ತುಳುವರ ಬೆರ್ಮೆರ್ ಸ್ವರೂಪ ಮತ್ತು ಪರಿಕಲ್ಪನೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಕಾಂತಾರ ಅಧ್ಯಾಯ ಒಂದರ ದಂತ ಕಥೆಯ ಬೆರ್ಮೆ ಯಾರೆಂದು ಸಿನಿಮಾ ನೋಡುವ ಮೊದಲು ಹೇಳಲು ಸಾಧ್ಯವಿಲ್ಲ ಆದರೆ ತುಳುನಾಡಿನಲ್ಲಿ ಬೆರ್ಮೆರ್ ಒಂದು ವಿಶಿಷ್ಠವಾದ ಆರಾಧ್ಯ ಶಕ್ತಿ.ನಾಗನ ಜೊತೆಗೆ ಸಮನ್ವಯಗೊಂಡು ನಾಗ ಬ್ರಹ್ಮ ಎಂದು ಆರಾಧಿಸಲ್ಪಡುವ ಈ ಬೆರ್ಮೆರ್ ಗೆ ಹಲವು ಸ್ವರೂಪಗಳು ಪರಿಕಲ್ಪನೆಗಳೂ ಇವೆ .ನನ್ನ ಕ್ಷೇತ್ರ ಕಾರ್ಯ ಅಧ್ಯಯನದ ಆಧಾರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ
ನಾಗಾರಾಧನೆ ವಿಶ್ವ ವ್ಯಾಪಿಯಾದುದು .ಇದು ತುಳುನಾಡಿನ ಪ್ರಮುಖ ಆರಾಧನಾ ಪದ್ಧತಿಯಾಗಿದೆ. ತುಳುನಾಡಿನಲ್ಲಿ ಪರಿಶಿಷ್ಟರಿಂದ ಹಿಡಿದು ಬ್ರಾಹ್ಮಣರವರೆಗೆ ಎಲ್ಲ ಜಾತಿ, ಸಮುದಾಯಗಳಲ್ಲಿ ವಿವಿಧ ಸಂಪ್ರದಾಯಗಳಲ್ಲಿ ವಿವಿಧ ರೀತಿಯಲ್ಲಿ ಬಹಳ ವೈಭವಯುತವಾಗಿ ಹಾಗೂ ಕಲಾತ್ಮಕವಾಗಿ ನಾಗಾರಾಧನೆ ನಡೆಯುತ್ತದೆ. ನಾಗಾರಾಧನೆಯು ವೈದಿಕ,ತಾಂತ್ರಿಕ ಮತ್ತು ಜನಪದ ವಿಧಿವಿಧಾನಗಳಲ್ಲಿ ನಡೆಯುತ್ತದೆ. ನಾಗರಪಂಚಮಿ, ಅನಂತನ ವ್ರತ, ನಾಗಪ್ರತಿಷ್ಠೆ, ಬ್ರಹ್ಮಚಾರಿ ಆರಾಧನೆ, ಸರ್ಪ ಸಂಸ್ಕಾರ / ಶಾಕಾ ಸಂಸ್ಕಾರ ನಾಗಪ್ರತಿಷ್ಠಾಪನೆ ಬ್ರಹ್ಮ ಸಮಾರಾಧನೆ ಸುಬ್ರಹ್ಮಣ್ಯ ಆರಾಧನೆ ಬ್ರಹ್ಮಚಾರಿ ಆರಾಧನೆಗಳು ವೈದಿಕ ಮೂಲ ನಾಗ ಬ್ರಹ್ಮ ಆರಾಧನಾ ಪ್ರಕಾರಗಳಾಗಿವೆ ನಾಗಮಂಡಲ, ಢಕ್ಕೆಬಲಿ, ಆಶ್ಲೇಷಾಬಲಿ ನಾಗದರ್ಶನ, ತಂಬಿಲ, ಹಾಲಿಟ್ಟು ಸೇವೆ ತಾಂತ್ರಿಕ ಮೂಲಪ್ರಕಾರಗಳಾಗಿವೆ ತನು ಎರೆಯುವುದು ಕಂಚಿಲು ಸೇವೆ ಕದಿರು ಕಟ್ಟಿ ಸೇವೆ ನೀರು ಸ್ನಾನ ಕಾಡ್ಯನಾಟ ಪಾಣರಾಟ ಬಾಕುಡರ ಸರ್ಪಕೋಲ ,ಬೆರ್ಮರೆ ಸೇವೆ,ಮಡೆಸ್ನಾನ,ಪುಂಡಿಪಣವು,ಸ್ವಾಮಿ ಆರಾಧನೆ,ಬೆರ್ಮೆರೆ ಕೋಲ,ಕಂಬಳದ ನಾಗಬೆರ್ಮೆರ್ ಕೋಲ,ಗರಡಿಯಲ್ಲಿ ಬೆರ್ಮರ್ ಆರಾಧನೆ,ಆಲಡೆಗಳಲ್ಲಿ ಬೆರ್ಮರ್ ಆರಾಧನೆ,ಮುಗ್ಗೇರ್ಲು ಸಂಕೀರ್ಣದಲ್ಲಿ ಬೆರ್ಮೆರ ಆರಾಧನೆ,ಮೂರಿಳು ಆರಾಧನೆ,ಸರ್ಪಂತುಳ್ಳಲ್,ಸರ್ಪಂಕಳಿಗಳು ಜನಪದಮೂಲ ಪ್ರಕಾರಗಳು ಆಗಿವೆ
ಇಲ್ಲಿ ನಾಗನ ಜೊತೆಗೆ ಸಮನ್ವಯಗೊಂಡು ಬೆರ್ಮೆರ್ ನಾಗ ಬ್ರಹ್ಮ ನಾಗಿ ಆರಾಧನೆ ಪಡೆಯುತ್ತಾನೆ © ಡಾ.ಲಕ್ಷ್ಮೀ ಜಿ ಪ್ರಸಾದ್
ತುಳುನಾಡಿನಲ್ಲಿ ನಾಗಬ್ರಹ್ಮ-ನಾಗಬೆರ್ಮೆರ್ ಎಂದೂ ಹೇಳುತ್ತಾರೆ. ತುಳುವರ ಬೆರ್ಮರ್ ತ್ರಿಮೂರ್ತಿಗಳಲ್ಲಿ ಒಬ್ಬನಾದ ಚತುರ್ಮುಖಬ್ರಹ್ಮನಲ್ಲ. ಆತ ಎಲ್ಲ ಭೂತಗಳ ಒಡೆಯ. ತುಳುನಾಡಿನ ಭೂತಗಳಿಗೆಲ್ಲ ಅವನು ಅಧ್ಯಕ್ಷ. ‘ಬೆರ್ಮರೆ ಬೀರ’ ಪಾಡ್ದನದಲ್ಲಿ ಆತನ ಜನನದ ಬಗ್ಗೆ ವಿವರವಿದೆ. ತುಳುವರ ಬೆರ್ಮೆರ್ ಯಾರೆಂಬ ಬಗ್ಗೆ ಸ್ಪಷ್ಟ ಆಧಾರ ಸಿಕ್ಕಿಲ್ಲ. ಈ ಬ್ರಹ್ಮನ ಬಗ್ಗೆ ಡಾ. ಸುಶೀಲಾ ಪಿ.ಉಪಾಧ್ಯಾಯರು - ‘ತುಳುವರ ಬೆರ್ಮ ತ್ರಿಮೂರ್ತಿಗಳಲೊಬ್ಬನಾದ ಬ್ರಹ್ಮನಲ್ಲ. ಜೈನ ಸಂಪ್ರದಾಯದಿಂದಾಗಿ ತುಳು ಸಂಸ್ಕ್ರತಿಯಲ್ಲಿ ಸೇರಿ ಹೋದ ಯಕ್ಷಬ್ರಹ್ಮನೋ ಅಥವಾ ನಾಗಬ್ರಹ್ಮನೋ ಅಥವಾ ತುಳುವರದ್ದೇ ಆದ ಇನ್ನೊಬ್ಬ ಬ್ರಹ್ಮನೋ ಇರಬೇಕು’ ಎಂದು ಹೇಳಿದ್ದಾರೆ. ಕೆಲವು ಪಾಡ್ದನಗಳಲ್ಲಿ ಬೆರ್ಮೆರ್ ಎಂದೂ, ಇನ್ನು ಕೆಲವು ಪಾಡ್ದನಗಳಲ್ಲಿ ಈತನನ್ನು ನಾಗಬೆರ್ಮೆರ್ ಎಂದೂ ಹೇಳಲಾಗಿದೆ. ‘ಬ್ರಹ್ಮ, ನಾರಾಯಣ, ಈಶ್ವರ ದೇವರುಗಳನ್ನು’ ಪಾಡ್ದನಗಳು ಉಲ್ಲೇಖಿಸುತ್ತವೆ ... ಪಾಡ್ದನಗಳ ಬ್ರಹ್ಮ ಚತುರ್ಮುಖ ಬ್ರಹ್ಮನಲ್ಲ” ಎಂದು ಡಾ. ಅಮೃತ ಸೋಮೇಶ್ವರ ಅವರು ಅಭಿಪ್ರಾಯಪಟ್ಟಿದ್ದಾರೆ. ನಾಗಾರಾಧನೆಯ ಬಗ್ಗೆ ಹೇಳುತ್ತಾ “ನಾಗನಂತೂ ಪ್ರತ್ಯೇಕ ರೀತಿಯಲ್ಲಿ ಆರಾಧನೆಗೊಳ್ಳುತ್ತಾನಲ್ಲದೆ ನಾಗಬ್ರಹ್ಮದೈವವಾಗಿಯೂ ಪ್ರಕಟನಾಗಿದ್ದಾನೆ. ನಾಗಬ್ರಹ್ಮನಿಗೆ ಸಂಬಂಧಿಸಿದ ಪಾಡ್ದನವೂ ಇದೆ” ಎಂದು ಡಾ. ಅಮೃತ ಸೋಮೇಶ್ವರ ಹೇಳಿದ್ದಾರೆ. . ಈ ಬಗ್ಗೆ ಡಾ. ವಿವೇಕ ರೈ ಅವರು “ಭೂತಾರಾಧನೆಗಿಂತ ಪೂರ್ವದ, ಭೂತಾರಾಧನೆಗೆ ಮೂಲಸ್ವರೂಪದ, ತುಳುನಾಡಿನಲ್ಲಿ ವಿಶಿಷ್ಟವಾದ ಒಂದು ಧಾರ್ಮಿಕ ಸ್ವರೂಪ ಪಾಡ್ದನಗಳಲ್ಲಿ ಕಾಣಿಸಿಕೊಂಡಿದೆ. ಅದು ಬ್ರಹ್ಮರ ಆರಾಧನೆ” ಎಂದು ಹೇಳಿದ್ದಾರೆ.
