Monday 20 April 2015

ಭೂತಗಳ ಅದ್ಭುತ ಜಗತ್ತಿಗೆ 75,000 ಓದುಗರು !


ಇಂದಿಗೆ ನನ್ನ ಬ್ಲಾಗ್ (ಭೂತಗಳ ಅದ್ಭುತ ಜಗತ್ತು )ಓದುಗರ ಸಂಖ್ಯೆ 75,000 ತಲುಪಿದೆ ಹಾಗೂ ನನ್ನ ಪೇಜ್ Bhutagala Adbhuta Jagattu 4,000 ಓದುಗರನ್ನು ಪಡೆದಿದೆ.
ಎರಡು ವರ್ಷ ಮೂರು ತಿಂಗಳ ಮೊದಲು ಪ್ರೊ.ಮುರಳೀಧರ ಉಪಾಧ್ಯರ ಸಹಾಯದಿಂದ ನಾನು ಬ್ಲಾಗ್ ತೆರೆದೆ,ಆರಂಭದಲ್ಲಿ ,ನನಗೆ ಯೂನಿಕೋಡ್ ತಂತ್ರಜ್ಞಾನ ತಿಳಿಯದ ಕಾರಣ ಬ್ಲಾಗ್ ನಲ್ಲಿ ಬರೆಯುದು ಕಷ್ಟಕರ ಆಗಿತ್ತು ಹಾಗಾಗಿ ಭೂತಗಳ ಚಿತ್ರ ಮಾತ್ರ ಬ್ಲಾಗ್ ಗೆ ಹಾಕುತ್ತಿದ್ದೆ

 ಇಂದಿಗೆ ಸರಿಯಾಗಿ ಎರಡು ವರ್ಷ (21-04-2013)ಮೊದಲು ಅಬ್ದುಲ್ ರಶೀದ್ ಅವರ ಪ್ರೇರಣೆಯಿಂದ ಕೆಂಡ ಸಂಪಿಗೆಗಾಗಿ ಭೂತಗಳ ಅದ್ಭುತ ಜಗತ್ತಿನಲ್ಲಿ ಎಂಬ ಅಂಕಣ ಬರೆಯಲು ಆರಂಭಿಸಿದೆ .ಆಗ ನನಗೆ Aravinda VK ಅವರು ಸಂಶೋಧಿಸಿದ aravinda vk converter (github.com//aravindavk/ascii2unicode) ಮೂಲಕ ನುಡಿ ಬರಹದಲ್ಲಿ ಬರೆದಿರುವುದನ್ನು ಯೂನಿಕೋಡ್ ಗೆ ಬದಲಾಯಿಸಲು ಕಲಿತಿದ್ದೆ .ಜೊತೆಗೆ ಬ್ಲಾಗ್ ಲೇಖನಗಳನ್ನು ಫೇಸ್ ಬುಕ್ ಹಾಗೂ ಇತರ ಗುಂಪುಗಳಿಗೆ share ಮಾಡುವುದನ್ನು ಪದ್ಯಾಣ ರಾಮಚಂದ್ರಣ್ಣ ಅವರ ಸಹಾಯದಿಂದ ಕಲಿತೆ


ನಂತರ 20 ವಾರಗಳ ಕಾಲ ಕೆಂಡ ಸಂಪಿಗೆಗೆ ತುಳುನಾಡಿನ ಅಪರೂಪದ ಭೂತಗಳ ಬಗ್ಗೆ ಬರೆದೆ.ನಂತರ ಅದು ನಿಂತು ಹೋಯಿತು
ಈ ನಡುವೆ ನನ್ನ ಲೇಖನಗಳನ್ನು ಓದಿದ ಅನೇಕ ಸ್ನೇಹಿತರು ಬೇರೆ ಬೇರೆ ಭೂತಗಳ ಕುರಿತು ಮಾಹಿತಿ ಕೇಳುತ್ತಿದ್ದರು ,ಅವರಿಗಾಗಿ ನಾನು ಮಾಹಿತಿ ಸಂಗ್ರಹಿಸಿ ನೀಡುತ್ತ ಇದ್ದೆ
.ಇದಕ್ಕೂ ಮೊದಲೇ ನನ್ನ ತುಂಡು ಭೂತಗಳು -ಒಂದು ಅಧ್ಯಯನ ,ಹಾಗೂ ತುಳುನಾಡಿನ ಅಪ್ರುವ ಭೂತಗಳು ಕೃತಿ ಪ್ರಕಟವಾಗಿತ್ತು .ಇದರಲ್ಲಿ ಅನೇಕ ಅಪರೂಪದ ಹೆಸರು ಕೂಡ ದಾಖಲಾಗಿಲ್ಲದ ಭೂತಗಳ ಬಗ್ಗೆ ಬರೆದಿದ್ದೆ

ಹಾಗಾಗಿ ಡಾ.ವಾಮನ ನಂದಾವರ ಅವರ ಪ್ರೇರಣೆಯಿಂದ ಸ್ನೇಹಿತರ ಬೆಂಬಲದೊಂದಿಗೆ ನಾನು ಒಂದು ವರ್ಷ ಮೊದಲು (21-02-2014) ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು ಎಂಬ ಸರಣಿಯನ್ನು ಆರಂಭಿಸಿದೆ .ಈಗ ಅದು 190 ಆನ್ನು  ತಲುಪಿದೆ .ಜೊತೆಗೆ ಎಪ್ಪತ್ತೈದು ಸಾವಿರ ಓದುಗರನು ತಲುಪಿದೆ,ಇಲ್ಲಿರುವ ಹೆಚ್ಚ್ಚಿನ ದೈವಗಳ ಮಾಹಿತಿ ನನ್ನ ಸ್ವಂತದ್ದು,ನಾನು ಕ್ಷೇತ್ರ ಕಾರ್ಯ ಮಾಡಿ ಪಡೆದುಕೊಂಡ ಮಾಹಿತಿಗಳು .ಸುಮಾರು 50-60 ದೈವಗಳ ಮಾಹಿತಿಯು ಡಾ.ಚಿನ್ನಪ್ಪ ಗೌಡ ,ಡಾ,viveka ರೈ ,ಡಾ.ಅಮೃತ ಸೋಮೇಶ್ವರ ,ಡಾ,ಬನ್ನಂಜೆ ಬಾಬು ಅಮೀನ್ ಅವರ ಕೃತಿಗಳಲ್ಲಿವೆ .ಉಳಿದವೆಲ್ಲ ನನ್ನ ಸ್ವಂತ ಅಧ್ಯಯನದ ಫಲಿತಗಳು ಆಗಿವೆ . 

ಈ ನಡುವೆ ದೀಕ್ಷಿತ್ ರೈ ಎನ್ಮೂರು ಅವರ ಸಹಾಯದಿಂದಒಂದು ವರ್ಷದ Bhutagala Adbhuta Jagattu ಎಂಬ page ಆನ್ನೂ ತೆರದೆ
.ಅದೂ ಇಂದಿಗೆ 4000 like ಎಂದರೆ ಓದುಗರನ್ನು ಪಡೆಯಿತು
ಇದೆಲ್ಲ ಮುಖ ಪುಸ್ತಕ ಬಂಧುಗಳ ನಿರಂತರ ಪ್ರೋತ್ಸಾಹ ಕಾರಣವಾಗಿದೆ .ಆದರಿಂದ ಎಲ್ಲ ಸ್ನೇಹಿತರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ

ನನ್ನ ಬ್ಲಾಗ್ http://laxmipras.blogspot.com
ನನ್ನ page https://www.facebook.com/pages/Bhutagala-Adbhuta-Jagattu/729560787088596?fref=photo

Sunday 19 April 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು :189 ಗುಳಿಗ (c)ಡಾ.ಲಕ್ಷ್ಮೀ ಜಿ ಪ್ರಸಾದ



