Thursday, 7 November 2013

ತುಳು ನಾಡಿನ ಕಂಬಳ -ಪ್ರಾಚೀನತೆ ಮತ್ತು ಐತಿಹ್ಯಗಳು(C)ಡಾ.ಲಕ್ಷ್ಮೀ ಜಿ ಪ್ರಸಾದ



   

                                           ಚಿತ್ರ ಕೃಪೆ::ಜಯ ಪ್ರಕಾಶ್ ಪ್ರಭು ,ಶಿರ್ವ
                                                      ಚಿತ್ರ ಕೃಪೆ -ಶ್ರೀ ಮಧುಸೂದನ ಶೆಟ್ಟಿ

copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ ತುಳುನಾಡಿನ ಜನಪದ ಆಚರಣೆಗಳಲ್ಲಿ ಕಂಬಳ ವಿಶಿಷ್ಟವಾದುದು. ತುಳುನಾಡು ಅಂದ ತಕ್ಷಣ ಎಲ್ಲರಿಗೆ   ನೆನಪಾಗುವುದು ಕಂಬಳದ  ವಿಚಾರ. ಸಾಮಾನ್ಯವಾಗಿ ಕೆಸರುಗದ್ದೆಯಲ್ಲಿ ಕೋಣಗಳ ಓಟದ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ. ಆದರೆ ಇದು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ.ಇದರಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗಳು ಸೇರಿಕೊಂಡಿವೆ.ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ .ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಷ್ಠೆಯ ವಿಚಾರ ಕೂಡ  .ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ ,ಅವುಗಳನ್ನು ಸಾಕಲು ಸಾಕಷ್ಟು ಆರ್ಥಿಕ ಬಲ ಕೂಡ ಬೇಕು .ನಾನು ಚಿಕ್ಕಂದಿನಲ್ಲೇ ಕಂಬಳವನ್ನು ನೋಡಿದ್ದೆ .ಅದೊಂದು ಬಹಳ ಆಕರ್ಷಕವಾದ ಕೋಣಗಳ ಓಟ .ಕೋಣಗಳನ್ನು ಚೆನ್ನಾಗಿ ಅಲಂಕರಿಸಿ  ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ  ಕರೆ ತರುತ್ತಾರೆ .ಚೆನ್ನಾಗಿ ಎಳೆದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ .ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ ಕೋಣಗಳು ಓದಿಕೊಂಡು ಬರುವಾಗ ಜನರ ಬೊಬ್ಬೆ  ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು .ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ  ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು!ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ಅನುಭವನ್ನು ಕೊಡುತ್ತದೆ . ವಂಡಾರು ಕಂಬಳ ,ಪುತ್ತೂರು ದೇವರ ಕಂಬಳ ,ಕದ್ರಿ ಕಂಬಳ ,ಕೊಕ್ಕಡದ ಕಂಬಳ ಮೊದಲಾದ ಕಂಬಳಗಳ ಉಲ್ಲೇಖ ಅನೇಕ ತುಳು ಜಾನಪದ ಹಾಡುಗಳಲ್ಲಿ ದೊರೆಯುತ್ತದೆ ಅನೇಕ ಶಾಸನಗಳಲ್ಲೂ ಕಂಬಳದ ಉಲ್ಲೇಖಗಳಿವೆ  .ತುಳು ನಾಡಿನಲ್ಲಿ ಕಂಬಳದ ಆಚರಣೆ ಸುಮಾರು ೮೦೦-೯೦೦  ವರ್ಷಗಳ ಹಿಂದಿನಿಂದಲೇ ನಡೆದುಕೊಂಡು  ಬಂದಿದೆcopy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
.1. ಕಂಬಳದ ಪ್ರಾಚೀನತೆ
. ತುಳುನಾಡಿನ ಕಂಬಳ ಹಾಗೂ ಕಂಬಳ ಗದ್ದೆಗಳ ಬಗ್ಗೆ ಅನೇಕ ಶಾಸನಗಳಲ್ಲಿ ಉಲ್ಲೇಖಗಳು ಸಿಗುತ್ತವೆ. 
ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಶಾಸನದಲ್ಲಿ ಕಂಬಳದ ಉಲ್ಲೇಖವಿದೆ. ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದುಎಂದು ಇದರಲ್ಲಿ ಉಲ್ಲೇಖವಿದೆ.1 ಇದರ ಕಾಲ ಕ್ರಿ.ಶ.1200 (ಶಕ ವರ್ಷ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ.ಹನ್ನೆರಡನೆಯ ಶತಮಾನದಲ್ಲಿಯೇ ಸುಗ್ಗಿಯ ಕಾಲದಲ್ಲಿ ಕಂಬಳ ನಡೆಯುತ್ತಿದ್ದದನ್ನು ಶಾಸನದ ಹೇಳಿಕೆ ಸಮರ್ಥಿಸುತ್ತದೆ. ಇದರಿಂದ ಕಂಬಳ ಕನಿಷ್ಠ ಎಂಟುನೂರು ವರ್ಷಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆಎಂದು ಉಲ್ಲೇಖವಿದೆ.2 ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ ದೇವರು ಸಾವಂತನ ಕಂಬಳ ಗದ್ದೆಯ ಮೇಲೆಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ.3 ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ ಹೊತ್ತಾಗಿ ಮಾಡಿದ ಕಂಬಳ ಗದ್ದೆಎಂದಿದೆ.4 ಕ್ರಿ.ಶ.1437ರ ಉಡುಪಿ ಶಾಸನವು ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರುಎಂದಿದೆ.5 ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ ಅವರಿಗೆ ಒಬ್ಬ ಬಾಳು ಕಂಬಳ ಗದ್ದೆಎಂದು ಉಲ್ಲೇಖವಿದೆ.6 ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿಎಂದು ಉಲ್ಲೇಖಿಸಿದೆ.7 ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ ನನ್ನ ಕಂಬಲ ಗದ್ದೆಯಿಂದ ನಡೆಸಬಹುದುಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ.87.2. ಕಂಬಳ ಪದದ ನಿಷ್ಪತ್ತಿ
ಕಂಪ ಎಂಬುದಕ್ಕೆ ಕೆಸರು ಎಂಬರ್ಥವಿದೆ. ಆದ್ದರಿಂದ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳುತ್ತಾರೆ.9 ಕಳ ಎಂಬುದಕ್ಕೆ ಸ್ಪರ್ಧೆಯ ವೇದಿಕೆ, ಕಣ ಎಂಬರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದು ಅಮೃತ ಸೋಮೇಶ್ವರ ಹಾಗು ಬಿ.ಎ. ವಿವೇಕ ರೈ ಹೇಳಿದ್ದಾರೆ. ಕಂಬಳ ಗದ್ದೆಯಲ್ಲಿ ಕೊನೆಗೆ ಪೂಕರೆಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂದು ಚಿತ್ತರಂಜನ ಶೆಟ್ಟಿಯವರು ಹೇಳಿದ್ದಾರೆ.
ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಳ>ಡಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಉದಾ: ಇಡಾ>ಇಳಾ, ಮಾಡ>ಮಾಳ ತುಳುಕನ್ನಡದಲ್ಲಿ, ಉದಾ: ಕುಂಬಳ>ಕುಂಬುಡ, ಕೆಂಪು ಕುಂಬಳ>ಕೆಂಬುಡೆ. ಅದೇ ರೀತಿ ಎರಡನೇ ಪದದ ಮೊದಲ ಅಕ್ಷರ ಲುಪ್ತವಾಗುವುದು ಕೂಡ ಸಾಮಾನ್ಯ. ಉದಾ: ಗೆಜ್ಜೆ+ಕತ್ತಿ>ಗೆಜ್ಜೆತ್ತಿ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಷ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
.3. ಕಂಬಳದ ಮಹತ್ವ
ತುಳುನಾಡಿನಲ್ಲಿ ಕಂಬಳ ಎನ್ನುವುದು ಘನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ಕಂಬಳಎಂದರೆ ಕೋಣಗಳ ಓಟದ ಸ್ಪರ್ಧೆಎಂದು ಜನರು ಭಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ ಕೇವಲ ಕೋಣಗಳ ಓಟದ ಸ್ಪರ್ಧೆ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂಧಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ.
