Tuesday, 9 April 2013

ಬ್ಲಾಗ್ ಬರೆಯುವ ನನ್ನ ಕನಸು(MY DREAM OF WRITING BLOG) ಮುರಳೀಧರ ಉಪಾಧ್ಯರಿಗೆ ನಾನು ಸದಾ ಋಣಿ

                          ಬ್ಲಾಗ್  ಬರೆಯುವ ನನ್ನ ಕನಸು
ನನ್ನ ಮಗ ಅರವಿಂದ ಬಹಳ ವಾಚಾಳಿ . ವಯೋ ಸಹಜವಾಗಿ ಎಲ್ಲ ವಿಷಯಗಳ ಬಗ್ಗೆ ವಿಪರೀತ ಕುತೂಹಲ . ಕಂಪ್ಯೂಟರ್  ಬಗ್ಗೆ ಇಂಟರ್ನೆಟ್ ಬಗ್ಗೆಯೂ ಯಾವಾಗಲೂ ಹರಟುತ್ತಾ ಇರುತ್ತಾನೆ. ನನಗೋ  ಕಂಪ್ಯೂಟರ್ ,ಇಂಟರ್ನೆಟ್ ಕುರಿತು  ಒಂದಿನಿತೂ ಗೊತ್ತಿರಲಿಲ್ಲ . ಆದರೆ ಬ್ಲಾಗ್,ಫೇಸ್ ಬುಕ್ ,ಟ್ವಿಟ್ಟರ್ ,ಮೊದಲಾದವುಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ಒಮ್ಮೊಮ್ಮೆ  ನನಗು ಬ್ಲಾಗ್ ಬರೆಯ ಬೇಕು ಅನಿಸುತ್ತಿತ್ತು . ಆ ಅನಿಸಿಕೆ ಹೆಚ್ಚು ದೂರ ಸಾಗುತ್ತಿರಲಿಲ್ಲ .ಯಾಕೆಂದರೆ  ನನ್ನ ಕಂಪ್ಯೂಟರ್ ಜ್ಞಾನ ದೊಡ್ಡ ಸೊನ್ನೆ . ಜ಼ೊತೆಗೆ ಇಂಗ್ಲಿಷ್ ಭಾಷೆ ಮೇಲೂ ತೀರ ಏನೂ  ದೊಡ್ಡ ಹಿಡಿತ ಇರಲಿಲ್ಲ. ಬ್ಲಾಗ್  ಫೇಸ್ ಬುಕ್ ಗಳಲ್ಲಿ ಕನ್ನಡ ಬಳಕೆ ಇದೆ ಅಂತ ಗೊತ್ತಿರಲಿಲ್ಲ .
ಕಳೆದ ವರ್ಷ ಸುಮಾರು ಈ ಸಮಯದಲ್ಲಿ ಮಗ ಹಠ ಹಿಡಿದು ನನ್ನ ಮೊಬೈಲ್ ಗೆ ಇಂಟರ್ನೆಟ್  ಸಂಪರ್ಕ ಹಾಕಿಸಿದ . ಯಾವಾಗಲು ಸಂಜೆ ಶಾಲೆಯಿಂದ ಬಂದ  ತಕ್ಷಣ ನನ್ನ ಮೊಬೈಲ್ ತಗೊಂಡು ಏನೋ ಡಬ್ಲ್ಯೂ ಡಬ್ಲ್ಯೂ ಯಫ಼್. ,ಜೋನ್ಸೀನ  ಕಾಳಿ  , ಕ್ರಿಕೆಟ್ ಅದು ಇದು ನೋಡಿ ನಂಗೆ ಹೇಳುತ್ತಿದ್ದ .ನಂಗೆ ಆಸಕ್ತಿ ಇಲ್ಲದಿದ್ದರೂ ಅವನ ಉತ್ಸಾಹಕ್ಕೆ ಭಂಗ ಬರಬಾರದಂತೆ  ಹೂಂಗುಟ್ಟುತಿದ್ದೆ. ಒಂದಿವಸ ನನ್ನ ಹತ್ರ" ಅಮ್ಮ ನೋಡು ಇಂಟರ್ನೆಟ್ ನಲ್ಲಿ ಇಲ್ಲದ  ವಿಚಾರವೇ ಇಲ್ಲ ಎಲ್ಲವು ಇದರಲ್ಲಿ ಸಿಗುತ್ತೆ "ಅಂತ ಹೇಳಿದ. ಯಾವಾಗಲು ಹೂಂಗುತ್ತಿ ಸುಮ್ಮನಾಗುತ್ತಿದ್ದ ನಾನು ಅವನನ್ನು ಸುಮ್ಮನೆ  ಕಿಚಾಯಿಸುವುದಕ್ಕಾಗಿ  "ನಾನು ಸಿಗುತ್ತೇನ ನಿನ್ನ   ಇಂಟರ್ನೆಟ್ ನಲ್ಲಿ ?"(ಸಿಗಲು ಅಸಾಧ್ಯವೆಂದು ತಿಳಿದಿದ್ದೂ ) ಕೇಳಿದೆ .ಒಂದು  ಕ್ಷಣ ವಿಚಲಿತನಾದ ಅವನು  ನಾನು ನೋಡುತ್ತೇನೆ ಎಂದು ಹೇಳಿ ಮೊಬೈಲ್ ತಗೊಂಡು ಏನೋ ಗುರುಟಲು ಆರಂಬಿಸಿದ . ನಾನು ಏನೋ ಸಂಜೆ ತಿಂಡಿ ತಯಾರು ಮಾಡುತ್ತಿದ್ದೆ . ಅಡುಗೆ ಕೋಣೆಗೆ ಓಡಿ ಬಂದ  ಮಗ ಅರವಿಂದ "ಅಮ್ಮಾ ಅಮ್ಮ  ನೋಡು ಇಲ್ಲಿ ನೋಡು ನೀನು ಇದರಲ್ಲಿ ಇದ್ದೀಯ "ಎಂದು ಏನೋ ಸಾಧಿಸಿದ ಗೆಲುವಿನ ಧ್ವನಿಯಲ್ಲಿ ಹೇಳಿದ . ಹೌದು !! ಅವನು ಹೇಳಿದ್ದು ನಿಜ . ಡಾ . ಲಕ್ಷ್ಮಿ ಜಿ ಪ್ರಸಾದ್ ಎಂದು ಗೂಗಲ್ ಸರ್ಚ್ ಗೆ ಹಾಕಿದಾಗ ಅದರಲ್ಲ್ಲಿ ಅಜ್ಜಿ ಭೂತ ಮತ್ತು ಕೂಜಿಲು -ಡಾ . ಲಕ್ಷ್ಮಿ ಜಿ ಪ್ರಸಾದ್  ಎಂದಿತ್ತು .   ಉಡುಪಿ ಗೋವಿಂದ  ಪೈ ಸಂಶೋಧನಾ ಕೇಂದ್ರ ಪ್ರಕಟಿಸುವ "  ತುಳುವ  " ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ  ಲೇಖನವನ್ನು ತಮ್ಮ ಬ್ಲಾಗ್ ನಲ್ಲಿ ಹಾಕಿ  ನನ್ನ ಲೇಖನ ವನ್ನು ಇಂಟರ್ನೆಟ್ ಮೂಲಕವೂ  ಸಿಗುವಂತೆ  ಮಾಡಿದ್ದರು ಹಿರಿಯ ವಿಮರ್ಶಕರಾದ ಉಡುಪಿಯ  ಪೂರ್ಣ ಪ್ರಜ್ಞ ಕಾಲೇಜ್ ಉಪನ್ಯಾಸಕರಾದ  ಸಹೃದಯಿ  ಪ್ರೊ। ಮುರಳೀಧರ ಉಪಾಧ್ಯರು

ಇಲ್ಲಿಂದ ನನ್ನ ಬ್ಲಾಗ್ ಬರೆಯುವ ಕನಸು ಗರಿ ಬಿಚ್ಚಿಕೊಂಡಿತು . ಮೊದಲಿಗೆ  ನುಡಿ ಹಾಗು ಬರಹದ ಮೂಲಕ   ಕನ್ನಡ ಬರೆಯುವುದು ಹೇಗೆ ಎಂದು ತಿಳಿದುಕೊಂಡೆ ಜ಼ೊತೆಗೆ ಮಗನ ಸಹಾಯದಿಂದ   ಮೊಬೈಲ್ ನಲ್ಲಿ  ಇಂಟರ್ನೆಟ್ ಮೂಲಕ ಬೇಕಾದ್ದನ್ನು ಹುಡುಕಲು  ಕಲಿತೆ. ಅದಕ್ಕೆ ಸರಿಯಾಗಿ ನನಗೆ ಬೆಂಗಳೂರಿಗೆ ನಿಯೋಜನೆ ಸಿಕ್ಕಿತು. ತುಂಬಾ ಸಮಯದಿಂದ ನನ್ನ ಪತಿ ಗೋವಿಂದ ಪ್ರಸಾದ್  ಮನೆಗೊಂದು  ಕಂಪ್ಯೂಟರ್ ತರುವ  ಎಂದು ಹೇಳುತ್ತಿದ್ದರು . ಬೇಡ ಎಂದು ನಾನು ಹೇಳುತ್ತಿದ್ದೆ . ಈಗ ನಾನಾಗಿಯೇ ಕಂಪ್ಯೂಟರ್ ತರುವ ಹೇಳಿದೆ . ನಾನು ಹೇಳಿದ ದಿವಸ ಸಂಜೆಯೇ ಮನೆಗೆ  ಲೆನೆವೋ ಕಂಪ್ಯೂಟರ್  ಅನ್ನು ತಂದೇ ಬಿಟ್ಟರು ನಾನೆಲ್ಲಿ ಇನ್ನು ಮನಸ್ಸು ಬದಲಾಯಿಸಿ ಬೇಡ ಅಂತ ಹೇಳಿ ಬಿಟ್ರೆ ಅಂತ !
ಸರಿ; ಅಂತು ಮೊನ್ನೆ ಜನವರಿ 2 4  ಕ್ಕೆ ಮನೆಗೆ ಕಂಪ್ಯೂಟರ್  ತಂದ ತಕ್ಷಣವೇ ಮಗನಲ್ಲಿ ನಂಗೆ ಬ್ಲಾಗ್ ಅಕೌಂಟ್  ತೆರೆದು ಕೊಡು ಎಂದು ಹೇಳಿದೆ . ತಂದೆ ಮಗ ಸೇರಿಕೊಂಡು ಏನೋ ಮಾಡಿಕೊಂಡು ಪೇಚಾಡಿ  ನನ್ನ ಹೆಸರಿನಲ್ಲಿ   ಬ್ಲಾಗ್ ತೆರೆದು ಕೊಟ್ಟರು . ಜೊತೆಗೆ ಕಂಪ್ಯೂಟರ್ ಆನ್  ಆಫ್  ಮಾಡುವುದನ್ನು ಗೂಗಲ್ ಸರ್ಚ್ ಮೂಲಕ ಬ್ಲಾಗ್ ನೋಡಲು  ಬ್ಲಾಗ್ ಗೆ ಪ್ರವೇಶಿಸಿ ಬರೆಯುವುದನ್ನು ಹೇಳಿಕೊಟ್ಟರು . ಮೊದಲಿಗೆ  ನನ್ನ ಕುರಿತಾದ ಸಂಕ್ಷಿಪ್ತ ಮಾಹಿತಿ ಹಾಕಿದೆ . ನಂತರ ನನ್ನಲ್ಲಿರುವ ಕೆಲವು ಅಪರೂಪದ ಭೂತಗಳ ಫೋಟೋ  ಹಾಕಿದೆ .ನೀರು ಇಂಗಿಸ ಬೇಕಾದ ಅನಿವಾರ್ಯತೆಯ ಕುರಿತು ನೆಲ ಜಲ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಲೇಖನ ಬರೆದೆ .ಸ್ತ್ರೀ  ಸಂವೇದನೆ ಕುರಿತು ಒಂದು ಲೇಖನ ಬರೆದು ಹಾಕಿದೆ . ಈ ನಡುವೆ ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೆಶಕರಾದ  ಹೆರಂಜೆ  ಕೃಷ್ಣ ಭಟ್ಟರನ್ನು ಸಂಪರ್ಕಿಸಿ ಮುರಳಿಧರ ಉಪಾಧ್ಯರ ಸಂಪರ್ಕ ಸಂಖ್ಯೆಯನ್ನು ಪಡೆದು  ಅವರನ್ನು ಸಂಪರ್ಕಿಸಿ ಬ್ಲಾಗ್ ಬರೆಯುವ  ನನ್ನ ಆಸಕ್ತಿಯ ಬಗ್ಗೆ ತಿಳಿಸಿದೆ ಅವರು ತುಂಬು ಮನಸಿನಿಂದ ಸೂಕ್ತ ಸಲಹೆ ನೀಡಿದರು . ಅಂತು ಇಂತೂ ಒಂದೆರಡು ಲೇಖನ ಬರೆದು  ಬ್ಲಾಗ್ ಗೆ ಹಾಕಿದ ನಂತರ ಕಂಪ್ಯೂಟರ್  ಬಳಸುವ ನನ್ನ ಅನೇಕ ಸ್ನೇಹಿತರಿಗೆ ಹಾಗು ನನ್ನ ಹಿತೈಷಿಗಳಾದ ಕೆಲವು ವಿದ್ವಾಂಸರಿಗೆ ಮೊಬೈಲ್ ಮೂಲಕ  ನಾನು ಬ್ಲಾಗ್ ಬರೆಯುತ್ತಿರುವುದನ್ನು ತಿಳಿಸಿ ಓದಿ ನೋಡಿ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಸಲಹೆ ನೀಡುವಂತೆ ವಿನಂತಿ ಮಾಡಿದೆ . ಎಲ್ಲೆರಿಂದ ನನಗೆ ತುಂಬು ಮನದ ಪ್ರೋತ್ಸಾಹ ಸಿಕ್ಕಿತು. ಮುರಳಿಧರ ಉಪಾಧ್ಯರಿಗು ಮೆಸೇಜ್ ಮಾಡಿದ್ದೆ .ಅದೇ ದಿವಸ ನನ್ನ ಬ್ಲಾಗನ್ನು ನೋಡಿ ಅವರು "ನಾನು ನಿಮ್ಮ ಬ್ಲಾಗ್ ನ ಹೊರ ಆವರಣವನ್ನು  ಚಂದ ಮಾಡಿ ಕೊಡಬಲ್ಲೆ .ನಿಮ್ಮ  ಇಮೇಲ್ ಅಡ್ರೆಸ್ ಮತ್ತು ಪಾಸ್ ವರ್ಡ್ ಕೊಡಿ . ನಂತರ ಪಾಸ್  ವರ್ಡ್ ಬದಲಾಯಿಸಿ "ಎಂದು ಮೆಸೇಜ್  ಮಾಡಿದರು.ಇಂತಹ ಸಹೃದಯತೆಯನ್ನು  ಡಾ . ಅಮೃತ ಸೋಮೆಶ್ವರರನ್ನು ಬಿಟ್ಟು  ಬೇರೆ  ಯಾರಲ್ಲೂ  ಆ ತನಕ ಕಂಡಿರಲಿಲ್ಲ ನಾನು. !
{  ಸಂಶೋಧನೆ ,ಸಾಹಿತ್ಯ ಕ್ಷೇತ್ರದಲ್ಲಿ  ಇನ್ನೂ ಅಂಬೆಗಾಲು ಇಡುತ್ತಿರುವ ನನ್ನ ಕುರಿತು ನೀವು ತೋರಿದ  ಪ್ರೀತಿ ಅಭಿಮಾನ ನನ್ನನ್ನು ನಿಬ್ಬೆರಗಾಗಿಸಿ ಮೂಕ ವಿಸ್ಮಿತಳನ್ನಾಗಿಸಿದೆ   ಸರ್ (ಮುರಳೀಧರ  ಉಪಾಧ್ಯ )! ನೀವು ನಿಜವಾಗಿಯೂ ಗ್ರೇಟ್  ಸರ್ !)  ಅವರು ಹೇಳಿದಂತೆ  ಇಮೇಲ್ ಅಡ್ರೆಸ್  ಮತ್ತು ಪಾಸು ವರ್ಡ್  ಮೆಸೇಜ್ ಮಾಡಿ ಆವರ  ಮೊಬೈಲ್ ಗೆ ಕಳುಹಿಸಿದೆ  ಫೆಬ್ರುವರಿ ೨  ರಂದು  ಮಧ್ಯಾಹ್ನ .ಅದೇ ದಿವಸ  ಸಂಜೆ ಅವರು ನನ್ನ ಬ್ಲಾಗ್ ಅನ್ನು ನೇರ್ಪು ಗೊಳಿಸಿ ಬೇರೆ ಬ್ಲಾಗ್ಗಳಿಗೆ ಲಿಂಕ್ ಕೊಟ್ಟು  ಫೀಡ್ ಜೆಟ್ ಅಳವಡಿಸಿ  ಒಂದು ಸುಂದರವಾದ  ಚೌಕಟ್ಟು ಅನ್ನು  ಹಾಕಿ ತುಂಬಾ ಆಕರ್ಷಕವಾಗಿಸಿ  ಕೊಟ್ಟು  ನನಗೆ  ಪಾಸ್ ವರ್ಡ್  ಚೇಂಜ್ ಮಾಡಿ ಎಂದು ಜತನದಿಂದ  ಮೆಸೇಜ್ ಮಾಡಿದರು . ನನ್ನ ಬ್ಲಾಗ್ ತೆರೆದು ನೋಡಿದೆ !!  ರೋಮಾಂಚನವಾಯಿತು ನನಗೆ  ಅಷ್ಟು  ಚಂದ  ಮಾಡಿ ಕೊಟ್ಟಿದ್ದರು.  ಅವರು .ಹೀಗೆ ನನ್ನ ಬ್ಲಾಗ್ ಬರೆಯುವ ಕನಸು ನನಸಾಗಿದೆ ಗೆಳೆಯರೆ !

  ನಾನು   ಬ್ಲಾಗ್ ತೆರದು  75   ದಿವಸಗಳು ಆದವು. ೪೮  ಬರಹಗಳನ್ನು  ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ . 2266  ವೀಕ್ಷಕರು ನನ್ನ ಬ್ಲಾಗನ್ನು ಇಣುಕಿ  ನೋಡಿದ್ದಾರೆ  ಅನೇಕರು  ಪ್ರೋತ್ಸಾಹಿಸಿದ್ದಾರೆ . ನನ್ನ ಬ್ಲಾಗನ್ನು  ಕನ್ನಡ ಬ್ಲಾಗ್ ಕೊಂಡಿಗೆ ಜೋಡಿಸಿದ್ದಲ್ಲದೆ  ನನ್ನ ಹೆಚ್ಚು ಕಡಿಮೆ ಎಲ್ಲ ಬರಹ (ಪೋಸ್ಟ್ )ಗಳನ್ನು ತಮ್ಮ  ಬ್ಲಾಗಿನಲ್ಲಿ  ಹಂಚಿಕೊಂಡು  ನನ್ನ ಬ್ಲಾಗ್ ಇಷ್ಟು ಬೇಗನೆ ಪ್ರಸಿದ್ಧಿಗೆ  ಬರುವಂತೆ  ಮಾಡಿದ್ದಾರೆ ಮುರಳೀಧರ ಉಪಾಧ್ಯರು .
ಮುರಳೀಧರ ಉಪಾಧ್ಯರಿಗೆ  ನಾನು ಸದಾ ಋಣಿ.  ಬೆಂಬಲ ನೀಡಿದ  ಓದಿ ಪ್ರೋತ್ಸಾಹಿಸಿದ ಎಲ್ಲರಿಗು ಧನ್ಯವಾದಗಳು



Tuesday, 2 April 2013

¨ಬೆಳ್ಳಾರೆಯ (ಸುಳ್ಯ ತಾ ,ದ ಕ) ಸಾಂಸ್ಕೃತಿಕ ಅಧ್ಯಯನ( Bellare -A culturaral study) (c)ಡಾ.ಲಕ್ಷ್ಮೀ ಜಿ ಪ್ರಸಾದ

                                             


                         copy rights reserved
                   ಬೆಳ್ಳಾರೆ ಬೇಡಿನ ಮಾಸ್ತಿ ವಿಗ್ರಹ
  ಬೆಳ್ಳಾರೆ ಸುಳ್ಯ ತಾಲೂಕಿನ ವ್ಯಾಪ್ತಿಗೆ ಸೇರಿದ ಗ್ರಾಮ.ಹಿಂದೆ ಬೆಳ್ಳಾರೆ ಮಾಗಣೆಯಾಗಿದ್ದ ಬಗ್ಗೆ ಇತಿಹಾಸಜ್ಞರು ತಿಳಿಸಿದ್ದಾರೆ. ಬೆಳ್ಳಾರೆಯನ್ನು ಸಾಮಂತ ಬಲ್ಲಾಳ ಅರಸರು ಆಳುತ್ತಿದ್ದರು. ಇವರು ಬೆಳ್ಳಾರೆ, ಮುಂಡೂರು, ಸರ್ವೆ, ಕೆದಂಬಾಡಿ, ಕೆಯ್ಯೂರು, ಕಾಣಿಯೂರು, ಐವರ್ನಾಡು, ಪಾಲ್ತಾಡಿ,  ಪುಣ್ಚಪಾಡಿ, ಸವಣೂರು, ಚಾರ್ವಕ, ಪೆರುವಾಜೆ, ಕೆದಿಲ, ಬಾಳಿಲ, ಕಳಂಜ, ಮುಪ್ಪೇರ್ಯ, ಮುರುಳ್ಯ, ಕಾೈಮಣ, ಕುದ್ಮಾರು, ಮತ್ತು ಕೊಳ್ತಿಗೆ, ಎಂಬ ಇಪ್ಪತ್ತೊಂದು ಗ್ರಾಮಗಳನ್ನು  ಆಳುತ್ತಿದ್ದರು. ಬೆಳ್ಳಾರೆಯನ್ನು ಆಳಿದ ಸಾಮಂತರು ಯಾರ ಸಾಮಂತರಾಗಿದ್ದರು ಎಂಬ ಬಗ್ಗೆ ಇದಮಿತ್ಥಂ ಎಂಬ ಮಾಹಿತಿ ಸಿಗುವುದಿಲ್ಲ.

     1763ರಲ್ಲಿ ಹೈದರಾಲಿಯು ಬಿದನೂರನ್ನು ವಶಪಡಿಸಿಕೊಂಡಾಗ ತುಳುನಾಡು ಅವನ ವಶವಾಯಿತಾದರೂ,  ಕೊಡಗಿನ ಅರಸನೊಂದಿಗೆ ಒಪ್ಪಂದ ಮಾಡಿಕೊಂಡು ಪಂಜ ಮತ್ತು ಕೊಡಗಿನ  ಮಾಗಣೆಗಳನ್ನು ಕೊಡಗಿಗೆ ಬಿಟ್ಟು ಕೊಟ್ಟನು.  ಕ್ರಿ.ಶ ಆದಿ ಭಾಗದಲ್ಲಿ ಬನವಾಸಿಯ ಕದಂಬ ಚಂದ್ರವರ್ಮನು ಕೊಡಗನ್ನು ಆಳಿಕೊಂಡಿದ್ದನು. ನಂತರ ಕೊಡಗು ಅನೇಕ ವಂಶದವರ ಆಳ್ವಿಕೆಗೆ ಒಳಗಾಯಿತು. ಸುಮಾರು ಕ್ರಿ.ಶ 1600ರಲ್ಲಿ ಇಕ್ಕೇರಿ ನಾಯಕರ ವಂಶದ ಹಾಲೇರಿ ಕುಟುಂಬದ ವೀರರಾಜನು ಕೊಡಗನ್ನು ಆಳ್ವಿಕೆ ಮಾಡಿದ ಬಗ್ಗೆ ರಾಜೇಂದ್ರನಾಮೆಯಲ್ಲಿ ಉಲ್ಲೇಖವಿದೆ. ಕ್ರಿ.ಶ 1775ರಲ್ಲಿ ಅಮರ  ಸುಳ್ಯ  ಮತ್ತು ಬೆಳ್ಳಾರೆಗಳನ್ನು  ಹೈದರಾಲಿ ಪುನಃ ವಶಪಡಿಸಿಕೊಂಡನು. 1791ರಲ್ಲಿ ದೊಡ್ಡ ವೀರರಾಜೇಂದ್ರನು ವಶಪಡಿಸಿಕೊಂಡನು. 1792ರಲ್ಲಿ  ಟಿಪ್ಪು ಸುಲ್ತಾನನ ಮನವಿಯ ಮೇರೆಗೆ ಬೆಳ್ಳಾರೆ ಮತ್ತು ಪಂಜ ಮಾಗಣೆಗಳನ್ನು ದೊಡ್ಡ ವೀರರಾಜೇಂದ್ರನು ಟಿಪ್ಪು ಸುಲ್ತಾನನಿಗೆ ಬಿಟ್ಟು ಕೊಟ್ಟನು.
    
     1. ಬೆಳ್ಳಾರೆಯ ಕೋಟೆ ಮತ್ತು ಬ್ರಿಟಿಷರ ಖಜಾನೆ: ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆಯ 37 ಗ್ರಾಮಗಳನ್ನು ದೊಡ್ಡ ವೀರರಾಜೇಂದ್ರನ ವಶಕ್ಕೆ ಬ್ರಿಟಿಷರು ನೀಡಿದ್ದಾರೆ. ಕೊಡಗಿನ ಕೊನೆಯ ಅರಸ ಚಿಕ್ಕ ವೀರರಾಜೇಂದ್ರನನ್ನು  1834ರಲ್ಲಿ ಬ್ರಿಟಿಷರು  ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ, ಸುಳ್ಯ ,ಪಂಜ ಸೀಮೆಯ 110 ಗ್ರಾಮಗಳನ್ನು  ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗರಸರ ಕಾಲದಲ್ಲಿ ವಸ್ತುರೂಪದಲ್ಲಿ ಭೂ ಕಂದಾಯವನ್ನು ನಗದು ರೂಪಕ್ಕೆ ಬದಲಾಯಿಸಿದರು. ಇದರ ಪ್ರತಿಫಲವಾಗಿ ಒಂದು ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು. ಸುಳ್ಯದ ರೈತಾಪಿ ಜನರು ಕೆದಂಬಾಡಿ ರಾಮೇಗೌಡ,ಕೂಜುಕೋಡು ಮಲ್ಲಪ್ಪ ಗೌಡ ಮೊದಲಾದವರ ನೇತೃತ್ವದಲ್ಲಿ ಬ್ರಿಟಿಷರನ್ನು ಹೊಡೆದೋಡಿಸಲು ತೀರ್ಮಾನಿಸಿದರು .ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಕರೆದು ಈತ ಕೊಡಗಿನ ಅರಸರ  ವಂಶದವನು ಎಂದು ಜನರನ್ನು ನಂಬಿಸಿದರು. ಮೊದಲಿಗೆ ಬೆಳ್ಳಾರೆಯ ಕೋಟೆಯ ಒಳಗಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಂಡರು.
       (c)ಡಾ.ಲಕ್ಷ್ಮೀ ಜಿ ಪ್ರಸಾದ
           
ಬೆಳ್ಳಾರೆ ಕೋಟೆಯಲ್ಲಿ ಕಲ್ಯಾಣಸ್ವಾಮಿಗೆ ಪಟ್ಟ ಕಟ್ಟಿದರು. ಬ್ರಿಟಿಷರಿಂದ ವಶಪಡಿಸಿಕೊಂಡ ಬೆಳ್ಳಾರೆಯ ಖಜಾನೆ ಮತ್ತು ಕೋಟೆ ಇಂದಿಗೂ ಇದೆ. ಬೆಳ್ಳಾರೆಯ  ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದ ಬದಿಯಲ್ಲಿ ಈ ಕೋಟೆ ಇದೆ.(ಚಿತ್ರ-1) ಈಗ ಬಂಗ್ಲೆ ಗುಡ್ಡೆ ಎಂದು ಕರೆಯಲ್ಪಡುವ ಕೋಟೆಯ ಮೇಲೆ ಇರುವ ಒಂದು ಕಟ್ಟಡವೇ ಆ ಖಜಾನೆ (ಚಿತ್ರ-2) ಈ ಕಟ್ಟಡದಲ್ಲಿ ಈಗ ವಿಲೇಜಾಫೀಸ್ ಇದೆ. ಕೋಟೆಯ ಸುತ್ತ ತೋಡಿದ ಕಂದಕದ ಕುರುಹು ಈಗ ಕೂಡ ಇದೆ.ಈ ಕೋಟೆಯನ್ನು ಕ್ರಿ.ಶ. 1601ರಲ್ಲಿ ಇಕ್ಕೇರಿಯ ಅರಸರು ಕಟ್ಟಿಸಿದ್ದಾರೆ.     
        
                    
    2. ಬೆಳ್ಳಾರೆಯ ಮಾಸ್ತಿ ಕಟ್ಟೆ ಮತ್ತು ಮಾಸ್ತಿ ವಿಗ್ರಹಗಳು   ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಮಾಸ್ತಿ ಕಟ್ಟೆ ಎಂಬ ಪ್ರದೇಶ ಇದೆ. ಬೆಳ್ಳಾರೆ ಪುತ್ತೂರು ಮುಖ್ಯ ರಸ್ತೆಯ ಬಲಭಾಗದಲ್ಲಿ ತುಸುದೂರ ಒಳಗೆ ಹೋಗಿ ಸ್ವಲ್ಪ ಎತ್ತರದ ಗುಡ್ಡೆ ಪ್ರದೇಶದಲ್ಲಿ ಮಾಸ್ತಿ ಕಟ್ಟೆ ಎಂಬ ಹೆಸರಿನ ಕಟ್ಟೆ ಇತ್ತು. ಇಲ್ಲಿ ನಾಲ್ಕು ಶಿಲಾ ಸ್ತಂಭಗಳನ್ನು ನಾಲ್ಕು ದಿಕ್ಕಿಗೆ ನೆಡಲಾಗಿದ್ದು, ಕೆಳಗೆ ಶಿಲೆಯನ್ನು ಹಾಸಲಾಗಿತ್ತು. ಇಲ್ಲಿ ಒಂದು ಸ್ತ್ರೀಯ ಚಿತ್ರ, ಅವಳ ಎತ್ತಿದ ಕೈಯ ಚಿತ್ರ ಹಾಗೂ ಅರ್ಧ ಚಂದ್ರನ ಚಿತ್ರವನ್ನು ಕೆತ್ತಿರುವ ಶಿಲೆ ಇತ್ತು. ಎಂದು ಇದನ್ನು ನೋಡಿರುವ ಪುಷ್ಪರಾಜರು ಹೇಳುತ್ತಾರೆ. ಅವರು ಹೇಳಿರುವ ಪ್ರಕಾರದ ಶಿಲ್ಪವು ಮಹಾಸತಿಗಲ್ಲಿನಲ್ಲಿ ಇರುತ್ತದೆ. ಆದ್ದರಿಂದ ಇಲ್ಲೊಂದುಮಹಾಸತಿಕಲ್ಲು ಇತ್ತೆಂದು ತಿಳಿದು ಬರುತ್ತದೆ. ಕಟ್ಟೆ ಕೂಡಾ ಇರುವುದರಿಂದ ಇದನ್ನು ಮಹಾಸತಿ  ಕಟ್ಟೆ ಎಂದು ಕರೆದಿರಬೇಕು. ಕಾಲಾಂತರದಲ್ಲಿ ಇದು  ಮಾಸ್ತಿ ಕಟ್ಟೆ ಎಂದಾಗಿದೆ,ಈಗ ಈ  ಪ್ರದೇಶದವನ್ನು ಸಮತಟ್ಟಾಗಿಸಿದ್ದು, ಇಲ್ಲಿ ಮಹಾಸತಿ  ಕಟ್ಟೆ  ಇದ್ದ ಕುರುಹುಗಳು ಅಳಿಸಿ ಹೋಗಿದೆ. 3-4 ವರ್ಷಗಳ ಹಿಂದಿನ ತನಕ ಮಹಾಸತಿ ಕಟ್ಟೆ ಇತ್ತು, ಸುಮಾರು 20-25  ವರ್ಷಗಳ ಮೊದಲು ಇಲ್ಲಿ ಮಹಾಸತಿ ಕಲ್ಲು ಇದ್ದುದನ್ನು ನೋಡಿದವರಿದ್ದಾರೆ, ಈ ಕಲ್ಲು ಈಗ ಎಲ್ಲೋ ಕಳೆದು ಹೋಗಿದೆ.ಆದರೆ ಬೆಳ್ಳಾರೆ ಬೀಡಿನ ಪಟ್ಟದ ಚಾವಡಿಯಲ್ಲಿರುವ ಅಡ್ಯಂತಾಯ ದೈವದ ಗುಡಿಯಲ್ಲಿ ಎರಡು ಮಾಸ್ತಿ ವಿಗ್ರಹಗಳು ಇವೆ  ತುಳುನಾಡಿನಲ್ಲಿ ಸತಿ ಸಹಗಮನ ಪದ್ಧತಿ ಅಷ್ಟಾಗಿ ಪ್ರಚಲಿತವಿರಲಿಲ್ಲ,ಆದ್ದರಿಂದ ಸಹಗಮನ  ಮಾಡಿದವರ ಸಂಖ್ಯೆ ತೀರಾ ಕಡಿಮೆ ಇದೆ. ಉಡುಪಿ , ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6-7 ಮಹಾಸತಿ ಕಲ್ಲು/ಕಟ್ಟೆಗಳು ಇವೆ. ಬೆಳ್ಳಾರೆಯಲ್ಲಿ  ಮಹಾಸತಿ ಕಲ್ಲು ಹಾಗೂ ಕಟ್ಟೆ ಇದ್ದಿದ್ದರೂ ಕೂಡಾ ಇಲ್ಲಿ  ಸತಿ ಸಹಗಮನ  ಮಾಡಿದವರು ಯಾರು? ಯಾವ ಕಾಲದಲ್ಲಿ? ಇತ್ಯಾದಿ ವಿಚಾರಗಳ ಬಗ್ಗೆ ಏನೂ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ.

                      
                                          
    3. ಬೆಳ್ಳಾರೆಯ ಬೀಡು ಮತ್ತು ಪಟ್ಟದ ಚಾವಡಿ: ಬೆಳ್ಳಾರೆಯನ್ನು ಜೈನ ಪಾಳೆಯಗಾರರು ಆಳಿದ್ದಕ್ಕೆ ಕುರುಹಾಗಿ  ಬೆಳ್ಳಾರೆಯ ಕೋಟೆಯ ಹಿಂಭಾಗದಲ್ಲಿ ಬೀಡಿನ ಅವಶೇಷ ಈಗಲೂ ಇದೆ. ( ಚಿತ್ರ-3) ಬಲ್ಲಾಳರ ಬೀಡಿನ ಅವಶೇಷದ ವಾಯುವ್ಯ ಭಾಗದಲ್ಲಿ ಬೆಳ್ಳಾರೆಯ ಪ್ರಧಾನ ದೈವ ಅಡ್ಯಂತಾಯ ಭೂತದ ಚಾವಡಿ ಇದೆ.  ಭೂತದ ನೇಮದ ಸಂದರ್ಭದಲ್ಲಿ ಇದು ಪಟ್ಟದ ಚಾವಡಿ ಎಂದು ಕರೆಸಿಕೊಂಡು (ಚಿತ್ರ-4)  ಭೂತದ ನುಡಿಯಾಗುತ್ತದೆ. ಇದರಿಂದಾಗಿ ಜೈನ ಪಾಳೆಯಗಾರರಾದ ಬಲ್ಲಾಳರಸರ ಪಟ್ಟಾಭಿಷೇಕ ಇಲ್ಲಿಯೇ ಆಗುತ್ತಿತ್ತೆಂದು ತಿಳಿದು ಬರುತ್ತದೆ. ಅಡ್ಯಂತಾಯ ಭೂತದ ಚಾವಡಿಯ ಗುಡಿಯಲ್ಲಿ ಕಂಚಿನಿಂದ ನಿರ್ಮಿಸಲ್ಪಟ್ಟ ಎರಡು  ಸ್ತ್ರೀ ರೂಪದ ಮೂರ್ತಿಗಳು ಇವೆ ಕೈಯಲ್ಲಿ ಕನ್ನಡಿ ಹಿಡಿದ ಕಾರಣ ಹಾಗು ಮೂರ್ತಿಯ ಲಕ್ಷ್ಮ್ಣಗಳನ್ನೂ ಗಮನಿಸಿದಾಗ ಮಾಸ್ತಿ ವಿಗ್ರಹಗಳು ಎಂದು ಹೇಳ ಬಹುದು ಇದರ ಜೊತೆ "ಎರಡು ಜಲಪಾತ್ರೆಗಳ ರೀತಿಯ ಕಲಶಗಳು ಇದ್ದು ಇವು ಮಾಸ್ತಿ ಹೋಗುವ ಮುನ್ನ ಗಂಗಮ್ಮನ ಪೂಜೆಗೆ ಸತಿಯರು ಬಳಸಿದ ಜಲಪಾತ್ರೆಗಳು ಇವಾಗಿರ ಬಹುದೆಂದೂ ,ಈ ಸ್ತ್ರೀ ವಿಗ್ರಹಗಳು ಮಾಸ್ತಿ ವಿಗ್ರಹಗಳೆಂದು" ಹಂಪಿ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯ್ಯಪಕರೂ ಹಿರಿಯ ವಿದ್ವಾಂಸರೂ ಆದ ದೇವರ ಕೊಂದ ರೆಡ್ಡಿ ಯವರು ಅಭಿಪ್ರಾಯ ಪಟ್ಟಿದ್ದಾರೆ    ಈ ಬಗ್ಗೆ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ಸಿಗಬಹುದು.

                   
               

   4. ಆನೆ ಕಟ್ಟುವ ಕಲ್ಲು: ಪಟ್ಟದ ಚಾವಡಿಯ ತೆಂಕು ಭಾಗದಲ್ಲಿ ಬೀಡಿನರಮನೆ ಇತ್ತು,ಇದರ ಬಳಿಯೂ ಜೈನ ಬಸದಿ ಕೂಡ ಇತ್ತು.ಕೆಲವರ್ಷಗಳ ಹಿಂದಿನ ತನಕ ಈ ಬಸದಿಯ ಅವಶೇಷ ಕಾಣಿಸುತ್ತಿತ್ತು ಈಗ ನೆಲಸಮವಾಗಿ ಕುರುಹುಗಳು ಅಳಿಸಿ ಹೋಗಿವೆ, ಸಮೀಪದಲ್ಲಿ ಆನೆಗಳನ್ನು ಕಟ್ಟಿ ಹಾಕುವ ಕಲ್ಲುಗಳು ಇದ್ದವು.ಅಂಥಹ ಒಂದು ಆನೆ ಕಟ್ಟುವ ಕಲ್ಲನ್ನು ಈಗ ಕೂಡ ಕಾಣಬಹುದು
  
          
            
   5. ಬಂಡಿ ಮಜಲು:  ಹಿಂದೆ ಬೆಳ್ಳಾರೆ ಪಟ್ಟಣವಾಗಿತ್ತು. ಸರಕು ಸಾಗಾಟ ಎತ್ತಿನ ಬಂಡಿಗಳ ತಂಗುದಾಣ ಆಗಿದ್ದ ಪ್ರದೇಶವನ್ನು ಬಂಡಿ ಮಜಲು ಎಂದು ಕರೆಯುತ್ತಿದ್ದರು, ಬಂಡಿ ಮಜಲು ಎಂಬ ಈ ವಿಶಾಲವಾದ ಬಯಲು ಪ್ರದೇಶ ಬೆಳ್ಳಾರೆ  ಪೇಟೆಯಿಂದ ತುಸು ದೂರದಲ್ಲಿ ಈಗ ಕೂಡ ಇದೆ,

   6. ದೈವತ್ವವನ್ನು ಪಡೆದ  ಬೆಳ್ಳಾರೆಯ  ರಾಜಕುಮಾರ-ನೈದಾಲಪಾಂಡಿ ಭೂತ: ಸಂಪಾಜೆಯಿಂದ ಏಳೆಂಟು ಕಿಲೋಮೀಟರ್ ಒಳಭಾಗದ ಕಾಡಿನಲ್ಲಿ ಅರೆಕಲ್ಲು ಎನ್ನುವ ಸ್ಥಳವಿದೆ. ಇಲ್ಲಿ ಒಂದು ಅಯ್ಯಪ್ಪ ಮತ್ತು ಶಿವನ ಗುಡಿಗಳು ಇವೆ.ಇಲ್ಲಿ ಪೂಜಾ ಕಾಂiÀರ್iಗಳನ್ನು ಕೊಡಗಿನ ಗಾಳಿಬೀಡಿನ ಪಾಂಡೀರ ರಾಜ ವಂಶದವರು ಬಂದು ನಡೆಸುತ್ತಾರೆ. ಇಲ್ಲಿ ಏಳು ವರ್ಷಗಳಿಗೊಮ್ಮೆ "ನೈದಾಲ ಪಾಂಡಿ"* ಎಂಬ ಭೂತಕ್ಕೆ ನೇಮ ನೀಡಿ ಆರಾಧನೆ ಸಲ್ಲಿಸುತ್ತಾರೆ.

ತುಳುನಾಡಿನ ಭೂತ ಪದಕ್ಕೆ ಕನ್ನಡದ ಭೂತ ಅಥವಾ ದೆವ್ವ ಎಂಬ ಅರ್ಥವಿಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಣ ಶಿಷ್ಟ ರಕ್ಷಕ ಶಕ್ತಿಗಳು. ಇವು ತುಳುವರ ಆರಾಧ್ಯ ದೈವಗಳು.ಸಂಸ್ಕೃತದ  ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಬೂತೊ ಎಂದಾಗಿ ಸಂಸ್ಕೃತೀಕರಣಗೊಂಡು ಭೂತ ಎಂದಾಗಿರುವ ಸಾಧ್ಯತೆ ಇದೆ. ತುಳುನಾಡಿನ ಭೂತಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು ಹೊಂದಿದ್ದು  ಅಸಹಜ ಮರಣವನ್ನಪ್ಪಿದ ಸಾಂಸ್ಕೃತಿಕ  ವೀರರೇ ಆಗಿದ್ದಾರೆ. ಈ ಹಿಂದೆ ಇದ್ದವರು ಎಂಬರ್ಥದಲ್ಲಿ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ. ಇತಿಹಾಸ, ರಾಜಕೀಯ, ಸಂಸ್ಕøತಿ, ಸಾಮಾಜಿಕ, ಜಾನಪದ ಸೇರಿದಂತೆ ಎಲ್ಲ ವಿಚಾರಗಳು ಕೂಡ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವದೊಂದಿಗೆ ತಳುಕು ಹಾಕಿಕೊಂಡಿದೆ. ಅಂತೆಯೇ ದುರಂತ ಮತ್ತು ದೈವತ್ವವನ್ನು ಪಡೆದ ಬೆಳ್ಳಾರೆಯ ರಾಜಕುಮಾರ ನೈದಾಲ ಪಾಂಡಿಯ ಕುರಿತಾದ ಐತಿಹ್ಯ ಮತ್ತು ಆರಾಧನೆಯಲ್ಲಿ ಇತಿಹಾಸದ ತುಣುಕುಗಳು ಅಡಗಿವೆ.
               
                                                     
     
 ಇದರಲ್ಲಿ ಮೊದಲನೆಯ ಪಾತ್ರಿಯಾಗಿ ಪೂಮಲೆ ಕುಡಿಯರು ಎರಡನೆಯ ಪಾತ್ರಿಗಳಾಗಿ ಪಾಂಡಿ ಮನೆಯವರು  ಭಾಗವಹಿಸುತ್ತಾರೆ.  ನೈದಾಲಪಾಂಡಿ ಭೂತವನ್ನು ಪೂಮಲೆ ಕುಡಿಯ ಜನಾಂಗದ ಭೂತ ಪಾತ್ರಿಗಳಲ್ಲಿ ಹಿರಿಯರೊಬ್ಬರಿಗೆ ಹೇಳಿ ಕಟ್ಟಿಸುತ್ತಾರೆ. ನೈದಾಲಪಾಂಡಿ ಭೂತ ಕಟ್ಟಿದವರು ತುಸುಕಾಲದಲ್ಲಿಯೇ ಮರಣವನ್ನಪ್ಪುತ್ತಾರೆ ಎಂಬ ನಂಬಿಕೆ ಪ್ರಚಲಿತವಿರುವುದರಿಂದ ವಯಸ್ಸಾದ ವೃದ್ಧರೇ  ನೈದಾಲ ಪಾಂಡಿ ಭೂತವನ್ನು ಕಟ್ಟುತ್ತಾರೆ.
್ರ
      ನೈದಾಲಪಾಂಡಿ ಭೂತಕ್ಕೂ ಬೆಳ್ಳಾರೆಗೂ ಅವಿನಾಭಾವ ಸಂಬಂಧವಿದೆ.  ಪಾಂಡಿ ಮನೆಯ ಹಿರಿಯರು ಈ ಬಗ್ಗೆ ಮಾಹಿತಿ ನೀಡಿರುತ್ತಾರೆ.  ಬೆಳ್ಳಾರೆಯನ್ನು ಓರ್ವ ತುಂಡರಸ ಆಳಿಕೊಂಡಿದ್ದನು. ಅವನು ಪಾಂಡು ರೋಗಿಯಾಗಿದ್ದನು.  ಅವನ ನಂತರ ಅವನ ಮಗ ಬೆಳ್ಳಾರೆಯನ್ನು ಆಳಿಕೊಂಡಿದ್ದನು.  ಇವನನ್ನು ಶತ್ರುಗಳು ಆಕ್ರಮಿಸಿದಾಗ ಬೆಳ್ಳಾರೆಯಿಂದ ತಪ್ಪಿಸಿಕೊಂಡು ಹೋಗಿ, ಪೂಮಲೆ ಕಾಡಿಗೆ ಹೋಗಿ ಪೂಮಲೆ ಕುಡಿಯರ ಮನೆಯೊಂದರಲ್ಲಿ ಆಶ್ರಯ ಪಡೆಯುತ್ತಾನೆ.  ಅಲ್ಲಿಗೆ ಕೊಡಗರಸರ ತಂಗಿ ಬಂದಾಗ ಬೆಳ್ಳಾರೆಯ ರಾಜ ಕುಮಾರ ಮತ್ತು ಅವಳ ಪರಿಚಯವಾಗಿ ಅದು ಪ್ರೇಮಕ್ಕೆ  ತಿರುಗುತ್ತದೆ.  ನಂತರ ಅವರು ಮದುವೆಯಾಗಿ ಕೊಡಗಿನಲ್ಲಿ ಇರುತ್ತಾರೆ.  ಇದು ಬೆಳ್ಳಾರೆಯ ರಾಜನ ಶತ್ರುಗಳಿಗೆ ತಿಳಿದು ಕೊಡಗಿಗೆ ಹೋಗಿ ಅವನ ಮೇಲೆ ಆಕ್ರಮಣ ಮಾಡುತ್ತಾರೆ.  ಆಗ ಶತ್ರುಗಳ ಎದುರಿನಿಂದಲೇ ತಪ್ಪಿಸಿಕೊಂಡು  ಹೋಗಿ ಅರೆಕಲ್ಲಿಗೆ ಬಂದು ಶಿವನಲ್ಲಿ ಐಕ್ಯನಾಗುತ್ತಾನೆ.  ನಂತರ ದೈವತ್ವಕ್ಕೇರಿ ನೈದಾಲ ಪಾಂಡಿ ಎಂಬ ಹೆಸರಿನ ಭೂತವಾಗಿ ಆರಾಧನೆ ಪಡೆಯುತ್ತಾನೆ.