ನಾಗಬ್ರಹ್ಮನಿಗೆ ದೈವದ ರೂಪದಲ್ಲಿಯೂ ಆರಾಧನೆ ಇದೆ. ಇದನ್ನು ‘ನಾಗಬೆರ್ಮೆರ್ ಕೋಲ’ ಎನ್ನುತ್ತಾರೆ. ಬ್ರಹ್ಮನೊಂದಿಗೆ ಆರಾಧನೆ ಪಡೆಯುವ ರಕ್ತೇಶ್ವರಿ, ಗುಳಿಗ, ನಂದಿಗೋಣ ಮೊದಲಾದ ದೈವಗಳಿಗೆ ಕೂಡ ಕೋಲ, ತಂಬಿಲ ರೂಪದಲ್ಲಿ ಸೇವೆ ನಡೆಸುತ್ತಾರೆ. ಜೈನರ ಯಕ್ಷಬ್ರಹ್ಮ ಪಾಶ್ರ್ವನಾಥನ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಯಕ್ಷ. ಯಕ್ಷಬ್ರಹ್ಮನು ಕುದುರೆಯೇರಿ ಕುಳಿತ ವೀರನಾಗಿ ಕಾಣಿಸುತ್ತಾನೆ. ಧರಣೇಂದ್ರ ಯಕ್ಷನಿಗೆ ನಾಗಸಂಬಂಧಿ ಕಥೆಯಿದೆ. ನಾಗಬ್ರಹ್ಮನು ಮೇಲ್ಭಾಗ ಪುರುಷನಾಗಿಯೂ ಕೆಳಭಾಗ ನಾಗರೂಪಿಯೂ ಆಗಿದ್ದಾನೆ. ಕೆಲವೆಡೆ ಒಂದು ಬದಿ ನಾಗನನ್ನು, ಇನ್ನೊಂದು ಬದಿಯಲ್ಲಿ ಪುರುಷರೂಪವನ್ನು ಕೆತ್ತಿರುವ ನಾಗಬ್ರಹ್ಮನ ಮೂರ್ತಿಗಳಿವೆ© ಡಾ.ಲಕ್ಷ್ಮೀ ಜಿ ಪ್ರಸಾದ್
ಪೀಟರ್ ಜೆ.ಕ್ಲಾಸ್ ಅವರು “ ‘ಬೆರ್ಮೆರ್’ ಒಬ್ಬ ವನದೇವತೆ. ಆತನ ಎರಡು ಮುಖಗಳು ರಾಜನ ಕರ್ತವ್ಯ ಮತ್ತು ಸಂಪದಭಿವೃದ್ಧಿಯನ್ನು ಸೂಚಿಸುತ್ತವೆ” ಎಂದು ಹೇಳಿದ್ದಾರೆ9. “ಕೆಲವೊಂದು ತುಳುನಾಡಿನ ಶಾಸನಗಳು ಬ್ರಹ್ಮನನ್ನು ದೇವರೆಂದು ಉಲ್ಲೇಖಿಸಿದ್ದು, ಆದರೆ ಬಹಳ ವಿಚಿತ್ರವೆನ್ನುವಂತೆ ಅವನ್ನು ಭೂತಗಳ ಸಾಲಿಗೆ ಸೇರಿಸಿವೆ. ನಾಗನನ್ನು ಬ್ರಹ್ಮನೊಂದಿಗೆ ಅವಿಭಾಜ್ಯವಾಗಿ ವಿಂಗಡಿಸಲಾಗಿದೆ” ಎಂದು ಡಾ. ಗುರುರಾಜಭಟ್ಟರು ಹೇಳಿದ್ದಾರೆ.
ಪಾಡ್ದನದಲ್ಲಿ ಏಕಸಾಲೆರ್ ಮತ್ತು ದೆಯ್ಯಾರ್ ದಂಪತಿಯ ಅತಿಮಾನುಷ ಶಕ್ತಿಯ ಮಗುವೇ ಬೆರ್ಮೆರ್..ಈತ ಘಟ್ಟದ ಮೇಲೆ ಹೋಗಿ ದೇವರ ಶರ್ಮಿಜ ಪಕ್ಷಿಗಳಿಗೆ ಬಾಣ ಬಿಟ್ಟು ಬೀಳಿಸುತ್ತಾನೆ ನಂತರ ಘಟ್ಟದ ಕೆಳಹೆ ಬಂದು ಪದ್ಮಾ ಎಂಬ ನದಿಯನ್ನು ಎಡಭಾಗದಿಂದ ಬಕ್ಜೆ ತಿರುಗಿಸಿ ಬ್ರಹ್ಮ / ಬೆರ್ಮೆರ್ ಸುಬ್ರಹ್ಮಣ್ಯ ನಾಗಿ ನೆಲೆಯಾಗುತ್ತಾನೆ.ಇಲ್ಲಿ ಏಕಸಾಲೆರ್ ದಂಪತಿಯ ಮಗು ಹುಟ್ಟುವಾಗಲೇ ಚಕ್ರವರ್ತಿ ಯ ಲಕ್ಷಣಗಳನ್ನು ಹೊಂದಿರುತ್ತದೆ ಎಂಬುದು ಗಮನಾರ್ಹ ವಿಚಾರ © ಡಾ.ಲಕ್ಷ್ಮೀ ಜಿ ಪ್ರಸಾದ್
ಬೆಳ್ಮಣ್ಣಿನ ತಾಮ್ರಶಾಸನದಲ್ಲಿ “ಬ್ರಹ್ಮನಿಂದ ರಕ್ಷಿತವಾದ ಕುಲದಲ್ಲಿ ಅಭಿಮಾನವುಳ್ಳ ಶ್ರೀಮದಾಳುವರಸ . . . ಎಂದಿದ್ದು, ಬ್ರಹ್ಮ ಯಾವುದೋ ಒಂದು ಕುಲದ ಕುಲದೈವವಾಗಿದ್ದಿರಬೇಕು ಎಂಬರ್ಥ ಬರುತ್ತದೆ.
“ಅಳುಪರ ಅರಸೊತ್ತಿಗೆಯ ಕೊನೆಯವರೆಗೆ ಅಂದರೆ ಸುಮಾರು 14ನೇ ಶತಮಾನದ ಕೊನೆಯವರೆಗೆ ತುಳುವರ ಬ್ರಹ್ಮನು ವೈದಿಕ ಸ್ವರೂಪದ ಚತುರ್ಮುಖ ಬ್ರಹ್ಮನಾಗಿ ಈ ನೆಲದಲ್ಲಿ ಚಿತ್ರಿತವಾಗಿಲ್ಲ ಹಾಗೂ ನಾಗನು ಸುಬ್ರಹ್ಮಣ್ಯನೊಂದಿಗೆ ಸೇರ್ಪಡೆಗೊಂಡಿಲ್ಲ” ಎಂದು ಪೀಟರ್ ಜೆ.ಕ್ಲಾಸ್ ಹೇಳುತ್ತಾರೆ.
ಕುದುರೆಯ ಮೇಲೆ ಕುಳಿತ ಖಡ್ಗಧಾರಿಯಾದ, ತಲೆಯ ಮೇಲೆ ಕೊಡೆ ಹಿಡಿದುಕೊಂಡ ರಾಜಯೋಧನಾಗಿ ಚಿತ್ರಿತವಾಗಿರುವ ಬ್ರಹ್ಮನ ಸ್ವರೂಪದಲ್ಲಿ ಜೈನರ ಪ್ರಭಾವವಿದೆಯೆಂದು ಡಾ. ಗುರುರಾಜಭಟ್ಟರು ಅಭಿಪ್ರಾಯಪಟ್ಟಿದ್ದಾರೆ.
ಕೆಲವೆಡೆ ನಾಗಬ್ರಹ್ಮನ ಮೂರ್ತಿಯಲ್ಲಿರುವ ಬ್ರಹ್ಮನ ಆಕಾರ ಜಪಮಾಲೆಯನ್ನು ಧರಿಸಿ ಕೈಮುಗಿದು ಕುಳಿತ ಯೋಗಿಯದ್ದಾಗಿದೆ. ಇಲ್ಲಿ ನಾಥ ಪಂಥದ ಪ್ರಭಾವವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.
ಬಲಿಯೇಂದ್ರ ಪೂಜೆ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರನನ್ನು ತುಳುನಾಡಿನ ಮೂಲಪುರುಷನೆಂದು, ಭೂಮಿಪುತ್ರನೆಂದು ಭಾವಿಸುತ್ತಾರೆ. ನಾಗಬ್ರಹ್ಮ ಆರಾಧನೆಗೂ ಬಲಿಯೇಂದ್ರ ಆರಾಧನೆಗೂ ಸಂಬಂಧ ಇದೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಬೆರ್ಮರ ತಾಣ ಅಥವಾ ನಾಗಬನದಲ್ಲಿನ ಬೆರ್ಮರ ಕಲ್ಲು, ನಾಗರಕಲ್ಲುಗಳು ಮಣ್ಣು, ಹುತ್ತದಿಂದ ಮುಚ್ಚಿ ಹೋದಾಗ ಅದನ್ನು ಅಗೆಯುವ ಧೈರ್ಯ ಇರುವುದಿಲ್ಲ. ಆಗ ಆರಾಧನೆಗಾಗಿ ಹೊಸ ಕಲ್ಲನ್ನು / ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕಾಗಿ ಬರುತ್ತದೆ. ಹಳೆಯ ರೂಪ ಕಾಣಿಸದಿದ್ದಾಗ, ಆಗಿನ ಕಾಲದಲ್ಲಿ ಪ್ರಚಲಿತವಿರುವ ನಂಬಿಕೆಯಂತೆ ಶಿಲ್ಪಗಳು, ಮೂರ್ತಿಗಳು ಕೆತ್ತಲ್ಪಡುವುದು ಸಾಮಾನ್ಯವಾದ ವಿಚಾರ. ಇದರಿಂದ ನಾಗನ ಹೆಡೆಯನ್ನು ಹೊಂದಿರುವ, ಸೊಂಟದ ಮೇಲ್ಭಾಗದಲ್ಲಿ ಮನುಷ್ಯರೂಪು, ಕೆಳಭಾಗದಲ್ಲಿ ಸರ್ಪಾಕಾರವನ್ನು ಹೊಂದಿರುವ ನಾಗಬ್ರಹ್ಮ ಶಿಲ್ಪಗಳು ರಚನೆಯಾಗಿರಬಹುದು.
ಆಲಡೆಗಳನ್ನು ಹೊಸತಾಗಿ ಕಟ್ಟುವ ಸಂಪ್ರದಾಯವಿಲ್ಲ. ಇದೇ ರೀತಿ ಬ್ರಹ್ಮಸ್ಥಾನವನ್ನು ಕೂಡ ಹೊಸತಾಗಿ ಕಟ್ಟುವುದಿಲ್ಲ. ಜೀರ್ಣೋದ್ಧಾರ ಮಾತ್ರ ಮಾಡುತ್ತಾರೆ. ಆದರೆ ನಾಗ ಬನಗಳನ್ನು, ಗರಡಿಗಳನ್ನು ಹೊಸತಾಗಿ ನಿರ್ಮಿಸುವ ಸಂಪ್ರದಾಯವಿದೆ. ಆದ್ದರಿಂದ ಪ್ರಾಚೀನ ನಾಗಬನಗಳಲ್ಲಿ ಮಾತ್ರ ನಾಗಬ್ರಹ್ಮನ ಆರಾಧನೆ ಇದೆ.
ಬೆರ್ಮೆರ್ ಸ್ವರೂಪ
ಬ್ರಹ್ಮ ಶಬ್ದ ಬೃಹತ್ ಧಾತುವಿನಿಂದ ಹುಟ್ಟಿದ್ದು, ಇದರ ಅರ್ಥ ಅಗಾಧವಾದದ್ದು, ವಿಶಾಲವಾದದ್ದು ಎಂದಾಗಿದೆ. ತುಳುವಿನ ಬೆರ್ಮೆರ್ ವೈದಿಕ ಸಂಸ್ಕøತಿಯ ಚತುರ್ಮುಖ ಬ್ರಹ್ಮನಲ್ಲ. ಆದರೂ ಆತನ ಸ್ವರೂಪ ಬೃಹತ್ತಾದುದೇ ಆಗಿದೆ. “ ‘ಬೆರ್ಮೆರ್‍ಗ್’ ಪೂಪೂಜನ ಕರಿತ್‍ದ್ ಮರಕ್ಕ್ ಆಲಂಗಿ ಆಯುಸ್ ಕಾಯ್ಪುನಗ ತರೆಪೋಂಡು ಕಾಟೇಸ್ರೋಗು ಕಡೆ ಪೋಂಡು ಕೋಟೇಸ್ರೂಗು” (ಕ) “ಬೆರ್ಮರ ಹೂಪೂಜೆ ಆದಾಗ ಮರಕ್ಕೆ ಬಳ್ಳಿ ಹಾಕಿ ಕಾಯಿಸುವಾಗ ತಲೆ ಕಾಟೇಶ್ವರಕ್ಕೆ ಹೋಯಿತು. ಕಡೆ (ಕಾಲು) ಕೋಟೇಶ್ವರಕ್ಕೆ ಹೋಯಿತು” ಎಂಬಲ್ಲಿ ಬೆರ್ಮೆರ್‍ನ ಬೃಹತ್ತತೆಯ ಅರಿವಾಗುತ್ತದೆ. ರಕ್ತೇಶ್ವರಿ ಪಾಡ್ದನದಲ್ಲಿ “ಮಂಗ್ಲೂರ್‍ಡ್ದ್ ಬಾರ್ಕೂರು ಮುಟ್ಟ, ಬಾರ್ಕೂರುಡ್ಡ್ ಮಂಗ್ಲೂರ್ ಮುಟ್ಟ ಅಡ್ಡ ಲೆಕ್ಕೆಸಿರಿ, ನೀಟ ಬೆರ್ಮೆರ್, ನೀರ್‍ಡ್ ಕನ್ಯಲು ಉದ್ಯ ಬೆಂದೆರ್ (ಕ) “ಬಾರಕೂರಿನಿಂದ ಮಂಗಳೂರಿನವರೆಗೆ ಮಂಗಳೂರಿನಿಂದ ಬಾರಕೂರಿನವರೆಗೆ ಅಡ್ಡಕ್ಕೆ ರಕ್ತೇಶ್ವರಿ, ನೀಟಕ್ಕೆ ಬೆರ್ಮರು, ನೀರಿನಲ್ಲಿ ಕನ್ಯೆಯರು ಉದ್ಭವವಾದರು” ಎಂಬಲ್ಲಿ ಕೂಡ ಬೆರ್ಮೆರ್‍ನ ಅಗಾಧತೆ ವ್ಯಕ್ತವಾಗುತ್ತದೆ
ತುಳುವರ ಬೆರ್ಮೆರ್ ಒಂದೇ ಏಕ ರೂಪಿ ಅಲ್ಲ . ಬೆರ್ಮೆರ್ ಭೂತ ,ಕಳೆಂಜ ಬೆರ್ಮೆರ್ ,ಭೂತ ಬ್ರಹ್ಮ ,ಬ್ರಹ್ಮ ಯಕ್ಷ ,ನಾಗ ಭೂತ ,ನಾಗ ಮಂಡಲದ,ನಾಗ ಯಕ್ಷ ,ಕೊಳನಾಗ ಯಕ್ಷ ಬ್ರಹ್ಮ ,ನಾಗ ಬ್ರಹ್ಮ ಮೊದಲಾದವುಗಳು ಈತನ ನಾನಾ ಸ್ವರೂಪಗಳಾಗಿವೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಬೆರ್ಮೆರ್ ಭೂತದ ಸ್ವರೂಪ
ಕಂಬಳದಲ್ಲಿ ಆರಾಧನೆಯಾಗುವ ಬೆರ್ಮೆರ್ ಮುಖವರ್ಣಿಕೆ ಬಹಳ ಸರಳವಾಗಿರುತ್ತದೆ. ಮುಖಕ್ಕೆ ಹಳದಿ ಬಣ್ಣ, ಹಣೆಯಲ್ಲಿ ‘ಯು’ ಆಕಾರದ ಬಿಳಿನಾಮ, ಕೆನ್ನೆಗೆಮುದ್ರೆ ಇರುತ್ತದೆ. ಕಂಬಳದಲ್ಲಿ ಆರಾಧನೆಯಾಗುವಾಗ ಹಿಡಿಯುವ ಬಿಲ್ಲು ಬಾಣವನ್ನು ಕೂಡ ತೆಂಗಿನ ಕಡ್ಡಿ ಹಾಗೂ ಪಾಂದೇವುನಿಂದ (ನಾರು) ತಯಾರಿಸಿರುತ್ತಾರೆ. ತಲೆಪಟ್ಟ ಮುಡಿ, ಎಲ್ಲವನ್ನು ತೆಂಗಿನ ತಿರಿಯಿಂದ ತಯಾರಿಸಿರುತ್ತಾರೆ. ಕಂಬಳದಲ್ಲಿ ಆರಾಧನೆಯಾಗುವಾಗ ಕಾಲಿಗೆ ಗಗ್ಗರ ಇರುವುದಾದರೂ ಗಗ್ಗರದೆಚ್ಚಿ ಇರುವುದಿಲ್ಲ. ಕಾಲಿಗೆ ಅಡಿಕೆಹಾಳೆಯಿಂದ ತಯಾರಿಸಿದ ಕಾಲುಕಟ್ಟನ್ನು ಬಳಸುತ್ತಾರೆ.
ಬೆರ್ಮೆರ್ ಗೆ ದೊಡ್ಡ ಮೀಸೆ ಅಣಿ ಇದ್ದು ಅರಸೊತ್ತಿಗೆಯ ಪ್ರತೀಕವಾಗಿ ಬಿಲ್ಲು ಬಾಣಗಳ ಆಯುಧವಿದೆ.ಎಂಟೂ ದಿಕ್ಕುಗಳಿಗೆ ಬಾಣ ಪ್ರಯೋಗಿಸುವ ಬೆರ್ಮೆರ್ ಅರಸ ಅಥವಾ ಚಕ್ರವರ್ತಿಯಾಗಿರುವುದರ ಸಂಕೇತವಾಗಿದೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಜಾಲಾಟ ಹಾಗೂ ಮುಗೇರ್ಲು ಕೋಲದ ಬೆರ್ಮೆರಿನ ಮುಖವರ್ಣಿಕೆ ಸ್ವಲ್ಪ ವಿಶಿಷ್ಟವಾಗಿರುತ್ತದೆ. ಇಲ್ಲಿ ಬೆರ್ಮರ್‍ಗೆ ದಪ್ಪನಾದ ಮೀಸೆಕಟ್ಟು ಇರುತ್ತದೆ. ಹುಬ್ಬುಗಳನ್ನು ಕಪ್ಪುಗೊಳಿಸಿ ಕಣ್ಣಿನ ಕೆಳಭಾಗದಲ್ಲಿ ಕಪ್ಪು ಮತ್ತು ಕೆಂಪುಬಣ್ಣದ ರೇಖೆಗಳನ್ನು ಪರಸ್ಪರ ಸಂಧಿಸುವಂತೆ ಎಳೆಯುತ್ತಾರೆ. ಹಣೆಯಲ್ಲಿ ‘ಯು’ ಆಕಾರದ ಬಿಳಿನಾಮವಿರುತ್ತದೆ. ನಾಮ ಅಂಚಿನ ಗೆರೆಗಳು ಕಪ್ಪಿದ್ದು ಮಧ್ಯಕ್ಕೆ ಕೆಂಪುಬಣ್ಣವನ್ನು ತುಂಬುತ್ತಾರೆ. ಕಪ್ಪು ಅಂಚಿನ ಗೆರೆಗಳನ್ನು ಹೊರಮೈಗೆ ಬಿಳಿಗೆರೆಯನ್ನು ಎಳೆಯುತ್ತಾರೆ. ಈ ಉದ್ದ ನಾಮದ ಆಚೀಚೆಗೆ ಸಣ್ಣ ‘ಯು’ ಅಕ್ಷರವನ್ನು ಹಿಂದುಮುಂದಾಗಿ ಬರೆಯುತ್ತಾರೆ. ಹಣೆಯ ಬಣ್ಣಗಾರಿಕೆಯಲ್ಲಿ ಸಮತೋಲನ ಸಾಧಿಸುತ್ತಾರೆ. ಮೂಗಿನ ಮೇಲೆ ಕಣ್ಣುಗಳ ನಡುವೆ ಕೆಂಪು ತ್ರಿಕೋನಾಕೃತಿ ಇರುತ್ತದೆ. ಕಪ್ಪು ಮೀಸೆಯನ್ನು ಕಪ್ಪುಬಣ್ಣದಿಂದ ಚಿತ್ರಿಸಿ ತುಟಿಯನ್ನು ಕೆಂಪು ಮಾಡುತ್ತಾರೆ. ಹಣೆಯ ನಾಮಕ್ಕೆ ಸಂವಾದಿಯಾಗಿ ಗದ್ದದಲ್ಲಿಯೂ ಕೆಂಪು, ಕಪ್ಪು, ಬಿಳಿ ಬಣ್ಣಗಳಿಂದ ಕೂಡಿದ ‘ಯು’ ರೀತಿಯ ರಚನೆ ಇರುವುದರಿಂದ ಮುಖವರ್ಣಿಕೆಯಲ್ಲಿ ಸಮತೋಲನವಿದೆ. ಒಟ್ಟಿನಲ್ಲಿ “ಇಡಿಯ ಮುಖವನ್ನು ಹಣೆ, ಗಲ್ಲ ಮತ್ತು ಗದ್ದ ಎಂದು ವಿಭಜಿಸಿ ತೋರಿಸುವುದಲ್ಲಿ ಈ ಬಣ್ಣಗಳ ಗೆರೆಗಳ ವಿನ್ಯಾಸವು ಹಿಡಿದಿರುವ ರೀತಿ ಗಮನ ಸೆಳೆಯುತ್ತದೆ” ಎಂದು ಡಾ. ಚಿನ್ನಪ್ಪಗೌಡ ಹೇಳಿದ್ದಾರೆ. ಪ್ರದೇಶದಿಂದ ಪ್ರದೇಶಕ್ಕೆ, ಭೂ ಮಾಧ್ಯಮರಿಂದ ಭೂತಮಾಧ್ಯಮರಿಗೆ ಈ ವಿನ್ಯಾಸವು ತುಸು ಭಿನ್ನ ಭಿನ್ನವಾಗಿರುತ್ತದೆ. ಆದರೆ ‘ಯು’ ಆಕಾರದ ಬಿಳಿನಾಮ, ಮೂಗು, ಕೆನ್ನೆಯ ಮೇಲಿನ ಆಕೃತಿಗಳು ಸಮಾನವಾಗಿರುತ್ತವೆ. ಸಾಮಾನ್ಯವಾಗಿ ಬೆರ್ಮೆರೆ ಭೂತಕ್ಕೆ, ಡಾಬು, ಮುದ್ರೆ, ಕೊರಳು ಸರಪಳಿ, ಎದೆಹಾರ, ಎದೆಪದಕ, ತಲೆ ಮಣಿ, ತಲೆಪಟ್ಟಿ, ಭುಜ ಕಿರೀಟ, ತಲೆಪಟ್ಟ, ಕೆಬಿನ, ಎದೆಹಾರ ಹಾಗು ನಾಗಾಭರಣಗಳು ಇರುತ್ತವೆ. ಬೆರ್ಮೆರ ಭೂತಕ್ಕೆ ಮುಖವಾಡ ಇಡುವ ಪದ್ಧತಿ ಎಲ್ಲೂ ಕಾಣಿಸುವುದಿಲ್ಲ.© ಡಾ.ಲಕ್ಷ್ಮೀ ಜಿ ಪ್ರಸಾದ್
ಕಳೆಂಜ ಬೆರ್ಮೆರ್
ತುಳುನಾಡಿನಲ್ಲಿ ಆಟಿಕಳೆಂಜನ ಕುಣಿತ ಬಹಳ ಪ್ರಸಿದ್ಧವಾದುದು. ಕಳೆಂಜನನ್ನು ಬೆರ್ಮೆರ್ ಮಾಣಿ ಎಂದೂ, ಕಲೆಂಜ ಬೆರ್ಮೆರ್ ಎಂದೂ, ಬೆರ್ಮೆರ್ ಎಂದೂ ಕರೆಯುತ್ತಾರೆ. ಈತನನ್ನು ಬೆರ್ಮೆರ್‍ನ ಪ್ರತಿನಿಧಿ ಎಂದೂ ಹೇಳುತ್ತಾರೆ. “ತುಳುನಾಡಿನ ಪ್ರಾಚೀನ ಆರಾಧ್ಯದೈವವಾದ ಬೆರ್ಮೆರ್‍ನ ಪ್ರತಿನಿಧಿಯಾದ ಕಳೆಂಜನು ಆಟಿತಿಂಗಳಿನಲ್ಲಿ ಊರಿಗೆ ಹಬ್ಬದ ಮಾರಿಬೀದಿಯನ್ನು ಕಳೆಯುವುದಕ್ಕಾಗಿಯೇ ಬರುವುದೇ ‘ಆಟಿ ಕಳೆಂಜ’ ಎಂದು ಗುರುತಿಸಬಹುದು” ಎಂದು ಡಾ. ಅಭಯ ಕುಮಾರ ಕೌಕ್ರಾಡಿ ಹೇಳಿದ್ದಾರೆ.