ಕಂಬಳ ಒಂದು ವಿಶಿಷ್ಟ ಜನಪದ ಆಚರಣೆ. ತುಳುನಾಡಿನಲ್ಲಿ ತುಂಬ ಮಹತ್ವವನ್ನು ಪಡೆದ ಆಚರಣೆಯಾಗಿದೆ. ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆಎಂದು ಹೇಳಿದ್ದಾರೆ.10
4. ಮೌಖಿಕ ಪರಂಪರೆ ಹಾಗೂ ಐತಿಹ್ಯಗಳುcopy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
ಅನೇಕ ತುಳು ಪಾಡ್ದನಗಳಲ್ಲಿ ಕೂಡ ಕಂಬಳದ ಉಲ್ಲೇಖಗಳಿವೆ. ಕಂಬಳಕ್ಕೆ ಸಂಬಂಧಿಸಿದಂತೆ ಈಜೋ ಮಂಜೊಟ್ಟಿಗೋಣವೆಂಬ ಪಾಡ್ದನ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಉಲ್ಲೇಖವಿದೆ. ಧೂಮಾವತಿ ದೈವದ ಪಾಡ್ದನದಲ್ಲಿ ಗಿಡಾವು ಗೋಣ ಕಂಜಿಲುಎಂದು ಕಂಬಳದಲ್ಲಿ ಓಡಿಸುವ ಕೋಣಗಳ ಬಗ್ಗೆ ವಿವರಣೆ ಇದೆ. ಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಷ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ. ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳಕೋಣಗಳೊಂದಿಗೆ ಏಕಾಂಗಿಯಾಗಿ ಹೋರಾಡಿ, ಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ರಕ್ಷಿಸಿದನೆಂಬ ಕಥೆ ಪ್ರಚಲಿತವಿದೆ. ಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ವಕ್ರಗೊಳಿಸಿದರೆಂಬ ಸ್ಥಳೀಯ ಐತಿಹ್ಯವಿದೆ.
ಪೂಕರೆ ಕಂಬದ ವಿಚಾರದಲ್ಲಿ ಯುದ್ಧವಾಗುತ್ತಿದ್ದಿರುವಂತೆ ತೋರುತ್ತದೆ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಒಂದನ್ನು ಸುಂದರ ಕೇನಾಜೆಯವರು ಸಂಗ್ರಹಿಸಿದ್ದಾರೆ.
        ಉರಲ್ (ತುಳು)
ನಮೊನ ಉಲ್ಲಾಯ ದಂಡ್‍ಗು ಪೋತೆರ್
ದಂಡ್‍ಡ್ದ್ ಬನ್ನಗ ಗಿಂಡೆದ ನೀರು
ಕುಡ್ಪುಡು ಕಾಯಿ
ಬಟ್ಟಲ್ಡ್ ಪೇರು
ಕೊರೈಡ್ ಸುಣ್ಣೋ
ಬಂಡಿಡ್ ಪೂಕರೆ
ಕೊಂಡೊದು ಬರ್ವೆರೆ ಉಲ್ಲಾಯೆ
ಆಯೆರ್‍ಗ್ ಪೋನಗ ಆಜಿಕಟ್ಟು ಬಡು
ಈಯೆರೆಗ್ ಬನ್ನಗ ಮೂಜಿಕಟ್ಟು ಬಡು
ಕಂಪಕಂಡೊಡು ಗುಂಪು ಬಲಿಪಡ
ಪೊಯ್ಯಕಂಡೊಡು ಪೊಯ್ಯ ಬಲಿಪಡ
ಮೆಲ್ಲಪೋ ಮೆಲ್ಲ ಬಲ
                       ಓ ... ಓ ... ಓ...copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಅನುವಾದ
ನಮ್ಮ ಯಜಮಾನರು ದಂಡಿಗೆ ಹೋಗಿದ್ದಾರೆ
ದಂಡಿನಿಂದ ಬರುವಾಗ ಗಿಂಡೆಯಲ್ಲಿ ನೀರು
ಎಸರು ತಟ್ಟೆಯಲ್ಲಿ ಕಾಯಿ
ಬಟ್ಟಲಿನಲ್ಲಿ ಹಾಲು
ಮರಿಗೆಯಲ್ಲಿ ಸುಣ್ಣ
ಬಂಡಿಯಲ್ಲಿ ಪೂಕರೆ
ತೆಗೆದುಕೊಂಡು ಬರುತ್ತಾರೆ
ಆ ಕಡೆ ಹೋಗುವಾಗ ಆರು ಕಟ್ಟು ಬೆತ್ತ
ಈ ಕಡೆ ಬರುವಾಗ ಮೂರು ಕಟ್ಟು ಬೆತ್ತ
ಕೆಸರುಗದ್ದೆಯಲ್ಲಿ ಗುಂಪು ಓಡಬೇಡ
ಹೊಯ್ಗೆ ಗದ್ದೆಯಲ್ಲಿ ಹೊಯ್ಯೋ (?) ಓಡಬೇಡ
ಮೆಲ್ಲಗೆ ಹೋಗು ಮೆಲ್ಲಗೆ ಬಾ
ಓ .... ಓ .... ಓ ....
ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ಸಮರ್ಥಿಸುತ್ತದೆ.copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಐತಿಹ್ಯವು ಅಗೋಳಿ ಮಂಜಣ್ಣಎಂಬ ಹೆಸರಿನಲ್ಲಿ ಪ್ರಚಲಿತವಿದೆ. ಪೇರೂರಿನಲ್ಲಿ ಪೂಕರೆ ಕಂಬ ಕಳೆದುಹೋದ ಮೇಲೆ ಪೂಕರೆ ಕಂಬ ಹಾಕುವ ಆಚರಣೆ ನಿಂತುಹೋಯಿತು ಎಂಬ ಐತಿಹ್ಯವಿದೆ. ಕೋಳ್ಯೂರು ಮತ್ತು ಕಳಿಯೂರು, ಕಾಸರಗೋಡು ಜಿಲ್ಲೆಯ ಅಕ್ಕಪಕ್ಕದ ಎರಡು ಗ್ರಾಮಗಳು. ಕಳಿಯೂರಿನಲ್ಲಿ ಪೂಕರೆ ಕಂಬಳವೂ, ಕೋಳ್ಯೂರಿನಲ್ಲಿ ಬಾಳೆ ಕಂಬಳವೂ ನಡೆಯುತ್ತಿತ್ತು. ಒಂದು ವರ್ಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ರೆಂಜೆಗುಂಡಿಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ. ಕಂಬಳಸಂಬಂಧಿ ಈಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾನಿ ಬಬ್ಬು ಹಾಗೂ ಕೋಣಗಳು ಮಾಯವಾದಕಥೆಯನ್ನು ಹೇಳುತ್ತವೆ. ಹೀಗೆ ಕೋಣಗಳು ಮಾಯವಾದ ಮರುದಿವಸ ನೋಡುವಾಗ ಕಳಿಯೂರಿನ ಪೂಕರೆ ಕಂಬ ಕೋಳ್ಯೂರು ಕಂಬಳಗದ್ದೆಯಲ್ಲಿ ಬಂದು ಬಿದ್ದಿತ್ತು. ಅಂದಿನಿಂದ ಕೋಳ್ಯೂರು ಕಂಬಳಗದ್ದೆಯಲ್ಲಿ ಬಾಳೆ ಹಾಗೂ ಪೂಕರೆ ಕಂಬ ಎರಡೂ ಹಾಕುವ ಪದ್ಧತಿ ಬಂತು ಎಂಬ ಐತಿಹ್ಯವಿದೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬೈಲು ಕಂಬಳ ಗದ್ದೆಯಲ್ಲಿ ಜೊಳ್ಳು ಭತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಐತಿಹ್ಯವಿದೆ. ವಂಡಾರು ಕಂಬಳದಲ್ಲಿ ಹಿಂದೆ ನರಬಲಿ ಕೊಡುವ ಪದ್ಧತಿ ಇತ್ತೆಂಬ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ: ಪೂಕರೆ ಕಂಬಳದ ಹಿಂದಿನ ದಿವಸವೇ ಊರವರು ನೆಂಟರಿಷ್ಟರು ಬಂದಿರುತ್ತಾರೆ. ರಾತ್ರಿ ಮಲಗಿದಾಗ ನೆಂಟರ ಹುಡುಗರಲ್ಲಿ ಇಬ್ಬರ ಕಾಲಿಗೆ ಬಳ್ಳಿ ಕಟ್ಟುತ್ತಿದ್ದರು. ಕಾಲಿಗೆ ಬಳ್ಳಿ ಕಟ್ಟಿರುವ ಹುಡುಗರಿಬ್ಬರನ್ನು ಎತ್ತಿ ತೆಗೆದುಕೊಂಡು ಹೋಗಿ ಕಂಬಳ ಗದ್ದೆಯ ಸಮೀಪದ ಬಾವಿಗೆ ಹಾಕುತ್ತಿದ್ದರು. ಒಂದು ವರ್ಷ ತನ್ನ ಕಾಲಿಗೆ ಕಟ್ಟಿದ್ದ ಬಳ್ಳಿಯನ್ನು ಬಿಚ್ಚಿ ಆ ಮನೆಯ ಯಜಮಾನನ ಮಗನ ಕಾಲಿಗೆ ಒಬ್ಬ ಹುಡುಗ ಕಟ್ಟುತ್ತಾನೆ. ರಾತ್ರಿಯಲ್ಲಿ ಇದು ತಿಳಿಯದ ಕೆಲಸದವರು ಬಳ್ಳಿ ಕಟ್ಟಿದ್ದ ಯಜಮಾನನ ಮಗನನ್ನೇ ಹೊತ್ತುಕೊಂಡು ಹೋಗಿ ಬಾವಿಗೆ ಹಾಕುತ್ತಾರೆ. ಮರುದಿವಸ ಬೆಳಗ್ಗೆ ಮನೆಯ ಯಜಮಾನನಿಗೆ ಈ ವಿಚಾರ ಗೊತ್ತಾಗುತ್ತದೆ. ಅಂದಿನಿಂದ ನರಬಲಿಯ ಬದಲು ಕೋಳಿಯನ್ನು ಬಲಿ ಕೊಡುತ್ತಿದ್ದರು ಎಂಬ ಐತಿಹ್ಯವಿದೆ. ಈಗ ಸಾಂಕೇತಿಕವಾಗಿ ಕುರ್ದಿನೀರನ್ನು ಗದ್ದೆಗೆ ಎರೆಯುತ್ತಾರೆ. ಆ ಬಾವಿಯ ಮೇಲೆ ಕಲ್ಲಿನ ಚಪ್ಪಡಿಯನ್ನು ಎಳೆದಿದ್ದಾರೆ. ಆ ಬಾವಿಯನ್ನೇ ಸಿರಿಗಳ ಬಾವಿಎಂದು ಕರೆಯುತ್ತಾರೆ. ಕಂಬಳಗಳಲ್ಲಿ ಅತಿದೊಡ್ಡ ಕಂಬಳ ಗದ್ದೆ ಇದಾಗಿದೆ. ಎರಡು ಮೂರು ದಶಕಗಳ ಹಿಂದೆ ಇಲ್ಲಿ ವಾರಗಟ್ಟಲೆ ಕೋಣಗಳ ಓಟದ ಸ್ಪರ್ಧೆ ನಡೆಯುತ್ತಿತ್ತು. ಹೆಚ್ಚಿನ ಎಲ್ಲಾ ಪೂಕರೆ ಕಂಬಳ ಗದ್ದೆಗೆ ಸಂಬಂಧಿಸಿದಂತೆ ಒಂದು ಸಮಾನ ಆಶಯವುಳ್ಳ ಐತಿಹ್ಯ ಪ್ರಚಲಿತವಿದೆ. ಕಂಬಳ ಕೋರಿಯ ಮೊದಲು ಈ ಗದ್ದೆಗಳಲ್ಲಿ ಕುರುಂಟು ಎಳೆಯುವುದಿಲ್ಲ. ರಾತ್ರಿ ಸಂಕಪಾಲನೆಂಬ ಸರ್ಪ ಬಂದು ಈ ಕೆಲಸ ಮಾಡುತ್ತದೆ ಎಂಬ ಐತಿಹ್ಯ ಹೆಚ್ಚಿನ ಗದ್ದೆಗಳಲ್ಲಿ ಪ್ರಚಲಿತವಿದೆ.
ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ.copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

Friday, 1 November 2013

ತುಳುವರ ಬಲಿಯೇಂದ್ರ ಯಾರು ?(c)ಡಾ.ಲಕ್ಷ್ಮೀ ಜಿ ಪ್ರಸಾದ




ತುಳುನಾಡಿನಲ್ಲಿ ಆದಿ ಒಡೆಯ ಭೂಮಿಪುತ್ರಎಂಬ ಉಕ್ತಿ ಪ್ರಚಲಿತವಿದೆ. ಆದಿ ಒಡೆಯ ಎಂದು ಬಲಿಯೇಂದ್ರನಿಗೂ, ನಾಗನಿಗೂ ಹೇಳುತ್ತಾರೆ. ಬಲಿಯೇಂದ್ರನನ್ನು ಭೂಮಿಪುತ್ರ ಎಂದೂ ಹೇಳುತ್ತಾರೆ. ಈ ನುಡಿಯ ಪ್ರಕಾರ ತುಳುನಾಡಿನ ಮೂಲಪುರುಷ ಬಲಿಯೇಂದ್ರ ಎಂದು ಸ್ಪಷ್ಟವಾಗುತ್ತದೆ. ಆತನನ್ನು ಒಡೆಯ ಎಂದು ಸ್ವೀಕರಿಸಲಾಗಿದೆ. ಉಲ್ಲಾಯ ಎಂಬುದು ಒಡೆಯ ಎಂಬ ಅರ್ಥವನ್ನೇ ಸೂಚಿಸುತ್ತದೆ. ಬೆರ್ಮರನ್ನು ಉಲ್ಲಾಯ, ಉಳ್ಳಾಕುಲು ಎಂದೇ ಸಂಬೋಧಿಸಲಾಗಿದೆ. ಬಲಿಯೇಂದ್ರನ ಆಯುಧ, ವಾಹನ ರೂಪ, ಆಚರಣೆಗಳು ಮೊದಲಾದವುಗಳು ಬಲಿಯೇಂದ್ರನೇ ತುಳುನಾಡಿನ ಹಿರಿಯ ಎಂಬರ್ಥದಲ್ಲಿ ಬೆರ್ಮರ್ಆಗಿ ಆರಾಧಿಸಲ್ಪಡುವ ಸಾಧ್ಯತೆಯನ್ನು ತೋರಿಸುತ್ತವೆ.    (c)ಡಾ.ಲಕ್ಷ್ಮೀ ಜಿ ಪ್ರಸಾದ   ನಾಗಾರಾಧನೆಯ ಒಂದು ಪದ್ಧತಿಯಾಗಿರುವ ಕಂಬಳದಲ್ಲಿ ಪೂಕರೆ ಹಾಕುವಾಗ ಬಲೀಂದ್ರನಿಗಾಗಿ ದೀಪ ಬೆಳಗಿ ಇಡುತ್ತಾರೆ. ಪೂಕರೆ ಕಂಬ ನೆಡುವಾಗ ಕೂಹಾಕುತ್ತಾರೆ. ಕಂಬಳ ಕೋರಿಯ ನೇಮದ ಭೂತನರ್ತಕನು ದೈವ ಆಯುಧಗಳನ್ನು ಬಲೀಂದ್ರನ ಸಂಕೇತವಾಗಿರುವ ಬಲಿಕಿ ಮರದ ಬುಡದಲ್ಲಿ ಇಟ್ಟು ಪೂಜಿಸಿ, ತೆಗೆದುಕೊಳ್ಳುವ ಸಂಪ್ರದಾಯ ಚೌಕೌರುಗುತ್ತು ಮೊದಲಾಡೆಗಳ ಪ್ರಚಲಿತವಿದೆ. ಆದ್ದರಿಂದ ಬಲೀಂದ್ರನ ಆರಾಧನೆಯು ನಾಗಾರಾಧನೆಯೊಂದಿಗೆ ಸೇರಿದಾಗ ನಾಗಬೆರ್ಮರ್ಎಂಬ ಸ್ವರೂಪವನ್ನು ಪಡೆದಿರುವ ಸಾಧ್ಯತೆ ಇಲ್ಲದಿಲ್ಲ. ಧರಣೇಂದ್ರ ಯಕ್ಷನಿಗೆ ವಾಮನಎಂಬ ಹೆಸರು ಕೂಡ ಇದೆ. ಬಲಿಯನ್ನು ಸೋಲಿಸಿದ ವಾಮನಕೂಡ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾನೆ. ಪರಸ್ಪರ ಸಂಸ್ಕ್ರತಿಯ ಸ್ವೀಕಾರ ಸಾಮಾನ್ಯವಾದ ವಿಚಾರವೇ ಆಗಿದೆ.
