Thursday 28 September 2023

ಜನಾನುರಾಗಿ ಕಾರಣಿಕದ ದೈವ ಕೋಟೆದ ಬಬ್ಬು ಸ್ವಾಮಿ( ಕೋರ್ದಬ್ಬು ) - ಡಾ.ಲಕ್ಷ್ಮೀ ಜಿ ಪ್ರಸಾದ್

 

                                      ಚಿತ್ರ ಕೃಪೆ -ಶ್ರೀ ರಾಜನ್ ಬಬ್ಬು ಸ್ವಾಮಿ ದೈವಸ್ಥಾನ
ಕೋಟೆದ ಬಬ್ಬು ಸ್ವಾಮಿ ನಮ್ಮ ಊರು ಕೊಳ್ಯೂರಿನಲ್ಲಿ  ಕೊಡಂಗೆತ್ತಾಯನೆಂದೇ ಪ್ರಸಿದ್ದವಾದ ಭೂತ .ಬಹಳದ ಕಾರಣಿಕದ ದೈವತ 
 ಕೊಡಂಗೆ ಬನ್ನಾರರ ಸಾಕು ಮಗ ಕೋಟೆದ ಬಬ್ಬು .ದೈವವಾಗಿ ನೆಲೆಗೊಂಡದ್ದು ಕೂಡ ಕೊಡಂಗೆ ಯಲ್ಲಿ.ಆದ್ದರಿಂದ ಈ  ಭೂತ ಕೊಡಂಗೆತ್ತಾಯನೆಂದೇ ಕರೆಯಲ್ಪಟ್ಟಿದೆ .ಈ  ದೈವ ಕೋಳ್ಯೂರಿನಲ್ಲಿ  ನೆಲೆ ನಿಂತ ಜಾಗವನ್ನು ಕೊಡಂಗೆ ಎಂದು ಕರೆಯುತ್ತಾರೆ .ಕೊಡಂಗೆತ್ತಾಯ ಭೂತದ ಬಗ್ಗೆ ಒಂದು ಐತಿಹ್ಯ ನಮ್ಮೂರಿನಲ್ಲಿ ಪ್ರಚಲಿತವಿದೆ .ಸುಮಾರು ೯೦-೯೫ ವರ್ಷಗಳ ಹಿಂದೆ ಈ ಘಟನೆ ನಡೆಯಿತು ಎನ್ನುತ್ತಾರೆ ನಮ್ಮ ಊರಿನ ಹಿರಿಯರು

