Monday, 2 October 2023

ಅಲಿಖಿತ ಇತಿಹಾಸ ಸಾರುವ ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್

 




ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ‌‌..ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 




ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ್ copy rights reserved ಅನುಮತಿ‌ಇಲ್ಲದೆ ಕಾಪಿ ಮಾಡುವಂತಿಲ್ಲ.







ಕಲ್ಕುಡ ಕಲ್ಲುರ್ಟಿ 
ಭೂತಗಳನ್ನುರೆಕಾರ್ಡ್ ಮಾಡುವುದಕ್ಕೆ ಮೊದಲೇ ನಾನು ಮಲರಾಯಿ ಉಲ್ಲಾಕುಳು ಅಜ್ಜಿಭೂತ ಉಳ್ಳಾಲ್ತಿ ಮೊದಲಾದ ಅನೇಕ ಭೂತಗಳ ಕೋಲವನ್ನು ರೆಕಾರ್ಡ್ ಮಾಡಿದ್ದೆ .ಅನೇಕ ವಿಧಿ ನಿಷೇಧಗಳಿರುವ ಭೂತಾರಾಧನೆಯನ್ನು ರೆಕಾರ್ಡ್ ಮಾಡುವುದು ಸುಲಭದ ವಿಚಾರವಲ್ಲ. ವಿಧಿ ನಿಷೇಧಗಳ ಜೊತೆಗೆ ಸ್ಥಳೀಯರ ಭೂತ ಮಾಧ್ಯಮರ ಅಸಹಕಾರಗಳನ್ನು ನಿಭಾಯಿಸುವುದು ಸಾಹಸದ ವಿಚಾರ .ನಾವು ರೆಕಾರ್ಡ್ ಮಾಡುವುದರಿಂದ ತಮ್ಮ ಘನತೆಗೆ ಗಾಂಭೀರ್ಯಕ್ಕೆ ಏನೋ ಕುಂದು ಕೊರತೆ ಬರುತ್ತದೆ ಎಂಬ ಆತಂಕ ಅವರದು .ಇದರಿಂದಾಗಿ ನಾವು ಫೋಟೋ ಹಿಡಿಯಲು ಕ್ಯಾಮೆರಾ ಫೋಕಸ್ ಮಾಡುತ್ತಿದ್ದಂತೆ ಅವರಲ್ಲಿ ಅತಿಯಾದ ಆವೇಶ ಉಂಟಾಗಿ ಉಗ್ರತೆಯನ್ನು ಪ್ರದರ್ಶಿಸುತ್ತಾರೆ 

.ಕಲ್ಕುಡ ಕಲ್ಲುರ್ಟಿ ದೈವಗಳ ಕೋಲವನ್ನು ರೆಕಾರ್ಡ್ ಮಾಡಲು ನಾನು ಮನೆಯೊಡೆಯನಿಂದ ಮೊದಲೇ ಅನುಮತಿಯನ್ನು ಪಡೆದಿದ್ದೆ . ಬಹುಶ ಭೂತ ಕಟ್ಟುವ ಕಲಾವಿದರಿಗೆ ಇಷ್ಟವಿರಲಿಲ್ಲವೋ ಏನೋ ತಿಳಿಯದು !ಅಂದಿನ ಕಲ್ಲುರ್ಟಿ ಭೂತದ ಆವೇಶವನ್ನು ಉಗ್ರ ನರ್ತನ ಅಟ್ಟಹಾಸವನ್ನು  ನೋಡಿ ನನಗೆ ನಿಜವಾಗಿಯೂ ಕೈಕಾಲು ನಡುಕ ಬಂದಿತ್ತು .ಭೂತ ಕಟ್ಟಿದ ಕಲಾವಿದ ಒಂದು ಕ್ಷಣ ಕೂಡ ನಿಂತಲ್ಲಿ ನಿಲ್ಲದ ಕಾರಣ ಫೋಟೋ ತೆಗೆಯುವುದು ಬಹಳ ಕಷ್ಟ ಆಗಿತ್ತು .ಆದರೂ ೩-೪ ಗಂಟೆಗಳ ಕಾಲ ಭೂತ ಹಿಂದೆ ಮುಂದೆ ಹೋದಂತೆ ನಾನು ಕೂಡ ಬೇತಾಳನಂತೆ ಭೂತ ಹಿಂದೆಯೇ ಸುತ್ತಿ ಕೆಲವು ಭಾವಚಿತ್ರಗಳನ್ನು ಸೆರೆಹಿಡಿದಿದ್ದನ್ನು ನೆನೆಯುವಾಗ ಈಗ ಕೂಡ ನನ್ನ ಮೈ ಜುಮ್ಮೆನ್ನುತ್ತದೆ !

ಭೂತ ಬಿರಿದ ನಂತರ ಭೂತ ಕಟ್ಟಿದ ಆ ಕಲಾವಿದರು ತುಂಬಾ ಆತ್ಮೀಯತೆಯಿಂದ ಭೂತಗಳ ಕುರಿತಾದ ಪಾಡ್ದನ ಹಾಗು ಇತರ ಮಾಹಿತಿಗಳನ್ನು ನೀಡಿದರು .ಅವರ ಸೌಮ್ಯ  ಗುಣವನ್ನು ನೋಡಿ ನನಗೆ ತುಸು ಹಿಂದೆ ಅಷ್ಟು ಉಗ್ರತೆಯನ್ನು ಪ್ರದರ್ಶಿಸಿದ ಭೂತ ಕಲಾವಿದ ಇವರೇ ಏನು ?!ಎಂಬ ಸಂಶಯ ಉಂಟಾಯಿತು .ಭೂತ ಕಲಾವಿದರು ಹೆಚ್ಚಿನವರು ಬಹಳ ಸೌಮ್ಯ ಗುಣದವರೇ ಆಗಿರುತ್ತಾರೆ . ಆಯಾಯ ಭೂತಗಳ ಸಹಜ ಪ್ರವೃತ್ತಿಗಳಿಗೆ ಅನುಗುಣವಾಗಿ ಅವರು ಅಭಿವ್ಯಕ್ತಿಯನ್ನು ತೋರುತ್ತಾರೆ ಎಂಬುದನ್ನು ನಾನು  ಸ್ವ ಅನುಭವದ ಮೂಲಕ ಕಂಡು ಕೊಂಡ  ವಿಚಾರ.
ತುಳುನಾಡಿನ ಭೂತಗಳಲ್ಲಿ ಕಲ್ಕುಡ ಕಲ್ಲುರ್ಟಿಗಳಿಗೆ ವಿಶೇಷವಾದ ಸ್ಥಾನವಿದೆ .ಅರಸು ದೌರ್ಜನ್ಯಕ್ಕೊಳಗಾಗಿ ದೈವತ್ವವನ್ನು ಪಡೆದ ಅವಳಿಗಳು ಇವರು .ತಮಗಾದ ಅನ್ಯಾಯಕ್ಕೆ ಪ್ರತಿರೋಧವೋ ಎಂಬಂತೆ  ಈ ಭೂತಗಳ ಅಭಿವ್ಯಕ್ತಿ ಕೂಡ ತುಸು ಉಗ್ರವಾಗಿ ತೋರುತ್ತದೆ . ಮೂಲತಃ ಶಿಲ್ಪಿಗಳಾದ ಇವರ ಕಪ್ಪು ಬಣ್ಣದಲ್ಲಿ ಇಟ್ಟ  ಬಿಳಿ ವರ್ಣದ  ಚುಕ್ಕಿಗಳ ಮುಖವರ್ಣಿಕೆ ಅವರ ಮೂಲ ವೃತ್ತಿಯನ್ನು ಸಂಕೇತಿಸುತ್ತದೆ .ಈ ಭೂತಗಳ  ಕೋಲದಲ್ಲಿನ ಉಗ್ರ ಅಟ್ಟಹಾಸವು ಇವರಿಗಾದ ಅನ್ಯಾಯದ ವಿರುದ್ಧ ತೋರುವ ಅಭಿವ್ಯಕ್ತಿ ಯಾಗಿದೆ .copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ
ಕಲ್ಲುರ್ಟಿ ಭೂತವನ್ನು ಇಷ್ಟ ಜಾವದೆ ,ಒರ್ತೆ ,ಪಾಷಾಣ ಮೂರ್ತಿ ಮೊದಲಾದ ಅನೇಕ ಹೆಸರು ರೂಪಗಳಲ್ಲಿ ಆರಾಧಿಸುತ್ತಾರೆ .ಈ ಭೂತ ಅಪ್ಪೆ ಕಲ್ಲುರ್ಟಿ (ತಾಯಿ ಕಲ್ಲುರ್ಟಿ)ಎಂದೇ ತುಳುನಾಡಿನಾದ್ಯಂತ ಬಹಳ  ಭಕ್ತಿಯಿಂದ ಆರಾಧಿಸಲ್ಪಡುತ್ತದೆ. 
ಕಾರ್ಕಳ ತಾಲೂಕಿನಲ್ಲಿರುವ ಕೆಲ್ಲಪುತ್ತಿಗೆ ಮಾರ್ನಾಡುವಿನಲ್ಲಿ ಪ್ರಸಿದ್ಧ ಶಿಲ್ಪಿಗಳು ವಾಸಿಸುತ್ತಿದ್ದರು. ‘ಶಂಭು ಕಲ್ಕುಡ’ ಮತ್ತು  ‘ಈರವದಿ ಅಚ್ಚವದಿ ದಂಪತಿಗಳಿಗೆ ಐದು ಜನ ಮಕ್ಕಳು. ಇವರಲ್ಲಿ ಬೀರುಕಲ್ಕುಡ ಮತ್ತು ಕಾಳಮ್ಮ ಅವಳಿ ಮಕ್ಕಳು. ಈ ಮಕ್ಕಳು ತಾಯ ಗರ್ಭದಲ್ಲಿರುವಾಗಲೇ ಶಂಭು ಕಲ್ಕುಡನಿಗೆ ಬೈಕೂರು ಬೆಳ್ಗೊಳಗಳಿಂದ ಅಂತರಂಗದ ಆಹ್ವಾನ ಬಂತು. ಆಗ ಶಂಭು ಕಲ್ಕುಡ ಮನೆಗೆ ಬೇಕಾದಷ್ಟು ಸಾಮಾನುಗಳನ್ನು ತಂದಿಟ್ಟು, ಉಳಿ, ಸುತ್ತಿಗೆ, ಮೊದಲಾದ ಪರಿಕರಗಳನ್ನು ಹಿಡಿದು ಬೆಳ್ಗೊಳದ ಅರಸನಲ್ಲಿಗೆ ಹೋಗುತ್ತಾನೆ. ಒಡ್ಡೋಲಗದಲ್ಲಿದ್ದ ಅರಸನನ್ನು ವಂದಿಸಿ ಕರೆ ಕಳುಹಿಸಿದ ಕಾರಣವನ್ನು ಕೇಳುತ್ತಾನೆ. ಆಗ ಅರಸರು ‘ಕಲ್ಕುಡ ಅರಮನೆ ಅಳಿಸಿಹೋಗಿದೆ, ಬಸದಿ ನಾಶವಾಗಿದೆ. ದೇವರಿಗೆ ದೇಗುಲವಿಲ್ಲ. ಗುಮ್ಮಟಸ್ವಾಮಿಯ ಕೆಲಸವಾಗಬೇಕು. ಏಳು ಗುಡಿಗಳಲ್ಲಿ ಏಳು ದೇವರುಗಳನ್ನು ನಿರ್ಮಿಸಬೇಕು’ ಎಂದು ಆಣತಿ ಇಡುತ್ತಾರೆ. ಅರಸರ ಆಣತಿಯನ್ನು ಶಿರಸಾವಹಿಸಿದ ಶಂಭುಕಲ್ಕುಡ ಪಡಿಯಕ್ಕಿ ಸ್ವೀಕರಿಸಿ ಬಿಡಾರ ಸೇರುತ್ತಾನೆ. ಮರುದಿನ ಮುಂಜಾನೆ ಎದ್ದು ತನ್ನ ಮನೆದೈವ ಗುರುಕಾಳಮ್ಮ ಹಾಗೂ ಇತರ ದೈವಗಳನ್ನು ಸ್ಮರಿಸಿ, ಧಾರೆ ನೋಡಿ ಕಲ್ಲಿನ ಸೆರೆಗೆ ಉಳಿ ಇಕ್ಕುತ್ತಾನೆ. ಅತ್ಯಂತ ಕಠಿಣವಾದ ಕಲ್ಲು ತೆಂಗಿನಗರಿ ಸೀಳಿದಂತೆ ಸೀಳಿತು. ಬಾಳೆಯ ದಿಂಡಿನ ಹೊದಿಕೆಯಂತೆ ತುಂಡಾಯಿತು. ಬೇರೆಯವರಿಂದ ಅಸಾಧ್ಯವಾದ ಕೆಲಸವನ್ನು ಸಾಧಿಸಿದ ಶಂಭು ಕಲ್ಕುಡ ದೇವರಿಗೆ ದೇಗುಲ ಮಾಡಿದ. ಸಾವಿರ ಕಂಬದ ಬಸದಿ ಮಾಡಿದ, ನೂರಿಪ್ಪತ್ತು ಬೊಂಬೆಗಳ ಕೆಲಸ ಮಾಡಿದ, ಏಳು ಗುಡಿಗಳಲ್ಲಿ ಏಳು ದೇವರುಗಳನ್ನು ನಿರ್ಮಿಸಿದ. ಅಂಗಳದಲ್ಲಿ ಆನೆಕಲ್ಲಿನ ಕೆಲಸವನ್ನು ಮಾಡಿದ. ಗುಮ್ಮಟಸ್ವಾಮಿಯನ್ನು ಕೆತ್ತಿದ. ಈ ಎಲ್ಲ ಕೆಲಸ ಪೂರ್ಣವಾದ ನಂತರ, ಅರಸರಿಂದ ಉಂಬಳಿ, ಹಸು, ಬಂಗಾರದ ಬಳೆ, ಮುಂಗೈ ಸರಪಳಿ ಸೇರಿದಂತೆ ಅನೇಕ ಕೊಡುಗೆಗಳನ್ನು ಪಡೆದು ಊರಿಗೆ ಹೊರಡುತ್ತಾನೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
 

ಇತ್ತ ಕೆಲತ್ತ ಮಾರ್ನಾಡಿನಲ್ಲಿ ಈತನ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ. ಕೊನೆಯ ಅವಳಿ ಮಕ್ಕಳು ಬೀರುಕಲ್ಕುಡ ಮತ್ತು ಕಾಳಮ್ಮ ತಮ್ಮ ವಯಸ್ಸಿಗೆ ಮೀರಿದ ಸಾಹಸವನ್ನು ಮೆರೆಯುತ್ತಾರೆ. ತನ್ನ ಸಮವಯಸ್ಕ ಗೆಳೆಯರೊಂದಿಗೆ ಆಟಕ್ಕೆ ಹೋದಾಗ, ಆಟದಲ್ಲಿ ಸೋತ ಬೀರುವಿನ ಗೆಳೆಯರು ಬೀರು ಕಲ್ಕುಡನನ್ನು “ತಂದೆಯಿಲ್ಲದ ಮಗ”ನೆಂದು ದೋಷ ಹೇಳಿ ಕುಲದೂಷಣೆ ಮಾಡುತ್ತಾರೆ. ಆಗ ಮನೆಗೆ ಬಂದ ಬೀರುಕಲ್ಕುಡ ತಾಯಿಯಲ್ಲಿ ‘ತನಗೆ ತಂದೆಯಿಲ್ಲವೆ?’ ಎಂದು ಪ್ರಶ್ನಿಸುತ್ತಾನೆ. ಆಗ ತಾಯಿ ಈರವೆದಿಯು ‘ನಿನ್ನ ತಂದೆ ಬೆಳ್ಗೊಳಕ್ಕೆ ಕೆಲಸಕ್ಕೆ ಹೋದವರು ಇನ್ನೂ ಬಂದಿಲ್ಲ’ ಎಂದು ಹೇಳುತ್ತಾಳೆ. ಆಗ ‘ನಾನು ತಂದೆಯನ್ನು ಹುಡುಕಲು ಹೋಗುತ್ತೇನೆ. ನನಗೆ ತಂದೆಯ ಕೆಲಸವನ್ನು ನೋಡಬೇಕು. ನಾನೂ ಕೆಲಸ ಮಾಡಬೇಕು” ಎಂದು ಹೇಳುತ್ತಾನೆ. ಆಗ ತಾಯಿ ಈರವೆದಿ ‘ಅಯ್ಯೋ, ಮಗು ಬೀರು, ನೀನಿನ್ನೂ ಸಣ್ಣವ, ದೊಡ್ಡವನಾಗಿಲ್ಲ. ನಿನ್ನ ನೆತ್ತಿಯ ಎಣ್ಣೆಯ ಜಿಡ್ಡು ಮಾಸಿಲ್ಲ. ಕಾಲಿನ ಅರಸಿನ ಮಾಸಿಲ್ಲ’ ಎಂದು ಹೇಳುತ್ತಾಳೆ. ಆದರೆ ‘ತಾನು ಹೋಗುತ್ತೇನೆ’ ಎಂದು ಹಠ ಮಾಡುತ್ತಾನೆ ಬೀರುಕಲ್ಕುಡ. ಮರುದಿನ ಮುಂಜಾವು ಬೇಗನೆ ಎದ್ದು, ತಾಯಿ ನೀಡಿದ ತಂಗಳನ್ನ ಉಂಡು, ಮೊಸರನ್ನು ಬುತ್ತಿ ತೆಗೆದುಕೊಂಡು, ಪ್ರಯಾಣ ಆರಂಭಿಸಿದ. 

