೧ ನಮ್ಮ ನೆಲ-ಜಲ
ಬೆಂಗಳೂರಿನ ಮುಖ್ಯ ರಸ್ತೆಯ ಬದಿಯಲ್ಲಿ ನಮ್ಮ ಮನೆ ಇದೆ.ಹಗಲು ರಾತ್ರಿ ವಾಹನಗಳ ಓಡಾಟ ಸದ್ದು ಸದಾ ಇದ್ದದ್ದೇ .ಈ ಸದ್ದು ಗದ್ದಲಕ್ಕೆ ಹೊಂದಿಕೊಂಡು ಬಿಟ್ಟಿದ್ದೇವೆ . ಆದರೆ ನಿನ್ನೆ ರಾತ್ರಿ ಮಾತ್ರ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ . ನಿನ್ನೆ ಸಂಜೆಯಿಂದ ಪಕ್ಕದ ಸೈಟಿನಲ್ಲಿ ಕೊಳವೆ ಬಾವಿ ತೋಡುತ್ತಾ ಇದ್ದರು .ಅದ್ರ ಸದ್ದಿಗಿಂ ತ ಹೆಚ್ಚು ಅವರು ೪೦೦ ಅಡಿ ಆಳ ಕೊರೆಯಲು ನಿರ್ಧರಿಸಿದ್ದಾರೆ ಎನ್ನುವ ವಿಚಾರವೇ ನನಗೆ ಆತಂಕ ಮಾಡಿದೆ ಯಾಕಂದ್ರೆ ನಮ್ಮನೆಯ ಕೊಳವೆ ಬಾವಿ ೧೨೫ ಅಡಿಯಷ್ಟು ಮಾತ್ರ ಅಳ ಇದೆ ಸಾಕಷ್ಟು ನೀರು ಕೂಡಾ ಇದೆ .ಈ ನಮ್ಮ ಕೊಳವೆ ಬಾವಿಗೆ ನಮ್ಮನೆಯ ತಾರಸಿ ನೀರು ಇಂಗುವ ಹಾಗೆ ವ್ಯವಸ್ತೆ ಮಾಡಿಕೊಂಡಿದ್ದೇವೆ .ಕುಡಿಯುವ ನೀರಿಗಾಗಿ ಬೇರೆಯವರ ಹತ್ತಿರ ಕೇಳಲು ನಮಗೆ ಮನಸ್ಸಿಲ್ಲ .ಆದ್ದರಿಂದ ಬಾವಿ ಕೊರೆದ ತುಸು ಸಮಯದಲ್ಲಿಯೇ ನೀರು ಇಂಗಿಸಲು ಸುರು ಮಾಡಿದ್ದೇವೆ .ನೀರು ಇಂಗಿಸುವ ವಿಧಾನದ ಬಗ್ಗೆ ಶ್ರೀ ಪಡ್ರೆ ಮತ್ತು ಗ್ರೀನ್ ಅರ್ತ್ ರವಿಕುಮಾರ್ ಸಲಹೆ ತೆಗೆದುಕೊಂಡು ಬಾವಿ ಸುತ್ತ ಆರಡಿ ಆಗಲ ಎಂಟು ಅಡಿ ಆಳ ಅಗೆದು ಮಣ್ಣು ತೆಗೆದು ಜಲ್ಲಿ ಕಲ್ಲು ಹಾಗು ಮರಳು ತುಂಬಿ ಒಂದಡಿ ಆಳ ಗುಂಡಿಯನ್ನು ನೀರುತುಂಬಲೆಂದು ಹಾಗೇ ಬಿಟ್ಟಿದ್ದೇವೆ . ಮಳೆಗಾಲದಲ್ಲಿ ಮನೆ ತಾರಸಿಯ ಮೇಲೆ ಬೀಳುವ ಮಳೆ ನೀರು ಇಲ್ಲಿಗೆ ಬಂದು ಬೀಳುತ್ತದೆ .ನೀರು ಇಂಗಿಸುವ ಕಾರಣವೋ ಅಥವಾ ಅದೃಷ್ಟವೋ ಏನೋ ತಿಳಿಯದು .ಇಷ್ಟರ ತನಕ ನಮಗೆ ನೀರಿಗೇನೂ ಕೊರತೆಯಾಗಿಲ್ಲ .
ಕಳೆದ ವಾರ ನಮ್ಮನೆ ಹಿಂಭಾಗ ತುಸು ದೂರದಲ್ಲಿ ಕೆಲ ವರ್ಷಗಳ ಹಿಂದೆ ಕೊರೆದಿದ್ದ 6oo ಅಡಿ ಆಳದ ಬಾವಿಯಲ್ಲಿ ನೀರು ಖಾಲಿಯಾಗಿ ಬೇರೆ ಒಂದು 900 ಅಡಿ ಆಳದ ಬಾವಿ ತೋಡಿದ್ದರೆ ಈಗ ಪಕ್ಕದಲ್ಲಿಯೇ ಬಾವಿ ತೋಡುತ್ತಿದ್ದಾರೆ . ಎಲ್ಲೆಡೆ ಬಾವಿ ಕೊರೆಯುತ್ತಾರೆಯೇ ಹೊರತು ಯಾರೂ ನೀರು ಇಂಗಿಸುವ ಬಗ್ಗೆ ಆಲೋಚಿಸುತ್ತಿಲ್ಲ ಎಂಬುದೇ ನನ್ನ ಆತಂಕಕ್ಕೆ ಕಾರಣವಾಗಿದೆ .ಎಲ್ಲೆಡೆ ಜನರು ನೀರಿಗಾಗಿ ಪರದಾಡುವುದು ಕಂಡು ಬರುತ್ತಿದೆ .ಈ ಪರಿಸ್ಥಿತಿ ನಮಗೂ ಬರಬಹುದೇನೋ ಎಂಬ ಆತಂಕ ಕಾಡುತ್ತಿದೆ . ಸುತ್ತ ಮುತ್ತಲೆಲ್ಲ 8೦೦-9೦೦ ಅಡಿ ಆಳದ ಬಾವಿ ಕೊರೆದು ನೀರು ಮರುಪೂರಣೆ ಮಾಡದಿದ್ದರೆ ೧೨೫ ಅಡಿ ಆಳದ ನಮ್ಮ ಬಾವಿಯಲ್ಲಿ ನೀರು ನಿಂತೀತೆ ?
ಇಂದು ನಗರಗಳಲ್ಲಿ ಮಳೆ ಬೀಳುವುದೇ ಕಡಿಮೆಯಾಗಿದೆ ಬಿದ್ದರು ನೀರು ಭೂಮಿಗೆ ಮುಟ್ಟುವುದೇ ಇಲ್ಲ . ಒಂದು ಇಂಚು ಜಾಗ ಬಿಡದೆ ಕಟ್ಟಿದ ಕಟ್ಟಡಗಳು ರಸ್ತೆಗಳು , ಅಂಗೈ ಅಗಲ ಜಾಗ ಬಿಟ್ಟರೂ ಕೂಡಾ ಸಿಮೆಂಟ್ ಹಾಕುವ ಸ್ವಚ್ಚತೆಯ ಭ್ರಮೆ ಇದರ ನಡುವೆ ನೀರು ಇಂಗುವುದು ಹೇಗೆ ?ಕಾವೇರಿ ನೀರನ್ನು ಎಷ್ಟು ಜನರಿಗೆ ನೀಡಲು ಸಾಧ್ಯ ? ನಾವ್ಯಾವಾಗ ಸ್ವಾವಲಂಭಿಗಳು ಆಗುವುದು?ಹೇಳ್ತೀರಾ ?
ವಿಶ್ವ ಜಲ ದಿನದಂದಾದರು ಈ ಬಗ್ಗೆ ಚಿಂತಿಸೋಣ
No comments:
Post a Comment