ಚಿತ್ರ ಕೃಪೆ :kudreppady guttu 
.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ  ತುಳುನಾಡ ಭೂತಗಳಲ್ಲಿ ಗುಳಿಗನ ಆರಾಧನೆ ಅತ್ಯಂತ ಪ್ರಾಚೀನವಾದುದು ಎಂದು ಡಾ,ವೆಂಕಟ ರಾಜ ಪುಣಿಚಿತ್ತಾಯರು ಅಭಿಪ್ರಾಯ ಪಟ್ಟಿದ್ದಾರೆ.ನೂರ ಎಂಟು ಗುಳಿಗರಿದ್ದಾರೆಂದು ನಂಬಿಕೆ ಇದ್ದು  ಜಾಗ, ಸನ್ನಿವೇಶ, ಸಂದರ್ಭಗಳಿಗನುಸಾರವಾಗಿ ಗುಳಿಗ ದೈವ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಾನೆ.
ಗುಳಿಗ ದೈವವು ಶಿವಗಣವೆಂದು ಪರಿಗಣಿಸಲ್ಪಟ್ಟಿದೆ. ಗುಳಿಗನ ಆಯುಧ ತ್ರಿಶೂಲ ಎಂದಿದ್ದರೂ ಸೂ ಟೆ ಆತನ ಪ್ರಧಾನ ಆಯುಧ .
. ಕೈಲಾಸದಲ್ಲಿ ಒಂದು ದಿನ ಪಾರ್ವತಿ ಶಿವನಿಗೆ ತಂದುಕೊಟ್ಟ ಭಸ್ಮದಲ್ಲಿ ಒಂದು ಕಲ್ಲು ಸಿಗುತ್ತದೆ. ಈಶ್ವರದೇವರು ಅದನ್ನು ಭೂಮಿಗೆ ಎಸೆಯುತ್ತಾನೆ. ಅದರಲ್ಲಿ ಹುಟ್ಟಿದ ಈಶ್ವರನ ಮಗನೇ ಗುಳಿಗ. ಗುಳಿಗ ಹಸಿವೆ ಆಗುತ್ತಿದೆ ಎನ್ನುವಾಗ ಈಶ್ವರ ನಾರಾಯಣ ದೇವರಲ್ಲಿ ಕಳುಹಿಸುತ್ತಾನೆ. ನಾರಾಯಣ ಭೂಮಿಯಲ್ಲಿ ನೆಲವುಲ್ಲ ಸಂಖ್ಯೆ ಎಂಬುವಳ ಹೊಟ್ಟೆಯಲ್ಲಿ ಹುಟ್ಟಿ ಬರಲು ಹೇಳುತ್ತಾನೆ. ತಾಯಿಯನ್ನು ಕೊಂದು ಹೊರಗೆ ಬರುವ ಗುಳಿಗ ಹಸಿವು ತಡೆಯದೆ ನಾರಾಯಣ ಬ್ರಹ್ಮದೇವರ ಕೆರೆಯ ನೀರನ್ನು ಬತ್ತಿಸಿ ಮೀನುಗಳನ್ನು ಕೊಲ್ಲುತ್ತಾನೆ. ಅವನಿಗೆ ಆನೆ, ಕುದುರೆಗಳನ್ನು ನೀಡಿದರೂ ಅವನ ಹಸಿವೆ ಇಂಗುವುದಿಲ್ಲ. ಅದಕ್ಕೆ ನಾರಾಯಣದೇವರು ತನ್ನ ಕಿರುಬೆರಳನ್ನು ನೀಡುತ್ತಾನೆ. 
ಆಗ ನಾರಾಯಣ ದೇವರಿಗೆ ಪ್ರಜ್ಞೆ ತಪ್ಪುತ್ತದೆ. ಕೊನೆಗೆ ತ್ರಿಮೂರ್ತಿಗಳು ಅವನನ್ನು ಭೂಮಿಗೆ ಕಳುಹಿಸುತ್ತಾರೆ. ಅಲ್ಲಿ ಏಳು ಜನ ಜಲದುರ್ಗೆಯರು ದೋಣಿಯಲ್ಲಿ ಕುಳಿತು ಸಮುದ್ರದಲ್ಲಿ ಹೋಗುತ್ತಿದ್ದರು. ಅವರು ಗುಳಿಗನಿಗೆ ಆಶ್ರಯ ಕೊಡುತ್ತಾರೆ. ಬರುವಾಗ ದಾರಿಯಲ್ಲಿ ಬಿಳಿಹಂದಿ ಹಾಗೂ ಗುಳಿಗನಿಗೆ ಯುದ್ಧವಾಗುತ್ತದೆ. ಜಲದುರ್ಗೆಯರು ಅವರನ್ನು ಸಮಾಧಾನ ಮಾಡಿ ಅಣ್ಣ ತಮ್ಮಂದಿರಂತೆ ಬಾಳಲು ಹೇಳುತ್ತಾರೆ. ಪಂಜುರ್ಲಿಯ ಕ್ಷೇತ್ರದಲ್ಲಿ ನೀನು ಕ್ಷೇತ್ರಪಾಲ ಎಂದು ಹೇಳುತ್ತಾರೆ 
 .copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಇನ್ನೊಂದು ಪಾಡ್ದನ ಪಾಠದ ಪ್ರಕಾರ ಗುಳಿಗನ ತಂದೆ ಗಾಳಿ ದೇವರು ,ತಾಯಿ ಭದ್ರ ಕಾಳಿ .ಭದ್ರ ಕಾಲಿಗೆ ನವ ಮಾಸ ತುಂಬಿದಾಗ ಹೊಟ್ಟೆಯಲ್ಲಿರುವ ಮಗು ನಾನು ಯಾವ ದಾರಿಯಲ್ಲಿ ಬರಬೇಕು ?ಎಂದು ಕೇಳುತ್ತದೆ.ಆಗ ಅವಳು ದೇವರು ಕೊಟ್ಟ ದಾರಿಯಲ್ಲಿ ಬಾ ಮಗ ಎಂದು ಹೇಳುತ್ತಾಳೆ .ಅಲ್ಲಿ ಬರುವುದಿಲ್ಲ ನಾನು ಎಂದು ಮಗ ಹೇಳುತ್ತಾನೆ .ಆಗ ತಲೆ ಒಡೆದು ಬಾ ಎಂದು ತಾಯಿ ಹೇಳುತ್ತಾಳೆ .ತಲೆ ಒಡೆದು ಬಂದರೆ ತಾಯಿಯನ್ನು ಕೊಂದ ಮಗ ಎಂದಾರು ಹಾಗಾಗಿ ಅಲ್ಲಿ ಬರಲಾರೆ ಎನ್ನುತ್ತಾನೆ .ಆಗ ಅವಳು ಬೆನ್ನಿನಲ್ಲಿ ಬಾ ಎನ್ನುತ್ತಾಳೆ ಬೆನ್ನಿನಲ್ಲಿ ಬಂದರೆ ತಮ್ಮ ಎಂದಾರು ಎನ್ನುತ್ತಾನೆ.ಕೊನೆಗೆ ತಾಯಿನ ಬಲದ ಸಿರಿ ಮೊಲೆಯ ಒಡೆದು ಹುಟ್ಟುತ್ತಾನೆ .ತಾಯಿ ಹಾಲು ಕುಡಿದು ಕೈ ತಟ್ಟಿ ನಗುತ್ತಾನೆ .
ಹುಟ್ಟಿ ಹದಿನಾರು ದಿನ ಆಗುವಾಗ ಸೂರ್ಯ ನಾರಾಯಣ ದೇವರನ್ನು ಹಣ್ಣು ಎಂದು ಭಾವಿಸಿ ತಿನ್ನಲು ಹೋಗುತ್ತಾನೆ .ಆಗ ನಾರಾಯಣ ದೇವರು ನಿನಗೆ ಬೇರೆ ಆಹಾರ ಕೊಡುತ್ತೇನೆ ಎನ್ನುತ್ತಾರೆ .ಆನೆ ಕುದುರೆ ರಕ್ತ ಸಾಲದಾದಾಗ ತನ್ನ ಕಿರಿಬೆರಳನ್ನು ನೀಡುತ್ತಾರೆ .ಆಗಲೂ ಹೊಟ್ಟೆ ತುಂಬದಾಗ ಅವನನ್ನು ಬಾಲ ಸೇತುವೆ  ನೂಲು ಕೈ ಹಗ್ಗದಲ್ಲಿ ಭೂಲೋಕಕ್ಕೆ ಕಳುಹಿಸುತ್ತಾರೆ .ಭೂಲೋಕಕ್ಕೆ ಇಳಿದ ಗುಳಿಗ ಪೆರ್ಕಳ ಮೋಂಟು ಬೈದ್ಯನ ಕಳ್ಳನ್ನು ಆಹಾರವಾಗಿ ಪಡೆದು ಗೋಳಿ ಮರದಲ್ಲಿ ನೆಲೆಯಾಗುತ್ತಾನೆ ಅಲ್ಲಿಂದ ಮರದಲ ಬತ್ತಿಗೆ ಬಂದು ಮಂಜು ಬೈದ್ಯನ ಕಳ್ಳಿನ ಮಡಕೆಯನ್ನು ಪಡೆಯುತ್ತಾನೆ .ಅಲ್ಲಿಂದ ಜಾರ ಸೀಮೆಗೆ ಬಂದು ನೆಲೆಯಾಗುತ್ತಾನೆ ಅಲ್ಲಿನ ಬಾರಗರಿಂದ ವರ್ಷಂಪ್ರತಿ ಬಲಿ ನೇಮ ಪಡೆಯುತ್ತಾನೆ 
ಇಲ್ಲೆಲ್ಲಾ ಗುಳಿಗನ ಉಗ್ರತೆಯ ಚಿತ್ರಣ ಇದೆ ,ಅವನಿಗೆ ಒಂದು ಅಲೌಕಿಕ ಹುಟ್ಟನ್ನೂ ಕಟ್ಟಿ ಕೊಟ್ಟಿದ್ದಾರೆ .ಹುಟ್ಟಿನೊಡನೆ ಉಂಟಾದ ಉಗ್ರತೆ ಮತ್ತು ಪ್ರಾಣಿ ಬಲಿಗೆತಣಿಯದ ಹಸಿವು ,ಅದಕ್ಕಾಗಿ ನರ ಬಲಿಗಾಗಿ ಭೂಲೋಕಕ್ಕೆ ಬರುವುದು ಇವೆಲ್ಲ ಆತನ ಭಯಾನಕ ಉಗ್ರ ಸ್ವರೂಪಕ್ಕೆ ಅನುಗುಣವಾಗಿ ಮೂಡಿಡ ಪರಿಕಲ್ಪನೆಗಳು ಆಗಿರಬಹುದು .ಗುಲಿಗನ ಪೆಟ್ಟಿಗೆ ಸಿಕ್ಕವರು ಸಾಯುತಾರೆ ಎಂಬ ನಂಬಿಕೆ ಇದರಿಂದಲೇ ಹುಟ್ಟಿರಬಹುದು ಎಂದು ಡಾ.ಬಿ ಎ ವಿವೇಕ ರೈಗಳು ಅಭಿಪ್ರಾಯ ಪಟ್ಟಿದ್ದಾರೆ .

.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
  ಈತನನ್ನು ದೇವಿಯ ದೂತನೆಂದು ಹೇಳುತ್ತಾರೆ. ಗುಳಿಗ ಬೆಟ್ಟುಸ್ಥಾನ, ಗುಡ್ಡಕಲ್ಲು, ಹಾಕಿಸಿಕೊಂಡು ಶಿಷ್ಟರಕ್ಷಣೆ, ದುಷ್ಟಶಿಕ್ಷೆಯನ್ನು ವಿಧಿಸುವ ದೈವ ಎಂದು ಪ್ರಸಿದ್ಧವಾಗಿದೆ. ಗುಳಿಗ ಕೋಲ ಅತ್ಯಂತ ಪ್ರಾಚೀನ ಆರಾಧನೆ. ಸೂಟೆ ಈತನ ಪ್ರಧಾನ ಆಯುಧ.
ಗುಳಿಗನ ವೇಷ ಬಹಳ ಸರಳವಾದದ್ದು.  ತೆಂಗಿನಗರಿ ಹಾಗು ಅಡಿಕೆ ಹಾಳೆಯಿಂದ ಮಾಡಿದ ಮುಖವಾಡ ಗುಳಿಗನ ವಿಶೇಷತೆ. ಪೊಟ್ಟ ಗುಳಿಗ, ರಾವು ಗುಳಿಗ, ಮಂತ್ರಗುಳಿಗ, ನೆತ್ತರ್ ಗುಳಿಗ, ಚೌಕಾರು ಗುಳಿಗ, ಸಂಚಾರಿ ಗುಳಿಗ, ಉಮ್ಮಟ್ಟಿ ಗುಳಿಗ, ಮಂತ್ರವಾದಿ ಗುಳಿಗ, ರಕ್ತೇಶ್ವರಿ ಗುಳಿಗ, ಸುಬ್ಬಿಯಮ್ಮ ಗುಳಿಗ ,ಸನ್ಯಾಸಿ ಗುಳಿಗ ,ಕಳಾಳ್ತ ಗುಳಿಗ ,ಒರಿ ಮಾಣಿ ಗುಳಿಗ ಮೂಕಾಂಬಿ ಗುಳಿಗ, ಮಾರಣ ಗುಳಿಗ, ಉನ್ನಟ್ಟಿ ಗುಳಿಗ, ಅಗ್ನ ಗುಳಿಗ, ಭಂಡಾರಿ ಗುಳಿಗ, ಇತ್ಯಾದಿ 108 ಗುಳಿಗ ಇದ್ದಾರೆಂದು ಜನಪದರು ಹೇಳುತ್ತಾರೆ.ಇವರಲ್ಲಿ ಮೂಕಾಂಬಿ ಗುಳಿಗ ,ಸುಬ್ಬಿಯಮ್ಮ ಗುಳಿಗ ,ಸನ್ಯಾಸಿ ಗುಳಿಗ ,ಒರಿ ಮಾಣಿ ಗುಳಿಗ ರು ಗುಳಿಗನ ಸೇರಿಗೆ ಸಂದಿರುವ ಮಾನವ ಮೂಲದ ದೈವಗಳಾಗಿವೆ .ಉಳಿದ ಪ್ರಬೇಧಗಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಅಲೌಕಿನ ನೆಲೆಯನ್ನು ಬಿಟ್ಟು ವಾಸ್ತವಿಕ ನೆಲೆಯಲ್ಲಿ ವಿವೇಚಿಸಿದಾಗ :ಸಹಜ ಪ್ರಸವವಾಗದೆ ಆಗಿನ ಕಾಲಕ್ಕೆ ತಾಯಿಯ ಹೊಟ್ಟೆಯನ್ನು ಕೊಯ್ದು ಪ್ರಸವ ಮಾಡಿಸಿದಾಗ ಹುಟ್ಟಿದ  ಅಪರೂಪದಮಗು ಗುಳಿಗ ನಿರಬಹುದು ,ಭಾರತದಲ್ಲಿ ಬಹು ಹಿಂದಿನ ಕಾಲದಲ್ಲಿಯೇ ಶುಶ್ರುತನಿಂದ ಆರಂಭವಾದ ಶಸ್ತ್ರ ಚಿಕಿತ್ಸಾ ಪದ್ಧತಿ ಬಳಕೆಯಲ್ಲಿತ್ತು ,ಆದರೂ ಹೊಟ್ಟೆಯನ್ನು ಕೊಯ್ದಾಗ ತಾಯಿ ಬದುಕಿರುವ ಸಾಧ್ಯತೆ ಕಡಿಮೆಯೇ ಇದೆ  .ಹೀಗೆ ವಿಶೇಷವಾಗು ಹುಟ್ಟಿದ ಮಗು ಹದಿನಾರು ದಿನಗಳಲ್ಲಿಯೇ ನಾರಾಯಣ ದೇವರನ್ನು ತಿನ್ನಲು ಹೊರಟಂತ ಸಾಹಸವನ್ನು ಮಾಡುತ್ತದೆ .ಹಾಗಾಗಿಯೇ ಈತ ಮುಂದೆ ದೈವತ್ವ ಪಡೆದು ಉಗ್ರ ದೈವವಾಗಿ  ಜನಮಾನಸದಿಂದ ಆರಾಧನೆ ಹೊಂದಿರುವ ಸಾಧ್ಯತೆ ಇದೆ .
ಆಧಾರ ಗ್ರಂಥ 
ತುಳು ಜನಪದ ಸಾಹಿತ್ಯ :ಡಾ.ಬಿ ಎ ವಿವೇಕ ರೈ 
 ತುಳು ಪಾಡ್ದನ ಸಂಪುಟ :ಡಾ.ಅಮೃತ ಸೋಮೇಶ್ವರ 
ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ :ಡಾ.ಲಕ್ಷ್ಮೀ ಜಿ ಪ್ರಸಾದ


Tuesday 14 April 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 179-ಸೇಮಿ ಕಲ್ಲ ಪಂಜುರ್ಲಿ (c)ಡಾ.ಲಕ್ಷ್ಮೀ ಜಿ ಪ್ರಸಾದ


                                                ಚಿತ್ರ ಕೃಪೆ :ಧರ್ಮ ದೈವ
ಹೆಸರಿನಲ್ಲಿ ಪಂಜುರ್ಲಿ ಎಂದು ಇದ್ದರೂ ಕ್ಷೇಮಕಲ್ಲ /ಸೇಮಿ ಕಲ್ಲ ಪಂಜುರ್ಲಿ, ಪಂಜುರ್ಲಿ ದೈವವಲ್ಲ .ಪಂಜುರ್ಲಿಯ ಸೇರಿಗೆ ದೈವ ಕೂಡ ಅಲ್ಲ
ಪ್ರಧಾನ ದೈವದ ಸೇರಿಗೆಯಾಗಿ ಅನೇಕ ದೈವಗಳಿಗೆ ಆರಾಧನೆ ಇರುತ್ತದೆ .ಸಾಮಾನ್ಯವಾಗಿ ಸೇರಿಗೆ ದೈವಗಳು ಪ್ರಧಾನ ದೈವದ ಆಗ್ರಹ ಅಥವಾ ಅನುಗ್ರಹ ಪಡೆದು ದೈವತ್ವ ಪಡೆದ ಶಕ್ತಿಗಳಾಗಿರುತ್ತವೆ
ಹೀಗೆ ಸತ್ಯನಾಪುರದ ಸಿರಿಯ ಆಗ್ರಹಕ್ಕೆ ತುತ್ತಾಗೆ ದೈವತ್ವ ಪಡೆದ ದೈವ ಕ್ಷೇಮಿಕಲ್ಲ ಪಂಜುರ್ಲಿ .ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ ಎಂದು ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ.

