Saturday 8 September 2018

ತಿಗಳಾರಿ(ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ ಅಧ್ಯಯನ -©ಡಾ.ಲಕ್ಷ್ಮೀ ಜಿ ಪ್ರಸಾದ

ತಿಗಳಾರಿ(ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ ಅಧ್ಯಯನ -ಡಾ.ಲಕ್ಷ್ಮೀ ಜಿ ಪ್ರಸಾದ

( ಕರ್ನಾಟಕ ಇತಿಹಾಸ ಅಕಾಡೆಮಿಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ)
ಭಾಷೆಗೆ ಸ್ವಂತ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ.ಭಾಷೆ ಮೊದಲು ರೂಪುಗೊಳ್ಳುತ್ತದೆ. ನಂತರ ಭಾಷೆಯ ಬರವಣಿಗೆಗಾಗಿ ಲಿಪಿ ರೂಪುಗೊಳ್ಳುತ್ತದೆ.ಒಂದೇ ಲಿಪಿ ಹಲವು ಭಾಷೆಗಳ ಬರವಣಿಗೆಗೆ ಬಳಕೆಯಾಗುತ್ತದೆ‌.ಒಂದೇ ಭಾಷೆಯ ಬರವಣಿಗೆ  ಒಂದು ಲಿಪಿಯಲ್ಲಿ ಇದ್ದಾಗ ಆ ಲಿಪಿಗೆ ಆ ಭಾಷೆಯ ಹೆಸರು ಸೇರಿಕೊಳ್ಳುತ್ತದೆ.

" ಮಲೆಯಾಳ ಲಿಪಿಯನ್ನು  ಹೋಲುವ ಆರ್ಯ ಎಳುತ್ತು ಅಥವಾ ತಿಗಳಾರಿ ಲಿಪಿಯೇ ತುಳು ಲಿಪಿ ಎಂದು ಕೆಲವು ವಿದ್ವಾಂಸರ ವಾದ.ತುಳು ಬ್ರಾಹ್ಮಣರು ಈ ಲಿಪಿಯನ್ನು ಶತಮಾನಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ ಎಂಬುದು ವಾಸ್ತವದ ಸಂಗತಿ.ಇವರು ಉಪಯೋಗಿಸಿದ ಲಿಪಿ ತುಳು ಇರಬಹುದು ಅಥವಾ ಇಲ್ಲದೇ ಇರಬಹುದು.ಎಲ್ಲಕ್ಕಿಂತಲೂ ಮುಖ್ಯ ವಿಚಾರವೇನೆಂದರೆ ಭಾಷೆಗೂ ಲಿಪಿಗೂ ಯಾವ ಸಂಬಂಧವೂ ಇಲ್ಲ. ಇಂದು ಜಾಗತಿಕ ಭಾಷೆಯಾಗಿ ಮೆರೆಯುತ್ತಿರುವ ಇಂಗ್ಲಿಷ್ ಗೆ ಸ್ವಂತ ಲಿಪಿ ಇಲ್ಲ.ಅದು ರೋಮನ್ ಲಿಪಿಯನ್ನು ಬಳಸುತ್ತಿದೆ‌.ರಾಷ್ಟ್ರ ಭಾಷೆಯಾಗಿರುವ ಹಿಂದಿಗೂ ಸ್ವಂತ ಲಿಪಿ ಇಲ್ಲ. ಅದು ದೇವ ನಾಗರಿ ಲಿಪಿಯನ್ನು ಬಳಸುತ್ತಿದೆ‌.....ಆದ್ದರಿಂದ ತುಳುವರು ಕನ್ನಡ ಲಿಪಿಯನ್ನು ಬಳಸಿದರೆ ತುಳುಭಾಷೆಗೆ ಯಾವುದೇ ರೀತಿಯಲ್ಲಿ ವ್ಯತ್ಯಯವಾಗುವುದಿಲ್ಲ" ಎಂದು ವಿದ್ವಾಂಸರಾದ ಶ್ರೀಪಾದ ಭಟ್ ಹೇಳಿದ್ದಾರೆ‌.

ಹೌದು,ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ.ಲಿಪಿ ಇಲ್ಲ ಎನ್ನುವುದು ಅವಮಾನದ ವಿಚಾರವಲ್ಲ ಹಾಗೆಯೇ ಲಿಪಿ ಇದೆ ಎಂಬುದು ಹೆಗ್ಗಳಿಕೆಯ ವಿಚಾರ ಕೂಡ ಅಲ್ಲ.ಭಾಷೆಯೆಂಬುದು ಧ್ವನಿ ಸಂಕೇತವಾದರೆ,ಧ್ವನಿಗಳನ್ನು ದಾಖಲಿಸುವ ರೇಖಾ ಸಂಕೇತಗಳೇ ಲಿಪಿಯಾಗಿದೆ‌.ಹಾಗಾಗಿ ಯಾವುದೇ ಲಿಪಿಯನ್ನು ಯಾವುದೇ ಭಾಷೆಗೆ ಬಳಸಬಹುದು. ಆದರೆ ಅದರಲ್ಲಿ ಆ ಭಾಷೆಯ ಎಲ್ಲ ಧ್ವನಿಗಳಿಗೆ ರೇಖಾ ಸಂಕೇತ/ ಅಕ್ಷರ ಇರಬೇಕು.ಇಲ್ಲವಾದಲ್ಲಿ ಭಾಷೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಯಾವುದೇ ಲಿಪಿಯೊಂದು ಸ್ವತಂತ್ರವಾಗಿ ರೂಪುಗೊಳ್ಳುವುದಿಲ್ಲ‌.ಚಿತ್ರ ಲಿಪಿಯಿಂದ ಬ್ರಾಹ್ಮೀ ಲಿಪಿ ಹುಟ್ಟಿಕೊಂಡಿತು‌

ಭಾರತದಲ್ಲಿನ ಪ್ರಚಲಿತವಿರುವ ಹೆಚ್ಚಿನ ಲಿಪಿಗಳು ಮೂಲತಃ ಬ್ರಾಹ್ಮೀ ಲಿಪಿಯಿಂದ ಹುಟ್ಟಿಕೊಂಡಿವೆ. ಹಾಗೆಯೇ ತಮಿಳು ನಾಡಿನಲ್ಲಿ ತಮಿಳು ಭಾಷೆಯ ಬರವಣಿಗೆಗಾಗಿ  ಬ್ರಾಹ್ಮಿ ಲಿಪಿಯಿಂದ ತಮಿಳು ಲಿಪಿ ಹುಟ್ಟಿಕೊಂಡಿತು. ತಮಿಳು ಭಾಷೆಯಲ್ಲಿ ಮೂವತ್ತೆರಡು ಸ್ವರ ವ್ಯಂಜನಗಳು/ ಅಕ್ಷರಗಳು  ಮಾತ್ರ ಇರುವ ಕಾರಣ ತಮಿಳು ಲಿಪಿಯಲ್ಲಿ ಕೂಡ ಇಷ್ಟೇ ಸ್ವರ ವ್ಯಂಜನಗಳಿಗೆ ರೇಖಾ ಸಂಕೇತ/ ಅಕ್ಷರ ವಿನ್ಯಾಸವಿದೆ.ಸಂಸ್ಕೃತದಲ್ಲಿ  ಹೆಚ್ಚು  ಸ್ವರ ವ್ಯಂಜನಗಳು ಇರುವ ಕಾರಣ ತಮಿಳು ಲಿಪಿಯಲ್ಲಿ ಸಂಸ್ಕೃತ  ಭಾಷೆಯನ್ನು ಬರೆಯಲು ಸಾಧ್ಯವಿಲ್ಲ. ಹಾಗಾಗಿ ತಮಿಳು ಲಿಪಿಯನ್ನು ಪರಿಷ್ಕರಿಸಿ ಸಂಸ್ಕೃತ ವನ್ನು ಬರೆಯಲು ಸೂಕ್ತವಾಗುವಂತೆ ಮಾಡಿ ಗ್ರಂಥ ಲಿಪಿಯನ್ನು ಬಳಕೆಗೆ ತಂದರು.

ದಕ್ಷಿಣ ಭಾರತದಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ ಮಾತ್ರ.

ಅಲ್ಲಿನ ತಮಿಳು ಲಿಪಿಯಲ್ಲಿ ಮೂವತ್ತೆರಡು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲ.ಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ಮಲೆನಾಡಿನ  ಬ್ರಾಹ್ಮಣರು ಅಲ್ಲಿನ ಗುರುಗಳಿಂದ ಗ್ರಂಥ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು.ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು .ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು  ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು  ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಳು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು
ಗ್ರಂಥ ಲಿಪಿಯನ್ನು ತಮಿಳರು ಬಳಕೆ ತಂದ ಕಾರಣ ಅದನ್ನು ತಿಗುಳರ ಆರ್ಯ ಎಳತ್ತು ಎಂದು ಜನರು ಕರೆಯುತ್ತಿದ್ದರು. ( ತಮಿಳರನ್ನು ತಿಗುಳರು,ತಿಗಳರು ಎಂದು ಕೂಡ ಕರೆಯುತ್ತಾರೆ)   ಇದೇ ಕಾಲಾಂತರದಲ್ಲಿ ತಿಗುಳಾರಿ- ತಿಗಳಾರಿ ಎಂಬ ಹೆಸರನ್ನು ಪಡೆಯಿತು.

ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ಮಾಡಲು ಹೋದ ಬ್ರಾಹ್ಮಣರ ಮೂಲಕ ತಿಗಳಾರಿ ಲಿಪಿ ಮಲೆನಾಡು,ತುಳುನಾಡುಗಳಲ್ಲಿ ಹರಡಿತು.

ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ ಮಲೆನಾಡು ಪ್ರದೇಶಗಳಲ್ಲಿ ಹಾಗೂ ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಪ್ರದೇಶಗಳಲ್ಲಿ ಕೂಡ ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದರು.ತಂಜಾವೂರು, ಮಹಾರಾಷ್ಟ್ರ ದ ಕೆಲವು ಭಾಗಗಳಲ್ಲಿಯೂ ಈ ಲಿಪಿ ಪ್ರಚಲಿತವಿತ್ತು ಎಂದು ರವಿ‌ಮುಂಡ್ಕೂರು ಅವರು ಹೇಳಿದ್ದಾರೆ.
ತಿಗಳಾರಿ ಲಿಪಿಯ ಸುಮಾರು ಹದಿನೈದು ಸಾವಿರದಷ್ಟು ತಾಳೆಗರಿ ಗ್ರಂಥಗಳು ಸಿಕ್ಕಿದ್ದು ,ಇವುಗಳಲೆಲ್ಲವೂ ಸಂಸ್ಕೃತ ಭಾಷೆಯ ವೇದ ಪುರಾಣ ಮಂತ್ರಗಳ ಗ್ರಂಥಗಳಾಗಿವೆ.ಹತ್ತು ಹನ್ನೆರಡು ಕನ್ನಡ ಕೃತಿಗಳು ಮತ್ತು ಏಳು ತುಳು ಭಾಷೆಯ ಕೃತಿಗಳು ತಿಗಳಾರಿ ಲಿಪಿಯಲ್ಲಿ ಲಭ್ಯವಾಗಿವೆ.
ತಿಗಳಾರಿ ಲಿಪಿಯನ್ನು ಉಡುಪಿಯ  ಅಷ್ಟ ಮಠಗಳಲ್ಲಿ  ಸಂಸ್ಕೃತ ಗ್ರಂಥಗಳ ಬರಹಕ್ಕೆ ಹಾಗೂ ದಾಖಲೆಗಳನ್ನು ಬರೆಯಲು ಬಳಕೆ ಮಾಡಿದ್ದರು.ಉಡುಪಿ ಅಷ್ಟ ಮಠಗಳಲ್ಲಿ ಹಾಗೂ ಕಾಸರಗೋಡಿನ ಕೆಲವೆಡೆ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ.
ಹದಿನೇಳನೇ ಶತಮಾನದಲ್ಲಿ ತುಳು ರಾಮಾಯಣ ಕೃತಿ ತಿಗಳಾರಿ ಲಿಪಿಯಲ್ಲಿ ಬರೆದಿದ್ದು ಅದರಲ್ಲಿ ಕವಿ ತುಳು ಭಾಷೆ ತುಳು ಲಿಪಿಯಲ್ಲಿ ಬರೆದ ಕೃತಿ ಎಂದು ಬರೆದಿದ್ದಾರೆ.ಆದರೆ ಇದನ್ನು ಕೃತಿಯ ಹೊರಭಾಗದಲ್ಲಿ ಬರೆದಿದ್ದು ಗ್ರಂಥದ ಒಳಭಾಗದ ಲಿಪಿವೂ ಹೊರಭಾಗ ಈ ರೀತಿಯಾಗಿ ಬರೆದ ಲಿಪಿಗೂ ವ್ಯತ್ಯಾಸವಿದೆ‌.ಹಾಗಾಗಿ ಇದನ್ನು ಕವಿ ಬರೆದಿರುವ ಸಾಧ್ಯತೆ ತೀರಾ ಕಡಿಮೆ.ಆದರೂ ತಿಗಳಾರಿ ಲಿಪಿಗೆ ತುಳು ಲಿಪಿ ಎಂದು ಕರೆಯುತ್ತಿದ್ದ ಬಗ್ಗೆ ಇದೊಂದು ಮಹತ್ವದ ಸಾಕ್ಷಿಯಾಗಿದೆ.

ತಿಗಳಾರಿ ಲಿಪಿ ಸಂಸ್ಕೃತ ಬರೆಯಲು ರೂಪುಗೊಂಡ ಲಿಪಿಯಾಗಿದ್ದು ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ
ತಿಗಳಾರಿ  ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ

ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಕೆಗೆ ಬಂದ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ.ಇದು ತುಳು ಭಾಷೆಯ ಬರವಣಿಗೆಗಾಗಿ ರೂಪುಗೊಂಡ ಲಿಪಿಯಲ್ಲ ‌.ಹಾಗಾಗಿ ಇದು ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ.

ತಳ ಮಟ್ಟದ ಅಧ್ಯಯನವನ್ನು ಮಾಡದ  ಕೆಲವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂಬ ಸತ್ಯವನ್ನು ಅರಿಯದೆ,ಅಥವಾ ಅರಿತೂ ಮುಚ್ಚಿಟ್ಟು, ತಿಗಳಾರಿ ಮತ್ತು ತುಳು ಲಿಪಿ ಬೇರೆ ಬೇರೆ,ತುಳು ಭಾಷೆಗೆ ಸ್ವಂತ ಲಿಪಿ ಇದೆ ಎಂದು ತಪ್ಪಾಗಿ ಬಿಂಬಿಸುತ್ತಾ ಇದ್ದಾರೆ  .ಆದರೆ ತಿಗಳಾರಿ ಮತ್ತು ತುಳು ಲಿಪಿ ಎರಡೂ  ಒಂದೇ ಎಂದು ಹೆಚ್ಚಿನ ಲಿಪಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ಡಾ.ದೇವರ ಕೊಂಡಾ ರೆಡ್ಡಿಯವರು ತುಳು ಲಿಪಿ ತಿಗಳಾರಿ ಲಿಪಿಯ ಒಂದು ಪ್ರಬೇಧವಾಗಿದೆ ಎಂದು ಹೇಳಿದ್ದಾರೆ.
ಡಾ ದೇವರಾಜ ಸ್ವಾಮಿಯವರ ಲಿಪಿ ಬೆಳವಣಿಗೆ ಕುರಿತಾದ ಗ್ರಂಥದಲ್ಲಿ ತಿಗಳಾರಿ ಮತ್ತು ತುಳು ಲಿಪಿಯನ್ನು ಬೇರೆ ಬೇರೆಯಾಗಿ ಗುರುತಿಸಿದ್ದು ಅದರಲ್ಲಿ ತಿಗಳಾರಿ ಮತ್ತು ತುಳು ಲಿಪಿಯ ವರ್ಣಮಾಲೆಯನ್ನು ನೀಡಿದ್ದಾರೆ.
ಪ್ರಸ್ತುತ ಕರ್ನಾಟಕ ತುಳು ಅಕಾಡಮಿ ವೆಬ್ ನಲ್ಲಿ ಪ್ರಕಟಿಸಿರುವ ಮತ್ತು ತುಳು ಲಿಪಿ ಕಲಿಸುವವರು ಕಲಿಸುತ್ತಿರುವ ಲಿಪಿಯು ದೇವರಾಜ ಸ್ವಾಮಿ ಅವರು ನೀಡಿರುವ ತುಳು ಲಿಪಿ ವರ್ಣಮಾಲೆಯನ್ನು ಹೋಲುತ್ತಾ ಇಲ್ಲ ಬದಲಿಗೆ ತಿಗಳಾರಿ ಲಿಪಿ ವರ್ಣಮಾಲೆಯನ್ನು ಹೋಲುತ್ತದೆ.

ಕರ್ನಾಟಕ ತುಳು ಅಕಾಡೆಮಿಯ ವೆಬ್ ಸೈಟ್‌ನಲ್ಲಿ  ಯಾವುದೇ ಭಾಷೆಗೆ ಸ್ವಂತ ಲಿಪಿ ಇರಲೇಬೇಕು ಎಂದೇನೂ ಇಲ್ಲ, ತುಳು ಭಾಷೆಯನ್ನು ಬರೆಯಲು ತಿಗಳಾರಿ ಲಿಪಿಯನ್ನು ಬಳಸುತ್ತಿದ್ದರು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಇದನ್ನು ತುಳು ಲಿಪಿ ಎಂದು ಕರೆದಿರುವ ಡಾ.ವೆಂಕಟರಾಜ ಪುಣಿಚಿತ್ತಾಯರು

"...ಇದೇ ವೇಳೆಗೆ ವೈದಿಕ ಮಂತ್ರಗಳನ್ನೂ,ಸಂಸ್ಕೃತ ಕಾವ್ಯಗಳನ್ನೂ ಬರೆಯಲು ತುಳುವರು ಉಪಯೋಗಿಸುತ್ತಿದ್ದ ಐವತ್ತು ಅಕ್ಷರಗಳುಳ್ಳ ಗ್ರಂಥ ಲಿಪಿಯು ಆಸ್ಥಾನಗಳಲ್ಲಿ ಸ್ವೀಕೃತವಾಯಿತು.ಹೀಗೆ ಆರ್ಯ ಭಾಷೆ ಅಥವಾ ಸಂಸ್ಕೃತವನ್ನು ಬರೆಯಲು ಉಪಯೋಗಿಸಿರುವ ಆ ಲಿಪಿಯನ್ನೇ ಪರಿಷ್ಕರಿಸಿ ಮಲೆಯಾಳ ಭಾಷೆಯನ್ನು ಬರೆಯಲು ಉಪಯೋಗಿಸಿದಾಗ ಆರ್ಯ ಎಳುತ್ತು ಅಥವಾ ತುಳು ಮಲೆಯಾಳ ಲಿಪಿ ಎಂಬ ಹೆಸರನ್ನು ಗಳಿಸಿತು " ( ತುಳು ನಡೆ ನುಡಿ) ಎಂದು ಹೇಳಿದ್ದಾರೆ‌.ಇಲ್ಲಿ ತುಳು ಲಿಪಿ ಮತ್ತು ಆರ್ಯ ಎಳುತ್ತು ಒಂದೇ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.ಆರ್ಯ ಎಳುತ್ತು ವನ್ನೇ ತಿಗಳಾರಿ ಎಳುತ್ತು/ ಲಿಪಿ ಎಂದು ಕರೆಯಲಾಗುತ್ತದೆ.

ತುಳು ಲಿಪಿ ಪುಸ್ತಕ ರಚಿಸಿದ ಡಾ.ರಾಧಾಕೃಷ್ಣ ಬೆಳ್ಳೂರು ಅವರು " ಆರ್ಯ ಭಾಷೆಯಾಯಿ ಸಂಸ್ಕೃತೊನ್ ಬರೆಪ್ಪಿ ಕಾರಣೊಗ್ ಆರ್ಯ ಎಳುತ್ತು,ತುಳುನ್ ಬರೆವೊಂದಿತ್ತಿ ಕಾರಣೊಗ್ ತುಳು ಲಿಪಿ ಪನ್ಪಿ ಪುದರಿತ್ತಿ ಈ ಲಿಪಿನ್ ಉತ್ತರ ಕನ್ನಡಡ್ ತಿಗಳಾರಿಂದ್ ಲೆಪ್ಪುವೆರ್( ತುಳು ಲಿಪಿ ಕೃತಿಯ ಪ್ರಸ್ತಾವನೆ) ( ಆರ್ಯ ಭಾಷೆಯಾದ ಸಂಸ್ಕೃತವನ್ನು ಬರೆದ ಕಾರಣಕ್ಕಾಗಿ ಆರ್ಯ ಎಳುತ್ತು,ತುಳುವನ್ನು ಬರೆಯುತ್ತಿದ್ದ ಕಾರಣಕ್ಕೆ ತುಳು ಲಿಪಿ ಎಂಬ ಹೆಸರಿದ್ದ ಈ ಲಿಪಿಯನ್ನು ಉತ್ತರ ಕನ್ನಡದಲ್ಲಿ ತಿಗಳಾರಿ ಲಿಪಿ ಎಂದು ಕರೆಯುತ್ತಾರೆ) ಎಂದು ಹೇಳಿದ್ದಾರೆ‌.ಇಲ್ಲಿ ತುಳುವನ್ನು ಬರೆಯುತ್ತಿದ್ದ ಕಾರಣಕ್ಕೆ ತುಳು ಲಿಪಿ ಎಂದು ಹೆಸರಿದೆ ಎಂದು ಹೇಳಿದ್ದಾರೆ. ಆದರೆ ಪ್ರಾಚೀನ ಕಾಲದಲ್ಲಿ ತುಳು ಭಾಷೆಯಲ್ಲಿ ಬರವಣಿಗೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇತ್ತು.ಕೇವಲ ಆರು ತುಳು ಭಾಷೆಯ  ಪ್ರಾಚೀನ ಕೃತಿಗಳು ಮಾತ್ರ ಲಭ್ಯವಾಗಿವೆ‌.ಹಾಗಾಗಿ ತುಳುವಿನ ಬರವಣಿಗೆಗಾಗಿ ಬಳಕೆ ಮಾಡಿದ ಕಾರಣಕ್ಕೆ ಈ ಲಿಪಿಗೆ ತುಳು ಲಿಪಿ ಎಂಬ ಹೆಸರು ಬಂದಿದೆ ಎಂಬುದನ್ನು ಒಪ್ಪಲಾಗದು..

ತುಳು ಲಿಪಿಯನ್ನು ವಿನ್ಯಾಸ ಮಾಡಿರುವ ಡಾ.ವಿಘ್ನರಾಜ ಭಟ್ ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ. ಡಾ.ಪದ್ಮನಾಭ ಕೇಕುಣ್ಣಾಯರು ಕೂಡ ಇದೇ ಅಭಿಪ್ರಾಯ ಪಟ್ಟಿದ್ದಾರೆ.  ಲಿಪಿ ತಜ್ಞರಾದ ಡಾ.ಪಿ.ವಿ ಕೃಷ್ಣ ಮೂರ್ತಿಯವರು ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯರು  ಸಂಸ್ಕೃತ ಮತ್ತು ತುಳು ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ,ತೌಳವ ಬ್ರಾಹ್ಮಣರು ( ತುಳುನಾಡಿನ ಬ್ರಾಹ್ಮಣರು) ಸಂಸ್ಕೃತ ಬರೆಯಲು ಬಳಕೆಗೆ ತಂದ ಕಾರಣ ಈ ಲಿಪಿಗೆ ತುಳು ಲಿಪಿ ಎಂಬ ಹೆಸರು ಬಂದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದನ್ನು ಕೇವಲ ತೌಳವ ಬ್ರಾಹ್ಮಣರು ಮಾತ್ರ ಸಂಸ್ಕೃತ ಬರೆಯಲು ಬಳಕೆ ಮಾಡಿಲ್ಲ,ಉತ್ತರ ಕನ್ನಡ, ಶಿವಮೊಗ್ಗ, ಮಲೆನಾಡಿನ ಬ್ರಾಹ್ಮಣರು ಕೂಡ ವೈದಿಕ ವೇದ ಮಂತ್ರಗಳನ್ನು ಬರೆಯಲು ಬಳಕೆ ಮಾಡಿದ್ದಾರೆ.ತಂಜಾವೂರಿನಲ್ಲಿ ಕೂಡ ಈ ಲಿಪಿಯಲ್ಲಿ ಬರೆದ ಒಂದೂವರೆ ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ವೇದ ಮಂತ್ರಗಳ ಹಸ್ತಪ್ರತಿಗಳು ಸಿಕ್ಕಿದ್ದು,ಅಲ್ಲಿನ ಬ್ರಾಹ್ಮಣರು ಕೂಡ ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.ಇಲ್ಲೆಲ್ಲ ಈ ಲಿಪಿಯನ್ನು ತಿಗಳಾರಿ ಎಂದು ಕರೆದಿದ್ದಾರೆ. ತುಳುನಾಡಿನಲ್ಲಿ ಕೂಡ ಸಂಸ್ಕೃತ ಬರೆಯಲು ಬಳಕೆಯಾದ ಈ ಲಿಪಿಯನ್ನು  ಕೆಲವೆಡೆಗಳಲ್ಲಿ ತುಳು ಲಿಪಿ ಎಂದು ಕರೆದಿದ್ದಾರೆ.ಆದರೆ ಹೆಸರು ತುಳು ಲಿಪಿ ಎಂದಿದ್ದರೂ ಇದು ತುಳು ಭಾಷೆಯ ಬರವಣಿಗೆಗಾಗಿ ರೂಪುಗೊಂಡ ಲಿಪಿಯಲ್ಲ ,ಇದು ಸಂಸ್ಕೃತ ಭಾಷೆಯ ವೇದ ಮಂತ್ರಗಳನ್ನು ಬರೆಯಲು ತಮಿಳು  ಬ್ರಾಹ್ಮಣರು ಬಳಕೆಗೆ ತಂದ ಲಿಪಿ  ಎಂದು ಆಂತರಿಕ ಹಾಗೂ ಬಾಹ್ಯ ಸಾಕ್ಷ್ಯಗಳ ಆಧಾರಗಳ ಮೇಲೆ ಖಂಡಿತವಾಗಿ ಹೇಳಬಹುದು
ತಿಗಳಾರಿ ಲಿಪಿ ಸಂಸ್ಕೃತ ಭಾಷೆಯ ಬರವಣಿಗಾಗಿ ರೂಪುಗೊಂಡ ಲಿಪಿ

ಬಾಹ್ಯ ಸಾಕ್ಷ್ಯಗಳು

1

ತಿಗಳಾರಿ ಲಿಪಿಯಲ್ಲಿ ಹದಿನೈದು ಸಾವಿರದಷ್ಟು ತಾಳೆ ಗರಿ ಗ್ರಂಥಗಳು ಲಭಿಸಿದ್ದು ಇವುಗಳಲ್ಲಿ 99.9% ಗ್ರಂಥಗಳು ಸಂಸ್ಕೃತ ಭಾಷೆಯ ಗ್ರಂಥಗಳಾಗಿವೆ‌.

2

ಕೇವಲ ಆರು ತುಳು ಭಾಷೆಯ ಗ್ರಂಥಗಳು, ಆರೇಳು ಕನ್ನಡ ಭಾಷೆಯ ಗ್ರಂಥಗಳು ಮಾತ್ರ ಈ ಲಿಪಿಯಲ್ಲಿ ಲಭ್ಯವಾಗಿವೆ‌

3

ತುಳುನಾಡಿನಲ್ಲಿ ಕೂಡ  ಒಂದೂವರೆ ಸಾವಿರದಷ್ಟು ಈ ಲಿಪಿಯ  ತಾಳೆಗರಿ ಗ್ರಂಥಗಳು ಲಭಿಸಿದ್ದು ಇವುಗಳಲ್ಲಿ ಆರು ತುಳು ಭಾಷೆಯ ಗ್ರಂಥಗಳು, ಒಂದೆರಡು ಕನ್ನಡ ಭಾಷೆಯ ಗ್ರಂಥಗಳು ಬಿಟ್ಟರೆ ಉಳಿದವೆಲ್ಲವೂ ಸಂಸ್ಕೃತ ಭಾಷೆಯ ಗ್ರಂಥಗಳಾಗಿವೆ.

4

ತುಳುನಾಡಿನ ಹೊರ ಭಾಗದಲ್ಲಿ ಎಂದರೆ ಉತ್ತರ ಕನ್ನಡ, ಶಿವಮೊಗ್ಗ, ಮಲೆನಾಡು ಪರಿಸರದಲ್ಲಿ ಕೂಡ ಈ ಲಿಪಿ ಬಳಕೆಯಲ್ಲಿದ್ದು ಇದನ್ನು ಇಲ್ಲಿ ತಿಗಳಾರಿ ಲಿಪಿ ಎಂದು ಕರೆದಿದ್ದಾರೆ.

5

ತುಳುನಾಡಿನ ಹೊರಭಾಗದಲ್ಲಿ ಸಿಕ್ಕ  ಈ ಲಿಪಿಯ ಕೃತಿಗಳು ಸಂಸ್ಕೃತ ಭಾಷೆಯದ್ದೇ ಆಗಿವೆ.

ಕರ್ನಾಟಕದ ಮೈಸೂರಿನಲ್ಲಿ ಸಿಕ್ಕ ಶಾಸನವೊಂದರಲ್ಲಿ ಸಂಸ್ಕೃತ ಬರೆಯಲು ತಿಗುಳಾರಿ ಲಿಪಿಯನ್ನು ಕಲಿಸುತ್ತಿದ್ದ ಬಗ್ಗೆ ದಾಖಲೆಯಿದೆ ಎಂದು ಲಿಪಿ ತಜ್ಞರಾದ ಡಾ.ವೆಂಕಟೇಶ ಜೋಯಿಸ್,ಕೆಳದಿ ಇವರು ತಿಳಿಸಿದ್ದಾರೆ.

6

ಹದಿನೈದನೇ ಶತಮಾನದ ಒಂದು ಕೃತಿಯಲ್ಲಿ ತಿಗಳಾರಿ ಲಿಪಿಯ ವರ್ಣಮಾಲೆಯಿದ್ದು ,ಅದನ್ನು ತಿಗಳಾರಿ ವರ್ಣಮಾಲಾ ಎಂದು ಕರೆದಿರುವ ಬಗ್ಗೆ ಡಾ.ವೆಂಕಟೇಶ ಜೋಯಿಸ್ ಅವರು ಮಾಹಿತಿ ನೀಡಿದ್ದಾರೆ‌.

7

ತೀರ್ಥಹಳ್ಳಿಯ ರಾಮಚಂದ್ರಾಪುರ ಮಠದಲ್ಲಿ ತಿಗಳಾರಿ ಲಿಪಿಯಲ್ಲಿ ಕನ್ನಡ ಭಾಷೆಯಲ್ಲಿ ಬರೆದಿರುವ ಐವತ್ತಕ್ಕೂ ಹೆಚ್ಚಿನ ಪತ್ರಗಳು ಸಿಕ್ಕಿವೆ‌

ಆಂತರಿಕ ಸಾಕ್ಷ್ಯಗಳು

1

ತಿಗಳಾರಿ ಲಿಪಿ ಸಂಸ್ಕೃತ ಬರೆಯಲು ಬಳಕೆಗೆ ಬಂದಿದ್ದು ಸಂಸ್ಕೃತ ಭಾಷೆಯ ಎಲ್ಲ ಸ್ವರ ವ್ಯಂಜನಗಳಿಗೆ/ ಐವತ್ತು ಅಕ್ಷರಗಳಿಗೆ ಇವುಗಳಲ್ಲಿ  ಲಿಪಿ ಸಂಕೇತ/ಅಕ್ಷರ ವಿನ್ಯಾಸಗಳಿವೆ.

2

ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಮತ್ತು ಲೃ ಎನ್ನುವ ವಿಶಿಷ್ಟ ಸ್ವರಗಳಿಗೆ ತಿಗಳಾರಿ ಲಿಪಿಯಲ್ಲಿ ರೇಖಾ ಸಂಕೇತ/ ಅಕ್ಷರ ವಿನ್ಯಾಸವಿದೆ.

3

ಸಂಸ್ಕೃತ ಭಾಷೆಯಲ್ಲಿ ಹ್ರಸ್ವ ,ಎ ಒ ಸ್ವರಗಳು ಇಲ್ಲ.ಆದ್ದರಿಂದ ಸಂಸ್ಕೃತ ಭಾಷೆಯನ್ನು ಬರೆಯಲು ಬಳಕೆ ತಂದ ತಿಗಳಾರಿ ಲಿಪಿಯಲ್ಲಿ ಕೂಡ ಹ್ರಸ್ವ ಎ ಒ ಸ್ವರಗಳಿಗೆ ರೇಖಾ ಸಂಕೇತ/ ಅಕ್ಷರಗಳು ಇಲ್ಲ
ಇದು ತುಳು ಭಾಷೆಯ ಸ್ವಂತ ಲಿಪಿಯಲ್ಲ

ಬಾಹ್ಯ ಸಾಕ್ಷ್ಯಗಳು

1

ಈ ಲಿಪಿಯಲ್ಲಿ ಹದಿನೈದು ಸಾವಿರದಷ್ಟು ಸಂಸ್ಕೃತ ಭಾಷೆಯ ತಾಳೆ ಗರಿ ಗ್ರಂಥಗಳು ಲಭಿಸಿದ್ದು ಕೇವಲ ಆರು ಮಾತ್ರ ತುಳು ಭಾಷೆಯ ಗ್ರಂಥಗಳಾಗಿವೆ‌.

2

ಇದು  ತುಳುನಾಡಿನ ಹೊರಗೆ ತುಳುಭಾಷೆ ಪ್ರಚಲಿತವಿಲ್ಲದೇ ಇರುವ ತಮಿಳುನಾಡಿನ ತಂಜಾವೂರು ,ಕಂಚಿ ಹಾಗೂ ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ, ಮಲೆನಾಡು ಪರಿಸರದಲ್ಲಿ ಕೂಡ ಸಂಸ್ಕೃತ ಬರೆಯಲು ಬಳಕೆಯಾಗುತ್ತಿದ್ದು,ಇಲ್ಲೆಲ್ಲ ಇದನ್ನು ತಿಗಳಾರಿ ಲಿಪಿ ಎಂದು ಕರೆದಿದ್ದಾರೆ.

3

ತುಳುನಾಡಿನ ಹವ್ಯಕ ಬ್ರಾಹ್ಮಣರು, ಚಿತ್ಪಾವನ,ಕರಾಡ ಬ್ರಾಹ್ಮಣರು ಕೂಡ ಈ ಲಿಪಿಯನ್ನು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದು ,ಇವರು ಈ ಲಿಪಿಯನ್ನು ತಿಗಳಾರಿ ಎಂದು ಕರೆದಿದ್ದಾರೆ .

4

ತುಳುನಾಡು ಕನ್ನಡ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಆದ್ದರಿಂದ ತುಳು ಭಾಷೆಯಲ್ಲಿ ಆಡಳಿತ ,ಪತ್ರ ವ್ಯವಹಾರಗಳು ಇರಲಿಲ್ಲ. ತುಳು ಭಾಷೆಯಲ್ಲಿ ಸಾಹಿತ್ಯ ರಚನೆ ಕೂಡ ತೀರಾ ಕಡಿಮೆ ಇತ್ತು‌( ಆರು ಕೃತಿಗಳು ಮಾತ್ರ ಸಿಕ್ಕಿವೆ) .ಹಾಗಾಗಿ ತುಳು ಭಾಷೆಯಲ್ಲಿ ಬರವಣಿಗೆ ಇರದ ಕಾರಣ ತುಳು ಭಾಷೆಗೆ ಸ್ವಂತ ಲಿಪಿ ರೂಪುಗೊಳ್ಳುವ ಸಾಧ್ಯತೆಯೇ ಇರಲಿಲ್ಲ.

ಆಂತರಿಕ ಸಾಕ್ಯಗಳು

1

ತುಳು ಭಾಷೆಯು ಮೂಲ ದ್ರಾವಿಡ ಭಾಷೆಯಿಂದ ಕವಲೊಡೆದ ಭಾಷೆಯಾಗಿದ್ದು ಸಂಸ್ಕೃತ ಭಾಷೆಯಿಂದ ಭಿನ್ನವಾಗಿದೆ‌.ಇದರಲ್ಲಿ ಹ್ರಸ್ವ ಎ ಒ ಧ್ವನಿಗಳಿವೆ‌.ತಿಗಳಾರಿ ಲಿಪಿ ತುಳು ಭಾಷೆಯ ಬರವಣಿಗೆಗಾಗಿ ರೂಪುಗೊಂಡ ಲಿಪಿಯಾಗಿದ್ದರೆ ಇದರಲ್ಲಿ ಹ್ರಸ್ವ ಎ ಒ ಸ್ವರಗಳಿಗೆ ಅಕ್ಷರವಿರುತ್ತಿತ್ತು.ಆದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ  ಅಕ್ಷರಗಳಿಲ್ಲ.

2

ತುಳು ಭಾಷೆಯ ವಿಶಿಷ್ಟ  ಧ್ವನಿಗಳಿಗೆ ಇದರಲ್ಲಿ ಅಕ್ಷರ ವಿನ್ಯಾಸವಿಲ್ಲ.