ಅಡ್ಡ ತೋಡನ್ನು ದಾಟಿ, ನೀರಗುಡ್ಡವನ್ನು ಹತ್ತಿ ಇಳಿದ. ಆನೆ ಕಟ್ಟಿದ ಅಶ್ವತ್ಥ, ಕುದುರೆ ಕಟ್ಟಿದ ಕಿನ್ನಿಗೋಳಿ, ಅಕ್ಕಿ ಇಳಿಸುವ ಅಟ್ಟೆ ಕಲ್ಲು, ಉಪ್ಪು ಹೊರೆ ಇಳಿಸುವ ಉಗುಂಟಕಲ್ಲು ಮುಂತಾದ ಪ್ರದೇಶಗಳನ್ನು ದಾಟಿ ಮುಂದೆ ಹೋದ.
ಅರಸರ ಕೊಡುಗೆಯೊಂದಿಗೆ ಬಂದ ಶಂಭು ಕಲ್ಕುಡ ಕಟ್ಟೆಯಲ್ಲಿ ಕುಳಿತಿರುವಾಗ, ಆ ಸಮಯಕ್ಕೆ ಸರಿಯಾಗಿ ಬೀರುಕಲ್ಕುಡ ಅಲ್ಲಿಗೆ ಬರುತ್ತಾನೆ. ತಂದೆಯ ಗುರುತು ಮಗನಿಗಿಲ್ಲ. ಮಗನ ಗುರುತು ತಂದೆಗಿಲ್ಲ. ಆದರೂ ತಂದೆ ಶಂಭುಕಲ್ಕುಡ ಬೀರುಕಲ್ಕುಡನ ಹತ್ತಿರ ‘ನೀನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುವೆಯಪ್ಪಾ?’ ಎಂದು ಸಹಜ ಕುತೂಹಲದಿಂದ ವಿಚಾರಿಸುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 
 “ನನ್ನ ತಂದೆಯನ್ನು ಹುಡುಕಲು ಹೋಗುತ್ತೇನೆ. ನನ್ನ ಊರು ಕೆಲತ್ತ ಮಾರ್ನಾಡು. ನನ್ನ ತಂದೆ ಶಂಭುಕಲ್ಕುಡ, ತಾಯಿ ಈರವೆದಿ’ ಎಂದು ಬೀರುಕಲ್ಕುಡ ಉತ್ತರಿಸುತ್ತಾನೆ. ಆಗ “ಅಯ್ಯೊಯ್ಯೋ, ಮಗನೇ ನಾನು ನಿನ್ನ ತಂದೆ, ನೀನು ನನ್ನ ಮಗ’ ಎಂದ ಶಂಭುಕಲ್ಕುಡ ಮಗನನ್ನು ಅಪ್ಪಿಕೊಳ್ಳುತ್ತಾನೆ. ‘ನಿನ್ನ ಕೆಲಸವನ್ನು ನನಗೆ ನೋಡಬೇಕು’ ಎಂದು ಹಠ ಹಿಡಿಯುತ್ತಾನೆ ಬೀರುಕಲ್ಕುಡ. ಮಗನ ಹಠಕ್ಕೆ ಮಣಿದ ತಂದೆ ಶಂಭು ಕಲ್ಕುಡ, ಮಗ ಬೀರುವಿನ ಜೊತೆಯಲ್ಲಿ ಬೆಳ್ಗೊಳಕ್ಕೆ ಹಿಂದಿರುಗುತ್ತಾನೆ. ಅಲ್ಲಿಯ ಗುಮ್ಮಟಸ್ವಾಮಿಯ ಕೆಲಸದಲ್ಲಿ ದೋಷ ಉಂಟೆಂದು ಬೀರುಕಲ್ಕುಡ ಹೇಳುತ್ತಾನೆ. “ಅಯ್ಯೊಯ್ಯೋ, ಮಗನೇ ನೀನು ನಿನ್ನೆ ಮೊನ್ನೆ ಹುಟ್ಟಿದವನು ಬೇಗನೇ ಬೆಳೆದುಬಿಟ್ಟೆ. ನನ್ನ ಕೆಲಸಕ್ಕೆ ಕುಂದುಕೊರತೆ ಹೇಳಿದೆಯಾ? ಅರಸರು ನೋಡಿದರೆ ಆನೆಯ ಕಾಲಡಿಗೆ ಹಾಕಿಸಿಯಾರು? ಕುದುರೆಯ ಚಾಟಿಯಲ್ಲಿ ಹೊಡೆಸಿಯಾರು” ಎಂದು ಹೇಳಿದ ಶಂಭುಕಲ್ಕುಡ ಅರಸನ ಶಿಕ್ಷೆಯ ಭಯದಿಂದ ಬೆಳ್ಳಿ ಕಟ್ಟಿದ ಚೂರಿಯಿಂದ ತನ್ನ ಹೊಟ್ಟೆಗೆ ಇರಿದುಕೊಂಡು ಸಾವನ್ನಪ್ಪುತ್ತಾನೆ. ಈ ವಿಷಯ ಎಲ್ಲೆಡೆ ಸುದ್ದಿಯಾಯಿತು. ಮಗ ಕೆಲಸದಲ್ಲಿ ಶೂರನೆಂದು ಪ್ರಚಾರವಾಯಿತು. ತಂದೆಯ ಸಾಧನಗಳನ್ನು ಹಿಡಿದುಕೊಂಡ ಬೀರುಕಲ್ಕುಡ ಘಟ್ಟ ಇಳಿದು ತುಳುರಾಜ್ಯಕ್ಕೆ ಬರುತ್ತಾನೆ. ಕಾರ್ಕಳದ ಅರಸ ಬೈರನಸೂಡರು ಬೀರು ಕಲ್ಕುಡನಿಗೆ ಓಲೆ ಕಳುಹಿಸುತ್ತಾರೆ. ಅರಸರ ಸನ್ನಿಧಿಗೆ ಬಂದ ಬೀರುಕಲ್ಕುಡ ಕರೆಕಳುಹಿಸಿದ ಕಾರಣವನ್ನು ಕೇಳುತ್ತಾನೆ. “ಏನಯ್ಯ ಕಲ್ಕುಡ, ಬಸದಿಯ ಕೆಲಸವಾಗಬೇಕು. ನೂರಿಪ್ಪತ್ತು ಬೊಂಬೆಗಳ ಕೆತ್ತನೆಯಾಗಬೇಕು. ಒಂಬತ್ತು ದೇವರುಗಳ ಕೆಲಸವಾಗಬೇಕು. ಗುಮ್ಮಟಸ್ವಾಮಿಯ ಕೆಲಸವಾಗಬೇಕು’ ಎಂದು ಅಪ್ಪಣೆ ಕೊಡುತ್ತಾರೆ ಬೈರನ ಸೂಡರು.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
ಇದಕ್ಕೆ ಒಪ್ಪಿದ ಬೀರುಕಲ್ಕುಡ ಪಡಿಯಕ್ಕಿ ಪಡೆದು ಬಿಡಾರ ಸೇರುತ್ತಾನೆ. ಮರುದಿನ ಮುಂಜಾವದಿಂದಲೇ ಕೆಲಸ ಆರಂಭಿಸುತ್ತಾನೆ. ಬಸದಿಯ ಕೆಲಸ ಮಾಡಿದ, ನೂರಿಪ್ಪತ್ತು ಬೊಂಬೆಗಳ ಕೆತ್ತನೆ ಮಾಡಿನ ಒಂಬತ್ತು ದೇವರುಗಳ ಕೆಲಸ ಮಾಡಿದ. ಗುಮ್ಮಟಸ್ವಾಮಿಯ ಕೆತ್ತನೆ ಮುಗಿಸಿದ ಬೀರು ಕಲ್ಕುಡ ಅರಸರಲ್ಲಿ ಬಹುಮಾನವನ್ನು ಕೇಳುತ್ತಾನೆ. ‘ಇಂದು ಮುಸ್ಸಂಜೆಯ ಹೊತ್ತಾಯಿತು. ನಾಳೆ ಬಾ’ ಎಂದು ಕಳುಹಿಸುತ್ತಾರೆ ಬೈರನ ಸೂಡ ಅರಸರು. ಮರುದಿನ ಕಲ್ಕುಡ ಹೋದಾಗ ‘ನನ್ನ ರಾಜ್ಯದಲ್ಲಿ ಕೆಲಸ ಮಾಡಿದವರು ಬೇರೆಡೆ ಇಂಥಹ ಅಪೂರ್ವ ಕೆಲಸವನ್ನು ಮಾಡಬಾರದು’ ಎಂದು ಮತ್ಸರದಿಂದ, ಬೈರನ ಸೂಡ ಅರಸ, ಬೀರುಕಲ್ಕುಡನ ಬಲಗೈಗೆ ಬಂಗಾರದ ಬಳೆ, ಎಡಕಾಲಿಗೆ ಕಡಗವಿಕ್ಕುತ್ತಾರೆ. ಜೊತೆಗೆ ಆತನ ಎಡಗೈ ಹಾಗೂ ಬಲಕಾಲನ್ನು ಕತ್ತರಿಸುತ್ತಾನೆ. ‘ಇಂಥ ಅನ್ಯಾಯದ ಊರಿನಲ್ಲಿ ನೀರು ಮುಟ್ಟಲಾರೆ’ ಎಂದು ಬೀರುಕಲ್ಕುಡ ವೇಣೂರ ಸೀಮೆಗೆ ಹೋಗುತ್ತಾನೆ. ಆತನನ್ನು ಆದರದಿಂದ ಕರೆಸಿ, ಸತ್ಕರಿಸಿದ ವೇಣೂರ ಒಡೆಯ ತಿಮ್ಮಣ್ಣಾಜಿಲರು ‘ನಮಗೆ ಗೊಮ್ಮಟಸ್ವಾಮಿಯ ಕೆತ್ತನೆಯ ಕೆಲಸವಾಗಬೇಕು’ ಎನ್ನುತ್ತಾರೆ. ಆಗ ಒಂದು ಕೈ ಕಾಲುಗಳನ್ನು ಕಳೆದುಕೊಂಡ ತಾನು ಹೇಗೆ ಕೆಲಸ ಮಾಡಲಿ? ಎಂದು ಕೇಳುತ್ತಾನೆ ಬೀರುಕಲ್ಕುಡ. ಆಗ ‘ನಿನ್ನ ಜಾತಿಸರೀಕರಿಗೆ ಈ ಕೆತ್ತನೆಯ ಒಳಗುಟ್ಟನ್ನು ತಿಳಿಸು’ವಂತೆ ಹೇಳುತ್ತಾರೆ ತಿಮ್ಮಣ್ಣಾಜಿಲರು © ಡಾ.ಲಕ್ಷ್ಮೀ ಜಿ ಪ್ರಸಾದ್ ಇದಕ್ಕೆ ಒಪ್ಪದ ಕಲ್ಕುಡ ತಾನೇ ಗೊಮ್ಮಟಸ್ವಾಮಿಯ ಕೆತ್ತನೆಯ ಕಾರ್ಯ ಮಾಡಿ ಮುಗಿಸುತ್ತಾನೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ
 


ಇತ್ತ ಬೀರುವಿನ ತಂಗಿ ಕಾಳಮ್ಮ ಅಣ್ಣನನ್ನು ಹುಡುಕಲು ಹೋಗಬೇಕೆನ್ನುತ್ತಾಳೆ. ಅಟ್ಟಕ್ಕೆ ಏಣಿ ಇಟ್ಟು ಮುಡಿಯಿಂದ ಮೂರು ಬಳ್ಳ ಅಕ್ಕಿ ತೆಗೆದು ಭತ್ತ ಕುಟ್ಟುವ ನೆಲಗುಳಿಯಲ್ಲಿ ಹಾಕುತ್ತಾಳೆ. ತಾಳೆ ಮರದ ಸುತ್ತಿನ ಒನಕೆಯನ್ನೆತ್ತಿ ಕುಟ್ಟುತ್ತಾಳೆ. ಒಪ್ಪವಾಗಿ ಸೇರಿಸಿ ಒಂದು ಬಳ್ಳ ಅಕ್ಕಿ ಮಾಡಿದಳು. ಅಕ್ಕಿಯನ್ನು ಹಾಲಿನಲ್ಲಿ ಬೇಯಿಸಿ, ಎಣ್ಣೆ ಚಕ್ಕುಲಿ, ಅಕ್ಕಿ ಕಡುಬು ಮಾಡುತ್ತಾಳೆ. ಮೂಡೆಯಲ್ಲಿ, ಅರಳು ಪಾತ್ರದಲ್ಲಿ ಮೂರು ಕುಡ್ತೆ, ಮೂರಚ್ಚು ಬೆಲ್ಲ ಹಾಕಿ ಬುತ್ತಿ ಗಂಟು ತೆಗೆದುಕೊಂಡು ಹೋಗುತ್ತಾಳೆ. ಚೆನ್ನಾಗಿ ಅಲಂಕರಿಸಿಕೊಂಡು ಪ್ರಯಾಣಕ್ಕೆ ಸಿದ್ಧವಾಗುತ್ತಾಳೆ. ಅಡ್ಡ ಸಿಕ್ಕಿದ ತೊರೆ-ಹಳ್ಳ, ಬೆಟ್ಟ-ಗುಡ್ಡ-ಕಣಿವೆಗಳನ್ನು ದಾಟಿ ಬೆಳ್ಗೊಳಕ್ಕೆ ಹೋಗುತ್ತಾಳೆ. ಅಲ್ಲಿ ಆತ ನಗರಕ್ಕೆ ಹೋಗಿದ್ದಾನೆ ಎನ್ನುತ್ತಾರೆ. ನಗರಕ್ಕೆ ಹೋದಾಗ ಕೊಲ್ಲೂರಿಗೆ ಹೋಗಿದ್ದಾನೆ ಎಂದವಳಿಗೆ ತಿಳಿಯುತ್ತದೆ. ಕೊಲ್ಲೂರಿಗೆ ಹೋದಾಗ ಆತ ಕಾರ್ಕಳಕ್ಕೆ ಹೋಗಿರುವ ವಿಷಯ ತಿಳಿಯುತ್ತದೆ. ಕಾರ್ಕಳದ ಬೈರನಸೂಡರು ಬೀರುಕಲ್ಕುಡನ ಒಂದು ಕೈ, ಒಂದು ಕಾಲು ಕಡಿಸಿದ ಸುದ್ದಿ ಕೇಳಿ ಮಮ್ಮಲ ಮರುಗುತ್ತಾಳೆ. 

ಅಣ್ಣ ವೇಣೂರಿನಲ್ಲಿರುವ ಸುದ್ಧಿ ಕೇಳಿ ಅಲ್ಲಿಗೆ ಧಾವಿಸುತ್ತಾಳೆ. ಅಣ್ಣನ ಮಡಿಲಿಗೆ ಹೋಗಿ ಬಿದ್ದು ‘ನಿನ್ನ ಕೈ ಏನಾಯಿತಣ್ಣಾ? ಕಾಲೇನಾಯಿತಣ್ಣಾ?’ ಎಂದು ದುಃಖಿಸುತ್ತಾಳೆ. “ಏನಮ್ಮ ತಂಗಿ ಕೇಳಿದೆಯಾ? ಕದ್ದು ಅಲ್ಲ, ಸುಳ್ಳಾಡಿ ಅಲ್ಲ. ಅಸಾಧ್ಯವಾದ ಕೆಲಸ ಮಾಡಿದ್ದಕ್ಕೆ ಕೊಡಬಾರದ ಬಹುಮಾನ ಕೊಟ್ಟರು” ಎಂದು ಬೀರುಕಲ್ಕುಡ ಖೇದದಿಂದ ಉತ್ತರಿಸುತ್ತಾನೆ.
 

ಸೇಡಿನ ಜ್ವಾಲೆಯಿಂದ ಬೆಂದ ಕಾಳಮ್ಮ ಅಣ್ಣನ ಮಡಿಲಿನಿಂದ ಎದ್ದು ನಿಂತಳು. ‘ಕಾಣುವಂತೆ ಗಾಯ ಮಾಡಿದ ಅರಸನನ್ನು ಮಾಯದಲ್ಲಿ ನೋಡಬೇಕು. ಲೋಕ ಬಿಟ್ಟು ಮಾಯಕಕ್ಕೆ ಸೇರುವ’ ಎಂದಳು. ಮಾದೇವ ಅಂಗಣದಲ್ಲಿ ಮೂರು ಸುತ್ತು ಬಂದು ಅದರಲ್ಲಿ ಮಾಯವಾದರು. ಮಾಯಕವಾದ ನಂತರ ಕಾರ್ಕಳಕ್ಕೆ ಬಂದ ಅಣ್ಣತಂಗಿ ಬೈರನ ಸೂಡನ ಅರಮನೆಯನ್ನು ಸುಟ್ಟು ಕರಕಲಾಗಿಸಿ, ದ್ವೇಷವನ್ನು ಸಾಧಿಸುವ ಮತ್ತು ದೈವತ್ವಕ್ಕೇರಿ ಆರಾಧಿಸಲ್ಪಡುವ ಕಥಾನಕ ಈ ಪಾಡ್ದನ ಕೊನೆಯ ಭಾಗದಲ್ಲಿ ಬರುತ್ತದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
 

ಈ ಪಾಡ್ದನದ ಮೊದಲ ಭಾಗದಲ್ಲಿ ಎರಡು ದುರಂತಗಳನ್ನು ಕಾಣುತ್ತೇವೆ. ಬೆಳ್ಗೊಳದ ಕೆಲಸ ಮಾಡಿದ ಶಂಭುಕಲ್ಕುಡನ ಕಾರ್ಯದಲ್ಲಿ ಇರುವ ದೋಷವನ್ನು ಮಗ ಬೀರುಕಲ್ಕುಡ ಪತ್ತೆ ಹಚ್ಚಿ ಹೇಳುತ್ತಾನೆ. ಒಂದೆಡೆ ಮಗನೆದುರು ಪರಾಭವ, ಇನ್ನೊಂದೆಡೆ ಅರಸರ ಭಯದಿಂದ ತತ್ತರಿಸಿದ ಶಂಭುಕಲ್ಕುಡ ತನ್ನ ಹೊಟ್ಟೆಯನ್ನು ಇರಿದುಕೊಳ್ಳುವ ಮೂಲಕ ದುರಂತವನ್ನಪ್ಪುತ್ತಾನೆ. ಬಹುಶಃ ತಂದೆಯ ಮರಣಕ್ಕೆ ಕಾರಣವಾದ್ದರಿಂದಲೋ ಏನೋ ಬೀರುಕಲ್ಕುಡ ಅಲ್ಲಿಂದ ತನ್ನ ಊರಿಗೆ ಹಿಂತಿರುಗದೆ ತುಳುನಾಡಿಗೆ ಹೋಗುತ್ತಾನೆ. ಇವನ ಕೆಲಸದ ಖ್ಯಾತಿಯನ್ನು ಕೇಳಿದ ಕಾರ್ಕಳದ ಬೈರನಸೂಡ ಅರಸರು ಇವನಿಂದ ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತಿಸುತ್ತಾರೆ. ಅನಂತರ ಈತ ಬೇರೆಲ್ಲೂ ಇಂತಹ ಮೂರ್ತಿಯ ನಿರ್ಮಾಣ ಮಾಡಬಾರದೆಂಬ ಮತ್ಸರದಿಂದ ಅವನ ಮೇಲೆ ದೌರ್ಜನ್ಯವೆಸಗುತ್ತಾನೆ. ಆತನ ಕೈಕಾಲುಗಳನ್ನು ಕತ್ತರಿಸುತ್ತಾರೆ. ತನಗಾದ ಅನ್ಯಾಯದಿಂದ ನೊಂದ ಬೀರುಕಲ್ಕುಡ ವೇಣೂರಿಗೆ ತೆರಳಿ ಅಲ್ಲಿಯ ಅರಸ ತಿಮ್ಮಣ್ಣಾಜಿಲರ ಆಣತಿಯಂತೆ, ಕೇವಲ ಒಂದು ಕೈ, ಒಂದು ಕಾಲಿನಲ್ಲಿಯೇ, ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತುವ ಅಸಾಧಾರಣ ಸಾಹಸವನ್ನು ಮೆರೆಯುತ್ತಾನೆ. ಅಣ್ಣನನ್ನು ಹುಡುಕಿಕೊಂಡು ಬಂದ ಕಾಳಮ್ಮ ಅಣ್ಣನಿಗಾದ ಅನ್ಯಾಯ ಕಂಡು ಸಿಡಿದೇಳುತ್ತಾಳೆ. ಲೌಕಿಕದಲ್ಲಿ ಸಾಧ್ಯವಾಗದ ಕಾರ್ಯವನ್ನು ಮಾಯಕದಲ್ಲಿ ಮಾಡುವುದಕ್ಕಾಗಿ ಮಾಯವಾಗುತ್ತಾರೆ.