ಕೊಡಂಗೆ ದೊಡ್ಡ ಪಟೇಲರು  ಕೋಟೆದ ಬಬ್ಬು ಭೂತದ ಅನನ್ಯ ಭಕ್ತರು .ಅವರ ಹಿರಿಯರ ಕಾಲದ ಹಳೆಯ ಮನೆಯ ಗೋಡೆ ದೊಡ್ಡದಾಗಿ ಬಿರುಕು ಬಿಟ್ಟಿತ್ತು ಜೊತೆಗೆ ಜೋರು ಮಳೆ ಕೂಡ ಸುರಿಯುತ್ತಿತ್ತು .ಹಗಲು ಹೊತ್ತಿನಲ್ಲೇ ಜೋರಾಗಿ ಸುರಿಯುತ್ತಿರುವ ಮಳೆ ರಾತ್ರಿ ಹೊತ್ತಿಗೆ ಇನ್ನು ಜೋರಾಗುವ ಸಂಭವ ಇತ್ತು .ಇವರ ಮನೆ ಹಿಂಭಾಗದ ಗುಡ್ಡೆ  ಕುಸಿದು ಬೀಳುವ ಸಾಧ್ಯತೆಯನ್ನು ಮನಗಂಡ ಬಂಧುಗಳು ಹಿತೈಷಿಗಳು ಮನೆ ಬಿಟ್ಟು ಹೊರಗೆ ಬರುವಂತೆ ಹೇಳಿದರು .ಆಗ ದೊಡ್ಡ ಪಟೇಲರು ಮನೆ ಜರಿದು ಬೀಳುವುದಾದರೆ ನನಗೆ ಕೊಡಂಗೆತ್ತಾಯ (ಭೂತ )ಹೇಳ ಬಹುದು ಎಂದು ದೈವದ ಮೇಲಿನ ದೃಢ ನಂಬಿಕೆಯಿಂದ ಮನೆಯೊಳಗೇ ರಾತ್ರಿ ಮಲಗಿದರು .ರಾತ್ರಿ ಜೋರಾದ ಮಳೆಯಲ್ಲಿ ಯಾರೋ ಮನೆ ಜರಿಯುತ್ತಿದೆ ಮನೆಯಿಂದ ಹೊರಗೆ ಬನ್ನಿ ಎಂದು ಕರೆಯುತ್ತಿರುವುದು ಕೇಳಿ ಪಟೇಲರ ಮಗಳು ಕಿಟಕಿ ಹತ್ತಿರ ಬಂದು ಇಣುಕಿ ನೋಡುವಷ್ಟರಲ್ಲಿ ಮನೆ ಕುಸಿದು ಬೀಳುತ್ತದೆ .ವಿಧಿಯನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ !ದೊಡ್ಡ ಪಟೇಲರುಅವರ  ಮಗತಂದೆ,ಹೀಗೆ ಎಲ್ಲರು ಮರಣವನ್ನಪ್ಪುತ್ತಾರೆ .ಮನೆಯ ಒಳ ಸುತ್ತಿನಲ್ಲಿ ಮಲಗಿದ್ದ ಅವರಿಗೆ  ಮಳೆಯ ಸ್  ಸದ್ದಿಗೆ ತಮ್ಮ  ಇಷ್ಟ ದೈವ ಹೊರಗೆ ಬರುವಂತೆ ಕರೆದು ಹೇಳಿದ್ದು ಕೇಳಿಸಿರಲಿಲ್ಲ ವಿಧಿಯನ್ನು ಯಾರಿಗೂ ಮೀರಲು ಸಾಧ್ಯವಿಲ್ಲ ಆದರೂ ಇದನ್ನು !ಕೇಳಿಸಿಕೊಂಡು ಕಿಟಕಿ ಬದಿಗೆ ಬಂದ ಮಗಳಿಗೆ ಕಿಟಕಿಯಿಂದಾಗಿ ಉಸಿರಾಡಲು ಗಾಳಿ ಸಿಕ್ಕಿ ಪ್ರಾಣಾಪಾಯದಿಂದ ಪಾರಾಗಿದ್ದಳು .ಕುಸಿದು ಬಿದ್ದ ಮನೆಯೊಳಗಿನಿಂದ ಹಕ್ಕಿಯ ಎಳೆಯ ಧ್ವನಿಯಂತೆ ಕೇಳುತ್ತಿದ್ದ ಅವಳ ಧ್ವನಿಯನ್ನು ಕೇಳಿದ ಊರ ಜನರು ಅವಳನ್ನು ರಕ್ಷಿಸಿದ್ದರು .ಕಾಲನನ್ನು ಎದುರಿಸಲು ಯಾರಿಂದಲೂ ಅಸಾಧ್ಯ! ಆದರೆ ತನ್ನ ಮೇಲೆ ನಂಬಿಕೆ ಇಟ್ಟು ನಿಶ್ಚಿಂತೆಯಿಂದ ಮಲಗಿದ್ದ ಪಟೇಲರನ್ನು ಕರೆದು ಮನೆ ಕುಸಿಯುತ್ತಿ ರುವ ಬಗ್ಗೆ ಕೂಗಿ ಹೇಳಿ ಪಟೇಲರ ಒಬ್ಬ ಮಗಳನ್ನಾದರೂ ಬದುಕಿಸಿ ಕೊಟ್ಟು ತನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿ ಕೊಂಡಿತ್ತು  ಕೊಡಂಗೆತ್ತಾಯ ಭೂತ !
ಇಲ್ಲಿ  ಕೊಡಂಗೆತ್ತಾಯ ಮಲರಾಯನ ರೂಪದಲ್ಲಿ ನೆಲೆಸಿದ ದೈವ ಎನ್ನುತ್ತಾರೆ ಇಲ್ಲಿ ಸುತ್ತ ಮುತ್ತಲಿನ  ಪರಿಸರದಲ್ಲಿ ಮಲರಾಯನ ಆರಾಧನೆ ಇದೆಮಲರಾಯ ಮತ್ತು ಕೋಟೆದ ಬಬ್ಬು ಬೇರೆ ಬೇರೆ ದೈವಗಳು

