ನಾನಿನ್ನೂ ಸಂಶೋಧನಾ
ಕ್ಷೇತ್ರಕ್ಕೆ ಕಾಲಿರಿಸಿದ ಸಮಯ .ತೊಕ್ಕೊಟು ಸಮೀಪದ ಕುತ್ತಾರು ಪದವಿನಲ್ಲಿ ಭಾರಿ ವೈಭವದ ನಾಗ
ಬ್ರಹ್ಮ ಮಂಡಲ ಏರ್ಪಾಟಾಗಿತ್ತು .ನಾಗ ಮಂಡಲದ ಹಿಂದಿನ ದಿನ ಸೌತೆಡ್ಕಕ್ಕೆ ಹೋಗಿ ಹಿಂದೆ ಬರುವಾಗ
ನಾನು ನನ್ನ ತಾಯಿ ಮತ್ತು ಮಗ ಕುತ್ತಾರುಪದವಿಗೆ ಬಂದೆವು .ಮರು ದಿನ ನಡೆಯುವ ನಾಗ ಬ್ರಹ್ಮ
ಮಂಡಲವನ್ನು ರೆಕಾರ್ಡ್ ಮಾಡಲು ಅನುಮತಿ ಹಾಗೂ ಸಹಕಾರ
ಕೇಳುವುದಕ್ಕಾಗಿ ನಾನು ಅಲ್ಲಿಗೆ ಹೋಗಿದ್ದೆ .ನಾಗಮಂದಲಕ್ಕೆ ಸಾವಿರಾರು ಜನ ಸೇರಿರುತ್ತಾರೆ
.ಅದರ ವೇದಿಕೆ ಸಮೀಪ ಹೋಗಲು ಯಾರಿಗು ಅನುಮತಿ ಇರುವುದಿಲ್ಲ. ಅನೇಕ ವಿಧಿ ನಿಷೇಧಗಳು
ಇಲ್ಲಿರುತ್ತವೆ .ಆದ್ದರಿಂದ ಮೊದಲೇ ಮಾತನಾಡಿ ಅನುಮತಿ ಪಡೆದುಕೊಂಡರೆ ಸುಲಭ ಎಂದು
ನಾವಲ್ಲ್ಲಿಗೆಹಿಂದಿನ ದಿವಸವೇ ಹೋದದ್ದು .ಅಲ್ಲಿ
ಒಂದು ವಾರ ಹಿಂದಿನಿಂದ ಅನೇಕ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತ್ತಿದ್ದ್ದರು
.ಆ ದಿವಸ ಸಂಜೆ ಕೂಡ ೬ ಗಂಟೆಯಿಂದ ಒಂದು ಸಭಾ ಕಾರ್ಯಕ್ರಮ ಏರ್ಪಾಟಾಗಿತ್ತು .ಅಂದು ಧಾರ್ಮಿಕ
ಉಪನ್ಯಾಸ ನೀಡಲು ಮಂಗಳೂರಿನ ಖ್ಯಾತ ಉಪನ್ಯಾಸಕರಾದ
ಪ್ರಭಾ ಕಾಮತ್ ಬರುವವರಿದ್ದರು .
ನಾವು ಅಲ್ಲಿಗೆ ತಲಪುವಾಗ ಸಂಜೆ ೫ ಗಂಟೆ ಆಗಿತ್ತು .ಅಲ್ಲಿನ
ವ್ಯಸ್ಥಾಪಕರನ್ನು (ಅವರ ಹೆಸರು ಸರಿಯಾಗಿ ನೆನಪಿಲ್ಲ .. ಗಟ್ಟಿ ಎಂದು ನೆನಪು ) ನಾನು ಕಂಡು ನಾನು
ಬಂದ ಉದ್ದೇಶವನ್ನು ತಿಳಿಸಿ ಮರುದಿನ ರೆಕಾರ್ಡ್ ಮಾಡುವ ಬಗ್ಗೆ ಅನುಮತಿ ಮತ್ತು ಸಹಕಾರ ಕೇಳಿದೆ
.ಸಹೃದಯಿಗಳಾದ ಅವರು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು . ಅಲ್ಲಿಂದ ನಾನು
ಹೊರಡುವಷ್ಟರಲ್ಲಿ ಅಂದಿನ ಕಾರ್ಯಕ್ರಮಕ್ಕೆ ಪ್ರಭಾ ಕಾಮತ್ ಅವ್ರಿಗೆ ಬರಲು ಆಗುತ್ತಿಲ್ಲ ಎಂಬ
ಮಾಹಿತಿ ಗಟ್ಟಿಯವರಿಗೆ ಸಿಕ್ಕಿತು .ಆಗ ಅವ್ರು ನನ್ನಲ್ಲಿ
ಅವರ ಬದಲು ಉಪನ್ಯಾಸ ನೀಡಲು ಕೇಳಿಕೊಂಡರು
.ಸಂಶೋಧನಾ ಕ್ಷೇತ್ರದಲ್ಲಿ ಆಗ ತಾನೇ ಕಣ್ಣು ಬಿಡುತ್ತಿದ್ದ ನನಗೆ ಒಂದು ಕ್ಷಣ ಏನು ಮಾಡುವುದು ಎಂದು ಗೊತ್ತಾಗಲಿಲ್ಲ!ಉಪನ್ಯಾಸಕಿಯಾಗಿದ್ದ
ನನಗೆ ಭಾಷಣ ಮಾಡಿ ಅಭ್ಯಾಸ ಇತ್ತು .ಆದರೆ ಏನೂ ತಯಾರಿ ಇಲ್ಲದೆ ೨೦೦೦-೩೦೦೦ ಜನ ಸೇರಿದ ಅಷ್ಟು
ದೊಡ್ಡ ಸಭೆಯಲ್ಲಿ ನಾಗಾರಾಧನೆ ಕುರಿತು ಧಾರ್ಮಿಕ ಉಪನ್ಯಾಸ ನೀಡುವುದು ಎಂದರೆ ಸಣ್ಣ ವಿಚಾರ ಅಲ್ಲ
!ನನ್ನ ಗೊಂದಲವನ್ನು ಗಮನಿಸಿದ ಶ್ರೀಯುತ ಗಟ್ಟಿ ಯವರು “ನಿಮಗೆ ಭಾಷಣ ಮಾಡಿ ಅಭ್ಯಾಸ ಇಲ್ಲವೇ”
ಎಂದು ಕೇಳಿದರು.ನಾನುತ್ತರಿಸುವ ಮೊದಲೇ ಅಲ್ಲೇ ಕುಳಿತಿದ್ದ ನನ್ನಮ್ಮ “ಅವಳಿಗೆ ಭಾಷಣ ಮಾಡಿ
ಅಭ್ಯಾಸ ಉಂಟು ಚೆನ್ನಾಗಿ ಮಾತಾಡ್ತಾಳೆ “ಎಂದು ನುಡಿದರು ,ನನ್ನ ಅಮ್ಮನಿಗೆ ನನ್ನ ಬಗ್ಗೆ ವಿಪರೀತ
ನಂಬಿಕೆ ,ತನ್ನ ಮಗಳು ಬಹಳ ಜಾಣೆ ಅಂತ ತಿಳ ಕೊಂಡಿದ್ದಾರೆ.ನನ್ನ ಸಂಗತಿ ನನಗೆ ಗೊತ್ತು ! ಅಮ್ಮನ
ಬಗ್ಗೆ ತುಸು ಕೋಪ ಕೂಡ ಬಂತು ಆ ಘಳಿಗೆಯಲ್ಲಿ !ಅಮ್ಮನ ಮಾತು ಕೇಳಿದ ಗಟ್ಟಿ ಯವರು ಆ ದಿನದ
ಧಾರ್ಮಿಕ ಉಪನ್ಯಾಸ ಮಾಡಲು ಹೇಳಿದರು .ಬೇರೆ ದಾರಿ ಇಲ್ಲದೆ ಒಪ್ಪಿಕೊಂಡೆ !ನಾನು ಆ ತನಕ ಓದಿದ ನಾಗ
ಸಂಬಂಧಿ ಕಥೆಗಳನ್ನು,ವಿಚಾರಗಳನ್ನು
ನೆನಪಿಸಿಕೊಂಡು ವೇದಿಕೆ ಏರಿದೆ .ಸುಮಾರು ೪೫ -೫೦ ನಿಮಿಷಗಳ ಕಾಲ ನಿರರ್ಗಳವಾಗಿ
ಮಾತನಾಡಿದೆ .೨೦೦೦-೩೦೦೦ ಜನ ಸೇರಿದ ಅಷ್ಟು ದೊಡ್ಡ ಸಭೆಯಲ್ಲಿ ನಾನು ಮೊದಲ ಭಾರಿಗೆ ಭಾಷಣ
ಮಾಡಿದ್ದೆ .ಕೊನೆಯಲ್ಲಿ ಎಲ್ಲರು ಎದ್ದು ನಿಂತು ಹಾಕಿದ ಚಪ್ಪಾಳೆಯ ಸದ್ದು ಈಗ ಕೂಡ ನನ್ನ
ಕಿವಿಯಲ್ಲಿ ಅನುರಣಿಸುತ್ತಿದೆ .ಅಂದಿನ ಆ ಒಂದು ಆಕಸ್ಮಿಕವಾಗಿ ಮಾಡಿದ ಭಾಷಣ ನನ್ನಲ್ಲಿ
ಆತ್ಮವಿಶ್ವಾಸವನ್ನು ತುಂಬಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ !
ಮರು ದಿನ ರೆಕಾರ್ಡ್
ಮಾಡಲು ಹೋದಾಗ ಹಿಂದಿನ ದಿನ ನನ್ನ ಮಾತನ್ನು ಕೇಳಿದ ಎಲ್ಲರಿಂದ ಮೆಚ್ಚುಗೆ ಮತ್ತು ಪೂರ್ಣ ಬೆಂಬಲ
.ಅಂದು ನಾಗ ಬ್ರಹ್ಮ ಮಂಡಲಕ್ಕೆ ಸುಮಾರು ೨೦-೨೫ ಸಾವಿರ ಜನ ಸೇರಿದ್ದರು .ನಂಗೆ ವೇದಿಕೆಯ ಸಮೀಪ
ಕುಳಿತುಕೊಳ್ಳಲು ವ್ಯವಸ್ಥೆ ಮಾಡಿ ರೆಕಾರ್ಡ್ ಮಾಡಲು ಅನುವು ಮಾಡಿ ಕೊಟ್ಟಿದ್ದರು.ಇಲ್ಲಿ ಶ್ರೀಯುತ ಗಟ್ಟಿ ಹಾಗೂ ಮಾಜಿ ಕೋರ್ಪರೆಟರ್ ಭಾಸ್ಕರ ರಾವ್ ಅವರು ನೀಡಿದ ಬೆಂಬಲವನ್ನು ನಾನು ಎಂದಿಗೂ
ಮರೆಯಲಾರೆ.
ಮಂಡಲವನ್ನು ಬರೆಯುವ
ಸಮಯದಲ್ಲ್ಲಿಯೇ ನಾನು ಅಲ್ಲಿಗೆ ಹೋಗಿ ಅಂದು ನಾಗ ನರ್ತನಕ್ಕೆ ಬಂದಿದ್ದ್ದ ನಟರಾಜ ವೈದ್ಯರನ್ನು(ಇವರು
ನಮ್ಮ ದೂರದ ಸಂಬಂಧಿಕರು ಕೂಡಾ) ಭೇಟಿ ಮಾಡಿದೆ .ಅವರು ನನಗೆ ಬೇಕಾದ ಎಲ್ಲ ಮಾಹಿತಿಯನ್ನು
ತಾಳ್ಮೆಯಿಂದ ನೀಡಿದ್ದಾರೆ .ಅಂದು ನಾಗ ಮಂಡಲಕ್ಕೆ ಮೊದಲು ಮಧ್ಯಾಹ್ನ ನಾಗ ದರ್ಶನ ಇತ್ತು .ನಾನು
ಪ್ರಸಾದ ಸ್ವೀಕರಿಸಲು ಹೋದಾಗ ಅಂದಿನ ನಾಗ ಪಾತ್ರಿಗಳು “ನೀವು ಇದೆ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು
ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ ಮಾತ್ರವಲ್ಲದೆ ಇನ್ನೊಂದು ಇದೆ ರೀತಿಯ ಪದವಿಯನ್ನ್ನು
ಪಡೆಯುವಿರಿ “ಎಂದು ನುಡಿದಿದ್ದು ನನಗೆ ಇನ್ನು ಕಣ್ಣಿಗೆ ಕಟ್ಟಿದಂತೆ ಇದೆ .ಈಗ ನಾನು ಎರಡನೆಯ ಡಾಕ್ಟರೇಟ್
ಪದವಿಗಾಗಿ ಸಂಶೋಧನಾ ಪ್ರಬಂಧವನ್ನು ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದೇನೆ .ಆದರೆ
ಅಂದು” ನಾನು ಮೊದಲ ಡಾಕ್ಟರೇಟ್ ಪದವಿಯನ್ನ್ನು ಪೂರ್ಣ ಗೊಳಿಸಿಯೇನು” ಎಂಬ ನಂಬಿಕೆ ಕೂಡಾ ನನಗೆ
ಇರಲಿಲ್ಲ (ಅದಕ್ಕೆ ಬೇರೆ ಕಾರಣಗಳಿವೆ !)
ಅಂತು ನಾಗ
ಮಂಡಲವನ್ನು ನಾನು ರೆಕಾರ್ಡ್ ಮಾಡಿದೆ . ಸಾಕಷ್ಟು ಮಾಹಿತಿಯನ್ನೂ ಕಲೆ ಹಾಕಿದ್ದೇನೆ .
ನಾಗಮಂಡಲ, ಢಕ್ಕೆಬಲಿ/ಬ್ರಹ್ಮಮಂಡಲಗಳು ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ ಪ್ರಚಲಿತವಿರುವ ವೈಭವದ ಆಚರಣೆ.ಇದೊಂದು ಸುಂದರವಾದ ನೃತ್ಯ ಸೇವೆ ಕೂಡಾ .ನಾಗ ಮಂಡಲದ
ನೃತ್ಯ ಬಹಳ ಆಕರ್ಷಕವಾಗಿರುತ್ತದೆ .ಮತ್ತೆ ಮತ್ತೆ ನೋಡಬೇಕೆನಿ ಸುವಷ್ಟು ಚಂದದ ನೃತ್ಯ!ಇದರಲ್ಲಿ
ನಾಗ ಪಾತ್ರಿ ಮತ್ತು ಅರ್ಧ ನಾರಿ ರೂಪದ ವೈದ್ಯ ರರು ಮಂಡಲದ ಸುತ್ತ ನರ್ತಿಸುತ್ತಾರೆ !ಸುತ್ತ ೫
ಜನರು ಹಾಡು ಹೇಳುತ್ತಾ ತಿರುಗುತ್ತಾರೆ . ಮೂಲತಃ
ಢಕ್ಕೆಬಲಿ, ನಾಗಮಂಡಲಗಳು ಒಂದೇ
ಅಲ್ಲ. ಆದರೆ ಈಗ ಇವುಗಳ ಆಚರಣೆ ಹೆಚ್ಚು ಕಡಿಮೆ ಒಂದೇ ರೀತಿ ಇದೆ.
ದೇವರ ಆರಾಧನೆಯಲ್ಲಿ
ಹನ್ನೊಂದು ಪ್ರತೀಕಗಳನ್ನು ಪುರಾಣಗಳಲ್ಲಿ ಹೇಳಿವೆ. ಅದರಲ್ಲಿ ಮಂಡಲ ಒಂದು ಪ್ರತೀಕ. ಮಂಡಲದ
ಮಧ್ಯದಲ್ಲಿ ನಾಗನನ್ನು ಪೂಜಿಸುವುದು ನಾಗಮಂಡಲದ ಉದ್ದೇಶ. ಈ ಪೂಜಾವಿಧಿ ಯಾವಾಗಿನಿಂದ ಆರಂಭವಾಯಿತು
ಎಂಬ ಬಗ್ಗೆ ಖಚಿತವಾದ ಆಧಾರವಿಲ್ಲ. “ಕ್ರಿ.ಶ.1458ರ ಬಾರಕೂರಿನ ಶಾಸನದಲ್ಲಿ ‘ಮಂಡಲ ಭಂಡಾರಿ’ ಎಂದು ಬರುತ್ತದೆ. ಬಹುಶಃ ನಾಗಮಂಡಲ ಸೇವೆಯನ್ನು
ನಡೆಸಿಕೊಟ್ಟ ಭಂಡಾರಿಯನ್ನು ಕುರಿತು ಈ ಶಾಸನ ಪ್ರಸ್ತಾಪಿಸಿದ್ದಿರಬೇಕು. ಹೀಗಾಗಿ 500 ವರ್ಷಗಳಿಂದೀಚೆಗೆ ನಾಗಮಂಡಲ ನಡೆದುಬರುತ್ತಿದೆ”
ಎಂದು ಖಚಿತವಾಗಿ ಹೇಳಬಹುದು
ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.1
ನಾಗಮಂಡಲ ಸಂತಾನ
ಬಯಕೆ ಹಾಗೂ ‘ಕುಷ್ಟರೋಗ
ನಿವಾರಣೆಗಾಗಿ ನಡೆಸುವ ಒಂದು ನಾಗಾರಾಧನಾ ಪದ್ಧತಿ, ಇದೊಂದು ಫಲವಂತಿಕೆಯ ಆಚರಣೆ..” ಇದು ತಂತ್ರ ಮೂಲದಿಂದ ಹುಟ್ಟಿಕೊಂಡ ಆರಾಧನೆ” ಎಂದು ಕಾ.ವೆಂ. ರಾಜಗೋಪಾಲ ಅವರು ಅಭಿಪ್ರಾಯ
ಪಟ್ಟಿದ್ದಾರೆ. ನಾಗಮಂಡಲಕ್ಕೆ ಪೂರ್ವಭಾವಿಯಾಗಿ
ನಾಗತಂಬಿಲ, ಆಶ್ಲೇಷಾಬಲಿ,
ಶಾಕಾಸಂಸ್ಕಾರ, ಹಾಲಿಟ್ಟು ಸೇವೆ, ನಾಗದರ್ಶನ ಮೊದಲಾದ ವಿಧಿಗಳನ್ನು ನೆರವೇರಿಸುತ್ತಾರೆ.ನಾಗ
ಶಾಪದಿಂದ ಮುಕ್ತಿ ಪಡೆಯಲು ನಾಗನನ್ನು ಮಂಡಲಕ್ಕೆ ಆಹ್ವಾನಿಸಿ ಆರಾಧಿಸುವುದೇ ನಾಗ ಮಂಡಲ .ಇಲ್ಲಿ
ನಾಗನೊಂದಿಗೆ ಅನೇಕ ಶಕ್ತಿಗಳಿಗೆ ಆರಾಧೆ ಇರುತ್ತದೆ .
.1. ನಾಗಮಂಡಲದ
ರಂಗವೇದಿಕೆ
ಸಾಮಾನ್ಯವಾಗಿ
ಬೆಟ್ಟು ಗದ್ದೆ ಅಥವಾ ಸಮತಟ್ಟಾದ ವಿಶಾಲವಾದ ಬಯಲು ಪ್ರದೇಶದ ಮಧ್ಯೆ ಸುಮಾರು 2-3 ಅಡಿ ಎತ್ತರದಲ್ಲಿ 20 ಕೋಲು ಚೌಕಾಕಾರದ ವೇದಿಕೆಯನ್ನು ನಿರ್ಮಿಸುತ್ತಾರೆ.
ರಂಗದ ನಡುವೆ ಕಂಬ, ಅದರ ಸುತ್ತ ಚಪ್ಪರ,
ಚಪ್ಪರದ ಸುತ್ತ ರೇಷ್ಮೆ
ವಸ್ತ್ರದಿಂದ ಅಲಂಕರಿಸುತ್ತಾರೆ. ತಾವ್ರಿಮಿಟ್ಟಿ (ತಾವರೆ ಮೊಗ್ಗು), ತಾವರೆಹೂ, ಗಿಳಿ ಮುಂತಾದ ರಚನೆಗಳನ್ನು ಮೇಲ್‍ಗಟ್ಟಿನಿಂದ ನೇತು
ಹಾಕುತ್ತಾರೆ.ಚಪ್ಪರವನ್ನು ಅಡಿಕೆಯ ಹಿಂಗಾರದಿಂದ
,ಅಡಿಕೆಯ ಮಾಲೆಯಿಂದ ,ಬಾಳೆಗೊನೆ ಹಾಗೂ ಎಳನೀರಿನಿಂದ ಶೃಂಗರಿಸುತ್ತಾರೆ
ಜಂಗಮ ಸೊಪ್ಪಿನಿಂದ
ತಯಾರಿಸಿದ ಹಸಿರು ಹುಡಿ, ಭತ್ತದ ಹೊಟ್ಟಿನ
ಕರಿಯ ಕಪ್ಪು ಹುಡಿ, ಬೆಳ್ತಿಗೆ ಅಕ್ಕಿಯ
ಹಡಿ, ಬಿಳಿ ಹುಡಿ, ಅರಸಿನ ಹಾಗೂ ಸುಣ್ಣದ ಮಿಶ್ರಣದಿಂದ ತಯಾರಿಸಿದ ಕುಂಕುಮ
ಹಾಗೂ ಅರಸಿನ ಹುಡಿಗಳಿಂದ ಮಂಡಲದ ಮಧ್ಯಭಾಗದಲ್ಲಿ ಏಳು ಹೆಡೆಯ ಸರ್ಪ, ಮರಿನಾಗ, ಬ್ರಹ್ಮ, ಯಕ್ಷ, ಗಣಪತಿಯರನ್ನು ಬರೆಯುತ್ತಾರೆ. ಎಂಟು ಅಥವಾ ಹದಿನಾರು ಎತ್ತರದ ಕಾಲ್ದೀಪಗಳನ್ನು
ಉರಿಸುತ್ತಾರೆ. ರಂಗದ ನಾಲ್ಕು ದಿಕ್ಕಿಗೆ ಎಣ್ಣೆಯ ದೊಂದಿಗಳನ್ನು ಕಟ್ಟುತ್ತಾರೆ. ಇದರ ಸುತ್ತ
ನಾಗಪಾತ್ರಿ ಹಾಗೂ ವೈದ್ಯರು ನರ್ತಿಸುತ್ತಾರೆ.
ಮಂಡಲದ ವಿವಿಧ ಆಕೃತಿಗಳು
.1. ಕೊಳನಾಗ
ಏಳು ಹೆಡೆಯ ದೊಡ್ಡ
ಸರ್ಪದ ಚಿತ್ರಣಕ್ಕೆ ಕೊಳನಾಗ, ಗುಳಿಕ, ಅಥವಾ ಕಾಡ್ಯ ಎನ್ನುತ್ತಾರೆ.
.2. ನಾಗಯಕ್ಷ
ಕೊಳನಾಗನ
ಸಮೀಪದಲ್ಲಿಯೇ ಕೇವಲ ಹೆಡೆಯಂತೆ ಕಾಣುವ ಒಂದು ರೂಪಕ್ಕೆ ಎರಡು ಕಣ್ಣುಗಳನ್ನು ಚಿತ್ರಿಸುತ್ತಾರೆ.
ಇದರ ಆಕಾರ ಶಂಖವನ್ನು ಹೋಲುತ್ತದೆ. ಇದನ್ನು ಕೆಲವರು ಮರಿನಾಗ ಎಂದರೆ ಕೆಲವರು ನಾಗಯಕ್ಷಿ (ಯಕ್ಷೆ)
ಎನ್ನುತ್ತಾರೆ.
.3. ಬ್ರಹ್ಮ
ಕೊಳನಾಗನ
ಎಡಭಾಗದಲ್ಲಿ ಕೆಳಗೆ ಒಂದು ವಿಶಿಷ್ಟ ಮಾನವಾಕೃತಿಯನ್ನು ಚಿತ್ರಿಸುತ್ತಾರೆ. ಇದಕ್ಕೆ ಕೈ
ಕಾಲುಗಳಿಲ್ಲ. ಗಂಡುರೂಪ, ಮೀಸೆ ಇದೆ.
ಹೊರಚಾಚಿದಂತಿರುವ ಹಲ್ಲುಗಳು, ಹಾಗೂ ಎರಡು ಕೋರೆ
ಹಲ್ಲುಗಳಿವೆ. ತಲೆಗೆ ಚೂಪಾದ ಟೊಪ್ಪಿಗೆಯನ್ನು ಧರಿಸಿದಂತೆ ಕಾಣುತ್ತದೆ. ಇದನ್ನು ವೈದ್ಯರು
ಬ್ರಹ್ಮಯಕ್ಷ ಎನ್ನುತ್ತಾರೆ. ತುಳುವರು ಬೆರ್ಮೆರ್ ಎನ್ನುತ್ತಾರೆ. (ಚ)
4.4. ತ್ರಿಶೂಲ
ನಾಗನ ಹೆಡೆಯ
ಮೇಲುಭಾಗಕ್ಕೆ ಒಂದು ತ್ರಿಶೂಲವನ್ನು ಬರೆಯುತ್ತಾರೆ. ಇದರ ಕೆಳಭಾಗವು ಬಲಭಾಗಕ್ಕೆ ಸ್ವಲ್ಪ
ಬಾಗಿರುತ್ತದೆ.
.5. ಗಣಪತಿ
ಬಲತುದಿಗೆ ಸೇರಿಕೊಂಡಂತೆ
ತ್ರಿಕೋನಗಳಿಂದ ರಚಿತವಾದ ವೃತ್ತಾಕಾರವಿದೆ. ಇದು ಶ್ರೀಚಕ್ರವನ್ನು ಹೋಲುತ್ತದೆ. ಇದಕ್ಕೆ
ಮಂಡಲವನ್ನು ರಚಿಸುವ ವೈದ್ಯರು ಗಣಪತಿ ಎನ್ನುತ್ತಾರೆ.
.6. ಪ್ರೇತಯಕ್ಷ
ಇದೊಂದು ಎರಡು
ಕಣ್ಣುಗಳುಳ್ಳ ವಿಶಿಷ್ಟ ಆಕೃತಿ
3. ನಾಗಮಂಡಲ ನೃತ್ಯ
ನಾಗಮಂಡಲದ ಸುತ್ತ
ನೃತ್ಯದಲ್ಲಿ ಪ್ರಧಾನ ಪಾತ್ರ ವಹಿಸುವವರು ಇಬ್ಬರು, ಒಬ್ಬರು ನಾಗಪಾತ್ರಿ. ನಾಗಪಾತ್ರಿ ಮುಂಗೈಗೆ ಕಡಗ,
ಮೈಗೆ ಕೆಂಪುಬಟ್ಟೆ, ಕೆದರಿದ ಕೂದಲು, ಕೊರಳಿನಲ್ಲಿ ನಾಗನ ಚಿಹ್ನೆಯ ಪದಕವಿರುವ ಹಾರವನ್ನು
ಧರಿಸಿರುತ್ತಾರೆ. ಕೈ ತುಂಬ ಹಿಡಿದಿರುವ ಹಿಂಗಾರಗಳನ್ನು ಮುಖಕ್ಕೆ ಆಗಾಗ್ಗೆ ತಿಕ್ಕಿಕೊಳ್ಳುತ್ತಾ
ಇರುತ್ತಾರೆ. ಇನ್ನೊಂದು ಪ್ರಧಾನ ಪಾತ್ರ ವೈದ್ಯರದು. ವೈದ್ಯರು ಅರ್ಧನಾರಿ ವೇಷವನ್ನು
ಧರಿಸಿರುತ್ತಾರೆ. ಯಕ್ಷಗಾನ ಬಡಗುತಿಟ್ಟಿನ ಸ್ತ್ರೀವೇಷವನ್ನು ಹೋಲುವ ಇವರು ಕೆಂಪುಬಣ್ಣದ
ಚೌಕುಳಿಸೀರೆ, ಕಾಲಿಗೆ ಗೆಜ್ಜೆ,
ಎದೆಗೆ ತೋಳಿಲ್ಲದ ರವಿಕೆ,
ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು, ಜರಿರುಮಾಲು ಧರಿಸುತ್ತಾರೆ. ಹಾಡುವ ಹಿಮ್ಮೇಳದ ಮೂರು ಜನ
ವೈದ್ಯರು ಬಿಳಿಧೋತರವನ್ನು ಕಚ್ಚೆ ಹಾಕಿ ಉಟ್ಟು, ಬಿಳಿ ಅಂಗಿ ತೊಟ್ಟಿರುತ್ತಾರೆ. ನಾಗಮಂಡಲದ ವೇದಿಕೆಯ ಮಧ್ಯಭಾಗದಲ್ಲಿ ರಚಿಸಿದ ಚಿತ್ತಾರದ
ಸುತ್ತ ಪಾತ್ರಿ ಮತ್ತು ವೈದ್ಯರು ನರ್ತಿಸುತ್ತಾರೆ. ನಾಗನನ್ನು ಮೈತುಂಬಿಕೊಂಡ ಪಾತ್ರಿ ಕ್ರೋಧದಿಂದ
ಸುತ್ತಿ ಸುಳಿದು ಮುಖವನ್ನು ಗಂಟಿಕ್ಕಿಕೊಂಡು ಹೂಂಕರಿಸುತ್ತ ನಾಗರ ಹಾವಿನಂತೆ ತಲೆಯನ್ನು ಹಿಂದೆಮುಂದೆ
ಆಡಿಸುತ್ತಾ, ನಾಲಿಗೆಯನ್ನು ಆಗಾಗ
ಹೊರಚಾಚುತ್ತಾ, ಬುಸುಗುಟ್ಟುತ್ತಾನೆ.
ಅನಂತರ ಅರ್ಧನಾರಿರೂಪದಲ್ಲಿರುವ ವೈದ್ಯನ ಭಕ್ತಿಗೆ ಒಲಿದು ತಣಿದು ಮಣಿಯುತ್ತಾನೆ. ಈ ಕುಣಿತದಲ್ಲಿ
ಅನೇಕ ಭಾವರಸಗಳ ಅಭಿವ್ಯಕ್ತಿ ಇದೆ. ಎಂಟು (8) ಬರೆದ ಆಕಾರದಲ್ಲಿ ನರ್ತಿಸುವ ಇವರ ದೇಹದ ಎಲ್ಲ ಭಾಗಕ್ಕೂ ಕೆಲಸವಿದೆ. ಬಡಗುತಿಟ್ಟು ಯಕ್ಷಗಾನದ
ಕುಣಿತಗಳಂತಿರುವ ಮಂಡಿಯ ಮೇಲಿನ ನಡೆ ಕೂಡ ಇಲ್ಲಿರುತ್ತದೆ.
4. ನಾಗಮಂಡಲದಲ್ಲಿ
ಆರಾಧನೆಗೊಳ್ಳುವ ದೈವಗಳು
1. ಬ್ರಹ್ಮರಾಯ
ನಾಗಪಾತ್ರಿಗೆ
ದರ್ಶನ ಬರಿಸುವ ಸಂದರ್ಭದಲ್ಲಿ ಒಂದು ಸ್ತುತಿಯನ್ನು ಮಾಡುತ್ತಾರೆ. ಇಲ್ಲಿ ವಿಷ್ಣುವಿನಿಂದ
ಆರಂಭಿಸಿ ಅನೇಕ ದೈವದೇವತೆಗಳನ್ನು ನೆನೆಯುತ್ತಾರೆ. ಅನಂತರ ಬ್ರಹ್ಮನನ್ನು ಮಂಡಲಕ್ಕೆ
ಆಹ್ವಾನಿಸುತ್ತಾರೆ. ಅಲ್ಲಿ ಹೇಳುವ ಸ್ತುತಿ ಹೀಗಿದೆ: ಬ್ರಹ್ಮ ನಿನ್ನರಮನೆಗೆ ಮುನ್ನೂರು
ಬಾಗಿಲುಗಳು | ಚಿನ್ನದಲ್ಲಿ ತೋರಣ
ಎಡಬಿಡದೆ ಚತುರ್ಮುಖ ಕುಲಬ್ರಹ್ಮಸ್ವಾಮಿಯವರು | ಕಾಶ್ಮೀರದಿಂದ ಹೊರಟವನೆ ಹಾರುಕುದ್ರೆಯನ್ನೆ ಏರಿಕೊಳ್ಳುವಂತವರು | ಕುರುಕ್ಷೇತ್ರ ಗಯಕ್ಷೇತ್ರ, ಯಂಕ್ಟಾದ್ರಿ, ಶ್ರೀರಂಗ, ಮಲೆಯಾಳ ಕೇರಳ ಸ್ಥಾನಾಧಿಪತಿಗಳಾಗಿ | ವಾಸವಾಗಿ ನೆಲೆಗೊಂಡನೆಂಬಂಥ | ಚತುರ್ಮುಖ ಕುಲಬ್ರಹ್ಮ | ಅಜಬ್ರಹ್ಮ | ಮಾಂಶ ಬ್ರಹ್ಮ | ಜಡೆಬ್ರಹ್ಮ | ಕೊಡೆ ಬ್ರಹ್ಮ | ಕನಕ ಬ್ರಹ್ಮ | ಧೀರಬ್ರಹ್ಮ | ಸಂನ್ಯಾಸಿ ಬ್ರಹ್ಮರಾಯನ ಪರಿವಾರ ಸಹಿತನಾಗಿ ಈ ಹೊತ್ತಿನ
ಮಂಡ್ಲಭೋಗಕ್ಕೆ ತೆರಳಿ ಬರುವಂಥಾ ಕಾಲದಲ್ಲೀ ||
ಇಲ್ಲಿ ಚತುರ್ಮುಖ
ಕುಲಬ್ರಹ್ಮನೆಂದು ಹೇಳಿದ್ದರೂ ಕೂಡ ಇಲ್ಲಿಯ ಬ್ರಹ್ಮನಲ್ಲಿ ರಾಜನ ಪರಿಕಲ್ಪನೆಯಿದೆ. ಈತ
ಅರಮನೆಯಲ್ಲಿರುವವನು. ಈತನಿಗೆ ಛತ್ರವಿದೆ ಎಂಬುದು ಕೊಡೆ ಬ್ರಹ್ಮ ಎಂಬಲ್ಲಿ ತಿಳಿದು ಬರುತ್ತದೆ.
ಈತ ವೀರ. ಆದ್ದರಿಂದಲೇ ಈತನನ್ನು ಧೀರಬ್ರಹ್ಮನೆಂದು ಹೇಳಿದ್ದಾರೆ. ಈತ ಯೋಗಿಯಿರಬೇಕು. ಇಲ್ಲವಾದರೆ
ಸಂನ್ಯಾಸಿ ಬ್ರಹ್ಮರಾಯ (ರಾಯ=ರಾಜ) ಎಂಬ ವಿಶೇಷಣವಿರುತ್ತಿರಲಿಲ್ಲ. ಕುದುರೆಯನ್ನು ಏರಿಕೊಂಡವನು
ಮತ್ತು ಕಾಶ್ಮೀರದಿಂದ ಬಂದವನು ಎಂದಿಲ್ಲಿ ಹೇಳಲಾಗಿದೆ. ಈ ಸ್ತುತಿಯ ನಂತರ ನಾಗನನ್ನು ಮಂಡಲಕ್ಕೆ
ಬರಮಾಡಿಕೊಳ್ಳುವ ಸ್ತುತಿ ಇದೆ. ಇದರಿಂದ ಇಲ್ಲಿ ನಾಗ ಮತ್ತು ಬ್ರಹ್ಮರು ಬೇರೆ ಬೇರೆ ಶಕ್ತಿಗಳು
ಎಂದು ಸ್ಪಷ್ಟವಾಗುತ್ತದೆ. ಇಲ್ಲಿನ ಬ್ರಹ್ಮ ಅರಸು ಮತ್ತು ಕುದುರೆಯನ್ನೇರುವ ವೀರಯೋಧನಾಗಿದ್ದಾನೆ.
ಆದರೆ ಮುಂದೆ “ಕರವು ಎಂಟು ನಿಮಗೆ ಶಿರವು ನಾಲ್ಕು | ಹಿರಿದಪ್ಪಂತ ದೇಹ ಬ್ರಹ್ಮರಾಯರೆ | ಹರಿದ ತಲÉ ನಿಮಗೆ ಮುರಿದ ಮೀಸೆ | ನಾಭಿಯಲ್ಲಿ ಚಕ್ರ ನಾಭಿಯಲ್ಲಿ ಪದ್ಮ” ಎಂದು ತ್ರಿಮೂರ್ತಿಗಳಲ್ಲಿ ಒಬ್ಬನಾದ ಚತುರ್ಮುಖ
ಬ್ರಹ್ಮನ ಚಿತ್ರಣ ನೀಡುತ್ತಾರೆ.
ಅದೇ ರೀತಿ
ನಾಗದರ್ಶನ ಬರಿಸುವಲ್ಲಿ “ಇಲ್ಲಿ ಶಾಸ್ತಾರದ
ಕುಲಬ್ರಹ್ಮಸ್ವಾಮಿಯವರು ನೆನೆವ ಕಾರ್ಯಗಳೆಲ್ಲವ ಲೇಸು ಮಾಡಿರೋ” ಎಂಬ ಮಾತು ಬರುತ್ತದೆ. ಮುಂದೆ ಬ್ರಹ್ಮಲಿಂಗನ ಕತೆಯಲ್ಲಿ
“.... ಇವರೆಲ್ಲರ ಒಡನಾಟದಿಂದ
ಶಾಸ್ತಾರ ಕುಲಬ್ರಹ್ಮ ದೇವ ತೆರಳಿ ಬನ್ನಿ” “ಕಾಶ್ಮೀರದಿಂದ ದೇವ ಹೊರ್ಡುತಲಿದ್ದ | ಹಾರುಕುದುರೆ ಬ್ರಹ್ಮದೇವ ಏರಿಕೊಂಡು ....” “.... ಕಣ್ಣಡವಳಾರವು ಚಂದ ಶಾಸ್ತಾರಗೆ” ಎಂಬಲ್ಲಿ ಬ್ರಹ್ಮನ ಮಹಿಮೆಯನ್ನು ಅಂದಚಂದವನ್ನು
ವರ್ಣಿಸುತ್ತಾ ಶಾಸ್ತಾರನ ಕಣ್ಣು ಅರಳುವುದು ಚಂದ ಎನ್ನುತ್ತಾರೆ. ಮುಂದೆ ಬ್ರಹ್ಮನ ಬೇರೆ ಬೇರೆ
ಹೆಸರುಗಳನ್ನು ಹೇಳುತ್ತಾ “ಶೂಲಿ ಬ್ರಹ್ಮಯ್ಯ”
ಎಂದು ವರ್ಣಿಸಲಾಗಿದೆ.
ಮುಂದೆ. “ಅಚ್ಚ ಬ್ರಹ್ಮನೇ
ನಿಮ್ಮ ಅರಸಿಯರೊಡನಾಡಿ | ಶೂರತ್ವದಲಿ ಬಾರೋ
ಭೋಗ ಸೇವೆಗೆ” ಎಂದು ಹೇಳಲಾಗಿದೆ.
ಇಲ್ಲಿ ಶೂಲಿ ಬ್ರಹ್ಮನೆಂದರೆ ಶೂಲಪಾಣಿಯಾಗಿರುವ ಶಾಸ್ತಾರ ಸುಬ್ರಹ್ಮಣ್ಯ ಸ್ವಾಮಿಯೇ ಇರಬೇಕು.
ಆದರೆ ಇದೇ ಪದ್ಯದಲ್ಲಿ “ಕರವು ಎಂಟು ನಿಮಗೆ
ಶಿರವು ನಾಲ್ಕು ಹಿರಿದಪ್ಪಂತೆ ದೇಹ ಬ್ರಹ್ಮರಾಯರ | ಹರಿದ ತಲೆ ನಿಮಗೆ ಮುರಿದ ಮೀಸೆ | ನಾಭಿಯಲ್ಲಿ ಚಕ್ರ ಅರವಿಂದ ಪದ್ಮ ||” ಎಂದು ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನೆಂಬಂತೆ
ಬ್ರಹ್ಮರಾಯನನ್ನು ಸ್ತುತಿಸಲಾಗಿದೆ. ನಾಗಮಂಡಲದಲ್ಲಿ ಆರಾಧನೆಗೊಳ್ಳುವ ಬ್ರಹ್ಮ ಯಾರು? ಎಂಬ ಬಗ್ಗೆ ಸ್ತುತಿಗಾರರಿಗೆ ಗೊಂದಲವಿದೆಯೆಂಬುದು
ಇಲ್ಲಿ ಸ್ಪಷ್ಟವಾಗುತ್ತದೆ. ಒಂದೆಡೆ ಬ್ರಹ್ಮನನ್ನು ಕಾಶ್ಮೀರದಿಂದ ಹೊರಟು ಕುದುರೆ ಏರಿ ಬಂದ
ವೀರನೆಂದು ಹೇಳಿದರೆ ಇನ್ನೊಂದೆಡೆ ಸಂನ್ಯಾಸಿ ಬ್ರಹ್ಮರಾಯ ಎನ್ನಲಾಗಿದೆ. ಮತ್ತೊಂದೆಡೆ
ಬ್ರಹ್ಮನಿಗೆ ಶಾಸ್ತಾರ, ಶೂಲಿ ಬ್ರಹ್ಮ
ಎನ್ನಲಾಗಿದೆ. ಅಚ್ಚ, ಬ್ರಹ್ಮ ಎಂದರೆ
(ಅಚ್ಚ=ಅರಸ) ಅರಸ ಬ್ರಹ್ಮ ಎನ್ನುತ್ತಾರೆ. ಅಚ್ಚ ಬ್ರಹ್ಮನೆನ್ನುತ್ತಾ ಅರಸಿಯರೊಡನೆ ಆಡಿ ಬಾ ಎಂದು
ವರ್ಣಿಸಲಾಗಿದೆ. ಹೀಗೆ ಬ್ರಹ್ಮನ ಸ್ವರೂಪದ ಬಗೆಗೆ ಸ್ಪಷ್ಟ ನಿಲುವು ಇಲ್ಲದಿರುವುದು
ಕಾಣಿಸುತ್ತದೆ. ಆದರೆ ನಾಗ ಮತ್ತು ಬ್ರಹ್ಮ ಒಂದೇ ಶಕ್ತಿ ಎಂಬಂತೆ ಇಲ್ಲಿನ ಬ್ರಹ್ಮ
ಚಿತ್ರಿತನಾಗಿಲ್ಲ. ಆತನನ್ನು ಎಲ್ಲೂ ನಾಗಬ್ರಹ್ಮನೆಂದು ಹೇಳುವುದಿಲ್ಲ. ಇಲ್ಲಿನ ಬ್ರಹ್ಮ ಮತ್ತು
ನಾಗಗಳು ಬೇರೆ ಬೇರೆಯೇ ಶಕ್ತಿಗಳು. ಮೊದಲಿಗೆ ಬ್ರಹ್ಮನನ್ನು ಮಂಡಲಕ್ಕೆ ಆಹ್ವಾನಿಸುತ್ತಾರೆ.
ಅನಂತರ ನಾಗನನ್ನು ಆಹ್ವಾನಿಸುತ್ತಾರೆ.
.2. ನಾಗ
ನಾಗದರ್ಶನದ
ಸಂದರ್ಭದಲ್ಲಿ ಬ್ರಹ್ಮನನ್ನು ಮಂಡಲಕ್ಕೆ ಆಹ್ವಾನಿಸಿದ ನಂತರ ನಾಗನನ್ನು ಆಹ್ವಾನಿಸಲಾಗುತ್ತದೆ.
