Monday 2 October 2023

ಅಲಿಖಿತ ಇತಿಹಾಸ ಸಾರುವ ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್

 




ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ‌‌..ಹೆಚ್ಚಿನ‌ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 




ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ್ copy rights reserved ಅನುಮತಿ‌ಇಲ್ಲದೆ ಕಾಪಿ ಮಾಡುವಂತಿಲ್ಲ.







ಕಲ್ಕುಡ ಕಲ್ಲುರ್ಟಿ 
ಭೂತಗಳನ್ನುರೆಕಾರ್ಡ್ ಮಾಡುವುದಕ್ಕೆ ಮೊದಲೇ ನಾನು ಮಲರಾಯಿ ಉಲ್ಲಾಕುಳು ಅಜ್ಜಿಭೂತ ಉಳ್ಳಾಲ್ತಿ ಮೊದಲಾದ ಅನೇಕ ಭೂತಗಳ ಕೋಲವನ್ನು ರೆಕಾರ್ಡ್ ಮಾಡಿದ್ದೆ .ಅನೇಕ ವಿಧಿ ನಿಷೇಧಗಳಿರುವ ಭೂತಾರಾಧನೆಯನ್ನು ರೆಕಾರ್ಡ್ ಮಾಡುವುದು ಸುಲಭದ ವಿಚಾರವಲ್ಲ. ವಿಧಿ ನಿಷೇಧಗಳ ಜೊತೆಗೆ ಸ್ಥಳೀಯರ ಭೂತ ಮಾಧ್ಯಮರ ಅಸಹಕಾರಗಳನ್ನು ನಿಭಾಯಿಸುವುದು ಸಾಹಸದ ವಿಚಾರ .ನಾವು ರೆಕಾರ್ಡ್ ಮಾಡುವುದರಿಂದ ತಮ್ಮ ಘನತೆಗೆ ಗಾಂಭೀರ್ಯಕ್ಕೆ ಏನೋ ಕುಂದು ಕೊರತೆ ಬರುತ್ತದೆ ಎಂಬ ಆತಂಕ ಅವರದು .ಇದರಿಂದಾಗಿ ನಾವು ಫೋಟೋ ಹಿಡಿಯಲು ಕ್ಯಾಮೆರಾ ಫೋಕಸ್ ಮಾಡುತ್ತಿದ್ದಂತೆ ಅವರಲ್ಲಿ ಅತಿಯಾದ ಆವೇಶ ಉಂಟಾಗಿ ಉಗ್ರತೆಯನ್ನು ಪ್ರದರ್ಶಿಸುತ್ತಾರೆ 

.ಕಲ್ಕುಡ ಕಲ್ಲುರ್ಟಿ ದೈವಗಳ ಕೋಲವನ್ನು ರೆಕಾರ್ಡ್ ಮಾಡಲು ನಾನು ಮನೆಯೊಡೆಯನಿಂದ ಮೊದಲೇ ಅನುಮತಿಯನ್ನು ಪಡೆದಿದ್ದೆ . ಬಹುಶ ಭೂತ ಕಟ್ಟುವ ಕಲಾವಿದರಿಗೆ ಇಷ್ಟವಿರಲಿಲ್ಲವೋ ಏನೋ ತಿಳಿಯದು !ಅಂದಿನ ಕಲ್ಲುರ್ಟಿ ಭೂತದ ಆವೇಶವನ್ನು ಉಗ್ರ ನರ್ತನ ಅಟ್ಟಹಾಸವನ್ನು  ನೋಡಿ ನನಗೆ ನಿಜವಾಗಿಯೂ ಕೈಕಾಲು ನಡುಕ ಬಂದಿತ್ತು .ಭೂತ ಕಟ್ಟಿದ ಕಲಾವಿದ ಒಂದು ಕ್ಷಣ ಕೂಡ ನಿಂತಲ್ಲಿ ನಿಲ್ಲದ ಕಾರಣ ಫೋಟೋ ತೆಗೆಯುವುದು ಬಹಳ ಕಷ್ಟ ಆಗಿತ್ತು .ಆದರೂ ೩-೪ ಗಂಟೆಗಳ ಕಾಲ ಭೂತ ಹಿಂದೆ ಮುಂದೆ ಹೋದಂತೆ ನಾನು ಕೂಡ ಬೇತಾಳನಂತೆ ಭೂತ ಹಿಂದೆಯೇ ಸುತ್ತಿ ಕೆಲವು ಭಾವಚಿತ್ರಗಳನ್ನು ಸೆರೆಹಿಡಿದಿದ್ದನ್ನು ನೆನೆಯುವಾಗ ಈಗ ಕೂಡ ನನ್ನ ಮೈ ಜುಮ್ಮೆನ್ನುತ್ತದೆ !

