Sunday 27 January 2013

Stree samvedane-2

                                           ಸ್ತ್ರೀ ಸಂವೇದನೆ -೨
              
                                                           ಸ್ತ್ರೀಯರು ದೇವರಂತಿರಬೇಕು !
     ನಿಜ !ಸ್ತ್ರೀಯರು ದೇವರಂತೆ ಇರಬೇಕು ಇಲ್ಲದಿದ್ದರೆ ಅವರ ಬದುಕು ಬಹಳ ಕಷ್ಟಕರವಾಗುತ್ತದೆ .ದೇವರಿಗೆ ಅಪಾರ ತಾಳ್ಮೆ ಇದೆ.ದೇವರ ಮೇಲೆ ಅಭಿಷೆಕವೆಂದು ಹಳೆ ಕಮಟು ತುಪ್ಪ  ಹುಳಿ ಮೊಸರು ಇನ್ನೇನೊ ಎರೆದರೂ ಅವನು ತುಟಿಪಿಟಕ್ ಎನ್ನುವುದಿಲ್ಲ !ಗರ್ಭ ಗುಡಿಯೊಳಗೆ ಗಾಳಿ ಬೆಳಕು ಇಲ್ಲದಿದ್ದರೂ ದೇವರು  ಅಲ್ಲಿಂದ ಹೊರಗೆ ಬರುವುದಿಲ್ಲ .ಯಾರು ಏನು ಹೇಳಿದರು ಹೊಗಳಿದರೂ ನಿಂದಿಸಿದರೂ ಅವನದು ದಿವ್ಯ ಮೌನ .ಹಾಗೆ ಮಹಿಳೆಯರೂ ಕೂಡಾ ಎಲ್ಲವನ್ನು ಕೇಳಿದರೂ ಕೇಳದಂತೆ ಇರಬೇಕು .ಹಾಗೆ ಇದ್ದರೆ ಮಾತ್ರ ಅವರು ಮಾನ ಇರುವ ಮಾನಿನಿಯರು .
   ಒಂದುವೇಳೆ  ಹಾಗೆ ಇರಲಿಕ್ಕಾಗದೆ ಪ್ರತಿಕ್ರಿಯೆ ನೀಡಿದರೋ ಅವರು ಲಜ್ಜೆಗೆಟ್ಟ ಬಜಾರಿಗಳು ಎಂಬ ಬಿರುದಿಗೆ ಪಾತ್ರರಾಗಬೇಕಾಗುತ್ತದೆ .  ಯಾವುದಾದರೊಂದು ವಸ್ತುವನ್ನು ಗರಿಷ್ಟ ಬೆಲೆಗಿಂತ ಹೆಚ್ಚು ಮಾರಾಟ ಮಾಡಿದರೆ ಆ ಬಗ್ಗೆ ಪುರುಷನೊಬ್ಬ ಪ್ರಶ್ನಿಸಿದರೆ ಅದು ನ್ಯಾಯವಾದ ಹೋರಾಟ .ಅದಕ್ಕೆ ಬೆಂಬಲ ಕೊಡಲು ಅನೇಕರು ಮುಂದಾಗುತ್ತಾರೆ.ಅದೇ ಕೆಲಸವನ್ನು ಮಹಿಳೆ ಮಾಡಿದರೆ ಅದು ಜಗಳಗಂಟ ತನವಾಗಿ ಬಿಡುತ್ತದೆ.ಗಂಡ ಜುಗಾರಿ ಆಡಿ  ದುಡ್ಡು ಹಾಳು ಮಾಡಿಕೊಂಡು  ಬೀಡಿ ಸಿಗರೇಟು ಸೇದುತ್ತಾ ಸೋಮಾರಿಯಾಗಿ ಬೀದಿ ಅಲೆಯುತ್ತಿದ್ದರೂ ಮಾತನಾಡದೆ ಶೋಷಣೆಯನ್ನು ಪ್ರಶ್ನಿಸದೆ ಸುಮ್ಮನಿರುವ ಹೆಂಡತಿಯರು ಆದರ್ಶ ಮಹಿಳೆಯರೆನಿಸಿ ಬಿಡುತ್ತಾರೆ .ಈ ಬಗ್ಗೆ ಜಗಳವಾಡಿದರೆ ಅವರು ಜಗಳಗಂಟಿಯರು ಆಗಿ ಬಿಡುತ್ತಾರೆ.
