Thursday, 6 April 2023

ಪೆಟ್ಟಿಗೆ ಹೊತ್ತುಕೊಂಡು ನಡೆದೆ..ಕಮಟು ವಾಸನೆಯಿಂದ ಮುಕ್ತಿ ಪಡೆದೆ ..

 ನನಗೂ ಆತ್ಮವಿದೆ‌.ಅದಕೂ ಒಂದು ಕಥೆಯಿದೆ - 21 


ಪೆಟ್ಟಿಗೆ ಹೊತ್ತುಕೊಂಡು ನಡೆದೆ..ಕಮಟು ವಾಸನೆಯಿಂದ ಮುಕ್ತಿ ಪಡೆದೆ ..

ಒಂದನೆಯ ತರಗತಿಯನ್ನು ನಾನು ಮೀಯಪದವಿನ ವಿದ್ಯಾವರ್ಧಕ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆ.ನನ್ನ ಅದೃಷ್ಟಕ್ಕೆ ಬಹಳ ಒಳ್ಳೆಯ ಶಿಕ್ಷಕಿ ವೇದವಲ್ಲಿ ಟೀಚರ್ ನನಗೆ ಸಿಕ್ಕಿದ್ದರು.ನಾನು ಅಕ್ಷರಗಳನ್ನು ಉಲ್ಟಾ ಬರೆಯುತ್ತಿದ್ದೆ.ಬಹುಶಃ ಈಗ ಅದನ್ನು ಡಿಸ್ ಲೆಕ್ಸಿಯ ಎಂದು ಗುರುತಿಸುತ್ತಿದ್ದರೋ ಏನೋ..ಯಾಕೆ ನನಗೆ ಅಕ್ಷರವನ್ನು ನೇರ ಬರೆಯಲಾಗುತ್ತಿರಲಿಲ್ಲ ಎಂದು ಗೊತ್ತಿಲ್ಲ.ಎಲ್ಲ ಅಕ್ಷರಗಳನ್ನು ಬರೆಯುತ್ತಿದ್ದೆ.ಆದರೆ ಎಲ್ಲವೂ ತಲೆಕೆಳಗಾಗಿ ಇರುತ್ತಿದ್ದವು


ಇದನ್ನು ಸರಿ ಪಡಿಸಲು ನನ್ನ ಅಮ್ಮ ದೊಡ್ಡಮ್ಮನ ಮಗಳು ಅಕ್ಕ( ಅಕ್ಕು ) ಬಹಳಷ್ಟು ಪ್ರಯಾಸಪಟ್ಟಿದ್ದರು.ಸಾಕಷ್ಟು ಪೆಟ್ಟು ಕೂಡ ಬಿದ್ದಿತ್ತು ನನಗೆ.ಈ ನಡುವೆ ನಮ್ಮ ಶಿಕ್ಷಕಿ ಒಂದು ಉಪಾಯ ಕಂಡು ಹಿಡಿದರು

ಅಕ್ಷರದ ಆರಂಭದ ಸುಳಿಹಾಕಿ ಕೊಡುತ್ತಿದ್ದರು

ನಂತರ ಅದನ್ನು ಮುಂದುವರಿಸಿ ಸರಿಯಾಗಿ ಬರೆಯಲು ನನಗೆ ಬರುತ್ತಿತ್ತು.ಈ ಬಗ್ಗೆ ನನಗೆ ಸಹಾಯ ಮಾಡುವಂತೆ ಓರ್ವ ಜಾಣ ವಿದ್ಯಾರ್ಥಿನಿ ಶಾರದೆಗೂ ಹೇಳಿಕೊಟ್ಟರು.ವೇದವಲ್ಲಿ ಟೀಚರ್ ಅಥವಾ ಶಾರದೆ ನನಗೆ ಎಲ್ಲ ಅಕ್ಷರಗಳ ಆರಂಭದ ಸುಳಿ ಹಾಕಿ ಕೊಡುತ್ತಿದ್ದರು.


ಅದನ್ನು ಮುಂದುವರೆಸಿ ಹೇಗೋ ವರ್ಷವಾಗುವಷ್ಟರಲ್ಲಿ ಎಲ್ಲ ಅಕ್ಷರಗಳನ್ನು ಕಾಗುಣಿತವನ್ನು ಬರೆಯಲು ಕಲಿತಿದ್ದೆ.ಉಳಿದಂತೆ ಕಲಿಕೆಯಲ್ಲಿ ನಾನು ಜಾಣೆ ಇದ್ದೆ ಎಂದು ಕಾಣುತ್ತದೆ.ಬರೆಯಲು ಮಾತ್ರ ಸಮಸ್ಯೆ ಇತ್ತೇ ಹೊರತು ಓದಲು ಇರಲಿಲ್ಲ.ಪಟ ಪಟನೆ ಓದಿ ಮೆಚ್ಚುಗೆ ಗಳಿಸುತ್ತಿದ್ದುದು ಈಗಲೂ ನನಗೆ ನೆನಪಿದೆ

ವೇದವಲ್ಲಿ ಟೀಚರ್ ಈ ಒಂದು ಉಪಾಯ ಕಂಡು ಹಿಡಿಯದೇ ಇದ್ದರೆ ಬರೆಯಲು ಬಾರದ ಶತ ದಡ್ಡ ಹುಡುಗಿಯಾಗಿ ಒಂದನೇ ತರಗತಿಯಲ್ಲಿಯೇ ಫೇಲ್ ಆಗಿ ಬಿಡುತ್ತಿದ್ದೆನೋ ಏನೋ..ಆಗ ಒಂದನೇ ತರಗತಿಯಲ್ಲಿ ಕೂಡ ಫೇಲ್ ಮಾಡುತ್ತಿದ್ದರು.

ಒಂದನೇ ತರಗತಿ ಮುಗಿಯುವಷ್ಟರಲ್ಲಿ ಅಮ್ಮ ಸಣ್ಣ ತಮ್ಮ ಗಣೇಶನನ್ನು ಹೆತ್ತು ಬಾಣಂತನ‌ ಮುಗಿಸಿ ಹೊಸತಾಗಿ ಕಟ್ಟಿದ ನಮ್ಮ ಮನೆಗೆ ಹಿಂತಿರುಗಿದ್ದರು.


ಎರಡನೆಯ ತರಗತಿಯನ್ನು ನಾನು ಅಜ್ಜನ ಮನೆಯಲ್ಲಿ ಇದ್ದುಕೊಂಡು ಮೀಯಪದವು ಶಾಲೆಯಲ್ಲಿಯೇ ಮುಂದುವರಿಯಬಹುದಿತ್ತು.ಆದರೆ ಅಮ್ಮ ,ಅಣ್ಣ ಅಕ್ಕ‌ತಮ್ಮಂದಿರ ಜೊತೆಗಿನ ಆಟದ ಸೆಳೆತ ನನಗಿತ್ತು ಕಾಣಬೇಕು‌.ನಾನೇ ಹಠ ಮಾಡಿ ತಂದೆ ಮನೆ ಸಮೀಪದ ಕೋಳ್ಯೂರು ಶಂಕರನಾರಾಯಣ ದೇವಸ್ಥಾನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೆಯ ತರಗತಿಗೆ ಸೇರಿದ್ದೆ.

ಬಹುಶಃ ವಾತಾವರಣ ಬದಲಾಗಿಯೋ‌ ಇನ್ನೇನು ಕಾರಣವೋ ಗೊತ್ತಿಲ್ಲ.ನಾನಿಲ್ಲಿ ಸರಿಯಾಗಿ ಹೊಂದಿಕೊಂಡಿಲ್ಲವೇನೋ.ದಿನಾಲು ಎರಡನೆ ತರಗತಿಯ ಕೊಮ್ಮೆ ಮಾಸ್ಟ್ರ ಕೈಯಿಂದ ಪೆಟ್ಟು ತಿನ್ನುತ್ತಿದ್ದೆನಂತೆ.ಪೆಟ್ಟು ಬೀಳಲು ಮುಖ್ಯ ಕಾರಣ ತಡವಾಗಿ ಬರುವುದು ಆಗಿತ್ತಂತೆ.ಅದೃಷ್ಟವಶಾತ್ ಈ ಪೆಟ್ಟು ತಿನ್ನುತ್ತಿದ್ದ ವಿಚಾರ ನನಗೆ ಒಂದಿನಿತೂ ನೆನಪಿಲ್ಲ.ಬಾಲ್ಯದ ಸಹಪಾಠಿ ಗೆಳತಿ ಯಶೋಧೆ ಹೇಳಿ ನನಗೀ ವಿಚಾರ ನಾನು ಎಂಎ ಓದಿ ಕೆಲಸಕ್ಕೆ ಸೇರಿದ ನಂತರ ಗೊತ್ತಾಗಿತ್ತು.

ತಡವಾಗಿ ಬರುವುದಕ್ಕೆ ಏನು ಕಾರಣ ಎಂದು ನನಗೆ ಗೊತ್ತಿಲ್ಲ.


ಅದೇನೇ ಇದ್ದರೂ ದಿನಾಲು ಆರೇಳು ವರ್ಷದ ಎಳೆಯ ಹುಡುಗಿಗೆ ಹೊಡೆಯುವ ಬದಲು ಆಗಾಗ ಸಿಗುತ್ತಿದ್ದ ನನ್ನ ತಂದೆಯವರಲ್ಲಿ ಹೇಳಬಹುದಿತ್ತು.ಅಥವಾ ಬಂದು ಭೇಟಿ ಆಗುವಂತೆ ತಂದೆಯವರಿಗೆ ಚೀಟಿ ಬರೆದು ಕಳುಹಿಸಬಹುದಿತ್ತು‌.ಕೊಮ್ಮೆ ಮಾಸ್ಟ್ರು ಹಾಗೆ ಮಾಡದೆ ದಿನಾಲು ನನಗೇಕೆ ಹೊಡೆದರು ಎಂದು ನನಗೆ ಈವತ್ತಿಗೂ ಗೊತ್ತಾಗುತ್ತಿಲ್ಲ.ಇಷ್ಟಾದರೂ ನಾನು ಶಾಲೆಗೆ ಹೋಗುವುದಿಲ್ಕ ಎಂದು ಹಠ ಮಾಡದ್ದು ನಿಜಕ್ಕೂ ಅಚ್ಚರಿಯ ವಿಷಯ..ಬಹುಶಃ ಶಾಲೆಯ ಸೆಳೆತ ನನಗೆ ತುಂಬಾ ಇದ್ದಿರಬೇಕು.ತಡವಾಗಿ ಬಂದದ್ದಕ್ಕೋ ಇನ್ನೇನಕ್ಕೋ ಹೊಡೆಯುತ್ತಿದ್ದರೂ ಕೊನೆಯ ಅವಧಿಯಲ್ಲಿ ಪ್ರತಿ ದಿನ ಕೊಮ್ಮೆ ಮಾಸ್ಟ್ರು ರಸವತ್ತಾಗಿ ಅಭಿನಯದ ಮೂಲಕ ಹೇಳುತ್ತಿದ್ದ ರಾಮಾಯಣದ ಕಥೆ ನನ್ನನ್ನು ದಿನಾಲು ಶಾಲೆಗೆ ಬರುವಂತೆ ಮಾಡಿರಬಹುದು ಎಂದು ನನಗನಿಸುತ್ತದೆ.


ಈಗಲೂ ಅವರು ರಾಮಾಯಣದ ಕಥೆ ಹೇಳುತ್ತಿದ್ದುದು ಕಣ್ಣಿಗೆ ಕಟ್ಟುತ್ತಿದೆ ನನಗೆ.ರಾವಣಬಂದು ಶಿಬ ಧನುಸ್ಸನ್ನು ಎತ್ತಲು ಹೋಗಿ ಅದರಡಿಯಲ್ಲಿ ಸಿಕ್ಕಾಕೊಂಡದ್ದು.ಅಂಗದ ಸಂಧಾನದ ಸಂದರ್ಭದಲ್ಲಿ ಅಂಗದ ಬಾಲವನ್ನೇ ಸುರುಳಿಯಾಗಿ ಸುತ್ತಿ ರಾವಣನ ಸಿಂಹಾಸನಕ್ಕೆ ಸಮವಾಗಿ ಎತ್ತರಿಸಿ ಕುಳಿತದ್ದು..ಹೀಗೆ ಎಲ್ಲ ಕಥಾನಗಳನ್ನೂ ಅಭಿನಯ ಸಹಿತ ವಿವರಿಸಿದ್ದು ಅದನ್ನು ತನ್ಮಯತೆಯಿಂದ ಕೇಳುತ್ತಿದ್ದುದು ,ಶಾಲೆಯ ಮನೆಗೆ ಹೋಗುವ ಗಂಟೆ ಆಗಬಾರದೆಂದು ನಾನು ಬಯಸುತ್ತಿದ್ದುದು ನನಗೆ ನೆನಪಿದೆ.


ಎರಡನೆಯ ತರಗತಿಗೆ ಬಂದಾಗ ವಿಪರೀತ ಪೆನ್ಸಿಲ್ ಕಳೆದು ಹೋಗುತ್ತಿತ್ತು .ಹೆಚ್ಚು ಕಡುಮೆ ದಿನ ನಿತ್ಯ ತಂದೆ ಅಣ್ಣ ಅಕ್ಕ ಹೊಸ ಪೆನ್ಸಿಲ್ ತಂದು ಮೂರು ಭಾಗ ಮಾಡಿ ಒಂದು ತುಂಡನ್ನು ಕೊಡುತ್ತಿದ್ದರು.ಮನೆಗೆ ಹೋಗುವಷ್ಟರಲ್ಕಿ ಅಥವಾ ಶಾಲೆಯ ಅವಧಿಯಲ್ಲಿಯೇ ಅದನ್ನು ಕಳೆದು ಹಾಕುತ್ತಿದ್ದೆ.ಹೇಗೆ ಕಳೆದು ಹೋಗುತ್ತಿತ್ತು ಎಂದು ನನಗೆ ಗೊತ್ತಿಲ್ಲ.ಇಂದಿಗೂ ಕರ ವಸ್ತ್ರ ಪೆನ್ ಮೊದಲಾದವುಗಳನ್ನು‌ ಗೊತ್ತಿಲ್ಕದೆ ಬೀಳಿಸಿಕೊಂಡು ಕಳೆದು ಹಾಕುವ ಅಭ್ಯಾಸ ನನಗಿದೆ.ಆದರೆ ಎರಡನೆಯ ತರಗತಿಯಲ್ಲಾದದ್ದು ಮಾತ್ರ ಬಹುವಿಚಿತ್ರ.ಬಹುಶಃ ನನ್ನ‌ಮೈ ಮರವೆಯನ್ನು ಅರಿತ ಯಾರೋ ಸಮೀಪ ಕುಳಿತಿರುತ್ತಿದ್ದ ವಿದ್ಯಾರ್ಥಿ ತೆಗೆದು ತನ್ನ ಚೀಲದೊಳಗೆ ಬಾಕ ಸಹಜ ಅಸೆಯಿಂದ ಇಡುತ್ತಿದ್ದಿರಬಹುದು ಎಂದು ನನಗೆ ಈಗ ಅನಿಸ್ತದೆ.ಇದನ್ನು ಕೂಡ ಮಾಸ್ಟ್ರಿಗೆ ಪತ್ತೆ ಮಾಡಲು ಅವಕಾಶವಿತ್ತು.ಕಳೆದು ಹಾಕುದಕ್ಕೆ ನನಗೆ ಹೊಡೆದು ಬಡಿದು ಮಾಡುತ್ತಿದ್ದರೇ ಹೊರತು‌ ತರಗತಿಯೊಳಗೆ ಎಲ್ಲಿ ಮಾಯವಾಗುತ್ತದೆ ಎಂದು ಪತ್ತೆ ಮಾಡಲು ಯತ್ನ ಮಾಡಿಲ್ಲ ಎಂದೆನಿಸ್ತದೆ.


ಆ ಸಣ್ಣ ವಯಸ್ಸಿಗೆ ದಿನ ನಿತ್ಯ ಪೆಟ್ಟು ತಿಂದಾಗ ನನ್ನ‌ ಮನಸ್ಥಿತಿ ಹೇಗಿತ್ತು ? ಖಂಡಿತವಾಗಿಯೂ ಇತರ ಮಕ್ಕಳ ಎದುರು ಅವಮಾನ ಆಗಿರ್ತದೆ.ನೋವಾಗಿರುತ್ತದೆ.ಹಾಗಾಗಿ ಮನಸ್ಸು ಕುಗ್ಗಿ ಹೋಗಿದ್ದಿರಬಹುದು.ನಾನು ಮನೆಯಲ್ಲಿ ಹೇಳಲಿಲ್ಲವೇಕೆ  ? ಇಂದಿಗೂ ನನಗೆ ಗೊತ್ತಾಗುತ್ತಿಲ್ಕ  ಬಹುಶಃ ನನ್ನ ಶಾರ್ಟ್ ಟೆಂಪರ್ ಗೆ ಈ ಕಟು ಅನುಭವವೇ ಕಾರಣ ಆಗಿದ್ದಿರಬಹುದಾ ? ಇರಲೂ ಬಹುದೆನಿಸ್ತದೆ.


ವಾಸ್ತವದಲ್ಲಿ ಕೊಮ್ಮೆ ಮಾಸ್ಟ್ರು ನನಗೆ ಇಂದಿಗೂ ಪ್ರಿಯರೇ..ಹೊಡೆದಿದ್ದರೂ ಅದನ್ನು ಮರೆಸುವಷ್ಟು ಒಲವನ್ನೂ ಅವರು ತೋರಿರಬಹುದು.ಇಲ್ಲವಾಗಿದ್ದರೆ ಅವರ ಮೇಲೆ ನನಗೆ ಪ್ರೀತಿಯ ಬದಲು ದ್ವೇಷ ಇರುತ್ತಿತ್ತು.ನನಗೆ ದೊಡ್ಡವಳಾದ ನಂತರ ಯಶೋದೆ ಹೇಳಿದಾಗ ಹೊಡೆತ ತಿನ್ನುತ್ತಿದ್ದುದು ಚೂರು ನೆನಪಾಯಿತೇ ಹೊರತು ಮಾಸ್ಟ್ರ ಬಗ್ಗೆ ಕೋಪ ಉಂಟಾಗಿರಲಿಲ್ಲ


ಮೂರನೆಯ ತರಗತಿಗೆ ಬಂದಾಗ ಈರೋಡಿಯ ಗಣಪತಿ ಭಟ್ ನಮಗೆ ಮಾಸ್ಟ್ರಾಗಿದ್ದರು.ನಾಲ್ಕನೆಯ ತರಗತಿಯಲ್ಲಿ ವೇದೋಡಿ ನಾರಾಯಣ ಭಟ್ಟರು ಮಾಸ್ಟ್ರಾಗಿದ್ದರು.ಇವರಿಬ್ಬರಿಂದ ಒಂದೇ ಒಂದು ಏಟನ್ನು ನಾನು ತಿಂದಿಲ್ಲ‌.ಬಹುಶಃ ಕಲಿಕೆಯಲ್ಲಿ ಮುಂದೆ ಇದ್ದುದರ ಜೊತೆಗೆ ಶಾಲೆಗೆ ಒಬ್ಬಳೇ ಬರಲು ಅಭ್ಯಾಸವಾಗಿ ಸಮಯಕ್ಕೆ ಸರಿಯಾಗಿ ಬಂದಿರಬಹುದು.

ಎರಡನೇ ತರಗತಿಗೆ ನಾನು ಹೊಸತಾಗಿ ಸೇರಿದ ಕಾರಣ ನನ್ನನ್ನು ಪಕ್ಕದ ಮನೆಯವರೋ ಅಥವಾ ಕೆಲಸದವರೋ ಕರೆದುಕೊಂಡು ಬರುತ್ತಿದ್ದರೆಂದು ನೆನಪು.ಹಾಗಾಗಿ ಅವರ ಸಮಯ ಕಾದು ಬರಬೇಕಾಗಿದ್ದ ಕಾರಣ ತಡವಾಗುತ್ತಿತ್ರೆಂದು ಕಾಣುತ್ತದೆ.ನಂತರ ಒಬ್ಬಳೇ ಬರಲು ಅಭ್ಯಾಸವಾಗಿ ಸಮಯಕ್ಕೆ ಸರಿಯಾಗಿ ಬಂದಿರಬಹುದು

ಈ ಸಮಯದಲ್ಲಿ ಕಾಡಿದ ಗಂಡಮಾಲೆ ಎಂಬ ಕ್ಯಾನ್ಸರ್ ಇರಬಹುದು ಎಂದು ನಮ್ಮ ಊರಿನ ವೈದ್ಯರಾದ ಬರೆ ಡಾಕ್ಟರು ಊಹಿಸಿದ್ದ ಖಾಯಿಲೆ ಮಾತ್ರ ಬಹಳ ಕಾಡಿತ್ತು ನನಗೆ‌

ಐದನೇ ತರಗತಿಗೆ ಮತ್ತೆ ನಾನು ಅಜ್ಜನ‌ಮನೆಯಲ್ಲಿ ಉಳಿದುಕೊಂಡು ಮೀಯಪದವಿನ ವಿದ್ಯಾವರ್ಧಕ ಶಾಲೆಗೆ ಸೇರಿದೆ.ಈ ಸಮಯಕ್ಕಾಗುವಾಗ ಆಯುರ್ವೇದ ವೈದ್ಯರಾದ ಕೊಡಂಗೆ ಭೀಮ ಭಟ್ಟರ ಚಿಕಿತ್ಸೆಯಲ್ಲಿ ಗಂಡ ಮಾಲೆ ಸಂಪೂರ್ಣ ಗುಣವಾಗಿತ್ತು.


ಇಲ್ಲಿಂದ ನನ್ನ ಬದುಕು ಬಣ್ಣಮಯವಾಯಿತು.ವಿದ್ಯಾರ್ಥಿಗಳನ್ನು ಬಹಳ ಪ್ರೀತಿಯಿಂದ ಕಾಣುವ ಶಿಕ್ಷಕ ವರ್ಗ ನನ್ನಲ್ಲಿ ಜೀವನೋತ್ಸಾಹ ಹುಟ್ಟಿಸಿರಬೇಕೆನಿಸ್ತದೆ.

ಬಹಳ ಅತ್ಯುತ್ಸಾಹ ನನಗಿತ್ತು.ಇದೇ ನನಗೆ ಮುಳುವಾಯಿತಾ ? ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಗಳಿಸಿ ಕಟೀಲು ಕಾಲೇಜಿನ ವಾರ್ಷಿಕೋತ್ಸವದಲ್ಲಿ ವಿಠಲ ಆಚಾರ್ಯ ಸ್ಮಾರಕ ಚಿನ್ನದ ಪದಕವನ್ನು ಸ್ವೀಕರಿಸಿದ ಸಂದರ್ಭದಲ್ಲಿ ನನ್ನ ಸಂಕ್ಷಿಪ್ತ ಪರಿಚಯವನ್ನು ಮಾಡಿದ ನನ್ನ ಎಂಎ ತರಗತಿಯ ಗುರುಗಳಾಗಿದ್ದ ಪ್ರೊ ನಾಗರಾಜ ಭಟ್ ಅವರು ಕೊನೆಗೆ ಇವರ ಅತ್ಯುತ್ಸಾಹವೇ ಇವರಿಗೆ ಮುಳುವಾಗಬಹುದೋ ಏನೋ ಎಂಬ ಸಂದೇಹವನ್ನು ತೋರಿ ಉತ್ತಮ ನಾಗರಿಕತ್ವ ದೊರೆಯಲಿ ಎಂದು ಶುಭ ಹಾರೈಸಿದ್ದರು‌.ಆಗ ನನಗೂ 23 ರ ಸಣ್ಣ ವಯಸ್ಸು.ಹಾಗಾಗಿ ಅವರ ಹಾರೈಕೆಯಲ್ಲೂ ಕುಹಕವೇ ನನಗೆ ಕಾಣಿಸಿತ್ತು.ಮೊದಲೇ ಅಂತರ್ಮೌಲ್ಯ ಮಾಪನ ಅಂಕದ ವಿಷಯದಲ್ಲಿ ಅವರೊಂದಿಗೆ ತಗಾದೆ ಆದದ್ದೂ ಇದಕ್ಕೆ ಕಾರಣ ಇರಬಹುದು.

ಈಗ ಅವರು ಹೇಳಿದ್ದರಲ್ಲಿ ಸತ್ಯಾಂಶ ಇದೆ ಎಂದು ಕಾಣುತ್ತದೆ ನನಗೆ.


ನಾನು ಏಳನೆಯ ತರಗತಿ ಓದುತ್ತಿದ್ದಾಗ ನನ್ನ ಅಕ್ಕನಿಗೆ ಮದುವೆಯಾಯಿತು.ಹಾಗಾಗಿ ನಾನು ಎಂಟನೇ ತರಗತಿಯನ್ನು ತಂದೆ ಮನೆಯಲ್ಲಿ ಇದ್ದುಕೊಂಡು ವಾಣಿವಿಜಯ ಪ್ರೌಢ ಶಾಲೆಯಲ್ಲಿ ಓದುವುದು ಅನಿವಾರ್ಯ ಆಯಿತು.ಬಹಲ ಮಡಿ ಮೈಲಿಗೆ ಇದ್ದ ಕಾಲವದು.ಅಮ್ಮ ಮುಟ್ಟದಾಗ ಅಡಿಗೆ ಮತ್ತಿತರ ಕೆಲಸಕ್ಕೆ ನಾನು ತಂದೆ ಮನೆಯಲ್ಲಿರುವುದು ಅಗತ್ಯವಾಗಿತ್ತು.ತಮ್ಮಂದಿರು ಚಿಕ್ಕವರು.ಅಣ್ಣ ವೇದ ಕಲಿಕೆಗಾಗಿ ಕುಂಭ ಕೋಣಂ ವೇದ ಪಾಠ ಶಾಲೆಗೆ ಸೇರಿದ್ದ.ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋದಾಗ ಮನೆಯಲ್ಲಿ ನಾನೇ ಹಿರಿ ಮಗಳು.ಅದು ತನಕ ಅಜ್ಜನ‌ಮನೆಯಲ್ಲಿ ಸ್ವಚ್ಛಂದವಾಗಿದ್ದ ನನಗೆ ಅಮ್ಮ ಮುಟ್ಟಾದಾಗ ಅಡುಗೆ ಮಾಡಿ ಶಾಲೆಗೆ ಹೋಗಿ ಬರುವುದು ಬಹಳ ಕಷ್ಟ ಎನಿಸಿತ್ತು‌.ಜೊತೆಗೆ ಅಮದಮನಿಗೆ ಮುಟ್ಟಾದಾಗ ಕಾಡುತ್ತಿದ್ದ ತೀವ್ರ ತಲೆ ನೋವಿನ ಸಮಸ್ಯೆಯೂ ನನ್ನನ್ನು ತೀವ್ರ ಆತಂಕಕ್ಕೆ ಈಡು ಮಾಡಿತ್ತು.ಆಗ ಬರೆ ಡಾಕ್ಟ್ರೇ ನಮ್ಮ ಊರಿಗೆ ಧನ್ವಂತರಿ.ಅವರ ಮದ್ದಿನಲ್ಲಿ ಅಮ್ಮನಿಗೆ ತಲೆನೋವಿನ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ.ನಾನು ಪಿಯುಸಿ ಓದುವಾಗ ಮಂಗಳೂರಿನ ನರರೋಗ ತಜ್ಞ ಶಂಕರ ಭಟ್ ? ( ಹೆಸರು ಸರಿಯಾಗಿ ನೆನಪಿಲ್ಲ) ಬಳಿಗೆ ಅಮ್ಮನನ್ನು ಕರೆದುಕೊಂಡು ಹೋಗಿದ್ದೆ.ಅವರು ನೀಡಿದ ಟ್ಯಾಬ್ಲೆಟ್ ಒಂದು ದುಷ್ಪರಿಣಾಮದಿಂದ ಅಮ್ಮನಿಗೆ ಉಸಿರಾಟದ ತೊಂದರೆಯೂ ಕಾಡತೊಡಗಿತ್ತು.ಅಮ್ಮನಿಗೆ ಈ ತಲೆನೋವಿನ ಸಮಸ್ಯೆ ಗರ್ಭ ಕೋಶ ತೆಗೆದು ಹಾಕಿದ ನಂತರ ಹೊರಟು ಹೋಯಿತು.ಅಮ್ಮ ತನ್ನ ಹನ್ನೆರಡನೆಯ ವಯಸ್ಸಿನಿಂದ ಸುಮಾರು ಐವತ್ತೈದು ವಯಸ್ಸನವರೆಗೂ ತೀವ್ರ ತಲೆ ನೋವಿನ ಸಮಸ್ಯೆಯ ಜೊತೆಗೆ ಬದುಕಬೇಕಾಗಿ ಬಂದಿತ್ತು.ನಂತರ ಮೆನೋಪಾಝ್ ನ ಸಮಸ್ಯೆಗೊಳಗಾಗಿ ತೀವ್ರ ರಕ್ತಸ್ರಾವದ ಕಾರಣಕ್ಕೆ ಗರ್ಭ ಕೋಶವನ್ನು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರಾದ ಡಾ.ಮಾಲತಿ ಭಟ್ ತೆಗೆದು ಹಾಕಿದ್ದರು.ನಂತರ ಅಮ್ಮನಿಗೆ ಮುಟ್ಟಿನ ಸಮಯದಲ್ಲಿ ಕಾಡುತ್ತಿದ್ದ ತೀವ್ರ ತಲೆನೋವಿನಿಂದ ಮುಕ್ತ ದೊರಕಿತ್ತು

ಅಕ್ಕನ ಮದುವೆಯ ನಂತರ ನಾನು ತಂದೆ ಮನೆಯಿಂದ ವಾಣಿವಿಜಯ ಪ್ರೌಢಶಾಲೆಯಲ್ಲಿ ಓದನ್ನು ಮುಂದುವರಿಸಿದೆ

ಇಲ್ಲಿ ಮೀಯಪದವು ಶಾಲೆಯಲ್ಲಿ ಸಿಕ್ಕಷ್ಟು ಪ್ರೋತ್ಸಾಹ ನನಗೆ ಸಿಗಲಿಲ್ಲ.

ಇಲ್ಲಿ ಆರನೇ ತರಗತಿಯಿಂದಲೇ ಓದುತ್ತಿದ್ದ ಜಾಣ ವಿದ್ಯಾರ್ಥಿಗಳಾದ ಸುಮಂಗಲ ನಿಶಾ,ವಿಜಯ,ಪ್ರಮೋದ್ ಸೂರ್ಯನಾರಾಯಣ ಮೊದಲಾದವರು ಸಹಜವಾಗಿಯೇ ಇಲ್ಲಿನ ಶಿಕ್ಷಕರಿಗೆ ಪ್ರೀತಿ ಪಾತ್ರರಾಗಿದ್ದರು.ಬಹುಶಃ ನನ್ನ ಅತ್ಯುತ್ಸಾಹ ಇಲ್ಲಿನ ಶಿಕ್ಷಕರಿಗೆ ಉದ್ಧಟತನದಂತೆ ಕಾಣಿಸಿರಬಹುದು.ಹಾಗಾಗಿ ನನ್ನ ಬಗ್ಗೆ ತುಸು ಇಲ್ಲಿನ ಶಿಕ್ಷಕರು ಪೂರ್ವಗ್ರಹದಿಂದ ವರ್ತಿಸುತ್ತಿದ್ದರೆಂದು ನನಗೆ ಅನಿಸ್ತದೆ.ಎಲ್ಲರೂ ಅಲ್ಲ.ಕೆಲವರು.

ಇಲ್ಲಿನ ಕನ್ನಡ ಟೀಚರ್ ಸುಲೋಚನ ನನಗೆ ಬಹಳ ಇಷ್ಟದವರಾಗಿದ್ದರು.ಆದರೆ ಒಂದು ನಾನು ಮಾಡಿರದ ತಪ್ಪಿನ ಆರೋಪ ನನ್ನ ಮೇಲೆ ಬಂತು.

ಅದು ಬಹುಶಃ ಒಂಬತ್ತನೇ ತರಗತಿಯ ಮಧ್ಯಾವಧಿ ಪರೀಕ್ಷೆ.

ಬೆಳಗ್ಗೆ ಚರಿತ್ರೆ ಪರೀಕ್ಷೆ ಇತ್ತು ಮಧ್ಯಾಹ್ನ ಮೇಲೆ ಭೂಗೋಳಶಾಸ್ತ್ರ ಪರೀಕ್ಷೆ ಇತ್ತು ( ಕೇರಳದಲ್ಲಿ ಒಟ್ಟು ಹನ್ನೆರಡುವಿಷಯಗಳ ಪರೀಕ್ಷೆ ಇತ್ತು.ವಿಜ್ಞಾನದಲ್ಲಿ ಭೌತಶಾಸ್ತ್ರ,ರಸಾಯನಶಾಸ್ತ್ರ ,ಜೀವ ಶಾಸ್ತ್ರ,ಸಮಾಜದಲ್ಲಿ ಚರಿತ್ರೆ ಮತ್ತು ಭೂಗೋಳ ಶಾಸ್ತ್ರ ,ಗಣಿತ ಎರಡು ಪತ್ರಿಕೆಗಳು ,ಇಂಗ್ಲಿಷ್ ಎರಡು ಪತ್ರಿಕೆ ಕನ್ನಡ ಎರಡು ಪತ್ರಿಕೆಗಳು,ಹಿಂದಿ ಭಾಷಾ ಪತ್ರಿಕೆ ಒಂದು ಹೀಗೆ ಒಟ್ಟು ಹನ್ನೆರಡು ಪರೀಕ್ಷೆಗಳಿದ್ದವು) 

ಭೂಗೋಳ ಪರೀಕ್ಷೆ ಆಗುವಾಗ ನನ್ನ ಒಂದು ನೋಟ್ಸ್ ಡೆಸ್ಕ್ ಒಳಗೆ ಉಳಿತ್ತು.ಬಹುಶಃ ನಾನು ಓದಿ ಕೆಳಗೆ ಇರಿಸಲು ಮರೆತಿದ್ದೆನೋ ಅಥವಾ ಬೇರೆ ಯಾರಾದರೂ ತಪ್ಪಿ ಓದಲೆಂದು ತೆರೆದು ಅದು ಅವರ ನೋಟ್ಸ್ ಅಲ್ಕವೆಂದು ವೆಂದು ಒಳಗೆ ಇರಿಸಿದ್ದರೋ,ಪರೀಕ್ಷೆಯ ದಿನ ನಮ್ಮ ಚೀಲ ಪುಸ್ತಕಗಳನ್ನೆಲ್ಲ ನಾವು ಕುಳಿತಿರುವಲ್ಲಿಯೇ ಬೆಂಚಿನ ಕೆಳಭಾಗ ಇರಿಸ್ತಿದ್ದೆವು.

ಕೊನೆಯ ಗಳಿಗೆಯ ಓದಿನಲ್ಲಿ ಗಡಿಬಿಡಿಯಾಗಿ ಒಂದು ನೋಟ್ಸು ಪುಸ್ತಕವಂತೂ ಡೆಸ್ಕ್ ಒಳಗೆ ಉಳಿದದ್ದು ಪರೀಕ್ಷೆ ಶುರುವಾಗುವ ಮೊದಲು ನನ್ನ ಗಮನಕ್ಕೆ ಬಂದಿರಲಿಲ್ಲ.

ಈ ನಡುವೆ ಒಂದು ಜಿರಳೆ ಮರಿ ನಾನು ಬರೆಯುತ್ತಿದ್ದ ಡೆಸ್ಕ್ ನ ಒಳಭಾಗ ಓಡಾಡುತ್ತಿತ್ತು.ನನಗೂ ಜಿರಳೆಗೂ ಆಜನ್ಮ ವೈರತ್ವ ಇದೆ.ನನಗೆ ಜಿರಳೆ ನೋಡಿದರಾಗದು.ನಾನು ಜಗತ್ತಿನಲ್ಲಿ ಹೆದರುವ ಒಂದೇ ಒಂದು ವಿಷಯ ಜಿರಳೆ.

ಈ ಜಿರಳೆ ಮರಿ ನನ್ನ‌ಮೈಗೆಲ್ಲಿ ಹತ್ತುತ್ತೋ ಎಂಬ ಆತಂಕದಲ್ಲಿ ನಾನು ಆಗಾಗ ಡೆಸ್ಕ್ ಒಳಗೆ ನೋಡುತ್ತಿದ್ದೆ.

ನನ್ನ ಈ ವರ್ತನೆ ಪಕ್ಕದ ಕೊಠಡಿಯಲ್ಲಿ ಇನ್ವಿಜಿಕೇಷನ್ ಮಾಡುತ್ತಿದ್ದ ಕೆಮೆಸ್ಟ್ರಿ ಮಾಸ್ಟ್ರು ಸುಬ್ರಹ್ಮಣ್ಯ ಭಟ್ ಗೆ ಸಂಶಯ ಉಂಟು ಮಾಡಿತು.ಅವರು ಪಕ್ಕದ ಕೊಠಡಿಯಲ್ಲಿದ್ದರೂ ಕೊಠಡಿಯನ್ನು ಬೇರ್ಪಡಿಸಿದ್ದ ತಡಿಕೆಯ ನಡುವಿನ ಸಣ್ಣ ತೂತಿನಲ್ಲಿ ನಮ್ಮ ಕೊಠಡಿಯನ ಮೇಲೆ ಕಣ್ಣಿರಿಸಿದ್ದರಂತೆ‌.ನಮ್ಮ‌ಕೊಠಡಿಯಲ್ಲಿ ಬಹಳ ಪಾಪದ ಮಾಸ್್ಟರೆಂದೇ ಹೆಸರಾದ ಕನ್ನಡ ಪಂಡಿತರೆಂಬ ಖ್ಯಾತಿಯ ವಿಘ್ನರಾಜ ಭಟ್ಟರಿದ್ದರಿದ್ದರು.ಬಹುಶಃ ನಡುವೆ ರಿಲೀವಿಂಗ್ ಗೆ ಬರಲಿದ್ದ ಸುಲೋಚನ ಟೀಚರ್ ಗೆ ಕೆಮೆಸ್ಟ್ರಿ ಮಾಸ್್ಟ್ರು ನನ್ನ ಡೆಸ್ಕ್ ತಪಾಸಣೆ ಮಾಡಲು ಸೂಚನೆ ಕೊಟ್ಟಿದ್ದರು.( ಇದೆಲ್ಲ ನಂತರ ನನಗೆ  ಗೊತ್ತಾಯಿತು) 

ಸುಲೋಚನ ಟೀಚರ್ ಬಂದು ನೋಡುವಾಗ ಡೆಸ್ಕ್ ಒಳಗೆ ಭೂಗೋಳ ಶಾಸ್ತ್ರ ಎಂಬ ಹೆಸರಿದ್ದ ನನ್ನ ನೋಟ್ಸ್ ಸಿಕ್ತು.

ಕೂಡಲೇ ನನ್ನನ್ನು ಅಲ್ಲಿಯೇ ಕಳ್ಳಿ ಸುಳ್ಳಿ ಇತ್ಯಾದಿ ಏನೇನೋ ಬೈದು ಹಂಗಿಸಿ ನನಗೆ ಎಲ್ಕರ ಎದುರು ಅವಮಾನ ಮಾಡಿದ್ದರು‌.ಪೆಟ್ಟು ಬಿದ್ದಿತ್ತೋ ಇಲ್ವೋ ನೆನಪಿಲ್ಲ.ಪೆಟ್ಟು ಕೊಟ್ಟಿದ್ದರೂ ನನಗೆ ಬೇಸರ ಇರಲಿಲ್ಲ..ಸತ್ಯಾಸತ್ಯತೆಯನ್ನು ವಿಚಾರಿಸದೆ ನೋಡಿ ಬರೆದಿದ್ದೇನೆಂಬ ಆರೋಪ ಮಾಡಿ ಕೇವಕ ಆ ವಿಷಯದಲ್ಲಿ ಬೈಯದೆ ಕಳ್ಳಿ ಸುಳ್ಳಿ ಕುಳ್ಳಿ ಇತ್ಯಾದಿ ಬೈದದ್ದು ಇದೆಯಲ್ಲ..ನನಗದು ಇಂದಿಗೂ ಮರೆಯಲಾಗದ ಅನುಭವ..

ಪರೀಕ್ಷೆ ಮುಗಿದ ನಂತರ ಸಮಾಜ ಶಾಸ್ತ್ರ ಪಾಠ ಮಾಡುತ್ತಿದ್ದ ನಾಗಪ್ಪ ಮಾಸ್್ಟರಲ್ಲಿ ಹೋಗಿ ಇರುವ ವಿಷಯ ಹೇಳಿದೆ.ಅವರಿಗೆ ವಿಷಯ ಮನದಟ್ಟಾದರೂ ಕಿರಿಯ ಶಿಕ್ಷಕರಾಗಿದ್ದವರಲ್ಲಿ ಮಾತನಾಡಲು ಅಳುಕಿರಬೇಕು.

ಅಲ್ಲಿ ಒಂದು ವಿಚಾರ ಇತ್ತು.ಆ ನೋಟ್ಸ್ನ ಹೊರ ಪುಟದಲ್ಲಿ ಭೂಗೋಳ ಶಾಸ್ತ್ರ ಎಂದು ಬರೆದಿದ್ದರೂ ಒಳಗೆ ಚರಿತ್ರೆಯ ನೋಟ್ಸ್ ಇತ್ತು‌ಭೂಗೋಳದ ನೋಟ್ಸ್ ಅದಾಗಿರಲಿಲ್ಲ.ಈ ವಿಷಯವನ್ನು ನಾನು ಹೇಳಿದಾಗ ಬೆಳಿಗ್ಗೆಯ ಚರಿತ್ರೆ ಪರೀಕ್ಷೆಗೆ ನೋಡಿ ಬರೆಯಲು ಇರಿಸಿದ ಪುಸ್ತಕ ,ಬೆಳಗ್ಗೆ ನೋಡಿ ಬರೆದಿದ್ದಿ ಎಂಬ ಆಧಾರ ರಹಿತ ವಿತ್ತಂಡವಾದ ಶಿಕ್ಷಕರಿಂದ ಶುರು ಆಯಿತು.

ಬಹುಶಃ ಜೀವನದಲ್ಲಿ ಮೊದಲ ಬಾರಿ ನನ್ನದಲ್ಲದ ತಪ್ಪಿಗೆ ತೀವ್ರ ಅವಮಾನಕ್ಕೀಡಾದೆ.ನನಗೆ ಈಗಲೂ ಅನಿಸುದು..ಒಂದೊಮ್ಮೆ ಅವರ ಗ್ರಹಿಕೆಯಂತೆ ಪರೀಕ್ಷೆಯಲ್ಲಿ ನೋಡಿ ಬರೆಯಲು ಯತ್ನ ಮಾಡಿದ್ದು ( ನೋಡಿ ಬರೆಯಲು ನೋಟ್ಸ್ ಅ ವಿಷಯದ್ದಾಗಿರಲಿಲ್ಲ‌ಹಾಗಾಗಿ ನೋಡಿ ಬರೆದಿಲ್ಲ ಎಂದವರೇ ಒಪ್ಪಿಕೊಂಡಿದ್ದರು) ಅಂತಹ ಅಕ್ಷಮ್ಯ ಅಪರಾಧವೇ? ಆ ವಿಷಯಕ್ಕೆ ಮಾತ್ರ ಬೈದು ಬುದ್ದಿ ಹೇಳಿದ್ದರೆ ಸಾಕಿತ್ತಲ್ಲವೇ ? ಕಳ್ಳಿ ಸುಳ್ಳಿ ಇತ್ಯಾದಿ ಹೀಯಾಳಿಸುವ ಅಗತ್ಯವಿತ್ತೇ? ಇಷ್ಟಕ್ಕೂ ಅದು ಪಬ್ಲಿಕ್ ಪರೀಕ್ಷೆಯಾಗಿರಲಿಲ್ಲ.ಅಂತಿಮ ಪರೀಕ್ಷೆಯೂ ಆಗಿರಲಿಲ್ಲ.ಮಧ್ಯಾವಧಿ ಪರೀಕ್ಷೆ ಆಗಿತ್ತದು.

ಇಲ್ಲಿಂದ ಈ ಶಾಲೆಯ ಶಿಕ್ಷಕರೆಲ್ಲರೂ ನನ್ನನ್ನು ಖಳನಾಯಕಿಯಂತೆ ಬಹು ದುಷ್ಟೆಯಂತೆ ಪರಿಗಣಿಸಿದರು.ನನಗೆ ಹೆಜ್ಜೆ ಹೆಜ್ಜೆಗೆ ಬೈದು ಅವಮಾನಿಸಿದ್ದರು.ಇದು ಎಷ್ಟೆಂದರೆ ವಿದ್ಯಾರ್ಥಿಗಳಲ್ಲೂ ನನ್ನ ಬಗ್ಗೆ ಹೀನಾಯಭಾವ ಉದಿಸಿರಬೇಕು

ಹತ್ತನೆಯ ತರಗತಿ ಮುಗಿಯುತ್ತಾ ಬಂದು ಪರೀಕ್ಷೆಗೆ ಒದಲು ರಜೆ ಕೊಡುವ ಮೊದಲು ಒಂದು ದಿನ ಕೆಮೆಸ್್ಟ್ರು ಮಾಸ್ಟ್ರು  ನಮ್ಮ ತರಗತಿಯಲ್ಲಿ ಯಾರೆಲ್ಲ ಹತ್ತನೆಯ ತರಗತಿಯಲ್ಲಿ ಪಾಸಾಗಬಹುದು ಎಂದು ಉಮಾ ಳಲ್ಲಿ ಕೇಳಿದರು.

ಅವಳು ಸುಮಂಗಲ, ವಿಜಯ ನಿಶ ಸೂರ್ಯ ನಾರಾಯಣ,ಪ್ರಮೋದ ಮೊದಲಾದ ತರಗತಿಯಲ್ಲಿ ಮೊದಲ ಹತ್ತು ರ‌್ಯಾಂಕ್ ಪಡೆಯುತ್ತಿದ್ದ ವಿದ್ಯಾರ್ಥಿಗಳ ಹೆಸರು ಹೇಳಿದ್ದಳು.ತರಗತಿಯಲ್ಲಿ ಸಾಮಾನ್ಯವಾಗಿ ಎರಡನೆಯ ಮೂರನೆಯ ರ‌್ಯಾಂಕ್ ತೆಗೆಯುತ್ತಿದ್ದ ನನ್ನ ಹೆಸರು ಹೇಳಿರಲಿಲ್ಲ.ಬಹುಶಃ ಆಗ ಕೆಮೆಸ್್ಟ್ರಿ ಮಾಸ್ಟ್ರಿಗೇ ಅಚ್ಚರಿ ಆಗಿಬೇಕು‌ನನ್ನಲ್ಲಿ ನೀನು ಪಾಸಾಗುವ ನಂಬಿಕೆ ಇಲ್ವ? ಎಂದು ನನ್ನಲ್ಲಿ ಕೇಳಿದ್ದರು.ನಾನು ಪಾಸಾಗ್ತೇನೆ ಎಂದು ಆತ್ಮ ವಿಶ್ವಾಸದಲ್ಲಿ ಹೇಳಿದ್ದೆ.

ಹತ್ತನೆಯ ಪಬ್ಲಿಕ್ ಪರೀಕ್ಷೆಯಲ್ಲಿ ಆ ಕಾಲಕ್ಕೆ ಉತ್ತಮ ಎನಿಸಿದ ಅಂಕಗಳನ್ನು ಗಳಿಸಿ ಶಾಲೆಗೆ ಎರಡನೆಯ  ಸ್ಥಾನ ಪಡೆದಿದ್ದೆ.ಮೊದಲ ಸ್ಥಾನ ಸುಮಂಗಲ ಗಳಿಸಿದ್ದಳು.

ಇದೊಂದು ವಿಚಾರ ಹೇಳಿದರೆ ಇಲ್ಲಿನ ನನ್ನ ಶಿಕ್ಷಕರಿಗೆ ಬೇಸರವಾಗಬಹುದೋ ಏನೋ ಆದರೆ ಈ ಶಿಕ್ಷಕರ ನಿರ್ಲಕ್ಷ್ಯ ಅವಜ್ಞೆಯನ್ನು ಮುಚ್ಚಿಟ್ಟು ಆತ್ಮ ಕಥೆಯನ್ನು ಬರೆಯುವುದು ವಂಚನೆ ಎಂದೆನಿಸಬಹುದು

ಇಲ್ಲಿ ನಮ್ಮನ್ನೆಲ್ಲ ನಾಲಾಯಕ್ ಗಳು ಎಂದು ಪರಿಗಣಿಸಿದ್ದಿರಬೇಕು.ಹಳ್ಳಿ ಹುಡುಗಿಯರಲ್ವೇ? ಪುರೋಹಿತರ ಇಲ್ಲವೇ ಅಡಿಗೆ ಭಟ್ರ ಅಥವಾ ಕೃಷಿಕನ ಮದುವೆಯಾಗಿ ನಾಲ್ಕು ಹೆತ್ತು ಮಕ್ಕಳನ್ನು ಸಾಕಲು ಮಾತ್ರ ನಾವು ಯೋಗ್ಯರೆಂದು ಭಾವಿಸಿದ್ದರೋ ಏನೋ..ಹುಡುಗರನ್ನೂ ಅಷ್ಟೇ ಅಡುಗೆ ಭಟ್ಟರಾಗಿಯೋ ಪುರೋಹಿತರಾಗಿಯೊಬಕೃಷಿಕರಾಗಿಯೋ ಬದುಕಲು ಯೋಗ್ಯರೆಂದು ಪರಿಗಣಿಸಿರಬೇಕು

ಯಾಕೆಂದರೆ ಹತ್ರನೆಯ ತರಗತಿ ನಂತರ ಏನು ಓದಿದರೆ ಒಳ್ಳೆಯದು.ಏನನ್ನು ಓದಿದರೆ ಏನೆಲ್ಲ ಅವಕಾಶಗಳಿವೆ ಇತ್ಯಾದಿ ಯಾವುದೇ ಒಂದು ಮಾಹಿತಿಯನ್ನು ನಮಗೆ ನೀಡಿರಲಿಲ್ಲ‌ಹೇಗೆ ಬದುಕಬೇಕೆಂಬ ಮಾರ್ಗದರ್ಶನದ ಮಾತುಗಳನ್ನುಹೇಳಿರಲಿಲ್ಲ.


2012 ನೆ ಇಸವಿಯಲ್ಲಿ ಮೀಯಪದವಿನ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥಾಪಕರ ಸಂಸ್ಮರಣಾ ದಿನದಂದು  ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿನಿಯಾಗಿ ನನ್ನನ್ನು ಗುರುತಿಸಿ ಸನ್ಮಾನ ಮಾಡಿದ್ದರು.ಈ ಕಾರ್ಯಕ್ರಮಕ್ಕೆ ಬಂದಿದ್ದ ವಾಣಿವಿಜಯ ಪ್ರೌಢಶಾಲೆಯಲ್ಲಿ ನನಗೆ ಇಂಗ್ಲಿಷ್ ಶಿಕ಼್ಕಕರಾಗಿದ್ದ  ತೊಟ್ಡೆತ್ತೋಡಿ ಮಾಸ್್ಟ್ರು ( ತೊಟ್ಟೆತ್ತೋಡಿ ನಾರಾಯಣ ಭಟ್) ಕಾರ್ಯಕ್ರಮದ ನಂತರ ನಾನು ತಮ್ಮನ ಜೊತೆಗೆ  ಕಾರು ಹತ್ತಿ ಹೊರಡುವಾಗ. ಸಿಕ್ಕಿ " ನಾವು ವಾಣಿವಿಜಯ ಪ್ರೌಢಶಾಲೆಯಲ್ಲಿ ನಿನಗೆ ಯಾವುದೇ ಬೆಂಬಲ ಕೊಟ್ಟಿಲ್ಲ ಎಂದು ಪ್ರಾಂಜಲವಾಗಿ ಒಪ್ಪಿಕೊಂಡು ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು.ಇದವರ ದೊಡ್ಡ ಗುಣ.ಇವರು ನನಗೆ ಬೆಂಬಲ ಕೊಡದೇ ಇದ್ದಿದ್ದರೂ ಇತರ ಕೆಲವು ಶಿಕ್ಷಕರಂತೆ ನನ್ನನ್ನು ಪೂರ್ವಗ್ರಹದಿಂದ ಕಂಡು ಹೆಜ್ಜೆ ಹೆಜ್ಜೆಗೆ ಬೈದು ಅವಮಾನಿಸುತ್ತಿರಲಿಲ್ಲ.


ನಮಗೆ ಅನುದಾನಿತ ಶಾಲೆಯ ಹೊರತಾಗಿ ಸರ್ಕಾರಿ ಶಾಲೆ ಎಂಬುದೊಂದಿದೆ.ಅದಕ್ಕೆ ಶಿಕ್ಷಕರಾಗಲು ಟಿಸಿಎಚ್ ಅಥವಾಬಿಎಡ್  ಮಾಡಬೇಕು ಹತ್ತನೆಯ ತರಗತಿ ಆಗಿ ಆರು ತಿಂಗಳ ಟಿಸಿಎಚ್ ಮಾಡಿದರೆ ಹತ್ತನೆಯ ತರಗತಿ ಮತ್ತು ಟಿಸಿಎಚ್ ನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಹುದ್ದೆ ದೊರೆಯುತ್ತದೆ.ನಂತರ ಖಾಸಗಿಯಾಗಿ ಪಿಯುಸಿ ,ಪದವಿ ಓದಿ ಬಿಎಡ್ ಎಂಎ ಮಾಡಿದರೆ ಹೈಸ್ಕೂಲು ಶಿಕ್ಷರಾಗಿ ಪಿಯು ಉಪನ್ಯಾಸಕರಾಗಿ ಪದೋನ್ನತಿ ಪಡೆಯಲು ಆಗುತ್ತದೆ ಎಂಬ ಸಂಗತಿಯೇ ನಮಗೆ ಗೊತ್ತಿರಲಿಲ್ಲ


.ನನ್ನ ಈಗಿನ ಅನೇಕ ಸಹೋದ್ಯೋಗಿಗಳು ಹೀಗೆ ಸರ್ಕಾರಿ ಶಾಲೆಯಲ್ಲಿ ಹದಿನೆಂಟು ವಯಸ್ಸಿಗೆ ಶಿಕ್ಷಕರಾಗಿ ಸೇರಿ ಪದೋನ್ನತಿ ಪಡೆದು ಪಿಯು ಉಪನ್ಯಾಸಕರಾಗಿದ್ದಾರೆ

ನಾನು ಉಪನ್ಯಾಸಕಿತಾದ ಮೇಲೆ ಈ ವಿಚಾರ ನನಗೆ ಗೊತ್ತಾಯಿತು.ಮಾಯಿಪ್ಪಾಡಿ ನಮಗೆ ತೀರಾ ದೂರದ ಊರಲ್ಲ‌.ಅಲ್ಲಿ ಟಿಸಿಎಚ್ ಕಾಲೇಜಿತ್ತು.ನನಗೆ ಸಿಕ್ಕ ಹತ್ತನೆಯ ತರಗತಿಯ ಮಾರ್ಕ್ಸ್ ಗೆ ಖಂಡಿತವಾಗಿಯೂ ಸೀಟು ಸಿಕ್ತಿತ್ತು.ಟಿಸಿಎಚ್ ಓದಿದ್ದರೆ ಅಲ್ಲೂ ಉತ್ತಮ ಅಂಕ ಗಳಿಸಿ ಹದಿನೆಂಟು ವಯಸ್ಸಿಗೇ ನನಗೆ ಸರ್ಕಾರಿ ಶಾಲೆ ಶಿಕ್ಷಕಿ ಯಾಗಬಹುದಿತ್ತು.


ಈ ಯಾವ ವಿಚಾರವೂ ಅರಿಯದ ನಾನು ಪಿಯುಸಿ ವಿಜ್ಞಾನ ತಗೊಂಡು ಇಂಗ್ಲಿಷ್ ಭಾಷೆಯ ಪಾಠ ಅರ್ಥವಾಗದೆ ಪೇಲಾಗಿ ಮತ್ತೆ ಹೇಗೋ ಮರು ಪರೀಕ್ಷೆಯಲ್ಲಿ  ಒದ್ದಾಡಿ ಪಾಸಾಗಿ ಮನೆಯಲ್ಲಿ ಒಂದು ವರ್ಷ ಇದ್ದೆ.ಡಿಗ್ರಿಗೆ ಆರ್ಟ್ಸ್ ತಗೊಳ್ಳಬೇಕೆಂದು ನಿರ್ಧರಿಸಿ ಕೆನರಾ ಕಾಲೇಜಿಗೆ ತಂದೆಯವರ ಜೊತೆಗೆ ಹೋಗಿ ಸೀಟು ಕೇಳಿದ್ದೆ.ಬಹುಶಃ ಫೇಲಾಗಿ ಮತ್ತೆ ಪಾಸಾದ ಕಾರಣವೋ ಏನೋ ಅಥವಾ ಅಲ್ಲಿ ದುಬಾರಿ ಡೊನೇಶನ್ ಎಲ್ಲರಿಗೂ ತಗೊಳ್ತಿದ್ದರೊ ಏನೊ ನಮಗೆ ಅಲ್ಲಿ ಇಪ್ಪತ್ತು ಸಾವಿರ ಡೊನೇಶನ್ ಕೇಳಿದ್ದರು.ಆಗ ನನ್ನ ತಂದೆಯವರು ನಾವು ಬಡವರು ನಮಗೆ ಎರಡು ಖಂಡಿ ಅಡಿಕೆ ಆಗುದು.ಡೊನೇಶನ್ ಕಡಿಮೆ ಮಾಡಿ ಎಂದು ನನಗಾಗಿ ಮೈ ಹಿಡಿ ಮಾಡಿಕೊಂಡು ಕೇಳಿದ್ದರು.ಆಗ ಅಲ್ಲಿನ ಪ್ರಿನ್ಸಿಪಾಲ್ ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದು ನನ್ನ ತಂದೆಯವರನ್ನು ಗದರಿಸಿ ದಟ್ಟಿಸಿ ಹೀನಾಯವಾಗಿ ಏನೇನೋ ಮಾತಾಡಿದ್ದರು

ನನ್ನ ತಂದೆಯವರು ಅವಮಾನವನ್ನು ಅವಡುಗಚ್ಚಿ ಸಹಿಸಿ ಆಗಬಹುದು ಅಷ್ಟು ಕೊಡ್ತೇವೆ ಎಂದು ಒಪ್ಪಿದ್ದರು

ಆದರೆ ನನ್ನ ತಂದೆಯವರನ್ನು ವಿನಾಕಾರಣ ದಟ್ಟಿಸಿ ಅವಮಾನಿಸಿದ ಕಾಲೇಜಲ್ಲಿ ಓದುವುದಿಲ್ಲ ಎಂದು ನಿರ್ಧರಿಸಿದ್ದೆ‌


ಮುಂದೇನು ? ನನಗೂ ಗೊತ್ತಿರಲಿಲ್ಲ

ಈ ಸಮಯಕ್ಕಾಗುವಾಗ ನನ್ನ ದೊಡ್ಡ ತಮ್ಮ ಈಶ್ವರ ಭಟ್ ನ ಎಸ್ ಎಸ್ ಎಲ್ ಸಿ ಪರೀಕ್ಷೆ ಆಗಿ ಫಲಿತಾಂಶ ಬಂತು‌ಒಳ್ಳೆಯ ಅಂಕಗಳು ಬಂದಿದ್ದವು.

ಉಜಿರೆ ಕಾಲೆಜಿನಲ್ಲಿ ನನ್ನ ತಂದೆಯವರ ಸೋದರತ್ತಿಗೆಯ ಮಗ ಭೀಮಗುಳಿಯ ಗಣಪಯ್ಯನವರು ಉಪನ್ಯಾಸಕರಾಗಿದ್ದರು.ಅಣ್ಣ ತಮ್ಮ ಈಶ್ವರರನನ್ನು ಉಜಿರೆ ಕಾಲೇಜಿಗೆ ಸೇರಿಸುವ ಸಲುವಾಗಿ ಸೀಡು ಕೊಡಿಸಲು ಆಗುತ್ತದಾ ಎಂದು ಗಣಪಯ್ಯನವರನ್ನು ಭೇಟಿ ಮಾಡಿ ಕೇಳಲು ಹೋಗಿದ್ದ.ತಮ್ಮ ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಸತ್ಕರಿಸಿದ ಗಣಪಯ್ಯನವರು ಅಣ್ಣನಲ್ಲಿ ನಮ್ಮ ಮನೆ ಮಂದಿಯ ಕ್ಷೇಮ ವಿಚಾರಿಸಿದ್ದರು.ಆಗ ಅಣ್ಣ ನಾನು ಪಿಯುಸಿ ಯಲ್ಲಿ ಪೇಲ್ ಆಗಿ ನಂತರ ಮರು ಪರೀಕ್ಷೆಯಲ್ಲಿ ಪಾಸಾಗಿ ಮನೆಯಲ್ಲಿದ್ದು ಪದವಿ ಓದಲು ಎಲ್ಲೂ ಸೀಟು ಸಿಕ್ಕಿಲ್ಲ ಎಂಬ ವಿಚಾರ ಅಣ್ಣ ಹೇಳಿದ್ದ.


ಆಗ ಗಣಪಯ್ಯನವರು ತಾವಾಗಿಯೇ ತಂಗಿಗೂ ಇಲ್ಲಿಯೇ ಬಿಎಸ್ಸಿಗೆ ಸೇರಿಸು ಸೀಟು ಕೊಡಿಸ್ತೇನೆ ಎಂದು ನುಡಿದಂತೆ ನನಗೆ ಸೀಟು ಕೊಡಿಸಿದ್ದರು.

