ಮನದಾಳದಿಂದ ಎರಡು ಮಾತು
ಹೌದು .! ನಾನು ನಂಬಿದೆ “ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯ ಇದೆ
“ ಸುಬ್ಬಿ ಇಂಗ್ಲೀಷು ಕಲ್ತದು “ಎಂಬ ನಾಟಕವನ್ನು ಬರೆದು ಅಭಿನಯಿಸಿ ಬಹುಮಾನ ಪಡೆದಾಗ ನಾನು ಓದುತ್ತಿದ್ದ ಶ್ರೀ ವಾಣಿ ವಿಜಯ ಪ್ರೌಢ ಶಾಲೆಯ ಯುವ ಜನೋತ್ಸವಕ್ಕೆ ಅಥಿತಿಯಾಗಿ ಆಗಮಿಸಿದ್ದ
ನಿವೃತ್ತ ಶಿಕ್ಷಕರಾದ ವಿಶ್ವೇಶ್ವರ ಭಟ್ ನುಡಿದ ಮಾತನ್ನು
ನಾನು ಬಲವಾಗಿ ನಂಬಿದೆ. ನಂಬಿ ದೃಢವಾಗಿ ಮುಂದಡಿ ಇಟ್ಟೆ
ಈ ನಾಟಕವನ್ನು ನಾನು ಮೀಯಪದವಿನ
ಶ್ರೀ ವಿದ್ಯಾ ವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ 1984ರಲ್ಲಿ ಎಲ್ಲೋ ಓದಿದ/ಕೇಳಿದ ಹಾಸ್ಯವನ್ನು ಆಧರಿಸಿ ರಚಿಸಿದ್ದೆ,ಆದರೆ ಇದರ ಮೂಲ ಕಥೆ
/ಹಾಸ್ಯ /ನಾಟಕ ಯಾವುದೆಂದು ನನಗೆ ಈಗ ಮಾತ್ರವಲ್ಲ ,ಆಗಲೂ ತಿಳಿದಿರಲಿಲ್ಲ,ಯಾವುದೇ ಕೃತಿಯನ್ನು
ಎದುರಿಗೆ ಇಟ್ಟುಕೊಂಡು ಹವ್ಯಕಕ್ಕೆ ಅನುವಾದ ಮಾಡಿದ
ಕೃತಿ ಇದಲ್ಲ ,ಮತ್ತು ಇದರ ಮೂಲ ಕಥೆ /ಹಾಸ್ಯ ಕೂಡ ನನ್ನ ಸ್ವಂತದ್ದು ಅಲ್ಲ ,ತೀರ ಚಿಕ್ಕ ವಯಸ್ಸಿನಲ್ಲಿ ಅಂದರೆ ನಾನು ಏಳನೇ ತರಗತಿಯಲ್ಲಿ
,೧೯೮೪ರಲ್ಲಿ ಓದುತ್ತಿದ್ದಾಗ ರಚಿಸಿದ ಹವ್ಯಕ
ನಾಟಕ ಇದು. ಅದ್ದರಿಂದ ನನಗೆ ಇದರ ಮೂಲ ಕಥೆ ಎಲ್ಲಿಯದು ಎಂದು ತಿಳಿದಿಲ್ಲ ,ಆದರೆ ಇದು ಯಾವುದೇ
ಕೃತಿಯ ಅನುವಾದವಲ್ಲ,ನಾನು ಕೇಳಿದ /ಓದಿದ ಹಾಸ್ಯ/ಕಥೆಯನ್ನು ನೆನಪಿಟ್ಟುಕೊಂಡು ರಚಿಸಿದ
ಹವಿಗನ್ನಡದ ನಾಟಕವಿದು . ಮರು ವರ್ಷವೇ ಇದನ್ನು ಅಭಿನಯಿಸಿ ಶಾಲೆಯಲ್ಲಿ ಬಹುಮಾನ ಪಡೆದಿದ್ದೆವು!
ಗಡಿನಾಡು ಕಾಸರಗೋಡಿನ ಕೋಳ್ಯೂರು
ಎಂಬ ಹಳ್ಳಿಯ ಸಂಪ್ರದಾಯಸ್ಥ ಪುರೋಹಿತ ಮನೆತನ
ವಾರಣಾಸಿಯ ಶ್ರೀ ವೇ ಮೂ|| ನಾರಾಯಣ ಭಟ್ಟ ಮತ್ತು
ಮತ್ತು ಸರಸ್ವತಿ ಅಮ್ಮ ದಂಪತಿಗಳ ಮಗಳಾಗಿ ಹುಟ್ಟಿದ ನನಗೆ ದೊಡ್ಡ ಕನಸುಗಳೇನೂ ಇರಲಿಲ್ಲ .”ಹುಡುಗಿಯರು
ಏನು ಓದಿದರೇನು ?ಒಲೆ ಬೂದಿ ಒಕ್ಕುವುದು ತಪ್ಪದು”
ಎಂಬ ಮಾತು ಆಗ ಪ್ರಚಲಿತ ಇತ್ತು .
ಆದರೆ ನಮ್ಮ ಮೀಯಪದವಿನ ಶ್ರೀ
ವಿದ್ಯಾ ವರ್ಧಕ ಶಾಲೆಯ ಶಿಕ್ಷಕರು ಬಹುಶ ಹಾಗೆ ಭಾವಿಸಿರಲಿಲ್ಲ ,ಆದ್ದರಿಂದಲೇ ನಮಗೆ ಪಾಠದೊಂದಿಗೆ
ಹಾಡು ,ನೃತ್ಯ ,ನಾಟಕ ಮೊದಲಾದವುಗಳಲ್ಲಿ ನಮಗೆ ತರಬೇತಿ ನೀಡಿದರು .ಒಂದು ಹೆಜ್ಜೆ ಎತ್ತಿ ಇಡಲೂ
ತಿಳಿಯದ ನಮಗೆ ನೃತ್ಯ ಕಲಿಸಿ ಬಾಲಕಲೋತ್ಸವಕ್ಕೆ ಕರೆದೊಯ್ದು ಸ್ಪರ್ಧೆಯಲ್ಲಿ ಬಹುಮಾನ ಗಳಿಸುವಂತೆ
ಮಾಡಿದರು ನನ್ನ ಮೆಚ್ಚಿನ ಶಿಕ್ಷಕರಾದ ಶ್ರೀಯುತ ವಸಂತ ಮಾಸ್ಟರ್ ತೊಟ್ಟೆತ್ತೋಡಿ ಮತ್ತು ಶ್ರೀಮತಿ
ಸರೋಜಾ ಟೀಚರ್ , ನನ್ನ ಅತಿ ಉತ್ಸಾಹ ,ತುಂಟತನಗಳನ್ನು ಉದ್ಧಟತನವೆಂದು ಭಾವಿಸದೆ ನನ್ನನ್ನು ಸದಾ ಪ್ರೋತ್ಸಾಹಿಸಿದವರು ನನ್ನ
ನೆಚ್ಚಿನ ಸಂಸ್ಕೃತ ಶಿಕ್ಷಕಿ ಶ್ರೀಮತಿ ಪುಷ್ಪವಲ್ಲಿ ಅವರು.
ಪ್ರತಿ ವರ್ಷ ವಾರ್ಷಿಕೋತ್ಸವ
ಮಾಡಿ ಅದರಲ್ಲಿ ನಮಗೆ ನಾಟಕ ಡಾನ್ಸ್ ಗೆ ನನ್ನ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡಿದರು .ಅಲ್ಲಿ
ನಾನು ,ನನ್ನ ಗೆಳತಿ ಹೇಮಮಾಲಿನಿ (ಪ್ರಸ್ತುತ ಇದೇ ಸಮಸ್ಥೆಯಲ್ಲಿ ಶಿಕ್ಷಕಿ ಆಗಿದ್ದಾರೆ) ಮತ್ತೆ
ಇತರರು ಮಾಡಿದ ನೃತ್ಯ ಪಿಳ್ಳಂಗೋವಿಯ ಕೃಷ್ಣ (ನಾನು ಕೃಷ್ಣ ಆಗಿದ್ದೆ ) ಮತ್ತು ಯಮ ಗರ್ವ ಭಂಗ
ನಾಟಕ (ಇದರಲ್ಲಿ ನಾನು ಬಲರಾಮ ,ಗೆಳತಿ ಹೇಮಮಾಲಿನಿ ಕೃಷ್ಣ ) ಇನ್ನು ನನ್ನ ಮನಸ್ಸಿನಲ್ಲಿ
ಅಚ್ಚಳಿಯದೆ ಕುಳಿತಿದೆ.ಇದು ನನ್ನ ಮುಂದಿನ ಸಾಧನೆಗಳಿಗೆ ಪ್ರೇರಕವಾಯಿತು ಎಂಬುದರಲ್ಲಿ ಯಾವುದೇ
ಸಂಶಯ ಇಲ್ಲ..
ಆಗ ಶಾಲೆಯಲ್ಲಿ ನಾಟಕ ಅಭಿನಯ ಕಲಿತ
ನಾನು ನಾಟಕವೆಂದರೆ ಏನು ಎಂದು ತಿಳಿದೆ.ಅಜ್ಜನ ಮನೆಯಲ್ಲಿ ಓದುತ್ತಿದ್ದ ನಾವು ಶಾಲೆಯಲ್ಲಿ ನಾಟಕ ಅಭಿನಯಿಸಿದ್ದನ್ನು
ಮನೆಯಲ್ಲಿ ಪ್ರಯೋಗಿಸಲು ಸುರು ಮಾಡಿದೆವು .
ಆಗ ನಾನು ರಚಿಸಿದ ಕಿರುನಾಟಕ
ಸುಬ್ಬಿ ಇಂಗ್ಲೀಷು ಕಲ್ತದು ,ಇದನ್ನು ವ್ಯವಸ್ಥಿತವಾಗಿ ಅಭಿನಯಸಿ ಮರು ವರ್ಷವೇ ನಾನು ವಾಣಿವಿಜಯ
ಶಾಲೆಯಲ್ಲಿ ಬಹುಮಾನ ಪಡೆದೆ.ಮೀಯಪದವು ಶಾಲೆಯಲ್ಲಿ ಸಿಕ್ಕ ತರ ಬೇತಿ ಯಿಂದಾಗಿ ನಾನು
ಸ್ವತಂತ್ರವಾಗಿ ನಾಟಕ ರಚನೆ, ಅಭಿನಯ
ಪ್ರಾರಂಭಿಸಿದೆ.
ಅನಂತರ ಶಾಲಾ ಕಾಲೇಜು
ದಿನಗಳಲ್ಲಿ ಸುಮಾರು 10-12 ಕಿರು ನಾಟಕಗಳನ್ನು ರಚಿಸಿ ಅಭಿನಯಿಸಿ ಮೆಚ್ಚುಗೆಯನ್ನು ಪಡೆದೆ .
ಅದರಲ್ಲಿ ಹೆಚ್ಚು ಬಾರಿ
ಪ್ರದರ್ಶನ ಗೊಂಡ ನಾಟಕ “ಸುಬ್ಬಿ ಇಂಗ್ಲೀಷು ಕಲ್ತದು”ಎನ್ನುವ ನನ್ನ ಹವಿಗನ್ನಡ ನಾಟಕ.ಅನೇಕ
ಬಹುಮಾನಗಳು ಇದಕ್ಕೆ ಬಂದಿದೆ .ಸರಳವಾದ ಹಾಸ್ಯದೊಂದಿಗೆ ಇಂಗ್ಲಿಹ್ ಭಾಷೆಯ ವ್ಯಾಮೋಹ ಬೇಡ ಕನ್ನಡ
ಕಸ್ತೂರಿ ಎನ್ನುವುದನ್ನು ಸಾರುವುದರೊಂದಿಗೆ ಬಾಲ್ಯ ವಿವಾಹದ ದುಷ್ಪರಿಣಾಮವನ್ನು ಸೂಕ್ಷ್ಮವಾಗಿ ತಿಳಿಸುವುದು ಈ ನಾಟಕದ ಮೂಲ ಉದ್ದೇಶ.
ಇದನ್ನು ನಾನು ಹವಿಗ್ನಡದಲ್ಲಿ
ರಚಿಸಿದ್ದಕ್ಕೆ ವಿಶೇಷವಾದ ಕಾರಣ ಏನೂ ಇಲ್ಲ ನಾವು 7-8 ಮೊಮ್ಮಕ್ಕಳು ಅಜ್ಜನ ಮನೆ ಹೊಸಮನೆಯಿಂದ
ಶಾಲೆಗೆ ಹೋಗುತ್ತಿದ್ದೆವು,ನಾವು ಮನೆಯಲ್ಲಿ ಆಟಕ್ಕಾಗಿ ರಚಿಸಿದ ಪ್ರಹಸನ ಆದ ಕಾರಣ ಸಹಜವಾಗಿಯೇ
ಇದು ನಮ್ಮ ಮಾತೃ ಭಾಷೆ ಹವ್ಯಕ ಕನ್ನಡಲ್ಲಿಯೇ ರಚಿತವಾಯಿತು.
ಇದು ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ ಎಂಬ
ಚಾರಿತ್ರಿಕ ಮಹತ್ವವನ್ನು ಪಡೆಯುತ್ತದೆ ,ನನಗೆ
ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಹೆಗ್ಗಳಿಕೆ ದೊರೆಯಬಹುದು ಎಂಬ ಊಹೆ ಮಾಡಲು ಕೂಡ
ಅಸಾಧ್ಯವಾಗಿದ್ದ ಕಾಲ ಅದು!
ನನಗೆ ತುಂಬಾ ಸಮಯ ಇದು ಮಹಿಳೆ
ರಚಿಸಿದ ಹವಿಗ್ನಡದ ಮೊದಲ ನಾಟಕ ಅಂತ ಗೊತ್ತಿರಲಿಲ್ಲ.
1997 ರಲ್ಲಿ ನಾವು ಶ್ರೀಮತಿ
ಪುಷ್ಪ ಖಂಡಿಗೆ ,ಶ್ರೀಮತಿ ವಸಂತ ಲಕ್ಷ್ಮಿ ,ಶ್ರೀಮತಿ ರಾಜಿ ಬಾಲಕೃಷ್ಣ ,ಶ್ರೀಮತಿ ರಾಜೇಶ್ವರಿ
ಮೊದಲಾದ ಅನೇಕ ಹವ್ಯಕ ಮಹಿಳೆಯರು ಸೇರಿ ಇದನ್ನು ಮಂಗಳೂರು ಹವ್ಯಕ ಮಹಾ ಸಭೆಯ ವಾರ್ಷಿಕೋತ್ಸವದಂದು
ಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸಿದ್ದೆವು ..
ಇದರೊಂದಿಗೆ ನನಗೆ ಒಂದು ಸಿಹಿ
ನೆನಪುನೆನಪಾಗುತ್ತಿದೆ.ಅಂದು ಸುಬ್ಬಿ ಇಂಗ್ಲೀಷು ಕಲ್ತದು ನಾಟಕಕ್ಕೆ ನಾನು (ಸುಬ್ಬ )ಮತ್ತು ಶ್ರೀಮತಿ
ರಾಜೇಶ್ವರಿ (ಗೆಳೆಯ )ಸೂಟ್ ಬೂಟ್ ಧರಿಸಿ ಗಂಡು
ವೇಷ ಹಾಕಿ, ನಾಟಕಕ್ಕೆ ಇನ್ನು ಸ್ವಲ್ಪ ಹೊತ್ತು ಇದ್ದ ಕಾರಣ ಹೊರಗೆ ಅಡ್ದಾಡುತ್ತಿದ್ದೆವು. ಆಗ
ಹವ್ಯಕ ಸಭೆಯ ಯಾರೋ ಒಬ್ಬರು ನಮ್ಮ ನಾಟಕ ತಂಡದ ಶ್ರೀಮತಿ ರಾಜಿ ಬಾಲಕೃಷ್ಣರ ಹೈ ಸ್ಕೂಲ್
ಓದುತ್ತಿದ್ದ ಪುಟ್ಟ ಹುಡುಗ ಮಗ ಮಿಥುನ್ ಹತ್ತಿರ
ನಮ್ಮಿಬರನ್ನು ತೋರಿಸಿ” ಓ ಅವು ಇಬ್ರು ನಡವಗ ರಜ್ಜ ಹೆಮ್ಮಕ್ಕಳ ಹಾಂಗೆ ಕಾಣುತ್ತು ಅಲ್ಲದ? ಎಂದು
ಹೇಳಿದಾಗ ,ನಮ್ಮ ಪರಿಚಯವಿದ್ದ ಮಿಥುನ್ ಅವರು ಗಂಡಸರಲ್ಲ ಹೆಂಗಸರು ಎಂದು ಹೇಳಿದನಂತೆ ,ಇದನ್ನು
ಬಂದು ಮಿಥುನ್ ನಮಗೆ ತಿಳಿಸಿದಾಗ ನಮಗೂ ಹೆಮ್ಮೆ ಆಯಿತು !ಅಂದಿನ ಪುಟ್ಟ ಹುಡುಗ ಮಿಥುನ್ ಕಾಕುಂಜೆ,
IIM ನಲ್ಲಿ MBA ಓದಿ ಖ್ಯಾತ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಪಡೆದು ಈಗ ಸ್ವಂತ ಬ್ಯುಸಿನೆಸ್
ಮಾಡುತ್ತಿರುವ ಸದ್ಗೃಹಸ್ಥ ಆಗಿದ್ದಾನೆ .
