ತುಳುನಾಡಿನ ದೈವಗಳಲ್ಲಿ ಹೆಚ್ಚಿನವರು ಮಾನವ ಮೂಲದವರು.ಸಾಮಾನ್ಯರಂತೆ ಹುಟ್ಟಿ ಅಸಾಧಾರಣ ಸಾಹಸ ಮೆರೆದವರು ಇಲ್ಲಿ ದೈವತ್ವ ಪಡೆದು ಆರಾಧನೆ ಹೊಂದಿದ್ದರೆ. ಅಂತೆಯೇ ಸಾಮನ್ಯರಾಗಿ ಹುಟ್ಟಿ ಯಾರದೋ ವಂಚನೆಗೆ ಬಲಿಯಾಗಿ ದುರಂತವನ್ನಪ್ಪಿದವರು ಕೂಡ ದೈವತ್ವ ಪಡೆದು ಆರಾಧನೆ ಹೊಂದಿದ್ದಾರೆ. ಇಲ್ಲಿ ಯಾರು ಯಾಕೆ ಯಾವಾಗ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ ಆದರೂ ದುರಂತ ಮತ್ತು ದೈವತ್ವ ತುಳು ಸಂಸ್ಕೃತಿ ಯಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.ಆಟಕಾರ್ತಿ ದೈವ ಕೂಡಾ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧನೆ ಪಡೆಯುವ ದೈವತ.
ಆಟಕಾರ್ತಿ ಮುಲತಃ ಕಾಂಞಂಗಾಡ್ ಪರಿಸರದ ಮುಲ್ಲಕ್ಕೆಲ್ ತರವಾಡಿಗೆ ಸೇರಿದ ಹೆಣ್ಣು ಮಗಳು.ಆಟಕಾರ ಸಮುದಾಯದ ಹುಡುಗಿ.ಆಟಕಾರ ಸ್ತ್ರೀ ಯರು ಮನೆ ಮನೆಗೆ ಹೋಗಿ ಕೈ ನೋಡಿ ಭವಿಷ್ಯ ಹೇಳುವ ವೃತ್ತಿ ಯನ್ನು ಮಾಡುತ್ತಾರೆ.
ಅಂತಹ ಒಂದು ಕುಟುಂಬಕ್ಕೆ ಸೇರಿದ ಹುಡುಗಿ ಒಬ್ಬಳು ಮನೆ ಮನೆಗೆ ಹೋಗಿ ಕೊರವಂಜಿಯಂತೆ ಲಕ್ಷಣ ಹೇಳುತ್ತಾ ,ಮನೆ ಮಂದಿ ಕೊಟ್ಟ ಅಕ್ಕಿ ತೆಂಗಿನಕಾಯಿ ಹೊತ್ತುಕೊಂಡು ಹೋಗುತ್ತಾ ಇರುತ್ತಾಳೆ.ದಾರಿ ನಡುವೆ ಸುಸ್ತಾಗಿ ಒಂದು ತೆಂಗಿನ ಮರದ ಕೆಳಗೆ ಕುಳಿತುಕೊಳ್ಳುತ್ತಾಳೆ.ಅದೇ ತೆಂಗಿನ ಮರದಮೆಲೆ ಒಬ್ಬ ಮೂರ್ತೆ ತೆಗರಯುವಾತ ಕಳ್ಳು ತೆಗೆಯುತ್ತಾ ಇದ್ದ.
ಆತ ಈ ಸುಂದರ ಯುವತಿಯನ್ನು ನೋಡಿ ಮೋಹಿಸುತ್ತಾನೆ.ಅವಳು ಬಾಯಾರಿಕೆಯಿಂದ ನೀರು ಕೇಳಿದಾಗ ಈತ ಕಳ್ಳನ್ನು ಕೊಡುತ್ತಾನೆ.
ಅದನ್ನು ಕುಡಿದ ಅವಳು ಅಮಲೇರಿ ಎಚ್ಚರ ತಪ್ಪಿ ಮಲಗುತ್ತಾಳೆ.ಆ ಸಮಯದಲ್ಲಿ ಆತ ಅವಳನ್ನು ಆಕ್ರಮಿಸಿ ಅತ್ಯಾಚಾರವೆಸಗುತ್ತಾನೆ.ಅದೂ ಅವಳಿಗೆ ತಿಳಿಯಿವುದಿಲ್ಲ
ಆದರೆ ದಿನ ಕಳೆದಂತೆ ತಾನು ಗರ್ಭಿಣಿಯಾಗಿರುವುದು ಅವಳಿಗೆ ತಿಳಿಯುತ್ತದೆ. ಆಗ ಅವಳು ಇದು ಹೊರ ಜಗತ್ತಿಗೆ ತಿಳಿದರೆ ಅವಮಾನ ವಾಗುತ್ತದೆ ಎಂದು ಮಾಯವಾಗುತ್ತಾಳೆ.
