Wednesday 28 June 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ಭೂತಗಳು 401-402ಕಲಿಯಾಟ ಅಜ್ಜಪ್ಪ,ಕಾಟಾಳ ಬೊಲ್ತು,

ಕೊಡವರು ಕೂಡ ಅನೇಕ ಭೂತಗಳ ಆರಾಧನೆಯನ್ನು ಮಾಡುತ್ತಾರೆ.ಕೊಡವರು ಪೊನ್ನಂಗಾಲತಮ್ಮೆ,ಕಲಿಯಾಟ ಅಜ್ಜಪ್ಪ,ಕಾಟಾಳ ಬೊಲ್ತು ಮೊದಲಾದ ದೈವಗಳಿಗೆ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.ದುರಂತ ಮತ್ತು ದೈವತ್ವ ಭೂತಾರಾಧನೆಯಲ್ಲಿ ಕಂಡುಬರುವ ವಿಶಿಷ್ಟ ವಿದ್ಯಮಾನ.
ಕಲಿಯಾಟ ಅಜ್ಜಪ್ಪ ಕೂಡ ಮಾನವ ಮೂಲದ ದೈವವಾಗಿದ್ದು ದುರಂತವನ್ನಪ್ಪ ನಂತರ ದೈವವಾಗಿ ಆರಾಧನೆ ಪಡೆಯುವ ಶಕ್ತಿಯಾಗಿದೆ.
ಈತನ ಮೂಲ ಹೆಸರು ಕಲಿಯಾಟ ಪೊನ್ನಪ್ಪ. ಈತ ಕೊಡವರ ಆರಾಧ್ಯ ದೈವ ಇಗ್ಗುತಪ್ಪನ ಅನುಗ್ರಹದಿಂದ ಜನ್ಮ ಪಡೆದವನು.ಈತನ ತಾಯಿಗೆ ಕನಸಿನಲ್ಲಿ ಇಗ್ಗುತಪ್ಪ ಕಾಣಿಸಿಕೊಂಡು ದೈವಿಕ ಶಕ್ತಿ ಇರುವ ಮಗು ಜನಿಸುತ್ತದೆ ಎಂದು ಅಭಯ ನೀಡಿತೆಂದು ಕಲಿಯಾಟ ಅಜ್ಜಪ್ಪ ಭೂತದ ಹಾಡಿನಲ್ಲಿ ಹೇಳಿದೆ.
ಕಲಿಯಾಟ ಪೊನ್ನಪ್ಪ ಐದು ವರ್ಷ ದ ಮಗುವಾಗಿದ್ದಾಗಲೇ ಹರೆಯದ ವಯಸ್ಸಿನ ಬೆಳವಣಿಗೆ ಹೊಂದಿದ್ದನು ಹತ್ತು ವರ್ಷ ವಾಗುವಾಗುವಷ್ಟರಲ್ಲಿ ಪೂರ್ಣ ಬೆಳವಣಿಗೆ ಹೊಂದುತ್ತಾನೆ.ಅವನು ಹತ್ತು ವಿಶಿಷ್ಟ ಶಕ್ತಿಗಳನ್ನು ಒಲಿಸಿಕೊಂಡಿದ್ದು ಮಾಂತ್ರಿಕ ಶಕ್ತಿಯನ್ನು ಪಡೆದಿದ್ದನು.ಅವನಂತೆಯೇ ಮಾಂತ್ರಿ ಶಕ್ತಿ ಹೊಂದಿದ್ದ ಕಾಟಾಳ ಬೊಲ್ತು ಎಂಬ ಯುವಕನ ಸ್ನೇಹ ಹೊಂದಿದ್ದನು.ಇವರಿಬ್ಬರು ಎಲ್ಲೆಡೆ ಸಂಚರಿಸಿ ತಮ್ಮ ಶಕ್ತಿಯಿಂದ ಜನರ ಮೆಚ್ಚುಗೆ ಪಡೆದಿದ್ದರು.ಇದು ಕಲಿಯಾಟ ಪೊನ್ನಪ್ಪ ನ ತಂದೆಗೆ ಇಷ್ಟವಾಗಲಿಲ್ಲ ಹಾಗಾಗಿ ಇವರು ಮನೆ ಬಿಟ್ಟು ಹೊರಟರು.ಬೇರಡ ಬೇರೆ ಊರು ಸುತ್ತಿ ಕೊನೆಗೆ ಕಾವೇರಿಯಮ್ಮನ ಮಡಿಲಾದ ಕೊಡಗಿನಲ್ಲಿ ನೆಲೆಸುತ್ತಾರೆ.