ಭೂತ ಬಿರಿದ ನಂತರ ಭೂತ ಕಟ್ಟಿದ ಆ ಕಲಾವಿದರು ತುಂಬಾ ಆತ್ಮೀಯತೆಯಿಂದ ಭೂತಗಳ ಕುರಿತಾದ ಪಾಡ್ದನ ಹಾಗು ಇತರ ಮಾಹಿತಿಗಳನ್ನು ನೀಡಿದರು .ಅವರ ಸೌಮ್ಯ  ಗುಣವನ್ನು ನೋಡಿ ನನಗೆ ತುಸು ಹಿಂದೆ ಅಷ್ಟು ಉಗ್ರತೆಯನ್ನು ಪ್ರದರ್ಶಿಸಿದ ಭೂತ ಕಲಾವಿದ ಇವರೇ ಏನು ?!ಎಂಬ ಸಂಶಯ ಉಂಟಾಯಿತು .ಭೂತ ಕಲಾವಿದರು ಹೆಚ್ಚಿನವರು ಬಹಳ ಸೌಮ್ಯ ಗುಣದವರೇ ಆಗಿರುತ್ತಾರೆ . ಆಯಾಯ ಭೂತಗಳ ಸಹಜ ಪ್ರವೃತ್ತಿಗಳಿಗೆ ಅನುಗುಣವಾಗಿ ಅವರು ಅಭಿವ್ಯಕ್ತಿಯನ್ನು ತೋರುತ್ತಾರೆ ಎಂಬುದನ್ನು ನಾನು  ಸ್ವ ಅನುಭವದ ಮೂಲಕ ಕಂಡು ಕೊಂಡ  ವಿಚಾರ.
ತುಳುನಾಡಿನ ಭೂತಗಳಲ್ಲಿ ಕಲ್ಕುಡ ಕಲ್ಲುರ್ಟಿಗಳಿಗೆ ವಿಶೇಷವಾದ ಸ್ಥಾನವಿದೆ .ಅರಸು ದೌರ್ಜನ್ಯಕ್ಕೊಳಗಾಗಿ ದೈವತ್ವವನ್ನು ಪಡೆದ ಅವಳಿಗಳು ಇವರು .ತಮಗಾದ ಅನ್ಯಾಯಕ್ಕೆ ಪ್ರತಿರೋಧವೋ ಎಂಬಂತೆ  ಈ ಭೂತಗಳ ಅಭಿವ್ಯಕ್ತಿ ಕೂಡ ತುಸು ಉಗ್ರವಾಗಿ ತೋರುತ್ತದೆ . ಮೂಲತಃ ಶಿಲ್ಪಿಗಳಾದ ಇವರ ಕಪ್ಪು ಬಣ್ಣದಲ್ಲಿ ಇಟ್ಟ  ಬಿಳಿ ವರ್ಣದ  ಚುಕ್ಕಿಗಳ ಮುಖವರ್ಣಿಕೆ ಅವರ ಮೂಲ ವೃತ್ತಿಯನ್ನು ಸಂಕೇತಿಸುತ್ತದೆ .ಈ ಭೂತಗಳ  ಕೋಲದಲ್ಲಿನ ಉಗ್ರ ಅಟ್ಟಹಾಸವು ಇವರಿಗಾದ ಅನ್ಯಾಯದ ವಿರುದ್ಧ ತೋರುವ ಅಭಿವ್ಯಕ್ತಿ ಯಾಗಿದೆ .copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ
ಕಲ್ಲುರ್ಟಿ ಭೂತವನ್ನು ಇಷ್ಟ ಜಾವದೆ ,ಒರ್ತೆ ,ಪಾಷಾಣ ಮೂರ್ತಿ ಮೊದಲಾದ ಅನೇಕ ಹೆಸರು ರೂಪಗಳಲ್ಲಿ ಆರಾಧಿಸುತ್ತಾರೆ .ಈ ಭೂತ ಅಪ್ಪೆ ಕಲ್ಲುರ್ಟಿ (ತಾಯಿ ಕಲ್ಲುರ್ಟಿ)ಎಂದೇ ತುಳುನಾಡಿನಾದ್ಯಂತ ಬಹಳ  ಭಕ್ತಿಯಿಂದ ಆರಾಧಿಸಲ್ಪಡುತ್ತದೆ. 
ಕಾರ್ಕಳ ತಾಲೂಕಿನಲ್ಲಿರುವ ಕೆಲ್ಲಪುತ್ತಿಗೆ ಮಾರ್ನಾಡುವಿನಲ್ಲಿ ಪ್ರಸಿದ್ಧ ಶಿಲ್ಪಿಗಳು ವಾಸಿಸುತ್ತಿದ್ದರು. ‘ಶಂಭು ಕಲ್ಕುಡ’ ಮತ್ತು  ‘ಈರವದಿ ಅಚ್ಚವದಿ ದಂಪತಿಗಳಿಗೆ ಐದು ಜನ ಮಕ್ಕಳು. ಇವರಲ್ಲಿ ಬೀರುಕಲ್ಕುಡ ಮತ್ತು ಕಾಳಮ್ಮ ಅವಳಿ ಮಕ್ಕಳು. ಈ ಮಕ್ಕಳು ತಾಯ ಗರ್ಭದಲ್ಲಿರುವಾಗಲೇ ಶಂಭು ಕಲ್ಕುಡನಿಗೆ ಬೈಕೂರು ಬೆಳ್ಗೊಳಗಳಿಂದ ಅಂತರಂಗದ ಆಹ್ವಾನ ಬಂತು. ಆಗ ಶಂಭು ಕಲ್ಕುಡ ಮನೆಗೆ ಬೇಕಾದಷ್ಟು ಸಾಮಾನುಗಳನ್ನು ತಂದಿಟ್ಟು, ಉಳಿ, ಸುತ್ತಿಗೆ, ಮೊದಲಾದ ಪರಿಕರಗಳನ್ನು ಹಿಡಿದು ಬೆಳ್ಗೊಳದ ಅರಸನಲ್ಲಿಗೆ ಹೋಗುತ್ತಾನೆ. ಒಡ್ಡೋಲಗದಲ್ಲಿದ್ದ ಅರಸನನ್ನು ವಂದಿಸಿ ಕರೆ ಕಳುಹಿಸಿದ ಕಾರಣವನ್ನು ಕೇಳುತ್ತಾನೆ. ಆಗ ಅರಸರು ‘ಕಲ್ಕುಡ ಅರಮನೆ ಅಳಿಸಿಹೋಗಿದೆ, ಬಸದಿ ನಾಶವಾಗಿದೆ. ದೇವರಿಗೆ ದೇಗುಲವಿಲ್ಲ. ಗುಮ್ಮಟಸ್ವಾಮಿಯ ಕೆಲಸವಾಗಬೇಕು. ಏಳು ಗುಡಿಗಳಲ್ಲಿ ಏಳು ದೇವರುಗಳನ್ನು ನಿರ್ಮಿಸಬೇಕು’ ಎಂದು ಆಣತಿ ಇಡುತ್ತಾರೆ. ಅರಸರ ಆಣತಿಯನ್ನು ಶಿರಸಾವಹಿಸಿದ ಶಂಭುಕಲ್ಕುಡ ಪಡಿಯಕ್ಕಿ ಸ್ವೀಕರಿಸಿ ಬಿಡಾರ ಸೇರುತ್ತಾನೆ. ಮರುದಿನ ಮುಂಜಾನೆ ಎದ್ದು ತನ್ನ ಮನೆದೈವ ಗುರುಕಾಳಮ್ಮ ಹಾಗೂ ಇತರ ದೈವಗಳನ್ನು ಸ್ಮರಿಸಿ, ಧಾರೆ ನೋಡಿ ಕಲ್ಲಿನ ಸೆರೆಗೆ ಉಳಿ ಇಕ್ಕುತ್ತಾನೆ. ಅತ್ಯಂತ ಕಠಿಣವಾದ ಕಲ್ಲು ತೆಂಗಿನಗರಿ ಸೀಳಿದಂತೆ ಸೀಳಿತು. ಬಾಳೆಯ ದಿಂಡಿನ ಹೊದಿಕೆಯಂತೆ ತುಂಡಾಯಿತು. ಬೇರೆಯವರಿಂದ ಅಸಾಧ್ಯವಾದ ಕೆಲಸವನ್ನು ಸಾಧಿಸಿದ ಶಂಭು ಕಲ್ಕುಡ ದೇವರಿಗೆ ದೇಗುಲ ಮಾಡಿದ. ಸಾವಿರ ಕಂಬದ ಬಸದಿ ಮಾಡಿದ, ನೂರಿಪ್ಪತ್ತು ಬೊಂಬೆಗಳ ಕೆಲಸ ಮಾಡಿದ, ಏಳು ಗುಡಿಗಳಲ್ಲಿ ಏಳು ದೇವರುಗಳನ್ನು ನಿರ್ಮಿಸಿದ. ಅಂಗಳದಲ್ಲಿ ಆನೆಕಲ್ಲಿನ ಕೆಲಸವನ್ನು ಮಾಡಿದ. ಗುಮ್ಮಟಸ್ವಾಮಿಯನ್ನು ಕೆತ್ತಿದ. ಈ ಎಲ್ಲ ಕೆಲಸ ಪೂರ್ಣವಾದ ನಂತರ, ಅರಸರಿಂದ ಉಂಬಳಿ, ಹಸು, ಬಂಗಾರದ ಬಳೆ, ಮುಂಗೈ ಸರಪಳಿ ಸೇರಿದಂತೆ ಅನೇಕ ಕೊಡುಗೆಗಳನ್ನು ಪಡೆದು ಊರಿಗೆ ಹೊರಡುತ್ತಾನೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
 

ಇತ್ತ ಕೆಲತ್ತ ಮಾರ್ನಾಡಿನಲ್ಲಿ ಈತನ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ. ಕೊನೆಯ ಅವಳಿ ಮಕ್ಕಳು ಬೀರುಕಲ್ಕುಡ ಮತ್ತು ಕಾಳಮ್ಮ ತಮ್ಮ ವಯಸ್ಸಿಗೆ ಮೀರಿದ ಸಾಹಸವನ್ನು ಮೆರೆಯುತ್ತಾರೆ. ತನ್ನ ಸಮವಯಸ್ಕ ಗೆಳೆಯರೊಂದಿಗೆ ಆಟಕ್ಕೆ ಹೋದಾಗ, ಆಟದಲ್ಲಿ ಸೋತ ಬೀರುವಿನ ಗೆಳೆಯರು ಬೀರು ಕಲ್ಕುಡನನ್ನು “ತಂದೆಯಿಲ್ಲದ ಮಗ”ನೆಂದು ದೋಷ ಹೇಳಿ ಕುಲದೂಷಣೆ ಮಾಡುತ್ತಾರೆ. ಆಗ ಮನೆಗೆ ಬಂದ ಬೀರುಕಲ್ಕುಡ ತಾಯಿಯಲ್ಲಿ ‘ತನಗೆ ತಂದೆಯಿಲ್ಲವೆ?’ ಎಂದು ಪ್ರಶ್ನಿಸುತ್ತಾನೆ. ಆಗ ತಾಯಿ ಈರವೆದಿಯು ‘ನಿನ್ನ ತಂದೆ ಬೆಳ್ಗೊಳಕ್ಕೆ ಕೆಲಸಕ್ಕೆ ಹೋದವರು ಇನ್ನೂ ಬಂದಿಲ್ಲ’ ಎಂದು ಹೇಳುತ್ತಾಳೆ. ಆಗ ‘ನಾನು ತಂದೆಯನ್ನು ಹುಡುಕಲು ಹೋಗುತ್ತೇನೆ. ನನಗೆ ತಂದೆಯ ಕೆಲಸವನ್ನು ನೋಡಬೇಕು. ನಾನೂ ಕೆಲಸ ಮಾಡಬೇಕು” ಎಂದು ಹೇಳುತ್ತಾನೆ. ಆಗ ತಾಯಿ ಈರವೆದಿ ‘ಅಯ್ಯೋ, ಮಗು ಬೀರು, ನೀನಿನ್ನೂ ಸಣ್ಣವ, ದೊಡ್ಡವನಾಗಿಲ್ಲ. ನಿನ್ನ ನೆತ್ತಿಯ ಎಣ್ಣೆಯ ಜಿಡ್ಡು ಮಾಸಿಲ್ಲ. ಕಾಲಿನ ಅರಸಿನ ಮಾಸಿಲ್ಲ’ ಎಂದು ಹೇಳುತ್ತಾಳೆ. ಆದರೆ ‘ತಾನು ಹೋಗುತ್ತೇನೆ’ ಎಂದು ಹಠ ಮಾಡುತ್ತಾನೆ ಬೀರುಕಲ್ಕುಡ. ಮರುದಿನ ಮುಂಜಾವು ಬೇಗನೆ ಎದ್ದು, ತಾಯಿ ನೀಡಿದ ತಂಗಳನ್ನ ಉಂಡು, ಮೊಸರನ್ನು ಬುತ್ತಿ ತೆಗೆದುಕೊಂಡು, ಪ್ರಯಾಣ ಆರಂಭಿಸಿದ. 

