಕುರಿತಾಗಿ "ಸಣ್ಣಲ್ಲ ಕಾಡುಡು ಬಣ್ಣಲ್ಲ ಬಲಿಕೇಡು ಈ ಎಂಚ ಜತ್ತೇಯ ಜತ್ತೆ ಲಿಂಗ" (ಸಣ್ಣದಲ್ಲದ ಕಾಡಿನಲ್ಲಿ ಕಡಿದಾದ ಬೆಟ್ಟದಲ್ಲಿ ನೀನು ಹೇಗೆ ಇಳಿದು ಬಂದೆ ಜತ್ತೆ ಲಿಂಗ ) ಎಂಬ ಒಂದು ತುಳು ಜಾನಪದ ಹಾಡು  ಪ್ರಚಲಿತವಿದೆ.
ಘೋಟುಲ್‌ನಲ್ಲಿ ಮೋತಿಯಾರಿಗಳನ್ನು ಕೆರಳಿಸಲು ಚಿಲಕರು ಇಂಥ ಹಾಡುಗಳನ್ನು ರಾಗವಾಗಿ ದೈನ್ಯತೆಯಿಂದ ಹಾಡುತ್ತಾರೆ. ಪ್ರತಿಯಾಗಿ ಹುಡುಗಿಯರು ಗುದ್ದುತ್ತಾರೆ, ಚಿವುಟುತ್ತಾರೆ. ಆದರೆ ಇದಾವುದನ್ನೂ ಲೆಕ್ಕಿಸದೆ ಚಿಲಕರು ಹಾಡುತ್ತಲೇ ಇರುತ್ತಾರೆ.
ಕಿಶೋರಾವಸ್ಥೆಯನ್ನು ದಾಟಿ ಇವರು ವಿವಾಹಿತರಾಗಿ ಗೃಹಸ್ಥರಾದ ಮೇಲೆ ಅನ್ಯ ಸ್ತ್ರೀ ಪುರುಷ ಮಿಲನ, ಪ್ರೀತಿ- ಪ್ರೇಮ ನಿಷಿದ್ಧವಾಗಿದೆ. ಏಕ ಪತ್ನಿ ಪದ್ಧತಿ ಇವರಲ್ಲಿ ಜಾರಿಯಲ್ಲಿದೆ. ಈ ಬಗ್ಗೆ ಬಿಗಿಯಾದ ನೀತಿ ಸಂಹಿತೆ ಜಾರಿಯಲ್ಲಿದೆ. "ಅನ್ಯ ಸ್ತ್ರೀ ಮೇಲೆ ಕಣ್ಣು ಹಾಕಿದ ಗಂಡನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ. ಹಾಗಾಗಿ ಯಾರೂ ಪರ ಸ್ತ್ರೀಗೆ ತೊಂದರೆ ಕೊಡುವ ಪ್ರಶ್ನೆಯೇ ಇಲ್ಲಿರುವುದಿಲ್ಲ" ಎಂದು ಪ್ರೊ. ಉಮಾ ರಾಮ್ ಹೇಳುತ್ತಾರೆ.
ಬಸ್ತರ್ ಜನಪದರಲ್ಲಿ ಬಿಟ್ಟರೆ ಬೇರೆಲ್ಲೂ ಇಷ್ಟು ಸಹಜವಾದ ಲೈಂಗಿಕ ಶಿಕ್ಷಣದ ಮಾದರಿ ಕಾಣುವುದಿಲ್ಲ.
ಇದು ಬಿಟ್ಟರೆ ಕನ್ನಡ ತುಳು ಜನಪದ ಸಾಹಿತ್ಯ ಸೇರಿದಂತೆ ಎಲ್ಲ ಜನ ಪದ ಸಾಹಿತ್ಯದಲ್ಲಿ, ಹೆಣ್ಣು ಗಂಡಿನ ಪ್ರೇಮ, ಗಂಡಿನ ದೌರ್ಜನ್ಯವನ್ನು ಮೆಟ್ಟಿ ನಿಂತ ಹೆಣ್ಣಿನ ಜಾಣ್ಮೆ ಕುರಿತು ಅನೇಕ ಹಾಡು ಕಥೆಗಳು ಲಭ್ಯವಿವೆ.
