Tuesday, 11 November 2014

ಚಕ್ ದೇ ಇಂಡಿಯಾ ತುಂಬಿದ ನವ ಚೈತನ್ಯ -ಡಾ.ಲಕ್ಷ್ಮೀ ಜಿ ಪ್ರಸಾದ


          
              ( ನನ್ನ ಪ್ರಕಟಿತ ಸಂಶೋಧನಾ ಪ್ರಬಂಧದ ಪರಿಚಯ ,ಹೊಸ ದಿಗಂತ )
 ಇಂದು ಟಿ .ವಿಯಲ್ಲಿ  ಮೇರಿಕೋಮ್ ಸಿನೆಮ ನೋಡಿದೆ .ನೋಡುತ್ತಿದ್ದಂತೆ ಚಕ್ ದೇ ಇಂಡಿಯಾ ಸಿನೆಮ ಮತ್ತು ಗೆಳತಿ ನಿರ್ಮಲಾರ
"ಎನ್ತೆಂತವರೋ ಪಿಎಚ್.ಡಿ ಮಾಡಿದ್ದಾರೆ ಲಕ್ಷ್ಮೀ ,ನಿನಗೆ   ಮಾಡೋಕಾಗಲ್ವ?.ಹೇಗೋ ಒಂದು ಮುಗಿಸಿ ಬಿಡು ".ಎಂಬ ಮಾತು ನೆನಪಿಗೆ ಬಂತು !ಒಳ್ಳೆಯ ಸಿನೆಮಾಗಳೂ ನಮ್ಮ ಬದುಕಿನಲ್ಲಿ ನವೋತ್ಸಾಹವನ್ನು ತುಂಬುತ್ತವೆ ಎಂದು ನನಗೆ ಅರಿವಾದದ್ದೇ ಅಂದು . 

5-6 ವರ್ಷಗಳ ಹಿಂದೆ ಹಿಂದೆ ಗೆಳತಿ ಕೇಳಿದ ಮಾತು ಇದು ನನ್ನಲ್ಲಿ ..ನಾನು 2005 ರಲ್ಲಿ ಬಿಎಂ ಶ್ರೀ ಪ್ರತಿಷ್ಠಾನ ದ ಸ್ನಾತಕೋತ್ತರ ಸಂಶೋಧನಾ ಅಧ್ಯಯನ ಕೇಂದ್ರದ ಮೂಲಕ ಹಂಪಿ ಕನ್ನಡ ಯೂನಿವರ್ಸಿಟಿ ಯಲ್ಲಿ ಪಿಎಚ್. ಡಿ ಅಧ್ಯಯನಕ್ಕೆ ನೋಂದಣಿ ಪಡೆದಿದ್ದೆ .

ನಾನು ಆಯ್ದುಕೊಂಡ ವಿಷಯ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ .ಆ ವಿಷಯ ಆಯ್ಕೆ ಮಾಡುವಾಗ ನಾನು ತುಂಬಾ ಕ್ಷೇತ್ರಕಾರ್ಯ ಮಾಡಬೇಕಾಗಿ ಬರುತ್ತದೆ ಎಂದು ತಿಳಿದಿತ್ತಾದರೂ ಭೂತಾರಾಧನೆ ಮತ್ತು ನಾಗಾರಾಧನೆ ಎರಡನ್ನೂ ಕ್ಷೇತ್ರ ಕಾರ್ಯ ಮಾಡಬೇಕಾಗುತ್ತದೆ  ಅದು ಎಷ್ಟು ಕಷ್ಟಕರ ಎಷ್ಟು ವಿಸ್ತಾರ ಎಂಬುದರ ಅರಿವಿರಲಿಲ್ಲ .ಏನೋ ಒಂದರಡು ಕಡೆ ಹೋಗಿ ಫೋಟೋ  ಹಿಡಿದು ಬಂದರೆ ಸಾಕು ಎಂದು ಕೊಂಡಿದ್ದೆ !ನೀರಿಗಿಳಿದ ಮೇಲೆ ತಾನೇ ಆಳ ಗೊತ್ತಾಗುವುದು ?ಇಳಿದ ಮೇಲೆ ಚಳಿಯೇನು ಬಿಸಿಯೇನು ಎಂದು ಮುಂದುವರಿಯುದು ಅನಿವಾರ್ಯವಾಗಿತ್ತು ,ಜೊತೆಗೆ ನನಗೆ ಈ ಬಗ್ಗೆ ತೀವ್ರ ಆಸಕ್ತಿ ಕೂಡ ಇತ್ತು .ಆದ್ದರಿಂದಲೋ ಏನೋ ನನಗೆ ಕ್ಷೇತ್ರಕಾರ್ಯ ,ಸಂಶೋಧನೆಗಳು ತೀರ ಅಸಾಧ್ಯ ಎನಿಸಿರಲಿಲ್ಲ .