ನಾಗನನ್ನು ಪಾತಾಳದ ಮಹಾಸ್ವಾಮಿ ಎಂದೂ ಹೇಳಲಾಗಿದೆ. ಹೆಣಗಿನಾಗ, ಗೋಧಿನಾಗ, ಶಂಖಪಾಲಕ, ಗುಳಿಕ, ತಕ್ಷಕ, ಕನ್ನಾಗ, ಉನ್ನಾಗ, ಉನ್ನಂತ, ಮಣಿನಾಗ, ಬಿನ್ನಾಣಿ, ಕಾಳಿಂಗ, ಕಾರ್ಕೋಟಕ, ವಾಸುಕಿ, ಧೃತರಾಷ್ಟ್ರ, ಸರ್ಪ, ಶೇಷ, ಕಪಿಲ, ಭೂಧರ ಮೊದಲಾದ ಹೆಸರುಗಳನ್ನು ಹೇಳಿ ಪರಿವಾರ ಸಮೇತನಾಗಿ
ಮಂಡಲಭೋಗಕ್ಕೆ ಆಹ್ವಾನಿಸುವ ಬಗ್ಗೆ ವರ್ಣನೆ ಇದೆ. “ಅಂದು ಅರ್ಜುನ ಬಂದು ಖಾಂಡವವನಕ್ಕೆ ಬೆಂಕಿ ಹಾಕಿದಾಗ,
ಸಾಯದ ನಾಗನೇ ತೆರಳಿ ಬಾ”
ಎಂದು ಖಾಂಡವವನದಲ್ಲಿ
ಬದುಕುಳಿದ ನಾಗನನ್ನು ವರ್ಣಿಸುತ್ತಾರೆ. ಆತನನ್ನೇ ಸರ್ಪರಾಜನೆಂದೂ, ಮಹಾಶೇಷನೆಂದೂ, ಶಿವಕೊರಳಾಭರಣವೆಂದೂ ಜನನಿಯ ಶಾಪಕ್ಕೋಸ್ಕರ ತಪಸ್ಸು
ಮಾಡಿ, ಬ್ರಹ್ಮನನ್ನು
ಒಲಿಸಿಕೊಂಡವನೆಂದೂ, ಪಾತಾಳ ಲೋಕದ ರಾಜ
ಮಹಾನಾಗನೆಂದೂ ವರ್ಣಿಸಿದ್ದಾರೆ. ಪಾತಾಳದರಮನೆಯಿಂದ ಭೂಮಿಗೆ ಬರಲೆಂದು ಮರಿಮೊಟ್ಟೆಗಳೊಂದಿಗೆ ನಾಗ
ರಥವೇರಿ ಬರುವಾಗ ಭೂಕಾಂತೆ ಮಾರ್ಗವನ್ನು ಬಿಡದಿರಲು ಬಾಲದ ತುದಿಯನ್ನು ಪಾತಾಳಕ್ಕೆ ಊರಿ, ಹೆಡೆಯೆತ್ತಿ ಮೇಲೆ ನೋಡಲು ವಿಷ ಹೊರಗೆ ಬಂದು ಸುಡಲು,
ವಿಷಜ್ವಾಲೆಯು ತಡೆಯದೆ
ಭೂದೇವಿ ಕಂಬನಿ ಸುರಿಸಲು ಭೂದೇವಿಯನ್ನು ಕ್ಷಮಿಸಿ, ಹುತ್ತ ಸೇರಿದ ನಾಗನು ಕಾಳ್ಗಿಚ್ಚಿಗೆ ಸಿಕ್ಕಿ
ಸಾಯುತ್ತಾನೆ. ಈ ರೀತಿಯಲ್ಲಿ ಮಡಿದ ಪರಿವಾರಕ್ಕೆ ಮೋಕ್ಷವಿಲ್ಲದಿರಲು, ಸುಬ್ರಹ್ಮಣ್ಯನ ಸಣ್ಣ ಪರಿವಾರದೊಡನೆ ಸೇರಲು, ಸುಬ್ರಹ್ಮಣ್ಯ ದುಷ್ಟಜನರ ಬಗ್ಗೆ ಕೋಪಿಸಿಕೊಂಡು
ಕೊಳನಾಗನನ್ನು ಮುಂದಿಟ್ಟುಕೊಂಡು ಬಿಳಿಕುಷ್ಟ ಇತ್ಯಾದಿ ರೋಗಗಳನ್ನು ಉಂಟು ಮಾಡುತ್ತಾನೆ. ಆಗ ಜನರು
ಪ್ರಶ್ನೆ ಇಡಿಸಲು ಕದ್ರು ಪುತ್ರರಿಗೆ ಭೋಗ ಕೊಡುವ ತನಕ ಉಪದ್ರ ಶಾಂತವಾಗದು ಎನ್ನುತ್ತಾರೆ. ಆಗ
ಜನರು ಹಗಲಲ್ಲಿ, ಪೂಜೆಯನ್ನು
ರಾತ್ರಿಯಲ್ಲಿ ಭೋಗಸೇವೆಯನ್ನು ಕೊಡುತ್ತಾರೆ ಎಂಬ ಕತೆಯನ್ನು ಹಾಡಿನ ರೂಪದಲ್ಲಿ ಹೇಳುತ್ತಾರೆ.
ಅಷ್ಟಕುಲನಾಗರಾದ ಮಹಾನಾಗ, ಹೆಣಗಿ ನಾಗ,
ಕೋನಾಗ, ಶಂಕಪಾಲಕ, ಗುಳಿಕ, ತಕ್ಷಕ, ಕನ್ನಾಗರನ್ನು
ಮಂಡಲಕ್ಕೆ ಆಹ್ವಾನಿಸುತ್ತಾರೆ.
ಅಷ್ಟಕುಲ ನಾಗರು
ಯಾರೆಂಬ ಬಗ್ಗೆ ಗೊಂದಲ ಕಾಣಿಸುತ್ತದೆ. ಮುಂದೆ “ಬಿನ್ನಾಣಿ, ಕಾಳಿಂಗ, ಕಾರ್ಕೋಟಕ, ಧೃತರಾಷ್ಟ್ರ, ವಾಸುಕಿ, ಅನಂತ, ಪದ್ಮ ತೆರಳಿ ಬಾರೋ” ಎಂದು ಹೇಳುತ್ತಾರೆ.
ಇಲ್ಲಿ ನಾಗನನ್ನು “ಲಕ್ಷ್ಮಣರೂಪನೆ ಲಕ್ಷ್ಮಣನೆ” ಎಂದು ವರ್ಣಿಸಿದ್ದಾರೆ. ಖಾಂಡವ ದಹನ, ಆಸ್ತೀಕನ ಕತೆಯನ್ನು ಸೂಕ್ಷ್ಮವಾಗಿ ಸೂಚಿಸುತ್ತಾರೆ. ಹರನ
ಕರುಣೆಯಿಂದ ವೈರಿಯನ್ನು ಗೆದ್ದು, ಷಣ್ಮುಖನನ್ನು
ಸೇರಿದವನೆಂದೂ, ಕುಮಾರ ಪರ್ವತದಲ್ಲಿ
ಷಣ್ಮುಖನ ಜೊತೆ ಇರುವವನು ಎಂದು ನಾಗನ ಬಗ್ಗೆ ಹೇಳಿದೆ. ಆತನನ್ನು ವೀರವಾಸುಕಿ ಎಂದೂ ಹೇಳಿದೆ.
ಆದರೆ ಇನ್ನೊಂದೆಡೆ ‘ವಾಸುಕೀ
ಸುಬ್ರಹ್ಮಣ್ಯ ಬಾರೋ’ ಎಂದು ನಾಗ ಮತ್ತು
ಸುಬ್ರಹ್ಮಣ್ಯರ ತಾದಾತ್ಮ ್ಯವನ್ನು ಹೇಳಿದೆ.
