Tuesday 13 February 2024

ಆತ್ಮ ಕಥೆಯ ಬಿಡಿ ಭಾಗಗಳು: ಆಲದ ಮರಗಳು ಇತರ ಗಿಡಗಳನ್ನು ತೊಳೆಯಲು ಬಿಡುವುದಿಲ್ಲ

 ರೇಡಿಯೋ ದಿನಾಚರಣೆಯ ಶುಭಾಶಯಗಳು.


ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.


ನನ್ನ ಬರವಣಿಗೆಯ ಆರಂಭಿಕ ದಿನಗಳಲ್ಲಿ ನನ್ನ ಬರವಣಿಗೆಯ ಅಭಿವ್ಯಕ್ತಿಗೆ ರೇಡಿಯೋ ಸಹಾಯ ಮಾಡಿದೆ‌..

 ಮಂಗಳೂರು ಆಕಾಶವಾಣಿಯಲ್ಲಿ ನನ್ನ ಮೂರು ನಾಲ್ಕು ಭಾಷಣಗಳು,ಐದಾರು ಕಥೆಗಳು ಪ್ರಸಾರವಾಗಿವೆ‌.

ಸಾರಂಗ್ ರೇಡಿಯೋ ಮೂಲಕ ನನಗೆ ತುಂಬಾ ಹತ್ತಿರವಾದವರು ವಿಕೆ ಕಡಬ .

ನನ್ನ ಬಗ್ಗೆ ಸಂದರ್ಶನ ಮಾಡಿ ನನಗೊಂದು ಅಸ್ತಿತ್ವವನ್ನು ಕಟ್ಟಿಕೊಟ್ಟವರು ವಿಕೆ ಕಡಬ

ಇನ್ನೊಂದು ಗಮ್ಮತ್ತಿದ ವಿಚಾರ ಹೇಳ್ತೇನೆ 

ಬಹುಶಃ 1997 ಜನವರಿ ಪೆಬ್ರವರಿ ಇರಬಹುದು.

ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ ‌.ಸಮಯ ಸಿಕ್ಕಾಗೆಲ್ಲ‌ ಅಲ್ಲಲ್ಲಿ  ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಿದ್ದೆ‌.

ಒಂದಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶಿಕಾರಿ ಪುರ ಕೃಷ್ಣ ಮೂರ್ತಿಯವರು ನಾನು ನಡೆಸುವ ಸಂಭಾಷಣಾ ಶಿಬಿರದ ಪಾಠಗಳ ಪಠ್ಯವನ್ನು ವಿಭಜಿಸಿ ಅರ್ಧ ಗಂಟೆಯ 52 ವಿಭಾಗಗಳನ್ನಾಗಿ ಮಾಡಿಕೊಡಲು ಹೇಳಿದರು‌.ಆಕಾಶವಾಣಿಗೆ ಬೇಕು ಎಂದರು ‌.ಸರಿ ಎಂದು ಎರಡು ಮೂರು ದಿನ ಕುಳಿತು 52 ಕಂತು ಅರ್ಧ ಗಂಟೆಗಾಗುವಷ್ಟು ಸಂಭಾಷಣೆ ಬರೆದು ಕೊಟ್ಟೆ.

ಇದಾಗಿ ಒಂದು ಮೂರು ನಾಲ್ಕು ತಿಂಗಳ ನಂತರ ಆಕಾಶವಾಣಿಯಲ್ಲಿ ಒಂದು ದಿನದ  ಸಂಸ್ಕೃತ ಪಾಠ ಮಾಡುವಂತೆ ಆಹ್ವಾನಿಸಿ ನನಗೆ ಪತ್ರ ಬಂದು ಪಾಠ .ಯಾವ ಅಂಶವನ್ನು ಹೊಂದಿರಬೇಕು ಎಂದು ಕೂಡ ತಿಳಿಸಿದ್ದರು.

ನಾನು ಇಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮಾದರಿಯಲ್ಲಿ ಬರೆದು ಅಭ್ಯಾಸ ಮಾಡಿಸಿ ರೆಕಾರ್ಡಿಂಗ್ ಗೆ ಹೋದೆ.

ಅಲ್ಲಿ ಶರಭೇಂದ್ರ ಸ್ವಾಮಿಯವರಲ್ಲಿ ಮಾತಿನ ನಡುವೆ ರೇಡಿಯೋ ಸಂಸ್ಕೃತ ಪಾಠದ ಪಠ್ಯವನ್ನು ನಾನು ತಯಾರಿಸಿ ಕೊಟ್ಟ ಬಗ್ಗೆ ಹೇಳಿದೆ.ಆಗ ನೋಡಬೇಕಿತ್ತು ಅವರ ಮುಖದಲ್ಲಿ ನನ್ನ ಬಗೆಗಿನ ಅಪನಂಬಿಕೆ..ನನ್ನನ್ನು ವಿಚಿತ್ರವಾಗಿ  ನೋಡುತ್ತಾ 

ಶಿಕಾರಿಪುರ ಕೃಷ್ಣ ಮೂರ್ತಿ,ಜಿ ಎನ್ ಭಟ್ ಮೊದಲಾದವರೆಲ್ಲ ಸೇರಿ ತಯಾರಿಸಿದ ಪಠ್ಯ ಇದು ಎಂದರು‌.

ಆಗ ಪಠ್ಯ ತಯಾರಿಸಿದ ನನ್ನ ಬಗ್ಗೆ ಒಂದಕ್ಷರವನ್ನು ಕೂಡ ಹೇಳದೆ ದೊಡ್ಡವರು ಅದರ ಕ್ರೆಡಿಟ್‌ ಅನ್ನು ತಾವೇ ಪಡೆದುಕೊಂಡಿದ್ದಾರೆ ಎಂದು ನನಗೆ ಅರ್ಥವಾಯಿತು.

ನಮ್ಮ ಬಗ್ಗೆ ಗೌರವ ಇಲ್ಲದ ಕಡೆ ತಿರುಗಿ ಕೂಡ ನೋಡದೆ ಇರುವ ಸ್ವಭಾವ ನನ್ನದು.ಹಾಗಾಗಿ ನಂತರ ಆಕಾಶವಾಣಿಗೆ ಬರೆಯುವುದನ್ನು ಬಿಟ್ಟು ಪತ್ರಿಕೆಗಳಿಗೆ ಬರೆಯಲಾರಂಭಿಸಿದೆ.ನಂತರ ಹಿಂತಿರುಗಿ ನೋಡಬೇಕಾದ ಸಂದರ್ಭ ಬರಲಿಲ್ಲ. ಇದಾಗಿ‌ ಸುಮಾರು ಇಪ್ಪತ್ತು ವರ್ಷಗಳ ನಂತರ ಡಾ.ಸದಾನಂದ ಪೆರ್ಲ ಅವರು ಕುವೆಂಪು ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ ಬಗ್ಗೆ ಆಕಾಶವಾಣಿಯಲ್ಲಿ ಮಾತನಾಡಲು ಕರೆದರು.ಆಗ ಹೋಗಿದ್ದೆ.ಅದಾದ ನಂತರ ಆ ಕಡೆ ಹೋಗಿಲ್ಲ.

ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.

ಅಂದಿನಿಂದ ಇಂದಿನವರೆಗೂ ಅದೇ ಕಥೆ..

ನನ್ನ ಬ್ಲಾಗ್ ಬರಹಗಳನ್ನು ಓದಿ ಅನೇಕ ದೊಡ್ಡ ವಿದ್ವಾಂಸರು ಭಾಷಣ ಮಾಡುತ್ತಾರೆ. ಅದರೆ ಅಪ್ಪಿತಪ್ಪಿಯೂ ಆ ಬಗ್ಗೆ ಮೊದಲ ಬಾರಿಗೆ ಅಧ್ಯಯನ ಮಾಡಿ ಬರೆದ ನನ್ನ ಹೆಸರನ್ನು ಹೇಳುವುದಿಲ್ಲ ‌.ತಾವೇ ಅಧ್ಯಯನ ಮಾಡಿದವರಂತೆ ಮಾತನಾಡುತ್ತಾರೆ.

ಅಂದಿನಿಂದ ಇಂದಿನವರೆಗೂ ಅದೇ ಕಥೆ

ಉದಾಹರಣೆಗೆ ಇತ್ತೀಚೆಗೆ ಋತುಮಾನದಲ್ಲಿ ಡಾ.ಚಿನ್ನಪ್ಪ ಗೌಡರ ಸಂದರ್ಶನ  ನೋಡಿದೆ ‌ಅದರಲ್ಲಿ ಅವರು ತುಳುನಾಡಿನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಭೂತಗಳಿಗೆ ಆರಾಧನೆ ಇದೆ ‌.ಒಂದು ಸಾವಿರಕ್ಕಿಂತ ಹೆಚ್ಚು ದೈವಗಳ ಪಟ್ಟಿ ಮಾಡಲಾಗಿದೆ ಎಂದಿದ್ದಾರೆ. ನಾನು ಪಟ್ಟಿ ಮಾಡುವ ತನಕ ಇವರೆಲ್ಲರೂ ತುಳುನಾಡಿನಲ್ಲಿ ನಾನ್ನೂರಷ್ಟು  ದೈವಗಳಿಗೆ ಆರಾಧನೆ ಇದೆ ಎಂದು ಭಾಷಣ ಮಾಡುತ್ತಿದ್ದರು‌.ನಾನೇ ಕೇಳಿರುವೆ‌.ಹಲವಾರು ವರ್ಷಗಳ ಕಾಲ ಕಷ್ಟ ಪಟ್ಟು ನಾನು ಸಾವಿರಕ್ಕಿಂತ ಹೆಚ್ಚಿನ ದೈವಗಳ ಹೆಸರನ್ನು ಸಂಗ್ರಹ  ಪಟ್ಟಿಯನ್ನು ಮಾಡಿ ಅಣಿ ಅರದಳ ಸಿರಿ ಸಿಂಗಾರ ದಲ್ಲಿ  ಹಾಗು ಬ್ಲಾಗ್ ನಲ್ಲಿ ಹಾಕಿದ ನಂತರ ಇವರುಗಳು ಈಗ ಒಂದು ಸಾವಿರಕ್ಕಿಂತ ಹೆಚ್ಚು ದೈವಗಳಿಗೆ ಆರಾಧನೆ ಇದೆ ಎಂದು ಭಾಷಣ ಮಾಡುತ್ತಾರೆ ‌.ಆದರೆ ಆ ಪಟ್ಟಿಯನ್ನು ಮಾಡಿದವರ ಹೆಸರು ಹೇಳಲು ಹೋಗುವುದಿಲ್ಲ‌..ತಾವೇ ಮಾಡಿದವರಂತೆ ಪಟ್ಟಿ ಮಾಡಲಾಗಿದೆ ಎನ್ನುತ್ತಾರೆ...

1 comment: