Monday, 23 May 2016

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -309 ಗಣಪತಿ ಕೋಲ (c)ಡಾ.ಲಕ್ಷ್ಮೀ ಜಿ ಪ್ರಸಾದ


                    
ಗಣಪತಿಯಾರ್ ತೆಯ್ಯಂ/ ಗಣಪತಿ ಕೋಲ© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಹೆಚ್ಚಿನ ಮಾಹಿತಿಗೆ ಲೇಖಕಿಯ ಮಾಯ ಮತ್ತು ಜೋಗದ ಬೆಳಕಿನಲ್ಲಿ   ಕರಾವಳಿಯ ಸಾವಿರದೊಂದು ದೈವಗಳು ಗ್ರಂಥವನ್ನು ನೋಡಬಹುದು 
 
ಕೇರಳದ ದಕ್ಷಿಣ ಭಾಗದಲ್ಲಿ ಕೋಲಂ ತುಳ್ಳಲ್ ಎಂಬ ಆರಾಧನಾ ಸಂಪ್ರದಾಯವಿದೆ .ಇದನ್ನು ಭಗವತಿ ದೇವಾಲಯಗಳಲ್ಲಿ ಮಾಡುತ್ತಾರೆ . ಪಡೆಯಣಿ ಎಂಬ ವೀರ ಆರಾಧನೆಯ ಸಂದರ್ಭದಲ್ಲಿ  ಆಚರಿಸುತ್ತಾರೆ .ಜೊತೆಗೆ ಮನೆಯಲ್ಲಿ ಕೂಡ ಕೆಲವು ದುಷ್ಟ ಶಕ್ತಿಗಳ ನಿವಾರಣೆಗಾಗಿ ಕೂಡ ಮಾಡುತ್ತಾರೆ 
 ಪಡೆ ಎಂದರೆ ಸೈನಿಕ ಕ್ಷಾತ್ರ ವೀರ ಎಂದರ್ಥ .ಇಲ್ಲಿ ವೀರ ಆರಾಧನೆಯೇ ಭೂತಾರಾಧನೆ ಯ ರೀತಿಯಲ್ಲಿ ಅಭಿವ್ಯಕ್ತಿಸುತ್ತಾರೆ .ಇಲ್ಲಿನ ವೀರರು ದೈವತ್ವ ಪಡೆದು ಆರಾಧಿಸಲ್ಪಡುವ ರೀತಿ ಇದು© ಡಾ.ಲಕ್ಷ್ಮೀ ಜಿ ಪ್ರಸಾದ್ 

ಕೋಲಂ ತುಳ್ಳಲ್ ನಲ್ಲಿ ವಿವಿಧ ಯಕ್ಷಿಗಳು,ದೈವಗಳು  ಆರಾಧನೆ ಪಡೆಯುತ್ತಾರೆ .ಮರುತಯಕ್ಷಿ ,ಅಂತರ್ಯಕ್ಷಿ,ಸುಂದರ ಯಕ್ಷಿ,ಆರಕ್ಕಿ ಯಕ್ಷಿ,ಕಾಲ ಯಕ್ಷಿ,ಮಾಯ ಯಕ್ಷಿ,ಅಂಬರ ಯಕ್ಷಿ ,ಪಕ್ಷಿ ಯಕ್ಷಿ,ಕಾಳಮತಂ,ಪುಲಿಮತನ್,ವಟಿಮದನ್,ರಕ್ತ ಚಾಮುಂಡಿ ಅಪಸ್ಮಾರ ಯಕ್ಷಿ ದೇವತ,ಭೈರವಿ ಕಾಲನ್ ಮಂಗಳ ಭೈರವಿ ಯಕ್ಷಿ ಮೊದಲಾದ ಶಕ್ತಿಗಳಿಗೆ ಆರಾಧನೆ ಇದೆ .ಇದು ಪ್ರಧಾನವಾಗಿ ಕಾಳಿಯ ಆರಾಧನೆ ,ದಾರುಕ ವಧೆಯ ನಂತರವೂ ಶಾಂತವಾಗದ ದೇವಿಯನ್ನು  ಭದ್ರಕಾಳಿ ಕೋಲ ನೀಡಿ  ಶಾಂತವಾಗಿಸಿ ಆರಾಧಿಸುತ್ತಾರೆ.ಜೊತೆಗೆ 
ಇಲ್ಲಿ ಅನೇಕ ಯಕ್ಷ ಯಕ್ಷಿಯರ ಗಂಧರ್ವರ ಆರಾಧನೆ ಇದೆ
ಇಲ್ಲಿನ ಯಕ್ಷಿಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ
ಈ ಶಕ್ತಿಗಳ ಜೊತೆ ಒಂದು ವಿಶಿಷ್ಟ ಕೋಲ ಇದೆ .ಅದುವೇ ಗಣಪತಿ ಕೋಲ 

ಗಣಪತಿಯ ಆರಾಧನೆಯನ್ನು ಮೊದಲು ಮಾಡುವ ಸಂಪ್ರದಾಯ ಎಲ್ಲೆಡೆ ಇದೆ .ಯಾವುದೇ ಕೆಲಸದ ಆರಂಭದಲ್ಲಿ ಆರಾಧನೆಯ ಸಂದರ್ಭದಲ್ಲಿ ಕೂಡ ಗಣಪತಿಗೆ ಆರಾಧನೆ ಇರುತ್ತದೆ 

ಅಂತೆಯೇ ಕೋಲಂ ತುಳ್ಳಲ್ ಆರಂಭದಲ್ಲಿ ವಿಘ್ನ ವಿನಾಶಕನ ಪೂಜೆ ಇರುವುದು ಸಹಜ.
ಆದರೆ ಇಲ್ಲಿ ಗಣಪತಿ ಗೆ ಕೋಲ ಕೊಟ್ಟು ಆರಾಧಿಸುತ್ತಾರೆ .ಹಾಗಾಗಿ ಮೊದಲುಕುಣಿಯುವ ಅಭಿವ್ಯಕ್ತಿಸುವ ಕೋಲವನ್ನು ಗಣಪತಿ ಕೋಲ ಎನ್ನುತ್ತಾರೆ ಎಂಬ ಅಭಿಪ್ರಾಯವೂ ಇದೆ.ಆದರೆ  ಕೋಲ ಕಟ್ಟಿಯೇ ಇಲ್ಲಿ ಗಣಪತಿ ಗೆ ಆರಾಧನೆ ಇದೆ .ಬೇರೆ ಯಕ್ಷಿ ಯಾರ ವೇಷ ಭೂಷಣ ಗಳಲ್ಲಿಯೇ ಗಣಪತಿಗೆ ಸಾಂಕೇತಿಕವಾಗಿ ಕೋಲ ಕೊಡುವ ಪದ್ಧತಿಯೂ ಇದೆ .ಬೇರೆ ಬೇರೆ ಯಕ್ಷಿ ಹಾಗೂ ಶಕ್ತಿಗಳು ಕುಣಿದು ಗಣಪತಿಯನ್ನು ಆರಾಧಿಸುತ್ತಾ ಕೋಲ ನೀಡುವ ಪದ್ಧತಿ ಕೂಡ ಇದೆ © ಡಾ.ಲಕ್ಷ್ಮೀ ಜಿ‌ ಪ್ರಸಾದ್ 

ತುಳುವರಲ್ಲಿ ಗಣಪತಿಯ ಕುರಿತಾದ ಪರಿಕಲ್ಪನೆ ಪುರಾಣ ಕಥೆಗಿಂತ ತುಸು ಭಿನ್ನವಾಗಿದೆ.ಇಲ್ಲಿ ಗಣಪತಿ ಪಾರ್ವತಿಯ ಮಗನಲ್ಲ . ಈಶ್ವರ ದೇವರಿಗೆ ಹೂ ಕೊಯ್ದು ತರುವ ಹುಡುಗ ಒಂದು ದಿನ ಒಂದು ಕಿಸ್ಕಾರ ಹೂವನ್ನು ಬೆನ್ನು ಹತ್ತುತ್ತಾ ಮಿತ್ತು ಸಿರಿಗಳ ಲೋಕಕ್ಕೆ ಹೋಗುತ್ತಾನೆ ಅಲ್ಲಿ ಕಿರಿಯ ಸಿರಿ ಮೈಸಗೆಯನ್ನು ನೋಡಿ ಅವಳ ಅಪಾರ ಸೌಂದರ್ಯವನ್ನು ನೋಡಿ ಮೂರ್ಚೆ ತಪ್ಪಿ ಬೀಳುತ್ತಾನೆ.ಅವನನ್ನು ನೀರು ಹಾಕಿ ಎಬ್ಬಿಸಿ ಈ ಕಡೆ ನರ ಮನುಷ್ಯರು ಬರಬಾರದೆಂದು ಎಚ್ಚರಿಸಿ ಕಳುಹಿಸುತ್ತಾಳೆ ಅವಳು .ತಡವಾಗಿ ಬಂದುದಕ್ಕೆ ಕಾರಣವನ್ನು ಕೇಳಿದಾಗ ಈಶ್ವರ ದೇವರಿಗೆ ಮೈಸಗೆಯ ವಿಚಾರ ತಿಳಿಯುತ್ತದೆ .ಅವಳೆಡೆಗೆ ಹೋಗಿ ಅವಳನ್ನು ತನ್ನೊಂದಿಗೆ ಕರೆತರುತ್ತಾನೆ ಹೀಗೆ ಈಶ್ವರ ದೇವರು ಮತ್ತು ಮೈಸಗೆಗೆ ಹುಟ್ಟುವ ಮಗು ಗಣಪತಿ .ಈತನಿಗೆ ಬಾಮ ಕುಮಾರ ಎಂದು ಹೆಸರು ಇದು ತುಳುವರ ಗಣಪತಿಯ ಪರಿಕಲ್ಪನೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 

ಆದರೆ ಗಣಪತಿ ಯನ್ನು ಭೂತ ಕಟ್ಟಿ ಆರಾಧಿಸುವ ಪದ್ಧತಿ ಇಲ್ಲ ತುಳುನಾಡಿನಲ್ಲಿ ಇಲ್ಲ‌ ಆದರೆ ಧೂಮಾವತಿ ರಕ್ತೇಶ್ವರಿ ,ಗುಳಿಗ ,ವಾಲಿ,ಸುಗ್ರೀವ ಮೊದಲಾದ ಪುರಾಣ ಮೂಲ ಶಕ್ತಿಗಳಿಗೆ ಭೂತದ ನೆಲೆಯಲ್ಲಿಕೋಲ ನೀಡಿ ಆರಾಧಿಸುತ್ತಾರೆ .

ಕೋಲದ ರೂಪದಲ್ಲಿಯೇ ದೇವತಾ ಆರಾಧನೆ ಪ್ರಚಲಿತ ವಿರುವ ಪ್ರದೇಶಗಳಲ್ಲಿ ಪುರಾಣ ಮೂಲದ ದೇವತೆಗಳನ್ನು  ಭೂತದ ನೆಲೆಯಲ್ಲಿಯೇ ಆರಾಧಿಸುವುದು ಸಹಜವೇ ಆಗಿದೆ 
ಅಂತೆ ಕೇರಳದ ಕೆಲವೆಡೆ  ಇತರ ದೇವತೆ ದೈವಗಳಿಗೆ ಕೋಲ ನೀಡಿ ಆರಾಧಿಸುವಂತೆ  ಗಣಪತಿಗೆ ಕೋಲ ನೀಡಿ ಆರಾಧಿಸುವ ಸಂಪ್ರದಾಯ ಬಳಕೆಗೆ ಬಂದಿದೆ.ಪಡೆಯಣಿ ಎಂಬ ಕೋಲ ಸ್ವರೂಪದ ಆರಾಧನೆ ಇರುವಲ್ಲಿ ಗಣಪತಿಯಾರ್ ತೆಯ್ಯಂ ಗೆ ಕೋಲ ಕಟ್ಟಿ ಆರಾಧನೆ ಇದೆ.ಆದರೆ ಇತರ ದೈವಗಳ ವೇಷ ಭೂಷಣಗಳಲ್ಲಿ ಸಾಂಕೇತಿಕವಾಗಿ ಕಟ್ಟು ಕಟ್ಟಲೆ ಕೋಲ ನೀಡಿ  ಆರಾಧನೆ ಮಾಡುತ್ತಾರೆ© ಡಾ.ಲಕ್ಷ್ಮೀ ಜಿ ಪ್ರಸಾದ್ 
ಈ ಬಗ್ಗೆ ಹೆಚ್ಚ್ಚಿನ ಅಧ್ಯಯನದ ಅಗತ್ಯವಿದೆ 



                  


Sunday, 1 May 2016

ಕೈಬರಹ ಕೆಟ್ಟದಾಗಿ ಇದ್ದರೂ ಲಾಭವಾಗುತ್ತದೆ !-ಡಾ.ಲಕ್ಷ್ಮೀ ಜಿ ಪ್ರಸಾದ



ಕೈಬರಹ ಸುಂದರವಾಗಿದ್ದರೆ ನಮಗೆ ವಿದ್ಯಾರ್ಥಿಗಳಾಗಿದ್ದಾಗ ಒಳ್ಳೆ ಅಂಕಗಳು ಲಭಿಸುತ್ತವೆ ,ಪತ್ರ ಗಿತ್ರ ಬರೆಯಬೇಕಾದರೆ ಅವರ ಸಹಾಯವನ್ನು ಜನರು  ಕೇಳುತ್ತಾರೆ ಹಾಗಾಗಿ ಸುಂದರ ಕೈ ಬರಹ ಇರುವವರಿಗೆ ಸದಾ ಬೇಡಿಕೆ ಇರುತ್ತದೆ !ಒಳ್ಳೆಯ ಸ್ಥಾನಮಾನ ಸಿಗುತ್ತದೆ ,ಆದರೆ ಅಕ್ಷರ ಕೆಟ್ಟದಾಗಿರೋದರಿಂದ ಕೂಡ ಕೆಲವೊಮ್ಮೆ ಬೆನಿಫಿಟ್ ಗಳು ಸಿಗುವುದು ಉಂಟು !ಅದು ಹೇಗೆ ಗೊತ್ತಾ ?ತಿಳಿಯಲು ಕುತೂಹಲ  ಇದ್ದರೆ ಇದನ್ನು ಓದಿ 

ನಿನ್ನೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ.ಗೋ ಪ್ರಪಂಚ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು .ಪ,ಗೋ ಅವರ ಮಗ ಪದ್ಯಾಣ ರಾಮಚಂದ್ರ ,ಹಾಗೂ ಏಕಮ್ ಪ್ರಕಾಶನದ ರಂಗ ಸ್ವಾಮಿ ಮೂಕನಹಳ್ಳಿ ಯವರು ನನಗೆ ತುಂಬಾ ಆತ್ಮೀಯರೂ ಆಗಿದ್ದು ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ .ಕಾರ್ಯಕ್ರಮಕ್ಕೆ ಅರ್ಧ ಗಂಟೆ ಮೊದಲೇ ಹೋಗಿದ್ದೆ .ಅಲ್ಲಿ ಹೋದಾಗ ಕೇ ಪಿ ರಾಜಗೋಪಾಲ ಕನ್ಯಾನ ಅಲ್ಲಿಗೆ ಬರುವವರಿದ್ದು ಅವರಿಗೆ ಒಂದು ಅಭಿನಂದನೆ ಕೂಡ ಏರ್ಪಡಿಸಿರುವುದು ತಿಳಿಯಿತು .

ರಾಜಗೋಪಾಲ ಕನ್ಯಾನ ಅವರು ಕಲೆ ಸಾಹಿತ್ಯ ಅಭಿಮಾನಿಯಾಗಿದ್ದು ,1995ರಲ್ಲಿ ಪ.ಗೋ ಅವರುಹೊಸದಿಗಂತ ಪತ್ರಿಕೆಗೆ ಬರೆದ ಆತ್ಮ ಕಥನಾತ್ಮಕ ಅಂಕಣ ಬರಹಗಳನ್ನು ಸಂಗ್ರಹಿಸಿ,ಪಗೋ ಕುರಿತು ವಿಶಿಷ್ಟ ಸೃಷ್ಟಿಗಳ ಲೋಕದಲ್ಲಿ ಎಂಬ ಕೃತಿಯನ್ನು 2005ರಲ್ಲಿ ಬೆಳಕಿಗೆ ತಂದಿದ್ದರು .ಅದಕ್ಕಾಗಿ ಪಗೋ ಮಗ ಪದ್ಯಾಣ ರಾಮಚಂದ್ರ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದರು .ಆದರೆ ಪದ್ಯಾಣ ರಾಮಚಂದ್ರ ಹಾಗೂ ಏಕಮ್ ಪ್ರಕಾಶನದ ರಂಗಸ್ವಾಮಿ ಮೂಕನಹಳ್ಳಿ ಅವರಿಗೆ ರಾಜಗೋಪಾಲ ಕೆಪಿ ಅವರ ಪರಿಚಯವಿರಲಿಲ್ಲ ,ನನಗೆ ರಾಜಗೋಪಾಲ ಕನ್ಯಾನ ತುಂಬಾ ಅತ್ಮೀಯರಾಗಿರುವುದು ಪದ್ಯಾಣ ರಾಮಚಂದ್ರ ಅವರಿಗೆ ಗೊತ್ತಿತ್ತು ಹಾಗಾಗಿ ಅವರ ಪರಿಚಯವನ್ನು ಬರೆದುಕೊಡಲು ತಿಳಿಸಿದರು .ಹಾಗೆ ರಾಜಗೋಪಾಲ ಕನ್ಯಾನ ಅವರ ಸಂಕ್ಷಿಪ್ತ ಪರಿಚಯ ಬರೆದುಕೊಟ್ಟೆ .ಅದನ್ನು ಅವರು ರಂಗ ಸ್ವಾಮಿ ಮೂಕನ ಹಳ್ಳಿ ಅವರಿಗೆ ಕೊಟ್ಟರು 
ಅವರಿಗೆ ಅದನ್ನು ನೋಡುತ್ತಲೇ ತಲೆಬಿಸಿ ಆಯಿತು ಅದನ್ನು ಓದುವುದು ಹೇಗೆ ಅಂತ !ಅಷ್ಟು ಸುಂದರವಾಗಿದೆ ನನ್ನ ಕೈಬರಹ !ಮೊದಲೇ ನನ್ನ ಕೈಬರಹ ಕೆಟ್ಟದಾಗಿದೆ ಅದಕೆ ಸರಿಯಾಗಿ ನಿನ್ನೆ ಕನ್ನಡಕ ತೆಗೆದುಕೊಂಡು ಹೋಗಲು ಮರೆತಿದ್ದೆ.ಬೇರೆ !ಹಾಗಾಗಿ ನನ್ನ ಅಕ್ಷರ ತೀರ ಅಧ್ವಾನವಾಗಿತ್ತು.ಅದನ್ನು ರಂಗಸ್ವಾಮಿ ಯವರಿಗೆ ಬಿಡಿ ನನಗೆ ಕೂಡ ಓದಲು ಕಷ್ಟಕರವೇ ಆಗಿತ್ತು !ಹಾಗಿರುವಾಗ ಅವರ ಅವಸ್ಥೆಯನ್ನು ಎಂತ ಹೇಳುದು !
ಆಗ ಅವರು ಅದನ್ನು ನನಗೆ ಕೊಟ್ಟು "ಕೆಪಿ ರಾಜಗೋಪಾಲ ಕನ್ಯಾನ ಅವರನ್ನು ನೀವೇ ಪರಿಚಯಿಸಿ "ಎಂದು ನನಗೆ ಹೇಳಿನನ್ನ ಕೈಬರಹ ಓದುವ ಗಂಡಾಂತರದಿಂದ ಪಾರಾದರು ! .
ನನಗೆ ತುಂಬಾ ಖುಷಿ ಆಯ್ತು !ಯಾಕೆಂದರೆ ಕೇ ಪಿ ರಾಜಗೋಪಾಲ ಕನ್ಯಾನ ಅವರು ನನಗೆ ತುಂಬಾ ಆತ್ಮೀಯರು ,ನನ್ನ ಸಂಶೋಧನಾ ಕೃತಿಗಳ ಪ್ರಕಟಣೆಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟವರು ಅವರು .ನಾನು ಹವ್ಯಕ ಭಾಷೆಯಲ್ಲಿ ನಾಟಕ ಬರೆದ ಮೊದಲ ಮಹಿಳೆ ಎಂಬುದನ್ನು ನನಗೆ ತಿಳಿಸಿದವರೂ ಕೂಡ ಅವರೇ .ಎಲ್ಲೋ ಮೂಲೆಯಲ್ಲಿ ಇದ್ದ ನನ್ನ ಸುಬ್ಬಿಇಂಗ್ಲಿಷ್ ಕಲ್ತದು ಎಂಬ ನಾನು ಏಳನೇ ತರಗತಿಯಲ್ಲಿ ಬರೆದಿದ್ದ ನಾಟಕ  ಮಹಿಳೆ ಬರೆದ ಮೊದಲ ನಾಟಕ ,ಆ ಮಹಿಳೆ ನಾನೇ ಎಂಬುದನ್ನು ತಿಳಿಸಿ ಆ ನಾಟಕ ಬೆಳಕಿಗೆ ಬರಲು ಕಾರಣರಾದವರು ಅವರು .ನನ್ನಂತೆ ಅನೇಕರಿಗೆ ಅಪಾರ ಬೆಂಬಲ ನೀಡಿ ಪ್ರೋತ್ಸಾಹಿಸಿದವರು .ನೂರಕ್ಕೂ ಹೆಚ್ಚು ಎಲೆಮರೆಯ ಕಾಯಿಗಳಂತೆ ಇದ್ದ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸಿದವರು ಅವರು .
ಹಾಗಾಗಿ ಅವರ ಪರಿಚಯವನ್ನು ಸಭೆಗೆ ಮಾಡಿಕೊಡುವುದು ನನಗೆ ಇಷ್ಟದ ವಿಚಾರವೇ ಆಗಿತ್ತು .ನನ್ನ ಕೆಟ್ಟ ಕೈ ಬರಹ ನನಗೆ ಆ ಅವಕಾಶವನ್ನು ತಂದು ಕೊಟ್ಟಿತು !ಈಗ ಗೊತ್ತಾಗಿರಬಹುದು ನಿಮಗೆ  ಅಕ್ಷರ ಚೆನ್ನಗಿಲ್ಲದೆ ಇದ್ರೂ ಲಾಭ ಇದೆ ಅಂತ!

Friday, 29 April 2016

ಸಾವಿರದೊಂದು ಗುರಿಯೆಡೆಗೆ:306 ತುಳುನಾಡ ದೈವಗಳು -ಪೋಲಿಸ್ ತೆಯ್ಯಂ -ಡಾ.ಲಕ್ಷ್ಮೀ ಜಿ ಪ್ರಸಾದ






 ಚಿತ್ರ ಕೃಪೆ :kcn ಮತ್ತು ಮನೋಜ್ ಕುಂಬ್ಳೆ

ತುಳುವರ ಭೂತಾರಾಧನೆ ಒಂದು ಅನನ್ಯ ಸಂಸ್ಕೃತಿ ,ಇಲ್ಲಿ ಯಾರು ಯಾವಾಗ ಹೇಗೆ ಯಾಕೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ .ಅದಕ್ಕೆ ಜಾತಿ ಧರ್ಮ ದೇಶದ ಗಡಿ ಕೂಡ ಇಲ್ಲ
ಅನೇಕ ಅಧಿಕಾರಿಗಳು ಕೂಡ ಇಲ್ಲಿ ದೈವತ್ವ ಪಡೆದಿರುವುದು ಅಲ್ಲಲ್ಲಿ ಕಂಡು ಬಂರುತ್ತದೆ .ಮಂಜೇಶ್ವರ ದ ಮೀಯ ಪದವು  ಸಮೀಪದ ಪೊಳ್ಳ ಕಜೆ ಎಂಬಲ್ಲಿ ಬ್ರಿಟಿಶ್ ಸುಭೇದಾರನೊಬ್ಬ ದೈವತ್ವ ಪಡೆದು ಕನ್ನಡ ಬೀರ ಎಂಬ ದೈವವಾಗಿ ನೆಲೆ ನಿಂತಿದ್ದಾನೆ ,
ಅಂತೆಯೇ ಉಡುಪಿ -ಕಾಪಿನಲ್ಲಿ ಗುರಿಕ್ಕಾರ ಸೇನವ ಪಟೇಲ ,ಪೋಲಿಸ್ ,ಕಳ್ಳ ಭೂತಗಳಿಗೆ ಆರಾಧನೆ ಇದೆ ,
ಕಾಸರಗೋಡು ಪರಿಸರದಲ್ಲಿ ಒಂದು ಪೋಲಿಸ್ ಭೂತಕ್ಕೆ ಆರಾಧನೆ ಇದೆ .ಇದು ಮಲಯಾಳ ಪರಿಸರದಲ್ಲಿ ಆರಾಧನೆ ಗೊಳ್ಳುತ್ತಿದ್ದು ಈ ದೈವವನ್ನು ಪೋಲಿಸ್ ತೆಯ್ಯಂ ಎಂದು ಕರೆದಿದ್ದಾರೆ ತುಳುವರ ದೈವ  ಪದ ಮಲಯಾಳದಲ್ಲಿ ತೆಯ್ಯಂ ಎಂದು ಬಳಕೆಯಾಗುತ್ತದೆ ,
ಕಾಸರಗೋಡು ಸಮೀಪದಲ್ಲಿರುವ ಪದನ್ನಕ್ಕಡ್ ಪಾನುಕ್ತಾಯತ್ ತರವಾಡು ಕುಟುಂಬದಲ್ಲಿ ಕರಿ ಚಾಮುಂಡಿ ದೈವದ ಆರಾಧನೆ ಸಮಯದಲ್ಲಿ ಪೋಲಿಸ್ ತೆಯ್ಯಂ ಗೆ ಆರಾಧನೆ ಮಾಡುತ್ತಾರೆ .(C).ಡಾ.ಲಕ್ಷ್ಮೀ ಜಿ ಪ್ರಸಾದ
ಹಿಂದೆ ಈ ಮನೆತನಕ್ಕೆ ಸೇರಿದ ಹಿರಿಯರಾದ ಎಡಚೇರಿ ಕಾರ್ನವೆರ್ ಕರಿಚಾಮುಂಡಿ ದೈವದ ಕಳಿಯಾಟ (ಮಲಯಾಳದಲ್ಲಿ ಭಗವತಿ ಹಾಗು ಇತರ ದೈವಗಳಿಗೆ ನಡೆಸುವ ವೈಭವದ ಕೋಲ /ನೇಮದ ಒಂದು ಪ್ರಕಾರ  ಕಳಿಯಾಟ   ) ನೋಡಲು ಹೋಗುತ್ತಾರೆ .ಅಲ್ಲಿನ ಭಕ್ತಿ ವೈಭವವನ್ನು ನೋಡಿ ಅವರು "ತಮ್ಮ ತರವಾಡಿನಲ್ಲಿ ಕೂಡ ಇಂಥಹ ಒಂದು ಕಳಿಯಾಟ ಉತ್ಸವ ನಡೆಯಬೇಕು ಎಂದು ಕರಿ ಚಾಮುಂಡಿ ದೈವದಲ್ಲಿ ಅರಿಕೆ ಮಾಡಿಕೊಳ್ಳುತ್ತಾರೆ .
ಅಲ್ಲಿಂದ ದೈವಗಳ ಅನುಗ್ರಹ ಪಡೆದು ತಮ್ಮ ಮನೆಗೆ ಹಿಂದಿರುಗುತ್ತಾರೆ .
ಹಿಂತಿರುಗಿ ಬರುವ ದಾರಿಯಲ್ಲಿ ನಾಯನ್ಮಾರೆರ್ ನಡುವೆ ಯಾವುದೊ ಕಾರಣಕ್ಕೆ ವಿವಾದ ಉಂಟಾಗಿ ಹೊಡೆದಾಟ ಆಗುತ್ತದೆ .ಅದನ್ನು ಬಿಡಿಸಲೆಂದು ಬಂದ ಪೋಲಿಸ್ ಒಬ್ಬಾತನಿಗೆ ಕತ್ತಿಯ ಏಟು ಬಿದ್ದು ಆಟ ನೆಲದಲ್ಲಿ ಬಿದ್ದು ಹೊರಳಾಡುತ್ತಿರುತ್ತಾನೆ.ಅವನನ್ನು ತನ್ನ ಮಡಿಲಲ್ಲಿ ಮಲಗಿಸಿ ನೀರು ಕುಡಿಸಿ ಉಪಚಾರ ಮಾಡುತಾರೆ ದಯಾಳುವಾದ ಎಡಚೇರಿ ಕಾರ್ನವೆರ್.ಅವರು ನೀಡಿದ ನೀರನು ಕುಡಿದು ಆ ಪೋಲಿಸ್ ಅಲ್ಲಿಯೇ ಸಾವನ್ನಪ್ಪುತ್ತಾನೆ.
ಅಲ್ಲಿನದ ಅವರು ತಮ್ಮ ತರವಾಡು  ಮನೆಗೆ ಬರುತ್ತಾರೆ.
ಅಲ್ಲಿ ಅವರಿಗೆ ಕರಿಚಾಮುಂಡಿ ದೈವದ ಸಾನ್ನಿಧ್ಯ ದ ಅರಿವಾಗುತ್ತದೆ.ಜೊತೆಗೆ ಪೋಲಿಸ್ ಕೂಡ ದೈವತ್ವ ಪಡೆದು ದೈವವಾಗಿ ಕರಿಚಮುಂಡಿ ಸೇರಿಗೆಯಲ್ಲಿರುವುದು ಅವರಿಗೆ ತಿಳಿದು ಬರುತ್ತದೆ .
ಅವರು  ಕರಿಚಾಮುಂದಿಗೆ ಕಳಿಯಾಟ ಮೂಲಕ ಆರಧಿಸುವಾಗ ಪೋಲಿಸ್ ತೆಯ್ಯಂ ಗೆ ಕೂಡ ಕೋಲ ಕೊಟ್ಟು ಆರಾಧಿಸುತ್ತಾರೆ.
ಮುಂದೆ ಅವರ ಕುಟುಂಬದವರು ಈ ಪರಂಪರೆಯನ್ನು ಮುಂದುವರಿಸಿದರು
ಪೋಲಿಸ್ ತೆಯ್ಯಂ ತನ್ನ ಮೂಲ ವೃತ್ತಿಗೆ ಅನುಗುಣವಾಗಿ ಬೀಡಿ ಸೇದಿದವರನ್ನು ಹಿಡಿದು ಶಿಕ್ಷಿಸುವುದು ,ಜನ ಗುಂಪು  ಸೇರಿದಾಗ ಅವರನ್ನುಚದುರಿಸಿ  ಓಡಿಸಿ ದೂರ ಮಾಡುವುದೇ ಮೊದಲಾದ ಅಭಿನಯವನ್ನು ಮಾಡುತ್ತದೆ ,ಪೂರ್ತಿಯಾಗಿ ಪೋಲಿಸ್ ra ವೇಷ ಭೂಷಣ ಈ ದೈವಕ್ಕೆ ಇರುತ್ತದೆcopy rights reserved  - -ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಮೂಲ .kasaragodunews internet portal
http://kasaragodchannel.com/%E0%B4%AA%E0%B5%8B%E0%B4%B2%E0%B5%80%E0%B4%B8%E0%B5%8D-%E0%B4%A4%E0%B5%86%E0%B4%AF%E0%B5%8D%E0%B4%AF%E0%B4%82-%E0%B4%85%E0%B4%B0%E0%B4%99%E0%B5%8D%E0%B4%99%E0%B4%BF%E0%B4%B2%E0%B5%86%E0%B4%A4%E0%B5%8D/

ಕನ್ನಡಕ್ಕೆ ಸಂಗ್ರಹಾನುವಾದ ಮಾಡಿ ಕೊಟ್ಟ ಶ್ರೀ ಶಂಕರ್ ಕುಂಜತ್ತೂರು ಇವರಿಗೆ ಕೃತಜ್ಞತೆಗಳು


  

Thursday, 28 April 2016

ಸಾವಿರದೊಂದು ಗುರಿಯೆಡೆಗೆ:305 ತುಳುನಾಡ ದೈವಗಳು-ಮುಂಡಂತಾಯ (c)ಡಾ.ಲಕ್ಷ್ಮೀ ಜಿ ಪ್ರಸಾದ

 

ಒಂದೇ ದೈವ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಲ್ಲಿ ಆರಾಧನೆ ಹೊಂದುತ್ತದೆ ಎಂಬುದು ಒಂದು ಸಾಮಾನ್ಯವಾದ ವಾದ .ಆದರೆ ಹೆಸರು ಒಂದೇ ಇದ್ದರೂ ಅರಧಿಸಲ್ಪಡುವ ದೈವಗಳು ಬೇರೆ ಬೇರೆ ಆಗಿರುವ ಬಗ್ಗೆ ಅನೇಕ ಕಡೆ ಮಾಹಿತಿಗಳು ಸಿಗುತ್ತವೆ ,ಉದರ ಚಾಮುಂಡಿ ಗುಡ ಚಾಮುಂಡಿ ಕೆರೆ ಚಾಮುಂಡಿ ಕರಿ ಚಾಮುಂಡಿ ಎಲ್ಲವೂ ಒಂದೇ ದೈವದ ಬೇರೆ ಬೇರೆ ಹೆಸರುಗಳಲ್ಲ .ಹೆಸರು ಒಂದೇ ಆಗಿದ್ದರೂ ಇವುಗಳು ಬೇರೆ ಬೇರೆ ದೈವತಗಳಾಗಿವೆ .ಹೆಸರು ಒಂದೇ ಇದ್ದರೂ ಬೇರೆ ಬೇರೆ ಶಕ್ತಿಗಳ ಆರಾಧನೆ ತುಳುನಾಡಿನಲ್ಲಿ ಇರುವ ಬಗ್ಗೆ ಅನೇಕ ಆಧಾರಗಳು ನಿದರ್ಶನಗಳು ಸಿಕ್ಕಿವೆ  . ಇದಕ್ಕೆ  ಒಂದು ನಿದರ್ಶನ ಕಮಲ ಶಿಲೆಯ ಮುಂಡಂತ್ತಾಯ ದೈವದ ಆರಾಧನೆ .
ತುಳುನಾಡಿನಲ್ಲಿ ಮುಡದೇರ್ ಕಾಲ ಭೈರವ ,ಮುಂಡತ್ತಾಯ,ಹೆಸರಿನ ದೈವ ಬಹಳ ಪ್ರಸಿದ್ಧವಾದುದು .ಮೂಡು ದಿಕ್ಕಿನಿಂದ ಇಳಿದ ಬಂದ ಕಾರಣ ಮುಂಡತ್ತಾಯ ಎಂಬ ಹೆಸರು ಬಂತು ಶಿವನ ಹಣೆಯಿಂದ ಎಂದರೆ ಮುಂಡದಿನದ ಉದಿಸಿದ ಕರಣ ಮುಂಡತ್ತಾಯ ಎಂಬ ಹೆಸರು ಬಂತು ಇತ್ಯಾದಿಯಾಗಿ ಅನೇಕ ಅಭಿಪ್ರಾಯಗಳಿವೆ ,
ಆದರೆ ಕಮಲಶಿಲೆಯ ದೇವಾಲಯದಲ್ಲಿ ಆರಾಧಿಸಲ್ಪಡುವ ಮುಂಡಂತಾಯ ಮುಂಡತ್ತಾಯ ದೈವವಲ್ಲ ಇದು ಬೇರೆಯೇ ಒಂದು  ದೈವ .(C).ಡಾ.ಲಕ್ಷ್ಮೀ ಜಿ ಪ್ರಸಾದ
"ಈತ ಮೂಲತ ಓರ್ವ ಮಲಯಾಳ ತಂತ್ರಿ .ದೇವಿಯ ಅನುಗ್ರಹವನ್ನು ಪಡೆದಿರುತ್ತಾನೆ.ಮುಂದೆ ದೈವತ್ವ ಪಡೆದು ಅಲ್ಲಿ ಆರಾಧಿಸಲ್ಪಡುತ್ತಾನೆ"ಎಂಬ ಮಾಹಿತಿಯನ್ನು ಶ್ರೀಯುತ ರವೀಶ ಆಚಾರ್ಯ ಅವರು ನೀಡಿದ್ದಾರೆ .
ಸಾಮಾನ್ಯವಾಗಿ ದೇವರ ಅನುಗ್ರಹಕ್ಕೆ ಪಾತ್ರರಾದವರು ದೇವಾಲಯ ಕಟ್ಟಿಸಿದವರು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ಅನೇಕ ಕಡೆ ಕಾಣಿಸಿಕೊಂಡಿದೆ ,ಕಾನಲ್ತಾಯ ಕೂಡ ಮೂಲತ ಓರ್ವ ಬ್ರಾಹ್ಮಣ ಮಂತ್ರವಾದಿ ಕಾಳಿಕಾಂಬೆಯ ಅನುಗ್ರಹ ಪಡೆದು ದೈವತ್ವ ಪಡೆದು ಆರಾಧಿಸಲ್ಪಡುವ ದೈವತ
ಅಂತೆಯೇ ಕಮಲಾ ಶಿಲೆಯ ದೇವಿಯ ಅನುಗ್ರಹ ಪಡೆದ ಮಲಯಾಳ ತಂತ್ರಿ ದೈವತ್ವ ಪಡೆದು ಆರಧಿಸಲ್ಪತ್ತಿರುವ ಸಾಧ್ಯತೆ ಇದೆ
ಕಮಲ ಶಿಲೆ ದೇವಾಲಯದಲ್ಲಿ ಮುಂಡಂತಾಯ ನ ಒಂದು ಮೂರ್ತಿ ಇದೆ ಇದು ಕುದುರೆ ಏರಿದ ವೀರನಂತೆ ಕಾಣಿಸುತ್ತದೆ .ಒಂದು ಕೈಯಲ್ಲಿ ನವಿಲು ಗಿರಿಯ ಕಟ್ಟನ್ನು,ಇನ್ನೊಂದು ಕೈಯಲ್ಲಿ ಮಂತ್ರ ದಂಡವನ್ನು ಹಿಡಿದ ಕುದುರೆ ಏರಿದ ಮೂರ್ತಿ ಇದು'ಕುದುರೆ ಏರಿರುವುದು ಈತ ಮೂಲತ ಅರಸು ಆಗಿದ್ದನೆ ?ಎಂಬ ಸಂಶಯ ಉಂಟುಮಾಡುತ್ತದೆ .
ಸಾಮಾನ್ಯವಾಗಿ ದೇವಾಲಯವನ್ನು ಕಟ್ಟಿಸಿದ ಅರಸುಗಳ ಒಂದು ವಿಗ್ರಹವನ್ನು ದೇವಾಲಯದ ಒಂದು ಕಡೆಪ್ರತಿಷ್ಟಾಪಿಸಿ ದೈವದ ನೆಲೆಯಲ್ಲಿ ಆರಾಧಿಸುವುದುಕಂಡುಬರುತ್ತದೆ ,ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಬ್ರಾಹ್ಮ ಕಾರಿಂಜೆತ್ತಾಯ ಎಂಬ ದೈವವಾಗಿ ಅಲ್ಲಿ ಆರಧಿಸಲ್ಪದುತ್ತಾ ಇದ್ದಾನೆ ಅಂತೆಯೇ ಸುಳ್ಯ ಚೆನ್ನ ಕೇಶವ ದೇವಾಲಯವನ್ನು ಕಟ್ಟಿದ ಬಲ್ಲಾಳ ಅರಸು ಚೆನ್ನಿಗರಾಯ ನಿಗೆ ಅಲ್ಲಿ ಆರಾಧನೆ ಇದೆ(C).ಡಾ.ಲಕ್ಷ್ಮೀ ಜಿ ಪ್ರಸಾದ
ಹಾಗೆಯೇ ಕಮಲಾ ಶಿಲೆಯ ದೇವಾಲಯವನ್ನು ಕಟ್ಟಿಸಿದಾತನೆ ಮುಂಡತ್ತಾಯ/ಮುಂಡಂತಾಯ ಎಂಬಹೆಸರಿನಲ್ಲಿದೈವತ್ವಪಡೆದುಆರಾಧಿಸಲ್ಪಡುವ ಸಾಧ್ಯತೆ ಇದೆ 
ಈಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ
ಮಾಹಿತಿ  ಮತ್ತು ಚಿತ್ರವನ್ನು ನೀಡಿದ ರವೀಶ ಆಚಾರ್ಯ ಅವರಿಗೆ ಧನ್ಯವಾದಗಳು

