Tuesday, 23 January 2018

ಸಾವಿರದೊಂದು ಗುರಿಯೆಡೆಗೆ 417 ಮಾಪ್ಪಿಳ್ಳೆ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ




ಚಿತ್ರ ಕೃಪೆ : ಅಂತರ್ಜಾಲದ

ಸಾವಿರದೊಂದು ಗುರಿಯೆಡೆಗೆ 417
ಮಾಪ್ಫಿಳ್ಳೆ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ
ಕಳೆದ ಒಂದು ವಾರದಿಂದ ವಾಟ್ಸಪ್ ಹಾಗೂ ಪೇಸ್ ಬುಕ್ ಗಳಲ್ಲಿ  ಒಂದು ದೈವ ಇಬ್ಬರು ಮುಸ್ಲಿಂ ವೇಷಭೂಷಣ ಧರಿಸಿದ ಪಾತ್ರಿಗಳ ಜೊತೆ ಕೋಲಾಟವನ್ನು ಹೋಲುವ ಆಟ ಆಡುವ ವೀಡಿಯೋ ಹರಿದಾಡುತ್ತಾ ಇತ್ತು.ಇದು ಯಾವ ದೈವ ಎಂದು ಕೆಲವರು ನನ್ನಲ್ಲಿ ಕೇಳಿದ್ದರು.ಅದು ಮುಸ್ಲಿಂ ಮೂಲದ ದೈವ ಎಂದು ಊಹಿಸಿದ್ದೆನಾದರೂ ಯಾವ ದೈವ ಎಂದು ತಿಳಿದಿರಲಿಲ್ಲ. ಕೆಲವರು ಅದನ್ನು ಆಲಿ ಚಾಮುಂಡಿ ಎಂದಿದ್ದು ಅದು ಆಲಿ ಚಾಮುಂಡಿ ಅಲ್ಲ ಮುಕ್ರಿ ಪೋಕ್ಕನ್ನಾರ್/ ಪೋಕ್ಕೆರ್ ದೈವ ಇರಬಹುದು ಎಂದು ಊಹಿಸಿ ಹೇಳಿದ್ದೆ .ವಾಟ್ಸಪ್ ಗ್ರೂಪೊಂದರಲ್ಲಿ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಹಾಗೂ ತುಳುವೆರೆಂಕುಲು ಸಂಘದ ಗತ  ಕಾರ್ಯದರ್ಶಿ ಗಳಾದ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಲ್ಳೆ ತೆಯ್ಯಂ ಎಂದು ಹೆಸರಿಸಿದ್ದರು.ಆ ನಿಟ್ಟಿನಲ್ಲಿ ನಾನು ಮಾಹಿತಿ ಸಂಗ್ರಹಕ್ಕೆ ಶುರು ಮಾಡಿದೆ .ಆಗ ಕುಂಞಿ ರಾಮನ್ ಅವರು ಕೆಲ ಮಾಹಿತಿ ನೀಡಿದರುಅಂತರ್ಜಾಲದಲ್ಲೂ ಸ್ವಲ್ಪ  ಮಾಹಿತಿ ದೊರೆಯಿತು

ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ,ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದ ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ.ಹೀಗೆ ಆಲಿ ಚಾಮುಂಡಿ ಕೂಡಾ ಮಂತ್ರ ದೇವತೆಯ   ಆಗ್ರಹಕ್ಕೆ ತುತ್ತಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು ಆರಾಧಿಸಲ್ಪಡುವ ಭೂತ    



ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ ಅಂತ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ


 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ   ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ  ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವರು      © copy rights reserved(c)Dr.Laxmi g Prasad

 .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ ಜಾತಿ ಧರ್ಮದ ಮಿತಿ ಇಲ್ಲ. ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ  ,ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು . ರಾಮ ಶೆಟ್ಟಿ ಎಂಬ ವೀರ ಶೈವ  ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ,ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.   © copy rights reserved(c)Dr.Laxmi g Prasad

 ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ,ಬ್ಯಾರ್ದಿ ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು,ಮಾಪುಳ್ತಿ  ಧೂಮಾವತಿ  ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ  ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .

   ©
ಮಾಪ್ಪಿಳ್ಳೆ ದೈವ ಕೂಡ ಜಾತ ಧರ್ಮ ಮತಗಳನ್ನು ಮೀರಿದ ಶಕ್ತಿ


ಹೆಸರೇ ಸೂಚಿಸುವಂತೆ ಮಾಪ್ಫಿಳ್ಳೆ ದೈವ ಮುಸ್ಲಿಂ ಮೂಲದ ದೈವತ.ಕಾಸರಗೋಡು ಸುತ್ತ ಮುತ್ತ ಈ ದೈವಕ್ಕೆ ಆರಾಧನೆ ಇದೆ. ಮಾವಿಲ‌ ಸಮುದಾಯದವರು ಈ ದೈವವನ್ನು ಕಟ್ಟುತ್ತಾರೆ.
ಈ ದೈವ ಮೂಲತಃ ಕೋಯಿ ಮೊಹಮ್ಮದ್ ಎಂಬ ಮುಸ್ಲಿಂ ಸಮುದಾಯದ ಪರಿಸರ ಪ್ರೇಮಿ.ಅಲ್ಲಿ ಒಮ್ಮೆ ಮಲೆ ಚಾಮುಂಡಿ ಕೋಲವನ್ನು ಏರ್ಪಡಿಸುವ ಸಲುವಾಗಿ‌ ಮರವನ್ನು ಕಡಿಯಲು ಸಿದ್ಧತೆ ಮಾಡುತ್ತಾರೆ. ಆಗ ಕೋಯಿ ಮೊಹಮ್ಮದ್ ಮರ ಕಡಿಯದಂತೆ ತಡೆಯುತ್ತಾನೆ.ಆಗ ಆತ ಮಲೆ ಚಾಮುಂಡಿ ದೈವದ ಕೋಪಕ್ಕೆ ಪಾತ್ರನಾಗುತ್ತಾನೆ.ಅದರ ಪರಿಣಾಮವಾಗಿ ಆತನ ಮೇಲೆ‌ ಮರ ಬಿದ್ದು ಆತ ಮರಣವನ್ನಪ್ಪುತ್ತಾನೆ.ದೈವಗಳ ಅನುಗ್ರಹಕ್ಕೆ ಪಾತ್ರ ರಾದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ಅಂತೆಯೇ ದೈವಗಳ ಆಗ್ರಹಕ್ಕೆ ತುತ್ತಾದವರು ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ವಿದ್ಯಮಾನ ತುಳುನಾಡಿನ ಹಲವೆಡೆ ಕಾಣಿಸುತ್ತದೆ.ಆಲಿ ಭೂತ, ಅರಬ್ಬಿ ಭೂತ, ಜತ್ತಿಂಗ ಮೊದಲಾದವರು ಪ್ರಧಾನ ದೈವಗಳ ಕೋಪಕ್ಕೆ ಈಡಾಗಿ ಮಾಯಕವಾಗಿ ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ.ಹಾಗೆಯೇ ಕೋಯಿ ಮೊಹಮ್ಮದ್ ಕೂಡ ಮಲೆ ಚಾಮುಂಡಿ ದೈವದ ಸೇರಿಗೆ ದೈವವಾಗಿ ಮಾಪ್ಪಿಳ್ಳೆ ದೈವ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ.
ಅಲೌಕಿನ ನೆಲೆಯನ್ನು ಬಿಟ್ಟು ವಾಸ್ತವಿಕವಾಗಿ ಆಲೋಚಿಸುವಾಗ ಈತನಿಗೆ ಮತ್ತು ಮರ ಕಡಿಯುವವರ ನಡುವೆ ಸಂಘರ್ಷ ಉಂಟಾಗಿ ದುರಂತ‌ಮರಣಕ್ಕೀಡಾಗಿರಬಹುದು.ಅದಕ್ಕೆ ದೈವದ ಕಾರಣಿಕ ಸೇರಿರಬಹುದು, ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ವಿಶಿಷ್ಟತೆ ಆಗಿದೆ.ಅಂತೆಯೇ ದುರಂತವನ್ನಪ್ಪಿದ ಕೋಯಿ ಮೊಹಮ್ಮದ್ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಆತ ಮುಸ್ಲಿಂ ಸಮುದಾಯದ ವ್ಯಕ್ತಿ ಆಗಿದ್ದಾನೆ‌ .ಕಾಸರಗೋಡು ಪರಿಸರದ‌‌ ಮುಸ್ಲಿಮರನ್ನು ಮಾಪ್ಪಿಳ್ಳೆ ಎಂದು ಕರೆಯುತ್ತಾರೆ. ಆದ್ದರಿಂದ ಕೋಯಿ ಮುಹಮ್ಮದ್ ಮಾಪ್ಪಿಳ್ಳೆ ಎಂಬ ಹೆಸರಿನ ದೈವ ಆಗಿ ಆರಾಧನೆ ಪಡೆಯುತ್ತಾನೆ.ಈ ದೈವ ಮುಸ್ಲಿಮರಂತೆ ವೇಷಭೂಷಣ ಧರಿಸಿದ ದೈವ ಪಾತ್ರಿಗಳ ಜೊತೆಗೆ ಮಾಪಿಳ್ಳೆ ಕಳಿ ಎಂಬ ವಿಶಿಷ್ಟ ನೃತ್ಯವನ್ನು ಮಾಡುತ್ತದೆ
ಈ ಮಾಪಿಳ್ಳೆ ದೈವ ಮತ್ತು ಮುಕ್ರಿ ಪೋಕ್ಕರ್ ದೈವ ಎರಡೂ ಒಂದೇ ಎಂಬ ಅಭಿಪ್ರಾಯ ಇದೆ.ಆದರೆ ವೇಷ ಭೂಷಣ, ಕಥಾನಕ ,ಆರಾಧನೆಯ ತಾಣ ಎಲ್ಲವನ್ನೂ ಗಮನಿಸಿದಾಗ ಇವೆರಡೂ ಬೇರೆ ಬೇರೆ ದೈವಗಳು ಎಂದು ತಿಳಿದು ಬರುತ್ತದೆ
© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ -  ಹಿರಿಯರಾದ ಕುಂಞಿರಾಮನ್ ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1

No comments:

Post a Comment