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ
ಸಂಜೆ ಹೊತ್ತು ಕಂತುವುದರ ಒಳಗೆ ತನ್ನ ರಾಜ್ಯದ ಗದುಯನ್ನು ದಾಟಿ ಹೋಗಬೇಕೆಂದು ಕಾಂತು ಪೂಂಜ ಹೇಳುತ್ತಾನೆ .
ಅಂತೆಯೇ ದಾರುವಿನೊಂದಿಗೆ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಬರುವಾಗ ದಾರಿಯಲ್ಲಿ ಗಾಳಿ ಕೊಂತ್ಯಮ್ಮ ದೇವರು ಸಿಗುತ್ತಾರೆ .
ಸಿರಿಗೆ ರಸ ಬಾಲೆ ಹಣ್ಣು ಹಾಲು ತಂದು ಕೊಡುತ್ತಾಳೆ .ಮತ್ತೆ ಅವಳಲ್ಲಿ ನನ್ನ ಮಗ ವೀರ ಭದ್ರ ಕುಮಾರ ಬರುವ ಮೊದಲು ಇಲ್ಲಿಂದ ಹೋಗು ಅವನು ಕಂಡರೆ ನಿನ್ನನ್ನು ಬಿಡಲಾರ ,ಅವನು ಸಿಕ್ಕರೆ ಅವನನ್ನು ನಿನ್ನ ಮಗನ ಹಾಗೆ ಭಾವಿಸಿ ಅವನ ತಪ್ಪನ್ನು ಕ್ಷಮಿಸಬೇಕು ಎಂದು ಹೇಳುತ್ತಾರೆ .ಆಯಿತು ಎಂದು ಹೇಳುತ್ತಾಳೆ ಸಿರಿ
ಅಲ್ಲಿಂದ ಮುಂದೆ ಹೋಗುವಾಗ ವೀರ ಭದ್ರ ಕುಮಾರ ಹಿಮ್ಬಾಲಿಸ್ಕೊಂದು ಬಂದು ಅಡ್ಡ ಕಟ್ಟುತ್ತಾನೆ .ಅವಳತಲೆ ಕೂದಲಿಗೆ ಕೈ ಹಾಕುತ್ತಾನೆ .ಆಗ


ಓ ಮುಟ್ಟಡ ಮುಟ್ಟಡ ಪಂಡೆರ್ ಬಾಲೆಕ್ಕೆ ಸಿರಿಯೇ
ಓ ಪನ್ನಲ ಪತ್ತಿನಕೇಂಡಿಜೆ ಪಂಡೆರ್ ಆರಾಂಡ ಆನಿಗಯ್ ಯೇ
ಓ ಒಲಿಪ್ಪಾಲ ಉದೆಟ್ ಲ ನೆದಿಪ್ಪಾಲ ಕಲ್ಲುಲ ಪಾದೆಲ ನೆಗೆಪ್ಪುಲಾಯೆ

ನನ್ನನ್ನು ಮುಟ್ಟ ಬೇಡ ಮುಟ್ಟ ಬೇಡ ಎಂದು ಸಿರಿ ಹೇಳುತ್ತಾಳೆ .ಅವಳ ಮಾತನ್ನು ಲಕ್ಷಿಸದೆ ಮುಂದುವರಿದ ಅವನಿಗೆ ಶಾಪ ಕೊಟ್ಟು ಹೊಳೆಯಲ್ಲಿ ಪಾದೆ ಕಲ್ಲಾಗುವಂತೆಮಾಡುತ್ತಾಳೆ .ಮುಂದೆ ಅವನ ತಾಯಿಗೆ ಕೊಟ್ಟ ಮಾತು ನೆನಪಾಗಿ ಆತನಿಗೆ ದೈವತ್ವ ನೀಡಿ ಕ್ಷೇಮ ಕಲ್ಲು ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆ ಎಂದು ಹೇಳುತ್ತಾಳೆ .

ಹೀಗೆ ಸಿರ್ಯ ಅನುಗ್ರಹದಿಂದ ದೈವತ್ವ ಪಡೆದ ವೀರ ಭದ್ರ ಕುಮಾರ ಕ್ಷೇಮ ಕಲ್ಲ ಪಂಜುರ್ಲಿ ದೈವವಾಗಿ ನೆಲೆ ನಿಲ್ಲುತ್ತಾನೆ .

Monday 13 April 2015

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು :178 ದಾರಮ್ಮ ಬಲ್ಲಾಳ್ತಿ (c) ಡಾ.ಲಕ್ಷ್ಮೀ ಜಿ ಪ್ರಸಾದ


                            
ದಾರಮ್ಮ ಬಲ್ಲಾಳ್ತಿಯ ಅತಿ ಅಪರೂಪದ ಫೋಟೋ ಒದಗಿಸಿ ಕೊಟ್ಟ ಸುಕೇಶ್ ಬಿಲ್ಲವ ಇವರಿಗೆ ಋಣಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮರ್ದಾಲ ಎಂಬ ಜೈನ ಬಲ್ಲಾಳರ ಬೀಡು ಇದೆ .
ಇಲ್ಲಿನ ಆರಾಧ್ಯ ದೈವ ಮರ್ದಾಲ ಧೂಮಾವತಿ ಮತ್ತು ಸೇರಿಗೆ ದೈವ ದಾರಮ್ಮ ಬಲ್ಲಾಳ್ತಿ ಬಗ್ಗೆ  ತುಳುನಾಡಿನ ದೈವಗಳು ಕೃತಿಯಲ್ಲಿ ಡಾ.ಬನ್ನಂಜೆ ಬಾಬು ಅಮೀನ್ ಅವರು ಮಾಹಿತಿ ನೀಡಿದ್ದಾರೆ. ಸುಮಾರು ನಾನ್ನೂರು ವರ್ಷಗಳ ಹಿಂದೆ ಇಲ್ಲಿ ನಾಲ್ಕು ಜನ ಅಣ್ಣ ತಮ್ಮಂದಿರು ಇದ್ದರು .ಈ ನಾಲ್ವರು ಬಲ್ಲಾಳರಿಗೆ ಒಬ್ಬಳೇ ಒಬ್ಬ ಮುದ್ದಿನ ತಂಗಿ ಇದ್ದಳು .
ಒಂದಿ ದಿನ ನಾಲ್ವರು ಬಲ್ಲಾಳರು ಅಡೂರಿಗೆ ಧೂಮಾವತಿ ಕೋಲ ನೋಡಲು ಹೋಗುತ್ತಾರೆ .ಅವರು ಹಿಂದೆ ಬರುವಾಗ ಅವರೊಂದಿಗೆ ಧೂಮಾವತಿ ದೈವ ಮರ್ದಾಲ ಬೀಡಿಗೆ ಬರುತ್ತದೆ .ತನಗೆ ಮೆಚ್ಚಿ ಕೊಟ್ಟು ಆರಾಧಿಸಬೇಕು ಎಂದು ಬಲ್ಲಾಲರಿಗೆ ಸೂಚಿಸುತ್ತದೆ .
ಅಣ್ಣ ತಮ್ಮಂದಿರು ಸಂತೋಷದಿಂದ ಮೆಚ್ಚಿ  ಸಿದ್ಧತೆಗೆ ತೊಡಗುತ್ತಾರೆ .ಮೆಚ್ಚಿಗೆ ಹೊಸ ಬತ್ತ ದಿನದ ಅರಳು ಆಗಬೇಕು .ಇದನ್ನು ಶುದ್ಧದಿಂದ ಮಾಡಲು ತಮ್ಮ ಮುದ್ದಿನ ತಂಗಿ ದಾರಮ್ಮ ನಿಗೆ ಹೇಳುತ್ತಾರೆ .
ಅಣ್ಣಂದಿರ ಮಾತಿನಂತೆ ದಾರಮ್ಮ ತಲೆಗೆ ಎಣ್ಣೆ ಹಚ್ಚ್ಚಿ ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಅರಳು ತಯಾರಿಸಲು ಸಿದ್ಧಳಾಗುತ್ತಾಳೆ.copy rights reserved (c) Dr.Laxmi g Prasad
ಓಲೆ ಉರಿಸಿ ಹೊಸ ಓಡು(ಮಣ್ಣಿನ ಬಾಣಲೆ ) ಇರಿಸುತ್ತಾಳೆ ಬಿಸಿಯಾದಾಗ ಬತ್ತ ಹಾಕಿ ಅರಳು ಮಾಡುತ್ತಾಳೆ.ಆಗ ಒಂದು ಬತ್ತ ಸಿಡಿದು ಅರಳಾಗಿ ಒಲೆಯ ಬದಿಯ ಕಲ್ಲಿನ ಮೇಲೆ ಬೀಳುತ್ತದೆ .ಆ ಹೊಸ ಬತ್ತದ ಅರಳಿನ ಪರಿಮಳಕ್ಕೆ ಸೋತು ತನ್ನ ವಯೋಸಹಜ ಚಪಲತೆಯಿಂದ ದಾರಮ್ಮ ಆ ಅರಳನ್ನು ಹೆಕ್ಕಿ ಬಾಯಿಗೆ ಹಾಕಿ ತಿನ್ನುತ್ತಾಳೆ .
ಇದನ್ನು ಮಾಯ ರೂಪದಲ್ಲಿದ್ದ ಧೂಮಾವತಿ ದೈವ ಗಮನಿಸುತ್ತದೆ . ತನಗೆ ಕೊಡುವ ಮೊದಲು ಅವಳು ಅರಳನ್ನು ತಿಂದದ್ದರಿಂದ  ಕೋಪಗೊಂಡ ಮರ್ದಾಲ ಧೂಮಾವತಿ ದೈವ ದಾರಮ್ಮ ಬಲ್ಲಾಲ್ದಿ ಯನ್ನು ಮಾಯ ಮಾಡುತ್ತಾಳೆ .
ಇದನ್ನು ತಿಳಿದ ಅಣ್ಣಂದಿರು ದುಃಖಿಸುತ್ತಾ ಧೂಮಾವತಿಯಲ್ಲಿ "ಅವಳು ನಮ್ಮ ಮರ್ದಾಲ ಬೀಡಿನ ಐಸಿರಿ ಅವಳನ್ನು ಮಾಯ ಮಾಡಿದೆಯಲ್ಲ ,ಇನ್ನಾರು ನಮಗೆ ಗತಿ ಎಂದು ಪ್ರಾರ್ಥಿಸಲು ,ಪ್ರಸನ್ನ ಗೊಂಡ ದೈವ ಅವಳನ್ನು ನನ್ನ ಸೇರಿಗೆಗೆ ಸಂದಾಯ ಮಾಡುತ್ತೇನೆ ನನಗೆ ಕೋಲ ನೇಮ ನೆರಿ ಕೊಟ್ಟು  ಆರಾಧನೆಮಾಡುವಾಗ ಜೊತೆಗೆ ಅವಳಿಗೂ ಆರಾಧನೆ ಆಗುವಂತೆ ಮಾಡುತ್ತೇನೆ "ಎಂದು ಹೇಳಿ ಅನುಗ್ರಹ ಮಾಡಿತು .copy rights reserved (c) Dr.Laxmi g Prasad 
ಹಾಗೆ ಮುಂದೆ ದಾರಮ್ಮ ಬಲ್ಲಾಳ್ತಿ ಧೂಮಾವತಿಯ ಶ್ರೀಗೆ ದೈವವಾಗಿ ಆರಾಧನೆ ಹೊಂದುತ್ತಾಳೆ .
"ದೈವಕ್ಕೆ ಕೋಲ ಕೊಡುವ ಸಂದರ್ಭದಲ್ಲಿ ದಾರಮ್ಮ ಬಲ್ಲಾಲ್ತಿಗೆ ಪಟ್ಟೆ ಸೀರೆ ಉಟ್ಟು ದರ್ಶನಾವೇಶ ನಡೆಸುವುದು ,ಮರ್ದಾಲ ಧೂಮಾವತಿ ಯ ಜೊತೆಗೆ ದರ್ಶನ ಬರಿಸುವುದು ಕ್ರಮ ಅದೇ ರೀತಿ ದಾರಮ್ಮ ಬಲ್ಲಾಳ್ತಿಯ ದರ್ಶನಾವೇಶದಿನದ ಬಿಡುಗಡೆಯಾಗುವ ಮೊದಲು ಹೆಣ್ಣು ಸಂತತಿಗೆ ಪ್ರಸಾದ ಕೊಡುವುದು ಸಂಪ್ರದಾಯ ಎಂದು "ಡಾ||ಬನ್ನಂಜೆ ಬಾಬು ಅಮೀನ್ ಅವರು ಹೇಳಿದ್ದಾರೆ .copy rights reserved (c) Dr.Laxmi g Prasad 
ಕೋಲದ ಸಮಯದಲ್ಲಿ ದಾರಮ್ಮ ಬಲ್ಲಾಳ್ತಿಯ ಭೂತ ಕಟ್ಟುವವರು ಪಟ್ಟೆ ಸೀರೆ ಉಟ್ಟು ಸ್ತ್ರೀ  ಸಹಜ ಉಡುಗೆಯನ್ನು ಧರಿಸುತ್ತಾರೆ ."ಪರಿವಾರ ದೈವಗಳ ಕೋಲದ ನಂತರ ಮರ್ದಾಲ ಧೂಮಾವತಿ /ಜುಮಾದಿ ಮತ್ತು ದಾರಮ್ಮ ಬಲ್ಲಾಳ್ತಿ ಗಳಿಗೆ ಒಟ್ಟಿಗೆ ಕೋಲ ಕೊಟ್ಟು ಆರಾಧಿಸುತ್ತಾರೆ "ಎಂದು ಬನ್ನಂಜೆ ಬಾಬು ಅಮೀನ್ ಅವರು ಹೇಳಿದ್ದಾರೆ .
ತುಳುನಾಡಿನ ಭೂತಾರಾಧನೆ ಹಲವು ಕೌತುಕಗಳ ಒಡಲು.ಇದನ್ನು ಸರಿಯಾಗಿ ಅರ್ಥೈಸಬೇಕಾದರೆ ದೀರ್ಘ ಕಾಲದ ವಿಸ್ತೃತ ಅಧ್ಯಯನದ ಅಗತ್ಯವಿದೆ .ಇಲ್ಲಿ ಯಾರು ಯಾಕೆ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದನ್ನು ಹೇಳಲು ನಿಶ್ಚಿತವಾದ ನಿಯಮ ಎಂಬುದಿಲ್ಲ .ಹಾಗಿದ್ದರೂ ದೈವಗಳ ಅನುಗ್ರಹಕ್ಕೆ ಪಾತ್ರರಾದವರೂ ,ಕೋಪಕ್ಕೆ ತುತ್ತಾದವರೂ ಅದೇ ದೈವದ ಸೇರಿಗೆ ಸೇರಿ ದೈವತ್ವ ಪಡೆದು ಆರಾಧಿಸಲ್ಪಡುವ ವಿದ್ಯಮಾನ ತುಳುನಾಡಿನ ಅಲ್ಲಲ್ಲಿ ಕಂಡು ಬರುತ್ತದೆ .ಅಂತೆಯೇ ಇಲ್ಲಿ ಕೂಡ ದಾರಮ್ಮ ಧೂಮಾವತಿ ದೈವದ ಕೋಪಕ್ಕೆ ತುತ್ತಾಗಿ ಮಾಯವಾಗಿ ನಂತರ ದೈವತ್ವ ಪಡೆದು ಆರಾಧಿಸಲ್ಪಡುತ್ತಿರುವ ಸಾಧ್ಯತೆ ಇದೆ .copy rights reserved (c) Dr.Laxmi g Prasad 
ವಿಧಿ ನಿಷೇಧಗಳು ಆದಿ ಮಾನವನ ಅಲಿಖಿತ ಶಾಸನಗಳಗಿದ್ದವು .ಹಾಗೆಯೇ ಅಲೌಕಿಕ ಕಲ್ಪನೆಯನ್ನು ಹೊರತು ಪಡಿಸಿ ವಾಸ್ತವಿಕ ನೆಲೆಯಲ್ಲಿ ಆಲೋಚಿಸುವಾಗ "ದೈವಕ್ಕೆ ಅರ್ಪಿಸುವ ಮೊದಲು ಅರಳನ್ನು ತಿನ್ನಬಾರದು ಎಂಬ ವಿಧಿಯನ್ನು ಮೀರಿದ ದಾರಮ್ಮ ನಿಗೆ ಶಿಕ್ಷೆಯಾಗಿದ್ದು ಅವಳು ದುರಂತವನ್ನಪ್ಪಿರುವ ಸಾಧ್ಯತೆ ಇದೆ .ದುರಂತ ಮತ್ತು ದೈವತ್ವ tulu ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಅಂಶವೇ ಆಗಿರುವುದರಿಂದ ,ದುರಂತವನ್ನಪ್ಪಿದ ದಾರಮ್ಮ ದೈವತ್ವ ಪಡೆದಿರುವ ಸಾಧ್ಯತೆ ಇದೆ ,ಇದಕ್ಕೆ ಧೂ ಮಾವತಿ ದೈವದ ಕೋಪ ಮತ್ತು ಮಾಯಾ ಮಾಡಿದ ಕಥಾನಕ ಸೇರಿರಬಹುದು "ಎಂದು ಹೇಳಬಹುದು .
ಪುತ್ತೂರಿನ ಮರ್ದಾಲ ಬೀಡಿನ ದಾರಮ್ಮ ಬಲ್ಲಾಲ್ತಿಗೆ ಕಾರ್ಕಳ ,ಉಡುಪಿcopy rights reserved (c) Dr.Laxmi g Prasad 
ಸುತ್ತ ಮುತ್ತ ಕೂಡ ಆರಾಧನೆ ಇರುವುದು ಕುತೂಹಲಕರ ವಿಚಾರವಾಗಿದೆ .ಮರ್ದಾಲ ಬೀಡಿನಲ್ಲಿ ಕನ್ನಡಿಗ ಎಂಬ ಒಂದು ಅಪರೂಪದ ದೈವಕ್ಕೆ ಕೂಡ ಆರಾಧನೆ ಇದೆ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ
ಆಧಾರ ಗ್ರಂಥ
ತುಳುನಾಡಿನ ದೈವಗಳು -ಡಾ||ಬನ್ನಂಜೆ ಬಾಬು ಅಮೀನ್

Friday 10 April 2015

ಕೊಡಗಿನ ಲಿಂಗ ರಾಜೇಂದ್ರ ಒಡೆಯರ ಸ್ವಹಸ್ತಾಕ್ಷರ ಇರುವ ದಾನಪತ್ರ (ಕಾಲ ಕ್ರಿ.ಶ 1809)(c)ಡಾ.ಲಕ್ಷ್ಮೀ ಜಿ ಪ್ರಸಾದ


 copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ ಕಾವಿನ ಮೂಲೆ ಯವರು ಕೊಡಗರಸರ ಕರಣಿಕರು ಆಗಿದ್ದರು ಎಂದು ಹೇಳುದನ್ನು ಬೆಳ್ಳಾರೆ ಗೆ ಹೋದ ಹೊಸತರಲ್ಲೇ  ಕೇಳಿದ್ದೆ .ಇತ್ತೀಚಿಗೆ ಮಾರ್ಚ್ 9 ಕ್ಕೆ ನನ್ನ ಅಕ್ಕನ ಮಗ ಡಾ.ರಾಜೇಶ ರುಪಾಯಿ ಮೂಲೆಗೆ ಮದುವೆಯಾಗಿದ್ದು ,ಮದುಮಗಳು ಡಾ.ನಿತಾಶಾಳ ಅಜ್ಜನ ಮನೆ ಕಾವಿನ ಮೂಲೆ ಎಂದು ತಿಳಿಯಿತು , ಅವರ ತಾಯಿ ವಸಂತ ಲಕ್ಷ್ಮಿ ನನ್ನ ಹಳೆಯ ಸ್ನೇಹಿತರು ಕೂಡ !ಹಾಗಾಗಿ ಅವರಲ್ಲಿ ಕಾವಿನ ಮೂಲೆಯ ಬಗ್ಗೆ ವಿಚಾರಿಸಿದೆ ಆಗ ಅವರು ಅವರ ತಂದೆ ಮನೆ ಕಾವಿನ ಮೂ ಲೆಯಲಿ ಒಂದು ದಾನ ಶಾಸನ ಇರುವ ಬಗ್ಗೆ ತಿಳಿಸಿದರು ,ಹಾಗೆ ಅವರ ಸಹೋದರ ರಾಜಾರಾಮ ಭಟ್ ಕೆ ಅವರನ್ನು ಸಂಪರ್ಕಿಸಿ ಅವರ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿದೆcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ


ಇದು ಇದು ಒಂದು ಅಪರೂಪದ ಅಪ್ರಕಟಿತ ದಾನ ಶಾಸನ 
 ಕಾವಿನಮೂಲೆ ರಾಜಾರಾಮ ಭಟ್ ಕೆ ಅವರ ಹಿರಿಯರಿಗೆ ಕೊಡಗರಸರು ನೀಡಿದ ಭೂಮಿಯ ಬಗ್ಗೆ ಇದರಲ್ಲಿ ಮಾಹಿತಿ ಇದೆ
ರಾಜಾರಾಮ ಭಟ್ಟರ ಕುಟುಂಬದ ಹಿರಿಯರಾದ ಸಣ್ಣಯ್ಯ ಎಂಬವರಿಗೆ ಬೆಳ್ಳಾರೆ ಗ್ರಾಮಕ್ಕೆ ಸೇರಿದ ಉಮಿಕ್ಕಳ ಎಂಬ   ಜಾಗವನ್ನು ದಾನವಾಗಿ ಕೊಟ್ಟು ಕಾಲ ಕಾಲಕ್ಕೆ ಸಲ್ಲಿಸಬೇಕಾದ ಕಂದಾಯದ ಬಗ್ಗೆ ಇದರಲ್ಲಿ ಮಾಹಿತಿ ಇದೆ .ಆರಂಭದ ಮೋಹರಿನಲ್ಲಿ ಲಿಂ ಎಂದು ಬರೆದಿದ್ದು ಕಾಲವನ್ನು 1809 ಎಂದು ನೀಡಿದೆ ಇದರಲ್ಲಿ ಲಿಂಗ ರಾಜೇಂದ್ರ ಒಡೆಯರ್ ಎಂದು ಇಂಗ್ಲಿಷ್ ಮತ್ತು ಅರೇಬಿಕ್ ನಲ್ಲಿ ಬರೆಯಲಾಗಿದೆ
ಇದರ ಕೊನೆಯಲಿ ಕೊಡಗಿನ ಲಿಂಗ ರಾಜೇಂದ್ರ ಒಡೆಯರ ಸ್ವಹಸ್ತಾಕ್ಷರ ಇದೆ


Saturday 27 December 2014

ಗಂಡನ ಚಿತೆಯೊಂದಿಗೆ ಬೆಂದು ಹೋದವ ರೆಷ್ಟೋ ?ಡಾ.ಲಕ್ಷ್ಮೀ ಜಿ ಪ್ರಸಾದ


paper.kannadaprabha.in/PUBLICATIONS\KANNADAPRABHABANGALORE\KAN/2014/12/27/ArticleHtmls/27122014006008.shtml?Mode=1