ಈತನಿಗೆ ಕೇಪುಲ ಗಿಡದ ಕೋಲಿನಿಂದ ಮಾಡಿದ ಮುಡಿ (ಕಿರೀಟ)ವಿದೆ. ಮೈಕೈಗಳಿಗೆ ಬಿಳಿಬಣ್ಣದ ಸೇಡಿಯನ್ನು ಬಳಿದು, ಕಿಬ್ಬೊಟ್ಟೆಯಿಂದ ಎದೆಯವರೆಗೆ ಕೆಂಪುಬಣ್ಣದಲ್ಲಿ ಗುಣಿಸು (x) ಚಿಹ್ನೆಯ ಆಕಾರವನ್ನು ಬಿಡಿಸುತ್ತಾರೆ. ಸೊಂಟಕ್ಕೆ ತೆಂಗಿನ ತಿರಿ, ಮುಖಕ್ಕೆ ತೆಂಗಿನ ನಾರಿನಲ್ಲಿ ಮಾಡಿದ ಮೀಸೆ ಮತ್ತು ಗಡ್ಡ ಇರುತ್ತದೆ. ಕೈಯಲ್ಲಿ ಉದ್ದದ ಪನೆಛತ್ರ ಮತ್ತು ದುಡಿ ಇರುತ್ತದೆ. ಆತನ ರೂಪದ ವರ್ಣನೆ ಹೀಗಿದೆ:
ತುಳು: ಬಿರ್ಮರೆ ಮಾನಿಯಾಂಡ ಕಲೆಂಜ ಮುಡಿದೀವೊನು
ಮುದಿ ದೀವೊನು ಕಲೆಂಜ ಸತ್ತಿಗೆ, ಪತ್ತೊನು
ಸತ್ತಿಗೆ ಪತ್ತೊನು ಕಲೆಂಜ ಸವಲೆಯ ಬೀಜೆಮಾನು
ಸವಲೋ ಬೀಜೋನು ಬೀರ ತಿತೊನು
ಕಲೆಂಜ ಕಲೆಂಜ ಕಲೆಂಜ ಬೆರ್ಮರ್
ಕನ್ನಡ: ಬೆರ್ಮರ ಪ್ರತಿನಿಧಿಯಾದರೆ ಕಲೆಂಜ ಕಿರೀಟ ಇರಿಸಿಕೋ
ಕಿರೀಟ ಇಟ್ಟುಕೋ ಕಲೆಂಜ ಛತ್ರ ಹಿಡಿದುಕೋ
ಛತ್ರ ಹಿಡಿದುಕೋ ಕಲೆಂಜ ಚಾಮರ ಹಿಡಿದುಕೋ
ಚಾಮರ ಬೀಸಿಕೋ ಕಲೆಂಜ ಬಿರುದು ಕರೆಸಿಕೋ
ಕಲೆಂಜ ಕಲೆಂಜ ಕಲೆಂಜ ಕಲೆಂಜ ಬಿರ್ಮೆರ್
ಇಲ್ಲಿ ಕಲೆಂಜನನ್ನು ಬೆರ್ಮರ್ ಮಾಣಿ ಎಂದು ಹೇಳಿದ್ದರೂ ಕಿರೀಟ ಇಟ್ಟುಕೋ, ಸತ್ತಿಗೆ ಹಿಡಿ, ಚಾಮರ ಬೀಸಿಕೋ, ಇತ್ಯಾದಿ ಅರಸುವಿಗೆ ಉಚಿತವಾದ ವರ್ಣನೆಗಳನ್ನು ಮಾಡಿದೆ.
ಆಟಿಕಲೆಂಜನು ಋತುಮತಿಯಾಗದ ಹುಡುಗಿಯ ತಲೆಗೆ, ಗರ್ಭಿಣಿಯಾಗದ ಹೆಂಗಸಿನ ತಲೆಗೆ, ದನ ಕರು ಹಾಕದಿದ್ದರೆ ಅದರ ತಲೆಗೆ, ಮರ ಕಾಯಿ ಬಿಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವ ಪದ್ಧತಿ ಇದೆ. ಇಲ್ಲಿ ಕಲೆಂಜ ಸಂತಾನವನ್ನು ನೀಡುವ ಶಕ್ತಿಯಾಗಿ ಕಾಣಿಸುತ್ತಾನೆ. ಬೆರ್ಮರ್ ಕೂಡ ಫಲೀಕರಣದ ದೇವತೆ. ಮುಗೇರ್ಲು ಕೋಲದ ಆರಂಭದಲ್ಲಿ ಬೆರ್ಮೆರ್ ಸಂಧಿಯನ್ನು ಹೇಳುತ್ತಾರೆ. ಆ ಸಂಧಿಯಲ್ಲಿ ವರ್ಣಿಸಿರುವಂತೆ ಬೆರ್ಮೆರ್‍ನ ಸತ್ತಿಗೆ, ಚಾಮರ, ಕಿರೀಟಗಳು ಇವೆ. ಈ ಬಗ್ಗೆ ಡಾ. ಅಭಯ ಕುಮಾರ ಕೌಕ್ರಾಡಿ ಅವರು “ಈ ಸಂಧಿ ಬೆರ್ಮೆರ್ ಸ್ವರೂಪವನ್ನು ತಿಳಿಸಿದರೂ, ಈ ರೀತಿಯ ಬಿರ್ಮೆರ್ ಮೂರ್ತಿಯನ್ನು ತುಳುನಾಡಿನಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಆದರೆ ತುಳುನಾಡಿನ ಆಟಿತಿಂಗಳಿನಲ್ಲಿ ಬರುವ ಕಲೆಂಜನನ್ನು ಮುಗೇರರು ಬಿರ್ಮೆರ್ ಮಾನಿ ಎಂದು ಕರೆಯುತ್ತಾರೆ. ಅವನ ಸ್ವರೂಪವು ಸುಮಾರಾಗಿ ಈ ಸಂಧಿಯಲ್ಲಿ ಚಿತ್ರಿತವಾಗಿರುವಂತೆಯೇ ಕಂಡುಬರುತ್ತದೆ. ಹೀಗೆ ದಕ್ಷಿಣ ಕನ್ನಡದ ಒಂದು ವಿಶಿಷ್ಟ ಪ್ರಾಚೀನ ಆರಾಧನ ದೈವವೇ ಈ ಬಿರ್ಮೆರ್ ಎಂದು ನಿರ್ಧರಿಸಬಹುದಾಗಿದೆ” ಎಂದು ಹೇಳಿದ್ದಾರೆ.
ಭೂತಬ್ರಹ್ಮ
ಉಳ್ಳಾಲವನ್ನು 1623ರಲ್ಲಿ ಸಂದರ್ಶಿಸಿದ ಪಿಯತ್ರೋ ತಾನು ಕಂಡ ಬೆರ್ಮೆರ್ ವಿಗ್ರಹವನ್ನು ಹೀಗೆ ವರ್ಣಿಸಿದ್ದಾರೆ. “ ... ಅಲ್ಲಿ ಚೊಕ್ಕವಾಗಿ ಕಟ್ಟಿದ ಒಂದು ಸಣ್ಣ ಗುಡಿ ಇತ್ತು. .... ಇದರ ಒಳಗೆ ಭೂತದ (Devil) ವಿಗ್ರಹವಿತ್ತು. ವಿಗ್ರಹವನ್ನು ಬಿಳಿಯ ಕಲ್ಲಿನಿಂದ ಮಾಡಿದ್ದರು. ಕಲ್ಲನ್ನು ಗೆಯ್ದಿರಲಿಲ್ಲ. ವಿಗ್ರಹ ಒಂದು ಆಳು ಪ್ರಮಾಣಕ್ಕಿಂತ ದೊಡ್ಡದಾಗಿತ್ತು. ನಮ್ಮ ರೀತಿಯಲ್ಲಿ ವಿಗ್ರಹಕ್ಕೆ ಬಣ್ಣ ಹಚ್ಚಿ, ಒಬ್ಬ ಸುಂದರ ಯುವಕನಂತೆ ಕಾಣುವ ಹಾಗೆ ಮಾಡಿದ್ದರು. ತಲೆಯ ಮೇಲೆ ಕಿರೀಟವಿತ್ತು. ನಾಲ್ಕು ಕೈಗಳಿದ್ದವು. ಬಲಕೈಯಲ್ಲಿ ಚಕ್ರಾಕಾರದ ಏನೋ ಒಂದಿತ್ತು. ಇನ್ನೊಂದು ಕೈಯಲ್ಲಿ ಕಠಾರಿ ಇತ್ತು. ವಿಗ್ರಹದ ಕಾಲಗಳ ಮಧ್ಯೆ ಉದ್ದನೆಯ ಗಡ್ಡ ಬಿಟ್ಟ ಬೆತ್ತಲೆ ಮನುಷ್ಯನ ವಿಗ್ರಹವಿತ್ತು. ಅದರ ಕೈಗಳು ನೆಲಕ್ಕೆ ಊರಿದ್ದವು, ಪ್ರಾಣಿಯೊಂದು ನಡೆಯುವ ರೀತಿಯಲ್ಲಿ. ಇದರಮೇಲೆ ಭೂತ ಕುಳಿತು ಸವಾರಿ ಮಾಡುತ್ತಿರುವಂತೆ ಕಾಣುತ್ತಿತ್ತು. ವಿಗ್ರಹದ ಬಲಭಾಗದಲ್ಲಿ ದೊಡ್ಡ ಮರವೊಂದರ ಒಣಗಿದ ಬುಡ ಕಾಣಿಸುತ್ತಿತ್ತು. ಇಲ್ಲಿ ಭೂತದ ತೊಂದರೆ ಕಾಣಿಸುತ್ತಿತ್ತು. ಈ ತೊಂದರೆಯ ನಿವಾರಣೆಗಾಗಿ ರಾಣಿ ಇಲ್ಲಿ ಗುಡಿ ಕಟ್ಟಿಸಿ ಬ್ರಿಮೋರ್ (Brimor) ಎಂಬ ವಿಗ್ರಹವನ್ನು ಸ್ಥಾಪನೆ ಮಾಡಿಸಿದ್ದಾಳೆ. ಬ್ರಿಮೋರ್ ಎಂಬ ಭೂತ ಬಹಳ ದೊಡ್ಡ ಭೂತವಂತೆ, ಸಾವಿರಾರು ಭೂತಗಳಿಗೆ ಒಡೆಯನಂತೆ, ನನ್ನ ಈ ಊಹೆ ಸರಿ ಎಂದು ಆಮೇಲೆ ಇಲ್ಲಿಯವರು ಹೇಳಿದರು. ಈ ವಿಗ್ರಹಕ್ಕೆ ಬುತೋ (Buto-ಭೂತ) ಎಂದು ಹೆಸರು”.