 ಪಾಡ್ದನದಲ್ಲಿ ಅವರು ಮಾಯವಾದರೆಂದು ಹೇಳಿದ್ದರೂ ಕೂಡ, ಅರಸನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಅವರನ್ನು ಕೊಲ್ಲಿಸಿರುವ ಸಾಧ್ಯತೆ ಇಲ್ಲದಿಲ್ಲ ಅಥವಾ ಕೈಕಾಲು ಕಡಿಸಿದ್ದರಿಂದ ನಂಜೇರಿ ಬೀರುಕಲ್ಕುಡ ಮರಣವನ್ನಪ್ಪಿರಬಹುದು. ಬಹುದೂರದಿಂದ ಬಹಳ ಕಠಿಣಪ್ರಯಾಣವನ್ನು ಮಾಡಿ ಬಂದ ತಂಗಿ ಕಾಳಮ್ಮ ಅಣ್ಣನ ದುರ್ಮರಣ ವಾರ್ತೆಯನ್ನು ಕೇಳಿ ಅಥವಾ ಆತನ ದುಃಸ್ಥಿತಿಯನ್ನು ನೋಡಿದಾಗ, ಮೊದಲೇ ಬಳಲಿದ್ದ ಅವಳ ದೇಹ, ಈ ಆಘಾತವನ್ನು ಸಹಿಸಿಕೊಳ್ಳದೆ ಮರಣವನ್ನಪ್ಪಿರುವ ಸಾಧ್ಯತೆ ಇದೆ. ಏನೇ ಆದರೂ ಅವರಿಬ್ಬರೂ ಅಸಾಧಾರಣ, ಅತಿಮಾನುಷ ಸಾಹಸಿಗಳು. ಆಳುವ ವರ್ಗದವರ ಶೋಷಣೆಗೆ ಒಳಗಾಗಿ ದುರ್ಮರಣವನ್ನಪ್ಪಿರಬಹುದು ಎಂದು ಹೇಳಬಹುದು.
ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಮರಣವನ್ನಪ್ಪಿದ ಇವರು ಮುಂದೆ ದೈವತ್ವಕ್ಕೇರಿ ಆರಾಧನೆಗೊಳ್ಳುವುದು ತುಳುನಾಡಿನಲ್ಲಿ ಅಸಹಜವಾದ ವಿಚಾರವೇನೂ ಅಲ್ಲ. ಈ ವೀರರ ಮೇಲಿನ ಅನುಕಂಪ ಅಥವಾ ಸತ್ತ ನಂತರ ಇವರು ಸೇಡು ತೀರಿಸಿಯಾರು ಎಂಬ ಭಯದಿಂದ ಇವರನ್ನು ಪ್ರಸನ್ನಗೊಳಿಸುವ ಪ್ರಯತ್ನವಾಗಿ ಇವರ ಆರಾಧನೆ ಪ್ರಾರಂಭವಾಗಿರಬೇಕು. ಏನೇ ಆದರೂ ದುರಂತ ನಾಯಕರಾಗಿರುವ ಈ ಇಬ್ಬರು ಅಣ್ಣ-ತಂಗಿಯರು ಇಂದು ತುಳುನಾಡಿನಾದ್ಯಂತ ಅನುಗ್ರಹವೀಯುವ ಕಲ್ಕುಡ-ಕಲ್ಲುರ್ಟಿ ದೈವಗಳಾಗಿ ಆರಾಧನೆಯನ್ನು ಪಡೆಯುತ್ತಿದ್ದಾರೆ.
 

ಈ ದುರಂತ ಕಥಾನಕದಲ್ಲಿ ಉಕ್ತವಾಗಿರುವ ದುರ್ಘಟನೆಗಳ ಬಗ್ಗೆ ಶಾಸನಗಳಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಹಾಗಿದ್ದರೂ ಕೂಡ ಮೌಖಿಕ ಪರಂಪರೆಯಲ್ಲಿರುವ ಘಟನೆಗಳನ್ನು ಕಾಲ್ಪನಿಕ ಎಂದು ತಳ್ಳಿ ಹಾಕುವುದಕ್ಕೂ ಸಾಧ್ಯವಿಲ್ಲ. ಆದ್ದರಿಂದ ಮೌಖಿಕ ಪರಂಪರೆಯ ಹಿನ್ನೆಲೆಯಲ್ಲಿ ಐತಿಹಾಸಿಕ ವಿಚಾರಗಳನ್ನು ಕೂಲಂಕಷವಾಗಿ ವಿವೇಚಿಸಿದಾಗ ಮಾತ್ರ ಪೂರ್ಣ ಸತ್ಯದ ಗೋಚರವಾಗಬಹುದು.copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ
ಯಾಕೆಂದರೆ ಮೌಖಿಕ ಪರಂಪರೆಯಲ್ಲಿ ಬರುವ ಎಲ್ಲವೂ ಕಪೋಲಕಲ್ಪಿತವಲ್ಲ. ಎಷ್ಟೋ ವೇಳೆ ಶಾಸನ ಸೇರಿದಂತೆ ಲಿಖಿತ ದಾಖಲೆಗಳಿಗೆ ಸಮೀಪಸ್ಥವಾದ ಅನೇಕ ನೈಜ ಅಂಶಗಳು ಕಂಠಸ್ಥ ಸಂಸ್ಕೃತಿಯಲ್ಲಿ ದಾಖಲಾಗಿರುತ್ತವೆ.
ಚಂದ್ರಮ ಕವಿಯ (ಕ್ರಿ.ಶ.೧೬೪೬) ಕಾರ್ಕಳದ ಗೋಮಟೇಶ್ವರ ಚರಿತೆ’ಯಲ್ಲಿ ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದ ಭೈರವರಸನು ಶಿಲ್ಪಿಗಳನ್ನು ಸಮ್ಮಾನಿಸಿದ ವಿಚಾರವಿದೆ. ಆದರೆ ಮುಖ್ಯ ಶಿಲ್ಪಿಯ ಹೆಸರು ಎಲ್ಲೂ ಉಲ್ಲೇಖವಾಗಿಲ್ಲ. ಆದರೆ ಐತಿಹ್ಯ ಪ್ರಧಾನವಾದ ‘ಕಾರ್ಕಳ ಅರಸರ ಕೈಫಿಯತ್ತು’ ಕಾರ್ಕಳ ಗೋಮಟೇಶ್ವರ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಈ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಚಿಕ್ಕಣಾಚಾರಿಯ ಬಲದ ಕೈಯನ್ನು ಕತ್ತರಿಸಿದ ಸಂಗತಿಯನ್ನು ಉಲ್ಲೇಖಿಸಿದೆ. ಈ ಸಂಗತಿಯನ್ನು ವೇಣೂರಿನ ತಿಮ್ಮಣ್ಣಾಜಿಲರ ಕೈಫಿಯತ್ತಿನಲ್ಲೂ ಹೇಳಲಾಗಿದೆ.
 

ವೇಣೂರಿನ ತಿಮ್ಮಣ್ಣಾಜಿಲನು ಕೆತ್ತಿಸಿದ ಗೋಮಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿಬಾರದೆಂದು ಮತ್ಸರದಿಂದ ವೇಣೂರಿನ ಮೇಲೆ ದಾಳಿ ಮಾಡಿದ ಕಾರ್ಕಳದ ಭೈರವರಸ ಸೋತ ವಿಚಾರವು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ಆಳುವ ವರ್ಗದವರ ಕ್ರೂರತೆ, ಅವರು ಎಸಗುವ ದೌರ್ಜನ್ಯಗಳು, ಅನೇಕ ಪಾಡ್ದನಗಳಲ್ಲಿ ಉಕ್ತವಾಗಿದೆ. ಆದ್ದರಿಂದ ಮೌಖಿಕ ಪರಂಪರೆಯಲ್ಲಿ ಉಕ್ತವಾದ ವಿಚಾರಗಳನ್ನು ನಗಣ್ಯ ಮಾಡುವಂತಿಲ್ಲ. ಕಂಠಸ್ಥ ಪರಂಪರೆ ಹಾಗೂ ಶಾಸನವೇ ಮೊದಲಾದ ಲಿಖತ ಪರಂಪರೆ ಎರಡನ್ನೂ ಜೊತೆ ಜೊತೆಯಲ್ಲಿಟ್ಟು ವಿವೇಚಿಸಿದಾಗ ಪೂರ್ಣ ಸತ್ಯದ ಅರಿವಾಗುತ್ತದೆ. 


ಈ ಹಿನ್ನೆಲೆಯಲ್ಲಿ ನೋಡಿದಾಗ ಬೀರುಕಲ್ಕುಡ ಪಾಡ್ದನದಲ್ಲಿ ಬರುವ ಕೈಕಾಲು ಕತ್ತರಿಸಿದ ಘಟನೆ ನಿಜವಾಗಿ ನಡೆದಿರಬಹುದು. ಅಣ್ಣನ ಮೇಲಾದ ಅನ್ಯಾಯವನ್ನು ಪ್ರಶ್ನಿಸಿದ ತಂಗಿ ಕಾಳಮ್ಮನನ್ನು ಸಾಯಿಸಿರುವ ಸಾಧ್ಯತೆ ಇಲ್ಲದಿಲ್ಲ. ಈ ಇಬ್ಬರು ಅಸಹಾಯ ಶೂರರ ಮೇಲೆ ಅನುಕಂಪ ಹಾಗೂ ಅಭಿಮಾನ ಹೊಂದಿದ ತುಳುನಾಡ ಜನರು ಅವರನ್ನು ದೈವತ್ವಕ್ಕೇರಿಸಿ ಆರಾಧಿಸಿರಬಹುದು. ಕಾಕತಾಳೀಯವಾಗಿ ಸಂಭವಿಸಿದ ಕಾರ್ಕಳದ ಬೈರವರಸರ ಅವನತಿಯು ಇವರ ದೈವತ್ವದ ನಂಬಿಕೆಗೆ ಇಂಬುಕೊಟ್ಟಿರಬಹುದು.ಏನೇ ಆದರೂ ಅರಸೊತ್ತಿಗೆಯ ಆ ಕಾಲದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಅವರ ಧೈರ್ಯ ಸ್ವಾಭಿಮಾನವನ್ನು  ನೆನೆದಾಗ ತಲೆ ಬಾಗುತ್ತದೆ ಇಡಿಯ ತುಳುನಾಡು
ಕ್ರಿ ಶಕ 1432 ರಲ್ಲಿ ಬೈರವರಸ ಗೊಮ್ಮಟೇಶ್ವರನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಬಗ್ಗೆ ಇತಿಹಾಸದಲ್ಲಿ ದಾಖಲೆ ಇದೆ.ಹಾಗಾಗಿ ಕಲ್ಲುಡ ಕಲ್ಲುರ್ಟಿಯರ ಕಾಲ ಕೂಡ ಇದೇ ಆಗಿದ್ದು ಕೋಟಿ ಚೆನ್ನಯ್ಯರಿಗಿಂತ ಪ್ರಾಚೀನಕಾಲದವರು ಇವರಾಗಿದ್ದಾರೆ  

Copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು  
ಲೇ : ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ದೈವ/ಭೂತವಾದ ಬ್ರಾಹ್ಮಣ ಕನ್ಯೆ ಡಾ.ಲಕ್ಷ್ಮೀ ಜಿ ಪ್ರಸಾದ್

 