3

ಯಾವುದೇ ಲಿಪಿ ತನ್ನಿಂತಾನಾಗಿಯೇ ರೂಪುಗೊಳ್ಳುವುದಿಲ್ಲ.ಅದಕ್ಕೆ ಮೂಲವಾಗಿ ಇನ್ನೊಂದು ಲಿಪಿ ಇರುತ್ತದೆ‌.ಅದು ಕಾಲಾಂತರದಲ್ಲಿ ಬದಲಾಗುತ್ತಾ ಮೂಲದಿಂದ ಭಿನ್ನವಾಗಿ ಇನ್ನೊಂದು ಲಿಪಿಯಾಗಿ ಗುರುತಿಸಲ್ಪಡುತ್ತದೆ‌.ಚಿತ್ರ ಲಿಪಿಯಿಂದ ಬ್ರಾಹ್ಮೀ ಲಿಪಿ ರೂಪುಗೊಂಡಿತು.ಅದರಿಂದ ತಮಿಳು ಲಿಪಿ ಹುಟ್ಟಿತು ‌ಅದು ಸಂಸ್ಕೃತ ಭಾಷೆಯ ಬರವಣಿಗೆಗಾಗಿ ಪರಿಷ್ಕೃತ ಗೊಂಡು ಗ್ರಂಥ ಲಿಪಿ ಆಯಿತು. ಇದನ್ನು ತಮಿಳು ಬ್ರಾಹ್ಮಣರು ರೂಪಿಸಿದ ಕಾರಣ ತಿಗಳಾರಿ ಲಿಪಿ ಎಂಬ ಹೆಸರು ಬಂತು ತಿಗಳಾರಿ ಲಿಪಿ ಆಯಿತು. ತಮಿಳರನ್ನು ತಿಗುಳರು ಎಂದು ಕರೆಯುತ್ತಾರೆ ‌ತಿಗುಳ/ ತಿಗಳರು ಬಳಕೆಗೆ ತಂದ ಲಿಪಿ ತಿಗಳಾರಿ ಎಂಬ ಹೆಸರನ್ನು ಪಡೆಯಿತು. ‌ ಒಂದೊಮ್ಮೆ ಇದು ತುಳು ಭಾಷೆಯ ಲಿಪಿಯಾಗಿದ್ದರೆ ಅದಕ್ಕೆ ಒಂದು ಮೂಲ ಲಿಪಿ ಇರಲೇಬೇಕಿತ್ತು‌.ಆದರೆ  ತುಳುನಾಡಿನಲ್ಲಿ ಇದಕ್ಕೆ ಮೂಲವಾಗಿರುವ,ಇದನ್ನು ಹೋಲುವ ಯಾವುದೇ ಲಿಪಿ ಇಲ್ಲ ‌.
ಇದು ತುಳು ಭಾಷೆಯ ಬರವಣಿಗೆ ಸೂಕ್ತವಾಗಿಲ್ಲ

ಇದು ಸಂಸ್ಕೃತ ಭಾಷೆಯ ಬರವಣಿಗೆಗಾಗಿ ರೂಪುಗೊಂಡಿದ್ದು ಸಂಸ್ಕೃತ ಭಾಷೆಯಲ್ಲಿ ಇಲ್ಲದಿರುವ ಆದರೆ ತುಳುಭಾಷೆಯಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ.

ಇದರಿಂದಾಗಿ  ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ,ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ  ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು‌ ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ  ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ‌ ಹೀಗೆ ಬಳಸಿದರೆ  ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿಯನ್ನು ತುಳುವಿಗೆ ಬಳಸುವುದೇ   ಆಗಿದ್ದಲ್ಲಿ  ತುಳು ಭಾಷೆಗೆ ಸೂಕ್ತವಾಗುವಂತೆ  ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ.


ತಿಗಳಾರಿ ಲಿಪಿಯನ್ನು ಉಡುಪಿ ಕಾಸರಗೋಡಿನ ಕೆಲವೆಡೆ ತುಳು ಲಿಪಿ ಎಂದು ಕರೆದಿದ್ದರೂ ಇದು ತುಳು ಭಾಷೆಯ ಬರವಣಿಗೆಗೆ ಬಳಕೆಗೆ ಬಂದ ಲಿಪಿಯಲ್ಲ.
ತುಳು ಭಾಷೆಯ ಬರವಣಿಗೆಗಾಗಿ ರೂಪುಗೊಂಡ ಲಿಪಿ ಇದಾಗಿದ್ದರೆ ತುಳು ಭಾಷೆಯ ಎಲ್ಲಾ ಸ್ವರ ವ್ಯಂಜನಗಳ ಅಭಿವ್ಯಕ್ತಿ ಗೆ ಇದರಲ್ಲಿ ರೇಖಾ ಸಂಕೇತ/ ಅಕ್ಷರಗಳು ಇರುತ್ತಿದ್ದವು. 
ತುಳು ಭಾಷೆಯಲ್ಲಿ ಬರವಣಿಗೆ ಇರಲಿಲ್ಲ ಅಥವಾ  ತೀರಾ ಕಡಿಮೆ ಇತ್ತು.ಅಲ್ಲದೇ ತಿಗಳಾರಿ ಲಿಪಿಯಲ್ಲಿ ಸಿಕ್ಕ ಸುಮಾರು ಹದಿನೈದು ಸಾವಿರ  ಕೃತಿಗಳೆಲ್ಲವೂ ಸಂಸ್ಕೃತ ಭಾಷೆಯದ್ದಾಗಿವೆ( ಹತ್ತು ಹನ್ನೆರಡು ಕನ್ನಡ ,ಏಳು ತುಳು ಭಾಷೆಯ ಕೃತಿಗಳನ್ನು ಹೊರತು ಪಡಿಸಿ ).
"ತುಳು ಭಾಷೆಗೆ ಲಿಪಿಯಿಲ್ಲ,ತೌಳವ ಬ್ರಾಹ್ಮಣರು ಬಳಕೆಗೆ ತಂದ ಕಾರಣ ಇದಕ್ಕೆ ತುಳು ಲಿಪಿ ಎಂಬ ಹೆಸರು ಬಂದಿದೆ.ಇದನ್ನು ತುಳುನಾಡಿನ ಹೊರಭಾಗದಲ್ಲಿ ತಿಗಳಾರಿ ಎಂದು ಕರೆಯುತ್ತಾರೆ" ಎಂದು ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದಾರೆ.
 ತುಳು ಹಸ್ತ ಪ್ರತಿ ಗ್ರಂಥಗಳನ್ನು ಶೋಧನೆ ಮಾಡಿ‌ ಪ್ರಕಟಿಸಿರುವ ಡಾ.ವೆಂಕಟರಾಜ ಪುಣಿಚಿತ್ತಾಯರು ಆರ್ಯ ಎಳುತ್ತು ( ತಿಗಳಾರಿ ಲಿಪಿ) ಮತ್ತು ತುಳು ಲಿಪಿ ಒಂದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Copy rights reserved© Dr Lakshmi G Prasad

