Monday, 23 September 2013

ಪೆರುವಾಜೆಯಲ್ಲಿ ಪತ್ತೆಯಾದ ಬುದ್ದನ ಅಪರೂಪದ ವಿಗ್ರಹ ಮತ್ತು ಬೌದ್ಧಾರಾದನೆಯ ಕುರುಹುಗಳು (Buddha's Statue found at Peruvaje, Sullia Taluk, karnataka)



                    ಇತಿಹಾಸ ಅಕಾಡೆಮಿಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ  ಸಂಪ್ರಬಂಧ


                      
 

          
ಫೆಬ್ರುವರಿ ೧ ೬  ,೨೦೧೨  ನೆಯ ದಿನ ನನ್ನ ಪಾಲಿಗೆ   ಒಂದು ಅವಿಸ್ಮರಣೀಯ ದಿನ! ಪೆರುವಾಜೆಯಲ್ಲಿ (ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ) ನೇರವಾಗಿ ಬುದ್ಧನದೆಂದೇ ಸ್ಪಷ್ಟವಾಗಿ ಗುರುತಿಸಬಹುದಾದ ,ಸುಮಾರು ೧೮೦೦-೧೯೦೦   ವರ್ಷ ಹಿಂದಿನ, ಬಹಳ  ಪ್ರಾಚೀನವಾದ   ಅಪರೂಪದ ಬುದ್ಧನ ಮೂರ್ತಿಯೊಂದನ್ನು ನಾನು ಪತ್ತೆ ಹಚ್ಚಿದೆ .ಇದರಿಂದ  ಕರ್ನಾಟಕದ  ಇತಿಹಾಸ ಶೋಧನೆಗೆ ಮಹತ್ವದ ದಾಖಲೆಯೊಂದು ಸಿಕ್ಕಿತೆಂದು ನಾನು ಭಾವಿಸಿದ್ದೇನೆ   . ಕರಾವಳಿ ಕರ್ನಾಟಕದಲ್ಲಿ ಬೌದ್ಧಾರಾಧನೆಗೆ ಇದ್ದುದಕ್ಕೆ  ಪ್ರತ್ಯಕ್ಷ ಸಾಕ್ಷಿ ದೊರಕಿತು . ಪೆರುವಾಜೆಯಲ್ಲಿ  ಬುದ್ದನ ಅಪರೂಪದ ವಿಗ್ರಹ ಮತ್ತು  ಬೌದ್ಧಾರಾಧನೆಯ ಕುರುಹುಗಳು ಪತ್ತೆಯಾದವು
 
 ೨೦೧೨  ರ ಫೆಬ್ರುವರಿ ತಿಂಗಳ  ಮೊದಲವಾರದಲ್ಲಿ .ಪೆರುವಾಜೆ ಕಾಲೇಜಿನ  ವಿದ್ಯಾರ್ಥಿ    ನನಗೆ ಪರಿಚಿತರಾಗಿದ್ದ ಉತ್ಸಾಹಿ  ತರುಣ  ರಜನೀಶ್ ಫೋನ್ ಮಾಡಿ  "ಇಲ್ಲಿ ಪೆರುವಾಜೆ ದೇವಸ್ಥಾನದ ಹತ್ತಿರ ಗುಡ್ಡದಲ್ಲಿ  ಕೆಲವು ಭೂತದ ವಿಗ್ರಹಗಳಿವೆ ನೋಡ್ತೀರಾ?ಎಂದು ಫೋನ್ ಮಾಡಿ  ಕೇಳಿದರು .ಫೆಬ್ರುವರಿ   ೧ ೬ ರಂದು  ಭೂತಾರಾಧನೆಯ ಸಂಶೋಧನೆಯಲ್ಲಿ ವಿಶೇಷ ಆಸಕ್ತಿ ಇದ್ದ ನಾನು ಅದನ್ನು ನೋಡಲು ಹೋದೆ . ಅಲ್ಲಿ ಮರದ ಬುಡದಲ್ಲಿ ನಂದಿ ಸೇರಿದಂತೆ ಅನೇಕ ವಿಗ್ರಹಗಳಿದ್ದವು .ಒಂದೆರಡು  ವಿಗ್ರಹಗಳು ಮಣ್ಣಿನ ಅಡಿಯಲ್ಲಿದ್ದು  ತುಸು ಮಾತ್ರ ಕಾಣುತ್ತಿದ್ದವು . ಅವುಗಳನ್ನು  ನಾನು ಮತ್ತು ನನ್ನ ಮಗ ಅರವಿಂದ ಸೇರಿ   ಕಷ್ಟ ಪಟ್ಟು  ಮೇಲಕ್ಕೆ ಎಳೆದು ತಂದೆವು . ಅದರಲ್ಲೊಂದು   ನೇರವಾಗಿ ಯಾರು ಕೂಡಾ ಸ್ಪಷ್ಟವಾಗಿ ಗುರುತಿಸ ಬಹುದಾದ ಅಪರೂಪದ ಬುದ್ಧನ  ವಿಗ್ರಹ  ಇತ್ತು.!    ಶಾಸನ ಹಾಗು  ಇತರ ಅನೇಕ ಆಧಾರಗಳ ಮೇಲೆ  ಡಾ .ಬಿ ಎ  ಸಾಲೆತೂರ್ ,ಡಾ . ಗುರುರಾಜ ಭಟ್ ,ಗೋವಿಂದ ಪೈ ,ಡಾ. ರಮೇಶ್  ಕೆ ವಿ  ,ಡಾ . ವಸಂತಕುಮಾರ್ ತಾಳ್ತಜೆ  ಮೊದಲಾದವರು  ಕರ್ನಾಟಕದಲ್ಲಿ ಬೌದ್ಧಾರಾಧನೆ  ಇತ್ತು ಎನ್ನುವುದನ್ನು ಈ ಹಿಂದೆಯೇ ತೋರಿಸಿ ಕೊಟ್ಟಿದ್ದಾರೆ . 

ಆದರೆ ನೇರವಾಗಿ ಬುದ್ಧನದೆಂದು ಗುರುತಿಸ ಬಹುದಾದ  ಬುದ್ದನ  ವಿಗ್ರಹ  ಈ ತನಕ   ಕರ್ನಾಟಕದಲ್ಲಿ  ಎಲ್ಲೂ ಪತ್ತೆಯಾಗಿರಲಿಲ್ಲ . ಮಂಗಳೂರಿನ  ಕದ್ರಿಯ ಮಂಜುನಾಥೇಶ್ವರ ದೇವಾಲಯ ದಲ್ಲಿರುವ  ಮೂರು ಮುಖದ ಲೋಕೇಶ್ವರ ಮೂರ್ತಿ(ಇದನ್ನು ಬ್ರಹ್ಮ ಎಂದು  ಭಾವಿಸಿದ್ದರು )ಯನ್ನು   ಅದರ ಕೆಳಗಿನ  ಶಾಸನ  ಹಾಗು ಇತರ ಕೆಲವು ಆಧಾರಗಳಿಂದ  ಬುದ್ಧನ ಇನ್ನೊಂದು ಸ್ವರೂಪ  ಆವಲೋಕಿತೇಶ್ವರ  ಎಂದು ಗುರುತಿಸಿ  ಕದ್ರಿ ಬೌದ್ಧ  ವಿಹಾರವಾಗಿತ್ತು ಎಂದು ವಿದ್ವಾಂಸರು  ಸ್ಪಷ್ಟ ಪಡಿಸಿದ್ದಾರೆ . ಕದ್ರಿ ಬಿಟ್ಟರೆ  ಮಂಗಳೂರು, ಸುಳ್ಯ,ಬಂಟ್ವಾಳ, ಬೆಳ್ತಂಗಡಿ  ,ಪುತ್ತೂರು ,ಕಾಸರಗೋಡು ತಾಲೂಕುಗಳಲ್ಲಿ ಎಲ್ಲಿಯೂ  ಬೌದ್ಧಾರಾಧನೆ  ಇದ್ದುದಕ್ಕೆ  ಯಾವುದೊಂದೂ   ಆಧಾರ  ಈ ತನಕ ಸಿಕ್ಕಿರಲಿಲ್ಲ .
     ಈ ಎರಡು  ಕಾರಣಗಳಿಂದ  ಸುಳ್ಯ ತಾಲೂಕಿನ ಬೆಳ್ಳಾರೆ - ಸವಣೂರು  ಮಾರ್ಗದಲ್ಲಿ  ಬೆಳ್ಳಾರೆ ಸಮೀಪದಲ್ಲಿರುವ  ಪೆರುವಾಜೆಯ ದೇವಸ್ಥಾನದ ಸಮೀಪದ ಇಳಿಜಾರಾದ ಗುಡ್ಡದಲ್ಲಿ ಪತ್ತೆಯಾದ ಬುದ್ಧನ ವಿಗ್ರಹ ಬಹಳ ಮುಖ್ಯವಾದ  ದಾಖಲೆಯಾಗಿದೆ.   

