ತುಳುನಾಡು ವಿಶಿಷ್ಟ ಸಂಸ್ಕೃತಿಯ ನೆಲೆವೀಡು. ಪಾಡ್ದನಗಳು ಇಲ್ಲಿನ ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮದ ಕಾರ್ಯವನ್ನು ನಿರ್ವಹಿಸುತ್ತವೆ. ತುಳುವರ ನಂಬಿಕೆ ಆಗುಹೋಗುಗಳು ನೋವು ನಲಿವುಗಳು ಪಾಡ್ದನಗಳ ಮೂಲಕ ಹೊರಹೊಮ್ಮುತ್ತವೆ. ಕೊರಗ ತನಿಯ ಕೋಟೆದ ಬಬ್ಬು ಬಬ್ಬರ್ಯ, ಗುಳಿಗ ಮೊದಲಾದ ಭೂತಗಳು ತುಳುವರ ಆರಾಧ್ಯ ದೈವಗಳು. ಆದರೆ ಇಲ್ಲಿ ವೈದಿಕ ದೇವರುಗಳಾದ ರಾಮ ,ಕೃಷ್ಣ,ಈಶ್ವರ ,ಗಣಪತಿ,ಲಕ್ಷ್ಮಿ ಪಾರ್ವತಿ ಮೊದಲಾದವರ ಆರಾಧನೆ ಕೂಡಾ ಇದೆ .ಈ ವೈದಿಕ ದೇವರುಗಳ ಕುರಿತಾಗಿ ಪಾಡ್ದನಗಳು ಕೂಡಾ ಇವೆ ,ಭೂತಗಳ ಕುರಿತಾದ ಐತಿಹ್ಯಗಳು ,ಕಥಾನಕಗಳು ಸಿಕ್ಕಿವೆ . ಇದರಲ್ಲಿ ವೈದಿ ಕ ದೇವರುಗಳ ಕುರಿತಾದ ಕಥಾನಕಗಳಲ್ಲಿ ಬಹಳ ವೈಶಿಷ್ಟ್ಯಗಳಿವೆ.
ತುಳು ಜನಪದ ಸಾಹಿತ್ಯದಲ್ಲಿ ಅದರಲ್ಲಿಯೂ ವಿಶೇಷವಾಗಿ ಪಾಡ್ದನಗಳಲ್ಲಿ ಈಶ್ವರ, ಕೃಷ್ಣ ಮೊದಲಾದ ದೇವರುಗಳ ಉಲ್ಲೇಖವಿದೆ. ಇಲ್ಲಿ ದೇವರುಗಳು ಪುರಾಣದ ಕಲ್ಪನೆಗಿಂತ ಭಿನ್ನವಾಗಿ ಚಿತ್ರಿಸಲ್ಪಟ್ಟಿದ್ದಾರೆ.ನನ್ನ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ನನಗೆ ಸಿಕ್ಕ ಪಾಡ್ದನಗಳಲ್ಲೇ ಅತ್ಯಂತ ಅಪೂರ್ವವಾದುದು ,ವಿಶಿಷ್ಟ ವಾದುದು ಚಂದಬಾರಿ ರಾಧೇ ಗೋಪಾಲ ಪಾಡ್ದನ .ಬಂಟ್ವಾಳದ ಮಣಿನಾಲ್ಕುರಿನ ಶ್ರೀಮತಿ ಶಾರದಾ ಜಿ ಬಂಗೇರರು ಈ ಪಾಡ್ದನವನ್ನು ಹಾಡಲು ತಿಳಿದಿದ್ದು, ನನ್ನ ವಿನಂತಿಯ ಮೇರೆಗೆ ಇದನ್ನು ಹಾಡಿದ್ದು, ನಾನು ರೆಕಾರ್ಡ್ ಮಾಡಿ ಲಿಪ್ಯಂತರ ಗೊಳಿಸಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದೇನೆ ಕೂಡಾ. ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಶ್ರೀಕೃಷ್ಣ ಪ್ರಧಾನ ಪಾತ್ರವಾಗಿದ್ದಾನೆ. ನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಕೃಷ್ಣನ ಪ್ರಸ್ತಾಪವಿದೆ. ಇಲ್ಲೆಲ್ಲ ಶ್ರೀಕೃಷ್ಣನನ್ನು ಮಹಾತ್ಮನನ್ನಾಗಿ ಚಿತ್ರಿಸಿಲ್ಲ. ಈ ಪಾಡ್ದನಗಳಲ್ಲಿ ಶ್ರೀಕೃಷ್ಣನನ್ನು ಸ್ತ್ರೀಲೋಲನಾಗಿ, ವಿಷಯಲಂಪಟನಂತೆ, ಕಳ್ಳರ ಕಳ್ಳನಂತೆ ಚಿತ್ರಿಸಲಾಗಿದೆ.