ಕೋಟೆದ ಬಬ್ಬು ದೈವದ ಕುರಿತು  ಮೇಳವೊಂದು ಯಕ್ಷಗಾನ ಆಟ  ಪ್ರದರ್ಶಿಸಿತ್ತು .ಆಗ ನಾನಿನ್ನೂ ೫-೬ ವರ್ಷ ಹುಡುಗಿ .ನಾನು ಆ ಯಕ್ಷಗಾನ ವನ್ನು ನೋಡಿದ್ದೆ ಕೋರ್ದಬ್ಬು ಕಾಳಗ ಎಂದು ಆ ಪ್ರಸಂಗದ ಹೆಸರು .ಪೂರ್ತಿ ಆಟದ ಕಥೆ ನನಗೆ ಈಗ ನೆನಪಿಲ್ಲ .ಸಾಮಂತರಸನ ಸಾಕು ಮಗ ಬಬ್ಬು .ಅವರ ಮನೆ ಅಂಗಳದಲ್ಲಿ ಒಣಗಲು ಹರಡಿದ ಬತ್ತದ ಕಾಳುಗಳನ್ನು ಕೋಳಿಗಳು ಬಂದು ತಿನ್ನುತ್ತಿದ್ದವು .ಆದ್ದರಿಂದ ಬತ್ತವನ್ನು ಕಾವಲು ಕಾಯುವ ಕೆಲಸವನ್ನು ಬಬ್ಬುಗೆ ನೀಡಿದರು .ಚಿಕ್ಕಂದಿನಲ್ಲೇ ಮಹಿಮೆಯನ್ನು ಹೊಂದಿದ್ದ ಆತ ಬತ್ತ ತಿನ್ನಲು ಬಂದ ಕೋಳಿಗಳ ಮೇಲೆ ಮಂತ್ರದ ನೀರು ಎರಚಿ ಸಾಯಿಸುತ್ತಾನೆ .ಆಗ ಕೋಳಿಗಳ ಯಜಮಾನ ಒಡತಿಗೆ ದೂರು ಕೊಡುತ್ತಾನೆ  ಆಗ ಬಬ್ಬು ಮತ್ತೆ ಮಂತ್ರದ ನೀರೆರಚಿ ಕೋಳಿಗಳನ್ನು ಬದುಕಿಸುತ್ತಾನೆ .ಹೀಗೆ ಆತ ಕೋರಿದ ಬಬ್ಬು >ಕೋರ್ದಬ್ಬು ಎಂದು ಪ್ರಸಿದ್ದಿ ಹೊಂದುತ್ತಾನೆ .

ಮುಂದೆ ನಾನು ಸಂಶೋಧನಾ ಕ್ಷೇತ್ರಕ್ಕೆ ಬಂದಾಗ ಕೋಟೆದ ಬಬ್ಬು ದೈವದ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ದೊರೆಯಿತು    

ಕಂಬಳಕೋರಿಯಂದು   Éಲವೆಡೆ ಬಬ್ಬುಸ್ವಾಮಿಗೆ ಆರಾಧನೆ ಇರುತ್ತದೆ. ಕಚ್ಚೂರಿನ ಬೀಡಿನಲ್ಲಿ ಕೊಡಂಗೆ ಬನ್ನಾರರು ಆಳುತ್ತಿದ್ದ ಕಾಲದಲ್ಲಿ ಅವರಿಗೆ ಗದ್ದೆಯ ಬದಿಯ ದೂರದ ಗುಡಿಸಲಿನಲ್ಲಿ ಒಂದು ಮಗು ಅಳುವ ಧ್ವನಿ ಕೇಳಿಸುತ್ತದೆ ಅವರು ಹೋಗಿ ನೋಡುವಾಗ ಮಗುವಿನ ತಾಯಿ ಮರಣಿಸಿರುತ್ತಾಳೆ 

ತಾಯಿಯ ದೇಹದ ಮೇಲೆ ಬಿದ್ದು   ಮಗು ಅಳುತ್ತಿರುತ್ತದೆ. ಸಂತಾನವಿಲ್ಲದೆ ದುಕ್ಕಿ ಸುತ್ತಿದ್ದ  ಬನ್ನಾರರು ಮಗುವನ್ನು ಎತ್ತಿಕೊಂಡು ಬಂದು ಮಡದಿ ಸಿರಿಗೊಂಡೆ ಉಳ್ಳಾಲ್ತಿಗೆ ನೀಡುತ್ತಾರೆ. 

ಆ ಮಗುವಿಗೆ ಕಚ್ಚೂರ ಮಾಲ್ದಿ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕುತ್ತಾರೆ. ಅವಳು ದೊಡ್ಡವಳಾದಾಗ ಅವಳ ಜಾತಿ ಕಟ್ಟಿನಂತೆ ಮಂಡಲ ಬರೆದುಕಲಶ ಇಟ್ಟು ನೀರೆರೆದು ಶುದ್ಧ ಮಾಡುತ್ತಾರೆ. ನಂತರ ಒಡತಿ ಸಿರಿಗೊಂಡೆ ಉಳ್ಳಾಲ್ತಿ ಮುಟ್ಟಾಗುತ್ತಾಳೆ. ನಾಲ್ಕನೆಯ ದಿನ ಶುದ್ಧಕ್ಕಾಗಿ ಮಡಿವಾಳ್ತಿಯಲ್ಲಿ ಹೋಗಿ ಮೈಲಿಗೆ ಕರಿಯ ಹಾಗು ಶುದ್ಧ ಕರಿಯದಲ್ಲಿ ಮಿಂದು ಶುದ್ಧರಾಗುತ್ತಾರೆ. 
ಅವರು ತಲೆಗೂದಲನ್ನು ಕೊಡಹಿದಾಗಒಂದು ಹನಿ ನೀರು ಕಚ್ಚೂರ ಮಾಲ್ದಿಯ ಬಲ ಅಳ್ಳೆಗೆ ಬೀಳುತ್ತದೆ. ಆ ಸಮಯದಲ್ಲಿ ಬಾಲೆ ಕಚ್ಚೂರ ಮಾಲ್ದಿಗೆ ಸತ್ಯದ ಬಸಿರು ಬರುತ್ತದೆ. 