.3. ಯಕ್ಷಿ
ಯಕ್ಷಿಯನ್ನು
ದೇವಲೋಕದ ಹೆಣ್ಣೆಂದೂ ಹಾಲುವರ್ಣದವಳೆಂದೂ ಹೇಳಿದೆ. ‘ಹೆಣ್ಣು ಯಕ್ಷಿ ಗಂಡುಯಕ್ಷಿ, ಭೂತಯಕ್ಷಿ, ಪ್ರೇತಯಕ್ಷಿ | ತಾಂಬೂಲಯಕ್ಷಿ, ನಾಗಯಕ್ಷಿ ನಲಿದಾ’ ಮೇಲೆ ಎಂಬಲ್ಲಿ ಯಕ್ಷಿಯ ಸ್ವರೂಪದ ಬಗೆಗೂ
ಗೊಂದಲವಿರುವುದು ತಿಳಿಯತ್ತದೆ. ಇಲ್ಲಿ ಯಕ್ಷಿ ಎಂದರೆ ನಾಗಯಕ್ಷಿಯ? ಭೂತಯಕ್ಷಿಯೆ? ಪ್ರೇತ ಯಕ್ಷಿಯೇ? ಅಥವಾ ಇವರೆಲ್ಲ ಯಕ್ಷಿಯ ಪರಿವಾರದವರೇ ಎಂಬ ಬಗ್ಗೆ
ಮಾಹಿತಿ ಸಿಗುವುದಿಲ್ಲ. ಯಕ್ಷಿಯ ಕತೆಯಲ್ಲಿ “ದೇವಲೋಕದಲ್ಲಿರುವ ಯಕ್ಷಿಗೆ ಭೂಲೋಕದಲ್ಲಿ ಸೇವೆ ನಡೆಯುವಾಗ ಯಕ್ಷ ವಾದ್ಯವ ಹಿಡಿದು
ಬಾರಿಸುವಾಗ, ಢಕ್ಕೆಯ ಧ್ವನಿ
ಕೇಳಿ ನಿದ್ರೆ ಬಾರದಿರಲು ದೇವೇಂದ್ರನ ಬಳಿಗೆ ಹೋಗುತ್ತಾಳೆ. ದೇವೇಂದ್ರ ಗಮನಿಸದಿರಲು ಕೋಪಗೊಂಡು
ನಂದಿಬಟ್ಟಲು ಹೂ ಕೊೈದು, ಮಾಲೆಯ ಧರಿಸಲು
ದೇವಪೀಠ ತಲೆಕೆಳಗಾಯಿತು. ಆಗ ದೇವೇಂದ್ರ ದೇವಪೀಠವನ್ನೂ ತಂದುಕೊಟ್ಟು, ದೇವಾಭರಣವನ್ನು, ಹೆಣ್ಣಾನೆಯನ್ನು ಕೊಡುತ್ತಾನೆ. ಅವಳು ಗಂಡು ಯಕ್ಷನ ಕೈ
ಹಿಡಿದುಕೊಂಡು, ಭೂಲೋಕಕ್ಕೆ ತೆರಳಿ
ಅಶ್ವತ್ಥಮರದಡಿಯಲ್ಲಿ ಉಯ್ಯಾಲೆಯಾಡಿ ಮಂಡಲಕ್ಕೆ ಬರುತ್ತಾಳೆ” ಎಂದು ಹೇಳಲಾಗಿದೆ.
.4. ರಕ್ತೇಶ್ವರಿ
ರಕ್ತೇಶ್ವರಿಯನ್ನು ಅಮ್ಮನವರು,
ಹೊತ್ತಾರೆ ನೆರಿಯವಳು,
ಹೊನ್ನೋಲೆ ಕಿವಿಯವಳು ಎಂದು
ವರ್ಣಿಸಲಾಗಿದೆ. ಕೆಂಪುರಕ್ತೇಶ್ವರಿ, ಶಾಂತರಕ್ತೇಶ್ವರಿ,
ಸಂಹಾರ ರಕ್ತೇಶ್ವರಿ,
ರಕ್ತಾಕ್ಷಿ, ರಕ್ತಗಂಧಿ ಎಂಬ ಯೋಗಿನಿಗಣಗಳ ಪರಿವಾರವುಳ್ಳವಳು ಎಂದು
ಹೇಳಿದೆ. ಮೂಕಾಸುರನನ್ನು ಕೊಂದು ಕೊಲ್ಲೂರಲ್ಲಿ ನೆಲೆನಿಂತವಳೂ, ಮಹಿಷಾಸುರನನ್ನು ಕೊಂದವಳು ಎಂದೂ ವರ್ಣಿಸಿದೆ.
.5. ಶಿವ
ಶಿವನನ್ನು
ತಲೆಯಲ್ಲಿ ಗಂಗೆ ಹೊತ್ತವನೆಂದೂ, ಕೈಯಲ್ಲಿ ಕಪಾಲವ
ಹಿಡಿದವನೆಂದೂ, ವಿಷಪಾನ
ಮಾಡಿದವನೆಂದೂ ವರ್ಣಿಸಲಾಗಿದೆ. ಬ್ರಹ್ಮಲಿಂಗ, ಮಹಾನಾಗ, ಹೆಣ್ಣುಯಕ್ಷಿ,
ರಕ್ತೇಶ್ವರಿ, ಹಿರೇನಂದಿ, ಮಳ್ಯಾಳ ಬಟ್ರು ಮೊದಲಾದ ಪರಿವಾರ ಗಣಗಳನ್ನು
ಹೊಂದಿದವನೆಂದೂ ವರ್ಣಿಸಲಾಗಿದೆ.
.6. ಜೆಟ್ಟಿಗರಾಯ
ನೇತ್ರಣಿ
ಜೆಟ್ಟಿಗರಾಯ, ವರಗದ ಜೆಟ್ಟಿಗರಾಯ,
ಹಟ್ಟಿಯಂಗಡಿ ಜೆಟ್ಟಿಗರಾಯ
ಎಂದೀತನನ್ನು ವರ್ಣಿಸಲಾಗಿದೆ.
.7. ನಂದಿ
ತಲೆಗೆ
ಖಡ್ಗವನ್ನಿಟ್ಟವನು, ಉದರಗಂಟೆಯ ಕಟ್ಟಿ
ಛಲದಂಕನಾದವನು ಎಂದು ನಂದಿಗೆ ಹೇಳಿದೆ. “ಉಳ್ಳಾಳ ಎಂಬ
ಸ್ಥಳದಲ್ಲಿ ಚಿನ್ನಮ್ಮ ಹುಟ್ಟಿ ಬಾಳುತ್ತಿದ್ದಳು. 16 ವರ್ಷ ತುಂಬಿತ್ತು. ಪುಷ್ಪಾಳಿಕೆಯೊಳೊಪ್ಪಿ ಬಾಳುವಾಗ ಚಿಕ್ಕಯ್ಯಶೆಟ್ಟಿ
ಜೋಗಪ್ಪಶೆಟ್ಟಿ ಹುಟ್ಟಿದರು. 16 ವರ್ಷವಾಗುವಾಗ
ದಾಯಾದ್ಯ ಮತ್ಸರದಿಂದ ರಣಕಾಳಗವಾಯಿತು. ಕಾಳಗದಲ್ಲಿ ಇಬ್ಬರೂ ಸತ್ತು ಹಿರೆನಂದಿ ಕಿರೆನಂದಿ
ಎನಿಸಿಕೊಂಡು ಉಳ್ಳಾಲದಲ್ಲಿರಲು ಸಮುದ್ರರಾಜನು ಒತ್ತಿ ಬರಲು ಉಳ್ಳಾಲ ತೇಲಿ ಹೋಗಲು ಉತ್ತರದೇಶಕ್ಕೆ
ಹೋಗಿ, ಇಲ್ಲಿಯೇ ಸ್ಥಳ ಒಳ್ಳೆಯದೆಂದು
ಅಲ್ಲಲ್ಲಿ ಮನೆ ಕಟ್ಟಿಸಿಕೊಂಡು ಹಿರೆನಂದಿ ಕಿರೆನಂದಿಯರು ಭೇದವಿಲ್ಲದೆ ಆಡುತ್ತಾ ಇದ್ದರು”
ಎಂಬ ಕಥೆಯನ್ನು ನಾಗಮಂಡಲ
ಸಂದರ್ಭದಲ್ಲಿ ಹೇಳುತ್ತಾರೆ.
No comments:
Post a Comment