Tuesday 30 September 2014

ಬಡಪಾಯಿ ಉಪನ್ಯಾಸಕರ ಬಿ.ಎಡ್ ಬವಣೆ -ಡಾ .ಲಕ್ಷ್ಮೀ ಜಿ ಪ್ರಸಾದ



ಮೊನ್ನೆ ನನ್ನ ಸಹದ್ಯೋಗಿ ಮಿತ್ರರೊಬ್ಬರು ಪೇಟೆಯಲ್ಲಿ ಅಕಸ್ಮಾತ್ ಆಗಿ ಕಾಣ ಸಿಕ್ಕಿದರು .ಗುಂಡು ಗುಂಡಾಗಿ ಕಟ್ಟು ಮಸ್ತಾಗಿ ಚೆನ್ನಾಗಿದ್ದ ಅವರು ಇಳಿದು ಹೋಗಿ ರೋಗ ಪೀಡಿತರಂತೆ ತುಂಬಾ ವಯಸ್ಸಾದವರಂತೆ ಕಾಣುತ್ತಿದ್ದರು.ಕಣ್ಣಿನ ಸುಟ್ಟ ಕಪ್ಪು ಗೆರೆ ಮೂಡಿತ್ತು .ಅನೇಕ ದಿನಗಳಿಂದ ನಿದ್ರೆ ಗೆಟ್ಟವರಂತೆ ಮುಖ ಪೇಲವವಾಗಿತ್ತು  “.ಏನ್ ಸರ್ ಹೇಗಿದ್ದೀರಿ ?ಆರೋಗ್ಯ ಸರಿ ಇಲ್ವಾ ?ಎಂದು ಕಕ್ಕುಲಾತಿಯಿಂದ ಕೇಳಿದೆ .”ಅಯ್ಯೋ ದೇವರೇ  ಈ ಬಿಎಡ್ ಮುಗಿದು ಪುನಃ ಕಾಲೇಜ್ ಸೇರ್ಕೊಳ್ತೀನೋ ಇಲ್ವೋ ಅಂತ ಅನಿಸ್ತಿದೆ ಮೇಡಂ ,ಹಗಲು ಕ್ಲಾಸ್ ಗೆ ಹಾಜರಾಗಬೇಕು. ರಾತ್ರಿ ಇಡೀ ಪಾಠ ಯೋಜನೆ ಬರಿಯೋದು ,ಬೋಧನೋಪಕರಣಗಳ ತಯಾರಿ ಆಯ್ತು .ಇಷ್ಟಾದರೂ ತಿಂಗಳ ಕೊನೆಗೆ ಸರಿಯಾಗಿ ಹಾಜರಾತಿ ಪ್ರಮಾಣ ಪತ್ರ ಸಿಗದೆ ಒದ್ದಾಟ !ಜೊತೆಗೆ ಸಾವಿರ ಕಿರಿ ಕಿರಿ ಬೇರೆ ಸಾಕಾಗೊಯ್ತು !ಯಾವ ಜನ್ಮದಲ್ಲಿ ಪಾಪ ಮಾಡಿದ್ದಕ್ಕೆ ಈ ಶಿಕ್ಷೆ ಎಂದು ಗೊತ್ತಾಗುತ್ತಿಲ್ಲ.ಈ ವಯಸ್ಸಿನಲ್ಲಿ ಓದುವುದೇ ಒಂದು ಹಿಂಸೆ ಅದರಲ್ಲಿ ಈ ಬಾರಿ ಸಿಕ್ಕಿದ್ದೇ ಚಾನ್ಸ್ ಅಂತ ನಮ್ಮನ್ನ ಹುರಿದು ಮುಕ್ಕುತ್ತಿದ್ದಾರೆ  “ಎಂದು ಹೇಳಿ ನಿಟ್ಟುಸಿರು ಬಿಟ್ಟರು !
2009 ನೆ ಇಸವಿಯಲ್ಲಿ ಇನ್ನೇನು ವಯೋಮಿತಿ ಮೀರುತ್ತದೆ ಎನ್ನುವಷ್ಟರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾಗಿ ಸರಕಾರಿ ಪದವಿಪೂರ್ವ  ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದ ಅನೇಕರ ಸಮಸ್ಯೆ ಇದು .ಅರ್ಜಿ ಆಹ್ವಾನಿಸುವಾಗ ಬಿಎಡ್ ಬೇಕು ಎಂದಿರಲಿಲ್ಲ .ಅನಂತರ ನಾಲ್ಕು ವರ್ಷದ ಒಳಗೆ ಬಿಎಡ್ ಮಾಡಬೇಕು ಎಂಬ ಶರತ್ತಿನೊಂದಿಗೆ ಉದ್ಯೋಗಕ್ಕೆ ಆದೇಶ ಪಡೆದಾಗ ಮುಂದೊಂದು ದಿನ ಇಂಥಹ ಪರಿಸ್ಥಿತಿ ಎದುರಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ .
ಖಾಸಗಿಯಾಗಿ ಬಿಎಡ್ ಓದುವುದು ಸುಲಭದ ಮಾತಲ್ಲ .

ಇಡೀ ರಾಜ್ಯದಲ್ಲಿ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಹಾಗೂ ಇಂದಿರಾ ಗಾಂಧಿ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಮಾತ್ರ ಬಿಎಡ್ ಓದಲು ಅನುಮತಿ ಇದೆ .ಇತರ ಎಂ ಎ ,ಬಿ ಎ ಪದವಿಗೆ ಸೇರುವಂತೆ ಎಲ್ಲರಿಗೆ ಸೇರಲು ಅವಕಾಶವಿಲ್ಲ .ಒಟ್ಟು ಒಂದೂವರೆ ಸಾವಿರ (499 +1000)ಜನರಿಗೆ ಮಾತ್ರ ಬಿಎಡ್ ಓದಲು ಅವಕಾಶ ಇರುತ್ತದೆ. ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಬಿಎಡ್ ಸೀಟ್ ಗಳನ್ನು ಹಂಚಲಾಗುತ್ತದೆ .ಇದಕ್ಕೆ ಪ್ರತಿವರ್ಷ ಲಕ್ಷಕ್ಕಿಂತ ಹೆಚ್ಚು ಮಂದಿ ಅರ್ಜಿ ಸಲ್ಲಿಸುತ್ತಾರೆ.ಹಾಗೆ ಒಂದು ವೇಳೆ ಆಯ್ಕೆಯಾದರೂ ಎರಡು ವರ್ಷ ಓದಬೇಕು.ಪರೀಕ್ಷೆ ಆಗಿ ಫಲಿತಾಂಶ ಬರುಷ್ಟರಲ್ಲಿ ಮೂರು ಮೂರುವರೆ ವರ್ಷ ಕಳೆಯುತ್ತದೆ .
ಈ ಕಾರಣಕ್ಕೆ 2009ರಲ್ಲಿ ಆಯ್ಕೆ ಆದ ಎರಡೂವರೆ ಸಾವಿರ ಉಪನ್ಯಸಕರಲ್ಲಿ ಸಾವಿರದ ನಾನ್ನೂರರಷ್ಟು ಮಂದಿ ಉಪನ್ಯಾಸಕರಿಗೆ ನಾಲ್ಕು ವರ್ಷದ ಒಳಗೆ ಬಿಎಡ್ ಪದವಿ ಪಡೆಯಲು ಸಾಧ್ಯವಾಗಲಿಲ್ಲ .ಕೊನೆಗೆ ಸಹೃದಯಿಗಳಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಅವರು ನಿಯೋಜನೆ ಮೂಲಕ ಬಿಎಡ್ ಓದಲು ಅವಕಶ ನೀಡಿದರು.
“ಇಲ್ಲಿಗೆ ಎಲ್ಲ ಸಮಸ್ಯೆ ಮುಗಿಯಿತು” ಎಂದು ಕೊಂಡು ದೊಡ್ಡದಾದ ಉಸಿರು ಬಿಟ್ಟಿದ್ದರು ಉಪನ್ಯಾಸಕರು .ಆದರೆ ಈ ಉಪನ್ಯಾಸಕರ ಕಷ್ಟ ಪರಂಪರೆಗಳು ಇಲ್ಲಿಗೆ ನಿಲ್ಲಲಿಲ್ಲ . ವೇತನ ಬರುತ್ತದೆ ಹೇಳುವ ಒಂದು ಸಮಾಧಾನ ಬಿಟ್ಟರೆ ಬೇರೆಲ್ಲಾ ತಾಕಲಾಟ ಪೇಚಾಟ ಹೇಳಿ ಪ್ರಯೋಜನವಿಲ್ಲ .

ಬಿಎಡ್ ಶಿಕ್ಷಣದಲ್ಲಿ ಪ್ರಾಜೆಕ್ಟ್ ವರ್ಕ್ ,ಅಸ್ಸೈನ್ಮೆಂಟ್ ,ಪಾಠ ಯೋಜನೆ ತಯಾರಿ ,ಬೋಧನೋಪಕರಣಗಳ ತಯಾರಿ ,ಪ್ರಾಯೋಗಿಕ ಪಾಠ ,ಇತ್ಯಾದಿ ತುಂಬಾ ಕೆಲಸಗಳಿರುತ್ತವೆ.ಮೊದಲ ಸೆಮಿಸ್ಟರ್ ನಲ್ಲಿ ಅಣು ಪಾಠ ಬೋಧನೆ ,ಮತ್ತೆ ಅಸ್ಸೈನ್ಮೆಂಟ್ ,ಕ್ಷೇತ್ರ ಕಾರ್ಯ ಮೊದಲಾದವುಗಳು ಇರುತ್ತವೆ .ಇದು ಅಷ್ಟು ಕಷ್ಟಕರ ಎನಿಸುವುದಿಲ್ಲ
.ಎರಡನೇ ಸೆಮಿಸ್ಟರ್ ನಲ್ಲಿ ಅತಿಯಾದ ಕೆಲಸ ವಿದೆ  ಪ್ರಾಯೋಗಿಕ ಪಾಠ ತರಬೇತಿಗಾಗಿ 24 (.12 +12) ಪಾಠ ಯೋಜನಗೆಗಳನ್ನು ಬರೆಯಬೇಕು .ಒಂದು ಪಾಠ ಯೋಜನೆ ಸುಮಾರು 8-10 ಪುಟಗಳಷ್ಟಿದ್ದು ಬರೆಯಲು ಏನಿಲ್ಲವೆಂದರೂ 5-6 ಗಂಟೆ ಬೇಕಾಗುತ್ತದೆ .ಇಲ್ಲಿ ಹತ್ತು ಪುಟ ಬರೆಯುದಕ್ಕಿಂತ ಹೆಚ್ಚು ಬೋಧನೋದ್ದೇಶಗಳ ಗುರುತಿಸುವಿಕೆ ಹಂಚಿಕೆಗೆ ತುಂಬಾ ಸಾಕಷ್ಟು ಯೋಚಿಸಬೇಕು . ಇದಕ್ಕೆ ಸುಮಾರು ಹೊತ್ತು ಹಿಡಿಯುತ್ತದೆ .ಒಂದು ಪಾಠ ಯೋಜನೆಗೆ ಕನಿಷ್ಠ ನಾಲ್ಕು ಬೋಧನೋಪಕರಣಗಳ ತಯಾರಿ ಮಾಡಲೇ ಬೇಕಾಗುತ್ತದೆ .ಇದರಲ್ಲಿ ಅಂತರ್ಜಾಲದ ಸಹಾಯ ತೆಗೆದುಕೊಳ್ಳಬಾರದು .ಚಿತ್ರಗಳನ್ನು ಸ್ವತಹ ಕೈಯಿಂದಲೇ ಬಿಡಿಸಬೇಕು ಎಂಬ ಅಲಿಖಿತ ನಿಯಮ ಬೇರೆ ಇದೆ .(ಆರ್ಟಿಸ್ಟ್ ಗಳಿಗೆ ಚಿತ್ರವೊಂದಕ್ಕೆ 40 -50 ರು  ಕೊಟ್ಟು  ಚಿತ್ರ ಬರೆಯಿಸಿ ತರಬಹುದು !)

ಬೋಧನೋಪಕರಣಗಳ ತಯಾರಿಗೆ ಒಂದು ಪಾಠ ಯೋಜನೆಗೆ ಏನಿಲ್ಲವೆಂದರೂ 5-6 ಗಂಟೆ ಬೇಕೇ ಬೇಕು .ಒಟ್ಟಿನಲ್ಲಿ ಒಂದು ಪಾಠ ಯೋಜನೆಗೆ ಸುಮಾರು 12 ಗಂಟೆಯಂತೆ 24 ಪಾಠ ಯೋಜನೆಗಳಿಗೆ 288 >300 ಗಂಟೆಗಳಷ್ಟು  ಸಮಯ ಬೇಕು  .ಆಮೇಲೆ  ಪಾಠ ಯೋಜನೆಯನ್ನು ನೇರವಾಗಿ ಸಿದ್ಧ ಪುಸ್ತಕದಲ್ಲಿ ಬರೆಯುವಂತಿಲ್ಲ .ಮೊದಲಿಗೆ ಬಿಳಿ ಹಳೆಯ ಮೇಲೆ ಬರೆದು ಆಯಾಯ ಉಪನ್ಯಾಸಕರಿಗೆ ತೋರಿಸಿ ಅವರು ಹೇಳಿದ ತಿದ್ದು ಪಡಿಗಳನ್ನು ಮಾಡಿ ಮತ್ತೊಮ್ಮೆ ಬಿಳಿ ಹಾಳೆಗಳಲ್ಲಿ ಬರೆದು ಅಪ್ರೋವಲ್ ತೆಗೆದುಕೊಳ್ಳಬೇಕು.ಕೆಲವೊಮ್ಮೆ 4-5 ಬಾರಿ ತಿದ್ದು ಪಡಿ ಮಾಡಿ ಬರೆದ ನಂತರ  ಮೇಲೆ ಅಪ್ರೋವಲ್ ಸಿಗುತ್ತದೆ .ಅಪ್ರೋವಲ್ ಸಿಕ್ಕ ನಂತರ ಅದನ್ನು ಸಿದ್ಧ ಚೌಕಟ್ಟಿನ ಪುಸ್ತಕದಲ್ಲಿ ಬರೆಯಬೇಕು!ಇದಕ್ಕೆ ಮತ್ತೆ ಕಡಿಮೆ ಎಂದರೂ 90 -100 ಗಂಟೆ ಸಮಯ ಬೇಕು.
ಇದಲ್ಲದೆ ನೀಲ ನಕ್ಷೆ ಹಾಕಿ ಎರಡು ಪ್ರಶ್ನೆ ಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸಿ ಮೌಲ್ಯ ಮಾಪನ ನಡೆಸಿ ಅದನ್ನೆಲ್ಲ ನೀಲ ನಕ್ಷೆಯಲ್ಲಿ ನಮೂದಿಸಿ ಮದ್ಯಮ ಕ್ರಮಾಂಕ ಕಂಡು ಹಿಡಿದು ಗ್ರಾಫ್ ಮೂಲಕ ರೇಖಿಸಬೇಕು .ಇದರೊಂದಿಗೆ ಕ್ಷೇತ್ರ ಕಾರ್ಯ ಆಧಾರಿತ ವಿಷಯಗಳಲ್ಲಿ ಐದು ಪ್ರಬಂಧ ಮಂಡನೆ ಮಾಡಬೇಕು .ಇದರ ತಯಾರಿಗೆ ಏನಿಲ್ಲವೆಂದರೂ  ಒಂದು ಪ್ರಬಂಧಕ್ಕೆ ಎರಡು ದಿನ ಕ್ಷೇತ್ರ ಕಾರ್ಯ ಮಾಡಿ 10 ಗಂಟೆ ತಗೊಂಡು ಬರೆದರೂ ಐದು ಪ್ರಬಂಧಗಳಿಗೆ ಹತ್ತು ದಿನ ಕ್ಷೇತ್ರ ಕಾರ್ಯ ಹಾಗೂ ಬರೆಯಲು ಸುಮಾರು 100 ಗಂಟೆ ಸಮಯ ಬೇಕಾಗುತ್ತದೆ 

.ಒಟ್ಟಾರೆಯಾಗಿ ಪ್ರಬಂಧಗಳ ಸಿದ್ಧತೆಗೆ ಕಡಿಮೆ ಎಂದರೆ 220 ಗಂಟೆಗಳಷ್ಟು ಸಮಯಬೇಕೇ  ಬೇಕಾಗುತ್ತದೆ .ಒಟ್ಟಾರೆಯಾಗಿ ದ್ವಿತೀಯ ಸೆಮಿಸ್ಟರ್ ನ ಮೊದಲ ನಾಲ್ಕು ತಿಂಗಳಿನಲ್ಲಿ ಹಗಲು ತರಗತಿಗೆ ಹಾಜರಾಗುವುದರೊಂದಿಗೆ ಸುಮಾರು   650 -700 ಗಂಟೆಗಳ ಕೆಲಸವಿರುತ್ತದೆ!.ಅಂದರೆ 120 ದಿನಗಳಲ್ಲಿ ಹಗಲು 9.30-5.30 ತನಕ 8 ಗಂಟೆ ಕಾಲ ಕಾಲೇಜ್ ಗೆ ಹೋಗಿ ಪಾಠ ಕೇಳಿಕೊಂಡು  ಮನೆಗೆ ಬಂದು ದಿನಕ್ಕೆ ಕಡಿಮೆ ಎಂದರೆ ಆರು-ಏಳು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಇದರ ನಡುವೆ ಶೈಕ್ಷಣಿಕ ಪ್ರವಾಸ ಹಾಗೂ ಬೇರೆ ಬೇರೆ ಕಾರ್ಯಕ್ರಮಗಳು ಇರುತ್ತವೆ .ಈ ಎಲ್ಲ ಕೆಲಸಗಳನ್ನು ಒಂದಿನಿತೂ ವಿಶ್ರಾಂತಿಯಿಲ್ಲದೆ ಮಾಡುತ್ತಿರುವ ಉಪನ್ಯಾಸಕರಿಗೆ ಒಮ್ಮೆ ಈ ಬಿಎಡ್ ಮುಗಿದು ಹೋದರೆ ಸಾಕಪ್ಪಾ ದೇವರೇ ಎಂದು ಎನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ .
“ಅದು ಎಲ್ಲ ಸರಿ  ಇಷ್ಟು ಜನ ವಿದ್ಯಾರ್ಥಿಗಳು ಪ್ರತಿ ವರ್ಷ ಬಿಎಡ್ ಮಾಡುತ್ತಾರಲ್ಲ !ಅದೇನು ಮಹಾ !ಉಪನ್ಯಾಸಕರಿಗೆ ಮಾತ್ರ ಯಾಕೆ ಇದು ಕಷ್ಟ ಅನಿಸುತ್ತದೆ? ಎಂಬ ಪ್ರಶ್ನೆ ಈಗ ಏಳಬಹುದು.

ಹೌದು.ಸಮಸ್ಯೆ ಇರುವುದೇ ಇಲ್ಲಿ . ನಿಯೋಜನೆ ಮೇರೆಗೆ ಬಿ ಎಡ್  ಓದುವ ಪಿಯು ಕಾಲೇಜ್ ಉಪನ್ಯಾಸಕರಿಗೆ ಇಡೀ ವರ್ಷಕ್ಕೆ ಸಿಗುವುದು ಹದಿನೈದು ರಜೆ ಮಾತ್ರ (ಸಿ ಎಲ್) ಮಾತ್ರ . ಉಳಿದ ವಿದ್ಯಾರ್ಥಿಗಳಿಗೆ 60% -75 % ಹಾಜರಾತಿ ಇದ್ದರೆ ಸಾಕು.ಇದು ವಿಶ್ವ ವಿದ್ಯಾಲಯದಿಂದ ವಿಶ್ವ ವಿದ್ಯಾಲಯಕ್ಕೆ ತುಸು ಭಿನ್ನವಾಗಿದೆ ,ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕನಿಷ್ಠ 60 % ಕಡ್ಡಾಯ ಹಾಜರಾತಿ ಬೇಕಾಗಿದ್ದರೆ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ 75 % ರಬೇಕು .ಹಾಗಿದ್ದರೂ ವಿದ್ಯಾರ್ಥಿಗಳಿಗೆ 25% -40 % ರಜೆ ಹಾಕಲು ಅವಕಾಶವಿರುತ್ತದೆ.ಎಂದರೆ ಆದಿತ್ಯವಾರ ಮತ್ತು ಸಾರ್ವಜನಿಕ ರಜೆಗಳನ್ನು ಹೊರತು ಪಡಿಸಿ ಇವರಿಗೆ ವರ್ಷಕ್ಕೆ 75 -120ದಿವಸಗಳು ರಜೆ ಹಾಕಲು ಅನುಮತಿ ಇರುತ್ತದೆ

.ಆದ್ದರಿಂದ ಸಾಮಾನ್ಯವಾಗಿ ಬಿಎಡ್ ವಿದ್ಯಾರ್ಥಿಗಳು ಥಿಯರಿ ತರಗತಿಗಳಿಗೆ ಗೈರು ಹಾಜರಾಗಿ  ಈ ಪ್ರಾಜೆಕ್ಟ್ ವರ್ಕ್ ,ಪಾಠ ಯೋಜನೆ ಬರಹ ,ಪ್ರಬಂಧ ಸಿದ್ಧತೆ,ಬೋಧನೋಪಕರಣಗಳ ಸಿದ್ಧತೆ ಮಾಡಿ ಕೊಳ್ಳುತ್ತಾರೆ.ಇಷ್ಟು ಇತರೆ ಕಾರ್ಯಗಳು ಇರುವ ಕಾರಣವೇ ಬಿಎಡ್ ಗೆ ಕನಿಷ್ಠ ಹಾಜರಾತಿಯನ್ನು ಬೇರೆ  ಪಿಯುಸಿ ,ಪದವಿ,ಸ್ನಾತಕೋತ್ತರ ಪದವಿಗಳಿಗೆ ನಿಗದಿಯಾಗಿರುವಂತೆ 85 -90 % ಹಾಜರಾತಿಯ ನಿಯಮ ಇರುವುದಿಲ್ಲ ಬದಲಿಗೆ ಕಡ್ಡಾಯ ಹಾಜರಾತಿ ಪ್ರಮಾಣವನ್ನು ಕಡಿಮೆ ಎಂದರೆ  60 %-75 %  ಮಾತ್ರ ಇಟ್ಟು ಇತರೆ ಕಾರ್ಯ ಮಾಡಿಕೊಳ್ಳಲು ಸಮಯ ಕೊಡುತ್ತಾರೆ .
ಆದರೆ ನಿಯೋಜನೆ ಮೇಲೆ ಬಿಎಡ್  ಓದುತ್ತಿರುವ ಪದವಿಪೂರ್ವ ಕಾಲೇಜ್ ಉಪನ್ಯಾಸಕರಿಗೆ ಈ ನಿಯಮ ಅನ್ವಯ ವಾಗುವುದಿಲ್ಲ .ಅವರಿಗೆ ವರ್ಷಕ್ಕೆ 15 ರಜೆ (ಸಿ ಎಲ್ ) ಮಾತ್ರ ಸಿಗುತ್ತದೆ .ಎಂದರೆ ಇವರು 96 % ಹಾಜರಾತಿಯನ್ನು ಪಡೆಯಬೇಕಾಗುತ್ತದೆ !ಇದರಿಂದಾಗಿ ಹಗಲು ತರಗತಿಗೆ ಹಾಜರಾಗಿ ಬಂದು ಮನೆಯಲ್ಲಿ ಕುಳಿತು 7-8 ಗಂಟೆ ಕೆಲಸ ಬೇಕಾಗಿ ಬರುತ್ತದೆ .ದಿನನಿತ್ಯ ತಡ ರಾತ್ರಿ 2 -3 ಗಂಟೆ ತನಕ ಕೆಲಸ ಮಾಡಿದರೆ ಅರೋಗ್ಯ ಹಾಳಾಗದೆ ಇರಲು ಸಾಧ್ಯವೇ ?!
ಸಾಮಾನ್ಯ ವಿದ್ಯಾರ್ಥಿಗಳಿಗೆ ಸಮಯ ಸಮಯಕ್ಕೆ ಊಟ ತಿಂಡಿ ಮಾಡಿಕೊಡಲು ತಂದೆ ತಾಯಿಯರಿರುತ್ತಾರೆ .ಉಪನ್ಯಾಸಕಿಯರು ಅಡುಗೆ ಕೆಲಸ ಮನೆ ಕೆಲಸ ,ಮಕ್ಕಳಿದ್ದರೆ ಅವರ ಕೆಲಸ ಮಾಡಿಕೊಂಡು ಬಿಎಡ್ ನ ಕೆಲಸಗಳನ್ನೂ ಮಾಡಿಕೊಳ್ಳಬೇಕು.ಜೊತೆಗೆ ಸ್ವಂತ ಅಭಿಪ್ರಾಯಗಳನ್ನು ಗಳಿಸಿ ಕೊಂಡು ಪ್ರೌಧತೆ ಪಡೆದ ಉಪನ್ಯಾಸಕ ವಿದ್ಯಾರ್ಥಿಗಳಿಗೂ ಬಿಎಡ್ ನ ಉಪನ್ಯಾಸಕರಿಗೂ ಅನೇಕ ಅಭಿಪ್ರಾಯ ಬೇಧಗಳಿವೆ. ದಿನ ನಿತ್ಯ ಸಮಯಕ್ಕೆ ಸರಿಯಾಗಿ ಹಾಜರಾಗಿಯೂ ದುಡ್ಡಿಗಾಗಿ ಪ್ರತಿ ತಿಂಗಳು ಹಾಜರಾತಿ ಪ್ರಮಾಣ ಪತ್ರ ಕೊಡದೆ ಕಾಡುವ ,ದುಡ್ಡು ಕೀಳುವ ಕೆಲವು ಕಾಲೇಜ್ ಗಳೂ ಇವೆಎಂಬುದು ಕೂಡ ಗಮನಿಸಬೇಕಾದ ವಿಚಾರ . ಕೇಳಿದಷ್ಟು /ನಿರೀಕ್ಷಿಸಿದಷ್ಟು ದುಡ್ಡು ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಕೆಲವು ಕಾಲೇಜ್ ಗಳಲ್ಲಿ  ಮೊದಲ ಸೆಮಿಸ್ಟರ್ ನಲ್ಲಿ  ಅಂತರ್ ಮೌಲ್ಯ ಮಾಪನ ಅಂಕಗಳನ್ನು ತೀರ ಕಡಿಮೆ ಕೊಟ್ಟಿದ್ದಾರೆ .ಹೆಚ್ಚಿನ ಉಪನ್ಯಾಸಕ ಬಿಎಡ್ ವಿದ್ಯಾರ್ಥಿಗಳು  ಸ್ನಾತಕೋತ್ತರ ಪದವಿಯಲ್ಲದೆ  ಎಂಫಿಲ್, ಪಿ ಎಚ್ ಡಿ ಯಂಥಹ ಉನ್ನತ ಪದವಿಗಳನ್ನು ಗಳಿಸಿದ್ದು , ಈಗಾಗಲೇ ಸಂಶೋಧಕರಾಗಿ .ಲೇಖಕರಾಗಿ .ಪ್ರೌಢಿಮೆ ಗಳಿಸಿದ್ದು ,ಆಗಷ್ಟೇ ಪದವಿ ಮುಗಿಸಿ ಬಂದ ಎಳೆಯ ವಿದ್ಯಾರ್ಥಿಗಳಿಗೆ ಅವರ ಜ್ಞಾನದ ಮಟ್ಟಕ್ಕೆ ಅನುಗುಣವಾಗಿ ಸಿದ್ಧ ಪಡಿಸಿದ ಪಾಠ ಕ್ರಮ ರವಷ್ಟೂ ಒಗ್ಗುತ್ತಿಲ್ಲ ಎನ್ನುವುದು ವಾಸ್ತವ.
ಆಯ್ತು ಇಷ್ಟೆಲ್ಲಾ ಕಷ್ಟ ಪಟ್ಟು ಓದಿ ಪಡೆಯುವ ಬಿಎಡ್ ಪದವಿಯಿಂದ ಪಿಯು ಉಪನ್ಯಾಸಕರಿಗೆ ಏನಾದರೂ ಮಹತ್ವದ ಜ್ಞಾನ ಸಿಕ್ಕಿತೇ ಕೇಳಿದರೆ ಉತ್ತರ ಹೇಳುವುದು ಕಷ್ಟ .ಯಾಕೆಂದರೆ ಬಿಎಡ್ ಪಾಠ ಕ್ರಮ ವರ್ತಮಾನಕ್ಕೆ  ಸೂಕ್ತವಾಗಿಲ್ಲ .ಆಳವಾದ ಜ್ಞಾನ.ಅಧ್ಯಯನಕ್ಕೆ ಅವಕಾಶ  ಇಲ್ಲವೇ ಇಲ್ಲ .ಶಾಲಾ ಆಡಳಿತ ,ಉದಯೋನ್ಮುಖ ಭಾರತದಲ್ಲಿ ಶಿಕ್ಷಣ,ಭಾರತದಲ್ಲಿ ಪ್ರೌಢ ಶಿಕ್ಷಣ  ಈ ಮೂರೂ ಪತ್ರಿಕೆಗಳಲ್ಲಿ ಎಲ್ಲ ಚರ್ವಿತ ಚರಣ ವಿಚಾರಗಳು ಇವೆ.ಈ ಮೂರನ್ನು ಬೇರೆ ಬೇರೆ ಪತ್ರಿಕೆ ಮಾಡುವ ಬದಲು ಒಂದು ಪತ್ರಿಕೆಯಲ್ಲಿ ಅಡಕ ಮಾಡಬಹುದಿತ್ತು 

.ಕನ್ನಡ ,ಇತಿಹಾಸ ಮೊದಲಾದ ಐಚ್ಚಿಕ ವಿಷಗಳಲ್ಲೂ ಮತ್ತೆ ಮತ್ತೆ ಬೋಧನೋಪಕರಣಗಳು ,ಪಾಠ ಮಾಡುವ ವಿಧಾನಗಳು ಚರ್ವಿತ ಚರಣಗಳಾಗಿವೆಯೇ ಹೊರತು ಆಳವಾದ ಜ್ಞಾನಕ್ಕೆ ಪೂರಕವಾದ ಮಾಹಿತಿ ಏನೊಂದೂ ಇಲ್ಲ .ಅನೇಕ ಬೋಧನೋಪಾಯಗಳ ಬಗ್ಗೆ ಪಾಠ ಮಾಡುವರೇ ಹೊರತು ಅದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುವುದು ,ಅಭ್ಯಾಸ ಮಾಡಿಸುವುದು ಇಲ್ಲವೇ ಇಲ್ಲ .ಪರ ಮತ್ತು ಪೂರಕ ಪಟ್ಯ ಗಳ ವಿಷಯವೇ ಇಲ್ಲ 
.ಇಲ್ಲಿ ನೀಡುವ ಶಿಕ್ಷಣ ಪ್ರೌಢ ಶಾಲೆಯಲ್ಲಿ ಸಿಗುವ ಶಿಕ್ಷಣದಷ್ಟು ಕೂಡ ಪ್ರೌಢವಾಗಿಲ್ಲ ಎನ್ನುವುದು ಖೇದದ ವಿಚಾರ !ಪ್ರೌಢ ಶಾಲೆಗಳಲ್ಲಿ ಛಂದಸ್ಸನ್ನು ಗುರುತಿಸುವಾಗ ಮೂಲ ನಿಯಮಗಳನ್ನೂ ಹೇಳಿ ಕೊಡುತ್ತಾರೆ.ಉದಾಹರಣೆಗೆ ಉತ್ಪಲ ಮಾಲಾ ವೃತ್ತದ ಲಕ್ಷ್ಮಣವನ್ನು “ಉತ್ಪಲ ಮಾಲೆಯಪ್ಪುದು ಭರಂನಭಭಂರಲಗಂ ನೆಗಳ್ದಿರಲ್” ಎಂದು ಲಕ್ಷ್ಯ ಲಕ್ಷ್ಮಣ ಪದ್ಯವನ್ನು ಹೇಳಿ ಭ ರ ನ ಭ ಭ ರ ಗಣಗಳು ಮತ್ತು ಒಂದು ಲಘು ಒಂದು ಗುರು ಇರುತ್ತದೆ ಎಂದು ಹೇಳಿಕೊಡುತ್ತಾರೆ .ಪರೀಕ್ಷೆಯಲ್ಲಿ ಗಣಗಳ ಹೆಸರು ಮಾತ್ರ ಬರೆದು ವಿವರಿಸಿದರೂ ಅಂಕಗಳನ್ನು ಕೊಡುತ್ತಾರೆ .ಆದರೆ ಹೇಳಿ ಕೊಡುವಾಗ ಸರಿಯಾಗಿಯೇ ಲಕ್ಷ್ಯ ಲಕ್ಷ್ಮಣ ಸಮೇತ ಹೇಳಿ ಕೊಡುತ್ತಾರೆ .ಆದರೆ ಹೆಚ್ಚಿನ ಬಿಎಡ್ ಕಾಲೇಜ್ ಗಳಲ್ಲಿ  ಲಕ್ಷ್ಯ ಲಕ್ಷ್ಮಣವನ್ನು ಹೇಳದೆ ಕೇವಲ ಗಣಗಳ ಅನುಕ್ರಮ ಮತ್ತು ವಿವರಣೆಯನ್ನು ಮಾಡುತ್ತಾರೆ .ಇಷ್ಟು ಮಾತ್ರ ಬರೆದರೂ ಅಂಕಗಳನ್ನು ಕೊಡುತ್ತಾರೆ .

ಬಿಎಡ್ ಶಿಕ್ಷಣವು ಪ್ರೌಢ ಶಾಲೆಯ ಮಕ್ಕಳಿಗೆ ಪಾಠ ಮಾಡುವ ಕರ್ಮವನ್ನು ಹೇಳಿಕೊಡುವ ಉದ್ದೇಶ ಹೊಂದಿರುವುದು ಸರಿ .ಹಾಗಂತ ಪಾಠ ಕ್ರಮದ ಮಟ್ಟವೂ ಪ್ರೌಢ ಶಾಲೆ ಮಕ್ಕಳ ಮಟ್ಟಕ್ಕೆ ಸಮನಾಗಿರಿಸುವುದು ಸರಿಯೇ ?ಶಿಕ್ಷಕರಿಗೆ ಹೆಚ್ಚು ಜ್ಞಾನ ಇದ್ದರೆ ಏನಾದರೂ ತೊಂದರೆ ಇದೆಯಾ ?ಇದೇಕೆ ಹೀಗೆ ಎಂದು ಅರ್ಥವಾಗುತ್ತಿಲ್ಲ !
ಇನ್ನು ಪಾಠ ಯೋಜನೆ ,ಮಾಡುವ ಕೆಲವು ಹಂತಗಳು ,ಬೋಧನೋಪಕರಣಗಳ ತಯಾರಿ ಮತ್ತು ಉಪಯೋಗ ಮುಂದೆಯೂ ಅಳವಡಿಸಿಕೊಳ್ಳುವುದಾದರೆ ನಿಜಕ್ಕೂ ಪ್ರಯೋಜಕಾರಿಯಾದುದಾಗಿದೆ.ಆದರೆ ಬಿಎಡ್ ಮಾಡಿಯೇ ಶಿಕ್ಷಕರಾಗಿರುವ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಹೆಚ್ಚಿನ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯಲ್ಲಿ  ಅಳವಡಿಸಿಕೊಂಡದ್ದು ಕಂಡು ಬರುತ್ತಾ ಇಲ್ಲ .ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರು ಬಿಎಡ್ ಶಿಕ್ಷಣದ ನಂತರವೂ ತಮ್ಮ ಶಿಕ್ಷಕ ವೃತ್ತಿಯಲ್ಲಿ ಅಳವಡಿಸಿಕೊಂಡವರು ಇದ್ದಾರೆ ಅಷ್ಟೇ .ಇದೊಂದು ವಿಚಾರವನ್ನು ಪಿಯು ಉಪನ್ಯಾಸಕರು ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನವಾಗಬಹುದು .ಇಷ್ಟು ಕಷ್ಟ ಪಟ್ಟು ಬಿಎಡ್ ಮಾಡಿದ್ದು ತುಸುವಾದರೂ ಸಾರ್ಥಕವಾಗಬಹುದು

No comments:

Post a Comment