ಹವ್ಯಕ ಸಭೆಯ
ವಾರ್ಷಿಕೋತ್ಸವದಂದು ನಾವು ಸುಬ್ಬಿ ಇಂಗ್ಲೀಷು ಕಲ್ತದು ಹೇಳುವ ನಾಟಕ ಅಭಿನಯಿಸಿದ ಸುದ್ಧಿ ಹವ್ಯಕ
ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಈಗ್ಗೆ ಕೆಲವು 5-6 ವರ್ಷಗಳ ಹಿಂದೆ ಅಖಿಲ ಭಾರತ ಹವ್ಯಕ ಮಹಾ ಸಭೆಯು ಈ ತನಕ ಹವ್ಯಕ ಭಾಷೆಯಲ್ಲಿ ರಚನೆಯಾದ
ಎಲ್ಲ ನಾಟಕಗಳನ್ನು ಒಟ್ಟಿಗೆ ಸೇರಿಸಿ ಒಂದು ನಾಟಕ
ಸಂಕಲನ ತರಲು ನಿರ್ಧರಿಸಿ ಎಲ್ಲೆಡೆಯಿಂದ ಹವ್ಯಕ ನಾಟಕಗಳ ಬಗ್ಗೆ ಮಾಹಿತಿ ಸಂಗ್ರಹಿಸ ತೊಡಗಿದರು
ಆಗ ಹವ್ಯಕ ಅಧ್ಯಯನ ಕೇಂದ್ರದ ಪ್ರಧಾನ ನಿರ್ದೇಶಕರಾಗಿದ್ದ
ಶ್ರೀ ನಾರಾಯಣ ಶಾನು ಭಾಗರ ಗಮನಕ್ಕೆ ಹಳೆಯ ಹವ್ಯಕ ಪತ್ರಿಕೆಯಲ್ಲಿ ಪ್ರಕಟವಾದ “ಲಕ್ಷ್ಮೀ ಜಿ
ಪ್ರಸಾದ ರಚಿಸಿದ ಸುಬ್ಬಿ ಇಂಗ್ಲೀಷು ಕಲ್ತದು ಎಂಬ ನಾಟಕವನ್ನು ಹವ್ಯಕ ಮಹಿಳೆಯರು
ವಾರ್ಷಿಕೋತ್ಸವದಂದು ಅಭಿನಯಿಸಿದರು “ಎಂಬ ನಮ್ಮ ನಾಟಕ ಪ್ರದಶನ ಸುದ್ದಿ ಗಮನಕ್ಕೆ ಬಂತು.
ಆಗ ಅದಕ್ಕೆ ಮೊದಲು ಮಹಿಳೆಯರು ಯಾರೂ ಬರೆದಿಲ್ಲ ,ಈ ನಾಟಕ ಮಹಿಳೆ ಬರೆದ
ಮೊದಲ ನಾಟಕ ಎಂದು ಎಂಬುದನ್ನು ತಿಳಿದು ಅವರು ಆ ನಾಟಕವನ್ನು ಪ್ರಕಟಿಸುವ ಸಲುವಾಗಿ ನನ್ನ ಬಗ್ಗೆ
ಮಂಗಳೂರು ಹವ್ಯಕ ಸಭೆಯ ಪದಾಧಿಕಾರಿಗಳನ್ನು ಸಂಪರ್ಕಿಸಿದರು.ಆದರೆ ಆ ಸಮಯಕ್ಕಾಗುವಾಗ ನಾವು ಉದ್ಯೋಗ
ನಿಮಿತ್ತ ಮಂಗಳೂರು ಬಿಟ್ಟು ಬೆಂಗಳೂರು ಸೇರಿದ್ದವು.ಹಾಗೆ ಅವರು “ಈಗ ಲಕ್ಷ್ಮೀ ಜಿ ಪ್ರಸಾದ
ಮಂಗಳೂರಿನಲ್ಲಿ ಇಲ್ಲ ಬೆಂಗಳೂರಿನಲ್ಲಿ ಎಲ್ಲೋ ಇದ್ದಾರೆ” ಎಂಬ ಮಾಹಿತಿ ನೀಡಿದರು.
ಆಗ ನಾರಾಯಣ ಶಾನುಭಾಗರು
ನಾನೆಲ್ಲಿದ್ದೇನೆ ಎಂದು ತಿಳಿದು ಸುಬ್ಬಿ ಇಂಗ್ಲೀಷು ಕಲ್ತದು ನಾಟಕದ ಪ್ರತಿ ಸಂಗ್ರಹಿಸುವ
ಜವಾಬ್ದಾರಿಯನ್ನು ಶ್ರೀಯುತ ಕೆ.ಪಿ ರಾಜಗೋಪಾಲ
ಕನ್ಯಾನ ಇವರಿಗೆ ವಹಿಸಿದರು. ಬೆಂಗಳುರಿನಂಥ ದೊಡ್ಡ ಸಾಗರಲ್ಲಿ ಸಣ್ಣ ಚುಕ್ಕೆಯಷ್ಟೂ ಅಲ್ಲದ
ನನ್ನನ್ನು ಹುಡುಕುವುದು ಅವರ ಪಾಲಿಗೆ ನಿಜವಾಗಿಯೂ ಸಾಹಸದ ವಿಚಾರವೇ ಸರಿ !ಅನೇಕ ಸಂಘ ಸಂಸ್ಥೆ
ಹಾಗೂ ಯಕ್ಷಗಾನ ಸೇರಿದಂತೆ ಅನೇಕ ಕಾರ್ಯಕರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ತಮ್ಮ
ಪರಿಚಯದ ಸಂಘ ಸಂಸ್ಥೆಯ ಸ್ನೇಹಿತರಲ್ಲಿ ಲಕ್ಷ್ಮೀ
ಜಿ ಪ್ರಸಾದ ಎಂಬವರು ತಿಳಿದಿದೆಯೇ ಎಂದು ವಿಚಾರಿಸಿದರು .ಹಾಗೆಯೇ ನಾನು ಪಿಎಚ್. ಡಿ ಅಧ್ಯಯನ
ಮಾಡುತ್ತಿದ್ದ ನಮ್ಮ ಸ್ನಾತಕೋತ್ತರ ಸಂಶೋಧನಾ ಅಧ್ಯಯನ ಕೇಂದ್ರ” ಬಿ ಎಂ ಶ್ರೀ ಸ್ಮಾರಕ
ಪ್ರತಿಷ್ಠಾನದ ಮುಖ್ಯಸ್ಥರಾದ ಡಾ.ಗೀತಾಚಾರ್ಯ ಅವರಲ್ಲಿ ನನ್ನ ಬಗ್ಗೆ ವಿಚಾರಿಸಿದರು .ಆಗ ಅವರು
ಲಕ್ಷ್ಮೀ ಜಿ ಪ್ರಸಾದ ಅಂತ ಯಾರು ಗೊತ್ತಿಲ್ಲ ,ಆದರೆ ನಮ್ಮಲ್ಲಿ ಲಕ್ಷ್ಮಿ. ವಿ ಎನ್ನುವ ಮಹಿಳೆ
ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿಸಿ ನನ್ನ ಫೋನ್ ನಂಬರ್ ನೀಡಿದರು
ಅದೊಂದು ಸುದಿನ ಶ್ರೀಯುತ
ರಾಜಗೋಪಾಲ ಕನ್ಯಾನ ಅವರು ಫೋನ್ ಮಾಡಿ “ಲಕ್ಷ್ಮೀ ಜಿ ಪ್ರಸಾದ ಅಂದ್ರೆ ನೀವೇನಾ ?”ಎಂದು
ಕೇಳಿದರು.ಹೌದು ಎಂದು ತಿಳಿಸಿದೆ . ಆಗ ಸುಬ್ಬಿ ಇಂಗ್ಲೀಷು ಕಲ್ತದು ನಾಟಕ ನೀವೇ ಬರೆದದ್ದ ?ಎಂದು
ವಿಚಾರಿಸಿ ನಮ್ಮ ಮನೆ ವಿಳಾಸ ಕೇಳಿ ನಮ್ಮ ಮನೆಗೆ ಬಂದರು .
ನಾಟಕ ರಚನೆಯ ಕಾಲ ಮತ್ತಿತರ
ಮಾಹಿತಿ ಪಡೆದು “ಈಗ ತಿಳಿದು ಬಂದ ಮಟ್ಟಿಗೆ ಇದೇ ನಾಟಕ ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕ
ಇದನ್ನು ಹವ್ಯಕ ನಾಟಕ ಸಂಕಲನದಲ್ಲಿ ಪ್ರಕಟಿಸುತ್ತೇವೆ ,ಅದರ ಹಸ್ತ ಪ್ರತಿ ಇದೆಯಾ? ಎಂದು ಕೇಳಿದರು
ಮುಂದೆ ಆ ನಾಟಕದ ಹಸ್ತ ಪ್ರತಿ ಹುಡುಕಿ ಅದನ್ನು ನಕಲು ಮಾಡಿ ಅವರಿಗೆ ತಲುಪಿಸಿದೆ .ಮುಂದೆ
ಕಾರಣಾಂತರಗಳಿಂದ ಹವ್ಯಕ ನಾಟಕ ಸಂಕಲನದಲ್ಲಿ ಪ್ರಕಟವಾಗಲಿಲ್ಲ .
ಆದರೆ ಕೆ ಪಿ ರಾಜ ಗೋಪಾಲ
ಕನ್ಯಾನ ಅವರ ಪರಿಚಯ ವ್ಯರ್ಥ ಆಗಲಿಲ್ಲ ,ಸಾಕಷ್ಟು
ಪುಸ್ತಕ ರಚನೆ ಮತ್ತು ಪ್ರಕಟಣೆಯಲ್ಲಿ ಅನುಭವ ಇದ್ದ ಸಹೃದಯಿಗಳಾದ ಅವರು ನನ್ನ ಎಂಫಿಲ್ ಥೀಸಿಸ್ ಅನ್ನು ನೋಡಿ ಅದನ್ನು ಅವರ ಪರಿಚಿತರಾದ ಹರೀಶ
ಎಂಟರ್ಪ್ರೈಸಸ್ ಪ್ರಕಾಶಕರ ಮೂಲಕ ಪ್ರಕಟನೆ
ಮಾಡಿಸಿ ಕೊಟ್ಟರು .ಹೀಗೆ ಆಕಸ್ಮಿಕವಾಗಿ ನನ್ನ ಮೊದಲ ಸಂಶೋಧನಾ ಕೃತಿ ಇವರ ಪ್ರೇರಣೆ ಮತ್ತು ಪ್ರಯತ್ನದಿಂದಾಗಿ “ದೈವಿಕ ಕಂಬಳ
ಕೋಣ “ನನ್ನ ಮೊದಲ ಸಂಶೋಧನಾ ಕೃತಿ ಪ್ರಕಟಗೊಂಡು
ಬೆಳಕಿಗೆ ಬಂತು .ಇದು ನನ್ನ ಮುಂದಿನ ಸಂಶೋಧನಾ ಪ್ರಕಟಣೆಗಳಿಗೆ ಅಡಿಪಾಯ ಹಾಕಿ ಕೊಟ್ಟಿತು.
ನಾನು ಸುಬ್ಬಿ ಇಂಗ್ಲೀಷು
ಕಲ್ತದು ಎಂಬ ನಾಟಕ ಅಲ್ಲದೆ ಬೇರೆ 10-12 ನಾಟಕಗಳನ್ನು ರಚಿಸಿದ್ದೇನೆ . ನೀರಕ್ಕನ ಮನೆ ಕಣಿವೆ ,ಹಸಿರು
ಕರಗಿದಾಗ ..,ಈಜೋ ಮಂಜೊಟ್ಟಿ ಗೋಣ ,ಎಂಬ ಮೂರು ಕಿರು ನಾಟಕಗಳು ಇದರೊಂದಿಗೆ ಇಲ್ಲಿವೆ .
ಮದಲಿಂಗನ ಕಣಿವೆ ಎಂಬುದು
ತುಮಕೂರು ಬಳಿಯ ಚಿಕ್ಕನಾಯಕನ ಹಳ್ಳಿಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ಕಣಿವೆ .ಇಲ್ಲಿನ
ಐತಿಹ್ಯವನ್ನು ಆಧರಿಸಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಮದಲಿನಗನ ಕಣಿವೆ ಎಂಬ ಕಥನ
ಕಾವ್ಯವನ್ನು ರಚಿಸಿದ್ದಾರೆ .ಇದರ ಪ್ರೇರಣೆಯಿಂದ
“ನೀರಕ್ಕನ ಮನೆ ಕಣಿವೆ” ನಾಟಕವನ್ನು ರಚಿಸಿದ್ದೇನೆ .ಮದಲಿಂಗನ ಕಣಿವೆಯ ಕಥೆ ಮದಲಿಂಗ
ಸಾಯುವಲ್ಲಿಗೆ ಮುಕ್ತಾಯವಾಗುತ್ತದೆ .ಇಲ್ಲಿ ಅದು ಮುಂದುವರೆದು ನೀರಿನ ಸಂರಕ್ಷಣೆಗೆ
ಪ್ರೆರಕವಾಗುವಂತೆ ಮಾಡುತ್ತದೆ.ನನ್ನ ವಿದ್ಯಾರ್ಥಿಗಳಿಗಾಗಿ ರಚಿಸಿದ ನಾಟಕ ಇದು ,ಇದು
ಯಶಸ್ವಿಯಾಗಿ ಪ್ರದರ್ಶನಗೊಂಡಿದೆ
ಹಸಿರು ಕರಗಿದಾಗ ..ಪರಿಸರ
ಸಂರಕ್ಷಣೆ ಯ ಮಹತ್ವದ ಸಂದೇಶ ಕೊಡುವ ನಾಟಕ.ಈ ನಾಟಕವನ್ನು ನನ್ನ ವಿದ್ಯಾರ್ಥಿಗಳು ಅಭಿನಯಿಸಿ
ಬಹುಮಾನಗಳನ್ನು ಪಡೆದಿದ್ದಾರೆ
ಈಜೋ ಮಂಜೊಟ್ಟಿ
ಗೋಣ..ತುಳುನಾಡಿನಲ್ಲಿ ಪ್ರಚಲಿತವಿರುವ ಇದೇ ಹೆಸರಿನ ಪ್ರಸಿದ್ಧ ಪಾಡ್ದನದ ಕಥೆಯನ್ನು ಆಧರಿಸಿ
ರಚಿಸಿದ ನಾಟಕ.ನಾನು ಸಂಗ್ರಹಿಸಿದ ಈ ಪಾಡ್ದನದದಲ್ಲಿ ಧೂಮಾವತಿ ದೈವಕ್ಕೆ ಹೇಳಿಕೊಂಡ ಹರಕೆಯನ್ನು
ಮರೆತು ಅದೇ ಮುಂಡ್ಯೆಯ ಹಲಸಿನ ಹಣ್ಣನ್ನು ಕೊಯ್ದು ತಿಂದು ಕೋಣಗಳಿಗೆ ಹಾಕಿರುವ ಕಥಾನಕ
ಇದೆ.ಹರಿಕೆಯನ್ನು ಮರೆತವರಿಗೆ ತಕ್ಕ ಶಿಕ್ಷೆ ಯನ್ನು ಭೂತಗಳು ವಿಧಿಸುವುದು ತುಳು ಸಂಸ್ಕೃತಿಯಲ್ಲಿ
ಸಾಮಾನ್ಯ ವಿಚಾರ .ಅಂತೆಯೇ ಈ ದೈವದ ಆಗ್ರಹಕ್ಕೆ
ತುತ್ತಾಗಿ ಕೋಣ ಮತ್ತು ಮೂಲದ ಬಬ್ಬು ಮಾಯವಾಗಿದ್ದಾನೆ ಎಂಬ ಸೂಚನೆ ಈ ಪಾದ್ದನದಲ್ಲಿದೆ ,ವಾಸ್ತವಿಕ
ನೆಲೆಯಲ್ಲಿ ಹೇಳುವುದಾದರೆ ಇದು ವರ್ಗ ಸಂಘರ್ಷದ ಕಥಾನಕ ,ಅಲೌಕಿಕತೆ ಮತ್ತು ವಾಸ್ತವಿಕತೆ ಎರಡನ್ನು
ಸಮನ್ವಯ ಮಾಡಿ ,ಒಂದಷ್ಟು ಕಲ್ಪನೆ ಸೇರಿಸಿ ಈ ನಾಟಕವನ್ನು ರಚಿಸಲಾಗಿದೆ .
ಬೀಜವೊಂದು ಮೊಳೆತು ಗಿಡವಾಗಿ
ಮರವಾಗಿ ಹಣ್ಣುಗಳನ್ನು ಕೊಡಬೇಕಾದರೆ ಅದಕ್ಕೆ ತುಂಬಾ ಪೋಷಣೆ ಬೇಕಾಗುತ್ತದೆ.ಹಾಗೆಯೇ ಪ್ರತಿಭಾ
ವಿಕಸನಕ್ಕೂ ಅಂಥದೇ ಪ್ರೋತ್ಸಾಹ ಅಗತ್ಯವಾಗಿ ಬೇಕಾಗುತ್ತದೆ.ನನಗೆ ಅಂಥಹ ಪ್ರೋತ್ಸಾಹವನ್ನು ನೀಡಿ
ನನ್ನನ್ನು ಬೆಳೆಸಿದವರು ಅನೇಕರು ಇದ್ದಾರೆ .ಎಲ್ಲರನ್ನು ಈ ತಂಪು ಹೊತ್ತಿನಲ್ಲಿ ನೆನೆಯುವುದು
ನನ್ನ ಆದ್ಯ ಕರ್ತವ್ಯ.
ಮೊದಲಿಗೆ ಮೀಯಪದವಿನ ಶ್ರೀ
ವಿದ್ಯಾವರ್ಧಕ ಶಾಲೆಯ ಶಿಕ್ಷಕರಾದ ಮೀಯಪದವಿನ ಶ್ರೀ ವಿದ್ಯಾ ವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಒಲವಿನ ಗುರುಗಳಾದ ಶ್ರೀಮತಿ ಸರೋಜಾ ,ಶ್ರೀಮತಿ
ಪುಷ್ಪವಲ್ಲಿ , ಶ್ರೀ ವಸಂತ ಭಟ್ ತೊಟ್ಟೆತ್ತೊಡಿ,ಶ್ರೀ ಶ್ರೀಧರ ರಾವ್ ,ಶ್ರೀ ಮಾಧವ, ಶ್ರೀ ಶ್ರೀನಿವಾಸ ಭಟ್ ,ಶ್ರೀ ಶಿವರಾಮ ನಾವಡ ,ಶ್ರೀಮತಿ
ವೇದವಲ್ಲಿ ,ಶ್ರೀ ಶಿವರಾಮ ಪದಕ್ಕಣ್ಣಾಯ ,ಶ್ರೀ ಗೋಪಾಲ ಕೃಷ್ಣ ಭಟ್ ಮಿತ್ತಾಳ,ಶ್ರೀ ವಿಶ್ವನಾಥ
ಭಂಡಾರಿ ಹಾಗೂ ನನ್ನ ಎಲ್ಲ ಗುರುಗಳಿಗೆ ನಾನು ಸದಾ ಋಣಿಯಾಗಿದ್ದೇನೆ. ಪ್ರಸ್ತುತ
ಇಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಾಲ್ಯದ ಗೆಳತಿ ಶ್ರೀಮತಿ ಹೇಮಮಾಲಿನಿ
,ಆತ್ಮೀಯರಾದ ಶ್ರೀ ಮಹಾಬಲೇಶ್ವರ ಭಟ್ (ಸಂತೋಷ್ ಭಾವ ), ,ಶ್ರೀಮತಿ ನಳಿನಿ, ಶ್ರೀಮತಿ ಅನುರಾಧ (ನನ್ನ ಗೆಳತಿ ಶೈಲಜಾರ ಅಕ್ಕ
),ರಂಜಿತ್ ಮೊದಲಾದ ಎಲ್ಲರಿಗೂ ವಂದನೆಗಳು.
ನನ್ನೆಲ್ಲ ಸಾಹಿತ್ಯ ಸಂಶೋಧನಾ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಿರುವ ಡಾ.ಅಮೃತ
ಸೋಮೇಶ್ವರ,ಡಾ.ವಾಮನ ನಂದಾವರ ,ಡಾ.ಪುರುಷೋತ್ತಮ ಬಿಳಿಮಲೆ, ಪ್ರೊ||ಮುರಳಿಧರ ಉಪಾಧ್ಯ ,ಡಾ.ಸುರೇಶ ಪಾಟೀಲ್ ಅವರಿಗೆ ಮನಪೂರ್ವಕ ಕೃತಜ್ಞತೆಗಳು.
ಈ ನಾಟಕ ಸಂಕಲನಕ್ಕೆ ಸೂಕ್ತವಾದ ಮುನ್ನುಡಿ ಬರೆದು ಕೊಟ್ಟ ಆಕಾಶವಾಣಿ ಮಂಗಳೂರು ಕೇಂದ್ರದ
ನಿರ್ದೇಶಕರಾದ ಡಾ.ವಸಂತ ಕುಮಾರ ಪೆರ್ಲ ಹಾಗು
ಬೆನ್ನುಡಿಯನ್ನು ನೀಡಿ ಪ್ರೋತ್ಸಾಹಿಸಿದ ಪ್ರೊ||
ಮುರಳೀಧರ ಉಪಾಧ್ಯ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.
ನನ್ನ ಸಾಹಿತ್ಯ ಸಂಶೋಧನೆಗಳ ಪ್ರಕಟಣೆಗೆ ಬಲವಾದ ಅಡಿಪಾಯ ಹಾಕಿ ಕೊಟ್ಟಿರುವ,”ಸುಬ್ಬಿ
ಇಂಗ್ಲೀಷು ಕಲ್ತದು” ಹೇಳುವ ನನ್ನ ನಾಟಕ ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ ಎಂಬುದನ್ನು ತಿಳಿಸಿ
ಕೊಟ್ಟ,ಹವ್ಯಕ ಅಧ್ಯಯನ ಕೇಂದ್ರದ ನಿರ್ದೆಶಕರಾಗಿದ್ದ ಶ್ರೀ ನಾರಾಯಣ ಶಾನುಭಾಗ ಮತ್ತು ನನ್ನ
ಸಾಹಿತ್ಯ ಸಂಶೋಧನೆಗಳ ಪ್ರಕಟಣೆಗೆ ಬಲವಾದ ಅಡಿಪಾಯ ಹಾಕಿ ಕೊಟ್ಟಿರುವ ಕೃತಿಯ ಬಗ್ಗೆ
ತುಂಬು ಪ್ರೋತ್ಸಾಹದ ಮಾತುಗಳನ್ನಾಡಿದ ಸಹೋದರ ಸಮಾನರಾದ ಶ್ರೀ ಕೆ ಪಿ
ರಾಜಗೋಪಾಲ ಕನ್ಯಾನ ಇವರಿಗೆ ಮನಃ ಪೂರ್ವಕ ಕೃತಜ್ಞತೆಗಳು.
1997 ರಲ್ಲಿ ಮಂಗಳೂರು ಹವ್ಯಕ ಸಭೆಯಲ್ಲಿ ನಾವು ಪ್ರದರ್ಶಿಸಿದ ಸುಬ್ಬಿ ಇಂಗ್ಲೀಷು ಕಲ್ತದು ನಾಟಕದಲ್ಲಿ
ಅಭಿನಯಿಸಿದ,ಅಂದಿನ ಫೋಟೋಗಳನ್ನು ಜತನದಿಂದ ಕಾಯ್ದಿಟ್ಟು ,ಈ ಕೃತಿಯಲ್ಲಿ ಬಳಸಲು ಅನುವು
ಮಾಡಿಕೊಟ್ಟ ಶ್ರೀಮತಿ ಪುಷ್ಪಾ ಖಂಡಿಗೆ,ಶ್ರೀಮತಿ ರಾಜಿ ಬಾಲಕೃಷ್ಣ ಕಾಕುಂಜೆ,ಶ್ರೀಮತಿ ರಾಜೇಶ್ವರಿ
ಇವರಿಗೆ ಮನಃ ಪೂರ್ವಕ ಕೃತಜ್ಞತೆಗಳು.ನಾವೆಲ್ಲಾ ಒಟ್ಟಾಗಿ ಫೋಟೋ ತೆಗೆಸಿಕೊಳ್ಳುವ ,ನನಗೆ
ಬೇಕಾಗಿದ್ದ 17 ವರ್ಷ ಹಿಂದೆ ನಾವು ಅಭಿನಯಿಸಿದ ಈ ನಾಟಕದ ಹಳೆಯ ಫೋಟೋ ಸಂಗ್ರಹಕ್ಕೆತುಂಬು ಮನದಿಂದ ಸಹಕರಿಸಿದ ಶ್ರೀಮತಿ ವಸಂತ ಲಕ್ಷ್ಮಿ ಇವರಿಗೆ
ಧನ್ಯವಾದಗಳು
ನನ್ನ ನಾಟಕಗಳ ಹಾಡಿಗೆ ಸ್ವರ ಸಂಯೋಜನೆ ಮಾಡಿ ಬೆಂಬಲಿಸಿದ ಶ್ರೀಮತಿ ಶಾಂತಾ ಆಚಾರ್ ಅವರನ್ನು
ಮನದುಂಬಿ ನೆನೆಯುತ್ತೇನೆ.
.ನನ್ನ ಸಂಶೋಧನಾ ಹಾಗು ಸಾಹಿತ್ಯಿಕ ಬರವಣಿಗೆ ಮತ್ತು ಪ್ರಕಟಣೆಗೆ ನಿರಂತರ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿರುವ ಪದ್ಯಾಣ ರಾಮಚಂದ್ರ ಭಟ್
ಇವರಿಗೆ ನಾನು ಸದಾ ಋಣಿಯಾಗಿದ್ದೇನೆ.
ನನ್ನೆಲ್ಲ ಭಾವನೆಗಳನ್ನು ಹಂಚಿಕೊಂಡು ನಿರಂತರ ಬೆಂಬಲ ನೀಡುತ್ತಿರುವ ಗೆಳತಿಯರಾದ ಶ್ರೀಮತಿ
ಭಾರತಿ ಮತ್ತು ಶ್ರೀಮತಿ ಅನುಪಮ ಪ್ರಸಾದ ಇವರಿಗೆ
ಆತ್ಮೀಯ ನಮನಗಳು .
ನನ್ನ ಸಾಹಿತ್ಯ ಸಂಶೋಧನಾ ಚಟುವಟಿಕೆಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ ಫೇಸ್ ಬುಕ್ ಗೆಳೆಯ
ಗೆಳತಿಯರಿಗೆ ಅನಂತಾನಂತ ಕೃತಜ್ಞತೆಗಳು.
ನಾನು ಚಿಕ್ಕಂದಿನಲ್ಲಿ ದೊಡ್ಡಮ್ಮನ ಮಕ್ಕಳೊಂದಿಗೆ ನನ್ನ ಅಜ್ಜನ ಮನೆಯಲ್ಲಿ ಓದಿದ್ದು ,ಆ ಸಮಯದಲ್ಲಿ ನನ್ನ
ಸೃಜನ ಶೀಲ ಚಟುವಟಿಕೆಗಳಿಗೆ ಅಜ್ಜ ದಿ|| ಶ್ರೀ ಈಶ್ವರ ಭಟ್ಟ ಹೊಸಮನೆ ಮತ್ತು ಅಜ್ಜಿ ಶ್ರೀಮತಿ
ಲಕ್ಷ್ಮಿ ಅಮ್ಮ ಅವರ ಪೂರ್ಣ ಬೆಂಬಲ ನನಗಿತ್ತು ,ಜೊತೆಗೆ ದೊಡ್ಡಮ್ಮ ಶ್ರೀಮತಿ ಗೌರಮ್ಮ ಮತ್ತು ಅವರ
ಮಕ್ಕಳಾದ, ನನ್ನ ಸಹೋದರ ಸಹೋದರಿಯರ ಪ್ರೋತ್ಸಾಹ ನನಗೆ ಸಿಕ್ಕಿತ್ತು .ಸುಬ್ಬಿ ಇಂಗ್ಲೀಷು ಕಲ್ತದು
ನಾಟಕದ ಮೊದಲ ಪ್ರಯೋಗ ನಮ್ಮ ಅಜ್ಜನ ಮನೆಯಲ್ಲಿಯೇ ಆಗಿತ್ತು ,ಇಂಥ ಎಲ್ಲ ಚಟುವಟಿಕೆಗಳಿಗೆ ನನಗೆ
ನನ್ನ ದೊಡ್ಡಮ್ಮನ ಮಗಳು ತಂಗಿ ರಾಜೇಶ್ವರಿ ಸದಾ ಒಡ ನಾಡಿ ಆಗಿದ್ದನ್ನು ನಾನೆಂದೂ ಮರೆಯಲಾರೆ.ಜೊತೆ ಜೊತೆಯಾಗಿ ಅಡಿ ಬೆಳೆದ ದೊಡ್ಡಮ್ಮನ ಮಗ
ಅಣ್ಣ ಕೆ ವಿ ರಾಧಾ ಕೃಷ್ಣ ಭಟ್ ,,ಅಕ್ಕ
ಪಾರ್ವತಿ,ಅಕ್ಕ ಜಯಲಕ್ಷ್ಮಿ ,ತಂಗಿಯರಾದ ರಾಜೇಶ್ವರಿ ಮತ್ತು ಸರಸ್ವತಿ ಅವರ ಜೊತೆಗಿನ ಬಾಲ್ಯದ
ಒಡನಾಟ ನನ್ನ ಮನದಲ್ಲಿ ಹಸಿರಾಗಿದೆ . ಇವರೆಲ್ಲರನ್ನು ಈ ತಂಪು ಹೊತ್ತಿನಲ್ಲಿ ನಾನು ಮನಪೂರ್ವಕವಾಗಿ
ನೆನೆಯುತ್ತೇನೆ .
ಸದಾ ಬೆಂಬಲ ನೀಡುತ್ತಿರುವ,ನನ್ನ ಸಂಶೋಧನಾ ಕಾರ್ಯಗಳಿಗೆ ಬೇಕಾದ ಪರಿಕರಗಳಾದ ಕ್ಯಾಮೆರಾ ಹಾನ್ದಿಕ್ಯಾಮ್ ಮೊದಲಾದ ಬೆಲೆ ಬಾಳುವ ವಸ್ತುಗಳನ್ನು
ಸಕಾಲದಲ್ಲಿ ಒದಗಿಸಿಕೊಟ್ಟು ಎಲ್ಲ ಸಂದರ್ಭಗಳಲ್ಲೂ ಜೊತೆಯಾಗಿ ನಿಂತು ನನ್ನನ್ನು ಎಲ್ಲಿಯೂ ಸೋಲಲು
ಬಿಡದೆ ,ಸದಾ ನನ್ನ ಒಳಿತಿಗಾಗಿ , ತುಂಬು ಮನದಿಂದ ಪ್ರೋತ್ಸಾಹಿಸಿದ ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿ ,ತಮ್ಮಂದಿರಾದ ಈಶ್ವರ
ಭಟ್ ಮತ್ತು ಗಣೇಶ ಭಟ್ ವಾರಣಾಸಿ ,ಅಕ್ಕ ಶಾರದಾ ಜಿ ಭಟ್
ಇವರೆಲ್ಲರಿಗೆ ಆಭಾರಿಯಾಗಿದ್ದೇನೆ .
ನನ್ನೆಲ್ಲ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಿರುವ ನನ್ನ ತಾಯಿ ವಾರಣಾಸಿ ಶ್ರೀಮತಿ ಸರಸ್ವತಿ ಅಮ್ಮ ಮತ್ತು ತಂದೆ ದಿ|ನಾರಾಯಣ ಭಟ್
ವಾರಣಾಸಿ ಅವರ ಪಾದಗಳಿಗೆ ಮಣಿದಿದ್ದೇನೆ
ಎಳೆಯನಾದರೂ ಹಿರಿಯರಂತೆ ನನ್ನ ಸಾಹಿತ್ಯ ಸಂಶೋಧನೆಗಳಿಗೆ ಪೂರ್ಣ ಬೆಂಬಲ ನೀಡುತ್ತಿರುವ ಮಗ
ಅರವಿಂದನಿಗೆ ಅಭಿನಂದನೆಗಳು .ನನ್ನೆಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು, ಮುನ್ನುಗ್ಗಿ ಎಲ್ಲ ಸವಾಲುಗಳನ್ನು ಗೆಲ್ಲುವ ಧೈರ್ಯ ತುಂಬಿ ,ನನ್ನೊಂದಿಗೆ ಹೆಗಲು
ಕೊಟ್ಟು ಸದಾ ಬೆಂಬಲಿಸುತ್ತಿರುವ ಜೀವನ ಸಂಗಾತಿ ಗೋವಿಂದ ಪ್ರಸಾದರಿಗೆ ನಾನು ಆಜೀವ
ಋಣಿಯಾಗಿದ್ದೇನೆ .
ಇನ್ನೂ ಅನೇಕರು ನನ್ನ ಒಳಿತಿಗೆ ಕಾರಣ ಕರ್ತರಾಗಿದ್ದಾರೆ.ಎಲ್ಲರನ್ನು ಹೆಸರಿಸಲು
ಸಾಧ್ಯವಾಗಿಲ್ಲ.ಆದರೆ ಎಲ್ಲರನ್ನೂ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ .
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರಕಾರಿ ಪದವಿ ಪೂರ್ವ ಕಾಲೇಜು
ಬೆಳ್ಳಾರೆ ಸುಳ್ಯ (ತಾ )ದ
ಕ ಜಿಲ್ಲೆ
ಮೊಬೈಲ್ :9480516684
E mail:samagramahiti@gmail.com
ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕ
ಸುಬ್ಬಿ ಇಂಗ್ಲೀಷು
ಕಲ್ತದು ಮತ್ತು ಇತರ ನಾಟಕಗಳು
ಸುಬ್ಬಿ ಇಂಗ್ಲೀಷು ಕಲ್ತದು
ಪಾತ್ರಗಳ ಪರಿಚಯ
ಸುಬ್ಬಿ:ನಾಟಕದ ನಾಯಕಿ , ಬಾಲ್ಯ ವಿವಾಹವಾದ ಹೈ ಸ್ಕೂಲ್ ಮೆಟ್ಟಿಲು ಹತ್ತದ್ದ ಕೂಸು
ಸುಬ್ಬ : ನಾಯಕ
ಅಪ್ಪ ಮತ್ತು ಅಮ್ಮ :ಸುಬ್ಬಿಯ ತಂದೆ ತಾಯಿ
ಥೋಮಸ್ ಮತ್ತು ಟ್ಯಾಲಿನ್ :ಸುಬ್ಬನ ಗೆಳೆಯರು
ಸುಬ್ಬಿ
ಇಂಗ್ಲೀಷು ಕಲ್ತದು
ದೃಶ್ಯ -1
(ಸುಬ್ಬಿ ಅಡಿಗೆ ಮಾಡಿಗೊಂಡು
ಇಪ್ಪಗ ಫೋನ್ ರಿಂಗ್ ಆವುತ್ತು )
ಸುಬ್ಬಿ ; ಅಯ್ಯೋ ರಾಮ ದೇವರೇ
ಇದೊಂದು ಫೋನ್ ಮೂರೂ ಹೊತ್ತು ಬೊಬ್ಬೆ ಹೊಡಕ್ಕೊಂಡೆ
ಇರುತ್ತು ..ಒಂದು ಕೆಲಸ ಮಾಡುಲೆ ಬಿಡ್ತಿಲ್ಲೆ..ಗಳಿಗೆಗೊಂದರಿ ಫೋನ್ ಬತ್ತಾ ಇದ್ದರೆ ಆನು
ಅಡಿಗೆ ಮಾಡುದಾದರೂ ಹೇಂಗೆ? (ಫೋನ್ ಎತ್ತಿ )ಹಲ್ಲೋ ಆರು ?..ಆರು ..?ಸರಿ ಕೇಳ್ತಿಲ್ಲೇ ..ದೊಡ್ಡಕ್ಕೆ
ಮಾತಾಡಿ ..ಅರೆ ನಿಂಗ ಎಂತ ಹೇಳುದು ಹೇಳಿ ಗೊಂತವುತ್ತಾ ಇಲ್ಲೆನ್ನೇ ..(ಫೋನ್ ಮಡುಗುತ್ತು )
ಅಯ್ಯೋ ದೇವರೇ ..ಎನ್ನ ಕರ್ಮವೇ
.?ಆರೋ ಇವರ ಫ್ರೆಂಡ್ ಗಳ ಫೋನ್ ಆಗಿರೆಕ್ಕು !ಅವಕ್ಕೆ ಒಬ್ಬಂಗುದೆ ನಮ್ಮ ಭಾಷೆ ಬತ್ತಿಲ್ಲೆ
,ಎಲ್ಲರುದೆ ಇಂಗ್ಲಿಷಿಲಿದೆ ಹಿಂದಿಲಿದೆ ಮಾತಾಡುತ್ತವು .ಆರೋ ಏನ ಇನ್ನು ಆಗಂದಲೇ ಮತ್ತೆ ಮತ್ತೆ
ಫೋನ್ ಬತ್ತ ಇದ್ದು ..ಅಯ್ಯೋ ರಾಮ ..ತಾಳು ಒಲೆಲಿ ಮಡುಗಿಕ್ಕಿ ಬೈನ್ದೆ ಅಡಿ ಹಿದುತ್ತು ಕಾಣೆಕ್ಕು
..ನೋಡುತ್ತೆ ..
(ಫೋನ್ ಮತ್ತೆ ರಿಂಗ್ ಆವುತ್ತು
)
ಇನ್ನು ಪುನಃ ಆರಿಂದಪ್ಪಾ ಫೋನ್
? ಇವರ ಫ್ರೆಂಡ್ ಗೊಕ್ಕೆ ಮಾಡ್ಲೇನು ಬೇರೆ ಕೆಲಸ ಇಲ್ಲೆಯ ಹೇಳಿ ?ಮತ್ತೆ ಮತ್ತೆ ಫೋನ್ ಮಾಡಿ
ಇಂಗ್ಲಿಷಿಲಿ ಎಂತದೋ ಹೇಳ್ತವು .ಅಲ್ಲ ಇವಕ್ಕಾದರೂ ಹೇಳುಲಾಗದಾ ಇರುಳು ಮಾತ್ರ ಫೋನ್ ಮಾಡಿ ಎನ್ನ
ಹೆಂಡತಿಗೆ ಇಂಗ್ಲಿಷ್ ಬತ್ತಿಲ್ಲೆ ಹೇಳಿ ..(ಫೋನ್ ನೆಗ್ಗಿ )ಹಲ್ಲೋ ಆರು ?..(ಫೋನ್ ಮಡುಗಿಕ್ಕಿ
)ಮತ್ತೆ ಅದೇ ರಾಮಾಯಣ !ಆರೋ ಇವರ ಫ್ರೆಂಡ್ ಗ ಇಂಗ್ಲಿಷಿಲಿ ಎಂತದೋ ಹೇಳ್ತಾ ಇರೆಕ್ಕು ..ಎಂತ
ಬೇಕಾರು ಹೇಳಲಿ ..ಎನಗೆಂಥ ? ಈ ಫೋನಿನ ದೆಸೆಲಿ ಎನಗಂತು ನೆಮ್ಮದಿ ಇಲ್ಲೆ
(ಮತ್ತೆ ಫೋನ್ ರಿಂಗ್ ಆವುತ್ತು
)
ಸುಬ್ಬಿ : ಇದು ಬೊಬ್ಬೆ
ಹಾಕಿಕೊಂಡೆ ಇರಲಿ ಆನಂತೂ ಇಂದು ನೆಗ್ಗುತ್ತಿಲ್ಲೇ .ಎನಗೆ ಸುಮಾರು ಕೆಲಸ ಇದ್ದು (ಒಳ ಹೋ ವುತ್ತು)
(ಫೋನ್ ಮತ್ತೆ ಮತ್ತೆ ರಿಂಗ್ ಆವುತ್ತು
)
ಸುಬ್ಬಿ : ಇಂದು ಎಂಥ ಆಯಿದು
ಹೇಳಿ ಈ ಫೋನಿಂಗೆ ?ಆರಿದು ದಿನ ಇಡೀ ಫೋನ್ ಮಾಡುತ್ತಾ ಇಪ್ಪದು ಹೇಳಿ ಗೊಂತವುತ್ತಾ ಇಲ್ಲೆ ಅನ್ನೇ ..? ಇರ್ಲಿ ಅವಕ್ಕೆ ಮಾಡುತ್ತೆ ..
(ಫೋನ್ ಎತ್ತಿ ) ಹಲ್ಲೋ ಆರದು ಇಡೀ ದಿನ ಫೋನ್ ಮಾಡುದು ?ನಿಂಗೊಗೆ ಬೇರೆಂಥ ಕೆಲಸ ಇಲ್ಲೆಯ ?ಮದುಗಿ
ನೋಡ ಫೋನ್ ..(ಬೈದು ಫೋನ್ ಮಡುಗಿ ಒಳ ಹೋವುತ್ತು)
ಸುಬ್ಬಿ : (ಸ್ವಗತ) ಅಬ್ಬಾ
!ಅಡಿಗೆ ಕೆಲಸ ಎಲ್ಲ ಆತಪ್ಪ !ರಜ್ಜ ಹೊತ್ತು ಆರಾಮಾಗಿ ಕೂರ್ತೆ ಇನ್ನು ..ಸಾಕಾತು ಇಂದು
ಉದಿಯಪ್ಪಗಂದ ...ಎನ್ನ ಗೆಳತಿಯರೆಲ್ಲ ಈಗ ಆರಾಮಾಗಿ ಶಾಲೆಗೆ ಹೋಗಿ ಬಂದುಗೊಂಡು ಇಕ್ಕು ..ಆನು
ಮಾತ್ರ ಮದುವೆ ಆಗಿ ಸೋತೆ ..ಆನು ಹಠ ಮಾಡಿ ಮದುವೆ ಬೇಡ ,ಆನು ಶಾಲೆಗೆ ಹೋವುತ್ತೆ ಹೇಳಿ
ಹೇಳಕ್ಕಾಗಿತ್ತು ..ಭಾರೀ ದೊಡ್ಡ ತಪ್ಪು ಮಾಡಿದೆ ಹೇಳಿ ಎನಗೆ ಈಗ ಅನ್ಸುತ್ತು ..ಛೆ !ಎಂತ ಮಾಡುದು
?
(ಟಕ್ ಟಕ್ ಬಾಗಿಲು
ಬಡುದ ಶಬ್ದ ಅವುತ್ತು )
ಓ ಆರೋ ಬೈನ್ದವು ಹೇಳಿ
ಕಾಣೆಕ್ಕು ಬಾಗಿಲು ಬಡಿತ್ತಾ ಇದ್ದವು. ಆರು ಹೇಳಿ ನೋಡ್ತೆ ..
(ಅಪ್ಪ ಅಮ್ಮ
ಒಳ ಬತ್ತವು )
ಸುಬ್ಬಿ : ಓ !ಅಪ್ಪ ಅಮ್ಮ
..!ಬನ್ನಿ ಬನ್ನಿ ..ಆಸರಿಂಗೆ ತಟ್ಟೆ ಕೂರಿ..
ಅಪ್ಪ :ಆಸರಿಂಗೆ ಎಂಥ ಬೇಡ ಮಗಳೋ
ಸುಬ್ಬಿ : ಈ ಬೆಶಿಲಿಂಗೆ ಬೈಂದಿ
..ತಂಪಿಂಗೆ ಪುನರ್ಪುಳಿ ಎಸರು ಸರ್ಬತ್ತು ಮಾಡಿ ತತ್ತೆ ಆಗದಾ ?ರಜ್ಜ ಕುಡೀರಿ
ಅಮ್ಮ : ಸರಿ .ಒಂದು ಅರ್ಧರ್ಧ
ಲೋಟೆ ಸಾಕು ಸುಬ್ಬಿ ..ಸುಬ್ಬ ಇಲ್ಲೆಯ ಮನೆಲಿ ?
ಸುಬ್ಬಿ : ಇಲ್ಲೆಮ್ಮ ಅವು
ಆಫೀಸಿಂಗೆ ಹೋಯ್ದವು, ಈಗ ಬಕ್ಕು ,ಒಂದು ನಿಮಿಷ ಕೂರಿ ಸರ್ಬತ್ತು ಮಾಡಿ ತತ್ತೆ..
ಒಳ ಹೋಗಿ ಮಾಡಿ ತತ್ತು)
ಸುಬ್ಬಿ : (ಸರ್ಬತ್ತು
ಕೊಡುತ್ತಾ ) ಅಲ್ಲ ..ನಿಂಗ ಎಂಥ ಹೀಂಗೆ ದಿಡೀರನೆ ಬಂದದು ?ನಿಂಗ ಫೋನ್ ಮಾಡಿದರೆ ಇವು ಕರಕೊಂಡು
ಬಪ್ಪಲೆ ಬರ್ತಿತ್ತವಿಲ್ಲೆಯ ?ಬಸ್ ಸ್ಟಾಂಡ್ ಯಿಂದ ಹೇಂಗೆ ಬಂದಿ ?ದಾರಿ ಸರಿ ಸಿಕ್ಕಿತ್ತಾ
?ಎಂಥಕ್ಕೂ ಫೋನ್ ಮಾಡಿದ್ದರೆ ಆನು ಇವರ
ಕಳುಸ್ತಿತ್ತೆ ..
ಅಮ್ಮ : ಎಷ್ಟು ಸರ್ತಿ
ಮಾರಾಯ್ತಿ ನಿನಗೆ ಫೋನ್ ಮಾಡುದು ?ಫೋನ್ ಮಾಡಿ ಮಾಡಿ ಸಾಕಾತು ..ನೀನು ಫೋನ್ ಎತ್ತಿದ್ದೇ ಇಲ್ಲೆ
..ಒಡ್ಕಕ್ಕೆ ಫೋನೆತ್ತಿ ಆನು ಮಾತಾಡಕ್ಕಾದರೆ ಮೊದಲೇ ನಿಂಗೊಗೆಂಥ ಬೇರೆಂಥ ಕೆಲಸ ಇಲ್ಲೆಯ ಫೋನ್
ಮದುಗಿ ಹೇಳಿ ಬೈದಿಕ್ಕಿ ಮಡುಗಿದೆ ನೀನು ! ಎಂಥ ಕಥೆ ನಿನ್ನದು ?ಅಷ್ಟು ತಾಳ್ಮೆ ಇಲ್ಲದ್ದರೆ
ಹೇಂಗೆ ?
ಸುಬ್ಬಿ : ಅಯ್ಯೋ ದೇವರೇ ..ಅದು
ಅಷ್ಟು ಸರ್ತಿ ಫೋನ್ ಮಾಡಿದ್ದು ನಿಂಗಳ ?ಉದಿಯಪ್ಪಗಂದ ಫೋನ್ ಮಾಡಿ ಇಂಗ್ಲಿಷಿಲಿ ಎಂಥದೋ ಹೇಳ್ತಾ
ಇತ್ತಿದವು .ಅದಕ್ಕೆ ಫೋನ್ ನೆಗ್ಗಿತ್ತಿಲ್ಲೆ..ಮತ್ತೆ ಫೋನ್ ಬಂದಪ್ಪಗ ಕೋಪ ಬಂದು ಹಾಂಗೆ
ಹೇಳಿದ್ದು ಅಷ್ಟೇ!ಬೇಜಾರಾತ ನಿಂಗೊಗೆ ?
ಅಮ್ಮ :ಮತ್ತೆ ಆರಿಂಗಾದರು ಎಂತ
ಹೇಳಿ ಅನ್ಸ ಹೇಳು ? ಅಲ್ಲ ..ಸುಬ್ಬಿ ನೀನು ಅಷ್ಟು ತಾಳ್ಮೆ ಕಲ್ಕ್ಕೊಂದರೆ ಹೇಂಗೆ ?ನೋಡು ಈಗ
ನೀನು ಸಣ್ಣ ಕೂಸು ಅಲ್ಲ ..ಎಲ್ಲರೊಟ್ಟಿಂಗೆ ನಯ ವಿನಯಂದ ಇರಕ್ಕು ಗೊಂತಾತ
(ಮಾತಾಡುತ್ತ ಇಪ್ಪಗ ರಾಜ ಒಳ
ಬತ್ತ )
ರಾಜ :ಹಾಂಗೆ ಹೇಳಿ ಅತ್ತೆ ನಿಂಗ
ಇದಕ್ಕೆ ..ಇದರತ್ತಾರೆ ಎಷ್ಟು ಸರ್ತಿ ಹೇಳ್ತೆ ಹೇಳಿ ಇಲ್ಲೆ ..ಸಿಡುಕುಲೆ ಆಗ ಹೇಳಿ ,ಆದರೆ ಎನ್ನ
ಫ್ರೆಂಡ್ ಗಳ ಫೋನ್ ಬಂದರೆ ಸಾಕು ಇದಕ್ಕೆ ಕೋಪ ಬತ್ತು..
ಸುಬ್ಬಿ : ಅಪ್ಪು ಮತ್ತೆ
..ನಿಂಗಳ ಫ್ರೆಂಡ್ ಗ ಎಲ್ಲ ಇಂಗ್ಲಿಷ್ ಮಾತಾಡುತ್ತವು,ಎನಗೆ ಎಂತದು ತಲೆಬುಡ
ಗೊಂತಾವುತ್ತಿಲ್ಲೆ,ಮತ್ತೆ ಎಂಥ ಮಾಡುದು ಆನು ?ನಿಂಗಳ ಫ್ರೆಂಡ್ ಗಳ ಹತ್ತರೆ ಎನ್ನ ಹೆಂಡತಿಗೆ
ಇಂಗ್ಲೀಷು ಬತ್ತಿಲ್ಲೆ ಹೇಳಿ ಹೇಳ್ರೆ ಇವು ಹೇಳುತ್ತಿಲ್ಲಿ ನಿಂಗ ಆನೆಂಥ ಮಾಡುದು ?
ಸುಬ್ಬ :ಅದಕ್ಕೆ ಹೇಳುದು ಆನು
ರಜ್ಜ ಇಂಗ್ಲೀಷು ಕಲಿ ಹೇಳಿ , ಕ್ಲಾಸಿಂಗೆ ಹೋಗಿ
ಕಲಿ ಹೇಳಿ ಆದರೆ ನಿನಗೆ ಕಲಿವಲೇ ಮನಸ್ಸಿಲ್ಲೆ ..ಎನ್ನ ಫ್ರೆಂಡ್ ಗ ಆರಾದರೂ ಮನೆಗೆ ಬಂದಿಪ್ಪಗ
ನಿನಗೆ ಇಂಗ್ಲೀಷು ಬತ್ತಿಲ್ಲೆ ಹೇಳಿ ಗೊಂತಾದರೆ ಎನಗೆ ಎಷ್ಟು ನಾಚಿಕೆ ಗೊಂತಿದ್ದಾ ?ಅವರ
ಹೆಂಡತಿಯಕ್ಕ ಎಲ್ಲ ಡಬ್ಬಲ್ ಡಿಗ್ರಿ ಮಾಡಿದ್ದವು ಗೊಂತಿದ್ದಾ ?
ಸುಬ್ಬಿ : ನೋಡಮ್ಮ ..ಇವು ಹೀಂಗೆ
ದಿನಾಗುಲೂ ಆನು ಓದಿದ್ದಿಲ್ಲೇ ಹೇಳಿ ಎನ್ನ ಹಂಗುಸುತ್ತವು !ಇವಕ್ಕೆ ಅಷ್ಟು ನಾಚಿಕೆ ಆವುತ್ತಾರೆ
ಎನ್ನ ಮಾಡುವೆ ಆದ್ದು ಎಂಥಕೆ ? ಕೇಳಿ ..
ಸುಬ್ಬ :ಮದುವೆ ಆದ ಮೇಲೆ ನಿನಗೆ
ಇಂಗ್ಲೀಷು ಕಲಿಸುಲಕ್ಕು ಹೇಳಿ ಗ್ರೇಶಿ ಮದುವೆ ಆದೆ ,ನಿನಗೆ ಕಲಿವಲೆ ಮನಸ್ಸೇ ಇಲ್ಲೆ ..
ಅಪ್ಪ : ಅಪ್ಪು ..ಮಗಳೋ ..ಏನೋ
ಸೋದರತ್ತೆ ಮಗಳು ಹೇಳಿ ಪ್ರೀತಿಲಿ ಮಾಡುವೆ ಆದ .ನೀನು ಚೂರು ಇಂಗ್ಲೀಷು ಕಲಿ ನಿನಗೆ ಇಂಗ್ಲೀಷು
ಬಂದರೆ ಸಮಸ್ಯೆಯೇ ಇಲ್ಲೆನ್ನೇ ..
ಅಮ್ಮ : ಸಾಕಿನ್ನು ಆ ವಿಚಾರ
..ಸುಬ್ಬಿ ..ಅಡಿಗೆ ಆಯಿದ ?ಆದರೆ ಉಂಬ ಎಲ್ಲರೂ ಗಂಟೆ ಎರಡಾತು ..ಹೋಪ ..ಉಂಬ ..
ಅಪ್ಪ : ಸ್ಸರಿ..ಸ್ಸರಿ
..ಬಳುಸಿ ..
(ಎಲ್ಲ ಒಳ ಹೋವುತ್ತವು)
(ಫೋನ್ ಮತ್ತೆ ರಿಂಗ್ ಆವುತ್ತು )
ಸುಬ್ಬ ;ಹಲೋ . S.Raja is here
ಥೋಮಸ್; hello Mr S.Raja How are you ?Iam Thomas here
ಸುಬ್ಬ :Hello friend ,how are you ?when did you come from U S A?
ಥೋಮಸ್ : We arrived India yesterday,Tolin also came with me ,we are coming to
your house today evening
ಸುಬ್ಬ :What a surprise visit !You are always welcome
ಥೋಮಸ್ : Thank you very much ,meet you on evening
ಸುಬ್ಬ : ok bye
ಸುಬ್ಬ : (ಸ್ವಗತ ) ಹೊತ್ತಪ್ಪಗ
ಎನ್ನ ಫ್ರೆಂಡ್ ಗ ಬತ್ತವಡ !ಆನು ಎನ್ನ ಹೆಂಡತಿ ಡಬ್ಬಲ್ ಗ್ರಾಜುವೇಟ್ ಹೇಳಿ ಹೇಳಿದ್ದೆ ಅನ್ನೇ
ಅವರತ್ತರೆ!ಈಗ ಎಂಥ ಮಾಡುದು ?(ಭಾರೀ ಚಿಂತೆಲಿ ತಲೆಗೆ ಕೈ ಕೊಟ್ಟು ಕೂರುತ್ತ )
ಅಪ್ಪ ; ಎಂಥ ರಾಜ ?ಆರಿಂದು
ಫೋನ್ ?ಎಂಥ ಸಮಾಚಾರ ?
ಸುಬ್ಬ : ಎಂಥ ಹೇಳಿ ಹೇಳುದು
ಮಾವ ? ಈಗ ಹೊತ್ತಪ್ಪಗ ಎನ್ನ ಫ್ರೆಂಡ್ ಗ ಇಲ್ಲಿಗೆ ಬತ್ತವಡ ..ಅದೇ ಯೋಚನೆ ಎನಗೆ ..!
ಅಪ್ಪ : ಅದಕ್ಕೆ ಅಷ್ಟು
ತಲೆಬೆಶಿ ಮಾಡುಲೆ ಎಂಥ ಇದ್ದು ?ನಿನ್ನ ಅತ್ತೆಡೆ
ಸುಬ್ಬಿದೆ ಸೇರಿ ಎಂಥ ಆದರೊಂಡು ತಿಂಡಿ ,ಸ್ವೀಟ್ ಮಾಡುಗು ,ಬೇಕಾರೆ ಬೆಕರಿಂದಲೂ ತಪ್ಪಲಕ್ಕನ್ನೇ?
ಸುಬ್ಬ : ಅಯ್ಯೋ ಅದೆಂತ ತೊಂದರೆ
ಇಲ್ಲೆ ಮಾವ
ಅಪ್ಪ :ಮತ್ತೆ ಅವು ಬಪ್ಪಗ ಎಂಗ
ಇದ್ದರೆ ತೊಂದರೆ ಆವುತ್ತಾ ?ಎಂಗ ಈಗಲೇ ಹೆರಡ್ತೆಯ ಬೇಕಾರೆ !
ರಾಜ : ಅಯ್ಯಯ್ಯೋ ನಿಂಗ ಇರಿ
ಮಾವ ,ನಿಂಗ ಇದ್ದರೆ ಎಂಥ ತೊಂದರೆ ಇಲ್ಲೆ .ಎನಗೆ ಅದು ಚಿಂತೆ ಅಲ್ಲ ಮಾವ
ಸುಬ್ಬ : ಮತ್ತೆ ಎಂತ ಯೋಚನೆ
ಹೇಳು ಅಂಬಗ ,ಸರಿ ಮಾಡುವ ಎಲ್ಲ
ಸುಬ್ಬ ; ಅದೇ ಮಾವ ..ಅದೇ ನಮ್ಮ
ಸುಬ್ಬಿಗೆ ಇಂಗ್ಲೀಷು ಬತ್ತಿಲ್ಲೆ ಅನ್ನೇ ,ಎನ್ನ ಫ್ರೆಂಡ್ ಗೊಕ್ಕೆ ಕನ್ನಡ ಬತ್ತಿಲ್ಲೆ..ಅವು ಅಮೆರಿಕಾಲ್ಲಿ ಇಪ್ಪದು ..ಅವು
ಇಂಗ್ಲಿಷಿಲಿಯೇ ಮಾತಾಡುತ್ತವು..ಎಂಥ ಮಾಡುದು ಈಗ ..ಹೇಳಿ ಗೊಂತವುತ್ತಿಲ್ಲೇ ಎನಗೆ
ಅಮ್ಮ : ಅದಕ್ಕೆಂತ ಇದ್ದು
ತಲೆಬೆಶಿ ? ಸುರುವಿಂಗೆ ನೀನು ನಿನ್ನ ಫ್ರೆಂಡ್ ಗಳ ಹತ್ತರೆ ಸುಬ್ಬಿಗೆ ಇಂಗ್ಲೀಷು ಬತ್ತಿಲ್ಲೆ ಹೇಳಿ ಹೇಳಿ ಬಿಡು
ಸುಬ್ಬ : ಅದಾಗ ಅತ್ತೆ ..ಆನೆ
ಎನ್ನ ಫ್ರೆಂಡ್ ಗಳ ಹತ್ತರೆ ಎನ್ನ ಹೆಂಡತಿ ಡಬ್ಬಲ್ ಡಿಗ್ರಿ ಓದಿದ್ದು ಹೇಳಿ ಹೇಳಿದ್ದೆ ..ಈಗ ಎಂಥ
ಎಂತ ಮಾಡುದು ?
ಸುಬ್ಬಿ : ಈಗ ಎಂಥ ಮಾಡುದು
?ಮತ್ತೆ ಸುಳ್ಳು ಹೇಳಿದ್ದೆಂತಕೆ ?ಎಂಥ ಬೇಕಾರೂ ಮಾಡಿ ಎನಗೆ ಗೊಂತಿಲ್ಲೇ .
ಸುಬ್ಬ : (ಜೋರಾಗಿ
ಕೋಪಂದ)ಸುಬ್ಬಿ ಅದೆಲ್ಲ ಎನಗೆ ಗೊಂತಿಲ್ಲೇ ..ನೀನು ಅವರ ಹತ್ತರೆ ಇಂಗ್ಲಿಷಿಲಿ ಮಾತಾಡಕ್ಕು ಅಷ್ಟೇ
!
ಸುಬ್ಬಿ :ಅಲ್ಲಾಳಿ, ಹೈ ಸ್ಕೂಲ್
ಮೆಟ್ಲು ಹತ್ತದ್ದ ಆನು ಇಂಗ್ಲಿಷಿಲಿ ಹೇಂಗೆ
ಮಾತಾಡುದು ಹೇಳಿ ?
ಸುಬ್ಬ : ಆನು ಹೇಳಿ ಕೊಡ್ತೆ
..ಕಲಿ .
ಸುಬ್ಬಿ: ಅಲ್ಲಾಳಿ ನಿಂಗಳ
ಫ್ರೆಂಡ್ ಗ ಹೊತ್ತಪ್ಪಗ ಬತ್ತವು ಹೇಳಿ ಹೇಳ್ತಿ ..ಇನ್ನು ಒಂದೆರಡು ಗಂಟೆ ಒಳ ಅವು ಬಕ್ಕು
..ಅಷ್ಟು ರಜ್ಜ ಹೊತ್ತಿಲಿ ಇಂಗ್ಲಿಷ್ ಕಲಿವಲೆ ಎಡಿಗ ?!ಎಂತ ಹೇಳ್ತಿ ನಿಂಗ ಹೇಳಿ ಎನಗೆ ಅರ್ಥ
ಅವುತ್ತಿಲ್ಲೆ ಎನಗೆ ಎಂಥ ಮರ್ಲು ನಿಂಗಳದ್ದು!!
ಅಮ್ಮ : ಅಪ್ಪು ರಾಜ ..ಸುಬ್ಬಿ
ಹೇಳುದರಲ್ಲಿಯೂ ಅರ್ಥ ಇದ್ದು ,ಒಂದೆರಡು ಗಂಟೆಲಿ ಇಂಗ್ಲೀಷು ಕಲಿವಲೆ ಎಡಿಯ ಅದೆಂತ ಮಕ್ಕಳಾಟವ?
ಸುಬ್ಬ : ಅದು ಹಾಂಗಲ್ಲ ಅತ್ತೆ
..ಎನ್ನ ಫ್ರೆಂಡ್ಗೊಕ್ಕೆ ಸುಬ್ಬಿ ಹತ್ತರೆ ಮಾತಾಡುವದ್ದು ಎಂತ ಇರ್ತು ಹೇಳಿ ?ಸುಮ್ಮನೆ
ಶಿಷ್ಟಾಚಾರಕ್ಕಾಗಿ ಹೆಸರು ,ಊರು ಮಕ್ಕ ,ಪ್ರಾಯ ..ಕೇಳ್ತವು ಅವು ಅಷ್ಟೇ ?ಅವು ಹೇಂಗೆ
ಮಾತದುತ್ತವು ಹೇಳಿ ಎನಗೆ ಗೊಂತಿದ್ದು ಬೇರೆ ಕಡೆ ಆನು ಗಮನಿಸಿದ್ದೆ ಅವು ಮಾತಾಡುದರ .ಅದಕ್ಕೆ
ಒಂದೊಂದು ಶಬ್ದಲ್ಲಿ ಉತ್ತರ ಹೇಳಿದರೆ ಆತು ಅದರ ಆನು ಈಗ ಸುಬ್ಬಿಗೆ ಹೇಳಿ ಕೊಡ್ತೆ ಅದರ ಕಲಿವಲೆ
ಅರ್ಧ ಗಂಟೆದೆ ಬೇಡ .
ಅಪ್ಪ :ಅಪ್ಪು ಸುಬ್ಬಿ ರಾಜ
ಹೇಳುದುದೆ ಸರಿ ನೀನು ಅವ ಹೇಳಿ ಕೊಟ್ಟ ಹಾಂಗೆ ಕಲಿ ಎಂಗ ಆಚ ಕಡೆ ಇರ್ತೆಯ
ಸುಬ್ಬಿ : ಹ್ಹೂ ಸರಿ .ಅಪ್ಪ ..
ಸುಬ್ಬ : ನೋಡು ಸುಬ್ಬಿ ಅವು
ಸುರುವಿಂಗೆ ನಿನ್ನ ಹೆಸರೆಂತ ಹೇಳಿ ಕೇಳ್ತವು ..ಎಂಥ ಹೇಳ್ತೆ ನೀನು ?
