Tuesday 25 April 2023

ನನ್ನೊಳಗೂ ಒಂದು ಆತ್ಮವಿದೆ..3 ಮಾನವೀಯತೆ ಮೆರೆದ ಪ್ರೇಮನಾಥ್ -3

 ನನ್ನೊಳಗೂ ಒಂದು ಆತ್ಮವಿದೆ..3


ಮಾನವೀಯತೆ ಮೆರೆದ ಪ್ರೇಮನಾಥ್ -3


 ಬಜಾಜ್ ಸ್ಪಿರಿಟ್ ನಲ್ಲಿ ಒಂದು ತಿಂಗಳು ಒಬ್ಬಳೇ ಓಡಾಡಿ ಅಭ್ಯಾಸವಾದ ನಂತರ ‌ಮಗನನ್ನು ಕೂರಿಸಿಕೊಂಡು ಓಡಾಡಲು ಶುರು ಮಾಡಿದೆ‌‌.ನಿದಾನಕ್ಕೆ ಡಬಲ್ ರೈಡ್ ಕೂಡ ಅಭ್ಯಾಸವಾಯಿತು.

ಈ ನಡುವೆ ಮಗನನ್ನು ಸಂಜೆ ಬೇಬಿ ಸಿಟ್ಟಿಂಗ್ ಗೆ ಬಿಡುವ ಬದಲು ಒಬ್ಬ ಹುಡುಗಿಯನ್ನು ಮನೆಗೆ ಬಂದು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ.ಅವಳು ಮಗ ಹಗಲಿ‌ನ ಹೊತ್ತು ಇರುತ್ತಿದ್ದ ಬೇಬಿ ಸಿಟ್ಟಿಂಗ್ / ಪ್ರಿಸ್ಕೂಲ್ ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.

ಹಾಗಾಗಿ  ಮೂರು ಗಂಟೆಗೆ ಚಿನ್ಮಯ ಶಾಲೆ ಬಿಟ್ಟ ನಂತರ ಮಗ ಮತ್ತು ಆ ಹುಡುಗಿ ಇಬ್ಬರನ್ನು ಗಾಡಿಯಲ್ಲಿ ಕೂರಿಸಿ ಮನೆಗೆ ಕರೆ ತರುತ್ತಾ ಇದ್ದೆ .

ಒಂದು ದಿನ ಹೀಗೆ  ಒಳಗಿನ  ಸಣ್ಣ ರಸ್ತೆಯಲ್ಲಿ  ಬರುತ್ತಿರುವಾಗ ಎದುರಿನಿಂದ  ಡ್ರೈವಿಂಗ್ ಕಲಿಯುತ್ತಿರುವವರ ಕಾರು ರಾಂಗ್ ಸೈಡಿನಿಂದ ಬಂತು.ಆಗ ಅದನ್ನು ತಪ್ಪಿಸುವ ಸಲುವಾಗಿ ತೀರಾ ಬದಿಗೆ ಹೋಗಿ ಸಮತೋಲನ ತಪ್ಪಿ ಬಿದ್ದೆ.ಮಗನನ್ನು ಮುಂದೆ ಕೂರಿಸಿದ್ದು ಅವನ ಎದುರುಗಡೆ ಅವನ ಊಟದ ಬ್ಯಾಗ್ ಇತ್ತು‌.ಅದು ಅವನ ಕಣ್ಣಿನ ಕೆಳಭಾಗಕ್ಕೆ ತಾಗಿ ದೊಡ್ಡ ಗಾಯವಾಗಿ ರಕ್ತ ಸುರಿಯತೊಡಗಿತು.ಮಗನ ತಲೆ ನನ್ನ ಹೊಟ್ಟೆಗ ತಾಗಿ ನನಗೂ ತುಂಬಾ ನೋವಾಗಿ ತಲೆ ಸುತ್ತುತ್ತಾ ಇತ್ತು.ಹಿಂದೆ ಕುಳಿತಿದ್ದ ಸಹಾಯಕಿ ಹುಡುಗಿಗೆ ಕಾಲಿಗೆ ಏಟು ಬಿದ್ದಿತ್ತು. ಆದರೆ ನನಗಿಂಗ ಒಳ್ಳೆಯ ಸ್ಥಿತಿ ಯಲ್ಲಿ ಇದ್ದಳು.ಅವಳು ಎದ್ದು ಮಗನನ್ನು ಎತ್ತಿಕೊಂಡಳು‌.ಕಾರಿನವರು ಹಿಂದೆ ನೋಡದೆ ಒಂದು ಕ್ಷಣ ಕೂಡ ನಿಲ್ಲಿಸದೆ ಹೊರಟು ಹೋಗಿದ್ದರು‌.ನಾವು ಬಿದ್ದಲ್ಲಿ ಸಮೀಪವೇ ಒಂದು ಸಣ್ಣ ತೊರೆ ಇತ್ತು.ಅದರ ಆ ಕಡೆಗೆ ಒಂದು ಮನೆ ಇತ್ತು.ನನ್ನ ‌ಮಗನ ಅಳು ಕೇಳಿದ ಅವರು ಕಾಲು ಪಾಪು( ಮರದ ಸಂಕ) ದಾಟಿ ಓಡಿ ಬಂದರು.ಅದು ತನಕ ಅವರ ಪರಿಚಯ ನನಗಿರಲಿಲ್ಲ.ಅವರು ಮಗನ ಕಣ್ಣಿನ ಕೆಳಭಾಗದ ಗಾಯ ನೋಡಿ ಕೂಡಲೇ ಹತ್ತಿರದ ವಿನಯ ಕ್ಲಿನಿಕ್ ಹಾಸ್ಪಿಟಲ್ ಗೆ ಹೋಗಲು ತಿಳಿಸಿದರು‌.ಆಗ ನಾನು ತುಸು ಹಿಂದೆ ಮುಂದೆ ನೋಡಿದೆ‌.ಯಾಕೆಂದರೆ ನನ್ನ ಬಳಿ ಹತ್ತು ಹದಿನೈದು ರುಪಾಯಿ ಮಾತ್ರ ಇತ್ತು ಅಷ್ಟೇ. ಅದನ್ನು ಅರ್ಥ ಮಾಡಕೊಂಡ ಪ್ರೇಮನಾಥ್ ( ಹೆಸರು ಸರಿಯಾಗಿ ನೆನಪಿಲ್ಲ, ಪ್ರೇಮನಾಥ್ ಎಂದು ನೆನಪು) ಅವರು ಅವರ ಮನೆಗೆ ಹೋಗಿ ಐದುನೂರು ರುಪಾಯಿ ನನಗೆ ತಂದು ಕೊಟ್ಟು ಒಂದು ಆಟೊ ತಂದು ನಮ್ಮ ಮೂವರನ್ನು ಆಟೊ ಹತ್ತಿಸಿ ಆಸ್ಪತ್ರೆಗೆ ಕಳಹಿಸಿಕೊಟ್ಟರು.

