ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 428 ಕನ್ನಡ ಕಲ್ಕುಡ - ಡಾ.ಲಕ್ಷ್ಮೀ ಜಿ ಪ್ರಸಾ
ತುಳುನಾಡಿನ ಭೂತಾರಾಧನೆ ಬಹಳ ವಿಶಿಷ್ಟವಾದುದು.ಒಂದೇ ಭೂತಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆರಾಧನೆ ನಡೆಯುತ್ತದೆ. ಹಾಗೆಯೇ ಒಂದೇ ಹೆಸರಿನಲ್ಲಿ ಬೇರೆ ಬೇರೆ ಭೂತಗಳಿಗೂ ಆರಾಧನೆ ಇರುವುದು ನನ್ನ ಕ್ಷೇತ್ರಕಾರ್ಯದಲ್ಲಿ ಅನೇಕೆಡೆಗಳಲ್ಲಿ ಕಂಡುಬಂದಿದೆ.
ಉದಾಹರಣೆಗೆ ಐದು ಪುರುಷ ಭೂತಗಳ ಮಾಹಿತಿ ನನ್ನ ಅಧ್ಯಯನದಲ್ಲಿ ಸಿಕ್ಕಿದೆ.ಕನ್ನಡ ಯಾನೆ ಪುತುಷ ಭೂತ,ಜೋಗಿ ಪುರುಷ,ಗರೊಡಿಯ ಪುರುಷರಾಯ,ಕಾಂಬೋಡಿದ ಪುರ್ಸ ಬೂತ,ಬರಾಯ ಅರಮನೆಯ ಪುರುಷರಾಯ, ಇವೆಲ್ಲವೂ ಒಂದೇ ಹೆಸರನ್ನು ಹೊಂದಿದ್ದರೂ ಬೇರೆ ಬೇರೆ ಶಕ್ತಿಗಳಾಗಿವೆ.ಹಾಗೆಯೇ ಮಂಡೆಕಾರ ಕಲ್ಲುರ್ಟಿ ಮತ್ತು ಕಲ್ಲುರ್ಟಿ ಬೇರೆ ಬೇರೆ ದೈವಗಳಾಗಿವೆ.ಕಾರ್ಕಳದ ಬಾಹುಬಲಿ ವಿಗ್ರಹವನ್ನು ಕೆತ್ತಿದ,ಕಾರ್ಕಳದ ಭೈರವರಸನ ದೌರ್ಜನ್ಯಕ್ಕೆ ತುತ್ತಾಗಿ ಕೈ ಕಾಲುಗಳನ್ನು ಕಳೆದು ಕೊಂಡು ದುರಂತವನ್ನಪ್ಪಿದ ಬೀರು ಕಲ್ಕುಡ ಎಂಬ ಶಿಲ್ಪಿ ದೈವತ್ವ ಪಡೆದು ಕಲ್ಕುಡ ಎಂಬ ದೈವವಾಗಿ ಎಲ್ಲೆಡೆ ಆರಾಧನೆ ಇರುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.
ಆದರೆ ಕಾರ್ಕಳ ಪೇಟೆಯ ಅನಂತ ಪದ್ಮನಾಭ ದೇವಾಲಯದಲ್ಲಿ ಕನ್ನಡ ಕಲ್ಕುಡ ಎಂಬ ಹೆಸರಿನ ದೈವವಿದೆ.ಕಲ್ಕುಡ ಎಂದರೆ ಕಲ್ಲು ಕುಟ್ಟುವ/ ಕೆತ್ತುವಾತ ಎಂದರ್ಥ ,ಶಿಲ್ಪಿಗಳಿಗೆ ತುಳುವಿನಲ್ಲಿ ಕಲ್ಕುಡ ಎನ್ನುತ್ತಾರೆ.
ಕನ್ನಡ ಕಲ್ಕುಡ ಎಂಬ ದೈವ ಮೂಲತಃ ಘಟ್ಟದ ಮೇಲಿನಿಂದ ವಿಜಯ ನಗರದ ಅರಸರು ಕಳುಹಿಸಿಕೊಟ್ಟ ಶಿಲ್ಪಿ ಇರಬೇಕು.ಆತನ ಹೆಸರು ಮರೆಯಾಗಿ ಆತ ಕನ್ನಡಿಗನಾದ್ದರಿಂದ ಆತ ದೈವತ್ವ ಪಡೆದಾಗ ಅವನ ಹೆಸರು ಕನ್ನಡ ಕಲ್ಕುಡ ಎಂದಾಗಿದೆ.
ಹರೀಶ್ ಕುಮಾರ್ ಕಾರ್ಕಳ ಅವರು ಕನ್ನಡ ಕಲ್ಕುಡ ದೈವದ ಬಗ್ಗೆ ಮಾಹಿತಿ ನೀಡಿ ಚಿತ್ರವನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ.
