Saturday, 8 November 2014

ಎಕ್ಕಲ ಕಟ್ಟೆಯ ಪೆರಿಯಾಂಡವರ್-ಒಂದು ಅವಲೋಕನ -ಡಾ.ಲಕ್ಷ್ಮೀ ಜಿ ಪ್ರಸಾದ








copy rights reserved
ಏಕೋ ಏನೋ ಸುಮಾರು ದಿನಗಳಿಂದ ಏನನ್ನೂ ಬರೆಯಲು ಒಳ್ಳೆಯ ಮೂಡ್ ಇಲ್ಲ ,ಜೊತೆಗೆ ವಿಪರೀತ ಕೆಲಸದ ಒತ್ತಡ.ಹಾಗಾಗಿ ಏನನ್ನೂ ಬರೆಯಲಾಗಿಲ್ಲ ,ಭೂತಗಳ ಅದ್ಬುತ ಜಗತ್ತು ಬ್ಲಾಗ್ ಗೆಯಾದರೂ ಒಂದೆರಡು ಲೇಖನ ಆದರೂ ಬರೆದಿದ್ದೇನೆ ,ನನ್ನ ಹವ್ಯಕ ಬ್ಲಾಗ್ ಗಿಳಿಬಾಗಿಲಿನ ಬಾಗಿಲು ತೆರೆದು ನೋಡದೇ ಎರಡು ಮೂರು ತಿಂಗಳು ಕಳೆದಿವೆ.

ಇಂದು ಆದರೂ ಪೆರಿಯಾಂಡವರ್ ಬಗ್ಗೆ ಬರೆಯದಿದ್ದರೆ ಮೌಖಿಕವಾಗಿ ನಾನು ಸಂಗ್ರಹಿಸಿದ ಮಾಹಿತಿಗಳೆಲ್ಲ ಮರೆತು ಹೋಗಬಹುದು ಎಂಬ ಭಯ ಇಂದು ಮತ್ತೆ ಬರೆಯಲು ಕುಳಿತು ಕೊಳ್ಳಲು ಪ್ರೇರೇಪಿಸಿತು .

ಕೆಲವು ವಿಷಯಗಳಲ್ಲಿ ನಾನು ಬಹಳ ಅದೃಷ್ಟವಂತೆ .ನಾನು ಹೋದಲ್ಲೆಲ್ಲ ಒಂದು ಈ ತನಕ ಬೇರೆಯವರು ಗಮನ ಹರಿಸದ ಹೊಸ ವಿಚಾರ ಅಧ್ಯಯನಕ್ಕಾಗಿ ನನಗೆ ಕಾದಿರುತ್ತದೆ.

ನಮ್ಮ ಕಾಲೇಜ್ ಗೆ ಹೋಗುವ ದಾರಿಯಲ್ಲಿ  ಕೆಂಗೇರಿ ಸಮೀಪ ಎಕ್ಕಲ ಕಟ್ಟೆ ಪುರಾತನ ಮುನೇಶ್ವರ ದೇವಾಲಯ ಎಂದು ಫಲಕ ಹಾಕಿದ್ದು ನೋಡಿದ್ದೆ.ಅಲ್ಲೇನೂ ದೇವಾಲಯ ಇದ್ದ ಹಾಗೆ ಕಾಣಲಿಲ್ಲ ,ಬದಲಿಗೆ ಏಳೆಂಟು ದೊಡ್ಡ ದೊಡ್ಡ ದಟ್ಟವಾದ ಆಲದ ಮರಗಳು ಸ್ವಲ್ಪ ದೂರದಲ್ಲಿ ತುಸು ಆಳ ಪ್ರದೇಶದಲ್ಲಿ ಕಾಣಿಸುತ್ತಿದ್ದವು .ಒಂದೆರಡು ಏನೋ ಕಟ್ಟೆ ಇದ್ದ ಹಾಗೆ ಕಾಣಿಸಿತ್ತು ,ಒಂದಿನ ಅಲ್ಲಿ ಹೋಗಿ ನೋಡಬೇಕು ಎಂದು ಕೊಂಡಿದ್ದೆ .ಹೆಚ್ಚಾಗಿ ಆಟೋ ರಿಕ್ಷಾದಲ್ಲಿ ಹೋಗಿ ಬರುವ ಕಾರಣ ಅಲ್ಲಿ ಹೋಗಲು ಆಗಿರಲಿಲ್ಲ .ಜೊತೆಗೆ ಮನದೊಳಗಿನ ಆತಂಕ ಅಧೈರ್ಯ ಕೂಡ ಕಾರಣವಾಗಿದೆ ಎಂಬುದು ಸತ್ಯವಾದ ವಿಚಾರ !

ಈ ಮೊದಲೆಲ್ಲ ಒಂದು ಸಣ್ಣ ವಿಚಾರ ಸಿಕ್ಕರೆ ಸಾಕು ಕೂಡಲೇ ಹಿಂದೆ ಮುಂದೆ ನೋಡದೆ ಕ್ಷೇತ್ರಕಾರ್ಯಕ್ಕೆ ಹೋಗಿ ಬಿಡುತ್ತಿದ್ದೆ ..ಯಾವಾಗ ಎರಡು ವರ್ಷದ ಹಿಂದೆ ಡೆಲ್ಲಿ ಹುಡುಗಿಯ ಮೇಲಿನ ಕ್ರೌರ್ಯದ ಸುದ್ದಿ ಓದಿದೆನೋ ಅಂದೇ ಎಂದು ಕೊಂಡಿದ್ದೆ ಇನ್ನು ಒಬ್ಬಳೇ ಎಲ್ಲಿಗೂ ಹೋಗುವ ಸಂಗತಿ ಆಗಲಿಕ್ಕಿಲ್ಲ ಎಂದು , ರಾತ್ರಿಯಲ್ಲಿ ನಡೆಯುವ ಭೂತಾರಾಧನೆ ಹಾಗೂ ಇನ್ನಿತರ ವಿಚಾರಗಳ ಬಗೆಗಿನ  ಕ್ಷೇತ್ರಕಾರ್ಯವನ್ನು ಪೂರ್ಣವಾಗಿ ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ . ನಂತರದ  ಸೌಜನ್ಯ .ರತ್ನ  ಮೊನ್ನೆ ಮೊನ್ನೆಯ ನಂದಿತಾ ನ ಪ್ರಕರಣಗಳು  ಹಗಲು ಕೂಡ ಒಬ್ಬಬ್ಬಳೆ ಓಡಾಡುವ  ಉತ್ಸಾಹ ಹಾಗೂ  ಧೈರ್ಯವನ್ನು  ಇನ್ನಷ್ಟು ಕಡಿಮೆ ಮಾಡಿವೆ .ಹಾಗಾಗಿಯೋ ಏನೋ !ಅಂತೂ  ಅಲ್ಲಿಗೆ ಹೋಗಲು ಆಗಿರಲಿಲ್ಲ .ನಾನೇ  ಚಿಕ್ಕ ವಯಸ್ಸಿನ ಕಾಲೇಜ್ ಗೆ ಹೋಗುವ ಹುಡುಗಿಯಲ್ಲ ಆದರೂ ನಾನೋರ್ವ ಸ್ತ್ರೀ ಅನ್ನುವುದನ್ನು ಮರೆಯಲಾರೆ ,6 ತಿಂಗಳ ಹಸುಳೆಯೆಂದು ಬಿಡದೆ lkg ukg ಕಂದಮ್ಮಗಳನ್ನು ಶಾಲಾ ಕಾಲೇಜ್ ಹುಡುಗಿಯರನ್ನು 85 ವರ್ಷದ ಅಜ್ಜಿಯರನ್ನೂ ಬಿಡದೆ ಕಾಡುವ ಕಾಮುಕರ ಬಗೆ ಎಲ್ಲ ಮಹಿಳೆಯರೂ ಜಾಗರೂಕತೆ ವಹಿಸಲೇ ಬೇಕಾದ ಅನಿವಾರ್ಯತೆ ಬಂದಿದೆ .
ಹಿಂದೊಂದು ಕಾಲವಿತ್ತು 30-35 ವರ್ಷ ಕಳೆದರೆ ನಾವು ಸ್ತ್ರೀಯರು ಇನ್ನು ಸೇಫ್ ಎಂದು ಭಾವಿಸುತ್ತ ಇದ್ದೆವು .ಆದರೆ ಈಗ ಹಾಗಲ್ಲ .85 ವರ್ಷದಅಜ್ಜಿ  ಕೂಡ ಎಚ್ಚರಿಕೆ ವಹಿಸಬೇಕಾದ ಕಾಲ ಬಂದಿದೆ 
ಇರಲಿ

ಮೊನ್ನೆ 3 ನೇ ತಾರೀಕು ಸಂಜೆ ನಾನು ಮತ್ತು ಸ್ನೇಹಿತೆ ಕಲಾವತಿ  ಮಾತನಾಡುತ್ತಾ ನಡೆದು ಕೊಂಡು ಬಂದೆವು .ಆಗ ದಾರಿ ಬದಿಯಲ್ಲಿ  ಇರುವ ಈ ಫಲಕ ಗಮನ ಸೆಳೆಯಿತು .ಅಲ್ಲಿ ಏನಿದೆ ಎಂದು ನೋಡಿಯೇ ಬಿಡುವ ಎಂದು ನಾವು ಮೆಟ್ಟಿಲು ಇಳಿದುಕೊಂಡು ಅಲ್ಲಿಗೆ ಹೋದೆವು .
ಮೊದಲಿಗೆ ಗಮನ ಸೆಳೆದದ್ದು ವಿಸ್ತಾರವಾಗಿ ಬೆಳೆದ ಆಲದ ಮರಗಳು .ಒಂದು ಅಡಿಗೆ ಹತ್ತು ಸಾವಿರ ಬೆಲೆ ಬಾಳುವ ಆ ಪರಿಸರದಲ್ಲಿ ಇಷ್ಟು ದೊಡ್ಡ ಜಾಗ ಗಿಡ ಮರಗಳಿಂದ ಕೂಡಿದ್ದು ಕಂಡು ಅಲ್ಲಿ ಮಾರ ಕಡಿಯಬಾರದು ಎಂಬ ನಂಬಿಕೆ ಇರಬಹುದು ಎಂದೆನಿಸಿತು ನನಗೆ .
ಹೌದು ನನ್ನ ಊಹೆ ಸರಿಯಾಗಿತ್ತು.ಅಲ್ಲಿ ಐದು ಎಕರೆ 28 ಗುಂಟೆ ಭೂಮಿ ಅಲ್ಲಿನ ದೇವರಿಗೆ ಮೀಸಲಾಗಿದೆ .ಅಲ್ಲಿಯ ದೇವರನ್ನು ಮುನೇಶ್ವರ ಎಂದು ಸ್ಥಳೀಯವಾಗಿ ಕರೆದಿದ್ದರೂ  ಮುನೆಶ್ವರನಲ್ಲ .ಪೆರಿಯಾಂಡವರ್ ಅಲ್ಲಿನ ಆರಾಧ್ಯ ದೈವ ಎಂದು ನಂತರ ತಿಳಿಯಿತು .ಇಲ್ಲಿನ ಪೆರಿಯಾಂಡವರ್ ದೇವರ ವಿಗ್ರಹ  ಅಂಗಾತವಾಗಿ ಮಲಗಿದ ಭಂಗಿಯಲ್ಲಿದೆ ಸುಂದರವಾದ ವೀರ ಭಾವವನ್ನು ಸೂಚಿಸುವ.ಮಣ್ಣಿನ ವಿಗ್ರಹ ಇದು .ಒಂದು ಆಲದ ಮರದ ಕಟ್ಟೆಯಲ್ಲಿ ಅಂಗಾತ ಮಲಗಿ ವಿಶ್ರಾಂತಿ ತೆಗೆದು ಕೊಳ್ಳುವ ರೀತಿಯಲ್ಲಿದೆ .
ಅಲ್ಲಿಯ ಅರ್ಚಕ ಆನು ವಂಶಿಕ ಮೊಕ್ತೇಸರರಾದ ಯೋಗಾನಂದ ಅವರು ಅಲ್ಲಿನ ಸ್ದೇವಾಲಯದ ಬಗ್ಗೆ ಮಾಹಿತಿ ನೀಡಿದರು .
ಇಲ್ಲಿ ಮಲಗಿರುವ ವಿಗ್ರಹ ಪೆರಿಯಾಂಡವರ್ ದೇವರದ್ದು .ಈತ ಶಿವನ ಒಂದು ರೂಪ .ಈತನ ವಾಹನ ಕುದುರೆ .
 ಯೋಗಾನಂದ ಅವರ ವಂಶದವರು ಆರು  ತಲೆಮಾರುಗಳ ಹಿಂದೆ ಪಾಳೆಗಾರಾಗಿದ್ದರು.ಅವರು ಹೊನ್ನಿ ಗೌಂಡರ್ ಕ್ಷತ್ರಿಯ ಕುಲಕ್ಕೆ ಸೇರಿದವರು .

ಒಂದು ದಿನ ಬೇಟೆಯಾಡುತ್ತಾ ಎಕ್ಕಲ ಕಟ್ಟೆ ಸಮೀಪದ ಮೇಗಲ ಕೆರೆ ಬಳಿಗೆ ಬರುತ್ತಾರೆ.ಅಲ್ಲಿ ಶಿವನು ಮುಳ್ಳು ಹಂದಿ ರೂಪ ಧರಿಸಿ ನೀರು ಕುಡಿಯಲು ಬರುತ್ತಾನೆ .ಆಗ ಬೇಟೆಗೆ ಬಂದ ಪಾಳೆಗಾರ ಅದು ಶಿವನೆಂದು ತಿಳಿಯದೆ ಅದನ್ನು ಬೇಟೆಯಾಡುತ್ತಾನೆ .
ಆಗ ಅವನ ಕಣ್ಣು ಹೋಗುತ್ತದೆ .ನಂತರ ಅವರಿಗೆ ಮುಳ್ಳು ಹಂದಿ ರೂಪದಲ್ಲಿ ಬಂದಿದ್ದ /ಪೆರಿಯಾಂಡವರ್ /ಶಿವನ ಮೇಲೆ ಬಾಣ ಬಿಟ್ಟ ಕಾರಣ ಕಣ್ಣು ಹೋಯಿತು ಎಂದು .ನಂತರ ಪ್ರಾಯಶ್ಚಿತ್ತವಾಗಿ ಪೆರಿಯಂಡವರ್ ಅನ್ನು ಅಲ್ಲಿ ಆರಾಧಿಸಲು ಪ್ರಾರಂಭಿಸಿದರು .ನಂತರ ಅವರಿಗೆ ದೃಷ್ಟಿ ಮರುಕಳಿಸುತ್ತದೆ .

ಅಲ್ಲಿನ ಪೆರಿಯಾಂಡವರ್ ಗೆ ಗುಡಿ ಕಟ್ಟಿ ಆರಾಧಿಸುವ ಪದ್ಧತಿ ಇಲ್ಲ .ಆಲದ ಮರದ ಬುಡದಲ್ಲಿ ಆರಾಧನೆ ಮಾಡುತ್ತಾರೆ .
ಅಲ್ಲಿಗೆ ಸಮೀಪದ ಇನ್ನೊಂದು ಆಲದ ಮರದ ಕೆಳಭಾಗದಲ್ಲಿ ಸ್ಥಳೀಯ ದೇವತೆ ಕಾಟೇರಮ್ಮನ ಆರಾಧನೆ ಇದೆ .ಕಾಟೇರಮ್ಮ ನ ವಿಗ್ರಹ ಕೂಡ ಮಣ್ಣಿನದ್ದು,ಮತ್ತು ಪೆರಿಯಾಂಡವರ್ ಅಂತೆ ಅಂಗಾತ ಮಲಗಿದ ಭಂಗಿಯ ವಿಗ್ರಹವಾಗಿದೆ .

ಕಾಟೇರಮ್ಮ ನ ಹೆಸರು ಹೇಳಬಾರದು ಎಂಬನಂಬಿಕೆ ಇದೆ ಆದ್ದರಿಂದ ಕಾಟೇರಮ್ಮ ನನ್ನು ಕಾವೇರಮ್ಮ ಎಂದು ಕರೆಯುತ್ತಾರೆ .ಈ ದೇವತೆ ಪೆರಿಯಾಂಡ ವರ್ ಸಹೋದರಿ ಎಂಬ ನಂಬಿಕೆ ಇದೆ .
ಕಾಟೇರಮ್ಮ ಅಲ್ಲದ ಅಂಗಾಳಮ್ಮ /ಅಂಗಾಳಪರಮೇಶ್ವರಿ .ಕೆಂಪಮ್ಮಮೊದಲಾದ14 ಸ್ತ್ರೀ ದೆವತೆಗಳಿಗೆ ಅಲ್ಲಿಆರಾಧ ನೆ ಇದೆ
ಕರ್ನಾಟಕದಲ್ಲಿ ಪೆರಿಯಾಂಡವರ್ ದೇವಾಲಯ ಇಲ್ಲಿ ಮಾತ್ರ ಇದೆಯಂತೆ .
ಚೆನ್ನೈ ಸಮೀಪದ ತಿರುವನೈಲ್ ನಲ್ಲಿ ಸುಮಾರು 300 ವರ್ಷ ಪ್ರಾಚೀನ ಪೆರಿಯಾಂಡವರ್ ದೇವಾಲಯವಿದೆ
.ಪಾರ್ವತಿ ದೇವಿಯ ಶಾಪಕ್ಕೆ ಒಳಗಾಗಿ ಶಿವ ಮಾನ ರೂಪ ತಾಳುತ್ತಾನೆ.ಎಲ್ಲಿಯೂ ನೆಲೆ ಇಲ್ಲದೆ ಹುಚ್ಚು ಹಿಡಿದಂತೆ ಆಗಿ ಗುತ್ತು ಗುರಿ ಇಲ್ಲದೆ ತಿರುಗಾಡುತ್ತಾ ತಿರುವನೈಲ್ ಗೆ ಬರುತ್ತಾನೆ .ಅಲ್ಲಿ ನೆಲೆ ನಿಲ್ಲುತ್ತಾನೆ .ಅಲ್ಲಿ ಮುಂದೆ ಅವನಿಗೆ ದೇವಾಲಯ ಕಟ್ಟಿಸಿದರು ಎಂಬ ಸ್ಥಳ ಪುರಾಣ /ಐತಿಹ್ಯ ಅಲ್ಲಿ ಪ್ರಚಲಿತವಿದೆ .
ವಾಸ್ತವದಲ್ಲಿ ಈತನೊಬ್ಬ ವೀರಪುರುಷನಿರಬಹುದು ಎಂದೆನಿಸುತ್ತದೆ .ಮಲಗಿದ ಭಂಗಿಯ ಕುರಿತು ಆತನ ಕಣ್ಣಿನ ಉರಿಯನ್ನು ಆಕಾಶಕ್ಕೆ ಹೊರತಾಗಿ ಯಾರಿಗೂ ತಾಳಿಕೊಳ್ಳಲು ಸಾಧ್ಯವಿಲ್ಲ .ಆದ್ದರಿಂದ ಅಂಗಾತ ಮಲಗಿಸಿದ ವಿಗ್ರಹ ಇದೆ ಎಂದು ಹೇಳಿರುವುದಾದರೂ ಅಲೆಯಾರೋ ಒಬ್ಬಾತ ಅಲೆದಾಡುತ್ತಾ ಬಂದು ಸುಸ್ತಾಗಿ  ಮಲಗಿರುವ ಸಾಧ್ಯತೆ ಇದೆ .
ಪೆರಿಯಾಂಡವರ್ ಅನ್ನು ಶಿವ ಎಂದು ಭಾವಿಸುತ್ತಾರೆ ಆದರೆ ಈತನಿಗೆ ಶಿವನಂತೆ ನಂದಿ ವಾಹನವಲ್ಲ ,ಈತನಿಗೆ ಕುದುರೆ ವಾಹನವಾಗಿದೆ .ಹಾಗಾಗಿ ಈತ ಜನಪದ ದೇವತೆಯಾಗಿದ್ದು ಮೂಲತ ಓರ್ವ ವೀರ /ಸಾಂಸ್ಕೃತಿಕ ನಾಯಕನಾಗಿದ್ದು ಕಾಲಾಂತರದಲ್ಲಿ ದೈವ್ವಕ್ಕೆರಿ ಆರಧಿಸಲ್ಪಟ್ಟಿರುವ ಸಾಧ್ಯತೆ ಇದೆ .
