Saturday, 20 June 2020

ಸಾವಿರದೊಂದು ಗುರಿಯನ್ನು: ತುಳುನಾಡ ದೈವಗಳು : 472-475 ಮಾವಿಲತಿ ಮಾಪಿಳ್ಳೆ ಮತ್ತು ಚೋಟಿಯನ್ ಅಂಬು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ


ಮಾಪಿಳ್ಳೆ ,ಮಾವಿಲತಿ ಮತ್ತು ಚೋಟು ಅಂಬು ದೈವಗಳು
ಈ ದೈವಗಳಿಗೆ   ಕೇರಳ ಕಾಸರಗೋಡಿನ ಮಲೆಯಾಳ ಪರಿಸರದಲ್ಲಿ ಆರಾಧನೆ ಇದೆ.
ಅಯರ್ ನಾಡಿ‌ನ ಅನ್ನ ಪೂರ್ಣೇಶ್ವರಿ ಅಮ್ಮನಿಗೆ ಕೋಲತ್ತನಾಡು ಹೋಗಬೇಕು ಎಂದು ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ‌.ಹಾಗೆ ಅವರು ಹಡಗು ಸಿದ್ದ ಪಡಿಸಿ ತನ್ನ ಕೊಂಕಣಿ, ಮಾವಿಲ ಮೊದಲಾದ ಸಾವಿರ ಮಕ್ಕಳನ್ನು ಕೂಡಿಕೊಂಡು ಹಡಗಿನಲ್ಲಿ ಪ್ರಯಾಣ ಮಾಡುತ್ತಾರೆ‌‌.ಹಡಗು ಬಿರುಗಾಳಿಗೆ ಸಿಕ್ಕಿ ಎಲ್ಲರೂ ಚೆಲ್ಲಾಪಿಲ್ಲಿ ಆಗಿ ಹರಡಿ ಹೋಗುತ್ತಾರೆ‌
ಇವರಲ್ಲಿ ಕರಕತಿರಿ ಚೋಟಿಯಾನ ಅಂಬು ತನ್ನ ಮಡದಿ ಜೊತೆಗೆ ಪ್ರಯಾಣ ಮಾಡುತ್ತಾ ದುರ್ಗಮ  ಪರ್ವತ ಪ್ರದೇಶಕ್ಕೆ ಬರುತ್ತಾನೆ‌.ಅಲ್ಲಿ ಮಾವಿಲ ಕಣ್ಣನ್ನ ಪರಿಚಯವಾಗಿ ಅವನು ಕೆಲಸ ಮಾಡುತ್ತಿದ್ದ ದೈವತಾರ್ ತಂಬುರಾಟ್ಟಿಯ ಬಳಿ ಕೆಲಸ ಮಾಡುತ್ತಾನೆ‌
ಇವರಿಬ್ಬರಿಗೂ ತಂಬುರಾಟ್ಟಿ ವೇತನ ಕೊಡುವುದಿಲ್ಲ.
ಆಗ ಅವರಿಬ್ಬರೂ ಅಲ್ಲಿ ಕೆಲಸ ಬಿಟ್ಟು ಮೀನು ಹಿಡಿದಯ ಮಾರಾಟ ಮಾಡಿ ಬದುಕುತ್ತಾರೆ.
ಒಂದು ದಿನ ಚೋಟಿಯನ್ ಅಂಬು ಹಿಡಿದ ಮೀನನ್ನು ಮಾರಲು ಇಬ್ಬರೂ ಹೋಗುತ್ತಾರೆ ಬರುವಾಗ ಮದ್ಯಪಾನ ಮಾಡಿ ಬೀಳುತ್ತಾರೆ‌.ಪರಸ್ಪರ ಜಗಳ ಮಾಡುತ್ತಾರೆ‌.ಅವರ ಹೊಡೆದಾಟದಲ್ಲಿ ಚೋಟಿಯನ್ ಅಂಬು ಸಾಯ್ತಾನೆ‌‌.ನಂತರ ಮಾವಿಲ ಕಣ್ಣನ್ ಚೋಟಿಯನ್ ಅಂಬುವಿನ‌ ಮಡದಿಯನ್ನು ಮದುವೆ ಆಗುತ್ತಾನೆ.
ಒಂದು ದಿನ ಕಣ್ಣನ್ ಹೊರಗೆ ಹೋಗಿರುವಾಗ ತೆಂಗಿನ ಕಾಯಿ ವ್ಯಾಪಾರಿ ಮಮ್ಮು ಮಾಪಿಳ್ಳ ಎಂಬವನು ಬಂದು ಅವನ ಹೆಂಡತಿಯನ್ನು ಮರುಳು ಮಾಡುತ್ತಾನೆ‌.ನಂತರ ರಾತ್ರಿ ಬರಲೇ ಎಂದು ಕೇಳಿದಾಗ ಅವಳು ಒಪ್ಪುತ್ತಾಳೆ‌
ರಾತ್ರಿ ಅವರು ಜೊತೆಯಲ್ಲಿ ಮಲಗಿರುವ ಸಮಯದಲ್ಲಿ ದೈವ ಕಣ್ಣನ್ ನ ಕನಸಿನಲ್ಲಿ ಬಂದು ಈ ವಿಚಾರ ತಿಳಿಸುತ್ತದೆ‌
ಮನೆಗೆ ಬಂದು ಮಂತ್ರ ಶಕ್ತಿಯಿಂದ ಬಾಗಿಲು ತೆರದು ಒಳಗೆ ಹೋಗಿ ಜೊತೆಯಲ್ಲಿ ಮಲಗಿರುವ ತನ್ನ ಹೆಂಡತಿ ಮತ್ತು ಮಮ್ಮು ಮಾಪಿಳ್ಳೆ ಯನ್ನು ಕೊಲ್ಲುತ್ತಾನೆ‌
ನಂತರ ಅವರಿಬ್ಬರೂ ಉಗ್ರ ಶಕ್ತಿಗಳಾಗಿ ಜನರ ಮೈಮೇಲೆ ಬರುತ್ತಾರೆ.ನಂತರ ಮಾಪಿಳ್ಳೆ, ಮಾವಿಲತಿ ಮತ್ತು ಚೋಟಿಯನ್ ಅಂಬು ಮೂವರಿಗೂ ಕೋಲ ಕೊಟ್ಟು ಶಾಂತವಾಗಿಸಿ ಆರಾಧನೆ ಮಾಡುತ್ತಾರೆ‌.
ಆಧಾರ : Thayyam: JJ Pallath 1995

Wednesday, 17 June 2020

ಚೀ‌ನೀ ಭೂತಗಳು- ಡಾ.ಲಕ್ಷ್ಮೀ ಜಿ ಪ್ರಸಾದ

ಚೀನೀ ಭೂತಗಳು :© ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನಲ್ಲಿ ದೈವತ್ವ ಪಡೆದವರೆಲ್ಲ ಸದ್ಧರ್ಮಿಗಳು ಸಾತ್ವಿಕರೆಂದು ಹೇಳುವಂತಿಲ್ಲ" ಎಂದು ನನ್ನ ತುಂಡು ಭೂತಗಳು - ಒಂದು ಅಧ್ಯಯನ ಕೃತಿಗೆ ಬರೆದ ಮುನ್ನುಡಿಯಲ್ಲಿ ಡಾ.ಅಮೃತ ಸೋಮೇಶ್ವರ ಅವರು ಹೇಳಿದ್ದಾರೆ .

ಕೆಲವರು ದ್ರೋಹ ಮಾಡಿ  ದೈವಗಳ ಆಗ್ರಹಕ್ಕೆ ತುತ್ತಾಗಿ ಮಾಯವಾಗಿ ದೈವಗಳಾಗಿದ್ದಾರೆ‌
ಚೀನೀ ಭೂತಗಳು  ವಾಸ್ತವದಲ್ಲಿ ಅಂದು ಕೂಡ ಉಂಡ ಮನೆಗೆ ದ್ರೋಹ ವೆಸಗಿದವರೇ ಆಗಿದ್ದಾರೆ‌ ಈ ದೈವಗಳ  ಕುರಿತಾಗಿ ಇರುವ ಐತಿಹ್ಯ ಹೀಗಿದೆ:
ಒಂದು ಆಷಾಢ ತಿಂಗಳಿನಲ್ಲಿ ಒಂದು ದಿನ ಒಂದು ಚೀನೀ ಹಡಗು ದಾರಿ ತಪ್ಪಿ ಬಸರೂರಿನ ಕಡಲ ತೀರಕ್ಕೆ ಬರುತ್ತದೆ.ಅವರಲ್ಲಿ ಆಹಾರ ಸಾಮಗ್ರಿ ಇಂದನಗಳು ಮುಗಿದಿರುತ್ತದೆ.ಹಾಗಾಗಿ ಸಹಾಯ ಕೇಳಿಕೊಂಡು ಅವರು ಊರೊಳಗೆ ಬರ್ತಾರೆ. ಬಸ್ರೂರಿನ ಜನರು ಅವರಿಗೆ ಊಟ ತಿಂಡಿ ಅಹಾರ ನಿಡಿ ಸತ್ಕರಿಸುತ್ತಾರೆ.ನಂತರ ಸರಿಯಾದ ದಾರಿ ತಿಳಿಸುತ್ತಾರೆ. ಮುಂದಿನ ಪಯಣಕ್ಕೆ ಬೇಕಾದಷ್ಟು ಇಂದನ  ಅಹಾರ ಸಾಮಗ್ರಿಗಳನ್ನು ಕೂಡ ಕೊಡುತ್ತಾರೆ‌.ಹಿಂದಿರುಗಿ ಹಡಗಿನೆಡೆಗೆ ಹೋಗುವ ಮಾರ್ಗದಲ್ಲಿ ತುಳುವರ ಆರಾಧ್ಯ ದೈವ ಪಂಜುರ್ಲಿ ಯ ಕೋಲ ಆಗುತ್ತಿರುತ್ತದೆ..ಆಗ ಐದು ಜನ ಚೀನೀ ವ್ಯಕ್ತಿಗಳು ಗರೊಡಿಯಲ್ಲಿ ಆರಾಧಿಸಲ್ಪಡುವ ಪಂಜುರ್ಲಿ ದೈವವನ್ನು ಅಪಹಾಸ್ಯ ಮಾಡಿ ನಗಾಡುತ್ತಾರೆ.ಉಂಡ ಮನೆಗೆ ದ್ರೋಹ ಮಾಡುತ್ತಾರೆ‌ ಆಗ ಕೋಪಗೊಂಡ ದೈವ ಪಂಜುರ್ಲಿ ಅವರನ್ನು ರಕ್ತಕಾರಿ ಸಾಯುವಂತೆ ಮಾಡುತ್ತದೆ.ನಂತರ ಅವರ ಮನೆ ಮಂದಿ ಪಂಜುರ್ಲಿ ದೈವದಲ್ಲಿ ಕ್ಷಮೆ ಕೇಳುತ್ತಾರೆ‌.ನಮ್ಮ ಮಕ್ಕಳಿಗೆ ನೆಲೆ ಇಲ್ಲದಾಯಿತು ಎಂದು ಅಳುತ್ತಾರೆ.ಆಗ ಪಂಜುರ್ಲಿ ದೈವ ಅವರಿಗೆ ಅಭಯ ನೀಡಿ,ನಿಮ್ಮ ಮಕ್ಕಳಿಗೆ ನನ್ನ ಜೊತೆಯಲ್ಲಿ ನೆಲೆ ಕೊಡಿತ್ತೇನೆ ಎಂದು ಹೇಳಿ ಆ ಐದು ಚೀನೀಯರನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ .ದ್ರೋಹವೆಸಗಿದ ಚೀನೀ ವ್ಯಕ್ತಿಗಳ ಹಾಗೂ ಸ್ಥಳೀಯರ ನಡುವೆ ಸಂಘರ್ಷ ನಡೆದು ಚೀನೀ ವ್ಯಕ್ತಿಗಳು ದುರಂತಕ್ಕೊಳಗಾಗಿ ಕಾಲಾಂತರದಲ್ಲಿ ದೈವತ್ವಕ್ಕೇರಿ ಆರಾಧನೆಯನ್ನು ಹೊಂದಿರುವ ಸಾಧ್ಯತೆ ಇದೆ.
ಈ ಬಗ್ಗೆ ಪರಶುರಾಮ ಕುಲಕರ್ಣಿಯವರು ಚೀನಿ ಭೂತಗಳು;
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಒಂದೇ ಆಗಿದ್ದ ಸಂದರ್ಭದಲ್ಲಿ, ಬ್ರಿಟೀಶ ಆಡಳಿತ ಪ್ರಾರಂಭದ ಅವಧಿಯಲ್ಲಿ, ಚೀನಾ ದೇಶದಿಂದ ‘ಗಡಿಪಾರು ಶಿಕ್ಷೆ’
ವಿಧಿಸಲ್ಪಟ್ಟ  ಐದು ಜನ ಚೀನೀಯರನ್ನು , ಇಲ್ಲಿನ ಕರಾವಳಿಯಲ್ಲಿ ಇಳಿಸಿ ಹಡಗು  ಹೋಗುತ್ತದೆ. ಅಲ್ಲಿ ಮಾಡಿದ ಅಪರಾಧ, , ಅವರು ಬದುಕಲಿಕ್ಕಾಗಿ ಇಲ್ಲಿಯೂ ಅಪರಾಧ ಮಾಡಿ ಶಿಕ್ಷೆಗೆ ಒಳಗಾಗಿರಬಹುದು. ಆದರೆ ‘ನಿರ್ಗತಿಕ”ರಾಗಿದ್ದವರು ‘ಸತ್ತು’ ದೆವ್ವವಾಗಿ ಕಾಡಬಾರದೆನ್ನುವ ಜನಸಮುದಾಯದ ವಿಶ್ವಾಸ, ಆ ಐದೂ ಜನರಿಗೆ “ಭೂತ’ಗಳನ್ನಾಗಿಸಿರಬೇಕು. ಸೂರ್ಯನಾಥ ಕಾಮತರು ಸಂಪಾದಿಸಿದ ‘  ಉತ್ತರ ಕನ್ನಡ ಗೆಝೆಟಯೀಯರ” ಗಮನಿಸಿ.
ಅದೇ ರೀತಿಯಲ್ಲಿ ಕುಮಟಾದ (ಗುಡಿಗಾರ ಗಲ್ಲಿಯ)ಭೂಮಿತಾಯಿ ದೇವಸ್ಥಾನದಲ್ಲಿಯೂ ಓರ್ವ ಚೀನೀ ಹೆಸರಿನ ಶಿಲಾಸ್ಥಾನವೊಂದಿದೆ. ಅದಕ್ಕೂ ಉಪದೇವತೆಗಳ ಹಂತದಲ್ಲಿ ಆರಾಧನೆ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ

 ಈ ಬಗ್ಗೆ ಅಧ್ಯಯನವಾಗ ಬೇಕಾಗಿದೆ.