ಆಗ ನಾನು ಇದ್ದದ್ದು ಬೆಂಗಳೂರಿನಲ್ಲಿ .ಬೆಂಗಳೂರಿನ ಪ್ರಸಿದ್ಧ ವಾದ ಒಂದು  ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ  ಕೆಲಸ ಮಾಡುತ್ತಿದ್ದೆ .
ಒಂದೆಡೆ ಕೆಲಸದ ಒತ್ತಡ ,ಮತ್ತೊಂದೆಡೆ ಮಗ ಶಾಲೆ ಓದಿನ ಜವಾಬ್ದಾರಿ ಇದರೊಂದಿಗೆ ಕ್ಷೇತ್ರ ಕಾರ್ಯ ಸಾಕಾಗಿ ಹೋಗಿತ್ತು.ನನ್ನ ಮಾರ್ಗ ದರ್ಶಕರು ಅಪಾರ ಪಾಂಡಿತ್ಯ ಉಳ್ಳವರು .ಅವರು ನನ್ನಿಂದ ಅತ್ಯಂತ ಉನ್ನತ ಮಟ್ಟದ ಸಂಶೋಧನೆಯನ್ನು ನಿರೀಕ್ಷಿಸುತ್ತಿದ್ದರು.

ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ನನ್ನ ಸಂಶೋಧನೆ ಕುರಿತು ವರಡಿ ಒಪ್ಪಿಸಬೇಕಾಗಿತ್ತು .ಆ ತನಕ ನಾನು ಮಾಡಿದ ಕ್ಷೇತ್ರ ಕಾರ್ಯ ಹಾಗೂ ಇತರ ಕೆಲಸಗಳನ್ನು ಚಾಚೂ ತಪ್ಪದೆ ವಿವರಿಸಿ ಅವರಿಗೆ ಮನದಟ್ಟು ಮಾಡ ಬೇಕಾಗಿತ್ತು .ಸಣ್ಣ ಲೋಪ ದೋಷ ಇದ್ದರೂ ವರದಿಗೆ ಸಹಿ ಮಾಡುತ್ತಿರಲಿಲ್ಲ.

ಜೊತೆಗೆ ನಮಗೆ ಸಾಕಷ್ಟು ಅಭಿಪ್ರಾಯ ವ್ಯತ್ಯಾಸ ಉಂಟಾಗುತ್ತಿತ್ತು ,ಮಾರ್ಗ ದರ್ಶಕರು ಹೇಳಿದರು ಎಂಬ ಕಾರಣಕ್ಕೆ ಆಧಾರವಿಲ್ಲದೆ ನನ್ನ ಸಂಶೋಧನೆ ಸರಿಯಿಲ್ಲ ಎಂದು ಒಪ್ಪಿಕೊಳ್ಳಲಾರದ ಸ್ವಾಭಿಮಾನ ನನ್ನದು .ಅನೇಕ ಹಿತೈಷಿಗಳು ಕೆಲವೊಮ್ಮೆ "ಅವರು ಹೇಳಿದಂತೆ ಬದಲಾಯಿಸಿ ಬಾರೆ ನಿನಗೇನಂತೆ?ಪಿಎಚ್.ಡಿ ಸಿಕ್ರೆ ಆಯ್ತಲ್ವ ಎಂದು 'ಎಂದು ಹೇಳಿದ್ದುಂಟು .ಆದರೆ ನಾನು ಹಾಗೆಲ್ಲ ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನ್ದವಳಲ್ಲ!
ನನಗೆ ಸರಿ ಎನಿಸಿದ್ದನ್ನು ಯಾರು ಏನು ಹೇಳಿದರೂ ಬದಲಾಯಿಸಿಕೊಳ್ಳಲಾರೆ!ಹಾಗಾಗಿ ನಮ್ಮಲ್ಲಿ ಸಾಕಷ್ಟು ಚರ್ಚೆ ಆಗುತ್ತಿತ್ತು.