 

Saturday, 19 March 2016

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 301-302 ಅಯ್ಯೆರ್ ಬಂಟೆರ್ (c)ಡಾ.ಲಕ್ಷ್ಮೀ ಜಿ ಪ್ರಸಾದ

 

                     ಐವೆರ್ ಬಂಟೆರ್ ನೇಮ ಚಿತ್ರ ಕೃಪೆ :ಪರಶುರಾಮ ಸೃಷ್ಟಿ
ತುಳುನಾಡಿನಾದ್ಯಂತ ಅಲ್ಲಲ್ಲಿ ಐವೆರ್ ಬಂಟೆರ್ ಎಂಬ ದೈವಗಳಿಗೆ ಆರಾಧನೆ ನಡೆಯುತ್ತದೆ .ಐವೆರ್ ಎಂದರೆ ಐದು ಜನ ಎಂದು ಅರ್ಥ ಆದರೆ ಐವೆರ್ ಬಂಟೆರ್ ದೈವಗಳ ಆರಾಧನೆಯಲ್ಲಿ ಒಂದು ದೈವಕ್ಕೆ ಮಾತ್ರ ಆರಾಧನೆ ಇರುತ್ತದೆ ಇದರ ಒಂದಿಗೆ ಇನ್ನೊಂದಕ್ಕೂ ಸಾಂಕೇತಿಕವಾಗಿ ಆರಾಧನೆ ಇರುತ್ತದೆ ಆದರೆ ಐದು ಎಂಬಸಂಖ್ಯೆಗೆ ಅನುಗುಣವಾಗಿ ಐದು ಶಕ್ತಿಗಳ ಆರಾಧನೆ ಇರುವುದಿಲ್ಲ .ಇಲ್ಲಿ ಎರಡು ಶಕ್ತಿಗಳಿಗೆ ಮಾತ್ರ ಆರಾಧನೆ ಇರುತ್ತದೆ.


ಹೆಚ್ಚಾಗಿ  ಕಡೆ ಅಯ್ಯರ್ ಬಂಟ ದೈವಗಳಿಗೆ ಬೇರೆ ದೈವಗಳ ವೇಷ ಭೂಷಣದಲ್ಲಿಯೇ ಸಾಂಕೇತಿಕವಾಗಿ ಆರಾಧನೆ ಮಾಡುತ್ತಾರೆ

 ನನಗೆ ಇದು ಅಯ್ಯೆರ್ ಬಂಟೆರ್ ಇರಬಹುದೋ ಏನೋ ಎಂಬ ಸಂದೇಹ ಕಾಡುತ್ತಿತ್ತು .ಹಿಂದಿನ ಕಾಲದಲ್ಲಿ ಜೈನರು ಬ್ರಾಹಮನರನ್ನು ಅಯ್ಯ ಎಂದು ಕರೆಯುತ್ತಿದ್ದರು.ಹಾಗಾಗಿ ಇವರು ಬ್ರಾಹ್ಮಣ ಮೂಲ ದೈವಗಳು ಇರಬಹುದು ಎಂದು ನನಗೆ ಅನಿಸಿತ್ತು ಆದರೆ ಈ ಬಗ್ಗೆ ಮಾಹಿತಿ ಸಿಗದ ಕಾರಣ ಏನೊಂದೂ ನಿರ್ಣಯಕ್ಕೆ ಬರುವುದು ಕಷ್ಟ ಸಾಧ್ಯವಾಗಿತ್ತು copy rights reserved.(c)ಡಾ.ಲಕ್ಷ್ಮೀ ಜಿ ಪ್ರಸಾದ

ಕೆಲ ತಿಂಗಳ ಹಿಂದೆ ಕಡಂಬಾರು ವಿಷ್ಣುಮೂರ್ತಿ ದೇವಾಲಯಕ್ಕೆ ಹೋಗಿದ್ದೆ .ಅಲ್ಲಿ  ಸೂರ್ಯ ನಾರಾಯಣ ಅಯ್ಯರು ಮಾತಿಗೆ ಸಿಕ್ಕರು.ಅವರು ಕೆಲವು ಮಾಹಿತಿಯನ್ನು ನೀಡಿದರು .ದೇವಸ್ಥಾನದ ಎದುರುಬದಿಯಲ್ಲಿ ಎರಡು ಹಾಸುಗಲ್ಲಿನ ಮಾದರಿಯ ಕಲ್ಲುಗಳಿವೆ ಅವು ಅಯ್ಯರ್ ಬಂಟರ ಕಲ್ಲುಗಳು .ಅಲ್ಲಿ ಸಂಕ್ರಮಣಕ್ಕೆ ಹಾಗೂ ಪರ್ವ ದಿನಗಳಲ್ಲಿ ಆ ಎರಡು ದೈವಗಳಿಗೆ ತಂಬಿಲ ಮಾಡುತ್ತಾರೆ .
ಆ ಎರಡುಅಯ್ಯರ್ ಬಂಟರ್ ದೈವಗಳು ಮೂಲತಃ ಕಡಂಬಾರು ಅಯ್ಯರ ಕುಟುಂಬದ ಹಿರಿಯರು .ಕದಂಬ ಅರಸರ ಸಾಮಂತರಾಗಿ ಅಲ್ಲಿ ಜೈನ ಬಲ್ಲಾಳರು ಆಳ್ವಿಕೆ ನಡೆಸುತ್ತಿದ್ದರು .ಆಗಕದಂಬ ಅರಸರು ಕಟ್ಟಿಸಿದ ದೇವಾಲಯದ ಅರ್ಚನೆ ಹಾಗೂ ಉಸ್ತುವಾರಿಗಾಗಿ ಒಂದು ಬ್ರಾಹ್ಮ ಕುಟುಂಬವನ್ನು ನೇಮಿಸಿದ್ದರು .ಆ ಬ್ರಾಹ್ಮಣ ಕುಟುಂಬದವರನ್ನು ಜೈನ ಅರಸುಗಳು ಅಯ್ಯ ಎಂದು ಕರೆಯುತ್ತಿದ್ದರು.copy rights reserved.(c)ಡಾ.ಲಕ್ಷ್ಮೀ ಜಿ ಪ್ರಸಾದ
ಆ ಕುಟುಂಬದ ಹಿರಿಯರಲ್ಲಿ ಇಬ್ಬರು ವೀರರು ಆಗಿದ್ದರು ಅವರು ಜೈನ ಬಲ್ಲಾಳ ಅರಸುವಿನ ಸೇನಾಪತಿಗಳು ಆಗಿದ್ದು ಅವರ ಬಲ ಗೈ ಯಂತೆ ಇದ್ದರು .ಯುದ್ಧದಲ್ಲಿ ವಿಜಯವನ್ನು ತಂದುಕೊಟ್ಟಿದ್ದರು .
ಮುಂದೆ ಅವರು ದೈವತ್ವ ಪಡೆದು  ಅಯ್ಯರ್ ಬಂಟರ್ ಎಂಬ ಹೆಸರಿನಲ್ಲಿ  ಆರಾಧನೆ ಪಡೆಯುತ್ತಾರೆ.ಬಂಟ ಎಂದರೆ ವೀರ  ಎಂಬ ಅರ್ಥವೂ ಇದೆ .ಬಹುಶ ಬ್ರಾಹ್ಮಣ ವೀರರು ಎಂಬರ್ಥದಲ್ಲಿ ಅಯ್ಯರ್ ಬಂಟೆರ್ ಎಂಬ ಪದ ಬಳಕೆಗೆ ಬಂದಿರಬೇಕು .ಕಾಲಾಂತರದಲ್ಲಿ ಅದು ಐವೆರ್ ಬಂಟರ್ >ಬಂಟೆರ್ ಆಗಿದೆ.
ಕದಂಬರು ಆಳಿದಊರು ಎಂಬರ್ಥದಲ್ಲಿ ಕಡಂಬಾರು ಪದ ಬಳಕೆಗೆ ಬಂದಿದೆ ಎಂಬ ಐತಿಹ್ಯ ಪ್ರಚಲಿತವಿದೆ ಈ ಬಗ್ಗೆ ಹೆಚ್ಚಿನ ಅಧ್ಯಯದ ಅಗತ್ಯವಿದೆ copy rights reserved.(c)ಡಾ.ಲಕ್ಷ್ಮೀ ಜಿ ಪ್ರಸಾದ



Saturday, 16 January 2016

ಈಜೋ ..ಮಂಜೊಟ್ಟಿ ಗೋಣ (ನಾಟಕ ) (c) ಡಾ.ಲಕ್ಷ್ಮೀ ಜಿ ಪ್ರಸಾದ


      

ಈಜೋ ..ಮಂಜೊಟ್ಟಿ ಗೋಣ ಇದು ನನ್ನ  ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಎಂಬ ನಾಟಕ ಸಂಕಲನದಲ್ಲಿ ಪ್ರಕಟವಾಗಿರುವ ನಾಟಕ




ಈಜೋ ಮಂಜೊಟ್ಟಿ ಗೋಣ..ತುಳುನಾಡಿನಲ್ಲಿ ಪ್ರಚಲಿತವಿರುವ ಇದೇ ಹೆಸರಿನ ಪ್ರಸಿದ್ಧ ಪಾಡ್ದನದ ಕಥೆಯನ್ನು ಆಧರಿಸಿ ರಚಿಸಿದ ನಾಟಕವಿದು .ನಾನು ಅನಂತಾಡಿಯ ಶ್ರೀ ಕುಂಡ ಮುಗೇರ ಇವರಿಂದ 2005 ರಲ್ಲಿ  ಸಂಗ್ರಹಿಸಿದ ಈ ಪಾಡ್ದನದಲ್ಲಿ ಧೂಮಾವತಿ ದೈವಕ್ಕೆ ಹೇಳಿಕೊಂಡ ಹರಕೆಯನ್ನು ಮರೆತು ಅದೇ ಮುಂಡ್ಯೆಯ ಹಲಸಿನ ಹಣ್ಣನ್ನು ಕೊಯ್ದು ತಿಂದು ಕೋಣಗಳಿಗೆ ಹಾಕಿರುವ ಕಥಾನಕ ಇದೆ.ಹರಿಕೆಯನ್ನು ಮರೆತವರಿಗೆ ತಕ್ಕ ಶಿಕ್ಷೆ ಯನ್ನು ಭೂತಗಳು ವಿಧಿಸುವುದು ತುಳು ಸಂಸ್ಕೃತಿಯಲ್ಲಿ ಸಾಮಾನ್ಯ  ವಿಚಾರ .ಅಂತೆಯೇ ಈ ದೈವದ ಆಗ್ರಹಕ್ಕೆ ತುತ್ತಾಗಿ ಕೋಣ ಮತ್ತು ಮೂಲದ ಬಬ್ಬು ಮಾಯವಾಗಿದ್ದಾನೆ ಎಂಬ ಸೂಚನೆ ಈ ಪಾಡ್ದನದಲ್ಲಿದೆ ,ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಇದು ವರ್ಗ ಸಂಘರ್ಷದ ಕಥಾನಕ.ಮೂಲದವರು ಇಳಿಯಬಾರದ ಸತ್ಯದ ಗದ್ದೆಗೆ ಇಳಿದು ಬಬ್ಬು ಮತ್ತು ಕೋಣ ಮಾಯವಾಗುತ್ತಾರೆ ಎಂದು ಪಾಡ್ದನದ ಕಥೆಯಲ್ಲಿ ಹೇಳುತ್ತಾರೆ  ,ಅಲೌಕಿಕತೆ ಮತ್ತು ವಾಸ್ತವಿಕತೆ ಎರಡನ್ನು ಸಮನ್ವಯ ಮಾಡಿ ,ಒಂದಷ್ಟು ಕಲ್ಪನೆ ಸೇರಿಸಿ ಈ ನಾಟಕವನ್ನು ರಚಿಸಲಾಗಿದೆ -copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
    ಪಾತ್ರ ಪರಿಚಯ ;
ಮಂಜನಾಳ್ವ :ರೆಂಜಾಳಡಿ ಬರಿಕೆ ಬೀಡಿನ ಒಡೆಯ
ದಾರಾಮು:  ಮಂಜನಾಳ್ವರ ಮಡದಿ
ಬಬ್ಬು: ಮೂಲದ ಕೆಲಸಗಾರ
ಬೊಳ್ಳ :ಕೋಣ
ಜೋಗಿ ಪುರುಷ :ಜೋಗಿ ಸಮುದಾಯಕ್ಕೆ ಸೇರಿದ ವ್ಯಕ್ತಿ 
ಗೌಡ :ಕೋಣಗಳ ವ್ಯಾಪಾರಿ
ಪಾಡ್ದನಗಾರ್ತಿ ಅಜ್ಜಿ  :ಸೂತ್ರಧಾರನ ಕೆಲಸವನ್ನು ನಿರ್ವಹಿಸುವ ಪಾತ್ರ
ಮೊಮ್ಮಗಳು :ಕತೆಗಾಗಿ ಅಜ್ಜಿಯನ್ನು ಕಾಡುವ ಮಗು






    ಈಜೋ.. ಮಂಜೊಟ್ಟಿ ಗೋಣ
                             ದೃಶ್ಯ -1
(ಪಾಡ್ದನಗಾರ್ತಿ ಹಿರಿಯಜ್ಜಿಯ ಮನೆ )
ಮೊಮ್ಮಗಳು :ಅಜ್ಜಿ ಅಜ್ಜಿ ನನಗೊಂದು ಕಥೆ ಹೇಳಜ್ಜಿ ..
ಅಜ್ಜಿ :ಅಯ್ಯೋ ಕಂದ ಕಥೆ ಹೇಳಬೇಕೇ ನಿನಗೆ ? ರಾಜ ರಾಣಿಯರ ಕಥೆ ಹೇಳಲೇ ?ಅಥವಾ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಲೇ ಚಿನ್ನು ..
ಮೊಮ್ಮಗಳು :ಊ ಹ್ಹು,ಅದೆಲ್ಲ ಕಥೆ ನೀನು ಮೊದಲೇ ಹೇಳಿದ್ದೀಯ ,ಆ ಕಥೆ ಬೇಡ ..
ಅಜ್ಜಿ :ಹಾಗಾದ್ರೆ ರಾಕ್ಷಸಿ ಅಜ್ಜಿ ಕಥೆ ಆಗಬಹುದಾ?
ಮೊಮ್ಮಗಳು :ಎಂಥ ಅಜ್ಜಿ ..ಅದೊಂದೇ ಕಥೆ ಗೊತ್ತಿರೋದ ಅಜ್ಜಿ ನಿಂಗೆ ಅದು ಬೇಡ ನನಗೆ ಭಯ ಆಗುತ್ತೆ ಅಜ್ಜೀ..ಅಬ್ಬ !
 ಅಜ್ಜಿ  :ಮತ್ತೇನು ಕಥೆ ಹೇಳಲಿ ಕಂದ ನಿನಗೆ ?
ಮೊಮ್ಮಗಳು :ಅಜ್ಜಿ ಚಂದಮಾಮ ,ಬಾಲಮಿತ್ರದ ಕಥೆ ಹೇಳು ಅಜ್ಜೀ ..
ಅಜ್ಜಿ  :ಅಯ್ಯೋ ಕಂದ ನನಗೆ ಅದನ್ನು ಓದಲು ಬರುವುದಿಲ್ಲವಲ್ಲ !ಏನು ಮಾಡಲಿ ?

ಮೊಮ್ಮಗಳು :ಹಾಗಾದ್ರೆ ನೀನು ಇಷ್ಟು ದಿನ ಹೇಳಿದ ಕಥೆ ಹೇಗೆ ಓದಿದ್ದು ?ಓದಕ್ಕೆ ಬರಲ್ಲ ಅಂತ ಆದ್ರೆ ನಿಂಗೆ ಈ  ಕಥೆಗಳು ಎಲ್ಲಿಂದ ಹೇಗೆ ತಿಳಿಯಿತು ?

ಅಜ್ಜಿ :ನಮ್ ಕಾಲದಲ್ಲಿ ಓದು ಬರಹ ಇರಲಿಲ್ಲ ಮಗ ,ನಾವು ಗದ್ದೆಯಲ್ಲಿ ನಾಟಿ ಮಾಡುವಾಗ ,ನೇಜಿ ನೆಡುವಾಗ ಕೀಳುವಾಗ ನಮ್ಮ ಹಿರಿಯರು ಪಾಡ್ದನ ,ಪದಗಳನ್ನು ಹೇಳುತಿದ್ದರು ..
ಮೊಮ್ಮಗಳು :ಏನು ಏನು ?ಪಾದ್ದನವೇ ?ನಮ್ಮ ಶಾಲೆಯಲ್ಲಿ ನಮಗೆ ಇಂದು ಪಾಡ್ದನಗಳಲ್ಲಿ  ನಮ್ಮ ತುಳುನಾಡಿನ   ಸಂಸ್ಕೃತಿ ಇತಿಹಾಸ ಅಡಗಿದೆ ಎಂದು ಹೇಳಿದ್ದಾರೆ ಅಜ್ಜಿ ..ನನಗೆ ಅದನ್ನೇ ಹೇಳು ಅಜ್ಜಿ..ಪಾಡ್ದನ ಹೇಗಿರುತ್ತೆ ಅಜ್ಜಿ ..?
 ಅಜ್ಜಿ :ಹೌದ ಮಗ ?ಹಾಗಾದ್ರೆ ಇಂದು ಈಜೋ ಮಂಜೊಟ್ಟಿ ಗೋಣ ಎಂಬ ಪಾಡ್ದನದ ಕಥೆಯನ್ನು ಹೇಳುತ್ತೇನೆ ಕೇಳು ..
ಮೊಮ್ಮಗಳು :ಕೋಣನ ಕಥೆಯ ?ನಮ್ಮ ಹಟ್ಟಿಯಲ್ಲಿ ಉಂಟಲ್ಲ ಕೋಣ ಬೊಳ್ಳ !ಅದರ ಕಥೆಯ ?!ಆಗಬಹುದು ಅಜ್ಜಿ ಅದೇ ಹೇಳು ..
ಅಜ್ಜಿ :ಹೌದು ಮಗ ,ನಮ್ಮ ಬೊಳ್ಳನಂತೆ ಕಂಬಳ ಓಟದಲ್ಲಿ ಗೆದ್ದು ಮಂಜೊಟ್ಟಿ ಏರಿ ಬಂದ ಬೊಳ್ಳ ಎಂಬ ಕೋಣ,ಅದನ್ನು ಸಾಕಿ ಸಲಹಿದ ಮೂಲದ ಹುಡುಗ ಬಬ್ಬು ಮತ್ತು ಒಡೆಯ ಮಂಜಣ್ಣ ಆಳ್ವರ ಕಥೆಯಮ್ಮಾ ಅದು ..
ಮೊಮ್ಮಗಳು :ಮಂಜೊಟ್ಟಿ ಅಂದರೆ ಏನಜ್ಜಿ ..
ಅಜ್ಜಿ: “ಓ ಅದಾ ಕೋಣಗಳು ವೇಗವಾಗಿ ಓಡಿ  ಬಂದಾಗ ಅವರ ವೇಗ ಕಡಿಮೆ ಮಾಡಲು ,ಹತ್ತಿ ಬರಲು ಸ್ವಲ್ಪ ಎತ್ತರಕ್ಕೆ ಮಣ್ಣು ಹಾಕಿ ಚಿಟ್ಟೆ ಮಾಡಿರುತ್ತಾರೆ ಅದನ್ನೇ ಮಂಜೊತ್ತಿ ಅಂತ ಹೇಳೋದು ..
ಮೊಮ್ಮಗಳು :ಹೌದಾ ಅಜ್ಜಿ ..ಹಾಗಾದ್ರೆ ಅದೇ ಪಾಡ್ದನದ ಕಥೆ ಹೇಳು ಅಜ್ಜೀ ..ನನ್ನ ಅಜ್ಜಿ ಪಾಡ್ದನಗಾರ್ತಿ ಅಂತ ನಾನು ನಾನು ಶಾಲೆಗೆ ಹೋಗಿ ಜಂಬದಿಂದ ಹೇಳ್ತೀನಿ ಅಜ್ಜೀ ,,ನೋಡ್ತಿರು ..
 ಅಜ್ಜಿ: ನನ್ನ ಬಂಗಾರ ನೀನು ಹೇಳೋದೇನು ಬೇಡ ಆದರೆ ಪಾಡ್ದನ ಅಂದ್ರೆ ಅಷ್ಟು ಹೆಮ್ಮೆ ಪ್ರೀತಿ ಇದೆಯಲ್ಲ ನಿನಗೆ ಅದೇ ಸಾಕು ನನಗೆ ಕೇಳು ಈಗ ..  
ಪಾಡ್ದನಗಾರ್ತಿ ಅಜ್ಜಿ  : ಈಜೋ.. ಮಂಜೊಟ್ಟಿ ಗೋಣ..
ಈಜೋ.. ಮಂಜೊಟ್ಟಿ ಗೋಣ..
  ಡೆನ್ನಾನ ಡೆನ್ನಾನ ಡೆನ್ನ ಡೆನ್ನ  ಡೆನ್ನಾನ ಏ ..
ಕೆಳಗಿನ ರೆಂಜಳಡಿ ಮೇಲಿನ ರೆಂಜಳಡಿ
ರೆಂಜಾಲ ಬೀಡಿನಲ್ಲಿ ದೊಡ್ಡವರು ಬಲ್ಲಾಳರು
ಬೀಡಿನಲ್ಲಿ ಇದ್ದಾರೆ ಮಂಜನಾಳ್ವರು
ಹಿರಿ ಹಿರಿಯರ ಕಾಲದ ಬೀಡು
ಆನೆಯನ್ನೇ ಕಟ್ಟಿ ಆಳಿದ ಬೀಡು
ಕುದುರೆಯನ್ನೇ ಮೆರೆದ ಬೀಡು
 ಸಿರಿ ವೈಭವದ  ತವರು ..
  ಡೆನ್ನಾನ ಡೆನ್ನಾನ ಡೆನ್ನ ಡೆನ್ನ  ಡೆನ್ನಾನ ಏ ..
 ಮೂರು ಬೆಟ್ಟಿನ ಆರು ಕಂಬಳ ಗದ್ದೆ
ಸಾವಿರದೊಂದು ಮುಡಿಯ ಗದ್ದೆ ..
ನೂರು ಸಾವಿರ ವೀರರ ನೆಲೆಯು
ಅಂದಿಗೆ ರೆಂಜಾಲ ಬೀಡಿಗೆ ..
  ಡೆನ್ನಾನ ಡೆನ್ನಾನ ಡೆನ್ನ ಡೆನ್ನ  ಡೆನ್ನಾನ ಏ ..
 ಬೆಳಗ್ಗೆ ಬೇಗನೆ ಎದ್ದರು ಮಂಜನಾಳ್ವರು ..
ತನ್ನೊಂದು ಸಿರಿ ಮೋರೆ ತೊಳೆದರು
ಹಾರೆ ಇಡುವ ಕೊಟಡಿಗೆ ಹೋದರು
ಹಾರೆ ತೆಗೆದು ಹೆಗಲಿಗೆ ಇಡುವರು
ಬೈಲಿನ ಗದ್ದೆಗೆ ಬರುವರು ಆಳ್ವರು ..
  ಡೆನ್ನಾನ ಡೆನ್ನಾನ ಡೆನ್ನ ಡೆನ್ನ  ಡೆನ್ನಾನ ಏ ..
 (ಮಂಜನಾಳ್ವ ಪಾದ್ದನಕ್ಕೆ ಅಭಿನಯ ಮಾಡುತ್ತಾನೆ )
             (ಅಜ್ಜಿ ಮತ್ತು ಮೊಮ್ಮಗಳ ನಿರ್ಗಮನ )-copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
(ಗದ್ದೆಯಲ್ಲಿ ಮೂಲದ ಕೆಲಸಗಾರ ನಂಬಿಕೆಯ ಹುಡುಗ ಗದ್ದೆಯ ಕೆಲಸ ಮಾಡಿಕೊಂಡು ಇದ್ದಾನೆ )
ಮಂಜನಾಳ್ವ: ಓ ಏನು ಬಬ್ಬು ಈವತ್ತು ಬೆಳಗ್ಗಿನ ಜಾವದ ಈ ಚಳಿಗೆ ಗದ್ದೆಗೆ ಬಂದು ಬಿಟ್ಟಿದ್ದಿ ?ನಿನ್ನೆಯಷ್ಟೇ ಜ್ವರ ಬಂದು ಬಿಟ್ಟಿತ್ತು ನಿನಗೆ ,ಈವತ್ತು ಯಾಕೆ ಕೆಲಸಕ್ಕೆ ಬಂದೆ ?
ಬಬ್ಬು : ಅಡ್ಡ ಬಿದ್ದೆ ಒಡೆಯ ..ಅದೇನು ಮಹಾ ಜ್ವರ ಬಿಡಿ ಬುದ್ದಿ ..ಡೆಂಜಿ ಒಕ್ಕಿ ಮಾಟೆ ಮಾಡಿತ್ತು ಒಡೆಯ ..ನೀರು ಹೋಗುತ್ತಾ ಇತ್ತು ಅದನ್ನು ಸರಿಮಾಡಿ ಹೋಗೋಣ ಅಂತ ಬಂದೆ ಒಡೆಯ ..ಅದು ಸರಿ ಒಡೆಯ ನೀವ್ಯಾಕೆ ಗದ್ದೆ ಕೆಲಸಕ್ಕೆ ಬಂದ್ರಿ ,ನಾನಿದ್ದೀನಲ್ಲ ಒಡೆಯ ಏನು ಮಾಡಬೇಕು ಹೇಳಿ ಒಡೆಯ ..ನಾನಿರುವಷ್ಟು ದಿನ ನೀವು ಕೊಟ್ಟು ಪಿಕ್ಕಾಸು ಮುತ್ತ ಬಾರದು ಒಡೆಯ ..ಕೊಡಿ ಅದನ್ನು ಇಲ್ಲಿ ..(ಹಾರೆಯನ್ನು ತೆಗೆದುಕೊಳ್ಳುವನು )
ಮಂಜನಾಳ್ವ : ನಿನ್ನ ಪ್ರೀತಿ ವಿಶ್ವಾಸಕ್ಕೆ ನಾನೇನು ಕೊಡಲಿ ಬಬ್ಬು ..ನಮ್ಮ ಬೀಡು ಅಂದಿನ ವೈಭವ ಕಳೆದು ಕೊಂಡಿದೆ ..
ಬಬ್ಬು :ನಮ್ಮ ಹೊಟ್ಟೆಗೆ ಬಟ್ಟೆಗೆ ಕೊರತೆಯಾಗದಂತೆ ನೀವೇ ನೋಡಿ ಕೊಳ್ತಿದ್ದೀರಿ ಒಡೆಯ ..ಇನ್ನು ನನಗೆ ಬೇರೇನು ಬೇಕು ಹೇಳಿ ..ನಮ್ಮಂಥ ಒಡೆಯ ಇರುವಾಗ ನಮಗೇನು ಕೊರತೆ ?ಹೇಳಿ ಒಡೆಯ
 ಮಂಜನಾಳ್ವ :ಹಾಗೆ ಹೇಳಬೇಡ ಬಬ್ಬು ..ನೀನು ನಮ್ಮ ಮನೆ ಮಗನಂತೆ ವಿಶ್ವಾಸತೋರಿ  ದುಡಿಯುತ್ತಿರುವೆ ..ನಿನಗೆ ಏನಾರು ಆಸೆ ಇದ್ದರೆ ಹೇಳು ..ನಾನು ಕೊಡುತ್ತೇನೆ
ಬಬ್ಬು :ಹಾಗಾದರೆ ಒಂದು ವಿಷಯ ಕೇಳಲೇ ಒಡೆಯ
ಮಂಜನಾಳ್ವ : ಹ್ಹೂ ಕೇಳು ಮತ್ತೆ
ಬಬ್ಬು :ನಮ್ಮ ಈ ಬೀಡು ಹಿರಿಯರ ಕಾಲದಿಂದ ಆನೆ ಕುದುರೆಗಳನ್ನು ಕಟ್ಟಿ ಮೆರೆದ ಬೀಡು ಅಲ್ಲವೆ ಒಡೆಯ ..
ಮಂಜನಾಳ್ವ :ಹೌದಪ್ಪಾ ಬಬ್ಬು ಹೌದು ..ಆದರೆ ಈಗ ಏನಿದೆ ..ಎಲ್ಲ ಬರಿದಾಗಿದೆ
ಬಬ್ಬು :ಅದಕ್ಕೆ ಒಡೆಯ ನಾವು ಎರಡು ಗೋಣ ಕಂಜಿಗಳನ್ನಾದರು ಸಾಕುವ ಒಡೆಯ
ಮಂಜನಾಳ್ವ :ಹೌದು ಬಬ್ಬು ನೀನು ಹೇಳುವುದು ಸರಿಯೇ ಇದೆ ,ಹೇಗೂ ಒಂದು ಕೋಣ ಕಾಳ ಮನೆಯಲ್ಲಿದೆ ,ಇದಕ್ಕೆ ಒಂದು ಜೊತೆ ಕೋಣವನ್ನು ಇಂದೇ   ಸುಬ್ರಹ್ಮಣ್ಯಕ್ಕೆ ಹೋಗಿ ತರೋಣವಂತೆ ..ನೀನು ಹೊರಟು ಬಾ ,ಹೋಗೋಣ
ಬಬ್ಬು :ಆಗಲಿ ಒಡೆಯ
(ಮಂಜನಾಳ್ವರು ಮನೆಗೆ ಬರುವರು,ಮಡದಿ ದಾರಾಮು ವನ್ನು ಕರೆಯುವರು )
ಮಂಜನಾಳ್ವ:ಓ ದಾರಾಮು ,ಓ ದಾರಾಮು ಎಲ್ಲಿರುವೆ ,ನಮಗಿಂದು ಸುಬ್ರಹ್ಮಣ್ಯಕ್ಕೆ ಹೋಗಲಿದೆ ,ಬೇಗನೆ ಅಡಿಗೆ ಆಗ ಬೇಕು .-copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
ದಾರಾಮು : (ಹೊರ ಬಂದು ) ಆಯಿತು ಸ್ವಾಮಿ ಬೇಗನೆ ಬಿಸಿ ನೀರು ಕಾಯಿಸಿ ಅಡಿಗೆ ಆಡುತ್ತೇನೆ
(ಅಜ್ಜಿಯ ಪ್ರವೇಶ  )
ಪಾಡ್ದನ :
  ಡೆನ್ನಾನ ಡೆನ್ನಾನ ಡೆನ್ನ ಡೆನ್ನ  ಡೆನ್ನಾನ ಏ ..
ಬೆಳಗ್ಗೆ ಬೇಗನೆ ಎದ್ದಳು ದಾರಾಮು
ಕೆದರಿದ ತಲೆಗೆ ಎಣ್ಣೆಯ ಹಾಕುವಳು ದಾರಾಮು
ಮಲಗಿದ ಚಾಪೆ ಮದಿಚಿದಳು ದಾರಾಮು
ಹಿಡಿಸೂಡಿ ಹಿಡಿದಳು ದಾರಾಮು
ಒಳ ಹೊರಗೆ ಗುಡಿಸಿದಳು ದಾರಾಮು
ಹುಲ್ಲಿನ ಉರುವಲು ಹಿಡಿದಳು ದಾರಾಮು
ಒಲೆಯ ಬೂದಿ ಗೋರಿದಳು ದಾರಾಮು
ಹಟ್ಟಿಗೆ ಹೋದಳು ದಾರಾಮು
ಕಪಿಲೆ ಹಸುವ ಕರೆದಳು ದಾರಾಮು
ಹಾಲು ಹಿಂಡಿ ಬಂದಳು ದಾರಾಮು
ಒಳಗಿನ ಸೂತ್ರದ ಸಿಕ್ಕಕ್ಕೆ ಸಿಕ್ಕಿಸಿದಳು ದಾರಾಮು
ನೀರು ತಂದಳು ದಾರಾಮು
ಕೆಂಡದ ಒಲೆಗೆ ಇಟ್ಟಳು ದಾರಾಮು
ಅಟ್ಟದಿಂದ  ಮುಡಿ ಅಕ್ಕಿ ತಂದಳು ದಾರಾಮು
ಪಾತ್ರೆಯಲ್ಲಿ ಬೇಯಿಸಲು ಇಟ್ಟಳು ದಾರಾಮು
ಈಜೋ ..ಮಂಜೊಟ್ಟಿ ಗೋಣ ..
  ಡೆನ್ನಾನ ಡೆನ್ನಾನ ಡೆನ್ನ ಡೆನ್ನ  ಡೆನ್ನಾನ ಏ ..
 ಬೆಳ್ಳಿಯ ಬುಟ್ಟಿಯ ತೆಕ್ಕೊಂಡಳು ದಾರಾಮು
ಕಂಚಿನ ಪಾತ್ರೆ ಕತ್ತಿ ತಂದಳು ದಾರಾಮು
ತೋಟಕ್ಕೆ ಹೋದಳು ದಾರಾಮು
ದೊಡ್ಡ ಬದನೆ, ಉದ್ದನೆ ಅಲಸಂಡೆ
ಮುಗ್ಗಿಲಿನ ಸೋರೆಕಾಯಿ ,ಬೆಂಡೆ
ಬೆಟ್ಟಿನ ಕೆಂಬುಡೆ ,ಕೆಮ್ಮಣ್ಣಿನ ಕುಂಬಳ
ಧಾರೆ ಇರುವ ಹೀರೆ ,ಬಣ್ಣದ ಪಡುವಲ
ಬಳ್ಳಿಯ ಎಳೆ ತೊಂಡೆಕಾಯಿ 
ಬಗೆ ಬಗೆಯ ತರಕಾರಿ ಕೊಯ್ದಳು ದಾರಾಮು
ತೊಂಡೆ ಗುದ್ದಿ ಎಣ್ಣೆಗೆ ಹಾಕುವಳು ದಾರಾಮು
ಹಾಗಲ ತುಂಡರಿಸಿ ಉಪ್ಪಿಗೆ ಹಾಕುವಳು ದಾರಾಮು
ಮೆಣಸು ಸೇರಿಸಿ ಮುನ್ನೂರು ಬಗೆ ಅಡಿಗೆ
ಸರ ಸರನೆ ಮಾಡಿದಳು ದಾರಾಮು
  ಡೆನ್ನಾನ ಡೆನ್ನಾನ ಡೆನ್ನ ಡೆನ್ನ  ಡೆನ್ನಾನ ಏ ..
( ದಾರಾಮು ಪಾದ್ದನಕ್ಕೆ ಅಭಿನಯಿಸುತ್ತಾಳೆ )-copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
 ದಾರಾಮು : (ಸುತ್ತ ಮುತ್ತ ನೋಡಿ ಗಂಡನನ್ನು ಕರೆದು ಹೇಳುತ್ತಾಳೆ  ) ಓ ಇಕೊಳ್ಳಿ  ಅಡಿಗೆ ಆಗಿದೆ,ಸ್ನಾನಕ್ಕೆ ನೀರು ಬಿಸಿ ಇದೆ.ಸ್ನಾನ ಮಾಡಿ ಬಂದರೆ ಊಟ ಬಡಿಸುತ್ತೇನೆ
ಮಂಜನಾಳ್ವ :ಸರಿ ಹಾಗಾದರೆ ಈಗಲೇ ಬಂದೆ, ಮೈಗೆ ಹಚ್ಚಲು ಮೈ ಎಣ್ಣೆ ,ಉಗುರಿಗೆ ಉಗುರೆಣ್ಣೆ,ಸೊಂಟಕ್ಕೆ ಸೋಲೆಣ್ಣೆ,ಪಾದಕ್ಕೆ ಕರಿಯೆಣ್ಣೆ  ಬೆನ್ನಿಗೆ ಬೆನ್ನಿನ ಎಣ್ಣೆ ನೆತ್ತಿಗೆ ನೈ ಎಣ್ಣೆ ತಂದು ಕೊಡು ಹಚ್ಚಿ ಸ್ನಾನ ಮಾಡಿ ತುಳಸಿಗೆ ನೀರು ಹೊಯ್ದು ಬರುವೆ
ದಾರಾಮು :ತಂದಿದ್ದೇನೆ ತೆಗೆದುಕೊಳ್ಳಿ ,ನಾನು ಹಚ್ಚಲೇ ?
ಮಂಜನಾಳ್ವ :ನೀನು ಇಷ್ಟು ನಲ್ಮೆಯಿಂದ ಕೇಳುವಾಗ ನಾನು ಹೇಗೆ ಬೇಡ ಎನ್ನಲಿ ಹಚ್ಚು ಬಾ ದಾರಾಮು
(ದಾರಾಮು ಎಣ್ಣೆ ಹಚ್ಚುವಳು )
ಮಂಜನಾಳ್ವ :ಸರಿ ನೀನು ಎಲೆ ಇಡು ಅಷ್ಟರಲ್ಲಿ ಸ್ನಾನ ಮಾಡಿ ಬರುವೆ
ದಾರಾಮು : ಸರಿ
(ಅವಳು ಮಣೆ ಇಟ್ಟು ಎಲೆ ತೊಳೆದು ಇಟ್ಟು ಪಲ್ಯ ಬಡಿಸುತ್ತಾಳೆ ,ತುಳಸಿಗೆ ನೀರೆರೆದು ಬಂದ ಆಳ್ವ ಊಟ ಮಾಡುತ್ತಾನೆ )
ಮಂಜನಾಳ್ವ :ಇನ್ನು ನಾವು ಸುಬ್ರಹ್ಮಣ್ಯದ ಜಾತ್ರೆಗೆ ಹೋಗಿ ಒಂದು ಗೋಣ ಕಂಜಿಯನ್ನು ತರುತ್ತೇವೆ ,ನಾನು ಬರುವ ತನಕ ಜಾಗ್ರತೆಯಿಂದ ಇರು
ದಾರಾಮು :ಆಯ್ತು ಸ್ವಾಮಿ ,ನೀವು ಹೋಗುವ ಮುಂಚೆ ನಮ್ಮ ಮನೆ ದೈವ ಒರಿ ದೆಯ್ಯ ಧೂಮಾವತಿಗೆ ಒಂದು ತುಪ್ಪದ ದೀಪ ಅರಿಕೆ ಮಾಡಿ ಹೋಗುವುದು ಒಳ್ಳೆಯದಲ್ಲವೇ ?
ಮಂಜನಾಳ್ವ : ಹೌದು ದಾರಾಮು ,ನೀನು ಸರಿಯಾದ ಸಮಯಕ್ಕೆ ನೆನಪಿಸಿದೆ ನೋಡು ,ಬಾ ದೈವಕ್ಕೆ ದೀಪ ಇಡು ,ಅರಿಕೆ ಮಾಡುವ ,
(ದಾರಾಮು ದೀಪ ಬೆಳಗುತ್ತಾಳೆ ಇಬ್ಬರು ನಮಸ್ಕರಿಸುತ್ತಾರೆ )
ಮಂಜನಾಳ್ವ : (ಕೈ ಮುಗಿದು ) ಅಮ್ಮ ತಾಯಿ ಜುಮಾದಿ .ನಮ್ಮ ಹಿರಿಯರ ಕಾಲದಿಂದಲೂ ನಾವು ನಿನ್ನನ್ನು ನಂಬಿಕೊಂಡು ಬಂದಿದ್ದೇವೆ ,ನೀನು ಕಣ್ಣಿನ ರೆಪ್ಪೆಯಂತೆ ಪ್ರತಿ ಹೆಜ್ಜೆಗೂ ನಮಗೆ ರಕ್ಷಣೆ ನೀಡಿ ಕಾಪಾಡಿಕೊಂಡು ಬಂದು ಸಲಹಿದ್ದಿ ,ಹಿರಿಯರ ಕಾಲದಲ್ಲಿ ಅನೆ ಕುದುರೆಗಳನ್ನು ಕಟ್ಟಿ ಮೆರೆದ ಬೀಡು ನಮ್ಮದು ಅಲ್ಲವೇ ತಾಯಿ ?ಈಗ ಒಂದು ಜೊತೆ ಕೋಣಗಳನ್ನು ಆದರೂ ಕಟ್ಟಬೇಕು ಎಂಬ ಆಸೆ ನಮ್ಮದು ..ನಮಗೆ ಜಾತ್ರೆಯಲ್ಲಿ ಒಳ್ಳೆ ಕೋಣ ಸಿಕ್ಕಿದರೆ ಹಿಂದೆ ಬಂದು ಒಂದು ತುತ್ತು ತಿಂದು ಎರಡನೇ ತುತ್ತು ಬಾಯಿಗೆ ಇಡುವ ಮೊದಲು ನಿನಗೆ ನೇಮಕ್ಕೆ ಬಾಳೆ ಗೊನೆ ಕಡಿಸುತ್ತೇವೆ ತಾಯೇ..ನಮ್ಮನ್ನು ಅನುಗ್ರಹಿಸು
(ಮಂಜನಾಳ್ವ ಮಾತು ಬಬ್ಬು ಹೊರಡುತ್ತಾರೆ )
ಮಂಜನಾಳ್ವ :ಓ  ಬೇಕಾದಷ್ಟು ದನಕರು ಕೋಣಗಳು ಬಂದಿವೆ ,ನಮಗೆ ಯಾವುದು ಆದೀತು ನೋಡು ಬಬ್ಬು .
(ಕೋಣಗಳ ಪರೀಕ್ಷೆ ಅಭಿನಯ )
ಬಬ್ಬು :ಒಡೆಯ ಒಂದು ಕೋಣ ಕೂಡಾ ಸರಿಯಾದುದು ಸಿಗುತ್ತಿಲ್ಲ ,ಒಂದರ ಕಾಲು ಕುಂಟು ,ಒಂದರ ಕಣ್ಣು ಕುರುಡು ,ಮತ್ತೊಂದರ ಕೈ ಓರೆ,ಇನ್ನೊಂದು ಎಡಕ್ಕೆ ಎಳೆದರೆ ಬಲಕ್ಕೆ ಬಳಕೆ ಎಳೆದರೆ ಎಡಕ್ಕೆ ಹೋಗುತ್ತಿದೆ ..ಮತ್ತೊಂದಕ್ಕೆ ಹಲ್ಲು ಉದುರಿದೆ ..ಏನು ಮಾಡುವುದು
ಮಂಜನಾಳ್ವ :ಅಮ್ಮಾ ಒರಿ ದೆಯ್ಯ ಧೂಮಾವತಿ ನೀನೇ ದಾರಿ ತೋರ ಬೇಕು
(ಅಷ್ಟರಲ್ಲಿ ಅಲ್ಲಿ ಒಬ್ಬ ಜೋಗಿ ಪುರುಷ ಬರುತ್ತಾನೆ )
ಜೋಗಿ ಪುರುಷ :ಕೋಣ ಕೊಳ್ಳಲು ಸಂತೆಗೆ ಬಂದಿರಲ್ಲವೇ ?ಕೋಣಗಳು ಸಿಗಲಿಲ್ಲವೇ ಬಲ್ಲಾಳರೆ?
ಮಂಜನಾಳ್ವ :ನೀನು ನಾಲ್ಕು ಮನೆ ಬೇಡಿ ತಿನ್ನುವ ಜೋಗಿ ,ನಿನಗೇಕೆ ಅಲ್ಲ ಸಲ್ಲದ ವಿಚಾರ ?
ಜೋಗಿ ಪುರುಷ : ನಾನು ನಾಲ್ಕು ಮನೆ ಬೇಡಿದರೆ ಏನಂತೆ ಬಲ್ಲಾಳರೆ ?ಕುರ್ನಾಡಿನ ದೈವವೇ ಬೇಡಿದೆಯಂತೆ ! ಬನ್ನಿ ನನ್ನ ಜೊತೆ ನಿಮಗೆ ಬೇಕಾದ ಕೋಣಗಳು ಇರುವ ಜಾಗ ತೋರುತ್ತೇನೆ ದೈವ ಜುಮಾದಿಯ ಪ್ರೇರಣೆ ಆಗಿದೆ .
ಮಂಜನಾಳ್ವ: ಸರಿ ಹಾಗಾದರೆ ನಡೆ
ಗೌಡ : ಬನ್ನಿ ಬನ್ನಿ ನೋಡಿ ಇದೊಂದು ಶುಭ ಲಕ್ಷಣದ ಗೋಣ ಕಂಜಿ ,ಬಲಿಷ್ಟವಾಗಿದೆ ಜೊತೆಗೆ ಹೇಳಿದಂತೆ ಕೇಳುತ್ತದೆ ಕೂಡಾ.

ಬಬ್ಬು :ಒಡೆಯ ಒಡೆಯ ಇದೊಂದು ಕೋಣ ಬಹಳ ಚೆನ್ನಾಗಿದೆ ಶಕ್ತಿ ಶಾಲಿ ಕೈಕಾಲುಗಳು ಜೊತೆಗೆ ಹೇಳಿದಂತೆ ಕೇಳುವ ಗುಣ ಕೂಡ ಇದಕ್ಕಿದೆ ನಮಗೆ ಇದೇ ಆಗ ಬಹುದು ಒಡೆಯ .
ಮಂಜನಾಳ್ವ :ಸರಿ ಹಾಗಾದರೆ ಇದರ ಬೆಲೆ ಕೇಳುವ (ವ್ಯಾಪಾರಿ ಗೌಡನ ಕಡೆ ತಿರುಗಿ )ಏನಪ್ಪಾ ಗೌಡ ಎಷ್ಟು ಬೆಲೆ ಹೇಳುತ್ತಿ ಈ ಕೋಣಕ್ಕೆ ?
ಗೌಡ :ಹೇಳಲಿಕ್ಕೆ ಏನಿದೆ ಬಲ್ಲಾಳರೆ ? ಕೋಣದ ತಲೆಯಿಂದ ಹಿಡಿದು  ಬಾಲದ ತನಕ ಎರಡೆರಡು ವರಹಗಳನ್ನು ಎಣಿಸಬೇಕು
ಮಂಜನಾಳ್ವ : ಸರಿ ಹಾಗಾದರೆ ತಟ್ಟೆ ಹಿಡಿ ಹಾಕುತ್ತೇನೆ (ಹಾಕುವ ಅಭಿನಯ )ಕೋಣವನ್ನು ಇಷ್ಟರ ತನಕ ಸಾಕಿದ್ದಕ್ಕೆ ಋಣ ಸಂದಾಯ ಮಾಡಲು ಕೊನೆಯ ಹುಲ್ಲು ಕೊಡು ಗೌಡ ನಾವು ಹೊರಡುತ್ತೇವೆ
ಗೌಡ :ಸರಿ ಬಲ್ಲಾಳರೆ ನೀವು ಹೊರಡಿ ಕೋಣಕ್ಕೆ ಹಗ್ಗ ಹಾಕಿ ,ನಾನು ಹಗ್ಗವನ್ನು ಕೊಡಲಾರೆ .
ಮಂಜನಾಳ್ವ : ಸರಿಯಪ್ಪ ,ಬಬ್ಬು ನಾವು ತಂದ ಬಳ್ಳಿಯಿಂದ ಕೋಣವನ್ನು ಕಟ್ಟು ಅವರು ಕಟ್ಟಿದ ಬಳ್ಳಿ ಬಿಡಿಸಿ ಅವರಿಗೆ ಕೊಡು
ಬಬ್ಬು : ಸರಿ ಒಡೆಯ (ಹಾಗೇ ಅಭಿನಯಿಸುವನು )
ಮಂಜನಾಳ್ವ :ಸರಿ ಹೊರಡೋಣ ಇನ್ನು
(ಮಂಜನಾಳ್ವ, ಬಬ್ಬು ಮತ್ತು ಕೋಣಗಳ ನಿರ್ಗಮನ )
(ಅಜ್ಜಿಯ ಪ್ರವೇಶ )
ಅಜ್ಜಿ : ಉರಲ್ (ಹಾಡು )
ಓ ಬೊಳ್ಳ.. ಹುಟ್ಟಿದನೇ ಬೆಟ್ಟದ ಮೇಲೆ ..
ಓ ಪುದಾ ..ಹುಟ್ಟಿತೋ ಪುತ್ತೂರು ಬೀಡಿನಲಿ
ಪುತ್ತೋ..ಓ ಕುಣಿಯಲು ಕಂಚಿನ ಗಗ್ಗರ ಹಾಕಿದರು
ಕುಣಿಯಲು  ಬೊಳ್ಳನಿಗೆ ಆಭರಣ ಹಾಕಿದರು
ಪುತ್ತೋ ..ಓ ಗಾಳಿಗಪ್ಪಾ ಹೋಗುತ್ತದೆ ಗಾಳಿಯ ಮನೇ  ..
ಓ ..ಅಂಗಳದವನು ಕುಣಿಯಿರಿ ಅಂಗಳದ ದಿಕ್ಕ ..
(ಅಜ್ಜಿಯ ನಿರ್ಗಮನ )
(ಮಂಜನಾಳ್ವ ಬಬ್ಬು ಮತ್ತು ಕೋಣಗಳ ಪ್ರವೇಶ )
 -copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
ಮಂಜನಾಳ್ವ :ಓ ಮನೆ ಹತ್ತಿರ ಬಂದೆವು ,ಓ ಬಬ್ಬು ಇಲ್ಲಿಯೇ ಧೂಮಾವತಿ ಕೊಟ್ಯದ ಹಲಸಿನ ಮರ ತುಂಬಾ ಕಾಯಿ ಬಿಟ್ಟಿದೆ ,ಅಲ್ಲಿಂದ ಒಂದು ಕಾಯಿ ಕೀಳು ಕೋಣಕ್ಕೆ ತಿನ್ನಲು ಹಾಕುವ
ಬಬ್ಬು :ಸರಿ ಒಡೆಯ (ಮರ ಹತ್ತಿ )ಒಡೆಯಾ ..ಕೈಕಾಲು ನಡುಗುತ್ತಿದೆ ಒಡೆಯ ..ದೈವದ ಕಾಟಿಣ್ಯ ಕಾಣುತ್ತಿದೆ ..!
ಮಂಜನಾಳ್ವ : ಹೌದೆ ಹಾಗಾದರೆ ಕೆಳಗೆ ಇರುವ ಬಿದ್ದ ಹಣ್ಣು ಮಾತ್ರ ತಿನ್ನುವ ಬಾ ..
ಬಬ್ಬು :ಸರಿ ಒಡೆಯ ಬಂದೆ (ಹಣ್ಣನ್ನು ತಿಂದು ಸಿಪ್ಪೆಯನ್ನು ಕೋಣಕ್ಕೆ ಹಾಕುವರು )ಆಯಿತು ಒಡೆಯ ಮನೆಗೆ ಹೋಗೋಣ ಇನ್ನು ..(ಹೋಗುವರು )
(ಅಜ್ಜಿಯ ಪ್ರವೇಶ )
ಪಾಡ್ದನ :
ಒಂದೇ ನೆಗೆತ ನೆಗೆದನು ಬೊಳ್ಳ
ಹಾಕಿದ ನೇವಳ ಕಡಿದನು ಬೊಳ್ಳ
ರೆಂಜಾಳ ಬೀಡಿಗೆ ಎಳೆಕೋಣ ಬಂತು
ಹಟ್ಟಿಯ ಒಳಗೆ ಕಟ್ಟಿದನು ಬಬ್ಬು
ಕಂಬಳದ ಓಲೆ ಬಂದಿತು ಆಳ್ವರಿಗೆ
ದೇವರ ಗದ್ದೆಯಲ್ಲಿ ಕೋಣಗಳ ಓಟ
ಹೋದರು ಆಳ್ವರು ನಾರ್ಯದ ಬಬ್ಬುವು
ಆಳ್ವರಿಗೆ ಹೇಳಿದಂತೆ ಕೇಳಲಿಲ್ಲ ಬೊಳ್ಳ
ನಾನೊಮ್ಮೆ ಓಡಿಸುತೇನೆ ಹೇಳಿದ ಬಬ್ಬು
ಹಿಡಿಯದ ಛಲವನ್ನೇ ಹಿಡಿದ ಬಬ್ಬು
ಬಬ್ಬು :ಬಿಡಿ ಒಡೆಯ ನಾನು ಕೋಣಗಳನ್ನು ಓಡಿಸುತ್ತೇನೆ ,ನಾನು ಸಾಕಿದ ಕಂಜಿಗಳು ಇವು ನಾನು ಹೇಳಿದಂತೆ ಕೇಳುತ್ತವೆ ಬೊಳ್ಳ ನೀರು ಚಿಮ್ಮಿಸಿ ಪದಕ ತರುತ್ತಾನೆ ,ನಾನೊಮ್ಮೆ ಓಡಿಸುತ್ತೇನೆ
(ಕೋಣಗಳನ್ನು ಓಡಿಸುವ ಅಭಿನಯ )
ದೇವಳದ ಮಂದಿ :ಯಾರದು ಮೂಲದವರು ಇಳಿಯ ಬಾರದ ಸತ್ಯದ ಗದ್ದೆಗೆ ಇಳಿದದ್ದು ?ಮೂಲದ ಹುಡುಗ ಬಬ್ಬು ವಾ ..!!ಎಳೆದು ಹಾಕಿ ಅವನನ್ನ !
 -copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
(ಅನೇಕ ಜನರು ಓಡಿ  ಹೋಗಿ ಕೋಣ ಮತ್ತು ಬಬ್ಬುವನ್ನು ಹೊಡೆಯಲು ಹೋಗುತ್ತಾರೆ)
ಬಬ್ಬು :ಅಯ್ಯೋ ದೇವರೇ ಇವರೆಲ್ಲ ಕತ್ತಿ ದೊಣ್ಣೆ ಹಿಡಿದು ಬರುತ್ತಿದ್ದಾರಲ್ಲ ?ಅಯ್ಯೋ ಏನು ಮಾಡಲಿ !ನೋಡೋಣ ಇಲ್ಲೆ ಪಕ್ಕದ ತೊರೆಯ ನೀರಿಗೆ ಹಾರಿ ಇವರಿಂದ ಪಾರಾಗುತ್ತೇನೆ ,ಬೆರ್ಮೆರ್ ದೈವದ ಸೇರಿಗೆಗೆ ಸೇರುತ್ತೇನೆ ಅಮ್ಮಾ ಜುಮಾದಿ ನಮ್ಮ ಕೈ ಬಿಡ ಬೇಡ ತಾಯಿ ...ಓ ದೇವೆರೇ ನಾಗ ಬೆರ್ಮೆರೆ ನನ್ನನ್ನು  ನಿಮ್ಮೊಂದಿಗೆ ಸೇರಿಸಿಕೊಳ್ಳಿ ..(ನೀರ ಗುಂಡಿಗೆ ಹಾರಿ ಮಾಯವಾಗುತ್ತಾನೆ )
ಓಡಿಸಿಕೊಂಡು ಬಂದ ಜನರು : ಎಲ್ಲಿ ಹೋದ ಅವನು ?ಆರೇ !ಅವನ ಮುಟ್ಟಾಳೆ ಇಲ್ಲಿ ಬಿದ್ದಿದೆ ಅವನೆಲ್ಲಿ ಹೋದ ?!ಕಾಣಿಸುತ್ತಾ ಇಲ್ಲವಲ್ಲ ..ಅವನು ಓಡಿಸಿದ ಕೋಣಗಳು ಎಲ್ಲಿ ?ಅವೂ ಕಾಣಿಸುತ್ತಾ ಇಲ್ಲಲ್ಲ ?ಅಯ್ಯೋ ಏನು ಸೋಜಿಗವಪ್ಪ ದೇವರೇ !
ಮಂಜನಾಲ್ವ: (ಹುಡುಕಾಡುತ್ತಾ )ಬಬ್ಬು ..ಬಬ್ಬು ..ಎಲ್ಲಿರುವೆ ...ಅಯ್ಯೋ ಬಬ್ಬು ಎಲ್ಲಿರುವೆ ..ನಾನು ಮಗನಂತೆ ಸಾಕಿದ  ಪ್ರೀತಿಯ ಮಗುವೇ ಎಲ್ಲಿರುವೆ ..ಮಗ ..ಬಬ್ಬು ಎಲ್ಲಿರುವೆ ..
ಬಬ್ಬು (ಅದೃಶ್ಯವಾಗಿ ):ಒಡೆಯ ಅಳಬೇಡಿ ಒಡೆಯ ..ನನ್ನನ್ನು ಹುಡುಕ ಬೇಡಿ ಒಡೆಯ .ನಾನು  ಜಯ ವುಳ್ಳ ಬೆರ್ಮೆರ ಪಾದಕ್ಕೆ ಸಂದಿದ್ದೇನೆ ಒಡೆಯ ..ಕೋಣ ಬೊಳ್ಳನೂ ಇಲ್ಲಿ ಸೇರಿಗೆಗೆ ಸೇರಿದ್ದಾನೆ ಒಡೆಯ .ದೈವ ಜುಮಾದಿಗೆ ಹೇಳಿದ ಹರಿಕೆಯನ್ನು ಮರೆತದ್ದು ಮಾತ್ರವಲ್ಲದೆ ದೈವದ ಮುಂಡ್ಯೆಗೆ ಸೇರಿದ ಹಲಸಿನ ಮರದಿಂದ ಹಣ್ಣು ಕೂಡಾ  ತಿಂದು ರೆಚ್ಚೆಯನ್ನು ಕೋಣ ಬೊಳ್ಳನಿಗೆ ತಿನಿಸಿದ್ದು ತಾಯಿ ಜುಮಾದಿಗೆ ಕೋಪ ಬಂದಿದೆ ಒಡೆಯ ,ತಾಯಿ ಜುಮಾದಿಯ ಅಪ್ಪಣೆಯಂತೆ ನಾವು ಬೆರ್ಮರ ಪಾದಕ್ಕೆ ಸಂದಾಯವಾಗಿದ್ದೇವೆ ಒಡೆಯ ...ಇನ್ನು ಮುಂದೆ ನಾವು ಜೋಗದಲ್ಲಿ ಬರಲಾರೆವು ,ನಮ್ಮನ್ನು ನಂಬಿ “ಸ್ವಾಮಿ ಉರವ ,ಎರು ಬಂಟ ದೈವಗಳೇ ಕಾಪಾಡಿ ,  ಸಹಾಯ ಮಾಡಿ “ಎಂದು ನೀರು ಇಟ್ಟು ಕೈಮುಗಿದು  ಕರೆದರೆ ,ಕರೆದಲ್ಲಿಗೆ ಬಂದು ನಿಮ್ಮ ಮನೆ ಮಠ ಮಡದಿ ಮಕ್ಕಳು ಹಸು ಕರುಗಳಿಗೆ  ರಕ್ಷಣೆ ಕೊಡುತ್ತೇವೆ ,ನಂಬಿದವರಿಗೆ ಇಂಬು ಕೊಟ್ಟು ಸತ್ಯವನ್ನು ತೋರಿಸಿ ಕೊಡುತ್ತೇವೆ ನಮ್ಮನ್ನು ನಂಬಿ .
ಮಂಜನಾಳ್ವ :ಓ ಕಾರಣಿಕದ ದೈವಗಳೇ ನಿಮಗೆ ನಾನು ಶರಣು ಬಂದಿದ್ದೇನೆ
ಎಲ್ಲರೂ :ನಮ್ಮದು ತಪ್ಪಾಯಿತು ದೈವಗಳೇ ನಾವು ಮಾಡಿದ ತಪ್ಪಿಗೆ ನಿಮಗೆ ಆ ಸೂರ್ಯ ಚಂದ್ರರು ಇರುವ ತನಕ ಕೋಲ ಬಲಿ ಕೊಟ್ಟು ಸೇವೆ ಮಾಡುತ್ತೇವೆ ನಮ್ಮ ರಕ್ಷಣೆ  ಮಾಡಿ  ದೈವಗಳೇ ..
ಉರವ ದೈವ (ಬಬ್ಬು ):ತಾಯಿ ತನ್ನ ಮಕ್ಕಳ ತಪ್ಪನ್ನು ಮಡಿಲಿಗೆ ಹಾಕಿಕೊಳ್ಳುವಂತೆ ನಾವು ನಿಮ್ಮನ್ನು ಕ್ಷಮಿಸಿದ್ದೇವೆ ..ಕಾಲ ಕಾಲಕ್ಕೆ ಕೋಲ ಕೊಟ್ಟು ನಂಬಿ..ಮೂರೂ ಕಾಲಕ್ಕೂ  ಸತ್ಯವನ್ನು ಎದ್ದು ನಿಲ್ಲಿಸುತ್ತೇವೆ ..
ಎಲ್ಲರು :ಧನ್ಯರಾದೆವು ದೈವಗಳೇ ಧನ್ಯರಾದೆವು (ಎಲ್ಲರೂ ಕೈ ಮುಗಿಯುತ್ತಾರೆ) 

                              ಶುಭಂ

 -copy rights reserved
                                (c) ಡಾ.ಲಕ್ಷ್ಮೀ ಜಿ ಪ್ರಸಾದ 
                               ಕನ್ನಡ ಉಪನ್ಯಾಸಕಿ 
                               ಸರ್ಕಾರಿ ಪದವಿ ಪೂರ್ವ ಕಾಲೇಜ್ ನೆಲಮಂಗಲ
                                ಬೆಂಗಳೂರು ಗ್ರಾಮಂತರ ಜಿಲ್ಲೆ 
                              samagramahithi@gmail.com