ಇಲ್ಲಿ  ಒಂದು ಮುಖದ ಭಾಗ ವಿರೂಪ ಗೊಂಡಿದ್ದರೂ ಎಡ ಬಲ ಭಾಗದ ಬುದ್ಧನ ಉದ್ದನೆಯ ವಿಶಿಷ್ಟ  ಕಿವಿಗಳು , ಮೇಲೆ ಎತ್ತಿ ಕಟ್ಟಿದ ಉಶ್ಣೀಶ (ಜಟೆ) ಗಳಿಂದ ಸ್ಪಷ್ಟವಾಗಿ ಬುದ್ದನದೆಂದು ಗುರುತಿಸ ಬಹುದಾದ  ಬುದ್ಧನ ತಲೆ ಸಿಕ್ಕಿದೆ. ಬುದ್ಧನ ಮುಖದ ಭಾಗ ಜಜ್ಜಿ ಹೋದಂತಿದೆ . ಮುಖವನ್ನು   ಉದ್ದೇಶ ಪೂರ್ವಕ ವಿಕೃತ ಗೊಳಿಸಿರುವಂತೆ ಕಾಣಿಸುತ್ತಿದ್ದು ಇಲ್ಲಿ ಸಂಘರ್ಷ ನಡೆದಿರುವ ಸಾಧ್ಯತೆಯನ್ನು ತೋರುತ್ತದೆ.  

