Saturday 29 February 2020

ಸಾವಿರದೊಂದು ಗುರಿಯೆಡೆಗೆ ತುಳು ನಾಡ ದೈವಗಳು : 470 ಕೋಳೆಯಾರ ಮಾಮ - ಡಾ.ಲಕ್ಷ್ಮೀ ಜಿ ಪ್ರಸಾದ್



ಕೋಳೆ/ಳಿಯಾರ ಮಾಮ

ಕೋಳೆ/ಳಿಯಾರ ಮಾಮ
 ಒಂದು ಅಪರೂಪದ ದೈವ,ತುಳು ನಾಡಿನ ಹೆಚ್ಚಿನ ದೈವಗಳು ಈ ಹಿಂದೆ ಮಾನವರಾಗಿದ್ದವರೇ ಆಗಿದ್ದಾರೆ.ಯಾವುದಾದರೂ ಕಾರಣಕ್ಕೆ  ದುರಂತವನ್ನಪ್ಪಿ ದೈವತ್ವ ಪಡೆದವರು ಅನೇಕರು ಇದ್ದಾರೆ.ತುಳು ನಾಡಿನಲ್ಲಿ ಯಾರಿಗೆ ಯಾಕೆ ಹೇಗೆ ದೈವತ್ವ ಸಿಗುತ್ತದೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ‌.ಆದರೂ ಅನೇಕರು  ಪ್ರಧಾನ ದೈವಗಳ ಅನುಗ್ರಹ ಅಥವಾ ಆಗ್ರಹಕ್ಕೆ ತುತ್ತಾಗಿ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ. ಅಕ್ಕಚ್ಚು,ಆಲಿ ಭೂತ,ದೆವರ ಪೂಜಾರಿ ಪಂಜುರ್ಲಿ ,ಬ್ರಾಣ ಭೂತ ಮೊದಲಾದವರು ಹೀಗೆ ದೈವತ್ವವನ್ನು ಪಡೆದವರು‌.
ಇಲ್ಲಿ ದೈವತ್ವ ಪಡೆದವರೆಲ್ಲ ತುಳುನಾಡಿನವರೇ ಎಂಬಂತಿಲ್ಲ. ಕನ್ನಡ ಬೀರ,ಕನ್ನಡ ಭೂತ, ಬೈಸು ನಾಯಕ,ಬಚ್ಚ ನಾಯಕ ಮೊದಲಾದವರು ಘಟ್ಟದ ಮೇಲಿನಿಂದ ಇಳಿದು ಬಂದು ತುಳುನಾಡಿನಲ್ಲಿ ಕಾರಣಾಂತರಗಳಿಂದ ದೈವತ್ವ ಪಡೆದವರಾಗಿದ್ದಾರೆ.ಇದಕ್ಕೆ ದೇಶ ರಾಜ್ಯಗಳ ಗಡಿ ಕೂಡ ಇಲ್ಲ.ಅರಬ್ ದೇಶದಿಂದ ಬಂದ ಖರ್ಜೂರ ವ್ಯಾಪಾರಿ ಮಂಗಳೂರು ಉರ್ವ ಚಿಲಿಂಬಿಯಲ್ಲಿ ಅರಬ್ಬಿ ಭೂತವಾಗಿದ್ದಾನೆ.ಬಸ್ರೂರಿನಲ್ಲಿ ಐದು ಚೀನೀ ಭೂತಗಳಿವೆ.
ಅಂತೆಯೇ ಸಾಸ್ತಾನ ಕೋಡಿತಲೆ ಗ್ರಾಮದಲ್ಲಿ ಕೋಳೆ/ಳಿಯಾರ ಎಂಬ ದೈವ ಇದೆ.ಇಲ್ಲಿ ಹಾಯ್ಗುಳಿ‌ಪ್ರಧಾನ ದೈವ.ಪ್ರಧಾನ ದೈವ ಹಾಯ್ಗುಳಿಯ ಸೇರಿಗೆ ದೈವವಾಗಿ ಕೋಳೆಯಾರ/ ಕೋಳೆಯಾರ ಮಾಮ ಎಂಬ ದೈವಕ್ಕೆ ಆರಾಧನೆ ಇದೆ.ಇಲ್ಲಿನ ಅರ್ಚಕರಾದ ಕೊರಗ ಪೂಜಾರಿಯವರು ಈ ಬಗ್ಗೆ ಮಾಹಿತಿ ನೀಡಿದ್ದು ಶ್ರೀ ಚಂದ್ರ ಶೇಖರ ನಾವಡ ಇದನ್ನು ರೆಕಾರ್ಡ್ ಮಾಡಿ ಯು ಟ್ಯೂಬ್ ನಲ್ಲಿ ಹಾಕಿದ್ದಾರೆ.