ಉಡುಪಿ ಜಿಲ್ಲೆಯ ಬಸ್ರೂರಿನಲ್ಲಿರುವ ಗರೊಡಿಯಲ್ಲಿ ಐದು ಚೀನೀ ಭೂತಗಳಿಗೆ ಆರಾಧನೆ ಇದೆ ಇವರ ಮರದ ಉರುಗಳು ಕೂಡ ಇಲ್ಲಿ ಇವೆ. "ಇವು ಚೀನೀಯರ ಹಾಗೆ ವಿಶಿಷ್ಟವಾದ ಟೋಪಿಯನ್ನು ಧರಿಸಿದ ಮೂರ್ತಿಗಳು .ಈಗ ಇವು ಅಲ್ಲಿನ ಶಾರದಾ ಕಾಲೇಜಿನಲ್ಲಿ ಇವೆ "ಎಂದು ಕನರಾಡಿ ವಾದಿರಾಜ ಭಟ್ ಹೇಳಿದ್ದಾರೆ.ಅದರೆ ನಾನು ನಂತರ ವಿಚಾರಿಸಿದಾಗ ಅವು ಎಲ್ಲಿವೆ ಎಂದು ಪತ್ತೆಯಾಗಲಿಲ್ಲ.
ಬಸರೂರು ಗರೊಡಿಯಲ್ಲಿ ಐದು ಸ್ತ್ರೀ ರೂಪಿ ದೈವಗಳಿಗೆ ಆರಾಧನೆ ಇದೆ. ಅವರಿಗೆ ಚಿನಿಕಾರ ದೈವಗಳೆಂದು ಕರೆಯುತ್ತಾರೆ.    ಚೀನಿಕಾರ ದೈವ ಅಥವಾ ಚೀನೀ ಬೂತಗಳು ಎಂದು ಇವರನ್ನು ಕರೆದು  ದೀಪ ನೀರು ಇಟ್ಟು ಸಾಂಕೇತಿಕವಾಗಿ ಉಪದೈವಗಳ ನೆಲೆಯಲ್ಲಿ  ಆರಾಧನೆ ಮಾಡುತ್ತಾರೆ 
copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ

ಚೀನಿ ಭೂತಗಳ ಬಗ್ಗೆ ಪ್ರೊ |ಕನರಾಡಿ ವಾದಿರಾಜ  ಭಟ್ಟರು ಮಾಹಿತಿ ನೀಡಿದ್ದಾರೆ, ಚಿನಿಕಾರ ದೈವಗಳ ಚಿತ್ರ ಒದಗಿಸಿದ ಮಹೇಶ್ ಬೋಳೂರು ಅವರಿಗೆ ,ಮಾಹಿತಿ ನೀಡಿದ ವಾದಿರಾಜ ಭಟ್ ಅವರಿಗೆ ಧನ್ಯವಾದಗಳು