ಹೀಗೆ ಒಂದು ದಿನ ಮಾರ್ಗ ದರ್ಶಕರ ಹತ್ತಿರ ಚರ್ಚೆ ಆಗಿತ್ತು .ಅವರು ಒಂದಷ್ಟು ಬದಲಾವಣೆಯನ್ನು ಹೇಳಿ ತಿದ್ದಿ ಬರೆದು ತಂದರೆ ಮಾತ್ರ ವರದಿಗೆ ಸಹಿ ಮಾಡುವೆ ಎಂದಿದ್ದರು .
ಅದೇ ಸಮಯದಲ್ಲಿ ನನಗೆ ಕ್ಷೇತ್ರ ಕಾರ್ಯಕ್ಕೆ ಚೌಕಾರಿಗೆ ಹೋಗಬೇಕಾಗಿತ್ತು ,ಅದು ಜನವರಿ ತಿಂಗಳು  .ಕಾಲೇಜ್ ನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಾ ಇತ್ತು .ಹಾಗಾಗಿ ರಜೆ ಕೊಡಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದರು.ನಾನಿದ್ದ ಕಾಲೇಜ್ ಅನುದಾನಿತ ಸಂಸ್ಥೆಯಾಗಿದ್ದು ನಾನು ಅಲ್ಲಿ ಅನುದಾನ ರಹಿತವಾಗಿ ಆಡಳಿತ ಮಂಡಳಿ ನೇಮಿಸಿದ್ದ ಕನ್ನಡ ಉಪನ್ಯಸಕಿಯಾಗಿದ್ದೆ.ನನ್ನಂತೆ ಅನೇಕರು ತಾತ್ಕಾಲಿಕ ನೆಲೆಯಲಿ ಪುಡಿಕಾಸಿಗೆ ದುಡಿಯುತ್ತಿದ್ದೆವು .ಇಲ್ಲಿ ಪರೀಕ್ಷೆ ಸೇರಿದಂತೆ ಎಲ್ಲ ಕಾರ್ಯಗಳಲ್ಲಿ ಕೈ ತುಂಬಾ ವೇತನ ಪಡೆಯುವ ಅನುದಾನಿತ ಉಪನ್ಯಾಸಕರಿಗೆ ತೀರಾ ಕಡಿಮೆ ಕೆಲಸ ಹಾಕಿ ನನ್ನಂತೆ ಇರುವ ಅನುದಾನಿತ ರಹಿತರಿಗೆ ಅತಿ ಹೆಚ್ಚಿನ ಕೆಲಸ ಹಂಚಲಾಗುತ್ತಿತ್ತು .ರಜೆ ಹಾಕಿದರೆ ನನ್ನ ಆ ದಿನದ ಕೆಲಸವನ್ನು ಮಾಡಲು ಯಾರೂ ಒಪ್ಪುವುದಿಲ್ಲ ಈ ಕಾರಣದಿಂದ ನನಗೆ ರಜೆ ಕೊಡಲು ಪ್ರಾಂಶುಪಾಲರು ನಿರಾಕರಿಸಿದ್ದರು .

ಒಂದೆಡೆ ಕ್ಷೇತ್ರಕಾರ್ಯಕ್ಕೆ ಹೋಗಲಾಗುವುದಿಲ್ಲ ಎಂಬ ಚಿಂತೆ ,ಇನ್ನೊಂದೆಡೆ ವರದಿಗೆ ಸಹಿ ಆಗಲಿಲ್ಲ ಎಂಬ ಚಿಂತೆ ,ಅತಿಯಾದ ಕೆಲಸದ ಒತ್ತಡ .ಎಲ್ಲದರಿಂದ ಬೇಸತ್ತು ಸಂಶೋಧನೆಯು ಬೇಡ ಪಿಎಚ್.ಡಿ ಪದವಿಯೂ ಬೇಡ ಎಂಬ ಹತಾಶೆಗೆ ಒಳಗಾಗಿದ್ದೆ.ಸಂಜೆ ಹೊತ್ತು ಮನೆಯ ತಾರಸಿ ಹಟ್ಟಿ ಕಾಲು ಸುಟ್ಟ ಬೆಕ್ಕಿನಂತೆ ಸುತ್ತುತ್ತಾ ಇದ್ದೆ  .ಅದಾಗಲೇ ಗೆಳತಿ ನಿರ್ಮಲಾರ ಫೋನ್ ಬಂತು .

ನಿರ್ಮಲಾ ಡಿ ಟಿ ಪಿ ವರ್ಕ್ ಮಾಡುತ್ತಾ ಇದ್ದರು .ನನ್ನ ಪ್ರಬಂಧದ ಡಿ ಟಿ ಪಿ ಕಾರ್ಯವನ್ನೂ ಅವರಿಗೆ ವಹಿಸಿದ್ದೆ .ವರದಿ ಡಿ ಟಿ ಪಿ ಮಾಡಲು ತಗೊಂಡು ಬರುತ್ತೇನೆ ಎಂದು ಹೇಳಿದ್ದೆ .ನನ್ನ ವರದಿ ಒಪ್ಪಿಗೆ ಆಗದ ಕಾರಣ ಹೋಗಿರಲಿಲ್ಲ .
ಯಾಕೆ ಬಂದಿಲ್ಲ ಎಂದು ಕೇಳಲು ಯಾವುದು ಬೇಡವಾಗಿದೆ ನಾನು ಪಿಎಚ್.ಡಿ ಅಧ್ಯಯನ ಮುಂದುವರಿಸುವುದಿಲ್ಲ ಎಂದು ಹೇಳಿದ್ದೆ .

ಆಗ ನಿರ್ಮಲಾ ಎನ್ತೆಂತವರೋ ಪಿಎಚ್.ಡಿ ಮಾಡಿದ್ದಾರೆ ಲಕ್ಷ್ಮೀ ,ನಿನಗೆ   ಮಾಡೋಕಾಗಲ್ವ?..ಏನೋ ಒಂದು ಮಾಡಿ ಮುಗಿಸಿಬಿಡಿ ಹೆಂಗೂ ಮುಕ್ಕಾಲಂಶ ಆಗಿದೆ ಇನ್ನು ಸ್ವಲ್ಪ ಮುಗಿಸಿ ಬಿಡಿ ಎಂದರು.
ನನ್ನಿಂದ ಅದನ್ನ ಸಂಪೂರ್ಣ ಮಾಡಲು ಆಗದು.ಎಂದು ಹೇಳಿ ಮಾತು ಮುಗಿಸಿದ್ದೆ .

ತಾರಸಿ ನನಗೆ ತುಂಬಾ ಪ್ರಿಯವಾದ ಜಾಗ ,ಆದರೂ ಆ ದಿನ ನನಗೆ ಅದು ಕೂಡ ಇಷ್ಟವಾಗಲಿಲ್ಲ .ಇಳಿದು ಕೆಳಗೆ ಬಂದು ಮನೆಯಲ್ಲಿ ಟಿವಿ ಹಾಕಿದೆ ,ಪಿಎಚ್.ಡಿ ಸಂಶೋಧನೆ ಸುರು ಮಾಡಿದಲ್ಲಿಂದ ನಾನು ಸಿನೆಮ ,ಕಥೆ ಕಾದಂಬರಿಗಳ ಓದನ್ನು ಬಿಟ್ಟು ಬಿಟ್ಟಿದ್ದೆ ,ಬರವಣಿಗೆಯನ್ನೂ ಬಿಟ್ಟು ಬಿಟ್ಟಿದ್ದೆ ,ತುಸು ಸಮಯ ಸಿಕ್ಕರೂ  ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದೆ,ಹಾಗಾಗಿ ಸಿನೆಮ ನೋಡದೆ ತುಂಬಾ ಸಮಯ ಆಗಿತ್ತು .ನಾನು ಈ ಸಂಶೋಧನೆ ಅಂತ ಎಲ್ಲವನ್ನೂ ಬಿಟ್ಟು ಬಿಟ್ಟೆ ಇನ್ನು ಹಾಗೆ ಮಾಡಲಾರೆ ಇಷ್ಟ ಬಂದಸಿನೆಮ ನೋಡುತ್ತಾ ,ಕುಶಿ ಕಂಡ ಕಥೆ ಕಾದಂಬರಿ ಓದುತ್ತ ಜೀವನವನ್ನು ಎಂಜಾಯ್ ಮಾಡಬೇಕು ಎಂದುಕೊಂಡೆ

ಟಿ ವಿಯಲ್ಲಿ ಚಕ್ ದೇ ಇಂಡಿಯಾ ಸಿನೆಮ ಆಗಷ್ಟೇ ಆರಂಭವಾಗಿತ್ತು .ನೋಡೋಣ ಎಂದು ಕುಳಿತುಕೊಂಡ

ಸಿನೆಮ ನೋಡುತ್ತಾ ನೋಡುತ್ತಾ ಅದರಲ್ಲಿ ತನ್ಮಯಳಾಗಿ ಬಿಟ್ಟೆ ..

ಸಿನೆಮ ಮುಗಿಯುತ್ತಲೇ ನಾನೊಬ್ಬ ಹೊಸ ಮನುಷ್ಯಳಾಗಿದ್ದೆ.ನವ ಉತ್ಸಾಹ ಚೈತನ್ಯ ತುಂಬಿತ್ತು ಮೈ ಮನದಲ್ಲಿ.
ನಾನು ಕೂಡಲೇ ನಿರ್ಧರಿಸಿದೆ ಏನೇ ಆದರೂ ಪಿಎಚ್.ಡಿ ಅಧ್ಯಯನವನ್ನು ಮುಗಿಸಲೇ ಬೇಕು ಎಂದು .ಚೌಕಾರಿಗೆ ಕ್ಷೇತ್ರ ಕಾರ್ಯಕ್ಕೆ ಹೋಗಲೂ ನಿರ್ಧರಿಸಿದೆ .ರಜೆ ಕೊಟ್ಟರೂ ಕೊಡದೆ ಇದ್ದರೂ ನಾನು ಹೋಗುವುದು ಖಂಡಿತ ಎಂದು ನಿರ್ಧಾರ ಮಾಡಿದೆ .
ಕೂಡಲೇ ಗೆಳತಿ ನಿರ್ಮಲಾರಿಗೆ ಫೋನ್ ಮಾಡಿದೆ ,ನಾಳೆ ಬೆಳಗ್ಗೆ ವರದಿ ಯನ್ನು ಡಿ ಟಿ ಪಿ ಮಾಡಲು ತರುತ್ತೇನೆ ಎಂದು ಫೋನ್ ಮಾಡಿದೆ!
 ನಾನು ನನ್ನ ನಿರ್ಧಾರವನ್ನು ಬದಲಾಯಿಸಿ ಅಧ್ಯಯನವನ್ನು ಮುದುವರಿಸಲು ನಿರ್ಧರಿಸಿದ್ದು ಅವರಿಗೂ ಸಂತಸವಾಯಿತು.
ಹೇಳಿದಂತೆ ಮರುದಿನ ಬೆಳಗ್ಗೆ ಹೋಗಿ ನನ್ನ ಮಾರ್ಗ ದರ್ಶಕರು ಸೂಚಿಸಿದ ಬದಲಾವಣೆ ಮಾಡಿಕೊಂಡು ವರದಿ ತಯಾರಿಸಿ ಮಾರ್ಗ ದರ್ಶಕರ ಮನೆಗೆ ಹೋಗಿ ಸಹಿ ಮಾಡಿಸಿ ತಂದು ಸಂಶೋಧನಾ ಕೇಂದ್ರಕ್ಕೆ ಸಲ್ಲಿಸಿದೆ.
ಇನ್ನು ಕ್ಷೇತ್ರಕಾರ್ಯಕ್ಕೆ ಹೋಗಲು ರಜೆ ಕೊಡದೆ ಇದ್ದರೆ ಕಾಲೇಜ್ ಅನ್ನೇ ಬಿಡುವುದು ,ಖಾಸಗಿ ಕಾಲೇಜ್ ಗಳು ಸಾವಿರ ಇವೆ ,

ಹೇಗೂ ಮೂರು ಸ್ನಾತಕೋತ್ತರ ಪದವಿಗಳು ಇವೆ ಎಲ್ಲಾದರೂ ಒಂದು ಕೆಲಸ ಸಿಕ್ಕಿಯೇ ಸಿಗುತ್ತೆ ಎಂದು ನಿರ್ಧರಿಸಿದೆ . ಕಾಲೇಜ್ ಗೆ ಹೋಗಿ ನನಗೆ ಕ್ಷೇತ್ರಕಾರ್ಯಕ್ಕೆ ಹೋಗಲಿಕ್ಕಿದೆ ಆದ್ದರಿಂದ ಮೂರು ದಿನ ಬರಲಾಗದು ಎಂದು ಖಡಾ ಖಂಡಿತವಾಗಿ ಹೇಳಿ ರಜೆ ಅರ್ಜಿ ನೀಡಿದೆ.ಅವರು ಏನೊಂದೂ ಹೇಳುವ ಮೊದಲೇ ಹೊರ ಬಂದೆ .
ಅಂದಿನ ಕೆಲಸ ಮುಗಿಸಿ ರಾತ್ರಿ ಬಸ್ ಹತ್ತಿ ಮಂಗಳೂರಿಗೆ ಬಂದೆ .ಅಲ್ಲಿಂದ ನೇರವಾಗಿ ಸೀತಂಗೋಳಿಯಲ್ಲಿರುವ ಗೆಳತಿ ಅನುಪಮ ಪ್ರಸಾದ ಮನೆಗೆ ಬಂದು ಅಲ್ಲಿಂದ ಚೌಕಾರಿಗೆ ಹೋದೆ .