ಪುರಾಣದ ಪರಿಕಲ್ಪನೆಯಲ್ಲಿ ಶ್ರೀಕೃಷ್ಣ-ರಾಧೆಯರು ರಾಧೆಯರು ಅನುಪಮ ಪ್ರೇಮಿಗಳು. ಕೃಷ್ಣನಿಗೆ ಒಲಿದ ರಾಧೆ ತಾನಾಗಿಯೇ ಕೃಷ್ಣನೆಡೆಗೆ ಬಂದಂತೆ ಪುರಾಣಗಳಲ್ಲಿದೆ. ಆದರೆ ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಶ್ರೀಕೃಷ್ಣನು ರಾಧೆಯನ್ನು ಮೋಸದಿಂದ ವಶಪಡಿಸಿಕೊಂಡ ಕಥಾನಕವಿದೆ. ಚಂದಬಾರಿಯನ್ನು ಶ್ರೀಕೃಷ್ಣನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಚಂದಬಾರಿ, ರಾಧೆಯರನ್ನು ಬಾಲ್ಯದಲ್ಲಿಯೇ ಮದುವೆ ಮಾಡಿಕೊಟ್ಟಿರುವುದರಿಂದ ರಾಧೆಗೆ ತನಗೋರ್ವ ಅಕ್ಕ ಇರುವುದು ತಿಳಿದಿರುವುದಿಲ್ಲ. ಒಂದು ದಿನ ರಾಧೆ ತನ್ನ ಪತಿ ಗೋಪಾಲನಲ್ಲಿ ನನಗೆ ಯಾರು ಸಂಬಂಧಿಕರು ಇಲ್ಲವೇ? ಎಂದು ಪ್ರಶ್ನಿಸುತ್ತಾಳೆ.
ಕುಟುಂಬ ಸಂಸಾರ ಇಜ್ಜೀಯ ಗೋಪಾಲ
ಬಂಧುಲ ಬಳಗೆಂಕ್ ಇಜ್ಜೀಯೆ ಗೋಪಾಲ
ಒರಿ ಅಪ್ಪೆಗ್ ಒರ್ತಿಯೇ ಮಗುಳುಯೇ ಗೋಪಾಲ
ಲೆಂದುದು ನನ ಬೇಕ ಕೇಂಡಾಳು ರಾಧೆ ಆಳ್
ಕನ್ನಡ ರೂಪ :
ಕುಟುಂಬ ಸಂಸಾರ ನನಗಿಲ್ಲವೇ ಗೋಪಾಲ
ಬಂಧು ಬಳಗವು ನನಗಿಲ್ಲವೇ ಗೋಪಾಲ
ಒಬಳು ತಾಯಿಗೆ ಒಬ್ಬಳೇ ಮಗಳೇ ಗೋಪಾಲ
ಎಂದು ಇನ್ನು ಬೇಗ ಕೇಳಿದಳು ರಾಧೆ ಅವಳು
ಆಗ ಗೋಪಾಲನು ‘ನಿನಗೆ ಚಂದಬಾರಿ ಎಂಬ ಅಕ್ಕ ಇದ್ದಾಳೆ. ಅವಳಿಗೆ ಮೇಲಿನ ಮಿರಿಲೋಕದ ಶ್ರೀಕೃಷ್ಣನೊಂದಿಗೆ ಮದುವೆಯಾಗಿದೆ’ ಎಂದು ಹೇಳುತ್ತಾನೆ.