Friday, 6 March 2020

ಸಾವಿರದೊಂದು ಗುರಿಯೆಡೆಗೆ: ತುಳು ನಾಡ ದೈವಗಳು: 471- ನಾಡು ಬೈದ್ಯ - ಡಾ.ಲಕ್ಷ್ಮೀ ಜಿ ಪ್ರಸಾದ

ದೇವಾಲಯವನ್ನು ಕಟ್ಟಿಸಿದವರು, ಪ್ರಧಾನ ದೈವಗಳ ಆರಾಧನೆಯನ್ನು ಆರಂಭ ಮಾಡಿದವರಲ್ಲಿ ಅನೇಕರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ವಿಚಾರ ತುಳು ನಾಡಿನಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.ಬದಿಯಡ್ಕ ಸೂರಂಬೈಲು ಸಮೀಪದ ಕಾರಿಂಜೇಶ್ವರ ದೇವಸ್ಥಾನ ಕಟ್ಟಿಸಿದ ಬ್ರಾಹ್ಮಣ ಅಲ್ಲಿ ಕಾರಿಂಜೆತ್ತಾಯ ದೈವವಾಗಿ ಆರಾಧನೆ ಪಡೆಯುತ್ತಾನೆ‌
ಹಿರಿಯಡ್ಕದಲ್ಲಿ ವೀರ ಭದ್ರನನ್ನು ಪ್ರತಿಷ್ಠಾಪನೆ ಮಾಡಿದ ಅಡ್ಕತ್ತಸಯ ಎಂಬ ಬ್ರಾಹ್ಮಣ ಅಡ್ಕತ್ತಾಯ ದೈವ ಆಗಿದ್ದಾನೆ‌
ಸುಜೀರ್ ನಲ್ಲಿ ವೈದ್ಯ ನಾಥ ದೈವ ಆರಾಧನೆ ಆರಂಭಿಸಿದ ಜಾನು ಬೈದ್ಯ ಪ್ರಧಾನ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾನೆ
ಹಾಗೆಯೇ ಕೊಡಮಂದಾಯ ದೈವವನ್ನು ತಂದು ಆರಾಧನೆ ಮಾಡಿದ ನಾಡು ಬೈದ್ಯ ಎಂಬವರು ಕೂಡ ದೈವತ್ವ ಪಡೆದು ಆರಾಧನೆ ಪಡೆಯುವ ಬಗ್ಗೆ ಯೋಗೇಶ ಅಂಚನ್ ಅವರು ಮಾಹಿತಿ ನೀಡಿದ್ದಾರೆ‌
ಬಂಟ್ವಾಳ ತಾಲೂಕಿನ ಕಾರೆಬೆಟ್ಡು ಜೈನರ ಗುತ್ತಿನ ಮನೆಯಲ್ಲಿ
ಈ ದೈವದ ಮರದ ಮೂರ್ತಿ ಇದೆ.ಇಲ್ಲಿ ಕೊಡಮಂದಾಯ ಮತ್ತು ಪಂಜುರ್ಲಿ ಬೂತಗಳಿಗೆ ಆರಾಧನೆ ಇದೆ.ಇವರ ಜೊತೆಯಲ್ಲಿ ನಾಡು ಬೈದ್ಯನಿಗೆ ಕೂಡ ಸಾಂಕೇತಿಕವಾಗಿ ಆರಾಧನೆ ನಡೆಯುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಯೋಗೇಶ್ ಅಂಚನ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಗಳು

Saturday, 29 February 2020

ಸಾವಿರದೊಂದು ಗುರಿಯೆಡೆಗೆ ತುಳು ನಾಡ ದೈವಗಳು : 470 ಕೋಳೆಯಾರ ಮಾಮ - ಡಾ.ಲಕ್ಷ್ಮೀ ಜಿ ಪ್ರಸಾದ್



ಕೋಳೆ/ಳಿಯಾರ ಮಾಮ

ಕೋಳೆ/ಳಿಯಾರ ಮಾಮ
 ಒಂದು ಅಪರೂಪದ ದೈವ,ತುಳು ನಾಡಿನ ಹೆಚ್ಚಿನ ದೈವಗಳು ಈ ಹಿಂದೆ ಮಾನವರಾಗಿದ್ದವರೇ ಆಗಿದ್ದಾರೆ.ಯಾವುದಾದರೂ ಕಾರಣಕ್ಕೆ  ದುರಂತವನ್ನಪ್ಪಿ ದೈವತ್ವ ಪಡೆದವರು ಅನೇಕರು ಇದ್ದಾರೆ.ತುಳು ನಾಡಿನಲ್ಲಿ ಯಾರಿಗೆ ಯಾಕೆ ಹೇಗೆ ದೈವತ್ವ ಸಿಗುತ್ತದೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ‌.ಆದರೂ ಅನೇಕರು  ಪ್ರಧಾನ ದೈವಗಳ ಅನುಗ್ರಹ ಅಥವಾ ಆಗ್ರಹಕ್ಕೆ ತುತ್ತಾಗಿ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ. ಅಕ್ಕಚ್ಚು,ಆಲಿ ಭೂತ,ದೆವರ ಪೂಜಾರಿ ಪಂಜುರ್ಲಿ ,ಬ್ರಾಣ ಭೂತ ಮೊದಲಾದವರು ಹೀಗೆ ದೈವತ್ವವನ್ನು ಪಡೆದವರು‌.
ಇಲ್ಲಿ ದೈವತ್ವ ಪಡೆದವರೆಲ್ಲ ತುಳುನಾಡಿನವರೇ ಎಂಬಂತಿಲ್ಲ. ಕನ್ನಡ ಬೀರ,ಕನ್ನಡ ಭೂತ, ಬೈಸು ನಾಯಕ,ಬಚ್ಚ ನಾಯಕ ಮೊದಲಾದವರು ಘಟ್ಟದ ಮೇಲಿನಿಂದ ಇಳಿದು ಬಂದು ತುಳುನಾಡಿನಲ್ಲಿ ಕಾರಣಾಂತರಗಳಿಂದ ದೈವತ್ವ ಪಡೆದವರಾಗಿದ್ದಾರೆ.ಇದಕ್ಕೆ ದೇಶ ರಾಜ್ಯಗಳ ಗಡಿ ಕೂಡ ಇಲ್ಲ.ಅರಬ್ ದೇಶದಿಂದ ಬಂದ ಖರ್ಜೂರ ವ್ಯಾಪಾರಿ ಮಂಗಳೂರು ಉರ್ವ ಚಿಲಿಂಬಿಯಲ್ಲಿ ಅರಬ್ಬಿ ಭೂತವಾಗಿದ್ದಾನೆ.ಬಸ್ರೂರಿನಲ್ಲಿ ಐದು ಚೀನೀ ಭೂತಗಳಿವೆ.
ಅಂತೆಯೇ ಸಾಸ್ತಾನ ಕೋಡಿತಲೆ ಗ್ರಾಮದಲ್ಲಿ ಕೋಳೆ/ಳಿಯಾರ ಎಂಬ ದೈವ ಇದೆ.ಇಲ್ಲಿ ಹಾಯ್ಗುಳಿ‌ಪ್ರಧಾನ ದೈವ.ಪ್ರಧಾನ ದೈವ ಹಾಯ್ಗುಳಿಯ ಸೇರಿಗೆ ದೈವವಾಗಿ ಕೋಳೆಯಾರ/ ಕೋಳೆಯಾರ ಮಾಮ ಎಂಬ ದೈವಕ್ಕೆ ಆರಾಧನೆ ಇದೆ.ಇಲ್ಲಿನ ಅರ್ಚಕರಾದ ಕೊರಗ ಪೂಜಾರಿಯವರು ಈ ಬಗ್ಗೆ ಮಾಹಿತಿ ನೀಡಿದ್ದು ಶ್ರೀ ಚಂದ್ರ ಶೇಖರ ನಾವಡ ಇದನ್ನು ರೆಕಾರ್ಡ್ ಮಾಡಿ ಯು ಟ್ಯೂಬ್ ನಲ್ಲಿ ಹಾಕಿದ್ದಾರೆ.
ಕೋಳೆಯರ ಎಂಬುದು ಮಹಾರಾಷ್ಟ್ರದ ಒಂದು ಮೀನುಗಾರರ ಸಮುದಾಯ.ಇವರನ್ನು ಕೋಳಿಯವರ ಕೋಳೆಯರರು ಎಂದು ಕರೆಯುತ್ತಾರೆ. ಇವರು ಆರ್ಥಿಕವಾಗಿ ಸಾಕಷ್ಟು ಸದೃಢರಾದವರು‌.
ಮಹಾರಾಷ್ಟ್ರ ದಿಂದ  ಕೋಳೆಯರ ಸಮುದಾಯದ ಓರ್ವ ಮಾಂತ್ರಿಕ ಶಕ್ತಿ ಇರುವ ವ್ಯಕ್ತಿ  ಕುಂದಾಪುರ ಕೋಡಿ ತಲೆ ಸಮೀಪದ ಹಂಗಾರಕಟ್ಡೆಯ ಬಂದರಿಗೆ ಬರುತ್ತಾನೆ.ಅವನು ಕೋಡಿತಲೆಯ ಹಾಯ್ಗುಳಿ ದೈವದ ಬಗ್ಗೆ ಕೇಳಿರುತ್ತಾನೆ..ಇಂತಹ ದೈವ ತಮ್ಮ ಊರಿನಲ್ಲಿ ಇದ್ದರೆ ಒಳ್ಳೆಯದೆಂದು ಭಾವಿಸಿ ತನ್ನ ಮಂತ್ರ ಶಕ್ತಿಯಿಂದ ಹಾಯ್ಗುಳಿಯನ್ನು ಕರೆದೊಯ್ಯಬೇಕೆಂದು ಯೋಚಿಸುತ್ತಾನೆ.
.ಇತ್ತ ಹಾಯ್ಗುಳಿ ದೈವವು ಇಂತಹ ಮಾಂತ್ರಿಕ ಶಕ್ತಿ ಇರುವ ಬಂಟ ತನಗಿದ್ದರೆ ಇನ್ನೂ ಒಳ್ಳೆಯದೆಂದು ಆತನನ್ನು ಇಲ್ಲಿಗೆ ಕರೆತರಲು ಯೋಚಿಸುತ್ತದೆ‌.
ಕೋಳೆಯಾರ ಸಮುದಾಯದ ವ್ಯಕ್ತಿ  ಬಂದರಿನಿಂದ ಅಳಿವೆ ಮೂಲಕ ಒಳಗೆ ಬರಲು ದೋಣಿಗೆ ಹಾಯಿ ಕಟ್ಟುತ್ತಾನೆ.ಆಗ ಅಯ ತಪ್ಪಿ ಕೆಳಗೆ ಹಡಗಿಗೆ ಬೀಳುತ್ತಾನೆ.ಅವನ ತಲೆ ತುಂಡಾಗಿ ರುಂಡ ಮುಂಡ ಬೇರೆಯಾಗಿ ಬೀಳುತ್ತಾನೆ. ಆಗ ಅವನನ್ನು ಕರೆತಂದು ಹಾಯ್ಗುಳಿ ದೈವವು ತನ್ನ ಬಂಟನಾಗಿ ಕೋಡಿ ತಲೆ ಗ್ರಾಮದಲ್ಲಿ ತನ್ನ ಜೊತೆಯಲ್ಲಿ ನೆಲೆ ಗೊಳಿಸುತ್ತದೆ.
ಆತ ಮಹಾರಾಷ್ಟ್ರ ದ  ಕೋಳೆಯಾರ ಸಮುದಾಯದ ವ್ಯಕ್ತಿ ಆದ ಕಾರಣ ಆತನನ್ನು ಅದೇ ಹೆಸರಿನಲ್ಲಿ ಆರಾಧನೆ ಮಾಡುತ್ತಾರೆ.
ಆತ ಕೈಯಲ್ಲಿ ಒಂದು ಕೋಳಿಯನ್ನು ಹಿಡಿದಿರುತ್ತಾನೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಯು ಟ್ಯೂಬ್ ನಲ್ಲಿ ಹಾಕಿದ ಚಂದ್ರಶೇಖರ ನಾವಡ ಮಾಹಿತಿ ನೀಡಿದ ಕೊರಗ  ಪೂಜಾರಿ ಮತ್ತು ಯು ಟ್ಯೂಬ್ ಲಿಂಕ್ ನೀಡಿ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ  ಪ್ರಸನ್ನ ಪಿ ಪೂಜಾರಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು
ಯು ಟ್ಯೂಬ್ ನಲ್ಲಿ ನೋಡಿರಿ
https://youtu.be/CVwJ7mgMeFQ