ಮಾಯವಾದವರು ದೈವವಾಗಿ ಆರಾಧನೆ ಹೊಂದುವುದು ಸಾಮಾನ್ಯವಾಗಿ ಕಂಡು ಬರುವ ವಿಚಾರ.ಅಂತೆಯೇ ಮಾಯವಾದ ಆಟಕಾರ್ತಿ ಹುಡುಗಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾಳೆ.ಈ ದೈವ ಮನೆ ಮನೆಗೆ ಹೋಗಿ ಕೈ ನೋಡಿ ಲಕ್ಷಣ ಹೇಳುವ ಕೆಲಸವನ್ನು ಮಾಡುತ್ತದೆ
ಇದು ಆಟಕಾರ್ತಿ ಯ ಕೆಲಸದ ದ್ಯೋತಕವಾಗಿದೆ.
ಆಟಕಾರ್ತಿ ದೈವಕ್ಕೆ ಯುವ ತರುಣಿಯ ರೀತಿಯಲ್ಲಿ ಸೀರೆ ಉಟ್ಟು ತುರುಬು ಹಾಕಿ ಹೂವು ಮುಡಿದ ಅಲಂಕಾರವಿರುತ್ತದೆ.ಮುಖಕ್ಕೆ ನಸು ಕೆಂಪು ಬಣ್ಣದ ಅರದಳ ಹಾಕಿ ಅಲಂಕರಿಸುತ್ತಾರೆ. ಕೊರವಂಜಿ ರೀತಿಯಲ್ಲಿ ಕೈಯಲ್ಲಿ ಒಂದು ಕೋಲು ತಲೆಯಲ್ಲಿ ಒಂದು ಬುಟ್ಟಿ ಇರುತ್ತದೆ.
ಈ ದೈವಕ್ಕೆ ಅಗೆಲು ಬಡಿಸುತ್ತಾರೆ.ಮೂರು ಕುಡಿ ಬಾಳೆ ಎಲೆಯಲ್ಲಿ ಐದು ಕುಡ್ತೆ ಕುಚಿಲಕ್ಕಿಯನ್ನು ಹುರಿದು ತೆಂಗಿನ ಕಾಯಿ ಹೋಳನ್ನು ಇಟ್ಟು ಬಡಿಸುತ್ತಾರೆ.ಏಳು ಸಣ್ಣ ಬಾಳೆಕೀತುಗಳಿಗೆ ಅಕ್ಕಿಹುರಿದ ಹುಡಿಯನ್ನು ಬಡಿಸುತ್ತಾರೆ.
ಈ ಪ್ರಸಾದವನ್ನು ಯುವತಿಯರಿಗೆ ಕೊಡುವುದಿಲ್ಲ. ಮಕ್ಕಳಾಗದ ಮದುವೆಯಾಗದ ಹುಡುಗಿಯರಿಗೆ ಮಾತ್ರ ಇದನ್ನು ನೀಡುತ್ತಾರೆ.ಉಳಿದ ಯುವತಿಯರು ಇದನ್ನು ತಿಂದರೆ ಅವರಿಗೆ ಮಕ್ಕಳಾಗುವುದಿಲ್ಲ ಎಂಬ ನಂಬಿಕೆ ಇದೆ.
ಈ ದೈವಕ್ಕೆ ಬಳೆ,ಕಾಲುಂಗುರು ಗೆಜ್ಝೆಗಳ ಹರಕೆಯನ್ನು ನೀಡುತ್ತಾರೆ.
ಈ ದೈವ ಹೆಣ್ಣು ಮಕ್ಕಳಿಗೆ ಒಬ್ಬೊಬ್ಬರಾಗಿ ಓಡಾಡದಂತೆ ಎಚ್ಚರಿಕೆ ನೀಡುತ್ತದೆ.
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಆಲೋಚಿಸುವುದಾದರೆ ಆಟಕಾರ್ತಿ ಯುವತಿ ನೀರಿನ ಬದಲು ಕಳ್ಳು/ ಹೆಂಡ ಕೊಟ್ಟು ಮೋಸದಿಂದ ಅವಳನ್ನು ಅತ್ಯಾಚಾರ ಮಾಡಿದ್ದು,ಗರ್ಭಿಣಿಯಾದಾಗ ಲೋಕನಿಂದೆಗೆ ಹೆದರಿ ಅವಳು ಪ್ರಾಣತ್ಯಾಗ ಮಾಡಿರಬಹುದು.ದುರಂತ ವನ್ನಪ್ಪಿದವರು ದೈವತ್ವ ಪಡೆದು ಆರಾಧನೆ ಪಡೆವಂತೆ ಅವಳು ಕೂಡ ದೈವತ್ವ ಪಡೆದು ಆರಾಧನೆ ಹೊಂದಿರಬಹುದು.
ಕಾಸರಗೋಡಿನ ಸೂರ್ಲು , ನೀಲೇಶ್ವರ ಮೊದಲಾದೆಡೆ ಈ ದೈವಕ್ಕೆ ಆರಾಧನೆ ಇದೆ.
ಮಾಹಿತಿ ಸಂಗ್ರಹಿಸಿ ನೀಡಿದ ಹರಿಕಾಂತ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು