Friday, 3 October 2014

ನನ್ನ ಕ್ಯಾಮರಾದ ಕನವರಿಕೆ -ಡಾ.ಲಕ್ಷ್ಮೀ ಜಿ ಪ್ರಸಾದ


 ಮೊನ್ನೆ ಶಿರ್ವದಲ್ಲಿ ಹಿಡಿದ  ನರಸಣ್ಣ ವೇಷದ ಫೋಟೋ ವನ್ನು ಫೇಸ್ ಬುಕ್ ಗೆ ಹಾಕುತ್ತಿದ್ದಾಗ ಪಕ್ಕನೆ ನನ್ನ ಕ್ಯಾಮರದ ಕನವರಿಕೆ ಬಗ್ಗೆ ನೆನಪಾಯಿತು.
ಯಾಕೋ ಏನೋ ನಾನು ಸಣ್ಣಾಗಿನಿಂದ ಎಲ್ಲ ಹುಡುಗಿಯರ ಹಾಗೆ ಇರಲಿಲ್ಲ  .ಸಾಮಾನ್ಯಾವಾಗಿ  ಹುಡುಗಿಯರಿಗೆ ಬಣ್ಣ ಬಣ್ಣದ ಬಳೆಗಳು,ಲಂಗ ರವಕೆ ಅಂತ ಆಸಕ್ತಿ ಇರ್ತದೆ .ಅವರ ಆಟಗಳಲ್ಲಿ ಕೂಡ ಅಡುಗೆ ಮಾಡುದು ,ರಂಗೋಲಿ ಹಾಕುದು ,ಅಮ್ಮ ಮಗುವಿನ ಅಭಿನಯ ಇತ್ಯಾದಿ ಇರುತ್ತದೆ.
ಆದರೆ ನನಗೆ ಬಳೆ ಲಂಗ ರವಿಕೆಗಳ ಬಗ್ಗೆ ಏನೇನೂ ಆಸಕ್ತಿ ಇರಲಿಲ್ಲ .ಬಹುಶ ನಮ್ಮ ಕೋಳ್ಯೂರು ದೇವರ ಮಂಡಲ ಪೂಜೆಗೆ ಬಂದ ಜಾತ್ರೆಯಲ್ಲಿಯೂ ಕೂಡ ನಾನು ಬಳೆ ಗಿಳೆ ಆಟದ ಸಾಮಾನುಗಳನ್ನು ತೆಗೆದ ನೆನಪು ನನಗಿಲ್ಲ .ನಾನು ದಂಬಾರು ತೊಟ್ಟಿಲ್ ನಲ್ಲಿ ಕುಳಿತು ಕೊಳ್ಳುತ್ತಾ ಇದ್ದುದು ಮಾತ್ರ ನನಗೆ ನೆನಪಿದೆ .ಶೆಟ್ಟಿ ಐಸ್ ಕ್ರೀಂ ಕೂಡ ನನಗೆ ಆಗ ಅಷ್ಟೇನೂ ರುಚಿಕರ ಎನಿಸಿರಲಿಲ್ಲ.ಆದರೂ ಎಲ್ಲರೂ ತಿನ್ನುವಾಗ ನಾನು ತಿನ್ನದಿದ್ದರೆ ಹೇಗೆ ಎಂದು ನಾನೂ ಐಸ್ ಕ್ರೀಂ ತಿನ್ನುತ್ತಿದ್ದೆ !
ನನಗೆ ಚಿಕ್ಕಂದಿನಲ್ಲಿ ವಿಪರೀತ ಸಾಹಸ ಪ್ರವೃತ್ತಿ ಇತ್ತು !
ನನಗೆ ಚಿಕ್ಕಂದಿನಲ್ಲಿಯೇ ಕ್ಯಾಮರ ಬೇಕು ಫೋಟೋ ಹಿಡಿಯಬೇಕು ಎಂಬ ಹಂಬಲ ಇತ್ತು !