 ಇನ್ನೊಂದು  ಸ್ಪಷ್ಟವಾಗಿ ಕಾಣುವ ಮಾನವ ರೂಪಿನ  ಮುಖ ಸಿಕ್ಕಿದೆ . ಇದನ್ನು ಡಾ. ಮುರುಗೇಶಿ ಅವರು ಅಮಿತಾಬ ಬುದ್ಧ  ,ಬೋಧಿಸತ್ವ ಇಲ್ಲವೇ ಯಕ್ಷ ಇರಬಹುದೆಂದು ತಿಳಿಸಿದ್ದಾರೆ .  ಉಬ್ಬಿದ ಕಣ್ಣುಗಳು ಇರುವ  ನಂದಿಯ ಮುಖ  ಹಾಗೂ ಎರಡು ಮುಖವಿಲ್ಲದ ದೇಹ ಮಾತ್ರ ಇರುವ ನಂದಿಯ  ವಿಗ್ರಹಗಳಿವೆ. ಒಂದು ಪೂರ್ಣ ವಿಗ್ರಹ ಇದ್ದು ಮೇಲ್ನೋಟಕ್ಕೆ ಹುಲಿಯನ್ನು ಹೋಲುತ್ತದೆ . ಒಂದು ಮಾನವನ ಕಾಲು ಮಾತ್ರ ಸಿಕ್ಕಿದೆ  .ಈ ಕಾಲಿನಲ್ಲಿ ಕಾಲುಂಗುರ ಇರುವುದರಿಂದ ಇದು ಸ್ತ್ರೀ ವಿಗ್ರಹದ ಅವಶೇಷ ಎಂದು ಹೇಳಬಹುದು .೧೦ *೧೦  ವಿಸ್ತಾರ ಹಾಗು ಒಂದಡಿ ಎತ್ತರದ ಮುರಕಲ್ಲಿನಲ್ಲಿ ಕಟ್ಟಿದ ಕಟ್ಟಿದ  ಅಡಿಪಾಯ ಕೂಡಾ  ಇತ್ತು .  ಇಲ್ಲಿ  ನಾನು ಪತ್ತೆ ಹಚ್ಚಿದ ಬುದ್ದನ ವಿಗ್ರಹ ಹಾಗು ಇತರ ವಿಗ್ರಹಗಳ  ಮಹತ್ವವನ್ನು ಮನಗಂಡ ನಾನು ಈ ಬಗ್ಗೆ ಲೇಖನ ಸಿದ್ದ ಪಡಿಸಿ ಪ್ರಜಾವಾಣಿ ಪತ್ರಿಕೆಗೆ ಕಳುಹಿಸಿದೆ.
          ಪೆರುವಾಜೆಯಲ್ಲಿ ಬುದ್ಧನ ಅಪರೂಪದ ಮೂರ್ತಿ ಪತ್ತೆ ಎಂಬ ನನ್ನ ಲೇಖನ  ೨೦೧೨  ರ ಮಾರ್ಚ್ ೩೦ ರಂದು  ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟವಾಯಿತು . ಇಲ್ಲಿ ಹೆಚ್ಚಿನ ಅಧ್ಯಯನ ನಡೆಯ ಬೇಕೆಂಬ ಉದ್ದೀಶದಿಂದ  ಸಂಶೋಧಕರ ಗಮನಕ್ಕೆ  ತರುವುದಕ್ಕಾಗಿಯೇ ಈ ಲೇಖನ ಬರೆದಿದ್ದೆ. ಆ ಉದ್ದೇಶ ಈಡೇರಿತು ! ಪ್ರಜಾವಾಣಿಯಲ್ಲಿ ಬಂದ  ನನ್ನ ಲೇಖನ ಓದಿದ ಡಾ॥  ಮುರುಗೇಶಿ  ಅವರು ಅವರ ಪರಿಚಿತರ ಮೂಲಕ ನನ್ನ ಫೋನ್ ನಂಬರ್ ಪಡೆದು ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿ ಏಪ್ರಿಲ್ ೧ ನೆಯ(೦೧ -೦ ೪ -೨೦೧೨ ) ತಾರೀಕಿನಂದು ನಾನು ಬರುತ್ತೇನೆ ಆ ಜಾಗವನ್ನು ತೋರಿಸಿಎಂದು ಕೇಳಿಕೊಂಡರು ಆ ಹೊತ್ತಿಗಾಗುವಾಗ ಆ ವಿಗ್ರಹ ಹಾಗು ಜಾಗಕ್ಕೆ ಸಂಬಂಧಿಸಿದಂತೆ  ಅನುಜ್ಞಾ  ಕಲಶ ಆಗಿದ್ದು ಅದನ್ನು  ಒಂದು ಅಟ್ಟೆ ನಿರ್ಮಿಸಿ ಕಟ್ಟಿ ಮುಚ್ಚಿಟ್ಟು  ಬಿಟ್ಟಿದ್ದರು . ಅದನ್ನು ಮತ್ತೆ  ನೋಡ ಬೇಕಿದ್ದರೆ ಆ ಜಾಗಕ್ಕೆ ಸಂಬಂಧಿಸಿದವರ ಒಪ್ಪಿಗೆ ಬೇಕಿತ್ತು . ಸ್ಥಳೀಯರು ಭೂತಗಳದ್ದೆಂದು  ನಂಬಿದ್ದ ವಿಗ್ರಹವನ್ನು  ನಾನು ಬುದ್ಧನದೆಂದು ಹೇಳಿದ್ದು  ಸ್ಥಳೀಯರಿಗೆ  ಅಸಮಧಾನ ಉಂಟುಮಾಡಿತ್ತು. ಆದ್ದರಿಂದ ಡಾ ॥   ಮುರುಗೇಶಿ ಅವರನ್ನು ಏಕಾ ಏಕಿ ಕರೆದುಕೊಂಡು ಹೋದರೆ  ವಿವಾದ  ಉಂಟಾಗುವ ಸಾಧ್ಯತೆ ಇತ್ತು .ನಾನು ಒಮ್ಮೆ ಫೋಟ ತೆಗೆದು ನಂತರ ಪುನಃ ಒಮ್ಮೆ ನೋಡಲು ಇಚ್ಚಿಸಿದ್ದೆ . ಆದರೆ ಸ್ಥಳೀಯರು ಒಪ್ಪಿರಲಿಲ್ಲ . ಆದ್ದರಿಂದ ನಾನ ನನಗೆ ಆತ್ಮೀಯರಾಗಿದ್ದ  ಉಡುಪಿ  ಎಂ ಜಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ  ಸಂಶೋಧಕರೂ ಆಗಿದ್ದ ಕಾನಕುದೇಲು  ಗಣಪತ್ತಿ ಭಟ್ಟರ ಸಹಾಯ ಕೇಳಿದೆ ಅವರು ಅವರ ಆತ್ಮೀಯರಾದ ಆ ಜಾಗದ ಬಗ್ಗೆ ಪ್ರಶ್ನೆ ಇಟ್ಟು  ಧಾರ್ಮಿಕ ವಿಧಿಗಳಿಗೆ ನಿರ್ದೇಶನ ನೀಡಿದ್ದ  ಖ್ಯಾತ ಜ್ಯೋತಿಷಿ ರಾಜೇಂದ್ರ ಪ್ರಸಾದರನ್ನು ಸಂಪರ್ಕಿಸಿ  ಅಲ್ಲಿ ಮುಂದಿನ ಸಂಶೋಧನೆಗೆ ಅನುವು ಮಾಡಿ ಕೊಟ್ಟರು .
     ನನಗು ಸಂಶೋಧನೆ ಆಸಕ್ತಿ ಇದ್ದ ಕಾರಣ ಮುರುಗೇಶಿ   ಅವರು ಬಂದಾಗ ಆ ವಿಗ್ರಹಗಳನ್ನು ತೋರಿಸಿದೆ . ನಾನು ಮೊದಲು ಲೇಖನದಲ್ಲಿ ಬರೆದ ವಿಚಾರಗಳನ್ನು ಧೃಢ  ಪಡಿಸಿದ್ದಲ್ಲದೆ ಅಲ್ಲಿ ಪ್ರಾಗೈತಿಹಾಸಿಕ ಕಾಲದ  ಕುರುಹುಗಳನ್ನು ತೋರಿಸಿದ್ದಾರೆ ಇಲ್ಲಿ ಸಿಕ್ಕಿದ ನಂದಿಯ ವಿಗ್ರಹಗಳು ಶಾತವಾಹನರ ಕಾಲದ್ದೆಂದು ಗುರುತಿಸಿ ಇದರ ಕಾಲ ಸುಮಾರು ಕ್ರಿ ಶ  ಎರಡನೇ ಶತಮಾನ ಎಂದು ತಿಳಿಸಿದ್ದಾರೆ. ಇಲ್ಲಿನ ಜಲ ದುರ್ಗಾ  ದೇವಿ ದೇವಾಲಯ  ಹಿಂದೆ ಬೌದ್ಧ ವಿಹಾರವಾಗಿದ್ದು  ಈಗ ಲಿಂಗ ರೂಪಿ ಮೂರ್ತಿಯ ಬದಲು ಮಾನವ ರೂಪಿನ ವಿಗ್ರಹ ಇದ್ದಿರುವ  ಸಾಧ್ಯತೆಯನ್ನು ಹೇಳಿದ್ದಾರೆ ಈ ಬುದ್ಧನ ಮೂರ್ತಿಯ ಫೋಟೋ ಅನ್ನು ನಾನ ಖ್ಯಾತ ಸಂಶೋಧರಾದ ಡಾ||ಸುಂದರ ಅವರಿಗೆ ತೋರಿಸಿದಾಗ ಅವರು "ಈ ವಿಗ್ರಹದ ತಲೆಯ ಮೇಲೆ ಗಂಟಿನ ತರಾ ಉಬ್ಬು ಇದೆ ಇದನ್ನು ಉಷ್ನೀಶ ಎನ್ನುತ್ತೇವೆ . ಇದು ಇರುವುದರಿಂದ ಮತ್ತು ಕಿವಿ ತುಂಬಾ ಅಗಲವಾಗಿ ಇರುವುದರಿಂದ ಇದೊಂದು ವಿಶಿಷ್ಟ  ಮಾನವನ ಮೂರ್ತಿ ಎನ್ನಬಹುದು ಬಹು ಶ್ರುತಃ ಎಂದರೆ ಜ್ಞಾನಿ ಯಾದ ಮನುಷ್ಯನ ವಿಗ್ರಹ ಎನ್ನಬಹುದು .ಯಾರು ಜ್ಞಾನವನ್ನು ಪಡೆದು ಕೊಂಡಿರುತ್ತಾರೆ , ಆತ್ಮ ಸಾಕ್ಷಾತ್ಕಾರವನ್ನು ಪಡೆದು ಕೊಂಡಿರುತ್ತಾರೆ ಅವರಿಗೆ ತಲೆ ಮೇಲೆ ಈ ರೀತಿಯ ಉಬ್ಬು ಇರುತ್ತದೆ ಅದಕ್ಕೆ ನಾವು ಉಷ್ನೀಶ ಎಂದು ಕರೆಯುತ್ತಾರೆ ಇಲ್ಲಿ ಉಷ್ನೀಶ ಇರುವುದರಿಂದ ಇದರ ಆಕಾರವು ಬುದ್ಧನನ್ನು ಹೋಲುತ್ತಿರುವುದರಿಂದ ಇದನ್ನು ಬುದ್ಧನ ಮೂರ್ತಿ ಎನ್ನ ಬಹುದು "ಎಂದು ಅಭಿಪ್ರಾಯ ಪಟ್ಟಿದ್ದಾರೆ ಮಡಿಕೇರಿ ಪರಿಸರದಲ್ಲಿ ಬುದ್ಧಾರಾಧನೆ ಇದ್ದುದಕ್ಕೆ ಅನೇಕ ಆಧಾರಗಳು ಸಿಕ್ಕಿವೆ.  ಪೆರುವಾಜೆ  ಮಡಿಕೇರಿ ನಡುವೆ  ತುಂಬಾ ಅಂತರ ಇಲ್ಲ ಆದ್ದರಿಂದ ಇಲ್ಲಿ ಬುದ್ಧನ ಆರಾಧನೆ ಇದ್ದಿರುವ ಸಾಧ್ಯತೆ ಇದೆ ಎಂದು  ಖ್ಯಾತ ಸಂಶೋಧಕರಾದ ಡಾ||ಎಂ ಜಿ ನಾಗರಾಜ್ ಅವರು ಅಭಿಪ್ರಾಯ ಪಟ್ಟಿದ್ದಾರೆ .ಇಲ್ಲಿ ಇನ್ನು ಕೂಡಾ ಹೆಚ್ಚಿನಾಧ್ಯಯನಕ್ಕೆ ಅವಕಾಶವಿದೆ
ಇಲ್ಲಿ ಈ ವಿಗ್ರಹಗಳನ್ನು ಸ್ಥಳೀಯರು ಹರಿಕೆಯಾಗಿ ಬಂದ ಭೂತ ಸಂಬಂಧಿ ವಿಗ್ರಹಗಳೆಂದು ಭಾವಿಸಿದ್ದು, ಭೂತದ ಗುಡಿಯಲ್ಲಿ ಪ್ರತಿಷ್ಟಾಪನೆ ಮೊದಲಾದ ವೈದಿಕ ವಿಧಿಗಳು ಮುಗಿದ ನಂತರ  ಜಲ ವಿಸರ್ಜನೆ ಮಾಡುತ್ತಾರೆ .ಅನಂತ ಈ ವಿಗ್ರಹಗಳು ಎಲ್ಲೋ ಜಲ ಸಮಾಧಿಯಾಗಿ ಬಿಡುತ್ತವೆ .ಆದ್ದರಿಂದ  ಈ ವಿಗ್ರಹಗಳನ್ನು ಅವರ ಕೈಯಿಂದ ಪಡೆದು ರಕ್ಷಿಸುವ ಕಾರ್ಯ ಜರೂರಾಗಿ ಆಗಬೇಕಾಗಿದೆ .ಇಲ್ಲವಾದರೆ ಈ  ಅಪರೂಪದ ದಾಖಲೆ ನಾಶವಾಗಿ ಬಿಡ ಬಹುದು .ಇತಿಹಾಸಜ್ಞರು ಈ ಬಗ್ಗೆ ಗಮನಿಸಬೇಕಾಗಿ ವಿನಂತಿ ,ಈಗಾಗಲೇ ಇದನ್ನು ಅಲ್ಲೇ ನದಿಗೆ ಹಾಕಿರುವ ಸಾಧ್ಯತೆ ಇದೆ .ನದಿಗೆ ಹಾಕಿದ್ದಲ್ಲಿ ಬೇಸಿಗೆಯಲ್ಲಿ ನದಿ ನೀರು ಆರಿರುವಾಗ ಅದನ್ನು ಹುಡುಕಿ ತರುವ  ಕೆಲಸವಾಗಬೇಕಾಗಿದೆ



                                                              
    
          ಉಬ್ಬಿದ ಕಣ್ಣುಗಳು ಇರುವ  ನಂದಿಯ ಮುಖ  ಹಾಗೂ ಎರಡು ಮುಖವಿಲ್ಲದ ದೇಹ ಮಾತ್ರ ಇರುವ ನಂದಿಯ  ವಿಗ್ರಹಗಳಿವೆ. ಒಂದು ಪೂರ್ಣ ವಿಗ್ರಹ ಇದ್ದು  ಮೇಲ್ನೋಟಕ್ಕೆ ಹುಲಿಯನ್ನು ಹೋಲುತ್ತದೆ .
 ಒಂದು ಮಾನವನ ಕಾಲು ಮಾತ್ರ ಸಿಕ್ಕಿದೆ                                 
       
     
 10X10  ವಿಸ್ತಾರ ಹಾಗು ಒಂದಡಿ ಎತ್ತರದ ಮುರಕಲ್ಲಿನಲ್ಲಿ ಕಟ್ಟಿದ ಕಟ್ಟಡದ  ಅಡಿಪಾಯ ಕೂಡಾ  ಇತ್ತು .  
         
