Sunday, 25 April 2021

Tuesday, 20 April 2021

ಅಪರೂಪದ ಸ್ವಾಮಿ‌ದೈವ © ಡಾ.ಲಕ್ಷ್ಮೀ ಜಿ ಪ್ರಸಾದ್

 ಸ್ವಾಮಿ ಎಂಬ ದೈವದ ಬಗ್ಗೆ ಕೇಳಿದ್ದೀರ? 


ಉಡುಪಿ ಕುಂದಾಪುರದ ಸುತ್ತ ಮುತ್ತ ಸ್ವಾಮಿ ಎಂಬ ಜನಪ್ರಿಯ ದೈವದ ದರ್ಶನ,ಕೋಲ ಆಗುತ್ತದೆ.ಕಾಡ್ಯನಾಟದ ಭಾಗವಾಗಿ ಕೂಡ ಸ್ವಾಮಿ ಕೋಲವಿದೆ.ಮುದ್ದು‌ಮನೆಗಳಲ್ಲಿಯೂ ಇರ್ತದೆ


ಈ ದೈವದ ಕುರಿತು ಸಮರ್ಪಕ ಎನಿಸುವಂತಹ ಮಾಹಿತಿ ಸಿಕ್ಕಿರಲಿಲ್ಲ.ನಾಗಬ್ರಹ್ಮ ಎಂದು ಹಿರಿಯ ವಿದ್ವಾಂಸರಾದ ಎ.ವಿ ನಾವಡರು ಅಭಿಪ್ರಾಯ ಪಟ್ಟಿದ್ದರು.ಅದರೆ ನನಗೇನೂ ಸ್ವಾಮಿ‌ಎಂದರೆ  ನಾಗ ಬ್ರಹ್ಮನಲ್ಲ ಎಂದೆನಿಸಿತ್ತು.ಸ್ವಾಮಿಯ ಮಾನವ ಮೂಲವನ್ನು ದ್ಯೋತಿಸುವ ವೇಷ ಭೂಷಣ ,ಹಿರಿತನವನ್ನು ಸೂಚಿಸುವ ಭಾವ ,ಆತ ನಾಗ ಬ್ರಹ್ಮನಲ್ಲ ಎಂದು ಸೂಚಿಸುತ್ತಿತ್ತು‌.ನಾಗ ಬ್ರಹ್ಮನಲ್ಲದಿದ್ದರೆ ಇನ್ಯಾರು ಎಂಬುದಕ್ಕೆ ಉತ್ತರ ನನಗೆ ಸಿಕ್ಕಿರಲಿಲ್ಲ. ಹಾಗಾಗಿ ನಾನು ನನ್ನ ಪಿಎಚ್ ಡಿ ಥೀಸಿಸ್ ನಲ್ಲಿ ಹಾಗೆಯೇ ಬರೆದಿದ್ದೆ .


ಇತ್ತೀಚೆಗೆ ಹಾಯ್ಗುಳಿ ದೈವಗಳ ಮಾಹಿತಿಗಾಗಿ ಕುಂದಾಪುರ ಕಡೆಯ ಪಾತ್ರಿಯೊಬ್ಬರು   ಕರೆ ಮಾಡಿದ್ದು ಅವರಲ್ಲಿ  ಮಾತನಾಡುವಾಗ ಒಡೆಯನಿಗೆ ಪಾಣರು ಮೇರ ಸಮುದಾಯದವರು ಸ್ವಾಮಿ ಎಂದು ಸಂಬೋಧಿಸತ್ತಿದ್ದರು ಎಂದು ತಿಳಿಯಿತು..


ನಮ್ಮಲ್ಲಿ ಒಡೆಯನನನ್ನು ಉಳ್ಳಾಯ ಎಂದು ಸಂಬೋಧಿಸುತ್ತಿದ್ದರು..ನಮ್ಮ‌ಮನೆಗೆ ಕುರುವೆಗಳನ್ನು ಮಾಡಿ ತರುತ್ತಿದ್ದ ಮಾದಿರ ಎಂಬವರು ಮನೆ ಮೆಟ್ಟಿಲು ಏರುವಾಗಲೇ ಅಡ್ಡ ಬೂರ್ಯೆ ಉಳ್ಳಾಯ ಎನ್ನುತ್ತಿದ್ದರು ,ತಾಯಿಯವರಲ್ಲಿ ಉಪ್ಪಾಡು ಗಂಜಿ ಕೊರ್ಲೆ ದೆತ್ತಿ ಎನ್ನುತ್ತಿದ್ದರು..