ಪ್ರಸ್ತುತ  ತಿಗಳಾರಿ ಲಿಪಿ/ತುಳು ಲಿಪಿಯನ್ನು ತುಳು ಭಾಷೆಯ ಲಿಪಿ ಎಂದು ಅನೇಕರು ತಪ್ಪು ತಿಳಿದಿದ್ದಾರೆ .ಹೆಸರು ತುಳು ಎಂದು ಇದ್ದ ಮಾತ್ರಕ್ಕೆ ಅದು ತುಳು ಭಾಷೆಯ ಲಿಪಿ ಎಂದಾಗುವುದಿಲ್ಲ.ಹಾಗೆಯೇ ತಿಗಳಾರಿ ಎಂಬ ಭಾಷೆ ಇದೆ‌.ಈ ಲಿಪಿಗೆ ತಿಗಳಾರಿ ಎಂಬ ಹೆಸರಿರುವುದಾದರೂ ಇದು ತಿಗಳಾರಿ ಭಾಷೆಯ ಲಿಪಿಯಲ್ಲ ‌.ಇದು ಸಂಸ್ಕೃತ ಭಾಷೆಯ ಬರವಣಿಗೆಗಾಗಿ ತಮಿಳು ಬ್ರಾಹ್ಮಣರು ರೂಪಿಸಿದ ಲಿಪಿ.
 ತಿಗಳಾರಿ ಲಿಪಿಗೆ ತುಳುನಾಡಿನಲ್ಲಿ  ಕೆಲವೆಡೆ ತುಳು ಲಿಪಿ ಎಂಬ ಹೆಸರಿರುವುದಾದರೂ ಅದು ತುಳುಭಾಷೆಯ ಲಿಪಿಯಲ್ಲ ಮತ್ತು ಪ್ರಸ್ತುತ ಅದು ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ‌.
ಹಾಗಾಗಿ ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ,ಮತ್ತು ಇದು ತುಳು ಭಾಷೆಯ ಬರವಣಿಗೆಗಾಗಿ ಬಳಕೆಗೆ ಬಂದ ಲಿಪಿಯಲ್ಲ .ಇದು ಸಂಸ್ಕೃತ ಭಾಷೆಯ ಬರವಣಿಗೆಗಾಗಿ ತಮಿಳರು ಬಳಕೆಗೆ ತಂದ ಲಿಪಿ  ಎಂದು ಸ್ಪಷ್ಟವಾಗಿ ಹೇಳಬಹುದು .ಇದರಲ್ಲಿ ಬಹುತೇಕ ಎಲ್ಲಾ ಕೃತಿಗಳೂ ಕೂಡ ವೇದ ಮಂತ್ರಗಳೇ ಆಗಿವೆ.ಪ್ರಾಚೀನ ಕಾಲದಲ್ಲಿ ವೇದಾಧ್ಯಯನ ವನ್ನು ಮಾಡುತ್ತಿದ್ದವರು ಬ್ರಾಹ್ಮಣರೇ ಆದ ಕಾರಣ   ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಈ ಲಿಪಿಯನ್ನು ಬಳಕೆಗೆ ತಂದವರು ಕೂಡ ಬ್ರಾಹ್ಮಣರೇ ಎಂದು ಸ್ಪಷ್ಟವಾಗುತ್ತದೆ‌.
Copy rights reserved© Dr Lakshmi G Prasad
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜು
ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ

ಮೊಬೈಲ್ 9480516684

10 comments:

  1. ತುಂಬ ಉಪಯುಕ್ತ ಮಾಹಿತಿ; ಸಂತೋಷವಾಯಿತು.

    ReplyDelete
  2. Nik adika prasanga burdhu bethe daala bele ijji

    ReplyDelete
    Replies
    1. ವಾ ಕಂಟ್ರಾ ಕುಟ್ಟಿ.ಈ
      ಮೂಜಿ ಕಾಸುದಾಯ.. ಈ ಅಪ್ಪೆ ಅಮ್ಮೆಗ್ ಪುಟ್ಡುನೆ ಅಂದಾಂಡ ನಿನ್ನ ಪುದರ್ ಅಡ್ಬರೆಸ್ರೆ ಪಾಎಉದು ಕಮೆಂಟ್ ಮಲ್ಪುಲ ,ಕಳುವೆ ಲೆಕ್ಕ ವಾವಾ ಪುದರ್ ಡ್ ಬರ್ಪುನೆ ಅತ್

      Delete
  3. This comment has been removed by the author.

    ReplyDelete
  4. ಒಂಜಿ ಯೆಡ್ಡೆ ಪ್ರಯೋಜನಕಾರಿಯಾಯಿನ ಮಾಹಿತಿನು ಕೊರ್ತರು..
    ಓದುದ್ ಮಸ್ತ್ ಸಂತೋಷ ಆಂಡ್..
    ಧನ್ಯವಾದ..

    ReplyDelete
  5. ಮೇಡಂ. ಅರವು ಭಾಷೆ ಬಗ್ಗೆ ತಿಳಿಸಿ

    ReplyDelete
  6. ಮೇಡಂ, ತಿಗಳಾರಿ(ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ ಅಧ್ಯಯನ -ಡಾ.ಲಕ್ಷ್ಮೀ ಜಿ ಪ್ರಸಾದ


    ( ಕರ್ನಾಟಕ ಇತಿಹಾಸ ಅಕಾಡೆಮಿಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ) ಇದು ಯಾವ ವರ್ಷ ಮಂಡಿಸಿದ್ದಾರೆ. ಇತಿಹಾಸ ದರ್ಶನದ ಎಷ್ಟನೇ ಸಂಪುಟದಲ್ಲಿ ಪ್ರಕಟವಾಗಿದೆ.

    ReplyDelete