Sunday 4 March 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 429 - ಕಾಜಿಗಾರ್ತಿ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 429 - ಕಾಜಿಗಾರ್ತಿ© ಡಾ.ಲಕ್ಷ್ಮೀ ಜಿ ಪ್ರಸಾದ
ತುಳುವಿನಲ್ಲಿ ಕಾಜಿ ಎಂದರೆ ಬಳೆ ಎಂದರ್ಥ.ಇಲ್ಲಿ ಬಳೆ ಮಾರುವ ಮಹಿಳೆಯರು ಇದ್ದಾರೆ.ಇವರನ್ನು ಕಾಜಿಗಾರ್ತಿ ಎಂದು ತುಳುವಿನಲ್ಲಿ ಕರೆಯುತ್ತಾರೆ.
ಈ ದೈವದ ಹೆಸರೇ ಸೂಚಿಸುವಂತೆ ಇದು ಮೂಲತಃ ಮಾನವ ಮೂಲದ ದೈವತ.ಬಳೆಗಾರರ ಸಮುದಾಯದ ಮಹಿಳೆ.
ತುಳುನಾಡಿನಲ್ಲಿ ಯಾರಿಗೆ ಯಾವಾಗ ಯಾಕೆ ದೈವತಗವ ಸಿಗುತ್ತದೆ ಎಮಬುದಕ್ಕೆ ಇದಮಿತ್ಥಂ ಎಂದು ಹೇಳ ಬಹುದಾದ ಸಿದ್ಧ ಸೂತ್ರವಿಲ್ಲ.
ಅಪ್ರತಿಮ ಸಾಹಸ ಮೆರೆದ ಅತಿ ಮಾನುಷ ವ್ಯಕ್ತಿಗಳು ದೈವಗಳಾಗಿದ್ದಾರೆ.ಅಂತೆಯೇ ವರ್ಗ ಜಾತಿ ತಾರತಮ್ಯ ವನ್ನು ಪ್ರಶ್ನಿಸಿದವರು ಪ್ರಧಾನ ದೈವಗಳ ಕೋಪಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಇಂತಹ ಯಾವುದೇ ಕಾರಣ ಇಲ್ಲದೇ ಇರುವ ಸಾಮಾನ್ಯರು ಕೂಡ ಪ್ರಧಾನ ದೈವದ ದೃಷ್ಟಿ ತಾಗಿ ಮಾಯಕ ಹೊಂದಿ ಅದೇ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾರೆ. ಕಬಕ ಬೈಪ್ಪದವಿನಲ್ಲಿ ಅಣ್ಣಪ್ಪ ಪಂಜುರ್ಲಿಯ ದೃಷ್ಟಿ ಬಿದ್ದು ಮಲೆ ಕುಡಿಯರ ಎಳೆಯ ಹುಡುಗಿ ಕುಂಞಿ ಕೆರೆಗೆ ಸ್ನಾನಕ್ಕೆ ಹೋದವಳು ಮಾಯಕ ಹೊಂದಿ ಅಣ್ಣಪ್ಪ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.ಅದೇ ರೀತಿ ಹರಿಕೆ ತೀರಿಸಲು ಬಂದ ಸುಂದರ ಯುವತಿ ದಾರುವಿನ ಮೇಲೆ ದೃಷ್ಟಿ ಇಟ್ಟ ವರ್ನಾರ ಪಂಜುರ್ಲಿ ಆಕೆಯನ್ನು ಹಿಂಬಾಲಿಸಿ ಮಾಯಕ ಮಾಡಿ ತನ್ನ ಸೇರಿಗೆಗೆ ಸಮದಾಯ ಮಾಡಿಕೊಳ್ಳುತ್ತದೆ‌ ದಾರು ಮತ್ತು ಆಕೆಯ ತಮ್ಮ ಕುಂದಯ ಇಬ್ಬರೂ ಕೂಡ ವರ್ನಾರ ಮರ್ಲೆ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಹಾಗೆಯೇ ಕಾಜಿಗಾರ್ತಿ ದೈವದ ಹಿನ್ನೆಲೆಯಲ್ಲಿ ಕೂಡ ಇಂತಹದುದೇ ಕಥಾನಕ ಪ್ರಚಲಿತವಿದೆ.
ಕಲ್ಲಡ್ಕ ಸಮೀಪ ಲಕ್ಷ್ಮೀ ಕೆರೆ ಎಂಬ ಕೆರೆ ಇದೆ‌.ಇಲ್ಲಗೆ ಸಮೀಪದಲ್ಲಿ ಪಂಜುರ್ಲಿ ದೈವದ ಕೋಲ ಆಗುತ್ತಾ ಇರುತ್ತದೆ‌.ಆಗ ಕೆರೆ ಸಮೀಪದಲ್ಲಿ ಬಳೆ ಮಾರುತ್ತಾ ಓರ್ವ ಮಹಿಳೆ ಬರುತ್ತಾಳೆ.ಅ ಸಮಯದಲ್ಲಿ ಎದ್ದು ನಿಂತು ಪಂಜುರ್ಲಿ ದೈವ ಈ ಕಾಜಿಗಾರ್ತಿ ಮೇಲೆ ದೃಷ್ಟಿ ಇಡುತ್ತದೆ‌.ಆಗ ಅ ಬಳೆ ಮಾರುವ ಮಹಿಳೆ ಲಕ್ಷ್ಮೀ ಕೆರೆಯಲ್ಲಿ ಮಾಯಕ ಹೊಂದಿ ಪಂಜುರ್ಲಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಕಾಜಿಗಾರ್ತಿ ದೈವವಾಗಿ ಆರಾಧನೆ ಪಡೆಯುತ್ತಾಳೆ.
 ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಅವಿಭಾಜ್ಯ ಅಂಗಗಳು.ಲಕ್ಷ್ಮೀ ಕೆರೆಯಲ್ಲಿ ಮುಳುಗಿಯೊ ಇನ್ನೆನೋ ಆಗಿ ದುರಂತವನ್ನಪ್ಪಿದ ಸಮಯದಲ್ಲಿ ಪಂಜುರ್ಲಿ ದೈವದ ಕೋಲ ನಡೆಯುತ್ತಿದ್ದು ,ದೈವದ ಕಾರಣಿಕದಿಂದ ಅಕೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು.
ಮಾಹಿತಿ ನೀಡಿದ ನಿತೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
© ಡಾ.ಲಕ್ಷ್ಮೀ ಜಿ ಪ್ರಸಾದ

Friday 2 March 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 428 ಕನ್ನಡ ಕಲ್ಕುಡ - ಡಾ.ಲಕ್ಷ್ಮೀ ಜಿ ಪ್ರಸಾದ



ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 428 ಕನ್ನಡ ಕಲ್ಕುಡ - ಡಾ.ಲಕ್ಷ್ಮೀ ಜಿ ಪ್ರಸಾ
ತುಳುನಾಡಿನ ಭೂತಾರಾಧನೆ ಬಹಳ ವಿಶಿಷ್ಟವಾದುದು‌.ಒಂದೇ ಭೂತಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆರಾಧನೆ ನಡೆಯುತ್ತದೆ. ಹಾಗೆಯೇ ಒಂದೇ ಹೆಸರಿನಲ್ಲಿ ಬೇರೆ ಬೇರೆ ಭೂತಗಳಿಗೂ ಆರಾಧನೆ ಇರುವುದು ನನ್ನ ಕ್ಷೇತ್ರಕಾರ್ಯದಲ್ಲಿ ಅನೇಕೆಡೆಗಳಲ್ಲಿ ಕಂಡುಬಂದಿದೆ.
ಉದಾಹರಣೆಗೆ ಐದು ಪುರುಷ ಭೂತಗಳ ಮಾಹಿತಿ ನನ್ನ ಅಧ್ಯಯನದಲ್ಲಿ ಸಿಕ್ಕಿದೆ.ಕನ್ನಡ ಯಾನೆ ಪುತುಷ ಭೂತ,ಜೋಗಿ ಪುರುಷ,ಗರೊಡಿಯ ಪುರುಷರಾಯ,ಕಾಂಬೋಡಿದ ಪುರ್ಸ ಬೂತ,ಬರಾಯ ಅರಮನೆಯ ಪುರುಷರಾಯ, ಇವೆಲ್ಲವೂ ಒಂದೇ ಹೆಸರನ್ನು ಹೊಂದಿದ್ದರೂ ಬೇರೆ ಬೇರೆ ಶಕ್ತಿಗಳಾಗಿವೆ.ಹಾಗೆಯೇ ಮಂಡೆಕಾರ ಕಲ್ಲುರ್ಟಿ ಮತ್ತು ಕಲ್ಲುರ್ಟಿ ಬೇರೆ ಬೇರೆ ದೈವಗಳಾಗಿವೆ‌.ಕಾರ್ಕಳದ ಬಾಹುಬಲಿ ವಿಗ್ರಹವನ್ನು ಕೆತ್ತಿದ,ಕಾರ್ಕಳದ ಭೈರವರಸನ ದೌರ್ಜನ್ಯಕ್ಕೆ ತುತ್ತಾಗಿ ಕೈ ಕಾಲುಗಳನ್ನು ಕಳೆದು ಕೊಂಡು ದುರಂತವನ್ನಪ್ಪಿದ ಬೀರು ಕಲ್ಕುಡ ಎಂಬ ಶಿಲ್ಪಿ ದೈವತ್ವ ಪಡೆದು ಕಲ್ಕುಡ ಎಂಬ ದೈವವಾಗಿ ಎಲ್ಲೆಡೆ ಆರಾಧನೆ ಇರುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.
ಆದರೆ ಕಾರ್ಕಳ ಪೇಟೆಯ ಅನಂತ ಪದ್ಮನಾಭ ದೇವಾಲಯದಲ್ಲಿ ಕನ್ನಡ ಕಲ್ಕುಡ ಎಂಬ ಹೆಸರಿನ ದೈವವಿದೆ‌.ಕಲ್ಕುಡ ಎಂದರೆ ಕಲ್ಲು ಕುಟ್ಟುವ/ ಕೆತ್ತುವಾತ ಎಂದರ್ಥ ,ಶಿಲ್ಪಿಗಳಿಗೆ ತುಳುವಿನಲ್ಲಿ ಕಲ್ಕುಡ ಎನ್ನುತ್ತಾರೆ.
ಕನ್ನಡ ಕಲ್ಕುಡ ಎಂಬ ದೈವ ಮೂಲತಃ ಘಟ್ಟದ ಮೇಲಿನಿಂದ ವಿಜಯ ನಗರದ ಅರಸರು ಕಳುಹಿಸಿಕೊಟ್ಟ ಶಿಲ್ಪಿ ಇರಬೇಕು‌.ಆತನ ಹೆಸರು ಮರೆಯಾಗಿ ಆತ ಕನ್ನಡಿಗನಾದ್ದರಿಂದ ಆತ ದೈವತ್ವ ಪಡೆದಾಗ ಅವನ ಹೆಸರು ಕನ್ನಡ ಕಲ್ಕುಡ ಎಂದಾಗಿದೆ.
ಹರೀಶ್ ಕುಮಾರ್ ಕಾರ್ಕಳ ಅವರು ಕನ್ನಡ ಕಲ್ಕುಡ ದೈವದ ಬಗ್ಗೆ ಮಾಹಿತಿ ನೀಡಿ ಚಿತ್ರವನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ‌.
ವಿಜಯ ನಗರದ ಅರಸರು ರಕ್ಕಸ ತಂಗಡಿ ಯುದ್ಧದಲ್ಲಿ ಗೆದ್ದರೆ ಒಂದು ಅನಂತ ಪದ್ಮನಾಭ ದೇವಾಲಯವನ್ನು ಕಟ್ಟಿಸುವುದಾಗಿ ಹರಿಕೆ ಹೇಳಿಕೊಂಡಿದ್ದರು .ಅದಕ್ಕಾಗಿ ವಿಗ್ರಹವನ್ನು ಕೆತ್ತಲು ಓರ್ವ ಶಿಲ್ಪಿಯನ್ನು ಕಾರ್ಕಳದ ನೆಲ್ಲಿಕಾರಿಗೆ ಕಳಹಿಸಿ ವಿಗ್ರಹ ಕೆತ್ತಿಸಿದರು‌.ನೆಲ್ಲಿಕಾರಿನಲ್ಲಿ ಸಿಗುವ ಬರಹತ್ ಕಲ್ಲುಗಳು ವಿಗ್ರಹ ಕೆತ್ತನೆಗೆ ಬಹಲ ಸೂಕ್ತವಾಗಿವೆ‌.
ಆದರೆ ರಕ್ಕಸ ತಂಗಡಿ ಯುದ್ಧದಲ್ಲಿ ವಿಜಯ ನಗರದ ಅರಸರಿಗೆ ಸೋಲಾಗುತ್ತದೆ‌.ಹಾಗಾಗಿ ಆ ವಿಗ್ರಹವನ್ನು ಹರಿಯಪ್ಪನ ಕೆರೆಯಲ್ಲಿ ಅಡಗಿಸಿ ಇಡುತ್ತಾರೆ.
ಮುಂದೆ ಒಂದು ದಿನ ಕಾರಗಕಳಕ್ಕೆ ಶೃಂಗೇರಿಯ ಸ್ವಾಮಿಗಳು ಬರುತ್ತಾರೆ‌.ಅವರಿಗಾಗಿ ಅಲ್ಲಿ ಇದ್ದ ಬಸದಿಯಲ್ಲಿ ಈ  ಅನಂತ ಶಯನನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ‌.ಅದು ಮುಮದೆ ಅನಂತ ಪದ್ಮನಾಭ ದೆವಾಲಯವೆಮದು ಪ್ರಸಿದ್ಧಿ ಪಡೆಯುತ್ತದೆ ಬಸದಿಯನ್ನು ಮಾರ್ಪಡಿಸಿದ್ದು ತಿಳಿದ ಸ್ವಾಮೀಜಿಗಳು ಅಲ್ಲಿಯೇ ಸಮೀಪದಲ್ಲಿ ಒಂದು ಚತುರ್ಮುಖ ಬಸದಿ ನಿರ್ಮಾಣಮಾಡುವಂತೆ ತಿಳಿಸುತ್ತಾರೆ‌.
ಇಲ್ಲಿ ಅನಂತ ಶಯನನ ವಿಗ್ರಹವನ್ನು ಕೆತ್ತಿದ ಶಿಲ್ಪಿ ಮರಣಾನಂತರ ಕೂಡ ಅದನ್ನು ಕಾಯುತ್ತಿರುತ್ತಾನೆ‌.ಅದನ್ನು ಪ್ರತಿಷ್ಠಾಪಿಸಲು ತಂದಾಗ ಅವನು ಕೂಡ ಜೊತೆಯಲ್ಲಿ ಬರುತ್ತಾನೆ‌.ಅವನಿಗೆ ದೈವಿಕ ನೆಲೆಯಲ್ಲಿ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.
ಇಲ್ಲಿ ಪ್ರತಿವರ್ಷ ರಾಮನವಮಿಯಂದು ಸಣ್ಣ ಜಾತ್ರೆ ಅದರ ಮರುದಿನ ದೊಡ್ಡ ಜಾತ್ರೆ ನಡೆಯುತ್ತದೆ.
ಅದರ ಮರುದಿನ ಏಕಾದಶಿಯಂದು ಕನ್ನಡ ಕಲ್ಕುಡ ಮತ್ತು ಕುಕ್ಕಿನಂತಾಯ ದೈವಗಳಿಗೆ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.
ಇಲ್ಲಿ ಕನ್ನಡ ಕಲ್ಕುಡ ಮೂಕ ಎಮದರೆ ಮಾತನಾಡದೆ ಇರುವ ದೈವ.ಇದರ ಬಗ್ಗೆ ಕೂಡ ಒಂದು ಐತಿಹ್ಯ ಇತುವ ಬಗ್ಗೆ ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಅಲ್ಲಿ ಸಮೀಪದಲ್ಲಿ ಪದ್ಮಾವತಿ ದೇವಾಲಯವನ್ನು ನಿರ್ಮಾಣ ಮಾಡುವಾಗ ಕನ್ನಡ ಕಲ್ಕುಡ ದೈವ ತುಂಬಾ ಕಾಟ ಕೊಡುತ್ತಾನೆ‌ಆಗ ಅವರು ಮಂತ್ರವಾದಿಗಳನ್ನು ಕರೆಸಿ ದಿಗ್ಭಂಧನ ಮಾಡಿ ಕನ್ನಡ ಕಲ್ಕುಡ ಬಾಯಿತೆರೆಯದಂತೆ ಮಾಡುತ್ತಾರೆ
ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಿದೆ.
ಫೋಟೋ ಮತ್ತು ಮಾಹಿತಿ ನೀಡಿದ ಹರೀಶ್ ಕುಮಾರ್ ಕಾರ್ಕಳ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು
- ಡಾ.ಲಕ್ಷ್ಮೀ ಜಿ ಪ್ರಸಾದ