ಏರ್ಯ ರಾಧೆಯೆ ಕೇಂಡಾ
ನಿನ್ನಡ ಪಳಿಂದು ಪಂಡುಂಡ ಉಳ್ಳಾಲು ಚಂದಬಾರಿ
ಮಿತ್ತುಲ ಮಿರಿಬಾರಿ ಲೋಕೊಡು ಸಿರಿಕೃಷ್ಣ ದೇವರೆಗು
ಕಂಡನಿ ಅಡತ್ತಾಳು ಲೆಂದುದು ಪಂಡೆರು ಗೋಪಾಲ
ಕನ್ನಡ ರೂಪ :
ಏನೇ ರಾಧೆ ಕೇಳಿದೆಯ
ನಿನ್ನ ಅಕ್ಕ ಎಂದು ಹೇಳಿದರೆ ಇದ್ದಾಳೆ ಚಂದ ಬಾರಿ
ಮೇಲಿನ ಮೀರಿ ಭಾರಿ ಲೋಕದಲ್ಲಿ ಶ್ರೀ ಕೃಷ್ಣ ದೇವರನ್ನು
ಗಂಡನಾಗಿ ಪಡೆದು ಎಂದು ಹೇಳಿದರು ಗೋಪಾಲ
ತನಗೆ ಅಕ್ಕ ಇದ್ದಾಳೆಂದು ತಿಳಿದಾಗ ಸಂತಸಗೊಂಡ ರಾಧೆ, ಆಕೆಯನ್ನು ನೋಡಬೇಕು ಎಂದು ಹಠ ಮಾಡುತ್ತಾಳೆ. ಆಗ ಗೋಪಾಲ, ನಿನ್ನ ಭಾವ ಶ್ರೀಕೃಷ್ಣನಿಗೆ ಒಳ್ಳೆಯ ಗುಣಗಳಿಲ್ಲ, ಹೋಗಬೇಡ ಎನ್ನುತ್ತಾನೆ.
ಆಯೇ ಉಳ್ಳೇಗೆ ರಾಧೆಯೇ ಕೇಂಡಾನ
ಅಂಗಡಿ ಅಂಗಡಿ ಪೋಪೇಗೆ ಪಂರ್ದುದ ಚೋಲಿ
ಪೆಜ್ಯೇಲ ಪಂರ್ದು ಕಂಡುದು ಕೈಲುಡ್
ಪೆಟ್ಟುಲ ತಿನ್ಪೇಂದು ಪಣ್ಪೇರು
ಪೋವಡ ರಾಧೆಯಿ ಪೋವಡ ರಾಧೆಯೇ
ಕಾಂಡೆನೆ ತೂಯಿನೆನು ಬಯ್ಯೊಗು ಬುಡಯೆಗೆ ರಾಧೆ
ಪೊಣ್ಣುದ ಮರ್ಲೆಗೆ ಕೋರಿದ ಜೀರೆಗೆÀ
ಕಳುವರೆ ಕಳುವೆ ಕೃಷ್ಣೇಂದ್ ಪಣ್ಪೇರು ಗೋಪಾಲೆ
ಕನ್ನಡ ರೂಪ :
ಅವನು ಇದ್ದಾನಂತೆ ರಾಧೆ ಕೇಳಿದೆಯ
ಅಂಗಡಿ ಅಂಗಡಿ ಹೋಗುತ್ತಾನಂತೆ ,ಹಣ್ಣಿನ ಸಿಪ್ಪೆ
ಹೆಕ್ಕುವವನು ಹಣ್ಣು ಕದ್ದು ಬಾಲೆ ಗೊನೆಯಲ್ಲಿ
ಪೆಟ್ಟು ಕೂಡ ತಿನ್ನುತ್ತಾನೆಂದು ಹೇಳುತ್ತಾರೆ
ಹೋಗ ಬೇಡ ರಾಧೆ ಹೋಗ ಬೇಡ ರಾಧೆಯೇ
ಬೆಳಿಗ್ಗೆ ನೋಡಿದ್ದನ್ನು ಸಂಜೆಗೆ ಬಿಡನಂತೆ ರಾಧೆ
ಹೆಣ್ಣಿನ ಮರ್ಲ ಕೋಳಿಯ ಹುಚ್ಚಿನವನು
ಕಳ್ಳರ ಕಳ್ಳ ಕೃಷ್ಣ ಎಂದು ಹೇಳುತ್ತಾರೆ ಗೋಪಾಲ
ಆದರೆ ರಾಧೆ ಹಠ ಮಾಡಿ, ಊಟ ತಿಂಡಿ ಸ್ನಾನಾದಿಗಳನ್ನು ತ್ಯಜಿಸುತ್ತಾಳೆ. ಆಗ ಮನ ಕರಗಿದ ಗೋಪಾಲ ದಂಡಿಗೆ ಸಿದ್ದಪಡಿಸಿ ಕಳಹಿಸಿ ಕೊಡುತ್ತಾನೆ.