.ಇದಕ್ಕೆ ಒಂದು ಕಾರಣವೂ ಇದೆ .ಸುಮಾರು ಮೂವತ್ತು ಮೂವತ್ತೆರಡು ವರ್ಷ ಮೊದಲು ನಾನು ನಾಲ್ಕನೇ ತರಗತಿ ಓದುತ್ತಿರುವ ಸಮಯದಲ್ಲಿ ನಾನು ಜಾತ್ರೆಯಂದು ಸಂತೆಗೆ ಹೋದಾಗ ಮೊದಲ ಬಾರಿಗೆ ಕ್ಯಾಮೆರಾವನ್ನು ನೋಡಿದೆ .ಆಗ ಯಾರ ಕೈಯಲ್ಲೂ ಕ್ಯಾಮರ ಇರುತ್ತಿರಲಿಲ್ಲ ಈಗಿನಂತೆ .
ಆ ದಿನ ಅಪರೂಪಕ್ಕೆ ಯಾರೋ ಒಬ್ಬರು ಸಂತೆಯ ಫೋಟೋ ತೆಗೆಯುತ್ತಿದ್ದರು.ನನಗೆ ಅವರು ಫೋಟೋ ತೆಗೆಯುವ ಸಂಗತಿ ಗೊತ್ತಿರಲಿಲ್ಲ ,ನಾನು ಅವರನ್ನು ಗಮನಿಸದೆ ಕ್ಯಾಮೆರಾ ದ ಎದುರಿನಿಂದ ಮುಂದೆ ಹೋದೆ .ನಾನು ಹೋಗುವುದೂ ಕ್ಯಾಮರ ಕ್ಲಿಕ್ ಮಾಡುವುದೂ  ಒಟ್ಟಿಗೆ ಆಯಿತು.ಅಲ್ಲಿದ್ದವರೆಲ್ಲ ಏ ಏ ..ಎಂದು ಬೊಬ್ಬೆ ಹೊಡೆದರು ."ಎಂತ ಸಂಗತಿ ಅಂತ ಗೊತ್ತಿಲ್ಲದ ನನಗೆ ಒಂದು ಕ್ಷಣ ಗಾಬರಿ ಆಯ್ತು .ಅಷ್ಟರಲ್ಲಿ ಫೋಟೋ ತೆಗೆಯುತ್ತಿದ್ದಾತ ಇರಲಿ ಬಿಡಿ ಸಣ್ಣ ಹುಡುಗಿ ಅವಳಿಗೇನು ಗೊತ್ತಾಗುತ್ತೆ ಎಂದು ಹೇಳಿ ನನ್ನಲ್ಲಿ ನೀನು ಈ ಕ್ಯಾಮೆರ ದೊಳಗೆ ಬಿದ್ದಿದ್ದೀಯಾ ಗೊತ್ತಾ ಎಂದು ಕೇಳಿ ತಮಾಷೆ ಮಾಡಿದರು .ಆಗ ನನಗೆ ಅವರು ಏನು ಹೇಳಿದ್ದು ಅಂತ ಗೊತ್ತಾಗಲಿಲ್ಲ .ಅವರಲ್ಲಿದ್ದ ವಸ್ತು ಕ್ಯಾಮರ ಅದರಲ್ಲಿ ನಮ್ಮ ಫೋಟೋ ಬರುತ್ತೆ ಅಂತಾನೂ ಅಗ ಗೊತ್ತಿರಲಿಲ್ಲ .
ಆದರೆ ಸ್ಟೈಲ್  ಆಗಿ ನಿಂತು ಆ ತರ ಬೆಳಕು ಹಾಯಿಸುವ ಆ ವಸ್ತು ಹಿಡಿದ ವ್ಯಕ್ತಿಗೆ ತುಂಬಾ ಗೌರವ ಇದೆ ,ಆ ವಸ್ತುವಿಗೆ ತುಂಬಾ ಬೆಲೆ ಇದೆ ಅಂತ ಗೊತ್ತಾಯ್ತು .ಆಗಲೇ ಅಂದು ಕೊಂಡೆ ನಾನು ದೊಡ್ಡವಳಾದ ಆ ವಸ್ತುವನ್ನು ತಗೊಂಡು ಅದೇ ತರ ಮೂರು ಕೋಲು ಮೇಲೆ ನಿಲ್ಲಿಸಿ ಮಿಂಚು ಹೊಡಿಸಿ ಮಿಂಚ ಬೇಕು  ಅಂತ !
ಮತ್ತೆ ಒಂದೆರಡು ವರ್ಷ ಕಳೆಯುವಾಗ ನನಗೆ ಕ್ಯಾಮರ ಬಗ್ಗೆ ತುಸು ಮಾಹಿತಿ ತಿಳಿಯಿತು .ಕ್ಯಾಮರ ತುಂಬಾ ಬೆಲೆ ಬಾಳುವ ವಸ್ತು  ಶ್ರೀಮಂತರ ಕೈಯಲ್ಲಿ ಮಾತ್ರ ಇರುತ್ತದೆ .ಅಂತ ತಿಳಿದಾಗಲೂ ನನಗೆ ಒಂದು ಕ್ಯಾಮರ ಬೇಕು ,ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆಯಬೇಕು ಎಂಬ ಆಸೆ ಮಾತ್ರ ದೂರವಾಗಲಿಲ್ಲ.

ವರುಷಗಳು ಕಳೆದರೂ ನನ್ನ ಮೆದುಳು ಹೆಚ್ಚೇನೂ ಬೆಳೆಯಲಿಲ್ಲ,(ಈಗಲೂ ಹಾಗೆ ಇದೆ ಅದು .ಮುಂದಕ್ಕೆ ಬೆಳೆಯಲ್ಲ ಅಂತ ಹಠ ಮಾಡಿ ಕೂತಿದೆ ತಣ್ಣನೆ !!)ಕ್ಯಾಮರದ ಹುಚ್ಚು ಹಾಗೆಯೆ ಇತ್ತು  ಡಿಗ್ರೀ ಎರಡನೇ ವರ್ಷ ಓದುವಾಗ ಮದುವೆ ಆಯಿತು .ಪ್ರಸಾದ್ ಸಮೀಪದ  ಸಂಬಂಧಿಯೊಬ್ಬರ ಕೈಯಲ್ಲಿ ಕ್ಯಾಮರ ಇತ್ತು .ಆಗಿನ ಕಾಲಕ್ಕೆ ಕೊಡಕ್ ರೀಲ್ ಹಾಕುವ ಕ್ಯಾಮರ ವೆ ಒಂದು ಸೋಜಿಗದ ವಸ್ತು ನನ್ನ ಪಾಲಿಗೆ .
ಪ್ರಸಾದ್ ತಂಗಿ ನನ್ನದೇ ವಯಸ್ಸಿನ ಹುಡುಗಿ .ಒಂದು ದಿನ ಅವರ ಸಂಬಂಧಿಕರಲ್ಲಿದ್ದ ಆ ಕ್ಯಾಮರ ವನ್ನು ತಂದು ಮನೆ ಮಂದಿಯ ಎಲ್ಲರ ಫೋಟೋಗಳನ್ನು ತೆಗೆದಳು .ಮನೆಯಲ್ಲಿದ್ದ ಜನರು ನಾಯಿ ಬೆಕ್ಕು ಮರ ಗಿಡ ಎಲ್ಲವುಗಳ ಮೇಲೂ ಮಿಂಚು ಬಿತ್ತು.(ನನ್ನ ಮತ್ತು ಪ್ರಸಾದ್ ಹೊರತಾಗಿ !) ನನಗೆ ನನ್ನ ಫೋಟೋ ತೆಗೆಯದ್ದು ಏನೂ ಬೇಸರ ಇರಲಿಲ್ಲ !ಆದರೆ ಒಮ್ಮೆಯಾದರೂ ಕ್ಲಿಕ್ ಮಾಡಲು ನನ್ನ ಕೈಗೆ ಕೊಟ್ಟಿದ್ದರೆ ಎಂದು ಆಸೆಯಾಗಿತ್ತು !ಏನು ಮಾಡುದು !ಅದು ತಂದೆ ಮನೆಯಲ್ಲ ವಲ್ಲ ,ಆಶಿಸಿದ್ದೆಲ್ಲ ಸಿಗಲು !
ಆಗ ನಾನು ಅಂದು ಕೊಂಡೆ ನಾನು ಮುಂದೆ ಓದಿ ಕೆಲಸಕ್ಕೆ ಸೇರಿದ ನಂತರ ಮೊದಲ ತಿಂಗಳ ಸಂಬಳದಲ್ಲಿಯೇ ಒಂದು ಕ್ಯಾಮರ ತೆಗೆದುಕೊಳ್ಳಬೇಕು ಎಂದು.
ಆದರೆ ಡಿಗ್ರೀ ಆಗಿ ಎಂ. ಎ ಓದಿ ಕೆಲಸಕ್ಕೆ ಸೇರುವಷ್ಟರಲ್ಲಿ ಕ್ಯಾಮೆರಕ್ಕಿಂತ ಹೆಚ್ಚು ಮನೆ, ಬದುಕಿನ ಅಗತ್ಯತೆಗಳು ಖರ್ಚಿನ ಸರಮಾಲೆಗಳು ಎದುರಾದವು .ನನ್ನ ಕ್ಯಾಮರದ ಕನವರಿಕೆ ಅಲ್ಲಿಯೇ ಕಮರಿತ್ತು .
ಒಂದೆರಡು ವರ್ಷ ಹೀಗೆ ಕಳೆಯಿತು...
1997ರ ಅಕ್ಟೋಬರ್ 29 ರಂದು ಪ್ರಸಾದ್ "ನಿನ್ನ ಬರ್ತ್ ಡೇ ಗೆ ಒಂದು ಸಣ್ಣ ಆದರೆ ಸ್ಪೆಷಲ್ ಗಿಫ್ಟ್" ಅಂತ ನನ್ನ ಕೈಗೆ ಒಂದು ಪೊಟ್ಟಣ ನೀಡಿದರು .
ನಾವಿಬ್ಬರೂ ಸಿಹಿ ಪ್ರಿಯರು ,ಹಾಗಾಗಿ ಯಾವುದಾದರೂ ವಿಶೇಷ ಸ್ವೀಟ್ ಇರಬಹುದೆಂದು ತೆರೆದು ನೋಡಿದರೆ ನನ್ನೆದುರು ಕೊಡಕ್ ಕ್ಯಾಮರ ಇತ್ತು !
ನಾನು ಸಣ್ಣ ಹುಡುಗಿಯಂತೆ ಕುಣಿದು ಸಂಭ್ರಮಿಸಿದೆ !ನನ್ನ ಅಂದಿನ ಸಂಭ್ರಮ ನೆನೆದರೆ ಈಗ ನನಗೆ ನಗು ಬರುತ್ತದೆ !ಎಂಥ ಹುಚ್ಚು ಅಂತ !
ಅಂದಿನಿಂದ ಶುರು ಸಿಕ್ಕಿದ್ದನ್ನು ಫೋಟೋ ತೆಗೆಯುವ ಹುಚ್ಚು !ಇಂದಿನವರೆಗೂ  ಮುಂದುವರೆದಿದೆ .

