ಸಾವಿರದೊಂದು ಗುರಿಯೆಡೆಗೆ -ತುಳುನಾಡ ದೈವಗಳು ಉಂರ್ದರ ಪಂಜುರ್ಲಿ © ಡಾ.ಲಕ್ಷ್ಮೀ ಜಿ ಪ್ರಸಾದ
ಕಳೆದ ತಿಂಗಳ ಹದಿನಾಲ್ಕರಂದು ಆಮಂತ್ರಣ ಹಬ್ಬಕ್ಕೆ ಅತಿಥಿಯಾಗಿ ಬರುವಂತೆ ಶೇಖರ್ ಬೆಳಾಲ್ ಅವರು ಆಹ್ವಾನಿಸಿದಾಗ ಆ ಪರಿಸರದಲ್ಲಿನ ದೈವಗಳ ಕುರಿತಾಗಿ ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಒಟ್ಟಿಗೆ ಮಾಡಬೇಕೆಂದು ಪೂರ್ವ ತಯಾರಿ ಮಾಡಿಕೊಂಡು ಹೊರಟೆ.ಸಮೀಪದ ನಾರಾವಿಯಲ್ಲಿ ಶಿಕ್ಷಕರಾಗಿರುವ ನಮ್ಮ ಸಂಬಂಧಿಕರಾದ ಶಿವ ಶಂಭು ಭಟ್ ಅವರಿಂದಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಯಿತು.
ಅವರೊಂದಿಗೆ ಸ್ಥಳೀಯ ಭೂತ ಕಟ್ಟುವ ಕಲಾವಿದರಾದ ವಿಠಲ ನಾರಾವಿ ಅವರ ಮನೆಗೆ ಹೋದಾಗ ವಿಠಲ ಹಾಗೂ ಅವರ ಅತ್ತೆಯವರು ಸಾಕಷ್ಟು ಮಾಹಿತಿ ನೀಡಿದರು.ಉಂರ್ದರ ಪಂಜುರ್ಲಿ, ಹಲೇರ ಪಂಜುರ್ಲಿ, ಸೂಕತ್ತೆರಿ ,ಮರ್ಲು ಮೈಯೊಂದಿ ಮೊದಲಾದ ದೈವಗಳ ಮಾಹಿತಿ ನೀಡಿದರು.
ಮೂಡಬಿದಿರೆಯ ಸಮೀಪದ ಪಡು ಮಾರ್ನಾಡಿನಲ್ಲಿ ಉದಿಪನವಾದ ಭೂತ ಉಂರ್ದರ ಪಂಜುರ್ಲಿ. ಉಂರ್ದರ ಪಂಜುರ್ಲಿ ಪಂಜುರ್ಲಿ ಭೂತವಲ್ಲ.ಪಂಜುರ್ಲಿ ಯ ಸೇರಿಗೆಗೆ ಸಂದ ದೈವವಿದು.
ಪಡು ಮಾರ್ನಾಡಿನಲ್ಲಿ ಇಬ್ಬರು ಅಕ್ಕತಂಗಿಯರು ಇದ್ದರು.ಅವರಿಗೆ ಒಬ್ಬೊಬ್ಬ ಮಗಂದಿರು ಇದ್ದರು.ಅವರ ಹಿರಿಯರಿಂದ ಬಂದ ಆಸ್ತಿಯಲ್ಲಿ ಜಾಗದ ಭೂತವಾಗಿ ಪಂಜುರ್ಲಿ ದೈವ ಇತ್ತು. ಅವರ ಮಕ್ಕಳ ಕಾಲದಲ್ಲಿ ಆಸ್ತಿ ಎರಡು ಪಾಲಾಯಿತು.ಆಗ ಇಬ್ಬರು ಅಣ್ಣತಮ್ಮಂದಿರು ಉಂರ್ದರ ಬೆರ್ಮು ಮತ್ತು ನರಸಿಂಹ ಪಕಳೆ(?) ಪಂಜುರ್ಲಿ ದೈವ ತಮಗೆ ಬೇಕು ಎಂದು ಹಠ ಹಿಡಿದರು.ಊರವರು ಸೇರಿ ರಾಜಿ ಪಂಚಾಯತಿಗೆ ಮಾಡಿ ಇಬ್ಬರೂ ಒಟ್ಟಿಗೆ ಸೇರಿ ಆರಾಧನೆ ಮಾಡಿ ಎಂದು ತಿಳುವಳಿಕೆ ನೀಡಿದರು.ಆದರೆ ಈ ಅಣ್ಣ ತಮ್ಮಂದಿರು ಅದನ್ನು ಒಪ್ಪದೆ ಪಂಜುರ್ಲಿ ದೈವಕ್ಕೆ ಇನ್ನೊಬ್ಬನ ತಲೆ ಉರುಳಿದರೆ ದೈವಕ್ಕೆ ಕೊಡಿ ಏರಿಸಿ ಉತ್ಸವ ನೀಡಿ ಆರಾಧನೆ ಮಾಡುತ್ತೇನೆ ಎಂದು ಇಬ್ಬರು ಕೂಡ ಹರಿಕೆ ಹೇಳಿದರು.ಪರಿಣಾಮವಾಗಿ ದೈವ ಇಬ್ಬರನ್ನೂ ಮಾಯ ಮಾಡಿ ಪಡುಮಾರ್ನಾಡಿನ ಬಾವಿಗೆ ಬೀಳುವಂತೆ ಮಾಡಿತು.ಹಾಗೆ ಮಾಯವಾದ ಅಣ್ಣ ತಮ್ಮಂದಿರು ಪಂಜುರ್ಲಿ ದೈವದ ಸೇರಿಗೆಗೆ ಸಂದು ಉಂರ್ದರ ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ.ಇವರು ಮಾಯವಾಗಿ ಬಂದು ಬಿದ್ದ ಬಾವಿ ಈಗಲೂ ಪಡುಮಾರ್ನಾಡಿನಲ್ಲಿ ಇದೆ
ಉಂರ್ದರ ಪಂಜುರ್ಲಿ ದೈವಕ್ಕೆ ಪುಂಚಾಡಿ ಬರ್ಕೆಯಲ್ಲಿ ಆರಾಧನೆ ಇರುವ ಬಗ್ಗೆ ಸಂಕೇತ್ ಪೂಜಾರಿಯವರು ತಿಳಿಸಿದ್ದಾರೆ.( nammabillavaru.com) ಮಾಳ ಹುರ್ಕಟ್ಟೆ ಕೇರ ಕುಟುಂಬದಲ್ಲಿ ನಡೆದ ಉಂರ್ದರ ಪಂಜುರ್ಲಿ ಕೋಲದ ವೀಡಿಯೋ ಅನ್ನು ವಿಶ್ವನಾಥ ಸಾಲಿಯಾನ್ ಅವರು ಯು ಟ್ಯೂಬ್ ನಲ್ಲಿ ಹಾಕಿದ್ದಾರೆ
ಮಾಹಿತಿ ನೀಡಿದ ವಿಠಲ ನಾರಾವಿ ಮತ್ತು ಕ್ಷೇತ್ರ ಕಾರ್ಯದಲ್ಲಿ ತುಂಬು ಬೆಂಬಲ ನೀಡಿದ ಶಿವ ಶಂಭು ಭಟ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಚಿತ್ರ ಕೃಪೆ - ಸಂಕೇತ್ ಪೂಜಾರಿ
ಚಿತ್ರ ಕೃಪೆ - ವಿಶ್ವನಾಥ ಸಾಲಿಯಾನ್
No comments:
Post a Comment