ಮೇಲು ಮಿರಿಲೋಕದಲ್ಲಿ ಕಂಬಳ ಗದ್ದೆಯ ಕಟ್ಟಹುಣಿಯಲ್ಲಿ ದಂಡಿಗೆ ಬರುವುದನ್ನು ನೋಡಿದ ಶ್ರೀಕೃಷ್ಣ ದಂಡಿಗೆ ಬರುತ್ತಿರುವ ಬಗ್ಗೆ ಹೇಳಿದಾಗ ಚಂದಬಾರಿಗೆ ಬರುತ್ತಿರುವುದು ತನ್ನ ತಂಗಿ ರಾಧೆ ಎಂದು ತಿಳಿಯುತ್ತದೆ. ಆಗ ಅವಳು ``ಅವಳು ನನ್ನ ತಂಗಿ ರಾಧೆ. ಅವಳು ಬರಲಿ, ಅವಳ ತಂಟೆಗೆ ಹೋಗಬೇಡಿ’’ ಎಂದು ಕೇಳಿಕೊಳ್ಳುತ್ತಾಳೆ.
ರಾಧೆಯನ್ನು ಪ್ರೀತಿಯಿಂದ ಬರಮಾಡಿಕೊಂಡ ಚಂದಬಾರಿ ಕೈಕಾಲು ತೊಳೆಯಲು ಮುತ್ತಿನ ಕೆರೆಗೆ ಕಳುಹಿಸುತ್ತಾಳೆ. ಅಲ್ಲಿ ಶ್ರೀಕೃಷ್ಣ ತಾವರೆ ಹೂವಾಗಿ ಬಂದು ರಾಧೆಯ ಮಡಿಲಿಗೆ ಬಿದ್ದು ತನ್ನ ನಿಜರೂಪ ತೋರಿದಾಗ, ಕೃಷ್ಣನ ಕುರಿತು ಮೊದಲೇ ತಿಳಿದಿದ್ದ ರಾಧೆ ಅವನನ್ನು ಬೈದು, ಅವನಿಂದ ತಪ್ಪಿಸಿಕೊಂಡು ಅಕ್ಕನಿರುವಲ್ಲಿಗೆ ಬರುತ್ತಾಳೆ.
ಅಕ್ಕ-ತಂಗಿ ಅಕ್ಕಪಕ್ಕ ಕುಳಿತು ಆತ್ಮೀಯತೆಯಿಂದ ಮಾತನಾಡಿ ಬೇಸರ ಕಳೆಯುತ್ತಾರೆ. ಸಂಜೆಯಾಗುತ್ತಲೇ ತಂಗಿ ರಾಧೆಯು ಅಕ್ಕನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿ ತನ್ನ ಮನೆಗೆ ಹಿಂದಿರುಗುತ್ತಾಳೆ.
ಇತ್ತ ಶ್ರೀಕೃಷ್ಣ ಚಂದಬಾರಿಯ ಒಂದು ಸೀರೆಯನ್ನು ಉಟ್ಟು ಚಂದಬಾರಿಯ ವೇಷವನ್ನು ಧರಿಸುತ್ತಾನೆ.