       
     
            

Wednesday, 4 September 2013

ಭೂತಗಳ ಅದ್ಭುತ ಜಗತ್ತಿನಲ್ಲಿ -ಬಾಕುಡರ ಸರ್ಪ ಕೋಲ


               
  ನನ್ನ  ಸಂಶೋಧನಾ ಕ್ಷೇತ್ರ ಕಾರ್ಯದಲ್ಲ್ಲಿ ನನಗೆ ಸಿಕ್ಕ ಅತಿ ಅಪರೂಪದ್ದೂ  ಅತ್ಯಂತ ಕುತೂಹಲಕಾರಿಯೂ  ರೋಮಾಂಚಕವೂ  ಆದದ್ದು ಬಾಕುಡರ ಸರ್ಪ ಕೋಲ .ಬಾಕುಡರ ಸರ್ಪ ಕೋಲ ದ ಬಗ್ಗೆ ಡಾ.ವೆಂಕಟರಾಜ ಪುಣಿಚಿತ್ತಾಯರು ತಮ್ಮ ತುಳು ನಡೆ ನುಡಿ ಕೃತಿಯಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದನ್ನು ನಾನು  ಓದಿದ್ದೆ . ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಅವರನ್ನೇ ಸಂಪರ್ಕಿಸಬೇಕಾಗಿತ್ತು .ಅವರ ಮನೆ ಕಾಸರಗೋಡು ಜಿಲ್ಲೆಯ ಪುಂಡೂರು ಎಂಬಲ್ಲಿದೆ ಎಂದು ಮಾಹಿತಿ ಸಿಕ್ಕಿತು .ದಾರಿ ಗೊತ್ತಿಲ್ಲದೆ ಇರುವ ಅಲ್ಲಿಗೆ ಒಬ್ಬಳಿಗೆ ಹೋಗಲು ಅಳುಕಾಯಿತು .ನನ್ನ ಸ್ನೇಹಿತೆ ಯುವ ಸಾಹಿತಿ ಅನುಪಮ ಪ್ರಸಾದ್ ಕುಂಬಳೆ ಸಮೀಪದಲ್ಲಿ ಇದ್ದಾರೆ
 ಅವರಲ್ಲಿ “ಪುಣಿಚಿತ್ತಾಯರ ಮನೆಗೆ ಹೋಗಿ ಬರುವನಾ?ಜೊತೆಗೆ ಬರುತ್ತೀರ  ? ಎಂದು ಕೇಳಿದೆ .ಹಿರಿಯ ಸಂಶೋಧಕರೂ ಸಾಹಿತಿಯೂ ಆಗಿದ್ದ ಅವರನ್ನು ಭೇಟಿ ಮಾಡಲು ಅನುಪಮಾರಿಗೂ ಆಸಕ್ತಿ ಇತ್ತು .ಒಂದು ದಿನ ಪುರುಸೊತ್ತು ಮಾಡಿಕೊಂಡು ಯಾವ್ಯಾವುದೋ ಬಸ್ ಹಿಡಿದುಕೊಂಡು ಅಲ್ಲಲ್ಲ್ಲಿ ವಿಚಾರಿಸಿಕೊಂಡು ಪುನ್ದೂರಿನ ಪುಣಿಚಿತ್ತಾಯರ ಮನೆಗೆ ಹೋದೆವು  !ಅದೃಷ್ಟವಶಾತ್ ನಾವು ಹತ್ತಿದ ಬಸ್ಸಿನಲ್ಲಿ ಪುಣಿಚಿತ್ತಾಯರ ಸಹೋದರರ ಮಗಳು ರಾಜಶ್ರೀ ನಮಗೆ ಸಿಕ್ಕು ನಮ್ಮ ಆತಂಕ ದೂರ ಆಗಿ ಅವರೊಂದಿಗೆ ಹೋದೆವು .ಪುಣಿಚಿತ್ತಾಯರ ಆರೋಗ್ಯ ಅಷ್ಟೊಂದು ಚೆನ್ನಾಗಿರಲಿಲ್ಲ .ಆದರೂ ಅವರು ನಮ್ಮ್ಮೊಂದಿಗೆ ಅನೇಕ ವಿಚಾರಗಳನ್ನು ಚರ್ಚಿಸಿದರು .ಅಮಗೆ ಅನೇಕ ವಿಷಯಗಳ ಕುರಿತು ಮಾಹಿತಿ ನೀಡಿದರು . ಅವರು ಕೂಡ ಬಾಕುಡರ ಸರ್ಪ ಕೋಲದ ರೆಕಾರ್ಡ್ ಮಾಡಿರಲಿಲ್ಲ .ಆದರೆ ಅದನ್ನು ನೋಡಿದ್ದರು .ತಾವು ನೋಡಿದ ವಿಚಾರವನ್ನು ವಿಶ್ಲೇಷಿಸಿ ಬರೆದಿದ್ದರು .ಬಾಕುಡರ ಸರ್ಪ ಕೋಲ  ಇಚಲನ್ಗೋಡು  ಹಾಗು ಇತರ ಕೆಲವು ಬಾಕುಡರ ಆರಾಧನ ತಾಣಗಳ ಕುರಿತು ಅವರು ಮಾಹಿತಿ ನೀಡಿದರು .ಅವರು ಆಗ ಕೇರಳ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು .ನಾನು ನಾಗಾರಾಧನೆ ಬಗ್ಗೆ ಅಧ್ಯಯನ ಮಾಡುವುದನ್ನು ಅರಿತು ಪೆರ್ಲದಲ್ಲಿ ನಡೆದ ರಾಷ್ಟೀಯ ತುಳು ಜಾನಪದ ಜಾತ್ರೆಯ ವಿಚಾರ ಸಂಕಿರಣದಲ್ಲಿ “ನಾಗ ಬೆಮ್ಮೆರೆ ಆರಾಧನೆ” ಎಂಬ ಪ್ರಬಂಧ ಮಂಡಿಸುವ ಅವಕಾಶವನ್ನು ನೀಡಿ ನನಗೆ ತುಂಬು ಬೆಂಬಲ ನೀಡಿದ್ದನ್ನು ನಾನೆಂದಿಗೂ ಮರೆಯಲಾರೆ .
 


ಅವರು ಹೇಳಿದಂತೆ ನಾನು ಇಚಲನ್ಗೋಡಿನ ಕೊಮಾರು ಚಾಮುಂಡಿ ದೈವಸ್ಥಾನದ ಮುಖ್ಯಸ್ತರನ್ನು ಸಂಪರ್ಕಿಸಿದೆ .೨೦೧೦ ರ ಮಾರ್ಚ್ ತಿಂಗಳಿನಲ್ಲಿ ಸರ್ಪ ಕೋಲ ಇತ್ತು . ರಾತ್ರಿ ನಡೆಯುವ ಕಾರಣ ನಮ್ಮ ಆತ್ಮೀಯರಾದ ಲಲಿತಕ್ಕ ಅವರನ್ನು ಕರೆದುಕೊಂಡು ನಾನು ಇಚಲಂಗೊಡಿಗೆ ಹೋಗಿ ಅಲ್ಲಿನ ವಿಶಿಷ್ಟ ನಾಗ ಭೂತಗಳ ಆರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ಪಾಡ್ದನಗಳನ್ನೂ ರೆಕಾರ್ಡ್ ಮಾಡಿದೆ .ಐತಿಹ್ಯಗಳನ್ನು ಸಂಗ್ರಹಿಸಿದೆ ಅಲ್ಲಿ ಸುರೇಶ ಮಂಗಲ್ಪಾಡಿ ,ರತ್ನಾಕರ ಮಂಗಲ್ಪಾಡಿ ಹಾಗು ಸತೀಶ ಮಂಗಲ್ಪಾಡಿಯವರ ಸಹಕಾರ ಸಿಕ್ಕಿತು ,ಜೊತೆಗೆ ಸ್ಥಳೀಯ ಶಿಕ್ಷಕರಾದ ಹೊಳ್ಳರು  ಮತ್ತು ಅವರ ಮಡದಿ ಕೃಷ್ಣಕ್ಕ ಅವರ ಸಹಾಯವೂ ದೊರೆಯಿತು 

ಕಾಸರಗೋಡು  ಜಿಲ್ಲೆಯ ಬಾಕುಡ ಸಮುದಾಯದವರ ವಿಶಿಷ್ಟವಾದ ನಾಗಾರಾಧನಾ ಪದ್ಧತಿ ಸರ್ಪ ಕೋಲ. ಇದನ್ನು ನಾಗನಲಿಕೆ, ಬೆರ್ಮರ್ ನಲಿಕೆ ಎಂದೂ ಕರೆಯುತ್ತಾರೆ. ಇಲ್ಲಿ ನಾಲ್ಕು ಶಕ್ತಿಗಳಿಗೆ ಆರಾಧಾನೆ ಮಾಡುತ್ತಾರೆ.ಈ ಸಂದರ್ಭದಲ್ಲಿ ಇಬ್ಬರು ನಾಗರಾಜರ ಹುಟ್ಟು ಮತ್ತು ಬಾಕುಡರ ಆರಾಧನೆ ಕುರಿತಾಗಿನ ಕಥೆಯನ್ನು  ಪಾದ್ದನದಲ್ಲಿ ಹೇಳುತ್ತಾರೆ .ಕೊಡೆಂಚಿರ್ ಎಂಬ ಪ್ರದೇಶ ಕುಂಬಳೆ -ಮಂಜೇಶ್ವರ ಸಮೀಪ ಇದೆ .ಇಲ್ಲಿ ಬಾಕುಡ  ಸಮುದಾಯದವರು ಇದ್ದಾರೆ . ಹಿಂದೆ ಕೊಡೆಂ ಚಿರ್ ನಲ್ಲಿ  ಹುತ್ತ ಒಂದು ಇತ್ತು . ಆ ಹುತ್ತದಲ್ಲಿ ಒಂದು ಹೆಣ್ಣು ಮಗು ಹುಟ್ಟುತ್ತದೆ . ಬೈಲ ಬಾಕುಡ  ಮತ್ತು ಬಾಕುಡೆತಿ ಗದ್ದೆ ಬದಿಯಲ್ಲಿ ಹೋಗುತ್ತಿರುವಾಗ ಮಗು ಅಳುವ ಸದ್ದನ್ನು ಕೇಳುತ್ತಾರೆ .ಆ ಅಳುವಿನ ಧ್ವನಿಯನು ಹಿಂಬಾಲಿಸಿಕೊಂಡು ಹೋಗುವಾಗ ಒಂದು ಹೆಣ್ಣು ಮಗು ಅಳುವುದು ಕಾಣಿಸುತ್ತದೆ .
              


ತುಳು :

ಪುನ್ಚೋಡುದು ಒಂಜಿ ಪೊಣ್ಣು ಬಾಲೆ ಬುಳುತ್ತೊಂದು ಬರ್ಪುಂಡು

ಬಾಲೆನು ಅಕುಳು ಕಂಡೆನಿ ಬುಡೆದಿ ಕೊಣಂದು ಬತ್ತೆರ್

ಆ ಬಾಲೆಗ್ ಅಕುಳು ಪುದರ್ ಒಲೆತ್ತೆರ್ ದೈಯಾರೆಂದು

ಕನ್ನಡ ಅನುವಾದ :

ಹುತ್ತದಿಂದ ಒಂದು ಹೆಣ್ಣು ಮಗು ಅಳುತ್ತಾ ಬರುತ್ತದೆ

ಮಗುವನ್ನು ಅವರು ಗಂಡ ಹೆಂಡತಿ (ಮನೆಗೆ )ಕರೆ ತಂದರು

ಆ ಮಗುವಿಗೆ ಅವರು ದೈಯಾರ್ ಎಂದು ಹೆಸರು ಕರೆದರು

ಆ ಬಾಕುಡ  ದಂಪತಿಗಳಿಗೆ ಮಕ್ಕಳಿರಲಿಲ್ಲ ,ದೇವರು ದಯಪಾಲಿಸಿದ ಮಗು ಎಂದು ಅದನ್ನು ಕರೆ ತಂದು ದೈಯಾರ್ ಎಂದು ಹೆಸರಿತ್ತು ಮುದ್ದಿನಿಂದ ಸಾಕಿದರು .ಆ ಮಗು ಚಿಕ್ಕದು ಹೋಗಿ ದೊಡ್ದವಳಾಗುತ್ತಾಳೆ.ಅವಳು ಯುವತಿ ಆದಾಗ ಅವಳು “ನಾನು ನೆತ್ತರಿನಲ್ಲಿ ಹುಟ್ಟಲಿಲ್ಲ .ನನಗೆ ಜನ್ಮ ಕೊಟ್ಟ ತಂದೆ ತಾಯಿಗಳಿಲ್ಲ.ಮರ ಹುಟ್ಟಿ ಮರ ಸಾಯುವ ಕಾಲ ಬಂದರೂ ನನ್ನ ಹೊಟ್ಟೆ ಯಲ್ಲಿ ಸಂತಾನವಾಗಲಿಲ್ಲ “ಎಂದು ದುಃಖಿಸುತ್ತಾಳೆ . ನಂತರ ಅವಳು ಅಲೌಕಿಕ ಗರ್ಭವನ್ನು ಧರಿಸುತ್ತ್ತಾಳೆ .

ಯಾನು ನೆತ್ತರುಡು ಪುಟ್ಟುದಿಜ್ಜಿ

ನೀರುಡು ಮಲ್ಲೇತುಜ್ಜಿ  

ಎಂಕು ಜನ್ಮ ಕೊರ್ನ ಅಪ್ಪೆ ಅಮ್ಮೆ ಇಜ್ಜಿ

ಮರ ಪುಟ್ಟುದು ಮರ ಸೈಪ್ಪುನ ಕಾಲ ಬತ್ತುಂಡತ್ತ

ಎನ್ನ ಬಂಜಿಡು ಕುಟುಂಬ ಸಂಸಾರ ಪುಟ್ಟೋ ಡು

ಪಂದಂಡ ಕಡೆಸನ್ ಬಂಜಿನಾಲ್ ಆಯಾಳು
ಒಂಬತ್ತು ತಿಂಗಳು ತುಂಬಿದ ನಂತರ ಅವಳಿಗೆ ಪ್ರಸವ ವೇದನೆ ಕಾಣಿಸಿಕೊಳ್ಳುತ್ತದೆ .ಅವಳು ಎರಡು ಸರ್ಪಗಳಿಗೆ ಜನ್ಮ ನೀಡಿ ಮರನವನ್ನಪ್ಪುತ್ತಾಳೆ . ಹೀಗೆ ಹುಟ್ಟಿದ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರೆಂಬ ನಾಗರಾಜರು ಜನಿಸಿದರು ಎಂಬ ಕಥೆಯನ್ನು ಪಾದ್ದನದಲ್ಲಿ ಹೇಳುತ್ತಾರೆ