Tuesday 27 February 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 427 ಕೀಳು ದೈವ- ಡಾ.ಲಕ್ಷ್ಮೀ ಜಿ ಪ್ರಸಾದ

ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂದು ಇದಮಿತ್ಥಂ ಉತ್ತರಿಸುವುದು ಕಷ್ಟದ ವಿಚಾರ
ತುಳು‌ಮಲೆಯಾಳ ಕೊಡವ ಕನ್ನಡ ಪರಿಸರದ ದೈವಗಳ ಪಟ್ಟಿಯನ್ನು ನಾನು ಮಾಡಿದ್ದು 1526 ಹೆಸರುಗಳು ಸಿಕ್ಕಿವೆ ಇದರಲ್ಲಿನ 1435 ದೈವಗಳ ಹೆಸರಿನ  ಪಟ್ಟಿ ಅಣಿಅರದಳ ಸಿರಿ ಸಿಂಗಾರ ಕೃತಿಯಲ್ಲಿ ಪ್ರಕಟವಾಗಿದೆ.1526.ಕೂಡ ಅಂತಿಮವಲ್ಲ .
ಕ್ಷೇತ್ರಕಾರ್ಯಕ್ಕೆ ಹೋದಂತೆಲ್ಲಾ ಹೊಸ ಹೊಸ ಹೆಸರುಗಳು ಸಿಕ್ಕುತ್ತಾ ಇವೆ‌.
ಫೇಸ್ ಬುಕ್ ಮೂಲಕ ಪರಿಚಿತರಾದ  ರಾಜ್ಬೇ ಕೆ ಶೆಟ್ಟಿ ಳಂಜೆಯವರು ಅವರ ಪರಿಸರದಲ್ಲಿ ಆರಾಧನೆ ಆಗುವ ಕೀಳು ಎಂಬ ಹೆಸರಿನ ದೈವದ ಬಗ್ಗೆ ತಿಳಿಸಿದ್ದಾರೆ.
ಕೀಳು ಎಂದರೆ ಇಲ್ಲಿ ತುಚ್ಛ ಕೆಳಮಟ್ಟ ಎಂಬರ್ಥವಲ್ಲ.ಕೇಳು ,ಕೀಳು ಇತ್ಯಾದಿ ಹೆಸರುಗಳು ತುಳುನಾಡಿನಲ್ಲಿ ಇದ್ದವು.ಪ್ರಸ್ತುತ ಅವುಗಳ ಮೂಲ ಅರ್ಥ ಕಳೆದುಹೋಗಿದೆ.
ಕೀಳು ಎಂಬುದು ಹೆಬ್ರಿ ಬೇಳಂಜೆ ಪರಿಸರದ ಓರ್ವ ಮಹಿಳೆಯ ಹೆಸರು.ಈಕೆ ಆ ಪರಿಸರದಲ್ಲಿ ವಾಸವಿದ್ದ ಕೂಸಾಳು ಎಂಬ ಸಮುದಾಯಕ್ಕೆ ಸೇರಿದವಳು.ಯಾವುದೋ ಕಾರಣಕ್ಕೆ ಮಾಯಕ ಹೊಂದಿ ದೈವತ್ವ ಪಡೆದು ಆರಾಧನೆ ಪಡೆಯುತ್ತಿದ್ದಾಳೆ.
ಮಾಹಿತಿ ನೀಡಿದ ರಾಜ್ ಕೆ ಶೆಟ್ಟಿ ಬೇಳಂಜೆಯವರಿಗೆ ಧನ್ಯವಾದಗಳು
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ - ಡಾ.ಲಕ್ಷ್ಮೀ ಜಿ ಪ್ರಸಾದ

Sunday 25 February 2018

ಸಾವಿರದೊಂದು ಗುರಿಯೆಡೆಗೆ, ತುಳುನಾಡ ದೈವಗಳು 425-426 ನೇತ್ರಾಣಿ ಜಟಗ/ ಜಟ್ಟಿಗ ಮತ್ತು ಹೊಗೆವಡ್ಡಿ ಜಟಗ ದೈವಗಳು© ಡಾ ಲಕ್ಷ್ಮೀ ಜಿ ಪ್ರಸಾದ

 


ಚಿತ್ರ ಕೃಪೆ - ಶ್ರೀ ಅನಂತ ನಾಯಕ್ ,ನೇತ್ರಾಣಿ ಗುಡ್ಡ ಮತ್ತು ಕುದುರೆ ಜಟ್ಟಿಗ, ನೇತ್ರಾಣಿ ಜಟ್ಟಿಗ ,ಕ್ಷೇತ್ರ ಪಾಲ ಮತ್ತು ಇತರ ಆರಾಧ್ಯ ಶಕ್ತಿಗಳು
ಸಾವಿರದೊಂದು ಗುರಿಯೆಡೆಗೆ, ತುಳುನಾಡ ದೈವಗಳು
ನೇತ್ರಾಣಿ ಜಟಗ ಮತ್ತು ಹೊಗೆವಡ್ಡಿ ಜಟಗ ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ
ರಾಣಿ ಚೆನ್ನ ಭೈರಾದೇವಿ ಉತ್ತರ ಭಾರತದಿಂದ ಗೊಂಡರ ಪಡೆಯನ್ನು ತನ್ನ ಕೋಟೆ ಹಾಗೂ ಅರಮನೆಯ ಕಾವಲಿಗಾಗಿ ಕರೆಸಿಕೊಂಡು ಬಂದು ಸಲಹಿದ್ದ ಬಗ್ಗೆ ಇತಿಹಾಸವು ತಿಳಿಸುತ್ತದೆ.ಗೊಂಡರು ಜಟಗರನ್ನು ಆರಾಧನೆ ಮಾಡುತ್ತಾರೆ.ಇವರು ಬಲಿಷ್ಠ ರಾದ ಜಟ್ಟಿಗಳೂ ಆಗಿದ್ದರು.
ಹೊಗೆವಡ್ಡಿ ಮತ್ತು ನೇತ್ರಾಣಿ ಗುಡ್ಡದಲ್ಲಿ  ಜಟ್ಟಿಗ/ಜಟಗರ ಆರಾಧನೆ ಇದೆ. ಇವರಿಬ್ಬರು ಅಣ್ಣ ತಮ್ಮಂದಿರಾಗಿದ್ದು
ಹೊಗೆವಡ್ಡಿಯ ಜಟಗರಾಯ ಅಣ್ಣನೆಂದೂ ,ನೇತ್ರಾಣಿಯ ಜಟಗರಾಯ ತಮ್ಮನೆಂಬ ಐತಿಹ್ಯವಿದೆ.
ಹೊಗೆವಡ್ಡಿಯ ಜಟಗನಿಗೆ ಮಾಣಿ ಭದ್ರ ಎಂಬ ಹೆಸರು‌.ನೇತ್ರಾಣಿ ಜಟಗನಿಗೆ ವೀರ ಭದ್ರನೆಂದು ಹೆಸರು.
ಇವರಿಬ್ಬರೂ ಯುದ್ದ ವೀರರಾಗಿದ್ದರು.
ಕಾಸರ
ಸ್ಥಳೀಯ ಐತಿಹ್ಯದ ಪ್ರಕಾರ ಹೊಗೆವಡ್ಡಿ ಯ ಜಟಗ ನಿಜಾಮರ ಜೊತೆಗಿನ ಹೋರಾಟದಲ್ಲಿ ಮರಣವನ್ನಪ್ಪುತ್ತಾನೆ‌.ನೇತ್ರಾಣಿ ಜಟಗ ಮರಾಠರ ಜೊತೆಯ ಹೋರಾಟದಲ್ಲಿ ಮರಣವನ್ನಪ್ಪುತ್ತಾರೆ .
ಹೊಗೆವಡ್ಡಿ ಕೋಟೆಯಲ್ಲಿ ಕಾಸರಗೋಡು ತಿಮ್ಮಣ್ಣ ನಾಯಕನಿದ್ದಾಗ ಒಂದೆಡೆಯಿಂದ ನಿಜಾಮರು ಮತ್ತು ಮತ್ತೊಂದೆಡೆಯಿಂದ ಮರಾಠರು ಆಕ್ರಮಣ ಮಾಡುತ್ತಾರೆ. ಆಗ ಇವರಿಬ್ಬರು ಯುದ್ಧದಲ್ಲಿ ಸಾಯುತ್ತಾರೆ.
‌ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಇತಿಹಾಸದಲ್ಲಿ ಪೋರ್ಚುಗೀಸರು ಮತ್ತು ರಾಣಿಯ ನಡುವೆ ಯುದ್ಧವಾಗಿದ್ದು ಸ್ವತಃ ರಾಣಿಯೇ ಕತ್ತಿ ಹಿಡಿದು ಯುದ್ಧ ಮಾಡಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸುತ್ತಾಳೆ.ಆಗ ಗಾಯಗೊಂಡ ಅವಳು ಪೋರ್ಚುಗೀಸರ ನಡುವೆ ಸಿಕ್ಕು ಹಾಕಿಕೊಳ್ಳುತ್ತಾಳೆ.ಆಗ ಗೊಂಡರ ನಾಯಕ ವೀರಾವೇಶದಿಂದ ಹೋರಾಡಿ ರಾಣಿಯನ್ನು ರಕ್ಷಣೆ ಮಾಡಿ ಗಾಯ ಗೊಂಡ ಅವಳನ್ನು ಹೊತ್ತುಕೊಂಡು ನೇತ್ರಾಣಿ ಗುಡ್ಡಕ್ಕೆ ಬರುತ್ತಾನೆ.ಯುದ್ಧದಲ್ಲಿ ಗಾಯಗೊಂಡ ಅವಳು ಸಾಯುತ್ತಾಳೆ.ಆಗ ಅವಳ ರಾಜ್ಯದ ಒಡೆತನ ಅವಳ ತಂಗಿ ಚನ್ನ ಭೈರಾದೇವಿಗೆ ಸಿಗುತ್ತದೆ. ಅವಳು ಸುಮಾರು ಐವತ್ತನಾಲ್ಕುವರ್ಷಗಳ ಕಾಲ ಬಸದಿ ಕೇರಿ ಗೇರು ಸೊಪ್ಪೆ ಭಟ್ಕಳದಲ್ಲಿ ಆಳ್ವಿಕೆ ನಡೆಸುತ್ತಾಳೆ.ಕಾಳು ಮೆಣಸನ್ನು ಬೆಳೆದು ಮಾರಾಟ ಮಾಡಿ ಅಪಾರ ಸಂಪತ್ತನ್ನು ಗಳಿಸಿದ ಅವಳು ರಾಜ್ಯ ವಿಸ್ತರಣೆಯನ್ನು ಮಾಡುತ್ತಾಳೆ.ವಿಜಯ ನಗರ ಸಾಮ್ರಾಜ್ಯಕ್ಕೆ ಸಂವಾದಿಯಾದ ಸಾಮ್ರಾಜ್ಯವನ್ನು ಕಟ್ಟುತ್ತಾಳೆ.ಈ ಬಗ್ಗೆ ದೆಲ್ಲಾವೆಲ್ಲಾ ಬರೆದ ಪ್ರವಾಸಿ ಕಂಡ ಭಾರತದಲ್ಲಿ ಉಲ್ಲೇಖವಿದೆ.
‌ಅಕ್ಕನ  ವಯಸ್ಸಾದ ಗಂಡನನ್ನು ಮದುವೆಯಾದ ತಂಗಿ ಸಣ್ಣ ವಯಸ್ಸಿಗೆ ವಿಧವೆಯಾಗುತ್ತಾಳೆ.ನಂತರ ಗೊಂಡರ ನಾಯಕನನ್ನು ಸಂಪೂರ್ಣವಾಗಿ ನಂಬುತ್ತಾಳೆ.ಆದರೆ ಆತ ರಾಣಿಗೆ ಮೋಸ ಮಾಡಿ ಕೆಳದಿಯ ವೆಂಕಟಪ್ಪ ನಾಯಕನ ಜೊತೆ ಸೇರಿ ರಾಜ್ಯದ ಸಂಪತ್ತು ಎಲ್ಲಿದೆ ಎಂಬ ರಹಸ್ಯವನ್ನು ಹೇಳುತ್ತಾನೆ.ವೆಂಕಟಪ್ಪ ನಾಯಕ ಯುದ್ಧಕ್ಕೆ ಬಂದಾಗ ತನ್ನಲ್ಲಿರುವ ಸಮಪತ್ತನ್ನು ನೀಡುತ್ತೇನೆ ಎಂದು ತಿಳಿಸಿ ಪೋರ್ಚುಗೀಸರೊಡನೆ ಒಪ್ಪಂದ ಮಾಡಿ ಯುದ್ದಕ್ಕೆ ಸಹಾಯ ಯಾಚಿಸುತ್ತಾಳೆ.ಆದರೆ ರಾಜ್ಯದಲ್ಲಿ ನೂರಾರು ಬಾವಿಗಳಲ್ಲಿ ಅಡಗಿಸಿ ಇಟ್ಟ ಸಂಪತ್ತನ್ನು ನೋಡಿದ ಪೋರ್ಚುಗೀಸರು ಅದನ್ನು ಬೇರೆಡೆಗೆ ಸಾಗಿಸುವಲ್ಲಿ ಗಮನ ಹರಿಸುತ್ತಾರೆ ಯುದ್ಧದಲ್ಲಿ ಸರಿಯಾದ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಪರಿಣಾಮವಾಗಿ ವೆಂಕಟಪ್ಪ ನಾಯಕ ಭಟ್ಕಳವನ್ನು ವಶಪಡಿಸಿಕೊಳ್ಳುತ್ತಾನೆ.ಆದರೆ ಅದಕ್ಕಿಂತ ಮೊದಲೇ ಸಂಪತ್ತನ್ನು ಬೇರೆಡೆ ಸಾಗಿಸಿದ್ದು ಅದು ಪೋರ್ಚುಗೀಸರ ವಶವಾಗಿತ್ತು.ಗೊಂಡರ ನಾಯಕ ಜಟ್ಟಿಗ ತೋರಿಸಿದ ಬಾವಿಗಳು ಖಾಲಿಯಾಗಿದ್ದವು.ಇದರಿಂದ ಕೋಪಗೊಂಡ ವೆಂಕಟಪ್ಪ ನಾಯಕ ಗೊಂಡರ ನಾಯಕನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲುತ್ತಾನೆ.
‌ಗೊಂಡರು ಚೌಂಡಿ( ಚಾಮುಂಡಿ ?) ಮತ್ತು ಜಟಗರನ್ನು ಆರಾಧನೆ ಮಾಡುತ್ತಾರೆ.
‌ತುಳುನಾಡಿನ ಚಾಮುಂಡಿ ದೈವದ ವೃತ್ತಾಂತದಲ್ಲಿ ಚಾಮುಂಡಿಗೆ ದ್ರೋಹ ಮಾಡಿದಾತ ಜತ್ತಿಂಗ ಎಂಬ ಹೆಸರಿನ ದೈವವಾಗಿ ಚಾಮುಂಡಿ ಜೊತೆಯಲ್ಲಿ ಆರಾಧನೆ ಪಡೆಯುತ್ತಾನೆ.
‌ಚಾಮುಂಡಿ ಯಾರೆಂಬ ಬಗ್ಗೆ ಇದಮಿತ್ತಂ ಎಂಬ ಮಾಹಿತಿ ಇಲ್ಲ.ಭೀಮುರಾಯರ ಕೆರೆಯಲ್ಲಿ ತಾವರೆ ಹೂವಾಗಿ ಹುಟ್ಟಿ ಹುಡುಗಿಯಾಗಿ ಬದಲಾಗಿ ಚಾಮುಂಡಿ ಎಂಬ ಹೆಸರು ಪಡೆದ ಬಗ್ಗೆ ಶಾರದಾ ಜಿ ಬಂಗೇರ ಅವರು ಹಾಡಿದ ಪಾಡ್ದನದಲ್ಲಿದೆ.
‌ಇಲ್ಲಿ ರಾಣಿ ಚೆನ್ನ ಭೈರಾದೇವಿ ಮತ್ತು ಚೌಂಡಿ(ಚಾಮುಂಡಿ?) ಯನ್ನು ಸಮೀಕರಿಸಿ ಅಕೆಗೆ ದ್ರೋಹ ಮಾಡಿದ ಗೊಂಡರ ನಾಯಕ ಜಟಗನೆ ಜತ್ತಿಂಗ,ಜಟ್ಟಿಗ ಎಂಬ ಹೆಸರಿನ ದೈವವಾಗಿ ಚಾಮುಂಡಿ ಜೊತೆಯಲ್ಲಿ ಆರಾಧನೆ ಪಡೆಯುತ್ತಾನೆ ಎಂದು ಡಾ.ಕೆ ಎನ್ ಗಣೇಶಯ್ಯ ಅಭಿಪ್ರಾಯ ಪಟ್ಟಿದ್ದಾರೆ.
‌ರಾಣಿ ಚೆನ್ನ ಭೈರಾದೇವಿಯ ನಂತರದ ಕಾಲದಲ್ಲಿ ಎಂದರೆ ಕೆಳದಿಯ ವೆಂಕಪ್ಪ ನಾಯಕನ ವಂಶದಲ್ಲಿ ಕೆಳದಿಯ ರಾಣಿ ಚೆನ್ನಮ್ಮ ಅಳ್ವಿಕೆ ನಡೆಸುತ್ತಾಳೆ.ಆಗ ಚೆನ್ನಮ್ಮಳ ಮಹಾ ಪ್ರಧಾನಿ ವೀರ ತಿಮ್ಮಣ್ಣ ನಾಯಕ ಹೊಗೆವಡ್ಡಿ ಕೋಟೆಯನ್ನು ಕಟ್ಟಿಸಿ ಅ ಪರಿಸರದಲ್ಲಿ ರಕ್ಷಣೆ ಮಾಡುತ್ತಾನೆ.ಆ ಸಮಯದಲ್ಲಿ ಕೂಡ ರಾಣಿ ಚೆನ್ನಭೈರಾದೇವಿ ಕರೆಸಿದ ಗೊಂಡರ ವಂಶದವರು ಕೆಳದಿಯ ಜೊತೆಯಲ್ಲಿ ಇರುತ್ತಾರೆ.ಆಗ ಯುದ್ಧದಲ್ಲಿ ಇಬ್ಬರು ಅಥವಾ ಒಬ್ಬ ಗೊಂಡರ ನಾಯಕ ಮರಣವನ್ನಪ್ಪಿ ದೈವತ್ವ ಪಡೆದು ಹೊಗೆವಡ್ಡಿ ಜಟ್ಟಿಗ ದೈವವಾಗಿ ಆರಾಧನೆ ಪಡೆಯುತ್ತಾನೆ.ಆತನ ಹೆಸರು ಮಾಣಿ ಜಟ್ಟಿಗ ಎಂದಿರುವ ಕಾರಣ ಆತ ನೇತ್ರಾಣಿ ಜಟ್ಟಿಗನಿಗಿಂತ ಕಿರಿಯವನಾಗಿರಬಹುದು.ನೇತ್ರಾಣಿಯಲ್ಲಿ ಆರಾಧನೆ ಪಡೆಯುವ ಕುದುರೆ ಜಟ್ಟಿಗ ರಾಣಿ ಚೆನ್ನ ಭೈರಾದೇವಿಗೆ ದ್ರೋಹ ಮಾಡಿ ದುರಂತವನಗನಪ್ಪಿದ ವೀರನೇ ಇರಬೇಕು. ದುರಂತ ಮತ್ತು ದೈವತ್ವ ತುಳುವ ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಾಣಬರುವ ವಿದ್ಯಮಾನವಾಗಿದೆ.ಅಂತೆಯೇ ಅತ ಕೂಡ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ.
‌ಹೊಗೆವಡ್ಡಿ  ಕೋಟೆಯ ತಿಮ್ಮಣ್ಣ ನಾಯಕ ದೈವವಾಗಿ ಆರಾಧನೆ ಪಡೆಯುತ್ತಾನೆ. ಅವನ ಕಾಲದಲ್ಲಿಯೇ ಯುದ್ದದಲ್ಲಿ ದುರಂತವನ್ನಪ್ಪಿದ ಗೊಂಡರ ನಾಯಕ ಕೂಡ ದೈವತ್ವ ಪಡೆದು ಆರಾಧನೆ ಹೊಂದುತ್ತಾನೆ
‌ನೇತ್ರಾಣಿ ಗುಡ್ಡದಲ್ಲಿ ನೇತ್ರಾಣಿ ಜಟ್ಟಿಗನಲ್ಲದೆ ಕಿದುರೆ ಜಟ್ಟಿಗ ಎಂಬ ಹೆಸರಿನ ದೈವಕ್ಕೂ ಆರಾಧನೆ ಇದೆ. ಬಹುಶಃ ಆತ ಮರಾಠರ ಜೊತೆಯಲ್ಲಿ ಹೋರಾಡಿದ ಗೊಂಡರ ನಾಯಕನಿರಬಹುದು.
‌ಈ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ © ಡಾ.ಲಕ್ಷ್ಮೀ ಜಿ ಪ್ರಸಾದ
‌ಆಧಾರ ಗ್ರಂಥಗಳು
‌ಬಳ್ಳಿಕಾಳ ಬೆಳ್ಳಿ -  ಐತಿಹಾಸಿಕ ಕಾದಂಬರಿ© ಡಾ.ಕೆ ಎನ್ ಗಣೇಶಯ್ಯ
‌ಭೂತಗಳ ಅದ್ಭುತ ಜಗತ್ತು - © ಡಾ ಲಕ್ಷ್ಮೀ ಜಿ ಪ್ರಸಾದ
‌ತುಳುನಾಡಿನ ಅಪೂರ್ವ ಭೂತಗಳು © ಡಾ.ಲಕ್ಷ್ಮೀ ಜಿ ಪ್ರಸಾದ
‌ಹೊಗೆವಡ್ಡಿ ಕ್ಷೇತ್ರ ಮಹಾತ್ಮೆ © ಶ್ರೀ ಅನಂತ ನಾಯಕ
‌ಮತ್ತು ಕಾಸರಗೋಡು ತಿಮ್ಮಣ್ಣ ನಾಯಕನ ವಂಶಜರಾದ ಅನಂತ ನಾಯಕ ಅವರು ಮೌಖಿಕವಾಗಿ ತಿಳಿಸಿದ ಐತಿಹ್ಯಗಳು ಮತ್ತು ಮಾಹಿತಿಗಳು 

Sunday 18 February 2018

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು - 424 ಬ್ರಾಣ ಭೂತ© ಡಾ.ಲಕ್ಷ್ಮೀ ಜಿ ಪ್ರಸಾದ


ಬ್ರಾಹ್ಮಣರು ತುಳುನಾಡಿನ ಮೂಲ ನಿವಾಸಿಗಳಲ್ಲ.ಇವರು ಹೊರಗಿನಿಂದ ಬಂದವರು.ಆದರೂ ತುಳುವ ಮಣ್ಣಿನಲ್ಲಿ ನೆಲೆಸಿದಾಗ ಇಲ್ಲಿ ಆರಾಧನೆ ಪಡೆಯುವ ಮಣ್ಣಿನ ಸತ್ಯಗಳು ಎಂದು ಕರೆಸಿಕೊಳ್ಳುವ ಭೂತಗಳನ್ನು ತಮ್ಮ ಆರಾಧ್ಯ ದೇವತೆಗಳಾದ ರಾಮ ಕೃಷ್ಣ, ಶಿವ, ವಿಷ್ಣು ,ದುರ್ಗೆಯರ ಜೊತೆಗೆ ಆರಾಧನೆ ಮಾಡುತ್ತಾ ಬಂದಿದ್ದಾರೆ. ತುಳುನಾಡ ದೈವಗಳ ಕಥಾನಕ ತಿಳಿಯದ ಕಾಲದಲ್ಲಿ ಇವರನ್ನು ಶಿವಗಣಗಳು ,ವಿಷ್ಣು ಗಣಗಳು,ದೇವಿಯ ಅವತಾರ ಎಂದು ತಪ್ಪಾಗಿ ಅರ್ಥೈಸಿರುವುದೂ ಇದೆ.
ತುಳುನಾಡ ದೈವಗಳಲ್ಲಿ ಹೆಚ್ಚಿನವವರು ಮಾನವ ಮೂಲದವರು‌.ಪ್ರಧಾನ ದೈವಗಳ ಆಗ್ರಹಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ಆಯಾಯ ದೈವಗಳ ಸೇರಿಗೆಗೆ ಸಂದು ದೈವತ್ವ ಪಡೆದು ಸೇರಿಗೆ ದೈವವಾಗಿ  ಆರಾಧನೆ ಪಡೆಯುವ ವಿದ್ಯಮಾನ ತುಳುನಾಡಿನ ಹಲವು ಕಡೆ ಕಾಣಿಸಿಕೊಂಡಿದೆ.
ಹೀಗೆಯೇ ತುಳುನಾಡಿನಲ್ಲಿ ನೆಲೆ ನಿಂತ ಅನೇಕ ಬ್ರಾಹ್ಮಣರು ದೈವತ್ವ ಪಡೆದು ಆರಾಧನೆ ಪಡೆಯುತ್ತಿದ್ದಾರೆ. ಹಿರಿಯಡ್ಕದಲ್ಲಿ ವೀರಭದ್ರನನ್ನು ಪ್ರತಿಷ್ಟಾಪಿಸಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ಅದೇ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ. ಸೂರಂಬೈಲು ಸಮೀಪ ಕಾರಿಂಜೇಶ್ವರ ದೇವಾಲಯ ನಿರ್ಮಿಸಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ಕೂಡ ಅದೇ ಹೆಸರಿನ ದೈವವಾಗಿ ನೆಲೆಸಿದ್ದಾನೆ.ಹಾಗೆಯೇ ಭಟ್ಟಿ ಭೂತ,ಬ್ರಾಣ ಬೂತ ಮತ್ತು ಮಾಣಿ ಭೂತ,ಮರ್ಲು ಮಾಣಿ,ಓಪೆತ್ತಿ ಮದಿಮಾಳ್,ಮುಂಡೆ ಬ್ರಾಂದಿ,ಬ್ರಾಹ್ಮಣತಿ ಭೂತ/ ಬಾಲಜ್ಜಿ,ಇಲ್ಲತ್ತಮ್ಮ,ಮುಕಾಂಬಿ ಗುಳಿಗ ಕಚ್ಚೆ ಭಟ್ಟ,ಬ್ರಾಣ ಕುಲೆ,ಬ್ರಾಣ ಭೂತ ,ಚೆಂಬೆರ್ಪುನ್ನಾಯೆ ಮೊದಲಾದವರು ಕಾರಣಾಂತರಗಳಿಂದ ದೈವತ್ವ ಪಡೆದು ತುಳುನಾಡಿನ ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಣಿಕ್ಕಳ,ಬಜತ್ತೂರು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬ್ರಾಣ ಭೂತ ಎಂಬ ಇನ್ನೊಂದು ಬ್ರಾಹ್ಮಣ ಮೂಲದ ದೈವಕ್ಕೆ ಆರಾಧನೆ ಇದೆ. ಈತ ಮೂಲತಃ ಓರ್ವ ಅರ್ಚಕ.ಬಹಳ ದೈವ ಭಕ್ತಿ ಇದ್ದವರು‌ಇವರ ಭಕ್ತಿಗೆ ಒಲಿದು ಅಲ್ಲಿನ  ಪ್ದೈರಧಾನ ದೈವಗಳು ಆತನನ್ನು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸುತ್ತಾರೆ.ಆತ ದೈವತ್ವ ಪಡೆದು ಬ್ರಾಣ ಭೂತವಾಗಿ ಆರಾಧನೆ ಪಡೆಯುತ್ತಾನೆ.
ಪಾಡ್ಯಂತಾಯ, ಪಂಬೆತ್ತಾಯ,ನಾಗಬೆರ್ಮೆರ್ ಗಳಿಗೆ ಈ ಪರಿಸರದಲ್ಲಿ ಆರಾಧನೆ ಇದೆ. ಇವರ ಆರಾಧನೆ ನಡೆಯುವಾಗ ಬ್ರಾಣ ಭೂತಕ್ಕೂ ಕೋಲ ಕೊಟ್ಟು ಆರಾಧನೆ ಸಲ್ಲಿಸುತ್ತಾರೆ.
ಬಿಳಿ ಕಚ್ಚೆ ಹಾಕಿ ಜನಿವಾರ ಧರಿಸಿ ಕೈಯಲ್ಲಿ ಒಂದು ಬೀಸಣಿಗೆ ಹಿಡಿದ ಸಹಜ ಅಲಂಕಾರ ಈ ದೈವಕ್ಕೆ ಇರುತ್ತದೆ.ಈ ದೈವ ತುಳು ಬ್ರಾಹ್ಮಣರ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸುತ್ತದೆ.ಸ್ವಲ್ಪ ಹಾಸ್ಯದ ಅಭಿವ್ಯಕ್ತಿ ಕೂಡ ಇರುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಮಣಿಕ್ಕಳ ಮುರಳೀಧರ ರಾವ್ ಅವರಿಗೆ ಧನ್ಯವಾದಗಳು

Tuesday 6 February 2018

ಸಾವಿರದೊಂದು ಗುರಿಯೆಡೆಗೆ- ತುಳುನಾಡ ದೈವಗಳು 423 ಉಂರ್ದರ ಪಂಜುರ್ಲಿ© ಡಾ.ಲಕ್ಷ್ಮೀ ಜಿ ಪ್ರಸಾದ


ಸಾವಿರದೊಂದು ಗುರಿಯೆಡೆಗೆ -ತುಳುನಾಡ ದೈವಗಳು ಉಂರ್ದರ ಪಂಜುರ್ಲಿ © ಡಾ.ಲಕ್ಷ್ಮೀ ಜಿ ಪ್ರಸಾದ
ಕಳೆದ ತಿಂಗಳ ಹದಿನಾಲ್ಕರಂದು ಆಮಂತ್ರಣ ಹಬ್ಬಕ್ಕೆ ಅತಿಥಿಯಾಗಿ ಬರುವಂತೆ ಶೇಖರ್ ಬೆಳಾಲ್ ಅವರು ಆಹ್ವಾನಿಸಿದಾಗ ಆ ಪರಿಸರದಲ್ಲಿನ ದೈವಗಳ ಕುರಿತಾಗಿ ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಒಟ್ಟಿಗೆ ಮಾಡಬೇಕೆಂದು ಪೂರ್ವ ತಯಾರಿ ಮಾಡಿಕೊಂಡು ಹೊರಟೆ.ಸಮೀಪದ ನಾರಾವಿಯಲ್ಲಿ ಶಿಕ್ಷಕರಾಗಿರುವ ನಮ್ಮ ಸಂಬಂಧಿಕರಾದ ಶಿವ ಶಂಭು ಭಟ್ ಅವರಿಂದಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಯಿತು.
ಅವರೊಂದಿಗೆ ಸ್ಥಳೀಯ ಭೂತ ಕಟ್ಟುವ ಕಲಾವಿದರಾದ ವಿಠಲ ನಾರಾವಿ ಅವರ ಮನೆಗೆ ಹೋದಾಗ ವಿಠಲ ಹಾಗೂ ಅವರ ಅತ್ತೆಯವರು ಸಾಕಷ್ಟು ಮಾಹಿತಿ ನೀಡಿದರು.ಉಂರ್ದರ ಪಂಜುರ್ಲಿ, ಹಲೇರ ಪಂಜುರ್ಲಿ, ಸೂಕತ್ತೆರಿ ,ಮರ್ಲು ಮೈಯೊಂದಿ ಮೊದಲಾದ ದೈವಗಳ ಮಾಹಿತಿ ನೀಡಿದರು.
ಮೂಡಬಿದಿರೆಯ ಸಮೀಪದ ಪಡು ಮಾರ್ನಾಡಿನಲ್ಲಿ ಉದಿಪನವಾದ ಭೂತ ಉಂರ್ದರ ಪಂಜುರ್ಲಿ. ಉಂರ್ದರ ಪಂಜುರ್ಲಿ ಪಂಜುರ್ಲಿ ಭೂತವಲ್ಲ.ಪಂಜುರ್ಲಿ ಯ ಸೇರಿಗೆಗೆ ಸಂದ ದೈವವಿದು.
ಪಡು ಮಾರ್ನಾಡಿನಲ್ಲಿ ಇಬ್ಬರು ಅಕ್ಕತಂಗಿಯರು ಇದ್ದರು.ಅವರಿಗೆ ಒಬ್ಬೊಬ್ಬ ಮಗಂದಿರು ಇದ್ದರು.ಅವರ ಹಿರಿಯರಿಂದ ಬಂದ ಆಸ್ತಿಯಲ್ಲಿ ಜಾಗದ ಭೂತವಾಗಿ ಪಂಜುರ್ಲಿ ದೈವ ಇತ್ತು. ಅವರ ಮಕ್ಕಳ ಕಾಲದಲ್ಲಿ ಆಸ್ತಿ ಎರಡು ಪಾಲಾಯಿತು.ಆಗ ಇಬ್ಬರು ಅಣ್ಣತಮ್ಮಂದಿರು ಉಂರ್ದರ ಬೆರ್ಮು ಮತ್ತು ನರಸಿಂಹ ಪಕಳೆ(?) ಪಂಜುರ್ಲಿ ದೈವ ತಮಗೆ ಬೇಕು ಎಂದು ಹಠ ಹಿಡಿದರು‌.ಊರವರು ಸೇರಿ ರಾಜಿ ಪಂಚಾಯತಿಗೆ ಮಾಡಿ ಇಬ್ಬರೂ ಒಟ್ಟಿಗೆ ಸೇರಿ ಆರಾಧನೆ ಮಾಡಿ ಎಂದು ತಿಳುವಳಿಕೆ ನೀಡಿದರು‌.ಆದರೆ ಈ ಅಣ್ಣ ತಮ್ಮಂದಿರು ಅದನ್ನು ಒಪ್ಪದೆ ಪಂಜುರ್ಲಿ ದೈವಕ್ಕೆ ಇನ್ನೊಬ್ಬನ ತಲೆ ಉರುಳಿದರೆ ದೈವಕ್ಕೆ ಕೊಡಿ ಏರಿಸಿ ಉತ್ಸವ ನೀಡಿ ಆರಾಧನೆ ಮಾಡುತ್ತೇನೆ ಎಂದು ಇಬ್ಬರು ಕೂಡ ಹರಿಕೆ ಹೇಳಿದರು.ಪರಿಣಾಮವಾಗಿ ದೈವ  ಇಬ್ಬರನ್ನೂ ಮಾಯ ಮಾಡಿ ಪಡುಮಾರ್ನಾಡಿನ ಬಾವಿಗೆ ಬೀಳುವಂತೆ ಮಾಡಿತು.ಹಾಗೆ ಮಾಯವಾದ ಅಣ್ಣ ತಮ್ಮಂದಿರು ಪಂಜುರ್ಲಿ ದೈವದ ಸೇರಿಗೆಗೆ ಸಂದು ಉಂರ್ದರ ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ.ಇವರು ಮಾಯವಾಗಿ ಬಂದು ಬಿದ್ದ ಬಾವಿ ಈಗಲೂ ಪಡುಮಾರ್ನಾಡಿನಲ್ಲಿ ಇದೆ
‌ ಉಂರ್ದರ ಪಂಜುರ್ಲಿ ದೈವಕ್ಕೆ ಪುಂಚಾಡಿ ಬರ್ಕೆಯಲ್ಲಿ ಆರಾಧನೆ ಇರುವ ಬಗ್ಗೆ ಸಂಕೇತ್ ಪೂಜಾರಿಯವರು ತಿಳಿಸಿದ್ದಾರೆ.( nammabillavaru.com) ಮಾಳ ಹುರ್ಕಟ್ಟೆ ಕೇರ ಕುಟುಂಬದಲ್ಲಿ ನಡೆದ ಉಂರ್ದರ ಪಂಜುರ್ಲಿ ಕೋಲದ ವೀಡಿಯೋ ಅನ್ನು ವಿಶ್ವನಾಥ ಸಾಲಿಯಾನ್ ಅವರು ಯು ಟ್ಯೂಬ್ ನಲ್ಲಿ ಹಾಕಿದ್ದಾರೆ

ಮಾಹಿತಿ ನೀಡಿದ ವಿಠಲ ನಾರಾವಿ ಮತ್ತು ಕ್ಷೇತ್ರ ಕಾರ್ಯದಲ್ಲಿ ತುಂಬು ಬೆಂಬಲ ನೀಡಿದ ಶಿವ ಶಂಭು ಭಟ್  ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಚಿತ್ರ ಕೃಪೆ - ಸಂಕೇತ್ ಪೂಜಾರಿ
ಚಿತ್ರ ಕೃಪೆ - ವಿಶ್ವನಾಥ ಸಾಲಿಯಾನ್ 

Friday 26 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ



ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ


ಕಳೆದ ಒಂದು ವಾರದಿಂದ ಒಂದು ಮುಸ್ಲಿಂ ಸ್ವರೂಪದ ದೈವ ಇಬ್ಬರು ಮುಸ್ಲಿಂ ರೀತಿಯ ವೇಷ ಧರಿಸಿದ ಪಾತ್ರಿಗಳ ಜೊತೆ ಕೋಲಾಟವಾಡುವ ವೀಡಿಯೋ ಹರಿದಾಡುತ್ತಾ ಇತ್ತು.ಅನೇಕರು ಅದನ್ನು ಕಳಹಿಸಿ ಈ ದೈವ ಯಾವುದೆಂದು ಕೇಳಿದ್ದರು. ಆಲಿ ಭೂತ ,ಯೋಗ್ಯೆರ್ ನಂಬೆಡಿ ,ಮುಕ್ರಿ ಪೋಕ್ಕರ್,ಬಪ್ಪುರಿಯನ್  ಸೇರಿದಂತೆ ಅನೇಕ ಮುಸ್ಲಿಂ ತೆಯ್ಯಂ ಗಳಿಗೆ ಆರಾಧನೆ ಇರುವುದು ನನಗೆ ತಿಳಿದಿತ್ತಾದರೂ ಈ ತೆಯ್ಯಂ ಯಾರೆಂದು ಗುರುತಿಸಲು ಆಗಿರಲಿಲ್ಲ.ಕೆಲವರು ಅದನ್ನು ಆಲಿ ಭೂತ ಎಂದು ತಪ್ಪಾಗಿ ಗುರುತಿಸಿದ್ದು ತಿಳಿದು ಅದು ಆಲಿ ಭೂತವಲ್ಲ ಎಂದು ತಿಳಿಸಿದ್ದೆ.ಅದು ಮುಕ್ರಿ ಪೋಕ್ಕೆರ್ ದೈವ ಇರಬಹುದು ಎಂದು ಹೇಳಿದ್ದೆ.ವಾಟ್ಸಪ್ ಗ್ರೂಪೊಂದರಲ್ಲಿ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಳ್ಳೆ ದೈವ ಎಂದು ಗುರುತಿಸಿದ್ದರು‌.ಹಾಗಾಗಿ ನಾನು ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಕುಂಞಿರಾಮನ್ ಸೇರಿದಂತೆ ಅನೇಕ ಹಿರಿಯರನ್ನು ಸಂಪರ್ಕಿಸಿದೆ‌.ಅದರ ಮಾಹಿತಿ ನೀಡಿದ ಕುಂಞಿರಾಮನ್ ಅವರು ಕಲಂದನ್ ಮುಕ್ರಿ ಎಂಬ ಹೆಸರಿನ ಮುಸ್ಲಿಂ ಮೂಲದ ದೈವಕ್ಕೆ ಆರಾಧನೆ ಇರುವ ಬಗ್ಗೆ ತಿಳಿಸಿದರು.
ಮಾಪ್ಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಹುಡುಕುತ್ತಿರುವುದನ್ನು ತಿಳಿದ ಸ್ನೇಹಿತರಾದ ಶ್ಯಾಮ್ ಅವರು ಒಂದು ಮಲೆಯಾಳ ಬರಹವನ್ನು ಕಳಹಿಸಿ ಅದರಲ್ಲಿ ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಇದೆ ಎಂದು ಅವರ ಸ್ನೇಹಿತರು ಹೇಳಿದ್ದನ್ನು ತಿಳಿಸಿದರು.ನನಗೆ ಮಲೆಯಾಳ ಭಾಷೆ ಅರ್ಥವಾಗುವುದಾದರೂ ಓದಲು ತಿಳಿದಿಲ್ಲ. ಹಾಗಾಗಿ ನಾನು ಅದನ್ನು ಗೂಗಲ್ ಟ್ರಾನ್ಸಲೇಶನ್ ಮೂಲಜ ಇಂಗ್ಲಿಷ್ ಗೆ ಅನುವಾದಿತ ರೂಪ ಪಡೆದೆ.ಆಗ ಅದು ಕಲಂದನ್ ಮುಕ್ರಿ ತೆಯ್ಯಂ ಬಗೆಗಿನ  ಮಲೆಯಾಳ ವಿಕಿಪೀಡಿಯ ಮಾಹಿತಿ ಎಂದು ತಿಳಿಯಿತಾದರೂ ಗೂಗಲ್ ಅನುವಾದದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಪ್ಪುಗಳು ಇದ್ದ ಕಾರಣ ಕಥಾನಕ ಪೂರ್ತಿಯಾಗಿ ಅರ್ಥ ಆಗಲಿಲ್ಲ.
ಆಗ ಅದನ್ನು  ಮಲೆಯಾಳ ಬಲ್ಲ ಯುವ ಸಂಶೋಧಕರಾದ ಶಂಕರ್ ಕುಂಜತ್ತೂರಿಗೆ ಕಳಹಿಸಿ ಅನುವಾದ ಮಾಡಿ ಕೊಡಲು ಕೇಳಿದೆ.ಅವರು ಅದರ ಸಂಗ್ರಹ ಅನುವಾದ ಮಾಡಿ ನೀಡಿದರು.
ಈ ದೈವದ/ ತೆಯ್ಯಂ ನ ಸಂಕ್ಷಿಪ್ತ ಕಥಾನಕ ಹೀಗಿದೆ.
ಕಾಸರಗೋಡು ಜಿಲ್ಲೆಯ ಕಂಪಲ್ಲೂರು ಗ್ರಾಮದಲ್ಲಿ ಕಂಪಲ್ಲೂರು ಕೋಟ್ಟಯಿಲ್ ಎಂಬ ಪ್ರಾಚೀನ ತರವಾಡು ಮನೆ ಇದೆ.ಇದು ನಾಯರ್ ಸಮುದಾಯದವರ ತರವಾಡು ಆಗಿದ್ದು ಅವರಿಗೆ ಕೊಡಗಿನಿಂದ ಕಾಸರಗೋಡು ತನಕ ಹದಿನೈದು ಸಾವರ ಎಕರೆಗಳಷ್ಟು ಭೂಮಿ ಇತ್ತು.ಇಲ್ಲಿ ಬೆಳೆ ಬೆಳೆಯುತ್ತಾ ಇದ್ದರು.ಈ ತರವಾಡಿನ ರಕ್ಷಣೆಯನ್ನು ಕರಿಚಾಮುಂಡಿ ದೈವ ಮಾಡುತ್ತಾ ಇತ್ತು.
ಸೈನುದ್ದೀನ್ ಮತ್ತು ಅವರ ಕುಟುಂಬದ ಸದಸ್ಯರು ಈ  ಈ ಪ್ರದೇಶಕ್ಕೆ ಬರುತ್ತಾರೆ.ಆಗ ಈ ಕೋಟ್ಟಯಿಲ್ ತರವಾಡಿನ ನಾಯರ್‌ಗಳು ಅವರಿಗೆ ಸಹಾಯ ಮಾಡುತ್ತಾರೆ. ಅವರ ಧರ್ಮದ ಪಾಲನೆಗಾಗಿ ಒಂದು ಶೆಡ್ ಹಾಕಿ ಪ್ರಾರ್ಥನೆಗೆ ವ್ಯವಸ್ಥೆ ಮಾಡುತ್ತಾರೆ.
ಸೈನುದ್ದೀನ್ ಮತ್ತು ಅವರ ಕುಟುಂಬದವರು ಮತ್ಸ್ಯ ಬೇಟೆಗಾಗಿ ಮತ್ತು ವ್ಯಾಪಾರಕ್ಕಾಗಿ ಪುಲಿಂಗಾಟ್ ನದಿಯನ್ನು ಗೇಣಿಗೆ ಪಡೆಯುತ್ತಾರೆ.ಅವರಿಗೆ ಒಂದು ಮಸೀದಿಯನ್ನು ತರವಾಡಿನ ನಾಯರ್‌ಗಳು ಕಟ್ಟಿಸಿಕೊಡುತ್ತಾರೆ.
ಆ ಮಸೀದಿಯಲ್ಲಿ ಉರೂಸ್ ಗೆ ದಿನ ನಿಶ್ಚಯ ಮಾಡುವ ಮೊದಲೇ ಮಸೀದಿಯ ಮುಖ್ಯಸ್ಥರು ತರವಾಡು ಮನೆಗೆ ಬಂದು ದೈವದಲ್ಲಿ ಉರೂಸ್ ಹಬ್ಬದ ನೇತೃತ್ವ ( ಅಧ್ಯಕ್ಷತೆ)ವಹಿಸುವಂತೆ ಪ್ರಾರ್ಥನೆ ಮಾಡಿ ಅರಶಿನ ಗಂಧ ಪ್ರಸಾದ ಕೊಂಡೊಯ್ಯುತ್ತಾ ಇದ್ದರು.ಈಗಲೂ ಅಲ್ಲಿ ಈ ಪದ್ಧತಿ ಇದೆ.ಅವರು ತರವಾಡಿನ ರಕ್ಷಕ ದೈವ ಕರಿಚಾಮುಂಡಿ ದೈವಕ್ಕೆ ನಿಷ್ಠರಾಗಿ ಗೌರವ ತೋರುತ್ತಿದ್ದರು.ಹಾಗಾಗಿ ಅಲ್ಲಿನ ಮಸೀದಿಯ ಮುಖ್ಯಸ್ಥ ಕಲಂದನ್ ಮುಕ್ರಿಗೆ  ಕರಿ ಚಾಮುಂಡಿ ದೈವ   ಮರಣಾನಂತರ ದೈವತ್ವ ನೀಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.
ಕಲಂದನ್ ಮುಕ್ರಿ ದೈವವನ್ನು ಹಿಂದು ಪಾತ್ರಿಗಳು ಕಟ್ಟುತ್ತಾರೆ. ಒಂದು  ಬಿಳಿ‌ಲುಂಗಿಯ ಮೇಲೆ ,ಸೊಂಟಕ್ಕೆ ಕಟ್ಟಿದ ಕೆಂಪು ಶಾಲು ,ತಲೆಗೆ ಕೆಂಪು ಬಟ್ಟೆಯ ರುಮಾಲು ಹಾಗೂ ಬಿಳಿಯ ಗಡ್ಡದ  ಮಾನವ ಸಹಜವಾ ಅಲಂಕಾರ ,ವೇಷಭೂಷಣ ಈ ದೈವಕ್ಕೆ ಮಾಡುತ್ತಾರೆ.
ಮಾಹಿತಿ ಮೂಲ : ಮಲೆಯಾಳ ವಿಕಿಪೀಡಿಯ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶ್ಯಾಮ್, ಅನುವಾದ ಮಾಡಿದ ಶಂಕರ್ ಕುಂಜತ್ತೂರು,ಮಾಹಿತಿ ನೀಡಿದ ಕುಂಞಿರಾಮನ್ ಮಾಸ್ತರ್ ಅವರುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ
- ಡಾ.ಲಕ್ಷ್ಮೀ ಜಿ ಪ್ರಸಾದ