ಸ್ವಾಮಿ ಎಂದರೆ ಒಡೆಯ..ಯಾವ ಒಡೆಯ ಯಾವ ಕಾರಣಕ್ಕಾಗಿ ದೈವತ್ವ ಪಡೆದು ಆರಾಧಿಲ್ಪಟ್ಟಿದ್ದಾರೆ ಎಂದು ಆಲೋಚಿಸುತ್ತಾ ಇದ್ದೆ‌.


ಈವತ್ತು ಕಾಡ್ಯನಾಟ ಮತ್ತು ಪಾಣರಾಟದ ಅಚರಣೆಯ ಅಂಗವಾಗಿ ನಡೆಯುವ ಭೂತ ಕೋಲಗಳ ಬಗ್ಗೆ ನನ್ನ ಸಾವಿರದೊಂದು ದೈವಗಳು ಪುಸ್ತಕಕ್ಕಾಗಿ ಬರೆಯುತ್ತಾ ಇದ್ದೆ‌.


ಕಾಡ್ಯನ ಹುಟ್ಟಿನ ಕಥೆ ಓದುತ್ತಿದ್ದಂತೆ ದೈವತ್ವ ಪಡೆದು ಸ್ವಾಮಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಿರುವ ಒಡೆಯ ಯಾರೆಂದು ತಿಳಿಯಿತು


.ಹೊನ್ನಿ ಅಲೌಕಿಕ ಶಕ್ತಿಯ ಹೆಣ್ಣುಮಗಳು.ಗಾಳಿರಾಯನ ಮಾಯೆಯಿಂದ ಏಳು ಮಕ್ಕಳಿಗೆ ಜನ್ಮ ಕೊಡುತ್ತಾಳೆ‌..ಆಗ ಎಂದೂ ಬಾರದ ಬರಗಾಲ ಬಂದು ಮಕ್ಕಳ ಹೊಟ್ಡೆತುಂಬಿಸುವುದು ಅವಳಿಗೆ ಕಷ್ಟವಾಯಿತು.ಆಗ ಆಕೆ ಒಡೆಯನಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡಾಗ ಒಡೆಯ ಗದ್ದೆಯನ್ನು ಮತ್ತು ಅಂಗಡಿಗಳನ್ನು ಉಂಬಳಿ ಕೊಡುತ್ತಾನೆ‌.

ಮತ್ತೆ ಕಥೆ ಮೂಲ ಐತಿಹ್ಯಕ್ಕೆ ತಿರುಗುತ್ತದೆ‌.ಮೂರು ದಿಕ್ಕುಗಳಲ್ಲಿರುವ ಅಂಗಡಿಗಳನ್ನು ಕೊಡುವುದು ಬಹಳ ಕುತೂಹಲಕಾರಿಯಾಗಿದೆ.


ತುಳುನಾಡಿನ ಎಲ್ಲ ದೇವಾಲಯಗಳಿಗೂ ಇಲ್ಲಿನ ಮೂಲನಿವಾಸಿ ಸಮುದಾಯಗಳಿಗೂ ಸಂಬಂದವಿದೆ.ಮೂಲ ನಿವಾಸಿಗಳಿಗೆ ಉದ್ಭವ ಲಿಂಗ ಸಿಗುವುದು ರಕ್ತ ಬರುವುದು ಎಂಬ ವಿಚಾರ ಎಲ್ಲ ದೇವಾಲಯಗಳ ಐತಿಹ್ಯದಲ್ಲಿ ಕೂಡ ಕಾಣಸಿಗುತ್ತದೆ‌

