Monday, 20 October 2014

ಧನುಷ್ಕೋಟಿ ಅಜ್ಜಿಯ ನೆನಪು-ಡಾ.ಲಕ್ಷ್ಮೀ ಜಿ ಪ್ರಸಾದ


ನಿನ್ನೆ ರಶೀದ್ ವಿಟ್ಲ ಅವರು ಬರೆದ ಸರೋಜಮ್ಮನ ವೃತ್ತಾಂತ ಓದಿದಲ್ಲಿಂದ ನನಗೆ ಕಾಡಿದ್ದು ಧನುಷ್ಕೋಟಿ ಅಜ್ಜಿಯ ನೆನಪು .ಸುಮಾರು ಎರಡೂವರೆ ಮೂರು ವರ್ಷಗಳ ಹಿಂದಿನ ವಿಚಾರವಿದು .ನಾನು ನನ್ನ ಎರಡನೆಯ ಡಾಕ್ಟರೇಟ್ ಪದವಿಯ ಅಧ್ಯಯನಕ್ಕಾಗಿ ಆಗಾಗ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಹೋಗಿ ಬರುತ್ತಿದ್ದೆ .ಬೆಳಗ್ಗೆ ಏಳು ಗಂಟೆಯ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಹೋಗಿ ಸಂಜೆ ಚೆನ್ನೈ ಯಿಂದ ಕುಪ್ಪಂ ಗೆ ಐದೂವರೆ ಹೊತ್ತಿಗೆ ಬರುವ ಎಕ್ಸ್ಪ್ರೆಸ್ ಗಾಡಿ ಒಂದರಲ್ಲಿ ಹಿಂದೆ ಬರುತ್ತಿದ್ದೆ .
ಹೀಗೆ ಒಂದು ದಿನ ಹೋಗಿ ಹಿಂದೆ ಬರುವಾಗ (ಬಹುಶ ಅಕ್ಟೋಬರ್ 2011ರಲ್ಲಿ ) ಟ್ರೈನ್ ನಲ್ಲಿ ಓರ್ವ ವೃದ್ಧ ಮಹಿಳೆಯ ಪರಿಚಯ ಆಯಿತು .ಅವರ ಹೆಸರು ಧನುಷ್ಕೋಟಿ ಎಂದು .ಸುಮಾರು 80 ವರ್ಷ ವಯಸ್ಸು .ಮೈ ತುಂಬಾ ಚಿನ್ನದ ಒಡವೆಗಳನ್ನು ಧರಿಸಿದ್ದರು .ಹಾಗಾಗಿ ಸಾಕಷ್ಟು ಧನವಂತರೆ ಇರಬೇಕು.ನಾವು ಮಾಧ್ವ ಬ್ರಾಹ್ಮಣರೆಂದು ಹೇಳಿದ್ದರು. ತುಂಬಾ ಗೊಂದಲದಲ್ಲಿದ್ದ ಹಾಗೆ ಕಾಣುತ್ತಿದ್ದರು.ಒಂದು ಸಣ್ಣ ಡೈರಿ ಯಲ್ಲಿ ಬರೆದಿದ್ದ ವಿಳಾಸವನ್ನು ಓದಿ ಇದು ಎಲ್ಲಿ ಬರುತ್ತೆ ಎಂದು ಕೇಳಿದರು .ಅದು ತಮಿಳಿನಲ್ಲಿತ್ತು.ಹಾಗಾಗಿ ನಾನು ಅಲ್ಲಿ ಕೆಲವರಲ್ಲಿ ತಮಿಳು ಓದಲು ಬರುತ್ತಾ ಎಂದು ವಿಚಾರಿಸಿ ಓದಿ ಹೇಳಲು ತಿಳಿಸಿದೆ .ಅದು ಒಂದು ಗಿರಿನಗರದ ಒಂದು ಕಲ್ಯಾಣ ಮಂಟಪದ ವಿಳಾಸ ಆಗಿತ್ತು .ಅಲ್ಲಿ ಮರುದಿನ ಒಂದು ಮದುವೆ ಇದೆ ಹತ್ತಿರದ ನೆಂಟರದ್ದು,ಅಲ್ಲಿಗೆ ನಾನು ಹೊರಟಿದ್ದೇನೆ ಎಂದು ಅವರು ಹೇಳಿದರು