      ನೈದಾಲಪಾಂಡಿ ಭೂತಕ್ಕೆ ಅರಸು ದೈವಕ್ಕೆ ಕಟ್ಟುವಂತೆ ದೊಡ್ಡದಾದ ಮೀಸೆ, ತಲೆಗೆ ಪಗಡಿ ರೂಪದ ಕಿರೀಟದಂತೆ ಇರುವ ಮುಡಿ ಕಟ್ಟುತ್ತಾರೆ (ಚಿತ್ರ-8). ಬೆಳ್ಳಾರೆಯ ತುಂಡರಸ ಪಾಂಡುರೋಗಿಯಾಗಿದ್ದರಿಂದ ಅವನ ಮಗನನ್ನು 'ಪಾಂಡಿ' ಎಂದು ಕರೆಯುತ್ತಿದ್ದರು.  ಈತ ಪೂಮಲೆಯಲ್ಲಿ ಉಳಿದುಕೊಂಡ ಪ್ರದೇಶದ ಹೆಸರು ನೈದಾಲ್ ಎಂದು.  ಎರಡು ವಂಶಗಳನ್ನು ನೆಯ್ದ ಅಂದರೆ ಬೆಸೆದ ಕಾರಣ ಆತನನ್ನು ನೈದಾಲ ಪಾಂಡಿ ಎಂದು ಕರೆಯುತ್ತಾರೆ ಎಂಬ ಐತಿಹ್ಯವೂ ಇದೆ.  ನೈದಾಲಿನ ಪಾಂಡಿ ಎಂಬರ್ಥದಲ್ಲಿ ನೈದಾಲ ಪಾಂಡಿ ಎಂಬ ಹೆಸರು ಬಂದಿದೆ ಎಂದು ನೈದಾಲ ಪಾಂಡಿಯ ವಂಶದ ಹಿರಿಯರು ಹೇಳುತ್ತಾರೆ.  ನೈದಾಲ ಪಾಂಡಿ ಭೂತದ ನೇಮದ ಸಂದರ್ಭದಲ್ಲಿ ಒಂದು ಹಾಡನ್ನು ಹಾಡುತ್ತಾರೆ.  ಅದರಲ್ಲಿ ನೈದಾಲಪಾಂಡಿಯನ್ನು ಅಜ್ಜಯ್ಯ ಎಂದೂ, ಕಾಸರಗೋಡು ಕಾಳೆಯ್ಯ ಎಂದೂ ಕರೆದಿದ್ದಾರೆ.  ಗಾಳಿ ಬೀಡಿನಲ್ಲಿರುವ ನೈದಾಲಪಾಂಡಿಯ ವಂಶದ ಹಿರಿಯರು ನೈದಾಲಪಾಂಡಿಯ ಮೊದಲ ಹೆಸರು ಕಾಳೆಯ್ಯ ಎಂದೂ, ಮದುವೆಯಾದ ಮೇಲೆ ಆತ ಲಿಂಗಾಯತ ಧರ್ಮಕ್ಕೆ ಮತಾಂತರ ಮಾಡಿದನೆಂದೂ ಹೇಳಿದ್ದಾರೆ.  ನೈದಾಲ ಪಾಂಡಿಯ ಕಥಾನಕ ಸುಮಾರು 130 ರಿಂದ 180 ವರ್ಷಗಳ ಹಿಂದೆ ನಡೆದ ಘಟನೆಯಾಗಿz

 
     ದೈವತ್ವಕ್ಕೇರಿದ ಬೆಳ್ಳಾರೆಯ ಈ ತುಂಡರಸ ಯಾರು? ಈತನನ್ನು ಆಕ್ರಮಿಸಿದ ಶತ್ರುಗಳು ಯಾರು? ಯಾವ ಕಾಲ ಇತ್ಯಾದಿ ವಿಷಯಗಳ ಬಗ್ಗೆ ವಿವರ ಸರಿಯಾಗಿ ಸಿಗುತ್ತಿಲ್ಲ. ಹೈದರಾಲಿಯ ಸಹಾಯದಿಂದ ಲಿಂಗಯ್ಯ(ಲಿಂಗರಾಜ?) ಕೊಡಗನ್ನು ಆಳುತ್ತಿದ್ದ ಹಾಲೇರಿ ವಂಶದ ದೇವಯ್ಯ(ದೇವಪ್ಪ?)ನನ್ನು ಸೋಲಿಸಿದನು. ವೈರಿ ಸೇನೆಯೆದುರು ನಿಲ್ಲಲಾರದೆ ದೇವಯ್ಯನು ಓಡಿ ಹೋಗಿ ಕಾಡುಗಳಲ್ಲಿ ತಲೆಮರೆಸಿಕೊಂಡನು ಎಂದು ಕರ್ನಾಟಕ ಚರಿತ್ರೆ ಸಂಪುಟದಲ್ಲಿ ಹೇಳಿದೆ.  ಅದೇ ರೀತಿ ಚಿಕ್ಕ ವೀರ ರಾಜನ ತಂಗಿ ದೇವಮ್ಮಾಜಿಯ ಗಂಡ ಚೆನ್ನ ಬಸವ ಕೊಡವನಾಗಿದ್ದು, ಮದುವೆ ಸಂದರ್ಭದಲ್ಲಿ ಲಿಂಗಾಯತನಾದವನು.  ಚೆನ್ನ ಬಸವನು ಬ್ರಿಟಿಷರ  ಪರವಾಗಿದ್ದ ಬಗ್ಗೆ ಮಾಹಿತಿ ಸಿಗುತ್ತದೆ.  ಅಮರ, ಸುಳ್ಯ ಕ್ರಾಂತಿಯ ಸಂದರ್ಭದಲ್ಲಿ ಪುಟ್ಟ ಬಸಪ್ಪ ಎಂಬಾತನನ್ನು ಪೂಮಲೆ ಕಾಡಿನಲ್ಲಿ ಕೆಲ ಕಾಲ ಇರಿಸಿ ಆತನನ್ನು ಕಲ್ಯಾಣಸ್ವಾಮಿ ಎಂದು ಜನರನ್ನು ನಂಬಿಸಿ ಬೆಳ್ಳಾರೆಯ ಕೋಟೆಯಲ್ಲಿ ಪಟ್ಟಾಭಿಷೇಕ ಮಾಡಿದ ಬಗ್ಗೆ ಮಾಹಿತಿ ಸಿಗುತ್ತದೆ.  ಹೈದರಾಲಿಯ ಸಹಾಯ ಪಡೆದು ಆಕ್ರಮಿಸಿದ ಲಿಂಗರಾಜನನ್ನು ಎದುರಿಸಲಾರದೆ ಕಾಡಿಗೆ ಓಡಿ ಹೋದ ದೇವಯ್ಯನಿಗೂ ಚೆನ್ನ ಬಸವನಿಗೂ ಯಾವುದಾದರೂ ಸಂಬಂಧವಿದೆಯೇ? ಎಂಬ ಬಗ್ಗೆ ಏನೂ ತಿಳಿದು ಬರುವುದಿಲ್ಲ.  ಆದರೆ ಚೆನ್ನ ಬಸವನಂತೆ ನೈದಾಲಪಾಂಡಿ ಕೂಡ ಮೂಲತಃ ಕೊಡವನಾಗಿದ್ದು,ಅನಂತರ ಲಿಂಗಾಯತನಾಗಿ ಪರಿವರ್ತಿತನಾಗಿದ್ದಾನೆ. ನೈದಾಲ ಪಾಂಡಿ ಕೂಡಾ ಚೆನ್ನ ಬಸವನಂತೆ ಕೊಡಗರಸರ ಮನೆಗೆ ಸೇರಿದ ಹುಡುಗಿಯನ್ನು ಮದುವೆಯಾಗಿದ್ದಾನೆ. ಆದ್ದರಿಂದ ಚೆನ್ನ ಬಸವನೇ ನೈದಾಲಪಾಂಡಿ ಎಂಬ ಹೆಸರಿನಲ್ಲಿ ಆರಾಧಿಸಲ್ಪಟ್ಟಿರುವ  ಸಾಧ್ಯತೆ ಇದೆ. ಪಂಜದಲ್ಲಿರುವ ಪಾಂಡಿಗದ್ದೆ, ಕೋಟೆಮುಂಡುಗಾರು ಬಳಿಯಲ್ಲಿರುವ ಪಾಂಡಿಪಾಲು, ಸಂಪಾಜೆಯ ಪಾಂಡಿಮನೆ ಎಂಬ ಪ್ರದೇಶಗಳು ನೈದಾಲ ಪಾಂಡಿ ರಾಜಕುಮಾರನಿಗೆ ಸಂಬಂಧಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ಅಧ್ಯಯನವಾಗಬೇಕಾಗಿದೆ.

