Friday 9 May 2014

ತುಳು ಭೂತಗಳ ನಡುವೆ ಗೌತಮ ಬುದ್ಧನೂ ಇದ್ದ !-ಡಾ.ಲಕ್ಷ್ಮೀ ಜಿ ಪ್ರಸಾದ




 19-04-2014 ರಂದು ಜಯಕಿರಣ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ

ಇದನ್ನು ಸ್ಕ್ಯಾನ್ ಮಾಡಿ ಅಭಿಮಾನ ವಿಟ್ಟು ಕಳುಹಿಸಿ ಕೊಟ್ಟ ಮನೋಹರ ಪ್ರಸಾದ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು


                                          ಮಾರ್ಚ್ 30 ,2012 ರಂದು ಪ್ರಜಾವಾಣಿಯಲ್ಲಿ ಪ್ರಕಟಿತ ಲೇಖನ
ಫೆಬ್ರುವರಿ ೧ ೬  ,೨೦೧೨  ನೆಯ ದಿನ ನನ್ನ ಪಾಲಿಗೆ   ಒಂದು ಅವಿಸ್ಮರಣೀಯ ದಿನ! ಪೆರುವಾಜೆಯಲ್ಲಿ (ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ) ನೇರವಾಗಿ ಬುದ್ಧನದೆಂದೇ ಸ್ಪಷ್ಟವಾಗಿ ಗುರುತಿಸಬಹುದಾದ ಅಪರೂಪದ ಬುದ್ಧನ ಮೂರ್ತಿಯೊಂದನ್ನು ನಾನು ಪತ್ತೆ ಹಚ್ಚಿದೆ   ! .ಇದರಿಂದ  ಕರ್ನಾಟಕದ  ಇತಿಹಾಸ ಶೋಧನೆಗೆ ಮಹತ್ವದ ದಾಖಲೆಯೊಂದು ಸಿಕ್ಕಿತೆಂದು ನಾನು ಭಾವಿಸಿದ್ದೇನೆ   . ಕರಾವಳಿ ಕರ್ನಾಟಕದಲ್ಲಿ ಬೌದ್ಧಾರಾಧನೆಗೆ ಇದ್ದುದಕ್ಕೆ  ಪ್ರತ್ಯಕ್ಷ ಸಾಕ್ಷಿ ದೊರಕಿತು .
 ೨೦೧೨  ರ ಫೆಬ್ರುವರಿ ತಿಂಗಳ  ಮೊದಲವಾರದಲ್ಲಿ .ಪೆರುವಾಜೆ ಕಾಲೇಜಿನ  ವಿದ್ಯಾರ್ಥಿ    ನನಗೆ ಪರಿಚಿತರಾಗಿದ್ದ ಉತ್ಸಾಹಿ  ತರುಣ  ರಜನೀಶ್ ಫೋನ್ ಮಾಡಿ  "ಇಲ್ಲಿ ಪೆರುವಾಜೆ ದೇವಸ್ಥಾನದ ಹತ್ತಿರ ಗುಡ್ಡದಲ್ಲಿ  ಕೆಲವು ಭೂತದ ವಿಗ್ರಹಗಳಿವೆ ನೋಡ್ತೀರಾ?ಎಂದು ಫೋನ್ ಮಾಡಿ  ಕೇಳಿದರು 

.ಫೆಬ್ರುವರಿ   ೧ ೬ ರಂದು  ಭೂತಾರಾಧನೆಯ ಸಂಶೋಧನೆಯಲ್ಲಿ ವಿಶೇಷ ಆಸಕ್ತಿ ಇದ್ದ ನಾನು ಅದನ್ನು ನೋಡಲು ಹೋದೆ . ಅಲ್ಲಿ ಮರದ ಬುಡದಲ್ಲಿ ನಂದಿ ಸೇರಿದಂತೆ ಅನೇಕ ವಿಗ್ರಹಗಳಿದ್ದವು .ಒಂದೆರಡು  ವಿಗ್ರಹಗಳು ಮಣ್ಣಿನ ಅಡಿಯಲ್ಲಿದ್ದು  ತುಸು ಮಾತ್ರ ಕಾಣುತ್ತಿದ್ದವು . ಅವುಗಳನ್ನು  ನಾನು ಮತ್ತು ನನ್ನ ಮಗ ಅರವಿಂದ ಸೇರಿ   ಕಷ್ಟ ಪಟ್ಟು  ಮೇಲಕ್ಕೆ ಎಳೆದು ತಂದೆವು . ಅದರಲ್ಲೊಂದು   ನೇರವಾಗಿ ಯಾರು ಕೂಡಾ ಸ್ಪಷ್ಟವಾಗಿ ಗುರುತಿಸ ಬಹುದಾದ ಅಪರೂಪದ ಬುದ್ಧನ  ವಿಗ್ರಹ  ಇತ್ತು.!    ಶಾಸನ ಹಾಗು  ಇತರ ಅನೇಕ ಆಧಾರಗಳ ಮೇಲೆ  ಡಾ .ಬಿ ಎ  ಸಾಲೆತೂರ್ ,ಡಾ . ಗುರುರಾಜ ಭಟ್ ,ಗೋವಿಂದ ಪೈ ,ಡಾ. ರಮೇಶ್  ಕೆ ವಿ  ,ಡಾ . ವಸಂತಕುಮಾರ್ ತಾಳ್ತಜೆ  ಮೊದಲಾದವರು  ಕರ್ನಾಟಕದಲ್ಲಿ ಬೌದ್ಧಾರಾಧನೆ  ಇತ್ತು ಎನ್ನುವುದನ್ನು ಈ ಹಿಂದೆಯೇ ತೋರಿಸಿ ಕೊಟ್ಟಿದ್ದಾರೆ . ಆದರೆ ನೇರವಾಗಿ ಬುದ್ಧನದೆಂದು ಗುರುತಿಸ ಬಹುದಾದ  ಬುದ್ದನ  ವಿಗ್ರಹ  ಈ ತನಕ   ಕರ್ನಾಟಕದಲ್ಲಿ  ಎಲ್ಲೂ ಪತ್ತೆಯಾಗಿರಲಿಲ್ಲ . ಮಂಗಳೂರಿನ  ಕದ್ರಿಯ ಮಂಜುನಾಥೇಶ್ವರ ದೇವಾಲಯ ದಲ್ಲಿರುವ  ಮೂರು ಮುಖದ ಲೋಕೇಶ್ವರ ಮೂರ್ತಿ(ಇದನ್ನು ಬ್ರಹ್ಮ ಎಂದು  ಭಾವಿಸಿದ್ದರು )ಯನ್ನು   ಅದರ ಕೆಳಗಿನ  ಶಾಸನ  ಹಾಗು ಇತರ ಕೆಲವು ಆಧಾರಗಳಿಂದ  ಬುದ್ಧನ ಇನ್ನೊಂದು ಸ್ವರೂಪ  ಆವಲೋಕಿತೇಶ್ವರ  ಎಂದು ಗುರುತಿಸಿ  ಕದ್ರಿ ಬೌದ್ಧ  ವಿಹಾರವಾಗಿತ್ತು ಎಂದು ವಿದ್ವಾಂಸರು  ಸ್ಪಷ್ಟ ಪಡಿಸಿದ್ದಾರೆ . ಕದ್ರಿ ಬಿಟ್ಟರೆ  ಮಂಗಳೂರು, ಸುಳ್ಯ,ಬಂಟ್ವಾಳ, ಬೆಳ್ತಂಗಡಿ  ,ಪುತ್ತೂರು ,ಕಾಸರಗೋಡು ತಾಲೂಕುಗಳಲ್ಲಿ ಎಲ್ಲಿಯೂ  ಬೌದ್ಧಾರಾಧನೆ  ಇದ್ದುದಕ್ಕೆ  ಯಾವುದೊಂದೂ   ಆಧಾರ  ಈ ತನಕ ಸಿಕ್ಕಿರಲಿಲ್ಲ .
 