ಸಾವಿರ ಸಾರತ್ತೋಂಜಿ ಕೈಕಂಜಿ ಗೋವಳೆನು ಸೇರೊಂದು
ಯಾನೊಂಜಿ ಪೊಣ್ಣನ ವೇಷನು ಪಾಡುವೆಯ ಜೋಕುಳೆ
ಚಂದಬಾರಿನ ಒಂಜಿಲ ಸೀರೆನು ಕೊಣತ್ತುದು
ಚಂದಬಾರಿನ ಒಂಜಿಲ ಸೀರೆನು ಕೊಣತ್ತುದು
ದುತ್ತುಲ ಐತೊನು ಮಣ್ತೊಂಡು ಪಿದಾಡುವೆರು ಸಿರಿಕೃಷ್ಣಲ
ಕನ್ನಡ ರೂಪ
ಸಾವಿರ ಸಾವಿರದೊಂದು ಹಸುಗಳನ್ನು ಗೋಪಾಲಕರನ್ನು ಸೇರಿಸಿಕೊಂಡು
ನಾನೊಂದು ಹೆಣ್ಣಿನ ವೇಷ ಹಾಕುವೆ ಮಕ್ಕಳೇ
ಚಂದ ಬಾರಿಯ ಒಂದು ಸೀರೆ ತಂದು
ಚಂದ ಬಾರಿಯ ಒಂದು ಸೀರೆ ತಂದು
ಉಟ್ಟುಕೊಂಡು ಅಲಂಕಾರ ಮಾಡಿಕೊಂಡು ಹೊರಡುವರು ಶ್ರೀ ಕೃಷ್ಣ
ಅಕ್ಕನ ದಾರಿಯನ್ನು ಕಾಯುತ್ತಿದ್ದ ರಾಧೆ ಚಂದಬಾರಿ ರೂಪದಲ್ಲಿ ಬಂದ ಶ್ರೀಕೃಷ್ಣನನ್ನು ಅಕ್ಕನೆಂದೇ ಭಾವಿಸಿ ಸ್ವಾಗತಿಸಿ ಸತ್ಕಾರ ಮಾಡುತ್ತಾಳೆ. ರಾತ್ರಿ ಊಟ ಮಾಡಿ ಏಳು ಮಾಳಿಗೆಯ ಉಪ್ಪರಿಗೆಯ ಮೇಲೆ ಹೋಗಿ ರಾಧೆ ಮತ್ತು ಚಂದಬಾರಿ ರೂಪದಲ್ಲಿರುವ ಶ್ರೀಕೃಷ್ಣ ಮಲಗಲು ಹೋಗುತ್ತಾರೆ. ತಂಗಿ ರಾಧೆ ಅಕ್ಕನಲ್ಲಿ ಕಥೆ ಹೇಳೆಂದು ಹೇಳುವಾಗ ನನಗೆ ಕಥೆಗಿತೆ ತಿಳಿದಿಲ್ಲ. ನಾನು ನನ್ನ ದೇವರು ಶ್ರೀಕೃಷ್ಣ ನಾಮಸ್ಮರಣೆ ಮಾತ್ರ ಮಾಡುವುದು ಎಂದು ಚಂದಬಾರಿ ರೂಪ ಧರಿಸಿದ ಶ್ರೀಕೃಷ್ಣ ಹೇಳುತ್ತಾನೆ. ಹಾಗಾದರೆ ಅದನ್ನೇ ಹೇಳು ಎಂದು ರಾಧೆ ಹೇಳುತ್ತಾಳೆ. ಆಗ ನಾನು ಹೇಳುವುದಿಲ್ಲ, ನಾನು ಹೇಳಿದರೆ ನಿನ್ನ ಭಾವ ಇಲ್ಲಿ ಪ್ರತ್ಯಕ್ಷವಾಗುತ್ತಾನೆ ಎಂದು ಚಂದಬಾರಿ ರೂಪದ ಶ್ರೀಕೃಷ್ಣ ಹೇಳುತ್ತಾನೆ. ತೊಂದರೆ ಇಲ್ಲ ಅದನ್ನೇ ಹೇಳು ಎಂದು ರಾಧೆ ಹೇಳಿದಾಗ ಚಂದಬಾರಿ ರೂಪದ ಶ್ರೀಕೃಷ್ಣ ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾನೆ. ಕೂಡಲೇ ತನ್ನ ನಿಜ ರೂಪವನ್ನು