ನೀರು ತರಲು ಹೋದಾಗ ಅಡ್ಡಗಟ್ಟಿದ ದೇರೆ ಮುಂಡೋರಿಯನ್ನು ಬಡಿದು ಓಡಿಸುವ ಬಂಗಾರಲ್ವಾಗ ಎಂಬ ಹೆಣ್ಣು ಮಗಳ ಸಾಹಸದ ಬಗ್ಗೆ ಒಂದು ತುಳು ಜನಪದ ಹಾಡು ಇದೆ. ತನ್ನನ್ನು ಕಾಮಿಸಿ ಮದುವೆಯಾಗುವಂತೆ ಕಾಡಿದ ಗಂಡನ್ನು ಉಪಾಯದಿಂದ ಕೊಲ್ಲುವ ರಂಗಮೆ, ನೇರವಾಗಿ ಕುದುರೆ ಏರಿ ಯುದ್ಧಮಾಡಿ ಕೊಲ್ಲುವ ಎಣ್ಮೂರು ಗುತ್ತಿನ ಬಾಲೆ ದೈಯಕ್ಕು, ತನ್ನನ್ನು ವಶಪಡಿಸಿಕೊಳ್ಳುವ ಸಲುವಾಗಿಯೇ ತನ್ನ ಗಂಡ ಪರವ ಮೈಂದನನ್ನು ಕೊಂದ ಅರಸು ಬೊಟ್ಟಿಪ್ಪಾಡಿ ಬಲ್ಲಾಳನಿಗೆ ಒಲಿದಂತೆ ನಟಿಸಿ ಅವನ ಸರ್ವ ಸಂಪತ್ತನ್ನೂ ಗಂಡನ ಚಿತೆಗೆ ಸುರಿವಂತೆ ಮಾಡಿ ತಾನೂ ಸತ್ತು ಪ್ರತೀಕಾರ ತೋರುವ ಪರತಿ ಮಂಗನೆ ಕುರಿತು ತುಳು ಜನಪದ ಪಾಡ್ದನಗಳು ರಚಿತವಾಗಿವೆ.
ಅಣ್ಣನೂ ಕೂಡ ತಂಗಿಯನ್ನು ಕಾಮಿಸಬಹುದು ಎಂಬ ಎಚ್ಚರಿಕೆ ನೀಡುವ ಅಣ್ಣ ತಂಗಿ ಕುಚು ಕುಚು, ಬಾಲೆ ಮೀನು ಮುಗುಡು ಮೀನು, ಹರಿವೆ ಬಸಳೆಗಳ ಕಥೆ ಕನ್ನಡ ತುಳು ಜನಪದ ಹಾಡುಗಳ ರೂಪದಲ್ಲಿ ಪ್ರಚಲಿತವಿವೆ. ಬಸ್ತರ್ ಬುಡಕಟ್ಟು ಜನಾಂಗದ ಘೋಟುಲ್ ಮಾದರಿಯ ವಿವಾಹ ಪೂರ್ವ ಮುಕ್ತ ಲೈಂಗಿಕತೆ ಪ್ರಸ್ತುತ ಭಾರತೀಯ ಶಿಷ್ಟ ಸಂಸ್ಕೃತಿಗೆ ಒಲ್ಲದ, ನಿಷಿದ್ಧವಾದ ವಿಚಾರವಾಗಿದೆ. ಆದರೆ ಇವರಲ್ಲಿನ ಲೈಂಗಿಕ ಶಿಕ್ಷಣದ  ಮಾದರಿಯನ್ನು ಸ್ವೀಕರಿಸಬಹುದಾಗಿದೆ.
ಇಂದು ಹದಿ ಹರೆಯದವರಿಗೆ ದೇಹದ ಅಂಗಗಳ ರಚನೆ, ವಯಸ್ಸಿಗನುಗುಣವಾಗಿ ಉಂಟಾಗುವ ಬದಲಾವಣೆ, ಭಾವನೆಗಳ ಏರು ಪೇರು, ಸ್ವಚ್ಛತೆಯ ಕುರಿತು ತಿಳಿವಳಿಕೆ ಮೂಡಬೇಕಿದೆ. ಲೈಂಗಿಕ ವಿಚಾರಗಳ ಕುರಿತು ತಮ್ಮ ಆಸಕ್ತಿ ಕುತೂಹಲಗಳನ್ನು ತಣಿಸುವ, ಸಂಶಯಗಳನ್ನು ಹಿರಿಯರಲ್ಲಿ ಕೇಳಿ ಪರಿಹರಿಸಿಕೊಳ್ಳುವ, ಮನವು ವಿಕೃತವಾಗದಂತೆ ತಡೆಯುವ, ಪರಿಪಕ್ವಗೊಳಿಸುವ ಮಾದರಿಯ ಸಹಜ ಶಿಕ್ಷಣದ ಅಗತ್ಯವಂತೂ ಖಂಡಿತಾ ಇದೆ.
-ಡಾ.ಲಕ್ಷ್ಮೀ ಜಿ. ಪ್ರಸಾದ, ಉಪನ್ಯಾಸಕರು