  ಹೆಂಗಸರ  ಬಗ್ಗೆ ಟೀಕಿಸುವ  ಹೆಂಗಸರು ಹೇಗಿರಬೇಕು ಎಂದು ಉಪದೇಶಿಸುವ ಹಕ್ಕು ಗಂಡಿಗೆ ಹುಟ್ಟಿನೊಂದಿಗೆ ಸಿಕ್ಕಿರುತ್ತದೆ.   "ಹೆಂಗಸರಿಗೆ ಮಾತನಾಡಲು ಬರುವುದಿಲ್ಲ "ಎಂದು ವಿಶ್ರಾಂತ ಪ್ರೊಫೆಸರ್  ಒಬ್ಬರು ಮಾತಿನ ನಡುವೆ ಹೇಳಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ . ವೈದ್ಯರೊಬ್ಬರು "ಬ್ಯಾಟರಿಗೆ ಒಂದು ನೆಗೆಟಿವ್ ಎಂಡ್ ಒಂದು ಪಾಸಿಟಿವ್ ಎಂಡ್ ಇರುತ್ತೆ ಆದ್ರೆ ಹೆಂಗಸರಿಗೆ ಎರಡು ಕಡೆಯೂ ನೆಗೆಟಿವ್ ಎಂಡ್ ಇರುತ್ತೆ"ಎಂದು ಹೇಳಿದ್ದನ್ನು ಕೇಳಿಸಿ ಕೊಂಡಿದ್ದೇನೆ . ದೆಹಲಿಯ ಹುಡುಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕೂಡಾ ಅನೇಕರು  ನಾನಾ ತರಹ ಹೇಳಿಕೆ ನೀಡಿದ್ದಾರೆ . ಯಾವುದೇ ಒಂದು ಪಕ್ಷ ಸಂಘ ಜಾತಿ ಜನಾಂಗದ ಕುರಿತು ಮಾತನಾಡುವಾಗ ಕೂಡ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ವ್ಯವಹರಿಸುತ್ತಾರೆ  ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರುತ್ತಾರೆ . ಆದರೆ  ಶೇ ೫೦ ರಷ್ಟು ಇರುವ ಮಹಿಳೆಯರ ಬಗ್ಗೆ  ಅವಮಾನಕರ ಹೇಳಿಕೆ ಕೊಡಲು ಯಾವುದೇ ಅಳುಕು  ಇರುವುದಿಲ್ಲ .ಯಾಕೆಂದರೆ ಇವರು ಎಲ್ಲ ಶೋಷಣೆಯನ್ನು ಸಹಿಸಿಕೊಂಡು ದೇವರಂತೆ ಸುಮ್ಮನಿರುತ್ತಾರೆ .ಒಂದು ವೇಳೆ ಯಾರಾದರುಒಬ್ಬಿಬ್ಬರು  ಧ್ವನಿ ಎತ್ತಿದರೆ  ಅವರ ಧ್ವನಿ ಎಷ್ಟು ದೂರದವರೆಗೆ ಕೇಳಿಸುತ್ತದೆ ! ಅಂಥಹವರು ನಗೆ ಪಾಟಲಿಗೆ ಈಡಾಗಬೇಕಾಗುತ್ತದೆ .ಅದ್ದರಿಂದ ಎಲ್ಲ ಸ್ತ್ರೀಯರೂ ದೇವರಂತೆ ಸುಮ್ಮನಿರಬೇಕು!ಆಗ ಎಲ್ಲರಿಗೂ ನೆಮ್ಮದಿ! ಏನಂತೀರಿ?

No comments:

Post a Comment