ಅಂತೆಯೇ ಮೇರರ ಹುಡುಗಿ ಹೊನ್ನಿ ಕಾಡುಗೆಣಸನ್ನು ಒಕ್ಕುವಾಗ ಮೂರು ಕಲಶಗಳು ಸಿಗುತ್ತವೆ‌‌‌


.ಚಿನ್ನದ ಕಲಶವನ್ನು ಅಡಿಗಳಿಗೆ ತಾಮ್ರದ ಕಲಶವನ್ನು  ಒಡೆಯರಿಗೆ ಮಣ್ಣಿನ ಕಲಶ ಹೊನ್ನಿಗೆ ಎಂದು ನಿರ್ಧಾರವಸಗುತ್ತದೆ.ಅಡಿಗಳು ನಾಗ ದೇವತೆಗೆ ನಾಗ ಮಂಡಲವನ್ನೂ ಒಡೆಯರು ಬ್ರಹ್ಮ ಮಂಡಲ ವನ್ನು ಸ್ವಾಮಿಗೆ ? ಹೊನ್ನಿ ಕಾಡ್ಯನಾಟವನ್ನು ಕಾಡ್ಯನಿಗೆ ಮಾಡಿ ಆರಾಧನೆ ಮಾಡುತ್ತಾರೆ‌


ಕಾಡ್ಯನನ್ನು ಅವಳು ಒಡೆಯ ಕೊಟ್ಟ ಮೂಡಾಯಿ ಗದ್ದೆಯಲ್ಲಿ  ಇರು ಮಾಡುತ್ತಾಳೆ‌.ಕಾಡ್ಯನಾಟದ ಆರಂಭದಲ್ಲಿಯೇ ಸ್ವಾಮಿಯ ಆರಾಧನೆ ಇದೆ.ಮತ್ತು ಸ್ವಾಮಿಗೆ ಆರಾಧನೆ ಶುರು ಆದದ್ದು ಕಾಡ್ಯನಾಟದಲ್ಲಿ‌.ನಂತರ ಇತರೆಡೆಗೆ ಪ್ರಸರಣಗೊಂಡು  ಕೆಲವು ಕೊಂಕಣರ,ಬಂಟರ ಮನೆಗಳಲ್ಲಿ ಆರಾಧನೆ ಆರಂಭವಾಯಿತು.ಹೂ ನೀರು ಇಟ್ಟು ನಿತ್ಯವೂ ಆರಾಧಿಸುವ ಪದ್ದತಿ ಕೆಲವು ಮನೆಗಳಲ್ಲಿದೆ‌.ಸ್ವಾಮಿಗೆ ತಂಬಿಲ   ಕೋಲ ನೀಡಿಯೂ ಆರಾಧನೆ ಮಾಡುತ್ತಾರೆ.

ಹಾಗಾಗಿ ಸ್ವಾಮಿ ಎಂದರೆ ಮೇರರ ಹುಡುಗಿ ಹೊನ್ನಿಗೆ ಉಂಬಳಿ ಕೊಟ್ಟದ್ದಲ್ಲದೆ ಕಾಡ್ಯನಾಟ ಆಡಿಸಲು ಸಹಾಯ ಮಾಡಿದ ಒಡೆಯನೇ ನಂತರದ ದಿನಗಳಲ್ಲಿ ದೈವತ್ವ ಪಡೆದು ಸ್ವಾಮಿ ಎಂದು ಆರಾಧಿಸಲ್ಪಡುತ್ತಾನೆ‌


.ಈ ಬಗ್ಗೆ ವಿಸ್ತೃತ ಮಾಹಿತಿ ಪುಸ್ತಕದಲ್ಲಿ ನೀಡುವೆ.ಇದರ ಜೊತೆಗೆ ಶ್ರೀಲಂಕಾದ ಸನ್ನಿ ಯಕುಮಗಳನ್ನು ಹೋಲುವ ಜ್ವರನ ಕೋಲ,ಕೆಮ್ಮನ ಕೋಲ,ಉಬ್ಬಸದ ಕೋಲ,ವಾತದ ಕೋಲ ಗಳು ಯಕ್ಷಾರಾಧನೆಯ ಮೂಲದ ಬಗ್ಗೆ ಹೊಳಹನ್ನು ನೀಡಿವೆ‌‌.