ಅಲ್ಲಿ ಎರಡು ದಿನ ಹಗಲು ರಾತ್ರಿ ರೆಕಾರ್ಡಿಂಗ್ ಮಾಡಿ ಮೂರನೆಯ ದಿನ ಕೊಡ್ಳಮೊಗರಿಗೆ ಬಂದು ರೆಕಾರ್ಡ್ ಮಾಡಿದೆ .ನಾಲ್ಕನೆಯ ದಿನ ಬೆಳಗ್ಗೆ ಬೆಂಗಳೂರಿಗೆ ಬಂದು ಫ್ರೆಶ್ ಆಗಿ ಕಾಲೇಜ್ ಗೆ ಹೋದೆ .
ಅಲ್ಲಿ ಕೆಲ್ಸಕ್ಕೆ ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂಬ ಸಂಶಯ ಇತ್ತು ಮನದೊಳಗೆ !

ಆದರೆ ಅಲ್ಲಿ ಏನೂ ಸಮಸ್ಯೆ ಆಗಲಿಲ್ಲ .ಎಂದಿನಂತೆ ಮತ್ತೆ ಕೆಲ್ಸಕ್ಕೆ ಹಾಜರಾಗಿ ಕರ್ತವ್ಯ ಮುದುವರಿಸಿದೆ.

2009 ರಲ್ಲಿ ಸಂಶೋಧನಾ ಪ್ರಬಂಧ ಸಿದ್ದ ಪಡಿಸಿ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್.ಡಿ ಪದವಿಯನ್ನೂ ಪಡೆದೆ .ನನ್ನ ಮಾರ್ಗ ದರ್ಶಕರು ಗುಣ ಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಕಾರಣ ನನ್ನ ಪ್ರಬಂಧ ನಿಜಕ್ಕೂ ಪ್ರೌಢ ಪ್ರಬಂಧವಾಯಿತು .ಅವರ ಬಿಗುವಾದ ನಿಲುವು ನನಗೆ ತಳ ಮಟ್ಟದ  ಅಧ್ಯಯನವನ್ನು ಮಾಡಲು ಕಲಿಸಿತು.ನನ್ನ ಮಾರ್ಗ ದರ್ಶಕಾರದ ಡಾ.ಎಸ್.ನಾಗರಾಜು ಅವರ  ಪ್ರೌಢಿಮೆ, ಅಗಾಧ ಪಾಂಡಿತ್ಯ ,ತಾಳ್ಮೆ ನಿಜಕ್ಕೂಅನುಕರಣ ಯೋಗ್ಯವಾದುದು
ಅಂದು ನೋಡಿದ ಚಕ್ ದೇ ಇಂಡಿಯಾ ಸಿನೆಮ ನನ್ನಲ್ಲಿ ತುಂಬಾ ಪ್ರಬಾವ ಬೀರಿತ್ತು ,ಅಂದಿನ ಹತಾಶೆ ಏನು ಮಾಡಲಾರೆ ಎನ್ನುವ ಅಧೈರ್ಯ ಎಲ್ಲವೂ ಕ್ಷಣದಲ್ಲಿ ಮಂಗ ಮಾಯವಾಗಿತ್ತು .ಇಂದಿಗೂ ನಾನು ಅಂದು ನನಗೆ ಒಮ್ಮಿಂದೊಮ್ಮೆಗೆ ಪ್ರೇರಣೆ ಉತ್ಸಾಹ ನವ ಚೈತನ್ಯ ನೀಡಿದ ಆ ಸಿನೆಮಾವನ್ನು ನೆನಪಿಸಿಕೊಳ್ಳುತ್ತೇನೆ .

No comments:

Post a Comment