ಈ . ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರು ಪಾತಾಳವನ್ನು ಒಡೆದು ಹೋದರು. ಪಾತಾಳ ಒಡೆದು ಹೋದವರು ಕರಿಯ ಸಂಕಪಾಲ ಹುತ್ತದಲ್ಲಿ, ‘ನಾಗಬೆರ್ಮರ್ಎಂದು ಹುಟ್ಟುತ್ತಾನೆ. ಬಿಳಿಯ ಸಂಕಪಾಲ ನಾಗಶಿಲೆಯಲ್ಲಿ ಪ್ರತ್ಯಕ್ಷವಾಗುತ್ತಾನೆ. ಹಾಗಾದರೆ ಇವರು ಯಾರು? ಇವರು ಸಾವಿರದ ಒಂದು ಗರುಡಾವತಾರದಲ್ಲಿ ಭೂಲೋಕದಲ್ಲಿ ನಾಗಬೆರ್ಮೆರ್‍ರೆಂದು ಅವತಾರವಾದರು. ಇವರು ಭೂಲೋಕದಲ್ಲಿ ರಾಮಾವತಾರ ಮುಗಿದಾಗ ಬಿಳಿಯ ಸಂಕಪಾಲ ಹಾಲಿನ ಕಡಲಲ್ಲಿ ಮಾಯವಾಗುತ್ತಾನೆ. ಕರಿಯ ಸಂಕಪಾಲನು ಹಾಲಿನ ಕಡಲಲ್ಲಿ ಮಾಯವಾಗುತ್ತಾನೆ.  ಕರಿಯ ಸಂಕಪಾಲ ಮಹಾವಿಷ್ಣು ಆಗಿ ಹಾಲಿನ ಕಡಲಿಗೆ ಇಳಿಯುತ್ತಾನೆ. ಬಿಳಿಯ ಸಂಕಪಾಲ ಲಕ್ಷ್ಮಣ ಆಗಿ ಆದಿಶೇಷನೆಂದು ಹಾಲಿನ ಕಡಲಿನಲ್ಲಿ ಮಾಯವಾಗುತ್ತಾನೆ ಎಂಬ ಕಥೆಯನ್ನು ಈ ಪಾಡ್ದನವು ಹೇಳುತ್ತದೆ.

ಇದೆ ಸಂದರ್ಭದಲ್ಲಿ ಹೇಳುವ ಇನ್ನೊಂದು ಪಾದ್ದನದಲ್ಲಿ ಬಾಕುಡ ಸಮುದಾಯಕ್ಕೆ ಭೂಮಿ ಒಡೆತನ ಸಿಕ್ಕಿದ ಕಥಾನಕವಿದೆ
ಆದಿಯಲ್ಲಿಯೇ ಬೈಲಬಾಕುಡರಿಗೆ ನಾಗಬೆರ್ಮರ್ಕುಲದೈವ, ಆದಿಕಾಲದಲ್ಲಿ ಭೂಮಿಯ ಒಡೆಯರಾದ ಬಾಕುಡರು ಭೂಮಿಯ ಮಣ್ಣು ಹಿಡಿದು ಪ್ರಮಾಣ ಮಾಡಿ ಸರ್ವನಾಶಕ್ಕೆ ಕಾರಣರಾಗುತ್ತಾರೆ. ಹಿಂದಿನ ಕಾಲದಲ್ಲಿ ಹಿರಿಯರ ಕಾಲದಲ್ಲಿ ರೇಣುಕಾದೇವಿಯ ಮಗ ತಾಯಿಯ ತಲೆ ಕಡಿದ ಪಾಪವಿಮೋಚನೆಗಾಗಿ ಸಮುದ್ರವನ್ನು ಭೂಮಿ ಮಾಡಿ ಭೂಮಿದಾನ ಕೊಡುತ್ತಾನೆ. ಹೀಗೆ ಆದಿಯಲ್ಲಿ ಬೈಲಬಾಕುಡರಿಗೆ ಭೂದಾನ ಸಿಕ್ಕ ಭೂಮಿ. ಭೂದಾನ ಸಿಕ್ಕಾಗ ಬಾಕುಡರು ತುಂಡು ಅರಸರಾಗಿದ್ದರು. ಮೇಲಿನ ಜಾತಿಯವರಿಗೆ ಇವರು ಚಿತ್ರಹಿಂಸೆ ಕೊಡುತ್ತಿದ್ದರು. ಆಗಅವರು ಈ ಅರಸರನ್ನು ನಾಶ ಮಾಡಬೇಕೆಂದು ಸೋಮೇಶ್ವರದ ಕಡೆಯಿಂದ, ನೀಲೇಶ್ವರದ ಕಡೆಯಿಂದ ದೊಡ್ಡ ಮಂತ್ರವಾದಿಗಳನ್ನು ಕರೆಸಿ ಮಂಜೇಶ್ವರದ ಆರು ಗ್ರಾಮದೊಳಗೆ ಬಾಕುಡರ ಕುಲದೈವ ಸರ್ಪವನ್ನು ಸರ್ವನಾಶ ಮಾಡುವುದಕ್ಕಾಗಿ ದೊಡ್ಡ ಮಾರಣಹೋಮ ಮಾಡುತ್ತಾರೆ. ಎಲ್ಲ ಅರಸರನ್ನು ಓಲೆ ಕೊಟ್ಟು ಹೋಮಕ್ಕೆ ಕರೆದರು. ಅಡ್ಡ 12 ಕೋಲು, ಉದ್ದ 12 ಕೋಲು ಇರುವ ದೊಡ್ಡ ಹೋಮಕುಂಡದಲ್ಲಿ ಏಳು ರಾತ್ರಿ ಎಂಟು ಹಗಲುಗಳ ಕಾಲ ಹೋಮ ತಂತ್ರ ಮಾಡಿದರು. ಪರ್ವತದಷ್ಟು ಹೊಗೆ ಎದ್ದಿತು. ಆಕಾಶದೆತ್ತರಕ್ಕೆ ಬೆಂಕಿ ಉರಿಯಿತು. ಹೋಮದ ಬಿಸಿಗೆ ನಾಲ್ಕು ಮೂಲೆಯ ಕಬ್ಬಿಣ ಮೆದುವಾಗಿ ಹಣ್ಣುತೊಂಡೆಯಂತೆ ಆಯಿತು. ಆಗ ಆ ಬಿಸಿಗೆ ಭೂಲೋಕದಲ್ಲಿರುವ ಸರ್ಪಜಂತುಗಳು ಬಿಸಿ ಕಬ್ಬಿಣದ ಸರಳನ್ನು ಹತ್ತಿ ಹೋಮದೊಳಗೆ ಬಿದ್ದವು. ಕುಲದೈವದ ಸಹಾಯವಿಲ್ಲದೆ ನಿಸ್ಸಹಾಯಕರಾಗಿದ್ದ ರಾಜರುಗಳನ್ನು ಅಗ್ನಿಕುಂಡಕ್ಕೆ ಹಾಕಿದರು. ಆಗ ದೊಡ್ಡ ಆದಿಶೇಷ ಹಾಗೂ ಸಣ್ಣ ಮಹಾಶೇಷ ಭೂಮಿ ಒಡೆದು ಬರುತ್ತಾರೆ. ಆಗ ಮಂತ್ರವಾದಿಗಳು, ತಂತ್ರಿಗಳು, ನೂಲು ಹಾಕಿದ ಬ್ರಾಹ್ಮಣರು ಕೈಮುಗಿದು ಬೇಡಿಕೊಂಡರು. ನಾವು ಮಾಡಿದ ಪಾಪಕ್ಕೆ ನಾಗಬೆರ್ಮೆರ್ ಪ್ರತ್ಯಕ್ಷವಾಗಿದ್ದಾರೆ. ಅವರಿಗೆ ನಾಗತಂಬಿಲ, ನಾಗಮಂಡಲ ಕೊಟ್ಟು ನಾವು ಮಾಡಿದ ಪಾಪಕ್ಕೆ ಪರಿಹಾರ ಮಾಡುತ್ತೇವೆಎಂದು ಬೇಡಿಕೊಳ್ಳುತ್ತಾರೆ. ಅದಕ್ಕಿಂತಲೂ ದೊಡ್ಡ ಪಾಪಕ್ಕೆ, ಆದಿಯಿಂದಲೇ ಬೈಲಬಾಕುಡರ ದೊಡ್ಡ ಪಾಪಕ್ಕೆ ನಿಮಗೆ ಬೇಕಾದ ಪರಿಹಾರ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಸಾವಿರದೊಂದು ಗರುಡಾವತಾರ ಆಗುವವರೆಗೆ ಕೋಲ, ತಂಬಿಲ ಕೊಡಬೇಕು, ಬೈಲಬಾಕುಡರ ಕುಲದೈವವನ್ನು ನೆನೆದರೆ ನೆನೆದಲ್ಲಿ ನಾಗಬೆರ್ಮರು ಅವರಿಗೆ ಒಲಿಯುತ್ತಾರೆಎಂದು ಹೇಳಿ ನಾಗಬೆರ್ಮೆರ್ ಕಲ್ಲಿನಲ್ಲಿ ಉದ್ಭವವಾಗುತ್ತಾರೆ.ಬಾಕುಡರ ಸರ್ಪಾರಾಧನೆಗೆ ಸಂಬಂಧಿಸಿದಂತೆ ಸಿಕ್ಕ ಇನ್ನೊಂದು ಪಾಡ್ದನದ ಪಾಠ ದಲ್ಲಿ  ತುಸು ಬೇರೆ ರೀತಿಯ ಕಥಾನಕವಿದೆ