ತುಳುನಾಡಿನ ದೈವ/ಭೂತವಾದ ಬ್ರಾಹ್ಮಣ ಕನ್ಯೆ -ಅಗ್ನಿ ಚಾಮುಂಡಿ ಗುಳಿಗ- ಡಾ.ಲಕ್ಷ್ಮೀ ಜಿ ಪ್ರಸಾದ್ 

ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 







(ಫೋಟೋಗಳು ಲೇಖಕಿಯವು)
ಭೂತಾರಾಧನೆ ತುಳುನಾಡಿನ ವಿಶಿಷ್ಟ ಆರಾಧನಾ ಪದ್ಧತಿ.ಯಕ್ಷಗಾನಕ್ಕೆ ಕೂಡ ಮೂಲವಾಗಿರಬಹುದಾದ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿ ಕೂಡಾ . ಈ ಬಗ್ಗೆ ನನಗೆ ತೀವ್ರ ಕುತೂಹಲ ಆಸಕ್ತಿ. ತುಳು ಸಂಸ್ಕೃತಿ ಜಾನಪದ ಭೂತಾರಾಧನೆಗಳ ಕುರಿತಾದ ತೀವ್ರ ಸೆಳೆತದ ಕಾರಣದಿಂದ ಸಂಶೋಧನಾತ್ಮಕ ಅಧ್ಯಯನವನ್ನು ಮುಂದುವರಿಸುವ ಸಲುವಾಗಿಯೇ ಬೆಳ್ಳಾರೆಗೆ ಬಂದ ನನಗೆ ಬೆಳ್ಳಾರೆಯ ಸ್ಥಳ ದೈವ ಮಹಾಲಿಂಗೇಶ್ವರ ದೇವಾಲಯದ ಉತ್ಸವ ಸಂದರ್ಭದಲ್ಲಿ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತಕ್ಕೆ ಆರಾಧನೆ ಇರುವುದು ತಿಳಿಯಿತು.ಈ ಭೂತ ಬೆಂಕಿಯನ್ನು ತಿನ್ನುತ್ತದೆ ಇದಕ್ಕೆ ಬೆಂಕಿಯೇ ಆಹಾರ ಎಂಬ ನಂಬಿಕೆ ಅಲ್ಲಿ ಪ್ರಚಲಿತವಿತ್ತು .ಆ ತನಕ ನಾನು ಅಗ್ನಿ ಚಾಮುಂಡಿ ಗುಳಿಗನ ಹೆಸರನ್ನು ಕೂಡಾ ಕೇಳಿರಲಿಲ್ಲ. ಅದರ ಕುರಿತಾದ ಪ್ರತೀತಿ ಇನ್ನಷ್ಟು ಕುತೂಹಲ ಉಂಟು ಮಾಡಿತು .ಈ ಬಗ್ಗೆ ದೇವಳದ ಅರ್ಚಕರಲ್ಲಿ ಹಾಗೂ ಸ್ಥಳೀಯರಲ್ಲಿ ವಿಚಾರಿಸಿದೆ .ಆಗ "ಈ ದೈವಕ್ಕೆ ಅಗ್ನಿ ಬಹಳ ಪ್ರಿಯ. ಅಗ್ನಿಯೇ ಅದರ ಆಹಾರ. ಆದ್ದರಿಂದ ಇದನ್ನು ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಅಷ್ಟ ಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿದೆ" ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದರು .ಭೂತ ಕುರಿತು ಮಾಹಿತಿ ಭೂತ ಕಟ್ಟುವ ಕಲಾವಿದರಿಗೆ ತಿಳಿದಿರುತ್ತದೆ. ಅವರು ಹೇಳುವ ಪಾಡ್ದನದಲ್ಲಿ ಭೂತದ ಕಥೆ ಇರುತ್ತದೆ. ಆ ತನಕ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತದ ಹೆಸರನ್ನು ನಾನು ಕೇಳಿರಲಿಲ್ಲ.ಹಾಗಾಗಿ ಡಾ || ಚಿನ್ನಪ್ಪ ಗೌಡರ ,ಡಾ. ವಿವೇಕ ರೈಗಳ ಪುಸ್ತಕದಲ್ಲಿನ ಭೂತಗಳ ಪಟ್ಟಿಯನ್ನು ನೋಡಿದೆ, ಅಲ್ಲೂ ಈ ಭೂತದ ಹೆಸರು ಇರಲಿಲ್ಲ.copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನ ಭೂತಗಳು ಮಖ್ಯವಾಗಿ ಮೂರು ವಿಧ. ಒಂದು ಮಾನವ ಮೂಲದ ದೈವಗಳು. ಕೊರಗ ತನಿಯ, ಕೋಟೆದ ಬಬ್ಬು, ಮುಕಾಂಬಿ ಗುಳಿಗ, ಬಬ್ಬರ್ಯ ,ಕೋಟಿ ಚೆನ್ನಯ, ಮುದ್ದ ಕಳಲ ಮೊದಲಾದ ಭೂತಗಳು ಈ ವರ್ಗದಲ್ಲಿ ಬರುತ್ತವೆ. ಎರಡನೆಯ ವರ್ಗ ಪ್ರಾಣಿ ಮೂಲ ದೈವಗಳು ಪಂಜುರ್ಲಿ, ಪಿಲಿ ಭೂತ , ಮೊದಲಾದವು ಈ ವರ್ಗದಡಿಯಲ್ಲಿ ಸೇರುತ್ತವೆ. ಮೂರನೆಯ ವರ್ಗ ಪುರಾಣ ಮೂಲ ದೈವಗಳು ರಕ್ತೇಶ್ವರಿ ,ಗುಳಿಗ, 
copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
 ಧೂಮಾವತಿ(ಜುಮಾದಿ ), ಚಾಮುಂಡಿ ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ .ಅಗ್ನಿ ಚಾಮುಂಡಿ ಗುಳಿಗ ಕೂಡಾ ಒಂದು ಪುರಾಣ ಮೂಲ ದೈವ ಇರಬಹುದು ಎಂದು ನಾನು ಭಾವಿಸಿದೆ. ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ ಚಾಮುಂಡಿ, ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಚಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ ‘ಚಾಮುಂಡಿ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿ.ಆದ್ದರಿಂದ ಅಗ್ನಿಚಾಮುಂಡಿ ಭೂತದ ಬಗ್ಗೆ ಅಧ್ಯಯನಮಾಡುವುದಕ್ಕಾಗಿ ಈ ಭೂತದ ನೇಮದಂದು ಕ್ಯಾಮೆರಾ ಮತ್ತು ರೆಕಾರ್ಡರ್ ಹಿಡಿದುಕೊಂಡು ಹೋದೆ .ರಾತ್ರಿ ಊಟದ ನಂತರ ಅಗ್ನಿ ಚಾಮುಂಡಿ ಭೂತದ ನೇಮ ಇತ್ತು .ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಬಂದ ಭೂತ ಕಟ್ಟುವ ಕಲಾವಿದ ಬಾಬು ಅರಂಬೂರು ಅವರು ಭೂತ ಕಟ್ಟಲು ಬೇಕಾದ ಪರಿಕರಗಳನ್ನು ಸಿದ್ಧಮಾದುತ್ತಿದ್ದರು .ಮೊದಲೇ ನನಗೆ ಅವರ ಪರಿಚಯ ಇತ್ತು.
copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
  ನಾನು ಹೋದಾಗ ನನಗೆ ಬೇಕಾದ ಮಾಹಿತಿಗಳನ್ನು ನೀಡಿದರು .ಭೂತ ಕಟ್ಟುವ ಕಲಾವಿದರು ಭೂತ ಕಟ್ಟಲು (ವೇಷ ಹಾಕಲು )ಸುರು ಮಾಡಿದ ಮೇಲೆ ಬೇರೆ ಯಾವುದೇ ವಿಚಾರಗಳನ್ನು ಮಾತಾಡುವುದಿಲ್ಲ .ಅವರಿಗೆ ಸಮಯವೂ ಇರುವುದಿಲ್ಲ. ಭೂತ ಕಟ್ಟಿ ಸಿದ್ಧವಾಗಲು ಸುಮಾರು ೩-೪ ಗಂಟೆ ಸಮಯ ಬೇಕಾಗುತ್ತದೆ .ಮೊದಲು ಒಡೆಯನಿಂದ ಭೂತ ಕಟ್ಟಲು ಆಣತಿ ಪಡೆದು ಎಣ್ಣೆ ಬೂಲ್ಯ ಪಡೆದು ಸ್ನಾನಮಾಡಿ ಬರುತ್ತಾರೆ .ಎಣ್ಣೆ ಬೂಲ್ಯ ಪಡೆಯುವಾಗ ದೈವಸ್ಥಾನದ ಎದುರು ನಿಂತು ದೈವದ ಎದುರು ನೇಮವನ್ನು ಯಾವುದೇ ಅಡ್ಡಿ ಆತಂಕ ಬಾರದಂತೆ ನೆರೆವೇರಿಸಿಕೊಡು ಎಂದು ಅರಿಕೆ ಮಾಡುತ್ತಾರೆ. ಆಗ ದೈವದ ಕಥಾನಕವನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ. ಅಗ್ನಿ ಚಾಮುಂಡಿ ಗುಳಿಗ ಉಗ್ರ ಸ್ವಭಾವದ ದೈವ .ಈ ದೈವದ ಆವೇಶ ಪುರಿಥ ಅಟ್ಟಹಾಸ ಉಗ್ರ ನರ್ತನ ನೋಡುಗರ ಎದೆ ಕಂಪಿಸುವಂತೆ ಮಾಡುತ್ತದೆ .copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 
 ಮಾನವ ಮೂಲದ ಈ ದೈವದ ಉಗ್ರ ಅಭಿನಯ ,ಆಕ್ರೋಶ ,ಅಟ್ಟಹಾಸಗಳು ದೈವತ್ವ ಪ್ರಾಪ್ತಿಗೆ ಮೊದಲು ನಡೆದ ಅನ್ಯಾಯದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದೆ ಮುಖಕ್ಕೆ ಅರದಲ ಹಚ್ಚಿ ಮೇಲೆ ಇಟ್ಟ ಬಿಳಿಬಣ್ಣದ ಚುಕ್ಕಿ, ಹಳದಿ ಬಣ್ಣದ ಗೆರೆಗಳು. ತುಟಿಯ ಮೇಲಿನ ಗುಲಾಬಿವರ್ಣದ ಗೆರೆಗಳು ಈ ಭೂತದ ಮುಖವರ್ಣಿಕೆಯಲ್ಲಿದ್ದು ಭೂತಕ್ಕೆ ಒಂದು ವಿಶಿಷ್ಟ ಕಳೆಯಯನ್ನು ತಂದು ಚಾಮುಡಿ ಗುಳಿಗ ಬೆಂಕಿಯನ್ನು ಪ್ರವೇಶ ಮಾಡುವಾಗ ಮೈ ರೋಮಾಂಚನಗೊಳ್ಳುತ್ತದೆ .ಇತರ ಭೂತಗಳಂತೆ ಆಳೆತ್ತರದ ಅಣಿ ಇರುವುದಿಲ್ಲ ,ಅದರ ಬದಲಿಗೆ ಕಲಾತ್ಮಕವಾಗಿ ತಯಾರಿಸಿದ ತೆಂಗಿನ ತಿರಿಯ ತಲೆ ಪತ್ತವಿರುತ್ತದೆ. ಅಲ್ಲಿ ರೆಕಾರ್ಡಿಂಗ್ ಗೆ ಏನೂ ತೊಂದರೆ ಆಗಲಿಲ್ಲ. ಸ್ಥಳೀಯರು ಹಾಗೂ ಭೂತ ಕಟ್ಟಿದ ಕಲಾವಿದ ಬಾಬು ,ಕಾಂತು ಹಾಗೂ ಅವರ ಕುಟುಂಬದ ಸದಸ್ಯರು ಎಲ್ಲರು ಪೂರ್ಣ ಸಹಕಾರ ನೀಡಿದರು . ಇದರಿಂದಾಗಿ ಅವರು ಹೇಳುವ ಆ ಭೂತದ ಪಾಡ್ದನವನ್ನು ರೆಕಾರ್ಡ್ ಮಾಡಿದೆ .ಇದರಿಂದಾಗಿ ಮೂಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಗುಳಿಗ ಎಂದು ಕರೆದು ಅಲ್ಲಿ ಆರಾಧಿಸುತ್ತಿದ್ದಾರೆ. ಎಂದು ನನಗೆ ಅಲ್ಲಿ ತಿಳಿದು ಬಂತು ಅಗ್ನಿ ಚಾಮುಂಡಿ ಗುಳಿಗ ನೇಮದ ವಿಧಾನಗಳು, ಅಗ್ನಿ ಚಾಮುಂಡಿಯ ಮುಖಮರ್ಣಿಕೆ ಹಾಗೂ ನೇಮದ ಸಂದರ್ಭದಲ್ಲಿ ಹೇಳುವ ಪಾಡ್ದನಗಳಿಂದ ಮುಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಸ್ಪಷ್ಟವಾಗಿ ಗೊತ್ತಾಯಿತು ನನಗೆ.
ಮುಕಾಂಬಿ ಎಂಬ ಬ್ರಾಹ್ಮಣ ಕನ್ಯೆಗೆ ಬಹಳ ಎಳೆಯದರಲ್ಲಿಯೇ ವಾಸಲ್ಲ ಭಟ್ಟರೊಂದಿಗೆ ವಿವಾಹವಾಗುತ್ತದೆ. ವಿವಾಹವಾದ ತುಸು ಸಮಯದಲ್ಲಿ ಬರ ಬಂದು ಬಡತನ ಆವರಿಸಿ ಶಾಂತಿ ಪೂಜೆಗಾಗಿ ಕೇರಳಕ್ಕೆ ಹೊರಡುತ್ತಾರೆ. ಕೇರಳಕ್ಕೆ ಹೋಗುವಾಗ ಮಡದಿ ಮುಕಾಂಬಿ ಜೇವಿನ ಹತ್ತಿರ ತಂದೆ ಮನೆಗೆ ಹೋಗಲು ತಿಳಿಸಿದಾಗ ಅವಳು ತಂದೆ ಮನೆಗೆ ಹೋಗಲೊಪ್ಪದೆ ಹಠಮಾಡಿ ವಾಸುಲ್ಲ ಭಟ್ಟರೊಂದಿಗೆ ಬರುತ್ತಾಳೆ. ಕಷ್ಟ ಬಂದಾಗ ಗಂಡನ ಕೈ ಬಿಡಬಾರದೆಂದು, ನಾನು ಜೊತೆಗೆ ಬರುತ್ತೇನೆ ಎಂದು ಮೂಕಾಂಬಿ ಜೇವು ಹಠ ಹಿಡಿಯುತ್ತಾಳೆ.
ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 
ಓಹೋಯೆ ಮುಕಾಂಬಿ ಜೇವೆ ಈ ಕೇಂಡಾನ
ಯಾನಾಂಡ ಪೋಪೆ ತೆನ್ಕಾಯಿ ಸಾಂತಿ ಪೂಜೆಗ್
ಈಯಾಂಡ ನಿನ್ನಪ್ಪೆನಡೆ ಪೊವೊಡಿಯಾ
ಯಾನಾಂಡ ಪೋವಾಯೆ ಕೇಂಡಾರ
ಈರೆ ಕೈಪತ್ತಿ ದೋಸೊಗು ಬೆರಿ ಬುಡಯೆಂದಳ್
ಕನ್ನಡ ಅನುವಾದ:

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
  ನಾನಾದರೂ ಹೋಗುವೆ ತೆಂಕು ಶಾಂತಿ ಪೂಜೆಗೆ
ನೀನಾದರು ನಿನ್ನ ತಾಯಿ ಮನೆಗೆ ಹೋಗಬೇಕು
ನಾನಾದರು ಹೋಗಲಾರೆ ಕೇಳಿದಿರಾ
ನಿಮ್ಮ ಕೈ ಹಿಡಿದ ದೋಷಕ್ಕೆ ಬೆನ್ನು ಬಿಡಲಾರೆ, ಎಂದಳು.
ಅದು ಹೆಂಗಸು ಹೋಗಬಾರದ ರಾಜ್ಯ. ಒಂದು ಬಳ್ಳ ಬತ್ತಕ್ಕೆ ತಲೆ ಕಡಿಯುವ ಜನರು ಅವರು. ನೀನು ಬರಬೇಡ, ನಿನ್ನ ತಂದೆ ಮನೆಯಲ್ಲಿ ಬಿಟ್ಟು ಹೋಗುತ್ತೇನೆ ಎಂದು ಗಂಡ ವಾಸುಭಟ್ಟರು ಹೇಳುತ್ತಾರೆ. ಆಗ ಮುಕಾಂಬಿ ಜೇವು ಮದುವೆಯ ನಂತರ ಬಡತನವಿದ್ದರೂ, ಸಿರಿತನವಿದ್ದರೂ ಹೆಣ್ಣಿಗೆ ಗಂಡನ ಮನೆಯೇ ಸರಿ ಎಂದು ವಾದಿಸುತ್ತಾಳೆ.
ಮದಿಮೆ ಆಪುನೆಕ್ ದುಂಬು ಮದಿಮಯ

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
 ಅಪ್ಪೆ-ಅಮ್ಮೆ ಇಲ್ಲುದ ಪೇರುನುಪ್ಪು ಆವುಯೆ
ಮದಿಮೆ ಆಯಿಬೊಕ್ಕ ಕಂಡನಿ ಇಲ್ಲ್‌ದ
ಕಣನೀರ್‌ನುಪ್ಪು ಆವುಯೆ
ಈರೆನ ಒಟ್ಟುಗು ಬರ್ಪೆಂದಲ್ ಮುಕಾಂಬಿ
ಕನ್ನಡ ಅನುವಾದ :
ಮದುವೆ ಆಗುವುದಕ್ಕೆ ಮೊದಲು ಮದುಮಗ
ತಾಯ್ತಂದೆಗಳ ಮನೆಯ ಹಾಲನ್ನವಾದೀತು
ಮದುವೆಯಾದ ಮೇಲೆ ಗಂಡನ ಮನೆಯ
ಕಣ್ಣೀರು ಅನ್ನವೂ ಆದೀತು
ನಿಮ್ಮೊಂದಿಗೆ ಬರುವೆನೆಂದಳು ಮುಕಾಂಬಿ
ಆಗ ಗಂಡ ವಾಸುಭಟ್ಟರು
ಈಲ ಬರಡ ಮುಕಾಂಬಿಯೆ ನಿನನ್ ಬುಡಯೆ ಜೇವೆ
ಇತ್ತ್ಂಡ ನಿಕ್ಕ್‌ಲ ಎಂಕ್‌ಲ ಒಂದು ಬೂಡು ಕೇಂಡಾನ
ಸೈತ್ಂಡ ನಿಕ್ಕ್‌ಲ ಎಂಕ್‌ಲ ಒಂಜಿ ಕಾಟಂದೆರ್
ಕನ್ನಡ ಅನುವಾದ:
ನೀನು ಬರಬೇಡ ಮುಕಾಂಬಿ ನಿನ್ನನ್ನು ಕೈ ಬಿಡುವುದಿಲ್ಲ ನಾನು
ಇದ್ದರೆ ನಿನಗೆ ನನಗೆ ಒಂದು ಬೀಡು
ಸತ್ತರೆ ನಿನಗೆ ನನಗೆ ಒಂದು ಚಿತೆ
ಇಲ್ಲಿ ಈ ದಂಪತಿಗಳ ಪ್ರೀತಿ-ಅಕ್ಕರೆಗಳು ವ್ಯಕ್ತವಾಗುತ್ತವೆ. ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ ಮುಂದೆ ವಾಸುಭಟ್ಟರು ಮತ್ತು ಮುಕಾಂಬಿ ಮಯ್ಯರ ಬೀಡಿನ ಸಮೀಪ ಬಂದಾಗ, ಕಡಂಬಾರ ಮಯ್ಯರು ಒತ್ತಾಯ ಮಾಡಿ ಇವರಿಬ್ಬರನ್ನು ತಮ್ಮ ಬೀಡಿಗೆ ಕರೆದೊಯ್ಯುತ್ತಾರೆ. ಕಡಂಬಾರ ಮಯ್ಯ ಇವರ ಸಮಾಚಾರವನ್ನು ವಿಚಾರಿಸಿ "ಕೇರಳ ಹೆಣ್ಣು ಮಕ್ಕಳು ಹೋಗುವ ರಾಜ್ಯ ಅಲ್ಲ. ಅಲ್ಲಿ ಒಂದು ಸೇರು ಭತ್ತಕ್ಕೆ ತಲೆಕಡಿಯುವ ಮಂದಿ ಇದ್ದಾರೆ. ನನಗೆ ಏಳು ಸೊಸೆಯಂದಿರು ಇದ್ದರೆ. ? ಕಲ್ಲಿನ ಗುಂಡಗಳಿವೆ. ? ಗುಂಡದಲ್ಲಿ ಮುಕಾಂಬಿ ಜೇವು ? ನೀವು ಹೋಗಿ ಬರುವ ತನಕ ಬಾರಿ ಜೋಕೆಯಿಂದ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ಕಡಂಬಾರು ಮಯ್ಯರನ್ನು ನಂಬಿದ ವಾಸುಭಟ್ಟರು ಮುಕಾಂಬಿಗೆ ಸಮ್ಮತವಿಲ್ಲದಿದ್ದರೂ ಕಡಂಬಾರು ಮಯ್ಯರ ಬೀಡಿನಲ್ಲಿ ಬಿಟ್ಟು ಮುಂದೆ ಸಾಗುತ್ತಾರೆ.