ಆಗ ಜನರು ಬನ್ನಾರ ಮೇಲೆ ಸಂಶಯಪಡುತ್ತಾರೆ. ಆಗ ಬಾಲೆ ಕಚ್ಚೂರ ಮಾಲ್ದಿ ಓ ಉಳ್ಳಾಯರೆ ನಾನು ನಿಮ್ಮ ನಂಬಿಕೆಯನ್ನು ಹಾಳು ಮಾಡಿಲ್ಲ. ನಾನು ಆಗಸಕ್ಕೆ ಒಡಲುಭೂಮಿಗೆ ಬೆನ್ನು ಕೊಟ್ಟಿಲ್ಲ” ಎಂದು ಹೇಳುತ್ತಾಳೆ.

 ನ್ಯಾಯ ಕಟ್ಟೆಗೆ ಬಂದು ಕಚ್ಚೂರ ಮಾಲ್ದಿ ಸತ್ಯ ಪ್ರಮಾಣ ಮಾಡಬೇಕು ಎಂದು ಪಂಚಾಯತಿ ಕಟ್ಟೆಯಲ್ಲಿ ತಿಳಿಸುತ್ತಾರೆ. ನ್ಯಾಯದ ಕಟ್ಟೆಗೆ ಬನ್ನಾರರು ಹಾಗೂ ಬಾಲೆ ಕಚ್ಚೂರ ಮಾಲ್ದಿ ಬರುವಾಗ ಜನ ವ್ಯಂಗ್ಯವಾಡುತ್ತಾರೆ. ಏಳು ಇರುಳು ಎಂಟು ಹಗಲು ಕುದಿಯುತ್ತಿದ್ದ ಎಣ್ಣೆ ಕೊಪ್ಪರಿಗೆಯಲ್ಲಿ ಮೂರು ಸಲ ಇಳಿಸಬೇಕು” ಏಳು ಇರುಳು ಎಂಟು ಹಗಲು ಕಾಯಿಸಿ ಕೆಂಪಾದ ಉಕ್ಕಿನ ಗುಂಡನ್ನು ಹಿಡಿಯಬೇಕು. ಆಗ ಕೈಯಲ್ಲಿರಿಸಿದ ಪಂಚವಳ್ಳಿ ವೀಳ್ಯದೆಲೆ ಬಾಡಬಾರದುಬೆಣ್ಣೆ ಕರಗಬಾರದು’ ಎಂದು ನ್ಯಾಯದ ಕಟ್ಟೆಯಲ್ಲಿ ಕಚ್ಚೂರ ಮಾಲ್ದಿಗೆ ಹೇಳುತ್ತಾರೆ. ಆಗ ನೀವು ಹೇಳಿದ್ದನ್ನು ಮಾಡಿದರೆ ನನ್ನ ಉಳ್ಳಾಯರಿಗೆ ಬಿಳಿಕುದುರೆ ಬೆಳ್ಳಿಸತ್ತಿಗೆ ಬಹುಮಾನ ಕೊಡಬೇಕೆಂದು’ ಕಚ್ಚೂರು ಮಾಲ್ದಿ ಹೇಳುತ್ತಾಳೆ. ಸಭೆ ಇದನ್ನು ಒಪ್ಪಿಕೊಳ್ಳುತ್ತದೆ. ನಂತರ ಕಚ್ಚೂರ ಮಾಲ್ದಿ ಕುದಿಯುವ ಎಣ್ಣೆಯಲ್ಲಿ ಮುಳುಗು ಹಾಕುತ್ತಾಳೆ. ಸತ್ಯಪ್ರಮಾಣ ಮಾಡುತ್ತಾಳೆ © ಡಾ.ಲಕ್ಷ್ಮೀ ಜಿ ಪ್ರಸಾದ್ 