ಅಣ್ಣಪ್ಪ ರಾಜ್ಯದಲ್ಲಿ ನಾರಾಯಣದೇವರು ಇದ್ದರು. ಅವರ ಹೆಂಡತಿ ಮುಂಗುಡೆ ದೆಯ್ಯಾರು. ಆ ದಂಪತಿಗಳಿಗೆ ಬಹುಕಾಲ ಮಕ್ಕಳಾಗುವುದಿಲ್ಲ. ಮುಂಗುಡೆ ದೈಯಾರು ನನ್ನಂತ ಹೆಂಗಸರು ತಿಂಗಳು ತಿಂಗಳು ಮೀಯುತ್ತಾರೆ. ಬಸುರಿಯಾಗಿ ವರ್ಷದೊಳಗೆ ಹೆರುತ್ತಾರೆ. ನಾನು ಮೀಯುವುದು, ಮೀನು ಮಿಂದ ಹಾಗೆ ಆಯ್ತಲಎಂದು ದುಃಖಿಸುತ್ತಾಳೆ. ಆಕೆಯ ದುಃಖ ದೇವರಿಗೆ ಕೇಳಿಸುತ್ತದೆ. ಅವಳು ಮೈನೆರೆಯುತ್ತಾಳೆ. ನಾಲ್ಕನೆಯ ದಿನ ಎಣ್ಣೆ ಅರಸಿನ, ಸೀಗೆ ಹುಡಿ ತೆಗೆದುಕೊಂಡು ಹೊಳೆಗೆ ಸ್ನಾನ ಮಾಡಲು ಹೋಗುತ್ತಾಳೆ. ಅಲ್ಲಿ ಕಲ್ಲಿನ ಮೇಲೆ ಕುಳಿತು ಅಯ್ಯೋಎಂದು ಮರುಗುತ್ತಾಳೆ. ಮೀನುಗಳಿಗಾದರೂ ಮಕ್ಕಳು ಮರಿಗಳಾಗುತ್ತವೆ ನನಗೆ ಮಕ್ಕಳಾಗಲಿಲ್ಲಎಂದು ದುಃಖಿಸುತ್ತಾಳೆ. ಸ್ವಲ್ಪ ಅಕ್ಕಿ, ವೀಳ್ಯದೆಲೆ, ಅಡಿಕೆಗಳನ್ನು ಒಂದು ಕುಡಿ ಬಾಳೆ ಎಲೆಯಲ್ಲಿಟ್ಟು ಹರಕೆಯಾಗಿ ಸಂಕಲ್ಪಿಸಿ ನೀರಮೇಲೆ ಬಿಡುತ್ತಾಳೆ. ಆಕೆಗೆ ಶುಭಲಕ್ಷಣ ಕಾಣಿಸುತ್ತದೆ. ಸಂತೋಷದಿಂದ ಮಿಂದು ಬರುತ್ತಾಳೆ. ಮುಂದಿನ ತಿಂಗಳು ನೀರು ನಿಲ್ಲುತ್ತದೆ. ಆಕೆ ಬಸುರಿಯಾದ ವಿಚಾರ ಊರಿನಲ್ಲಿ ಗೊತ್ತಾಗುತ್ತದೆ. ಏಳನೆಯ ತಿಂಗಳಿನಲ್ಲಿ ಸೊಸೆಗೆ ಹೊಟ್ಟೆಯ ಬಯಕೆ, ಬಾಯಿಯ ಆಸೆ ತೀರಿಸಲು ಕಡುವು ಸಮ್ಮಾನ, ಸಿಹಿ ಹೊದಳು ಸಮ್ಮಾನವಾಗುತ್ತದೆ. ಹತ್ತನೆ ತಿಂಗಳಲ್ಲಿ ಅವಳಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಒಂದು ಬೇನೆ ಬಂದಾಗ ಒಂದು ಮಾಲೆ ಹಾವಿನ ಮೊಟ್ಟೆಗಳು, ಎರಡನೆ ಬೇನೆ ಬಂದಾಗ ಎರಡು ಮಾಲೆ ತತ್ತಿಗಳು ಹೀಗೆ ಆರನೆಯ ಬೇನೆಯಲ್ಲಿ ಅರುವತ್ತಾರು ಕೋಟಿ ಹೆಡೆಯ ಬೊಳಿಯ ಸಂಕಪಾಲನೆಂಬ ಸರ್ಪ ಹುಟ್ಟುತ್ತದೆ. ಏಳನೆಯ ಬೇನೆಯಲ್ಲಿ ಎಪ್ಪತ್ತೇಳು ಕೋಟಿ ಹೆಡೆಯ ಕರಿಯ ಸಂಕಪಾಲ ಹುಟ್ಟುತ್ತದೆ. ನಾರಾಯಣ ದೇವರು ಕರಿಯ ಸಂಕಪಾಲನನ್ನು ಕರೆದು ನೀನು ಭೂಲೋಕ, ಪಾತಾಳ ಲೋಕಗಳ ಅಧಿಪತಿಯಾಗಿ ನಾಗರಾಜನೆಂಬ ಖ್ಯಾತಿಯಿಂದ ಜೀವಿಸುಎನ್ನುತ್ತಾರೆ. ಒಂದು ದಿನ ಕರಿಯ ಸಂಕಪಾಲನು ಪಾತಾಳದಿಂದ ಮೇಲಕ್ಕೆ ತಲೆಯೆತ್ತಿ ನನಗೆ ಬೇಕಾದ ವ್ಯಕ್ತಿ ಎಲ್ಲಿರಬಹುದು?” ಎಂದು ನೋಡುತ್ತಾನೆ. ಅವನಿಗೆ ಕೊಡೆಂಚಿರ್‍ನಲ್ಲಿರುವ ಪಳ್ಳೀತೊಕುರು ಬಾಕುಡತಿಕಾಣಿಸುತ್ತಾಳೆ. ಆಕೆಯ ಹುಟ್ಟೂರು ನಾರ್ಯ. ಆಕೆಗೆ ನೇಲ್ಯ ಸಂಕರಮೆ ಮತ್ತು ಎಲ್ಯ ಸಂಕರಮೆ ಎಂಬ ಸಹೋದರರು ಇರುತ್ತಾರೆ. ಕರಿಯ ಸಂಕಪಾಲನು ಪಳ್ಳಿತೋಕುರು ಬಾಕುಡತಿಯಲ್ಲಿ ಹೆದರಬೇಡ ನನ್ನನ್ನು ನಂಬು, ಕೋಲ ನಡೆಸಿ ನನ್ನ ಆರಾಧನೆ ಮಾಡುಎನ್ನುತ್ತಾನೆ. ಹಾಗೆಯೇ ಆಕೆ ಕೊಡೆಂಚಿರ್‍ನಲ್ಲಿ ಸ್ಥಾನ ಕಟ್ಟಿಸಿ ಕಾಳಿಂಗಸರ್ಪವನ್ನು ಆರಾಧಿಸುತ್ತಾಳೆ. ಅಂದಿನಿಂದ ಬಾಕುಡರಲ್ಲಿ ಸರ್ಪಾರಾಧನೆ ಬೆಳೆದು ಬಂತು.
ಮುಂದೊಂದು ದಿನ ಪಳ್ಳಿ ತೋಕುರು ಬಾಕುಡೆದಿ ಚಾಪೆ ಹೆಣೆಯುತ್ತಿದ್ದಾಗ, ಅದಕ್ಕೆ ಸರ್ಪದ ಹೆಡೆಯಾಕಾರ ಬರತೊಡಗುತ್ತದೆ. ಎಷ್ಟೆಷ್ಟು ಸರಿಯಾಗಿ ಹೆಣೆದರೂ ಹೆಡೆಯ ಆಕಾರನ್ನು ಹೋಗಲಾಡಿಸಲು ಆಗುವುದಿಲ್ಲ. ಆಕೆಗೆ ದುಃಖವಾಯಿತು. ಮಾರಲು ಹೋದರೆ ನಾಗನ ಹೆಡೆ ಆಕಾರವಿರುವ ಚಾಪೆಯನ್ನು ಯಾರು ಕೊಂಡುಕೊಳ್ಳುವುದಿಲ್ಲ. ಕೊನೆಗೆ ಅವಳು ಉರ್ಮಿ ಹೊಳೆಗೆ ಬರುತ್ತಾಳೆ. ದೇವರೇ ನನ್ನನ್ನು ಮಾಯಕ ಮಾಡಿಎಂದು ಪ್ರಾರ್ಥಿಸುತ್ತಾಳೆ. ದೇವರು ಆಕೆಯನ್ನು ಮಾಯಕ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತಾನೆ.
ಒಟ್ಟಿನಲ್ಲಿ ಬಾಕುಡ ಸಮುದಾಯದವರು  ಇಬ್ಬರು  ನಾಗರಾಜರು ,ಅವರ ತಾಯಿ ದೈಯಾರ್ ಮತ್ತು ಅವರನ್ನು ಆರಾಧಿಸಿದ ಪಲ್ಲಿ ತೊಕುರು ಬಾಕುಡೆತಿಯನ್ನು ಇಲ್ಲಿ ನೆಲ್ಯನ್ನೆರ್, ಎಲ್ಯನ್ನೆರ್, ನೆಲ್ಯಕ್ಕೆರ್, ಎಲ್ಯಕ್ಕೆರ್ ಎಂದು ಆರಾಧಿಸುತ್ತಾರೆ  
1. ಎಲ್ಯಣ್ಣೇರ್ (ಚಿಕ್ಕಣ್ಣ) : ಈತನು ನಾಗ ಸ್ವರೂಪಿಯಾಗಿದ್ದು ಇತನಿಗೆ 30-40 ಅಡಿ ಎತ್ತರದ ನಾಗಮುಡಿಯನ್ನು ಹಿಡಿಯುತ್ತಾರೆ. ಬಿಳಿಯ ಸಂಕಪಾಲನೆಂಬ ನಾಗರಾಜನನ್ನೇ ಎಲ್ಯಣ್ಣೇರ್ ಎಂದು ಕರೆದು ಭೂತದ ನೆಲೆಯಲ್ಲಿ ಆರಾಧಿಸುತ್ತಾರೆ.
2. ನೇಲ್ಯಣ್ಣೇರ್ (ದೊಡ್ಡಣ್ಣ) : ನಾಗರಾಜರಲ್ಲಿ ಹಿರಿಯನಾದ ಕರಿಯ ಸಂಕಪಾಲನನ್ನು ನೇಲ್ಯಣ್ಣೇರ್ (ದೊಡ್ದಣ್ಣ) ಎಂದು ಕರೆದು ದೈವದ ನೆಲೆಯಲ್ಲಿ ನೇಮ ನೀಡಿ ಆರಾಧಿಸಲಾಗುತ್ತದೆ.
3. ನೇಲ್ಯಕ್ಕೇರ್ (ದೊಡ್ದಕ್ಕ) : ಬಿಳಿಯ ಸಂಕಪಾಲ ಹಾಗೂ ಕರಿಯ ಸಂಕಪಾಲರ ತಾಯಿಯನ್ನೇ ನೇಲ್ಯಕ್ಕೇರ್ ಎಂದು ಆರಾಧಿಸುತ್ತಾರೆ. ನೇಲ್ಯಕ್ಕೇರನ್ನು ದೊಡ್ಡ ಉಳ್ಳಾಲ್ತಿ ಎಂದೂ ಕರೆಯುತ್ತಾರೆ.
 4. ಎಲ್ಯಕ್ಕೇರ್ (ಚಿಕ್ಕಕ್ಕ) : ಕೊಡೆಂಚಿರ್‍ನಲ್ಲಿ ನಾಗರಾಜರನ್ನು ಆರಾಧಿಸಿ ಕೊನೆಗೆ ನಾಗರಾಜರ ಸೇರಿಗೆಗೆ ಸಂದು ಹೋದ ಪಳ್ಳಿತೋಕುರು ಬಾಕುಡೆತಿಯನ್ನು ಎಲ್ಯಕ್ಕೇರ್ ಎಂದು ಭೂತತ್ವಕ್ಕೇರಿಸಿ ಆರಾಧಿಸುತ್ತಾರೆ. ಎಲ್ಯಕ್ಕೇರನ್ನು ಚಿಕ್ಕ ಉಳ್ಳಾಲ್ತಿ ಎಂದೂ ಕರೆಯುತ್ತಾರೆ. ನೇಲ್ಯಕ್ಕೇರ್ ಮತ್ತು ಎಲ್ಯಕ್ಕೇರ್ ಅನ್ನು ನಾಗಯಕ್ಷಿಗಳು ಎಂದು ತುಳು ಜಾನಪದ ವಿದ್ವಾಂಸರಾದ ಡಾ ವೆಂಕಟರಾಜ ಪುಣಿಂಚಿತ್ತಾಯರು ಅಭಿಪ್ರಾಯ ಪಟ್ಟಿದ್ದಾರೆ.