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 
  ವಾಸು ಭಟ್ಟರು (ತಂತ್ರಿ ಪಡ್ವನರು) ಹೋದ ನಂತರ, ಮುಕಾಂಬಿಜೇವು ಇರುವ ಕೋಣೆಯ ಸಮೀಪ ಬಂದು ನಾನು ನಿನ್ನ ಗಂಡ, ಬಾಗಿಲು ತೆಗೆ ಎಂದು ಹೇಳುತ್ತಾರೆ. ಆಗ ಮುಕಾಂಬಿ ನೀನು ನನ್ನ ಗಂಡನ್ನಲ್ಲ ಎಂದು ಹೇಳುತ್ತಾಳೆ. ಆಗ ರಾತ್ರಿ ಇಬ್ಬನಿ ಬಿದ್ದು, ಹಗಲಿನ ಬಿಸಿಲು ಬಡಿದು ಸ್ವರ ಬದಲಿದೆ ಎಂದು ಮಯ್ಯರು ಸುಳ್ಳು ಹೇಳುತ್ತಾರೆ. ಆಗ ಮುಕಾಂಬಿ ಸುಳ್ಳು ಹೇಳಬೇಡಿ, ನನ್ನ ಗಂಡ ಬರುವಾಗ ಆರಿದ ನಂದಾದೀಪ ಉರಿದೀತು, ಮಲಗಿದ ಹಸುಳೆಗಳು ಎಚ್ಚೆತ್ತು ಕೂಗಿಯಾವು. ಕೊಟ್ಟಿಗೆ ಕರುಗಳು ಅರಚಿಯಾವು, ಬಂಗಾರದ ಬಾಚಣಿಗೆ, ಬೆಳ್ಳಿ ಸೀರಣಿಗೆ ತರುತ್ತೇನೆ ಎಂದು ಹೇಳಿದ್ದಾರೆ. ನಾನು ಯಾವ ಮಾತಿಗೂ ಬಾಗಿಲು ತೆಗೆಯುವುದಿಲ್ಲ, ಅಂದು ಸೊಸೆ ಎಂದು ಹೇಳಿದಿರಿ ಈಗ ಮೋಸ ಮಾಡುತ್ತಿದ್ದೀರಿ ಎಂದು ಹೇಳುತ್ತಾಳೆ. ಆಗ ಕೋಪಗೊಂಡ ಮಯ್ಯರು ಬಾಗಿಲನ್ನು ತುಳಿದು ಒಡೆದು ಒಳ ಬರುತ್ತಾರೆ. ಕಡಂಬಾರ ಮಯ್ಯರು ನಂಬಿಕೆಗೆ ದ್ರೋಹ ಮಾಡಿ ಬಲಾತ್ಕಾರದಿಂದ ಮುಕಾಂಬಿ ಜೇವಿನ ಸಂಗ ಮಾಡುತ್ತಾರೆ.ಅಸಹಾಯಕ ಹುಡುಗಿ ಮೂಕಾಂಬಿ ಜೇವು ಕಡಮ್ಬಾರ ಮಯ್ಯನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ .ಅವಳನ್ನು ಬಲಾತ್ಕರಿಸಲು ಬಂದಾಗ ನನ್ನ ಮೈ ಮುಟ್ಟಿದರೆ ನಿಮ್ಮ ತಾಯಿಯನ್ನು ಮುಟ್ಟಿದ ದೋಷ ಇದೆ ಎಂದು ಹೇಳುತ್ತಾಳೆ ಆಗ ಅವನು ತಾಯಿ ಮುಟ್ಟಿದ ದೋಷ ತಾಯ ಎದೆ ಹಾಲು ಕುಡಿದಾಗ ಹೋಗುತ್ತದೆ ಎನ್ನುತ್ತಾನೆ .ನನ್ನ ಮೈ ಮುಟ್ಟಿದರೆ ಕಾಶಿಯಲ್ಲಿ ಕಪಿಲೆ ಹಸುವನ್ನು ಕೊಂದ ದೋಷ ಬರುವುದು ಎಂದು ಹೇಳಿದಾಗ ಆತ ಕಪಿಲೆ ಕೊಂದ ದೋಷವನ್ನು ಕಾಶಿಗೆ ಹೋಗಿ ಕಳೆದು ಕೊಳ್ಳುತ್ತೇನೆ ಎಂದು ಹೇಳಿ ಅವಳನ್ನು ಬಲಾತ್ಕಾರದಿಂದ ಭೋಗಿಸುತ್ತಾನೆ. ಅವಳ ಪ್ರತಿರೋಧವನ್ನು ಲೆಕ್ಕಿಸದೆ ಅವಳ ದೇಹ ಸಂಗವನ್ನು ಮಾಡುತ್ತಾರೆ.
copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
  ಸ್ವಲ್ಪ ಸಮಯ ಕಳೆದಾಗ ಅವಳು ಗರ್ಭಿಣಿಯಾಗುತ್ತಾಳೆ .ಒಂದು ದಿನ ಅವಳು ಕಟ್ಟಡ ನೀರಿಗೆ ನೀರು ತರಲೆಂದು ಹೋಗುವಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರು ಅವಳನ್ನು ನೋಡಿ ಕಡಮ್ಬಾರ ಮಯ್ಯನಿಂದಾಗಿ ಇವಳು ಹೊಟ್ಟೆ ಹೊತ್ತು ಕೊಂಡಿದ್ದಾಳೆ ಎಂದು ಅಪಹಾಸ್ಯ ಮಾಡಿ ನಗಾಡುತ್ತಾರೆ .ಲೋಕ ನಿಂದೆಯನ್ನು ತಾಳಲಾರದೆ ಮೂಕಾಂಬಿ ಜೇವು ಪ್ರಾಣ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.
ಮುಕಾಂಬಿ ಜೇವು ತನ್ನ ಗಂಡನ ಮನೆಯ ನಂಬಿಕೆಯ ದೈವ ಗುಳಿಗನನ್ನು ನೆನೆದು ಕಡಂಬಾರ ನೀರಿನ ಕಟ್ಟಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಮುಕಾಂಬಿಜೇವು ಕಡಂಬಾರ ಅಣೆಕಟ್ಟಿಗೆ ಹೋಗಿ ಮೂರು ಮುಳುಗು ಹಾಕಿ, ಮುಕಾಂಬಿ ಗುಳಿಗ ಇದ್ದಲ್ಲಿ ಗಿಳಿ ಚಾಮೆ ಬತ್ತದ ತೆನೆಯನ್ನು ತೆಗೆದುಕೊಂಡು ಹೋಗುವಂತೆ (ಗಿಣಿ ಚಾಮೆದ ಕುರಲುನು ಕೊಂಡೋಪಿ ಲೆಕ್ಕೋ ಎನ್ನನು ಕೊಂಡೋವೊಡು) ನನ್ನ ಪ್ರಾಣ ತೆಗೆಯಲಿ. ನನ್ನ ಗಂಡ ಬಂದ ಬಳಿಕ ಸತ್ಯವನ್ನು ಗಿಳಿ ನುಡಿದಂತೆ ನುಡಿಯಬೇಕು ಎಂದು ಹೇಳಿ ನೀರಿನಲ್ಲಿ ಮುಳುಗುತ್ತಾಳೆ.. ಮೂಕಾಂಬಿ ನೀರಿಗೆ ಹಾರಿ ಪ್ರಾಣ ತ್ಯಾಗ ಮಾಡಿದಾಗ ಕಡಂಬಾ ಮಯ್ಯ ಏನು ಅರಿಯದವನಂತೆ ಮುಕಾಂಬಿಜೇವಿನ ತಂದೆ ಮುದ್ದುಲ್ಲ ಭಟ್ಟರಿಗೆ ಹಾಗೂ ತಾಯಿ ಅರ ಕ್ಕೆ ಮದಿಮಾಳರಲ್ಲಿಗೆ ಆಳುಗಳನ್ನು ಕಳುಹಿಸಿ, "ಪಡ್ವನರು ಮುಕಾಂಬಿಯನ್ನು ಕಡಂಬಾರ ಬೀಡಿನಲ್ಲಿ ನಿಲ್ಲಿಸಿದ್ದು, ಅವಳು ಹುಡುಗಿ ಹೋಗಿ ಹೆಂಗಸಾಗಿದ್ದಾಳೆ. ನೀವು ಕರೆದುಕೊಂಡು ಹೋಗಿ "ಎಂದು ಹೇಳಿ, ಕಳುಹಿಸುತ್ತಾರೆ. ತಂದೆ-ತಾಯಿ ಸಂತೋಷದಿಂದ ಅವಲಕ್ಕಿಯ ಮುಡಿ, ತೆಂಗಿನಕಾಯಿ ತೆಗೆದುಕೊಂಡು ಹೊರಡುತ್ತಾರೆ.

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
 ಇತ್ತ ತಂತ್ರಿ ಪಡ್ವನರಿಗೆ(? ) ಕನಸಿನಲ್ಲಿ ಗಳಿಗೆಯೊಳಗೆ ಬರಬೇಕೆಂದು ಗುಳಿಗ ದೈವ ತಿಳಿಸುತ್ತದೆ. ಪಡ್ವನರು ಕಡಂ ರ ಬೀಡಿಗೆ ಬಂದು ನೋಡುವಾಗ ಮುಕಾಂಬಿಜೇವಿನ ಜೀವ ಹೋಗಿದೆ. ತಲೆ ತಲೆ ಬಡಿದುಕೊಂಡು ಅಳುತ್ತಾರೆ. ಪಡ್ವನರು ಕಾಷ್ಠ ಸಿದ್ಧಪಡಿಸಿ, ಮೂರು ಸುತ್ತು ಬಂದು ಮುಕಾಂಬಿಯ ದೇಹವನ್ನು ಚಿತೆಯಲ್ಲಿ ಇರಿಸುತ್ತಾರೆ. ಯಾರು ಮುಕಾಂಬಿಯೇ ಕೇಳಿದೆಯಾ? ಇದ್ದರೆ ನನಗೂ ನಿನಗೂ ಒಂದೇ ಬೀಡು, ಸತ್ತರೆ ನನಗೂ ನಿನಗೂ ಒಂದೇ ಕಾಷ್ಠ. ಮೋಸ ಮಾಡಿ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ, ತಗಟೆ ಮೊಳೆಯಲಿ ಎಂದು ಶಾಪ ಕೊಟ್ಟ ಪಡ್ವನರು ಚಿತೆಗೆ ಹಾರುತ್ತಾರೆ.
copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
  ಏರ್‌ಯ ಮುಕಾಂಬಿಯೆ ಕೇನಿದನ
ಇತ್ತ್ಂಡ ನಿಕ್ಕೆಂಕ್ ಒಂಜಿ ಬೂಡು
ಸೈತ್ಂಡ್ ನಿಕ್ಕೆಂಕ್ ಒಂಜಿ ಕಾಟ
ಮೋಸಗಾತರ ಮಲ್ತಿ ಮಯ್ಯೆರೆ ಬೂಡುಗು ಕೊಟ್ಟು ಗುದ್ದೋಲಿ ಬೂರಡು
ತಜಂಕ್ ಕೊಡಿಪಡ್ ಪಂಡ್‌ದ್
ಕೊರನ ಪಾಪ ಕೊರಿಯೆರ್ ಜಂತಿರಿ ಪಡ್ವನಾರ್
ಕಾಟೊಗು ಮೂಜಿ ಸುತ್ತು ಬತ್ತೆರ್
ಕಾಟೊಗು ದಿಡ್‌ಕಪ್ಪಲಾಗಿಯೆರ್
ಕಾಟೊಡು ಪಡ್ವನಾಯೆರ್‌ಲ ಮುಕಾಂಬಿಲ ಪೊತ್ತೊವೆರ್
ಕನ್ನಡ ಅನುವಾದ:
ಓ ಮುಕಾಂಬಿಯೇ ಕೇಳಿದೆಯ
ಇದ್ದರೆ ನನಗೂ ನಿನಗೂ ಒಂದೇ ಬೀಡು
ಸತ್ತರೆ ನನಗೂ ನಿನಗೂ ಒಂದೇ ಕಾಷ್ಟ
ವಿಶ್ವಾಸಘಾತ ಮಾಡಿದ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ
ತಗತೆ ಬೆಳೆಯಲಿ ಎಂದು
ಕೊಡಬಾರದ ಶಾಪ ಕೊಟ್ಟರು ತಂತ್ರಿ ಪಡ್ವನಾರ್
ಕಾಷ್ಠಕ್ಕೆ ಮೂರು ಸುತ್ತು ಬರುವರು

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ 
 ಕಾಷ್ಠಕ್ಕೆ ದಡಕ್ಕನೆ ಹಾರುವರು
ಕಾಷ್ಠದಲ್ಲಿ ವಾಸುಭಟ್ಟರು ಮುಕಾಂಬಿಯು ಉರಿಯುವರು
ಹೆಂಡತಿಯ ಮೇಲಿನ ಪ್ರೀತಿಯಿಂದ ಗಂಡ ವಾಸುಭಟ್ಟರು ಹಾರಿ ಸಾಯುತ್ತಾರೆ. ದುಃಖ ತಡೆಯದ ಮುಕಾಂಬಿಯ ತಾಯಿ-ತಂದೆಯ ಚಿತೆಗೆ ಹಾರಿ ಸಾಯುತ್ತಾರೆ. ಮುಕಾಂಬಿ ತೀರಿಕೊಂಡ ಕ್ರಿಯೆ ಕಳೆದ ಮೂರನೆಯ ದಿನ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳುತ್ತದೆ. ತಗಟೆ ಬೆಳೆಯುತ್ತದೆ. ಸತ್ತ ಮುಕಾಂಬಿಜೇವು ದೈವವಾಗಿ ದ್ವೇಷ ತೀರಿಸಿದರೆ ಎಂಬ ಭಯದಿಂದ ಅವಳ ಆರಾಧನೆ ಆರಂಭವಾಗಿರಬೇಕು. ಕಡಂಬಾರ ಮಯ್ಯರ ಬೀಡನ್ನು ಮುಕಾಂಬಿಯ ಬಂಧುಗಳು ಹಾಳು ಮಾಡಿರಬಹುದು ಅಥವಾ ಕಾಲಾಂತರದಲ್ಲಿ ಹಾಳು ಬಿದ್ದಿರಬಹುದು. ಮುಕಾಂಬಿ ಚಿತೆಯಲ್ಲಿ ಉರಿದುದರ ಪ್ರತೀಕವಾಗಿ ಮಾರಿಸೂಟೆಗೆ ಹಾರಿ ಬೆಂಕಿಯಲ್ಲಿ ಮಲಗುವ ಅಭಿನಯವನ್ನು ಮುಕಾಂಬಿ ಗುಳಿಗದ ಭೂತ ಮಾಧ್ಯಮರು ಮಾಡುತ್ತಾರೆ. ಇದರಿಂದ ಮುಕಾಂಬಿ ಗುಳಿಗನನ್ನು ಅಗ್ನಿ ಚಾಮುಂಡಿ ಗುಳಿಗ ಎಂದು ಕರೆಯುತ್ತಾರೆ.
ತುಳುನಾಡಿನಲ್ಲಿ ದುರಂತವನ್ನಪ್ಪಿದವರು ದೈವತ್ವವನ್ನು ಪಡೆಯುವುದು ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ವಿಚಾರ . ಇಲ್ಲಿ ಅಂತು ಮೂಕಾಂಬಿ ಕಡಮ್ಬಾರು ಮಯ್ಯನಿಂದ ದೌರ್ಜನ್ಯಕ್ಕೆ ಒಳಗಾದದ್ದು ಮಾತ್ರವಲ್ಲ ತನ್ನ ಗಂಡನ ಮನೆಯ ಗುಳಿಗನನ್ನು ನಂಬಿ ಕಟ್ಟದ ನೀರಿಗೆ ಹಾರಿದ್ದಾಳೆ ಆದ್ದರಿಂದ ಅವಳು ಗುಳಿಗ ದೈವದ ಸನ್ನಿಧಿಗೆ ಸೇರಿ ದೈವತ್ವವನ್ನು ಪಡೆದದ್ದು ಅಸಹಜ ವಿಚಾರವೇನು ಅಲ್ಲ. ಅವಳು ಕಟ್ಟದ ನೀರಿಗೆ ಹಾರುವುದು ಪುರುಷ ದೌರ್ಜನ್ಯಕ್ಕೆ ತೋರಿದ ಪ್ರತಿಭಟನೆಯಾಗಿದೆ. ಅದರೊಂದಿಗೆ ಗುಳಿಗ ದೈವದ ನಂಬಿಕೆ ತಳಕು ಹಾಕಿಕೊಂಡಿದೆ. ಇದರಿಂದಾಗಿ ಅವಳು ಗುಳಿಗನ ಸೇರಿಗೆಯ ದೈವವಾಗಿ ಮೂಕಾಂಬಿ ಗುಳಿಗನಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ .

copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 
 
ವೈದಿಕ ಪರಂಪರೆಯ ದೇವರುಗಳ ಪ್ರಭಾವದಿಂದಾಗಿ ಮೂಕಾಂಬಿ ಗುಳಿಗ ಅಗ್ನಿ ಚಾಮುಂಡಿ ಗುಳಿಗನಾಗಿ ಪರಿವರ್ತನೆ ಹೊಂದಿದೆ. ಮೂಕಾಂಬಿ ಎಂಬ ಹೆಸರನ್ನು ಅನುಲಕ್ಷಿಸಿ ಈ ದೈವದ ಆರಾಧನೆಯ ಸಂದರ್ಭದಲ್ಲಿ ಕೊಲ್ಲೂರು ಮುಕಾಂಬಿಕಾ ದೇವಿಯ ಪುರಾಣದ ಕಥೆಯನ್ನು ಸೇರಿಸಿ ಹೇಳುತ್ತಾರೆ .ಆದರೆ ಮಾರಿ ಸೂಟೆಯ ಮೇಲೆ ನಡೆಯುವಾಗ ಮುಕಾಂಬಿ ಗುಳಿಗನ ಮೂಲ ಪಾಡ್ದನವನ್ನು ಹಾಡುತ್ತಾರೆ. ಚಾಮುಂಡಿಯೊಂದಿಗೆ ಸಮನ್ವಯಗೊಂಡಿರುವುದರಿಂದ ಮೂಕಾಂಬಿ ಗುಳಿಗನ ಸೇರಿಗೆಯ ದೈವವಾಗಿದ್ದರೂ ಕೂಡ ಕಾಲಾಂತರದಲ್ಲಿ ಗುಳಿಗನನ್ನು ಮೀರಿ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ . ವೈದಿಕ ಪ್ರಭಾವದಿಂದ ಮುಂದೊಂದು ದಿನ ಅಗ್ನಿ ಚಾಮುಂಡಿ ದೈವದ ಮೂಲವಾಗಿರುವ ಮೂಕಾಂಬಿ ಜೇವಿನ ಕಥಾನಕ ಜನ ಮಾನಸದಿಂದ ದೂರವಾಗಿ ಬಿಡುವ ಸಾಧ್ಯತೆ ಇದೆ. ಅಗ್ನಿ ಚಾಮುಂಡಿ ಶುದ್ಧ ವೈದಿಕ ದೇವತೆಯಾಗಿ ಪರಿಗಣಿಸಲ್ಪಡುವ ದಿನಗಳು ಹೆಚ್ಚು ದೂರವಿಲ್ಲ.
ಕರಾವಳಿಯ ಸಾವಿರದೊಂದು ದೈವಗಳು  ಗ್ರಂಥದ ಆಯ್ದ ಭಾಗ ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ್ 

Sunday, 1 October 2023

ಜನಪ್ರಿಯ ದೈವ ಕೊರಗ ತನಿಯ- © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ )



ಜನಪ್ರಿಯದೈವ ಕೊರಗ ತನಿಯ- © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ  ಆಯ್ದ ಭಾಗ )