ವಿಜಯ ನಗರದ ಅರಸರು ರಕ್ಕಸ ತಂಗಡಿ ಯುದ್ಧದಲ್ಲಿ ಗೆದ್ದರೆ ಒಂದು ಅನಂತ ಪದ್ಮನಾಭ ದೇವಾಲಯವನ್ನು ಕಟ್ಟಿಸುವುದಾಗಿ ಹರಿಕೆ ಹೇಳಿಕೊಂಡಿದ್ದರು .ಅದಕ್ಕಾಗಿ ವಿಗ್ರಹವನ್ನು ಕೆತ್ತಲು ಓರ್ವ ಶಿಲ್ಪಿಯನ್ನು ಕಾರ್ಕಳದ ನೆಲ್ಲಿಕಾರಿಗೆ ಕಳಹಿಸಿ ವಿಗ್ರಹ ಕೆತ್ತಿಸಿದರು.ನೆಲ್ಲಿಕಾರಿನಲ್ಲಿ ಸಿಗುವ ಬರಹತ್ ಕಲ್ಲುಗಳು ವಿಗ್ರಹ ಕೆತ್ತನೆಗೆ ಬಹಲ ಸೂಕ್ತವಾಗಿವೆ.
ಆದರೆ ರಕ್ಕಸ ತಂಗಡಿ ಯುದ್ಧದಲ್ಲಿ ವಿಜಯ ನಗರದ ಅರಸರಿಗೆ ಸೋಲಾಗುತ್ತದೆ.ಹಾಗಾಗಿ ಆ ವಿಗ್ರಹವನ್ನು ಹರಿಯಪ್ಪನ ಕೆರೆಯಲ್ಲಿ ಅಡಗಿಸಿ ಇಡುತ್ತಾರೆ.
ಮುಂದೆ ಒಂದು ದಿನ ಕಾರಗಕಳಕ್ಕೆ ಶೃಂಗೇರಿಯ ಸ್ವಾಮಿಗಳು ಬರುತ್ತಾರೆ.ಅವರಿಗಾಗಿ ಅಲ್ಲಿ ಇದ್ದ ಬಸದಿಯಲ್ಲಿ ಈ ಅನಂತ ಶಯನನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ.ಅದು ಮುಮದೆ ಅನಂತ ಪದ್ಮನಾಭ ದೆವಾಲಯವೆಮದು ಪ್ರಸಿದ್ಧಿ ಪಡೆಯುತ್ತದೆ ಬಸದಿಯನ್ನು ಮಾರ್ಪಡಿಸಿದ್ದು ತಿಳಿದ ಸ್ವಾಮೀಜಿಗಳು ಅಲ್ಲಿಯೇ ಸಮೀಪದಲ್ಲಿ ಒಂದು ಚತುರ್ಮುಖ ಬಸದಿ ನಿರ್ಮಾಣಮಾಡುವಂತೆ ತಿಳಿಸುತ್ತಾರೆ.
ಇಲ್ಲಿ ಅನಂತ ಶಯನನ ವಿಗ್ರಹವನ್ನು ಕೆತ್ತಿದ ಶಿಲ್ಪಿ ಮರಣಾನಂತರ ಕೂಡ ಅದನ್ನು ಕಾಯುತ್ತಿರುತ್ತಾನೆ.ಅದನ್ನು ಪ್ರತಿಷ್ಠಾಪಿಸಲು ತಂದಾಗ ಅವನು ಕೂಡ ಜೊತೆಯಲ್ಲಿ ಬರುತ್ತಾನೆ.ಅವನಿಗೆ ದೈವಿಕ ನೆಲೆಯಲ್ಲಿ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.
ಇಲ್ಲಿ ಪ್ರತಿವರ್ಷ ರಾಮನವಮಿಯಂದು ಸಣ್ಣ ಜಾತ್ರೆ ಅದರ ಮರುದಿನ ದೊಡ್ಡ ಜಾತ್ರೆ ನಡೆಯುತ್ತದೆ.
ಅದರ ಮರುದಿನ ಏಕಾದಶಿಯಂದು ಕನ್ನಡ ಕಲ್ಕುಡ ಮತ್ತು ಕುಕ್ಕಿನಂತಾಯ ದೈವಗಳಿಗೆ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.
ಇಲ್ಲಿ ಕನ್ನಡ ಕಲ್ಕುಡ ಮೂಕ ಎಮದರೆ ಮಾತನಾಡದೆ ಇರುವ ದೈವ.ಇದರ ಬಗ್ಗೆ ಕೂಡ ಒಂದು ಐತಿಹ್ಯ ಇತುವ ಬಗ್ಗೆ ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಅಲ್ಲಿ ಸಮೀಪದಲ್ಲಿ ಪದ್ಮಾವತಿ ದೇವಾಲಯವನ್ನು ನಿರ್ಮಾಣ ಮಾಡುವಾಗ ಕನ್ನಡ ಕಲ್ಕುಡ ದೈವ ತುಂಬಾ ಕಾಟ ಕೊಡುತ್ತಾನೆಆಗ ಅವರು ಮಂತ್ರವಾದಿಗಳನ್ನು ಕರೆಸಿ ದಿಗ್ಭಂಧನ ಮಾಡಿ ಕನ್ನಡ ಕಲ್ಕುಡ ಬಾಯಿತೆರೆಯದಂತೆ ಮಾಡುತ್ತಾರೆ
ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಿದೆ.
ಫೋಟೋ ಮತ್ತು ಮಾಹಿತಿ ನೀಡಿದ ಹರೀಶ್ ಕುಮಾರ್ ಕಾರ್ಕಳ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು
- ಡಾ.ಲಕ್ಷ್ಮೀ ಜಿ ಪ್ರಸಾದ