ಒಳ್ಳೆಯ ಅಂಕ ಗಳಿಸಿದವರಿಗೆ ಮಾತ್ರ ಉಜಿರೆ ಹಾಸ್ಟೆಲಿನಲ್ಲಿ ಸೀಟು ಸಿಕ್ತಿತ್ತು.ನನಗೆ ಸಿಗಲು ಸಾಧ್ಯವಿರಲಿಲ್ಲ.ಆಗ ಗಣಪಯ್ಯನವರೇ ಉಜಿರೆಯಲ್ಲಿ ಹುಡುಗಿಯರ ಮೆಸ್ ನಡೆಸುತ್ತಿದ್ದ ಉಜಿರೆ ಶಾಲೆಯ ಮಾಸ್್ಟ್ರು ವೆಂಕಟರಮಣ ಭಟ್ರ ಪರಿಚಯ ಮಾಡಿಸಿ ಅಲ್ಲಿ ಉಳಿದುಕೊಂಡು ಓದಲು ಅನುವು ಮಾಡಿದ್ದರು.ತಮ್ಮ ಈಶ್ವರ ಕೂಡ ಊಟ ತಿಂಡಿಗೆ ಅಲ್ಲಿಗೆ ಬರುತ್ತಿದ್ದ.ಅಲ್ಲಿಗೇ ಸಮೀಪದ ವಸಂತಿ‌ಅಮ್ಮನವರ ಕಾಂಪೌಂಡಿನಲ್ಲಿ ಕಲಿಯುವ ಹುಡುಗರಿಗೆ ಉಳಿದುಕೊಳ್ಳಲು ನಾಲ್ಕಾರು ಕೊಠಡಿಗಳನ್ನು ಬಾಡಿಗೆಗೆ ಲಭ್ಯವಿತ್ತು‌ಒಂದರಲ್ಲಿ ಇವನಿಗೆ ವಸಂತಿ ಅಮ್ಮ ಜಾಗ ಕೊಟ್ಟರು.


ಅಗೆಲ್ಲ ಸೂಟು ಕೇಸ್ ಟ್ರಾವೆಲಿಂಗ್ ಬ್ಯಾಗ್ ಗಳೆಲ್ಲ ನಮ್ಮಮಥಹ ಕೆಳ ಮಧ್ಯಮ ವರ್ಗದವರಿಗೆ ನೋಡಿ ಕೂಡ ಗೊತ್ತಿರಲಿಲ್ಲ.ಮನೆಯಲ್ಲಿ ಒಂದು ಹಳೆಯ ಕಬ್ಬಿಣದ ತುಕ್ಕು ಹಿಡಿದ ಪೆಟ್ಟಿಗೆ ಇತ್ತು.ಅದಕ್ಕೆ ಪೈಂಟು ಬಳಿದು ಅದರಲ್ಲಿ ನಮ್ಮ ಬಟ್ಟೆ ಬರೆ ತುಂಬಿ ನಾನೂ ಈಶ್ವರ ಉಜಿರೆಗೆ ಹೊರಟೆವು.ಬಟ್ಟೆ ಬರೆ ಎನ್ನಲು ಹೆಚ್ಚೇನೂ ಇರಲಿಲ್ಲ.ಒಂದೆರಡು ಜೊತೆ ಲಂಗ ರವಿಕೆ ಒಂದೆರಡು ಬೈರಾಸು ,ಅಮ್ಮನ ಹಳೆಯ ಮಗ್ಗದ ಸೀರೆ ಹಾಸಿ ಹೊದೆಯಲು ತಗೊಂಡೆವು ಅಷ್ಟೇ..ಉಜಿರೆ ಪೇಟೆಯಿಂದ ಒಂದೊಂದು ತೆಳುವಾದ ಹಾಸಿಗೆ ತಗೊಂಡೆವು

ಒಂದು ವರ್ಷ ಮೆಸ್ಸಿನಲ್ಲಿ ಕಳೆದೆ.ಇಲ್ಲಿ ನಾವು ಏಳೆಂಟು ಹುಡುಗಿಯರಿದ್ದೆವು.ನಾನು.ವಿದ್ಯಾ,ಪೂರ್ಣಿಮ ವೀಣ,ಸುಮನ್,ಜಯ,ಸಂಧ್ಯಾ ಉಳುವಾನ ಸಲಿಲ ಇನ್ನಿಬ್ಬರು ಹೈಸ್ಕೂಕಿನ ಹುಡುಗಿಯರು ಇದ್ದೆವು.


ಊಟ ತಿಂಡಿ ಎಲ್ಲ ಇಲ್ಲಿ ಚೆನ್ನಾಗಿತ್ತು.ಮಾವ( ಶಿಕ್ಷಕರಾದ ವೆಂಕಟರಮಣ ಭಟ್ ) ಮತ್ತವರ ಹೆಂಡತಿ ಕಾವೇರಿ ಆಂಟಿ ನಮ್ಮನ್ನೆಲ್ಲ ಚೆನ್ನಾಗಿಯೇ ನೋಡಿಕೊಂಡಿದ್ದರು.ಇಷ್ಟು ಹುಡುಗಿಯರಲ್ಲಿ ನಾನೇ ಬಡವರ ಮನೆ ಹುಡುಗಿಯಾಗಿದ್ದೆ.ಇವರ್ಯಾರೂ ಸಿರಿವಂತರಲ್ಲದಿದ್ದರೂ ನಮಗಿಂತ ಬೆಟರ್ ಇದ್ದರು.ಹಾಗಾಗಿಯೋ ಏನೋ ನನಗಿಲ್ಲಿ ಒಂದಿನಿತು ಕೀಳರಿಮೆ ಕಾಡುತ್ತಿತ್ತು.

ನನ್ನ ಮತ್ತು ತಮ್ಮನ ಮೆಸ್ ಬಿಲ್ ಸಾಕಷ್ಟು ಬರುತ್ತಿತ್ತು ( ಎಷ್ಟೆಂದು ನನಗೆ ಈಗ ನೆನಪಿಲ್ಲ ) ಇದನ್ನು ಭರಿಸುದು ನಮ್ಮ ತಂದೆಯವರಿಗೆ ಕಷ್ಟವಾಗುತ್ತದೆ ಎಂಬ ಅರಿವಿತ್ತು ನಮಗೆ‌.ಇಲ್ಲಿ ಸ್ನಾಕ್ಕೆ ಬಿಸಿನೀರು ಬೇಕಿದ್ದರೆ ದಿನಕ್ಕೆ ಐವತ್ತು ಪೈಸೆ ಕೊಡಬೇಕಿತ್ತು.ಎಂದರೆ ತಿಂಗಳಿಗೆ ಹದಿನೈದು ರುಪಾಯಿ.ಅ ಕಾಲಕ್ಕೆ ನಮಗೆ ದೊಡ್ಡ ಮೊತ್ತವೇ.‌ಹಾಗಾಗಿ ನಾನು ಬಿಸಿನೀರು ಬೇಡವೆಂದೆ.ಉಜಿರೆಯಲ್ಲಿ ಚಳಿ ಬಹಲ ಜಾಸ್ತಿ.ತಣ್ಣೀರು ಸ್ನಾನ ನಿಜಕ್ಕೂ ದೊಡ್ಡ ಶಿಕ್ಷೆಯೇ..ತೀರ ಚಳಿ ಇದ್ದ ದಿನ ನಾನು ಸುಮ್ಮನೇ ನೀರು ಕಾಲಿಗೆ ಮುಖಕ್ಕೆ ಹಾಕಿ ಸ್ನಾನದ ನಾಟಕ ಮಾಡುತ್ತಿದ್ದುದೂ ಇದೆ.ತೀರಾ ಚಳಿ ಇದ್ದ ಕಾರಣ ಬೆವತು ನಾರುವ ಪ್ರಮೇಯ ಇರಲಿಲ್ಲ.ಆದರೆ ನನ್ನ ಈ ಸ್ನಾನದ ಕಳ್ಳಾಟ ಮೆಸ್ಸಿನ ಆಂಟಿ ಮತ್ತಿತರರಿಗೆ ಗೊತ್ತಾಗಿ ನಗೆ ಪಾಟಾಲಿಗೆ ಈಡಾಗಿದ್ದು ನೆನೆದರೆ ನನಗೆ ಈಗ ನಗು ಬರುತ್ತದೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕಿದೆ.ಒದುಗರಿಗೆ ಮುಜುಗರ ಆಗಬಹುದೊ ಏನೋ..ಅದರೆ ನಾವು ಹೇಳದಿದ್ದರೆ ನಮ್ಮ ಹುಡುಗಿಯರ ಸಂಕಷ್ಟದ ಅರಿವು ಹೊರ ಜಗತ್ತಿಗೆ ತಿಳಿಯುವುದು ಹೇಗೆ?.

ಈ ಮೆಸ್ಸೆಂಬ ಮಾಸ್ಟ್ರ ಮನೆಯಲ್ಲಿ ನಮಗೆ ಹುಡುಗಿಯರಿಗಾಗಿ ಒಂದು ಸುಮಾರು 15×15 ಅಡಿಯ ಕೋಣೆ ಇತ್ತು‌‌.ಕುಳಿತುಕೊಳ್ಳಲು ಬೆಂಚು ಬರೆಯಲು ಡೆಸ್ಟ್ ಇತ್ತೆಂದು ನೆನಪು..

ಮಲಗಲು ಉಣ್ಣಲು  ಉದ್ದದ ಕೋಣೆ ಇತ್ತು ಅದರಲ್ಲಿ ಸಾಲಾಗಿ ಚಾಪೆ ಹಾಸಿಗೆ ಹಾಸಿ ಮಲಗುತ್ತಿದ್ದೆವು

ಬಟ್ಟೆ ಒಣಗಿಸಲು ಹೊರಗೆ ಬಳ್ಳಿ ಹಾಕಿ ವ್ಯವಸ್ಥೆ ಮಾಡಿದ್ದರು.ಅಗಿನ ಕಾಲ ಒಳ ಬಟ್ಟೆಯನ್ನು ಹುಡುಗಿಯರು ಹೊರಗೆ ಒಣ ಹಾಕವಂತರಲಿಲ್ಲ.ಎಲ್ಲರೂ ಒಳ ಬಟ್ಟೆಯನ್ನು ಇ ಕೋಣೆಯ ಲ್ಲಿಯೇ ಒಣಗಲು ಹಾಕಬೇಕಾಗಿತ್ರು .