ತುಳುನಾಡು ಹಾಗೂ ತುಳುನಾಡಿಗೆ ಹೊಂದಿಕೊಂಡಿರುವ ಕೇರಳದ ಪ್ರದೇಶಗಳಲ್ಲಿ ಪ್ರಚಲಿತವಿರುವ ವಿಶಿಷ್ಟ ಆರಾಧನಾ ಪದ್ಧತಿ ಬಲೀಂದ್ರ ಆರಾಧನೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಬಲಿಯೇಂದ್ರ ತುಳುನಾಡನ್ನು ಆಳಿದ ಜನಾನುರಾಗಿ ರಾಜ. ಪುರಾಣದ ಪ್ರಕಾರ ಬಲಿ ಪ್ರಹ್ಲಾದನ ಮೊಮ್ಮಗ. ಅಪ್ರತಿಮವೀರ. ತನ್ನ ಶೌರ್ಯದಿಂದ ಇಂದ್ರನ ಗದ್ದುಗೆಯನ್ನು ವಶಪಡಿಸಿಕೊಂಡಿರುತ್ತಾನೆ. ಇಂದ್ರಾದಿ ದೇವತೆಗಳ ಪ್ರಾರ್ಥನೆಯಂತೆ. ವಿಷ್ಣು ವಾಮನಾವತಾರಿಯಾಗಿ, ಬ್ರಾಹ್ಮಣ ವಟುವಿನ ರೂಪದಲ್ಲಿ ಬಂದು ಬಲಿಯಲ್ಲಿ ಮೂರಡಿ ಜಾಗವನ್ನು ಯಾಚಿಸುತ್ತಾನೆ. ಮೊದಲ ಹೆಜ್ಜೆಯಲ್ಲಿ ಇಡೀ ಭೂಮಿಯನ್ನು ಎರಡನೇ ಹೆಜ್ಜೆಯಲ್ಲಿ ಮೂರೂ ಲೋಕವನ್ನು ವ್ಯಾಪಿಸುತ್ತಾನೆ. ವಾಮನಾವತಾರಿ ವಿಷ್ಣು. ಮೂರನೆಯ ಹೆಜ್ಜೆ ಇಡಲು ಜಾಗವಿಲ್ಲದಾಗುತ್ತದೆ. ಆಗ ಬಲಿ ತನ್ನ ತಲೆಯ ಮೇಲಿಡಲು ಹೇಳುತ್ತಾನೆ. ವಾಮನ ಅವನನ್ನು ಪಾತಾಳಲೋಕಕ್ಕೆ ತಳ್ಳುತ್ತಾನೆ. ವರ್ಷದಲ್ಲಿ ಒಂದು ಬಾರಿ ಭೂಮಿಗೆ ಬರುವಂತೆ ವರವನ್ನು ನೀಡುತ್ತಾನೆ ಎಂಬ ಕಥೆ ಪುರಾಣದಲ್ಲಿ ಇದೆ.
ಆದರೆ ತುಳುನಾಡಿನಲ್ಲಿ ಪ್ರಚಲಿತವಿರುವ ಬಲೀಂದ್ರ ಪಾಡ್ದನದಲ್ಲಿ ವಾಮನಾವತಾರದ ಸುಳಿವಿಲ್ಲ. ಇಬ್ಬರು ಬಾಲಬ್ರಹ್ಮಚಾರಿಗಳು ಬರುತ್ತಾರೆ. ದಾನ ಕೇಳುತ್ತಾರೆ ಎಂದು ಮಾತ್ರ ಇದೆ. ಅನಂತರ ಬಲಿಯನ್ನು ಒಡಕು ದೋಣಿಯಲ್ಲಿ ಕೂರಿಸಿ ಸಮುದ್ರದಲ್ಲಿ ನೂಕಿ ಬಿಟ್ಟ ಕಥೆ ಬಲೀಂದ್ರ ಪಾಡ್ದನದಲ್ಲಿದೆ.
ತುಳುನಾಡಿನ ಬಲೀಂದ್ರ ಆಚರಣೆಯಲ್ಲಿ ಬಲೀಂದ್ರನನ್ನು ಕೂಹಾಕಿ ಕರೆಯುತ್ತಾರೆ. ಇದನ್ನು ಬಲೀಂದ್ರ ಲೆಪ್ಪುಎನ್ನುತ್ತಾರೆ. ಅದೇ ರೀತಿ ಆ ದಿನ ಮನೆಯ ಮೂಲೆ ಮೂಲೆ, ಗುಡ್ಡದ ತುದಿಗೆ, ತೋಟ ಗದ್ದೆಯ ಮೂಲೆ ಮೂಲೆಯಲ್ಲಿ ದೀಪ ಹಿಡಿಯುವ ಪದ್ಧತಿ ಇದೆ. ಈ ಆಚರಣೆಯ ಹಿನ್ನೆಲೆಯ ಬಗ್ಗೆ ವಿಚಾರಿಸಿದಾಗ ಬಲಿ ಚಕ್ರವರ್ತಿ ಮೋಸ ಹೋಗಿ ರಾಜ್ಯ ಕಳೆದುಕೊಂಡು ದಿಕ್ಕುತಪ್ಪಿ ಅಲೆಯುತ್ತಿರುವಾಗ, ಅವನ ಮೇಲಿನ ಪ್ರೀತಿಯಿಂದ ಪ್ರಜೆಗಳು ಕತ್ತಲಾದ ನಂತರ ಅವನನ್ನು ಹುಡುಕಿ ಅವನಿಗೆ ಅನ್ನಾಹಾರಗಳನ್ನು ನೀಡುತ್ತಿದ್ದರು. ಅದರ ಪ್ರತೀಕವಾಗಿ ಈಗ ಕೂಡ ಈ ಆಚರಣೆ ಇದೆ ಎಂದು ಅನೇಕ ಹಿರಿಯರು ಹೇಳುತ್ತಾರೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಆಲಡೆ, ಗರಡಿಗಳಲ್ಲಿ ಬಲಿಗೆ ದೀಪ ಇಡುತ್ತಾರೆ. ಬಹುತೇಕ ಶಿವ, ಸುಬ್ರಹ್ಮಣ್ಯ ಹಾಗೂ ನಾಗಬ್ರಹ್ಮ ದೈವಸ್ಥಾನಗಳಲ್ಲಿ ಬಲಿಯ ಬಲಿಕ್ಕಿ ಮರಇರುತ್ತದೆ. (ಚಿತ್ರ 85) ಉಜಿರೆಯ ಅನಂತನಾಥ ಬಸದಿಯಲ್ಲಿ ಕೂಡ ಬಲಿಗೆ ದೀಪ ಇಡುವ ಪದ್ಧತಿ ಇದೆ. ಇಲ್ಲಿ ಯಕ್ಷ ಬ್ರಹ್ಮ ಇರುವ ಕಾರಣ ಬಲಿಕ್ಕಿ ಮರ ಇದೆ ಎಂದು ಅಲ್ಲಿನ ಇಂದ್ರರು ಹೇಳುತ್ತಾರೆ.
