Thursday 25 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 418 ಅಗ್ನಿ ಕೊರತಿ © ಡಾ.ಲಕ್ಷ್ಮೀ ಜಿ ಪ್ರಸಾದ


‌ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 418 : ಅಗ್ನಿ ಕೊರತಿ
‌ಒಂದೆರಡು ವರ್ಷಗಳ ಹಿಂದೆ ಅಗ್ನಿ ಕೊರತಿ ದೈವದ ಫೋಟೋ ಕಳಹಿಸಿ ಈ ದೈವದ ಮಾಹಿತಿ ಇದೆಯೇ ಎಂದು ಸ್ನೇಹಿತರಾದ ಸಿಂಚನಾ ಶ್ಯಾಮ್ ಕೇಳಿದ್ದರು.ಅಗ್ನಿ ಕೊರತಿ ಓರ್ವ ಬೆಂಕಿಯಲ್ಲಿ ಆತ್ಮಾಹುತಿ ಮಾಡಿಕೊಂಡ ಸ್ತ್ರೀ ಎಂಬ ಐತಿಹ್ಯ ಸಿಕ್ಕಿತ್ತಾದರೂ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ.ತಿಂಗಳ ಮೊದಲು ಈ ಬಗ್ಗೆ ಅಭಿಲಾಷ್ ಚೌಟ ಅವರು ಸರಿಯಾದ ಮಾಹಿತಿ ನೀಡಿದರು.
‌ಹೆಸರು ಒಂದೇ ಇದ್ದರೂ ದೈವ ಒಂದೇ ಇರಬೇಕಾಗಿಲ್ಲ .ಅಗ್ನಿ ಕೊರತಿ ಕೊರತಿ ದೈವವಲ್ಲ .ಸಸಿಹಿತ್ತಿಲಿನಲ್ಲಿ ಗುಳಿಗನ ಜೊತೆ ಸೇರಿರುವ ದೈವವಿದು.ಗುಳಿಗನ ಜೊತೆ ಸೇರಿದ ಕಾರಣ ಅಗ್ನಿ ಗುಳಿಗನೆಂದು ಕೂಡ ಕರೆಯುತ್ತಾರೆ.
‌ಈ ದೈವದ ಹಿನ್ನೆಲೆಯಲ್ಲಿ ವರ್ಗ ಸಂಘರ್ಷದ ಸೂಚನೆ ಇರುವ ಕಥಾನಕ ಇದೆ
‌ಪೂಲ ಪೊಂಜೋವು ಮತ್ತು  ಗಾಳಿಭದ್ರ ದೇವರಿಗೆ ಸತ್ಯಭಾರಿ ಎಂಬ ಹೆಸರಿನ ಮಗಳಾಗಿ ಹುಟ್ಟುತ್ತಾಳೆ.ಹುಡುಗಿ ಹೋಗಿ ದೊಡ್ಡವಳಾದ ಶುದ್ಧ ನೀರಿಗಾಗಿ ಕಾಂತೇಶ್ವರ ದೇವಾಲಯಕ್ಕೆ ಬರುತ್ತಾಳೆ.ಅಲ್ಲಿ ಇಬ್ಬರು ಬ್ರಾಹ್ಮಣ ಬ್ರಹ್ಮಚಾರಿಗಳು ಅವಳನ್ನು ಅಟ್ಟಿಸಿಕೊಂಡು ಹಿಂಬಾಲಿಸಿ ಕೊಂಡು ಬರುತ್ತಾರೆ.ಆಗ ಅವಳು ಬೆಂಕಿಗೆ ಪ್ರವೇಶ ಮಾಡಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ.ನಂತರ ದೈವವಾಗಿ ಎದ್ದು ನಿಂತು ಮುಳಿಹಿತ್ತಿಲಿಗೆ ಹೋಗಿ ಭಗವತಿ ಸಾನ್ನಿಧ್ಯದಲ್ಲಿ ಅಗ್ನಿ ಕೊರತಿ/ ಅಗ್ನಿ ಗುಳಿಗನಾಗಿ ಆರಾಧನೆ ಪಡೆಯುತ್ತಾಳೆ. ಅಲ್ಲಿಂದ ಭಗವತಿಯೊಡನೆ ಬೇರೆಡೆಗೆ ಪ್ರಸರಣಗೊಳ್ಳುತ್ತಾಳೆ.
‌ಕುಂದಣ್ಣ ಉರೊಲಿ  ಎಂಬವರು ಅಗ್ನಿ ಕೊರತಿಯ ಉಪಾಸನೆ ಮಾಡಿತ್ತಾರೆ.ನಂತರ ಒಂದು ಗುತ್ತಿನ ಮನೆಯವರು ಕಳ್ಳ ಕಾಕರಿಂದ ರಕ್ಷಣೆ ಪಡೆಯುವ ಸಲುವಾಗಿ ಅಗ್ನಿ ಕೊರತಿಯನ್ನು ಕೇಳಿ ಕರೆದುಕೊಂಡು ಹೋಗಿ ಆರಾಧನೆ ಮಾಡುತ್ತಾರೆ.

‌ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಹೇಳುವುದಾದರೆ ಕೊರತಿ ಎಂಬ ಹೆಸರು ಜಾತಿ ಸೂಚಕವಾಗಿದ್ದು ಆಕೆ ಮೂಲತಃ ಕೊರಗ ಸಮುದಾಯಕ್ಕೆ ಸೇರಿದವಳು ಎಂಬುದನ್ನು ಸೂಚಿಸುತ್ತದೆ.
‌ವಿಧಿ ನಿಷೇಧ ಗಳು ಆದಿ ಮಾನವನ ಅಲಿಖಿತ ಶಾಸನಗಳಾಗಿದ್ದವು.
‌ಅಂತೆಯೇ ಕೊರಗ ಸಮುದಾಯದ ಹೆಣ್ಣು ಮಗಳು ಒಬ್ಬಳು ಶುದ್ಧವಾಗಲು ದೇವಾಲಯಕ್ಕೆ ಬರುವುದನ್ನು ಒಪ್ಪುವುದಿಲ್ಲ .ಹಾಗಾಗಿ ಅವಳನ್ನು ಅಲ್ಲಿ ಅಟ್ಟಿಸಿಕೊಂಡು ಹೋದಾಗ ಅವಳು ಅಗ್ನಿ ಪ್ರವೇಶಿಸಿ ದುರಂತವನ್ನಪ್ಪಿರಬಹುದು.ದುರಂತ ಮತ್ತು ದೈವತ್ವ ಒಟ್ಟೊಟ್ಟಿಗೆ ಸಾಗುವಂತೆ ಅವಳು ದೈವತ್ವ ಪಡೆದು ಆರಾಧನೆ ಹೊಂದಿರಬಹುದು.© ಡಾ.ಲಕ್ಷ್ಮೀ ಜಿ ಪ್ರಸಾದ
‌ಅಗ್ನಿಕೊರತಿ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಪ್ರೇರಣೆ ನೀಡಿದ  ಸಿಂಚನಾ ಶ್ಯಾಮ್ ಮತ್ತು ಮಾಹಿತಿ ನೀಡಿದ ಅಭಿಲಾಷ್ ಚೌಟರಿಗೆ ಕೃತಜ್ಣತೆಗಳು
‌ಚಿತ್ರ ಕೃಪೆ: ಧರ್ಮ ದೈವ

No comments:

Post a Comment