2004ರಲ್ಲಿ ನನ್ನ ಭೂತಾರಾಧನೆ ಕುರಿತಾದ ಸಂಶೋಧನ ಕಾರ್ಯಕ್ಕೆ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಕೃಷ್ಣಭಟ್ ವಾರಾಣಾಸಿನನಗೆ ಒಂದು ಒಳ್ಳೆಯ ಕ್ಯಾನನ್ ಡಿಜಿಟಲ್ ಕ್ಯಾಮರ ಮತ್ತು ಒಂದು ಹಾಂಡಿಕಾಮ್ ಅನ್ನು ಒದಗಿಸಿಕೊಟ್ಟರು .ಅಲ್ಲಿಂದ ಫೋಟೋ ತೆಗೆಯುದಕ್ಕೆ ಇರುವ ಎಲ್ಲ ಅಡ್ಡಿಗಳೂ ನಿವಾರಣೆಯಾದವು.ರೀಲ್ ಕ್ಯಾಮರದಲ್ಲಿ ಫೋಟೋ ಹೇಗೆ ಬಂತು ಎಂದು ನೋಡಿ ಪುನಃ ಕ್ಲಿಕ್ಕಿಸುವ ಅವಕಾಶ ಇಲ್ಲ ,ಜೊತೆಗೆ ಅದರ ಸ್ಟುಡಿಯೋ ಕ್ಕೆ ಕೊಟ್ಟು photos ಆಗಿ ಕನ್ವರ್ಟ್ ಮಾಡಿ ತರಲು ಸಾಕಷ್ಟು ದುಡ್ಡು ವ್ಯಯವಾಗುತ್ತಿತ್ತು .ಗುಣ ಮಟ್ಟ ಕೂಡ ಅಷ್ಟಕ್ಕಷ್ಟೇ !.

ಅಣ್ಣ ಕೊಟ್ಟ ಕ್ಯಾಮರದಲ್ಲಿ ಸುಮಾರು ವರ್ಷ ಭೂತಾರಾಧನೆ ಬಗ್ಗೆ ಫೀಲ್ಡ್ ವರ್ಕ್ ಮಾಡಿ ರೆಕಾರ್ಡ್ ಮಾಡಿ ಫೋಟೋ ಹಿಡಿದು ಅಧ್ಯಯನ ಮಾಡಿದೆ ನನ್ನ ಹೆಚ್ಚಿನ ಸಂಶೋಧನೆ ಅಣ್ಣನ ಕಾಮರದಲ್ಲಿಯೇ ಆಗಿದೆ ಅದರಲ್ಲಿ ತೆಗೆದ ಫೋಟೋ ತುಂಬಾ ಗುಣ ಮತದಲ್ಲಿ ಬರುತ್ತಿತ್ತು .ಆದರೂ ತುಂಬಾ ಕಾಲ (ಸುಮಾರು ಎಂಟು-ಒಂಬತ್ತು  ವರ್ಷ ) ಕೆಲಸ ಮಾಡಿದಾಗ .ಅದು ಹಾಳಾಗತೊಡಗಿತು , ಅದರ ಕಾರ್ಯ ಕ್ಷಮತೆ ಕುಗ್ಗಿದಾಗ ಒಂದುಒಳ್ಳೆಯ  ಕ್ಯಾಮರ ಖರೀದಿಸಬೇಕು ಎಂದು ಕೊಂಡೆ .ಅಷ್ಟರಲ್ಲಿ ಚಿಕಾಗೊದಲ್ಲಿ ಕೆಲಸ ಮಾಡುತ್ತಿರುವ ತಮ್ಮ ಈಶ್ವರ ಭಟ್ ವಾರಾಣಸಿ ಒಂದು ಪನಸೋನಿಕ್ ಡಿಜಿಟಲ್ ಕ್ಯಾಮರವನ್ನು ಗಿಫ್ಟ್ ಆಗಿ ಕೊಟ್ಟರು.
ಪ್ರಸ್ತುತ ಅದರಲ್ಲಿಯೇ ಸಿಕ್ಕಿದ್ದನ್ನು ಫೋಟೋ ಹಿಡಿಯುವ ಕಾಯಕ ಮುಂದುವರಿಸಿದ್ದೇನೆ !ಹಾಗಂತ ನನ್ನನ್ನು ದೊಡ್ಡ ಫೋಟೋಗ್ರಾಫರ್ ಎಂದು ಕೊಳ್ಳಬೇಡಿ. ಇಂದಿಗೂ ಫೋಟೋಗ್ರಫಿ ಬಗ್ಗೆ ನನ್ನ ಜ್ಞಾನ ದೊಡ್ಡ ಸೊನ್ನೆಗೆ ಹತ್ರದಲ್ಲಿಯೇ ಇದೆ !

ಈಗ ಮತ್ತೆ ಪುನಃ ತಮ್ಮ ಈಶ್ವರ ಭಟ್  ತುಂಬಾ ಬೆಲೆ ಬಾಳುವ ಡಿಎಸ್ ಎಲ್ ಆರ್ ಕ್ಯಾಮರ ತಂದುಕೊಟ್ಟಿದ್ದಾರೆ.ಕನಸು ಈಡೇರಿದೆ..ಇನ್ನಾದರೂಸ್ವಲ್ಪಫೋಟೋಗ್ರಫಿಬಗ್ಗೆಕಲಿಯಬೇಕೆಂದುಕೊಂಡಿದ್ದೇನೆ

ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜ್ ನೆಲಮಂಗಲ
ಬೆಂಗಳೂರು ಗ್ರಾಮಂತರ ಜಿಲ್ಲೆ