ಅಡ್ಡ ತೋಡನ್ನು ದಾಟಿ, ನೀರಗುಡ್ಡವನ್ನು ಹತ್ತಿ ಇಳಿದ. ಆನೆ ಕಟ್ಟಿದ ಅಶ್ವತ್ಥ, ಕುದುರೆ ಕಟ್ಟಿದ ಕಿನ್ನಿಗೋಳಿ, ಅಕ್ಕಿ ಇಳಿಸುವ ಅಟ್ಟೆ ಕಲ್ಲು, ಉಪ್ಪು ಹೊರೆ ಇಳಿಸುವ ಉಗುಂಟಕಲ್ಲು ಮುಂತಾದ ಪ್ರದೇಶಗಳನ್ನು ದಾಟಿ ಮುಂದೆ ಹೋದ.
ಅರಸರ ಕೊಡುಗೆಯೊಂದಿಗೆ ಬಂದ ಶಂಭು ಕಲ್ಕುಡ ಕಟ್ಟೆಯಲ್ಲಿ ಕುಳಿತಿರುವಾಗ, ಆ ಸಮಯಕ್ಕೆ ಸರಿಯಾಗಿ ಬೀರುಕಲ್ಕುಡ ಅಲ್ಲಿಗೆ ಬರುತ್ತಾನೆ. ತಂದೆಯ ಗುರುತು ಮಗನಿಗಿಲ್ಲ. ಮಗನ ಗುರುತು ತಂದೆಗಿಲ್ಲ. ಆದರೂ ತಂದೆ ಶಂಭುಕಲ್ಕುಡ ಬೀರುಕಲ್ಕುಡನ ಹತ್ತಿರ ‘ನೀನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುವೆಯಪ್ಪಾ?’ ಎಂದು ಸಹಜ ಕುತೂಹಲದಿಂದ ವಿಚಾರಿಸುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 
 “ನನ್ನ ತಂದೆಯನ್ನು ಹುಡುಕಲು ಹೋಗುತ್ತೇನೆ. ನನ್ನ ಊರು ಕೆಲತ್ತ ಮಾರ್ನಾಡು. ನನ್ನ ತಂದೆ ಶಂಭುಕಲ್ಕುಡ, ತಾಯಿ ಈರವೆದಿ’ ಎಂದು ಬೀರುಕಲ್ಕುಡ ಉತ್ತರಿಸುತ್ತಾನೆ. ಆಗ “ಅಯ್ಯೊಯ್ಯೋ, ಮಗನೇ ನಾನು ನಿನ್ನ ತಂದೆ, ನೀನು ನನ್ನ ಮಗ’ ಎಂದ ಶಂಭುಕಲ್ಕುಡ ಮಗನನ್ನು ಅಪ್ಪಿಕೊಳ್ಳುತ್ತಾನೆ. ‘ನಿನ್ನ ಕೆಲಸವನ್ನು ನನಗೆ ನೋಡಬೇಕು’ ಎಂದು ಹಠ ಹಿಡಿಯುತ್ತಾನೆ ಬೀರುಕಲ್ಕುಡ. ಮಗನ ಹಠಕ್ಕೆ ಮಣಿದ ತಂದೆ ಶಂಭು ಕಲ್ಕುಡ, ಮಗ ಬೀರುವಿನ ಜೊತೆಯಲ್ಲಿ ಬೆಳ್ಗೊಳಕ್ಕೆ ಹಿಂದಿರುಗುತ್ತಾನೆ. ಅಲ್ಲಿಯ ಗುಮ್ಮಟಸ್ವಾಮಿಯ ಕೆಲಸದಲ್ಲಿ ದೋಷ ಉಂಟೆಂದು ಬೀರುಕಲ್ಕುಡ ಹೇಳುತ್ತಾನೆ. “ಅಯ್ಯೊಯ್ಯೋ, ಮಗನೇ ನೀನು ನಿನ್ನೆ ಮೊನ್ನೆ ಹುಟ್ಟಿದವನು ಬೇಗನೇ ಬೆಳೆದುಬಿಟ್ಟೆ. ನನ್ನ ಕೆಲಸಕ್ಕೆ ಕುಂದುಕೊರತೆ ಹೇಳಿದೆಯಾ? ಅರಸರು ನೋಡಿದರೆ ಆನೆಯ ಕಾಲಡಿಗೆ ಹಾಕಿಸಿಯಾರು? ಕುದುರೆಯ ಚಾಟಿಯಲ್ಲಿ ಹೊಡೆಸಿಯಾರು” ಎಂದು ಹೇಳಿದ ಶಂಭುಕಲ್ಕುಡ ಅರಸನ ಶಿಕ್ಷೆಯ ಭಯದಿಂದ ಬೆಳ್ಳಿ ಕಟ್ಟಿದ ಚೂರಿಯಿಂದ ತನ್ನ ಹೊಟ್ಟೆಗೆ ಇರಿದುಕೊಂಡು ಸಾವನ್ನಪ್ಪುತ್ತಾನೆ. ಈ ವಿಷಯ ಎಲ್ಲೆಡೆ ಸುದ್ದಿಯಾಯಿತು. ಮಗ ಕೆಲಸದಲ್ಲಿ ಶೂರನೆಂದು ಪ್ರಚಾರವಾಯಿತು. ತಂದೆಯ ಸಾಧನಗಳನ್ನು ಹಿಡಿದುಕೊಂಡ ಬೀರುಕಲ್ಕುಡ ಘಟ್ಟ ಇಳಿದು ತುಳುರಾಜ್ಯಕ್ಕೆ ಬರುತ್ತಾನೆ. ಕಾರ್ಕಳದ ಅರಸ ಬೈರನಸೂಡರು ಬೀರು ಕಲ್ಕುಡನಿಗೆ ಓಲೆ ಕಳುಹಿಸುತ್ತಾರೆ. ಅರಸರ ಸನ್ನಿಧಿಗೆ ಬಂದ ಬೀರುಕಲ್ಕುಡ ಕರೆಕಳುಹಿಸಿದ ಕಾರಣವನ್ನು ಕೇಳುತ್ತಾನೆ. “ಏನಯ್ಯ ಕಲ್ಕುಡ, ಬಸದಿಯ ಕೆಲಸವಾಗಬೇಕು. ನೂರಿಪ್ಪತ್ತು ಬೊಂಬೆಗಳ ಕೆತ್ತನೆಯಾಗಬೇಕು. ಒಂಬತ್ತು ದೇವರುಗಳ ಕೆಲಸವಾಗಬೇಕು. ಗುಮ್ಮಟಸ್ವಾಮಿಯ ಕೆಲಸವಾಗಬೇಕು’ ಎಂದು ಅಪ್ಪಣೆ ಕೊಡುತ್ತಾರೆ ಬೈರನ ಸೂಡರು.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
ಇದಕ್ಕೆ ಒಪ್ಪಿದ ಬೀರುಕಲ್ಕುಡ ಪಡಿಯಕ್ಕಿ ಪಡೆದು ಬಿಡಾರ ಸೇರುತ್ತಾನೆ. ಮರುದಿನ ಮುಂಜಾವದಿಂದಲೇ ಕೆಲಸ ಆರಂಭಿಸುತ್ತಾನೆ. ಬಸದಿಯ ಕೆಲಸ ಮಾಡಿದ, ನೂರಿಪ್ಪತ್ತು ಬೊಂಬೆಗಳ ಕೆತ್ತನೆ ಮಾಡಿನ ಒಂಬತ್ತು ದೇವರುಗಳ ಕೆಲಸ ಮಾಡಿದ. ಗುಮ್ಮಟಸ್ವಾಮಿಯ ಕೆತ್ತನೆ ಮುಗಿಸಿದ ಬೀರು ಕಲ್ಕುಡ ಅರಸರಲ್ಲಿ ಬಹುಮಾನವನ್ನು ಕೇಳುತ್ತಾನೆ. ‘ಇಂದು ಮುಸ್ಸಂಜೆಯ ಹೊತ್ತಾಯಿತು. ನಾಳೆ ಬಾ’ ಎಂದು ಕಳುಹಿಸುತ್ತಾರೆ ಬೈರನ ಸೂಡ ಅರಸರು. ಮರುದಿನ ಕಲ್ಕುಡ ಹೋದಾಗ ‘ನನ್ನ ರಾಜ್ಯದಲ್ಲಿ ಕೆಲಸ ಮಾಡಿದವರು ಬೇರೆಡೆ ಇಂಥಹ ಅಪೂರ್ವ ಕೆಲಸವನ್ನು ಮಾಡಬಾರದು’ ಎಂದು ಮತ್ಸರದಿಂದ, ಬೈರನ ಸೂಡ ಅರಸ, ಬೀರುಕಲ್ಕುಡನ ಬಲಗೈಗೆ ಬಂಗಾರದ ಬಳೆ, ಎಡಕಾಲಿಗೆ ಕಡಗವಿಕ್ಕುತ್ತಾರೆ. ಜೊತೆಗೆ ಆತನ ಎಡಗೈ ಹಾಗೂ ಬಲಕಾಲನ್ನು ಕತ್ತರಿಸುತ್ತಾನೆ. ‘ಇಂಥ ಅನ್ಯಾಯದ ಊರಿನಲ್ಲಿ ನೀರು ಮುಟ್ಟಲಾರೆ’ ಎಂದು ಬೀರುಕಲ್ಕುಡ ವೇಣೂರ ಸೀಮೆಗೆ ಹೋಗುತ್ತಾನೆ. ಆತನನ್ನು ಆದರದಿಂದ ಕರೆಸಿ, ಸತ್ಕರಿಸಿದ ವೇಣೂರ ಒಡೆಯ ತಿಮ್ಮಣ್ಣಾಜಿಲರು ‘ನಮಗೆ ಗೊಮ್ಮಟಸ್ವಾಮಿಯ ಕೆತ್ತನೆಯ ಕೆಲಸವಾಗಬೇಕು’ ಎನ್ನುತ್ತಾರೆ. ಆಗ ಒಂದು ಕೈ ಕಾಲುಗಳನ್ನು ಕಳೆದುಕೊಂಡ ತಾನು ಹೇಗೆ ಕೆಲಸ ಮಾಡಲಿ? ಎಂದು ಕೇಳುತ್ತಾನೆ ಬೀರುಕಲ್ಕುಡ. ಆಗ ‘ನಿನ್ನ ಜಾತಿಸರೀಕರಿಗೆ ಈ ಕೆತ್ತನೆಯ ಒಳಗುಟ್ಟನ್ನು ತಿಳಿಸು’ವಂತೆ ಹೇಳುತ್ತಾರೆ ತಿಮ್ಮಣ್ಣಾಜಿಲರು © ಡಾ.ಲಕ್ಷ್ಮೀ ಜಿ ಪ್ರಸಾದ್ ಇದಕ್ಕೆ ಒಪ್ಪದ ಕಲ್ಕುಡ ತಾನೇ ಗೊಮ್ಮಟಸ್ವಾಮಿಯ ಕೆತ್ತನೆಯ ಕಾರ್ಯ ಮಾಡಿ ಮುಗಿಸುತ್ತಾನೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ
 


ಇತ್ತ ಬೀರುವಿನ ತಂಗಿ ಕಾಳಮ್ಮ ಅಣ್ಣನನ್ನು ಹುಡುಕಲು ಹೋಗಬೇಕೆನ್ನುತ್ತಾಳೆ. ಅಟ್ಟಕ್ಕೆ ಏಣಿ ಇಟ್ಟು ಮುಡಿಯಿಂದ ಮೂರು ಬಳ್ಳ ಅಕ್ಕಿ ತೆಗೆದು ಭತ್ತ ಕುಟ್ಟುವ ನೆಲಗುಳಿಯಲ್ಲಿ ಹಾಕುತ್ತಾಳೆ. ತಾಳೆ ಮರದ ಸುತ್ತಿನ ಒನಕೆಯನ್ನೆತ್ತಿ ಕುಟ್ಟುತ್ತಾಳೆ. ಒಪ್ಪವಾಗಿ ಸೇರಿಸಿ ಒಂದು ಬಳ್ಳ ಅಕ್ಕಿ ಮಾಡಿದಳು. ಅಕ್ಕಿಯನ್ನು ಹಾಲಿನಲ್ಲಿ ಬೇಯಿಸಿ, ಎಣ್ಣೆ ಚಕ್ಕುಲಿ, ಅಕ್ಕಿ ಕಡುಬು ಮಾಡುತ್ತಾಳೆ. ಮೂಡೆಯಲ್ಲಿ, ಅರಳು ಪಾತ್ರದಲ್ಲಿ ಮೂರು ಕುಡ್ತೆ, ಮೂರಚ್ಚು ಬೆಲ್ಲ ಹಾಕಿ ಬುತ್ತಿ ಗಂಟು ತೆಗೆದುಕೊಂಡು ಹೋಗುತ್ತಾಳೆ. ಚೆನ್ನಾಗಿ ಅಲಂಕರಿಸಿಕೊಂಡು ಪ್ರಯಾಣಕ್ಕೆ ಸಿದ್ಧವಾಗುತ್ತಾಳೆ. ಅಡ್ಡ ಸಿಕ್ಕಿದ ತೊರೆ-ಹಳ್ಳ, ಬೆಟ್ಟ-ಗುಡ್ಡ-ಕಣಿವೆಗಳನ್ನು ದಾಟಿ ಬೆಳ್ಗೊಳಕ್ಕೆ ಹೋಗುತ್ತಾಳೆ. ಅಲ್ಲಿ ಆತ ನಗರಕ್ಕೆ ಹೋಗಿದ್ದಾನೆ ಎನ್ನುತ್ತಾರೆ. ನಗರಕ್ಕೆ ಹೋದಾಗ ಕೊಲ್ಲೂರಿಗೆ ಹೋಗಿದ್ದಾನೆ ಎಂದವಳಿಗೆ ತಿಳಿಯುತ್ತದೆ. ಕೊಲ್ಲೂರಿಗೆ ಹೋದಾಗ ಆತ ಕಾರ್ಕಳಕ್ಕೆ ಹೋಗಿರುವ ವಿಷಯ ತಿಳಿಯುತ್ತದೆ. ಕಾರ್ಕಳದ ಬೈರನಸೂಡರು ಬೀರುಕಲ್ಕುಡನ ಒಂದು ಕೈ, ಒಂದು ಕಾಲು ಕಡಿಸಿದ ಸುದ್ದಿ ಕೇಳಿ ಮಮ್ಮಲ ಮರುಗುತ್ತಾಳೆ. 

ಅಣ್ಣ ವೇಣೂರಿನಲ್ಲಿರುವ ಸುದ್ಧಿ ಕೇಳಿ ಅಲ್ಲಿಗೆ ಧಾವಿಸುತ್ತಾಳೆ. ಅಣ್ಣನ ಮಡಿಲಿಗೆ ಹೋಗಿ ಬಿದ್ದು ‘ನಿನ್ನ ಕೈ ಏನಾಯಿತಣ್ಣಾ? ಕಾಲೇನಾಯಿತಣ್ಣಾ?’ ಎಂದು ದುಃಖಿಸುತ್ತಾಳೆ. “ಏನಮ್ಮ ತಂಗಿ ಕೇಳಿದೆಯಾ? ಕದ್ದು ಅಲ್ಲ, ಸುಳ್ಳಾಡಿ ಅಲ್ಲ. ಅಸಾಧ್ಯವಾದ ಕೆಲಸ ಮಾಡಿದ್ದಕ್ಕೆ ಕೊಡಬಾರದ ಬಹುಮಾನ ಕೊಟ್ಟರು” ಎಂದು ಬೀರುಕಲ್ಕುಡ ಖೇದದಿಂದ ಉತ್ತರಿಸುತ್ತಾನೆ.
 

ಸೇಡಿನ ಜ್ವಾಲೆಯಿಂದ ಬೆಂದ ಕಾಳಮ್ಮ ಅಣ್ಣನ ಮಡಿಲಿನಿಂದ ಎದ್ದು ನಿಂತಳು. ‘ಕಾಣುವಂತೆ ಗಾಯ ಮಾಡಿದ ಅರಸನನ್ನು ಮಾಯದಲ್ಲಿ ನೋಡಬೇಕು. ಲೋಕ ಬಿಟ್ಟು ಮಾಯಕಕ್ಕೆ ಸೇರುವ’ ಎಂದಳು. ಮಾದೇವ ಅಂಗಣದಲ್ಲಿ ಮೂರು ಸುತ್ತು ಬಂದು ಅದರಲ್ಲಿ ಮಾಯವಾದರು. ಮಾಯಕವಾದ ನಂತರ ಕಾರ್ಕಳಕ್ಕೆ ಬಂದ ಅಣ್ಣತಂಗಿ ಬೈರನ ಸೂಡನ ಅರಮನೆಯನ್ನು ಸುಟ್ಟು ಕರಕಲಾಗಿಸಿ, ದ್ವೇಷವನ್ನು ಸಾಧಿಸುವ ಮತ್ತು ದೈವತ್ವಕ್ಕೇರಿ ಆರಾಧಿಸಲ್ಪಡುವ ಕಥಾನಕ ಈ ಪಾಡ್ದನ ಕೊನೆಯ ಭಾಗದಲ್ಲಿ ಬರುತ್ತದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 
 

ಈ ಪಾಡ್ದನದ ಮೊದಲ ಭಾಗದಲ್ಲಿ ಎರಡು ದುರಂತಗಳನ್ನು ಕಾಣುತ್ತೇವೆ. ಬೆಳ್ಗೊಳದ ಕೆಲಸ ಮಾಡಿದ ಶಂಭುಕಲ್ಕುಡನ ಕಾರ್ಯದಲ್ಲಿ ಇರುವ ದೋಷವನ್ನು ಮಗ ಬೀರುಕಲ್ಕುಡ ಪತ್ತೆ ಹಚ್ಚಿ ಹೇಳುತ್ತಾನೆ. ಒಂದೆಡೆ ಮಗನೆದುರು ಪರಾಭವ, ಇನ್ನೊಂದೆಡೆ ಅರಸರ ಭಯದಿಂದ ತತ್ತರಿಸಿದ ಶಂಭುಕಲ್ಕುಡ ತನ್ನ ಹೊಟ್ಟೆಯನ್ನು ಇರಿದುಕೊಳ್ಳುವ ಮೂಲಕ ದುರಂತವನ್ನಪ್ಪುತ್ತಾನೆ. ಬಹುಶಃ ತಂದೆಯ ಮರಣಕ್ಕೆ ಕಾರಣವಾದ್ದರಿಂದಲೋ ಏನೋ ಬೀರುಕಲ್ಕುಡ ಅಲ್ಲಿಂದ ತನ್ನ ಊರಿಗೆ ಹಿಂತಿರುಗದೆ ತುಳುನಾಡಿಗೆ ಹೋಗುತ್ತಾನೆ. ಇವನ ಕೆಲಸದ ಖ್ಯಾತಿಯನ್ನು ಕೇಳಿದ ಕಾರ್ಕಳದ ಬೈರನಸೂಡ ಅರಸರು ಇವನಿಂದ ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತಿಸುತ್ತಾರೆ. ಅನಂತರ ಈತ ಬೇರೆಲ್ಲೂ ಇಂತಹ ಮೂರ್ತಿಯ ನಿರ್ಮಾಣ ಮಾಡಬಾರದೆಂಬ ಮತ್ಸರದಿಂದ ಅವನ ಮೇಲೆ ದೌರ್ಜನ್ಯವೆಸಗುತ್ತಾನೆ. ಆತನ ಕೈಕಾಲುಗಳನ್ನು ಕತ್ತರಿಸುತ್ತಾರೆ. ತನಗಾದ ಅನ್ಯಾಯದಿಂದ ನೊಂದ ಬೀರುಕಲ್ಕುಡ ವೇಣೂರಿಗೆ ತೆರಳಿ ಅಲ್ಲಿಯ ಅರಸ ತಿಮ್ಮಣ್ಣಾಜಿಲರ ಆಣತಿಯಂತೆ, ಕೇವಲ ಒಂದು ಕೈ, ಒಂದು ಕಾಲಿನಲ್ಲಿಯೇ, ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತುವ ಅಸಾಧಾರಣ ಸಾಹಸವನ್ನು ಮೆರೆಯುತ್ತಾನೆ. ಅಣ್ಣನನ್ನು ಹುಡುಕಿಕೊಂಡು ಬಂದ ಕಾಳಮ್ಮ ಅಣ್ಣನಿಗಾದ ಅನ್ಯಾಯ ಕಂಡು ಸಿಡಿದೇಳುತ್ತಾಳೆ. ಲೌಕಿಕದಲ್ಲಿ ಸಾಧ್ಯವಾಗದ ಕಾರ್ಯವನ್ನು ಮಾಯಕದಲ್ಲಿ ಮಾಡುವುದಕ್ಕಾಗಿ ಮಾಯವಾಗುತ್ತಾರೆ.

 ಪಾಡ್ದನದಲ್ಲಿ ಅವರು ಮಾಯವಾದರೆಂದು ಹೇಳಿದ್ದರೂ ಕೂಡ, ಅರಸನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಅವರನ್ನು ಕೊಲ್ಲಿಸಿರುವ ಸಾಧ್ಯತೆ ಇಲ್ಲದಿಲ್ಲ ಅಥವಾ ಕೈಕಾಲು ಕಡಿಸಿದ್ದರಿಂದ ನಂಜೇರಿ ಬೀರುಕಲ್ಕುಡ ಮರಣವನ್ನಪ್ಪಿರಬಹುದು. ಬಹುದೂರದಿಂದ ಬಹಳ ಕಠಿಣಪ್ರಯಾಣವನ್ನು ಮಾಡಿ ಬಂದ ತಂಗಿ ಕಾಳಮ್ಮ ಅಣ್ಣನ ದುರ್ಮರಣ ವಾರ್ತೆಯನ್ನು ಕೇಳಿ ಅಥವಾ ಆತನ ದುಃಸ್ಥಿತಿಯನ್ನು ನೋಡಿದಾಗ, ಮೊದಲೇ ಬಳಲಿದ್ದ ಅವಳ ದೇಹ, ಈ ಆಘಾತವನ್ನು ಸಹಿಸಿಕೊಳ್ಳದೆ ಮರಣವನ್ನಪ್ಪಿರುವ ಸಾಧ್ಯತೆ ಇದೆ. ಏನೇ ಆದರೂ ಅವರಿಬ್ಬರೂ ಅಸಾಧಾರಣ, ಅತಿಮಾನುಷ ಸಾಹಸಿಗಳು. ಆಳುವ ವರ್ಗದವರ ಶೋಷಣೆಗೆ ಒಳಗಾಗಿ ದುರ್ಮರಣವನ್ನಪ್ಪಿರಬಹುದು ಎಂದು ಹೇಳಬಹುದು.
ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಮರಣವನ್ನಪ್ಪಿದ ಇವರು ಮುಂದೆ ದೈವತ್ವಕ್ಕೇರಿ ಆರಾಧನೆಗೊಳ್ಳುವುದು ತುಳುನಾಡಿನಲ್ಲಿ ಅಸಹಜವಾದ ವಿಚಾರವೇನೂ ಅಲ್ಲ. ಈ ವೀರರ ಮೇಲಿನ ಅನುಕಂಪ ಅಥವಾ ಸತ್ತ ನಂತರ ಇವರು ಸೇಡು ತೀರಿಸಿಯಾರು ಎಂಬ ಭಯದಿಂದ ಇವರನ್ನು ಪ್ರಸನ್ನಗೊಳಿಸುವ ಪ್ರಯತ್ನವಾಗಿ ಇವರ ಆರಾಧನೆ ಪ್ರಾರಂಭವಾಗಿರಬೇಕು. ಏನೇ ಆದರೂ ದುರಂತ ನಾಯಕರಾಗಿರುವ ಈ ಇಬ್ಬರು ಅಣ್ಣ-ತಂಗಿಯರು ಇಂದು ತುಳುನಾಡಿನಾದ್ಯಂತ ಅನುಗ್ರಹವೀಯುವ ಕಲ್ಕುಡ-ಕಲ್ಲುರ್ಟಿ ದೈವಗಳಾಗಿ ಆರಾಧನೆಯನ್ನು ಪಡೆಯುತ್ತಿದ್ದಾರೆ.
 