ಅಮ್ಮಾ!ಉರಿ ನೋವು ..!ನೀರು ನೀರು ..!ಎಂದು ಬೊಬ್ಬಿರಿಯುತ್ತಾ ಬೆಂಕಿಯ ಕಿಡಿಯನ್ನು ಉಗುಳುತ್ತಿರುವ ಸ್ತ್ರೀ ರೂಪಿ ಬೆಂಕಿಯ ರಾಶಿಯೊಂದು ಓಡಿ  ಬರುತ್ತಿದೆ !ಕೈಕಾಲು ಬೆಂದು ಮಾಂಸದ ಮುದ್ದೆಗಳು ಉದುರುತ್ತಿವೆ !ನೀರು ನೀರು ಎಂದು ಅಂಗಲಾಚುತ್ತಿದ್ದಾಳೆ!ಭಯಾನಕ ದೃಶ್ಯ !ನೋಡಲು ಅಸಾಧ್ಯ ! ಕೂಡಿದ ನೋಡಿದ ಮಂದಿ ಅವಳ ನೋವು ನೋಡಲಾಗದೆ ಕಣ್ಣು ಮುಚ್ಚಿಕೊಂದಿದ್ದಾರೆ !ಚೀತ್ಕಾರ ಕೇಳಲಾಗದೆ ಕಿವಿಗೆ ಕೈ ಹಿಡಿದಿದ್ದಾರೆ !ಆದರೆ ಯಾರೂ ಅವಳಿಗೆ ನೀರುಕೊಡಲು ಮುಂದಾಗುವುದಿಲ್ಲ !ಅವಳ ಹಿಂದಿನಿಂದ ದೊಡ್ಡ ದೊಡ್ಡ ಹಸಿ ಮರದ ಹಾಗೂ ಕಬ್ಬಿಣದ ಬಡಿಗೆಗಳನ್ನು ಹಿಡಿದ ರಾಕ್ಷಸರಂತೆ ಇರುವ ಜನರು ಅವಳನ್ನು ಹಿಡಿಯಲು ಓಡಿ ಬರುತ್ತಿದ್ದಾರೆ..!ನಾನು ನೀರು ಕೊಡಲೆಂದು ನೀರು ತುಂಬಿದ ಕೊಡವನ್ನು ಅವಳ ಮುಂದೆ ಹಿಡಿದಿದ್ದೇನೆ ಅಷ್ಟರಲ್ಲಿ ಅವಳನ್ನು ಕಟ್ಟಿದ ಕಬ್ಬಿಣದ ಸರಪಳಿಯಿಂದ ಕೆಂಡ ತುಂಡೊಂದು ನನ್ನ ಕಣ್ಣಿನ ಒಳಗೆ ಬೀಳುತ್ತದೆ ..!ಅಮ್ಮಾ..!ಉರಿ ..
ಅಬ್ಬ ಇಷ್ಟೆಲ್ಲಾ ಕಂಡದ್ದು ಕನಸಿನಲ್ಲಿ !ನಿಜ ಅಲ್ಲ!ಅಬ್ಬಾ!
ಎಚ್ಚರಾಗುವಾಗ ಕೈಕಾಲು ನಡುಗುತ್ತಿತ್ತು !
ಇದೊಂದು ಕನಸು ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ !ಈ ಕನಸು ಬೀಳಲು ಒಂದು ಬಲವಾದ ಕಾರಣವೂ ಇದೆ !
ಮೊನ್ನೆ ಶನಿವಾರ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ದಹ್ವಾದೇವಿ ಎಂಬ ಮಹಿಳೆ ಗಂಡನ ಚಿತೆಗೆ ಹಾರಿ ಸತಿ ಹೋದ ವಿಚಾರವನ್ನು ನಿನ್ನೆ ಮಾಧ್ಯಮಗಳ ಮೂಲಕ ಓದಿ ತಿಳಿದಿದ್ದೆ .ತಟ್ಟನೆ ಸತಿ ಪದ್ಧತಿಯ ಕ್ರೌರ್ಯ, ಆ ಹೆಣ್ಣು ಮಗಳು ಅನುಭವಿಸಿರಬೇಕಾದ ಉರಿ ನೋವು ನೆನಪಾಗಿತ್ತು.
ಬೆಳ್ಳಾರೆಗೆ ಹೋಗುವ ತನಕ ಸತಿ ಪದ್ದತಿಯ ದಾರುಣತೆಯ ಅರಿವು ನನಗಿರಲಿಲ್ಲ . ಐದು-ಐದೂವರೆ  ವರ್ಷಗಳ ಮೊದಲು ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಲೆಂದು ಬೆಳ್ಳಾರೆಗೆ ಬಂದಾಗ ನಾನು ಮೊದಲು ಗಮನಿಸಿದ್ದೇ ಬೆಳ್ಳಾರೆ ಮೇಗಿನ ಪೇಟೆಯಲ್ಲಿ ಹಾಕಿರುವ ಮಾಸ್ತಿ ಕಟ್ಟೆ ಎಂಬ ನಾಮ ಫಲಕ .
ಹಾಗಾಗಿ ಮೊದಲ ದಿನವೇ ಕಲ್ಯಾಣ ಸ್ವಾಮಿ ವಶಪಡಿಸಿಕೊಂಡ ಕೋಟೆ ಹಾಗೂ ಮಾಸ್ತಿ ಕಟ್ಟೆ ಬಗ್ಗೆ ವಿಚಾರಿಸಿದ್ದೆ !
ಇಂದಿನ ಶಿಕ್ಷಣದಲ್ಲಿ ಆನ್ವಯಿಕತೆಯ ಕೊರತೆಯೋ ,ತಿಳುವಳಿಕೆಯ ಕೊರತೆಯೋ ಏನೋ ಅಲ್ಲಿ ಈ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಅನ್ನುವುದು ವಾಸ್ತವ !ಅನಂತರ ಸಾಕಷ್ಟು ಶೋಧನೆ ಮಾಡಿ ಅಲ್ಲಿನ ಬೀಡಿನಲ್ಲಿ ಆನೆಕಟ್ಟುವ ಕಲ್ಲು, ಎರಡು ಮಾಸ್ತಿ ವಿಗ್ರಹಗಳು ಹಾಗೂ ಇತರ ಅವಶೇಷಗಳು  ಇತ್ಯಾದಿಗಳು  .ಆ ಬಗ್ಗೆ ಒಂದಷ್ಟು ಮಾಹಿತಿಗಳೂ ಲಭ್ಯವಾದವು.
ಬೆಳ್ಳಾರೆ ಮಹಾ ಸತಿ ಕಟ್ಟೆ ಬಗ್ಗೆ ನಾನು ವಿಚಾರಿಸಿದಾಗ ಕೆಲವು ವದಂತಿ /ನಂಬಿಕೆಗಳ ಕುರಿತು ಮಾಹಿತಿ ಸಿಕ್ಕಿತು , ಹಿಂದೆ ಸ್ತ್ರೀಯೊಬ್ಬಳು ಕೊಂಡ ಹಾರಿ /ಗಂಡನ ಚಿತೆಯೊಂದಿಗೆ ಉರಿದು ಸತಿ ಹೋಗಿರುವುದರ ಸ್ಮಾರಕವಾಗಿ ನಿರ್ಮಿಸಿರುವ ಒಂದು ಕಲ್ಲಿನ ಕಟ್ಟೆಗೆ ಮಹಾ ಸತಿ ಕಟ್ಟೆ ಎಂದು ಕರೆಯುತ್ತಾರೆ .
ಸಂಕೋಲೆ ಎಳೆಯುವ ಸದ್ದು
ಬೆಳ್ಳಾರೆಯ ಮಾಸ್ತಿ ಕಟ್ಟೆ ಬಗ್ಗೆ ಈ ರೀತಿಯ  ಮಹಾ ಸತಿ ಹೋದ ಕಥಾನಕ ಯಾರಿಗೂ ಅಲ್ಲಿ ಯಾರಿಗೂ ತಿಳಿದಿರಲಿಲ್ಲ !ಆದರೆ ಅಮವಾಸ್ಯೆಯಂದು  ರಾತ್ರಿ ಬೆಳ್ಳಾರೆ ಮೇಗಿನ ಪೇಟೆಯಲ್ಲಿರುವ ಮಾಸ್ತಿ ಕಟ್ಟೆ ಕಡೆಯಿಂದ ಬೆಳ್ಳಾರೆ ಕೆಳಗಿನ ಪೇಟೆವರೆಗೆ ಕಬ್ಬಿಣದ ಸರಪಳಿ ಎಳೆದುಕೊಂಡು ಬಂದ ಸದ್ದು ಕೇಳಿಸುತ್ತದೆ ಎಂದು ಅನೇಕರು ಹೇಳಿದರು !ನಾನು ಬೆಳ್ಳಾರೆಯಲ್ಲಿದ್ದ ನಾಲ್ಕು ವರ್ಷಗಳಲ್ಲಿ ಒಂದು ದಿನವೂ ಅಂಥ ಸದ್ದು ನನಗೆ ಕೇಳಲಿಲ್ಲ .ಆದರೆ “ಅವರೆಲ್ಲ ಕೇಳುತ್ತದೆ ಎನ್ನುವ ಆ ಸದ್ದು ಏನು ಇರಬಹುದು  ?”ಎಂದು ಮಹಾ ಸತಿ ಕುರಿತಾದ ಅಧ್ಯಯನದಿಂದ ತಿಳಿದು ಬಂತು .
ಮಹಾ ಸತಿಗೂ ಸಂಕೋಲೆ ಎಳೆಯುವ ಸದ್ದಿಗೂ ಏನು ಸಂಬಂಧ ?!ಆರಂಭದಲ್ಲಿ ನನಗೂ ತಿಳಿಯಲಿಲ್ಲ .ಮಹಾ ಸತಿ ಪದ್ದತಿ ಯನ್ನು ಹೇಗೆ ಆಚರಿಸುತ್ತಾರೆ? ಎಂದು ತಿಳಿದಾಗ ಇಲ್ಲಿ ಸಂಕೋಲೆ ಎಳೆಯುವ ಸದ್ದು ಏಕೆ ಕೇಳಿಸುತ್ತಿದೆ?ನನಗೆ  ಎಂದು ಅರಿವಾಯಿತು
 ದಾರುಣ ದೃಶ್ಯದ ನೆನಪು
ಸತಿ ಹೋಗುವದು ಒಂದು ಭಯಾನಕ  ದಾರುಣ ಘಟನೆ.ಅದೊಂದು  ಕ್ರೌರ್ಯದ ಪರಮಾವಧಿ !ಅಂಥ ಒಂದು  ದಾರುಣ ದೃಶ್ಯವನ್ನು ನೋಡಿದವರಿಗೆ ಮತ್ತೆ ಮತ್ತೆ ನೆನಪಾಗಿ ಆ ಸದ್ದು ಕೇಳಿದಂತೆ ಅನಿಸಿ ಬೆಚ್ಚಿ ಬೀಳುತ್ತಿರಬಹುದು !ನಂತರ ಅಂಥಹ ಒಂದು ನಂಬಿಕೆ ಬೆಳೆದಿರ ಬಹುದು !
 ಮಹಾ ಸತಿಯಾಗುವವರು ಎಲ್ಲರೂ ಸ್ವ ಇಚ್ಚೆಯಿಂದ ಚಿತೆಗೆ ಹಾರಿ ಸಾಯುತ್ತಿರಲಿಲ್ಲ !ಅವರನ್ನು ಬಲವಂತವಾಗಿ ಗಂಡನ ಮೃತ ದೇಹಕ್ಕೆ ಸಂಕೋಲೆಯಲ್ಲಿ ಬಂಧಿಸಿ ಚಿತೆಯಲ್ಲಿ ಉರಿಸಲಾಗುತ್ತಿತ್ತು !
ಒಂದೊಮ್ಮೆ ಸ್ವ ಇಚ್ಚೆಯಿಂದ ಸತಿಯಾಗುವ ನಿರ್ಧಾರಕ್ಕೆ ಬಂದಿದ್ದರೂ ಚಿತೆಯ ಬೆಂಕಿ  ದೇಹಕ್ಕೆ ಬಿದ್ದಾಗ, ಉರಿ ತಡೆಯಲಾರದೆ ಚಿತೆಯಿಂದ ಎದ್ದು ಓಡಿ ಬರುತ್ತಿದ್ದರು! ಆಗ ಸುತ್ತ ಮುತ್ತ ದೊಡ್ಡ ಬಡಿಗೆಯನ್ನು  ಹಿಡಿದು ನಿಂತ ಜನ ಅವಳು ಎದ್ದು ಬರದಂತೆ ಅವಳನ್ನು ಬಡಿಗೆಯಿಂದ ಒಳ ತಳ್ಳುತ್ತಿದ್ದರು !
ಬೆಂಕಿ ಹಿಡಿದು ಸಾಯುವುದು  ಎಂದರೆ ಅದು ಅತ್ಯಂತ ದಾರುಣ !ಮೇಲ್ಮೈ ಎಲ್ಲ ಸುಟ್ಟ ನಂತರ ಒಳಭಾಗ ಸುಟ್ಟು ಮರಣ ಸಂಭವಿಸಲು ತುಂಬಾ ಹೊತ್ತು ಬೇಕು !ಅಷ್ಟು ಸಮಯದ ಅವಳ ನೋವು ಉರಿ ಚೀರಾಟ ಹೇಗಿರಬಹುದು !ಅಬ್ಬಾ ! ನೆನೆಸಿದರೆ ದಿಗಿಲಾಗುತ್ತದೆ !
ಇಂಥಹ ಸಂದರ್ಭಗಳಲ್ಲಿ ಉರಿ ನೋವು ತಡೆಯಲಾರದಾಗ ಎಷ್ಟೇ ಒಳ ನೂಕುವವರಿದ್ದರೂ ,ಎಷ್ಟೇ ಗಟ್ಟಿಯಾಗಿ ಸಂಕೋಲೆಯಿಂದ ಬಂಧಿಸಿದ್ದರೂ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿ ಬರುವ ಸಾಧ್ಯತೆಗಳು ಇರುತ್ತವೆ !ಬೆಂಕಿಯ ಕೆಂಡ ಉಗುಳುವ ಸಂಕೋಲೆಯನ್ನೊಳಗೊಂಡಿರುವ ಅವಳನ್ನು ಬೆಂಕಿ ತಗಲುವ ಭಯಕ್ಕೆ ಹಿಡಿಯಲು ಅಸಾಧ್ಯವಾಗಿರುವ ಸಾಧ್ಯತೆಗಳಿವೆ !
ಬಹುಶ ಬೆಳ್ಳಾರೆಯಲ್ಲಿ ಮಹಾ ಸತಿಯಾದ  ಆ ಹೆಣ್ಣು  ಮಗಳು ಉರಿ ತಾಳಲಾಗದಾಗ ಚಿತೆಯಿಂದ ಹೇಗೋ ಸಂಕೋಲೆ ಸಮೇತ ತಪ್ಪಿಸಿಕೊಂಡು ಓಡಿ ಬಂದಿರಬೇಕು
ಅಂದು ನಡೆದ ಮಹಾ ಸತಿಯನ್ನು ನೋಡಿದ ಮಂದಿಯ ಹೃದಯದಲ್ಲಿ ಅವಳು ಬೆಂಕಿಯುಗುಳಿಕೊಂಡು,ಸಂಕೋಲೆ ಸಮೇತ ಓಡಿ ಬಂದ ದೃಶ್ಯ ಅಚ್ಚೊತ್ತಾಗಿ ಕುಳಿತಿದ್ದು ಅವರಿಗೆ ಮತ್ತೆ ಮತ್ತೆ ಆ ದೃಶ್ಯ ಕಣ್ಣಿಗೆ ಕಂಡಂತೆ ಆಗಿರ ಬಹುದು!! .
ಅದುವೇ ಮುಂದೆ ಬೆಳ್ಳಾರೆಯಲ್ಲಿ ಅಮವಾಸ್ಯೆಯಂದು ಬೆಳ್ಳಾರೆ ಮೇಗಿನ ಪೇಟೆಯ ಬಳಿಯಿರುವ  ಮಾಸ್ತಿ ಕಟ್ಟೆಯಿಂದ ಕೆಳಗಿನ ಪೇಟೆ ತನಕ ರಾತ್ರಿ ಸಂಕೋಲೆ ಎಳೆದು ಕೊಂಡು ಹೋಗುವ  ಸದ್ದು ಕೇಳುತ್ತದೆ ಎಂಬ ನಂಬಿಕೆ ಹರಡಲು ಕಾರಣವಾಗಿರಬಹುದು.
ಬೆಳ್ಳಾರೆ ಮಾಸ್ತಿ ಕಟ್ಟೆಯ ಸಮೀಪದಲ್ಲಿ ತಡಗಜೆ ಎಂಬ ಪ್ರದೇಶವಿದ್ದು ಅಲ್ಲಿ ಯಾರೋ ಅಡಗಿ ಕುಳಿತುಕೊಂಡಿದ್ದ ಬಗ್ಗೆ ಐತಿಹ್ಯವಿದೆ ,ತಡಗಜೆ ಎಂದರೆ ಅಡಗಿ ಕುಳಿತ ಜಾಗ ಎಂದರ್ಥ.ಬಹುಶ ಈ ದುರ್ದೈವಿ ಹೆಣ್ಣು ಮಗಳೇ ಸತಿ ಹೋಗಲು ಹೆದರಿ ಅಡಗಿ ಕುಳಿತ ಜಾಗ ಇದು ಇರಬಹುದು.
ಈ ಬಗ್ಗೆ ತಿಳಿದ ನನ್ನ ಮನದಲ್ಲಿ  “ಆ ಹೆಣ್ಣು ಮಗಳು ಸಾವಿಗೆ ಮೊದಲು ಅವಳು ಅನುಭವಿಸಿದ  ನೋವು ,ಉರಿ ,ನೀರಿಗಾಗಿ ಅಂಗಲಾಚಿದ್ದು ,ಸಂಕೋಲೆಯಿಂದಹಾರುತ್ತಿರುವ ಬೆಂಕಿಯ ಕಿಡಿ ,ಬೆಂಕಿ ಹತ್ತಿ ಅವಳೇ ಒಂದು ಬೆಂಕಿಯ ರಾಶಿಯಾಗಿದ್ದಿರಬಹುದಾದ ಬಗ್ಗೆ ಒಂದು ಭಯಾನಕ ದಾರುಣ ಸ್ಥಿತಿಯ ಚಿತ್ರಣ ಮೂಡಿತ್ತು !!
ಅದರ ಫಲವೇ ನನಗೆ ಮತ್ತೆ ಮತ್ತೆ ಈ ಕನಸು ಕಾಡುತ್ತಿರುತ್ತದೆ .ಕಂಡ ಕನಸೇ ಇಷ್ಟು ದಾರುಣವಾದರೆ ನಿಜ ಸಂಗತಿ ಇನ್ನೆಷ್ಟು ದಾರುಣವಿದ್ದಿರಲಾರದು!ಅಲ್ಲವೇ ?
ಮಹಾ ಸತಿಗಳ ಬಗ್ಗೆ ಅತಿ ರಂಜಕವಾದ ಮೈನವಿರೇಳಿಸುವ ಕಥಾನಕಗಳು  ಪ್ರಚಲಿತವಿವೆ .,ಆದರೆ ವಾಸ್ತವ ಹಾಗಿಲ್ಲ .ಅದೊಂದು ಅಮಾನುಷ ದಾರುಣ ವಿಚಾರ .ಜೀವಂತ ಹೆಣ್ಣು ಮಗಳೊಬ್ಬಳು ಬೆಂಕಿಯಲ್ಲಿ ಬೆಂದು ಹೋಗುವುದು ಎಂದರೆ ಊಹಿಸಲು ಅಸಾಧ್ಯವಾಗುತ್ತದೆ .ಅಡಿಗೆ ಮಾಡುವಾಗ ಒಗ್ಗರಣೆಯ ಸಾಸಿವೆ ಕಾಳೊಂದುದು ಸಿಡಿದರೆ ಎಷ್ಟು ಉರಿಯಾಗುತ್ತದೆ !ಅದುವೇ ಅಸಹನೀಯ ಎನಿಸುತ್ತದೆ ಹಾಗಿರುವಾಗ ಮೈ ಕೈ ಕಣ್ಣು ಗಳು ಬೆಂದು ಮುದ್ದೆಯಾಗುವ ಪರಿ ಹೇಗಿರಬಹುದು ?ಹೊರಗಿನಿಂದ ಬೆಂದು ಒಳ ಭಾಗಕ್ಕೆ ಬೆಂಕಿ ತಲುಪಿದ ನಂತರ ಸಾವು ಬರುತ್ತದೆ .ಇದಕ್ಕೆ ಏನಿಲ್ಲವೆಂದರೂ ಅರ್ಧ ಘಂಟೆ ಬೇಕು !ಅಷ್ಟರ ತನಕ ಉರಿಯನ್ನು ಆ ಹೆಣ್ಣು ಮಗಳು ಹೇಗೆ ಸಹಿಸಬೇಕು ? ಅತ್ತು ಬೊಬ್ಬೆ ಹೊಡೆದು ಉರಿಯಿಂದ ತಪ್ಪಿಸಿಕೊಳ್ಳಲು ಎಷ್ಟು  ಹೆಣಗಾಡಿರ ಬಹುದು?!ಉಹಿಸಲೂ ಅಸಾಧ್ಯ!