ಕಂಬಳಕೋರಿಯಂದು ಗದ್ದೆ ಬದಿಯಲ್ಲಿ ಬಲಿಗೆ ದೀಪ ಇಡುತ್ತಾರೆ. ಉರವ ದೈವವನ್ನು ಬಲಿಯ ದೂತನೆಂದೂ ಹೇಳುತ್ತಾರೆ. ಉರವ ನಾಗಬ್ರಹ್ಮ ಸೇರಿಗೆಯ ದೈವವಾಗಿ ಕಾಣಿಸುತ್ತಾನೆ.
ಬಲಿ ಮೋಸ ಹೋಗಿ ಕಾಡುಮೇಡುಗಳಲ್ಲಿ ಅಲೆದಾಡಿದ್ದಾನೆ. ಅವನ ಪ್ರೀತಿಯೆ ಪ್ರಜೆಗಳು ಅವನನ್ನು ಹುಡುಕಿಕೊಂಡು ಹೋಗಿ ಅನ್ನಾಹಾರಗಳನ್ನು ನೀಡುತ್ತಿದ್ದರು ಎಂಬುದು ಬಲೀಂದ್ರನನ್ನು ಕೂ ಹಾಕಿ ಕರೆಯುವುದರಲ್ಲಿ ಸ್ಪಷ್ಟವಾಗುತ್ತದೆ. ದೂರದಲ್ಲಿ ಎಲ್ಲೋ ಅಡಗಿ ಕುಳಿತಿರುವ ಬಲೀಂದ್ರನನ್ನು ಕೂ ಹಾಕಿ ಹುಡುಕಿರಬಹುದು. ತುಳುನಾಡಿನ ಯಾರೋ ಒಬ್ಬ ಜನಾನುರಾಗಿ ರಾಜನಿಗೆ ಹೀಗಾಗಿರಬಹುದು. ಅದು ಬಲೀಂದ್ರ ಆಚರಣೆಯಲ್ಲಿ ವ್ಯಕ್ತವಾಗಿರಬಹುದು.
ಪೂಕರೆ ಹಾಕುವಾಗ ಕೂಡ ಕೂಹಾಕುವ ಪದ್ಧತಿ ಇದೆ.
ಆ ರಾಜ ಬೆರ್ಮೆರ್ಇರಬಹುದು ಬೆರ್ಮೆರ ಸ್ಥಾನಗಳು ಗುಡ್ಡಗಳಲ್ಲಿ ದಟ್ಟಕಾಡಿನಲ್ಲಿ ಇರುವುದು ಈ ಊಹೆಗೆ ಎಡೆ ಮಾಡಿಕೊಡುತ್ತದೆ.
ತುಳುನಾಡಿನ ಜನಾನುರಾಗಿ ಆ ರಾಜ ಉಳಿದುಕೊಂಡಿರುವ ಪ್ರದೇಶಗಳು ಬೆರ್ಮೆರ ತಾಣಗಳೆಂದು ಪೂಜಿಸಲ್ಪಟ್ಟವು ಎಂದು ಊಹಿಸಲು ಸಾಧ್ಯವಿದೆ. ಬೆರ್ಮೆರ್ ಎಂಬುದಕ್ಕೆ ಪೆರಿಯರ್ (ಹಿರಿಯರು) ಎಂಬ ಅರ್ಥವೂ ಇದೆ. ಸುಬ್ರಹ್ಮಣ್ಯನನ್ನು ಮಳೆಯಾಳದಲ್ಲಿ ಪೆರುಮಾಳ ಎಂದು ಕರೆಯುತ್ತಾರೆ. ಪೆರುಮಾಳ ಎಂದರೆ ಹಿರಿಯ ಎಂದರ್ಥ.
ಹಿರಿಯ ಅರ್ಥಾತ್ ಮೂಲ ರಾಜನ ಸ್ಥಾನ ಎಂಬರ್ಥದಲ್ಲಿ ಬೆರ್ಮೆರ್ ತಾಣಎಂಬುದು ಮೂಲಸ್ಥಾನ ಎಂದು ಪರಿಕಲ್ಪಿಸಲು ಸಾಧ್ಯವಿದೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಈ ನಿಟ್ಟಿನಲ್ಲಿ ಯೋಚಿಸಿದಾಗ ತುಳುನಾಡಿನ ಮೂಲಪುರುಷ-ಜನಾನುರಾಗಿ ಅರಸು ದುರಂತಕ್ಕೀಡಾಗಿ ನಂತರ ದೈವತ್ವಕ್ಕೇರಿ ಬೆರ್ಮೆರ್ಆಗಿ ಆರಾಧನೆ ಪಡೆಯುತ್ತಿರಬಹುದು ಎಂದು ಊಹಿಸಬಹುದು.
ತುಳುನಾಡಿನ ಭೂತಾಳ ಪಾಂಡ್ಯನ ಐತಿಹ್ಯದಲ್ಲಿ ಮೊತ್ತ ಮೊದಲ ಬಾರಿಗೆ ಕುಂಡೋದರನೆಂಬ ಭೂತದ ವಿಷಯ ಬರುತ್ತದೆ. ದೇವಪಾಂಡ್ಯನ ಹಡಗಿನ ನಿರ್ಮಾಣ ಸಮಯದಲ್ಲಿ ಕಡಿದ ಮರಗಳಲ್ಲಿ ಒಂದರಲ್ಲಿ ಕುಂಡೋದರನೆಂಬ ಭೂತ ನೆಲೆಯಾಗಿತ್ತು. ಈ ಬಗ್ಗೆ ತಿಳಿಯದೆ ಮರ ಕಡಿದು ಹಡಗು ನಿರ್ಮಿಸಿದ್ದರು. ಆದರೆ ಏನೂ ಮಾಡಿದರೂ ಹಡಗನ್ನು ನೀರಿಗಿಳಿಸಲು ಸಾಧ್ಯವಾಗುವುದಿಲ್ಲ. ಆಗ ಹಡಗಿನೊಳಗಿನಿಂದ ಒಂದು ಭಯಂಕರವಾದ ಘರ್ಜನೆ ಕೇಳಿಸಿತು. ಹಡಗಿನೊಳಗಿನಿಂದ ನಾನು ಕುಂಡೋದರನೆಂಬ ದೈವ, ನನಗೆ ನರಬಲಿ ಬೇಕುಎಂದು ಧ್ವನಿ ಕೇಳಿಸುತ್ತದೆ. ಮಕ್ಕಳನ್ನು ಬಲಿ ಕೊಡಲು ಒಪ್ಪದ ದೇವಪಾಂಡ್ಯನ ಮಡದಿ ಮಕ್ಕಳೊಂದಿಗೆ ತವರು ಮನೆಗೆ ಹೋಗುತ್ತಾಳೆ. ದೇವಪಾಂಡ್ಯನ ತಂಗಿ ತನ್ನ ಮಗ ಜಯಪಾಂಡ್ಯನನ್ನು ಬಲಿ ಕೊಡಲು ಸಿದ್ಧವಾಗುತ್ತಾಳೆ. ಆಗ ಪ್ರಸನ್ನವಾದ ದೈವ ನರಬಲಿ ಬೇಡ ಎಂದು ಹೇಳುತ್ತದೆ. ನಂತರ ಜಯಪಾಂಡ್ಯನೇ ಮುಂದೆ ಭೂತಾಳಪಾಂಡ್ಯನೆಂಬ ಹೆಸರು