ಇದು ಭೂತಬ್ರಹ್ಮನ ಕಲ್ಪನೆಯನ್ನು ಕೊಡುತ್ತದೆ. ಭೂತಬ್ರಹ್ಮನ ಕಲ್ಪನೆಯನ್ನು ಹೊಂದುವಂತಹ ಇನ್ನೊಂದು ವಿಗ್ರಹ ಉಡುಪಿಯ ವೀರಭದ್ರ ದೇವಾಲಯದಲ್ಲಿ ಇದೆ
ಇಂದಿಗೂ ದೇವರ ಉತ್ಸವ ಮೂರ್ತಿಯನ್ನು ತಲೆಯಲ್ಲಿ ಹೊತ್ತುಕೊಂಡು ಬಲಿ ಬರುವವರನ್ನು ಬ್ರಹ್ಮವಾಹನ ಎಂದು ಕರೆಯುತ್ತಾರೆ.
ಬ್ರಹ್ಮಯಕ್ಷ
ಶೀತಲನಾಥನ ಯಕ್ಷ ಬ್ರಹ್ಮಯಕ್ಷ. ಬ್ರಹ್ಮಯಕ್ಷ ಸಾಮಾನ್ಯವಾಗಿ ಕುದುರೆ ಏರಿ ಕುಳಿತು ಖಡ್ಗ ಹಿಡಿದು ವೀರನಂತೆ ಚಿತ್ರಿಸಲ್ಪಟ್ಟಿದ್ದಾನೆ. ಆದರೆ ಬಾಹುಬಲಿಯ ಮೂರ್ತಿ ಎದುರಿನ ಮಾನಸ್ತಂಭದ ತುದಿಯಲ್ಲಿ ಕುಳಿತ ಭಂಗಿಯ ಶಾಂತಮುದ್ರೆಯ ಬ್ರಹ್ಮಯಕ್ಷನ ಮೂರ್ತಿ ಇದೆ. ಕಾರ್ಕಳ ಶೀತಲನಾಥ ಗುಡಿಯ ಬ್ರಹ್ಮಯಕ್ಷನಿಗೆ ಆರು ಕೈಗಳಿದ್ದು, ಈ ಮೂರ್ತಿ ನಿಂತ ಭಂಗಿಯಲ್ಲಿದೆ. ಉಜಿರೆ ಬಸದಿಯಲ್ಲಿ ಬ್ರಹ್ಮಯಕ್ಷನ ಉದ್ಭವ ಶಿಲೆ ಇದೆ. ಇಲ್ಲಿ ಈತನದು ನಿರಾಕಾರನಾಗಿದ್ದರೂ ಬೆಳ್ಳಿರೇಖುಗಳಿಂದ ಪುರುಷರೂಪ ನೀಡಲಾಗಿದೆ. ಅನೇಕ ಬಸದಿಗಳಲ್ಲಿ ಒಂದು ಉರುಟಾದ ಕಲ್ಲನ್ನು ಬ್ರಹ್ಮಯಕ್ಷ ಎನ್ನುತ್ತಾರೆ. ಇದರಿಂದಾಗಿ ಆರಂಭದಲ್ಲಿ ಬ್ರಹ್ಮಯಕ್ಷನಿಗೆ ಸ್ಪಷ್ಟ ರೂಪವಿರಲಿಲ್ಲ. ಕಾಲಾಂತರದಲ್ಲಿ ಕುದುರೆ ಏರಿದ ವೀರನಾಗಿ ಚಿತ್ರಿಸಲಾಗಿದೆ ಎಂದು ತಿಳಿಯುತ್ತದೆ. ಯಕ್ಷಬ್ರಹ್ಮನ ಪ್ರಭಾವದಿಂದಾಗಿ ಗರೊಡಿಗಳ ಬೆರ್ಮೆರ್ ಕುದುರೆ ಏರಿದ ವೀರನಂತೆ ಚಿತ್ರಿಸಲ್ಪಟ್ಟಿರಬಹುದು.
ನಾಗಭೂತ
ಅರಿಬೈಲು, ಚೌಕಾರು ಗುತ್ತುಗಳಲ್ಲಿ ಕಂಬಳಕೋರಿಯಂದು ಪೂಕರೆ ಹಾಕುವಾಗ ನಾಗಭೂತಕ್ಕೆ ಕೋಲವಿದೆ. ನಾಗಭೂತದ ಮುಖವರ್ಣಿಕೆ ಸರಳವಾಗಿದ್ದು, ಕಪ್ಪುಬಣ್ಣದ ಮೇಲೆ ಹಳದಿ ನಾಗಚಿಹ್ನೆಗಳನ್ನು ಬರೆಯುತ್ತಾರೆ. ತಲೆಗೆ ನಾಗನ ಹೆಡೆಯ ಆಕಾರದ ಮುಡಿಯನ್ನು ಹಿಡಿಯುತ್ತಾರೆ. ಚೌಕಾರುಗುತ್ತು ಹಾಗೂ ಅರಿಬೈಲಿನಲ್ಲಿ ನಾಗಭೂತದ ಮುಡಿಯಲ್ಲಿ ಮೂರು ಹೆಡೆಗಳಿವೆ. ಇಚ್ಲಂಗೋಡಿನ ಕೃಷ್ಣಸರ್ಪಕೋಲದಲ್ಲಿ ಮೂರು ಹೆಡೆಯ ಮುಖವಾಡ ಧರಿಸುತ್ತಾರೆ.
ನಾಗಮಂಡಲದ ನಾಗ ಯಕ್ಷ ,ಕೊಳನಾಗ ,ಬ್ರಹ್ಮ ಯಕ್ಷ
ನಾಗಮಂಡಲ, ಢಕ್ಕೆಬಲಿ/ಬ್ರಹ್ಮಮಂಡಲಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವ ವೈಭವದ ಆಚರಣೆ. ಮೂಲತಃ ಢಕ್ಕೆಬಲಿ, ನಾಗಮಂಡಲಗಳು ಒಂದೇ ಅಲ್ಲ. ಆದರೆ ಈಗ ಇವುಗಳ ಆಚರಣೆ ಹೆಚ್ಚು ಕಡಿಮೆ ಒಂದೇ ರೀತಿ ಇದೆ.
ದೇವರ ಆರಾಧನೆಯಲ್ಲಿ ಹನ್ನೊಂದು ಪ್ರತೀಕಗಳನ್ನು ಪುರಾಣಗಳಲ್ಲಿ ಹೇಳಿವೆ. ಅದರಲ್ಲಿ ಮಂಡಲ ಒಂದು ಪ್ರತೀಕ. ಮಂಡಲದ ಮಧ್ಯದಲ್ಲಿ ನಾಗನನ್ನು ಪೂಜಿಸುವುದು ನಾಗಮಂಡಲದ ಉದ್ದೇಶ. ಈ ಪೂಜಾವಿಧಿ ಯಾವಾಗಿನಿಂದ ಆರಂಭವಾಯಿತು ಎಂಬ ಬಗ್ಗೆ ಖಚಿತವಾದ ಆಧಾರವಿಲ್ಲ. “ಕ್ರಿ.ಶ.1458ರ ಬಾರಕೂರಿನ ಶಾಸನದಲ್ಲಿ ‘ಮಂಡಲ ಭಂಡಾರಿ’ ಎಂದು ಬರುತ್ತದೆ. ಬಹುಶಃ ನಾಗಮಂಡಲ ಸೇವೆಯನ್ನು ನಡೆಸಿಕೊಟ್ಟ ಭಂಡಾರಿಯನ್ನು ಕುರಿತು ಈ ಶಾಸನ ಪ್ರಸ್ತಾಪಿಸಿದ್ದಿರಬೇಕು. ಹೀಗಾಗಿ 500 ವರ್ಷಗಳಿಂದೀಚೆಗೆ ನಾಗಮಂಡಲ ನಡೆದುಬರುತ್ತಿದೆ” ಎಂದು ಖಚಿತವಾಗಿ ಹೇಳಬಹುದು ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.
ನಾಗಮಂಡಲ ಸಂತಾನ ಬಯಕೆ ಹಾಗೂ ‘ಕುಷ್ಟರೋಗ ನಿವಾರಣೆಗಾಗಿ ನಡೆಸುವ ಒಂದು ನಾಗಾರಾಧನಾ ಪದ್ಧತಿ, ಇದೊಂದು ಫಲವಂತಿಕೆಯ ಆಚರಣೆ. ಇದನ್ನು ಮಾನವ ಶಾಸ್ತ್ರಜ್ಞರು ಫಲವಂತಿಕೆಯ ಆಚರಣೆ ಎಂದು ಹೇಳಿದ್ದಾರೆ. ಇದು ತಂತ್ರ ಮೂಲದಿಂದ ಹುಟ್ಟಿಕೊಂಡ ಆರಾಧನೆ ಎಂದು ಕಾ.ವೆಂ. ರಾಜಗೋಪಾಲ ಅವರು ಅಭಿಪ್ರಾಯ ಪಟ್ಟಿದ್ದಾರೆ. ನಾಗಮಂಡಲಕ್ಕೆ ಪೂರ್ವಭಾವಿಯಾಗಿ ನಾಗತಂಬಿಲ, ಆಶ್ಲೇಷಾಬಲಿ, ಶಾಕಾಸಂಸ್ಕಾರ, ಹಾಲಿಟ್ಟು ಸೇವೆ, ನಾಗದರ್ಶನ ಮೊದಲಾದ ವಿಧಿಗಳನ್ನು ನೆರವೇರಿಸುತ್ತಾರೆ.
ಸಾಮಾನ್ಯವಾಗಿ ಬೆಟ್ಟು ಗದ್ದೆ ಅಥವಾ ಸಮತಟ್ಟಾದ ವಿಶಾಲವಾದ ಬಯಲು ಪ್ರದೇಶದ ಮಧ್ಯೆ ಸುಮಾರು 2-3 ಅಡಿ ಎತ್ತರದಲ್ಲಿ 20 ಕೋಲು ಚೌಕಾಕಾರದ ವೇದಿಕೆಯನ್ನು ನಿರ್ಮಿಸುತ್ತಾರೆ. ರಂಗದ ನಡುವೆ ಕಂಬ, ಅದರ ಸುತ್ತ ಚಪ್ಪರ, ಚಪ್ಪರದ ಸುತ್ತ ರೇಷ್ಮೆ ವಸ್ತ್ರದಿಂದ ಅಲಂಕರಿಸುತ್ತಾರೆ. ತಾವ್ರಿಮಿಟ್ಟಿ (ತಾವರೆ ಮೊಗ್ಗು), ತಾವರೆಹೂ, ಗಿಳಿ ಮುಂತಾದ ರಚನೆಗಳನ್ನು ಮೇಲ್‍ಗಟ್ಟಿನಿಂದ ನೇತು ಹಾಕುತ್ತಾರೆ.
ಜಂಗಮ ಸೊಪ್ಪಿನಿಂದ ತಯಾರಿಸಿದ ಹಸಿರು ಹುಡಿ, ಭತ್ತದ ಹೊಟ್ಟಿನ ಕರಿಯ ಕಪ್ಪು ಹುಡಿ, ಬೆಳ್ತಿಗೆ ಅಕ್ಕಿಯ ಹಡಿ, ಬಿಳಿ ಹುಡಿ, ಅರಸಿನ ಹಾಗೂ ಸುಣ್ಣದ ಮಿಶ್ರಣದಿಂದ ತಯಾರಿಸಿದ ಕುಂಕುಮ ಹಾಗೂ ಅರಸಿನ ಹುಡಿಗಳಿಂದ ಮಂಡಲದ ಮಧ್ಯಭಾಗದಲ್ಲಿ ಏಳು ಹೆಡೆಯ ಸರ್ಪ, ಮರಿನಾಗ, ಬ್ರಹ್ಮ, ಯಕ್ಷ, ಗಣಪತಿಯರನ್ನು ಬರೆಯುತ್ತಾರೆ. ರಂಗದ ನಾಲ್ಕು ದಿಕ್ಕಿಗೆ ಎಣ್ಣೆಯ ದೊಂದಿಗಳನ್ನು ಕಟ್ಟುತ್ತಾರೆ. ಇದರ ಸುತ್ತ ನಾಗಪಾತ್ರಿ ಹಾಗೂ ವೈದ್ಯರು ನರ್ತಿಸುತ್ತಾರೆ.