ಕಾಡ್ಯನಾಟ ,ಪಾಣರಾಟ,ಸ್ವಾಮಿ ದೈವದ ಬಗ್ಗೆ ವಿಸ್ತೃತವ ಅಧ್ಯಯನ ಆಗಬೇಕಾದ ಅಗತ್ಯವಿದೆ..ಭೂತಾರಾಧನೆ ಎಷ್ಡು ಪ್ರಾಚೀನ ಎಂಬುದಕ್ಕೆ ಸರಿಯಾದ ಆಧಾರ ಇರಲಿಲ್ಲ.ಕಾಡ್ಯನಾಟದ ಜ್ವರದ ಕೋಲ,ಕೆಮ್ಮಿನ ಕೋಲ,ಉಬ್ಬಸದ ಕೋಲ,ವಾತ ಕೋಲಗಳು ಸನ್ನಿ ಯಕ್ಷೇಯಗಳ ಆರಾಧನೆಗೆ ಸಮೀಪವಾಗಿದೆ.

ನಮ್ಮಲ್ಲೂ ಸನ್ನಿ ಹಿಡಿಯುದು,ಬಾಣಂತಿ ಸನ್ನಿ ,ಕೆರೆ ಸಮೀಪ ಹೋದರೆ ಹಿಡಿವ ನೀರ ಸನ್ನಿ ಇತ್ಯಾದಿ ಉಪದ್ರ ಕೊಡುವ ಸನ್ನಿಗಳ ಪರಿಕಲ್ಪನೆ. ಇದೆ.ಇವೆರಡೂ ಒಂದೇ ಅಥವಾ ಎರಡರ ಮೂಲ ಒಂದೇ ಎಂದು ಆಧಾರ ಸಹಿತ ಸಿದ್ಧ ಮಾಡಿದರೆ ಭೂತಾರಾಧನೆಯು ಎರಡು ಸಾವಿರ ವರ್ಷಕ್ಕಿಂತ ಪ್ರಾಚೀನ ಎಂದು ಸಿದ್ದವಾಗುತ್ತದೆ

ಇನ್ನು ಹೊನ್ನಿಯ ಕಾಲ ಯಾವುದು ? ಸನ್ನಿ ಯಕುಮಗಳ ? ಜ್ವರ ಉಬ್ಬಸ ಕೋಲ ಆರಂಭವಾದ ಕಾಲ,ಹೊನ್ನಿಗೆ ಉಂಬಳಿ ಕೊಟ್ಟವರು ಯಾರು? ಮನೆ ಮುಂದಿನ  ಮಲಗದ್ದೆ,ತೆಂಕಣದ ಕಂಚುಗಾರನ ಅಂಗಡಿ,ಬಡಗದ ಬಳೆಗಾರನ ಅಂಗಡಿ,ಮೂಡು ದಿಕ್ಕಿನಲ್ಲಿ ಮುಗಿಲರನ ಅಂಗಡಿ,ಪಡುವಣದಲ್ಲಿ ಗಾಣಿಗನ ಉಂಬಳಿ ಕೊಟ್ಟ ಒಡೆಯ ಯಾರು?ಈ ಸ್ಥಳ ಎಲ್ಲಿದೆ ?  ಮೇರರ ಹುಡುಗಿ ಹೊನ್ನಿಗೆ ಇಷ್ಟು ದೊಡ್ಡ ಉಂಬಳಿ ಕೊಡಬೇಕಾದರೆ ಆ ಕಾಲದ ಸಾವುಕಾರನೇ ಇರಬೇಕು.ಅಲ್ಲಿನ ಸ್ಥಳೀಯ ಅರಸನೂ ಆಗಿರುವ ಸಾಧ್ಯತೆ ಇದೆ.ಜೊತೆಗೆ ಭೂತ ಬಲಿ ಮಂಡಲ ಎಂಬ ಆಚರಣೆ.ಇವೆಲ್ಲ ಅಧ್ಯಯನ ಯೋಗ್ಯ ವಿಚಾರಗಳು.