(ಫೋಟೋಗಳು:ಲೇಖಕಿಯವು)
ವೃದ್ಧರಿಂದ ಹಿಡಿದು ಎಳೆಯ ಮಕ್ಕಳವರೆಗೆ ಎಲ್ಲರು ನೋಡಿರುವ ಇಷ್ಟ ಪಡುವ ದೈವ ಕೊರಗ ತನಿಯ .ಎಲ್ಲ ಭೂತಗಳು ತನ್ನ ಉಗ್ರ ಅಟ್ಟಹಾಸ ಕುಣಿತಗಳಿಂದ ಜನರ ಮನದಲ್ಲಿ ಭಯ ಬಿತ್ತಿ ನಡುಕ ಉಂಟು ಮಾಡಿದರೆ ಕೊರಗ ತನಿಯ ಹಾಸ್ಯದ ಅಭಿವ್ಯಕ್ತಿಯಿಂದ ಜನರಿಗೆ ಹತ್ತಿರವಾಗಿದ್ದಾನೆ.ಈತ ಬಹಳ ಸಾತ್ವಿಕ ಗುಣದ ದೈವತ.ಮಕ್ಕಳಿಗೆ ಈತ ಬಹಳ ಪ್ರಿಯನಾದವನು .ಮನೆಯಲ್ಲಿ ಯಾವುದಾದರೊಂದು ವಸ್ತು ಕಾಣೆಯಾದರೆ ,ಕಳ್ಳತನವಾದರೆ ಕೊರಗ ತನಿಯನನ್ನು ನೆನೆದು ಆತನಿಗೆ ಹರಿಕೆಯಾಗಿ ಒಂದು ಕುಪ್ಪಿ ಕಳ್ಳು ಅಥವಾ ಸಾರಾಯಿ ಕೊಡುತ್ತೇನೆ ಎಂದು ಹರಿಕೆ ಹೇಳಿದರೆ ಸಾಕು ಕಳ್ಳತನ ವಾದ ವಸ್ತುಗಳು, ಕಾಣೆಯಾದ ವಸ್ತುಗಳು ಪತ್ತೆಯಾಗಿ ಬಿಡುತ್ತವೆ .ದನ ಕರುಗಳಿಗೆ ಏನಾದರು ತೊಂದರೆ ಆದರು ಕೊರಗ ತನಿಯನಿಗೆ ಮೊರೆ ಹೋಗುತ್ತಾರೆ ತುಳುವರು.ಎಲ್ಲರ ದನ ಕರು ಬೆಳೆಗಳ ರಕ್ಷಣೆಯ ಕಾರ್ಯವನ್ನು ಕೊರಗತನಿಯ ಭೂತ ಮಾಡುತ್ತದೆcopy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ )
ತುಳುನಾಡಿನ ಎಲ್ಲೆಡೆಗಳಲ್ಲಿ ಆರಾಧಿಸಲ್ಪಡುವ ಕೊರಗತನಿಯ ದೈವವನ್ನು ಅಗೇಲು ಹಾಗೂ ಕೋಲ ನೀಡಿ ಆರಾಧಿಸುತ್ತಾರೆ. ಕೊರಗತನಿಯ ಕೊರಗ ಜನಾಂಗದಲ್ಲಿ ಹುಟ್ಟಿ ಅಸಹಜ ಮರಣವನ್ನಪ್ಪಿದ ಅಸಾಮಾನ್ಯ ವೀರ. ಹಾಳೆಯ ಮುಟ್ಟಾಳೆ ಧರಿಸುವ ಈ ದೈವದ ವೇಷ ವಿಶಿಷ್ಟವಾದುದು.ಇತರ ಭೂತಗಳಂತೆ ಈತನಿಗೆ ದೊಡ್ಡದಾದ ಅಣಿ ಜಕ್ಕೆಳಣಿಗಳು ಇರುವುದಿಲ್ಲ.ಈತನ ಕುಣಿತದಲ್ಲಿ ಉಗ್ರತೆ ಇರುವುದಿಲ್ಲ .ಈತನ ಹುಟ್ಟು ಕೊರಗರ ಕೊಪ್ಪದಲ್ಲಿ ಆಗುತ್ತದೆ.
 ಕೊರಗೆರ್ ಪುಟ್ಯೇರ್‌ಯಾ ಓಲು ಪನ್ನಗ
ಕಾಂತಣ ಕದ್ರಡು, ಬೆಂದ್ರಣ ಬೆದ್ರಡು
ಜಪ್ಪು ಕರ್ನೂರು, ಮೂಲ್ಕಿ ಮುನ್ನೂರು . . .
ಕನ್ನಡ ಅನುವಾದ:







                                                           ಚಿತ್ರ ಕೃಪೆ :ತುಳುನಾಡ ಪೊರ್ಲು
ಕೊರಗರು ಹುಟ್ಟಿದರು, ಎಲ್ಲಿ ಎಂದು ಹೇಳುವಾಗ
ಕಾಂತಣ ಕದಿರೆಯಲ್ಲಿ, ಬೆಂದಣ ಬಿದರೆಯಲ್ಲಿ
ಜಪ್ಪು ಕರ್ನೂರು, ಮೂಲ್ಕಿ ಮುನ್ನೂರು . . .
ಎಂದು ಪ್ರಾರಂಭವಾಗುವ ಕೊರಗ ತನಿಯ ಪಾಡ್ದನವು ಕೊರಗ ಜನಾಂಗ ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶವನ್ನು ಅಂದರೆ ಕದ್ರಿ, ಮೂಡಬಿದ್ರೆ, ಜಪ್ಪು, ಮೂಲ್ಕಿ ಮುಂತಾದ ಪ್ರದೇಶಗಳನ್ನು ನಿರ್ದೇಶಿಸುತ್ತದೆ. ಇಂತಹ ಒಂದು ಕೊಪ್ಪದಲ್ಲಿ ಕೊರಗ ಮತ್ತು ಕೊರಪ್ಪೊಳುಗೆ ವುರವನ ಓಡಿ ಎಂಬ ಮಗ ಹುಟ್ಟುತ್ತಾನೆ. ಈತ ಹುಡುಗಾಟ ಬಿಟ್ಟು ದೊಡ್ಡವನಾದಾಗ ಈತನಿಗೊಂದು ಒಪ್ಪುವ ಹೆಣ್ಣನ್ನು ಹುಡುಕುತ್ತಾರೆ. ಅವನ ಸೋದರಮಾವ ತಿರ್ತಮಲೆ ಕೊಪ್ಪದಲ್ಲಿ ಹುಡುಗಿ ಇದ್ದಾಳೆ ಎನ್ನುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ  ಆಯ್ದ ಭಾಗ )
 ಅಲ್ಲಿ ಕಡ್‌ಮಮಲೆಕೊಪ್ಪದಲ್ಲಿ ಇದ್ದಾಳೆ ಎಂದು ಹೇಳುತ್ತಾರೆ. ಏಳುಮಲೆಯ ಕೊರಗರೆಲ್ಲ ಸೇರಿ ಅಲ್ಲಿಗೆ ಹೋದಾಗ ಕೊರಪಳು ಮೈರೆ ತಂದೆಯ ತಲೆಯ ಹೇನು ಹೆಕ್ಕಿ ಆಯಾಸಗೊಂಡು ಮೇಲೆ ನೋಡುತ್ತಾಳೆ. ಆಗ ಮನೆಗೆ ನೆಂಟರು ಬರುವುದನ್ನು ಕಂಡು ನಮ್ಮ ಮನೆಗೆ ನೆಂಟರು ಬರುವ ಚಂದ ನೋಡು ಎನ್ನುತ್ತಾಳೆ. ಆಗ ತಂದೆ ನೀನು ಇಷ್ಟು ಚಿಕ್ಕವಳು, ನಿನಗೆ ಗಂಡಿನ ನೆನಪಾಯಿತೆ? ನಿನ್ನ ಅಂಗೈಯ ಗೆರೆ ಮಾಸಿಲ್ಲ, ಕಂಕುಳಡಿಯ ಹುಟ್ಟುಕಂಪು ಅಡಗಲಿಲ್ಲ ಎಂದು ಹೇಳುತ್ತಾನೆ. ಆಗ ಅವಳು ಆಯಾಸವಾಗಿ ತಲೆ ಎತ್ತಿ ನೋಡಿದಾಗ ಕಂಡಿತೆಂದು ಹೇಳುತ್ತಾಳೆ.

ಒಳಗೆ ಹೋಗು, ಬಾಜಿರ ಉಜ್ಜಿ ಕಸ ಗುಡಿಸಿ, ಅತ್ತರು ಹಾಕು, ನೀರು ತಾ ಮಾಡಿನಡಿಯಲ್ಲಿ ಇಡು ಎಂದು ಆದೇಶಿಸಿದ ತಂದೆ, ಮನೆಗೆ ಬಂದವರನ್ನು ಸ್ವಾಗತಿಸಿ, ಮುಟ್ಟಾಳೆಯಲ್ಲಿ ಚಿಗುರು ವೀಳ್ಯ, ಎಲೆ ಅಡಿಕೆ ಹೋಳು, ಗಡಿಗೆಯ ಕಳ್ಳು ಕೊಟ್ಟು ಸತ್ಕರಿಸುತ್ತಾನೆ. ಬಂದ ನೆಂಟರು ಕೊಡುವ ಕೊರಪಳು ಉಂಟೋ ಮಾರುವ ಡೋಲು ಉಂಟೋ? ಎಂದು ಕೇಳುತ್ತಾರೆ.

ಕೊಡುವ ಹೆಣ್ಣನ್ನು ಕೊಟ್ಟು ಆಗಿದೆ, ಮಾರುವ ಡೋಲನ್ನು ಮಾರಿ ಆಗಿದೆ ಎಂದು ಮೈರೆ ತಂದೆ ಹೇಳುತ್ತಾನೆ. ಆಗ ಕೊಟ್ಟ ಹೆಣ್ಣಿನ ಬಗ್ಗೆ ಕೇಳುವುದಕ್ಕೆ ನಾವು ಬಂದಿಲ್ಲ. ಮಾರಿದ ಡೋಲಿನ ಕ್ರಯ ಕೇಳಲಾರೆವು. ಇರುವ ಹುಡುಗಿಯನ್ನು ಕೊಡುತ್ತೀರೊ? ಎಂದು ನೆಂಟರು ಕೇಳುತ್ತಾರೆ. ಆಗ ಇರುವ ಒಬ್ಬಳೆ ಹುಡುಗಿ ತೀರ ಚಿಕ್ಕವಳು, ಏನೊಂದೂ ಕೆಲಸ ಮಾಡಿ ಅಭ್ಯಾಸವಿಲ್ಲದವಳು, ನಾಲ್ಕು ಮೂಲೆಯ ಕಸವನ್ನು ಒಂದು ಕಡೆ ಮಾಡಲರಿಯದವಳು ಎನ್ನುತ್ತಾನೆ ತಂದೆ.

ಆಗ ನಮ್ಮ ಕೊಪ್ಪದಲ್ಲಿ ಮೊದಲು ಬಂದ ಕೊರಪ್ಪೊಳು ಇದ್ದಾರೆ. ಹೇಳಿ ಕಲಿಸುತ್ತಾರೆ. ನಮಗೆ ಕಾಲ ತಡವಾಗುತ್ತದೆ ಎಂದಾಗ ಒಪ್ಪಿದ ತಂದೆ ಮದುವೆಗೆ ದಿನ ನಿಶ್ಚಯ ಮಾಡಿ ಅಡಿಕೆ ವೀಳ್ಯ ಬದಲಿಸಿಕೊಳ್ಳುತ್ತಾರೆ. ಮದುವೆಯ ಸಿದ್ಧತೆ ಆರಂಭವಾಯಿತು. ಹೆಣ್ಣಿನ ಕಡೆಯಲ್ಲಿ ಬಾಳೆ ಕಡಿದು ಅಲಂಕಾರ ಮಾಡಿ ಚಪ್ಪರ ಹೊದಿಸಿದರು. ಎರಡೂ ಕಡೆಯ ನೆಂಟರು ಬಂದು ಸೇರಿದರು. ನಾನಾವಿಧದ ಅಡಿಗೆ ಮಾಡಿಸಿದರು. ಊಟ ಉಪಚಾರ ನಡೆಯಿತು. ಕ್ರೀಡೆ, ಹಾಸ್ಯಗಳು ನಡೆದವು. ಊಟದ ನಂತರ ವುರವನ ಓಡಿಯನ್ನು ಕೊರಪಳು ಮೈರೆಯನ್ನು ಅಲಂಕರಿಸಿ ಸೇಸೆಗೆ ಪ್ರದಕ್ಷಿಣೆ ಮಾಡಿಸಿ, ಧಾರೆಮಣೆಯಲ್ಲಿ ಕುಳ್ಳಿರಿಸಿ ಕೈಧಾರೆ ಪೂರೈಸಿದರು.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು  ಕೃತಿಯ ಆಯ್ದ ಭಾಗ ) ಮದುವೆಯಾಗಿ ಕೆಲದಿನಗಳ ನಂತರ ಮೈರೆ ಋತುಸ್ನಾನ ಮಾಡಿದಳು. ತನ್ನ ಕೊಪ್ಪಕ್ಕೆ ಬಂದು ಇದೊಂದು ನೀರು ನಿಂತರೆ (ಗರ್ಭ ಧರಿಸಿದರೆ) ಕಾಂತಾವರ ದೇವರನ್ನು ನೋಡುವೆ, ಹಿಡಿ ಹಣ ಹರಕೆ ಹಾಕುವೆ, ಉಳ್ಳಾಯನನ್ನು ನೋಡಿ ಮೂಲಕ್ಕೆ ನೀರು ಹೊಯ್ಯುವೆ ಎಂದಳು. ಮೈರೆ ಚೊಚ್ಚಲ ಗರ್ಭ ಧರಿಸಿದಳು. ಏಳು ತಿಂಗಳಾದಾಗ ಬಯಕೆ ಸಮ್ಮಾನ ಮಾಡಿದರು.

 ಹತ್ತನೇ ತಿಂಗಳಿನಲ್ಲಿ ಬೆನ್ನಿನಲ್ಲಿ ಬ್ರಹ್ಮದೇವರ ಬೇನೆ, ಹೊಟ್ಟೆಯಲ್ಲಿ ಮಗುವಿನ ಬೇನೆ ಬರುತ್ತದೆ. ಕಂಡ ಬೇನೆಯಲ್ಲಿ ನಮ್ಮ ಕೊರಪಳು ಮೈರೆ ಮಗುವನ್ನು ಪಡೆದರೆ ನಾವು ನಂಬಿದ ಕುಲದೈವಗಳಿಗೆ ಕೋಳಿ ಅಟ್ಟು ಔತಣ ಕೊಡುತ್ತೇವೆ ಎಂದು ಹರಿಕೆ ಹೇಳಿದರು. ಗಂಡುಮಗುವಿಗೆ ಜನ್ಮವಿತ್ತಳು ಮೈರೆ. ಹನ್ನೊಂದನೆಯ ದಿನ ಅಮೆ ಮಾಡಿದರು.

 ಶನಿವಾರ ಹುಟ್ಟಿದ ಮಗುವಿಗೆ ತನಿಯ ಎಂದು ಹೆಸರಿಟ್ಟರು. ಮಗುವನ್ನು ನೋಡುವಾಗ ಈಶ್ವರ ದೇವರ ಶಾಪ ನೆನಪಾಗುತ್ತದೆ ಮೈರೆಗೆ. ಅವಳ ಮದುವೆಯಾದ ಹೊಸತರಲ್ಲಿ ಕಾಡಿಗೆ ಹೋಗಿ ಬಳ್ಳಿ ಹೆರೆಯುತ್ತಿರುವಾಗ ಲೋಕಬಾರಿ ಈಶ್ವರದೇವರು ಬಂದು, ಮೈರೆಯ ಮುಡಿ ನೋಡಿ ಪಾರ್ವತಿಯಂತೆ ಭಾಸವಾಗಿ ಅವಳಲ್ಲಿ ಮೋಹಗೊಳ್ಳುತ್ತಾರೆ. ಅವಳನ್ನು ಮೋಹಿಸಿ ಸೇರಲು ಬಂದ ಈಶ್ವರನನ್ನು ದೇವರೆಂದು ಉಪಚರಿಸಿ, ತಂದೆಯೆಂದು ಗೌರವ ತೋರಿ ದೂರ ಇರಿಸುತ್ತಾಳೆ. ಆ

ಗ ಈಶ್ವರ ದೇವರು ನಿನ್ನ ಹೊಟ್ಟೆಯಲ್ಲಿ ಗಂಡು ಹುಳ ಹುಟ್ಟಲಿ. ಅದು ಹುಟ್ಟಿದ ನಂತರ ನಿನ್ನ ಸಂತಾನ ನಾಶವಾಗಲಿ ಎಂದು ಶಾಪ ಕೊಟ್ಟಿರುತ್ತಾನೆ. ಈಶ್ವರದೇವರ ಶಾಪವೊ ಎಂಬಂತೆ ಕೊರಗ ತನಿಯ ಮೊಲೆ ಹಾಲು ಕುಡಿಯವ ಸಮಯದಲ್ಲಿ ತಾಯಿಗೆ ಅಳಿವಾಗುತ್ತದೆ. ಅಪ್ಪನ ಹಿಡಿಯೂಟ (ಗಂಜಿಯೂಟ) ತಿನ್ನುವ ಸಮಯದಲ್ಲಿ ತಂದೆ ಸಾಯುತ್ತಾನೆ. ಅತ್ತೆ ಅಕ್ಕರೆಯಿಂದ ಸಾಕಲು ಅತ್ತೆಯೂ ಅಳಿಯುತ್ತಾಳೆ. ಏಳು ಕೊಪ್ಪದ ಕೊರಗರಿಗೆ ನಾಲ್ಕು ದಿಕ್ಕಿನ ಮಾರಿ ತಂದು ಕೊರಗರೆಲ್ಲ ಅಳಿದು ಹೋಗುತ್ತಾರೆ.

ಕೊರಗ ತನಿಯನಿಗೆ ದಿಕ್ಕು ದೆಸೆ ತಪ್ಪಿತು. ಕೊರಗ ತನಿಯ ಒಂಟಿಯಾಗುತ್ತಾನೆ. ಇರಲು ಕೊಪ್ಪವಿಲ್ಲ.
ಊರು ಬಿಟ್ಟು ಹೊರಟ. ಬಡಗುದೇಶಕ್ಕೆ ಬಂದು ಕಲ್ಲಾಪು ಮುಟ್ಟಿದ. ನೂರಾರು ಜನರು ಹೋಗುವ ದಾರಿಯಲ್ಲಿ ಕುಳಿತ. ಬಿಳಿಯ ಮರಳನ್ನು ಅಕ್ಕಿಯಂತೆ ಪಸರಿಸಿದ. ದಡ್ಡಾಲದ ಕಾಯನ್ನು ತೆಂಗಿನಕಾಯಿಯೆಂದು ಇರಿಸಿದ. ಕಾಸರಕನ ಸೊಪ್ಪನ್ನು ವೀಳ್ಯದೆಲೆಯನ್ನು ಇಟ್ಟು ಬಾಲ್ಯಸಹಜ ಹುಡುಗಾಟದಿಂದ ನಗಾಡುತ್ತಿದ್ದ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ )
ಒಂಟಿತನ ಆವರಿಸಿದಾಗ ಅಳುತ್ತಿದ್ದ. ಆ ಸಮಯದಲ್ಲಿ ಕದಿರೆಯ ಮಂಜದಿಂದ ಬಿದಿರೆಯಲ್ಲಿ ಕಳ್ಳನ್ನು ಹೇರಿಕೊಂಡು ಹೋಗುತ್ತಿದ್ದ ತಾಯಿ ಬೈರಕ್ಕೆ, ಮಗಳು ಮಂಜಕ್ಕೆ, ತಮ್ಮ ಚೆನ್ನಯರು ಇವನನ್ನು ನೋಡುತ್ತಾರೆ. ಒಮ್ಮೆ ನಗುವ ಒಮ್ಮೆ ಅಳುವ ಇವನ ಚಂದವನ್ನು ನೋಡಿ, ತಾಯಿ ಬೈರಕ್ಕೆಯು ಹತ್ತಿರ ಬಂದು ಹೇಳುತ್ತಾಳೆ. ಆಗ ಕೊರಗ ತನಿಯ ಓಡಿ ಹೋಗಿ ತಡಮೆಯಲ್ಲಿ ನಿಲ್ಲುತ್ತಾನೆ. ಬೈರಕ್ಕೆ ಬೈದ್ಯೆದಿ ಇವನನ್ನು ನೋಡಿ ಯಾರೋ ಮಗು ತಡಮೆ ಬಿಡು, ದಾರಿ ಬಿಡು ಎನ್ನುತ್ತಾರೆ. ತಡಮೆ ಬಿಡಲು, ಹಾದಿ ತೆರವು ಮಾಡಲು ನನಗೆ ಸೊಂಟಕ್ಕೆ ಬಟ್ಟೆ ಇಲ್ಲ ಎನ್ನುತ್ತಾನೆ ಕೊರಗ ತನಿಯ.