ಪಡೆದು, ಕುಂಡೋದರ ದೈವ ಅನುಗ್ರಹದಿಂದ ರಾಜನಾಗಿ ವೈಭವದಿಂದ ಬಾಳುತ್ತಾನೆ. ಭೂತಾಳಪಾಂಡ್ಯನು ಕುಂಡೋದರನಿಗೆ ಮಹೀಶಾಸುರನೆಂಬ ಹೆಸರಿಟ್ಟು ಆತನಿಗೆ ಸಾವಿರ ಪಡಿ ಅಕ್ಕಿ ಸಹಸ್ರ ಪಡಿ ಅರಳು, ಸಾವಿರ ಸೀಯಾಳ, ಬಾಳೆಹಣ್ಣು, ಅಜ ಕುಕ್ಕುಟಗಳಿಂದ ಬಲಿಕೊಟ್ಟು ಭೂತ ರಾಜ ಕುಂಡೋದರನನ್ನು ಪ್ರಾರ್ಥಿಸುತ್ತಾರೆ. ಆಗ ಕುಂಡೋದರ ಭೂತ ಅಲ್ಲಿದ್ದ ಮನುಷ್ಯನ ಮೇಲೆ ಮೈತುಂಬಿ ಬಂದು ಅಳಿಯಕಟ್ಟನ್ನು ನಿರ್ದೇಶಿಸುತ್ತದೆ ಎಂದು ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ.15 ಇಲ್ಲಿ ಒಂದೆಡೆ ಮಹಾಬಲನೇ ಮಹಿಷಾಸುರ ಎಂದು ತಿಳಿದು ಬಂದರೆ, ಇನ್ನೊಂದೆಡೆ ಕುಂಡೋದರ ದೈವವೇ ಮಹಿಷಾಸುರನೆಂಬ ಹೆಸರನ್ನು ಪಡೆದಿರುವ ಬಗ್ಗೆ ತಿಳಿದು ಬರುತ್ತದೆ. ಭೂತಾಳಪಾಂಡ್ಯನ ತಂದೆ ಕುಂಡೋದರ ದೈವದ ಭಕ್ತನೆಂದೂ ಕುಂಡೋದರ ಶಿವನ ಪ್ರಮಥ ಗಣವೆಂದೂ ಹೇಳಲಾಗಿದೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಬಲಿಯೇಂದ್ರನಿಗೆ ಮಹೀಪಾಲಕನೆಂಬರ್ಥದಲ್ಲಿ ಮಹೀಶಾಸುರನೆಂಬ ಹೆಸರು ಇತ್ತು. ಕುಂಡೋದರ ದೈವವೂ ಮಹೀಶಾಸುರನೆಂಬ ಹೆಸರನ್ನು ಪಡೆದಿದೆ. ಆದ್ದರಿಂದ ಮೋಸ ಹೋದ ಬಲಿಯೇಂದ್ರನು ಮರಣಾನಂತರ ಕುಂಡೋದರ ದೈವವಾಗಿ ಆರಾಧಿಸಲ್ಪಟ್ಟಿರಬಹುದು ಎಂದು ಊಹಿಸಬಹುದು. ಅರಸು ಆರಾಧನೆ ಪದ್ಧತಿ ಬೆಳೆದು ಬಂದಿರುವ ತುಳುನಾಡಿನಲ್ಲಿ ಇದು ಅಸಹಜ ವಿಚಾರ ಎನಿಸುವುದಿಲ್ಲ.
ಇನ್ನು ಕುಂಡೋದರ ಎನ್ನುವ ದೈವದ ಆರಾಧನೆ ತುಳುನಾಡಿನಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಕುಂಡೋದರಆವಿರ್ಭಾವಗೊಂಡ ಸ್ಥಾನ ಎಂದು ಹೇಳಲಾಗುವ ಬಾರಕೂರಿನಲ್ಲಿ ಅಥವಾ ಕಂಡೇವು ಬೀಡಿನಲ್ಲಿ ಕುಂಡೋದರಎಂಬ ಹೆಸರಿನ ದೈವದ ಆರಾಧನೆ ಇಲ್ಲ. ಅದರೆ ಬಾರಕೂರಿನಲ್ಲಿ ಒಂದು ಮಹಿಷೇಶ್ವರ ದೇವಾಲಯವಿದೆ. ಹೆಸರು ಮಹಿಷೇಶ್ವರನೆಂದಾದರೂ ಗುಡಿಯಲ್ಲಿ ಕುದುರೆ ಏರಿರುವ ಬೆರ್ಮೆರ್ ಮೂರ್ತಿ ಇದೆ. ಸ್ವಲ್ಪ ದೂರದಲ್ಲಿ ಪಾಳು ಬಿದ್ದ ಭೂತಗುಡಿಯೊಳಗೆ ಮೂರಡಿ ಎತ್ತರದ ಲಿಂಗಾಕಾರದ ಕಲ್ಲು ಇದ್ದ ಬಗ್ಗೆ ಲೀಲಾ ಭಟ್ ತಿಳಿಸಿದ್ದಾರೆ.16 ಮಹೀಶಾಸುರ ಎಂದರೆ ಭೂಮಿಯ ಒಡೆಯನಾಗಿರುವ ಅಸುರ ಎಂಬುದೇ ಕಾಲಾಂತರದಲ್ಲಿ ಮಹಿಷಾಸುರ ಎಂದಾಗಿರುವ ಸಾಧ್ಯತೆ ಇದೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಬಾರಕೂರು ಅರಸರ ವಂಶಜರು ಇರುವ ಕಂಡೇವು ಬೀಡಿನಲ್ಲಿ ಕೂಡ ಕುಂಡೋದರ ಎಂಬ ಹೆಸರಿನ ದೈವಕ್ಕೆ ಸ್ಥಾನವಿಲ್ಲ. ಆದರೆ ಇಲ್ಲಿ ಬೆರ್ಮೆರ್ ಹಾಗೂ ಉಳ್ಳಾಯನ ಆರಾಧನೆ ಇದೆ. ಬೆರ್ಮೆರ್ಎಂಬ ಪದಕ್ಕೆ ಪೆರಿಯರ್, ಅಂದರೆ ಹಿರಿಯ ಎಂಬ ಅರ್ಥವೂ ಇದೆ. ಅಸುರ ಕುಲದ ಹಿರಿಯ ಎಂಬ ಅರ್ಥದಲ್ಲಿ ಬಲಿಯೇಂದ್ರನೇ ಬೆರ್ಮೆರ್ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.