ಸುಬ್ಬಿ :ಎನ್ನ ಹೆಸರು ನಿಂಗೊಗೆ ಗೊಂತಿಲ್ಲೆಯ ?
ಸುಬ್ಬ ;ಎನಗೆ ಗೊಂತಿದ್ದು ಆದರೆ
ಅವಕ್ಕೆ ಗೊಂತಿಲ್ಲೇ ಅನ್ನೇ .
ಸುಬ್ಬಿ : ಓ ಅಪ್ಪು ..ಎನ್ನ
ಹೆಸರು ಸುಬ್ಬಲಕ್ಷ್ಮಮ್ಮ ಹೇಳಿ ಅನ್ನೇ ಅದೇ ಹೇಳುತ್ತೆ ..
ಸುಬ್ಬ : ಈ ಸುಬ್ಬಲಕ್ಷ್ಮಮ್ಮ
ಶಾಂತಮ್ಮ ನಂಜುಡಮ್ಮ ಎಲ್ಲ ಹಳೆ ಹೆಸರು ಅದು ಆಗ ..ಈಗ ಆನು ಎನ್ನ ಹೆಸರು ಸುಬ್ಬ ರಾಜ ಹೇಳಿ
ಇಪ್ಪದರ ಎಸ್ .ರಾಜ ಹೇಳಿ ಚೆಂದ ಮಾಡಿದ್ದಿಲ್ಲೆಯ
?ಈಗ ಮನೆಯೋರಿನ್ಗೆ ಬಿಟ್ರೆ ಆರಿನ್ಗೂ ಎನ್ನ ಹೆಸರಿನ ಎಸ್
ಹೇಳಿರೆ ಸುಬ್ಬ ಹೇಳಿ ಗೊಂತಿಲ್ಲೆ ಅಲ್ಲದ ?ಹಾಂಗೆ ನಿನ್ನ ಹೆಸರನ್ನು ಬೇರೆ ಮಾಡುವ
..ನೀನೊಂದು ಚೆಂದದ ಹೆಸರು ಹೇಳು .
ಸುಬ್ಬಿ :ಅಕ್ಕು ಅಂಬಗ ಆನು ಎಂಥ
ಹೇಳಿ ಹೆಸರು ಹೇಳಕ್ಕು?
ಸುಬ್ಬ :( ಯೋಚನೆ ಮಾಡಿ ) ಹ್ಹ
..ನೀನು ಚಂದನಾ ಹೇಳಿ ಹೇಳು
ಸುಬ್ಬಿ :ಹ್ಹ ಅಕ್ಕು ಹೆಸರು
ಲಾಯ್ಕ ಇದ್ದು ಇದು ಚಂದನಾ ಕನ್ನಡ ವಾಹಿನಿ
ಸುಬ್ಬಿ :ತಲೆ ಹರಟೆ ಮಾಡಡ
,ಸುಮ್ಮನೆ ಇರು
ಸುಬ್ಬಿ :ಆತು ಮಾರಾಯರೇ ಎಂತ
ಹೇಳಿ ಹೇಳಕ್ಕೂ ಆನು ಹೇಳಿ
ಸುಬ್ಬ :ನೀನು ಚಂದಕ್ಕೆ ಚಂದನಾ
ಹೇಳಿ ಹೇಳು
ಸುಬ್ಬ : ಚಂದಕ್ಕೆ ಚಂದನಾ
ಸುಬ್ಬಿ :ಅಯ್ಯೋ ರಾಮ !ಚಂದಕ್ಕೆ
ಚಂದನಾ ಅಲ್ಲ ಮಾರಾಯ್ತಿ ಖಾಲಿ ಚಂದನಾ
ಸುಬ್ಬಿ : ಖಾಲಿ ಚಂದನಾ
ಸುಬ್ಬ :ಅಯ್ಯೋ ದೇವರೇ ಎನ್ನ
ಕರ್ಮ !ಒಂದರಿ ಚಂದನಾ ಹೇಳಿ ಹೇಳು ಮಾರಾಯ್ತಿ
ಸುಬ್ಬಿ :ಚಂದನಾ
ರಾಜ : ಪುನಃ ಹೇಳು
ಸುಬ್ಬಿ :ಚಂದನಾ
ಸುಬ್ಬ : ಗುಡ್
ನಂತರ ನಿನ್ನ ಊರು ಯಾವುದು ಹೇಳಿ ಕೇಳ್ತವು ಎಂತ ಹೇಳುತ್ತೆ ?
ಸುಬ್ಬಿ : ಕೊಡೆಯಾಲ ಹೇಳಿ
ಹೇಳ್ತೆ ..
ಸುಬ್ಬ : ಹಾಂಗೆ ಬೇಡ ನೀನು
ಸ್ಟೈಲ್ ಆಗಿ ಮ್ಯಾಂಗಲೋರ್ ಹೇಳಿ ಹೇಳು
ಸುಬ್ಬಿ :ಮಾಂಗನೂರು
ಸುಬ್ಬ ಮಂಗನೂರು ಅಲ್ಲ
ಮಾರಾಯ್ತಿ ಮ್ಯಾಂಗಲೋರ್
ಸುಬ್ಬಿ : ಮ್ಯಾಂಗಲೋರ್
ಸುಬ್ಬ ;ಹಾಂಗೆ ಹೇಳು
ಸರಿಯಾಯಿದು ,ನಂತರ ಅವು ನಿನ್ನ ಹತ್ತರೆ ನಿನಗೆ ಎಷ್ಟು ಜನ ಮಕ್ಕ ಹೇಳಿ ಕೇಳುಗು ಎಂಥ ಹೇಳುತ್ತೆ?
ಸುಬ್ಬಿ :ನಿಜವಾಗಿಯೂ
ಇಲ್ಲೆನ್ನೇ ,ಎಂಥ ಇದ್ದು ಹೇಳಿ ಹೇಳಕ್ಕ ?
ಸುಬ್ಬ : ಬೇಡ ಬೇಡ ಇಲ್ಲೆ
ಹೇಳಿಯೇ ಹೇಳುವ ,ಇಲ್ಲೆ ಹೇಳುದನ್ನೇ ಇಂಗ್ಲಿಷಿಲಿ ನೋ ಹೇಳಿ ಹೇಳು
ಸುಬ್ಬಿ : ಸ್ನೋ
ಸುಬ್ಬ ಸ್ನೋ ಅಲ್ಲ ಪೌಡರ್
ಸುಬ್ಬಿ : ಸ್ನೋ ಅಲ್ಲ ಪೌಡರ್
ಸುಬ್ಬ :ಅಯ್ಯೋ ರಾಮ !ನೋ ಹೇಳಿ
ಹೇಳು ಮಾರಾಯ್ತಿ
ಸುಬ್ಬಿ : ಸ್ನೋ
ಸುಬ್ಬ : ಅಯ್ಯೋ ಕರ್ಮವೇ !ಸ್ನೋ
ಅಲ್ಲ ಮಾರಾಯ್ತಿ ನೋ ನೋ ಹೇಳಿ ಹೇಳುಲೆಡ್ತಿಲ್ಲೆಯ ನಿನಗೆ ?ನಿನ್ನ ನಾಲಗೆಗೆ ಬೆಣಕಲ್ಲು ಹಾಕಿ
ತಿಕ್ಕಕ್ಕು ..(ಕೋಪ )
ಸುಬ್ಬಿ : (ಕೋಪಂದ ) ಇದಾ ನಿಂಗ
ಇಂಗ್ಲೀಷು ಹೇಳಿ ಕೊಡ್ತೆ ಹೇಳಿದ್ದಕ್ಕೆ ಆನು ಕಲಿತ್ತಾ ಇಪ್ಪಡಿ ನಿಂಗಳ ಮರ್ಯಾದೆ ಒಳಿಸುಲೆ
ಬೇಕಾಗಿ !ಹ್ಹ ! ಬೈದರೆ ಜೋರು ಮಾಡ್ರೆ ಆನು ಕಲಿಯೆ,ಮತ್ತೆ ನಿಂಗೊಗೆ ನಾಚಿಕೆ ಆದರೆ ಎನಗೆ
ಗೊಂತಿಲ್ಲೆ !ಎಂಥ ಬೇಕಾರು ಮಾಡಿಗೊಳ್ಳಿ ಎನಗೆ ತುಂಬಾ ಕೆಲಸ ಇದ್ದು ಆನು ಒಳ ಹೋವುತ್ತೆ ..(ಒಳ
ಹೊಪಲೆ ಹೆರಡುತ್ತು)
ಸುಬ್ಬ : ಅಯ್ಯಯ್ಯೋ ನಿಲ್ಲು
ನಿಲ್ಲು .. ಹೋಗಡ ಸುಬ್ಬಿ..ಬೈತ್ತಿಲ್ಲೆ
ಮಾರಾಯ್ತಿ ಬಾ ,ನೋ ಹೇಳಿ ಹೇಳು
ಸುಬ್ಬಿ : ನೋ
ಸುಬ್ಬ: ಸರಿ ಹಾಂಗೆ ಹೇಳು ,ಮುಂದೆ ಅವು ನಿನ್ನ ಪ್ರಾಯ ಎಷ್ಟು
ಹೇಳಿ ಕೇಳುಗು ಎಂತ ಹೇಳುತ್ತೆ ?
ಸುಬ್ಬಿ : ನಿಜವಾಗಿ ಹದಿನಾರು
ಎಂಥ ಎಪ್ಪತ್ತಾರು ಹೇಳಿ ಹೇಳಕ್ಕ ?
ಸುಬ್ಬ :ಬೇಡ ಆದರೆ 16 ಹೇಳಿದೆ
ಬೇಡ ಎನ್ನ ಫ್ರೆಂಡ್ ಗ ಎಲ್ಲ ಸಮ ಪ್ರಾಯದೋರನ್ನೇ ಮದುವೆ ಆಯಿದವು .ಹಾಂಗೆ ನೀನು ಎನ್ನಂದ 10 ವರ್ಷ
ಸಣ್ಣ ಹೇಳಿರೆ ಎನಗೆ ಒಂಥರಾ ನಾಚಿಕೆ ಆವುತ್ತು ಅದಕ್ಕೆ ನೀನು ಇಪ್ಪತ್ತಾರು ಹೇಳಿ ಹೇಳು .ಅದರ ಇಂಗ್ಲಿಷಿಲಿ ಟ್ವೆಂಟಿ ಸಿಕ್ಸ್ ಹೇಳಿ ಹೇಳು
ಸುಬ್ಬಿ : ಶುಂಟಿ ಮಿಕ್ಸ್
ಸುಬ್ಬ ;(ಸ್ವಗತ ) ಓ ದೇವರೇ ಇದಕ್ಕೆ
ಹೆಂಗಪ್ಪಾ ಹೇಳಿಕೊಡುದು? (ಸುಬ್ಬಿ ಹತ್ತರೆ )ನಿನಗೆ ಸದಾ ಅಡಿಗೆ ಮನೆದೇ ಧ್ಯಾನ ಸುಬ್ಬಿ ಅದಕ್ಕೆ
ಶುಂಟಿ ಮಿಕ್ಸ್ ಹೇಳಿ ಬಪ್ಪದು ಅದರ ಅಡಿಗೆಗೆ ಮಡಿಕ್ಕ ,ಈಗ ಟ್ವೆಂಟಿ ಸಿಕ್ಸ್ ಹೇಳಿ ಹೇಳಿ
ಸುಬ್ಬಿ :ಟ್ವೆಂಟಿ..
ಸುಬ್ಬ : ಹ್ಹ ಹ್ಹ ..ಹಾಂಗೆ
ಟ್ವೆಂಟಿ ಸಿಕ್ಸ್
ಸುಬ್ಬಿ : ಟ್ವೆಂಟಿ ವಿಕ್ಸ್
ಸುಬ್ಬ: ವಿಕ್ಸ್ ಅಲ್ಲ
ಅಮೃತಾಂಜನ
ಸುಬ್ಬಿ : ವಿಕ್ಸ್ ಅಲ್ಲ
ಅಮೃತಾಂಜನ
ಸುಬ್ಬ : ಸುಬ್ಬಿ ಎನಗೆ ಕೋಪ
ಬರ್ಸಡ ,ಸರಿಯಾಗಿ ಹೇಳು,ಟ್ವೆಂಟಿ ಸಿಕ್ಸ್
ಸುಬ್ಬಿ :ಟ್ವೆಂಟಿ ಸಿಕ್ಸ್
ಸುಬ್ಬ :ವೆರಿ ಗುಡ್ ,ಇಷ್ಟು
ಹೇಳಿದರೆ ಸಾಕು !
ಸುಬ್ಬಿ : ಅದು ಸಮ ..ಆದರೆ
ನಿಂಗ ಹೇಳಿ ಕೊಟ್ಟ ರೀತಿಲಿಯೇ ಪ್ರಶ್ನೆ ಕೆಳುತ್ತವು ಹೇಳಿ ಹೇಂಗೆ ಹೇಳುದು ?ಸುರುವಿಂಗೆ ಹೆಸರು
ಕೇಳುವ ಬದಲು ಊರು ಯಾವುದು ಹೇಳಿ ಕೇಳ್ರೆ ಎನಗೆ ಹೇಂಗೆ ಗೊಂತಪ್ಪದು ..?
ಸುಬ್ಬ: (ಯೋಚಿಸಿಗೊಂಡು ) ಅಪ್ಪಲ್ಲದ ..?!ಎಂಥ ಮಾಡುದೂ ಇದಕ್ಕೆ
..ಹ್ಹ ಒಂದು ಉಪಾಯ ಗೊಂತಾತು ..ಅವು ನಿನ್ನ ಹೆಸರು ಕೇಳಿ ಅಪ್ಪಗ ಆಗ ಹೀಂಗೆ ಕಣ್ಣು ಮುಚ್ಚುತ್ತೆ
ಒಂದು ಕ್ಷಣ (ಕಣ್ಣು ಮುಚ್ಚಿ ತೋರುಸಕ್ಕು )ಅಂಬಗ ನೀನು ಚಂದನಾ ಹೇಳಿ ಹೇಳು ,ಅವು ಊರಿನ ಹೆಸರು
ಕೇಳುವಗ ಆನು ಕೈಯ ಹೀಂಗೆ ಹಣೆಲಿ ಮಡುಗುತ್ತೆ (ಕೈ ಹಣೆಗೆ ಮದುಗಿ ತೋರುಸುತ್ತ)ಅದರ ನೋಡಿ ನೀನು
ಮ್ಯಾಂಗಲೋರ್ ಹೇಳಿ ಹೇಳು .ಮಕ್ಕ ಎಷ್ಟು ಹೇಳಿ ಕೇಳುವಗ ಆನು ಹೀಂಗೆ ಕೆಲ ನೋಡುತ್ತೆ ,ನಿನ್ನ
ಪ್ರಾಯ ಕೇಳುವಾಗ ಹೀಂಗೆ ಕೈ ನೆಗ್ಗುತ್ತೆ ..ಅದರ ನೋಡಿ ಟ್ವೆಂಟಿ ಸಿಕ್ಸ್ ಹೇಳಿ ಹೇಳು ..ಸರಿಯಾ .
ಸುಬ್ಬಿ :ಸರಿ ಅವು ಮೊದಲು
ಹೆಸರು ಕೆಳುತ್ತವು ಅಂಬಗ ನಿಂಗ ಕಣ್ಣು ಮುಚ್ಚುತ್ತಿ ,ಆನು ಚಂದನಾ ಹೇಳಿ ಹೇಳಕ್ಕು,ನಿಂಗ ಹಣೆಲಿ
ಕೈ ಮಡುಗಿರೆ ಉರ ಹೆಸರು ಹೇಳಕ್ಕೂ ಅನಂತರ ಕೈ ನೆಗ್ಗುತ್ತಿ ..ಅಲ್ಲ ಅಲ್ಲ ಕೆಲ ನೋಡುತ್ತಿ ಅಂಬಗ
ನೋ ಹೇಳಕ್ಕೂ ಅನಂತರ ಕೈ ನೆಗ್ಗುತ್ತಿ ಅಂಬಗ ಟ್ವೆಂಟಿ ಮಿಕ್ಸ್ ಅಲ್ಲಲ್ಲ ಟ್ವೆಂಟಿ ಸಿಕ್ಸ್
ಹೇಳಕ್ಕು ಸರಿಯಾ ..