ಆಗ ಬೈರಕ್ಕೆ, ಕಳ್ಳಿನ ಗಡಿಗೆ ಇಳಿಸಿ ಸಿಂಬಿಯ ಬಟ್ಟೆ ತೆಗೆದು ಸೊಂಟಕ್ಕೆ ಬಟ್ಟೆ ನೀಡಿದಳು. ಸೊಂಟಕ್ಕೆ ಅರಿವೆ ಕಟ್ಟಿಕೊಂಡ ಕೊರಗ ಜೋರಾಗಿ ಅತ್ತ. ಆಗ ಮರುಕಗೊಂಡ ಬೈರಕ್ಕೆ ಆತನ ಬಗ್ಗೆ ವಿಚಾರಿಸಿದಾಗ ತನಗೆ ತಾಯಿ ಇಲ್ಲ. ತಂದೆ ಅಳಿದಿದ್ದಾನೆ. ಏಳು ಕೊಪ್ಪದ ಕೊರಗರೆಲ್ಲ ಅಳಿದು ಹೋದರು. ಕುಳ್ಳಿರುವೆನೆಂದರೆ ಕೊಪ್ಪವಿಲ್ಲ. ದಿಕ್ಕು ಬಿಟ್ಟು ದೇಶಾಂತರ ಹೋಗುವೆ, ದುಡಿಯಲು ಬೇಕಾದಷ್ಟು ಇರುವ ರಾಜ್ಯಕ್ಕೆ, ಉಣ್ಣಲು ಬೇಕಾದಷ್ಟು ಇರುವ ಸೀಮೆಗೆ ಹೋಗುವೆ ಎಂದು ಹೇಳುತ್ತಾನೆ.

ಅವನ ಮೇಲಿನ ಮರುಕ ಅಕ್ಕರೆಗೆ ತಿರುಗಿ ಹಾಗೆ ಹೋಗುವ ಮಗನಾದರೆ ನನ್ನೊಡನೆ ಬಾ, ನನಗೆ ಇಬ್ಬರು ಮಕ್ಕಳಿದ್ದಾರೆ. ನೀನು ಸೇರಿ ಮೂವರು ಆದಿರಿ ಎಂದು ಹೇಳುತ್ತಾಳೆ ಬೈರಕ್ಕೆ ಬೈದ್ಯೆದಿ. ಅನಂತರ ಅವನ ಬಳಿಯನ್ನು ಯಾವ ಮೂಲದವನು? ಯಾವ ಸಾಲದವನು? ಎಂದು ಕೇಳುತ್ತಾರೆ. ಆಗ ಆತ ನನಗೆ ಸಾಲವೆಂದರೆ ತಾಯಿ ಕದ್ರ ಕಾಂತಣದೇವರದು. ಮೂಲವೆಂದರೆ ಎಣ್‌ಸೂರ ಮೂಲ. ಬಳಿಯೆಂದರೆ ಸೋಮನತ್ತ ಬಳಿ ಎಂದು ಹೇಳುತ್ತಾಳೆ. ಹಾಗಾದರೆ ನೀನು ನಮ್ಮ ಬಳಿಯವನು ಬಾ ಹೋಗೋಣ ಎಂದು ಕರೆದುಕೊಂಡು ಹೋದಳು ಬೈರಕ್ಕೆ. ಅವನನ್ನು ಹೊರಗಿನ ಮಗನಂತೆ ಪ್ರೀತಿಯಿಂದ ಸಾಕಿದರು.
ಕೊರಗ ತನಿಯ ಬಂದ ಲಕ್ಷಣದಲ್ಲಿ ಸಿರಿ ಸಂಪತ್ತು ತುಂಬಿತು ಆ ಮನೆಯಲ್ಲಿ. ಕೊರಗ ತನಿಯ ತನ್ನ ಕುಲ ಕಸುಬನ್ನು ಕಲಿಯುತ್ತಾನೆ.
ಬಿದಿರಿನಿಂದ ಬುಟ್ಟಿ, ಕಣಜ, ಕೈಕುಡುಪು ಮಾಡಿ ಊರು ಕೇರಿಯಲ್ಲಿ ಮಾರಲು ತೊಡಗಿದ. ಹೀಗೆ ಹಲವು ದಿನ ಕಳೆಯಲು, ಅವರ ಮೂಲಸ್ಥಾನದಲ್ಲಿ ಮರ‍್ಲುಜುಮಾದಿ, ಮಾಡಮೈಸಂದಾಯ, ಕಿನ್ನಿಕೊಡಂಗೆದಾಯ, ಪದವು ಲೆಕ್ಕೇಸಿರಿಗಳಿಗೆ ಅಂಕ, ಅಯನ ಕೋಳಿಕಟ್ಟ, ಕಂಬಳ ನೇಮ ಸಿರಿ ಎಂದು ನಿರ್ಧಾರವಾಯಿತು. ಎಣಸೂರು ಬಾರಿಗೆಯಿಂದ ಏಳು ಜನ ಹೊರುವಷ್ಟು ತೆಂಗಿನ ಎಳೆಯ ಗರಿ, ಬಾಳೆ ಸೀಯಾಳ ಹೋಗಬೇಕು. ಎಳೆಯ ಗರಿ ಬಾಳೆ ಹೊರಲು ಬೈಲಬಾಕುಡ, ಓಣಿಯ ಮುಗ್ಗೇರ, ಹುಣೆಮಟ್ಟು ಮುಂಡಾಲದವರು ಯಾರೂ ಸಿಗಲಿಲ್ಲ.

ಆಗ ಚೆನ್ನಯ ಬೈದ್ಯರು ಹೊರಗಿನ ಆಳು ಬೇಡ ನಮಗೆ, ನಾವು ಸಾಕಿದ ಮಗ ಕೊರಗ ತನಿಯ ಇದ್ದಾನೆ. ಅವನಲ್ಲಿ ಎಳೆ ಗರಿ ಸೀಯಾಳ ಹೊರಿಸುವ ಎಂದು ಹೇಳುತ್ತಾರೆ. ಎಳೆ ಗರಿ ಸೀಯಾಳ ಹೊರುವೆಯಾ? ಎಂದು ತಾಯಿ ಕೇಳಿದಾಗ ಏಳು ಜನರ ಹೊರೆ ಒಬ್ಬನೇ ಹೊರುತ್ತೇನೆ. ಆದರೆ ಏಳು ಮಡಿಕೆ ಕಳ್ಳು ಕೊಡಬೇಕು. ಏಳು ಜನರ ಉಣಿಸು ಕೊಡಬೇಕು. ಮೂವತ್ತು ಬಂಗುಡೆಯ ಪಲ್ಯ ಬೇಕು. ಏಳು ಜನರ ಅಡಿಕೆ ವೀಳ್ಯ ಕೊಡಬೇಕು. ಏಳು ಜನರ ಭತ್ತ ಕೊಡಬೇಕು ಎಂದು ಹೇಳುತ್ತಾನೆ. ಹಾಗೆಯೇ ಆಗಲೆಂದು ತಾಯಿ ಒಪ್ಪುತ್ತಾರೆ. ಅಲ್ಲಿಂದ ಎದ್ದ ಕೊರಗ ತನಿಯ ತೆಂಗಿನಮರಕ್ಕೆ ಹತ್ತಿ ಎಪ್ಪತ್ತು ತೆಂಗಿನ ಎಳೆಯ ಗರಿ, ಸೀಯಾಳ ಎಪ್ಪತ್ತು ಸಿಂಗಾರ ಹೂವು ತೆಗೆದು, ಏಳು ಜನರ ಹೊರೆಯನ್ನು ಒಂದು ಹೊರೆಯಾಗಿ ಕಟ್ಟಿ ಎತ್ತಿ ಹೆಗಲಿಗೇರಿಸಿ ಎಣ್ಸೂರ ಅಂಗಳಕ್ಕೆ ತಂದು ಹಾಕಿದ. ತಾಯಿ ಕೊಟ್ಟ ಏಳು ಕುಡಿಕೆ ಕಳ್ಳು ಕುಡಿದು. ಏಳು ಜನರ ಉಣಿಸು ಉಂಡ. ಮೂವತ್ತು ಕಿರು ಬಂಗುಡೆ ಮೀನಿನ ಪಲ್ಯ ತಿಂದ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ( ಕರಾವಳಿಯ ಸಾವಿರದೊಂದು ದೈವಗಳು ಕೃತಿಯ  ಕೃತಿಯ ಆಯ್ದ ಭಾಗ ) ಏಳು ಜನರ ವೀಳ್ಯ ಅಡಿಕೆ ತಿಂದ. ಏಳು ಜನರು ಹೊರುವ ಹೊರೆಯನ್ನು ಅಂಗಳದಿಂದ ಎತ್ತಿದ. ಪಾದದಿಂದ ಮೊಣಕಾಲಿಗಿಟ್ಟ. ಅಲ್ಲಿಂದ ಹೆಗಲಿಗೆ, ಹೆಗಲಿನಿಂದ ತಲೆಗೆ ಇಟ್ಟ.
ಅಂಗಳದಿಂದ ಕೆಳಗೆ ಇಳಿದು ತಿರುಗಿ ನೋಡಿ, ಬಿಕ್ಕಿ ಬಿಕ್ಕಿ ಅತ್ತ. ಈವರೆಗೆ ನನ್ನನ್ನು ಸೋಗದಲ್ಲಿ ಸಾಕಿಕೊಂಡು ಇದ್ದಿರಿ ತಾಯಿ, ಇವತ್ತು ಬೆನ್ನು ಹಾಕಿ ಹೋದವನು ಹೊಟ್ಟೆ ತೋರಿಸಿಕೊಂಡು ಬರುವೆನೆಂದು ನಂಬಬೇಡಿ ಎಂದು ಹೇಳುತ್ತಾನೆ. ಅಯ್ಯೋ ಮಗ, ನೀನು ಬಂದಾಗ ನಮಗೆ ದನಕರು ಹೆಚ್ಚಿ ಎಲ್ಲ ಸೌಭಾಗ್ಯ ಉಂಟಾಯಿತು. ಇವತ್ತು ಇಂಥಾ ಮಾತು ಹೇಳಿ ಹೋಗುತ್ತಿರುವೆಯಲ್ಲ! ನಿನಗೆ ಅವಮಾನ ಎನಿಸುವುದಾದರೆ, ಕುಟುಂಬಕ್ಕೆ ಅಪವಾದ ಬರುವುದಿದ್ದರೆ ನೀನು ಹೊರಬೇಡ ಎಂದಳು ತಾಯಿ ಬೈರಕ್ಕೆ ಬೈದ್ಯೆದಿ.

ತಲೆಗಿಟ್ಟ ಹೊರೆಯನ್ನು ಮತ್ತೆ ಕೆಳಗೆ ಇರಿಸಲಾರೆ ಎಂದು ಹೊರೆ ಹೊತ್ತುಕೊಂಡು ಕಿನ್ನಿಕೊಡಂಗೆದಾಯ, ಇಷ್ಟದೇವತೆ ಲೆಕ್ಕೇಸಿರಿಯ ಮಾಡದ ಹತ್ತಿರ ಮುಟ್ಟಿದ. ದೂರದಿಂದ ಇವನನ್ನು ನೋಡಿ ನೇಮದ ಮಂದಿ, ಕಾಡ ಕೊರಗರ ಹೈದ ಎಳೆಯ ಗರಿ ಬಾಳೆ ತರುವುದಿದ್ದರೆ ಮಾಡಕ್ಕೆ ಮುಟ್ಟಿಸಬಾರದು, ಮಾಡಕ್ಕೆ ದೂರದಲ್ಲಿ ಇಳಿಸಬೇಕು. ದೂರ ಕುಳಿತಿರಬೇಕು ಎಂದು ಹೇಳಿದರು. ನಾನು ತಂದ ತೆಂಗಿನ ಗರಿ ಬಾಳೆ ಆದೀತು. ಮಾಡಕ್ಕೆ ಮುಟ್ಟಿಸಲು ಯಾಕೆ ಆಗದು? ಎಂದು ಕೇಳಿದ. ಮಾಡಕ್ಕೆ ಸಮೀಪದಲ್ಲಿಯೇ ಕುಳಿತ. ಮಾಡದ ಮೇಲೆ ನೋಡುವಾಗ ಕೈಪುರದ ಹುಳಿ ಕಂಡಿತು. ಮನೆಯಲ್ಲಿ ಮಾವಿನ ಉಪ್ಪಿನಕಾಯಿ ಮುಗಿದಿದೆ ಎಂದು ಅಮ್ಮ ಹೇಳಿದ್ದು ನೆನಪಾಗಿ, ಅಮ್ಮನಿಗೆ ಇಷ್ಟವಾದ ಕೈಪುರದ ಹುಳಿಯನ್ನು ಕೊಯ್ಯಲು ಒಂದು ಕಾಲನ್ನು ಮಾಡದ ಕಲಶಕ್ಕೆ ಇಟ್ಟ. ಗೆಲ್ಲು ಬಗ್ಗಿಸಿ ಹುಳಿ ಕೊಯ್ಯುವಾಗ ಒಳಗೆ ತೂಗುಯ್ಯಾಲೆಯಲ್ಲಿ ಇದ್ದ ಮಾಡ ಮೈಸಂದಾಯ, ಕಿನ್ನಿಕೊಡಂಗೆದಾಯ, ಪದವು ಲೆಕ್ಕೇಸಿರಿ ಭೂತಗಳು ತುದಿಗಣ್ಣಿನಲ್ಲಿ ನೋಡಿ ಮಾಯಾಸ್ವರೂಪ ಮಾಡಿದರು. ಮುಂದೆ ಕೊರಗತನಿಯ ದೈವಗಳ ಸೇರಿಗೆಯಲ್ಲಿ ಸಂದು ಹೋಗಿ ಆರಾಧನೆ ಪಡೆಯುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ )
ಕೊರಗ ತನಿಯ ಕಥಾನಕದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ದುರಂತಗಳ ಸರಮಾಲೆಯನ್ನು ಕಾಣುತ್ತೇವೆ. ಕೊರಗ ತನಿಯನ ತಂದೆ-ತಾಯಿ ವುರವನ ಓಡಿ ಹಾಗೂ ಮೈರೆಯರು ವಿವಾಹವಾದ ಹೊಸತರಲ್ಲಿಯೇ ಈಶ್ವರ ದೇವರ ಆಗ್ರಹಕ್ಕೆ ತುತ್ತಾಗಬೇಕಾಗುತ್ತದೆ. ಕಾಡಿನಲ್ಲಿ ಬಳ್ಳಿಯನ್ನು ಹೆರೆಯಲು ಹೋದಾಗ ಬೇಟೆಗೆ ಬಂದ ಈಶ್ವರಬಾರಿದೇವರು ಮೈರೆಯ ಮುಡಿಯನ್ನು ನೋಡಿ, ಅವಳು ಪಾರ್ವತಿಯಂತೆ ಭಾಸವಾಗಿ ಅವಳನ್ನು ಮೋಹಿಸುತ್ತಾರೆ.

 ಅವಳು ನಿರಾಕರಿಸಿದಾಗ ಅವಳಿಗೆ ಗಂಡುಮಗು ಹುಟ್ಟಿದ ನಂತರ ಅವಳ ವಂಶ ನಿರ್ವಂಶವಾಗುವಂತೆ ಶಾಪ ಕೊಡುತ್ತಾರೆ. ಶಾಪ ಕೊಡಲು ಇಲ್ಲಿ ಮೈರೆಯ ತಪ್ಪಾದರೂ ಏನಿತ್ತು? ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಂಡದ್ದು ಅವಳ ತಪ್ಪೇ? ತಾನೊಲಿದವಳು ತನಗೊಲಿಯಲಿಲ್ಲ ಎಂಬ ಕಾರಣಕ್ಕೆ ಮಗು ಹುಟ್ಟಿದ ನಂತರ ವಂಶ ಅಳಿಯುವಂತೆ ಶಾಪ ಕೊಟ್ಟರೆ, ಇದರಿಂದ ಈಶ್ವರದೇವರು ಸಾಧಿಸಿದ್ದಾದರೂ ಏನನ್ನು? ಎಂಬ ಪ್ರಶ್ನೆ ಉಂಟಾಗುತ್ತದೆ.

ಹುಟ್ಟಿದ ಮಗು ತಂದೆ-ತಾಯಿಯರನ್ನು, ಬಂಧು ಬಳಗವನ್ನು ಕಳೆದುಕೊಂಡು, ಅನಾಥನಾಗಿ ದಿಕ್ಕಿಲ್ಲದವನಾಗಿ ಬೆಳೆದರೆ, ಮೈರೆಯ ಮೇಲೆ ದ್ವೇಷ ಸಾಧಿಸಿದಂತೆ ಆಗುತ್ತದೆಯೇ? ಇಷ್ಟಕ್ಕೂ ಬಂದಾತ ಈಶ್ವರ ದೇವರು ಆಗಿರಲಾರ,ಹಿಂದೆ ನಮ್ಮಲ್ಲಿ ಆಳುವ ರಾಜರನ್ನು, ಅವರ ಪರಿವಾರದವರನ್ನು ದೇವರಿಗೆ ಸಮೀಕರಿಸುವ ಪರಿಪಾಠವಿತ್ತು. ಆದ್ದರಿಂದ ಬೇಟೆಗೆ ಬಂದವರು ಆಳುವ ವರ್ಗದವರು ಯಾರೋ ಇದ್ದಿರಬೇಕು. ಮೈರೆ ಆತನನ್ನು ತಿರಸ್ಕರಿಸಿದಾಗ ಅವಮಾನಗೊಂಡು ಹಿಂತಿರುಗಿದವರು ಸ್ವಲ್ಪ ಸಮಯದ ನಂತರ ಸೇನೆಯೊಂದಿಗೆ ಬಂದು ಆಕ್ರಮಣ ಮಾಡಿರಬಹುದು.