ಕೋಳೆಯರ ಎಂಬುದು ಮಹಾರಾಷ್ಟ್ರದ ಒಂದು ಮೀನುಗಾರರ ಸಮುದಾಯ.ಇವರನ್ನು ಕೋಳಿಯವರ ಕೋಳೆಯರರು ಎಂದು ಕರೆಯುತ್ತಾರೆ. ಇವರು ಆರ್ಥಿಕವಾಗಿ ಸಾಕಷ್ಟು ಸದೃಢರಾದವರು‌.
ಮಹಾರಾಷ್ಟ್ರ ದಿಂದ  ಕೋಳೆಯರ ಸಮುದಾಯದ ಓರ್ವ ಮಾಂತ್ರಿಕ ಶಕ್ತಿ ಇರುವ ವ್ಯಕ್ತಿ  ಕುಂದಾಪುರ ಕೋಡಿ ತಲೆ ಸಮೀಪದ ಹಂಗಾರಕಟ್ಡೆಯ ಬಂದರಿಗೆ ಬರುತ್ತಾನೆ.ಅವನು ಕೋಡಿತಲೆಯ ಹಾಯ್ಗುಳಿ ದೈವದ ಬಗ್ಗೆ ಕೇಳಿರುತ್ತಾನೆ..ಇಂತಹ ದೈವ ತಮ್ಮ ಊರಿನಲ್ಲಿ ಇದ್ದರೆ ಒಳ್ಳೆಯದೆಂದು ಭಾವಿಸಿ ತನ್ನ ಮಂತ್ರ ಶಕ್ತಿಯಿಂದ ಹಾಯ್ಗುಳಿಯನ್ನು ಕರೆದೊಯ್ಯಬೇಕೆಂದು ಯೋಚಿಸುತ್ತಾನೆ.
.ಇತ್ತ ಹಾಯ್ಗುಳಿ ದೈವವು ಇಂತಹ ಮಾಂತ್ರಿಕ ಶಕ್ತಿ ಇರುವ ಬಂಟ ತನಗಿದ್ದರೆ ಇನ್ನೂ ಒಳ್ಳೆಯದೆಂದು ಆತನನ್ನು ಇಲ್ಲಿಗೆ ಕರೆತರಲು ಯೋಚಿಸುತ್ತದೆ‌.
ಕೋಳೆಯಾರ ಸಮುದಾಯದ ವ್ಯಕ್ತಿ  ಬಂದರಿನಿಂದ ಅಳಿವೆ ಮೂಲಕ ಒಳಗೆ ಬರಲು ದೋಣಿಗೆ ಹಾಯಿ ಕಟ್ಟುತ್ತಾನೆ.ಆಗ ಅಯ ತಪ್ಪಿ ಕೆಳಗೆ ಹಡಗಿಗೆ ಬೀಳುತ್ತಾನೆ.ಅವನ ತಲೆ ತುಂಡಾಗಿ ರುಂಡ ಮುಂಡ ಬೇರೆಯಾಗಿ ಬೀಳುತ್ತಾನೆ. ಆಗ ಅವನನ್ನು ಕರೆತಂದು ಹಾಯ್ಗುಳಿ ದೈವವು ತನ್ನ ಬಂಟನಾಗಿ ಕೋಡಿ ತಲೆ ಗ್ರಾಮದಲ್ಲಿ ತನ್ನ ಜೊತೆಯಲ್ಲಿ ನೆಲೆ ಗೊಳಿಸುತ್ತದೆ.
ಆತ ಮಹಾರಾಷ್ಟ್ರ ದ  ಕೋಳೆಯಾರ ಸಮುದಾಯದ ವ್ಯಕ್ತಿ ಆದ ಕಾರಣ ಆತನನ್ನು ಅದೇ ಹೆಸರಿನಲ್ಲಿ ಆರಾಧನೆ ಮಾಡುತ್ತಾರೆ.
ಆತ ಕೈಯಲ್ಲಿ ಒಂದು ಕೋಳಿಯನ್ನು ಹಿಡಿದಿರುತ್ತಾನೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಯು ಟ್ಯೂಬ್ ನಲ್ಲಿ ಹಾಕಿದ ಚಂದ್ರಶೇಖರ ನಾವಡ ಮಾಹಿತಿ ನೀಡಿದ ಕೊರಗ  ಪೂಜಾರಿ ಮತ್ತು ಯು ಟ್ಯೂಬ್ ಲಿಂಕ್ ನೀಡಿ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ  ಪ್ರಸನ್ನ ಪಿ ಪೂಜಾರಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು
ಯು ಟ್ಯೂಬ್ ನಲ್ಲಿ ನೋಡಿರಿ
https://youtu.be/CVwJ7mgMeFQ

No comments:

Post a Comment