Friday, 21 February 2020

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 469 ದೇವರ ಪೂಜಾರಿ ಪಂಜುರ್ಲಿ

ತುಳುವರ ಭೂತಾರಾಧನೆ ಕೇವಲ ತುಳುನಾಡಿಗೆ ಸೀಮಿತವಲ್ಲ.ಚಿಕ್ಕಮಗಳೂರಿನ ಹಳ್ಳಿ ಬೈಲು ಕೊಪ್ಪ ಸಮೀಪ ಸುಮಾರು ಇನ್ನೂರು ವರ್ಷದ ಹಿಂದಿನ ಸಾನದ ಮನೆ ಇದೆ‌.ಭೂತಸ್ಥಾನದ ಮನೆ ಎಂಬುದೇ ಸಾನದ ಮನೆ ಎಂದಾಗಿರುತ್ತದೆ‌‌.ಈ ಮನೆಯ ಯುವಕರಾದ ರೂಪೇಶ್ ಪೂಜಾರಿಯವರು ಇಲ್ಲಿ ಆರಾಧನೆ ಆಗುವ ಒಂದು ಅಪರೂಪದ ದೈವದ ಬಗ್ಗೆ ತಿಳಿಸಿದ್ದಾರೆ.
ಇಲ್ಲಿ ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನ ಒಂದು ದೈವಕ್ಕೆ ಆರಾಧನೆ ಇದೆ.ಈ ದೈವ ಪಂಜುರ್ಲಿ ದೈವವಲ್ಲ.ಪಂಜುರ್ಲಿ ದೈವದ ಸೇರಿಗೆಗೆ ಸಂದ ಬ್ರಾಹ್ಮಣ.
ಆ ಸಾನದ ಮನೆಯ ಪಂಜುರ್ಲಿ ದೈವವನ್ನು ಓರ್ವ ಬ್ರಾಹ್ಮಣ ಅರ್ಚಕರು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ‌.ಕಾಲಾಂತರದಲ್ಲಿ ಅವರು ಮರಣವನ್ನಪ್ಪಿದ ನಂತರ ದೈವತ್ವ ಪಡೆದು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾರೆ.
ಅವರು ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾರೆ.
ಈ ದೈವಕ್ಕೆ ಸಸ್ಯಾಹಾರವನ್ನು ಎಡೆ ಇಡುತ್ತಾರೆ‌.ಇದು ಈ ದೈವದ ಬ್ರಾಹ್ಮಣ ಮೂಲವನ್ನು ಸೂಚಿಸುತ್ತದೆ.
ಮಾಹಿತಿ ನೀಡಿದ ರೂಪೇಶ್ ಅವರಿಗೆ ಕೃತಜ್ಞತೆಗಳು.

Thursday, 13 February 2020

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು - 464-465 ಕಲಿಚ್ಚಿ ಮತ್ತು ಕಲ್ಲನ್ ತೆಯ್ಯಂ

ಇದು ನಾಚಿಕೆ ತೆಯ್ಯಂ ಅಲ್ಲ..ಸುಳ್ಯ ಸುದ್ದಿ ಯಲ್ಲಿ  ತಪ್ಪಾಗಿ ಹಾಕಿದ್ದಾರೆ.