.ಟ್ರೈನ್ ಇಳಿದು ಅವರು ತಮ್ಮ ಮಗನ /ಮೊಮ್ಮಗನ ಮನೆಗೆ ಹೋಗಬೇಕಾಗಿತ್ತು . .ಅವರು ಚೆನ್ನೈ ಯಲ್ಲಿರುವ ಯಾವುದೊ ಒಂದುಮಠ/ ಅಶ್ರಮಲ್ಲಿರುವುದು (ಪೇಜಾವರ ಸ್ವಾಮೀಜಿಗಳು ನಡೆಸುವದು ಎಂದು ಹೇಳಿದ ನೆನಪು )ಎಂದು ಹೇಳಿ ಸ್ವಾಮಿಜಿಯವರ /ಆಶ್ರಮದ ಫೋನ್ ನಂಬರ್ ಇದೆ ಎಂದು ಹೇಳಿದರು .ಆ ನಂಬರ್ ಗೆ ಫೋನ್ ಮಾಡಿದರೆ ಯಾರೂ ಎತ್ತಲಿಲ್ಲ .ಈ ಅಜ್ಜಿಗೆ ತನ್ನ ಮೊಮ್ಮಗನ ನಂಬರ್ ಬರೆದುಕೊಂಡು ಎಲ್ಲಿ ಇಟ್ಟದ್ದು ಹೇಳಿ ನೆನಪಿರಲಿಲ್ಲ .ತಾನು ಈಗ ಮಗನ ಮನೆಗೆ ಹೋಗಬೇಕು.ಎಂದು ಹೇಳಿ ಒಂದು ಜಯನಗರದ ಯಾವುದೊ ಒಂದು ವಿಳಾಸವನ್ನು ಹೇಳಿದರು.ಅದು ಅವರ ಮಗನ/ಮೊಮ್ಮಗನ ಮನೆ ವಿಳಾಸವಾಗಿದ್ದು ಅವರಿಗೆ ಅದು ಸ್ಮರಣೆಯಲ್ಲಿತ್ತು..ಅವರ ಫೋನ್ ನಂಬರ್ ಅಜ್ಜಿ ಕೈಯಲ್ಲಿ ಇರಲಿಲ್ಲ .ಮಗ ಸೊಸೆ ಒಳ್ಳೆ ಕೆಲಸದಲ್ಲಿದ್ದಾರೆ.ಸೊಸೆ ಗೈನಕಾಲಜಿಸ್ಟ್ ಆಗಿದ್ದಾರೆ ಎಂದೂ ಅವರು ಹೇಳಿದರು.
ತನ್ನನ್ನು ಮಗನ ಮನೆಗೆ ತನಕ ಆಟೋದಲ್ಲಿ ಬಿಡುತ್ತೀರಾ ಎಂದು ನನ್ನಲ್ಲಿ ಕೇಳಿದರು .ರಾತ್ರಿ ಯಾಗಿತ್ತು . ಆದ್ದರಿಂದ ನಾನು ಜೊತೆಗೆ ಬರಲು ಸಾಧ್ಯವಿಲ್ಲ .ಅಟೋ ಹತ್ತಿಸಿ ಬಿಡುತ್ತೇನೆ ಎಂದು ಹೇಳಿದೆ . ಅದೇ ಟ್ರೈನ್ ನಲ್ಲಿ ಸಹೃದಯಿ (ಹೆಸರು ರಾಜೇಶ್ ಶೆಟ್ಟಿ ಎಂದು ನೆನಪು ) ಇದ್ದರು .ಟ್ರೈನ್ ಬೆಂಗಳೂರು ಹತ್ರ ಬರುತ್ತಾ ಇತ್ತು .ತಡ ಆಗಿ ಬಂದ ಕಾರಣ ಸಂಜೆ ಏಳೂವರೆಗೆ ತಲುಪಬೇಕಾದ ಟ್ರೈನ್ ಬೆಂಗಳೂರು ತಲುಪುವಾಗ ರಾತ್ರಿ ಒಂಬತ್ತು ಗಂಟೆ ಆಗಿತ್ತು .ಈ ರಾತ್ರಿಯಲ್ಲಿ ಸರಿಯಾಗಿ ವಿಳಾಸ ಗೊತ್ತಿಲ್ಲದ ,ಕಾಂಟಾಕ್ಟ್ ನಂಬರ್ ಇಲ್ಲದ ವೃದ್ಧ ಮಹಿಳೆಯನ್ನು ಹೀಗೆ ಆಟೋಹತ್ತಿಸಿ ಕಳುಹಿಸಿದರೆ ಅಪಾಯ ಹಾಗಾಗಿ ರೈಲ್ವೇಸ್ ಪೊಲೀಸರಿಗೆ ತಿಳಿಸುವ ಎಂದು ಅವರು (ರಾಜೇಶ್ ?) ತಿಳಿಸಿದರು .ನನಗೂ ಅದೇ ಸರಿ ಎನ್ನಿಸಿತು . ಹಾಗಾಗಿ ನಾವು ಮೆಜೆಸ್ಟಿಕ್ ಇಳಿದ ತಕ್ಷಣ ಅಜ್ಜಿಯನ್ನು ಅಲ್ಲಿನ ಪೊಲೀಸರ ಹತ್ತಿರ ಕರೆದುಕೊಂಡು ಹೋಗಿ ವಿಷಯ ತಿಳಿಸಿದೆವು