ಈ ಗಲಭೆಯಲ್ಲಿ ಕೊರಗರೆಲ್ಲ ಎಲ್ಲೆಲ್ಲೋ ಚದುರಿ ಹೋಗಿರಬಹುದು. ಕಷ್ಟಕ್ಕೀಡಾಗಿ ಅಜ್ಞಾತವಾಗಿ ಬದುಕಬೇಕಾಗಿ ಬಂದ ಮೈರೆ ಮತ್ತು ವುರವನ ಓಡಿಗಳಿಗೆ ಸರಿಯಾದ ಆಹಾರ, ಔಷಧಗಳು ಸಿಕ್ಕದೆ ಮರಣವನ್ನಪ್ಪಿರಬಹುದು. ಅಥವಾ ನೇರವಾಗಿ ಆಳುವ ವರ್ಗದ ಅಥವಾ ಮೇಲು ವರ್ಗದವರ ಆಕ್ರಮಣಕ್ಕೆ ಒಳಗಾಗಿ ಸಾವನ್ನಪ್ಪಿರಬಹುದು. ಎಳೆಯ ಮಗು ಕೊರಗತನಿಯ ಹೇಗೋ ಬದುಕಿ ಉಳಿದು, ಬೈರಕ್ಕೆಯ ಮಾತೃವಾತ್ಸಲ್ಯದಿಂದ ಬೆಳೆದು ದೊಡ್ಡವನಾಗಿ, ಅಪ್ರತಿಮ ಬಲಶಾಲಿಯೂ ವೀರನೂ ಸಾಹಸಿಯೂ ಆಗಿ ಬೆಳೆಯುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕತಾವಳಿಯ ಸಾವಿರದೊಂದು ದೈವಗಳು ಕೃತಿಯ  ಕೃತಿಯ ಆಯ್ದ ಭಾಗ )  ಕಾಡ ಕೊರಗರ ಹೈದ ಮಾಡವನ್ನು ಮುಟ್ಟಬಾರದು ಎಂದು ನೇಮದ ಮಂದಿ ಹೇಳಿದ್ದು, ಅವನ ಆತ್ಮಾಭಿಮಾನವನ್ನು ಕೆಣಕುತ್ತದೆ. ತಾನು ತಂದ ಗರಿ, ಬಾಳೆ, ಸೀಯಾಳ ಆಗುತ್ತದೆ ತಾನು ಆಗುವುದಿಲ್ಲವೇ ದೈವಕ್ಕೆ? ಎಂದು ಪ್ರಶ್ನಿಸಿ ದೂರದಿಂದಲೇ ಮಾಡದೊಳಕ್ಕೆ ಹೊರೆಯನ್ನು ಹಾಕುತ್ತಾನೆ. ಮಾಡದ ಸಮೀಪ ಬಂದು ಕುಳಿತುಕೊಳ್ಳುತ್ತಾನೆ. ಇವನ ಉದ್ಧಟತನ ಅಲ್ಲಿಯವರಿಗೆ ಹಿತವಾಗುವುದಿಲ್ಲ. ಬಹುಶಃ ಆತನ ದುರಂತ ಸಾವು ಈ ಸಂದರ್ಭದಲ್ಲಿಯೇ ಆಗಿರಬಹುದು. ಮೇಲ್ವರ್ಗದ ಆಗ್ರಹಕ್ಕೆ ತುತ್ತಾಗಿ ಆತ ದುರಂತ ಕ್ಕೀಡಾಗಿರಬೇಕು. ಅನಂತರ ಆತನ ಮರಣಕ್ಕೊಂದು ಸರಿಯಾದ ಕಾರಣದ ಕತೆಯ ಸೃಷ್ಟಿಯಾಗಿರಬಹುದು. ಮಾಡದ ಕಲಶವನ್ನು ಮೆಟ್ಟಿ ಕೈಪುರದ ಹುಳಿಯನ್ನು ಕೊಯ್ದಾಗ, ದೈವದ ಆಗ್ರಹಕ್ಕೊಳಗಾಗಿ ಮಾಯಾಸ್ವರೂಪ ಆದನು ಎಂಬ ಕತೆ ರೂಪಗೊಂಡಿರಬಹುದು.

 ಕೊರಗ ತನಿಯ ಅಸ್ಪೃಶ್ಯತೆಯ ವಿರುದ್ಧ ಧ್ವನಿಯೆತ್ತಿದ್ದರೂ ಕೂಡ ಆತ ಉದ್ಧಟನಲ್ಲ. ಬೀರಕ್ಕೆ ಬೈದಿತಿ ಹಾಗೂ ಬೆಳೆದ ಮನೆ ಊರಿನ ಮೇಲೆ ಅವನಿರಿಸಿದ ಪ್ರೀತಿ ಅಭಿಮಾನವೇ ಇದಕ್ಕೆ ಸಾಕ್ಷಿ. ಅಂತಹವನು ಮಾಡ ಭೂತ ಸ್ಥಾನ /ದೇವಾಲಯ ಕಳಸವನ್ನು ಮೆಟ್ಟಿ ಕೈಪುರದ ಹುಳಿಯನ್ನು ಕೊಯ್ದಿದ್ದಾನೆ ಎಂದು ನಂಬುವುದಕ್ಕಾಗುವುದಿಲ್ಲ. ಸಾಮಾನ್ಯವಾಗಿ ಯಾರೂ ದೈವ-ದೇವಸ್ಥಾನಗಳ ಕಳಸವನ್ನು ಮುಟ್ಟುವುದಿಲ್ಲ. ಹಾಗಿರುವಾಗ ಈತ ಮೆಟ್ಟಿದ್ದಾನೆ ಎನ್ನುವ ವಿಚಾರ ಸರಿ ಎನಿಸುವುದಿಲ್ಲ. ಇನ್ನು ಮಾಡಕ್ಕೆ ಮುಟ್ಟಿಕೊಂಡಿರುವ ಕೈಪುರದ ಹುಳಿಯನ್ನು ಕೊಯ್ದಿರುವ ಸಾಧ್ಯತೆ ಇದೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ

 ಆಯ್ದ ಭಾಗ )
 ಆಗ ಮಾಡ ಅಶುದ್ಧವಾಯಿತೆಂದು ಮೇಲ್ವರ್ಗದವರು ಗಲಭೆ ಮಾಡಿ ಆಳುವ ಒಡೆಯನಿಗೆ ದೂರು ಹೋಗಿ, ಆ ಒಡೆಯ ಮೈರೆಯನ್ನು ಮೋಹಿಸಿದಾತನೇ ಆಗಿದ್ದು, ಈ ಕೊರಗ ತನಿಯನ ಮೇಲೆ ಸೇಡು ತೀರಿಸಿಕೊಂಡಿರುವ ಸಾಧ್ಯತೆ ಇದೆ. ಅಥವಾ ಮಾಡದ ಎದುರಿನಲ್ಲಿಯೇ ವರ್ಣವೈಷಮ್ಯದ ಗಲಭೆಯಾಗಿ ಕೊರಗ ತನಿಯ ದುರಂತವನ್ನಪ್ಪಿರುವ ಸಾಧ್ಯತೆ ಇದೆ. ಮರದಿಂದ ಅಥವಾ ಮಾಡದಿಂದ ಕಾಲುಜಾರಿ ಬಿದ್ದು ಸತ್ತಿರುವ ಸಾಧ್ಯತೆಯೂ ಇದೆ.

ತುಳುನಾಡಿನ ಸಂಪ್ರದಾಯದಂತೆ ಅಸಹಜ ಸಾವನ್ನಪ್ಪಿದ ಅಸಾಮಾನ್ಯ ಅಸಹಾಯ ಶೂರರು ದೈವತ್ವಕ್ಕೇರಿ ಆರಾಧಿಸಲ್ಪಡುವಂತೆ ಕೊರಗ ತನಿಯ ಕೂಡ ಆರಾಧಿಸಲ್ಪಡುತ್ತಿದ್ದಾನೆ. ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸುವ ಪ್ರಸ್ತಾಪ ಪಾಡ್ದನದಲ್ಲಿ ಎಲ್ಲಿಯೂ ಬರುವುದಿಲ್ಲ. ತಾನು ಮಾಯಾ ಸ್ವರೂಪ ಹೊಂದಿದ ನಂತರವೂ ಉಂಡ ಮನೆಗೂ ಊರಿಗೂ ಹಿತವನ್ನೇ ಮಾಡುತ್ತೇನೆ ಎಂಬ ಆತನ ಮಾತು ದೀರ್ಘಕಾಲ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(                                  ಕರಾವಳಿಯ ಸಾವಿರದೊಂದು ದೈವಗಳು  ಆಯ್ದ ಭಾಗ)ಈ ಪುಸ್ತಕದ ಮಾಹಿತಿಗಾಗಿ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 



ಆಧಾರ : ತುಳು ಪಾಡ್ದನ ಸಂಪುಟ - ಡಾ ಅಮೃತ ಸೋಮೇಶ್ವರ,
ಭೂತಾರಾಧನೆ - ಒಂದು ಜಾನಪದೀಯ ಅಧ್ಯಯನ ಡ
- ಡಾ ಚಿನ್ನಪ್ಪ ಗೌಡ,
ತುಳು ಜನಪದ ಸಾಹಿತ್ಯ - ಡಾ ಬಿ ಎ ವಿವೆಕ ರೈ 


Saturday, 30 September 2023

ನಾಗ / ಅರದರೆ ಚಾಮುಂಡಿ/ ಬೊಟ್ಟಿ ಭೂತ- ಡಾ.ಲಕ್ಷ್ಮೀ ಜಿ ಪ್ರಸಾದ್

                              


                                            ನಾಗ ಚಾಮುಂಡಿ /ಬೊಟ್ಟಿ ಭೂತ
ಸುಳ್ಯ ಪುತ್ತೂರು ಪರಿಸರದಲ್ಲಿ ಬೊಟ್ಟಿ ಭೂತಕ್ಕೆ ಆರಾಧನೆ ಇದೆ .ಇದು ಮೂಲತಃ ಜೈನ ಭೂತ .ಈ ದೈವ ಜೈನ ವ್ಯಕ್ತಿ ಎಂಬ ಬಗ್ಗೆ ಗುಲಾಬಿ ಅಜಲ್ತಿ ಅವರು ಸುಮಾರು ವರ್ಷ ಹಿಂದೆಯೇ ಮಾಹಿತಿ ನೀಡಿದ್ದರು .ಆದರೆ ಅದಕ್ಕಿಂತ ಹೆಚ್ಚಿನ ಮಾಹಿತಿ ಅವರಿಗೆ ತಿಳಿದಿರಲಿಲ್ಲ .ಹಾಗಾಗಿ ಈ ದೈವದ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಾ ಇದ್ದೆ
ಇತ್ತೀಚಿಗೆ ಚೊಕ್ಕಾಡಿಗೆ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದಾಗ ಅಲ್ಲಿಗೆ ಹಿರಿಯ ಭೂತ ಕಟ್ಟುವ ಕಲಾವಿದರಾದ ಪೂವಪ್ಪ ಅಜಲರ ಪರಿಚಯವಾಯಿತು .
ಅವರು ಹೇಳುವಂತೆ ನಾಗ ಚಾಮುಂಡಿ ,ಗುಡ ಚಾಮುಂಡಿ ಮತ್ತು ಬೊಟ್ಟಿ ಭೂತ ಮೂರೂ ಒಂದೇ ದೈವದ ಬೇರೆ ಬೇರೆ ಹೆಸರುಗಳು.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಹಿಂದೆ ಮಾಣಿ ಯಲ್ಲಿ ಅಸಗಲರು/ ಅರದರರು ಎಂಬ ಜೈನ ಬಲ್ಲಾಳ ಅರಸರು ಇದ್ದರು .ಅವರು ಅವರ ಬೊಟ್ಟು ಗದ್ದೆಗೆ ಹುಲಿ ಮತ್ತು ಚಿರತೆಯನ್ನು ಕಟ್ಟಿ ಉಳುಮೆ ಮಾಡುತ್ತಾರೆ.ಆಗ ಅಲ್ಲಿ ಸುತ್ತು ಮುತ್ತ ಇದ್ದ ಮೂಲನಿವಾಸಿಗಳ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಎತ್ತು ಕೋನಗಳು ಹೆದರಿ ಓಡಿದವು .ಅಲ್ಲಿ ಮೂಲನಿವಾಸಿಗಳಾದ ಅಜಲರಿಗೂ ಜೈನ ಅರಸುಗಳಿಗೂ ವಿವಾದ ಉಂಟಾಗಿ ಹೋರಾಟವಾಯಿತು .© ಡಾ.ಲಕ್ಷ್ಮೀ ಜಿ‌ಪ್ರಸಾದ್ 
ಆಗ ಅಲ್ಲಿನ ಜೈನ ಅರಸು ನೆಲದಲ್ಲಿ ಹೂತು ಹೋದರು .ಆಗ ಅವರ ಬಲ ಗೈ ಬಂಟ ನಾಗಿದ್ದ ಕೋಚಾಳ್ವ ಬಂಟ ./ಕುಂಜಾಲ್ವ ಬಂಟ ಎಂಬಾತ ಅಯ್ಯೋ ನನಗಿನ್ನಾರು ಗತಿ ,ನನ್ನ ಹೊಟ್ಟೆ ಪಾಡು ಏನು ?ಎಂದು ದುಖಿಸುತ್ತಾನೆ .ಆಗ ನೆಲದ ಅಡಿಯಿಂದ ಗುಡ್ಡದ ತುದಿಯಲ್ಲಿರುವ ಕೊಪ್ಪರಿಗೆಯಲ್ಲಿರುವ ಚಿನ್ನ ಬೆಳ್ಳಿ ತೆಗೆದುಕೋ ಎಂದು ಅಶರೀರ ವಾಣಿ ಕೇಳಿಸಿತು .ಹಾಗೆ ಆಟ ಗುಡ್ಡದ ತುದಿಗೆ ಹೋಗಿ ಕೊಪ್ಪರಿಗೆ ಮುಟ್ಟಿದಾಗ ಅದು ಕಬ್ಬಿನವಾಗಿ ಬದಲಾಯಿತು .ಆಗ ಅವನು ಇನ್ನಷ್ಟು ರೋಧಿಸುತ್ತಾನೆ.ಆಗ ನಾನು ಅಲ್ಲಿ ಮಾಣಿಕ್ಯವಾಗಿ ಉದಿಸಿಬಂದಿದ್ದೇನೆ ನಂಬಿ ಆರಾಧಿಸು ಎಂದು ನುಡಿ ಕೇಳಿಸುತ್ತದೆ.ಅಂತೆ ಆತ ಅಲ್ಲಿ ದೈವತ್ವ ಪಡೆದ  ಜೈನ ಬಲ್ಲಾಳ ನನ್ನು ಆರಾಧಿಸುತ್ತಾನೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಗುಡ್ಡೆಯ ಮೇಲೆ ಇರುವ ಕಾರಣ ಆ ದೈವಕ್ಕೆ ಗುಡ್ಡೆ ಚಾಮುಂಡಿ /ಗುಡ ಚಾಮುಂಡಿ ಎಂದು ಕರೆಯುತ್ತಾರೆ .ಗುಡ ಚಾಮುಂಡಿ ಸ್ತ್ರೀ ದೈವ್ತವಲ್ಲ ಪುರುಷ ರೂಪಿ ದೈವವೆಂದು ಈ ದೈವವನ್ನು ಆರಾಧಿಸುವ .  ಭರತ್ ಭಂಡಾರಿ ಪುತ್ತೂರು ಅವರು ಅಭಿಪ್ರಾಯಪಟ್ಟಿದ್ದಾರೆ © ಡಾ.ಲಕ್ಷ್ಮೀ ಜಿ‌ಪ್ರಸಾದ್ 
ನಾಗ ಚಾಮುಂಡಿ ದೈವಕ್ಕೆ ದೊಡ್ಡ ಮೀಸೆ ಇರುತ್ತದೆ ಇದು ಕೂಡ ಸ್ತ್ರೀ ದೈವವಲ್ಲ .
 ಬೊಟ್ಟಿ ಗದ್ದೆಯಲ್ಲಿ ಉದ್ಭವವಾದ ಕಾರಣ ಆತನನ್ನು ಬೊಟ್ಟಿ ಭೂತ ಎಂದು ಕರೆಯುತ್ತಾರೆ.ಇದನ್ನುನಾಗ ಭೂತ ಎಂದೂ ಕರೆಯುತ್ತಾರೆ ಎಂದು ಪೂವಪ್ಪ ಅವರು ಹೇಳಿದ್ದಾರೆ.ಅರದರೆ ಚಾಮುಂಡಿ ಎಂದೂ ಕರೆಯುತ್ತಾರೆ © ಡಾ.ಲಕ್ಷ್ಮೀ ಜಿ ಪ್ರಸಾದ್ 
ನಾಗ ಭೂತದ ಸಣ್ಣ ಸಂಧಿಯಲ್ಲಿ ಕೂಡ ಯಾರೋ ಐವರು ನೆಲದಲ್ಲಿ ಹೂತು ಹೋದ ಕಥಾನಕವಿದೆ .ಪಂಚ ಪಾಂಡವೆರ್ನೆಲಟ್ ತಾರಿಯೇರ್ ಐನು ಭೂತೊಳು ಮಿತ್ತು ಲಕ್ಕಿಯೇರ್ ಎಂಬಲ್ಲಿ ಸ್ಪಷ್ಟವಾಗುತ್ತದೆ .
ಒಂದು ಭೂತ ಇನ್ನೊಂದರೊಡನೆ ಸಮನ್ವಯ ಗೊಂದು ಆರಧಿಸ್ಸಲ್ಪದುವುದು ಸಾಮಾನ್ಯವಾದ ವಿಚಾರ ಅಂತೆಯೇ ಇಲ್ಲೂ ಆಗಿರಬಹುದು
ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ ,ಈ ಗ್ರಂಥದ ಮಾಹಿತಿಗಾಗಿ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 
ಡಾ.ಲಕ್ಷ್ಮೀ ಜಿ ಪ್ರಸಾದ್