                   

 5. ಕೃಷ್ಣಸರ್ಪ : ಕರಿಯ ಸಂಕಪಾಲನನ್ನು ಅಣ್ಣ ನಾಗರಾಜನೆಯ ಭಾವಿಸಿದ್ದು, ಆತನನ್ನು ಕೃಷ್ಣಸರ್ಪದ ರೂಪದಲ್ಲಿ ಬಾಕುಡ ಜನಾಂಗದವರು ಆರಾಧಿಸುತ್ತಾರೆ. ಇಲ್ಲಿ ಭೂತಮಾಧ್ಯಮರು ಮೂರು ಹೆಡೆಯ ನಾಗನನ್ನು ದ್ಯೋತಿಸುವ ಅಡಿಕೆ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಹಾವಿನಂತೆ ತೆವಳುತ್ತಾ ಕುಕ್ಕಂಬಿಲಕ್ಕೆ ಬರುತ್ತಾರೆ. ಇಲ್ಲಿ ಒಬ್ಬರು ಭೂತಮಾಧ್ಯಮರು ಕೃಷ್ಣಸರ್ಪ ಪಾತ್ರಧಾರಿಯ ಮೇಲೆ ಅಕ್ಕಿ ಕಾಳನ್ನು ಎರಚಿ ಕೃಷ್ಣಸರ್ಪ ಸಿಡಿದೇಳುವಂತೆ, ಬುಸುಗುಟ್ಟುವಂತೆ ಮಾಡುತ್ತಾರೆ. ಕೊನೆಯಲ್ಲಿ ಕೃಷ್ಣಸರ್ಪ ಸೋತು ಶರಣಾಗುವ ಅಭಿನಯ ಇರುತ್ತದೆ. ಇದನ್ನು ಮರಿಕ್ಕಳಗಾವುನೆ ಎಂದು ಕರೆಯುತ್ತಾರೆ. ಇದು ಕೃಷ್ಣಸರ್ಪದ ಕೋಲವಾಗಿದೆ.ಇದು ಬಹಳ ಆಕರ್ಷಕವಾಗಿದೆ .ಅತ್ಯಂತ ರೋಮಾಂಚನಕಾರಿ ಕೂಡಾ ! ಈ ನಡುವೆ ಕುಡನ್ಗೆರ್ /ಕುಂಡನ್ಗೆರ್ ಎಂಬ ಹಾಸ್ಯದ ಅಭಿವ್ಯಕ್ತಿ ಇರುತ್ತದೆ  .ಇದೊಂದು ಅಪರೂಪದ ಜಾನಪದ ಅಭಿವ್ಯಕ್ತಿ ಕೂಡಾ !ಇಂತಹ ಅದ್ಭುತ ವಿಚಾರಗಳು ,ರೋಮಾಂಚನಕಾರಿ ವಿಷಯಗಳು ಇರುವ ಕಾರಣವೋ ಏನೋ ನನಗೆಂದೂ ನಾಗ ಹಾಗೂ ಭೂತಗಳ ಕುರಿತಾದ ಕ್ಷೇತ್ರ ಕಾರ್ಯವಾಗಲಿ ,ಮಾಹಿತಿ ಸಂಗ್ರಹವಾಗಲೀ ಯಾವುದೂ ಕೂಡ ಎಂದೂ ಬೇಸರ ಹುಟ್ಟಿಸಲೇ ಇಲ್ಲ !.
              
           
            
                            ಕುಂಡಂಗೆರ್ /ಕುಡನ್ಗೆರ್