ಸುಬ್ಬ : ಹ್ಹ ಸರಿ ಇದ್ದು
,ನೋಡು ನಿನಗೆ ಮನಸ್ಸು ಮಾಡ್ರೆ ಎಲ್ಲ ಎಡಿತ್ತು .ಆ ಮೇಲೆ ಅವು ಬಂದ ಕೂಡಲೇ ಹಲೋ ಹೇಳಿ ಹೇಳಕ್ಕೂ
ಹೇಂಗೆ ?
ಸುಬ್ಬಿ : ಹಲ್ಲೋ
ಸುಬ್ಬ : ಹಲ್ಲು ನಿನ್ನ ಬಾಯಿಲಿ
ಇದ್ದು ಹಲೋ ಹೇಳಿ ಹೇಳಕ್ಕೂ
ಸುಬ್ಬಿ : ಹಲೋ
ಸುಬ್ಬ :ಮತ್ತೆ ಹೈ ಹೀಲ್ಡ್
ಚಪ್ಪಲಿ ಹಾಕಿ ಕೊಂಡು ಕೈಲಿ ಕಾಫಿ ಹಿಡ್ಕೊಂಡು ಸ್ಟೈಲ್ ಆಗಿ ತಂದು ಕೊಡಕ್ಕು.
ಸುಬ್ಬಿ : ಅದೆಂತದು ಹೈ ಹೈ
ಹೇಳ್ರೆ ?
ಸುಬ್ಬಿ : ಅದು ಎತ್ತರದ ಮೆಟ್ಟು
ನಂತರ ಅವು ಹೊಪಗ ಥ್ಯಾಂಕ್ಸ್ ಹೇಳಕ್ಕು
ಸುಬ್ಬಿ : ಟಾಂಕಿಸ್
ಸುಬ್ಬ : ತಾಂಕಿ ನೀರು
ತುಂಬುಸುಲೆ ನಿನ್ನ ಹತ್ತರೆಯೇ ಮಡಿಕ್ಕ ಈಗ ಥ್ಯಾಂಕ್ಸ್ ಹೇಳಿ ಹೇಳು
ಸುಬ್ಬಿ : ಥ್ಯಾಂಕ್ಸ್
ಸುಬ್ಬ : ಸರಿ ಅದರ ಆನು ಪೇಟೆಗೆ
ಹೋಗಿ ಹೈ ಹೀಲ್ಡ್ ತತ್ತೆ ನಿನಗೆ ..ನೀನು ಎಲ್ಲ
ನೆನಪು ಮಾಡಿಕ್ಕೊಂಡು ತಯಾರಾಗಿರು .
(ಸುಬ್ಬ ಪೇಟೆಗೆ ಹೋವುತ್ತ )
ಸುಬ್ಬಿ : ಅಮ್ಮ ಅಮ್ಮಾ ಇಲ್ಲಿ
ಬಾ .
ಅಮ್ಮ : ಎಂಥ ಸುಬ್ಬಿ
ಸುಬ್ಬಿ : (ಭಾರೀ ಕೊಷಿಲಿ)ನೋಡು
ಅಮ್ಮಾ ಎನಗೆ ಎಷ್ಟು ಬೇಗ ಇಂಗ್ಲೀಷು ಬಂತು ಗೊಂತಿದ್ದಾ ?
ಅಮ್ಮ : ಹ್ಹೂ ಗೊಂತಾತು ಎಂಗೊಗೆ
ಅಲ್ಲಿಗೆ ಕೇಳಿಗೊಂಡು ಇತ್ತು ನಿನ್ನ ಕಲಿಯಾಣ.ಏನಾರು ಎಡವಟ್ಟು ಆಗದ್ರೆ ಸರಿ ..
ಸುಬ್ಬಿ : ಏನಾಗ ಬಿಡು ..ನಾವು
ರಜ್ಜ ಸ್ವೀಟ್ ದೆ ತಿಂಡಿದೆ ಮಾಡುವ ಹೋಪ
(ಅಡಿಗೆ ಸಿದ್ಧತೆಯ ಅಭಿನಯ )
(ಟಕ್ ಟಾಕ್ ಶಬ್ದ ..
ಸುಬ್ಬಿ ; ಓ ಇವು ಬಂದವು ಹೇಳಿ
ಕಾಣೆಕ್ಕು
(ಸುಬ್ಬ ಒಳಂಗೆ ಬತ್ತ )
ಸುಬ್ಬ :ಇದಾ ಹೈ ಹೀಲ್ಡ್ ..ಹಾಕಿಗ
..
ಸುಬ್ಬಿ : (ಜಾರಿ ಬೀಳುಲೇ ಆಗಿ
)ಹ್ಹಾ ..
ಅಮ್ಮ : ಜಾಗ್ರತೆ ..ಜಾಗ್ರತೆ
..ಸರಿ ನೀನೆಲ್ಲ ಅಭ್ಯಾಸ ಮಾಡಿಗ ..ಆನು ಒಳ ರಜ್ಜ ತಿಂಡಿ ತಯಾರು ಮಾಡುತ್ತೆ ..
ಸುಬ್ಬ : ಎಲ್ಲ ನೆನಪಿದ್ದನ್ನೇ
ಸುಬ್ಬಿ ..ಹೆಸರು ಹೇಳು ..
ಸುಬ್ಬಿ : ನಿಂಗ ಕಣ್ಣು
ಮುಚ್ಚಿದ್ದಿಲ್ಲಿ ..
ಸುಬ್ಬ : ಹ್ಹ ಹ್ಹಾ ..ಕಣ್ಣು
ಮುಚ್ಚಿದೆ
ಸುಬ್ಬಿ :ಚಂದನಾ
ಸುಬ್ಬ :ಊರು (ಹಣೆ ಮುಟ್ಟಿ )
ಸುಬ್ಬಿ:ಮ್ಯಾಂಗಲೋರ್
ಸುಬ್ಬ :ವೆರಿ ಗುಡ್ ಸುಬ್ಬಿ
,ಒಪ್ಪಕ್ಕ ನೀನು ..ಮಕ್ಕ (ತಲೆ ಕೆಲ ಹಾಕಿ )
ಸುಬ್ಬಿ: ಆ ..ಎಂತದಪ್ಪಾ ..ಹ್ಹ
ಹ್ಹಾ ಟ್ವೆಂಟಿ ಸಿಕ್ಸ್ ಸರಿಯ ?
ಸುಬ್ಬ :ಅಲ್ಲ ಅಲ್ಲ ನೋ
ಸುಬ್ಬಿ : ಅಪ್ಪಪ್ಪು ಎನಗೆ
ಮರತ್ತು ..ನೋ
ಸುಬ್ಬ :ಪ್ರಾಯ ?
ಸುಬ್ಬಿ : ಟ್ವೆಂಟಿ ಸಿಕ್ಸ್
..ಹೊಪಗ ಥ್ಯಾಂಕ್ಸ್ ಬಪ್ಪಗ ಹಲೋ ಸಮ ಇದ್ದು ಅಲ್ಲದ ?
ಸುಬ್ಬ :ಸರಿ ಇದ್ದು ನಿನಗೆ
ಮನಸ್ಸು ಆದರೆ ಎಲ್ಲ ಎಡಿತ್ತು..ಆದರೆ ಮನಸ್ಸಪ್ಪದು ಮಾತ್ರ ನಮ್ಮ ಮೋಡೆ ಗೋಣ ಕಂಜಿ ಹಾಕಿ ಅಪ್ಪಗ ..(ನೆಗೆ )
ಸುಬ್ಬಿ : ಇದಾ ಬೇಡ !
(ಬಾಗಿಲು ಟಕ ಟಕ್ ಟಕ್ ಶಬ್ದ )
ಸುಬ್ಬ :ಅವು ಬಂದವು ಹೇಳಿ
ಕಾಣೆಕ್ಕು ಸುಬ್ಬಿ ನೀನು ಒಳ ಇರು ಆನು ದೇಣಿಗೇಲಿ ಅಪ್ಪಗ ಬಾ ..
(ಗೆಳೆಯರ ಪ್ರವೇಶ
)
ಸುಬ್ಬ :welcome friends welcome ,please be seated
Friends :thanks
Eriend 1 :how are you Mr S .Raja ?
ಸುಬ್ಬ:Iam very fine ,thanks ,how are you dears ?
Friends :we are fine. thanks
Friend 1 :Your house is very beautiful.You
must be proud of it
ಸುಬ್ಬ :thanks ,credit goes to my wife
Friend 2: By the by Mr.S.Raja,where is your
wife ?
ಸುಬ್ಬ: just wait, I will call her..chandana ..chandana..
ಸುಬ್ಬಿ : ಎಂತಾಳಿ ..?ಹ್ಹ ಹ್ಹ ..!ಹಲ್ಲೂ ಹಲ್ಲೂ ..!!(ಸುಬ್ಬ ಕೋಪಂದ ಅದರ ನೋಡುತ್ತ
,ಗಾಭರಿ ಆಗಿ )ಅಲ್ಲಲ ..ಥ್ಯಾಂಕ್ಸ್ ..ಥ್ಯಾಂಕ್ಸ್
(ಸುಬ್ಬ ನಾಚಿಕೆ ಆಗಿ ಹಣೆಗೆ ಕೈ
ಹಿಡಿತ್ತ ಅದೇ ಹೊತ್ತಿಂಗೆ )
Friend 1:How are you Mrs Raja?May I know your
name please
ಸುಬ್ಬಿ :(ಸುಬ್ಬ ಹಣೆಗೆ ಕೈ
ಮಡುಗಿದ್ದರ ನೋಡಿ) (ಸ್ವಗತ ) ಓ ಇವು ಹನೆಗ್ ಕೈ ಮದುಗಿದ್ದವು ಅಂಬಗ ಅವು ಸುರುವಿಂಗೆ ಊರ ಹೆಸರು
ಕೇಳಿರೆಕ್ಕು..(ಪ್ರಕಾಶ ) ಮ್ಯಾಂಗಲೋರ್
(ಇದರ ಉತ್ತರ ಕೇಳಿ ತಲೆ ಕೆಟ್ಟು
ಕಣ್ಣು ಮುಚ್ಚಿದ ಸುಬ್ಬ )
Friend 2 : (ಸಂಶಯಂದ ಮೋರೆ ಮೋರೆ ನೋಡಿಕ್ಕಿ )you are from which place ?
ಸುಬ್ಬಿ :( ಸುಬ್ಬ ಕಣ್ಣು
ಮುಚ್ಚಿದ್ದರ ನೋಡಿಕ್ಕಿ )ಚಂದನಾ
Friend 1 :She is very young
Friend 2 :How old are you Mrs Raja ?
(ನಾಚಿಕೆಂದ ಸುಬ್ಬ ತಲೆತಗ್ಗಿಸಿ ನಿಂದಿತ್ತಿದ )
ಸುಬ್ಬಿ : (ಸುಬ್ಬ ತಲೆ ಕಂತು
ಹಾಕಿದ್ದರ ನೋಡಿಕ್ಕಿ ) ನೋ
friend 2 : (ವಿಚಿತ್ರವಾಗಿ ನೋಡಿ ) Do you have any children ?
(ಸುಬ್ಬ ಒಳ ಹೋಗು ಹೇಳಿ ಸನ್ನೆ ಮಾಡಿದ
)
ಸುಬ್ಬಿ : (ಸುಬ್ಬನ ಸನ್ನೆಯ ಕೈ
ನೆಗ್ಗಿದ್ದು ಹೇಳಿ ಭಾವಿಸಿ ) ಟ್ವೆಂಟಿ ಸಿಕ್ಸ್
friends :Oh my God!
ಸುಬ್ಬ : ಸುಬ್ಬಿ ಒಳ ಹೋಗು ಒಳ
ಹೋಗು ಒಂದರಿ ..
Friends : Mr S. Raja Is your wife litle ?! (ತಲೆ ಕೆಟ್ಟಿದ ಹೇಳುವಾನ್ಗೆ ಅಭಿನಯಿಸಿ ಕೇಳಿದವು )
ಸುಬ್ಬ :Sorry my friends sorry She doesn’t know English ,I forgotton to tell
Friends :ok its all right,we will come again
,It was nice to see you and your wife
ಸುಬ್ಬ : Thanks ,It is our pleasure
ಸುಬ್ಬಿ : ( ಗಡಿ ಬಿಡಿಲಿಒಳಂದ
ಕಾಫಿ ತಪ್ಪ ಬದಲು ಮೆಟ್ಟು ಹಿಡ್ಕೊಂಡು ಬಂದು ) ಹಲೋ ಹಲೋ ..
Friends : What is this ?
ಸುಬ್ಬಿ : ಹೈ .. ಹೈ ..ಒಹ್
ಕಾಫಿ ತತ್ತೆ .
Friends: ok..ok all right ,May God bless you ,see you again
(ಹೋವುತ್ತವು)
ಸುಬ್ಬ : ಅಲ್ಲ ಸುಬ್ಬಿ ಎನ್ನ
ಮರ್ಯಾದೆ ತೆಗದೆ ಅಲ್ಲ ..!ಛೆ ..
ಸುಬ್ಬಿ : ಆನೆಂಥ ಮಾಡಿದೆ
?ಎಲ್ಲ ನಿಂಗ ಹೇಳಿ ಕೊಟ್ಟ ಹಾಂಗೆ ನಿಂಗಳ ಕೈ ಕಣ್ಣು ನೋಡಿಗೊಂಡೆ ಹೇಳಿದ್ದೆ ಅಷ್ಟು ಸರಿಯಾಗಿ ಮಾತಾಡಿದ್ದೆ ಇಂಗ್ಲಿಷಿಲಿ
!
ಸುಬ್ಬ : ಹೇಳಿದ್ದೇನೋ ಆನು
ಹೇಳಿ ಕೊಟ್ಟ ಹಾಂಗೆ ,ಆದರೆ ಎಲ್ಲ ಉಲ್ಟಾ ಪಲ್ಟಾ ಹೇಳಿದ್ದೆ ,ಹೆಸರು ಕೇಳ್ರೆ ಊರು ,ಊರು ಕೇಳ್ರೆ
ಹೆಸರು ,ಪ್ರಾಯ ಕೇಳ್ರೆ ನೋ ಮಕ್ಕ ಎಷ್ಟು ಕೇಳ್ರೆ ೨೬ ಹೇಳಿ ಹೇಳಿದೆ !ನೀನು ಬುದ್ಧಿವಂತೆ ಹೇಳಿ
ಭಾವಿಸಿ ಆನು ಮೋಸ ಹೋದೆ ..
ಸುಬ್ಬಿ :ಇಲ್ಲೆನ್ನೇ ಆನು ಎಲ್ಲ
ಸರಿ ಹೇಳಿದ್ದೆ !ನಿಂಗ ಸುರುವಿಂಗೆ ಹಣೆಗೆ ಕೈ ಮಡುಗಿದಿ ಆನು ಊರು ಹೇಳಿದೆ ,ನಂತರ ನಿಂಗ ಕಣ್ಣು
ಮುಚ್ಚಿದಿ,ಕಣ್ಣು ಮುಚ್ಚಿದರೆ ಎಸರು ಹೇಳು ಹೇಳಿ ಕೊಟ್ಟದು ನಿಂಗಳೇ ಅನ್ನೇ ಹಾಂಗೆ ಹೇಳಿದೆ ಆನು
..ನಿಂಗ ತಲೆ ತಗ್ಗಿಸಿ ಇಪ್ಪಗ ಟ್ವೆಂಟಿ ಸಿಕ್ಸ್ ಹೇಳಿದ್ದೆ ಕೈ ನೆಗ್ಗಿ ಅಪ್ಪಗ ನೋ ಹೇಳಿದ್ದೆ
ಎಲ್ಲ ಸರಿಯಾಗಿಯೇ ಹೇಳಿದ್ದೆ ಆನು ಎನ್ನ ಬೈಯಡಿ ಸುಮ್ಮ ಸುಮ್ಮನೆ ..ಬೈವಲೆ ಆನೆಂಥ ತಪ್ಪು
ಮಾಡಿದ್ದೆ ಹೇಳಿ ಬೇಕನ್ನೇ ..ಸುರುವಿಲಿ ರಜ್ಜ ಗಡಿ ಬಿಡಿ ಆತು ಅದು ಬಿಟ್ರೆ ಒಳುದ್ದೆಲ್ಲ ಸರಿ
ಹೇಳಿದ್ದಿಲ್ಲೆಯ ಆನು ?