6 comments:

  1. ನನ್ನ ಕ್ಯಾಮರಾ ಕನಸು ನೆನಪಿಸಿದ್ದಕ್ಕೆ ಕೃತಜ್ಞತೆಗಳು: ನಾನು ಮೈಸೂರಿನಲ್ಲಿ ಬೀಯೇ ಮೊದಲ ವರ್ಷದಲ್ಲೇನೋ ಓದುತ್ತಿದ್ದಾಗ ತಂದೆಯ ಗೆಳೆಯ ಕುಶಿ ಹರಿದಾಸ ಭಟ್ಟರು ಉಡುಪಿಯಿಂದ ಬಂದಿದ್ದರು. ಅವರು ಉದಯವಾಣಿ ದೀಪಾವಳಿ ಸಂಚಿಕೆಗೆ ವಿಶೇಷ ಚಿತ್ರ-ಲೇಖನ ಮಾಡಲು ರಂಗನತಿಟ್ಟು, ಬಂಡಿಪುರದಲ್ಲಿ ಒಂದು ರಾತ್ರಿ ಕಳೆಯಲು ಹೋಗುವಾಗ ನನ್ನನ್ನು ("ನನಗೊಬ್ಬ ಪರ್ವತಾರೋಹಿ ಸಾಹಸಿಯ ಜೊತೆ ಬೇಕು" ಎಂದೇ ಹೇಳಿ ನನಗೆ ಕೊಂಬು ಮೂಡಿಸಿ) ಕರೆದೊಯ್ದಿದ್ದರು. ಆದರೆ ನನ್ನ ಕನಸಿನ ಮೊಟ್ಟೆ ಒಡೆಯಲು ಅಂತಿಮ ಬೀಯೇವರೆಗೆ ಕಾಯಬೇಕಾಯ್ತು. ಬೇಸಗೆ ರಜೆಯ ನನ್ನ ಕೊಡಗು ಸೈಕಲ್ ಯಾನಕ್ಕೆ ತಂದೆ Agfa click IV ಕೊಂಡು ಕೊಟ್ಟಿದ್ದರು. ಸೈಕಲ್ ಯಾನಕ್ಕೆ ಜತೆಗೊಟ್ಟಿದ್ದ ಗೆಳೆಯ ಶಂಕರಲಿಂಗೇ ಗೌಡ ಮತ್ತು ನನಗೂ ಏನು ಸಂಭ್ರಮ - ಸಿಕ್ಕಿದ್ದೆಲ್ಲಾ ಚೌಕಟ್ಟಿನೊಳಗೂ ನಾನು, ನೀನು ಎಂದು ನಿಂತದ್ದೇ ನಿಂತದ್ದು, ಕ್ಲಿಕ್ಕಿದ್ದೇ ಕ್ಲಿಕ್ಕಿದ್ದು :-)

    ReplyDelete
    Replies
    1. ಓದಿ ನಿಮ್ಮ ಕ್ಯಾಮರ ಸಂಭ್ರಮವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಸರ್ ,ನೀವು ಸೂಚಿಸಿದಂತೆ ಇ ಬುಕ್ ಪ್ರಕಟಮಾಡಲು ನಿರ್ಧರಿಸಿದ್ದೇನೆ,,ಸೂಕ್ತ ಸಲಹೆ ನೀಡಿ ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು

      Delete
  2. great resemble my story. but leaving all govt job etc finally entered the field of photography. Covered Sports and calamity ioncluding war and riots for News Paper as staffer

    ReplyDelete
  3. ok very nice ,Thanks for reading and sharing your expression

    ReplyDelete
  4. camera da sundara payana. jothe jotheyale nadeda sambhrama. beleda pairinia chgurina kathe rochaka. modala baarige 12 photogala click 3 camera konda dinavannu nenapisiddakke thanks.

    ReplyDelete
    Replies
    1. ದೀರ್ಘ ಕಾಲದ ಕನಸು ನನಸಾದಾಗ ಉಂಟಾಗುವ ಸಂಭ್ರಮವೇ ಅದ್ಭುತ ವಾದದ್ದು ,ಓದಿ ನಿಮ್ಮ ಅನುಭವವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು

      Delete