ಹೆಣ್ಣನ್ನು ಮೊದಲಿನಿಂದಲೂ ಭೋಗದ ವಸ್ತುವಿನಂತೆ ಕಾಣುವ ಪ್ರವೃತ್ತಿ ಬೆಳೆದು ಬಂದಿತ್ತು .ಆದ್ದರಿಂದಲೇ ಗೆದ್ದ ಅರಸನ ಕಡೆಯವರು ಧನ ಕನಕಗಳನ್ನು ಹೊತ್ತೊಯ್ಯುವಾಗ.ಯುದ್ಧಗಳಲ್ಲಿ ಮಡಿದ ಅರಸ ಅಥವಾ ಸೈನಿಕರ ಪತ್ನಿಯರನ್ನು ಬಲತ್ಕಾರವಾಗಿ ಎತ್ತಿ ಕೊಂಡು ಹೋಗುತ್ತಿದ್ದರು .ಇದರಿಂದ ಪಾರಾಗುವ ಸಲುವಾಗಿ ಸ್ವ ಇಚ್ಚೆಯಿಂದ ಸತಿ ಪದ್ಧತಿ ಆರಂಭವಾಯಿತು .ನಂತರದ ದಿನಗಳಲ್ಲಿ ಅದು ಪದ್ಧತಿಯಾಗಿ ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಎಲ್ಲೆಡೆಗೆ ವ್ಯಾಪಿಸಿತು .
ಜೌಹರ್
.ಅಲ್ಲಾವುದ್ದೀನ್ ಖಿಲ್ಜಿ ಯ ಕೈಯಿಂದ ಪಾರಾಗುವ ಸಲುವಾಗಿ ರಾಣಿ ಪದ್ಮಿನಿ ಹಾಗೂ ನೂರಾರು ರಾಣಿ ವಾಸದ ಸಾವಿರಾರು ಸ್ತ್ರೀಯರು ದೊಡ್ಡ ಬೆಂಕಿಯ ರಾಶಿ ಮಾಡಿ ಅದಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡ ಬಗ್ಗೆ ಇತಿಹಾಸವು ಹೇಳುತ್ತದೆ.ಅದನ್ನು ಜೌಹರ್ (ಜೀವ ಹರ )ಎಂದು ಕರೆದಿದ್ದಾರೆ.ಇದರ ನಂತರವೂ ಕೆಲವು ಭಾರಿ ಈ ರೀತಿ ಸಾಮೂಹಿಕವಾಗಿ ನೂರಾರು ಸ್ತ್ರೀಯರು ಆತ್ಮಾಹುತಿ ಮಾಡಿಕೊಂಡಿದ್ದಾರೆ .
ಮಹಾಸತಿ ವಿಗ್ರಹಗಳು ಮತ್ತು ಉಲ್ಲೇಖಗಳು
“ಗಂಡನನ್ನು ಕಳೆದುಕೊಂಡ ಸ್ತ್ರೀಯರು ಸತಿ ಹೋಗುವ ಪದ್ಧತಿ ದೇಶದಲ್ಲಿ ಮೊದಲಿಗೆ ರಜ ಪೂತರಲ್ಲಿ ಆರಂಭವಾಗಿದ್ದು ನಂತರ ದೇಶದ ಎಲ್ಲೆಡೆ ಹರಡಿತು “ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ . ನೇಪಾಳದಲ್ಲಿಯೂ ಇದು ಪ್ರಚಲಿತವಿತ್ತು .ಮಹಾಸತಿ ಹೆಸರಿನಲ್ಲಿ ಕರ್ನಾಟಕದಲ್ಲಿಯೂ  ಅನೇಕ ಸ್ತ್ರೀಯರು ಸುಟ್ಟು ಕರಕಲಾದ ಬಗ್ಗೆ ಅಲ್ಲಲ್ಲಿ ಸಿಗುವ ಮಹಾ ಸತಿ ಕಟ್ಟೆಗಳು,ಸತಿ ವಿಗ್ರಹಗಳು ಸಾರಿ ಹೇಳುತ್ತವೆ.ಬೆಂಕಿಯ ಜ್ವಾಲೆಯ ನಡುವಿನ ಮಾಸ್ತಿ  ,ಒಂದು ಕೈ ಎತ್ತಿದ ಮಾಸ್ತಿ  ,ಕೈಯಲ್ಲಿ ನಿಂಬೆ ಹಣ್ಣು ಅಥವಾ ಮಾದಳದ ಹಣ್ಣು ಹಿಡಿದಿರುವ ಮಾಸ್ತಿ . ಒಂದು ಎತ್ತಿದ ಕೈ ಮಾತ್ರ ಇರುವ ಮಾಸ್ತಿ ವಿಗ್ರಹ, ಗುಂಡುಕಲ್ಲಿನ ಆಕಾರದ ಮಾಸ್ತಿ ವಿಗ್ರಹಗಳು ಗಳು ನಾಡಿನಾದ್ಯಂತ ಅಲ್ಲಲ್ಲಿ ಸಿಕ್ಕಿವೆ . ದೇಕಬ್ಬೆಯ ಶಾಸನದಲ್ಲಿ ಸತಿ ಹೋದ ದೇಕಬ್ಬೆಯ ಸಾಹಸ, ಪತಿ ಭಕ್ತಿ ಬಗ್ಗೆ ವಿಸ್ತೃತ ವರ್ಣನೆಯಿದೆ .ಆದರೆ ಎಲ್ಲೂ ಅವಳು ಚಿತೆಯೇರಿದಾಗ ಅನುಭವಿಸಿದ ಉರಿ ಯಾತನೆಯ ವರ್ಣನೆಯಿಲ್ಲ!
ಕ್ರಿ ಶ.510ರಲ್ಲಿ ಗೋಪ ರಾಜನೆಂಬ ಸೇನಾಪತಿಯು ಹೂಣರ ವಿರುದ್ಧ ಹೋರಾಡಿ ಸತ್ತಾಗ ಆತನ ಮಡದಿ ಆತನ ದೇಹದಿಂದಿಗೆ ಚಿತೆಯೇರಿ ಸಹಗಮನ ಮಾಡಿದ ಬಗ್ಗೆ ಒಂದು ವೀರಗಲ್ಲು ಶಾಸನದಲ್ಲಿ ದಾಖಲೆ ಇದೆ .ಕರ್ನಾಟಕದಲ್ಲಿ ಕದಂಬ ರಾಜ ರವಿವರ್ಮನ ಮಡದಿ ಸತಿ ಹೋದ ಬಗ್ಗೆ ಸಂಸ್ಕೃತ ಶಾಸನದಲ್ಲಿ ಉಲ್ಲೇಖವಿದೆ.
ಇದಕ್ಕೂ 4೦೦ ವರ್ಷಗಳ ಹಿಂದೆಯೇ ಮಹಾ ಸತಿ ಪದ್ದತಿ ಬಳಕೆಯಲ್ಲಿದ್ದ ಬಗ್ಗೆ ಆಧಾರಗಳು ಸಿಗುತ್ತವೆ  . ಈ ಒಂದೂವರೆ ಎರಡು ಸಾವಿರ ವರ್ಷಗಳಲ್ಲಿ ಗಂಡನ ಚಿತೆಯೊಂದಿಗೆ ಬೆಂದು ಹೋದ ಮಹಿಳೆಯರೆಷ್ಟೋ ?ಲೆಕ್ಕವಿಟ್ಟವರಾರು ? ನೂರೆಂಬತ್ತೈದು ವರ್ಷಗಳ ಹಿಂದೆ ಸತಿ ಪದ್ದತಿಗೆ ನಿಷೇಧ ಜಾರಿಯಾದ ಕಾಲದಲ್ಲಿ ವರ್ಷಕ್ಕೆ 500-600 ಸತಿ ಪ್ರಕರಣಗಳು ದಾಖಲಾಗುತ್ತಿದ್ದವು .ದಾಖಲಾಗದವುಗಳು ಇದಕ್ಕಿಂತ ನಾಲ್ಕು ಐದು ಪಟ್ಟು ಹೆಚ್ಚು  ಇದ್ದಿರಬಹುದು .
ಸತಿ ಹೋಗುವುದಕ್ಕೆ ಬೇರೆ ಬೇರೆ ವಿಧಗಳು ಇದ್ದವು.ಗಂಗಾ ಕಣಿವೆಯಲ್ಲಿ ಮೊದಲೇ ಉರಿಯುವ ಚಿತೆಗೆ ಹಾರುತ್ತಿದ್ದರು ಅಥವಾ ಅಲ್ಲಿಗೆ ದೂಡಿ ಹಾಕುತ್ತಿದ್ದರು .ದಕ್ಷಿಣ ಭಾರತದ ಕೆಲವೆಡೆ ಹುಲ್ಲಿನ ಗೂಡಲ್ಲಿ ಅವಳನ್ನು  ಕೂರಿಸಿ ಕೈಯಲ್ಲಿ ಒಂದು ಹಣತೆಯನ್ನು ಕೊಡುತ್ತಿದ್ದರು .ಹುಲ್ಲಿಗೆ ಬೆಂಕಿ ಹಿಡಿಸಿಕೊಂಡು ಅವಳು ಸಜೀವ ದಹನವಾಗುತ್ತಿದ್ದಳು .ನೇಪಾಳದಲ್ಲಿ ಶವದ ಜೊತೆ ಅವಳನ್ನು ಕೂಡಿಸಿ ಉರಿಯುವ ವಸ್ತುಗಳನ್ನು ಅವಳ ತಲೆಯ ಬಳಿ ಇಟ್ಟು ಬೆಂಕಿ ಕೊಡುತ್ತಿದ್ದರು.ನಂತರ ಹಸಿ ಮರದ ಕಂಬದಿಂದ ಎರಡೂ ದೇಹಗಳನ್ನು ಸಂಬಂಧಿಕರು ಒಟ್ಟಿ ಹಿಡಿಯುತ್ತಿದ್ದರು .ಎಲ್ಲ ಕಡೆಯೂ ಅವಳು ಬೆಂಕಿಯ ಉರಿ ತಾಳಲಾರದೆ ಓಡಿ ಬರದಂತೆ ಅವಳನ್ನು ಹಸಿ ಮರದ ದಪ್ಪದ ಬಡಿಗೆಗಳಿಂದ ಸುತ್ತ ನಿಂತ ಜನರು ಒಳಗೆ ತಳ್ಳುತ್ತಿದ್ದರು .
ಸತಿ ಪದ್ದತಿ ನಿಷೇಧ 1829
ಅಂತೂ ಅದೃಷ್ಟವಶಾತ್ ರಾಜಾರಾಮ ಮೋಹನ ರಾಯರ ನಿರಂತರ ಹೋರಾಟದಿಂದ ಸತಿ ಸಹಗಮ ಪದ್ಧತಿಗೆ ನಿಷೇಧ ಬಂತು . ಇಂಥ ಕ್ರೌರ್ಯವನ್ನು ಕಾನೂನಿನ ಮೂಲಕ ಕೊನೆ ಗೊಳಿಸಲು ಹೋರಾಡಿದ ರಾಜಾರಾಮ ಮೋಹನ ರಾಯ್ ಅವರು ನಿಜಕ್ಕೂ ಪ್ರಾತಃ ಸ್ಮರಣೀಯರು .ಅವರ ಹೋರಾಟದ ಫಲವಾಗಿ  ನೂರ ಎಂಬತ್ತೈದು ವರ್ಷಗಳ ಹಿಂದೆ 1829 ರ ಡಿಸೆಂಬರ್ 4 ರಂದು ಬಂಗಾಳದಲ್ಲಿ ಮೊದಲಿಗೆ ಸತಿ ಪದ್ಧತಿ ನಿಷೇಧ ಜಾರಿಗೆ ಬಂತು. ವಿಲಿಯಂ ಬೆನ್ಟೆಕ್ ಈ ಸಮಯದಲ್ಲಿ ಬಂಗಾಳದ ದ ಬ್ರಿಟೀಷ್  ಗವರ್ನರ್ ಜನರಲ್ ಆಗಿದ್ದರು . 1830ರಲ್ಲಿ ಮದ್ರಾಸ್‌ ಹಾಗೂ ಬಾಂಬೆ ಪ್ರೆಸಿಡೆನ್ಸಿಗೂ ಈ ನಿಷೇಧ ವಿಸ್ತರಿಸಲಾಯಿತು.
.ಸತಿ ಪದ್ಧತಿ ನಿಷೇಧ ಕಾನೂನು ಜಾರಿಗೆ ಬಂದ ನಂತರವೂ  ಕಾನೂನಿನ ಕಣ್ಣು ತಪ್ಪಿಸಿ ಬಲವಂತವಾಗಿ,  ಪತಿಯನ್ನು ಕಳೆದು ಕೊಂಡ ಅನೇಕ ದುರ್ದೈವಿಗಳನ್ನು ಸತಿ ಹೆಸರಿನಲ್ಲಿ ಬೆಂಕಿಯಲ್ಲಿ ಸುಟ್ಟು ಕೊಂದಿದ್ದಾರೆ .
ರೂಪ್‌ ಕನ್ವರ್‌ ಪ್ರಕರಣ
1987ರ ಸೆಪ್ಟೆಂಬರ್‌ 4ರಂದು ರೂಪಾ ಕನ್ವರ್ ಎಂಬ 18 ವರ್ಷದ ರಜಪೂತ ಯುವತಿಯನ್ನು ರಾಜಸ್ತಾನದ ಸಿಕರ್‌ ಜಿಲ್ಲೆಯ ದೇವ್ರಾಲಾ ಗ್ರಾಮದಲ್ಲಿ ಬಲವಂತವಾಗಿ ಸುಟ್ಟು ಸತಿ ಮಾಡಲಾಯಿತು.
ಸತಿ ತಡೆ ಕಾಯ್ದೆ 1988
1988 ರಲ್ಲಿ ನಮ್ಮ ಸರ್ಕಾರ ಸತಿ ತಡೆ ಕಾಯ್ದೆ(Sati prevention Act 1988)ಯನ್ನು ಜಾರಿಗೆ ತಂದಿತು .ಇದಾದ ನಂತರವೂ ಕಾನೂನಿನ ಕಣ್ಣಿಗೆ ಕಾಣದಂತೆ ಅನೇಕ ಸತಿ ಪ್ರಕರಣಗಳು ನಡೆದಿವೆ.2002 ರಲ್ಲಿ ಪಾಟ್ನಾಕ್ಕೆ ಹೋಗಿದ್ದಾಗ ಅಲ್ಲೊಂದು ಸತಿ ದಹನ ನಡೆದ ಬಗ್ಗೆ ಬಿ.ಎಂ ರೋಹಿಣಿ (ತುಳುನಾಡಿನ ಮಾಸ್ತಿಗಲ್ಲು –ವೀರಗಲ್ಲುಗಳು ಕೃತಿಯ ಲೇಖಕಿ )ಅವರು ತಿಳಿಸಿದ್ದಾರೆ .2008 ರಲ್ಲಿಯೂ ಒಂದು ಪ್ರಕರಣ ಬೆಳಕಿಗೆ ಬಂದಿತ್ತು.ಇದೀಗ ಮೊನ್ನೆ 13 ಡಿಸೆಂಬರ್ 2014 ರ ಶನಿವಾರ ಬಿಹಾರದಲ್ಲಿ ಒಂದು ಪ್ರಕರಣ ವರದಿಯಾಗಿದೆ.
ಇನ್ನೂ ಕೂಡ ಸತಿ ಎಂಬ ಕ್ರೂರ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.ಸತಿಯ ವೈಭವೀಕರಣ ,ವಿಧವಾ ಸ್ತ್ರೀಯರನ್ನು ಅಪಶಕುನವೆಂದು ಕಾಣುವ ಸಮಾಜ ಸ್ವ ಇಚ್ಚೆಯಿಂದ ಸತಿ ಹೋಗಲು ಕಾರಣವಾದರೆ ,ಸಂಸ್ಕೃತಿ –ಸಂಪ್ರದಾಯ,ಮೂಢನಂಬಿಕೆಗಳು ಬಲವಂತದ ಸತಿ ದಹನಕ್ಕೆ ಕಾರಣವಾಗಿದೆ .ಒಂದೆಡೆ ಅತ್ಯಾಚಾರ ,ಲೈಂಗಿಕ ಕಿರುಕುಳ .ಲಿಂಗ ತಾರತಮ್ಯ ,ಇನ್ನೊಂದೆಡೆ ಆಸಿಡ್ ದಾಳಿ ಜೊತೆಗೆ ಸತಿ ಪದ್ಧತಿಯ ಉಳಿಕೆ ,185 ವರ್ಷಗಳ ಹಿಂದೆಯೇ ನಿಷೇಧ ಗೊಂಡ ಸತ್ ಎಂಬ ಅನಿಷ್ಟ ಪದ್ದತಿಯೇ ಇನ್ನೂ ಜೀವಂತವಾಗಿದೆ ಇನ್ನು ಉಳಿದ ವಿಚಾರಗಳ ಬಗ್ಗೆ ಹೇಳಲೇನಿದೆ ?! ಸತಿ ಹೋದ ಸ್ತ್ರೀಗೆ ಮುಕ್ತಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ,ಆದರೆ ಸ್ತ್ರೀಯರಿಗಂತೂ ಈ ಅನಿಷ್ಟಗಳಿಂದ ಇನ್ನೂ ಮುಕ್ತಿ ದೊರೆತಿಲ್ಲ. ಒಟ್ಟಿನಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೇ|ರಮಂತೇ ತತ್ರ ದೇವತಾಃ ||(ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತೋಷದಿಂದ ನೆಲೆಸುತ್ತಾರೆ )ಎಂದು ಸಾರುವ ನಮ್ಮ ಸಮಾಜದಲ್ಲಿ ಸ್ತ್ರೀಯರು  ನೆಮ್ಮದಿಯಿಂದ ಇಂದೂ ಇರಲು ಸಾಧ್ಯವಾಗಿಲ್ಲ.
ಈ ಅನಿಷ್ಟಗಳ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಉಂಟು ಮಾಡ ಬೇಕಾಗಿದೆ .
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜ್
ಬೆಳ್ಳಾರೆ .ಸುಳ್ಯ ,ದ .ಕ ಜಿಲ್ಲೆ