ಒಬ್ಬ ತುಂಡರಸ ಇವರ ಸ್ನೇಹವನ್ನು ಬಯಸಿ ಚಿನ್ನದ ಕಡಗವನ್ನು ಕಳುಹಿಸಿ ಕೊಡುತ್ತಾನೆ. ಕಲಿಯಾಟ ಅಜ್ಜಪ್ಪ ಅವನ ಸ್ನೇಹವನ್ನು ಸ್ವೀಕರಿಸದೆ ಕಡಗವನ್ನು ಹಿಂದೆ ಕಳುಹಿಸುತ್ತಾನೆ. ಇದರಿಂದ ಕೋಪಗೊಂಡ ಅರಸ ತನ್ನ ಸೈನಿಕರ ಮೂಲಕ ಇವರ ಮೇಲೆ ಆಕ್ರಮಣ ಮಾಡಿತ್ತಾನೆ.ಆಗ ಕೊಡಗಿನ ಹಾಲೇರಿ ವಂಶದ ಅರಸ ಕುಟ್ಟಪಾಲೆ ಮಾಯಿಲ ಎಂಬ ಸೇನಾನಾಯಕನ ನೇತೃತ್ವದಲ್ಲಿ ಕಲಿಯಾಟ ಪೊನ್ನಪ್ಪ ನಿಗೆ ಸಹಾಯ ಮಾಡುತ್ತಾನೆ ಜೊತೆಗೆ ತಮ್ಮ ಮಾಂತ್ರಿ ಶಕ್ತಿಯಿಂದ ಇವರು ಪಾರಾಗುತ್ತಾರೆ.
ಮುಂದೆ ಒಂದು ದಿನ ಕುಟ್ಟಿರಿಂಜೆತ್ತಿ ಮೂಲ/ ತರವಾಡು ಮನೆಗೆ ಕಲಿಯಾಟ ಪೊನ್ನಪ್ಪ ಬರುತ್ತಾನೆ. ಆಗ ಆ ತುಂಡರಸ ಕಿಕಾಂಡ ಮನೆಯ ವೃದ್ದ ಮಹಿಳೆಗೆ ಹೇಳಿ ಕೊಟ್ಟು ವಿಷಪ್ರಾಶನ ಮಾಡಿಸುತ್ತಾನೆ.ಇದೇ ಸಮಯದಲ್ಲಿ ಆ ಮಹಿಳೆ ತುಂಡರಸನ ಸೈನಿಕರಿಗೆ ಮಾಹಿತಿ ಕೊಡುತ್ತಾಳೆ. ಅವರು ಪೊನ್ನಪ್ಪ ನ ತಲೆ ಕಡಿಯುತ್ತಾರೆ.ಇದು ತಿಳಿದ ಆತನ ಒಡನಾಡಿ ಕಾಟಾಳ ಬೊಲ್ತು ಕೂಡ ಪ್ರಾಣ ತ್ಯಜಿಸುತ್ತಾನೆ.ಇವರಿಬ್ಬರೂ ದೈವಿಕ ಶಕ್ತಿ ಪಡೆದು ಭೂತಗಳಾಗುತ್ತಾರೆ .ಅ ತುಂಡರಸ ಇವರನ್ನು ಮತ್ರವಾದಿಗಳ ಸಹಾಯದಿಂದ ಒಂದು ಕಲ್ಲಿನಲ್ಲಿ ಕಟ್ಟಿ ಹಾಕುತ್ತಾರೆ ಆಗ ಕುಟ್ಟ ಪಾಲೆ ಮಾಯಿಲ ಅವರನ್ನು ದಿಗ್ಭಂಧನದಿಂದ ಬಿಡಿಸುತ್ತಾನೆ.ಮುಂದೆ ಪೊನ್ನಪ್ಪ ಕಲಿಯಾಟ ಅಜ್ಜಪ್ಪ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ ಅವನ ಜೊತೆಗೆ ಕಾಟಾಳ ಬೊಲ್ತು ವಿಗೂ ಕೋಲ ನೀಡಿ ಆರಾಧನೆ ಮಾಡುತ್ತಾರೆ.© ಡಾ ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಮೂಲ
 ,ವಿಜಯ ಕರ್ನಾಟಕ ಕೊಡಗು ಎಡಿಷನ್ ನಲ್ಲಿ ಪ್ರಕಟವಾದ ಕೊಡವ ಭಾಷೆಯ ಬರಹ ಮತ್ತು ಸ್ನೇಹಿತೆ ವಿದ್ಯಾ ಬಾಯ್ದೆರೆಯಾಗಿ ನೀಡಿದ ಮಾಹಿತಿ

No comments:

Post a Comment