. ಅವಳು ತಲೆಗೂದಲನ್ನು ಕೊಡಹಿದಾಗ ಹಾರಿದ ಎಣ್ಣೆ ಹನಿ ಜನರ ಮೇಲೆ ಬಿದ್ದು ಹಪ್ಪಳಿಕೆ ಏಳುತ್ತದೆ. ಅವಳಿಗೆ ಏನೂ ಆಗುವುದಿಲ್ಲ. ಕಾದ ಗುಂಡನ್ನು ಕೈಯಲ್ಲಿರಿಸಿಕೊಂಡಾಗಲೂ ಕೈಯ ಮೇಲಿನ ವೀಳ್ಯೆದೆಲೆ ಬಾಡುವುದಿಲ್ಲ. ಬೆಣ್ಣೆ ಕರಗುವುದಿಲ್ಲ. ಅವಳ ಸತ್ಯ ಪ್ರಮಾಣಿತವಾಗಿ ಉಳ್ಳಾಯರಿಗೆ ಬಿಳಿ ಕುದುರೆ ಬೆಳ್ಳಿಸತ್ತಿಗೆಬಿರುದಾವಳಿಯ ಗೌರವ ಸಿಗುತ್ತದೆ. ಕಚ್ಚೂರ ಮಾಲ್ದಿ ಹಿಂದಿನಿಂದ ಹೋಗುತ್ತಾಳೆ. ನಂತರ ಅವಳಿಗೆ ಪ್ರಸವವೇದನೆ ಕಾಣಿಸಿಕೊಳ್ಳುತ್ತದೆ. ಸತ್ಯದಲ್ಲಿ ಹುಟ್ಟಿದ ಮಗು ಕಚ್ಚೂರ ಮಾಲ್ದಿಯ ಬಲತೊಡೆ ಒಡೆದು ಹೊರಗೆ ಬರುತ್ತದೆ. ಕಚ್ಚೂರ ಮಾಲ್ದಿಯ ಜೀವ ಹೋಗುತ್ತದೆ. ಬನ್ನಾರರು ಹಾಗೂ ಒಡತಿ ಮಗುವನ್ನು ಸಾಕುತ್ತಾರೆ. ಸತ್ಯದಲ್ಲಿ ಹುಟ್ಟಿದ ಮಗುವಿಗೆ ಬಾಲೆ ಬಬ್ಬು ಬಾರಗನೆಂದು ಹೆಸರು ಇಡುತ್ತಾರೆ. ಏಳೆಂಟು ವರ್ಷದವನಾದಾಗ ಅವನು ಹಠ ಮಾಡಿ ದನಕರು ಮೇಯಿಸಲು ಹೋಗುತ್ತಾನೆ. ಅಲ್ಲಿ ಸಾವಿರ ಬಂಗರ ಮಕ್ಕಳು ಪಲ್ಲೆಯಾಟವಾಡುತ್ತಿದ್ದರು. ಬಬ್ಬು ಆಟವಾಡಿ ಎಲ್ಲರನ್ನು ಸೋಲಿಸುತ್ತಾನೆ. ಬಾರಗನನ್ನು ಸೋಲಿಸುವುದಕ್ಕಾಗಿ ಅರಿಬ್ರಹ್ಮರ ಕೆರೆಗೆ ಬಾಯಾರಿಕೆಗೆ ನೀರು ಕುಡಿಯಲು ದನಕರುಗಳನ್ನು ಅಟ್ಟಲು ಹುಚ್ಚುಗಟ್ಟಿಸುತ್ತಾರೆ ಆ ಹುಡುಗರು. ಅವರು ಮೊದಲೇ ಹೋಗಿ ಕೆರೆಯಲ್ಲಿ ಭರ್ಜಿಯನ್ನು ನೆಟ್ಟಿದ್ದರು. ದನಕರು ನೀರು ಕುಡಿದ ನಂತರ ನೀರಿನಲ್ಲಿ ಬಿಕ್ಕೆ’ ತೆಗೆಯುವಾ ಎನ್ನುತ್ತಾರೆ. ನೀವು ಮೊದಲು ಹಾರಿ ತೋರಿಸಿ ಎನ್ನುತ್ತಾನೆ ಬಾರಗ. ಆಗ ಇಟ್ಟ ಭರ್ಜಿ ಆ ಹುಡುಗರಿಗೆ ತಾಕುತ್ತದೆ.©© ಡಾ.ಲಕ್ಷ್ಮೀ ಜಿ ಪ್ರಸಾದ್ 