ನಾಗಮಂಡಲದ ಸುತ್ತ ನೃತ್ಯದಲ್ಲಿ ಪ್ರಧಾನ ಪಾತ್ರ ವಹಿಸುವವರು ಇಬ್ಬರು, ಒಬ್ಬರು ನಾಗಪಾತ್ರಿ. ನಾಗಪಾತ್ರಿ ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ಕೂದಲು, ಕೊರಳಿನಲ್ಲಿ ನಾಗನ ಚಿಹ್ನೆಯ ಪದಕವಿರುವ ಹಾರವನ್ನು ಧರಿಸಿರುತ್ತಾರೆ. ಕೈ ತುಂಬ ಹಿಡಿದಿರುವ ಹಿಂಗಾರಗಳನ್ನು ಮುಖಕ್ಕೆ ಆಗಾಗ್ಗೆ ತಿಕ್ಕಿಕೊಳ್ಳುತ್ತಾ ಇರುತ್ತಾರೆ. ಇನ್ನೊಂದು ಪ್ರಧಾನ ಪಾತ್ರ ವೈದ್ಯರದು. ವೈದ್ಯರು ಅರ್ಧನಾರಿ ವೇಷವನ್ನು ಧರಿಸಿರುತ್ತಾರೆ. ಯಕ್ಷಗಾನ ಬಡಗುತಿಟ್ಟಿನ ಸ್ತ್ರೀವೇಷವನ್ನು ಹೋಲುವ ಇವರು ಕೆಂಪುಬಣ್ಣದ ಚೌಕುಳಿಸೀರೆ, ಕಾಲಿಗೆ ಗೆಜ್ಜೆ, ಎದೆಗೆ ತೋಳಿಲ್ಲದ ರವಿಕೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು, ಜರಿರುಮಾಲು ಧರಿಸುತ್ತಾರೆ. ಹಾಡುವ ಹಿಮ್ಮೇಳದ ಮೂರು ಜನ ವೈದ್ಯರು ಬಿಳಿಧೋತರವನ್ನು ಕಚ್ಚೆ ಹಾಕಿ ಉಟ್ಟು, ಬಿಳಿ ಅಂಗಿ ತೊಟ್ಟಿರುತ್ತಾರೆ. ನಾಗಮಂಡಲದ ವೇದಿಕೆಯ ಮಧ್ಯಭಾಗದಲ್ಲಿ ರಚಿಸಿದ ಚಿತ್ತಾರದ ಸುತ್ತ ಪಾತ್ರಿ ಮತ್ತು ವೈದ್ಯರು ನರ್ತಿಸುತ್ತಾರೆ. ನಾಗನನ್ನು ಮೈತುಂಬಿಕೊಂಡ ಪಾತ್ರಿ ಕ್ರೋಧದಿಂದ ಸುತ್ತಿ ಸುಳಿದು ಮುಖವನ್ನು ಗಂಟಿಕ್ಕಿಕೊಂಡು ಹೂಂಕರಿಸುತ್ತ ನಾಗರ ಹಾವಿನಂತೆ ತಲೆಯನ್ನು ಹಿಂದೆಮುಂದೆ ಆಡಿಸುತ್ತಾ, ನಾಲಿಗೆಯನ್ನು ಆಗಾಗ ಹೊರಚಾಚುತ್ತಾ, ಬುಸುಗುಟ್ಟುತ್ತಾನೆ. ಅನಂತರ ಅರ್ಧನಾರಿರೂಪದಲ್ಲಿರುವ ವೈದ್ಯನ ಭಕ್ತಿಗೆ ಒಲಿದು ತಣಿದು ಮಣಿಯುತ್ತಾನೆ. ಈ ಕುಣಿತದಲ್ಲಿ ಅನೇಕ ಭಾವರಸಗಳ ಅಭಿವ್ಯಕ್ತಿ ಇದೆ. ಎಂಟು (8) ಬರೆದ ಆಕಾರದಲ್ಲಿ ನರ್ತಿಸುವ ಇವರ ನರ್ತನ ಮನಮೋಹಕವಾಗಿರುತ್ತದೆ
ಕೊಳನಾಗ: ಏಳು ಹೆಡೆಯ ದೊಡ್ಡ ಸರ್ಪದ ಚಿತ್ರಣಕ್ಕೆ ಕೊಳನಾಗ, ಗುಳಿಕ, ಅಥವಾ ಕಾಡ್ಯ ಎನ್ನುತ್ತಾರೆ.
ನಾಗಯಕ್ಷ :
ಕೊಳನಾಗನ ಸಮೀಪದಲ್ಲಿಯೇ ಕೇವಲ ಹೆಡೆಯಂತೆ ಕಾಣುವ ಒಂದು ರೂಪಕ್ಕೆ ಎರಡು ಕಣ್ಣುಗಳನ್ನು ಚಿತ್ರಿಸುತ್ತಾರೆ. ಇದರ ಆಕಾರ ಶಂಖವನ್ನು ಹೋಲುತ್ತದೆ. ಇದನ್ನು ಕೆಲವರು ಮರಿನಾಗ ಎಂದರೆ ಕೆಲವರು ನಾಗಯಕ್ಷಿ (ಯಕ್ಷೆ) ಎನ್ನುತ್ತಾರೆ.
ಬ್ರಹ್ಮ ಯಕ್ಷ :
ಕೊಳನಾಗನ ಎಡಭಾಗದಲ್ಲಿ ಕೆಳಗೆ ಒಂದು ವಿಶಿಷ್ಟ ಮಾನವಾಕೃತಿಯನ್ನು ಚಿತ್ರಿಸುತ್ತಾರೆ. ಇದಕ್ಕೆ ಕೈ ಕಾಲುಗಳಿಲ್ಲ. ಗಂಡುರೂಪ, ಮೀಸೆ ಇದೆ. ಹೊರಚಾಚಿದಂತಿರುವ ಹಲ್ಲುಗಳು, ಹಾಗೂ ಎರಡು ಕೋರೆ ಹಲ್ಲುಗಳಿವೆ. ತಲೆಗೆ ಚೂಪಾದ ಟೊಪ್ಪಿಗೆಯನ್ನು ಧರಿಸಿದಂತೆ ಕಾಣುತ್ತದೆ. ಇದನ್ನು ವೈದ್ಯರು ಬ್ರಹ್ಮಯಕ್ಷ ಎನ್ನುತ್ತಾರೆ. ತುಳುವರು ಬೆರ್ಮೆರ್ ಎನ್ನುತ್ತಾರೆ.
ನಾಗಬ್ರಹ್ಮ ಸಮನ್ವಯ
ನಾಗಬ್ರಹ್ಮನ ಆರಾಧನೆ ತುಳುನಾಡಿನಲ್ಲಿ ಪರಂಪರಾಗತವಾಗಿ ಬಂದ ಜಾನಪದ ನಂಬಿಕೆ. ಇಲ್ಲಿ ಸತ್ತ ನಾಗನನ್ನು ಯಾರಾದರೂ ನೋಡಿದರೆ, ಆತನು ಅದನ್ನು ಸಂಸ್ಕಾರ ಮಾಡಬೇಕೆಂಬ ನಂಬಿಕೆ ಇದೆ. ಶಾಸ್ತ್ರೋಕ್ತವಾಗಿ ಅಂತ್ಯೇಷ್ಟಿ ಸಂಸ್ಕಾರದ ಹಕ್ಕು ಸತ್ತ ವ್ಯಕ್ತಿಯ ಕುಟುಂಬ ಗೋತ್ರ ಹಾಗೂ ವಂಶದವರಿಗೆ ಇರುತ್ತದೆ. ಆದ್ದರಿಂದ ತುಳುನಾಡಿನ ಜನರು ನಾಗವಂಶದವರಿರಬೇಕು. “ಇಲ್ಲಿ ದಕ್ಷಿಣ, ಉತ್ತರ ಕನ್ನಡ, ಕರಾವಳಿ ಪ್ರದೇಶಕ್ಕೆ ನಾಗರಖಂಡವೆಂದು ಹೆಸರಿತ್ತು. ಇಲ್ಲಿ ನಾಗರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪಕುಲಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚಾರಣೆಯಾಗುತ್ತಿದ್ದಿರಬೇಕು” ಎಂದು ಗೋವಿಂದ ಪೈ ಹೇಳಿದ್ದಾರೆ.
ತುಳುನಾಡಿನಲ್ಲಿ ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಲೆಯ ಚಿತ್ರವನ್ನು ‘ಬ್ರಹ್ಮಯಕ್ಷ’ ಎನ್ನಲಾಗುವುದು. ಈ ಬ್ರಹ್ಮಯಕ್ಷ, ವೈದಿಕರ ಚತುರ್ಮುಖಬ್ರಹ್ಮನಲ್ಲ. ತುಳುವರು ಹೇಳುವ ಬೆರ್ಮರ್ ಇದೆಂದೂ, ಇದನ್ನು ಸಂತಾನದ ಅಧಿದೇವತೆ ಎಂದು ಹೇಳಲಾಗುತ್ತದೆ” ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.
“ತುಳುನಾಡಿನ ಜನತೆ ತನ್ನ ಪೂರ್ವಜರನ್ನು ಸ್ಮರಿಸುವುದಕ್ಕೂ ನಾಗಬ್ರಹ್ಮನ ಕಲ್ಪನೆಗೂ ಸಂಬಂಧವಿದ್ದಂತಿದೆ” ಎಂದು ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟಿದ್ದಾರೆ.