Wednesday 17 December 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -166:ಇಲ್ಲತ್ತಮ್ಮ ಕುಮಾರಿ -ಡಾ.ಲಕ್ಷ್ಮೀ ಜಿ ಪ್ರಸಾದ

                                
                                             ಚಿತ್ರ ಕೃಪೆ :ಕುಡುಪು ನರಸಿಂಹ ತಂತ್ರಿಗಳು
 ನನ್ನ ಸಾವಿರದ ಅರುವತ್ತೈದು ದೈವಗಳ ಪಟ್ಟಿ ಅಂತಿಮವಲ್ಲ ಎಂದು ನಾನು ಹೇಳಿದ್ದೆ .ಹೌದು! ಇನ್ನೂ ಎಷ್ಟೋ ದೈವಗಳ ಹೆಸರು ಕೂಡ ಸಿಕ್ಕದೆ ಇರುವ ಸಾಧ್ಯತೆ ಇದೆ .ಇಲ್ಲತ್ತಮ್ಮ ಕುಮಾರಿ ಈ  1065 ರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ .ಈ ದೈವದ ಬಗ್ಗೆ ನಿನ್ನೆಯಷ್ಟೇ ನನಗೆ ತಿಳಿಯಿತು .
ಮಹಾ ಸತಿ ಆಚರಣೆ ಹಾಗೂ ಮಾಸ್ತಿ ಸ್ತಿ ವಿಗ್ರಹಗಳ ಕುರಿತು ಹೆಚ್ಚ್ಚಿನ ಮಾಹಿತಿಗಾಗಿ ಡಾ.ಬಸವರಾಜ ಕಲ್ಗುಡಿ ಅವರ ಮಹಾ ಸತಿ ಆಚರಣೆ -ಒಂದು ಅಧ್ಯಯನ ,ಹಾಗೂ ಬಿಎಂ ರೋಹಿಣಿ ಹಾಗೂ ಶಶಿಲೇಖ ರಚಿಸಿದ ತುಳುನಾಡಿನ ಮಾಸ್ತಿ ಕಲ್ಲುಗಳು ವೀರಗಲ್ಲುಗಳು ಕೃತಿಗಳನ್ನು ತಿರುವಿ ಹಾಕುತ್ತಾ ಇದ್ದೆ .