.ನಾವೆಲ್ಲರೂ ಪ್ರಾಪ್ತ ವಯಸ್ಸಿನ ಹುಡುಗಿಯರು‌ ಪ್ರತಿ ತಿಂಗಳು ಮುಟ್ಟಾಗುದು ಸಹಜವಾದ ವಿಚಾರವೇ..ಅಗಿನ್ನೂ ಪ್ಯಾಡ್ ಗಳ ಬಳಕೆ ಇಷ್ಟು ಇರಲಿಲ್ಲ‌ನಾವೆಲ್ಲ ಅಮ್ಮನ ಹಳೆಯ ಸೀರೆಯ ತುಂಡನ್ನೇ ದಪ್ಪಕ್ಕೆ ಕಟ್ಟಿ ಬಳಸುತ್ತಿದ್ದೆವು.

ಎಷ್ಟೇ ಕ್ಲೀನಾಗಿ ತೊಳೆದಿದ್ದರೂ ತಕ್ಷಣವೇ ಒಣಗದೆ ಮಳೆಗಾಲ ಚಳಿಗಾಲದಲ್ಲಿ ಇದು ಕಮಟು ವಾಸನೆ ಬರುತ್ತಿತ್ತು.ತಿಂಗಳಿನ ಎಲ್ಲ ದಿನಗಳಲ್ಲೂ ಒಬ್ಬರಲ್ಲ ಒಬ್ಬರ ಮುಟ್ಟಿನ ಬಟ್ಟೆ ಇದ್ದೇ ಇರುತ್ತಿತ್ತು.ಇದರ ಅಸಹನೀಯ ವಾಸನೆಯ ನಡುವೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಮಗಿತ್ತು.ನಮ್ಮದೇ ಆಗಿದ್ದರೂ ವಾಸನೆ ವಾಸನೆಯೇ ಅಲ್ವೇ ? ಇದನ್ನು ಸಹಿಸುವುದು ನಮಗೆ ತೀರಾ ಕಷ್ಟ ಆಗಿತ್ತು 


ಹಾಗಾಗಿ ನಾವೆ ಅಡಿಗೆ ಮಾಡಿ ಇರುವಮತೆ ಸಣ್ಣ ಬಾಡಿಗೆ ಕೋಣೆಯನ್ನು ಎರಡನೆಯ ವರ್ಷಕ್ಕಾಗುವಾಗ ಹುಡುಕಿದೆವು.ಮೆಸ್ಸಿಗೆ ಸುಮಾರು ಎರಡು ಕಿಲೊಮೀಟರ್ ದೂರದಲ್ಲಿ ಪೆಜತ್ತಾಯರ ಮನೆಯಲ್ಲಿ ಒಂದು ಕೋಣೆ ಬಹಳ ಕಡಿಮೆ ಬಾಡಿಗೆಗೆ ನಮಗೆ ಸಿಕ್ತು .

ಮೆಸ್ಸಿನ ಲೆಕ್ಕ ಚುಕ್ತ ಮಾಡಿ  

ನಾನು ಮತ್ರು ತಮ್ನ ಈಶ್ವರ ಭಟ್  ನಮ್ಮ ಬಟ್ಟೆ ಬರೆಯನ್ನು ಹಳೆಯ ಪೆಟ್ಟಿಗೆಯಲ್ಲಿ ತುಂಬಿಸಿ ಹಾಸಿಗೆಯನ್ನು ಚಾಪೆ ಸಮೇತ ಸುರುಳಿ ಸುತ್ತಿ ತಲೆಯಲ್ಲಿ ಒಂದರ ಮೇಲೆ ಒಂದು ಇರಿಸಿಕೊಂಡು ಪೆಜತ್ತಾಯರ ಬಾಡಿಗೆ ಕೋಣೆಗೆ ನಡೆದೆವು.

ನಾವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಬಾಡಿಗೆಗೆ ಕೋಣೆ ಸಿಕ್ಕಿದ ಕಾರಣ ಬಹಳ ಖುಷಿಯಲ್ಲಿ ಪೆಟ್ಟಿಗೆ ಹೊತ್ರು ಸಂಭ್ರಮದಿಂದ ನಡೆದಿದ್ದೆವು.

ಹಳ್ಳಿಯಲ್ಲಿ ಹುಟ್ಡಿ ಬೆಳೆದ ನಮಗೆ ಕಟ್ಟು ಹೊತ್ತು ಅಭ್ಯಸ ಇತ್ತು.ನಮ್ಮ‌ಮನೆ ತನಕ ರಸ್ತೆ ಆಗ ಇರಲಿಲ್ಲ‌ ಸುಮಾರು ಅರ್ಧ ಕಿಲೋ ಮೀಟರ್ ದೂರದಿಂದ ಗಸಂಡಿಯ ಕಾಲುದಾರಿಯಲ್ಲಿ( ನೀರು ಹರಿದು ಕೊರಕಲಾದ ಕಣಿಯ ದಾರಿ) ಮನೆಗೆ ಬೇಕಾದ ಎಲ್ಕ ವಸ್ತುಗಳನ್ನೂ ತಕೆ ಹೊರೆಯಲ್ಲಿಯೇ ತರಬೇಕಾಗಿತ್ತು.ಮನೆ ಕಟ್ಟುವ ಮುರಕಲ್ಲು ಓಡು,ಹೊಯಿಗೆ  ಬೈ ಹುಲ್ಲು ಹೀಗೆ ಎಲ್ಲ ವಸ್ತುಗಳನ್ನೂ ತಂದೆ ತಾಯಿಯರ ಜೊತೆಗೆ ನಾವು ಮಕ್ಕಳೂ ಹೊತ್ತು ತರುತ್ತಿದ್ದ ಕಾರಣ ನಮಗೆ ನಮ್ಮ ಹಾಸಿಗೆ ಬಟ್ಟೆ ಬರೆಯ ಪೆಟ್ಟಿಗೆಯ ಭಾರ ಹೊರುದೇನೂ ಕಷ್ಟದ್ದಾಗಿರಲಿಲ್ಲ.ಮೆಸ್ಸಿನ ಸಹಪಾಠಿಗಳ ಎದುರು ಹೊತ್ತು ಕೊಂಡು ಹೋಗುದು ಸ್ವಲ್ಪ ಅವಮಾನ ಎನಿಸಿತ್ತು ನನಗೆ.ಈಗಲಾದರೆ ನಾನು ಹೆಮ್ಮೆ ಪಡುತ್ತಿದ್ದೆ.ಅದು ಆಗಿನ‌ ಮನಸ್ಥಿತಿ.

ಮುಂದೆ ಸ್ವಂತ ಅಡುಗೆಯ ವೈಭವ ಶುರು ಆಯಿತು.ಅಗೆಲ್ಲ ಸೀಮೆ ಎಣ್ಣೆಯ ಸ್ಟೌ ಬಳಸುತ್ತಿದ್ದೆವು.ಅಕ್ಕಿಯನ್ನು ಚೆನ್ನಾಗಿ ಕುದಿ ಬರಿಸಿ ನಾವೇ ತಯಾರಿಸಿದ ಬೈ ಹುಲ್ಲಿನ ಪೆಟ್ಟಿಗೆಯಲ್ಲಿ ಮುಚ್ಚಿ ಇರಿಸುತ್ತಿದ್ದೆ.

ಒಂದು ಗಂಟೆ ಕಳೆವಾದ ಅಕ್ಕಿ ಬೆಂದು ಅನ್ನವಾಗಿರುತ್ತಿತ್ತು.ಪೆಜತ್ತಾಯರ ಮನೆಯ ಅಡಿಗೆ ಕೋಣೆಗೆ ಹೋಗಿ ಕೆರೆಮಣೆ( ಹೆರೆಮಣೆ) ಯಲ್ಲಿ ತೆಮಗಿನ ಕಾಯಿ ಕೆರೆದ( ಹೆರೆದು) ಅವರದೇ ಕಡೆಗಲ್ಲಿನಲ್ಲಿ ಕಡೆದು ತಂದು ಕೊದ್ದೆಲ್ ಮಾಡ್ತಿದ್ದೆ..

ಅಮ್ಮ ಮುಟ್ಟದಾಗ ಮನೆಯಲ್ಲಿ ಅಡುಗೆ ಮಾಡಿ ಗೊತ್ತಿತ್ತಲ್ವ ಹಾಗಾಗಿ ಅಡುಗೆ ಮಾಡುದೇನೂ ಕಷ್ಟವಾಗಲಿಲ್ಲ ನನಗೆ ಹಾಗೆ ನೋಡಿದರೆ ಸೌದೆ ಉರಿಯ ಒಲೆಗಿಂತ ಸಿಮೆ ಎಣ್ಣೆಯ ಸ್ಟೌ ವುನಲ್ಲಿ ಅಡುಗೆ ಮಾಡುದು ಸುಲಭ ಎನಿಸಿತ್ತು ನಮಗೆ.ನಾವು ಊರಿನಿಂದ ಸ್ಟೋರ್ ( ನ್ಯಾಬೆಲೆ ಅಂಗಡಿ) ಯಲ್ಲಿ ಕಡಿಮೆಗೆ ಸಿಗುತ್ತಿದ್ದ ಸೀಮೆ ಎಣ್ಣೆಯನ್ನು ತಗೊಂಡು ಹೋಗುತ್ತಿದ್ದೆವು

ಇದರಿಂದಾಗಿ  ನಮ್ಮ ಖರ್ಚು ಕಡಿಮೆ ಆಯಿತು.ನನಗಂತೂ ಆ ಕಮಟು ವಾಸನೆಯಿಂದ ಪಾರಾಗಿ ಮೋಕ್ಷ ಪಡೆದಷ್ಟು ಸಂತಸವಾಗಿತ್ತು.ಮೆಸ್ಸಿಗೆ ಸಂಬಂಧಿಸಿದಂತೆ ಇನ್ನೊಂದು ಮುಖ್ಯ ವಿಚಾರ ಹೇಳಲಿಕ್ಕಿದೆ .ಈಗ ಹೇಳಲು ಕಾಲ ಅಥವಾ ನಾನು ಪರಿಪಕ್ವವಾಗಿಲ್ಲ.ಅದನ್ನು ನಿರುಮ್ಮಳವಾಗಿ ಹೇಳುವಷ್ಡು ಪ್ರೌಢತೆಯನ್ನು ಹೊಂದಿಲ್ಲ..ಮುಂದೆ ಕಾಲ ಬಂದಾಗ ಹೇಳುವೆ

2 comments:

  1. ಹಳೆಯ ಸಂಕಟಗಳು, ಈಗ ನೆನೆದಾಗ, ಸುಖಕರವಾಗಿಯೇ ಇರುತ್ತವೆ, ಅಲ್ಲವೆ?

    ReplyDelete