ಮೂರಿಲು

ನಾಗ ಸಾನ್ನಿಧ್ಯವಿರುವ ಮಣ್ಣಿನ‌ಮಡಿಕೆಗಳನ್ನು ಮೂರಿಲು/ ಮೂರ್ಲೆ ಎನ್ನುತ್ತಾರೆ.ಈ ಮೂರಿಲು ಎಂಬ ನಾಗ ಕನ್ನಿಕೆಯರ ಸಾನ್ನಿದ್ಯವಿರುವ ಮಡಿಕೆಗಳಿಗೆ ಸ್ವಲ್ಪ ನೀರು ಒಂದು ಮುಷ್ಟಿ ಬೆಳ್ತಿಗೆ ಅಕ್ಕಿ,ಸರೋಳಿ ಸೊಪ್ಪು ತುಂಬಿ ಆರಾದನೆ ಮಾಡುತ್ತಾರೆ.ಜಕ್ಕಿಣಿ ಕುಣಿತ ಅತವಾ ಅದನ್ನು ಹೋಲುವ ಕುಣಿತದ ಮೂಲಕ ಮೂರಿಲನ್ನು ಆರಾಧಿಸುತ್ತಾರೆ.ಕಾಡ್ಯನಾಟದಲ್ಲಿ ಕಾಡ್ಯನೆಂಬ ಮಣ್ಣಿನ ಕಲಶದ ಸುತ್ತ ಮಂಡಲ ಬರೆದು ನರ್ತಿಸುವಂತೆ ಇಲ್ಲಿ‌ ಕೂಡ ಮೂರಿಲು ಸುತ್ತ ಜಕ್ಕಿಣಿಯರ ಕುಣಿತವನ್ನು ಸಾಂಕೇತಿಕವಾಗಿ ಮಾಡುತ್ತಾರೆ.

ಕಾಡ್ಯ ಸ್ವಾಮಿ,ನಾಗದೇವತೆಗಳು ಮಣ್ಣಿನ ತಾಮ್ರದ ,ಚಿನ್ನದ ಕಲಶಗಳಲ್ಲಿ ಮೂಲಕ ತಮ್ಮ‌ಇರವನ್ನು ತೋರಿದವರು.ಹೊನ್ನಿಗೆ ಕಾಡಗೆಣಸು ಒಕ್ಕುವಾಗ ಮಣ್ಣಿನಡಿಯಲ್ಲಿ ಮೂರು ಕಲಶಗಳು ಸಿಗುತ್ತವೆ.ಈ ರೀತಿಯಾಗಿ ಕಲಶವನ್ನು  ಮೂರಿಲು ಎಂದು ಕರೆದು ಆರಾಧಿಸುವ ಪದ್ಧತಿ ತುಳುವರಲ್ಲಿ ಇದೆ.ಮೂರಿಲು, ಮೂರ್ಲೆ ಎಂದೂ ಹೇಳುತ್ತಾರೆ.

ಒಂದಿನ ದಿನ ಮಾಯದ ಮಳೆ ಬಂತು .ಆಗ ಏಳು ಮೂರಿಗಳು ತೇಲಿಕೊಂಡು ಬಂದು ಅಂಗಳದಲ್ಲಿ ಕಾಣಿಸಿಕೊಂಡವು.ಕೆಲವೆಡೆ ಗದ್ದೆಯಲ್ಲಿ ಕಾಣಿಸಿಕೊಂಡವು ಎಂಬ ನಂಬಿಕೆ ಇದೆ.ಕಾಸರಗೋಡು ಚೌಕಾರು ಗುತ್ತಿನಲ್ಲಿ ಮೂರಿಲು ಆರಾಧನೆ ಇದೆ.