ಈ ದುರಂತ ಕಥಾನಕದಲ್ಲಿ ಉಕ್ತವಾಗಿರುವ ದುರ್ಘಟನೆಗಳ ಬಗ್ಗೆ ಶಾಸನಗಳಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಹಾಗಿದ್ದರೂ ಕೂಡ ಮೌಖಿಕ ಪರಂಪರೆಯಲ್ಲಿರುವ ಘಟನೆಗಳನ್ನು ಕಾಲ್ಪನಿಕ ಎಂದು ತಳ್ಳಿ ಹಾಕುವುದಕ್ಕೂ ಸಾಧ್ಯವಿಲ್ಲ. ಆದ್ದರಿಂದ ಮೌಖಿಕ ಪರಂಪರೆಯ ಹಿನ್ನೆಲೆಯಲ್ಲಿ ಐತಿಹಾಸಿಕ ವಿಚಾರಗಳನ್ನು ಕೂಲಂಕಷವಾಗಿ ವಿವೇಚಿಸಿದಾಗ ಮಾತ್ರ ಪೂರ್ಣ ಸತ್ಯದ ಗೋಚರವಾಗಬಹುದು.copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ
ಯಾಕೆಂದರೆ ಮೌಖಿಕ ಪರಂಪರೆಯಲ್ಲಿ ಬರುವ ಎಲ್ಲವೂ ಕಪೋಲಕಲ್ಪಿತವಲ್ಲ. ಎಷ್ಟೋ ವೇಳೆ ಶಾಸನ ಸೇರಿದಂತೆ ಲಿಖಿತ ದಾಖಲೆಗಳಿಗೆ ಸಮೀಪಸ್ಥವಾದ ಅನೇಕ ನೈಜ ಅಂಶಗಳು ಕಂಠಸ್ಥ ಸಂಸ್ಕೃತಿಯಲ್ಲಿ ದಾಖಲಾಗಿರುತ್ತವೆ.
ಚಂದ್ರಮ ಕವಿಯ (ಕ್ರಿ.ಶ.೧೬೪೬) ಕಾರ್ಕಳದ ಗೋಮಟೇಶ್ವರ ಚರಿತೆ’ಯಲ್ಲಿ ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದ ಭೈರವರಸನು ಶಿಲ್ಪಿಗಳನ್ನು ಸಮ್ಮಾನಿಸಿದ ವಿಚಾರವಿದೆ. ಆದರೆ ಮುಖ್ಯ ಶಿಲ್ಪಿಯ ಹೆಸರು ಎಲ್ಲೂ ಉಲ್ಲೇಖವಾಗಿಲ್ಲ. ಆದರೆ ಐತಿಹ್ಯ ಪ್ರಧಾನವಾದ ‘ಕಾರ್ಕಳ ಅರಸರ ಕೈಫಿಯತ್ತು’ ಕಾರ್ಕಳ ಗೋಮಟೇಶ್ವರ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಈ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಚಿಕ್ಕಣಾಚಾರಿಯ ಬಲದ ಕೈಯನ್ನು ಕತ್ತರಿಸಿದ ಸಂಗತಿಯನ್ನು ಉಲ್ಲೇಖಿಸಿದೆ. ಈ ಸಂಗತಿಯನ್ನು ವೇಣೂರಿನ ತಿಮ್ಮಣ್ಣಾಜಿಲರ ಕೈಫಿಯತ್ತಿನಲ್ಲೂ ಹೇಳಲಾಗಿದೆ.
 

ವೇಣೂರಿನ ತಿಮ್ಮಣ್ಣಾಜಿಲನು ಕೆತ್ತಿಸಿದ ಗೋಮಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿಬಾರದೆಂದು ಮತ್ಸರದಿಂದ ವೇಣೂರಿನ ಮೇಲೆ ದಾಳಿ ಮಾಡಿದ ಕಾರ್ಕಳದ ಭೈರವರಸ ಸೋತ ವಿಚಾರವು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ಆಳುವ ವರ್ಗದವರ ಕ್ರೂರತೆ, ಅವರು ಎಸಗುವ ದೌರ್ಜನ್ಯಗಳು, ಅನೇಕ ಪಾಡ್ದನಗಳಲ್ಲಿ ಉಕ್ತವಾಗಿದೆ. ಆದ್ದರಿಂದ ಮೌಖಿಕ ಪರಂಪರೆಯಲ್ಲಿ ಉಕ್ತವಾದ ವಿಚಾರಗಳನ್ನು ನಗಣ್ಯ ಮಾಡುವಂತಿಲ್ಲ. ಕಂಠಸ್ಥ ಪರಂಪರೆ ಹಾಗೂ ಶಾಸನವೇ ಮೊದಲಾದ ಲಿಖತ ಪರಂಪರೆ ಎರಡನ್ನೂ ಜೊತೆ ಜೊತೆಯಲ್ಲಿಟ್ಟು ವಿವೇಚಿಸಿದಾಗ ಪೂರ್ಣ ಸತ್ಯದ ಅರಿವಾಗುತ್ತದೆ. 


ಈ ಹಿನ್ನೆಲೆಯಲ್ಲಿ ನೋಡಿದಾಗ ಬೀರುಕಲ್ಕುಡ ಪಾಡ್ದನದಲ್ಲಿ ಬರುವ ಕೈಕಾಲು ಕತ್ತರಿಸಿದ ಘಟನೆ ನಿಜವಾಗಿ ನಡೆದಿರಬಹುದು. ಅಣ್ಣನ ಮೇಲಾದ ಅನ್ಯಾಯವನ್ನು ಪ್ರಶ್ನಿಸಿದ ತಂಗಿ ಕಾಳಮ್ಮನನ್ನು ಸಾಯಿಸಿರುವ ಸಾಧ್ಯತೆ ಇಲ್ಲದಿಲ್ಲ. ಈ ಇಬ್ಬರು ಅಸಹಾಯ ಶೂರರ ಮೇಲೆ ಅನುಕಂಪ ಹಾಗೂ ಅಭಿಮಾನ ಹೊಂದಿದ ತುಳುನಾಡ ಜನರು ಅವರನ್ನು ದೈವತ್ವಕ್ಕೇರಿಸಿ ಆರಾಧಿಸಿರಬಹುದು. ಕಾಕತಾಳೀಯವಾಗಿ ಸಂಭವಿಸಿದ ಕಾರ್ಕಳದ ಬೈರವರಸರ ಅವನತಿಯು ಇವರ ದೈವತ್ವದ ನಂಬಿಕೆಗೆ ಇಂಬುಕೊಟ್ಟಿರಬಹುದು.ಏನೇ ಆದರೂ ಅರಸೊತ್ತಿಗೆಯ ಆ ಕಾಲದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಅವರ ಧೈರ್ಯ ಸ್ವಾಭಿಮಾನವನ್ನು  ನೆನೆದಾಗ ತಲೆ ಬಾಗುತ್ತದೆ ಇಡಿಯ ತುಳುನಾಡು
ಕ್ರಿ ಶಕ 1432 ರಲ್ಲಿ ಬೈರವರಸ ಗೊಮ್ಮಟೇಶ್ವರನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಬಗ್ಗೆ ಇತಿಹಾಸದಲ್ಲಿ ದಾಖಲೆ ಇದೆ.ಹಾಗಾಗಿ ಕಲ್ಲುಡ ಕಲ್ಲುರ್ಟಿಯರ ಕಾಲ ಕೂಡ ಇದೇ ಆಗಿದ್ದು ಕೋಟಿ ಚೆನ್ನಯ್ಯರಿಗಿಂತ ಪ್ರಾಚೀನಕಾಲದವರು ಇವರಾಗಿದ್ದಾರೆ  

Copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು  
ಲೇ : ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

No comments:

Post a Comment