 ಟಿಪ್ಪಣಿ:-
* ತುಳುನಾಡಿನ ಭೂತ ಪದಕ್ಕೆ ಕನ್ನಡದ ಭೂತ ಅಥವಾ ದೆವ್ವ ಎಂಬ ಅರ್ಥವಿಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಣ ಶಿಷ್ಟ ರಕ್ಷಕ ಶಕ್ತಿಗಳು. ಇವು ತುಳುವರ ಆರಾಧ್ಯ ದೈವಗಳು.ಸಂಸ್ಕೃತದ  ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಬೂತೊ ಎಂದಾಗಿ ಸಂಸ್ಕೃತೀಕರಣಗೊಂಡು ಭೂತ ಎಂದಾಗಿರುವ ಸಾಧ್ಯತೆ ಇದೆ. ತುಳುನಾಡಿನ ಭೂತಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು ಹೊಂದಿದ್ದು  ಅಸಹಜ ಮರಣವನ್ನಪ್ಪಿದ ಸಾಂಸ್ಕೃತಿಕ  ವೀರರೇ ಆಗಿದ್ದಾರೆ. ಈ ಹಿಂದೆ ಇದ್ದವರು ಎಂಬರ್ಥದಲ್ಲಿ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ. ಇತಿಹಾಸ, ರಾಜಕೀಯ, ಸಂಸ್ಕøತಿ, ಸಾಮಾಜಿಕ, ಜಾನಪದ ಸೇರಿದಂತೆ ಎಲ್ಲ ವಿಚಾರಗಳು ಕೂಡ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವದೊಂದಿಗೆ ತಳುಕು ಹಾಕಿಕೊಂಡಿದೆ. ಅಂತೆಯೇ ದುರಂತ ಮತ್ತು ದೈವತ್ವವನ್ನು ಪಡೆದ ಬೆಳ್ಳಾರೆಯ ರಾಜಕುಮಾರ ನೈದಾಲ ಪಾಂಡಿಯ ಕುರಿತಾದ ಐತಿಹ್ಯ ಮತ್ತು ಆರಾಧನೆಯಲ್ಲಿ ಇತಿಹಾಸದ ತುಣುಕುಗಳು ಅಡಗಿವೆ.

   ಆಧಾರಗ್ರಂಥಗಳು:
       1.ಕಾನಕುಡೇಲು ಗಣಪತಿ ಭಟ್ಟ    -  ಪಂಜ ಸೀಮಾ ದರ್ಶನ
       2.ಎನ್.ಎಸ್ ದೇವಿಪ್ರಸಾದ      -   ಅಮರಸುಳ್ಯದ ಸ್ವಾತಂತ್ರ್ಯ ಹೋರಾಟ
       3.ಡಾ|| ಲಕ್ಷ್ಮೀ ಜಿ. ಪ್ರಸಾದ      -  ತುಳುನಾಡಿನ ಅಪೂರ್ವ ಭೂತಗಳು




     ಡಾ|| ಲಕ್ಷ್ಮೀ ಜಿ. ಪ್ರಸಾದ,
     ಕನ್ನಡ ಭಾಷಾ ಉಪನ್ಯಾಸಕರು,
     ಸ.ಪ.ಪೂ. ಕಾಲೇಜು, ಬೆಳ್ಳಾರೆ,
     ಸುಳ್ಯ (ತಾ), ದ.ಕ. ಜಿಲ್ಲೆ 574212

                                                                   
                                                          ಆನೆ ಕಟ್ಟುವ ಕಲ್ಲು
                                                                            ಬೆಳ್ಳಾರೆಯ  ಕೋಟೆ
                         
                        ಬೆಳ್ಳಾರೆ ಬೇಡಿನ ಪಟ್ಟದ ಚಾವಡಿ

 
                    ನೈದಾಲ ಪಾಂಡಿ ಭೂತ
                                ನೈದಾಲ ಪಾಂಡಿ ಪಾತ್ರಿ
  

Wednesday, 20 March 2013

Listen to Dr.T V VENKATACHALA SHASTHRI

                                              Dr.T  V   Venkatachala  Shasthri{presiential speech in releasing of book  kannada  bhagavata.

Vocaroo Voice Message  click here

Sunday, 17 March 2013

GAMAKA VACHANA by Gangamma Keshava murty

                                       ಧ್ರುವ  ಚರಿತೆ  -     ಗಮಕ ವಾಚನ 
                                           ಗಮಕಿ ಗಂಗಮ್ಮ ಕೇಶವ ಮೂರ್ತಿ 
Vocaroo Voice Message (audio) click here
  ದಿನಾಂಕ :೧೭- ೦೩-೨೦೧೩
  ಸ್ಥಳ :ಬಿ.ಎಮ್ .ಶ್ರೀ  ಸ್ಮಾರಕ  ಸಂಸ್ಥೆ ,ನರಸಿಂಹ ರಾಜ ಕಾಲೋನಿ , ಬೆಂಗಳೂರು 

Thursday, 14 March 2013

Inscriptions of Bana's- Dr.PV KRISHNAMOORTY


                                                        ಡಾ .  ಪಿ ವಿ ಕೃಷ್ಣ ಮೂರ್ತಿ

 ಬಾಣರಸರ ಶಾಸನಗಳು  ಕುರಿತು ವಿಶೇಷ  ಉಪನ್ಯಾಸ 
                                                       -ಡಾ. ಪಿ ವಿ ಕೃಷ್ಣಮೂರ್ತಿ 
ಆಯೋಜಕರು :    ಸಂಶೋಧನಾ ಕಮ್ಮಟ 
                         ಶಾಸನ ಅಧ್ಯಯನ ವಿಭಾಗ ,ಹಂಪಿ ಕನ್ನಡ ವಿಶ್ವ ವಿದ್ಯಾಲಯ 

Vocaroo Voice Message(ಆಡಿಯೋ ) click here

Monday, 11 March 2013

An interaction with pustaka mane Hariharapriya-part 4

Vocaroo Voice Message
      ಪುಸ್ತಕ ಮನೆ  ಹರಿಹರ ಪ್ರಿಯ  ಅವರೊಂದಿಗೆ  ಸಂವಾದ-ಭಾಗ 4 

                

An interaction with pustaka mane Hariharapriya-part 3

Vocaroo Voice Message  
   ಪುಸ್ತಕ ಮನೆ  ಹರಿಹರ ಪ್ರಿಯ  ಅವರೊಂದಿಗೆ  ಸಂವಾದ
                              ದಿನಾಂಕ :೧೦-೦೩-೨೦೧೩
                             ಆಯೋಜಕರು :ಆಕೃತಿ ಬುಕ್ಸ್ ,ರಾಜಾಜಿನಗರ ಮೂರನೇ ಹಂತ ,ಬೆಂಗಳೂರು