ತೋರುತ್ತಾನೆ. ಆ ಬಳಿಕ ಏಳು ರಾತ್ರಿ, ಏಳುಹಗಲು ರಾಧೆ ಮತ್ತು ಕೃಷ್ಣ ಜೊತೆಯಾಗಿ ಇರುತ್ತಾರೆ. ಇತ್ತ ಚಂದಬಾರಿ ತನ್ನ ಪತಿ ಶ್ರೀಕೃಷ್ಣ ಎಲ್ಲಿಗೆ ಹೋದನೆಂದು ಹುಡುಕುತ್ತಾ ರಾಧೆಯ ಮನೆಗೆ ಬರುತ್ತಾಳೆ. ಗೋಪಾಲನೂ ಮೇಲು ಮಾಳಿಗೆಯಲ್ಲಿ ಅಕ್ಕ ತಂಗಿ ಏಳು ರಾತ್ರಿ ಏಳು ಹಗಲು ಏನು ಮಾಡುತ್ತಿದ್ದಾರೆ ಎಂದು ಸಂಶಯ ತಾಳುತ್ತಾನೆ.
ಆಗ ರಾಧೆ ಮತ್ತು ಶ್ರೀಕೃಷ್ಣ ದೇವರು ಮಾಳಿಗೆ ಇಳಿದು ಬರುತ್ತಾರೆ. ಗೋಪಾಲನಲ್ಲಿ ಶ್ರೀಕೃಷ್ಣ ದೇವರು ರಾಧೆ ಎಂಜಲಾಗಿದ್ದಾಳೆ. ಅವಳು ನಿನಗೆ ಬೇಕೇ? ನಾನುಕೊಂಡು ಹೋಗಲೇ? ಎಂದು ಕೇಳುತ್ತಾನೆ. ಗೋಪಾಲ, ರಾಧೆ ತನಗೆ ಬೇಡ. ನೀನೇ ಕರಕೊಂಡು ಹೋಗು ಎನ್ನುತ್ತಾನೆ.
ನಾಯಿ ಮುಟ್ಟಿಮಡೆ ಉಂಡು ಬಿಸಲೆ ಉಂಡು ಗೋಪಾಲ
ನಿಕ್ಕು ಬೋಡಾ ಯಾನಾಂಡ ಕೊಂಡೋವೊಡ
ಪಂಡೇರ ಸಿರಿಕೃಷ್ಣನುಲಾ ದೇವೇರ
ಏರ‍್ಯೆ ಅಣ್ಣಯೆ ಕೃಷ್ಣಕೇಂಡಾನ
ಎಂಕುಲ ಬೋಡ್ಚಿ ಬೋಡ್ಚಿ ಕೊಂಡೋದು
ಪೋಲಾಂದು ಪಂಡೇರು ಗೋಪಾಲೆ
ಕನ್ನಡ ರೂಪ :
ನಾಯಿ ಮುಟ್ಟದ ಎಂಜಲು ಉಂಟು ಮಡಿಕೆ ಉಂಟು ಗೋಪಾಲ
ನಿನಗೆ ಬೇಕಾ ನಾನಾದರೂ ಕೊಂಡು ಹೋಗ ಬೇಕ
ಹೇಳಿದರು ಶ್ರೀ ಕೃಷ್ಣ ಕೂಡ ದೇವರೆಯೇ
ಯಾರಯ್ಯ ಅಣ್ಣ ಕೃಷ್ಣ ಕೇಳಿದೆಯ
ನನಗೆ ಬೇಡ ಬೇಡ ಕೊಂಡು ಹೋಗು
ಎಂದು ಹೇಳಿದರು ಗೋಪಾಲ
ಮುಂದೆ ಚಂದಬಾರಿ ಹಾಗೂ ರಾಧೆಯರನ್ನು ಕರೆದುಕೊಂಡು ಶ್ರೀಕೃಷ್ಣ ಮೇಲಿನ ಮಿರಿಲೋಕಕ್ಕೆ ಬರುತ್ತಾನೆ. ಅಲ್ಲಿ ರಾಧೆ, ಚಂದಬಾರಿ ಹಾಗೂ ಶ್ರೀಕೃಷ್ಣ ಸಂಸಾರ ನಡೆಸುತ್ತಾ ಇರುತ್ತಾರೆ ಎಂದು ಶ್ರೀಮತಿ ಶಾರದಾ ಜಿ. ಬಂಗೇರ ಅವರು ಹೇಳಿದ ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಹೇಳಿದೆ.
ದಾಸರ ನಿಂದಾ ಸ್ತುತಿಗಳಂತೆ ಇದು ತುಳುವರ ನಿಂದಾ ಸ್ತುತಿ ಇರಬಹುದು .ಅಥವಾ ತಮಗೆ ಕಿರುಕುಳ ಕೊಡುತ್ತಿರುವ ಒಡೆಯ ಜಮೀನ್ದಾರ ರಾಜ ಹೀಗೆ ಯಾರನ್ನೋ ಕೃಷ್ಣನನ್ನು ನೆಪವಾಗಿಸಿಕೊಂಡು ತೆಗೆಳಿ ತಮ್ಮ ಪ್ರತಿಭಟನೆಯನ್ನು ತೋರಿರಬಹುದು ತುಳುವ ಪಾದ್ದನಗಾರ್ತಿಯರು.ನಾಗ ಸಿರಿ ಕನ್ಯಗೆ ಪಾದ್ದನದಲ್ಲಿ ಕೂಡ ಶ್ರೀ ಕೃಷ್ಣನನ್ನು ತಮ್ಮನ ಮಡದಿ, ಸುಂದರಿಯಾದ ನಾಗ ಕನ್ಯಗೆ ಯನ್ನು ತಮ್ಮ ರೂಪದಲ್ಲಿ ಬಂದು ವಶಪಡಿಸಿಕೊಳ್ಳಲು ಯತ್ನಿಸುವ ,ಹಾವಾಗಿ ,ಹಲ್ಲಿಯಾಗಿ ನಾನಾ ರೂಪ ಧರಿಸಿ ಅವಳನ್ನು ಕಾಡಿ ,ವಶ ಪಡಿಸಿಕೊಳ್ಳಲು ಸಾಧ್ಯವಾಗದೆ ಇದ್ದಾಗ ಅವಳ ಮೇಲೆ ವೃಥಾ ಕಳಂಕ ಹೊರಿಸಿ ಅವಳು ಸತ್ಯ ಪ್ರಮಾಣ ಮಾಡುವಂತೆ ಮಾಡುವ ಕೆಟ್ಟ ವ್ಯಕ್ತಿಯಂತೆ ಚಿತ್ರಿಸಿದೆ.
ಅನೇಕ ಹೆಂಡತಿಯರನ್ನು ಹೊಂದಿರುವ ,ಸೆರೆ ಸಿಕ್ಕ ರಾಜರ ಮನೆಯ ಹೆಣ್ಣು ಮಕ್ಕಳನ್ನು ಬಲಾತ್ಕಾರವಾಗಿ ಕೊಂಡೊಯ್ಯುವ ರಾಜರ ಕುರಿತಾದ ತಮ್ಮ ಪ್ರತಿರೋಧವನ್ನು ತುಳು ಜಾನಪದರು ಈ ರೀತಿ ತೋರಿರುವ ಸಾಧ್ಯತೆ ಇದೆ .ಶ್ರೀ ಕೃಷ್ಣನ ಹೆಸರನ್ನೇ ಹೊಂದಿರುವ ತುಳು ವಂಶದ ಅರಸ ಶ್ರೀ ಕೃಷ್ಣ ದೇವರಾಯನಿಗೂ ಎರಡು ಹೆಂಡಿರು ಇದ್ದರು !ಈತನ ಕುರಿತೆನಾದರೂ ತುಳು ಜನಪದರಿಗೆ ಅಸಮಧಾನವಿತ್ತೆ ?!ಕೃಷ್ಣನನ್ನು ನೆಪವಾಗಿತ್ತು ಕೊಂಡು ಈತನನ್ನೆನಾದರೂ ಆಕ್ಷೇಪಿಸಿದರೆ ತುಳುವರು ?ಅಥವಾ ದಾಸವರೇಣ್ಯರ ನಿಂದಾ ಸ್ತುತಿಗಳಂತೆ ಇದು ತುಳು ಜನಪದರ ನಿಂದಾ ಸ್ತುತಿಯ ವೈಖರಿಯೇ ?ಈ ಬಗ್ಗೆ ಸಮಗ್ರ ಅಧ್ಯಯನ ನಡೆದರೆ ತುಳುವರಲ್ಲೇಕೆ ಶ್ರೀ ಕೃಷ್ಣನಿಗೆ ಈ ರೀತಿಯ ಚಿತ್ರಣವಿದೆ ಎಂದು ತಿಳಿಯಬಹುದು.