ಮಗನಿಗೆ ಸ್ಟಿಚ್ ಹಾಕಬೇಕಾಯಿತು‌.ನನಗೆ ಮತ್ತು ಸಹಾಯಕ ಹುಡುಗಿಗೆ ಪ್ರಥಮ ಚಿಕಿತ್ಸೆ ನೀಡಿದರು.ನಂತರ ಆಸ್ಪತ್ರೆ ಯಿಂದ ನಾನು ಹಸ್ಬೆಂಡ್ ಕೆಲಸ ಮಾಡುವ ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದೆ( ಆಗಿನ್ನೂ ಮೊಬೈಲ್ ನಮ್ಮ ಬಳಿ ಇರಲಿಲ್ಲ) ಅವರು ಬಂದರು .ಮತ್ತೆ ಮನೆಗೆ ಬಂದೆವು.ಮರುದಿನವೇ ಪ್ರೇಮನಾಥ್ ಅವರ ಮನೆಗೆ ಹೋಗಿ ಅವರು ಕೊಟ್ಟ ದುಡ್ಡನ್ನು ಹಿಂದಿರುಗಿಸಿ ಧನ್ಯವಾದಗಳನ್ನು ತಿಳಿಸಿದೆ.ಆಗ ಅವರು "ದುಡ್ಡನ್ನು ಇಷ್ಟು ಅರ್ಜೆಂಟಲ್ಲಿ ಕೊಡ ಬೇಕಾಗಿರಲಿಲ್ಲ, ಥ್ಯಾಂಕ್ಸ್ ಯಾಕೆ? ನಾವು ಮನುಷ್ಯರು ಪರಸ್ಪರ ಸಹಾಯಕ್ಕೆ ಬಾರದಿದ್ದರೆ ಮನುಷ್ಯರೆಂದು ಕರೆಯಲು ನಾಲಾಯಕ್ ಆಗಿ ಬಿಡುತ್ತೇವೆ‌‌.ಸಧ್ಯ  ನಿಮಗೆ‌ ಮೂವರಿಗೆ ದೊಡ್ಡ ಏಟೇನೂ ಬಿದ್ದಿಲ್ಲವಲ್ಲ ದೇವರ ದಯೆ.ಮುಂದೆ ಇನ್ನೂ ಜಾಗ್ರತೆಯಿಂದ ಗಾಡಿ ಓಡಿಸಿ "ಎಂದು ಹೇಳಿದರು‌.ಅವರ ಮನೆ ಮಂದಿ ಕೂಡ ನಮ್ಮ ಆರೋಗ್ಯ ವಿಚಾರಿಸಿ ಕಾಫಿ ಮಾಡಿ ಕೊಟ್ಟರು‌.ಅವರು ಕೊಟ್ಟ ಕಾಫಿ ಅವರ ಮನಸ್ಸಿನಂತೆಯೇ ತುಂಬಾ ರುಚಿಯಾಗಿತ್ತು.ಅದರ ಕೊನೆಯ ತೊಟ್ಟನ್ನು ಕೂಡ ಕುಡಿದು ಖಾಲಿ ಲೋಟ ಇಟ್ಟು ಮತ್ತೊಮ್ಮೆ ಧನ್ಯವಾದ ಹೇಳಿ ಕೈಮುಗಿದು ಹನಿ ಗಣ್ಣಿನಿಂದ ಹಿಂದಿರುಗಿದೆ.

ಅಂದಿನ ಐದುನೂರು ರುಪಾಯಿ ಇಂದಿನ ಹತ್ತು ಸಾವಿರ ರುಪಾಯಿಗಿಂತ ಹೆಚ್ಚಿನ ಮೌಲ್ಯ ಹೊಂದಿತ್ತು.ಅದು ತನಕ ನೋಡದ ತೀರಾ ಅಪರಿಚಿತಳಾದ ನನಗೆ  ಅವರಾಗಿಯೇ ತಂದು ಕೊಟ್ಟು ಆಟೋ ತಂದು ನಮ್ಮನ್ನು ಆಸ್ಪತ್ರೆ ಗೆ ಕಳಹಿಸಿಕೊಟ್ಟ ಅವರ ಮಾನವೀಯತೆಯನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ .ಮುಂದಿನ ಬಾರಿ ಊರಿಗೆ ಹೋದಾಗ ಅವರ ಮನೆಗೆ ಹೋಗಿ ಬರಬೇಕು ಎಂದು ಕೊಂಡಿರುವೆ.ಅವರು ಅಲ್ಲೇ ಇದ್ದಾರಾ ? ಅದು ಅವರ ಸ್ವಂತ ಮನೆಯಾ ? ಬಾಡಿಗೆಗೆ ಇದ್ದರಾ ? ಯಾವುದೊಂದು ಮಾಹಿತಿಯೂ ನನಗೆ ತಿಳಿಯದು.ಆದರೂ ಅವರನ್ನು ಭೇಟಿ ಮಾಡಲು ಯತ್ನ ಮಾಡುವೆ‌.ಅವರು‌ ಮತ್ತು ಅವರ ಕುಟುಂಬದವರು ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಹಾರೈಸುವೆ

2 comments:

  1. ಎಂದುರೋ ಮಹಾನುಭಾವರು ಅಂದರಿಕಿ ವಂದನಮುಲು!

    ReplyDelete