ತುಳುನಾಡಿನ ಮಸ್ತಿ ಕಲ್ಲು ವೀರಗಲ್ಲುಗಳ ಬಗ್ಗೆ ಓದುತ್ತಾ ಇದ್ದಾಗ ಇಲ್ಲತ್ತಮ್ಮ ಕುಮಾರಿ ಎಂಬ ಹೆಸರು ಗಮನ ಸೆಳೆಯಿತು .
ಕುಡುಪು ನರಸಿಂಹ ತಂತ್ರಿಗಳ ಮನೆ ದೈವ ಪಂಚ ಜುಮಾದಿಯ ದೈವಸ್ಥಾನದ ಗರ್ಭ ಗುಡಿಯಲ್ಲಿ ಒಂದು ಮರದ ಸ್ತ್ರೀ ಮೂರ್ತಿ ಯಿದೆ .ಇದು ಪಂಚ ಜುಮಾದಿ ದೈವದ ಸೇರಿಗೆ ದೈವವಾಗಿದೆ.ಈ ದೈವತಕ್ಕೆ ನಾನೂರು ವರ್ಷಗಳ ಹಿನ್ನೆಲೆ ಇದೆ.ನಾನೂರು ವರ್ಷಗಳಿಂದ ಇಲ್ಲತಮ್ಮ ಕುಮಾರಿ ನರಸಿಂಹ ತಂತ್ರಿಗಳ ಮನೆ ದೈವವಾಗಿ ಆಆರಾಧನೆ ಹೊಂದುವ  ದೈವವಿದು.
ತುಳುನಾಡಿನಲ್ಲಿ ದೈವತ್ವ ಪ್ರಾಪ್ತಿಗೆ ಇಂತಹದ್ದೇ ಎಂದು ಹೇಳುವ ನಿಯಮವಿಲ್ಲ .ಎಲ್ಲ ಜಾತಿ ವರ್ಗಗಳ ಮಂದಿ ಇಲ್ಲಿ ದೈವತ್ವ ಪಡೆದು ಆರಧಿಸಲ್ಪಡುತ್ತಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 
ಅನೇಕ ಬ್ರಾಹ್ಮಣ ಸ್ತ್ರೀಯರೂ ಇಲ್ಲಿ ಕಾರಣಾಂತರಗಳಿಂದ ಮಾಯಆಗಿ ದೈವತ್ವ ಪಡೆದು ಆರಧಿಸಲ್ಪಡುತ್ತಿದ್ದಾರೆ .ಊರ್ವ ಚಿಲಿಮ್ಬಿಯಲ್ಲಿ ಅರಬ್ಬೀ ಭೂತದೊಂದಿಗೆ ಆರಾಧನೆ ಹೊಂದುವ ಬ್ರಾಂದಿ ಭೂತ ,ಪೊಟ್ಟ ಭೂತದೊಂದಿಗೆ ಆರಾಧನೆ ಹೊಂದುವ ಬ್ರಾಂದಿ ಭೂತ ,ವಿಧವೆಯೊಬ್ಬಳು ಮಾಯವಾಗಿ ದೈವತ್ವ  ಪಡೆದ ಮುಂಡೆ ಬ್ರಾಂದಿ ಭೂತ ,ಓಪೆತ್ತಿ ಮದಿಮಾಲ್ ,ಕೆರೆ ಚಾಮುಂಡಿ ,ಮೊದಲಾದ ದೈವಗಳು ಮೂಲತ ಬ್ರಾಹ್ಮಣ ಮೂಲದ ಸ್ತ್ರೀಯರು .

ಕುಡುಪು ನರಸಿಂಹ ತಂತ್ರಿಗಳ ಮನೆ ದೈವವಾಗಿರುವ ಇಲ್ಲತ್ತಮ್ಮ ಅವರಕುಟುಂಬಕ್ಕೆಕ್ಕೆ ಸೇರಿದ ಬ್ರಾಹ್ಮಣ ಹುಡುಗಿ .ಆ ಬ್ರಾಹ್ಮಣ ಹುಡುಗಿ ನಾನೂರು ವರ್ಷಗಳ ಹಿಂದೆ ಯಾವುದೊ ಕಾರಣಕ್ಕೆ ಮಾಯವಾಗುತ್ತಾಳೆ .ಮಯವದವರು ದೈವತ್ವ ಹೊಂದಿ ಆರಾಧನೆ ಪಡೆಯುವುದು ತುಳು ಸಂಸ್ಕೃತಿಯಲ್ಲಿ ಅಸಹಜವೇನೂ ಅಲ್ಲ .ಅಂತೆಯೇ ಆ ಹುಡುಗಿ ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.
ಈ ದೈವದ ಮೂರ್ತಿಯ ಬಲ ಗೈಯಲ್ಲಿ ಅಮೃತ ಕಲಶ ,ಎಡ ಗೈಯಲ್ಲಿ ಔಷಧಿಯ ಬೇರೂ ಇದೆ ಎಂದು ಬಿಎಂ ರೋಹಿಣಿ ಅವರು ತಿಳಿಸಿದ್ದಾರೆ .
ಯಾರಿಗಾದರೂ ಹೆರಿಗೆಯಲ್ಲಿ ತೊಂದರೆಯಾದರೆ ,ಬಾಣಂತಿಗೆ ತೊಂದರೆಯಾದರೆ ಈ ದೈವಕ್ಕೆ ಹರಸಿಕೊಂಡರೆ  ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಅಲ್ಲಿದೆ © ಡಾ.ಲಕ್ಷ್ಮೀ ಜಿ ಪ್ರಸಾದ್ 
ಇಲ್ಲತ್ತ ಅಮ್ಮ ಎಂದರೆ ಮನೆಯ ಅಮ್ಮ .ಹಿರಿಯ ಸ್ತ್ರೀ ಎಂಬ ಅರ್ಥ ,ಇಲ್ಲತ್ತಮ್ಮ ಕುಮಾರಿ ಎಂದಿರುವುದರಿಂದ ಈಕೆ ಅವಿವಾಹಿತೆ ಎಂದು ತಿಳಿಯುತ್ತದೆ .ಮನೆಯ ದೇವತೆ ಎಂಬ ಅರ್ಥದಲ್ಲಿಯೂ ಇಲ್ಲತ್ತಮ್ಮ ಎಂಬ ಪದ ಬಳಕೆಗೆ ಬಂದಿರಬಹುದು
ಈ ಬಗ್ಗೆ ಕುಡುಪು ತಂತ್ರಿಗಳ ಕುಟುಂಬದ ಶ್ರೀಯುತ ಪುರುಷೋತ್ತಮ ತಂತ್ರಿಗಳು ಇಲ್ಲತಮ್ಮ ನಮ್ಮಕುಟುಂಬದ ಹಿರಿಯ ಮಹಿಳೆ ಅವಿವಾಹಿತೆ .ಇವರು ಹಳ್ಳಿ ಮದ್ದುಗಳನ್ನು ಕೊಡುವುದರಲ್ಲಿ ಪರಿಣತರಾಗಿದ್ದರು .ಯಾರು ಅತ್ಯಂತ ಉದಾರಿಗಳಾಗಿದ್ದುಎಲ್ಲರಿಗೂ ಉಚಿತವಾಗಿ  ಔಷಧ ವನ್ನು ಕೊಡುತ್ತಿದ್ದರು ಒಂದು ದಿನ ಇದ್ದಕ್ಕಿದ್ದ ಹಾಗೆ ಮಾಯ ವಾಗಿ ದೈವತ್ವ ಪಡೆದರು .ಇದು ಸುಮಾರು ನಾನ್ನೂರು ವರ್ಷಗಳ ಹಿಂದಿನ ಘಟನೆ ..ತಮ್ಮ ಮನೆ ದೈವ ಪಂಚ ಜುಮಾದಿ ಯೊಂದಿಗೆ ಇವರಿಗೂ ದೈವತ್ವದ ನೆಲಯಲ್ಲಿ ಆರಾಧನೆ ಇದೆ .ಇಲ್ಲತಮ್ಮನನ್ನು ಔಷಧಮ್ಮ ,ಅಜ್ಜಿ ಅಜ್ಜಮ್ಮ ಎಂದೂ ಕರೆದು ಆರಾಧಿಸುತ್ತಾರೆ"ಎಂಬ ಮಾಹಿತಿಯನ್ನು ನೀಡಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶ್ರೀಯುತ ವೆಂಕಟ ರಾಜ ಕಬೆಕ್ಕೋಡು ಅವರಿಗೆ ಕೃತಜ್ಞತೆಗಳು
.ಆಧಾರ :ತುಳುನಾಡಿನ ಮಾಸ್ತಿ ಕಲ್ಲುಗಳು ಮತ್ತು ವೀರಗಲ್ಲುಗಳು ಲೇಖಕರು :ಬಿಎಂ ರೋಹಿಣಿ ಮತ್ತು ಶಶಿಲೇಖಾ ಬಿ