ಆಗ ಅವರು ಮೊದಲಿಗೆ ನಮ್ಮ ಗುರುತು ಪರಿಚಯ ಕೇಳಿದರು .ನಾವು ಯಾವುದೊ ಸಂಚು ಮಾಡುತ್ತಿಲ್ಲ ಎಂದು ಮನವರಿಕೆ ಆದಮೇಲೆ ನಮ್ಮ ಫೋನ್ ನಂಬರ್ ತಗೊಂಡು "ಸರಿ ನೀವು ಹೋಗಿ ಈ ಅಜ್ಜಿಯನ್ನು ಅವರ ಮಗನ ಮನೆ ತಲುಪಿಸುತ್ತೇವೆ ನಾವು" ಎಂದು ಭರವಸೆಯನ್ನು ಕೊಟ್ಟರು ಪ್ರಸಾದ್ ರೈಲ್ವೇಸ್ಟೇಷನ್ ಹೊರಗಡೆ ನನ್ನನ್ನು ಕಾಯುತಿದ್ದರು.ನಾವು ನಮ್ಮ ದಾರಿ ಹಿಡಿದು ರಾತ್ರಿ ಹನ್ನೊಂದು ಗಂಟೆ ಮನೆ ಸೇರಿದೆವು .
ಮುಂದೇನೂ ಆ ಅಜ್ಜಿಗೆ ತೊಂದರೆಯಾಗಿರಲಾರದು ಎಂದು ಭಾವಿಸಿದ್ದೇನೆ .ಆದರೆ ನನಗೆ ವೃದ್ಧರ ಸಮಸ್ಯೆ ,ಕಿರುಯರಿಗೆ ವೃದ್ಧರ ಕುರಿತು ಇರುವ ಅವಜ್ನೆಯ ಅರಿವಾದದ್ದು ಅಂದೇ .ಮಗ ಸೊಸೆ ಇಬ್ಬರೂ ಒಳ್ಳೆ ಕೆಲಸದಲ್ಲಿದ್ದರೂ ಆ ಅಜ್ಜಿ ಆಶ್ರಮದಲ್ಲಿ/ಮಠ ಯಾಕಿರಬೇಕಾಯಿತು ?ಮಠ/ಆಶ್ರಮದಿಂದ ಯಾವುದೇ ಜವಾಬ್ದಾರಿ ಇಲ್ಲದೆ ಅವರನ್ನು ಒಬ್ಬರೇ ಯಾಕೆ ಬೆಂಗಳೂರಿಗೆ ಕಳುಹಿಸಿದರು ?ಅವರನ್ನು ಕರೆದುಕೊಂಡು ಹೋಗಲು ಮನೆ ಮಂದಿ ಯಾಕೆ ಬರಲಿಲ್ಲ ?.ಆ ಅಜ್ಜಿ ಮೊಮ್ಮಗನ /ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗ ಆಶ್ರಮದಿಂದ ಹೇಳದೆ ತಪ್ಪಿಸಿಕೊಂಡು ಬಂದಿದ್ದರೇ?ಅಥವಾ ವೃದ್ಧ್ಹಾಪ್ಯದ ಮರೆವು ,ಭ್ರಮೆಗೆ ಒಳಗಾಗಿದ್ದರೆ?ಈ ಎಲ್ಲ ಪ್ರಶ್ನೆಗಳು ಉತ್ತರವಿಲ್ಲದೇ ಸದಾ ಕಾಡುತ್ತಿವೆ .
ಏನೇ ಆದರೂ ವೃದ್ಧಾಪ್ಯದ ಇಳಿಗಾಲದಲ್ಲಿ ತಮ್ಮ ಹೆತ್ತವರನ್ನು ಹೀಗೆ ಅನಾಥ .ಅಸಹಾಯಕ ಪರಿಸ್ಥಿತಿಗೆ ತಳ್ಳುವುದು ಅಕ್ಷಮ್ಯ ಅಪರಾಧ ಅಲ್ಲವೇ ?

No comments:

Post a Comment