ಕುಂಡ ಎಂದರೆ ಮಣ್ಣಿನ ಮಡಿಕೆ. ಬೆರ್ಮೆರ್‍ನ್ನು ಮಣ್ಣಿನ ಮಡಿಕೆಗಳ ಮೂಲಕ ಆರಾಧಿಸುವ ಕ್ರಮ ಪ್ರಚಲಿತವಿದೆ. ಅನಂತಾಡಿಯ ನಾಗಬ್ರಹ್ಮಸ್ಥಾನದಲ್ಲಿ ಬೆರ್ಮೆರ್ಎಂದು ಹಳೆಯ ಮಣ್ಣಿನ ಮಡಿಕೆಗಳನ್ನು ಆರಾಧಿಸುತ್ತಾರೆ. ಚೌಕಾರುಗುತ್ತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಮೂರಿಳು ಎಂದು ಆರಾಧಿಸುತ್ತಾರೆ. ಗರಡಿಗಳಲ್ಲಿ, ಆಲಡೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಬ್ರಹ್ಮಲಿಂಗ ಅಥವಾ ಬ್ರಹ್ಮರ ಮೂರ್ತಿಗಳು ಇಲ್ಲದಿರುವಲ್ಲಿ ಬೆರ್ಮರನ್ನು ಮಣ್ಣಿನ ಕಲಶದಲ್ಲಿ ಸಂಕಲ್ಪಿಸಿ ಆರಾಧಿಸುತ್ತಾನೆ. ಕಂಡೇವು ಬೀಡಿನಲ್ಲಿ ಉಳ್ಳಾಯ ದೈವವು ಸಮುದ್ರದಿಂದ ಮಣ್ಣಿನ ಕಲಶದಲ್ಲಿ ಉದ್ಭವಿಸಿ ಮೇಲೆ ಬಂದಿದೆ ಎಂದು ಹೇಳುತ್ತಾರೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ನಾಗಬ್ರಹ್ಮ ಆರಾಧನೆಯ ಒಂದು ಪ್ರಕಾರವಾಗಿರುವ ಕಾಡ್ಯನಾಟದಲ್ಲಿ ಮಣ್ಣಿನ ಕಲಶವನ್ನು ಪೂಜಿಸಲಾಗುತ್ತದೆ. ತುಳುವಿನಲ್ಲಿ ಕಡ್ಯ ಎಂದರೆ ಮಣ್ಣಿನ ಮಡಿಕೆ ಅಥವಾ ಕಲಶ. ಕಾಡ್ಯ ಎಂದರೆ ಕಡ್ಯದಲ್ಲಿ ಇರುವ ನಾಗಬ್ರಹ್ಮ ಎಂದರ್ಥವನ್ನು ಮಾಡಲು ಸಾಧ್ಯವಿದೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಬ್ರಹ್ಮಮಂಡಲ ಅಥವಾ ಢಕ್ಕೆ ಬಲಿಯಲ್ಲಿ ಬ್ರಹ್ಮನದೆಂದು ಹೇಳಲಾಗುವ ಮನುಷ್ಯಮುಖದ ಆಕಾರವು ಹಿಂದೂಶಿಷ್ಟ ದೇವದೇವತೆಗಳಂತೆ ಸೌಮ್ಯವಾಗಿರದೆ, ಅಸುರ ಪರಿಕಲ್ಪನೆಗೆ ಅನುಗುಣವಾಗಿ ತೆರೆದ ಬಾಯಿ, ಇಣುಕುವ ಕೋರೆ ಹಲ್ಲುಗಳು, ದೊಡ್ಡ ಕಣ್ಣುಗಳನ್ನು ಹೊಂದಿದೆ. ಇದು ಬೆರ್ಮೆರ್ನ ಅಸುರ ಮೂಲವನ್ನು ಸೂಚಿಸುತ್ತದೆ ಈ ರೂಪ ಬಲಿಯ ರೂಪವನ್ನು ಹೋಲುತ್ತದೆ.
ಕುಂಡೋದರ ಎಂಬುದಕ್ಕೆ ಕುಂಡದ ಹಾಗೆ ಅರ್ಥಾತ್ ಮಣ್ಣಿನ ಮಡಿಕೆಯ ಹಾಗೆ ಹೊಟ್ಟೆಯನ್ನು ಹೊಂದಿರುವವನು ಎಂದು ಅರ್ಥವಿದೆ. ಢಕ್ಕೆಬಲಿಯಲ್ಲಿ ಚಿತ್ರಿಸುವ ಬ್ರಹ್ಮನ ಹೊಟ್ಟೆ ದೊಡ್ಡದಾಗಿ ಇರುತ್ತದೆ. ಈ ಅರ್ಥದಲ್ಲಿಯೂ ಕುಂಡೋದರ ಮತ್ತು ಬೆರ್ಮೆರ್ ಒಂದೇ ಎಂದೂ ಹೇಳಬಹುದು.
ಇನ್ನು ಬ್ರಹ್ಮಕಲಶವೆಂಬ ಮಣ್ಣಿನ ಮಡಿಕೆಗಳು ಎಲ್ಲಾ ದೇವಸ್ಥಾನಗಳಲ್ಲೂ ಬಳಕೆಯಾಗುತ್ತದೆ.
ಕುಂಡೋದರನನ್ನು ಭೂತರಾಜನೆಂದೂ ಭೂತಗಳ ಅಧಿಪತಿ ಎಂದೂ ಭೂತಗಳ ಅಧ್ಯಕ್ಷನೆಂದೂ ಭೂತಾಳ ಪಾಂಡ್ಯನ ಕಥೆಯಲ್ಲಿ ವರ್ಣಿಸಲಾಗಿದೆ. ಬೆರ್ಮೆರ್ಕೂಡ ಭೂತರಾಜನೆಂದೂ, ಭೂತಗಳ ಅಧ್ಯಕ್ಷನೆಂದೂ ಪಾಡ್ದನಗಳು ವರ್ಣಿಸುತ್ತವೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಆದ್ದರಿಂದ ತುಳುನಾಡಿನ ಮೂಲದೈವ ಬೆರ್ಮೆರ್ ಹಾಗೂ ಕುಂಡೋದರ ಒಂದೇ ಎಂದು ಹೇಳಬಹುದು. ಕುಂಡೋದರ ದೈವಕ್ಕಿರುವ ಮಹೀಶಾಸುರ ಎಂಬ ಅಭಿದಾನ, ಮಹಾಬಲಿಗೆ ಇರುವ ಮಹೀಶಾಸುರನೆಂಬ ಬಿರುದು, ಇವುಗಳಿಂದ ಬಲಿಯೇಂದ್ರನೇ ಹಿರಿಯ ಎಂಬರ್ಥದಲ್ಲಿ ಬೆರ್ಮೆರ್ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.
ಪುರಾಣ ಹಾಗೂ ಜನಪದ ನಂಬಿಕೆಯ ಪ್ರಕಾರ ಬಲಿಯೇಂದ್ರನ ಆಯುಧ ಬಿಲ್ಲು-ಬಾಣ. ಕೇರಳದ ಓಣಂ ಸಂದರ್ಭದಲ್ಲಿ ಚಿತ್ರಿಸುವ ಬಲಿಯೇಂದ್ರನಿಗೆ ನವಿಲು ವಾಹನವಾಗಿರುತ್ತದೆ. ಕೇರಳದ ಪೂಕ್ಕಳಂನ ಬಲಿಯೇಂದ್ರನ ಚಿತ್ರವು ನಾಗಮಂಡಲ ಢಕ್ಕೆಬಲಿಗಳಲ್ಲಿ ವೈದ್ಯರು ಬರೆಯುವ ಬ್ರಹ್ಮಯಕ್ಷನನ್ನು ಹೋಲುತ್ತದೆ.
ಬೆರ್ಮೆರ್ ಕುಲದೈವವಾಗಿರುವ ಮುಗೇರ ದೈವಗಳ ಆಯುಧವನ್ನು ಬಲಿಯ ಮರದ ಬುಡದಿಂದ ತೆಗೆದುಕೊಳ್ಳುತ್ತಾರೆ. ಎಲ್ಲ ಸುಬ್ರಹ್ಮಣ್ಯ ದೇವಾಲಯಗಳಲ್ಲಿ, ನಾಗಾಲಯಗಳಲ್ಲಿ ಬ್ರಹ್ಮಲಿಂಗೇಶ್ವರ ದೇವಾಲಯಗಳಲ್ಲಿ ಗರಡಿಗಳಲ್ಲಿ ಆಲಡೆಗಳಲ್ಲಿ ಹಾಗೂ ಬ್ರಹ್ಮಯಕ್ಷನ ಸಾನ್ನಿಧ್ಯವಿರುವ ಬಸದಿಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಬಲಿಯ ಮರವನ್ನು ಇಟ್ಟು, ಬಲೀಂದ್ರ ಲೆಪ್ಪು ಮೂಲಕ ಬಲಿಯೇಂದ್ರನನ್ನು ಆರಾಧಿಸುತ್ತಾರೆ.
ಪ್ರಳಯದ ನಂತರ ಬೆರ್ಮೆರ್ ಉದಿಸಿ ಬರುವ ಕಾಲದಲ್ಲಿ ನೆಕ್ಕಿಯಡಿಯಲ್ಲಿ ಆಟ ತುಂಬೆಯಡಿಯಲ್ಲಿ ಕೂಟವಾಗುತ್ತದೆ ಎಂದು ಬೆರ್ಮರ ಬೀರ ಪಾಡ್ದನದಲ್ಲಿ ಹೇಳಿದೆ. ಅ(c)ಡಾ.ಲಕ್ಷ್ಮೀ ಜಿ ಪ್ರಸಾದದೇ ರೀತಿ ತೆಂಕದಿಕ್ಕಿನಲ್ಲಿ ಸೆಲ್ಯೇಂದ್ರ ಕುಮಾರ ಹುಟ್ಟಿದ ಎಂದೂ ಪಾಡ್ದನ ತಿಳಿಸುತ್ತದೆ. ಬಲಿಯೇಂದ್ರನನ್ನೇ ಸೆಲ್ಯೇಂದ್ರ ಎಂದು ಹೇಳುತ್ತಾರೆ.