ಇಲ್ಲಿ ಎರಡು ಮಣ್ಣಿನ ಮಡಿಕೆಯಲ್ಲಿ ಬೆಳ್ತಿಗೆ ಅಕ್ಕಿ ತುಂಬಿ ಮಾವಿನ ಎಲೆ,ಸರೋಳಿ ಎಲೆ ಹಾಕಿ  ತುಂಬಿ ಹಾಲು ಹಣ್ಣು ನೈವೇದ್ಯ ನೀಡಿ ಮೂರಿಲುವಿನ ಆರಾಧನೆ ಮಾಡುತ್ತಾರೆ.ಏಳು ಕಲಶಗಳು ಇದ್ದವು.ಈಗ ಎರಡು ಉಳಿದಿವೆ ,ಇವು ನಾಗ ಕನ್ನಿಕೆಯರು ಎಂದು ಚೌಕಾರು ಗುತ್ತಿನ ಹಿರಿಯರು ತಿಳಿಸಿದ್ದಾರೆ.ಈ ಮೂರಿಲು  ಕಾಡ್ಯನಾಟದ  ಇನ್ನೊಂದು ರೂಪವಾಗಿದೆ.ಇಲ್ಲಿ ಜಕಿಣಿಯರ ಕೋಲ/ ಕುಣಿತವಿದ್ದು ಅದು ಈ ಮೂರಿಲುಗಳಲ್ಲಿ ನೆಲೆಯಾದ ನಾಗ ಕನ್ನಿಕೆಯರಿಗೆ ಸಂಬಂಧಿಸಿದ್ದಾಗಿದೆ.


ಭೂತಾರಾಧನೆಗೆ ಕನಿಷ್ಟ ಎರಡು ಸಾವಿರದ ನೂರು ವರ್ಷಗಳ ಇತಿಹಾಸ ಸಿದ್ದವಾಯಿತು.ಭೂತಾರಾಧನೆ ಎರಡು ಸಾವಿರ ವರ್ಷಕ್ಕಿಂತ ಪ್ರಾಚೀನ ಎಂದು ಹೇಳಲು ಬಲವಾದ ಆಧಾರಗಳು ಸಿಕ್ಕವು.( ಈ ಬಗ್ಗೆಯೂ ವಿಸ್ತೃತ ಮಾಹಿತಿ ಪುಸ್ತಕದಲ್ಲಿ ನೀಡುವೆ) © ಡಾ.ಲಕ್ಷ್ಮೀ ಜಿ ಪ್ರಸಾದ್ 

ಈ ಸ್ವಾಮಿ ದೈವದ ಅಪರೂಪದ ಪೋಟೊವನ್ನು ಗಗ್ಗರ ಗ್ರೂಪಿನಲ್ಲಿ ಸಿಕ್ಕಿದೆ.ಅಪರೂಪದ ದೈವಗಳ ಕೋಲ ರೆಕಾರ್ಡ್ ಮಾಡಿ ಫೋಟೋ ಹಾಕುವ ಒಳ್ಳೆಯ ಕೆಲಸ ಮಾಡುತ್ತಿರುವ ಗಗ್ವರ ಗ್ರೂಪಿನ ಅಡ್ಮಿನ್ ಗೆ ಅಭಿನಂದನೆಗಳು 

ಸ್ವಾಮಿ ದೈವದ ಫೋಟೋ,ವಿಡಿಯೊ ಎರಡೂ ನನ್ನಲ್ಲಿ ಇದ್ದುದು ಕಂಪ್ಯೂಟರ್ ವೈರಸ್ ಬಂದು ನಾಶವಾಗಿದೆ‌‌.ನನ್ನ ಪುಸ್ತಕಕ್ಕೆ ಅಪರೂಪದ ಸ್ವಾಮಿ ದೈವದ ಫೋಟೋ ಬೇಕಾಗಿದೆ.ಯಾರಲ್ಲಾದರೂ ಇದ್ದರೆ ನನಗೆ ಕಳುಹಿಸಿಕೊಡಿ.ಫೋಟೊ ನೀಡಿದವರ ಹೆಸರು ಹಾಕಿ ಬಳಸುವೆ ನನ್ನ ಇ ಮೇಲ್ ವಿಳಾಸ samagramahithi@gmail.com 

ಡಾ.ಲಕ್ಷ್ಮೀ ಜಿ ಪ್ರಸಾದ್