ಸುಬ್ಬ :ಅಯ್ಯೋ ರಾಮ ದೇವರೇ !ನೀನಿ
ಸುರುವಿಂಗೆ ಥ್ಯಾಂಕ್ಸ್ ಹೇಳಿದ್ದು ನೋಡಿ ತಲೆ ಕೆಟ್ಟು ಹಣೆ ಹಣೆ ಬಡ್ಕೊಂಡ್ರೆ ಅದರ ಹಣೆ
ಮುಟ್ಟಿದ್ದು ಹೇಳಿ ಭಾವಿಸುದ ?ಅಷ್ಟು ಗೊಂತವುತ್ತಿಲ್ಲೆಯ ?ನಿನ್ನ ಹೆಡ್ಡು ಹೆಡ್ಡು ಬುದ್ಧಿಗೆ
ನಾಚಿಕೆ ಆಗಿ ಕಣ್ಣು ಮುಚ್ಚಿದರೆ ಅದರ ಕಣ್ಣು ಮುಚ್ಚುದು ಹೇಳಿ ತಿಳಿವದ ..?! ಛೆ ..ಎಲ್ಲ ಎನ್ನ
ಕರ್ಮ ! ಹಣೆ ಬರ ,,ಅಲ್ಲ ಸುಬ್ಬಿ ಅವು ನಿನ್ನ mad ಹೇಳಿ ಕೇಳಿದವು ಗೊಂತಿದ್ದಾ ?
ಸುಬ್ಬಿ :ಅದೆಂತದು ಮೇ ಮೇ
ಹೇಳ್ರೆ ?
(ಅಪ್ಪ ಅಮ್ಮ ದೂರಲ್ಲಿ ನಿಂದು
ನೋಡುತ್ತಾ ಇದ್ದವು )
ಸುಬ್ಬ : ಇಲ್ಲೆಪ್ಪಾ ಇಲ್ಲೆ
ಇನ್ನು ನಿನಗೆ ಆನು ಇಂಗ್ಲೀಷು ಹೇಳಿ ಕೊಡುಲೆ ಎನ್ನಂದ ಎಡಿಯ !ನಿನಗೆ ಆ ಬ್ರಹ್ಮನೇ ಬರಕ್ಕಷ್ಟೇ
..ನಿನ್ನಂತೋವಕ್ಕೆ ಇಂಗ್ಲೀಷು ಹೇಳಿ ಕೊಟ್ಟದಕ್ಕೆ ಮೆಟ್ಟಿಲಿ ಬಡ್ಕೊಳ್ಳಕ್ಕು ಆನು
ಸುಬ್ಬಿ : (ಕೈಲಿ ಇದ್ದ ಮೆಟ್ಟು
ತೋರ್ಸಿ ) ಬಡಿಯಕ್ಕಾ ?
ಅಮ್ಮ : (ಮುಂದೆ ಬಂದು ) ಎಂಥ
ಸುಬ್ಬಿ ನಿನ್ನದು ಅವತಾರ ?ಗೆಂಡಂಗೆ ಬಡಿವಲೆ
ಮೆಟ್ಟು ತೋರ್ಸುತ್ತೆಯ ?ನಾಚಿಕೆ ಅವುತ್ತಿಲ್ಲೆಯ ನಿನಗೆ ?ತಪ್ಪಾತು ಹೇಳು ಹೋಗು !
ಸುಬ್ಬ : ಅದರ ತಪ್ಪಾತು ಬೇಡ
ಏನೂ ಬೇಡ ..ಆನಿನ್ನು ಒಂದು ಕ್ಷಣವು ಇದರೊಟ್ಟಿಂಗೆ ಇರ್ತಿಲ್ಲೆ ,ಆನು ಈಗಲೇ ಮನೆ ಬಿಟ್ಟು
ಹೋವುತ್ತೆ .. (ಕೋಪಲ್ಲಿ ಹೆರ ಹೋಪಲೆ ಹೆರಟ )
(ಸುಬ್ಬಿ
ಕೂಗುತ್ತು)
ಅಪ್ಪ : ನಿಲ್ಲು ಸುಬ್ಬ ನಿಲ್ಲು
..(ಹೆಗಲಿಂಗೆ ಕೈ ಹಾಕಿ ) ಎಂಥ ಸುಬ್ಬ ಇದು
ಮಕ್ಕಳಾಟಿಕೆ ! ಇಷ್ಟು ಸಣ್ಣ ಕಾರಣಕ್ಕೆಲ್ಲ ಕೋಪ
ಮಾಡಿಗೊಂಡು ಮನೆ ಬಿಟ್ಟು ಹೋಪದ ?ಸುಬ್ಬಿ ರಜ್ಜ ಹಠ ಮಾರಿ ಹೇಳುದು ಬಿಟ್ರೆ ಒಳ್ಳೆ ಗುಣದ ಕೂಸು
ಅಲ್ಲದ ?ಇಷ್ಟಕ್ಕೂ ಇಂಗ್ಲೀಷು ಕಲಿಸುಲೆ ಹೆರಟದು ನೀನೇ ಅನ್ನೆ ?ಇಂಗ್ಲೀಷು ಗೊಂತಿಲ್ಲದ್ದ ಅದು
ನಿನ್ನ ನೋಡಿ ಉತ್ತರ ಕೊಟ್ಟತ್ತು..ಏನೋ ರಜ್ಜ ತಪ್ಪಾತು ಅದರಲ್ಲಿ ತಲೆ ಹೋಪಂತಾದ್ದು ಎಂತ ಇದ್ದು ?ಎಷ್ಟಾದರೂ
ಸುಬ್ಬಿ ನಿನಗಾಗಿಯೇ ಹುಟ್ಟಿದ ಕೂಸು ಅಲ್ಲದ ?ಅದಕ್ಕೆ ಈಗ ಇನ್ನೂ 16-17 ವರ್ಷ ಅನ್ನೇ ,ಅಜ್ಜಿಯ ಆಸೆ ತೀರುಸುಲೆ ಬೇಕಾಗಿ
ಕಳುದ ತುಂಬಾ ಸಣ್ಣ ಪ್ರಾಯದ ಅದಕ್ಕೂ ನಿನಗೂ
ಮದುವೆ ಮಾಡಿದ್ದು ಅನ್ನೇ ನಿನಗೂ 25 -26 ವರ್ಷ ,,ಸಣ್ಣವೇ..ಆದರೆ ಅದು ಇನ್ನೂ ಸಣ್ಣ ಅಲ್ಲದ ?
ಅದರ ಸಣ್ಣ ಪ್ರಾಯಲ್ಲಿ ಎಂಗ ಮದುವೆ ಮಾಡಿದ್ದು ಎಂಗಳ ತಪ್ಪು ..ಆದರೆ ಆಗಿ ಆತು ಅಲ್ಲದ ? ಕ್ಷಮಿಸಿ
ಬಿಡು ,ಎಷ್ಟಾದರೂ ಅದು ನಿನ್ನ ಪ್ರೀತಿಯ ಹೆಂಡತಿ ಅಲ್ಲದ ? ಅಲ್ಲಿ ನೋಡು .ಹೇಂಗೆ ಕೂಗುತ್ತಾ
ಇದ್ದು ? ಹೋಗು ಅದರ ಸಮಾಧಾನ ಮಾಡು
ಸುಬ್ಬ : ಎನ್ನದೇ ತಪ್ಪು
ಸುಬ್ಬಿ ಕೂಗಡ .ಇನ್ನು ನಿನ್ನ ಯಾವತ್ತಿಂಗು ಇಂಗ್ಲೀಷು ಬತ್ತಿಲ್ಲೆ ಹೇಳಿ
ಹಂಗುಸುತ್ತಿಲ್ಲೆ,ಬೈತ್ತಿಲ್ಲೆ ,,ಖಂಡಿತಾ ..ಇಂಗ್ಲೀಷು ಭಾಷೆಯ ಭ್ರಮೆ ಬಿಟ್ಟು ಹೋತು ಎನಗೆ
,ಎನ್ನ ಕ್ಷಮಿಸು ಚಿನ್ನ ..ಇನ್ನು ಕೂಗಡ .
ಸುಬ್ಬಿ : ಇಲ್ಲೆ ಎನ್ನದು
ತಪ್ಪು ಇದ್ದು. ನಿಂಗ ತುಂಬಾ ಸರ್ತಿ ಹೇಳಿದರೂ ಇಂಗ್ಲೀಷು ಮಾತಾಡುಲೆ ಕಲಿಸುವ ಕ್ಲಾಸ್ ಗೆ ಹೋಗಿ
ಕಲಿಯದ್ದದು ಎನ್ನ ತಪ್ಪು .ನಾಳೆನ್ದಲೇ ಆನು ಕ್ಲಾಸಿಂಗೆ ಹೋಗಿ ಕಲಿತ್ತೆ...
ಸುಬ್ಬ : ಬೇಡ ಸುಬ್ಬಿ ಎನಗೆ ಈಗ
ಇಂಗ್ಲೀಷಿನ ಭ್ರಮೆ ಪೂರ ಬಿಟ್ಟು ಹೋತು ,ಇಂಗ್ಲೀಷು ಬಾರದ್ದರೆ ಏನೂ ತೊಂದರೆ ಇಲ್ಲೆ , ಅದು ನಾಚಿಕೆ ಹೇಳುವ ಭ್ರಮೆ ಬೇಡ .ಚಂದದ ನಮ್ಮ ಭಾಷೆ
ಕನ್ನಡ ಕಸ್ತೂರಿ ಇಪ್ಪಗ ನಮಗೆ ಇಂಗ್ಲೀಷಿನ ಹಂಗು ನಮಗೆಂತಕೆ?ನಮ್ಮ ಜಗಳ ನೋಡಿ ಅತ್ತೆ ಮಾವ ಎಂತ
ಭಾವಿಸಿದವೋ ಏನ ?
ಸುಬ್ಬಿ : ಎಲ್ಲ ನಿಂಗಳೇ
ಮಾಡಿದ್ದು ..
ಸುಬ್ಬ : ಪುನಃ ಜಗಳ ಸುರು
ಮಾಡಿದೆಯ ?ಜಗಳ ಸಾಕು ಇಲ್ಲಿ ಬಾ .
ಅಪ್ಪ : (ಅಮ್ಮನ ಹತ್ತರೆ ) ; ಅಬ್ಬ
..ಅವು ರಾಜಿ ಆದವು ..ತಪ್ಪು ಅವರದ್ದಲ್ಲ ನಮ್ಮದೇ .ಈಗ ಕಾನೂನೇ ಇದ್ದು 18 ವರ್ಷಕ್ಕೆ ಮೊದಲು
ಮದುವೆ ಮಾಡುಲಾಗ ಹೇಳಿ ,ಇದು ಆರಿಂಗಾದರು ಗೊಂತಾದರೆ ನಮಗೆ ಜೈಲು ಅವುತ್ತು .ಹಿರಿಯರ ಆಸೆ ತೀರ್ಸುಲೆ ಹೇಳಿ ನಾವು ಇದರ ಇಷ್ಟು ಸಣ್ಣ ಪ್ರಾಯಲ್ಲಿ
ಆಡಿ ಕೊಣಿವ ಕಾಲಲ್ಲಿ ಮದುವೆ ಮಾಡ್ರೆ ಹೀಂಗೆ ಆವುತ್ತಿದ.ಒಂದು ಕೆಲಸ ಮಾಡುವ ,ಸುಬ್ಬ ಹೇಂಗೂ ಬಪ್ಪ
ತಿಂಗಳು ಅಮೆರಿಕಕ್ಕೆ ಹೊವುತ್ತ ಅಲ್ಲದ ?ಅವಂಗೆ ಈಗ ಇದರ ಒಟ್ಟಿಂಗೆ ಕರಕೊಂಡು ಹೋಪಲೆ
ಆವುತ್ತಿಲ್ಲೆ ಅಲ್ಲದ ? ಅವ ಬಪ್ಪಗ ಎರಡು ಮೂರು ವರ್ಷ ಅವುತ್ತು,ಅಷ್ಟು ಸಮಯ ಇನ್ನು ಸುಬ್ಬಿ
ಶಾಲೆಗೆ ಹೋಗಿ ಕಲಿಯಲಿ ,ಮುಂದೆದೆ ಅದು ಓದಲಿ,ನಾವು ಮಾಡಿದ ತಪ್ಪಿನ ರಜ್ಜ ಆದರೂ ಸಮ ಮಾಡುವ
ಅಮ್ಮ :ಅಕ್ಕು ಹಾಂಗೆ
ಮಾಡುವ
ಅಪ್ಪ : (ಸಭಿಕರ ಹತ್ತರೆ )..ಎಂಗಳ
ನೋಡಿ ಆದರೂ ಇನ್ನು ಬೇರೆ ಆರೂ
ಕೂಸುಗೊಕ್ಕೆ 18 ವರ್ಷಕ್ಕೆ ಮೊದಲು ಮದುವೆ
ಮಾಡುಲಾಗ ಹೇಳಿ ಅರ್ಥ ಮಾಡಿಗೊಳ್ಳಲಿ ,ಇನ್ನು ನಿಂಗ ಆರೂ ಕೂಡಾ ಎಂಗ ಮಾಡಿದ ತಪ್ಪಿನ ಮಾಡಡಿ ಆತಾ ?
ಶುಭಂ
ಒಂದು ಮನವಿ ..
ಸುಬ್ಬಿ ಇಂಗ್ಲೀಷು ಕಲ್ತದು -1984 ,ಮಹಿಳೆ (ನಾನು )ರಚಿಸಿದ ಮೊದಲ ಹವಿಗನ್ನಡ ನಾಟಕ.ಈ ತಿಂಗಳ ೩೧ ರಂದು ಬಿಡುಗಡೆಯಾಗಲಿದೆ ..
ಈ ನಾಟಕವನ್ನು ೧೯೮೪ರಲ್ಲಿ ನಾನು ರಚಿಸಿದ್ದು ಈಗ ತಿಳಿದು ಬಂದಿರುವ ಪ್ರಕಾರ ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕವಾಗಿದೆ .ಇದು 1984 ರ ಮೊದಲು ಅಥವಾ ಅನಂತರ ಬೇರೆ ಯಾರದಾದರೂ ಹೆಸರಲ್ಲಿ ಹವ್ಯಕ ಕನ್ನಡ ಅಥವಾ ಇತರ ಭಾಷೆಗಳಲ್ಲಿ ಯಥಾವತ್ತಾಗಿ ಪ್ರಕಟವಾಗಿದ್ದುದು ತಮ್ಮ ಗಮನಕ್ಕೆಬಂದರೆ ಕೂಡಲೇ ಒಂದು ವಾರದ ಒಳಗೆ ತಿಳಿಸಬೇಕಾಗಿ ವಿನಂತಿ -ಡಾ.ಲಕ್ಷ್ಮೀ ಜಿ ಪ್ರಸಾದ
ಸುಬ್ಬಿ ಇಂಗ್ಲೀಷು ಕಲ್ತದು -1984 ,ಮಹಿಳೆ (ನಾನು )ರಚಿಸಿದ ಮೊದಲ ಹವಿಗನ್ನಡ ನಾಟಕ.ಈ ತಿಂಗಳ ೩೧ ರಂದು ಬಿಡುಗಡೆಯಾಗಲಿದೆ ..
ಈ ನಾಟಕವನ್ನು ೧೯೮೪ರಲ್ಲಿ ನಾನು ರಚಿಸಿದ್ದು ಈಗ ತಿಳಿದು ಬಂದಿರುವ ಪ್ರಕಾರ ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕವಾಗಿದೆ .ಇದು 1984 ರ ಮೊದಲು ಅಥವಾ ಅನಂತರ ಬೇರೆ ಯಾರದಾದರೂ ಹೆಸರಲ್ಲಿ ಹವ್ಯಕ ಕನ್ನಡ ಅಥವಾ ಇತರ ಭಾಷೆಗಳಲ್ಲಿ ಯಥಾವತ್ತಾಗಿ ಪ್ರಕಟವಾಗಿದ್ದುದು ತಮ್ಮ ಗಮನಕ್ಕೆಬಂದರೆ ಕೂಡಲೇ ಒಂದು ವಾರದ ಒಳಗೆ ತಿಳಿಸಬೇಕಾಗಿ ವಿನಂತಿ -ಡಾ.ಲಕ್ಷ್ಮೀ ಜಿ ಪ್ರಸಾದ
ಸುಬ್ಬಿ ಇಂಗ್ಲೀಷು ಕಲ್ತದು ನಾಟಕ ಪ್ರದರ್ಶನ -1997