ಬಲಿಯೇಂದ್ರ ಲೆಪ್ಪಿನ ಕೊನೆಯಲ್ಲಿ ನೆಕ್ಕಿಯಡಿಯಲ್ಲಿ ಆಟ, ತುಂಬೆಯಡಿಯಲ್ಲಿ ಕೂಟ ಆಗುವಾಗ ಭೂಮಿಗೆ ಹಿಂತಿರುಗಿ ಬಾ ಎಂದು ಹೇಳಲಾಗಿದೆ. ಈ ಎಲ್ಲ ಸಾಮ್ಯತೆಗಳು ಕಾಕತಾಳೀಯವಲ್ಲ.ತುಳುವರ ಹಿರಿಯ ರಾಜ ಬೆರ್ಮೆರ್ ಮತ್ತು ಬಲೀಂದ್ರ ಒಬ್ಬನೇ ಎಂಬ ಸಾಧ್ಯತೆಯತ್ತ ಇವು ಬೊಟ್ಟು ಮಾಡುತ್ತವೆ(c)ಡಾ.ಲಕ್ಷ್ಮೀ ಜಿ ಪ್ರಸಾದ

 ಬಲೀಂದ್ರ ಲೆಪ್ಪು
                                ಕರ್ಗಲ್ಲ್ ಕಾಯಾನಗಾ, ಬೊಲ್ಗಲ್ಲ್ ಪೂವಾನಗಾ
                                ಉರ್ದು ಮದ್ದೊಲಿ ಆನಗಾ, ಗೊಡ್ಡೆರ್ಮೆ ಗೋಣೆ ಆನಗಾ
                                ಉಪ್ಪು ಕರ್ಪೂರಾನಗಾ, ಜಾಲ್‍ಪಾದೆ ಆನಗಾ
                                ತುಂಬೆದಡಿಟ್ಟ್ ಕೂಟ ಆನಗಾ, ನೆಕ್ಕಿದಡಿಟ್ಟ್ ಆಟ ಆನಗಾ
                                ದಂಬೆಲ್‍ಗ್ ಪಾಂಪು ಪಾಡ್ನಗಾ, ಅಲೆಟ್ಪ್ ಬೊಲ್ಯನೈ ಮುರ್ಕುನಗಾ
                                ಎರು ದಡ್ಡೆ ಆನಗಾ ಗುರುಗುಂಜಿದ ಕಲೆ ಮಾಜಿನಗಾ
                                ಮಂಜೊಲ್ ಪಕ್ಕಿ ಮೈ ಪಾಡ್ನಗ, ಕೊಟ್ರುಂಞ ಕೊಡಿ ಯೇರ್ನಗಾ
                                ದಂಟೆದಜ್ಜಿ ಮದ್ಮಲಾನಗ, ಕಲ್ಲಕೋರಿ ಕೆಲೆಪುನಗಾ
                                ನಂದಿಕೋಲು, ಮುಕ್ಕುರು ದಕ್‍ನಗಾ
                                ಬೊಲ್ಲ ಮಲೆ, ಸಲ್ಲ ಮಲೆ ಒಂಜಾನಗಾ
                                ಮೂಜಿ ದಿನತ ಉಚ್ಚಯ ಮೂಜಿ ದಿನತ ಬಲಿ
                                ಕಂಡ ಕಂಡ ತುಡಾರ್ ತೂವರೆ ಆಜಿ ದಿನತ ಪೊಲಿ ಕೊನವರೆ
                                ಆವೂರ ಬಲಿಕನಲ ಈ ಊರ ಪೊಲಿ ಕೊನೊಲ ಬಲೀಂದ್ರ
                                ಅರಕ್‍ದ ಒಟ್ಟೆ ಓಡೊಡು ಮಯಣದ ಮೋಂಟು ಜಲ್ಲೊಡು
                                ಪೊಟ್ಟು ಗಟ್ಟಿ ಪೊಡಿ ಬಜಿಲ ಪೊಲಿ ಕೊನೊವೊರೆ
                                ಕೊಟ್ಟುಗು ಗೊಂಡೆ ಪೂ ಕಟ್‍ದ್ ಬಲ ಬಲೀಂದ್ರ
ಎಂದು ಕರೆದಾಗ ಕೂ ..... ಕೂ ..... ಕೂಎಂದು ಸೇರಿದವರು ಮೂರು ಸಲ ಕೂಹಾಕುತ್ತಾರೆ.
                ಕಪ್ಪು ಕಲ್ಲು ಕಾಯಿ ಆಗುವಾಗ ಬಿಳಿ ಕಲ್ಲು ಹೂ ಆಗುವಾಗ ಉದ್ದು ಮದ್ದಳೆ ಆಗುವಾಗ, ಗೊಡ್ಡು ಎಮ್ಮೆ ಕೋಣ ಆಗುವಾಗ, ಉಪ್ಪು ಕರ್ಪೂರ ಆಗುವಾಗ, ಅಂಗಳ ಪಾದೆ ಆಗುವಾಗ, ತುಂಬೆ ಗಿಡದ ಅಡಿಯಲ್ಲಿ ಕೂಟ ಆಗುವಾಗ, ನೆಕ್ಕಿಯ ಗಿಡದಡಿಯಲ್ಲಿ ಆಟ ಆಗುವಾಗ, ಗದ್ದೆಯ ಸೀಳು ಪಾಪು ಹಾಕುವಷ್ಟು ದೊಡ್ಡದಾಗುವಾಗ, ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗುವಾಗ, ಕೋಣ ದಡ್ಡ ಆಗುವಾಗ, ಗುರುಗುಂಜಿಯ ಕಪ್ಪು ಕಲೆ ಮಾಡುವಾಗ (ಮೈ ಅಂದರೆ ಕಪ್ಪು) ಕೊಟ್ರುಂಞ ದೇವರಿಗೆ ಧ್ವಜಾರೋಹಣ ಆಗುವಾಗ, ದಂಟೆ ಹಿಡಿಯುವಂತಹಾ ಮುಪ್ಪಿನ ಮುದುಕಿ ಮದುಮಗಳಾಗುವಾಗ, ಕಲ್ಲಿನ ಕೋಳಿ ಕೂಗುವಾಗ, ನಂದಿಕೋಲು ಬುಸುಗುಡುವಾಗ, ಬೊಲ್ಲ ಮಲೆ ಸಲ್ಲ ಮಲೆಗಳು ಒಂದಾಗುವಾಗ, ಮೂರು ದಿನದ ಉತ್ಸವ ಮೂರು ದಿನದ ಬಲಿ, ಗದ್ದೆ ಗದ್ದೆ ಸೊಡರು ನೋಡಲು ಆರು ದಿನದ ಪೊಲಿ ಕೊಂಡು ಹೋಗಲು ಬಾ. ಆ ಊರ ಬಲಿ ಕೊಂಡು ಬಾ, ಈ ಊರ ಪೊಲಿ ಕೊಂಡು ಹೋಗು.
                ಅರಗಿನ ಟೊಳ್ಳು ದೋಣಿಯಲ್ಲಿ ಮೇಣದ ದೊಂಕು ಜಲ್ಲೆಯಲ್ಲಿ
                ಪೊಟ್ಟು ಗಟ್ಟಿ ಹುಡಿ ಅವಲಕ್ಕಿಯ ಪೊಲಿ ಕೊಂಡು ಹೋಗಲು
                ದೋಣಿಯ ಮೂಲೆಗೆ ಗೊಂಡೆ ಹೂ ಕಟ್ಟಿಕೊಂಡು ಬಾ ಬಲಿಯೇಂದ್ರಾ
                                                                                                                ಕೂ ... ಕೂ ... ಕೂ ...
Copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