ಇದು ಕಲಿಚ್ಚಿ ಎಂಬ ತೆಯ್ಯಂ, ಕಾಲನ್ ಮತ್ತು ಕಾಲಿಚ್ಚಿ ಅವಳಿಗಳು,ಯಾವುದೋ ಕಾರಣದಿಂದ ಅವರಿಗೆ ಪರಸ್ಪರ ಪ್ರೇಮ ಉಂಟಾಗುತ್ತದೆ .ವಿವಾಹವಾಗಿ ಒಂದು ಮಗು ಕೂಡ ಹುಟ್ಡುತ್ತದೆ.ವಿಧಿ ನಿಷೇಧಗಳು ಆದಿ ಮಾನವನ ಶಾಸನಗಳಾಗಿದ್ದವು.ಸಹೋದರ ವಿವಾಹ ಅಗಮ್ಯ ಗಮನ .ಬಹುಶಃ ಇದನ್ನು ಮೀರಿದ ಕಾರಣ ಅವರ ಮಗುವನ್ನು ಗುಳಿಗ ಸುಟ್ಟು ತಿನ್ನುತ್ತಾನೆ‌.ನಂತರ ಕಾಲನ್ ಮತ್ತು ಕಾಲಿಚ್ಚಿ ಗುಳಿಗನ ಸೇರಿಗೆಗೆ ಸಂದು ದೈವತ್ವ ಪಡೆಯುತ್ತಾರೆ.ಅವರ ಗತ ಜೀವನದ ಪ್ರೇಮ,ಒನಪು ವಯ್ಯಾರಗಳ ಅಭಿವ್ಯಕ್ತಿ ಇಲ್ಲಿದೆ  .ಇವಿಷ್ಟು ಸಂಕ್ಷಿಪ್ತ ಮಾಹಿತಿ.ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶಂಕರ್ ಕುಂಜತ್ತೂರು,ಶ್ರೀಧರ ಪಣ್ಣಿಕ್ಕರ್,ಕುಂಞಿರಾಮನ್ ಇವರುಗಳಿಗೆ ಧನ್ಯವಾದಗಳು- ಡಾ.ಲಕ್ಷ್ಮೀ ಜಿ ಪ್ರಸಾದ

https://youtu.be/o0iGNfR45N8

Tuesday, 3 December 2019

ಸಾವಿರದೊಂದು ಗುರಿಯೆಡೆಗೆ ತುಳು ನಾಡ ದೈವಗಳು: 463 ಶ್ರೀ ದೇವಿ ಜುಮಾದಿ

ಶ್ರೀದೇವಿ ಜುಮಾದಿ ಜುಮಾದಿ ದೈವವಲ್ಲ‌.ಶ್ರೀದೇವಿ ಎಂಬ ಹೆಸರಿನ ಹೆಣ್ಣುಮಗಳೊಬ್ಬಳು ದೈವತ್ವ ಪಡೆದು ಶ್ರೀದೇವಿ ಜುಮಾದಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾಳೆ.
ಕುಂದಾಪುರದ ಬೀಜಾಡಿ ಸಮೀಪದ ಐಗಳ ಮನೆಯಲ್ಲಿ ಶ್ರೀದೇವಿ ಜುಮಾದಿ ದೈವಕ್ಕೆ ಆರಾಧನೆ ಇದೆ.

ಸುಮಾರು ನಲುವತ್ತು ನಲುವತ್ತೈದು ವರ್ಷದ ಹಿಂದೆ ನಡೆದ ಕಥಾನಕ ಇದು.
ಕುಂದಾಪುರ ಬೀಜಾಡಿ ಐಗಳ ಮನೆಯಲ್ಲಿ ಶ್ರೀದೇವಿ ಎಂಬ ಹುಡುಗಿ ಇದ್ದಳು.ಅವಳಿಗೆ ಯಾವುದೋ ಅನಾರೋಗ್ಯ ಬಾಧಿಸಿ ಅವಳು ಸಾವನ್ನಪ್ಪುತ್ತಾಳೆ.
ನಂತರ ಅವರ ಮನೆ ಮಂದಿಗೆ ಅನೇಕ ತೊಂದರೆಗಳು ಉಮಟಾಗುತ್ತವೆ‌.ಆಗ ಪ್ರಶ್ನೆ ಇಟ್ಟು ಕೇಳಿದಾಗ ಆ ಶ್ರೀದೇವಿ ಎಂಬ ಹೆಸರಿನ ಹುಡುಗಿ ದೈವವಾಗಿದ್ದಾಳೆ.ಅವಳಿಗೆ‌ಮರದ ಪಾಪೆಯನ್ನು ಮಾಡಿ ಆರಾಧನೆ ಮಾಡಬೇಕೆಂದು ಕಂಡುಬರುತ್ತದೆ.
ನಂತರ ಅವಳನ್ನು ದೈವದ ರೂಪದಲ್ಲಿ ಆರಾಧನೆ ಮಾಡುತ್ತಾರೆ.ಆ ದೈವವನ್ನು ಶ್ರೀದೇವಿ ಜುಮಾದಿ ಎಂದು ಕರೆಯುತ್ತಾರೆ.
ಮಾಹಿತಿ ನೀಡಿದ ಪ್ರದ್ಯುಮ್ನ ಅವರಿಗೆ ಕೃತಜ್ಞತೆಗಳು