ತುಳುನಾಡಿನ ನಾಗಬನಗಳಲ್ಲಿನ ನಾಗಶಿಲ್ಪಗಳಲ್ಲಿ ಕೆಲವು ನಾಗಬ್ರಹ್ಮನ ಪರಿಕಲ್ಪನೆಯನ್ನು ಅಭಿವ್ಯಕ್ತಿಸುತ್ತವೆ. ಎಣ್ಮೂರಿನ ಆದಿ ಗರಡಿಯ ಸಮೀಪದಲ್ಲಿರುವ ನಾಗಶಿಲ್ಪದಲ್ಲಿ ತಂಬೂರಿ ಹಿಡಿದ ನಾಗಬ್ರಹ್ಮನಿದ್ದಾನೆ. ಉಜಿರೆಯ ಕೇಲಂಗಿಮನೆಯ ಪ್ರಾಚೀನ ನಾಗಬನದಲ್ಲಿ ಸೊಂಟದ ಮೇಲ್ಭಾಗದ ಮನುಷ್ಯಾಕೃತಿಯ ತಲೆಯ ಸುತ್ತ ನಾಗಹೆಡೆಗಳಿರುವ ಸೊಂಟದ ಕೆಳಭಾಗದಲ್ಲಿ ಸರ್ಪಾಕೃತಿ ಇರುವನಾಗಶಿಲ್ಪವಿದೆ ನಿಡಿಗಲ್ಲು ಆಲಡೆಯಲ್ಲಿ ಮೇಲ್ಭಾಗ ಮನುಷ್ಯ, ಕೆಳಭಾಗದಲ್ಲಿ ನಾಗಾಕಾರ ಶಿಲ್ಪದ ಒಂದು ಬದಿಯಲ್ಲಿದ್ದರೆ, ಹಿಂಬದಿಯಲ್ಲಿ ನಾಗಮಂಡಲದ ಪವಿತ್ರ ಬಂಧದ ರಚನೆಯಿದೆ. ಅನಂತಾಡಿ ನಾಗಬನದಲ್ಲಿ ನಾಗನಿಗೆ ಸಾಮಾನ್ಯ ಒಂದು ಕಲ್ಲು ಇದೆ. ಆದರೆ ಬ್ರಹ್ಮರೆಂದು ಹಳೆಯ ಮಣ್ಣಿನ ಮಡಿಕೆಗಳಿವೆ. ಚೌಕಾರುಗುತ್ತಿನಲ್ಲಿ ಬೆರ್ಮೆರ್ ಎಂದು ಒಂದು ಮುರಕಲ್ಲನ್ನು ಆರಾಧಿಸುತ್ತಾರೆ ಕವತ್ತಾರು ಆಲಡೆಯಲ್ಲಿ ನಾಗನಿಗೆ ಸಣ್ಣಮಂಟಪ ಇದೆ. ಇದರ ಒಳಗೆ ಹೆಡೆ ತೆರೆದ ನಾಗಶಿಲ್ಪವಿದೆ. ಅಲ್ಲಿಯೇ ಪಕ್ಕದಲ್ಲಿ ಬೆರ್ಮರ ಮಾಡ ಇದೆ. ಇದರ ಒಳಗೆ ಒಂದು ಚೌಕಾಕಾರದ ಮುರಕಲ್ಲು ಇದೆ. ಇದನ್ನೇ ‘ಬ್ರಹ್ಮ’ ಎಂದು ಹೇಳುತ್ತಾರೆ. © ಡಾ.ಲಕ್ಷ್ಮೀ ಜಿ ಪ್ರಸಾದ್
ಹೀಗೆ ಕೆಲವೆಡೆ ನಾಗನ ಕಲ್ಲುಗಳು, ಕೆಲವೆಡೆ ನಾಗಶಿಲ್ಪಗಳು, ಇನ್ನು ಕೆಲವೆಡೆ ನಾಗಬ್ರಹ್ಮ ಶಿಲ್ಪಗಳು ಆರಾಧನೆಗೊಳ್ಳುತ್ತವೆ. ಕೆಲವೆಡೆ ಬ್ರಹ್ಮರಿಗೆ ತೆಂಗಿನಕಾಯಿ ಮೂಲಕ ಸಂಕಲ್ಪವಿದ್ದರೆ, ಕೆಲವೆಡೆ ‘ಬ್ರಹ್ಮ’ರಿಗೆ ಕಲ್ಲುಗಳು ಇವೆ. ಗರಡಿಗಳಲ್ಲಿ ಬ್ರಹ್ಮರ ಮೂರ್ತಿಗಳಿವೆ. ಇಲ್ಲಿ ನಾಗಬೆರ್ಮೆರ್ ಎಂದು ಹೇಳುವುದಿಲ್ಲ. ಆಲಡೆಗಳಲ್ಲಿ ಬ್ರಹ್ಮಲಿಂಗೇಶ್ವರ ಎನ್ನುತ್ತಾರೆ.
ಬೆರ್ಮೆರ್ ಕಾಲಾಂತರದಲ್ಲಿ ಬ್ರಹ್ಮ ಲಿಂಗೇಶ್ವರನಾಗಿ ಆರಾಧನೆ ಪಡೆದಿದ್ದಾನೆ.ಬ್ರಹ್ಮ ಲಿಂಗೇಶ್ವರ ಎಂಬ ಹೆಸರು ಆಗಮ ಶಾಸ್ತ್ರದಲ್ಲಿ ಮೊದಲು ಇರಲಿಲ್ಲ ಎಂದು ವಿದ್ವಾಂಸರಾದ ಹಿರಣ್ಯ ವೆಂಕಟೇಶ್ವರ ಭಟ್ ಅವರು ತಿಳಿಸಿದ್ದಾರೆ
ಆದರೂ ಆಲಡೆಗಳಲ್ಲಿ ಆದಿ ಆಲಡೆ, ಆದಿಬ್ರಹ್ಮಸ್ಥಾನಗಳಲ್ಲಿ ಹುತ್ತದ ಬೆರ್ಮರ ಆರಾಧನೆ ಇದೆ. ಕೆಲವು ಬ್ರಹ್ಮಸ್ಥಾನಗಳಲ್ಲಿ ಹಾಗೂ ಗರಡಿಗಳಲ್ಲಿ ಕೇವಲ ಬ್ರಹ್ಮಗುಂಡ ಮಾತ್ರ ಇರುತ್ತದೆ. “ಕಲ್‍ಡ್‍ನಾಗೆ ಪುಂಚೊಡು ಸರ್ಪ ಗುಂಡೊಡು ಬೆರ್ಮೆರ್. ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ, ಗುಂಡದಲ್ಲಿ ಬೆರ್ಮೆರ್ ನೆಲೆಯಾಗುತ್ತಾರೆ ಎಂದು ಹೇಳಿದೆ. “ಆ ನಾಗೆರ್ಲೆನ್ ಬೆರ್ಮೆರೆನ್ ನಿರ್ಮಿಯೆರ್ ದೇವೆರ್ ಎಡದಿಕ್ಕುಡು ಬೆರ್ಮೆರ್ ಬಲದಿಕ್ಕುಡು ...” (ಆ ನಾಗಗಳನ್ನು ಬೆರ್ಮೆರನ್ನು ನಿರ್ಮಿಸಿದರು, ದೇವರ ಎಡದಿಕ್ಕಿನಲ್ಲಿ ಬೆರ್ಮರ್ ಬಲದಿಕ್ಕಿನಲ್ಲಿ ... ) ಎಂಬ ಪಾಡ್ದನದ ಹೇಳಿಕೆಯಲ್ಲಿ ನಾಗ ಮತ್ತು ಬೆರ್ಮರ್ ಬೇರೆ ಬೇರೆ ಎರಡು ಶಕ್ತಿಗಳು ಎಂದು ಹೇಳಲಾಗಿದೆ.
ಕಾಪು ಬ್ರಹ್ಮಲಿಂಗೇಶ್ವರದೇವರ ಗರ್ಭಗುಡಿಯ ಎಡಭಾಗದ ಮೂಲ ಬ್ರಹ್ಮಸ್ಥಾನವೆಂದು ಕರೆಯಲ್ಪಡುವ ಬನದಲ್ಲಿ ಬ್ರಹ್ಮನ ಉದ್ಭವ ಶಿಲೆ ಇದೆ. ಇಲ್ಲಿ ನಾಗಶಿಲೆ ಇಲ್ಲ.
ಪಡುಪೆರಾರದ ಬ್ರಹ್ಮಬಲವಾಂಡಿ ದೇವಸ್ಥಾನದ ಮೂಲಬ್ರಹ್ಮಸ್ಥಾನವೆಂದು ಹೇಳುವ ಬನದಲ್ಲಿ ಬ್ರಹ್ಮನ ಉದ್ಭವವಾದ ಕಲ್ಲು ಇದೆ. ಇಲ್ಲಿ ನಾಗನಿಗೆ ಅಸ್ತಿತ್ವವಿಲ್ಲ. ಅಲ್ಲಿ ಸ್ವಲ್ಪ ದೂರದಲ್ಲಿರುವ ನಾಗಬನ ಇತ್ತೀಚೆಗೆ ನಿರ್ಮಿಸಲ್ಪಟ್ಟುದು ಎಂದು ಅಲ್ಲಿಯವರು ಹೇಳುತ್ತಾರೆ. ಅಲ್ಲಿನ ತಂತ್ರಿಗಳ ಪ್ರಕಾರ ಅಲ್ಲಿಯ ‘ಬ್ರಹ್ಮ’ ಭೂತಬ್ರಹ್ಮ, ನಾಗಬ್ರಹ್ಮನಲ್ಲ.
ಕೋಟಿಚೆನ್ನಯರ ಪಾಡ್ದನದ ಆದಿಯಲ್ಲಿ ಬರುವ ಬೆರ್ಮರ ವರ್ಣನೆ ಅಲೌಕಿಕವಾದುದು ಆಗಿದೆ. ಆದರೆ ಆ ಬೆರ್ಮರಿಗೆ ನಾಗನ ಹೆಡೆ ಇರುವ ಬಗ್ಗೆಯಾಗಲಿ ನಾಗಬ್ರಹ್ಮ ಶಿಲ್ಪಗಳಲ್ಲಿರುವಂತೆ, ಸೊಂಟದಿಂದ ಕೆಳಭಾಗ ಸರ್ಪಾಕಾರ ಇರುವ ಬಗ್ಗೆಯಾಗಲೀ ವರ್ಣನೆ ಇಲ್ಲ. ಒಂದೆರಡು ಪಾಡ್ದನಗಳಲ್ಲಿ ಕೋಟಿಚೆನ್ನಯರಿಗೆ ಕೆಮ್ಮಲೆಯಲ್ಲಿ ಕಾಣಿಸಿದ ಬೆರ್ಮರ್ ಕುದುರೆಏರಿದ ವೀರನಾಗಿ ಚಿತ್ರಿತನಾಗಿದ್ದಾನೆ. ಹೆಚ್ಚಿನ ಪಾಡ್ದನಗಳಲ್ಲಿ ವೀಳ್ಯದೆಲೆಯಷ್ಟು ತೆಳುವಾಗಿ, ತೆಂಗಿನಮರದಷ್ಟು ಎತ್ತರವಾಗಿ, ಆಲದಷ್ಟು ಅಗಲವಾಗಿ, ಅಡಿಕೆಯಷ್ಟು ಉರುಟಾಗಿ ಕಾಣಿಸಿದ ಬ್ರಹ್ಮನ ವರ್ಣನೆ ಇದೆ. ಇಲ್ಲಿ ಬ್ರಹ್ಮನಿಗೆ ಮನುಷ್ಯನ ಆಕಾರವನ್ನು ಸೂಚಿಸಿಲ್ಲ. ಆದರೆ ಮೊದಲು ಬೆರ್ಮರ ಉದೀಪನದ ಸಂದರ್ಭದಲ್ಲಿ ವರ್ಣಿಸಲ್ಪಟ್ಟ ಬ್ರಹ್ಮನಿಗೆ ಏಳುತಲೆಯ ಸತ್ತಿಗೆ, ಹಾಗೂ ಜನಿವಾರಗಳನ್ನು ಹೇಳಿದ್ದು ಇದು ರಾಜಪುರುಷನನ್ನು ಸೂಚಿಸುತ್ತದೆ. ಎಡದಲ್ಲಿ ಕರಿಯ ಸಂಕಮಾಲ, ಬಲಬದಿಯಲ್ಲಿ ಬಿಳಿಯ ಸಂಕಮಾಲ ಇರುವ ಬಗ್ಗೆ ಹೇಳಿದೆ. ಕರಿಯ ಸಂಕಮಾಲ ಮತ್ತು ಬಿಳಿಯ ಸಂಕಮಾಲರನ್ನು ಸರ್ಪಗಳೆಂದೂ, ನಾಗರಾಜರೆಂದೂ ಪರಿಗಣಿಸಲಾಗಿದೆ. ಈ ವರ್ಣನೆಯನ್ನು ಕಪ್ಪು ಶಂಖಗಳ ಹಾಗೂ ಬಿಳಿ ಶಂಖಗಳ ಮಾಲೆ ಎಂದೂ ಕೆಲವರು ಅರ್ಥೈಸಿದ್ದಾರೆ.
ಕಂಡೇವು ಬೀಡಿನ ಬನದಲ್ಲಿ ಕರಿಯ ಸಂಕಪಾಲ ಹಾಗೂ ಬಿಳಿಯ ಸಂಕಪಾಲರ ನಾಗಬನಗಳಿವೆ. ತುಳುನಾಡಿನ ಕೆಲವೆಡೆ ಸಂಕಪಾಲ ಸುಬ್ರಹ್ಮಣ್ಯ ದೇವಾಲಯಗಳಿವೆ. ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ಒಂದು ಹುತ್ತ ಅದರ ಎದುರು ಒಂದು ನಾಗಪ್ರತಿಮೆ ಇಟ್ಟು ಶಂಖಪಾಲ ಸುಬ್ರಹ್ಮಣ್ಯನೆಂದು ಪೂಜಿಸುತ್ತಾರೆ. ಇಲ್ಲಿ ನಾಗಪ್ರತಿಮೆ ‘ಶಂಖಪಾಲ’ನನ್ನು ಪ್ರತಿನಿಧಿಸುತ್ತದೆ. ಎಡಬಲಗಳಲ್ಲಿ ಸಂಕಪಾಲರಿರುವ ವರ್ಣನೆ ಎಲ್ಲ ಪಾಡ್ದನಗಳಲ್ಲಿ ಕಾಣಿಸುವುದಿಲ್ಲ. ಸಂಕಮಾಲ/ಸಂಕಪಾಲರ ಪ್ರಸ್ತಾಪವಿರುವಲ್ಲಿ ಕೂಡ ಬೆರ್ಮೆರ್ ಮತ್ತು ಸಂಕಪಾಲರು ಬೇರೆ ಬೇರೆ ಎಂಬ ಚಿತ್ರಣವಿದೆ. ಬೆರ್ಮರ್ ಎಡಬಲದಲ್ಲಿ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರಿದ್ದಾರೆ ಎಂಬ ವರ್ಣನೆ ಇದೆಯೇ ಹೊರತು ನಾಗಬೆರ್ಮರ್ ತಾದಾತ್ಯ್ಮವಿಲ್ಲ.
ಸಿರಿಯ ಪಾಡ್ದನದಲ್ಲಿ ಬೆರ್ಮರ ಸ್ವರೂಪದ ಬಗ್ಗೆ ಮಾಹಿತಿ ಸಿಗುವುದಿಲ್ಲ. ಕಾಡಿನಲ್ಲಿರುವ ಬೆರ್ಮರನ್ನು ತಂದು ಏಳದೆ ಗುಂಡ ನಿರ್ಮಿಸುವ ಬಗ್ಗೆ ಮಾತ್ರ ಹೇಳಲಾಗಿದೆ.
ಏಕಸಾಲೆರ್ ದೆಯ್ಯಾಋ ದಂಪತಿಯ ಮಗನಾಗಿ ಹುಟ್ಟುವ ಬೆರ್ಮೆರ್ ಗೆ ಚಕ್ರವರ್ತಿಯ ವಿಶಿಷ್ಟ ಲಕ್ಷಣಗಳಿವೆ
ಲಿ ಬೆರ್ಮರಿಗೆ ರಾಜಪುರುಷನ ವರ್ಣನೆ ಇದೆ
ಬೆರ್ಮರ ಪ್ರಸ್ತಾಪವಿರುವ ಪಾಡ್ದನಗಳಲ್ಲಿ ಸಿರಿಪಾಡ್ದನ ಪ್ರಾಚೀನವಾದುದು.
ಇದರಿಂದ ಸಿರಿಪಾಡ್ದನದ ಕಾಲದಲ್ಲಿ ಬೆರ್ಮೆರಿಗೆ ಪುರುಷ ರೂಪದ ಪರಿಕಲ್ಪನೆ ಇರಲಿಲ್ಲ ಎಂದು ತಿಳಿಯುತ್ತದೆ. ಬೆರ್ಮರಿಗೆ ಗುಂಡ ಕಟ್ಟುವ ಸಂಪ್ರದಾಯ ಬಹುಶಃ ಈ ಕಾಲದಲ್ಲಿ ಆರಂಭವಾಗಿರಬೇಕು. ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಕಟ್ಟಿರುವ ಪ್ರಸ್ತಾಪ ಈ ಪಾಡ್ದನದಲ್ಲಿದೆ. ಕಾಡಿನಲ್ಲಿ ‘ಬೆರ್ಮೆರ್’ ಯಾವ ರೂಪದಲ್ಲಿ ಇದ್ದ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಾಡಿನಲ್ಲಿ ಪಾಳು ಬಿದ್ದ ಬ್ರಹ್ಮಸ್ಥಾನದ ಸ್ಥಳದಿಂದ ಮಣ್ಣನ್ನು ತಂದು ಗುಂಡದೊಳಗೆ ಪ್ರತಿಷ್ಠಾಪಿಸಿರಬಹುದೇ? ಇಂದಿಗೂ ಕೋಳ್ಯೂರು ಬೈಲಿನಲ್ಲಿ ಪೂಕರೆಯ ದಿನ ಒಂದು ಮುಷ್ಠಿ ಮಣ್ಣನ್ನು ಹಿಂಗಾರದೊಂದಿಗೆ ಬಾಳೆಕುಡಿಯ ಮೇಲಿಟ್ಟು ಗಣಪತಿ ಎಂದು ಸಂಕಲ್ಪಿಸುತ್ತಾರೆ. ಇಲ್ಲಿಬ್ರಹ್ಮರನ್ನು ‘ಗಣಪತಿ’ ಎಂದು ಹೇಳುತ್ತಾರೆ ಎಂದು ಅಲ್ಲಿನ ಹಿರಿಯರಾದ ನಾರಾಯಣಭಟ್ಟರು ಹೇಳುತ್ತಾರೆ. ಕೋಳ್ಯೂರಿನ ಶಂಕರನಾರಾಯಣ ದೇವಸ್ಥಾನ ಬ್ರಹ್ಮ-ವಿಷ್ಣು-ಶಿವರೆಂಬ ತ್ರಿಮೂರ್ತಿಗಳ ದೇವಸ್ಥಾನವಾಗಿದೆ. ಇಲ್ಲಿ ಬ್ರಹ್ಮನ ಬದಲಿಗೆ ಗಣಪತಿಯನ್ನೇ ಆರಾಧಿಸುವ ಪದ್ಧತಿಯಿದೆ.
ಬ್ರಹ್ಮಸ್ಥಾನಗಳು ಕಾಡಿನಲ್ಲಿ ಇರುತ್ತವೆ. ವರ್ಷದಲ್ಲಿ ಒಂದೆರಡು ಬಾರಿ ಅಲ್ಲಿಗೆ ಹೋಗಿ ಆರಾಧಿಸುತ್ತಾರೆ. ಬೆರ್ಮೆರ ಕಲ್ಲುಗಳು ಬನದಲ್ಲಿ ಇರುತ್ತದೆ. ಕಾಲಾಂತರದಲ್ಲಿ ಕಲ್ಲುಗಳ ಮೇಲೆ ಹುತ್ತ ಬೆಳೆದಾಗ, ಹುತ್ತವನ್ನು ಕೀಳುವ ಧೈರ್ಯ ಯಾರಿಗೂ ಇರುವುದಿಲ್ಲ. ಕವತ್ತಾರು ಆಲಡೆಯಲ್ಲಿ ಬ್ರಹ್ಮಲಿಂಗೇಶ್ವರ ಗರ್ಭಗುಡಿಯ ಎದುರು ಭಾಗದಲ್ಲಿ ಬ್ರಹ್ಮದೇವರ ಸಣ್ಣಗುಡಿಯೊಂದಿದ್ದು ಅದರಲ್ಲಿ ಬ್ರಹ್ಮರ ಪ್ರತೀಕವಾಗಿ ಒಂದು ಚೌಕಾಕಾರದ ಮುರಕಲ್ಲು ಇದೆ. ಇದರ ಮೇಲೆ ಈಗ ಹುತ್ತ ಬೆಳೆಯುತ್ತಿದ್ದು, ಈ ಹುತ್ತವನ್ನು ಕೀಳಬಾರದು ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ.
ಕಾಲಾಂತರದಲ್ಲಿ ಹೀಗೆ ಬೆಳೆದ ಹುತ್ತಗಳು ನಾಗನ ಆವಾಸಸ್ಥಳಗಳಾಗುತ್ತವೆ. ತುಳುನಾಡಿನಲ್ಲಿ ನಾಗಾರಾಧನೆ ಪ್ರಚಲಿತವಿದೆ. ಇದರ ಪ್ರಭಾವದಿಂದಾಗಿ ಬ್ರಹ್ಮಸ್ಥಾನದ ಹುತ್ತಗಳಲ್ಲಿ ಬೆರ್ಮೆರ್ ಜೊತೆಗೆ ನಾಗನ ಆರಾಧನೆ ಪ್ರಾರಂಭವಾಯಿತು. ಕಾಲಾಂತರದಲ್ಲಿ ನಾಗ ಮತ್ತು ಬೆರ್ಮೆರ್ ನಡುವಿನ ಅಂತರ ಅಳಿಸಿಹೋಗಿ ನಾಗಬ್ರಹ್ಮರಿಗೆ ಏಕಾತ್ಮತೆ ಉಂಟಾಗಿದೆ ಎನ್ನಬಹುದು
© ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಂಗಳೂರು
ಮೊಬೈಲ್ :9480516684
E mail: samagramahithi@gmail.com
Blog:http://laxmipras.blogspot.com
(ಲೇಖಕರ ಕಿರು ಪರಿಚಯ
ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಖ್ಯಾತಿಯ ಲೇಖಕಿ ಡಾ.ಲಕ್ಷ್ಮೀ ಜಿ ಪ್ರಸಾದ್
ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ಹಂಪಿ ವಿಶ್ವ ವಿದ್ಯಾಲಯದಿಂದ ಪಿಎಚ್. ಡಿ ಪದವಿ ಪುರಸ್ಕೃತ ಹಾಗೂ ಕನ್ನಡ ,ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಕಾಸರಗೋಡಿನ ಕೋಳ್ಯೂರು ಮೂಲದ ಗಡಿನಾಡ ಕನ್ನಡತಿ ಡಾ.ಲಕ್ಷ್ಮೀ ಜಿ ಪ್ರಸಾದ ಈಗ ತಮ್ಮ ಎರಡನೆಯ ಪಿಎಚ್.ಡಿ ಪದವಿಗಾಗಿ ಸಂಶೋಧನಾ ಮಹಾ ಪ್ರಬಂಧಕ್ಕಾಗಿ ದ್ರಾವಿಡ ವಿಶ್ವ ವಿದ್ಯಾಲಯದಿಂದ ಎರಡನೇ ಪಿಎಚ್ ಡಿ ಪದವಿ ಪಡೆದಿದ್ದಾರೆ ,ಕರಾವಳಿಯ ಸಾವಿರದೊಂದು ದೈವಗಳ ಗ್ರಂಥ ಸೇರಿದಂತೆ 25 ಪುಸ್ತಕಗಳು ಮತ್ತು ಆರು ನೂರಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿವೆ )
ತುಳುವರ ಅಧಿದೈವ ಬೆರ್ಮೆರ್
ಚಿತ್ರ ಕೃಪೆ: ಶಶಾಂಕ್ ನೆಲ್ಲಿತ್ತಾಯ
ನನ್ನ ಮೊದಲ ಪಿಎಚ್ ಡಿ ಥೀಸಿಸ್ ತುಳುನಾಡಿನ ನಾಗ ಬ್ರಹ್ಮ ( ಬೆರ್ಮೆರ್ ) ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ನೋಟ
ಬೆರ್ಮೆರ್ ಕುರಿತಾಗಿ ಸಂಕ್ಷಿಪ್ತ ಮಾಹಿತಿ ಈ ಹಿಂದೆ ಚಿತ್ರಲೋಕ ಯು ಟ್ಯೂಬ್ ನಲ್ಲಿ ನಾನು ನೀಡಿದ್ದು ಇದೆ
https://youtu.be/Zj4TW1BVzxg?si=yRKnftjnCo3azYko
.