ಚಂದ್ರಾವಳಿ ವಿಲಾಸ ಎಂಬ ಯಕ್ಷಗಾನ ಪ್ರಸಂಗದ ಕಥೆಯು ಈ ಪಾಡ್ದನದ ಕಥೆಯನ್ನು ಹೋಲುತ್ತದೆ. ಅದರಲ್ಲಿ ರಾಧೆ ಕೃಷ್ಣನ ಮಡದಿ ಚಂದ್ರಾವಳಿ ರಾಧೆಯ ಅಕ್ಕ .ಅವಳನ್ನು ರಾಧೆಯ ರೂಪ ಧರಿಸಿ ಇದೇ ರೀತಿ ವಶ ಪಡಿಸಿಕೊಳ್ಳುತ್ತಾನೆ ಶ್ರೀ ಕೃಷ್ಣ .ಈ ಯಕ್ಷಗಾನ ಪ್ರಸಂಗದ ಕಥೆಗೆ ಯಾವುದೇ ಪುರಾಣದಲ್ಲಿ ಅಧಾರ ಸಿಗುವುದಿಲ್ಲ .ಬಹುಷ ಪಾಡ್ದನದ ಈ ಕಥೆಯೇ ಆ ಯಕ್ಷಗಾನ ಪ್ರಸಂಗಕ್ಕೆ ಮೂಲ ವಾಗಿರುವ ಸಾಧ್ಯತೆ ಇದೆ .ರಾಧಾ ಕೃಷ್ಣರ ಪವಿತ್ರ ಪ್ರೇಮದ ಸಾಂಪ್ರದಾಯಿಕ ಪರಿಕಲ್ಪನೆಗೆ ಧಕ್ಕೆ ಯಾಗದಂತೆ ರಾಧೆಯ ಬದಲು ಚಂದ್ರಾವಳಿಯನ್ನು ವಶಪಡಿಸಿಕೊಂಡಂತೆ ಮೂಲ ಕಥೆಯಲ್ಲಿ ತುಸು ಬದಲಾವಣೆ ಮಾಡಿ ಕೊಂಡು ಚಂದ್ರಾವಳಿ ವಿಲಾಸ ಪ್ರಸಂಗವನ್ನುರಚಿಸಿರುವ ಸಾಧ್ಯತೆ ಇದೆ. ಧ್ವಜಪುರ ನಾಗಪ್ಪಯ್ಯನವರು ಏನೇ ಆದರು ಈ ಪಾಡ್ದನದ ಬಗ್ಗೆ ಅಧ್ಯಯನ ನಡೆದರೆ ಹೆಚ್ಚಿನ ಮಾಹಿತಿ ತಿಳಿಯಬಹುದು(ಚಂದ್ರಾವಳಿ ವಿಲಾಸ ಯಕ್ಷಗಾನದ ಫೋಟೋಗಳನ್ನು ನೀಡಿದ ರಾಧಾ ಕೃಷ್ಣ ಭಟ್ k ಇವರಿಗೆ ಧನ್ಯವಾದಗಳು )