ಮುಂದೆ ಹಡಗನ್ನು ಸಮುದ್ರಕ್ಕೆ ಸೇರಿಸಲು ಕೊಡಂಗೆ ಬನ್ನಾರರು ಬಬ್ಬು ಬಾರಗನನ್ನು ಕಳುಹಿಸಿ ಕೊಡುತ್ತಾರೆ. ಹಡಗನ್ನು ಸಮುದ್ರಕ್ಕೆ ಬಬ್ಬು ಇಳಿಸುತ್ತಾನೆ. ಇವನ ಶೌರ್ಯ ಎಲ್ಲೆಡೆಗೆಹರಡುತ್ತದೆ. ಇತ್ತ ವಿಟ್ಲದ ಅರಸ ಮಂಗಳೂರ ಬುದ್ಧಿವಂತ ಹದಿನಾರು ಕಟ್ಟನೆಯ ಬಾವಿ ತೋಡಿನೀರದಂಡು ಬಿಡಿಸಲು ಬಬ್ಬುವನ್ನು ಕಳುಹಿಸುವಂತೆ ಕೊಡಂಗೆ ಬನ್ನಾರರಿಗೆ ಓಲೆ ಬರೆಯುತ್ತಾರೆ. ಕೊಡಂಗೆ ಬನ್ನಾರರು ಚಿಂತೆಯಲ್ಲಿ ಮುಳುಗುತ್ತಾರೆ. ಆಗ ಬಬ್ಬು ನೀವು ಚಿಂತೆ ಮಾಡಬೇಡಿನಾನು ನೀರದಂಡು ಬಿಡಿಸಿ ಕೊಡಲು ಹೋಗುವೆ ಎಂದು ಹೇಳುತ್ತಾನೆ. ಆಗ ಬನ್ನಾರರು ನೀನು ಹೋಗುತ್ತೀಯಆದರೆ ನಿನ್ನನ್ನು ಹೊಟ್ಟೆಕಿಚ್ಚಿನಲ್ಲಿ ಏನು ಮಾಡುತ್ತಾರೋ ಏನೋಭಯವಾಗುತ್ತಿದೆ ಎಂದು ಹೇಳಲು ಅವರಿಗೆ ಧೈರ್ಯ ಹೇಳಿ ಬಬ್ಬು ಹೋಗುತ್ತಾನೆ. ಮರುದಿನ ಅವನನ್ನು ಏಣಿಯ ಮೂಲಕ ಬಾವಿಗೆ ಇಳಿಸುತ್ತಾರೆ. ಬಬ್ಬು ನೀರು ಬಿಡಿಸುತ್ತಾನೆ. ನೀರು ತುಂಬುತ್ತದೆ. ಆಗ ಏಣಿಯನ್ನು ಮೇಲೆಳೆಯುತ್ತಾರೆ. ಬಬ್ಬು ಒಳಗೆ ಉಳಿಯುತ್ತಾನೆ. ಬಾವಿಯ ಬಾಯಿಗೆ ಹಾಸುಗಲ್ಲು ಹಾಸಿ ರಣಗೋಳಿ ನೆಟ್ಟು ಹಿಂತಿರುಗುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 

ಇತ್ತ ಏಳು ಜನ ಬೈದ್ಯರೂಏಳು ಜನ ಮುಗೇರರೂ ಬೇಟೆಯಾಡಲು ಹೋಗುವಾಗ ಮುಗೇರರ ತಂಗಿ ತನ್ನಿಮಾಣಿಗಳೂ ಹೊರಡುತ್ತಾಳೆ. ದಾರಿಯಲ್ಲಿ ಬಾವಿಯೊಳಗಿನಿಂದ ಬಬ್ಬುವಿನ ಧ್ವನಿ ಕೇಳಿಸುತ್ತದೆ. ಬೈದ್ಯರಿಗೂ ಮುಗೇರರೂ ಪ್ರಯತ್ನಿಸಿದರೂ ಹಾಸಿದ ಕಲ್ಲು ತೆಗೆಯಲಾಗುವುದಿಲ್ಲ. ಆಗ ತನ್ನಿಮಾಣಿಗ ಗೆಜ್ಜೆಕತ್ತಿಯಲ್ಲಿ ಹದಿನಾರು ಗೆರೆ ಹಾಕಿ ಕಲ್ಲನ್ನು ಪುಡಿ ಪುಡಿ ಮಾಡುತ್ತಾಳೆ. ಅವಳುಟ್ಟ ಮೂವತ್ತು ಮೊಳ ಕೆಂಪುಬಟ್ಟೆಯನ್ನು ಬಿಚ್ಚಿ ಕೆಳಗೆ ಇಳಿಸಿ ಭೂಮಿ ನೋಡಿಕೊಂಡು ಮೇಲೆ ಬಾ. ಮೇಲೆ ನೋಡಬೇಡ” ಎನ್ನುತ್ತಾಳೆ. 