    ಈ ಎರಡು  ಕಾರಣಗಳಿಂದ  ಸುಳ್ಯ ತಾಲೂಕಿನ ಬೆಳ್ಳಾರೆ - ಸವಣೂರು  ಮಾರ್ಗದಲ್ಲಿ  ಬೆಳ್ಳಾರೆ ಸಮೀಪದಲ್ಲಿರುವ  ಪೆರುವಾಜೆಯ ದೇವಸ್ಥಾನದ ಸಮೀಪದ ಇಳಿಜಾರಾದ ಗುಡ್ಡದಲ್ಲಿ ಪತ್ತೆಯಾದ ಬುದ್ಧನ ವಿಗ್ರಹ ಬಹಳ ಮುಖ್ಯವಾದ  ದಾಖಲೆಯಾಗಿದೆ.  ಇಲ್ಲಿ  ಒಂದು ಮುಖದ ಭಾಗ ವಿರೂಪ ಗೊಂಡಿದ್ದರೂ ಎಡ ಬಲ ಭಾಗದ ಬುದ್ಧನ ಉದ್ದನೆಯ ವಿಶಿಷ್ಟ  ಕಿವಿಗಳು , ಮೇಲೆ ಎತ್ತಿ ಕಟ್ಟಿದ ಉಶ್ಣೀಶ (ಜಟೆ) ಗಳಿಂದ ಸ್ಪಷ್ಟವಾಗಿ ಬುದ್ದನದೆಂದು ಗುರುತಿಸ ಬಹುದಾದ  ಬುದ್ಧನ ತಲೆ ಸಿಕ್ಕಿದೆ. ಬುದ್ಧನ ಮುಖದ ಭಾಗ ಜಜ್ಜಿ ಹೋದಂತಿದೆ . ಮುಖವನ್ನು   ಉದ್ದೇಶ ಪೂರ್ವಕ ವಿಕೃತ ಗೊಳಿಸಿರುವಂತೆ ಕಾಣಿಸುತ್ತಿದ್ದು ಇಲ್ಲಿ ಸಂಘರ್ಷ ನಡೆದಿರುವ ಸಾಧ್ಯತೆಯನ್ನು ತೋರುತ್ತದೆ.  ಇನ್ನೊಂದು  ಸ್ಪಷ್ಟವಾಗಿ ಕಾಣುವ ಮಾನವ ರೂಪಿನ  ಮುಖ ಸಿಕ್ಕಿದೆ . ಇದನ್ನು ಡಾ. ಮುರುಗೇಶಿ ಅವರು ಅಮಿತಾಬ ಬುದ್ಧ  ,ಬೋಧಿಸತ್ವ ಇಲ್ಲವೇ ಯಕ್ಷ ಇರಬಹುದೆಂದು ತಿಳಿಸಿದ್ದಾರೆ .  ಉಬ್ಬಿದ ಕಣ್ಣುಗಳು ಇರುವ  ನಂದಿಯ ಮುಖ  ಹಾಗೂ ಎರಡು ಮುಖವಿಲ್ಲದ ದೇಹ ಮಾತ್ರ ಇರುವ ನಂದಿಯ  ವಿಗ್ರಹಗಳಿವೆ. ಒಂದು ಪೂರ್ಣ ವಿಗ್ರಹ ಇದ್ದು ಮೇಲ್ನೋಟಕ್ಕೆ ಹುಲಿಯನ್ನು ಹೋಲುತ್ತದೆ . ಒಂದು ಮಾನವನ ಕಾಲು ಮಾತ್ರ ಸಿಕ್ಕಿದೆ  .ಈ ಕಾಲಿನಲ್ಲಿ ಕಾಲುಂಗುರ ಇರುವುದರಿಂದ ಇದು ಸ್ತ್ರೀ ವಿಗ್ರಹದ ಅವಶೇಷ ಎಂದು ಹೇಳಬಹುದು .೧೦ *೧೦  ವಿಸ್ತಾರ ಹಾಗು ಒಂದಡಿ ಎತ್ತರದ ಮುರಕಲ್ಲಿನಲ್ಲಿ ಕಟ್ಟಿದ ಕಟ್ಟಿದ  ಅಡಿಪಾಯ ಕೂಡಾ  ಇತ್ತು .  ಇಲ್ಲಿ  ನಾನು ಪತ್ತೆ ಹಚ್ಚಿದ ಬುದ್ದನ ವಿಗ್ರಹ ಹಾಗು ಇತರ ವಿಗ್ರಹಗಳ  ಮಹತ್ವವನ್ನು ಮನಗಂಡ ನಾನು ಈ ಬಗ್ಗೆ ಲೇಖನ ಸಿದ್ದ ಪಡಿಸಿ ಪ್ರಜಾವಾಣಿ ಪತ್ರಿಕೆಗೆ ಕಳುಹಿಸಿದೆ.
          ಪೆರುವಾಜೆಯಲ್ಲಿ ಬುದ್ಧನ ಅಪರೂಪದ ಮೂರ್ತಿ ಪತ್ತೆ ಎಂಬ ನನ್ನ ಲೇಖನ  ೨೦೧೨  ರ ಮಾರ್ಚ್ ೩೦ ರಂದು  ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟವಾಯಿತು . ಇಲ್ಲಿ ಹೆಚ್ಚಿನ ಅಧ್ಯಯನ ನಡೆಯ ಬೇಕೆಂಬ ಉದ್ದೀಶದಿಂದ  ಸಂಶೋಧಕರ ಗಮನಕ್ಕೆ  ತರುವುದಕ್ಕಾಗಿಯೇ ಈ ಲೇಖನ ಬರೆದಿದ್ದೆ. ಆ ಉದ್ದೇಶ ಈಡೇರಿತು ! 

ಪ್ರಜಾವಾಣಿಯಲ್ಲಿ ಬಂದ  ನನ್ನ ಲೇಖನ ಓದಿದ ಡಾ॥  ಮುರುಗೇಶಿ  ಅವರು ಅವರ ಪರಿಚಿತರ ಮೂಲಕ ನನ್ನ ಫೋನ್ ನಂಬರ್ ಪಡೆದು ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿ ಏಪ್ರಿಲ್ ೧ ನೆಯ(೦೧ -೦ ೪ -೨೦೧೨ ) ತಾರೀಕಿನಂದು ನಾನು ಬರುತ್ತೇನೆ ಆ ಜಾಗವನ್ನು ತೋರಿಸಿಎಂದು ಕೇಳಿಕೊಂಡರು ಆ ಹೊತ್ತಿಗಾಗುವಾಗ ಆ ವಿಗ್ರಹ ಹಾಗು ಜಾಗಕ್ಕೆ ಸಂಬಂಧಿಸಿದಂತೆ  ಅನುಜ್ಞಾ  ಕಲಶ ಆಗಿದ್ದು ಅದನ್ನು  ಒಂದು ಅಟ್ಟೆ ನಿರ್ಮಿಸಿ ಕಟ್ಟಿ ಮುಚ್ಚಿಟ್ಟು  ಬಿಟ್ಟಿದ್ದರು . ಅದನ್ನು ಮತ್ತೆ  ನೋಡ ಬೇಕಿದ್ದರೆ ಆ ಜಾಗಕ್ಕೆ ಸಂಬಂಧಿಸಿದವರ ಒಪ್ಪಿಗೆ ಬೇಕಿತ್ತು . ಸ್ಥಳೀಯರು ಭೂತಗಳದ್ದೆಂದು  ನಂಬಿದ್ದ ವಿಗ್ರಹವನ್ನು  ನಾನು ಬುದ್ಧನದೆಂದು ಹೇಳಿದ್ದು  ಸ್ಥಳೀಯರಿಗೆ  ಅಸಮಧಾನ ಉಂಟುಮಾಡಿತ್ತು. 

ಆದ್ದರಿಂದ ಡಾ ॥   ಮುರುಗೇಶಿ ಅವರನ್ನು ಏಕಾ ಏಕಿ ಕರೆದುಕೊಂಡು ಹೋದರೆ  ವಿವಾದ  ಉಂಟಾಗುವ ಸಾಧ್ಯತೆ ಇತ್ತು .ನಾನು ಒಮ್ಮೆ ಫೋಟ ತೆಗೆದು ನಂತರ ಪುನಃ ಒಮ್ಮೆ ನೋಡಲು ಇಚ್ಚಿಸಿದ್ದೆ . ಆದರೆ ಸ್ಥಳೀಯರು ಒಪ್ಪಿರಲಿಲ್ಲ . ಆದ್ದರಿಂದ ನಾನ ನನಗೆ ಆತ್ಮೀಯರಾಗಿದ್ದ  ಉಡುಪಿ  ಎಂ ಜಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ  ಸಂಶೋಧಕರೂ ಆಗಿದ್ದ ಕಾನಕುದೇಲು  ಗಣಪತ್ತಿ ಭಟ್ಟರ ಸಹಾಯ ಕೇಳಿದೆ ಅವರು ಅವರ ಆತ್ಮೀಯರಾದ ಆ ಜಾಗದ ಬಗ್ಗೆ ಪ್ರಶ್ನೆ ಇಟ್ಟು  ಧಾರ್ಮಿಕ ವಿಧಿಗಳಿಗೆ ನಿರ್ದೇಶನ ನೀಡಿದ್ದ  ಖ್ಯಾತ ಜ್ಯೋತಿಷಿ ರಾಜೇಂದ್ರ ಪ್ರಸಾದರನ್ನು ಸಂಪರ್ಕಿಸಿ  ಅಲ್ಲಿ ಮುಂದಿನ ಸಂಶೋಧನೆಗೆ ಅನುವು ಮಾಡಿ ಕೊಟ್ಟರು .
     ನನಗು ಸಂಶೋಧನೆ ಆಸಕ್ತಿ ಇದ್ದ ಕಾರಣ ಮುರುಗೇಶಿ   ಅವರು ಬಂದಾಗ ಆ ವಿಗ್ರಹಗಳನ್ನು ತೋರಿಸಿದೆ . ನಾನು ಮೊದಲು ಲೇಖನದಲ್ಲಿ ಬರೆದ ವಿಚಾರಗಳನ್ನು ಧೃಢ  ಪಡಿಸಿದ್ದಲ್ಲದೆ ಅಲ್ಲಿ ಪ್ರಾಗೈತಿಹಾಸಿಕ ಕಾಲದ  ಕುರುಹುಗಳನ್ನು ತೋರಿಸಿದ್ದಾರೆ ಇಲ್ಲಿ ಸಿಕ್ಕಿದ ನಂದಿಯ ವಿಗ್ರಹಗಳು ಶಾತವಾಹನರ ಕಾಲದ್ದೆಂದು ಗುರುತಿಸಿ ಇದರ ಕಾಲ ಸುಮಾರು ಕ್ರಿ ಶ  ಎರಡನೇ ಶತಮಾನ ಎಂದು ತಿಳಿಸಿದ್ದಾರೆ. ಇಲ್ಲಿನ ಜಲ ದುರ್ಗಾ  ದೇವಿ ದೇವಾಲಯ  ಹಿಂದೆ ಬೌದ್ಧ ವಿಹಾರವಾಗಿದ್ದು  ಈಗ ಲಿಂಗ ರೂಪಿ ಮೂರ್ತಿಯ ಬದಲು ಮಾನವ ರೂಪಿನ ವಿಗ್ರಹ ಇದ್ದಿರುವ  ಸಾಧ್ಯತೆಯನ್ನು ಹೇಳಿದ್ದಾರೆ

 ಈ ಬುದ್ಧನ ಮೂರ್ತಿಯ ಫೋಟೋ ಅನ್ನು ನಾನ ಖ್ಯಾತ ಸಂಶೋಧರಾದ ಡಾ||ಸುಂದರ ಅವರಿಗೆ ತೋರಿಸಿದಾಗ ಅವರು "ಈ ವಿಗ್ರಹದ ತಲೆಯ ಮೇಲೆ ಗಂಟಿನ ತರಾ ಉಬ್ಬು ಇದೆ ಇದನ್ನು ಉಷ್ನೀಶ ಎನ್ನುತ್ತೇವೆ . ಇದು ಇರುವುದರಿಂದ ಮತ್ತು ಕಿವಿ ತುಂಬಾ ಅಗಲವಾಗಿ ಇರುವುದರಿಂದ ಇದೊಂದು ವಿಶಿಷ್ಟ  ಮಾನವನ ಮೂರ್ತಿ ಎನ್ನಬಹುದು ಬಹು ಶ್ರುತಃ ಎಂದರೆ ಜ್ಞಾನಿ ಯಾದ ಮನುಷ್ಯನ ವಿಗ್ರಹ ಎನ್ನಬಹುದು .ಯಾರು ಜ್ಞಾನವನ್ನು ಪಡೆದು ಕೊಂಡಿರುತ್ತಾರೆ , ಆತ್ಮ ಸಾಕ್ಷಾತ್ಕಾರವನ್ನು ಪಡೆದು ಕೊಂಡಿರುತ್ತಾರೆ ಅವರಿಗೆ ತಲೆ ಮೇಲೆ ಈ ರೀತಿಯ ಉಬ್ಬು ಇರುತ್ತದೆ ಅದಕ್ಕೆ ನಾವು ಉಷ್ನೀಶ ಎಂದು ಕರೆಯುತ್ತಾರೆ ಇಲ್ಲಿ ಉಷ್ನೀಶ ಇರುವುದರಿಂದ ಇದರ ಆಕಾರವು ಬುದ್ಧನನ್ನು ಹೋಲುತ್ತಿರುವುದರಿಂದ ಇದನ್ನು ಬುದ್ಧನ ಮೂರ್ತಿ ಎನ್ನ ಬಹುದು "ಎಂದು ಅಭಿಪ್ರಾಯ ಪಟ್ಟಿದ್ದಾರೆ ಮಡಿಕೇರಿ ಪರಿಸರದಲ್ಲಿ ಬುದ್ಧಾರಾಧನೆ ಇದ್ದುದಕ್ಕೆ ಅನೇಕ ಆಧಾರಗಳು ಸಿಕ್ಕಿವೆ.  ಪೆರುವಾಜೆ  ಮಡಿಕೇರಿ ನಡುವೆ  ತುಂಬಾ ಅಂತರ ಇಲ್ಲ ಆದ್ದರಿಂದ ಇಲ್ಲಿ ಬುದ್ಧನ ಆರಾಧನೆ ಇದ್ದಿರುವ ಸಾಧ್ಯತೆ ಇದೆ ಎಂದು  ಖ್ಯಾತ ಸಂಶೋಧಕರಾದ ಡಾ||ಎಂ ಜಿ ನಾಗರಾಜ್ ಅವರು ಅಭಿಪ್ರಾಯ ಪಟ್ಟಿದ್ದಾರೆ .ಇಲ್ಲಿ ಇನ್ನು ಕೂಡಾ ಹೆಚ್ಚಿನಾಧ್ಯಯನಕ್ಕೆ ಅವಕಾಶವಿದೆ
ಇಲ್ಲಿ ಈ ವಿಗ್ರಹಗಳನ್ನು ಸ್ಥಳೀಯರು ಹರಿಕೆಯಾಗಿ ಬಂದ ಭೂತ ಸಂಬಂಧಿ ವಿಗ್ರಹಗಳೆಂದು ಭಾವಿಸಿದ್ದು, ಭೂತದ ಗುಡಿಯಲ್ಲಿ ಪ್ರತಿಷ್ಟಾಪನೆ ಮೊದಲಾದ ವೈದಿಕ ವಿಧಿಗಳು ಮುಗಿದ ನಂತರ  ಜಲ ವಿಸರ್ಜನೆ ಮಾಡುತ್ತಾರೆ .ಅನಂತ ಈ ವಿಗ್ರಹಗಳು ಎಲ್ಲೋ ಜಲ ಸಮಾಧಿಯಾಗಿ ಬಿಡುತ್ತವೆ .ಆದ್ದರಿಂದ  ಈ ವಿಗ್ರಹಗಳನ್ನು ಅವರ ಕೈಯಿಂದ ಪಡೆದು ರಕ್ಷಿಸುವ ಕಾರ್ಯ ಜರೂರಾಗಿ ಆಗಬೇಕಾಗಿದೆ .ಇಲ್ಲವಾದರೆ ಈ  ಅಪರೂಪದ ದಾಖಲೆ ನಾಶವಾಗಿ ಬಿಡ ಬಹುದು
                                                   
ಡಾ || ಲಕ್ಷ್ಮಿ ಜಿ ಪ್ರಸಾದ ಕನ್ನಡ ಉಪನ್ಯಾಸಕರು  ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ಳಾರೆ  ಸುಳ್ಯ ದ.ಕ ಜಿಲ್ಲೆ

ಇದು ಸುಮಾರು ಹಿಂದೆ ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ನನ್ನ ಲೇಖನವಾಗಿದೆ .ಇದೀಗ ತಿಳಿದು ಬಂದ ಸುದ್ದಿಯಂತೆ ನಾನು ಸಂದೇಹ ಪಟ್ಟಿರುವುದು ಸತ್ಯವಾಗಿದೆ ಅದನ್ನು ಉಪ್ಪಿನಂಗಡಿ ಹೊಳೆಗೆ ಜೋರು ಮಳೆ ಬರುವ ಸಮಯದಲ್ಲಿ ಬಿಸಾಡಿದ್ದಾರೆ .ಒಂದೂವರೆ ಸಾವಿರ ವರ್ಷದ ಹಿಂದಿನ ಅಪೂರ್ವ ದಾಖಲೆ ಜಲ ಸಮಾಧಿಯಾಗಿದೆ ಎಂದು ತಿಳಿಸಲು ವಿಷಾದಿಸುತ್ತೇನೆ 
 ಲಕ್ಷ್ಮಿ ಜಿ ಪ್ರಸಾದ 

   
 





 

No comments:

Post a Comment