ಇನ್ನು ಕೆನ್ಗೆರಿಯಲ್ಲಿನ ಪೆರಿಯಾಂಡವರ್ ಆರಾಧನೆಯ ಆರಂಭವಾದ ಹಿನ್ನೆಲೆಯಲ್ಲಿ ಬೇಟೆಯಾಡುತ್ತ ಬಂದ ಪಾಳೆಗಾರರ ಪ್ರಸ್ತಾಪವಿದೆ .ಆತನ ವಂಶಜ ಯೋಗಾನಂದ ಅವರು ಹೇಳುವಂತೆ ಇದು ಆರು ತಲೆಮಾರುಗಾ ಹಿಂದೆ ನಡೆದ ಘಟನೆ .ಆದ್ದರಿಂದ ಇದು ಸುಮಾರು 250 -300 ವರ್ಷಗಳ ಹಿಂದೆ ನಡೆದ ಘಟನೆ .ಈ ಕಾಲಾವಧಿಯಲ್ಲಿ ಅಲ್ಲಿ ಯಾರು ಪಾಳೆಗಾರಾಗಿದ್ದರು ?ಅವರು ತಮಿಳು ಮೂಲದವರೇ ?ಎಂದು ತಿಳಿಯಬೇಕಾಗಿದೆ .ತಮಿಳು ನಾಡಿನ ಪೆರಿಯಾಂಡವರ್ ಅನ್ನು ಇಲ್ಲಿ ಆರಾಧಿಸ ಬೇಕಾಗಿದ್ದರೆ ಅವರು ತಮಿಳು ಮೂಲದ ಪಾಳೆಗಾರ ಆಗಿರುವ ಸಾಧ್ಯತೆ ಇದೆ .
 ಪೆರಿಯಾಂಡವರ್ ಗೂ ತುಳುವರ ಅಧಿ ದೈವ ಬೆರ್ಮೆರ್ ಗೂ ಸಾಕಷ್ಟು ಸಾಮ್ಯತೆಗಳಿವೆ .
ನಾಗ ಮಂಡಳದಲಿ ಬರೆಯುವ ಬ್ರಹ್ಮ ಯಕ್ಷನ ಮುಖ ಮತ್ತು ಪೆರಿಯಾಂಡವರ್ ನ ಮುಖ ಭಾವ ಒಂದೇ ರೀತಿ ಇದೆ .ಬೆರ್ಮೆರ್ ಅಂತೆ ಪೆರಿಯಾಂಡವರ್ ಗೂ ಕುದುರೆ ವಾಹನ .ಇರ್ವರಿಗೂ ಬಿಲ್ಲು ಬಾಣಗಳು ಆಯುಧ ವಾಗಿದೆ .
ಬೆರ್ಮೆರ್ ಓರ್ವ ಯಕ್ಷ ಎಂಬ ಅಭಿಪ್ರಾಯವೂ ಇದೆ ,ತುಳುನಾಡಿನ ಮೂಲ ನಿವಾಸಿಗಳನ್ನು ಯಕ್ಷರು ಆಗಿರಬಹುದು ಎಂಬ ಅಭಿಪ್ರಾಯವೂ ಇದೆ ,ಬೆರ್ಮೆರ್ ಅನ್ನು ನಾಗ ಮಂಡಲದಲ್ಲಿ ಯಕ್ಷ ಬ್ರಹ್ಮ ಎಂದು  ರೇಖಿಸಿ ಆಹ್ವಾನಿಸಿ  ಆರಾಧಿಸುತ್ತಾರೆ ,ಕೆಂಗೇರಿಯ ಎಕ್ಕಲ ಕಟ್ಟೆ ಎಂಬ ಪದ ಯಕ್ಷರ ಕಟ್ಟೆಯ ಪರಿವರ್ತಿತ ರೂಪ ಆಗಿರುವ ಸಾಧ್ಯತೆ ಇದೆ ಬೆರ್ಮೆರ್ ಗೆ ಹಿರಿಯ ಎಂಬ ಅರ್ಥವಿದೆ .ಪೆರಿಯ ಎಂದರೆ ಹಿರಿಯ ಎಂಬರ್ಥದಲ್ಲಿ ಬೆರ್ಮೆರ್ ಪದ ನಿಷ್ಪನ್ನವಾಗಿದೆ ,ಬೆರ್ಮೆರ್ ಅನ್ನು ಬ್ರಹ್ಮ ಲಿಂಗೇಶ್ವರನೆಂದು ಶಿವನೊಂದಿಗೆ ಸಮನ್ವಯ ಗೊಳಿಸಲಾಗಿದೆ ,ಅಂತೆಯೇ ಪೆರಿಯಾಂಡವರ್ ಅನ್ನು ಕೂಡ ಶಿವನೊಂದಿಗೆ ತಾದಾತ್ಮ್ಯ ಗೊಳಿಸಿದೆ ಈ ಬಗ್ಗೆ ಇದಮಿತ್ತಂ ಎಂದು ಹೇಳಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ
ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ


No comments:

Post a Comment