ಏಳು ಮೆಟ್ಟಲು ಮೇಲೆ ಬಂದವನು ಮೇಲೆ ನೋಡುತ್ತಾನೆ. ಆಗ ಅಯ್ಯೋ ದೋಷವೇ ಎಂದು ಮರುಗಿ ಕೈ ಬಿಡುತ್ತಾಳೆ. ನಂತರ ಅವನ ಮೇಲೆ ಕನಿಕರಿಸಿ ಮೇಲೆತ್ತುತ್ತಾಳೆ. ಮೇಲೆ ಬಂದ ಬಬ್ಬು ಓ ನನ್ನ ತಂಗಿ” ಎಂದು ತಬ್ಬಿಕೊಳ್ಳುತ್ತಾನೆ. ಆಗ ತನ್ನಿಮಾನಿಗ ನನ್ನ ಮೈ ಮುಟ್ಟಿದುದು ಇದೇ ಕೊನೆ. ಇನ್ನು ಮುಟ್ಟಬಾರದು. ಹದಿನಾರು ಗೆರೆಗೆ ಹದಿನಾರು ಬಿಂದು ನೆತ್ತರು ಕೊಡಬೇಕು” ಎಂದು ಹೇಳುತ್ತಾಳೆ. ನಂತರ ಈ ಅಣ್ಣ ತಂಗಿ ತಾರಿನ ಗುಂಡಿಯಲ್ಲಿ ಮಾಯವಾಗುತ್ತಾರೆ. ಬಬ್ಬು ಗಟ್ಟದಲ್ಲಿ ಏಳುಕೋಟೆ ಕಟ್ಟಿದ ಕೋಟೆಯ ಬಬ್ಬು ಎಂದೂಗಾಳಿಭದ್ರದೇವರೆಂದೂಕೆಂಚರಾಯನೆಂದೂಜಡೆರಾಯಕಾಳಭೈರವಕಾಳರಾಹು ಎಂದು ಕರೆಸಿಕೊಳ್ಳುತ್ತಾನೆ. ಮಾಯದಲ್ಲಿ ಬಂದು ಕೊಡಂಗೆ ಬನ್ನಾರರ ನೆಲೆಯಲ್ಲಿ ದೇವಸ್ಥಾನ ಕಟ್ಟಿಸಿಕೊಳ್ಳುತ್ತಾನೆ. ಕೋಟೆದ ಬಬ್ಬು ಮುಂಡಾಲರ ಕುಲದೈವ.© ಡಾ.ಲಕ್ಷ್ಮೀ ಜಿ ಪ್ರಸಾದ್ 

ವಾಸ್ತವದಲ್ಲಿ ಮಕ್ಕಳಿಲ್ಲದ ಕೊಡಂಗೆ ಬನ್ನಾರರ ಆಸ್ತಿಯ ಮೇಲೆ ಕಣ್ಣಿಟ್ಟ ಯಾರೋ ಕೋಟೆಯ ಬಬ್ಬು ವನ್ನು ಮುಗಿಸಲು ಷಡ್ಯಂತ್ರ ಹೆಣೆದಿರಬೇಕು .ನೀರ ದಂಡು ಬಿಡಿಸುವ ನೆಪದಲ್ಲಿ ಆತನನ್ನು ಬಾವಿಗೆ ಇಳಿಸಿ ಉಪಾಯದಿಂದ ಸಾಯಿಸಿರಬಹುದು .ಅಥವಾ ಬಾವಿಗೆ ಬಲಿ ಕೊಟ್ಟಿರಬಹುದು .ದುರಂತ ಮತ್ತು ದೈವತ್ವ ತುಳುನಾಡಿನ ವಿಶಿಷ್ಟತೆ © ಡಾ.ಲಕ್ಷ್ಮೀ ಜಿ‌ಪ್ರಸಾದ್ 

.ಕೋಟೆ ಕೊತ್ತಲ ಕೆರೆಗಳ ರಕ್ಷಣೆಗಾಗಿ ನರಬಲಿ ನೀಡುತ್ತಿದ್ದ ಬಗ್ಗೆ ಅನೇಕ ಐತಿಹ್ಯಗಳು ನಾಡಿನಾದ್ಯಂತ ಪ್ರಚಲಿತವಿವೆ .ಕೆರೆಗೆ ಹಾರದ ಭಾಗಿರಥಿ  .ಚಿಕ್ಕಮಗಳೂರು ಜಿಲ್ಲೆಯ ಅಯ್ಯನ ಕೆರೆ ರಕ್ಷಣೆ ಮಾಡಿದ ಹೊನ  ಬಿಲ್ಲ ಚಿನಭಿಲ್ಲರು ,ಹುಳಿಯಾರಿನ ಕೆರೆಗೆ ಬಲಿಯಾದ ಹುಳಿಯಾರಿನ ಕೆಂಚವ್ವ ,ಸೊರಲ  ಕಟ್ಟಕ್ಕೆ ಆಹುತಿಯಾದ ಬಾಲೆ ಮಾಡೆದಿ ಮೊದಲಾದವರ ಕಥೆಗಳು ಈ ಬಗ್ಗೆ ಸಾಕ್ಸ್ಯ ನೀಡುತ್ತವೆ © ಡಾ.ಲಕ್ಷ್ಮೀ ಜಿ‌ ಪ್ರಸಾದ್ 

,ಅನಾಥ ಬಾಲಕ ಅತುಲ ಪರಾಕ್ರಮಿಯಾಗಿ ಬೆಳೆಯುತ್ತಿರುವುದನ್ನು ಸಹಿಸದ ವಿಟ್ಲದರಸರ ಮಂತ್ರಿ ವರ್ಗದವರು ಅಥವಾ ಇನ್ನಾರೋ ಆತನನ್ನು ನೀರ ದಂಡು ಬಿಡಿಸುವ ನೆಪದಲ್ಲಿ ಬಾವಿಗಿಳಿಸಿ ಬಲಿ ಕೊಟ್ಟಿರಬಹುದು .ಊರಿನ ಬಾವಿ ನೀರಿಗಾಗಿ ಆತ್ಮಾರ್ಪಣೆ ಮಾಡಿಕೊಂಡದ್ದಕ್ಕೋ ಅಥವಾ ಹೊಟ್ಟೆ ಕಿಚ್ಚಿನಿಂದ ಅವನನ್ನು ಸಾಯಿಸಿ ಬಿಟ್ಟ ಬಗ್ಗೆ ಅವನ ಮೇಲೆ ಅನುಕಂಪ ಹಾಗೂ ಸಾಹಸಿಯಾಗಿದ್ದ ಅವನ ಮೇಲಿನ ಅಭಿಮಾನದಿಂದಲೋ ಅವನ ಆರಾಧನೆ ಆರಂಭವಾಗಿರಬಹುದು .ಉದ್ದೇಶ ಪೂರ್ವಕವಾಗಿ ಅವನನ್ನು ಬಾವಿಗಿಳಿಸಿ ಕೊಂದದ್ದರಿಂದ ಅವನ ಉಪದ್ರ ಕಾಣಿಸಿಕೊಂಡು ಆತನನ್ನು ಶಾಂತಗೊಳಿಸುವ ಸಲುವಾಗಿ ಆತನನ್ನು ಭೂತದ ರೂಪದಲ್ಲಿ ಆರಾಧಿಸಲು ಪ್ರಾರಂಭಿಸಿರುವ ಸಾಧ್ಯತೆ ಕೂಡ ಇದೆ .
ಈ ದೈವದ ಹುಟ್ಟು ಪುರಪ್ಪು ಇನ್ನಿತರ ವಿಚಾರಗಳಲ್ಲಿ ಅನೇಕ ಪಾಠಾಂತರಗಳಿವೆ.ಆದರೂ ಆಶಯ ಒಂದೇ ಇದೆ ,ಈ ಬಗ್ಗೆ  ಹೆಚ್ಚಿನ ಮಾಹಿತಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿದೆ ,ಈ ಪುಸ್ತಕದ ಮಾಹಿತಿಗಾಗಿ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು - ಡಾ.ಲಕ್ಷ್ಮೀ ಜಿ ಪ್ರಸಾದ್ 
ಏನೇ ಆದರೂ ಕೋಟೆದ ಬಬ್ಬು ತುಳುನಾಡಿನ ಜನಪ್ರಿಯ ದೈವ .ತನ್ನನ್ನು ನಂಬಿದ ಜನರ ರಕ್ಷಣೆಯನ್ನು ಮಾಡಿ ಅನುಗ್ರಹಿಸುವನಂಬುಗೆಗೆ ಇಂಬು ಕೊಡುವ ಭೂತ  ಕೊಡಂಗೆತ್ತಾಯ ಎಂದೇ ತುಳುವರು ಭಕ್ತಿಯಿಂದ ಈತನಿಗೆ ತಲೆಬಾಗುತ್ತಾರೆ © ಡಾ.ಲಕ್ಷ್ಮೀ ಜಿ ಪ್ರಸಾದ್ 


1 comment:

  1. ವಿಶಿಷ್ಟ ಮಾಹಿತಿಗಾಗಿ ಧನ್ಯವಾದಗಳು. ಇಲ್ಲಿ ಉಲ್ಲೇಖಿತರಾದ ಮುಂಡಾಲರು ಎಂದರೆ ‘ಮುಂಡ’ರೆ?

    ReplyDelete